MY heart lepas up when I behold a rainbow in the sky
So was it when my life began; /So is it now I am a man
So be it when I shall grow old,/or let me die!
The child is father of the man;
And I could wish my days to be bound each to each by natural piety.
– William Wordsworth

ವರ್ಡ್ಸ್‌ವರ್ತ್‌ನನ್ನು ನೆನೆದು ಈ ಟಿಪ್ಪಣಿ ಪ್ರಾರಂಭಿಸುತ್ತಿದ್ದೇನೆ. ಕವಿಗೆ ಬಾಲ್ಯದ ದಿನಗಳು ಹಳಹಳಿಕೆಯವು ಅಲ್ಲ. ಗಾಢವಾದ ತನ್ನತನದ ಸತ್ಯವನ್ನು ಪಡೆದವು. ಇದು ಕಳೆದುಹೋಗುವುದು ಅನಿವಾರ್ಯವಾದರೂ, ವಿಷಾದವನ್ನು ಮೀರುವುದೇ, ಹಿಂದಿನ ಮುಗ್ಧ ಚೈತನ್ಯವನ್ನು ಮರುಕಳಿಸಿಕೊಳ್ಳುವುದೇ ಇಂಗ್ಲಿಷ್ ಕವಿಯ ಉದ್ದೇಶ. ಸ್ವಲ್ಪ ಮಟ್ಟಿಗೆ ವೈದ್ಯರ ಬರವಣಿಗೆಯ ಚೈತನ್ಯವೂ ಬಾಲ್ಯವನ್ನು ಕಳೆದುಕೊಳ್ಳದ ವಿಸ್ಮಯಕ್ಕೆ ಕೈಚಾಚುವುದು-ವಯಸ್ಕನಾಗಿ, ಉಲ್ಲಾಸದಲ್ಲಿ, ತಿಳಿಹಾಸ್ಯದ ಸ್ನೇಹದಲ್ಲಿ. ಆದರೆ ವರ್ಡ್ಸ್‌ವರ್ತನಿಗಿದ್ದ ಆಧ್ಯಾತ್ಮಿಕ ಆಯಾಮವನ್ನು ವೈದ್ಯರ ಬರವಣಿಗೆಯ ರೀತಿ ಪಡೆಯಲಾರದು; ಪಡೆಯಲು ಬಯಸದು. ಇಂಗ್ಲಿಷ್ ಕವಿಯಂತೆಯೇ ವ್ಯಾವಹಾರಿಕ ಪ್ರಪಂಚ ನಮ್ಮನ್ನು ಜಡಗೊಳಿಸುತ್ತದೆ (The world is too much with us) ಎಂದು ತಿಳಿಯುವವರು ವೈದ್ಯರು ಎಂಬುದರಲ್ಲಿ ಸಂಶಯವಿಲ್ಲ. (ಹಣತೆಗಳು ಕಥೆಯ ಕೊನೆಯ ಎರಡು ಮೂರು ಪುಟಗಳಲ್ಲಿ ಇದು ವ್ಯಕ್ತವಾಗುತ್ತದೆ.)

ಮೊದಲನೆಯ ಕಥೆ ಹಣತೆಗಳನ್ನು ಓದುತ್ತ ಮಾಡಿಕೊಂಡ ಟಿಪ್ಪಣಿಗಳು ಇಲ್ಲಿವೆ;

ಬಾಲ್ಯದ ದಿನಗಳನ್ನು ‘ಮುದ’ ತರುವಂತೆ ಹಳಹಳಿಕೆಯಲ್ಲಿ ನೆನೆಯುವುದು ಕಥೆಯ ಉದ್ದೇಶವೆಂಬಂತೆ ಕಥನ ಶುರುವಾಗುತ್ತದೆ. ಈ ಮುದ ತರುವ ಅಪೇಕ್ಷೆಯ ಭಾಷೆ ನಮಗೆ ಪರಿಚಿತವಾದ ಸೊಗಸಿನದು, ಆಡಂಬರದ ಅಂಚಿನ ಉಲ್ಲಾಸದ್ದು; ‘ಅಂಬರದ ಅನಂತ ನಕ್ಷತ್ರಗಳ ಮಿಣುಕ ಮಿಣುಕಿನಲ್ಲಿ ನನ್ನನ್ನು ನಾನೇ ಹಾರಿಬಿಟ್ಟಿಕೊಳ್ಳುತ್ತೇನೆ’ ಕಥೆಗಾರನಿಗೆ ಭವಿಷ್ಯದ ದೀಪಾವಳಿಗಳನ್ನು ಎದುರು ನೋಡುವ ಸಂಭ್ರಮ ಈಗ ಇಲ್ಲ. ಇಳಿವಯಸ್ಸು, ಮನಸ್ಸು ದಣಿದಿದೆ. ಆದ್ದರಿಂದ ‘ಮತ್ತೆ ಮತ್ತೆ ಹಳೆಯ ಹಣತೆಗಳ ಮಿಣುಕು ಬೆಳಕಿನಲ್ಲೇ ರಮಿಸ ಬಯಸುತ್ತದೆ’

‘ರಮಿಸು’ ಎನ್ನುವ ಶಬ್ದವನ್ನು ಗಮನಿಸಿ. ಹೀಗೆ ಹಳಹಳಿಕೆಯಲ್ಲಿ ‘ರಮಿಸುವುದು’ ರಂಜಕವಾದ ಸಾಹಿತ್ಯದ ಬರವಣಿಗೆಗೆ ಸಹಜವಾದ್ದು. ನಮಗೆ ಚಿರಪರಿಚಿತವೂ ಪ್ರಿಯವೂ ಆದದ್ದು. ಎಲ್ಲ ಸಾಹಿತ್ಯದ ಮೂಲದ್ರವ್ಯಗಳಲ್ಲಿ ಈ ಬಗೆಯ ರಮಿಸುವ ಹಳಹಳಿಕೆ ಮುಖ್ಯವಾದ್ದು. ಚಳಿಯಲ್ಲಿ ಬೆಚ್ಚಗಿನ ಸ್ನಾನವನ್ನು ಯಾರು ಇಷ್ಟಪಡುವುದಿಲ್ಲ?

ಆದರೆ ಹೀಗೆ ಕಿಕ್ ಸ್ಪಾರ್ಟ ಆಗುವ ಕಥೆ ಕಾಲದಲ್ಲಿ ಚಲಿಸುವ ಕ್ರಮದಿಂದಾಗಿ ನೆನೆಯುವುದರ ಸುಖವನ್ನು ಕೊಡುತ್ತಲೇ ನಮ್ಮನ್ನು ನಾವೇ ಅರಿತುಕೊಳ್ಳುವ, ಆದದ್ದನನು ಮತ್ತೆ ಆಗಿಸಿಕೊಂಡು ‘ಕಲಿಯುವ’ ಕ್ರಮವ ಆಗುವುದು ಈ ಕಥೆಯ ವಿಶೇಷ. ವಿದ್ಯುತ್ ಇಲ್ಲದ ಐವತ್ತು ವರ್ಷಗಳ ಹಿಂದಿನ ಕಾಲದಲ್ಲಿ ಮುನಿಸಿಪಾಲಿಟಿಯ ದೀಪಗಳನ್ನು ಬೆಳಗಲಿಕ್ಕೆ ಬರುತ್ತ ಇದ್ದ ಸಖಾರಾಮನ ವರ್ಣನೆ ನೋಡಿ. ಇದು ಅವನನ್ನು ಕಂಡಾಗ ಲೇಖಕ ಬಳಸುತ್ತ ಇದ್ದ ಧಾರವಾಡ ಕಡೆಯ ಭಾಷೆಯಲ್ಲೇ ಇದೆ ಎನ್ನುವುದು ಮುಖ್ಯ. ಎಲ್ಲ ಅವನ ವಿವರಗಳೂ ಅವನನ್ನು ನಮಗೆ ಕಾಣಿಸುತ್ತವೆ. ಅವನು ಈಗ ನಮ್ಮೆದುರು ಇದ್ದಾನೆ. ಹೀಗೆ ಅವನು ಇರುವಾಗಲೇ ಬಾಲ್ಯದ ಕಣ್ಣಿಂದ ಮತ್ತೆ ಗ್ರಹಿಸಿದವನನ್ನು ವಯಸ್ಕನಾದ ಲೇಖಕನೂ ಕಾಣುತ್ತ ಇದ್ದಾನೆ ಎಂಬುದು ಒಂದೆರಡು ಮಾತುಗಳಲ್ಲೇ ನಮಗೆ ಗೋಚರವಾಗುತ್ತದೆ. ಕಿಪ್ಲಿಂಗ್‌ನ ಜಂಗಲ್ ಬುಕ್ ಕಾಲದವನಾಗಿ ಸಖಾರಾಮ ಈಗಿನ ಲೇಖಕನಿಗೆ ಕಾಣುತ್ತಾನೆ. ಆಗಿನ ಬಾಲಕ ಮತ್ತು ಈಗಿನ ಲೇಖಕ ಒಟ್ಟಾಗಿ ಕಟ್ಟಿಕೊಳ್ಳುವ, ನಮಗೂ ಕಟ್ಟಿಕೊಳ್ಳುವಂತೆ ಮಾಡುವ ಕ್ರಮ ವೈದ್ಯರ ಪ್ರತಿಭೆಯ ಫಲ ಎನ್ನಬೇಕು.

ಕಾಣುವುದರ ಆಚೆ ಇರುವುದನ್ನು ತೋರಬಲ್ಲಂತಹ ವಿವರಗಳ ಸೊಗಸಿನಲ್ಲೂ, ಅವುಗಳನ್ನು ಈಗಿನ ತಿಳಿವು ಆಗುವಂತೆ ಆಯ್ದು ಆಡುವ ಕಾವ್ಯ ಪ್ರತಿಭೆಯಲ್ಲೂ ವೈದ್ಯರ tone ಗಮನಾರ್ಹವಾದ್ದು. ಗದ್ಯದ ಲಯದಲ್ಲೂ ಈ tone ಅನ್ನು ಅವರು ಹಿಡಿಯಬಲ್ಲರು, ಸಖಾರಾಮ ಪ್ರತಿ ಕಂಬವನ್ನೂ ಹತ್ತಿ ದೀಪಬೆಳಗುವಾಗ ವಿವರಿಸಿದ್ದು ಕಣ್ಕಟ್ಟುವ ಘಟನೆಯಾಗುವುದು ಗದ್ಯದ ಲಯದಿಂದಲೇ ಎನ್ನಬೇಕು. ಇದು ನಾಟಕ. ನಾವು ನಮಗೇ ಓದಿಕೊಳ್ಳಲು ಇರುವಂತೆಯೇ ಗಟ್ಟಿಯಾಗಿ ಓದಬೇಕು ಎನ್ನಿಸುವ ಈ ಕಲೆಗಾರಿಕೆ ಹಳಹಳಿಕೆಯಾಗಬಹುದಾದ್ದು ಮತ್ತೆ ಬದುಕುವ ನಿಜವಾಗುತ್ತದೆ. ಗಟ್ಟಿಯಾಗಿ ಓದಬೇಕು ಎನ್ನಿಸುವ ಕಲೆಗಾರಿಕೆಯಲ್ಲಿ ಗುಪ್ತವಾಗಿ ಒಂದು ಪಾಲುದಾರ ಸಮುದಾಯವಿರುತ್ತದೆ. ವೈದ್ಯರು ಇಂಥಲ್ಲಿ ಡಿಕನ್ಸ್ ಪ್ರತಿಭೆಯ performer.

ವೈದ್ಯರ ಟೋನ್ (ಧಾಟಿ) ಬಗ್ಗೆ ಈ ಪ್ರಸಂಗದಲ್ಲೆ ಬರುವ ಒಂದು ಮಾತನ್ನು ಗಮನಿಸಬೇಕು. ಸಖಾರಾಮ ದೀಪಗಳನ್ನು ಹಚ್ಚುತ್ತ ಹೋಗುವುದರ ವರ್ಣನೆ ನಮಗೆ ಸುಖದಾಯಕವಾಗುತ್ತ ಇದ್ದಂತೆಯೇ ಅವನ ಕಾಯಕ ಈಗಿನ ಲೇಖಕನಿಗೆ ‘ಜಗದ ತಮವ ಕಳೆಯಲು’ ಎಂದು ತೋರುತ್ತದೆ. ಈ ಉದ್ದೇಶಿತ ಉತ್ಪ್ರೇಕ್ಷೆಯ ‘ಅಲಂಕಾರ’ದ ಮಾತು ತಿಳಿಯಾದ ಹಾಸ್ಯದ್ದು, ನೆನೆಯುವಾಗ ಅರಳಿದ ಮನಸ್ಸಿನ ಮುದದ್ದು, ಮತ್ತು ಹಾಗೆ ಬಗೆಯಬಹುದಾದ ಸಂಭಾವ್ಯದ್ದು ಎಂದೂ ಅನ್ನಿಸುತ್ತದೆ. ನಮ್ಮನ್ನು ಆಕ್ರಮಿಸುವ ಉದ್ದೇಶದ ಉತ್ಪ್ರೇಕ್ಷೆ ಇದಲ್ಲ. ತನ್ನ ಬರವಣಿಗೆಯಲ್ಲಿ ಹೇಳಿದ್ದಕ್ಕಿಂತ ಹೆಚ್ಚನ್ನು ಧ್ವನಿಸುವ ಇಂತಹ ‘ಉಪಾಯ’ಗಳು ವೈದ್ಯರ ಗದ್ಯದ ಕಾವ್ಯ ಶಕ್ತಿಯಿಂದ ಹೊಮ್ಮುತ್ತವೆ.

ಕಥೆಯ ಒಳಗೆ  ಸಖಾರಾಮನ ಮಗ ಪರಶಾನ ಪ್ರವೇಶವಾಗುವ ವರ್ಣನೆ ಮೊದಲಲ್ಲಿ ಹಳಹಳಿಕೆಯದು; ನಮ್ಮಲ್ಲಿ ಖುಷಿ ತರುವಂಥದು. ಹಾಗೆಯೇ ಬೆಳೆದು ಕಥೆಗಾರನ ಒಳಜೀವನವನ್ನೇ ಅನ್ಯದ ಅನುಭವವಾಗಿ ಸೇರಿಕೊಳ್ಳುವ ಗಾಢತೆಯದು. ಶಾಲೆಗೆ ಹೋಗಲು ಒಲ್ಲದ, ಆದರೆ ಲೇಖಕನಿಗೆ ಆಟದಲ್ಲಿ ಹಿರೋ ಆದ ಇವರು ಬಯಸುವುದು ‘ಪೊಲೀಸ್’ ಆಗುವುದು. ಲೇಖಕ ಬ್ರಾಹ್ಮಣರ ಹುಡುಗನೆಂಬುದೂ ಇಲ್ಲೆ ನಮಗೆ ಗೊತ್ತಾಗುತ್ತದೆ. ಬಾಲಕ ರವಿವರ್ಮನ ಚಿತ್ರದಿಂದ ಜಟಾಯು ವಧೆ ನೋಡಿ, ರಾತ್ರಿ ಭೂತ ಪ್ರೇತಗಳಿಗೆ ಹೆದರಿ ಅಜ್ಜನ ಬಿಳಿ ಕಂಬಳಿಯೊಳಗೆ ಮಲಗಿದಾಗ ಅಜ್ಜ (‘ಕರ್ಮಠ ಮುದುಕ’) ಬೆನ್ನು ತಟ್ಟುತ್ತ ಮಲಗಿಸುವಾಗ ಅವನ ಮೈಗೆಲ್ಲ ಮೆತ್ತಿಕೊಂಡಿದ್ದ ಗಂಧಾಕ್ಷತೆಗಳ ಘಾಟುವಾಸನೆಯೂ ಈಗಿನ ಲೇಖಕನಿಗೆ ನೆನಪಾಗುತ್ತದೆ, ಇನ್ನೊಂದು ಜಾತಿ ಲೋಕದ ಸಖಾರಾಮ ಮತ್ತು ತುಂಟನಾದ ಪರಶಾ ಜೊತೆಯಲ್ಲೇ ಇರುವ ಇಂತಹ ನೆನಪುಗಳ ಮುಖೇನ ನಮಗೆ ಕಥೆಯ ಒಳಗಿನ ಪಾತ್ರಗಳ ಅತಿ ಸೂಕ್ಷ್ಮ ಸಾಮಾಜಿಕ ಅಂತರಗಳನ್ನು ಗಮನಕ್ಕೆ ತರುತ್ತಲೇ, ಅನುಭವದ ಸತ್ಯದಲ್ಲಿ ಅವನ್ನು ಮೀರುವ ಲೇಖಕನ ಒಳಬದುಕಿನ ದರ್ಶನವೂ ಆಗುತ್ತದೆ. ಭಾವುಕವಾಗಿ ಅಲ್ಲ; ಇಂದಿನ ಜಾತಿ ಮೀರುವ ರಾಜಕೀಯ ಒತ್ತಡದಿಂದ ಅಲ್ಲ. ಮನುಷ್ಯ ಸಂಬಂಧಗಳ ನಿತ್ಯದ ನಿಜವಾಗಿ. ಈ ಕಥೆ ಸದ್ದಿಲ್ಲದ ಸೂಕ್ಷ್ಮದಲ್ಲಿ ಈ ಸತ್ಯವನ್ನು ಕಟ್ಟಿಕೊಡುವ ಬಗ್ಗೆ ಮಹತ್ವದ್ದು.

ಬ್ರಾಹ್ಮಣ ಹುಡುಗನಾದ ಲೇಖಕನಿಗೆ ಈ ಪರಶಾ ಆಕರ್ಷಕ ಹೀರೋ. ಆದರೆ ಆಪ್ತನಾದರೂ ಅನ್ಯ. ಅವನು ಮೀನು ಹಿಡಿಯಬಲ್ಲ; ಚುಟ್ಟ ಸೇದಬಲ್ಲ; ಆದರೆ ಅವನ ‘ಧೀರೋದಾತ್ತ, ಸಾಹಸಮಯೀ ವಿದ್ಯಾ’ಗಳನ್ನು ಬ್ರಾಹ್ಮಣ ಹುಡುಗನಿಗೆ ಕಲಿಸಲಿಕ್ಕೆ ಹೋಗಿ ಪರಶಾ ಸೋತಿದ್ದ. ಪರಶಾಗೆ ತನ್ನ ಮನೆ ತಿಂಡಿಯನ್ನು ತಿನ್ನಿಸಲು ಹೋಗಿ ಲೇಖಕ ಸೋತ್ತಿದ್ದ. ಅವನು ಆಗಲೇ ಹುಡುಗರು ‘ಮಾಡಬಾರದ್ದನ್ನು’ ಮಾಡಿಯೂ ಬಿಟ್ಟಿದ್ದ. ‘ಈ ಮಾಯಾ ಪ್ರಪಂಚದ ಒಳಹೊರಗುಗಳನ್ನೆಲ್ಲ ಬಲ್ಲ ಸಾಕ್ಷಾತ್ ಈ ಭಗವಂತನ ಅವತಾರವೇನೋ’ ಎಂದು ಅನ್ನಿಸುತ್ತ ಇದ್ದ ಈ ಪರಶ ‘ಮಾಡಬಾರದ್ದನ್ನ ಮಾಡ್ಯಾನ ಅಂಬೋ ಗುಂಭಜ್ಞಾನದಿಂದ’ ಬ್ರಾಹ್ಮಣ ಹುಡುಗನಿಗೆ ಪರಶಾನ ಮೇಲಿನ ಭಕ್ತಿ ಗೌರವಗಳು ಹೆಚ್ಚಾದವು.

ಅಂದು ಬಾಲಕ ತನಗೇ ಅಂದುಕೊಂಡದ್ದನ್ನು ಈಗಿನ ಲೇಖಕ ನಮಗೆ ವಿವರಿಸುವ ತಿಳಿಹಾಸ್ಯದ ಧಾಟಿ ಅನ್ನಿಸಿದ್ದನ್ನು ನಿರಾಕರಿಸುವ ಬಗೆಯದೂ ಅಲ್ಲ; ವೈಭವೀಕರಿಸುವ ಬಗೆಯದೂ ಅಲ್ಲ. ವೈದ್ಯರ ವಿಶಿಷ್ಟ ಭಾಷೆ ಮತ್ತು ಟೋನ್‌ನಿಂದಾಗಿ ಈ ಪ್ರಬುದ್ಧ ಹೃದಯವಂತಿಕೆ ಅವರಿಗೆ ಎಲ್ಲೆಲ್ಲೂ ಸಾಧ್ಯವಾಗಿದೆ.

ಈ ಮಾತುಗಳನ್ನು ಗಮನಿಸಿ: ‘ಮನ್ಯಾಗ ನಿನಗೇನು ಕಡಿಮೆ ಮಾಡೇವಿ ಅಂತ ಪರಶಾನ ಸಂಗ್ತಿ ತಿಂತೀದಿ… ನಾಚಿಗೆ ಬರೂದಲ್ಲ ಅಂತ ನಮ್ಮ ಅವ್ವ ಹೊಡದ ಹೊಡೀತಿದ್ದಳು ಖರೆ. ಆದರ ಪರಶಾನ ಸಂಗತೀ ಕೆರೀ ದಂಡೀಮ್ಯಾಲ ಕೂತು ತಿನ್ನುವ ರುಚಿ ಮನ್ಯಾಗ ಏನಾದರ ಬಂದೀತು?’

ಬಳಖೇಡಬಿಟ್ಟು ಲೇಖಕ ಧಾರವಾಡಕ್ಕೆ ಓದಲಿಕ್ಕೆಂದು ಹೋದಮೇಲೆ ಬಾಲ್ಯದ ಮುಗ್ಧತೆ ಸಹಜವಾಗಿಯೇ ನಶಿಸಲು ಪ್ರಾರಂಭವಾಗುತ್ತದೆ. ‘ಈಗೀಗ ನಾವು ಬಲಖೇಡಕ್ಕೆ ಹೋದಾಗ ಪರಶಾನಂತವರನ್ನ ಮಾತಾಡಸಲಿಕ್ಕೆ ಏನೋ ಒಂದು ತರಹ ಹಿಡಿದು  ಬಿಟ್ಟವರಹಂಗ ಆಗುತ್ತಿತ್ತು. ಹೇಳಿ ಕೇಳಿ ಹಳ್ಳೀಊರ ಹುಡುಗರು ಅವು’.

‘ಅವು’ ಎನ್ನುವ ಈ ಮೇಲಿನ ಮಾತಿನ ಧಾಟಿಯನ್ನೂ (tone) ಗಮನಿಸಿ. ಇದು ಇನ್ನೊಂದು ನಿಜ; ಆದರೆ ಸೂಕ್ಷ್ಮವಾದ ಐರನಿ (irony) ತನ್ನನ್ನೇ ಹಾಸ್ಯದಲ್ಲಿ ಕಾಣುವ ಐರನಿ, ಈ ಮಾತುಗಳಲ್ಲಿ ಇದೆ.

ಮುಂದೆ ಲೇಖಕ ಬದಲಾಗುತ್ತ ಬೆಳೆಯುವುದೂ, ಅವನ ಒಳ ಪ್ರಪಂಚದ ಜೊತೆ ಜೊತೆಯಲ್ಲೇ ಹೊರ ಪ್ರಪಂಚವೂ ಬದಲಾಗುತ್ತ ಹೋಗುವುದೂ, ಒಂದನ್ನು ಬಿಟ್ಟು ಇನ್ನೊಂದಿಲ್ಲ ಎನ್ನಿಸುವಂತೆ, ಕಾಲದ ಮನೋಹರವಾದ, ಆದರೆ ಆಕರ್ಷಕ ತೇಪೆಮಾತ್ರವಾಗದ, ಕಥೆಗೆ ಜೈವಿಕ ಅನುಭವದ ಸಂಬಂಧ ಹೊಂದಿರುವ ವಿವರಗಳಾಗಿ ಬರುತ್ತವೆ. ಕೆ.ಬಿ.ರೇಳೆಯವರ ಗಜಕರ್ಣದ ಮುಲಾಮಿನ ಜಾಹೀರಾತಿನ ಮೂಗಿನ ತುತ್ತ ತುದಿಗೆ ಚಾಳಿಸನ್ನು ಧರಿಸಿದ ಮುದುಕ. ಯಾವ ಕಡೆ ತಿರುಗಿದರೂ ತನ್ನ ಕಡೆಯೇ ನೋಡುವಂತಿರುವ ಈ ಹಸನ್ಮುಖೀ ಮುದುಕ, ಸೈಗಲ್‌ನ ಹರಳೆಣ್ಣೆ ಮುಖ, ಅಶೋಕ ಕುಮಾರನ ಲಫಂಗ ಮಾರಿ- ಹೀಗೆ ಪೇಟೆಯಲ್ಲಿ ಕಾಣಿಸಿಕೊಳ್ಳುವ ಸಿನಿಮಾಯುಗವೂ ಬೆಳೆಯುತ್ತ ಇರುವ ಹುಡುಗನ ಒಳಮನಸ್ಸಿನ ಚಿತ್ರಣವೂ ಆಗುತ್ತವೆ. ಡಾಂಬರಿನ ರಸ್ತೆಗಳು ಎದುರಾಗುತ್ತವೆ. ‘ಅಷ್ಟೊತ್ತಿಗೆ ಜನಿವಾರ ತನ್ನ ಪಾವರ ಕಳಕೊಂಡಿತ್ತು. ಗಜಕರ್ಣ ಜಾಹೀರಾತಿನ ಕೆ.ಬಿ.ರೇಳೆ ಮಾಮ ಮಾತ್ರ ನಮ್ಮ ಪಾಲಿನ ಮಾತಾ ಪಿತಾ ಸಖಾ ಬಂಧು ಎಲ್ಲಾ ಆಗಿದ್ದ.’

ಇನ್ನೊಂದು ಸಣ್ಣ ವಿವರ ನೋಡಿ. ‘ಗಂಡಸರು ಹಸರು ಪಟ್ಟಿಪಟ್ಟಿ ಪಾಯಜಾಮಾ ಹಾಕಿಕೊಂಡು ಸೈಕಲ್ ತಿಕ್ಕಿ ತಿಕ್ಕಿ ತೊಳಕೋತಾ ನಿಂತಿದ್ದರು. ಆವಾಗ ಧಾರವಾಡದಾಗ ಸೈಕಲ್ಲು ಸ್ಟೇಟಸ್ ಸಿಂಬಾಲ್ ಆಗಿತ್ತು’ ಹಗುರವಾದ ಬರವಣಿಗೆಯ ಮೋಹಶಕ್ತಿಯಲ್ಲಿ ಇಂತಹ ಒಂದು ವಿವರ ಹೆನ್ರಿ ಜೇಮ್ಸ್ ಬರವಣಿಗೆಯ ಜೀವಾಳ ಎಂದು ತಿಳಿಯುವ significant detail. ಇಲ್ಲಿಯೂ ವೈದ್ಯರ tone  ನಿಂದಾಗಿ ಇಂತಹ ವಿವರಗಳು ಇಡೀ ಒಂದು ಕಾಲ ಘಟ್ಟವನ್ನೆ ಕಣ್ಣೆದುರು ತಂದು ನಿಲ್ಲಿಸುತ್ತದೆ.

ಲೇಖಕನ ಅನುಭವ ಲೋಕವನ್ನು ಶ್ರೀಮಂತಗೊಳಿಸುವವರಲ್ಲಿ ಕಸಗುಡಿಸುವ ಯೇಶಿಯೂ ಒಬ್ಬಳು. ಗಂಡ ಹೆಂಡತಿ ಒಟ್ಟಿಗೆ ಏನು ಗುಪ್ತವಾಗಿ ಮಾಡುತ್ತಾರೆ ಎಂಬ ಕುತೂಹಲವನ್ನು ತನಗಿಂತ ಕಮ್ಮಿ ವಯಸ್ಸಿನ ಹುಡುಗನಿಗೆ ತಣಿಸುವವಳು ಈ ಯೇಶಿ. ಆದ್ದರಿಂದ ‘ಆಕೀನೂ ನನ್ನ ಒಂದು ಹಣತಿ’ ಹುಡುಗನ ಕುತೂಹಲಕ್ಕೆ ನೇರ ಉತ್ತರ ಕೊಡಲಾರದ ಈ ಅನುಭವಿ ಹುಡುಗಿ ಹುಡುಗನ ಮುಖವನ್ನು ಬೊಗಸೆಯಲ್ಲಿ ಹಿಡಿದು ಲೊಚಲೊಚನೇ ಮುತ್ತು ಕೊಡುತ್ತ ‘ಆಮ್ಯಾಲ ನಿಂಗ ಎಲ್ಲ ತಿಳೀತತಿ’ ಎಂದು ಹೇಳುವಾಗ ಹುಡುಗನ ತಾಯಿಯ ಕಣ್ಣಿಗೆ ಬಿದ್ದು ಹುಚ್ಚುಮುಂಡೆ ಎಂದು ಬೈಸಿಕೊಳ್ಳುತ್ತಾಳೆ.

ಮುಖ್ಯವಾಗಿ ನಾವು ತಿಳಿಯುವುದು; ಈ ಕಥನದ ದಟ್ಟವಾದ ವಿವರಗಳ ಲೋಕದಲ್ಲಿ ಆ ಜಾತಿ ಈ ಜಾತಿ ಎಲ್ಲವೂ ನಿಜವಿದ್ದರೂ ಒಂದು ಜೀವಂತ ಸಂಬಂಧಗಳ ಸಮುದಾಯದಲ್ಲಿ ಇನ್ನೇನೋ ಕೃತಕವಲ್ಲದ ಒಳಬಾಳಿನ ನೇಯ್ಗೆಗೆ ಅವಕಾಶವಿರುತ್ತದೆ ಎಂಬುದು. ಲೇಖಕರು ಹೇಳುವುದನ್ನೇ ಗಮನಿಸಿ.

‘ವಯಸ್ಸು ಜವಾಬ್ದಾರಿ ಬೆಳೀಲಿಕ್ಕೆ ಹತ್ತಿಂದ ಮನಸ್ಸು ಭಾವನಾ ಪ್ರಪಂಚದಾಗ ವಿಹರಿಸೋದು ಕಡಿಮಿ ಕಡಿಮಿಯಾಗತಾ ಹೋಗತದ. ಹಿಂಗಾಗಿ ಹಣತೆಗಳೂ ಕಡಿಮೆ ಕಡಿಮಿಯಾಗತಾ ಹೋಗತಾವ. ನೋಡಿದರೆ ವಯಸ್ಕರ ವ್ಯಾವಹಾರಿಕ ಬದುಕಿನ ಸಂತೆಯಲ್ಲಿನ ಪ್ರಚಂಡ ಘಟನೆಗಳು ಒಂದನ್ನೊಂದು ದಟ್ಟೈಸಿಕೊಂಡು ಬಂದು ನಮ್ಮನ್ನು ಮುತ್ತಿಬಿಟ್ಟಿರತಾವ. ಆದರೆ ಈ ಘಟನೆಗಳು ಎಷ್ಟೇ ಮಹತ್ವದ ಘಟನೆಗಳಾಗಿದ್ದರೂ, ಇವಕ್ಕೆ ಬಾಲ್ಯಸ್ನೇಹದ, ಆತ್ಮೀಯತೆಯ, ಅಂತಃಕರಣದ ನಂಟು ಅಂಟಿರುವುದಿಲ್ಲ. ಹಾಗಾಗಿ ಈ ವಯಸ್ಕ ಬಾಳಿನ ಘಟನೆಗಳು ಹಣತೆಗಳಾಗುವುದಿಲ್ಲ’.

ಲೇಖಕ ಮದುವೆಯಾಗುತ್ತಾನೆ. ಸಂಗಾತಿಗೆ ಕೃತಜ್ಞನಾಗುತ್ತಾನೆ. ಆದರೆ ಸಂಸಾರದಲ್ಲಿ ಅನಿವಾರ್ಯವಾಗಿ ಒಳಗಾಗುತ್ತ ಹೋದಂತೆ ಹೊರಲೋಕ ಬೆಳೆಯುತ್ತದೆ; (The world is too much with us/getting and spending we lay waste our powers) ಒಳಲೋಕದ ಹಣತೆಗಳು ಮಂಕಾಗುತ್ತವೆ. ಇಲ್ಲಿನ ಬರವಣಿಗೆಯಲ್ಲಿ ಆತ್ಮನಿಂದನೆಯೂ ಇಲ್ಲ; ಪರನಿಂದನೆಯೂ ಇಲ್ಲ. ಇದು ಕೂಡ ವೈದ್ಯರ ಣoಟಿe  ನಿಂದ ಸಾಧ್ಯವಾಗುವ ತಿಳುವಳಿಕೆ, ಪ್ರಬುದ್ಧತೆಯ ನೀರಸತೆಯಲ್ಲಿ ಒದಗುವ ತಿಳುವಳಿಕೆ. ಈ ತಿಳುವಳಿಕೆಯನ್ನು ಮೀರುವ ಜೀವದ ಇನ್ನೊಂದು ಸಾಧ್ಯತೆಯನ್ನು, ಏನನ್ನೂ ನಿರಾಕರಿಸದೆ, ಬದುಕಿದ್ದನ್ನು ಅರಿವಿನಲ್ಲಿ ಮತ್ತೆ ಬದುಕುವ ಕಥನದ ಮುಖೇನ ವೈದ್ಯರು ಸಾಧ್ಯ ಮಾಡಿಕೊಳ್ಳುತ್ತಾರೆ. Through an expansion of the spirit. ಇದು ಹಳಹಳಿಕೆಯಲ್ಲ; ಸೃಜನಶೀಲ ಮನಸ್ಸು ತನ್ನನ್ನೇ ತಾನು ಗೆಲ್ಲುವ ಬಗೆ. ಹೀಗೆ ಗೆಲ್ಲಬಲ್ಲಾಗಲೂ ಉಳಿದುಕೊಂಡುಬಿಡುವ ನಿಂದಾತ್ಮಕವಲ್ಲದ ವಿಷಾದ-ವೈದ್ಯರ ಬರವಣಿಗೆಯ ತಿರುಳು ಎನ್ನಬಹುದೇನೊ?

ಅಕಸ್ಮಾತ್ತಾಗಿ ಕೊನೆಗೂ ತನ್ನ ಆಸೆಯನ್ನು ಈಡೇರಿಸಿಕೊಂಡು ಪೊಲೀಸ್ ಕೆಲಸಕ್ಕೆ ಸೇರಿದ ಪರಶಾನನ್ನು ಮುಂಬಾಯಿಯಲ್ಲಿ ಲೇಖಕ ಟ್ರಾಫಿಕ್ ಅಪರಾಧಿಯಾಗಿ ಕ್ಷಣಮಾತ್ರ ಭೇಟಿಯಾಗುವುದು, ಅವನು ಗುರುತಿಸಿದ್ದರಿಂದ ಪಾರಾಗುವುದು ಮೋಹಕವಾಗಿ, ಮಾರ್ಮಿಕವಾಗಿ ವರ್ಣಿತವಾಗಿದೆ. ಲೇಖಕ ಬೆಳೆದಂತೆಯೇ ಇನ್ನೊಂದು ದಿಕ್ಕಿನಲ್ಲಿ ಪರಶಾ ಬೆಳೆದಿದ್ದಾನೆ. ಅವನು ಲೇಖಕನ ಕರುಣೆಯ ಚಿತ್ರಣವಲ್ಲ. ಬಾಲ್ಯದಲ್ಲಿ ಲೇಖಕನ ಮನಸ್ಸನ್ನು ಗೆದ್ದವನು ಈಗಲೂ ಲೇಖಕನನ್ನು ಪಾರು ಮಾಡುವವನಾಗುತ್ತಾನೆ. ಎಷ್ಟು ಹುಡುಕಿದರೂ ಮುಂಬಯಿಯ ಜನಸಾಗರದಲ್ಲಿ ಮತ್ತೆ ಸಿಗದ ಒಂದು ಕ್ಷಣದ ‘ದರ್ಶನ’ ಮಾತ್ರ ಅವನು. ಲೌಕಿಕ ವ್ಯವಹಾರದಲ್ಲಿ ಯಶಸ್ವಿಯಾದ ಲೇಖಕನಂತೆ, ತನ್ನ ದರ್ಪದ ಹುಡುಕಾಟದಲ್ಲಿ ಪೊಲೀಸಾದ ಪರಶಾನೂ ಏನನ್ನೊ ಕಳೆದುಕೊಂಡಿರಬಹುದು. ಆದರೆ ಅವನು ಮತ್ತೆ ಕಾಣಲು ಸಿಗುವುದಿಲ್ಲ.

ಲೇಖಕನಲ್ಲಿ ಅನುಮಾನವೂ ಸುಳಿಯುತ್ತದೆ; ‘ಅಂವ ಪರಶಾ ಏನು?’ ಪರಶಾ ಆಗಿದ್ದರೂ ಅದೇ ಪರಶಾನೆ? ಲೇಖಕನ ಟ್ರಾಫಿಕ್ ಅಪರಾಧವನ್ನು ಊರಿನ ವಿಳಾಸ ನೋಡಿ ಮುಚ್ಚಿಹಾಕುವ ಅವನು ಪರಶಾ ಇರಲೇಬೇಕಲ್ಲವೇ? ಈ ಅನುಮಾನದಿಂದಾಗಿ ಕಥೆ ಬರೀ ಕಥೆಯಾಗಿ ಬಿಡುವುದಿಲ್ಲ. ಅದ್ಭುತವಾದ ಕಲೆಗಾರಿಕೆ ಇದು.

ಇನ್ನೂ ನಾಲ್ಕು ಉತ್ತಮ ಕಥೆಗಳು ಈ ಸಂಕಲನದಲ್ಲಿ ಇವೆ. ನನ್ನದೇ ಕಾರಣಕ್ಕಾಗಿ ಈ ಕಥೆಯನ್ನು ನಾನು ಎತ್ತಿಕೊಂಡಿದ್ದೇನೆ. ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣ ದೊರೆಯಬೇಕು ಎಂಬ ಗಾಢವಾದ ಆಸೆಯ ನನಗೆ ಈ ಕಥೆ ಎಷ್ಟೊಂದು ಜಾತಿಗಳಾಗಿ ಒಡೆದುಕೊಂಡಿರುವ ನಮ್ಮ ಸಮಾಜದಲ್ಲೂ ಮೇಲು ಕೀಳುಗಳನ್ನು ಮೀರುವ ಮನೋಲೋಕದ ಸಾಧ್ಯತೆಗಳು ಹಿಂದಿನ ಕಾಲದಲ್ಲಿ ಇದ್ದವು ಎಂಬುದನ್ನು ದಟ್ಟವಾಗಿ ಸೂಕ್ಷ್ಮವಾಗಿ ಹೊಳೆಯಿಸುತ್ತದೆ. ಅಷ್ಟೇ ಅಲ್ಲ; ಲೇಖಕನ ಕಲೆಗಾರಿಕೆಯಲ್ಲಿ ಹೃದಯವಂತಿಕೆಯ ಅಪ್ಪಟತೆ ಇನ್ನೂ ಉಳಿದಿದೆ. ಮನೋಲೋಕದಲ್ಲಿ ಗೆಲ್ಲುವುದು ಭಾಷೆಯಲ್ಲೂ ಗೆದ್ದಾಗ ಕಾಲವನ್ನೂ ಉಲ್ಲಾಸದಲ್ಲಿ ಗೆಲ್ಲುವುದು ಸಾಧ್ಯವಾಗುತ್ತದೆ. ಭಾಷೆಯ ಮಾತಿನ ಗೆಲುವು ಆತ್ಮದ ಗೆಲುವಾಗುತ್ತದೆ. ಕಾವ್ಯ ಶಕ್ತಿಯ ಸೂಕ್ಷ್ಮ ಇಂತಹ ಬರಹದಲ್ಲಿ ಇರುತ್ತದೆ. (Form and content are not different)

ಇನ್ನೂ ಮುಖ್ಯವಾಗಿ ಈ ಕಥೆಯನ್ನು ವಿಶ್ಲೇಷಣೆಗೆ ಎತ್ತಿಕೊಂಡಿರುವುದಕ್ಕೆ ಇನ್ನೊಂದು ಕಾರಣವಿದೆ. ಕನ್ನಡದ ಮಹತ್ವದ ಕಥೆಗಾರರಲ್ಲಿ ಒಬ್ಬರಾದ ವೈದ್ಯರ ವಿಲಕ್ಷಣ ಶಕ್ತಿಯನ್ನು ಅರಿಯಲು ನಾನು ಹೇಗೆ ಅವರನ್ನು ಓದಿದ್ದೇನೆ ಎಂಬುದನ್ನು ಒಂದು ಕಥೆಯ ಮೂಲಕ ಓದುಗರಲ್ಲಿ ಹಂಚಿಕೊಳ್ಳುವುದು ಆ ಉದ್ದೇಶ, ಇತರ ಓದುಗರ ಇನ್ನೂ ಗಾಢವಾದ ಓದಿಗೆ ಸಹಾಯಕವಾಗಬೇಕೆಂಬುದು ಕೂಡ ಈ ವಿಶ್ಲೇಷಣೆಯ ಉದ್ದೇಶ. ಈ ಸಂಗ್ರಹದ ಅತ್ಯುತ್ತಮ ಕಥೆ ಇದೆಂದು ಹೇಳುವುದು ನನ್ನ ಉದ್ದೇಶವಲ್ಲ.

ಎಲ್ಲ ಕಥೆಗಳೂ ಒಂದೇ ಉದ್ದೇಶದವೂ ಅಲ್ಲ. ಯಾವುದೂ ಸಾರಾಸಗಟಾಗಿ ಓದಿ ಖುಷಿಪಟ್ಟು ಮರೆಯುವಂತಹವೂ ಅಲ್ಲ.

*

(ಶ್ರೀನಿವಾಸ ವೈದ್ಯರ ಕಥಾ ಸಂಕಲನ ಅಗ್ನಿಕಾರ್ಯ(೨೦೦೭) ಬಗೆಗೆ ದೇಶಕಾಲ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಪ್ರ: ಅಂಕಿತ ಪುಸ್ತಕ ಬೆಂಗಳೂರು.)