ಗೆಳೆಯ ನಾಗಭೂಷಣ್ ಅವರ ‘ಮರಳಿ ಬರಲಿದೆ ಸಮಾಜವಾದ’ ಎಂಬ ಶೀರ್ಷಿಕೆಯೇ ನಮ್ಮನ್ನು ಚಿಂತನೆಗೆ ಹಚ್ಚುವಂತಿದೆ. ಈ ಶೀರ್ಷಿಕೆಯನ್ನು ಓದುತ್ತಿದ್ದಾಗ ಅಡಿಗರ ಕವನದ ಸಾಲೊಂದು ನೆನಪಾಯಿತು. ‘ಮಣ್ಣಿನೊಳಗಣ ಸಹಿಷ್ಣು ಕತ್ತಲಿನಲಿ ಇದೆ ಬೀಜ’ ಇಲ್ಲಿ ಬಹಳ ಮುಖ್ಯವಾದ ಶಬ್ದ ‘ಸಹಿಷ್ಣು ಕತ್ತಲು’ ಆ ಕತ್ತಲು ಸಹಿಷ್ಣುಮಯವಾದ್ದರಿಂದಲೇ ಬೀಜ ಮಣ್ಣಿನಲ್ಲಿ ಮೊಳಕೆಯೊಡೆದು ಮತ್ತೆ ಮರವಾಗುತ್ತದೆ. ನಮ್ಮ ಸಮಸ್ಯೆಯೇನೆಂದರೆ ನಾಲ್ಕು ಜನ ಸಮಾಜವಾದಿಗಳಿದ್ದರೆ ನಾಲ್ಕು ತರ ಯೋಚನೆ ಮಾಡಿ ಒಬ್ಬರ ಜೊತೆ ಒಬ್ಬರು ಜಗಳ ಆಡ್ತಿರುತ್ತೇವೆ. ಮತಾಂಧರು ಜಗಳ ಆಡಿದರೂ ನಮಗೆ ಗೊತ್ತಾಗಲ್ಲ. ಅವರು  ಯಾವಾಗಲೂ ತಮ್ಮ ದ್ವೇಷದಲ್ಲಿ ಒಗ್ಗಟ್ಟಾಗಿರುವಂಥೆ ಕೊನೆಯಪಕ್ಷ ಕಾಣಿಸಿಕೊಳ್ಳುತ್ತಾರೆ, ಎಡಪಂಥಿಯರ ಗುಣವೇ ಒಡೆದುಕೊಳ್ಳೋದು-ಒಂದು ಎರಡಾಗೋದು, ಎರಡು ನಾಲ್ಕು ಆಗೋದು. ಅದು ಯಾಕೆ ಎಂಬ ಬಗ್ಗೆ ಬಹಳ ಚಿಂತೆ ಮಾಡಬೇಕಾಗಿಲ್ಲ. ಎಡಪಂಥಿಯರು ಬಯಸುವುದು ಇನ್ನೂ ಇಲ್ಲದೇ ಇರೋದು. ಆದ್ದರಿಂದ ಅದನ್ನು ಊಹಿಸುವ, ಬಯಸುವ ಹಲವಾರು ಮಾದರಿಗಳೀರುವುದು ಸಹಜ. ಬಲಪಂಥೀಯರ ಬಲ ಏನು ಅಂದರೆ ಇದು; ನಮಗೆ ಯಾವುದು ಇದೆಯೋ ಅದರ ಬಗ್ಗೆ ಒಂದ್ರೀತಿ ಆಸೆ ಇರತ್ತೆ. ನಮಗೆ ಸಂಬಳ ಬರ‍್ತಾ ಇರತ್ತೆ, ಶಾಲೆಗಳಿರತ್ತೆ., ಆ ಸ್ಕೂಲ್‌ಗಳು, ರಸ್ತೆಗಳು, ಇಷ್ಟ ಇಲ್ಲದೆ ಇರಬಹುದು. ಸರ್ಕಾರವು ಸಹ ಇಷ್ಟ ಇಲ್ಲದೆ ಇರಬಹುದು. ಇವತ್ತಿನ ಸಮಾಜ ಪದ್ಧತಿ-ಅದು ಸಹ ಇಷ್ಟ ಇಲ್ಲದೆ ಇರಬಹುದು. ಇವತ್ತಿನ ಸಮಾಜ ಪದ್ಧತಿಯಲ್ಲಿ ಮದುವೆಯಾಗೋ ಕ್ರಮ-ಇವು ಎಲ್ಲವೂ ಇಷ್ಟ ಇಲ್ಲದೆ ಇರಬಹುದು. ಆದರೆ ಅವೆಲ್ಲ ನಿಜ ಜೀವನದಲ್ಲಿ ಬಳಕೆಯಲ್ಲಿರೋದ್ರಿಂದ ಅದಕ್ಕೊಂದು ಬೆಲೆ ಇದ್ದೆ ಇರುತ್ತೆ. (ಗೊತ್ತಿರುವ ಒಂದು ಬೆಲೆ) ನಾವು ಮುಂದೆ ಬರ್ತದೆ ಅಂತ ಹೇಳೋದಕ್ಕೆ ಇರುವ ಬೆಲೆ ಅನಿಶ್ಚಿತವಾಗಿರತ್ತೆ.

ಒಮ್ಮೆ ತೇಜಸ್ವಿ ನನ್ನ ಹತ್ರ ಹೇಳ್ತಾ ಇದ್ದರು. ಅವರು ಬಹಳ ಸ್ವಗತದಲ್ಲಿ ಎಂಬಂತೆ ಹೇಳಿದ/ಹೇಳಿಕೊಂಡ ಮಾತಿದು; ‘ನಾವೇನೊ ಒಂದು ಆಗ್ಬೇಕು ಆಗ್ಬೇಕು ಅಂತ ವಾದಿಸ್ತಾ ಇರ‍್ತೀವಲ್ಲ ಸರ್ ಆದರೆ ಅದು ಆಗೋದಕ್ಕೆ ಶುರುವಾದಾಗ ನಮ್ಮ ಒಳಗೆ ಬಂದ್ರೀತಿ ಕಸಿವಿಸಿ ಶುರುವಾಗತ್ತೆ; ಅಂತ. ಸಮಾಜವಾದಿಗಳಿಗೂ ಹಾಗೆ ಆಗತ್ತೆ. ಯಾಕೆಂದರೆ ನಾವು ಕಳ್ಕೊಳದಕ್ಕೆ ಶುರು ಮಾಡ್ತೀವಿ. ಅದಕ್ಕೆ ಒಂದು ಉದಾಹರಣೆ ಅಂದ್ರೆ ಶಿವಮೊಗ್ಗದಲ್ಲಿ ಉಳುವವನೇ ನೆಲದೊಡೆಯ ಚಳುವಳಿ ಪ್ರಾರಂಭಿಸಿದ್ವಲ್ಲ ಶಾಂತವೇರಿ ಗೋಪಾಲಗೌಡ, ಈ ಕೋಣಂದೂರು ಲಿಂಗಪ್ಪ, ನಾನು ಎಲ್ಲ ನಮ್ಮ ಜೊತೆಗೆ ಒಬ್ಬ ನೆಲದೊಡೆಯನೇ ಇದ್ದ-ಶಂಕರನಾರಾಯಣ ಭಟ್ಟ ಅಂತ. ಅವನಿಗೆ ಊರಿನಲ್ಲಿ ತಕ್ಕಮಟ್ಟಿಗಿನ ಆಸ್ತಿ ಪಾಸ್ತಿ ಇತ್ತು. ಆದರೆ ಅವನು ಒಬ್ಬನೇ ನಿಜವಾಗ್ಲೂ ಎಲ್ಲ ಭೂಮಿಯನ್ನು ಕಳ್ಕಂಡವನು. ಅವನಿಗೊಂದು sense of humour ಇತ್ತು ‘Now I am a land holder’ ಅಂತ ತನಗೆ ತಾನೇ ತಮಾಷೆ ಮಾಡ್ಕಳ್ತಿದ್ದ. ಅಂದ್ರೆ ಈಗ ತಾನು ‘ನೆಲ ಹಿಡಿದವನು’ ಅಂತ.

ಅನೇಕ ಸಾರಿ ಈ ರೀತಿ ಉದ್ವಿಗ್ನತೆ ಸಮಾಜವಾದಿಗಳಲ್ಲಿ ಹುಟ್ಟಿಡತ್ತೆ. ಏಕೆಂದ್ರೆ ಅವರಲ್ಲಿ ನಿಜವಾಗಿ ಕಳೆದುಕೊಳ್ಳುವವರು ಇರ‍್ತಾರೆ. ಹೇಳಿಯೂ ಏನನ್ನೂ ಕಳೆದು ಕೊಳ್ಳದೇ ಆ ಮೂಲಕವೇ ಉದ್ದಾರವಾಗೋರು ಇರ‍್ತಾರೆ. ನಮ್ಮಲ್ಲೊಂದು ಕಮ್ಯುನಿಸ್ಟ್ ಪಕ್ಷ-ಇಂದಿರಾಗಾಂಧಿ ಕಾಲದಲ್ಲಿ ತುಂಬಾ ಚೆನ್ನಾಗಿ ಉದ್ದಾರವಾಗ್ಬಿಡ್ತು. ನಮ್ಮ ಒಂದು ಪ್ರಕಾಶನ ಸಂಸ್ಥೆ ಸೋವಿಯತ್ ಲ್ಯಾಂಡ್‌ನ ಪುಸ್ತಕಗಳನ್ನು ಚೆನ್ನಾಗಿ ಮಾರಿ ಹಿಂದಕ್ಕೆ ದುಡ್ಡು ಕೊಡದೇ ಚೆನ್ನಾಗಿ ಬೆಳೀತು. ನಮ್ಮಲ್ಲಿ ಬೇರೆ ದೇಶದಿಂದ ದುಡ್ಡು ತಗಳದೆ, ಯಾರ ದುಡ್ಡನ್ನು ತಗಳದೆ ನೇರವಾಗಿ ಕೆಲಸ ಮಾಡಬೇಕು ಅಂತ ಹೊರಟಿದ್ದು ಲೋಹಿಯಾ ಒಬ್ರೆ. ಅವರು ಬೆಂಗಳೂರಿಗೆ ಬಂದರೆ ಸ್ನೇಹಲತಾ ರೆಡ್ಡಿ ಅವರಿಗೆ ಒಂದಷ್ಟು ಬಟ್ಟೆ ಒಗೆದು ಇಸ್ತ್ರಿ ಮಾಡಿಟ್ಟಿರ‍್ತಿದ್ಲು. ಅಥವಾ ಒಂದಿಷ್ಟು ಹೊಸ ಬಟ್ಟೆ ಕೊಂಡಿಟ್ಟಿರ‍್ತಿದ್ಲು. ಅದನ್ನ ಹಾಕಂಡು ಹೋಗ್ತಿದ್ದರು. ಮತ್ತ್ಯಾರೋ ಅವರಿಗೆ ಪ್ರಯಾಣಕ್ಕೆ ಟಿಕೆಟ್ ತೆಗೆಸಿಕೊಡ್ತಿದ್ರು. ಗೋಪಾಲಗೌಡರಿಗೆ ಯಾವಾಗ್ಲೂ ಟಿಕೆಟ್ ತೆಗೆಸಿಕೊಡ್ತಿದಿದ್ದು ಜೆ.ಹೆಚ್.ಪಟೇಲ್, ಪಟೇಲ್ ಏನಾದ್ರೂ ತೆಗೆಸಿಕೊಡೋದಕ್ಕೆ ನಿಧಾನ ಮಾಡಿದ್ರೆ ಗೋಪಾಲ ಜಗಳ ಆಡ್ತಿದ್ದ ಪಟೇಲ್ ಜೊತೆ. ಯಾಕೋ ತಡ ಮಾಡ್ತೀಯಾ ಅಂಥ ಅದು ತನ್ನ ಹಕ್ಕು ಅಂತ್ಲೇ ಗೋಪಾಲ ತಿಳ್ಕೊಂಡಿದ್ದ. ಶಿವಮೊಗ್ಗದಲ್ಲೊಂದು ಹೊಟೇಲ್ ಇತ್ತು ಅಲ್ಲಿ ಗೋಪಾಲ ತಿಂಡಿ ಕಾಫಿ ತಿಂದು ಲೆಕ್ಕ ಬರೆಸಿಟ್ಟಿದ್ದರೆ ಶಂಕರ ನಾರಾಯಣ ಭಟ್ಟ ಹೋಗಿ ಬಿಲ್ ಪಾವತಿ ಮಾಡಿ ಬರ‍್ತಿದ್ದ.

ನಮ್ಮಲ್ಲಿ ಎಲ್ಲ ಜಾತಿಯವರು ಇದ್ದರು. ಆದರೆ ಶಾಂತವೇರಿಗೆ – ನನಗೀಗಲೂ ನೆನಪಿದೆ-ಯಾವ ರೀತಿ ಸಾಮಾಜಿಕ ನ್ಯಾಯದ ಕ್ರಾಂತಿಪ್ರಜ್ಞೆ ಇತ್ತು ಅಂತ. ಕಾಗೋಡಿನಲ್ಲಿ ರೈತ ಸತ್ಯಾಗ್ರಹ ಮಾಡ್ಬೇಕು ಎನ್ನುವ ತೀರ್ಮಾನ ಮಾಡಿದಾಗ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿದ್ದೋರು ಸಿಜಿಕೆ ರೆಡ್ಡಿ. ಅವರು ಸುಭಾಷ್ ಚಂದ್ರ ಬೋಸ್ ಜೊತೆಗಿದ್ದವರು. ದೊಡ್ಡ ಕುಟುಂಬದಿಂದ ಬಂದವರು. ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ನ ಎಡಿಟರ್ ಆಗಿದ್ರು. ಬಹಳ ಶುಭ್ರವಾದ ಬಟ್ಟೆ ಹಾಕ್ತಿದ್ದವರು ಸಮಾಜವಾದಿಗಳಲ್ಲಿ-ಪ್ರಾಯಶಃ ಅವರೊಬ್ಬರೆ. ಶಿವಮೊಗ್ಗಕ್ಕೆ ಅವರು ಬಂದಾಗ ಕೆಲವು ಸಾರಿ ನಮ್ಮ ಮನೆಯಲ್ಲೇ ಉಳಿದುಕೊಳ್ತಿದ್ರು.

ಶಿವಮೊಗ್ಗದಲ್ಲಿ ನಮ್ಮದೊಂದು ಮಾರುತಿ ಪ್ರಿಂಟಿಂಗ್ ಪ್ರೆಸ್ ಅಂತ ಇತ್ತು. ಸಮಾಜವಾದಿಗಳು ಯಾರೇ ಬಂದ್ರೂ ನಮ್ಮಲ್ಲೇ ಉಳ್ಕಳೋದು, ಊಟ ಮಾಡೋದು ಮಾಡ್ತಿದ್ದರು. ನಮ್ಮಮ್ಮ ಎಲ್ಲರಿಗೂ ಅಡುಗೆ ಮಾಡಿ ಹಾಕೋರು. ಎಲ್ಲ ಜಾತಿಯವರು ಇರ‍್ತಿದ್ದರಿಂದ ಮೊದಮೊದಲಲ್ಲಿ ನಮ್ಮಮ್ಮ-ಅವರು ಊಟ ಮಾಡಿದ ಎಲೆ ಎತ್ತತಾ ಇರ‍್ಲಿಲ್ಲ: ನಾನು ಎಲೆ ಎತ್ತತಿದ್ದೆ. ‘ನಮ್ಮಮ್ಮ ಯಾರೂ ನೋಡಲ್ಲ ಬಿಡೋ ನಾನೇ ಎತ್ತತೀನಿ’ ಎನ್ನೋಕೆ ಶುರು ಮಾಡಿದ್ರು. ಸಮಾಜವಾದಿ ಚಿಂತನೆಯಿಂದ ನಾವೆಲ್ಲ ಹ್ಯಾಗೆ ಬದಲಾವಣೆ ಆಗ್ತೀವಿ ಅನ್ನೋದಕ್ಕೆ ನನಗೆ ನನ್ನ ಜೀವನವೇ ಸಾಕ್ಷಿ.

ಬೆಂಗಳೂರಿನಲ್ಲಿ ವೆಂಕಟರಾಮ್‌ಗೆ ಫೋನ್ ಬಿಲ್ ಕಟ್ಟೋದು ಹ್ಯಾಗೆ ಅನ್ನೋದೆ ಪ್ರತಿ ತಿಂಗಳ ಸಮಸ್ಯೆ. ಅವರತ್ರ ಇವರತ್ರ ದುಡ್ಡು ಎತ್ಬಿಟ್ಟು ಫೋನ್ ಬಿಲ್ ಕಟ್ಟೋರು. ಅದರ ಲೆಕ್ಕ ಎಲ್ಲ ಸರಿಯಾಗಿಡೋರು. ಅಂಥ ಸಮಾಜವಾದಿಗೆ ನಂಜುಂಡಸ್ವಾಮಿ ‘ಶಾನುಭೋಗ’ ಅನ್ನೋರು. ವೆಂಕಟರಾಮ್‌ಗೆ ಇದರಿಂದ ಸಿಟ್ಟು ಬರೋದು; ಆದರೂ ಸಹಿಸಿಕೊಳ್ಳೋರು. ಇವೆಲ್ಲ ಸಮಾಜವಾದಿಗಳ ಸಮಸ್ಯೆಗಳು ನಿತ್ಯ ಜೀವನದಲ್ಲಿ ನಾನು ಕಂಡಿರೋದು.

ನಾಗಭೂಷಣ್ ಅವರ ಪುಸ್ತಕ ಓದ್ತಾ ಇದ್ದ ಹಾಗೆ ನನಗೆ ಅನ್ನಿಸಿದ್ದು-ಇವತ್ತು ತಾತ್ವಿಕವಾಗಿ ರಾಜಕಾರಣದ ಬಗ್ಗೆ ಅರ್ಥ ಮಾಡಿಕೊಂಡು ಚಿಂತನಶೀಲವಾಗಿ ಬರೆಯಬಲ್ಲ ಒಬ್ಬ ಲೇಖಕ ಅಂದರೆ ನಾಗಭೂಷಣ್. ಇವರ ಬರವಣಿಗೆಯಲ್ಲಿ ಒಂಚೂರು ಕಷಾಯ ಗುಣವನ್ನು ಕಾಣ್ತೀವಿ. ಕಷಾಯಕ್ಕೆ ಎರಡು ರೀತಿಯ ಗುಣ ಇರತ್ತೆ. ಕಷಾಯದ ಗುಣ ಆರೋಗ್ಯಕ್ಕೆ ಅಗತ್ಯವಾದ ಕಹಿಯಾಗಿಯೂ ಇರುತ್ತೆ, ಸ್ವಲ್ಪ ಅರೋಚಿಯ ಗುಣವೂ (ಯಾವುದೂ ರುಚಿಸದ ಅನೌದಾರ್ಯವೂ ಅದಕ್ಕೆ ಇರತ್ತೆ. (ಇದಕ್ಕೆ ವಿರುದ್ಧವಾದ್ದು ‘ಸತೃಣಾಭ್ಯವ್ಯಹಾರಿ’ ಗುಣ. ಹುಲ್ಲಿನಲ್ಲೂ ರುಚಿ ಕಾಣುವ ಗುಣ) ಇವರ ಬರವಣಿಗೆಯ ಶೈಲಿ ಸ್ವಲ್ಪ ಉದ್ದೇಶಪೂರ್ವಕವಾದ ಅರೋಚಿಯದು.

ಸಮಾಜವಾದಿಗಳ ಒಳ ವಿಮರ್ಶಕರು ನಾಗಭೂಷಣ್. ನಮ್ಮಲ್ಲಿ ಕ್ರಿಟಿಕಲ್ ಇನಸೈಡರ್‌ಗಳು ಇರಬೇಕು. ನಾನು ಗಂಭೀರವಾಗಿ ಪ್ರಸ್ತಾಪಿಸಿರುವ ಪದ ಅದು. ನಾವು ಕ್ರಿಟಿಕಲ್ ಆಗಿರಬೇಕು, ಒಳಗಿನವರೂ ಆಗಿರಬೇಕು. ವಿಮರ್ಶಾತ್ಮಕ ದೃಷ್ಟಿಯಿಂದ ನೋಡೋ ಒಳಗಿನವರಾಗಿರಬೇಕು. ಅನೇಕ ಒಳಗಿನವರಿಗೆ ಆಗೋ ಸಮಸ್ಯೆ ಅಂದ್ರೆ ಅವರು ಒಳಗಿನ ತಪ್ಪುಗಳನ್ನು ನೋಡೋದೆ ಇಲ್ಲ. ಆ ತರ ಒಳಗಿನವನಾಗಿಯೂ ನಾನೇ ಇದ್ದೆ. ನಮಗೆಲ್ಲ ಏನು ಅನ್ನಿಸ್ತಾ ಇರತ್ತೆ ಅಂದ್ರೆ ಬಹಳ ಒಳಗಿನವರಾಗಿರುವವರನ್ನು ಬಯಲು ಮಾಡಬಾರದು. ಆದರೆ ನಾವು ಬಯಲು ಮಾಡದೇ ಇದ್ದರು ಅವರ ತಪ್ಪುಗಳನ್ನು ನೋಡಿಯು ಸುಮ್ಮನಾಗಬಾರದು. ಕಿವಿಯಲ್ಲಾದರೂ ಹೇಳಬೇಕು. ಹೇಳದೆ ಹೋದರೆ ನಾವು ತಪ್ಪು ಮಾಡಿದ ಹಾಗೆ ಆಗತ್ತೆ. ಯಾರೂ ಕಿವಿಯಲ್ಲಾದರೂ ತಪ್ಪನ್ನು ಹೇಳದೆ ಇರುವಂತ ಹೊಗಳುಭಟರು ಸಮಾಜವಾದಿಗಳಲ್ಲಿ ಯಾರೂ ಯಾವಾಗಲೂ ಇರ‍್ಲಿಲ್ಲ.

ನಾಗಭೂಷಣ್ ನೀವಿದನ್ನು ಮರೀಬಾರದು. ತಪ್ಪು ನಡೆದಿದ್ದರೆ ಅದನ್ನು ಕಿವಿಯಲ್ಲಾದರೂ ಹೇಳುವುದು ಸಾಧ್ಯವಾಗಬೇಕು. ನಾನು ಪಟೇಲರ ಕಿವಿ ಕಚ್ಚಿದಷ್ಟು ಇನ್ಯಾರ ಕಿವಿಯನ್ನು ಕಚ್ಚಿಲ್ಲ. ಮುಖ್ಯಮಂತ್ರಿಯಾದ ನಂತರವಂತೂ ಅವನ ಕಿವಿ ಹೆಚ್ಚು ಹೆಚ್ಚಾಗಿ ಕಚ್ಚಬೇಕಾಗಿ ಬಂತು. ಅಷ್ಟು ತಪ್ಪುಗಳನ್ನು ಅವನು ಮಾಡ್ತಾ ಇದ್ದ. ಇವನ್ನೆಲ್ಲ ನಾನು ಸಮಜಾಯಿಷಿ ಕೊಡೋಕೆ ಹೇಳ್ತಾ ಇಲ್ಲ. ವಾಸ್ತವವನ್ನು ತಿಳಿಯಲು ಹೇಳ್ತಾ ಇದೀನಿ.

ನಾಗಭೂಷಣ್‌ಗೆ ಅವರ ಬರವಣಿಗೆಯಲ್ಲಿ, ಚಿಂತನೆಯಲ್ಲಿ ಇಂಥ ಗುಣ ಬರಬೇಕು ಅಂತ ನಾನು ಆಶಿಸ್ತೀನಿ. ನಮ್ಮ ಚನ್ನಬಸಣ್ಣನವರು ಸಮಾಜವಾದವನ್ನು ಹೇಗೆ ತಮ್ಮ ಪ್ರಕಟಣೆಯ ಮೂಲಕ ರಕ್ಷಿಸುತ್ತಿದ್ದಾರೋ ಹಾಗೆ ತನ್ನ ನಿತ್ಯ ಜೀವನದಲ್ಲಿ ಸಮಾಜವಾದವನ್ನು ರಕ್ಷಿಸುವ ಗೆಳೆಯನೊಬ್ಬ ಮೈಸೂರಿನಲ್ಲಿದ್ದ. ನಾಗರಾಜ ಅಂತ ಲಾಯರ್. ದೇವನೂರು ಅವನ ಮನೆಯಲ್ಲೇ ಊಟ ಮಾಡಿ ಬೆಳೆದವನು. ಲೋಹಿಯ ಕರ್ನಾಟಕಕ್ಕೆ ಬಂದ್ರೆ ಅವನ ಮನೆಗೆ ಬರೋರು. ಮಧುಲಿಮಯೆ ಬಂದ್ರೆ ಅವನ ಮನೆಗೆ ಬರೋರು. ಅವನು ಅಪ್ಪಟ ಸಮಾಜವಾದಿ ಚಿಂತಕ. ಆದರೆ ಅವನ ಮಗನ ಮದುವೆಯೇ ಶಾಸ್ತ್ರೋಕ್ತವಾಗಿ ಮಾಡಬೇಕಾಗಿ ಬಂದಾಗ ನಾಗರಾಜ್ ಆ ಮದುವೆ ನಡೆಯುತ್ತಿದ್ದಾಗ ಹೊರಗೆ ನಿಂತಿದ್ದ. ನನಗೆ ಅವನು ಬಹಳ ಪ್ರಿಯನಾಗಿದ್ರಿಂದ ಏಕ ವಚನದಲ್ಲಿ ಮಾತನಾಡ್ತಿದೀನಿ. ಅಂಥದೊಂದು ಸಮಾಜವಾದಿ ತುಡಿತ ಸಾಯುವವರೆಗೆ ನಾಗರಾಜ್‌ಗೆ ಇತ್ತು.

ಸಮಾಜವಾದಿಗಳಾದ ನಮ್ಮದು ಬಹಳ ಆತ್ಮೀಯವಾದ ಕುಟುಂಬ. ನಾವೆಲ್ಲಾ ಸಮಾಜವಾದಿ ಕುಟುಂಬದ ಸದಸ್ಯರು. ಅದಕ್ಕಾಗಿಯೇ ನಾನು ಲಂಕೇಶ್ ಮತ್ತಿತರರೆಲ್ಲ ನನ್ನ ಮೇಳೆ ಕೆಲವು ಸಾರಿ ದಬ್ಬಾಳಿಕೆ ಮಾಡಿದಾಗಲೂ ನಾನು ಈ ವಲಯ ಬಿಟ್ಟು ಹೋಗಲೇ ಇಲ್ಲ. ನನ್ನ ಹಠವನ್ನು ನಾನು ಬಿಡಲಿಲ್ಲ. ಬಹಳ ಪ್ರಿಯರೂ ಗುರುಸಮಾನರೂ ಆದ ಕವಿ ಅಡಿಗರು ಜನಸಂಘ ಸೇರಿದಾಗಲೂ ನಾನು ಅವರನ್ನು ವಿರೋಧಿಸಿದೆ.

ನಾಗರಾಜ್ ವಿಷಯಕ್ಕೆ ಮತ್ತೆ ಬರುವೆ. ನಾಗರಾಜ್‌ಗೆ ಲೋಹಿಯಾ ಒಂದು ಕಾಗದವನ್ನು ಕಾರ್ಡ್‌ನಲ್ಲಿ ಬರೆದಿದ್ರು ಅದನ್ನು ಅವನು ನನಗೆ ತೋರಿಸಿದ್ದ. ಅದರಲ್ಲಿ ಲೋಹಿಯಾ ‘ಈಗ ಏನಾದರೂ ಒಂದು ಮಾಡೋಕೆ ಸಾಧ್ಯವಿದ್ದರೆ ಅದನ್ನು ಕೂಡಲೇ ಮಾಡುವ ಉಪಾಯವನ್ನು ನೀನು ಯೋಚನೆ ಮಾಡದೇ ಇದ್ದರೆ ನೀನು ಕೇವಲ ಚಪಲದ ಕನಸುಗಾರ ಆಗಿಬಿಡುತ್ತೀಯ. ಆದರೆ ಈ ಕೂಡಲೇ ಮಾಡಬೇಕಾದ ಕೆಲಸವನ್ನು ಮಾತ್ರ ಮಾಡ್ತಾ ಹೋದ್ರೆ ನೀನು ಸಮಯ ಸಾಧಕ ಆಗ್ತೀಯ’ ಅಂತ ಬರೆದಿದ್ರು. ಎಷ್ಟು ಕಷ್ಟ ನೋಡಿ ಇದನ್ನು ಅರ್ಥ ಮಾಡಿಕೊಳ್ಳುವುದು? ಸಮಯ ಪ್ರಜ್ಞೆ ಇರಬೇಕು. ಆದರೆ ಸಮಯ ಸಾಧಕತೆ ಇರಬಾರದು. ಸಮಯ ಪ್ರಜ್ಞೆಯ ಜೊತೆಗೆ ಮುಂದಿನ ಕನಸು ಇರಬೇಕು. ಅಂದರೆ ‘ಉಟೋಪಿಯಾ’-ಯಾವತ್ತೋ ಒಂದು ಕಾಲದಲ್ಲಿ ಈ ಜಗತ್ತು ಹೇಗಿರಬೇಕು ಎನ್ನುವುದರ ಕಲ್ಪನೆ ಇರಬೇಕು. ಆದರೆ ಈ ಕೂಡಲೇ ಮಾಡಬೇಕಾದ ಕೆಲಸಕ್ಕೆ ಅದು ಅಡ್ಡಿಯಾಗಬಾರದು. ಅಡ್ಡಿಯಾದ ಕೂಡಲೇ ಏನಾಗುತ್ತದೆ ಅಂದ್ರೆ ಏನನ್ನೂ ಮಾಡದೇ ಬರಿ ಚಪಲದ ಕನಸುಗಾರರಾಗ್ತೀವಿ.

ಇದಕ್ಕೊಂದು ಉದಾಹರಣೆ ಕೊಡ್ತೀನಿ. ದೇವರಾಜ ಅರಸರ ಕಾಲದಲ್ಲಿ ಗೇಣಿ ಶಾಸನವನ್ನು ತರುವುದಕ್ಕೆ ಶುರು ಮಾಡಿದಾಗ ರಾಜ್ಯದ ಕೃಷಿ ಸಚಿವರಾಗಿದ್ದವರು ಹುಚ್ಚು ಮಾಸ್ತಿಗೌಡರು. ಈ ಸಂದರ್ಭದಲ್ಲಿ ಮೈಸೂರು ವಿವಿಯಲ್ಲಿ ಗೇಣಿ ಶಾಸನದ ಬಗ್ಗೆ ಒಂದು ಚರ್ಚೆಯನ್ನು ಏರ್ಪಡಿಸಿದ್ವಿ. ದೇವರಾಜು ಅರಸು ಈ ಸಭೆಯಲ್ಲಿ ಮಾತನಾಡಿದ್ರು. ಆಗ ನಮ್ಮಲೊಬ್ಬ ಕಮ್ಯೂನಿಸ್ಟ್ ಇದ್ರು. ಎಲ್.ಶ್ರೀಕಂಠಯ್ಯ. ಅಂಜಿಕೆ ಬಿಟ್ಟು ಚಿಂತಿಸಬಲ್ಲ. ರಾಜ್ಯಶಾಸ್ತ್ರದ ಪ್ರಾಧ್ಯಾಪಕರು. ಅಪ್ಪಟ ಕಮ್ಯೂನಿಸ್ಟರು. ಸ್ವಲ್ಪ Misquided communist ಏಕೆಂದರೆ ಚೀನಾ ಆಕ್ರಮಣ ನಡೆದಾಗ ಈ ಜಾಗ ಚೀನಾಧೆ ಅಂಥ ಬರೆದು ಅರೆಸ್ಟ್ ಆಗುವುದರಲ್ಲಿದ್ರು. ಅವರು ರಾಜಕಾರಣ ಮಾಡೋಕೆ ಹೋಗಿ ಸೋತುಬಿಟ್ರು. ಅವರಿಗೊಂದು ಬಡ್ಡಿ ವ್ಯವಹಾರವು ಇತ್ತು ಅಂಥ ನಾನು ಕೇಳಿದಿನಿ. ಅಂದಿನ ಸಭೆಯಲ್ಲಿ ಎಲ್.ಶ್ರೀಕಂಠಯ್ಯನೋರು ಏನು ವಾದ ಮಾಡಿದ್ರು ಅಂದ್ರೆ ನೀವು ಈ ಗೇಣಿ ಶಾಸನ ಜಾರಿ ಮಾಡಿದರೆ ಏನು ಪ್ರಯೋಜನ? ನಮ್ಮ ದೇಶದಲ್ಲಿ ಬಿರ್ಲಾ ಇದಾನೆ, ದಾಲ್ಮಿಯಾ ಇದಾನೆ, ತುಂಬ ಜನ ಶ್ರೀಮಂತರಿದ್ದಾರೆ. ಆ ಶ್ರೀಮಂತಿಕೆ ನಡೀತಾನೆ ಇರತ್ತೆ. ನೀವು ಒಂದಿಷ್ಟು ಜನ ಜಮೀನುದಾರರಿಂದ ಜಮೀನು ಕಸಿದುಕೊಂಡು ಹಂಚಿದ ಕೂಡಲೇ ಸಮಾಜವಾದ ಬಂದುಬಿಡತ್ತಾ? ಆಸ್ತಿ ಕಸಿದುಕೊಳ್ಳುವುದಾದರೆ ಎಲ್ಲ ರೀತಿಯ ಆಸ್ತಿಯನ್ನು ಕಸಿದುಕೊಂಡು ಸಮಾನವಾಗಿ ಹಂಚಿ ಅಂಥ ವಾದ ಹೂಡಿದ್ರು. ಅದಕ್ಕೆ ಹುಚ್ಚು ಮಾಸ್ತಿಗೌಡ್ರು ನಮಗೆ ಇಷ್ಟನ್ನೆ ಸದ್ಯಕ್ಕೆ ಮಾಡ್ಲಿಕ್ಕೆ ಸಾಧ್ಯ ಆಗೋದು. ಇದಕ್ಕಿಂತ ಹೆಚ್ಚಿನದು ನಮಗೆ ಸಾಧ್ಯ ಆಗಲ್ಲ ಅಂತ ತಮ್ಮ ವಾದ ಮಂಡಿಸಿದ್ರು.

ಗೋಪಾಲಗೌಡ್ರು ಆ ಹೊತ್ತಿನ ಈ ಚರ್ಚೆಯಲ್ಲಿ ಭಾಗವಹಿಸಿರಲಿಲ್ಲ. ನಂತರ ಅವರು ನಮ್ಮ ಮನೆಗೆ ಬಂದಾಗ ಈ ಬಗ್ಗೆ ಪ್ರಸಾಪಿಸಿ ಏನು ನಡೀತು ಅಂತ ಕೇಳಿದ್ರು. ನಾನು ಹೀಗೆಲ್ಲ ನಡೆಯಿತು ಅಂತ ವಿವರಿಸಿದೆ. ಆವಾಗ ಗೋಪಾಲಗೌಡರು ಒಂದು ಅದ್ಭುತವಾದ ರೂಪಕವನ್ನು ಹೇಳಿದ್ರು. ಆ ರೂಪಕ ನನ್ನ ಮನಸಿನ ಮೇಲೆ ಬಹಳ ಕೆಲಸ ಮಾಡಿದೆ ಮತ್ತು ಅವಸ್ಥೆ ಬರೆಯುವಾಗ ಆ ರೂಪಕ ಅದರ ಒಳಗೆ ಇದೆ. ‘ಶ್ರೀಕಂಠಯ್ಯನವರು ಎಂಥ ಜನ ಅಂದ್ರೆ ಆಕಾಶ ಹಂಚಿಕೊಂಡ ಮೇಲೆ ಭೂಮಿಯನ್ನು ಹಂಚಿಕೊಳ್ಳೋಣ ಅನ್ನೋರು. ಯಾಕೆಂದರೆ ಅವರಿಗೆ ಗೊತ್ತಿರುತ್ತದೆ. ಆಕಾಶವನ್ನು ಹಂಚಿಕೊಳ್ಳಲು ಸಾಧ್ಯವೇ ಇಲ್ಲ ಅಂತ. ಈಗಲೇ ಭೂಮಿಯನ್ನು ಹಂಚಿಕೊಳ್ಳಬೇಕಾದ ಬೀಸೋ ದೊಣ್ಣೆಯಿಂದ ಪಾರಾಗೋದು ಅವರ ಉದ್ದೇಶವಾಗಿರುತ್ತದೆ.’

ಅವತ್ತು ಚರ್ಚೆ ನಡೆಯುತ್ತಿದ್ದಾಗ ಅಲ್ಲಿ ವೀರಣ್ಣಗೌಡರಿದ್ರು. ಅವರು ಜಮೀನುದಾರರ ಪರವಾಗಿದ್ದ ಕಾಂಗ್ರೆಸ್ಸಿಗರು. ಶ್ರೀಕಂಠಯ್ಯನವರು ಈ ರೀತಿ ವಾದ ಮಂಡಿಸಿದ ಕೂಡಲೇ ವೀರಣ್ಣ ಗೌಡ್ರು ನಾನು ಅದನ್ನೇ ಹೇಳೋದು ಅಂತ ಶ್ರೀಕಂಠಯ್ಯನವರ ಪರವಾಗಿ ನಿಂತರು. ಎಲ್ಲವನ್ನು ಹಂಚಿಕೊಳ್ಳುವ ಕಾಲ ಬರುವುದು ಸದ್ಯಕ್ಕಂತೂ ಇಲ್ಲ ಅಲ್ಲಿಯವರೆಗಾದರೂ ಭೂಮಿಯನ್ನು ಇಟ್ಟುಕೊಳ್ಳುವ ಉದ್ದೇಶದವರು ಇವ್ರು. ಇದೆಲ್ಲ ನಮ್ಮ ಸಮಾಜವಾದಿಗಳಿಗೆ ನೆನಪಿರಬೇಕು. ಇದು ನಾಗಭೂಷಣ್‌ಗೆ ಗೊತ್ತಿಲ್ಲ ಅಂತ ಅಲ್ಲ ಸುಮ್ಮನೆ ಒಂದು ವಾಗ್ವಾದಕ್ಕಾಗಿ ಹೇಳ್ತಾ ಇದೀನಿ.

ಆದರೆ ಬರಿಯ ಸಮಯಸಾಧಕತನವು ಇದನ್ನು ಮಾಡಲಿಕ್ಕೆ ಸಾಧ್ಯವಿಲ್ಲ. ಸಮಯಪ್ರಜ್ಞೆ ಇರಬೇಕು. ಸಮಯ ಸಾಧಕತೆ ಇರಬಾರದು. ಕನಸಿನ ಶಕ್ತಿ ಇರಬೇಕು ಕನಸುಗಾರ ಆಗಬಾರದು. ಯಾಕೆಂದರೆ ಮುಂದಿನ ದಿನಗಳ ಯೋಚನೆ ಮಾಡುವವನು ಇವತ್ತು ಆಗುತ್ತಿರುವ ಅನ್ಯಾಯಗಳ ಬಗ್ಗೆ ‘ಆಗತ್ತೆ ಏನು ಮಾಡೋದು ಮುಂದೊಂದು ಕಾಲ ಬರತ್ತೆ ಎಲ್ಲ ಸರಿ ಇರೋಕಾಲ’ ಅನ್ನೋ ಕನಸಿನಲ್ಲಿ ಇರಬಲ್ಲ. ಮನಸಿನ ಲಂಪಟತನ ಅದು. ಕನಸುಗಾರಿಕೆ ಲಂಪಟತನವಾದಾಗ ಸಮಯ ಸಾಧಕತೆ ಸ್ವಾರ್ಥ ಆಗುತ್ತೆ.

ಇದಕ್ಕೊಂದು ಉದಾಹರಣೆ ಎಂದರೆ ನಮ್ಮ ಜೆಡಿ(ಎಸ್)ನವರಿಗೆ ತಾವು ಕಾಂಗ್ರೆಸ್ ಜೊತೆಗಿದ್ದರೆ ಅವ್ರು ನಮ್ಮ ಬುಟ್ಟಿಗೆ ಕೈ ಹಾಕಿ ಇವತ್ತು ಸಿದ್ದರಾಮಯ್ಯ ನಾಳೆ ಮತ್ತೊಬ್ಬರು ಹೀಗೆ ತಮ್ಮ ಪಕ್ಷದಿಂದ ಎಳೆದುಕೊಳ್ಳುತ್ತಾರೆ ಅನ್ನೋ ಭಯದಿಂದ ಬಿಜೆಪಿ ಜೊತೆ ಕೈ ಜೋಡಿಸಿ ಸರ್ಕಾರ ರಚಿಸಬೇಕಾಯಿತು ಎನ್ನುವ ವಾದ. ಅದು ಅವರ ಸಮಯ ಸಾಧಕತೆಗೆ ಅತ್ಯುತ್ತಮ ಉದಾಹರಣೆ ಇದು. ಸರ್ಕಾರ ರಚಿಸುವಾಗ ಕುಮಾರಸ್ವಾಮಿ ಹೇಳಿದ್ರು ‘ನನಗೆ ಪಕ್ಷವನ್ನು ಉಳಿಸಿಕೊಳ್ಳುವುದು ಮುಖ್ಯ. ಪಕ್ಷವೇ ಹೋದ ಮೇಲೆ ಏನಿದೆ ಆದ್ದರಿಂದ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡ್ತೀನಿ’ ಅಂತ ಯಾರೋ ಸೆಕ್ಯುಲರಿಸಂ ಬಗ್ಗೆ ಕೇಳಿದ್ರೆ ಆ ಪದ ಎಲ್ಲಿದೆ ಅಂತ ಪ್ರಶ್ನಿಸಿದರು. ಆಮೇಲೆ ಅವರಿಗೆ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕೊಟ್ರೆ ಮುಂದಿನ ಚುನಾವಣೆಯಲ್ಲಿ ಎಲ್ಲ ಓಟು ಬಿಜೆಪಿಗೆ ಬಿದ್ಬಿಟ್ಟು ಜೆಡಿ(ಎಸ್) ಎನ್ನುವುದು ನಿರ್ನಾಮ ಆಗಬಹುದು ಅನ್ನಿಸಿದ ಕೂಡಲೇ ಸೆಕ್ಯುಲರಿಸಂ ನೆನಪಾಯ್ತು. ಒಂದು ಶಬ್ದವನ್ನು ಸಮಯ ಸಾಧಕತೆಗೆ ಎರಡು ಬಾರಿ ಉಪಯೋಗಿಸಿದಾಗ ಆ ಶಬ್ದಕ್ಕಿರುವ ಬೆಲೆ ಹೊರಟು ಹೋಯ್ತು.

ಸಮಾಜವಾದಕ್ಕೂ ಇದೇ ರೀತಿ ಆಗಿದೆ. ಸಮಾಜವಾದವನ್ನು ನಮ್ಮ ಸಮಯ ಸಾಧಕತೆಗೂ ಉಪಯೋಗಿಸಬಹುದು. ಬೇರೆ ಬೇರೆ ಅರ್ಥದಲ್ಲಿ ಸೋಷಿಯಲಿಸಂನ್ನು ಉಪಯೋಗಿಸುತ್ತಾ ಹೋದಾಗ ಅದಕ್ಕಿರುವ ಬೆಲೆ ನಿರ್ನಾಮವಾಗುತ್ತೆ. ಅನೇಕ ಜನ ಕಮ್ಯೂನಿಸ್ಟ್‌ರು ಸೋಷಿಯಲಿಸಂನ್ನು ಉಪಯೋಗಿಸಿಕೊಳ್ತಾ ಇದ್ದಿದ್ದು ಸೋವಿಯತ್ ಲ್ಯಾಂಡ್‌ನ ಬೇಹುಗಾರಿಕೆಗೆ, ಆಗ ಆ ಶಬ್ದದ ಬೆಲೆಯೂ ಹೊರಟುಹೋಯ್ತು. ಆ ಯುಗವೂ ನಾಶವಾಯ್ತು.

ಇದರಿಂದ ಸಂಪೂರ್ಣ ಹೊರಗಿರಬೇಕು ಎನ್ನುವ ಲೋಹಿಯಾ ಅವರು ಸಮಯಕ್ಕೆ ಸರಿಯಾದ್ದನ್ನೂ ಮಾಡಬೇಕು ಮತ್ತು ನಮ್ಮ ಕನಸನ್ನೂ ಕಳೆದುಕೊಳ್ಳಬಾರದು ಅಂತ ಮತ್ತೆ ಮತ್ತೆ ಹೇಳುತ್ತಿದ್ದವರು; ನಾನೊಮ್ಮೆ ಅವರನ್ನು ಕೇಳಿದ್ದೆ; ‘ಯಾಕೆ ಸುಮ್ಮನೆ ನೆಹರು ಅವರನ್ನ ಬಯ್ತೀರಿ ನಮಗೆ ನೆಹರು ಬಗ್ಗೆ ತುಂಬಾ ಅಭಿಮಾನ ಇದೆ’ ಎಂದು. ಅದಕ್ಕೆ ಅವರು ‘ನನಗೂ ಇದೆ, ಇತ್ತು. ಆದರೆ ಪ್ರಧಾನಿಪಟ್ಟ ಅವರ ವಂಶದ ಸ್ವತ್ತು ಅನ್ನೋದು ಕೊನೆಯಾದಾಗ ನಾನು ನೆಹರೂ ಬಗ್ಗೆ ಹೇಳುವ ಹಲವು ಒಳ್ಳೆಯ ಮಾತುಗಳು ಇವೆ.’

ಈಗ ಆ ಕಾಲ ಬಂದಿದೆಯೇ? ಇದು ನಮ್ಮ ಎದುರು ಇರುವ ಪ್ರಶ್ನೆ.

*

(ಡಿ.ಎಸ್. ನಾಗಭೂಷಣ ಅವರ ಮರಳಿ ಬರಲಿದೆ ಸಮಾಜವಾದ (೨೦೦೮) ಪುಸ್ತಕ ಬಿಡುಗಡೆಗೊಳಿಸಿ ಶಿವಮೊಗ್ಗದಲ್ಲಿ ಮಾಡಿದ ಭಾಷಣ. ಅಕ್ಷರ ರೂಪ: ಅಕ್ಷತಾ.ಕೆ.)