‘ಸಾಸುವೆ ಹೂವ ಚರಿತ’ದ ಕವಿ ಶ್ರೀ ರಮೇಶ ನನಗೆ ಹೇಗೆ ಗೊತ್ತಾದರು ಎಂಬ ಸಂತೋಷವನ್ನು ಮೊದಲು ಹಂಚಿಕೊಳ್ಳುತ್ತೇನೆ. ಹಿಂದೆ ನನ್ನ ಪ್ರಿಯ ಶಿಷ್ಯನಾಗಿದ್ದ, ಆದರೆ ಯಾವತ್ತೂ ನನ್ನ ಗೆಳೆಯನಾಗಿದ್ದ ಪಟ್ಟಾಭಿರಾಮ ಸೋಮಯಾಜಿ ರಮೇಶರ ಕವನಗಳನ್ನು ನೋಡಿ ಎಂದು ಮಾತ್ರ ಹೇಳಿದ್ದ. ಈಚೆಗೆ ಹೆಚ್ಚು ಓದಲಾರದ ನಾನು, ಓದಿದರೂ ಬಲು ನಿಧಾನವಾದ ಓದಿನ ನಾನು, ‘ಆಗಲಿ’ ಎಂದು ಕಳುಹಿಸಿಕೊಟ್ಟ ಕವನಗಳನ್ನು ಓದಲು ಮರೆತಿದ್ದೆ. ಪಟ್ಟಾಭಿ ಹಲವು ನೈತಿಕ ಹೋರಾಟಗಳಲ್ಲಿ ತೊಡಗಿದ್ದಾಗಲೂ ಕಾವ್ಯದ ಸೂಕ್ಷ್ಮತೆಗೆ ತನ್ನನ್ನು ಸದಾ ಒಡ್ಡಿಕೊಂಡು ಇರುವವನು.

ಇದ್ದಕ್ಕಿದ್ದಂತೆ ಒಂದು ದಿನ ರಮೇಶರ ಕವನಗಳನ್ನು ಓದುತ್ತ ನನಗೆ ಎಷ್ಟು ಸಂತೋಷವಾಯಿತೆಂದರೆ ಅವರನ್ನು ಕರೆದು ನನ್ನ ಮೆಚ್ಚುಗೆ ಹೇಳಿದೆ. ರಮೇಶರೂ ಸಂತೋಷಪಟ್ಟರು. ಸ್ವತಃ ಲೇಖಕನಾದ ನನಗೆ ಈ ಬಗೆಯ ಶುದ್ಧವಾದ ಸ್ಪಂದನದ ಸುಖ ಎಷ್ಟು ಆಳವಾದದ್ದು ಎಂದು ಗೊತ್ತು. ರಮೇಶರ ಕವನಗಳನ್ನು ನಾನು ಬಾಯಿತುಂಬ ಹೊಗಳಿ ಅವರಲ್ಲಿ ಅತಿಯಾದ ಆತ್ಮವಿಶ್ವಾಸ ಹುಟ್ಟುವಂತೆ ಮಾಡಕೂಡದು. ಇವರು ‘ಆಗುತ್ತ’ ಇರುವ ಕವಿ; ಆಗಿಬಿಟ್ಟಿರುವ ಕವಿಯಲ್ಲ. ಅವರು ಅಲ್ಪತೃಪ್ತರಾಗದಿದ್ದರೆ ಕನ್ನಡದ ಬಹುಮುಖ್ಯ ಕವಿಗಳಲ್ಲಿ ಒಬ್ಬರೂ ಆದಾರು.

ನಾನು ಮೈಸೂರಿನಲ್ಲಿ ಪಾಠ ಮಾಡುತ್ತಾ ಇದ್ದಾಗ ನನಗೆ ಹತ್ತಿರದವರಾದ ಆಲನಹಳ್ಳಿ ಕೃಷ್ಣ, ದೇವನೂರ ಮಹಾದೇವ, ಅನಂತರದಲ್ಲಿ ಮಂಜುನಾಥ- ಈ ಎಲ್ಲರ ಬರವಣಿಗೆಯನ್ನು ಓದಿ ಅಸಮಾಧಾನದ ಮಾತುಗಳನ್ನು ಆಡುತ್ತ ಇದ್ದುದೇ ಹೆಚ್ಚು. ನನ್ನ ಬರವಣಿಗೆಯೇ ನನಗೆ ಇವತ್ತಿಗೂ ಅಸಮಾಧಾನದ ವಿಷಯವೂ, ಕೆಲವು ಬಾರಿ ಧನ್ಯತೆಯ ಅನುಭವವೂ ಆಗಿರುತ್ತದೆ. ಇಂತಹ ಓದಿನಲ್ಲಿ ಎಷ್ಟು ಸಾರಿ ವಯಸ್ಸಿನಲ್ಲಿ ಕಿರಿಯರಾದ ಈ ಮೇಲಿನ ಲೇಖಕರು ನನಗೆ ಅದ್ಭುತವೆನ್ನಿಸುವ ಅನುಭವವನ್ನೂ ಕೊಟ್ಟಿದ್ದಾರೆಂಬುದನ್ನು ಮರೆಯಲಾರೆ.

ಮೊದಲ ಕವನ ‘ಅರ್ಪಣೆ’ಯಲ್ಲೆ ಈ ಕವಿಯ ಮನೋಧರ್ಮ ವ್ಯಕ್ತವಾಗುತ್ತದೆ. ಹಳೆಯ ರೂಪಕಗಳನ್ನು ಫ್ರಿಜ್‌ನಲ್ಲಿ ಇಟ್ಟು ಫ್ರೆಶ್ ಆಗಿ ಈ ಕವಿ ಅರ್ಪಿಸಲಾರ. ಇಗೋ ಇಲ್ಲೇ ಬಿದ್ದಿರುವ ಕಲ್ಲನ್ನೇ ಎತ್ತಿ ಕೊಡುವೆ ಎನ್ನುತ್ತಾನೆ. ಆದರೆ ಅದೆಂತಹ ಕಲ್ಲು? ಇಡೀ ವಿಶ್ವವನ್ನೇ ಅದು ಅಡಗಿಸಿಟ್ಟುಕೊಂಡಿದೆ-ತನ್ನ ಸಾವನ್ನು ಕೂಡ. ಕವಿತೆಯಲ್ಲಿ ಹೇಳಿದ್ದಕ್ಕಿಂತ ಹೆಚ್ಚಿನದನ್ನು ‘ಹೊಳೆಯಿಸುವ’ ಈ ಬಗೆಯ ಬಯಕೆ ಸಂಕಲನದ ಉದ್ದಕ್ಕೂ ಇದೆ.

ಇನ್ನೊಂದು ಕವನ ‘ಚರಿತ’ ವೂ ಧ್ಯಾನವೇ. ಮರ ಎತ್ತರ ಎತ್ತರ ಏರಿದೆ-

ಧಿಮಾಕಿನಿಂದ ಅಲ್ಲ.
‘ಭೂಮಿಗಿಳಿಯುವ ಮಳೆಯ
ಮೊದಲ ಹನಿಗಳ
ಇರುವೆಯಂಥಹ ಜೀವನಗಳೊಡಲೊಳಗಳಿಸಿ
ಹಿತವೆನಿಸಲು’.

ಜೈವಿಕ (Organic) ವಿವರಗಳಿಂದಲೇ ಈ ಕವಿ ತನ್ನ ಕಾವ್ಯದ ದೇಹವಾದ ವಿಭಾವವನ್ನು ಕಟ್ಟಿಕೊಳ್ಳುತ್ತಾರೆ.

ಕೆಲವು ಪದ್ಯಗಳು ಕೊನೆಯಾಗದೆ ಕೊನೆಯಾಗುತ್ತವೆ; ಬೆಳೆಯಲು ಸದಾ ಸನ್ನದ್ಧವಾಗಿರುವ ಬಳ್ಳಿಗಳಂತೆ.

ಕೇವಲ ‘ಎಲೆ’ಯೊಂದರ ಮೂಲಕ. ಓದುವಾಗ ಪಾಂಪಸ್ ಆಗದಂತೆ, ಭಾರವಾಗದಂತೆ ಇಡೀ ಸೃಷ್ಟಿರಹಸ್ಯವನ್ನು ನಮ್ಮ ಅನುಭವಕ್ಕೆ ತರುತ್ತಾರೆ. ರಷ್ಯನ್ ಲೇಖಕ ಚೆಕೋವ್ ನೆನಪಾಗುತ್ತಾನೆ. ‘ಬೆಳದಿಂಗಳನ್ನು ವರ್ಣಿಸಬೇಡ; ಒಂದು ಗಾಜಿನ ಚೂರೊಂದರ ಮೇಲೆ ಅದು ಪ್ರತಿಫಲಿಸುವುದನ್ನು ತೋರಿಸು’.

ರಮೇಶರೇ ನನಗೆ ಹೇಳಿದಂತೆ ‘ದೇಶ ನೆಲ’ ದಲ್ಲಿರುವ ವಿಚಾರ ನನ್ನ ‘ಊರು-ದೇಶ’ ಎಂಬ ಪದ್ಯದಲ್ಲಿರುವ ವಿಚಾರ. ಕವಿಯೇ ಇದನ್ನು ನನಗೆ ಹೇಳದಿದ್ದರೆ ನನಗಿದು ಗೊತ್ತಾಗುತ್ತಲೇ ಇರಲಿಲ್ಲ-ಅಷ್ಟು ನನ್ನ ಕವನ ರಮೇಶರ ಕಣ್ಣಿನ ಬೆಳಕಿನಲ್ಲಿ ಅವರದೇ ಆಗಿ ಬಿಟ್ಟಿದೆ.

‘ದಂಗೆಯ ನಂತರ’ ಪದ್ಯದ ಕೊನೆಯ ಸಾಲು:

‘ಕಾಯ್ತಾ ಹೋದೆ’
ಕವಿಯ ಕಾಯುವ ಮೌನದಲ್ಲಿ ದುಗುಡ ದುಃಖವಾಗುತ್ತದೆ.

‘ಇಬ್ಬನಿ’ಯಂತಹ ಪದ್ಯಗಳು ನಾವು ಅಡಿ ಅಡಿ ಜಡ್ಡಾದ ಅರ್ಥಗಳನ್ನು ಸೀಳಿಹೊಸದನ್ನು ಹೇಳಲು ಯತ್ನಿಸುತ್ತವೆ. ಅಣು ಒಪ್ಪಂದಕ್ಕೂ ಕನಸಿನಾಚೆಯೂ ಮಳೆಹೊಯ್ಯುವುದಕ್ಕೂ ‘ಎತ್ತಣಿಂದೆತ್ತಣ ಸಂಬಂಧ?’ ಇ.ಎಂ.ಫಾಸ್ಟರ್ ಹೇಳಿದ್ದು. ನೆನಪಾಗುತ್ತದೆ. ‘Only Connect’. ಆದರೆ ಈ ಪದ್ಯದಲ್ಲಿ ಅದು ಸಾಧ್ಯವಾಗಿದೆಯೊ ಎಂದು ನನಗೆ ಅನುಮಾನ.

‘ಭಿಕ್ಷುಗಳು ಮತ್ತು ಕತೆಗಳು’ ಮೇಲಿನ ರೀತಿಯ ಅತಾರ್ಕಿಕ, ಆದರೆ ಗುಪ್ತ ಅರ್ಥಗಳ ಜೋಡಣೆಯ ಪದ್ಯ. ನನ್ನ ‘ದಾವ್ ದ ಜಿಂಗ್’ ಪುಸ್ತಕದ ಮೇಲು ಹೊದಿಕೆಯ ಚಿತ್ರದಿಂದ ಈ ಕವನ ಪ್ರೇರಿತ  ಎಂದು ಕವಿ ಹೇಳಿದಾಗ ನನಗೆ ಆಶ್ಚರ್ಯವೇ ಆಯಿತು. ತಾವೋ ಚಿಂತನೆಯಿಂದ ಈ ಕವಿ ಉದ್ದಕ್ಕೂ ಪ್ರಭಾವಿತರಾಗಿದ್ದಾರೆ. ಕವಿ ಗೆಳೆಯ ಸಿದ್ದಯ್ಯರಿಂದ ಪ್ರಾರಂಭವಾಗಿರುವಂತೆ ಕಾಣುವ ಅನುಭಾವದ ಹೊಸಭಾಷೆ ರಮೇಶರಲ್ಲೂ ಇರುವಂತೆ ಕಾಣುತ್ತದೆ.

‘ಸೂರ್ಯನಿರುವ ತನಕ ನೆರಳು ತಪ್ಪಿದ್ದಲ್ಲ’ ಎಂಬ ಕೊನೆಯ ಸಾಲಿನ ‘ನೀಲಿ ಕೊಡೆ’ ಪದ್ಯ ಓದಿದಾಗ ನಾನು ಈ ಮಾತುಗಳನ್ನು ಗುರುತು ಮಾಡಿಕೊಂಡೆ; ತನಗೆ ತಾನೇ ಆಡಿಕೊಂಡ ಮಾತು, ಒಲಿಸುವ ಮಾತು ಆದಾಗ, ಒಪ್ಪಿಸುವ ಮಾತೂ ಆದಾಗ ನಿಜವಾದ ಕಾವ್ಯ ಹುಟ್ಟುತ್ತದೆ. ತನ್ನ ಮನಸ್ಸಿನ ಲಹರಿಯನ್ನು ಕವಿ ಹೀಗೆ ತೇಲಿಬಿಡುವಾಗ ತನಗೆ ದಕ್ಕಿದ್ದನ್ನು ಹುಡುಕುತ್ತ ಇದ್ದಾನೆ, ನಮ್ಮಿಂದಲೂ ಹುಡುಕಿಸುತ್ತಾನೆ ಎನ್ನಿಸುತ್ತದೆ. ಇಂತಹ ಬರವಣಿಗೆ ಯಶಸ್ವಿಯಾಗಲು ‘ಲಕ್’ ಬೇಕು.

ಈ ಸಂಕಲನದ ಯಶಸ್ವಿ ಕವನಗಳಲ್ಲಿ ಒಂದಾದ ‘ಚಪ್ಪಲಿಗಳು’ ಕೊನೆಯಾಗದೆ ಕೊನೆಯಾಗುವ ಬಗೆಯನ್ನು ನೋಡಿ; ‘ಅಮ್ಮನ ಎದೆಯ ಜಾಡಿಸಿದ ಇವು/ಇನ್ನೂ’ ದಟ್ಟವಾದ ಒಂದು ಜೀವನದ ಸುಖ ದುಃಖಗಳಿಗೆ ಮಿಡಿಯುತ್ತ ಬೆಳೆಯುವ ಈ ಪದ್ಯದ ಸಾಂದ್ರತೆ ವ್ಯಾನ್ ಗೋ ಚಿತ್ರಿಸಿದ ಶೂಗಳನ್ನು ನೆನಪಿಸುತ್ತದೆ.

‘ಅರ್ಥವಾಗೋದು ಅಂದರೆ ಆಕಾಶ ಮುಟ್ಟೋದು’ ಪದ್ಯ ಈ ಕವಿಯ ರುಜುವಿನಂತೆ ಇದೆ. ‘ಕಾಫಿ ಚೆನ್ನಾಗಿದೆ’ ಎಂದು ‘ಅತಾರ್ಕಿಕ’ ವಾಗಿ ಕೊನೆಯಾಗುವ ಪದ್ಯದಲ್ಲಿ ‘ಸರ್ರಿಯಲ್’ ಗುಣವಿದೆ. ‘ಇಲ್ಲಿ ಮೊನ್ನೆ ಕೊಲೆಯಾಗಿತ್ತು’ ಎನ್ನುವ ಇನ್ನೊಂದು ಪದ್ಯ ‘ಮತ್ತು’ ಎನ್ನುವ ಮಾತಿನಿಂದ ಕೊನೆಯಾಗುತ್ತದೆ.

ಹೀಗೆ ಓದುಗನನ್ನೇ ಕೃತಿ ಕಟ್ಟಿಕೊಳ್ಳುವಂತೆ ದೇವನೂರ ಮಹಾದೇವರು ಪ್ರೇರೇಪಿಸುವುದು ನೆನಪಾಗುತ್ತದೆ. ‘ಮೂಡಲ ಸೀಮೇಲಿ ಕೊಲೆ ಗಿಲೆ ಇತ್ಯಾದಿ’ ಎನ್ನುವ ಕಥೆಯಲ್ಲಿ ಕೊಲೆಯೇ ಆಗುವುದಿಲ್ಲ ಎನ್ನುವುದು ರಾಜಕೀಯವಾಗಿಯೂ ನಮ್ಮನ್ನು ಚಿಂತನೆಗೆ ಹಚ್ಚುವಂತಹ ಅದ್ಭುತವಾದ ವ್ಯಂಗ್ಯವನ್ನು ಪಡೆದಿದೆ. ರಮೇಶರು ಈ ಆಳದಲ್ಲಿ ನಮ್ಮನ್ನು ಕಲಕುವುದಿಲ್ಲ. ಆದರೆ ಆ ಕಾವ್ಯಮಾರ್ಗದಲ್ಲಿ ಇದ್ದಾರೆ ಎಂದು ಹೇಳಬಹುದು.

ಈ ಕವಿಯ ವಿಶೇಷವಾದ ಗುಣವೆಂದರೆ ಇವರಲ್ಲಿ ಕಾಣುವ ಹೊರಗಿನ ಸತ್ಯಕ್ಕೂ ಒಳಗಿನ ಸತ್ಯಕ್ಕೂ ನಡುವೆ ಬಿರುಕು ಇಲ್ಲ. ಒಂದು ಇನ್ನೊಂದು ಆಗುತ್ತದೆ. ಅಥವಾ ಹೊಳೆಯಿಸುತ್ತದೆ.

*

ಇಲ್ಲೊಬ್ಬ ವಿಲಕ್ಷಣ ಶಕ್ತಿಯ ಕವಿ ನಮ್ಮ ಎದುರು ಇದ್ದಾರೆ. ಎಲ್ಲ ಕವನಗಳನ್ನೂ ನಾನು ವಿಮರ್ಶಿಸಲು ಹೋಗಿಲ್ಲ. ಓದುಗರಿಗೆ ಆಹ್ವಾನವಾಗುವಂತೆ ಕೆಲವನ್ನು ಬೆರಳುಮಾಡಿ ತೋರಿದ್ದೇನೆ. ಈ ಕವಿ ಹೊಸದನ್ನು ತಾನು ಕಂಡು ನಮಗೂ ಕಾಣಿಸುತ್ತಾನೆ ಎಂಬ ವಿಶ್ವಾಸದಲ್ಲಿ ಓದುಗರಿಗೆ ಈ ಕವನಗಳನ್ನು ಪರಿಚಯಿಸಿದ್ದೇನೆ.

*

(ಎಸ್.ಆರ್.ರಮೇಶ್ಅವರ ಸಾಸುವೆ ಹೂವ ಚರಿತ (೨೦೦೯) ಪುಸ್ತಕಕ್ಕೆ ಬರೆದ ಮುನ್ನುಡಿ. ಪ್ರ: ಅಭಿನವ: ಬೆಂಗಳೂರು.)