ಒಂದು ಆಶ್ಚರ್ಯದ ವಿಷಯವೆಂದರೆ ಕನ್ನಡದ ನವೋದಯ ಕಾಲ ಹೇಗೆ ಹಲವು ಬಗೆಯ ಪ್ರತಿಭೆಗಳ ಮೂಲಕ ತನ್ನ ಒಳಗಿನ ಕನಸುಗಳನ್ನು ಪೂರೈಸಿಕೊಂಡಿತು ಎನ್ನುವುದು. ಇದನ್ನು ಸಾಹಿತ್ಯದ ಬಗ್ಗೆ ಮಾತ್ರ ಹೇಳಲಿಕ್ಕೆ ಸಾಧ್ಯ. ಕರ್ನಾಟಕದಲ್ಲಿ ಇನ್ಯಾವ ಶಿಸ್ತೇ ಅಗಲಿ ಸಮಾಜಶಾಸ್ತ್ರದ ಶಿಸ್ತು. ರಾಜಕೀಯಶಾಸ್ತ್ರದ ಶಿಸ್ತು ಅಥವಾ ತತ್ವಶಾಸ್ತ್ರದ ಶಿಸ್ತು ಈ ಯಾವ ಶಿಸ್ತುಗಳ ಮುಖಾಂತರ ಕೂಡ ಕರ್ನಾಟಕ ತನಗೆ ಸಾಧ್ಯವಾದದ್ದನ್ನ ವ್ಯಕ್ತಗೊಳಿಸಲು ಎಷ್ಟು ಭಿನ್ನವಾದ ಪ್ರತಿಭೆಗಳು ಬೇಕೋ ಅದನ್ನು ಆಯಲಿಲ್ಲ. ಆದರೆ ಸಾಹಿತ್ಯದಲ್ಲಿ ಮಾತ್ರ ಒಬ್ಬ ಬೇಂದ್ರೆ, ಒಬ್ಬ ಕುವೆಂಪು, ಮಾಸ್ತಿ, ಬಿ.ಎಂ.ಶ್ರೀಕಂಠಯ್ಯ, ಪು.ತಿ.ನರಸಿಂಹಾಚಾರ್, ಕಾರಂತರು ಯಾರನ್ನೇ ತೆಗೆದುಕೊಂಡರೂ ಆ ಕಾಲದ ಮುಖ್ಯ ಲೇಖಕರೆಲ್ಲ ಒಬ್ಬರಿಗಿಂತ ಒಬ್ಬ ಭಿನ್ನರು. ಬೇರೆ ಬೇರೆ ರೀತಿಯ ಸಂವೇದನೆಯ ಸ್ವರೂಪ ಉಳ್ಳವರು. ಆದರೆ ಒಟ್ಟಾಗಿ ಬಂದು ಕನ್ನಡ ಸಾಹಿತ್ಯದ ಕಲ್ಪನೆ ನೀಡಿದವರು. ಅದು ಮುಂದುವರೆಯಬೇಕಾದ ಕಲ್ಪನೆ, ಅಂದರೆ ಹಿಂದಿನದನ್ನು ಬಳಸಿಕೊಂಡು ಮುಂದುವರೆಯಬೇಕಾದ ಕಲ್ಪನೆ; ಮತ್ತು ತನ್ನ ಎದುರಿಗೆ ಇರುವ ಪಾಶ್ಚಿಮಾತ್ಯ ಸಾಹಿತ್ಯದ ಹಲವು ಬಗೆಗಳನ್ನು ಎದುರಾಗಬೇಕಾದ ಸಂಭವ. ಇದಕ್ಕೆ ಎಷ್ಟು ವಿಭಿನ್ನ ಬಗೆಯ ಮನಸ್ಮ್ಸಗಳು ಬೇಕಾಗಿತ್ತೋ ಅಷ್ಟನ್ನು ಆಯ್ದಕೊಂಡಿತು ಕನ್ನಡ.

ಅದೊಂದು ವಿಶೇಷವಾದ ಕಾಲಧರ್ಮ. ಕಾಲಧರ್ಮದ ಕುರಿತು ಚಿಂತನೆ ನಡೆಸಿದಾಗ ಇದು ಸಾಹಿತ್ಯವನ್ನು ಬಿಟ್ಟು ಬೇರೆ ಕಲಾ ಪ್ರಕಾರಗಳಲ್ಲಿ ಆಗಿಲ್ಲ ಎನ್ನುವುದು ಗಮನಕ್ಕೆ ಬರುತ್ತದೆ. ಕನ್ನಡದ ಚಿತ್ರಕಲಾ ಪ್ರಕಾರಕ್ಕೆ ಹೀಗೆ ಹಲವು ಬಗೆಯ ಮನಸ್ಸುಗಳನ್ನು ಆಯ್ದು ಇನ್ರ್ನೆಂದು ಬಗೆಯ ಚಿತ್ರಕಲಾ ಸ್ವರೂಪವನ್ನು ಕರ್ನಾಟಕದಲ್ಲಿ ಕಟ್ಟಿಕೊಡಲಿಕ್ಕೆ ಸಾಧ್ಯವಾಗಿಲ್ಲ. ಪ್ರಾಯಶಃ ಸಂಗೀತದಲ್ಲೂ ಅದನ್ನು ಹೇಳಲಿಕ್ಕೆ ಸಾಧ್ಯವಿಲ್ಲ. ಏನೋ ಇದ್ದದ್ದು ಮುಂದುವರಿಯಿತಷ್ಟೇ. ಒಂದು ವಿಭಿನ್ನ ರೀತಿಯ ಬೆಳವಣಿಗೆಯಾಗಿ ಹಿಂದಿನದನ್ನ ಮುಂದುವರೆಸುವ ಹಾಗೂ ಹೊಸ ಪರಂಪರೆಯ ಸೃಷ್ಟಿಗೂ ಕಾರಣವಾಯಿತು ಅಂತ ಬೇರೆ ಯಾವುದರ ಬಗ್ಗೆಯ ಹೇಳಲಿಕ್ಕಾಗುವುದಿಲ್ಲ- ಆದರೆ ಕನ್ನಡ ಸಾಹಿತ್ಯದ ಮಟ್ಟಿಗೆ ಹಾಗೆ ಹೇಳಬಹುದು.

ಇಡೀ ಪಾಶ್ಚಿಮಾತ್ಯ ಲೋಕದ ಆಗಿನ ಕಾಲದ ಸಾರವನ್ನು ಗ್ರಹಿಸುವ ಕೆಲಸ ಬಿ.ಎಂ.ಶ್ರೀಕಂಠಯ್ಯನವರ ಭಾಷಾಚಿತರದ ಪ್ರಾರಂಭವಾಯ್ತು. ಆದರೆ ಬೇರೆ ಎಲ್ಲದಕ್ಕಿಂತ ಮುಖ್ಯವಾಗಿ ಪಾಶ್ಚಿಮಾತ್ಯರು ಏನನ್ನುಕೊಡಬಹುದೋ ಅಷ್ಟನ್ನೂ ಸ್ವೀಕರಸಿದೆವು ಕೂಡ. ಪಂಪ, ರನ್ನ, ಕುಮಾರವ್ಯಾಸ-ಹೀಗೆ ಕನ್ನಡದ್ದೇ ಆದ ಮಹಾಕಾವ್ಯ ಪರಂಪರೆ ಪಾಶ್ಚಿಮಾತ್ಯರ ಮಹಾಕಾವ್ಯ ಪರಂಪರೆ, ಎರಡನ್ನೂ ಒಟ್ಟಾಗಿ ಗ್ರಹಸಿವುದಕ್ಕೆ ಬೇಕಾದ ವೈಚಾರಿಕತೆಯನ್ನೂ ಮತ್ತು ದಾರ್ಶನಿಕವೆನ್ನಬಹುದಾದ ನೋಟವನ್ನೂ ಕುವೆಂಪು ಸಾಧ್ಯ ಮಾಡಿಕೊಂಡರು.

ನಾವು ಕುವೆಂಪು ಬಗ್ಗೆ ಮಾತಾಡುತ್ತಾ ಒಂದು ಮಾತನ್ನು ಹೇಳುವುದಿದೆ. ಕುವೆಂಪು ಅವರ ಒಟ್ಟು ಶೈಲಿಯಲ್ಲೊಂದು  egoistical sublime ಇದೆ. ಅಂದರೆ ವ್ಯಕ್ತಿ ತಾನೊಂದು ವಿಶೇಷ ವಾಹಕವಾಗಿ ಆ ಕಾಲದ ಇಡೀ ದೃಷ್ಟಿಯನ್ನು, ಧರ್ಮವನ್ನು ಅವಾಹಿಸಿಕೊಳ್ಳಬಲ್ಲಂತೆ ಸ್ವೀಕರಿಸೋದು. ಕುವೆಂಪುವಿಗೆ ತನ್ನನ್ನು ಮೀರುವ ಒಳಗೊಳ್ಳುವ ಒಂದು ಮೇರು ಕಲ್ಪನೆ ಇದೆ; ಅದು ಗುರುವಿನ ಕಲ್ಪನೆ ಅದೇ ಬೇಂದ್ರೆಯಲ್ಲಿ ತಾಯಿಯ ಕಲ್ಪನೆಗೆ ಯಾಗಿ ತೋರಿಸಿಕೊಳ್ಳುತ್ತದೆ. ಇವೆರಡು ಬಹಳ ವಿಚಿತ್ರ ರೀತಿಯ ಅರ್ಥಪೂರ್ಣವಾದ ಮೇರು ಕಲ್ಪನೆಗಳೇ. ಬೇಂದ್ರೆಯ ಮುಖಾಂತರ ಕನ್ನಡ ತನ್ನ ಜಾಣಪದವನ್ನು ಸ್ವೀಕರಿಸಿದ್ದು ಮಾತ್ರವಲ್ಲದೇ ಎಲ್ಲ ಕಾಲಕ್ಕೂ ಸಲ್ಲುವ ಭಾವುಕತೆಗೆ ಮೂಲವಾದ ಆಧ್ಯಾತ್ಮಿಕವಾದ ಅನುಭಾವ(ಅದರ ಹಿಂದೆ ಅಲ್ಲಮ ಇದ್ದಾನೆ) ಮತ್ತು ಪಾಶ್ಚಿಮಾತ್ಯ ಅನುಭೂತಿ-ಎರಡನ್ನೂ ಸ್ವೀಕರಿಸಿತು.

ಕುವೆಂಪು ಅವರ ಕಾವ್ಯದ ಕ್ಷೇತ್ರ ಆಧುನಿಕವೆನ್ನಬಹುದಾದ ವಿಶ್ವ. ನಾನು ಬೇಂದ್ರೆ ಬಗ್ಗೆ ಹೇಳಿದ್ದೇನೆ; ಬೇಂದ್ರೆ ಬೆಳೆದಿದ್ದೆಲ್ಲ ಒಂದು ಸಣ್ಣ ತಾಲ್ಲೂಕಿನ ಪರಿಧಿಯಲ್ಲಿ ಈ ಬಗ್ಗೆ ನಾನೊಂದು ಜೋಕ್ ಕೇಳಿದ್ದೇನೆ; ಒಮ್ಮೆ ಬೇಂದ್ರೆಗೆ ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗಲಿಕ್ಕೆ ಆಹ್ವಾನ ಬಂತಂತೆ. ಆ ಬೇಂದ್ರೆ ‘ನಾನು ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗಿ ಮಾಡುವುದಾದರೂ ಏನಿದೆ ನನ್ನ ಜಗಳ ಇನ್ನು ಧಾರವಾಡದಲ್ಲಿ ಮುಗಿದಿಲ್ಲ. ಅಲ್ಲಿಗೆ ಗೋಕಾಕರನ್ನು ಕಳುಹಿಸಿ’ ಎಂದರಂತೆ. ಆದರೆ ಬೇಂದ್ರೆಗೆ ಅವರ ಆಸುಪಾಸೇ ಇಡೀ ಜಗತ್ತನ್ನು ಸಾರರೂಪದಲ್ಲಿ ಪಡೆದದ್ದು.

ಬೇಂದ್ರೆ ಕೈಯಲ್ಲೊಂದು ಚೀಲ ಹಿಡಿದು ತರಕಾರಿ ಅಂಗಡಿ ಎದುರಿಗೆ ನಿಂತು ಅಲ್ಲಿದ್ದ ಯಾರೊ ಒಬ್ಬ ಪಕ್ಕದವನ ಹತ್ತಿರ ನೀನು ನಿನ್ನ ಹೆಂಡತಿ ಹತ್ರ ಜಗಳ ಕಾಯುತ್ತೀಯಂತೆ ಹೌದಾ ಅಂತ ಮಾತು ಎತ್ತುತ್ತಿದ್ದರಂತೆ. ಅಂದರೆ ಒಂದು ಸಣ್ಣ ‘ಕ್ಷೇತ್ರ’ದಲ್ಲೇ ಜಗತ್ತಿಗೆ ಮಹತ್ವದ್ದು ಎನಿಸುವುದನ್ನು, ಎಲ್ಲೆಲ್ಲೂ ಅನನ್ಯ ಎನಿಸುವುದನ್ನು ಕವಿ ಪ್ರತಿಭೆ ಕಂಡು ಕಾಣಿಸುವುದು ಸಾಧ್ಯ.

ಎರಡು ರೀತಿಯ ಹಸಿವು ಕನ್ನಡಕ್ಕಿದೆ; ಒಂದು ಬೇಂದ್ರೆ ರೀತಿಯ ಹಸಿವು. ಮತ್ತೊಂದು ಕುವೆಂಪು ರೀತಿಯ ಹಸಿವು. ಕಾರಂತರು ಜಗತ್ತಿನಲ್ಲೆಲ್ಲ ಅಲೆದು ಎಲ್ಲೆಲ್ಲಿಂದಲೋ ತಂದದ್ದನ್ನು ತನ್ನ ಕಡಲ ತಡಿಯ ನೆಲದಲ್ಲಿ ಊರೋರು. ಸಾಂಸಾರಿಕತೆಯ ನೆಲೆಯಲ್ಲೇ ಯಾವ್ಯಾವ ಮೌಲ್ಯಗಳನ್ನು ನಾವು ಪಡೆಯಬಹುದು ಎನ್ನುವುದು ಮಾಸ್ತಿಯವರ ಹುಡಕಾಟದ ಮೂಲ. ಪು.ತಿ.ನರಸಿಂಹಾಚಾರ‍್ಯರದ್ದು ಇವೆಲ್ಲದಕ್ಕಿಂತ ಬೇರೆ ರೀತಿಯದು; ತನ್ನ ಜಪದ ಕಟ್ಟೆಯಲ್ಲಿ ಕೂತು ಎಲ್ಲವನ್ನು ಕಾಣುವುದು. ಅಡಿಗರದು ಪೂರ್ವಾರ್ಜಿತವನ್ನು ಇಹದ ಒರೆಗೆ ಹಚ್ಚಿ ಪರೀಕ್ಷಿಸುವುದು. ಕನ್ನಡವೆನ್ನುವ ದೊಡ್ಡ ರಂಗಭೂಮಿಯಲ್ಲಿ ಒಂದು ನಾಟಕ ನಡೆಯುತ್ತಿದೆ ಎನ್ನುವುದಾದರೆ ಹಲವು ಪಾತ್ರಧಾರಿಗಳು, ಒಬ್ಬರಿಗೆ ಮತ್ತೊಬ್ಬರು ವಿರೋಧವಲ್ಲ; ಪೂರಕ.

ಈ ರೀತಿ ನನಗೆ ವಿಚಾರ ಮಾಡಲು ಕಲಿಸಿದ್ದು ಎ.ಕೆ.ರಾಮಾನುಜನ್, ಅನೇಕ ಸಾರಿ ನಾವೆಲ್ಲ ಒಂದಕ್ಕೇ ಇನ್ರ್ನೆಂದನ್ನು ವಿರೋಧವಾಗಿ ನಿಲ್ಲಿಸಿಕೊಂಡು ‘ಇದು ಥೀಸಿಸ್, ಇದು ಆಂಟಿ ಥೀಸಿಸ್ ಅಂತ ಯೋಚನೆ ಮಾಡುತ್ತೇವೆ. ರಾಮನುಜನ್ ಹೇಳುತ್ತಾ ಇದ್ದರು-ಹೀಗೆ ಯೋಚನೆ ಮಾಡುವುದರಿಂದ ಇಂಡಿಯಾದಲ್ಲಿ ಏನು ಪ್ರಯೋಜನ ಆಗೋಲ್ಲ. ನಮ್ಮ ರಾಮಾಯಣ ಮಹಾಭಾರತಗಳನ್ನೇ ತೆಗೆದುಕೊಂಡರೆ ರಾಮಾಯಣದಲ್ಲಿ ತುಂಬ ಪ್ರಾಣಿಗಳಿವೆ. ಆದರೆ ಮಹಾಭಾರತದಲ್ಲಿ ಪ್ರಾಣಿಗಳೇ ಇಲ್ಲ. ಒಂದು ಮತ್ತೊಂದಕ್ಕೆ Complement ಅಗತ್ತೆ. ರಾಮಾನುಜನ್ ತಮ್ಮ ಬರವಣಿಗೆಯಲ್ಲಿ ಈ  Complement ಎಂದರೆ-ಯಾವುದು ಯಾವುದಕ್ಕೆ ಪೂರಕವಾಗಿ ಒಂದನ್ನು ಇನ್ನೊಂದು ತುಂಬ ಕೆಲಸ ಮಾಡುತ್ತದೆ-ಎನ್ನುವ ಅಲೋಚನಾ ಕ್ರಮವನ್ನು ಬಹಳ ಉಪಯೋಗಿಸುತ್ತಿದ್ದರು.

ಕನ್ನಡದ ಬಗ್ಗೆ ಆಡಬೇಕಾದ ಮಾತು ಏನೆಂದರೆ  ಕೊನೆಯಪಕ್ಷ ೮೦೦ ವರ್ಷದ ಹಿಂದಿನ ಸಾಹಿತ್ಯವನ್ನು ನಾವು ಇವತ್ತಿನ ಸಾಹಿತ್ಯದ ಹಾಗೆ ಓದಬಹುದು. ವಚನ ಸಾಹಿತ್ಯವನ್ನು ಇವತ್ತು ಓದಿದರೂ ಅರ್ಥವಾಗುತ್ತದೆ. ಪಂಪನನ್ನು ಎಲ್.ಬಸವರಾಜು ತರಹದವರ ಸಹಾಯ ತೆಗೆದುಕೊಂಡರೆ ಅರ್ಥ ಮಾಡಿಕೊಳ್ಳಬಹುದು. ಕುಮಾರವ್ಯಾಸ ಯಾರ ಸಹಾಯವೂ ಇಲ್ಲದೆ ಅರ್ಥವಾಗುತ್ತಾನೆ.

ಆದರೆ ಇಂಗ್ಲೀಷ್ ಬಗ್ಗೆ ಇದನ್ನೇ ಹೇಳಲಿಕ್ಕಾಗುವುದಿಲ್ಲ. ಅಲ್ಲಿನ ಛಾಸರ್ ಅರ್ಥವೇ ಆಗುವುದಿಲ್ಲ. ಛಾಸರ್‌ನನ್ನು ಅವನ ಮೂಲದಲ್ಲೇ ಓದಿದರೆ ಇವತ್ತು ಯಾವ ಇಂಗ್ಲಿಷ್‌ನವನಿಗೂ ಅರ್ಥವಾಗಲ್ಲ. ಛಾಸರ್ ಇದ್ದಿದ್ದು ೫೦೦ ವರ್ಷದ ಹಿಂದೆ. ಡಾಂಟೆ ಕೂಡ ಅರ್ಥವಾಗಲ್ಲ. ಗ್ರೀಕರಿಗಂತೂ ಆ ಗ್ರೀಕರಿಗೂ ಈ ಗ್ರೀಕರಿಗೂ ಸಂಬಂಧವೇ ಇಲ್ಲ. ಪ್ರಾಯಶಃ ಇದು ತಮಿಳಿನಲ್ಲಿ ಸಾಧ್ಯವಾಗ್ತದೆ. ತೆಲುಗಿನಲ್ಲೂ ಸಾಧ್ಯವಾಗ್ತದೆ, ಕನ್ನಡದಲ್ಲಿ ಬಹಳ ಪ್ರಸ್ತುತ ಎನ್ನುವ ರೀತಿಯಲ್ಲಿ ಸಾಧ್ಯವಿದೆ. ಯಾಕೆ ನಾನು ಪ್ರಸ್ತುತ ಎನ್ನುವುದಕ್ಕೆ ಒತ್ತು ಕೊಡ್ತ ಇದ್ದೀನಿ ಅಂದರೆ ನಮ್ಮ ಎಲ್ಲ ಲೇಖಕರು ತಮ್ಮ ಹಿಂದಿನದನ್ನು ನೆಚ್ಚಿಕೊಂಡದ್ದು ಮಾತ್ರವಲ್ಲ; ಬಳಸಿಕೊಂಡರು. ಕುವೆಂಪು ಅವರು ಪಂಪ, ರನ್ನ, ಕುಮಾರವ್ಯಾಸರನ್ನು ಬಳಸಿಕೊಂಡರು. ಬೇಂದ್ರೆ ತನ್ನ ನಾದಲೋಲತೆಗೆ ಅಗತ್ಯವಾದ ಎಲ್ಲ ರೀತಿಯ ಭಾಷಾಪ್ರಯೋಗಗಳನ್ನು ಬಳಸಿಕೊಂಡರು. ಕಾದಂಬರಿಯಲ್ಲಿ ಹೀಗೆ ಎಂ.ಎಸ್. ಪುಟ್ಟಣ್ಣನಂಥವರು ರಾಮಾಯಣವನ್ನು ಸಹ ಬಳಸಿಕೊಳ್ತಾರೆ. ಕನ್ನಡದಲ್ಲಿ ಹೀಗೆ ಹಿಂದಿನದನ್ನ ಬಳಸಿಕೊಂಡು ಮುಂದಕ್ಕೆ ಹೋಗುವ ಪ್ರಕ್ರಿಯೆ ನಡೆಯುತ್ತಾ ಬಂದಿದೆ. ಬೇರೆ ಬೇರೆ ರೀತಿಯಲ್ಲಿ.

ನಾನು ಚಿಕ್ಕವಯಸ್ಸಿನವನಾಗಿದ್ದಾಗಿನಿಂದಲೂ ಕನ್ನಡವನ್ನು ಕೇಳಿಕೊಂಡು ಅದನ್ನು ಮಾತಾಡುತ್ತಾ ಬೆಳೆದವನು. ನಾನು ಕನ್ನಡವನ್ನು ಪ್ರೀತಿಸುತ್ತೇನೆ; ಅಂದರೆ ಎಂಥ ರೀತಿಯ ಮಾತುಗಾರಿಕೆಯನ್ನು ಪ್ರೀತಿಸಲಿಕ್ಕೆ ನನಗೆ ಸಾಧ್ಯವಾಗ್ತದೆ ಅಂತ ಯಾರಾದರೂ ನನ್ನನು ಕೇಳಿದರೆ ಕೆಲವು ಅದ್ಭುತವಾದ ಮಾತುಗಳು ನನ್ನ ಮನಸ್ಸಿನಲ್ಲಿ ಉಳಿದುಕೊಂಡಿದೆ. ಇಲ್ಲಿ ಸಲ್ಲುವರು ಅಲ್ಲಿಯು ಸಲ್ಲುವವರಯ್ಯ’ ಇಂತದ್ದು, ಇದನ್ನು ಇಷ್ಟು ಸರಳವಾಗಿ, ಇದು ಸತ್ಯವೇ ಎನ್ನುವಂತೆ ಸದ್ಯವಾಗಿ ಇಂಗ್ಲಿಷ್‌ನಲ್ಲಿ ಹೇಳಲು ಹೇಗೆ ಸಾಧ್ಯ? ಹಾಗೆಯೇ ‘ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ?’ ಯಾಕೆಂದರೆ ಇಲ್ಲಿನ ‘ಜ್ಯೋತಿ’ ಅನ್ನುವುದು ಸಂಸ್ಕೃತದ ಶಬ್ದವಾದ್ದರಿಂದ ಅದು ಕೇವಲ ಬೆಳಕು ಮಾತ್ರವಲ್ಲದೆ ಆ ಶಬ್ದದ ಬಳಕೆಯ ಸಂದರ್ಭದಲ್ಲಿ ವಿಶೇಷವಾಗುತ್ತದೆ. ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ ಅನ್ನುವ ಪ್ರಶ್ನೆಗೆ ಉತ್ತರ ಆ ಪ್ರಶ್ನೆಯಲ್ಲಿಯೇ ಸಿಕ್ಕಿಬಿಡುತ್ತದೆ. ಎಲ್ಲ ಕಡೆಯು ಬೆಳಕು ಒಂದೇ ತಾನೆ? ನಾನು ಯೋಚನೆ ಮಾಡದೆ ಥಟ್ಟನೆ ಕೊಡುವ ಉತ್ತರದಿಂದಾಗಿ ಸ್ವಯಂಸಿದ್ಧವಾದ ಒಂದು ದಒಡ್ಡ ತತ್ವವನ್ನು ಹೇಳುವುದಕ್ಕೆ ಸಾಧ್ಯವಾಗುತ್ತದೆ. ಅಗ್ನಿ ಎಂದರೆ ಹೊರಗಿನ ಬೆಂಕಿಯು ಹೌದು ನಮ್ಮ ಮನಸ್ಸಿನೊಳಗಿರುವ ಅಗ್ನಿಯು ಹೌದು. ಹೀಗೆ ನಮ್ಮ ಭಾಷೆಯೊಳಗಡೆಯೇ ಸಂಸ್ಕೃತವು ಇರುವುದರಿಂದ ಇಲ್ಲಿ abstract ಮಾಡುವುದಕ್ಕೆ ಸಾಧ್ಯವಿಲ್ಲ.

ಬೇಂದ್ರೆ ನಮ್ಮ ಮನಸಿನಲ್ಲಿ ನಿಂತುಬಿಡುವ ಮಾತುಗಳನ್ನು ತಮ್ಮ ಕಾವ್ಯದಲ್ಲಿ ಆಡಿದ್ದಾರೆ. ಅನೇಕ ಸಾರಿ ಬಹಳ ದೊಡ್ಡ ಲೇಖಕರನ್ನು ಮೊದಲಬಾರಿಗೆ ಓದಿದಾಗ they look like a book of quotations. ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್ ಓದಿದಾಗಲೂ ಹೀಗೆ ಅನ್ನಿಸುತ್ತದೆ. Hamlet is a whole text of quotations.

ಸಂಗೀತಾ ಕಟ್ಟಿಯವರ ಸಂಗೀತವನ್ನು ನಾನು ಬಹಳ ಇಷ್ಟ ಪಡುವುದರಿಂದ ಸಂಗೀತದ ಬಗೆಗೆ ಒಂದು ನೆನಪನ್ನು ಹಂಚಿಕೊಳ್ಳುತ್ತಿದ್ದೇನೆ. ಮೊದಲ ಬಾರಿಗೆ ಬೇಂದ್ರೆ ನನ್ನ ಮನಸಿಗೆ ಬಂದಿದ್ದು ಗತಿಸಿದ ನನ್ನ ತೀರ್ಥಹಳ್ಳಿಯ ಗೆಳೆಯ ಕೃಷ್ಣಮೂರ್ತಿ ಭಟ್ಟ ನಿಂದ. ಆತ ತೀರ್ಥಹಳ್ಳಿಯಲ್ಲಿ ನನ್ನ ಸಹಪಾಠಿ. ಅವನಿಗೆ ಭೀಮಸೇನ್ ಜೋಷಿ ಬಗ್ಗೆ ತಿಳಿದಿತ್ತು. ಅವರ ಹಾಗೆ ಹಾಡಬೇಕು ಅಂತ ಆಸೆ ಪಡುತ್ತಿದ್ದ. ಅವನೊಬ್ಬ ಅದ್ಭುತವಾದ ಗಾಯಕ. ಒಮ್ಮೆ ಬೇಂದ್ರೆ ನಮ್ಮೂರಿಗೆ ಬಂದಿದ್ದಾಗ ಅವರೆದುರಿಗೆ ಕೃಷ್ಣಮೂರ್ತಿ ಭಟ್ಟ ಅದ್ಭುತವಾಗಿ  ಹಾಡಿದ್ದ. ಅವನೇ ನನಗೆ ಬೇಂದ್ರೆಯವರನ್ನು ಕೊಟ್ಟಿದ್ದು. ನಮ್ಮ ಜಿ.ಹೆಚ್.ನಾಯಕರು ಬೇಂದ್ರೆಯವರ ಹಾಡುಗಳನ್ನು ಬಹಳ ಚೆನ್ನಾಗಿ ಹಾಡುತ್ತಾರೆ. ಅಡಿಗರು ಕೂಡ ಬೇಂದ್ರೆಯವರ ಕವಿತೆಗಳಲ್ಲಿ ಅವರಿಗಿಷ್ಟವಾದ ಕೆಲವನ್ನು ಹಾಡಿ ತೋರಿಸಿದ್ದಾರೆ. ಬೇಂದ್ರೆ ಕವಿತೆಗಳನ್ನು ಹಾಡುವಾಗ ಅದನ್ನು ಶುದ್ದ ಸಂಗೀತದ ಕ್ರಮದಲ್ಲಿ ಹಾಡುವ ಹಾಗಿಲ್ಲ. ಬೇಂದ್ರೆಯ ಶಬ್ದದ ಒಳಗಿರುವ ಲಯವನ್ನು ಉತ್ಪ್ರೇಕ್ಷಿಸುವುದರ ಮುಖಾಂತರ ಸಿಕ್ಕುವ ಸಂಗೀತ ಅದು. ತನ್ನ ಒಳಗಿರುವ ಲಯವೇ ಸ್ವಲ್ಪ ಉತ್ಪ್ರೇಕ್ಷಿತವಾದುದು.

ಇಂಗ್ಲಿಷ್ ಕವಿತೆಗಳನ್ನು ಹೇಗೆ ಓದುವುದು ಎನ್ನುವುದರ ಬಗ್ಗೆ ಒಂದು ಲೇಖನವಿದೆ. ಒಂದು ಕವಿತೆಯನ್ನು ನೀವು ಓದುವಾಗ ಅದರಲ್ಲಿರುವ ಭಾವಕ್ಕಿಂತ ಹೆಚ್ಚಿನ ಭಾವವನ್ನು ನೀವು ಆರೋಪಿಸಿ ಓದಿದರೆ, ಪದ್ಯದಲ್ಲಿ ಇಲ್ಲದೇ ಇರುವ ಅರ್ಥವನ್ನು ಅದು ಕೃತಕವಾಗಿ ಕೊಡುವ ಸಾಧ್ಯತೆ ಇರುತ್ತದೆ. ಏಟ್ಸ್ ಹಾಗೆ ಓದುತ್ತಿದ್ದ. ಆ ಪದ್ಯದ ಒಳಗಡೆ ಇರುವ ಅರ್ಥಕ್ಕಿಂತ ಮಿಗಿಲಾದ ಅರ್ಥ ಅದರಲ್ಲಿದೆ ಎನ್ನುವ ಭಾವನೆಯನ್ನು ಹುಟ್ಟಿಸುವ ಹಾಗೆ ಏಟ್ಸ್ ಓದುತ್ತಿದ್ದ. ಎಲಿಯಟ್ ತಾನು ಓದುವ ಪದ್ಯದಲ್ಲಿ ಇರುವ ಅರ್ಥವು ಗೊತ್ತಾಗದ ಹಾಗೆ ಓದುತ್ತಿದ್ದ. ನಮ್ಮ ಕೃಷ್ಣಮೂರ್ತಿ ಭಟ್ ಹಾಡುತ್ತಾ ಇದ್ದಾಗ ನನಗೂ ಒಳ್ಳೆಯ ಕಂಠ ಇದ್ದಿದ್ದರೆ ನಾನು ಹಾಡಬಹುದಿತ್ತು ಅನ್ನಿಸುವ ಹಾಗೆ ಹಾಡುತಾ ಇದ್ದ. ಇನ್ನು ಕೆಲವರು ಹಾಡುತ್ತಾ ಇದ್ದರೆ ಹೀಗೆ ಹಾಡಲಿಕ್ಕೆ ನಮಗೆ ಸಾಧ್ಯವೇ ಇಲ್ಲ ಅನ್ನಿಸುತ್ತದೆ. ಆದರೆ ಅದನ್ನು ನಾವು ಮೆಚ್ಚಿಕೊಳ್ಳುತ್ತೇವೆ. ಕಾವ್ಯದ ವಾಚನದಲ್ಲಿ ನಾನು ಇಷ್ಟಪಡುವುದು ಏನೆಂದರೆ ಅದನ್ನು ನನ್ನ ಮನಸ್ಸಿನಲ್ಲಿಯೂ ಇಟ್ಟುಕೊಳ್ಳಬೇಕು ಅಂಥ ನಾನು ಬಯಸುವಂತೆ ಅದು ಇರಬೇಕು.

ನನ್ನ ಈ ಮಾತನ್ನು ಸಂಗೀತಾಕಟ್ಟಿಯವರು ಒಪ್ಪುತ್ತಾರೋ ಇಲ್ಲವೋ?- ಆದರೆ ಹೇಳಿಬಿಡುತ್ತೇನೆ. ಸುಗಮಸಂಗೀತದಲ್ಲಿ ವಾದ್ಯಗಳು ಹೆಚ್ಚಾಗಿಬಿಟ್ಟಿವೆ. ಇದರಿಂದ ನಮಗೆ ಸುಗಮಸಂಗೀತದ ಬಗ್ಗೆ ಇದ್ದ ಪ್ರೀತಿಯೇ ಹೊರಟು ಹೋಗೋ ಹಾಗೆ ಮಾಡಿವೆ. ಆದೆಷ್ಟು ವಾದ್ಯಗಳೆಂದರೆ ಇಡೀ ಗೀತೆಯ್ಲಿರುವ ಸಾಹಿತ್ಯವೇ ನಮ್ಮನ್ನು ತಟ್ಟುತ್ತಾ ಇಲ್ಲ. ಬೇಂದ್ರೆ ಕಾವ್ಯದಲ್ಲಿ ಒಂದು ಅತ್ಯದ್ಭುತವಾದ ಭಾವಾಭಿನಯವಿದೆ…. ಅದು ಉಳಿಯುವಂತೆ ಬೇಂದ್ರೆಯನ್ನು ವಾಚಿಸಬೇಕು.

ಸಂಗೀತಾಕಟ್ಟಿ ಹಾಡಿದ್ದನ್ನು ನಾನು ಅಮೇರಿಕಾದಲ್ಲಿ ಕೇಳಿದೆ. ಬಹಳ ಅದ್ಭುತವಾಗಿ ಹಾಡಿದರು. ಆ ಕ್ಷಣದಲ್ಲಿ ನನಗೆ ಅನಿಸಿದ್ದನ್ನು ಹೇಳುತ್ತೇನೆ. ಕನ್ನಡ ಬಲ್ಲವರು ಬೇರೆ ದೇಶಕ್ಕೆ ಹೋಗ್ತಾರಲ್ಲ ಅವರ ಬಾಯಿಂದಲೂ ಕನ್ನಡ ಹೊರಟು ಹೋಗ್ತಿದೆ. ಗಂಡ ಹೆಂಡತಿ ಕನ್ನಡ ಮಾತಾಡುತ್ತಾರಷ್ಟೇ; ಮಕ್ಕಳಂತೂ ಕನ್ನಡ ಮಾತಾಡುವುದೇ ಇಲ್ಲ. ಬೆಂಗಳೂರಿನಲ್ಲೇ ಕನ್ನಡ ಹೊರಟು ಹೋಗಿದೆ. ಅಮೆರಿಕಾದಂತ ದೇಶದಲ್ಲಿ ಇವತ್ತು ಕನ್ನಡ ಉಳಿದುಕೊಂಡಿದ್ದರೆ ಅದು ಕನ್ನಡದ ಹಾಡುಗಳಿಂದ?

*

(ಧಾರವಾಡ ಮತ್ತು ಮೈಸೂರುಗಳಲ್ಲಿ ಬೇಂದ್ರೆ ಕುರಿತು ಮಾಡಿದ ಭಾಷಣಗಳ ಬರಹ ರೂಪ. ಬರಹರೂಪಕ್ಕೆ: ಕೆ. ಅಕ್ಷತಾ)