ವೈಯಕ್ತಿಕವಾಗಿ ನನಗೆ ಪ್ರಿಯರಾದ ಜ್ಯೋತಿ ಗುರುಪ್ರಸಾದರ ಈ ಸಂಕಲನದ ಕವನಗಳ ಬಗ್ಗೆ ಬರೆಯುವುದು ಕಷ್ಟ. ಆದರೆ ಅವರ ಜೊತೆ ಈ ಕವನಗಳ ಬಗ್ಗೆ ಮಾತನಾಡುವಾಗ ಯಾವ ಕಷ್ಟವನ್ನೂ ನಾನು ಪಟ್ಟಿಲ್ಲ. ಬರೆಯಲು ತೊಡಗಿದ ಕೆಲವು ವರ್ಷಗಳ ಹಿಂದಿನ ಬಿಡುಗಣ್ಣಿನ ಅವರ ಮುಗ್ದತೆಯ ದಿನಗಳಿಂದ ಸರಿ ಸುಮಾರು ಅವರು ಬರೆದದ್ದೆಲ್ಲವನ್ನೂ ಓದುತ್ತ ಬಂದವನು ನಾನು. ಅವರ ಕಾವ್ಯದ ತುಡಿತ ಎಷ್ಟು ಅಪ್ಪಟವೆಂದರೆ, ಕಾವ್ಯಜೀವಿಯಾಗಿ ಅವರು ನನ್ನಲ್ಲಿ ಹುಟ್ಟಿಸುವ ಭರವಸೆ ಎಷ್ಟು ಗಾಢವಾದದ್ದೆಂದರೆ ನನ್ನ ನಿಷ್ಠುರವಾದ ಅತೃಪ್ತಿಯನ್ನು ಅವರು ಆಗೀಗ ಮೀರುವಂತೆ ಅರಳುವುದನ್ನು ಗಮನಿಸಿ, ನಾನು ತೋರಿಸುವ ಪರಿಮಿತ ಮೆಚ್ಚುಗೆಯಿಂದ ಅವರು ಪಡುವ ಸುಖ ಕಂಡು ನಾನು ನನ್ನ ಆರೋಚಿ ಜುಗ್ಗುತನಕ್ಕೆ ನಾಚಿದ್ದೇನೆ. ಅಸಾಧಾರಣವಾದ, ಸಾಮಾಜಿಕ ಸಂಕೋಚಗಳಿಂದ ಮುಕ್ತವಾದ, ಆತ್ಮದ ಹಸಿವನ್ನು ಇನ್ನಷ್ಟು ತೀವ್ರಗೊಳಿಸುವ ಕಾವ್ಯಕ್ಕೆ ಮನಸೋತ ನಾನು ನಿತ್ಯ ಕಾಣುವುದನನ್ನು ಹೊಳೆಯಿಸುವಂತೆ ಕಾಣಿಸಬಲ್ಲ ಜ್ಯೋತಿಯವರ ಮಾತಿನಿಂದಲೂ ಚಕಿತನಾಗಿರುವುದೂ ಉಂಟು. ನನ್ನ ಹಸಿವು ಅವರದೂ ಕೂಡ ಎನಿಸುವುದರಿಂದ ಜ್ಯೋತಿ ಕೇವಲ ಪ್ರಸಿದ್ಧಿಗಾಗಲೀ ಹೊಗಳಿಕೆಗಾಗಲೀ ಹಾತೊರೆದವರಲ್ಲ. ಇದನ್ನು ಓದುಗರಲ್ಲಿ ಹಂಚಿಕೊಳ್ಳಲೆಂದು, ಭಾರವಲ್ಲದ್ದನ್ನು ನನ್ನ ವಿಶ್ಲೇಷಣೆಯಲ್ಲಿ ಭಾರವೆನ್ನಿಸುವಂತೆ ತಿರುಚದೆ ಅದರ ಸಹಜ ಚೆಲುವನ್ನು ಸೂಚಿಸಲೆಂದು ಕೆಲವು ಮಾತುಗಳನ್ನು ಆಡುತ್ತ ಇದ್ದೇನೆ.

ಜ್ಯೋತಿಯವರ ಕವನಗಳು ನಮ್ಮ ವ್ಯಾಖ್ಯಾನಕ್ಕಾಗಲೀ, ವಿವರಣೆಯಾಗಲೀ ಒಡ್ಡಿಕೊಳ್ಳುವ ರಚನೆಗಳಲ್ಲ. ಸಾಹಿತ್ಯದಲ್ಲಿ ಔಚಿತ್ಯಜ್ಞಾನದ ಮಾತಿದೆ; ಇದು ಕಾವ್ಯ ರಚನೆಯ ಪರಿಕರಗಳಿಗೆ ಸಂಬಂಧಪಟ್ಟ ಮಾತು ಮಾತ್ರವಲ್ಲ, ಓದುಗನ ಸ್ಪಂದನಕ್ಕೂ ಸಂಬಂಧಿಸಿದ ವಿಚಾರ. ಇಂಗ್ಲಿಷ್ ವಿಮರ್ಶಕರು Relevance of response ಎನ್ನುತ್ತಾರೆ ಇದನ್ನು. ಕವಿತೆಯ ಮಾತು ನಿರೀಕ್ಷಿಸುವ ಹದ ಹಿಡಿದು ನಾವು ಕವಿತೆಗೆ ಪ್ರತಿಕ್ರಿಯಿಸಬೇಕು. ಹೆಚ್ಚೂ ಅಲ್ಲ; ಕಮ್ಮಿಯೂ ಅಲ್ಲ ಎನ್ನುವಂತೆ. ಇದು ಕಷ್ಟ ಜ್ಯೋತಿಯವರ ಬೆಡಗಿಲ್ಲದ ನೇರ ನುಡಿಯ ಕಾವ್ಯದ ಬಗೆಗಂತೂ ಇದು ಕಷ್ಟವೇ, ಆಪ್ತರೊಬ್ಬರು ಬಿಂಕಬಿನ್ನಾಣಗಳಿಲ್ಲದೆ ತಮಗೇ ಆಡಿಕೊಂಡಂತಹ ಮಾತನ್ನು ನಾವು ಕೇಳಿಸಿಕೊಂಡಾಗ ತಲೆದೂಗುವಂತೆ ಜ್ಯೋತಿಯವರ ರಚನೆಗಳು ಕೆಲವೊಮ್ಮೆ ನಮ್ಮ ಮೌನದ ಸಮ್ಮತಿಗೆ ಎದುರಾಗುತ್ತವೆ. ನಾನು ಇಲ್ಲಿ ಮಾತಾಡಲು ಎತ್ತಿಕೊಳ್ಳುವುದು ಕೆಲವೇ ರಚನೆಗಳನ್ನು ಮಾತ್ರ, ಜ್ಯೋತಿಯವರ ಈ ಎರಡನೆಯ ಸಂಕಲನವನ್ನು ಓದುವವರು ತಾವೇ, ನನಗೂ ಮಿಗಿಲಾಗಿ, ನನ್ನ ತಕರಾರುಗಳನ್ನು ಕಡೆಗಣಿಸಿ, ಹುಡುಕಿಕೊಳ್ಳಬೇಕಾದ ಹಲವು ಒಳ್ಳೆಯ ಕವನಗಳಿಗೆ ಉದಾಹರಣೆಗಳಾಗಿ ಮಾತ್ರ ನನ್ನ ಮಾತುಗಳನ್ನು ಗ್ರಹಿಸಬೇಕು.

‘ಕಾಲನೆದೆ’ ಕವನದಲ್ಲಿ ದೇಹದ ಸೌಂದರ್ಯ ಕಾಲವಶವಾದರೂ ಪ್ರೇಮದಲ್ಲಿ  ಕಂಡದ್ದು ಕಾಲವಶವಾಗಲಾರದು  ಎಂಬ ಮಾತು  ಸತ್ಯವಾದರೂ ಸವಕಲುಗೊಂಡ ಮಾತು ಅನ್ನಿಸದಿದ್ದರೂ ಹೇಳಬಹುದಾದ ಮಾತು. ಮಾತಿಗೆ ಬಡಿಯುವ ‘ಶಬ್ದ ಸೂತಕ’ ವೆಂದರೆ ಇದೇ. ಅಲ್ಲಮನನ್ನೂ ಬಾಧಿಸಿದ ಲಂಪಟವಾಗುವ ಮಾತಿನ ಸಲೀಸಿನ ಸಂಕಟ ಇದು. ಆದರೆ ಇಂತಹ ಸತ್ಯಗಳನ್ನು ಮತ್ತೆ ನಿಜವೆನ್ನಿಸುವಂತೆ ಹೇಳಲಾರದೆ ಹೋದರೆ ಕಾವ್ಯ ತನ್ನ ನಿತ್ಯದ ಪ್ರಸ್ತುತೆಯನ್ನೇ ಕಳೆದುಕೊಂಡು ಬಿಡುತ್ತದೆ. ಜ್ಯೋತಿ ಇಂತಹ ವಿಷಯಗಳನ್ನು ಬರೆಯಲು ಅಂಜುವುದಿಲ್ಲವೆಂಬುದೇ ನನಗೆ ಮುಖ್ಯ. ಈ ಭಾವನೆಗೆ ಅವರದೇ ಮಾತಿದೆ. ನೋಡಿ:

ನೀ ನನ್ನ ನೋಡಲು
ಬಯಸಿ ಬಂದರೆ
ನಾನು ನಿನಗೆ ಕಾಣುತ್ತೇನೆ
ನಿನ್ನ ಪ್ರೀತಿಯ ಸ್ವರೂಪವಾಗಿ
ನೀನು ಪ್ರೀತಿಸಿದ ನನ್ನ ಕಣ್ಣ ತಾರೆಯ
ಋಜುವಾಗಿ

ತುಂಬ ಸರಳವಾಗಿ ಇಲ್ಲಿನ ಮಾತುಗಳು ಇವೆ. ‘ಋಜು’ ಶಬ್ದದ ಅರ್ಥ ಸತ್ಯವೂ ಹೌದು, ಸಹಿಯೂ ಹೌದು. ಅವಳ ಇಂದಿನ ‘ರೂಪ’ವನ್ನು ಮೀರಿ ಇರುವುದು ಅವನ ಎಂದೆಂದಿನ ಪ್ರೀತಿಯ ‘ಸ್ವ’ ರೂಪವು ಹೌದು. ಅಲ್ಲದೆ ‘ಬಯಸಿ’ ಬಂದಾಗ ಕಾಣುವ ಸತ್ಯ ಇದು.

ಕಾಣದೆ ಇರುವುದನ್ನು ಕಾಣಿಸುವುದೇ ಜ್ಯೋತಿಯವರ ಪಾಲಿಗೆ ಕಾವ್ಯ. ಇಲ್ಲಿನ ಬಹುತೇಕ ಎಲ್ಲ ಕವನಗಳಲ್ಲೂ ಈ ಒಂದು ವಿಚಾರ ಪದೇ ಪದೇ ಪ್ರತ್ಯಕ್ಷವಾಗುತ್ತದೆ. ಕಿಸಾಗೌತಮಿ ಸಾವಿಲ್ಲದ ಮನೆಯ ಸಾಸಿವೆಯನ್ನು ಹುಡುಕಿಕೊಂಡು ಹೋಗಿ ಸತ್ತ ತನ್ನ ಕಂದನನ್ನು ತನ್ನೊಳಗೇ ಮತ್ತೆ ಕಂಡುಕೊಳ್ಳುತ್ತಾಳೆ. ಇದೇ ಜ್ಯೋತಿಯವರ ಪಾಲಿಗೆ ಕಾವ್ಯ. A Sudden illumination ತತ್‌ಕ್ಷಣದಲ್ಲಿ ಮಿಂಚುವ ನಿಜ. ಇದು ಸಾಮಾಜಿಕ ಒಪ್ಪಿಗೆಯ ನಿಜವಲ್ಲ. ಅದಕ್ಕಿಂತ ಆಳವಾದ ಭಾವನಾಲೋಕದ ಅದೃಶ್ಯದ ನಿಜ.

ಜ್ಯೋತಿಯವರ ಸರಳತೆ ನಮ್ಮನ್ನು ಕಲಕುವುದು ಇಂತಹ ಕಡೆಗಳಲ್ಲಿ. ಈ ಭಾವನೆ ಹಳಹಳಿಕೆಯಲ್ಲ; ಕಾವ್ಯ ಊಹೆಯಲ್ಲ. ಅಕ್ಷರಶಃ ತನಗಿದು ನಿಜವೆಂಬಂತೆ ಜ್ಯೋತಿ ನಮಗೆ ನಿವೇದಿಸುವಂತೆ ಬರೆಯುತ್ತಾರೆ. ಇಲ್ಲಿನ ಹಲವು ಕವನಗಳ ಧಾಟಿ ಈ ಬಗೆಯ ನಿವೇದನೆಯದು. ನಂಬಿದರೆ ನಿಜ; ನಂಬದಿದ್ದರೆ ನಿಜವಲ್ಲ; ನಂಬುವುದೂ ಪ್ರಯತ್ನ ಲಭ್ಯವಿಲ್ಲ. ಆದರೆ ಜ್ಯೋತಿಯ ಕೃತಕವಲ್ಲದ ಮಾತಿನ ಸರಳತೆಗೆ ನಮ್ಮಿಂದ ‘ಅಹುದು’ ಎನ್ನಿಸಿಕೊಳ್ಳುವ ಶಕ್ತಿಯಿರುತ್ತದೆ. ಜ್ಯೋತಿ ತನ್ನ ಪದ್ಯಗಳನ್ನು ನನ್ನೆದುರು ಓದಿದಾಗೆಲ್ಲ ನನಗೆ ನಿಜವೆನ್ನಿಸದಂತಹ ರಚನೆಗಳನ್ನು ಗುರುತಿಸಿ, ಅವರಿಗೂ ಇವರು ಅತೃಪ್ತಿಯನ್ನು ಗಮನಿಸಿದ್ದೇನೆ. ಸುಳ್ಳೆನ್ನಿಸದಂತೆ, ಸವಕಲು ಎನ್ನಿಸದಂತೆ ಸರಳವಾಗಿರುವುದು ಎಲ್ಲ ಉತ್ತಮ ಕಾವ್ಯದ ಲಕ್ಷಣವಾದ್ದರಿಂದ, ಅದು ಕವಿಯ ಅನುಭವವೂ ಆದ್ದರಿಂದ ಅವರ ಜೊತೆ ಈ ಬಗೆಯ ಆತ್ಮೀಯವಾದ ಓದು ನನಗೆ ಸಾಧ್ಯವಾಗಿದೆ.

ಸರಳತೆಯ ಜೊತೆ ಜ್ಯೋತಿಯಲ್ಲಿ ಮಾತಿನ ಚುರುಕೂ ಇದೆ. ರಾಧೆಗೆ ಕೃಷ್ಣ ಬೇಕೆಂದು ಯಾರು ತಿಳಿಯರು? ಆದರೆ ಈ ಕವಿ ತಿಲೀಯುವ ಬಗೆ ನೋಡಿ. ‘ಹಾಡಾಗದೇ ರಾಧೆಯಿಲ್ಲ/ಹಾಡದೆ ಕೃಷ್ಣನಿಲ್ಲ.’ ಪ್ರೇಮದಲ್ಲಿ ಮಾತ್ರ, ಪ್ರಾಯಶಃ ಕೆಲವು ಕ್ಷಣ ಮಾತ್ರ, ಬಿಚ್ಚಿರುವ ಅದ್ವೈತಭಾವ ಇದು.

ಎಂತಹ ಸಾಮಾನ್ಯ ಸಂಗತಿಯೂ ಇವರ ಕಾವ್ಯದ ವಸ್ತುವಾಗಬಹುದು. ಒಂದು ಕೊರಿಯರ್ ಕಾಗದಕ್ಕೆ ಪ್ರಿಯಕರನಾದವನು ಹಾಕಿದ ಸಹಿಯೂ ಸಂತೋಷ ತರಬಲ್ಲದು. ಘನವಾದ ವಸ್ತುವನ್ನು ಮಾತ್ರ ಹುಡುಕಿ ಬರೆಯುವ ಕವಿ ಇವರಲ್ಲ. ನಿತ್ಯದ ನಿತ್ಯವೂ ಇವರಿಗೆ ಕಾವ್ಯ. ಮಮ್ತಾಜಳ ತಾಜಮಹಲ್‌ನಂತೆ ಇಲ್ಲೊಂದು ಬೀದಿ ಬದಿಯ ಹೊಟೇಲು ತಾಜಮಹಲ್ ಕೂಡ ಪ್ರೇಮದ ಸ್ಮಾರಕ. ಇದು ಅಮೃತಶಿಲೆಯದಲ್ಲ ಎನ್ನುವುದು ಅದರ ಸೊಗಸುಲ. ಇಲ್ಲಿ ಹಾಸ್ಯವಿದೆ; ಅಪಹಾಸ್ಯವಿಲ್ಲ. ಗೂಢವಿದೆ; ಭಾವಾತಿರೇಕವಿಲ್ಲ. ಇದೊಂದು ಓದುಗನನ್ನು ರಮಿಸಲು ಬರೆದ ಚುಟುಕು ಹಾಸ್ಯದ ಕವನವೂ ಅಲ್ಲ.

‘ಪ್ರೀತಿ’ ಹೇಗೆ ಇವರ ಕಾವ್ಯ ವಸ್ತುವೋ ‘ಮಾಗುವುದು’ ಕೂಡ ಇವರ ವಸ್ತು. ಬೋಧಿವೃಕ್ಷದ ಅಡಿಯಲ್ಲಿ ಗೌತಮ ಬುದ್ಧನಾದರೆ, ಸೀತೆ ನಿಜದ ಸೀತೆಯಾಗುವುದು ಅಶೋಕವನದಲ್ಲಿ; ಅವಳನ್ನು ಕಲುಷಿತಗೊಳಿಸದ ರಾವಣನ ಪ್ರೇಮದ ತಹತಹದಲ್ಲಿ. ಈ ಕವಿಯೂ ಕವಿಯಾಗುವುದು ಸಂಸಾರದ ನಿತ್ಯಾವರ್ತನೆಯ ದೈನಿಕದ ದಿವ್ಯದಲ್ಲಿ; ಈ ಕವಿ ಮಧ್ಯರಾತ್ರಿ ಹುಡುಗಿ;

ಮಧ್ಯರಾತ್ರಿಯಲ್ಲಿ ಇವಳು
ಇನ್ನೂ ಎಚ್ಚರ ಇದ್ದಾಳೆ
ತನಗೆ ತಾನೆ ಜೊತೆಯಾಗಲು
ಹೊಸ್ತಿಲನ್ನು ದಾಟಿದೆಯೇ
ಮನೆಯ ಗಡಿಯ ಮೀರಲು

ಸಂಸಾರದಲ್ಲಿ ಇವಳು ಇದ್ದಾಳೆ; ಅದರ ಆಚೆಯೂ ಮೀರಿ; ಮಿಕ್ಕುತ್ತ ಇದ್ದಾಳೆ. ‘ಹುಣ್ಣಿಮೆಯ ಬೆಳಕಿನಲ್ಲಿ ಕೋಳಿ ಕೂಗುವ ಸದ್ದು/ಇವಳು ಬರೆಯುವ ಸಾಲು’ ‘ತನ್ನ ನೇಯ್ಗೆಯ ಸೆರಗ/ತಾನೇ ಬೆಚ್ಚಗೆ ಹೊದ್ದು/ನಿಶ್ಚಿಂತ ಮಲಗುವಳೀಗ’ ಪುತಿನರು ಕವಿಯಲ್ಲಿ ಭವನಿಮಜ್ಜನಾ ಚಾತುರ್ಯ, ಲಘಿಮಾ ಕೌಶಲ-ಎರಡೂ ಒಟ್ಟಾಗಿ ಇರುತ್ತದೆ ಎನ್ನುತ್ತಾರೆ. ಹೆಣ್ಣಾಗಿ ಜ್ಯೋತಿಯವರಲ್ಲಿ ಈ ಎರಡೂ ಇದೆ. ಅಡುಗೆ ಮಾಡಿ, ಮುಸರೆ ತಿಕ್ಕಿ ಬರೆಯಲು ಕೂತ ‘ಇವಳ ಕಣ್ಣೊಳಗೆ ಉಷೆಯ ಕಿರಣ’. ಲೋಕದಲ್ಲಿ ಇದ್ದು ಲೋಕವನ್ನು ಮೀರಿ ನಿಲ್ಲುವ ಮಾಂತ್ರಿಕ ಶಕ್ತಿ ಇರುವುದು ಕಾವ್ಯಕ್ಕೆ.

ತೇಜಸ್ಸಿ ಮತ್ತು ಅಮೃತಾ ಪ್ರೀತಮ್ ಬಗ್ಗೆ ಇರುವ ಕವನಗಳು ಸ್ಮರಣೀಯವಾಗಿವೆ. ಕಾಲವಾದ ಇಬ್ಬರೂ ಜ್ಯೋತಿಯ ಪ್ರೇಮೋಜ್ವಲ ಮಾತಿನಲ್ಲಿ ನಮಗೆ ಹತ್ತಿರವಾಗುತ್ತಾರೆ. ಪಂಜಾಬಿ ಕವಿ ಅಮೃತಾ ಪ್ರೀತಮ್ ಜ್ಯೋತಿಯ ಹೃದಯಕ್ಕೆ ಬಹಳ ಹತ್ತಿರದವರಿರಬೇಕು. ಅತ್ಯಂತ ವೈಯಕ್ತಿಕವಾದದ್ದನ್ನು ಕಾವ್ಯ ದೊರಕಿಸುವ ಆಯಾಮದಿಂದಾಗಿ.

ಮುಜುಗರವಿಲ್ಲದಂತೆ ತನ್ನನ್ನು ತೆರೆದು ಬರೆದುಕೊಂಡವರು ಅಮೃತಾ ಪ್ರೀತಮ್. ಉತ್ತರ ಭಾರತದ ಲೇಖಕಿಯರಲ್ಲಿ ಇವರ ದಿಟ್ಟತನಕ್ಕೆ ಧೀಮಂತ ತಾತ್ವಿಕತೆಯ ಗುಣವಿದೆ. ಹಲವು ಗಂಡಸರನ್ನು ಪ್ರೀತಿಸಿ ಪ್ರಾಮಾಣಿಕವಾಗಿ ಬಾಳಿ ಬರೆದ ಅಮೃತಾ ಪ್ರೀತಮ್‌ರ ಕಾವ್ಯಲೋಕದ ನೆಲ ಆಕಾಶಗಳು ಜ್ಯೋತಿಯವರ ಆದರ್ಶವಾಗಿರುವಂತೆ ತೋರುತ್ತದೆ.

ಅಮೃತಾ ಪ್ರೀತಮ್ ತನ್ನ ಸುಖ ದುಃಖಗಳ, ಸಂಕಟಗಳ, ಸಂಭ್ರಮಗಳ ಕೊನೆಯಲ್ಲಿ ‘ಬೆಳಕು ಬೆಳಕಿನೊಡನೆ ಸೇರಿ ಬೆಳಕು ಮಾತ್ರ ಉಳಿಯಿತು’ ಎನ್ನಿಸುವಂತೆ ಜ್ಯೋತಿಗೆ ತೋರುತ್ತಾರೆ.

ಇನ್ನು ನಮ್ಮ ತೇಜಸ್ವಿ ಜ್ಯೋತಿಯ ಕವಿತೆಯಲ್ಲಿ ಉಳಿಯುವ ಬಗೆ ನೋಡಿ’

ಒಂದಿಷ್ಟು ಹಸಿರಿಗೆ
ಒಂದಿಷ್ಟು ಹಕ್ಕಿಗೆ
ನಮ್ಮೊಳಗೆ ಜಾಗ ಕೊಟ್ಟರೆ
ನಮಗೇ ತಿಳಿಯದಂತೆ
ಆ ಭಾವ ಚಿತ್ರ ಸೆರೆಹಿಡಿಯಲು
ತೇಜಸ್ವಿ
ಬಂದೇ ಬರುತ್ತಾರೆ.

ನಮ್ಮ ನಿತ್ಯದ ದೈನಿಕಗಳೇ ಇವರಲ್ಲಿ ಕಾವ್ಯವಾಗುತ್ತದೆ. ಇಲ್ಲೊಂದು ಕುಶಲವಾದ, ತೋರಿಕೆಯಿಲ್ಲದ ಕಲೆಗಾರಿಕೆ ಇದೆ. ಗೊತ್ತಿರುವ ಮಾತೇ ಅಪರೂಪದ ಅರ್ಥವನ್ನು ಕಣ್ಣು ಮಿಟುಕಿಸಿದಂತೆ ಮಿಟುಕಿ ಹೊಳೆಯಿಸುತ್ತದೆ, ಗರಿಕೆಯ ಮೇಲಿನ ಇಬ್ಬನಿಯ ಶುಭ್ರತೆ ಇವರ ಉತ್ತಮ ಪದ್ಯಗಳ ಮಾತಿನಲ್ಲಿ ಕಾಣುತ್ತದೆ.

ತನ್ನ ಒಳಜೀವನದಲ್ಲಿ ಸತತವಾಗಿ ಬೆಳೆಯುತ್ತಿರುವ ಕವಿ ಇವರು.

*

(ಜ್ಯೋತಿ ಗುರುಪ್ರಸಾದ್ ಅವರ ಮಾಯಾಪೆಟ್ಟಿಗೆ (೨೦೦೯)ಗೆ ಬರೆದ ಮುನ್ನುಡಿ. ಪ್ರ: ಅಧ್ಯಯನ ಮಂಡಲ, ಬೆಂಗಳೂರು.)