ನಮ್ಮ ನಾಡಿನ ಪ್ರಸಿದ್ಧ ವಕೀಲರುಗಳಲ್ಲೊಬ್ಬರಾದ ಶ್ರೀ ಸಿ.ಎಚ್. ಹನುಮಂತರಾಯರ ಬಾಲ್ಯ, ಯೌವನ ಹಾಗೂ ವೃತ್ತಿಯ ಅನುಭವಗಳನ್ನು ಗಂಗಾಧರ ಕುಷ್ಟಗಿ ‘ವಕೀಲರೊಬ್ಬರ ವಗೈರೆಗಳು’ ಅಂಕಣದಲ್ಲಿ ನಿರೂಪಿಸಿದ್ದನ್ನು ನಾನು ಅತ್ಯಂತ ಕುತೂಹಲದಿಂದಲೂ ಸಂತೋಷದಿಂದಲೂ ಓದಿದೆ. ಓದುವಾಗ ನಾನು ಮಾಡಿಕೊಂಡ ಟಿಪ್ಪಣಿಗಳು ಇಲ್ಲಿವೆ.

ಇದೊಂದು ವಿಶಿಷ್ಟವಾದ ಆತ್ಮಕಥನ. ಕೆಲವು ಆತ್ಮಕಥನಗಳು ವೃತ್ತಿ ಕಥನ ಮಾತ್ರವಾಗಿ ಬಿಡುತ್ತವೆ. ಆದರೆ ‘ವಕೀಲರೊಬ್ಬರ ವಗೈರೆಗಳು’ ಹೀಗೆ ಕೇವಲ ವೃತ್ತಿಕಥನವಾಗುವುದಿಲ್ಲ. ಬಯಲು ಸೀಮೆಯ ಹಳ್ಳಿಯೊಂದರ ಇಡೀ ಜೀವನಕ್ರಮವನ್ನು ದಟ್ಟವಾಗಿ ಕಥಿಸುವ ಆತ್ಮಚರಿತ್ರೆಯಿದು. ಒಬ್ಬ ಹುಡುಗ ಸಮಷ್ಟಿ ಕುಟುಂಬದಲ್ಲಿ ಬೆಳೆಯುವುದನ್ನು ನಾವಿಲ್ಲಿ ಕಾಣುತ್ತೇವೆ. ಅವನು ಬೆಳೆಯುವ ಪ್ರದೇಶದ ಹಲವು ಜನರು ಕಾದಂಬರಿಯೊಂದರ ಪಾತ್ರಗಳಂತೆ ನಮಗೆದುರಾಗುತ್ತಾರೆ. ಈ ಕಥನದಲ್ಲಿ ಕಟುವಾದ ವಾಸ್ತವಿಕ ಸತ್ಯಗಳು ಇವೆ. ಕನಸುಗಳೂ ಇವೆ. ಹೀಗೆ ಐಹಿಕದ ನೆಲಕ್ಕೂ ವಿಕಾಸದ ಆಕಾಶಕ್ಕೂ ಏಕಕಾಲದಲ್ಲಿ ಲೇಖಕರು ಮಿಡಿಯುತ್ತಾರೆ.

ಈ ಕಥನವನ್ನು ಓದುತ್ತಿದ್ದಂತೆ ವೈಯಕ್ತಿಕವಾಗಿ ನನ್ನಲ್ಲಿ ಹುಟ್ಟಿದ ಸ್ಪಂದನಗಳನ್ನು ಗುರುತಿಸಿಕೊಳ್ಳುತ್ತೇನೆ. ನಾನೂ ಒಂದು ಹಳ್ಳಿಯಲ್ಲಿ ಬೆಳೆದವನು, ನನ್ನ ತಂದೆಯವರು ಸದಾ ಕೋರ್ಟಿಗೆ ಅಲೆಯುತ್ತಿದ್ದ ವ್ಯಕ್ತಿ. ನಮ್ಮ ಮನೆಯ ಚಾವಡಿಯ ಮೇಲೆ ನಮ್ಮ ತಂದೆ ಮನೆಯಲ್ಲಿದ್ದಾಗ  ನೆರೆಹೊರೆಯ ಎಷ್ಟೋ ಹಳ್ಳಿಯ ಜನರು ಬಂದು ಸೇರುತ್ತಿದ್ದರು.

ನನ್ನ ತಂದೆಯವರು ಹಲವು ವಕೀಲರ ಬಗ್ಗೆಯೂ, ಹಲವು ನ್ಯಾಯಾಧೀಶರ ಬಗ್ಗೆಯೂ ರೋಚಕವಾದ ಕಥೆಗಳನ್ನು ಹೇಳುತ್ತಿದ್ದರು. ಕೇಳಿಸಿಕೊಳ್ಳುವವರಲ್ಲಿ ಹಲವು ಜಾತಿಯ ಜನರಿರುತ್ತಿದ್ದರು. ಒಂದು ದೇಶದ ಕಾನೂನಿನ ವ್ಯವಸ್ಥೆ ಒಂದು ಜೀವಂತ ದೇಹದ ನರಮಂಡಲವಿದ್ದ ಹಾಗೆ ಎಂದು ಆಗ ನನಗೆ ಅನ್ನಿಸಿತ್ತು. ನನ್ನ ತಂದೆಯವರಿಗಿದ್ದ ಆಸೆ ನಾನೊಬ್ಬ ಲಾಯರ್ ಆಗಬೇಕು ಅಥವಾ ಗಣಿತಶಾಸ್ತ್ರಜ್ಞನಾಗಬೇಕು ಎಂದು ನಾನು ಎರಡೂ ಆಗಲಿಲ್ಲ. ಆದರೆ ಇವತ್ತಿಗೂ ನನ್ನ ತಲೆಯ ತುಂಬ ನನ್ನ ತಂದೆಯವರು ವರ್ಣಿಸುತ್ತಿದ್ದ ವಕೀಲರುಗಳ ಸಾಹಸದ ಕಥೆಗಳು ಇವೆ.

ಹನುಮಂತರಾಯರು ತಾವು ಕೇಳಿಸಿಕೊಂಡ ಕಥೆಗಳನ್ನು ಹೇಳುವುದೇ ಹೆಚ್ಚು. ‘ಜೀವನ್ಮರಣಗಳ ಮಧ್ಯೆ ಸೆಣಸುವ ವಕೀಲನಾಗಬೇಕು’ ಎಂದು ಅವರಿಗೆ ಮೊದಲು ಅನ್ನಿಸಿದ್ದು ಈಗ ಪ್ರಸಿದ್ಧವಾದ ಬೇಲೂರು ಶ್ರೀನಿವಾಸ ಅಯ್ಯಂಗಾರರ ಕೊಲೆ ಪ್ರಕರಣ ಕೇಳಿಸಿಕೊಂಡಾಗ. ಆಮೇಲಿನಿಂದ ಜಸ್ಟೀಸ್ ಮೇದಪ್ಪ ಕೊಲೆ ಪ್ರಕರಣದ ಕೇಸನ್ನೂ ಕೇಳಿಸಿಕೊಳ್ಳುತ್ತಾರೆ. ಲಾಯರ್ ಜೀವನದ ಆಮಿಷಗಳು ಅದರ ಆಕರ್ಷಣೆಯ ಜೊತೆಗೆ ಗೊಂದಲವನ್ನುಂಟು ಮಾಡುತ್ತವೆ. ಆದರೆ ಲೇಖಕರು ಎಲ್ಲ ಹುಡುಗರಂತೆ ಚೀಟಿಯೊಂದನ್ನೆತ್ತಿ ತಾನು ಲಾಯರಾಗುವುದೆಂದು ನಿರ್ಧರಿಸುತ್ತಾರೆ.

ಈ ಪುಸ್ತಕ ಕನ್ನಡ ಸಾರಸ್ವತಲೋಕದಿಂದ ದಟ್ಟವಾಗಿ ಪ್ರಭಾವಿತವಾಗಿ ಹುಟ್ಟಿ ಬಂದಿದೆ. ಕುವೆಂಪು, ರಾವ್‌ಬಹದ್ದೂರರನ್ನು ನೆನಪು ಮಾಡುವ ಹಳ್ಳಿಯ ಶ್ರೀಮಂತ ಜೀವನಕ್ರಮದ ವರ್ಣನೆಗಳು ಇಲ್ಲಿವೆ. ಉದಾ: ಮೊಹರಂ ವರ್ಣನೆ ಮತ್ತು ಅದರಲ್ಲಿ ಲೇಖಕರ ದೊಡ್ಡಪ್ಪ ಕೆಂಡ ಹಾಯುವುದು. ಒಬ್ಬ ಉತ್ತಮ ಕಾದಂಬರಿಕಾರನಿಗೆ ಇರಬೇಕಾದ ಪ್ರಾಣಿ, ಪಕ್ಷಿ, ವಸ್ತು ಲೋಕದ ವಿದ್ಯಮಾನಗಳ ಕುತೂಹಲ ‘ವಗೈರೆ’ಗಳಲ್ಲಿ ನಿರೂಪಿಸಲ್ಪಟ್ಟಿದೆ. ಉಡಗಳ ಚಲನೆಯ ವರ್ಣನೆ ಅದ್ಭುತವಾಗಿದೆ. ಸಾಮಾನ್ಯರ ಗಮನಕ್ಕೆ ಬಾರದ ಸಂಗತಿ ಇದಾಗಿದೆ. ಜೇನುಗಳ್ಳರು ಜೇನು ಬಿಡಿಸಲು ಎತ್ತರದ ಮರ ಏರಲು ಉಡಗಳನ್ನು ಬಳಸುತ್ತಾರೆ. ಉಡಗಳಿಗೆ ಕಟ್ಟಿದ ಹಗ್ಗವನ್ನು ತಮಗೆ ಕಟ್ಟಿಕೊಂಡಿರುತ್ತಾರೆ. ಉಡವನ್ನು ಮೇಲಕ್ಕೇರಿಸಲು ಅದರ ತಿಕಕ್ಕೆ ಬೆರಳಿಕ್ಕಿದರೆ ಹಿಡಿತ ಸಡಿಲಿಸುತ್ತಾ ಸ್ವಲ್ಪ ಸ್ವಲ್ಪವೇ ಮೇಲೇರುತ್ತಾ ಹೋಗುತ್ತದೆ. ಇಂಥ ವರ್ಣನೆ ಅಪರೂಪವೆನ್ನಿಸುವಂಥದ್ದು. ಬಾಲ್ಯದಲ್ಲಿಯೇ ಹನುಮಂತರಾಯರ ಸಾಮಾಜಿಕ ಕಳಕಳಿ ಗಟ್ಟಿಗೊಳ್ಳುವ ಪ್ರಕ್ರಿಯೆಯನ್ನು ನಾವಿಲ್ಲಿ ಕಾಣುತ್ತೇವೆ. ಅಡಿಕೆ ಮರ ಹತ್ತುವುದರಲ್ಲಿ ನಿಸ್ಸೀಮನಾದ ದಲಿತ ಹುಡುಗ ಗುಡ್ಡಯ್ಯನನ್ನು ಹನುಮಂತರಾಯರು ವರ್ಣಿಸುವುದು, ಅವನ ಮೇಲೆ ಪ್ರೀತಿ ತೋರುವುದು ಅವರ ಸಾಮಾಜಿಕ ಪ್ರಜ್ಞೆಯ ವಿಕಸನಕ್ಕೆ ಸಾಕ್ಷಿಯಾಗಿದೆ.

ಹಳ್ಳಿಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಸಾಮೂಹಿಕ ಶಿಕಾರಿಯನ್ನು ವರ್ಣಿಸುವಾಗ ತೋರುವ ಸೂಕ್ಷ್ಮಜ್ಞತೆ ವಿಭಿನ್ನವೆನಿಸುತ್ತದೆ. ಶಿಷ್ಟ ಸಮಾಜ ಯಾರನ್ನು ದಡ್ಡರು ಎಂದು ಪರಿಗಣಿಸಿರುತ್ತದೋ ಅವರೇ ಶಿಕಾರಿಯಲ್ಲಿ ಹೇಗೆ ನಿಪುಣರೂ, ಜಾಣರೂ ಆಗಿರುತ್ತಾರೆನ್ನುವುದನ್ನು ಇಲ್ಲಿ ಗುರುತಿಸಲಾಗಿದೆ. ಕಾಡಿನ ಹಾದಿಯಲ್ಲಿ ಕಾಣುವ ಲದ್ದಿ ಯಾವ ಮೃಗದ್ದು, ಎಷ್ಟು ತಾಸಿನ ಮೇಲೆ ಹಾಕಿದ್ದಿರಬಹುದು ಎನ್ನುವುದನ್ನು ತಿಳಿಯುವ ಚಾತುರ್ಯ ಹೊಲೆಯರ ಹುಡುಗ ಹನುಮನಿಗಿರುತ್ತದೆ! ಗಂಗಾಧರ ಕುಷ್ಟಗಿಯವರ ನಿರೂಪಣೆ ಹೃದಯಂಗಮವಾಗಿ ಮೂಡಿ ಬಂದಿದೆ. ಸಂಪತಿ ಕೌರ್ ಎನ್ನುವವಳು ಪತಿಯ ಹೆಣದೊಂದಿಗೆ ಚಿತೆಯೇರಬೇಕಾದ ಬಲಾತ್ಕಾರಕ್ಕೊಳಗಾದ ದೃಶ್ಯದ ನಿರೂಪಣೆ ಇದಕ್ಕೆ ಸಾಕ್ಷಿ.

ಹನುಮಂತರಾಯರು ನಮ್ಮ ನಡುವಿನ ಶ್ರೇಷ್ಠ ವಕೀಲರು ಮಾತ್ರವಲ್ಲ, ಕನ್ನಡ ಸಾರಸ್ವತಲೋಕಕ್ಕೆ ಒಂದು ಅಮೂಲ್ಯವಾದ ಆತ್ಮಕಥೆಯನ್ನು ಕೊಟ್ಟಿರುವವರು. ಗಾಢವಾದ ಅನುಭವಗಳನ್ನು ಅತ್ಯಂತ ಹಗುರವಾಗಿಯೂ ದೃಶ್ಯಾತ್ಮಕವಾಗಿಯೂ, ಮನೋಜ್ಞವಾಗಿಯೂ ನಿರೂಪಿಸಲ್ಪಟ್ಟ ‘ವಕೀಲರೊಬ್ಬರ ವಗೈರೆಗಳು’ ಜನಪ್ರಿಯವಾಗುವುದರಲ್ಲಿ ನನಗೆ ಸಂದೇಹವಿಲ್ಲ.

*

(‘ವಕೀಲರೊಬ್ಬರ ವಗೈರೆಗಳು (೨೦೦೭) ಪುಸ್ತಕಕ್ಕೆ ಬರೆದ ಮುನ್ನುಡಿ. ಲೇ: ಸಿ.ಎಚ್.ಹನುಮಂತರಾಯ. ನಿರೂಪಣೆ: ಗಂಗಾಧರ ಕುಷ್ಟಗಿ. ಪ್ರ: ಪತ್ರಿಕೆ ಪ್ರಕಾಶನ, ಬೆಂಗಳೂರು.)