ಅಡಿಗರದ್ದೊಂದು ಅರ್ಥಗರ್ಭಿತವಾದ ವಿರೋಧಗಳನ್ನು ಬೆಸೆಯುವ ಸಾಲುಗಳು;

‘ಒಳ್ಳೆತನ ಸಹಜವೇನಲ್ಲ
ಒಳ್ಳೆತನ ಅಸಹಜವೂ ಅಲ್ಲ’

ಒಳ್ಳೆಯತನದ ಬಗ್ಗೆಯೇ ಜಗತ್ತಿನಲ್ಲಿ ಸಂಶಯ ಹುಟ್ಟಿದ್ದ ಕಾಲದಲ್ಲೇ ಗಾಂಧಿಯೂ ಬಂದರು ಎನ್ನವುದು ಆಶ್ಚರ್ಯದ ಸಂಗತಿ. ಗಾಂಧಿಯವರು ತಮ್ಮ ಪ್ರತಿನಿಧಿಯಾಗಿ ರೆ.ಫಾ. ಆಂಡ್ರೂಸ್ ಅವರನ್ನು ತನ್ನ ರಾಯಭಾರಿಯಾಗಿ ಪಶ್ಚಿಮ ದೇಶಗಳಿಗೆ ಕಳುಹಿಸಿದಾಗ ಆಂಡ್ರೂಸ್‌ನ ವಿನಯಶೀಲತೆ ಮತ್ತು ಸಾತ್ವಿಕತೆ ಹಲವರಲ್ಲಿ ಸಂಶಯ ಮೂಡಿಸಿತ್ತಂತೆ. ಇದರ ಬಗ್ಗೆ ನಾನು ಈಗಾಗಲೇ ಮಾಸ್ತಿಯವರನ್ನು ಕುರಿತ ಟಿಪ್ಪಣಿಯೊಂದರಲ್ಲಿ ಬರೆದಿದ್ದೇನೆ.

ಇದಕ್ಕೆ ಕಾರಣ ಆಧುನಿಕ ಪ್ರಪಂಚದಲ್ಲಿ ಪ್ರಾಯ್ಡ್ ನಂತರ ಹುಟ್ಟಿಕೊಂಡ ಒಂದು ವಿಚಾರ-ಮನುಷ್ಯ ತಾನು ಪ್ರಾಮಾಣಿಕ ಎಂದು ಭಾವಿಸಿಕೊಂಡರೆ ಸಾಲದು ಅವನು ಅಥೆಂಟಿಕ್ (ಪ್ರಾಮಾಣಿಕ)ನಾಗಿರಬೇಕು. ಪ್ರಾಮಾಣಿಕತೆಯಲ್ಲಿ ಒಳ್ಳೆಯದನ್ನು ಮಾತ್ರ ಇತರರಿಗೆ ಒಡ್ಡಿಕೊಳ್ಳುವ ಹುನ್ನಾರ ಗೊತ್ತಿದ್ದೊ ಗೊತ್ತಿಲ್ಲದೆಯೊ ಕೆಲಸ ಮಾಡುತ್ತದೆ. ಆದರೆ ಅಥೆಂಟಿಕ್ ಆದ ಮನುಷ್ಯ ತನ್ನಲ್ಲಿ ಒಳಿತು ಮತ್ತು ಕೆಡಕು ಎರಡೂ ಬೆರೆತಿರುವುದನ್ನು ಮುಚ್ಚಿಡುವುದಿಲ್ಲ ಎಂಬುದು.

ಆದರೆ ಇದು ಅತಿಗೆ ಹೋದಾಗ ಮನುಷ್ಯ ಒಳ್ಳೆಯದಾಗಿರುವುದನ್ನು ಕಷ್ಟಪಟ್ಟಾದರೂ ನಿರಂತರವಾದ ತ್ಯಾಗದಲ್ಲಿ ಮತ್ತು ಅಹಂನ ನಿರಾಕರಣೆಯಲ್ಲಿ ಕಲಿಯುತ್ತಾ ಹೋಗುತ್ತಾನೆ ಎಂಬುದನ್ನು ನಾವು ಮರೆತಿರುತ್ತೇವೆ. ನಾನು ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಮರೆಯಲಾದೀತೆ?’ ಓದುವಾಗ ಅಡಿಗರ ಎರಡನೆಯ ಸಾಲಿನ ಅರ್ಥ ಇನ್ನಷ್ಟು ಮನದಟ್ಟಾಯಿತು.

ಶಾಸ್ತ್ರಿಗಳು ನಮ್ಮ ಕಾಲದವರು ಎಂದು ತಿಳಿಯುವುದೇ ಕಷ್ಟವಾಗುವಷ್ಟು ಈ ಕಾಲಕೆಟ್ಟುಹೋಗಿದೆ. ಆದರೆ ಹೀಗೆ ಹೇಳುವಾಗ ಕೆಟ್ಟದನ್ನು ಕಾಣುವುದೇ ಉದ್ದೇಶವಾದರೆ ಅವರ ಕಾಲವೂ ಕೆಟ್ಟದ್ದು ಎನಿಸಬಹುದಿತ್ತು. ಆದರೆ ಅವರು ಬದುಕಿದ ಸಂದರ್ಭದಲ್ಲಿ ಗಾಂಧಿಯವರ ಪ್ರಭಾವ ಇತ್ತು. ಅಲ್ಲದೆ ಅವರು ಕೈಗೆತ್ತಿಕೊಂಡ ಕೆಲಸದಲ್ಲಿ ಒಳ್ಳೆಯತನ ಎನ್ನುವುದು ಕೇವಲ ಒಂದು ಮೌಲ್ಯವಾಗದೆ ಅವರು ಹಿಡಿದ ಕಾರ್ಯ ಸಾಧಿಸುವುದರಲ್ಲಿ ಅಗತ್ಯವೂ ಆದ, ಸಾಮಾನ್ಯನಿಗೂ ಅನಿವಾರ್ಯ ಎನ್ನಿಸುವ ವಿಷಯವಾಗಿತ್ತು. ಪರೋಪಕಾರಕ್ಕಾಗಿ ಬದುಕುವವರೇ ಈ ಕಾಲದಲ್ಲಿ ಅಲಭ್ಯ ಎನ್ನುವ ಮಾತನ್ನು ಎಪ್ಪತ್ತರ ದಶಕದಲ್ಲಿ ಅಮೆರಿಕನ್ ಕಾದಂಬರಿಕಾರ ಸಾಲ್ ಬೆಲೋ ಹೇಳಿದಾಗ ನಾನು ಆತನಿಗೆ ನಮ್ಮ ಕಾಲದ ವಿನೋಬಾ ಮತ್ತು ಜಯಪ್ರಕಾಶ್ ನಾರಾಯಣರ ಹೆಸರನ್ನು ಹೇಳಿದ್ದೆ. (ವಿನೋಬಾ ಅವರ ಸಾಧನೆ ಅವರಿಗೆ ತಿಳಿದಿತ್ತು) ಇದು ಭಾರತೀಯ ಜೀವನಕ್ರಮದಲ್ಲಿ ನಮ್ಮ ಸಮುದಾಯದ ಕೌಟುಂಬಿಕ ಪರಿಕಲ್ಪನೆಯಾಗಿ ಸಾಧ್ಯವಾಗಿಯೂ ಉಳಿದಿದೆ ಎಂಬುದನ್ನು ಅವರು ಪಥೇರ್ ಪಾಂಚಾಲಿಯ ಮುದುಕಿಯನ್ನು- ಅವಳು ಬದುಕಿ ಪಕ್ವವಾದ ಹಣ್ಣು ಮರದಿಂದ ಉದುರುವಂತೆ-ಸಾಯುವ ಕ್ರಮವನ್ನು ಕಂಡು ಬೆರಗಾಗಿದ್ದರು.

ಕೃಷ್ಣಶಾಸ್ತ್ರಿಗಳ ಸ್ವಭಾವದಲ್ಲಿಯೇ ಇರಬಹುದಾದ ಒಳ್ಳೆಯತನ ಅವರ ಕೃತಿಯಿಂದಾಗಿ ಸಂಭಾವ್ಯವಾಗಿ ಕಾಣುತ್ತದೆ. ಆ ಕಾಲದಲ್ಲಿಯೇ ಶಾಸ್ತ್ರಿಗಳು ಮರು ಮದುವೆಯಾಗಬಹುದಾದ ಸಾಧ್ಯತೆ ಇದ್ದು ಆಗದೆ, ತನ್ನ ಯೌವ್ವನವನ್ನು ತೋರಗೊಡದಂತೆ ತನ್ನ ಹಲ್ಲುಗಳನ್ನು ಕೀಳಿಸಿಕೊಂಡದ್ದು, ತಲೆಯನ್ನು ಬೋಳು ಮಾಡಿಸಿಕೊಂಡಿದ್ದು ಒಂದು ಆಶ್ಚರ್ಯದ ಸಂಗತಿ. ಗಾಂಧೀಜಿಯವರು ತಮ್ಮ ೫೦ನೆಯ ವಯಸ್ಸಿನಲ್ಲಿ ವೃದ್ಧರಂತೆ ಕಾಣುತ್ತಿದ್ದರು. ಈ ನಮ್ಮ ಸ್ವಾರ್ಥ ಸಾಧನೆಯ ಆಧುನಿಕತೆಯಲ್ಲಿ ಮುದುಕರಾದವರು ಯುವಕರಂತೆ ಕಾಣಲು ಬಯಸುವುದು ಸಹಜವೇ ಎನಿಸುವಷ್ಟು ಸಾರ್ವತ್ರಿಕವಾಗಿದೆ. ಆದ್ದರಿಂದಲೇ ಈ ಬಗೆಯ ತ್ಯಾಗದಲ್ಲಿ ಒಳ್ಳೆಯತನ ಅಸಹಜವೂ ಅಲ್ಲ ಎನ್ನುವುದನ್ನು ನಿಜ ಜೀವನದ ಸಂದರ್ಭದಲ್ಲೂ ಕಾಣುವಂತೆ ಅವರು ಬದುಕಿದ್ದಾರೆ, ಬರೆದಿದ್ದಾರೆ.

ಅವರ ಜೀವನ ವಿವರಗಳನ್ನು ನೋಡುವಾಗ ನಮ್ಮ ಸಮಾಜ ಅವರ ಯೌವ್ವನದ ಕಾಲದಲ್ಲಿ ಹೇಗಿತ್ತು ಎಂಬುದರ ಚಿತ್ರಣವೂ ನಮಗೆ ಸಿಗುತ್ತದೆ. ನನ್ನ ಮನಸ್ಸನ್ನು ಆಳವಾಗಿ ಕಲಕಿದ್ದು ಅಲ್ಲಿ ಬರುವ ಕೆಲವು ಮುಸ್ಲಿಂ, ದಲಿತ ಕುಟುಂಬಗಳು. ವಿಶೇಷವಾಗಿ ಇಲ್ಲಿ ಉಲ್ಲೇಖಿಸಬೇಕಾದ ವ್ಯಕ್ತಿಗಳೆಂದರೆ ಸಿದ್ಧಯ್ಯ, ಸಣ್ಣತಿಮ್ಮಯ್ಯ, ಹಯಾದ್ ಸಾಬ್, ಹುಸೇನಮ್ಮ-ಹುಸೇನ್ ಸಾಬಿ, ಅಕ್ಬರ್ ಸಾಬ್, ಗಗ್ಗರಂಗಪ್ಪ, ಶರಣಮ್ಮ ಇತ್ಯಾದಿ. ಜಾತಿ ಆಚರಣೆಯಲ್ಲಿ ಯಾವುದನ್ನೂ ಮುಚ್ಚಿಡದಂತೆ ನಿರ್ಬಿಡೆಯಿಂದ ತೋರಿಸಿಕೊಳ್ಳುತ್ತಿದ್ದ  ಕಾಲದಲ್ಲಿ ಅದನ್ನು ಅಂತಃಕರಣವೇ ಮೀರಬಹುದು ಎನ್ನುವುದನ್ನು ಶಾಸ್ತ್ರಿಗಳು ತೋರುತ್ತಾರೆ. ಯಾವ ಉತ್ಪ್ರೇಕ್ಷೆಯೂ ಇಲ್ಲದೆ ರಂಗುರಂಗಿನ ವರ್ಣನೆಯೂ ಇಲ್ಲದೆ, ಯಥಾವತ್ತಾಗಿ ಹೀಗೆ ಹೀಗೆ ಆಯಿತು ಎನ್ನುವ ಅವರ ಸರಳ ಶೈಲಿಯೇ-ಪ್ರಾಮಾಣಿಕತೆ ತೋರುಗಾಣಿಕೆ ಆಗುವುದಿಲ್ಲ ಅದೊಂದು ವ್ಯಕ್ತಿ ಜೀವನದ ಅಥೆಂಟಿಕ್ ಆದ ಘಟನೆಯೆಂದು ನಮಗೆ ಅನಿಸುತ್ತದೆ.

ಹೀಗಾಗಿ ‘ಪರೋಪಕರಾಯ ಮಿದಂ ಶರೀರ’ ಎನ್ನುವುದು ಕೇವಲ ಆದರ್ಶವಾಗದೆ ಪ್ರತಿನಿತ್ಯ ಬಿಡುವಿಲ್ಲದ ಬದುಕಾಗುತ್ತದೆ.

ನಮ್ಮಲ್ಲಿ ಯಾತ್ರೆಯ ಕಲ್ಪನೆ ಇದೆ. ಕಾಶಿಗೊ ತಿರುಪತಿಗೊ ಹೋಗಿ ಬರಬೇಕೆಂದು, ಆದರೆ ಶಾಸ್ತ್ರಿಗಳಿದ್ದ ವಲಯದಲ್ಲಿ ಯಾರಾದರೂ ಒಬ್ಬ ದೊಡ್ಡ ಮನುಷ್ಯ ಇದ್ದಾನೆ ಎಂದರೆ ಶಾಸ್ತ್ರಿಗಳು ಹೋಗಿ ಕಾಲ್ನಡಿಗೆಯಲ್ಲೊ, ಸಿಕ್ಕರೆ ಬಸ್ಸಿನಲ್ಲೊ ಹೋಗಿ ಅವರನ್ನ ನೋಡಿ ಅವರ ಜೊತೆಗಿದ್ದು ಬರುತ್ತಿದ್ದು. ಹೀಗೆ ಅಂಥವರನ್ನೆಲ್ಲ ನೆನೆಸಿಕೊಳ್ಳುವಾಗ ಶಾಸ್ತ್ರಿಗಳು ಒಳ್ಳೆಯವನಾಗಿ ಇರುವುದನ್ನು ಕಲಿಯುತ್ತಲೆ ಬೆಳೆಸಿಕೊಳ್ಳುತ್ತಲೇ ತಪ್ಪುಗಳನ್ನ ತಿದ್ದಿಕೊಳ್ಳುತ್ತಲೇ ಇರಬಹುದು ಎನ್ನುವುದನ್ನ ಸೂಚಿಸುತ್ತಾರೆ.

ಇನ್ನೊಂದು ಮುಖ್ಯವಾದ ಮಾತು-ಪ್ರಾಮಾಣಿಕತೆಯೇ ಅಥೆಂಟಿಕ್ ಆದಾಗ ಒಳಗಿನ ಸತ್ಯಕ್ಕೂ ಹೊರಗಿನ ಸತ್ಯಕ್ಕೂ ಅಂತರವೇ ಉಳಿದಿರುವುದಿಲ್ಲ. ಅವರ ಸುತ್ತಮುತ್ತ ಇರುವವರಲ್ಲಿ ಕೆಡಕೂ ಇದೆ ಒಳಿತೂ ಇದೆ. ಕೆಡಕು ಒಳಿತಾಗಿ ಮಾರ್ಪಡುವ ಬೆರಗೂ ಇದೆ. ಅವರ ಇಡೀ ವ್ಯಕ್ತಿತ್ವ ತನ್ನ ಸುತ್ತಮುತ್ತಲಿನಲ್ಲಿ ಒಳ್ಳೆಯದನ್ನು ಉಂಟುಮಾಡುವ ವೇಗ ವರ್ಧಕದಂಥೆ ಕೆಲಸ ಮಾಡುತ್ತದೆ. ಇದೊಂದು ವಿಶೇಷ ಸಾಧನೆ ಎಂದು ತಿಳಿಯದಂತೆ ಅವರು ಬರೆದುಕೊಳ್ಳುವುದರಿಂದ ನಮಗೆ ಇದರಲ್ಲಿ ಇರುವ ಕಷ್ಟದ ಅರಿವಾಗುವುದಿಲ್ಲ.

ರಮಣರನ್ನು ಯಾರೊ ಒಬ್ಬ ಪ್ರಶ್ನಿಸಿದನಂತೆ: ‘ನಮ್ಮ ಮುಕ್ತಿ ಅಥವಾ ಬಿಡುಗಡೆ ಸಾಧ್ಯವಾಗುವುದಕ್ಕೆ ಏನು ಮಾಡಬೇಕು?’ ಎಂದು. ಅದಕ್ಕೆ ರಮಣರ ಉತ್ತರ ‘ಇದೇನೂ ಕಷ್ಟಪಟ್ಟು ಸಾಧಿಸುವುದಲ್ಲ ಅಂಥದ್ದೊಂದು ಅನುಭವ ನಿನಗಾದರೆ ನೀನು ಆಶ್ಚರ್ಯಪಡುತ್ತಿ, ಇದು ನನಗೆ ಎಂದಾದರೂ ಆಗಬಹುದಿತ್ತು ಎಂದು.’

ನಾನೀನ ಕೃಷ್ಣಶಾಸ್ತ್ರಿಗಳ ಜೀವನ ‘ವಿಶೇಷವಾದ ಸಾಧನೆ’ ಎಂಬಂತೆ ತಿಳಿದು ಬರೆಯುತ್ತಿದ್ದೇನೆ. ಆದರೆ ಹಾಗೆ ಅವರು ತಿಳಿದು ಬದುಕಿದವರಲ್ಲ.

ಶಾಸ್ತ್ರಿಗಳ ಕೆಡುಕನ್ನ ನೋಡಿದ್ದಾರೆ. ಆದರೆ ಕೆಡಕನ್ನು ಸಹಜವಾದದ್ದು ಎಂದು ತಿಳಿದಿರಲಿಲ್ಲ. ಅದರ ವಿರುದ್ಧ ಅವರು ಉಗ್ರವಾದ ಹೋರಾಟದ ಬದಲು ತನ್ನ ಉದಾಹರಣೆಯಿಂದಲೇ ಗೆಲ್ಲುತ್ತಾ ಬಂದಿದ್ದಾರೆ ಅಥವಾ ಸಹಿಸಿಕೊಂಡು ಬಂದಿದ್ದಾರೆ. ಇವತ್ತಲ್ಲ ನಾಳೆ ಇಂಥಹ ಕೆಡುಕಿಗೆ ಅವಕಾಶ ಇರುವುದಿಲ್ಲ ಎನ್ನುವ ಭರವಸೆಯಲ್ಲಿ ಬದುಕಿದ್ದಾರೆ. ಅವರು ಒಳ್ಳೆಯದನ್ನು ಕಂಡಾಗ ಅವನು ಯಾವ ವರ್ಗ, ಜಾತಿಯವನಿರಲಿ ಅಲ್ಲಿ ಅವರು ದೈವ ಸನ್ನಿಧಿಯನ್ನು ಅನುಭವಿಸುತ್ತಾರೆ. ಆದ್ದರಿಂದ ರಿಚುಯಲ್‌ಗಳ ಮುಖಾಂತರವಲ್ಲದೆ ಬದುಕುತ್ತಿರುವಾಗಲೇ ಅವರು ಆ ಬದುಕಿನಲ್ಲಿ ತತ್ಪರವಾಗಿ ದೂರ ನಿಂತು ನೋಡುವ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ.

ಗಾಂಧಿ ಹೇಳುತ್ತಿದ್ದರಂತೆ ‘ಈ ಪ್ರಪಂಚದ ಇತಿಹಾಸದಲ್ಲಿ ಮನುಷ್ಯ ಚರಿತ್ರೆಯ ಕಾಲ ಅತ್ಯಲ್ಪವಾದದ್ದು, ಅದರ ಆಧಾರದ ಮೇಲೆ ಮನುಷ್ಯನೆಂದರೆ ಇಷ್ಟೇ ಎಂಬ ನಿರ್ಧಾರಕ್ಕೆ ಬರಬೇಡ’ ಎಂದು. ಶಾಸ್ತ್ರಿಗಳು ಕೆಡಕನ್ನು ನಿರ್ವಹಿಸಿದ್ದು, ಈ ಬಗೆಯಲ್ಲಿ ದ್ವೇಷದಿಂದಲ್ಲ ಭರವಸೆಯಲ್ಲಿ. ಆದರೆ ಕಂಡದ್ದನ್ನು ಕಂಡ ಹಾಗೆ ಚಿತ್ರಿಸುವುದರಲ್ಲಿ ತನ್ನ ಒಳ್ಳೆಯತನದ ಹೆಚ್ಚುಗಾರಿಕೆ ಕೂಡ ಅರಿಗೆ ಕಾಣುವುದಿಲ್ಲ ಕನ್ನಡದಲ್ಲಿ ಇದೊಂದು ಅಪರೂಪದ, ಆತ್ಮೀಯವಾದ ಬರವಣಿಗೆ.

*

 (ಬೆಳಗೆರೆ ಕೃಷ್ಣಶಾಸ್ತ್ರಿಗಳ ಮರೆಯಲಾದೀತೆ? (೨೦೦೭) ಕೃತಿಯ ಬಗೆಗೆ ಬರೆದ ಲೇಖನ. ಪ್ರ: ಅಭಿನವ, ಬೆಂಗಳೂರು.)