ನನಗೆ ಸುಮ್ಮನೆ ಸುತ್ತುವುದೆಂದರೆ ತುಂಬ ಇಷ್ಟ. ಬಹುಶಃ ನನ್ನ ಕಾಲಲ್ಲಿ ಚಕ್ರವಿರಬೇಕು. ಆದುದರಿಂದ ಪ್ರವಾಸ ಮಾಡುವ ಯಾವ ಅವಕಾಶವನ್ನೂ ನಾನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಅಲ್ಲದೆ ನಾನು ಹೀಗೆ ಸುತ್ತುವಾಗಲೇ ಬಹಳ ಓದುವುದು. ಓದುವುದೆಂದರೆ ಪುಸ್ತಕದಿಂದ ಅಲ್ಲ ; ಪ್ರಯಾಣ ಮಾಡುವಾಗ ರೈಲಲ್ಲೋ, ಬಸ್ಸಲ್ಲೋ, ವಿಮಾನದಲ್ಲೋ ಪುಸ್ತಕದಲ್ಲೆ ಕಣ್ಣು ನೆಟ್ಟು ಕೂತವರನ್ನು ಕಂಡರೆ ನನಗೆ ಆಗುವುದಿಲ್ಲ. ತೆರೆದ ಕಿಟಕಿಯಾಚೆಗೆ ನಿಮಿಷಕ್ಕೊಮ್ಮೆ ಸರಿದುಹೋಗುವ ದೃಶ್ಯ ಪರಂಪರೆಗಳು ನೀಡುವ ಸೊಗಸು, ಸುತ್ತಣ ಬದುಕು ತಂದುಕೊಡುವ ಜೀವಂತವಾದ ಅನುಭವ, ನನಗೆ ಯಾವ ಪುಸ್ತಕದ ಓದಿನಿಂದಲೂ ಬರಲಾರದು ಎಂದು ಅನ್ನಿಸಿದೆ. ಪ್ರಯಾಣ ಮಾಡುವಾಗ ಹೇಗೋ ಮಾಡಿ ಕಿಟಕಿಯ ಪಕ್ಕದ ಜಾಗವನ್ನು ಹಿಡಿಯುವವರಲ್ಲಿ ನಾನು ಮೊದಲಿಗ.

ಕಳೆದ ಜೂನ್ ತಿಂಗಳ ಎರಡನೇ ವಾರದಲ್ಲಿ ಯು. ಜಿ. ಸಿ. ಯವರಿಂದ ನನಗೊಂದು ಪತ್ರ ಬಂತು : ಭಾರತ-ಸೋವಿಯತ್ ಸಾಂಸ್ಕೃತಿಕ ವಿನಿಮಯ ಯೋಜನೆಯಲ್ಲಿ ನನ್ನನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿ ನಾಮಕರಣ ಮಾಡಿರುವುದಾಗಿಯೂ, ಸೆಪ್ಟೆಂಬರ್ ಮೊದಲ ವಾರದಲ್ಲಿ ಹೊರಡಲು ತಯಾರಾಗಿರಬೇಕೆಂದೂ ಸೂಚನೆ ಇತ್ತು. ಇದರಿಂದ ನನ್ನ ಪ್ರವಾಸದ ಹಂಬಲಕ್ಕೆ ಮತ್ತೊಂದು ದಾರಿ ತೆರೆದದ್ದು ನನಗಾದ ಸಂತೋಷಕ್ಕೆ ಮುಖ್ಯ ಕಾರಣ. ಸಂತೋಷದ ಜತೆಗೆ ಆಶ್ಚರ್ಯವೂ ಆಯಿತು – ಇದು ಹೇಗೆ ಕೂಡಿ ಬಂತು ನನಗೆ ಎಂದು. ಇದರ ಮೂಲಚೂಲಗಳನ್ನು ಶೋಧಿಸಿದಾಗ ದೊರೆತದ್ದು ಇದು ಕೇವಲ ಅನಿರೀಕ್ಷಿತ ಎಂಬುದು.

ಆದರೆ ಈ ಸುದ್ದಿಯನ್ನು ನಾನು ತಿಳಿಸಿದೊಡನೆಯೇ ನನ್ನ ಮಿತ್ರರೂ, ವಿದ್ಯಾರ್ಥಿಗಳೂ ಸಮಾರಂಭಗಳನ್ನೇರ್ಪಡಿಸಿ ಅಭಿನಂದಿಸುವ ಸನ್ನಾಹದಲ್ಲಿ ತೊಡಗಿದರು. ನಾನು ಬೇಡವೆಂದರೂ ಅವರ ಪ್ರೀತಿ – ವಿಶ್ವಾಸದ ಕಿವಿ ಅದನ್ನು ಕೇಳಲು ಸಿದ್ಧವಿರಲಿಲ್ಲ. ನಾನು ಏನೋ ಮಹತ್ತಾದುದನ್ನು ಸಾಧಿಸಿದೆನೆಂಬಂತೆಯೋ, ಸಾಧಿಸಲಿದ್ದೇನೆಂಬಂತೆಯೋ ಸಮಾರಂಭಗಳೂ, ಭೋಜನ ಕೂಟಗಳೂ ಮೊದಲಿಟ್ಟವು. ಕಾಲೇಜಿನ ನೋಟೀಸ್ ಬೋರ್ಡಿನ ಮೇಲೆ ಕಾಗದವೊಂದನ್ನು ಹಾಕಿದಾಗ ವಿದ್ಯಾರ್ಥಿಗಳು ಮುಸುರಿಕೊಂಡು ನೋಡುವುದು ನನಗೆ ವಿಲಕ್ಷಣವಾಗಿ ಕಾಣುತ್ತಿತ್ತು. ಈಗ ನಾನೂ ಈ ರಷ್ಯಾ ಪ್ರವಾಸದಿಂದಾಗಿ ಅಂಥ ಒಂದು ನೋಟೀಸ್ ಬೋರ್ಡಿಗೆ ತಗುಲಿಸಿದ ಕಾಗದವಾಗಿದ್ದೇನೆ ಅನ್ನಿಸಿತು. ನನಗೇನೋ ಕೋಡು ಮೂಡಿದಂತೆ, ನನ್ನಲ್ಲಿ ಅಸಾಧಾರಣವಾದದ್ದು ಏನೋ ಇದ್ದದ್ದರಿಂದಲೇ ನನಗೆ ಈ ರಷ್ಯಾ ಪ್ರವಾಸ ಪ್ರಾಪ್ತವಾದಂತೆ, ನಾನು ಹೋಗಿ ಅಲ್ಲಿ ಕನ್ನಡದ ಧ್ವಜಗಳನ್ನು ನೆಟ್ಟು ಬರುತ್ತೇನೆಂಬಂತೆ ಕೆಲವರಿಗೆ ಭ್ರಮೆ.

ನನಗೆ ಈ ಬಗೆಯ ಭಾವನೆಗಳೆಲ್ಲ ತಮಾಷೆಯಾಗಿ ತೋರಿದರೂ, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೂ – ಮಿತ್ರರೂ ಪಟ್ಟ ಸಂತೋಷವನ್ನು, ಇಟ್ಟುಕೊಂಡ ಭಾವನೆಗಳನ್ನು, ಅವರ ಶುಭ ಹಾರೈಕೆಗಳನ್ನು ತಳ್ಳಿಹಾಕಲಾರೆ. ಇವೆಲ್ಲ ನನಗೆ ಇಷ್ಟವೇ. ಸಂತೋಷಪಡುವುದಕ್ಕೆ ಏನಾದರೂ ಒಂದು ಕಾರಣವನ್ನು ಹುಡುಕಿಕೊಂಡು, ಸಾಮೂಹಿಕವಾಗಿ ಅದನ್ನು ಅನುಭವಿಸುವುದು ಬಹು ಒಳ್ಳೆಯ ಪದ್ಧತಿಯೇ. ಯಾಕೆಂದರೆ ಬದುಕಿನಲ್ಲಿ ಬಹು ದುರ್ಲಭವಾದದ್ದು ಸಂತೋಷ.

ವಿದೇಶಗಳಿಗೆ ದಿನಬೆಳಗಾದರೆ ಎಷ್ಟೋ ಜನ ಹೋಗುತ್ತಾರೆ; ಅಂಥವರಲ್ಲಿ ನಾನೂ ಒಬ್ಬ. ಆದರೆ ಕನ್ನಡ ಅಧ್ಯಾಪಕನಾದವನು ಅಥವಾ ಲೇಖಕನಾದವನು ಹೋಗುವಾಗ, ಆ ಸಂದರ್ಭಕ್ಕೆ ಒಂದು ವಿಶೇಷತೆ ಬರುತ್ತದೆ. ಏಕೆಂದರೆ ಉಳಿದೆಲ್ಲರಿಗಿಂತ ಈತ ಕನ್ನಡ  ಭಾಷೆಗೆ, ತನ್ಮೂಲಕ ಈ ಜನದ ಹೃದಯಕ್ಕೆ ಹೆಚ್ಚು ಹತ್ತಿರದವನೆಂಬಂತೆ ಸ್ವೀಕೃತನಾಗುತ್ತಾನೆ. ಆದ್ದರಿಂದ ಇಂಥ ವ್ಯಕ್ತಿ ವಿದೇಶಕ್ಕೆ ಹೊರಟಾಗ ಬೇರೆಯವರಿಗೆ ಸಲ್ಲದ ಒಂದು ವಿಶೇಷ ಸಂಭಾವನೆಗೆ ಈತ ಪಾತ್ರನಾಗುತ್ತಾನೆ. ನನಗಾದದ್ದೂ ಹೀಗೆಯೆ. ಇದಕ್ಕೂ ಮಿಗಿಲಾಗಿ ವಿದೇಶ ಪ್ರವಾಸ ಎಂದರೆ ಸಾಮಾನ್ಯವಾಗಿ ಇಂಗ್ಲೆಂಡ್ ಅಮೇರಿಕಾಗಳೆ ಎಂಬಂತೆ ಭಾವಿತವಾಗುವಷ್ಟು ಸಂಖ್ಯೆಯಲ್ಲಿ ನಮ್ಮ ಜನ ಆ ದೇಶಕ್ಕೆ ಹೋಗಿ ಬಂದಿದ್ದಾರೆ. ಆದರೆ ರಷ್ಯಾ ದೇಶಕ್ಕೆ ಹೋಗುವುದು ಅಪರೂಪ. ಅದಕ್ಕೆ ಕಾರಣಗಳೂ ಸ್ಪಷ್ಟವಾಗಿವೆ: ರಷ್ಯಾ ದೇಶ ಇದುವರೆಗೂ ತನ್ನ ಕಬ್ಬಿಣದ ಬಾಗಿಲನ್ನು ಭದ್ರವಾಗಿ ಮುಚ್ಚಿ, ಹೊರಗಿನವರನ್ನು ಬರಗೊಡದಂತೆ ಮಾಡಿತ್ತು. ಈಚೆಗೆ ಭಾರತ ಸ್ವಾತಂತ್ರ್ಯವನ್ನು ಪಡೆದ ಕೆಲವು ವರ್ಷಗಳ ನಂತರ, ಭಾರತ – ಸೋವಿಯೆತ್ ಸ್ನೇಹಾನುಬಂಧಗಳು ಬಲಗೊಂಡ ಮೇಲೆ, ಅದು ತನ್ನ ಬಾಗಿಲನ್ನು ತೆರೆಯಿತು. ಈಗೀಗ ತೆರೆದ ಬಾಗಿಲ  ಈ ದೇಶಕ್ಕೆ ಹೋಗುವ ಸಂದರ್ಭ ಪ್ರಾಪ್ತವಾದದ್ದು ಒಂದು ವಿಶೇಷದ ಸಂಗತಿಯೆ.

ಅಂತೂ ಸ್ನೇಹಿತರು ಏರ್ಪಡಿಸಿದ ಸಮಾರಂಭದಲ್ಲಿ ನನಗೆ ಬಳುವಳಿಯಾಗಿ ಕೊಟ್ಟ ದೊಡ್ಡ ಸೂಟ್‌ಕೇಸನ್ನು ತುಂಬಿಸಿಕೊಂಡು, ಇದುವರೆಗೂ ‘ಧೋತ್ರಾಚಾರ್ಯ’ ನಾನು ‘ಸೂಟಾವತಾರಿ’ಯಾಗಿ ಆಗಸ್ಟ್ ಮೂವತ್ತೊಂದನೆಯ ತಾರೀಖು, ವಿಮಾನ ನಿಲ್ದಾಣದಲ್ಲಿ ನಿಂತಾಗ, ನನ್ನನ್ನು ಬೀಳ್ಕೊಡಲು ಬಂದ ಮನೆಯವರೂ, ಮಿತ್ರರೂ, ವಿದ್ಯಾರ್ಥಿಗಳೂ ಹಾರೈಸಿ ವಿಮಾನಕ್ಕೆ ಏರಿಸಿದರು. ಹೊರಟಾಗ ಬಾನತುಂಬ ಸಂಜೆಗೆಂಪು. ಸಂಜೆಯ ಕೆಂಪನ್ನು ಕೆಳಗೆ  ಹಾಕಿ ವಿಮಾನ ಮೇಲೇರಿ, ಮೋಡದ ಸೀಮೆಯನ್ನು ದಾಟಿದಾಗ, ಕಿಟಕಿ ಪಕ್ಕದಲ್ಲಿ ಕೂತ ನನಗೆ ವಿಮಾನದ ಕೆಳಗೆ ಮೊಸರು ಮೋಡಗಳ ಹಿಂಡು ತೂಕಡಿಸುವ ನೋಟ ಕಾಣಿಸಿತು. ನೀರೊಳಗಿನ ನೆಳಲಿನಂತೆ ಅಸ್ಪಷ್ಟವಾದ ತಾಯಿನೆಲ ಕೆಳಗೆ ಚಾಚಿಕೊಂಡಿತ್ತು. ಗೆರೆ ಬರೆದ ದಾರಿಗಳು; ಉ ಊ ತಿದ್ದುವ ಹೊಳೆಗಳ ಗುರುತುಗಳು. ಬರುಬರುತ್ತಾ ಮುತ್ತುವ ಕತ್ತಲಲ್ಲಿ ಏನೂ ಕಾಣದಂತಾಗಿ ಕತ್ತಲಲ್ಲಿ ಭೋರಿಡುವ ವಿಮಾನದ ಸದ್ದೊಂದೇ  ಸತ್ಯವಾಯಿತು. ಕೆಳಗೆ ಪರಿಚಿತವಾದ ನೆಲದ ದೀಪದ ಸನ್ನೆಯಿಲ್ಲ : ಮೇಲೆ ಚಿರಪರಿಚಿತವಾದ ನಕ್ಷತ್ರಗಳ ಕಣ್ಣಿಲ್ಲ. ಈ ಕುರುಡು ದಾರಿಯಲ್ಲಿ ನಲ್ವತ್ತೈದು ನಿಮಿಷ ಪ್ರಯಾಣ ಮಾಡಿದ ಮೇಲೆ ಕೆಳಗೆ ಹೈದರಾಬಾದಿನ ಬೆಳಕಿನ ರಂಗೋಲಿ ಕಾಣತೊಡಗಿತು. ಮುತ್ತು ರತ್ನಗಳನ್ನು ಬಿತ್ತಿ ಬೆಳೆದ ಬೆಳಕಿನ ಹೊಲದ ಮೇಲೆ ಇಳಿಯುತ್ತ, ಇಳಿಯುತ್ತ ಹೈದರಾಬಾದಿನ ನೆಲದ ಮೇಲೆ ನಿಂತಿತು ವಿಮಾನ. ವಿಮಾನ ನಿಲ್ಲುವುದು ಮೂವತ್ತು ನಿಮಿಷ ಮಾತ್ರ ಎಂದು ನಮಗೆ ತಿಳಿಸಲಾಯಿತು. ನಾನು ಧಡ ಧಡ ಇಳಿದು, ನಿಲ್ದಾಣದ ಮನೆಯ ಕಡೆ ಧಾವಿಸಿದೆ. ಗಾಜಿನ ಬಾಗಿಲು ದಬ್ಬಿದಾಗ ನಾನು ಮೊದಲೇ ಬರೆದಿದ್ದ ಕಾರಣ, ಹೈದರಾಬಾದಿನ ನನ್ನ ಹಳೆಯ ಗೆಳೆಯರು, ಮಹಾಂತಯ್ಯ ಕಾದಿದ್ದರು. ಅವರು ತಂದ ಬಿಸಿ ಬೋರ‍್ನವಿಟ ಕುಡಿದು ಅದೂ ಇದೂ ಮಾತನಾಡುವ ವೇಳೆಗೆ, ದಿಲ್ಲಿಗೆ ಹೊರಡುವ ವೇಳೆಯಾಯಿತೆಂಬ ಕರೆ ಕೇಳಿತು. ಮತ್ತೊಮ್ಮೆ ರಕ್ಷಣಾ ಸಿಬ್ಬಂದಿಯ ತಡಕು ಪರೀಕ್ಷೆಗೆ ಮೈಯೊಡ್ಡಿ, ಎಂಟು ಗಂಟೆಗೆ ಮತ್ತೆ ವಿಮಾನದೊಳಗೆ ಕೂತದ್ದಾಯಿತು. ಮತ್ತೆ ಯಥಾಪ್ರಕಾರ ಅಂಧಕಾರದಲ್ಲಿ ಒಂದೂಮುಕ್ಕಾಲು ಗಂಟೆಯ ಹಾರಾಟದ ನಂತರ, ದೆಹಲಿಯ ಸಾವಿರ ಬೆಳಕಿನ ಬಲೆ ಕೆಳಗೆ ಹಾಸಿತ್ತು. ವಿಮಾನದಿಂದ ಹೊರಕ್ಕಿಳಿದ ಕೂಡಲೆ ದಿಲ್ಲಿಯ ಉಷ್ಣವಲಯದ ಅನುಭವವಾಯಿತು. ಹಾಕಿಕೊಂಡ ಉಣ್ಣೆಯ ಮುಚ್ಚುಕೋಟಿನೊಳಗಡೆ ಸ್ವೇದಜಲ ನದನದಿಗಳು ಉದ್ಭವಿಸತೊಡಗಿದವು. ವಿಮಾನ ನಿಲ್ದಾಣದಲ್ಲಿ ನಮ್ಮ ಸಾಮಾನುಗಳು ಬಂದು ಬೀಳುವತನಕ ಇನ್ನೊಂದು ಗಂಟೆ ತಪಸ್ಸು, ಅನಂತರ ಟ್ಯಾಕ್ಸಿ ಹಿಡಿದು ರಾಜೇಂದ್ರನಗರದ ಗೆಳೆಯರ ಮನೆಯ ಬಾಗಿಲು ಬಡಿದಾಗ ದೆಹಲಿಗೆ ಆಗಲೇ ತೂಕಡಿಕೆ.