ನಮ್ಮ ವೆಂಕಟರಾಮ್ ರಾಜಕಾರಿಣಿಗಳಿಗಿಂತ ಹೆಚ್ಚು ಕನ್ನಡ ಲೇಖಕರ ಲೋಕಕ್ಕೆ ಹತ್ತಿರದ ಪ್ರಜ್ಞಾವಂತ. ನನ್ನ ಪಾಲಿಗೆ ನನ್ನನ್ನು ಬೆಳೆಸಿದ ಏಕವಚನದ ಸ್ನೇಹಿತ ಮತ್ತು ಗುರು.

ಮರೆಯಲಾರದ ಕೆಲವು ಘಟನೆಗಳನ್ನು ಮೊದಲು ನೆನೆದುಕೊಳ್ಳುವೆ :

೬೬ನೆಯ ಇಸವಿಯ ಕೊನೆಯಲ್ಲಿ ನಾನು ಇಂಗ್ಲೆಂಡಿನಲ್ಲಿ ನನ್ನ ಡಾಕ್ಟರೇಟ್ ಮುಗಿಸಿ ಬಂದಿದ್ದೆ. ಕನ್ನಡದ ಪ್ರೀತಿ ಕ್ರಿಯಾಶೀಲವಾಗಿದ್ದ ಕಾಲ ಅದು. ಲೋಹಿಯಾದ ಚಿಂತನೆಗೆ ಬದ್ದರಾದ ನಾವು ಮೈಸೂರಿನಲ್ಲಿ ಒಂದು ಚಳವಳಿ ಮಾಡಿದೆವು: ಅದರ ಘೋಷಣೆ ‘ಇಂಗ್ಲಿಷ್ ಇಳಿಸಿ; ಕನ್ನಡ ಬೆಳೆಸಿ.’ ನನಗೆ ಸಂಜೆ ಪುರಭವನದಲ್ಲಿ ನಡೆದೊಂದು ಘಟನೆ ನಿಚ್ಚಳವಾಗಿ ನೆನಪಿದೆ. ವೇದಿಕೆಯ ಮೇಲೆ ಹಿರಿಯರಾದ ಪು.ತಿ.ನ ಮತ್ತು ತಿ. ತಾ. ಶರ್ಮರು ಕೂತಿದ್ದರು. ಪುಂಡರ ಗುಂಪೊಂದು ಸಭೆಯನ್ನು ಒಡೆಯಲು ಸಿದ್ಧವಾಗಿ ಬಂದಿತ್ತು. (ಯೂನಿವರ್ಸಿಟಿಯ ಕನ್ನಡ ವಿರೋಧಿ ರಾಜಕಾರಣದ ಏಜೆಂಟರು ಇವರು. ಇವರ ಉದ್ದೇಶ ಯಾರು ವೈಸ್ ಚಾನ್ಸೆಲರ್ ಆಗಬೇಕು ಎಂಬುದಕ್ಕೆ ಪರಿಮಿತವಾದ್ದು. ನಮಗೂ ಈ ರಾಜಕಾರಣಕ್ಕೂ ಸಂಬಂಧವಿರಲಿಲ್ಲ. ಕನ್ನಡದವರೊಬ್ಬರು ವಿ.ಸಿ. ಆದರೆ ಬಗೆಹರಿಯುವ ಪ್ರಶ್ನೆಯನ್ನು ನಾವು ಎತ್ತಿರಲಿಲ್ಲ. ಆದರೆ ಎಲ್ಲ ಕಾಲದಲ್ಲೂ ಸದುದ್ದೇಶದ ಚಳವಳಿಗಾಲನ್ನೂ ಬಳಸುವ ಪರವಿರೋಧ ಬಣಗಳು ಇರುತ್ತವೆ. ವೆಂಕಟರಾಮ್ ಪ್ರಕಾರ ನಾವು ಸದ್ಯದ ಹಿತಕ್ಕೆ ಬದ್ಧವಾದ ಶಕ್ತಿಗಳನ್ನೂ ಬಳಸಬಲ್ಲವರು ಆಗಿರಬೇಕು. ಕಾರ್ಮಿಕ ಚಳವಳಿಗಳ ನೇತಾರರಾದ ವೆಂಕರಾಮ್‌ರಂಥವರು ಈ ವಿಷಯದಲ್ಲಿ ನೈತಿಕವಾಗಿ ಯೋಚಿಸುತ್ತಿರಲಿಲ್ಲ. ಅದೊಂದು ಜಗಳ ನಮ್ಮ ನಡುವೆ ಇತ್ತು. ಕಾರ್ಮಿಕ ಚಳವಳಿ ತನ್ನ ತಾತ್ವಿಕ ನೆಲಗಟ್ಟನ್ನು ಕಳೆದುಕೊಂಡು ಕೇವಲ ಸಂಬಳ ಸಾರಿಗೆಯ ಎಕನಾಮಿಸಂ ಆಗಿದೆ ಎಂಬ ಅರಿವೂ ವೆಂಕಟರಾಮ್‌ಗೆ ಇತ್ತು ಎಂದು ಹೇಳದಿದ್ದರೆ ತಪ್ಪಾಗುತ್ತದೆ.)

ಪು.ತಿ.ನ. ಮಾತನಾಡಲು ಎದ್ದರು. ಅವರ ಧ್ವನಿ ಕ್ಷೀಣ, ಮೃದು. ತಮಗೇ ಮಾತನಾಡಿಕೊಳ್ಳುವಂತೆ ಸಭೆಗೆ ಅವರು ಮಾತನಾಡುವುದು. ಪುಂಡರು ಬಂದು ಅವರೆದುರಿಗೆ ನಿಂತು ಕೂಗಾಡಿ ಕಂಗಾಲಾಗುವಂತೆ ಮಾಡಿದರು. ಆ ಸಭೆಯ ಮೂಲೆಯಲ್ಲಿದ್ದ ನನಗೆ ತಡೆದುಕೊಳ್ಳಲು ಆಗಲಿಲ್ಲ. ಪುಂಡನೊಬ್ಬ ಪು.ತಿ.ನ,ರಿಂದ ಮೈಕನ್ನು ಕಿತ್ತುಕೊಂಡು ಯದ್ವಾ ತದ್ವಾ ತಾನೇ ಮಾತಾಡಲು ಪ್ರಾರಂಭಿಸಿದ್ದ. ನಾನು ಅವನ ಕೈಯಿಂದ ಮೈಕನ್ನು ಕಿತ್ತುಕೊಂಡು ನನಗೆ ಸಾಧ್ಯವಿದ್ದ ರೋಷದಲ್ಲಿ ಮಾತನಾಡಿ ಇಡೀ ಪುಂಡರ ಗುಂಪು ಗಪ್ ಚಿಪ್ ಎಂದು ಕೂರುವಂತೆ ಮಾಡಿದೆ. ಪು.ತಿ.ನ.ರಿಗೆ ನನ್ನ ಮೇಲಿನ ಅಭಿಮಾನ ಬೆಳೆದದ್ದು ಈ ಘಳಿಗೆಯಿಂದ.

ಈ ಪುಂಡರ ಗುಂಪು ಸುಮ್ಮನಿರಲಿಲ್ಲ. ನನ್ನನ್ನು ಮಾನಸ ಗಂಗೋತ್ರಿಯ ಒಳಗೆ ನಿಲ್ಲಿಸಿ ಹೊಡೆಯುತ್ತೇವೆಂದು ಬೆದರಿಕೆ ಹಾಕಿದರು.

ಇದು ನನ್ನ ಗೆಳೆಯ ಬೆಂಗಳೂರಿನಲ್ಲಿದ್ದ ವೆಂಕಟರಾಮ್‌ಗೆ ಗೊತ್ತಾಯಿತು. ಸೀದಾ ಮೈಸೂರಿನ ಸರಸ್ವತಿಪುರಂನಲ್ಲಿ ಇದ್ದ ನಮ್ಮ ಮನೆಗೆ ಬಂದ. ಅವನು ಯಾವಾಗಲೂ ಕೈಯಲ್ಲೊಂದು ಪುಸ್ತಕವನ್ನು ಇಟ್ಟುಕೊಂಡು, ದಪ್ಪ ಕನ್ನಡಕ ತೊಟ್ಟು, ಕೆದರಿದ ಕೂದಲಕೆಳಗೆ ಹಸನ್ಮುಖಿಯಾಗಿ ಏಕಾಗ್ರನಾಗಿ ನಡೆದಾಡುವುದು. ಟ್ಯಾಕ್ಸಿ ಹತ್ತಿದರೆ ಡ್ರೈವರ್‌ಪಕ್ಕದಲ್ಲೇ ಕೂರುವುದು. ನನಗಿನ್ನೂ ನೆನಪಿದೆ. ಅದು ಟ್ರಾಕ್ಕ್ಸಿ ಬಗ್ಗೆ ಆ ಕಾಲದಲ್ಲಿ ಪ್ರಕಟವಾಗಿದ್ದ ಹೊಸ ಪುಸ್ತಕ. ನನಗೆ ವೆಂಕಟರಾಮ್ ಒಂದು ಕಿವಿ ಮಾತು ಹೇಳಿದರು. ಅವರ ಸ್ವಧರ್ಮಕ್ಕೆ ಹತ್ತಿರವಾದ ಮಾತದು. ‘ಇ ಬಗೆಯ ಪುಂಡರು ಸಾಮಾನ್ಯವಾಗಿ ನಿರುದ್ಯೋಗಿಗಳು. lumpen ಜನ. ಇವರ ಸದ್ದಡಗಿಸಲು ನಮಗಿರುವ ಮಾರ್ಗ ಒಂದೇ. ಈ ಅಸಂಘಟಿತರಾದ ಪುಂಡರ ಕೈ ಮೇಲಾಗದಿರಲು ನಾವು ಸಂಘಟಿತರಾದ ಕಾರ್ಮಿಕರ ಜೊತೆ ಕೈ ಜೋಡಿಸಿ ಕೆಲಸ ಮಾಡಬೇಕು. ಮೈಸೂರಲ್ಲಿರುವ ಜಾವಾ ಮೋಟರ್‌ಸೈಕಲ್ ಕಾರ್ಮಿಕರ ಸಂಘ ನನ್ನ ಜೊತೆಗಿದೆ. ಅವರ ಒಂದು ಸಭೆಯನ್ನು ಈ ಸಂಜೆ ಕರೆಯುತ್ತೇನೆ. ಅವರಿಗೆ ನಿನು ನಮ್ಮ ದೇಶಕ್ಕೆ ಅಗತ್ಯವಾದ ಭಾಷಾ ನೀತಿಯ ಬಗೆಗೆ ಮಾತನಾಡಬೇಕು. ನಿನ್ನ ಜೊತೆಯವರು ಅವರು ಎಂದು ತಿಳಿದು ಮಾತನಾಡಬೇಕು.’

ಸಂಜೆ ನಾನು ಜಾವಾ ಕಾರ್ಮಿಕರನ್ನು ಉದ್ದೇಶಿಸಿ ನಮ್ಮ ಭಾಷಾ ನೀತಿ ಯಾವುದಿರಬೇಕೆಂಬುದನ್ನು ಕುರಿತು ಮಾತನಾಡಿದೆ – ಅವರನ್ನು ಒಳಪಡಿಸಬಲ್ಲ ರೀತಿಯಲ್ಲಿ. ವೆಂಕಟರಾಮ್ ಮತ್ತು ಗೋಪಾಲಗೌಡರಿಂದ ನಾನು ಕಲಿತದ್ದು ಅದು. ಆ ಸಂಘದ ಕಾರ್ಯದರ್ಶಿಯೋ ಅಧ್ಯಕ್ಷನೋ ಆಗಿದ್ದ ಒಬ್ಬನು ಮೊದಲೇ ವೆಂಕಟರಾಮ್‌ಅವರಿಗೆ ಹೇಳಿದಂತೆ ಒಂದು ನಿರ್ಣಯವನ್ನು ಸಭೆಯಲ್ಲಿ ಮಂಡಿಸಿದ. ಅದರ ಪ್ರಕಾರ ಮಾರನೆಯ ದಿನ ಜಾವಾ ಕಾರ್ಮಿಕರು ಸಾಲಾಗಿ ನಮ್ಮ ಜೊತೆ ಮಾನಸ ಗಂಗೋತ್ರಿಯ ವಿದ್ವದ್‌ಜನರ ಲೋಕದೊಳಗೆ ಎಲ್ಲರಿಗೂ ಆಶ್ಚರ್ಯವಾಗುವಂತೆ ಸ್ಲೋಗನ್‌ಗಳನ್ನು ಕೂಗಿಕೊಂಡು ಮಾರ್ಚ್‌ಮಾಡಬೇಕು. ಕಾರ್ಮಿಕರು ಎಲ್ಲರಿಗೂ ಮನದಟ್ಟಾಗುವಂತೆ ಹೇಳಿದ ಮಾತು ಹೀಗಿತ್ತು: ‘ಕನ್ನಡ ಲೇಖಕರು ಮತ್ತು ನಾವು ಬಾಂಧವರು. ನಾವಿಬ್ಬರೂ ಕಾರ್ಮಿಕರೇ. ಲೇಖಕರನ್ನು ನಿವೇನಾದರೂ ಹಿಂಸೆಗೆ ಒಳಮಾಡಿದರೆ ನಿಮ್ಮನ್ನು ನಾವು ಸುಮ್ಮನೆ ಬಿಡುವುದಿಲ್ಲ’. ಇದು ಅದ್ಭುತವಾಗಿ ನಮ್ಮ ಚಳವಳಿಗೆ ಸಹಾಯಕವಾಯಿತು. ಇದಾದ ನಂತರ ನನ್ನನ್ನು ಸಾಹಿತ್ಯದ ವಿದ್ಯಾರ್ಥಿಯಾಗಿ ಬೆಳೆಸಿದ, ನಾನು ಗೌರವಿಸುತ್ತಿದ್ದ ಪ್ರೊ. ಸಿ.ಡಿ. ನರಸಿಂಹಯ್ಯನವರೇ ನನ್ನನ್ನು ಇಂಗ್ಲಿಷ್ ಅಧ್ಯಯನಕ್ಕೆ ವಿರೋಧಿಯೆಂದು ಗಣಿಸಿ ಸುಮಾರು ನಾಲ್ಕು ವರ್ಷಗಳ ಕಾಲ ಮಾನಸ ಗಂಗೋತ್ರಿಯ ಇಲಾಖೆಗೆ ಬರದಂತೆ ನೋಡಿಕೊಂಡರು.

ವೆಂಕಟರಾಮ್ ನನಗೆ ಇಂಥಾ ಸಂದರ್ಭಗಳನ್ನು ಎದುರಿಸಲು ಗುರುವಿನ ಹಾಗಿದ್ದರು. ಟ್ರಾಟ್ಕ್ಸಿ ಸಿದ್ಧಾಂತದಿಂದಲೂ, ಲೋಹಿಯಾ ಸಿದ್ಧಾಂತದಿಂದಲೂ ಪ್ರೇರಿತರಾದ ಅವರು ನಮ್ಮ ನಾಡಿನ ಧೀಮಂತರು, ಲೇಖಕರು ತಮ್ಮ ಪಾಡಿಗೆ ತಾವಿರದೆ ರೈತರ ಜೊತೆಯೂ ಕಾರ್ಮಿಕರ ಜೊತೆಯೂ ಬೆರೆಯಬೇಕೆಂದು ತಿಳಿದವರಾಗಿದ್ದರು. ಹೀಗೆ ಮಾಡುವುದರಲ್ಲಿ ಇಬ್ಬರಿಗೂ ಲಾಭವಿದೆ ಮಾತ್ರವಲ್ಲ; ಧೀಮಂತನಾದವನು ಸಮುದಾಯದ ಧೀಮಂತನಾಗುತ್ತಾನೆ, ಪುಸ್ತಕದ ವಾಸನೆಯಿಂದ ಮುಕ್ತನಾಗುತ್ತಾನೆ ಎಂಬುದು ಅವರ ಧೋರಣೆಯಾಗಿತ್ತು.

ವೆಂಕಟರಾಮ್‌ಬಗೆಗೆ ಬರೆಯಲು ಹೊರಟರೆ ಅದು ಎಲ್ಲಿ ನಿಲ್ಲಬೇಕು ನನಗೇ ಗೊತ್ತಾಗುವುದಿಲ್ಲ. ನಾನು ಇಂಗ್ಲೆಂಡಿನಲ್ಲಿ ಸಿ. ಎಲ್. ಆರ್. ಜೇಮ್ಸ್ ಅವರನ್ನು ಭೇಟಿಯಾಗಿದ್ದೆ ಎಂಬುದನ್ನು ಕೇಳಿದ್ದೇ ಅವರು ಪಟ್ಟ ರೋಮಾಂಚನ ನನಗಿನ್ನೂ ನೆನಪಿದೆ. ಟ್ರಾಕ್ಕ್ಸಿಯನ್ನು ಕುರಿತ ಅಥವಾ ಅವನಿಂದ ಪ್ರಭಾವಿತರಾದ ಯಾರನ್ನಾದರೂ ಓದಿರಲಿಲ್ಲ ಎಂದು ವೆಂಕಟರಾಮ್ ಅವರ ಬಗೆಗೆ ಹೇಳುವುದೇ ಅಸಾಧ್ಯವಾಗಿತ್ತು.

ನನಗಿನ್ನೂ ಒಂದು ಚರ್ಚೆ ನೆನಪಿದೆ. (ಲೋಹಿಯಾ ಮುಖೇನ ನಾವು ಇದನ್ನು ಚರ್ಚಿಸಿದ್ದು, ಕಾಫಿ ಹೊಟೇಲ್ ಒಂದರಲ್ಲಿ ಕೂತು. ಕೈಯಲ್ಲಿ ಯಾರ ಬಳಿಯಾದರೂ ಸ್ವಂತದ ರೊಕ್ಕವಿದ್ದರೆ ಯಾವುದೋ ಮಹಡಿ ಮೇಲಿನ ಬಾರ್‌ನಲ್ಲಿ ಕೂತು, ಕೋಸುಂಬರಿ, ಚಕ್ಕುಲಿ, ಪುಳಿಯೊಗರೆ, ಚಿತ್ರಾನ್ನ ಇತ್ಯಾದಿ ಮನೆ ತಿಂಡಿಯ ಜೊತೆ ಜೊತೆ ನಾವು ಬಿಯರ್ ಕುಡಿದು ಮಾತಾಡುವುದಿತ್ತು. ರಾಗಿ ದೋಸೆಯೆಂದರೆ ಅವನಿಗೆ ತುಂಬ ಇಷ್ಟ. ಅವನ ನಿಜ ಸಹಧರ್ಮಿಣಿ ಯಾದ ಸರೋಜಮ್ಮ ಬಿಸಿಬಿಸಿ ದೋಸೆಯನ್ನು ಬಡಿಸಿ ನಮ್ಮ ಹೊಟ್ಟೆ ತುಂಬಿಸುತ್ತ ಇದ್ದರು, ಬಿಯರ್ ಅಪರೂಪ. ಯಾಕೆಂದರೆ ಸಿಕ್ಕರೊಕ್ಕ ಪಕ್ಷದ ಕಛೇರಿ ವೆಚ್ಚದ ಸಾಲ ತೀರಿಸಲು ಸಾಕಾಗುತ್ತಿರಲಿಲ್ಲ. ಆದರೆ ವೆಂಕಟರಾಮ್‌ಗೆ ನನ್ನ ತರಹ ಸಂಬಳ ಬರುವ ಗೆಳೆಯರೂ ಇದ್ದರಲ್ಲವೆ?)

ನಮ್ಮ ಒಂದು ಗಹನ ಚರ್ಚೆಯನ್ನು ಈಗ ವಿವರಿಸುತ್ತೇನೆ, ನೆನಪಿನಿಂದ :

ಮಾರ್ಕ್ಸ್‌ತಿಳಿದಂತೆ ಬಂಡವಾಳಶಾಹಿ ಯುಗದ ಅವಸಾನ ಪ್ರಾರಂಭವಾಗುವುದು ಅದು ನನ್ನ ಗರಿಷ್ಠ ಎತ್ತರಕ್ಕೆ ಬೆಳೆದ ದೇಶದಲ್ಲಿ. ಇದು ನಿಜವಾದ ಸಿದ್ಧಾಂತವಾಗಬೇಕಾದರೆ ಕ್ರಾಂತಿ ಆಗಬೇಕಾದದ್ದು ರಷ್ಯಾದಲ್ಲಲ್ಲ; ಜರ್ಮನಿಯಲ್ಲಿ. ಆದರೆ ಜರ್ಮನಿಯಲ್ಲಾಗದೆ ಅದು ರಷ್ಯಾದಲ್ಲಿ ಆದದ್ದು ಮಾರ್ಕ್ಸ್‌‌ವಾದಿಗಳಿಗೆಲ್ಲ ಒಂದು ದೊಡ್ಡ ತಾತ್ವಿಕ ಸಂದಿಗ್ಧವಾಗಿತ್ತು. ಇದಕ್ಕೆ ಟ್ರಾಟ್ಸ್ಕಿಯ ಉತ್ತರ ವೆಂಕಟರಾಮ್‌ಗೆ ಪ್ರಿಯವಾದದ್ದು. ಬಂಡವಾಳಶಾಹಿ ವ್ಯವಸ್ಥೆ ಗರಿಷ್ಠ ಬೆಳೆದಲ್ಲಿ ಮುರಿಯುತ್ತದೆ ಎನ್ನುವುದಕ್ಕೆ ಬದಲಾಗಿ ಟ್ರಾಟ್ಕ್ಸಿ ಕೊಟ್ಟ ಸಮಜಾಯಿಷಿ ಇದು. ’ಇಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಕೊಂಡಿ ಅತ್ಯಂತ ಕ್ಷೀಣವಾಗಿತ್ತೋ ಅಲ್ಲಿ ಅದು ಕಳಚಿಕೊಂಡಿತು.’ ರಷ್ಯಾ ಕ್ರಾಂತಿಗಿಂತ ಮುಂಚೆ ಯೂರೋಪಿನಲ್ಲೆಲ್ಲಾ ಹೆಚ್ಚು ಬ್ಯಾಕ್‌ವರ್ಡ್‌ದೇಶ. ಆದ್ದರಿಂದಲೇ ಕುಂಟುತ್ತ ಇದ್ದ ಅರೆಬರೆ ಬಂಡವಾಳಶಾಹಿಯ ಅವಸಾನ ಅಲ್ಲಿಂದ ಪ್ರಾರಂಭವಾಯಿತು. ಆದರೆ ಈ ಪ್ರಕ್ರಿಯೆ ಕೊನೆಗೊಳ್ಳುವುದು ಇಡೀ ಪ್ರಪಂಚದಲ್ಲಿ ಬಂಡವಾಳಶಾಹಿ ಆಡಳಿತ ಕೊನೆಯಾದಾಗ. ಇದು ಟ್ರಾಟ್ಸ್ಕಿ ಸಿದ್ಧಾಂತ. ಆದರೆ ಸ್ಟಾಲಿನ್ ಸೋಷಿಯಲಿಸಂ ಇನ್ ಒನ್ ಕಂಟ್ರಿ (Socialism in one country) ಎನ್ನುವ ಸಿದ್ಧಾಂತದವನು. ಇಲ್ಲಿ ಮೊದಲು ಅದು ಬೆಳೆಯಲಿ ಆಮೇಲೆ ಅದು ಹರಡಲಿ ಎನ್ನುವುದನ್ನು ಟ್ರಾಟ್ಸ್ಕಿ ಒಪ್ಪಿರಲಿಲ್ಲ. ಅಲ್ಲದೇ ಈ ಸಿದ್ಧಾಂತದ ಆಧಾರದ ಮೇಲೆ ಸ್ಟಾಲಿನ್  ರಾಕ್ಷಸ ಪ್ರಭುತ್ವವನ್ನು ಸ್ಥಾಪಿಸಿ ತನ್ನ ನಿಲುವೆಯ ಪೊಳ್ಳು ಸಮಾಜ ವಾದವನ್ನು ಕಟ್ಟುತ್ತಾನೆ ಎಂದು ವಾದಿಸಿದ್ದ ಟ್ರಾಟ್ಸ್ಕಿ. ಇದು ದೇಶದ್ರೋಹವಾಗಿ ಕಂಡಿದ್ದರಿಂದ ಸ್ಟಾಲಿನ್ ಇವನನ್ನು ಹೊರಗಟ್ಟಿ ದೇಶಾಂತರಗೊಳಿಸಿ ಒಬ್ಬ ಕೊಲೆಗಡುಕನ ಮುಖಾಂತರ ಅವನನ್ನ ಕೊಲ್ಲಿಸಿದ್ದ.

ಇವೆಲ್ಲವೂ ವೆಂಕಟರಾಮ್‌ಗೆ ಬಹಳ ಮುಖ್ಯವಾದ ವಿಷಯಗಳಾಗಿದ್ದವು. ಅವನು ಟ್ರಾಟ್ಸ್ಕಿಯನ್ನು ಮೆಚ್ಚಿದಂತೆಯೇ ಲೆನಿನ್‌ನನ್ನೂ ಮೆಚ್ಚುತ್ತಿದ್ದ. ಆದ್ದರಿಂದ ಲೆನಿನ್ನನ ವ್ಯಾಖ್ಯಾನವನ್ನೂ ಈ ರಷ್ಯನ್ ಕ್ರಾಂತಿಗೆ ಅವನು ಬೆಸೆಯುತ್ತಿದ್ದ. ಮಾರ್ಕ್ಸ್ ಪ್ರಕಾರ ಬಂಡವಾಳ ಶಾಹಿ ವ್ಯವಸ್ಥೆ ಅದು ಗರಿಷ್ಠ ಬೆಳೆದಲ್ಲಿ ಮುರಿದುಕೊಳ್ಳುತ್ತದೆಯಾದರೆ, ಟ್ರಾಟ್ಕ್ಸಿ ಪ್ರಕಾರ ಅದು ಕ್ಷೀಣವಾದ ಕೊಂಡಿಯಲ್ಲಿ ಕಳಚಿಕೊಳ್ಳುತ್ತದೆಯಾದರೆ, ಲೆನಿನ್ ಪ್ರಕಾರ ಎಲ್ಲಿ ಕ್ರಾಂತಿಯನ್ನು ಮಾಡಬಲ್ಲ ಕ್ರಾಂತಿಕಾರಕ ಪಕ್ಷದ ನೆಲೆ, ಸಿದ್ಧಾಂತ, ಕಾರ್ಯವಿಧಾನ ಮತ್ತು ವರ್ಚಸ್ಸು ಬಲವಾಗಿರುತ್ತದೋ ಅಲ್ಲಿ ಕ್ರಾಂತಿಯಾಗುತ್ತದೆ. (ಅಂದರೆ ಲೆನಿನ್ ತನ್ನ ಬೆನ್ನನ್ನು ತಾನೇ ಕಟ್ಟಿಕೊಂಡಿದ್ದ.) ಇಂಗ್ಲೆಂಡ್‌ನಲ್ಲಾಗಲೀ, ಜರ್ಮನಿಯಲ್ಲಾಗಲೀ ಅದು ಆಗದಿದ್ದರೆ ಕಾರಣ ಆ ದೇಶಗಳಲ್ಲಿ ಕಮ್ಯೂನಿಸ್ಟ್ ಪಕ್ಷ ಸರಿಯಾದ ನಿಟ್ಟಿನಲ್ಲಿ ಬೆಳೆದಿರಲಿಲ್ಲ. ಅಂದರೆ ಎರಡು ಸೂತ್ರಗಳ ಮೇಲೆ ಈ ದೇಶಗಳು ತಮ್ಮ ಪಕ್ಷಗಳನ್ನು ಕಟ್ಟಿರಲಿಲ್ಲ. ಈ ಸೂತ್ರಗಳು ಇವು :

1. The Party should act as the Vanguard of the proletariat

2. The Party should follow the principles of Democratic Centralism

ಮೇಲಿನ ಎರಡು ಸೂತ್ರಗಳು ಮಹಾ ಮೋಸದವು ಆಗಬಹುದು ಎಂಬುದು ವೆಂಕಟರಾಮ್ ಜೊತೆಗೆ ನನ್ನ ವಾದವಾಗಿತ್ತು. ಕಾರ್ಮಿಕರೇ ಅಧಿಕಾರಕ್ಕೆ ಬರುವುದಿಲ್ಲ. ಆದರೆ ಅವರ ಮುಂಚೂಣಿಯಲ್ಲಿರುವವರು ಅಧಿಕಾರಕ್ಕೆ ಬರುತ್ತಾರೆ ಎನ್ನುವುದಾದರೆ ರಷ್ಯಾದಲ್ಲಿ ಮುಂಚೂಣಿಯಲ್ಲಿ ಇರಲು ಅಗತ್ಯವಾದ ಎಲ್ಲ ಕೃತ್ರಿಮಗಳನ್ನು ತಿಳಿದಿದ್ದ ಸ್ಟಾಲಿನ್ ತಾನೇ ಮುಂಚೂಣಿ ಎಂದುಕೊಂಡ; ತತ್ಪರಿಣಾಮವಾಗಿ. ತನ್ನ ಅಧಿಕಾರವನ್ನು ಪ್ರಶ್ನಿಸುವ ಎಲ್ಲ ಜೊತೆಗಾರರನ್ನೂ ಕೊಂದ. ಚೀನಾದಲ್ಲಿ ಆದದ್ದೂ ಇದೇ. ಮುಂಚೂಣಿಯವರು ಈಗ ಅಮೆರಿಕಕ್ಕೆ ಸದೃಶ್ಯವಾದ ಬಂಡವಾಳಶಾಹಿ ವ್ಯವಸ್ಥೆಯನ್ನೇ ಕಟ್ಟುತ್ತಿದ್ದಾರೆ. ಡೆಮೊಕ್ರಟಿಕ್ ಸೆಂಟ್ರಲಿಸಂ ಅಂತೂ ಅದನ್ನು ನಂಬಿದವರು ಬಾಯಿಬಿಟ್ಟು ಮಾತಾಡುವಂತೆ ಮಾಡಿ, ಆಮೇಲೆ ಅವರನ್ನು ಕೊಲ್ಲುವ ಅಥವಾ ಲೇಬರ್ ಕ್ಯಾಂಪುಗಳಲ್ಲಿ ಗುಲಾಮರಂತೆ ದುಡಿಸುವ ಉಪಾಯವಾಗಿತ್ತು. ಅರಳಿದ ಹೂವುಗಳನ್ನೆಲ್ಲ ಕೊಯ್ಯಲೆಂದೇ ಮಾವೋ Let hundred flowers bloom ಎಂದದ್ದು.

ಲೋಹಿಯಾ ಅವರು ಇದಕ್ಕೆ ವಿರುದ್ಧವಾದ ಪ್ರಜಾತಾಂತ್ರಿಕ ದಿಕ್ಕಿನಲ್ಲಿ ರಾಜಕೀಯ ವ್ಯವಸ್ಥೆಯನ್ನು ಕಟ್ಟಲು ಹೋರಾಡಿದರು. ಈಗ ವೆಂಕಟರಾಮ್‌ಬದುಕಿದ್ದರೆ ನಾನು ಹೇಳುತ್ತಿದ್ದೆ : ‘ಲೋಹಿಯಾ ಮುಂಚೂಣಿಗೆ ತಂದವರು  ವೆಂಕಟರಾಮ್‌ತರದವರಲ್ಲ. ಭ್ರಷ್ಠರಾದ ಲಾಲೂ ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ತರಹದವರು’ ಎಂದು. ಆದರೆ ಇವರು ಪ್ರಾಯಶಃ ಸ್ಟಾಲಿನ್ ಬಗೆಯ ರಾಕ್ಷಸರು ಖಂಡಿತ ಅಲ್ಲ. ಅವರನ್ನ ಟೀಕಿಸುತ್ತಲೇ, ನಮ್ಮ ದುರ್ವವ್ಯವಸ್ಥೆಯ ಅನಿವಾರ್ಯ ನಾಯಕರು ಇವರು ಎಂದು ನಾನು ತಿಳಿಯುತ್ತೇನೆ. ಇಲ್ಲೂ ಕೂಡ ಬಿಜೆಪಿಯ ನಮ್ಮ ಕರ್ನಾಟಕದ ಬಳ್ಳಾರಿಯ ರೆಡ್ಡಿ ನಾಯಕರಿಗಿಂತ ನಮ್ಮ ಲಾಲೂ ಪ್ರಸಾದ ಯಾದವ್ ದೊಡ್ಡವನು. ಕೊನೆಯ ಪಕ್ಷ ಅಲ್ಲಿನ ಬಡವರಿಗೆ ಸ್ವಮರ್ಯಾದೆಯನ್ನು ತಂದವನು ಬಾಯಿಬಡುಕನಾದರೂ ಕಾರ್ಯಶೀಲನಾದ ಈ ಲಾಲೂ ಪ್ರಸಾದ್ ಯಾದವ್ ಎಂದು ತಿಳಿಯುತ್ತೇನೆ. ಇವೆಲ್ಲಾ ಗತಿಸಿದ ವೆಂಕಟರಾಮ್ ಜೊತೆಗೆ ಮಾತ್ರ ನಾನು ಮಾಡಬಲ್ಲ ಸಂವಾದಗಳು. ನಾನು ಕೇಳಬಹುದಿತ್ತು. ‘ವೆಂಕಟರಾಮ್‌, ಹೀಗೆ ಮಾತನಾಡುವುದು ಸೋಲಿನ ಸಮಾಧಾನವಲ್ಲವೆ? ನಾವು ತಪ್ಪಿಲ್ಲವೆ?’

ವೆಂಕಟರಾಮ್ ಕರ್ನಾಟಕದ ಸಮಾಜವಾದಿ ಪಕ್ಷದ ಆಧಾರಸ್ಥಂಭಗಳಲ್ಲಿ ಒಬ್ಬ. ಬೆಂಗಳೂರಿನಲ್ಲಿ ಆಫೀಸಿನ ಟೆಲಿಫೋನ್ ಖರ್ಚನ್ನು ಕೊಡಲು, ಬಾಡಿಗೆ ಕಟ್ಟಲು ಅವನು ಎಲ್ಲೆಲ್ಲೋ ಓಡಾಡಿ ಹಣವನ್ನು ತಂದು ನಿರ್ವಹಿಸುತ್ತಿದ್ದ. ಆದರೆ ನಮ್ಮ ಸಮಾಜವಾದಿಗಳು ಅನಾರ್ಕಿಸ್ಟರು. ಆಮೇಲಿನ ದಿನಗಳಲ್ಲಿ ತುಂಬಾ ಮುಖ್ಯವಾದ ಚಳವಳಿಯನ್ನು ಸಂಘಟಿಸಿದ ರೈತ ಜನಾಂಗಕ್ಕೆ ಒಂದು ದೊಡ್ಡ ದನಿಯಾದ ನಂಜುಂಡಸ್ವಾಮಿಯಂಥವರೇ ವೆಂಕಟರಾಮ್‌ನನ್ನ ಒಬ್ಬ ಶಾನುಭೋಗ ಎಂದು ನಿಂದಿಸಿದ್ದನ್ನು ಕೇಳಿ ನಾನು ನೊಂದಿದ್ದೇನೆ. (ಇದರಲ್ಲಿ ಜಾತಿ/ವರ್ಗದ ವಾಸನೆಯೂ ಇತ್ತು.) ಇಲ್ಲೇ ಇನ್ನೊಂದು ಮಾತು ಹೇಳಿಬಿಡಬೇಕು. ಲಂಕೇಶರು ವೆಂಕಟರಾಮ್‌ರ ವಿದ್ವತ್ತನ್ನೂ ಮಾರ್ಮಿಕವಾದ ದೃಷ್ಟಿಕೋನವನ್ನೂ ತುಂಬ ಮೆಚ್ಚಿದವರಾಗಿದ್ದರು. ಅಲ್ಲದೆ ಆ ದಿನಗಳಲ್ಲಿ ಪಕ್ಷವನ್ನು ಕಟ್ಟಿತ್ತಿದ್ದ ಶಾಂತಿವೇರಿ ಗೋಪಾಲಗೌಡರಾಗಲೀ ಜೆ. ಎಚ್. ಪಟೇಲರಾಗಲೀ ವೆಂಕಟರಾಮ್‌ನನ್ನು ಎಂದೂ ಕೈ ಬಿಟ್ಟವರಲ್ಲ.

ವೆಂಕಟರಾಮ್ ಈ ನಿಂದನೆಯನ್ನೂ ವೈಯಕ್ತಿಕವಾಗಿ ಬೆಳೆಸಿದವರಲ್ಲ. ಅವರು ಅರ್ಧ ತಮಾಷೆಯಲ್ಲಿ ಹೇಳಿದ ಒಂದು ಘನವಾದ ಮಾತು ನೆನಪಾಗುತ್ತದೆ. ‘ನಮ್ಮ ದುರದೃಷ್ಟವೆಂದರೆ ಇಂಡಿಯಾದಲ್ಲಿ ಒಂದು ದೊಡ್ಡ ಅನಾರ್ಕಿಸ್ಟ ಚಳವಳಿಯಾಗಬಹುದಿತ್ತು. ಆದರೆ ನಮ್ಮ ಅನಾರ್ಕಿಸ್ಟರು ತಮ್ಮನ್ನು ಸೋಷಲಿಸ್ಟ್ ಎಂದು ಕರೆದುಕೊಂಡರು. ಹಾಗೆಯೇ ನಮ್ಮಲ್ಲಿ ಒಂದು ಸೋಷಿಯಲ್ ಡೆಮೋಕ್ರಾಟ್ ಪಕ್ಷ ಬೆಳೆಯಬಹುದಿತ್ತು. ಆದರೆ ಅವರು ತಮ್ಮನ್ನು ಕಮ್ಯುನಿಸ್ಟರೆಂದು ಭ್ರಮಿಸಿಕೊಂಡರು.’

ಹೇಳುತ್ತಾ ಹೋದರೆ ಇದು ಮುಗಿಯುವ ಮಾತಲ್ಲ. ವೆಂಕಟರಾಮ್‌ನಿಂದ ಎಮರ್ಜೆನ್ಸಿ ಕಾಲದ ಜೈಲಿನಲ್ಲಿ ತುಂಬಾ ಪ್ರಭಾವಿತರಾದವರು ಪಿ.ಜಿ.ಆರ್. ಸಿಂಧ್ಯಾ ಅವರು. ವೆಂಕಟರಾಮ್‌ಆಸ್ಪತ್ರೆಯಲ್ಲಿ ತೀವ್ರ ಸಂಕಟದಲ್ಲಿ ತನ್ನ ಪ್ರಜ್ಞೆಯನ್ನೇ ಕಳೆದುಕೊಂಡು ನರಳುತ್ತಿದ್ದಾಗ ಬಂಗಾರಪ್ಪನವರು ನಿತ್ಯ ಆಸ್ಪತ್ರೆಗೆ ಬಂದು ಹೊರಗಿನ ಬೆಂಚೊಂದರ ಮೇಲೆ ಕುಳಿತಿದ್ದು ವೆಂಕಟರಾಮ್ ಶುಶ್ರೂಶೆಗೆ ನೆರವಾದದ್ದನ್ನು ನಾನು ಕೃತಜ್ಞತೆಯಿಂದ ನೆನೆಯುತ್ತೇನೆ. ಈ ನಮ್ಮ ಕಾಲದ ಅರ್ಬ್ಸ್‌ರ್ಡ ಎನ್ನಿಸುವ ರಾಜಕೀಯ ನಾಟಕದಲ್ಲಿ ವೆಂಕಟರಾಮ್ ಜೈಲಿನಲ್ಲಿ; ಅವರಿಗೆ ತುಂಬಾ ಹತ್ತಿರದವರಾಗಿದ್ದ ಅಜೀತ್‌ಸೇಠ್‌ಮಂತ್ರಿಮಂಡಲದಲ್ಲಿ. ಆದರೂ ನಾನಿದನ್ನು ಇಲ್ಲಿ ಗುರ್ತಿಸಬೇಕು – ವೆಂಕಟರಾಮ್ ಎಷ್ಟು ಪರರಿಗಾಗಿಯೇ ಬದುಕುತ್ತಿದ್ದ ಮನುಷ್ಯನೆಂದರೆ ಮಂತ್ರಿಯಾಗಿದ್ದ ಅಜಿತ್ ಸೇಠ್ ವೆಂಕಟರಾಮ್‌ಕುಟುಂಬದ ಯೋಗಕ್ಷೇಮದ ಬಗ್ಗೆ ಸದಾ ಚಿಂತಿಸುತ್ತಿದ್ದರೆಂಬುದು ನನಗೆ ಮುಖ್ಯ. ಹಾಗೆಯೇ ನಮ್ಮ ದೇವೇಗೌಡರು ಮೂಡಿನಲ್ಲಿ ಇದ್ದಾಗ ವೆಂಕಟರಾಮ್ ಬಗ್ಗೆ ಬಹಳ ಪ್ರೀತಿಯ ಕಥೆಗಳನ್ನು ಹೇಳುತ್ತಾರೆ.

ಈಗಿನ ರಾಜಕೀಯದಲ್ಲಿ ಇನ್ನೊಬ್ಬ ವೆಂಕಟರಾಮ್ ಅವರನ್ನು ನಾನು ಕಾಣುತ್ತಿಲ್ಲ. ಈಗ ರಾಜಕೀಯ ಮಾತನಾಡುವ ಈ ಮನುಷ್ಯ ಇನ್ನೊಂದು ಕ್ಷಣದಲ್ಲಿ ದಾಸ್ತೋವಸ್ಕಿ ಮತ್ತು ಭಗವದ್ಗೀತೆಗಳ ನಡುವಿನ ಸಂಬಂಧದ ಬಗ್ಗೆಯೂ ಮಾತನಾಡಬಲ್ಲವನಾಗಿದ್ದ. ವೆಂಕಟರಾಮ್ ಜಾರ್ಜ್‌ಫರ್ನಾಂಡಿಸರಿಗೂ ಹತ್ತಿರದವನಾಗಿದ್ದ. ಈಗ ಜಾರ್ಜ್‌‌ರಲ್ಲೂ ಆಗಿರುವ ಬದಲಾವಣೆಗೆ ವೆಂಕಟರಾಮ್‌ಇಷ್ಟಪಡುತ್ತಿದ್ದ ಲೋಹಿಯಾರ ರಾಜಕಾರಣವೂ- ತತ್ವಲ್ಲ, ರಾಜಕಾರಣವೂ – ಹೇಗೆ, ಯಾಕೆ, ಎಷ್ಟು ಕಾರಣವಾಗಿರಬಹುದೆಂದು ವೆಂಕಟರಾಮ್‌ನನ್ನು ನೆನಯುತ್ತಾ ನಾನು ಧ್ಯಾನಿಸುತ್ತಿದ್ದೆನೆ.

ವೆಂಕಟರಾಮ್‌ಕನ್ನಡದ ಧೀಮಂತ ಚಿಂತಕರಲ್ಲಿ ಒಬ್ಬ ಎಂಬುದನ್ನು ಅವರು ಎಲ್ಲೋ ಬಿಡುವಿನಲ್ಲಿ ಬರೆದ ಈ ಸಂಗ್ರಹದ ಲೇಖನಗಳು ನಮಗೆ ಮನದಟ್ಟು ಮಾಡುತ್ತವೆ. ಈ ಪುಸ್ತಕದ ಬರುವುದು ಸಾಧ್ಯವಾದದ್ದು ಶ್ರೀಮತಿ ಸರೋಜಮ್ಮ ವೆಂಕಟರಾಮ್‌ನೆನಪಿನಲ್ಲಿ ಅವರ ಮಗ ಮತ್ತು ಸೊಸೆ ತೋರಿಸಿದ ಆಸಕ್ತಿಯಲ್ಲಿ. ಇದನ್ನು ಪ್ರಕಟಿಸುತ್ತ ಇರುವ ಗೆಳೆಯ ರವಿಕುಮಾರರ ಪರಿಶುದ್ಧವಾದ ಪುಸ್ತಕ ಪ್ರೀತಿಯಲ್ಲಿ.

*

(ಪರಿಶ್ರಮ (೨೦೦೯) ಎಸ್. ವೆಂಕಟರಾಮ್ ಅವರ ಸಮಗ್ರ ಸಾಹಿತ್ಯಕ್ಕೆ ಬರೆದ ಮುನ್ನುಡಿ. ಪ್ರ: ಅಭಿನವ, ಬೆಂಗಳೂರು)