ಜಾನುವಾರುಗಳಿಲ್ಲದ ನಮ್ಮ ಕೃಷಿಯನ್ನಾಗಲೀ ಕೃಷಿಕನನ್ನಾಗಲೀ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಒಕ್ಕಲುಮಕ್ಕಳೆಂದರೆ ಅವರಿಗೆ ಕರಾವಿಗೆ, ಉಳುಮೆಗೆ, ಸಾಗಾಣಿಕೆಗೆ, ಸಗಣಿಗೆ, ಗೊಬ್ಬರಕ್ಕೆ ದನಗಳಿರಲೇ ಬೇಕು. ನಮ್ಮ ಹಳ್ಳಿಗಳು ಹಾಗೇ ಇದ್ದವೂ ಕೂಡ. ಒಬ್ಬೊಬ್ಬರ ಮನೆಯಲ್ಲೂ ಐದು, ಹತ್ತು, ಹದಿನೈದು, ಇಪ್ಪತ್ತು, ಕೆಲವರ ಮನೆಗಳಲ್ಲಿ ಐವತ್ತು ನೂರರವರೆಗೂ ದನ-ಎಮ್ಮೆಗಳಿರುವುದನ್ನು ಕಾಣಬಹುದು. ಕನಕಪುರ, ಚಾಮರಾಜನಗರ ಪ್ರದೇಶದ ಕಾಡುಹಳ್ಳಿಗಳಲ್ಲಿ ದೊಡ್ಡಕುಟುಂಬಗಳು ಇನ್ನೂರರವರೆಗೂ ದನಗಲನ್ನು ಸಾಕಿರುತ್ತಾರೆ. ಪ್ರಸ್ತುತ ಈ ಸಂಖ್ಯೆ ಕಡಿಮೆಯಾಗಿರುವುದಾದರೂ ಸಹ ಹಳ್ಳಿಗಳಲ್ಲಿ ದನ-ಕರುಗಳೊಂದಿಗಿನ ಆ ನಂಟು ಹಾಗೇ ಇದೆ. ಊರ ದನ ಮತ್ತು ಎಮ್ಮೆ ಹಿಂಡುಗಳನ್ನು (ಮಂದೆ ದನ) ನಿಗದಿತ ವ್ಯಕ್ತಿಯೊಬ್ಬ ಕಾಯುವ ಸಂಪ್ರದಾಯ ಈಗಲೂ ಸಹ ಕೆಲವೆಡೆಗಳಲ್ಲಿ ಚಾಲ್ತಿಯಲ್ಲಿದೆ. ಬೀಜದ ಹೋರಿ ಮತ್ತು ಕೋಣವನ್ನು ಸಾಕುವುದು ಹಿಂದೆ ಪ್ರತಿಷ್ಠೆಯ ವಿಷಯವಾಗಿತ್ತು.

ತನ್ನ ಆರಂಬದ ಪ್ರತಿಯೊಂದು ಚಟುವಟಿಕೆಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ದನ-ಕರುಗಳಿಗೆ ವಿಶೇಷ ಗೌರವ ಸಲ್ಲಿಸುವ ರೈತ ತನ್ನ ಮನೆಯಲ್ಲಿ ಯಾವುದೇ ಹಬ್ಬ-ಹರಿದಿನವಾದರೂ ಅವುಗಳಿಗೆ ನಮಿಸುವ ಪರಿಪಾಠ ಇಟ್ಟುಕೊಂಡಿದ್ದಾನೆ. ಮಳೆ ಬಾರದಿದ್ದಾಗ ಎತ್ತಿನ ಶಾಸ್ತ್ರ ಕೇಳುವುದು, ದನಗಲನ್ನು ಓಡಿಸಿ ಯಾವ ಬಣ್ಣದ ದನ ಮುಂದೆ ಬರುತ್ತದೆಯೋ ಆ ಬಣ್ಣದ ಕಾಳು ಈ ವರ್ಷ ಹುಲುಸಾಗುತ್ತದೆ ಎಂದು ನಂಬುವುದು, ದನಗಳಿಗೆ ಕಿಚ್ಚು ಹಾಯಿಸುವುದು ಮುಂತಾದವೆಲ್ಲ ಜಾನುವಾರುಗಳನ್ನೇ ಮುಖ್ಯ ಕೇಂದ್ರವಗಿಟ್ಟುಕೊಂಡ ಆಚರಣೆಗಳು. ಹಾಗೂ ರೈತ ಮತ್ತು ಜಾನುವಾರುಗಳ ಅವಿನಾಭಾವ ಸಂಬಂಧವನ್ನು ಸಾರುವ ಮತ್ತು ಅದನ್ನು ತಲೆಮಾರಿನಿಂದ ತಲೆಮಾರಿಗೆ ಕೊಂಡೊಯ್ಯುವ ಸಾಧನಗಳು.

ಕಾಲ್ನಡೆಗಳ ಬಗ್ಗೆ ಪ್ರಚಲಿತದಲ್ಲಿರುವ ಕೆಲವು ಆಚರಣೆಗಳ ವಿವರ ಇಲ್ಲಿದೆ.

ದನಗಳ ದೇಸೀ ದೀಪಾವಳಿ

ನಮಗೆಲ್ಲಾ ತಿಳಿದಿರುವಂತೆ ಮುಂಗಾರು ತನ್ನ ಖದರು ಕಳೆದುಕೊಳ್ಳತೊಡಗಿ ಹಿಂಗಾರು ಮೆಲ್ಲಗೆ ಕಾಲಿಡುವ ಸಂದರ್ಭದಲ್ಲಿ ದೀಪಾವಳಿ ಸಂಭ್ರಮ.  ಅದೇ ತಾನೆ ತೆನೆ ಕೀಳುತ್ತಿರುವ ಪೈರಿಗೆ ಪೂಜೆ-ಪುನಸ್ಕಾರ ಸಲ್ಲಿಸಿದ ರೈತರು ದಣಿವಾರಿಸಿಕೊಳ್ಳುವ ಕಾಲವದು.  ದನ-ಕರುಗಳಿಗೂ ಸಹ ಬಿಡುವಿನ ಕಾಲ. ಆಗ ಬರುವ ದೀಪಾವಳಿ ಹಬ್ಬವನ್ನು ದನಗಳ ಪೂಜೆಗೆ ಮೀಸಲಾಗಿರಿಸುವುದು ರೈತರ ವಿಶೇಷ. ಅದಕ್ಕಾಗೇ ಈ ಹಬ್ಬಕ್ಕೆ ಹಟ್ಟಿ ಹಬ್ಬ ಎಂಬ ಹೆಸರೇ ಇದೆ. ಹಟ್ಟಿ ಹಬ್ಬ, ದೀವಳಿಗೆ ಹಬ್ಬ, ದೊಡ್ಡ ಹಬ್ಬ, ಪಣತಿ ಹಬ್ಬ – ಹೀಗೆ ದೀಪಾವಳಿಗೆ ಹಲವು ಹೆಸರುಗಳಿವೆ. ದೇಸಿ ದೀಪಾವಳಿ ನೋಡುವ ಆಸೆ ಇರುವವರು ಅಂದು ರೈತರ ಹಟ್ಟಿಗೆ ಬರಬೇಕು. ಅದರಲ್ಲಿಯೂ ಮಲೆನಾಡಿನಲ್ಲಿ ಇದು ಬಲು ಜೋರು.  ಅಲ್ಲಿ ಬಸವನಿಗೆ ಬಾಸಿಂಗ ಕಟ್ಟುವುದೇನು? ಅವನ ಮದುವೆ ಸಂಭ್ರಮವೇನು? 

ದೀಪಾವಳಿ ಮೂರು ದಿನಗಳ ಆಚರಣೆ, ನರಕ ಚತುರ್ದಶಿ, ಲಕ್ಷ್ಮೀಪೂಜೆ ಹಾಗೂ ಬಲಿಪಾಡ್ಯಮಿ- ಈ ಮೂರು ಆಚರಣೆಗಳು ಒಂದೊಂದು ದಿನ ನಡೆಯುತ್ತವೆ. ನರಕಾಸುರ ಎನ್ನುವ ದೈತ್ಯನನ್ನು ಶ್ರೀಕೃಷ್ಣ ಸಂಹರಿಸಿದ ದಿನದ ನೆನಪಿಗಾಗಿ ನರಕ ಚತುರ್ದಶಿಯನ್ನು ಆಚರಿಸುತ್ತಾರೆ. ಇದಕ್ಕೆ `ನೀರು ತುಂಬುವ ಹಬ್ಬ’ ಎಂದೂ ಕರೆಯಲಾಗುತ್ತದೆ.  ಮಲೆನಾಡಿನ ಊರುಗಳಲ್ಲಿ ಇದಕ್ಕೆ ಬೂರೆ ನೀರು ಎಂಬ ಮತ್ತೊಂದು ಹೆಸರಿನಿಂದಲೂ ಕರೆಯುತ್ತಾರೆ. ಹಬ್ಬದ ಹಿಂದಿನ ದಿನವೇ ಬೂರೆ ಹಾಯುವ ಸಂಪ್ರದಾಯ ಇಲ್ಲಿದೆ.

ಬೂರೆ ಹಾಯುವುದು ಎಂದರೆ ಒಂದು ರೀತಿಯಲ್ಲಿ ಹುಸಿ ಕಳ್ಳತನ, ಊರಿನ ಯುವಕರು ಹಾಗೂ ಹಿರಿಯರು ರಾತ್ರಿ ವೇಳೆ ಮನೆಗಳಲ್ಲಿ ಬೆಳೆದ ತರಕಾರಿ, ಹಣ್ಣು, ಹೂವು ಹಾಗೂ ದವಸ ಧಾನ್ಯಗಳನ್ನು `ಕದ್ದು’ ತಂದು ದೇವರ ಗುಡಿಯಲ್ಲಿ ಇಟ್ಟು ನರಕ ಚತುರ್ದಶಿಯ ದಿನ ಅದೇ ತರಕಾರಿ ಧಾನ್ಯಗಳಿಂದ ಪ್ರಸಾದ ತಯಾರಿಸಿ ಮನೆ-ಮನೆಗೂ ಹಂಚುತ್ತಾರೆ.

ಮಾರನೆ ದಿನ ಮನೆಗೆ ಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಪೂಜೆ ನಡೆಯುತ್ತದೆ.  ಅಂದು ಯಾರೂ ಯಾರಿಗೂ ಸಾಲ ಕೊಡುವುದಿಲ್ಲ.  ಸಾಲ ಕೊಟ್ಟರೆ ವರ್ಷ ಪೂರ್ತಿ ಲಕ್ಷ್ಮೀ ಕೈಬಿಟ್ಟು ಹೋಗುತ್ತಾಳೆ ಎಂಬ ಆತಂಕ ಜನರಿಗೆ.        ನಂತರದ್ದು ಬಲಿಪಾಢ್ಯಮಿ. ಬಸವನಿಗೆ-ಅರ್ಥಾತ್ ದನ-ಕರುಗಳಿಗೆ ವಿಶೇಷ ದಿನ.   ಈ ದಿನ ರೈತರ ಹಟ್ಟಿಯಲ್ಲಿ ಹಬ್ಬದ ಸಂಭ್ರಮಕ್ಕೆ ವಿಶೇಷ ಕಳೆ. ಈ ಸಂಭ್ರಮ ಪಾಢ್ಯಮಿಯ ಹಿಂದಿನ ಅಮಾವಾಸ್ಯೆಯ ದಿನವೇ ಆರಂಭವಾಗುತ್ತದೆ.  ಚೆಂಡು ಹೂ ಕೊಯ್ದು, ಬಾಳೆ ಪಟ್ಟೆಯಲ್ಲಿ ಅಥವಾ ಪುಂಡಿ ನಾರಿನಲ್ಲಿ ಮಾಡಿದ ಹಗ್ಗದಲ್ಲಿ ಹೂ ಪೋಣಿಸಿ ಮಾಲೆಗಳನ್ನು ತಯಾರಿಸುತ್ತಾರೆ.  ಹಿರಿಯರಿಂದ ಕವಲು ನಾರಿನಲ್ಲಿ ಹೊಸ ಹಗ್ಗ ತಯಾರಾಗುತ್ತದೆ.  ಹೂ ಮಾಲೆ ಆದ ನಂತರ ಅಡಿಕೆ ಮಾಲೆ, ಸಿಂಗಾರದ ಮಾಲೆ ಮುಂತಾಗಿ  ನಾಲ್ಕೈದು ಮಾಲೆಗಳು ಸಿದ್ಧವಾಗುತ್ತವೆ.

`ಕವಲು’ (ಕವ್ಲು) ಗಿಡದಲ್ಲಿ ಮಾಡಿದ ಹಗ್ಗ ಪೂಜೆಗೆ ಪವಿತ್ರ ಎಂಬ ಪ್ರತೀತಿ ರೈತಾಪಿಗಳಲ್ಲಿ ಇದೆ.  ನೆಲದಲ್ಲಿ ವಿಸ್ತಾರವಾಗಿ ಬಿಟ್ಟಿರುವ ಕವ್ಲು ಗಿಡದ ಬೇರುಗಳನ್ನು ಅಗೆದು, ಅದನ್ನು ಚೆನ್ನಾಗಿ ನಾದು ಮಾಡಿ ಹಗ್ಗ ತಯಾರಿಸಿ, ಎತ್ತು ಕರುಗಳನ್ನು ಕಟ್ಟುತ್ತಾರೆ.  ಅಮ್ದು ನಕ್ಷತ್ರಾಕಾರದ ಚಪ್ಪೆ ರೊಟ್ಟಿ ವಿಶೆಷ ಅಡುಗೆ.

ಮುಂಜಾನೆಯೇ ರೈತರು ಹಿಂದಿನ ದಿನವೇ ಮೈ ತೊಳೆದ ಜಾನುವಾರುಗಳನ್ನು ಹಟ್ಟಿಯಿಂದ ಹೊರಗೆ ಕಟ್ಟುತ್ತಾರೆ. ನಂತರ ಹಟ್ಟಿಯನ್ನು ಸಾರಿಸಿ ಅಲ್ಲಿ `ಹಟ್ಟೆವ್ವ’ನನ್ನು ಪ್ರತಿಷ್ಠಾಪಿಸಲಾಗುತ್ತದೆ.  ಆಕಳ ಸಗಣಿಯಿಂದ ಶಂಕುವಿನಾಕಾರದಲ್ಲಿ ಮೈದಳೆದ ಹಟ್ಟೆವ್ವನಿಗೆ ವಿವಿಧ ಹೂವುಗಳಿಂದ, ಜೋಳದ ದಂಟು-ಧಾನ್ಯಗಳಿಂದ ಅಲಂಕರಿಸಲಾಗುತ್ತದೆ.  ಇದು ದೊಡ್ಡ ಹಟ್ಟೆವ್ವನ ಕಥೆ.  ಇದೇ ರೀತಿ ಚಿಕ್ಕ ಹಟ್ಟೆವ್ವಗಳನ್ನು ಮನೆಯ ವಿವಿದೆಡೆ ಪೂಜಿಸಲಾಗುತ್ತದೆ. ಆ ನಂತರ  ಕುಸುರಿ ಕೆಲಸ ಪ್ರಾರಂಭ.

ಜಗಲಿಯಿಂದ ಮನೆಯ ಮುಂಬಾಗಿಲವರೆಗೆ ಕೆಮ್ಮಣ್ಣು ಪಟ್ಟಿ ಬರೆದು, ಪಟ್ಟಿಯ ಮಧ್ಯದಲ್ಲಿ ಎರಡೆರಡು ಸುಣ್ಣದ ಬಟ್ಟಲು ಇಡಲಾಗುತ್ತದೆ.  ಅನಂತರ ಎರಡೂ ಮುಷ್ಠಿಗಳನ್ನು ಸುಣ್ಣದಲ್ಲಿ ಅದ್ದಿ ಮನೆಯ ಹೊರಗಿನಿಂದ ದೇವರ ಕೋಣೆಯವರೆಗೆ ಗೋಪಾದದಂಥ ಗುರುತುಗಳನ್ನು ಮೂಡಿಸಲಾಗುತ್ತದೆ.  ಒನಕೆ, ಕಡೆಗೋಲು, ಕುಡುಗೋಲುಗಳಂಥ ವಸ್ತುಗಳಿಗೂ ಪೂಜೆ, ಪಾಯಸದ ಎಡೆ ಸಲ್ಲುತ್ತದೆ.

ಸಾಗರದ ಕಡೆ ಎತ್ತುಗಳಿಗೆ ಬಾಸಿಂಗ ಹಾಕುವ ಪದ್ಧತಿ ಇದೆ.  ಇದಕ್ಕೆ ಹಟ್ಟಿ ಮದುವೆ ಎಂದು ಕರೆಯಲಾಗುತ್ತದೆ.  ಬಾಸಿಂಗ ಎಂದರೆ ಹೂವಿನ ಕೋಲುಗಳಿಂದ ಮಾಡಿದ ಬಾಸಿಂಗ.  ಕೇವಲ ಚೆಂಡು ಹೂವಿನಲ್ಲಿ ಮಾಡುವ ಬಾಸಿಂಗಕ್ಕೆ ತನ್ನದೇ ಇತಿಹಾಸವಿದೆ.  ಬಿದಿರು ಕೋಲುಗಳಿಂದ ತ್ರಿಕೋನಾಕಾರದಲ್ಲಿ ಮಾಡಿದ ಬಾಸಿಂಗಕ್ಕೆ ಪೂಜೆ ಸಲ್ಲಿಸಿ, ಕೃಷಿ ಕೆಲಸದಲ್ಲಿ ಬಳಸುವ ಎರಡು ಎತ್ತುಗಳಿಗೆ ಮಾತ್ರ ಜೋಡಿಸಲಾಗುತ್ತದೆ.  ಅವುಗಳನ್ನು ಮದುಮಗ ಎಂದು ಕರೆಯುವ ಹಳ್ಳಿಗರು ಅಡಿಕೆ ಸರದ ಮಾಲೆ, ಹೂವಿನ ಮಾಲೆ, ಚಪ್ಪೆ ರೊಟ್ಟಿ ಮಾಲೆ ಹಾಕಿದ ಹಸುಗಳನ್ನು ಮದುವಣಗಿತ್ತಿ ಎಂದು ಕರೆದು ಮದುವೆಯ ಸಂಭ್ರಮ ಅನುಭವಿಸುತ್ತಾರೆ.  ಹಟ್ಟಿಯ ಬಾಸಿಂಗ ದೀಪಾವಳಿಯ ವಿಶೇಷ.

ಹಟ್ಟಿಯಲ್ಲಿಯೇ ಪೂಜೆ ಮಾಡಿ, ದನಕರುಗಳಿಗೆ ಕಡುಬು ಸೇರಿದಂತೆ ಇನ್ನಿತರ ಆಹಾರಗಳನ್ನು ತಿನ್ನಲು ನೀಡಿದ ನಂತರ ಎತ್ತಿನ ಮೆರವಣಿಗೆ ಆರಂಭವಾಗುತ್ತದೆ.  ರಾಜ್ಯದ ಉಳಿದ ಭಾಗಗಳಲ್ಲಿ ಸಂಕ್ರಾಂತಿಯಂದು ನಡೆಸುವ ಕಿಚ್ಚು ಹಾಯಿಸುವ ಆಚರಣೆ ಮಲೆನಾಡು ಭಾಗದಲ್ಲಿ ದೀಪಾವಳಿಯ ಸಂದರ್ಭದಲ್ಲಿದೆ.

ಹೀಗೆ ಜಾನುವಾರುಗಳಿಗೆ ಗೌರವ ಸಲ್ಲಿಕೆ ಒಂದೆಡೆಯಾದರೆ, ಚರ್ಮವ್ಯಾಧಿಗೆ ಔಷಧೋಪಚಾರ ಮಾಡುವುದು ಇನ್ನೊಂದೆಡೆ ನಡೆಯುತ್ತದೆ. ಜೇಡಿ ಹಾಗೂ ಕೆಮ್ಮಣ್ಣಿನಿಂದ ಮಾಡಿದ ಡಾಬುವನ್ನು ದನಕರುಗಳ ಮೈಮೇಲೆ ಅಕ್ಕಿ, ಭತ್ತ ಅಳೆಯುವ ಗಿದ್ನ ಅಥವಾ ಸೇರಿನ ಡಬ್ಬದಿಂದ ತಾಗಿಸಿದರೆ ಕಾಡು ನೊಣಗಳು ಇವುಗಳ ರಕ್ತ ಹೀರುವುದನ್ನು ಬಿಡುತ್ತವೆ ಎಂಬ ನಂಬಿಕೆ ಇದೆ.  ಇದು ಹಳ್ಳಿಗರ ಔಷಧೋಪಚಾರ. ದೀಪಾವಳಿ ಸಮಯದಲ್ಲಿ ಬಲಿತಿರುವ ನೊಣಗಳು, ಕೆಮ್ಮಣ್ಣಿನಿಂದ ಮಾಡಿದ ಡಾಬು ಹಚ್ಚಿದ ನಂತರ ದನಗಲ ಹತ್ತಿರವೂ ಬರುವುದಿಲ್ಲವಂತೆ.  ಕಿಚ್ಚು ಹಾಯಿಸಿದ ನಂತರ ಗದ್ದೆ ಪೂಜೆ, ಮಧ್ಯಾಹ್ನದ ಸಮಯದಲ್ಲಿ ಊರ ಮುಂದಿನ ಜಾಗದಲ್ಲಿ ಗ್ರಾಮೀಣ ಆಟ, ಮರದಲ್ಲಿ ಕಾಯಿ ಕಟ್ಟಿ ಕೋಯಿಯಿಂದ ಹೊಡೆಯುವ ಆಟ, ಹೀಗೆ ದೇಸೀ ದೀಪಾವಳಿ ಸಂಭ್ರಮಿಸುತ್ತದೆ.

ಕಂಬಳ 

ತುಳುನಾಡಿನ ಕೃಷಿಕರಲ್ಲಿ ಹಿಂದಿನಿಂದಲೂ ಹತ್ತು ಹಲವು ರೀತಿಯ ಮನರಂಜನೆಯ ಸ್ಪರ್ದೆಗಳು ಬಳಕೆಯಲ್ಲಿವೆ. ಇಲ್ಲಿನ ಗ್ರಾಮೀಣ ಜನರ ಮುಖ್ಯ ಕಸುಬು ಬೇಸಾಯ. ಅದರಲ್ಲೂ ಮುಖ್ಯವಾಗಿ ಭತ್ತ ಇಲ್ಲಿನ ಮುಖ್ಯ ಬೆಳೆ. ನೀರಿನ ಆಸರೆಯಲ್ಲಿರುವ ಕಡೆ ವರ್ಷಕ್ಕೆ ಎಣೆಲು, ಸುಗ್ಗಿ ಮತ್ತು ಕೊಳಕೆ ಎಂಬ ಮೂರು ಬೆಳೆ ಬೆಳೆಯುತ್ತಾರೆ. ಎಣೆಲು ಬೆಳೆ ಮುಗಿದು ಸುಗ್ಗಿ ಬೆಳೆಯನ್ನು ಇಡುವ ಮುಂಚೆ ಗದ್ದೆಗಳಲ್ಲಿ ಕಂಬಳ ಸ್ಪರ್ದೆ ನಡೆಯುತ್ತದೆ. ಕಂಬಳ ಎಂದರೆ ಚೆನ್ನಾಗಿ ಉತ್ತು ಕೆಸರು ಮಾಡಿ ನೀರು ನಿಲ್ಲಿಸಿರುವ ವಿಶೇಷ ಸ್ಥಳಗಳಲ್ಲಿ ಕೋಣಗಳ ಜೋಡಿಯನ್ನು ಓಡಿಸುವ ರೋಮಾಂಚಕ ಕ್ರೀಡೆ.

ಕಂಬಳ ಎಂದರೆ ಕೆಸರು ಗದ್ದೆ ಎಂಬ ಅರ್ಥವೂ ಇದೆ. ಇದು ದಕ್ಶಿಣ ಕನ್ನಡ, ಕಾಸರಗೋಡು ಪ್ರದೇಶಗಳ ಅತ್ಯಂತ ಪುರಾತನ ಕ್ರೀಡೆ. ಜೋಡಿ ಕೋಣಗಳಿಗೆ ನೊಗ, ಹಲಗೆ ಹೂಡಿ ಬಿಸಿಲಿಗೆ ಮಿರ-ಮಿರನೆ ಮಿಂಚುವ ಕೊಬ್ಬಿದ ಕೋಣಗಳ ಬೆನ್ನ ಹಿಂದೆ ಹಗ್ಗ ಹಿಡಿದು ಓಡುವ ರೈತಾಪಿಗಳ ಸಾಹಸ ಪದಗಳಿಗೆ ನಿಲುಕದ್ದು, ಹಾಗೆ ಓಡುವಾಗ ಎತ್ತರಕ್ಕೆ ಕೆಸರು ಚಿಮ್ಮಿಸುವ ಮತ್ತು ವೇಗದ ಅಂಶವನ್ನಾಧರಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ.

ನಾಲ್ಕನೇ ಶತಮಾನದಿಂದಲೇ ಈ ಸ್ಪರ್ದೆ ಚಾಲ್ತಿಯಲ್ಲಿದ್ದ ಬಗ್ಗೆ ಮಾಹಿತಿ ಲಭ್ಯವಿದೆ, ಆಗ ತುಳುನಾಡನ್ನು ಆಳುತ್ತಿದ್ದ ತುಳುಪ ಅರಸರು ಮನರಂಜನೆಗಾಗಿ ಕೋಣಗಳ ಓಟವನ್ನು ಏರ್ಪಡಿಸುತ್ತಿದ್ದರು. ಅದನ್ನು ಅರಸು ಕಂಬಳ ಎನ್ನುತ್ತಿದ್ದರು. ಪ್ರತಿವರ್ಷ ಇವು ನಡೆಯುತ್ತಿದ್ದವು. ತುಳುಭಾಷೆಯ ಪಾಡ್ದನಗಳಲ್ಲಿಯೂ ಸಹ ಕಂಬಳದ ಬಗೆಗೆ ಮಾಹಿತಿ ಇರುವುದನ್ನು ಕಾಣಬಹುದು.

 

ನರಕ ಚತುರ್ದಶಿ ಕತೆ

ನರಕ ಚತುರ್ದಶಿ ಮತ್ತು ದೀಪಾವಳಿ ಆಚರಣೆಗೆ ಹಿನ್ನೆಲೆಯಾಗಿ ನಮ್ಮ ಜನಪದರಲ್ಲಿ ಒಂದು ಸುಂದರ ಕತೆಯಿದೆ. ನರಕ ಚತುರ್ದಶಿ ಅಂದರೆ ನರಕಾಸುರ ಸತ್ತ ದಿನ. ಅದಕ್ಕೂ ಕೃಷಿಕರಿಗೂ, ದನಗಳ ಪೂಜೆಗೂ ಎಲ್ಲಿಂದೆಲ್ಲಿಯ ಸಂಬಂಧ ಅನ್ನುವುದನ್ನು ಈ ಕತೆ ತಿಳಿಸುತ್ತದೆ.

ಶ್ರೀಕೃಷ್ಣನ ದ್ವಾರಕಾ ನಗರಿ ಅಂದಿನ ಕಾಲಕ್ಕೆ ವ್ಯವಸಾಯ ಮತ್ತು ಹೈನುಗಾರಿಕೆಗೆ ಬಹು ಪ್ರಸಿದ್ಧ. ಹಾಲು ಮೊಸರು ಬೆಣ್ಣೆ ತುಪ್ಪಗಳ ಹೊಳೆ ಪ್ರತಿ ನಿತ್ಯ. ಇಡೀ ವಹಿವಾಟು ಮಹಿಳೆಯರ  ಕೈಯಲ್ಲಿ. ಎಲ್ಲಿ ನೋಡಿದರೂ ಸಮೃದ್ಧಿ. ಈಗಿನ ಅಸ್ಸಾಂ ಬಳಿಯ ಪ್ರಾಗ್‌ಜ್ಯೋತಿಷಪುರದ ಅರಸ ನರಕಾಸುರನಿಗೆ ದ್ವಾರಕೆಯ ಸಮೃದ್ಧಿಯ ಸುದ್ದಿ ತಿಳಿಯುತ್ತದೆ. ತಕ್ಷಣ ದ್ವಾರಕೆಗೆ ಬಂದ ಆತ ಅಲ್ಲಿನ ನದಿ ತೀರದ ಕಾಡಿನಲ್ಲಿ ಅವಿತು ಕುಳಿತ.

ನದಿಗೆ ನೀರಾಡಿಕೆಗೆ ಬಂದ ದನ-ಕರುಗಳನ್ನು ಕದ್ದು ತಿಂದ, ನೀರೊಯ್ಯಲು ಬಂದ ಗೋಪಿಕೆಯರನ್ನು ಅಪಹರಿಸಿದ. ಬಹಳ ದಿನ ಹೀಗೇ ನಡೆಯುತ್ತಿರಲು, ಅಪಾರ ಪ್ರಮಾಣದಲ್ಲಿ ಕಾಣೆಯಾದ ಗೋವುಗಳು ಮತ್ತು ಗೋಪಿಕೆಯರ ಬಗ್ಗೆ ದ್ವಾರಕೆಯಲ್ಲಿ ಕೋಲಾಹಲವಾಯಿತು. ಸುದ್ದಿ ಕೃಷ್ನ-ಬಲರಾಮರನ್ನೂ ಮುಟ್ಟಿತು. ಅವರು ಕಾಡು ಹೊಕ್ಕಿದ ನರಕಾಸುರನ್ನು ಹುಡುಕಿ ಹಿಡಿದರು. ಕಾಡಿನಲ್ಲಿದ್ದ ಹಸಿರು ಬಳ್ಳಿಯೊಂದರಿಂದ ಅವನ ಕುತ್ತಿಗೆ ಬಿಗಿದು ಕೊಂದು ಹಾಕಿದರು. ಅವನನ್ನು ಕೊಲ್ಲಲು ಬಳಸಿದ ಬಳ್ಳಿಯೇ ಮಾಲಿಂಗನ ಬಳ್ಳಿ. ಅದು ಪೂಜನೀಯವಾಯಿತು. ಮಲಿನಗೊಂಡಿದ್ದ ನದಿ ಪವಿತ್ರವಾಗಿ ನೀರಿನ ಪೂಜೆ ಆರಂಭವಾಯಿತು.

ನರಕಾಸುರನನ್ನು ಸಂಹರಿಸಿದ ನೆನಪಿಗಾಗಿ ದ್ವಾರಕೆಯಲ್ಲಿ ದೊಡ್ಡ ಹಬ್ಬವೇ ಪ್ರಾರಂಭವಾಯಿತು. ದನಗಳ ಪೂಜೆಗೊ ಇದೇ ಮೂಲ. ಹೀಗೆ ಕಾರ್ತೀಕ ಶುದ್ಧ ಪಾಡ್ಯದ ದಿನ ಶ್ರೀಕೃಷ್ಣನ ಪ್ರೀತಿಯ ಗೋವುಗಳಿಗೆ ಪೂಜಾ ದಿನವಾಯ್ತು. ಇಂದಿಗೂ ಸಹ ಮಾಲಿಂಗನ ಬಳ್ಳಿಯನ್ನು ಹಬ್ಬದ ದಿನ ದನಗಳ ಕೊರಳಿಗೆ ಹಾಕುವುದನ್ನು ನೋಡಬಹುದು.

ಕಂಬಳದಲ್ಲಿ ಸ್ಪರ್ದೆಗಿಳಿಸುವ ಕೋಣಗಳನ್ನು ಅತಿ ಕಾಳಜಿಯಿಂದ ಸಾಕಲಾಗುತ್ತದೆ. ಇದೊಂದು ಶ್ರದ್ಧೆಯ ಹಾಗೂ ಮುತುವರ್ಜಿಯ ಕೆಲಸ. ಕಂಬಳದ ಕೋಣದ ಮರಿಯನ್ನು ಆರಿಸುವುದರಿಂದ ಮೊದಲ್ಗೊಂಡು ಅದಕ್ಕೆ ಮೇವು ನೀಡುವುದು, ಸಂಜ್ಞೆಗಳನ್ನು ಕಲಿಸುವುದು, ಪಳಗಿಸುವುದು ಮುಂತಾದವುಗಳ ಜ್ಞಾನ ಪರಂಪರೆಯಿಂದ ಬಂದುದಾಗಿರುತ್ತದೆ. ಅದೊಂದು ವಿದ್ಯೆ, ಅದಕ್ಕಾಗಿಯೇ ವಿಶೇಷ ಜನರನ್ನು ನೇಮಿಸಿಕೊಳ್ಳುತ್ತಾರೆ. ಪ್ರೀತಿಯಿಂದ ಸಾಕಿದ ಈ ಕೋಣಗಳು ಯಜಮಾನ ಅಥವಾ ಪಳಗಿಸಿದ ಆಳು ಹೇಳಿದಂತೆ ಕೇಳುತ್ತವೆ. ಎಮ್ಮೆ ಜಾತಿಗೆ ಬುದ್ದಿ ಕಡಿಮೆ ಎಂದು ಹೇಳುವವರು ಈ ಕೋಣಗಳ ಚಾಲೂಕುತನವನ್ನು ನೋಡಿದರೆ ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುತ್ತಾರೆ. ಅವು ತಮ್ಮ ಯಜಮಾನ ಮಲಗು ಎಂದರೆ ಮಲಗುತ್ತವೆ, ಏಳು ಅಂದರೆ ಏಳುತ್ತವೆ, ಬಗ್ಗಿ ನಡಿ ಎಂದರೆ ಮುಂಗಾಲು ಮಡಿಚಿ ನಡೆಯುವುದೂ ಉಂಟು. 

 

ಕಂಬಳದ ಓಟದಲ್ಲಿ ಭಾಗವಹಿಸುವ ಕೋಣಗಳನ್ನು ಗದ್ದೆ ಉಳುಮೆಗಾಗಲೀ ಅಥವಾ ಇತರ ಕೆಲಸಗಳಿಗಾಗಲೀ ಬಳಸುವುದಿಲ್ಲ. ಎಷ್ಟೋ ಬಾರಿ ಅವುಗಳನ್ನು ಕೊಟ್ಟಿಗೆಯಿಂದ ಹೊರಗೇ ಬಿಡುವುದಿಲ್ಲ. ಇತರ ಎಮ್ಮೆ ಅಥವಾ ಕೋಣಗಳ ಜೊತೆಗೂ ಸೇರಿಸುವುದಿಲ್ಲ.  ಜನರ ದೃಷ್ಟಿ ತಾಗುತ್ತದೆಂಬ ಕಾರಣಕ್ಕಾಗಿ ಈ ರೀತಿ ಮಾಡುತ್ತಾರೆ. ಕಂಬಳದ ಕೋಣಗಳನ್ನು ತುಳು ಭಾಷೆಯಲ್ಲಿ ಗಿಡ್ದೆರು ಎನ್ನುತ್ತಾರೆ.  ಈ ಗಿಡ್ದೆರುಗಳು ಕೊಟ್ಟಿಗೆಯ ತಂಪಿನಲ್ಲಿ, ಉತ್ತಮ ಆರೈಕೆಯಲ್ಲಿ ಕೊಬ್ಬಿ ಬೆಳೆದು ಮಿರ-ಮಿರನೆ ಮಿಂಚುತ್ತಿರುತ್ತವೆ. ನೋಡಲು ಭಯ ಹುಟ್ಟಿಸುವ ಆಕೃತಿ ಇವುಗಳದ್ದು, ಅಪರಿಚಿತರು ಬಂದರೆ ಸಿರ-ಬುಸ ಎಂದು ಗಲಾಟೆ ಮಾಡುತ್ತವೆ.

ಇವಕ್ಕೆ ದೃಷ್ಟಿ ತಾಗದಿರಲಿ ಎಂದು ತರಹೇವಾರಿ ಕ್ರಮಗಳನ್ನು ಕೈಗೊಳ್ಳುತ್ತಾರೆ. ಅವುಗಳ ಕುತ್ತಿಗೆಗೆ ಮಂತ್ರಿಸಿದ ತಾಯಿತ, ಎಡಗಾಲಿನ ಹಳೆಯ ಮೆಟ್ಟು (ಚಪ್ಪಲಿ), ಕಾಸರಕನ ಮರದಲ್ಲಿ ಮಾಡಿದ ತಾಳಿ, ಕಬ್ಬಿಣದ ಇಲ್ಲವೇ ಕಳ್ಳಿ ಗಿಡದ ಉಂಗುರ.. ಹೀಗೆ ಹಲವಾರು ದೄಷ್ಟಿ ನಿವಾರಕ ವಸ್ತುಗಳನ್ನು ಕಟ್ಟುತ್ತಾರೆ. ಇದನ್ನು ಕಟ್ಟುವುದಕ್ಕೂ ಸಹ ಮಾಂತ್ರಿಕರನ್ನು ಕರೆಸುತ್ತಾರೆ. ಅವುಗಳ ಚೋಟುದ್ದದ ಕೊಂಬುಗಳು ಥಳ-ಥಳ ಹೊಳೆಯುವಂತಾಗಲು ಗಾಜಿನ ಚೂರಿನಿಂದ, ಇಲ್ಲವೇ ಅದಕ್ಕಾಗಿಯೇ ಇರುವ ಚಿಕ್ಕ ಕತ್ತಿಯಿಂದ ಎರೆಯುತ್ತಾರೆ, ಎಣ್ಣೆ ಹಚ್ಚಿ ಪಾಲಿಷ್ ಮಾಡುತ್ತಾರೆ. ಹೊಟ್ಟೇಲಿ ಹುಟ್ಟಿದ ಮಕ್ಕಳಿಗಿಂತಲೂ ಮಿಗಿಲಾದ ಆರೈಕೆ, ಕಾಳಜಿ ಕೋಣಗಳಿಗೆ, ಅದೊಂದು ಖಾಯಿಷ್.

ಕಂಬಳದ ಕೋಣಗಳನ್ನು ಸಣ್ಣ ಮರಿಯಾಗಿದ್ದಾಗ ತಂದು ಸಾಕಿ ತಯಾರು ಮಾಡುತ್ತಾರೆ, ಮೈಮೇಲೆ ಕೂದಲುಗಳಿಲ್ಲದ     ಉತ್ತಮ ಜಾತಿಯ ಮರಿಗಳನ್ನು ಹುಷಾರಿನಿಂದ ಆಯ್ಕೆ ಮಾಡಲಾಗುತ್ತದೆ. ಕೋಣದ ಜೊತೆಯನ್ನು ಈಡು ಎಂದು ಕರೆಯುತ್ತಾರೆ, ಈ ಈಡುಗಳಲ್ಲಿ ಒಂದು ಕಪ್ಪಗಿರಬೇಕು ಮತ್ತೊಂದು ಕೆಂಚನೆ ಬಣ್ಣಕ್ಕಿರಬೇಕು ಎಂಬುದು ನಂಬಿಕೆ. ಅಂತಹ ಬಣ್ಣದವನ್ನೇ ನೋಡಿ ತರುತ್ತಾರೆ.

ಇನ್ನು ಅವಕ್ಕೆ ಒದಗಿಸುವ ಮೇವು ಉತ್ಕೃಷ್ಟವಾದದ್ದು, ಅದನ್ನು ಮೇವು ಎನ್ನುವುದಕ್ಕಿಂತ ತಿಂಡಿ ಅಥವಾ ಊಟ ಅನ್ನುವುದೇ ಉತ್ತಮ, ಏಕೆಂದರೆ ಅದು ಹೆಚ್ಚು-ಕಡಿಮೆ ಮನುಷ್ಯರಿಗೆ ಕೊಡುವ ಆಹಾರವೇ ಆಗಿರುತ್ತದೆ ಮತ್ತು ಕೊಡುವ ರೀತಿಯೂ ಸಹ ಹಾಗೇ ಇರುತ್ತದೆ. ಮಾಮೂಲಿ ಎಮ್ಮೆಗಳಿಗೆ ಹಾಕಿದಂತೆ ಕೊಟ್ಟಿಗೆಯ ಗ್ವಾಂದಿಗೆಗೆ ಭತ್ತದ ಹುಲ್ಲನ್ನೋ ಹಸಿ ಮೇವನ್ನೋ ಹಾಕಿ ಬರುವಂತೆ ಕಂಬಳದ ಕೋಣಗಳಿಗೆ ಮಾಡುವುದಿಲ್ಲ. ಹುರುಳಿ ಹಿಟ್ಟು, ಕಡಲೆ ಹಿಂಡಿ, ತೆಂಗಿನ ಹಿಂಡಿ, ಹದವಾಗಿ ಬೇಯಿಸಿದ ಅನ್ನ, ಅಂಬಲಿ ಇತ್ಯಾದಿ ಪೌಷ್ಟಿಕ ಆಹಾರಗಳನ್ನು ಹೊತ್ತು-ಹೊತ್ತಿಗೆ ಸರಿಯಾಗಿ ಸೇವಕರು ತಿನ್ನಿಸುತ್ತಾರೆ. ಮೈಗೆಲ್ಲಾ ಎಳ್ಳಿನ ಎಣ್ಣೆಯನು ಹಚ್ಚಿ, ತಿಕ್ಕಿ ಮಸಾಜು ಮಾಡಿ ಹಬೆಯಾಡುವ ಬಿಸಿ ನೀರಲ್ಲಿ ಸ್ನಾನ ಮಾಡಿಸುತ್ತಾರೆ, ಸಣ್ಣವಿರುವಾಗಲೇ ಆದೇಶಗಳನ್ನು ಪಾಲಿಸುವುದನ್ನೂ ಸಹ ಕಲಿಸುತ್ತಾರೆ. ಹೀಗೆ ತರಬೇತಿ ನೀಡುವುದಕ್ಕೆ ತುಳುಭಾಷೆಯಲ್ಲಿ ಬಾಸೆ ಕಲಿಸುವುದು ಎಂದು ಕರೆಯಲಾಗುತ್ತದೆ. ಬಹುಶಃ ರೇಸಿನ ಕುದುರೆಗಳಿಗೆ ಹೊರತುಪಡಿಸಿದರೆ ಕಂಬಳದ  ಕೋಣಗಳಿಗೇ ಇರಬೇಕು ಈ ಪರಿಯ ಆರೈಕೆ, ಮುತುವರ್ಜಿ ಮತ್ತು ಕಾಳಜಿಗಳಿರುವುದು. ಕುದುರೆ ಸಾಕುವಷ್ಟೆ ಖರ್ಚೂ ಸಹ ಕೋಣ ಸಾಕಲು ಬರುತ್ತದೆ.

ಕಂಬಳದ ಕಾಲ ಬರುವ ಹೊತ್ತಿಗೆ ಕೋಣಗಳ ಈಡು ಸಂಪೂರ್ಣ ಸಜ್ಜಾಗಿರುತ್ತವೆ. ಕಂಬಳದ ದಿನದ ಸಂಭ್ರಮಕ್ಕೆ ಸಾಟಿಯೇ ಇಲ್ಲ. ಭರ್ತಿ ಅರ್ಧ ದಿನದ ಮೆರವಣಿಗೆ. ಮದುಮಕ್ಕಳ ಮೆರವಣಿಗೆ ಇದರ ಮುಂದೆ ಏನೇನೂ ಅಲ್ಲ. ಕೋಣಗಳಿಗೆ ಮಾಡುವ ಸಿಂಗಾರವೇನು? ಅವುಗಳನ್ನು ಮುಂದೆ ಬಿಟ್ಟುಕೊಂಡು ಹಿಂದೆ ನಡೆಯುವವರ ಗತ್ತೇನು? ಅಲ್ಲಿನ ವೈಭವ, ಉಮೇದು ಬಣ್ಣಿಸಲಸದಳ. ಕೋಣಗಳ ಬೆನ್ನ ಮೇಲೆ ಮಕಮಲ್ಲಿನ ಗೌಸು ಹೊದೆಸಿರುತ್ತಾರೆ, ಆ ಗೌಸಿನ ಮೇಲೆ ತರತರದ ಚಿತ್ರಗಳು, ಸೂರ್ಯ-ಚಂದ್ರ, ವಿವಿಧ ಕಸೂತಿಗಳು, ದೇವರ ಚಿತ್ರಗಳು, ಯಜಮಾನರ ಮತ್ತು ಅವರ ಊರಿನ ಹೆಸರು ಮುಂತಾದವುಗಳಿರುತ್ತವೆ. ಕಾಲುಗಳಿಗೆ ಗಗ್ಗರಗಳನ್ನು ಕಟ್ಟಿರುತ್ತಾರೆ, ಅವು ನಡೆದಂತೆಲ್ಲಾ ಘಲ್ಲೆಂದು ಸದ್ದು ಮಾಡುತ್ತವೆ, ಕತ್ತಿಗೆ ಸಣ್ಣ-ಸಣ್ಣ ಘಂಟೆಗಳಿರುವ ಗೆಜ್ಜೆ ಸರ ಹಾಕಿರುತ್ತಾರೆ, ಕತ್ತು ಆಡಿಸಿದಾಗೆಲ್ಲಾ ಅವು ಝಣ್ಣೆಂದು ಸದ್ದು ಮಾಡುತ್ತವೆ. ಕತ್ತು, ಕೊಂಬುಗಳು ಹಾಗೂ ಹೊಟ್ಟೆಗಳಿಗೆ ಸುತ್ತಿದ ಕೆಂಪನೆಯ ಚೆಂಡು ಹೂವಿನ ಹಾರಗಳು. ಕಣ್ಣೆಸರು ಆಗದಿರಲೆಂದು ಎರಡೂ ಕೊಂಬುಗಳ ತುದಿಗೆ ನಿಂಬೆ ಹಣ್ಣುಗಳನ್ನು ಚುಚ್ಚಿರುತ್ತಾರೆ.

ಹೀಗೆ ಅಲಂಕರಿಸಿದ ಕೋಣದ ಈಡುಗಳ ಹಿಂದೆ-ಮುಂದೆ ಮಂದಿ-ಮಾರ್ಬಲದ ಹಿಮ್ಮೇಳ, ಮೆಲ್ಲಗೆ ಸರಿಯುವ ಮೆರವಣಿಗೆಯ ಮುಂಭಾಗದಲ್ಲಿ ತರಹೇವಾರಿ ವಾದ್ಯದದವರ ಹಿಂಡು, ಡೋಲು, ಕೊಂಬು-ಕಹಳೆಯ ಸದ್ದು, ಮೆರವಣಿಗೆ ಅಲ್ಲಲ್ಲಿ ನಿಂತಾಗ ಡಮಾರ್ ಎಂದು ಗುರ್ನಾಲು ಹಾರಿಸಿ ಕೇಕೆ ಹಾಕುವ ಜನ. ಈ ಎಲ್ಲಾ ಸದ್ದುಗಳಿಗೆ ಕೋಣಗಳು ಬೆದರದಂತೆ, ತಲೆ ಕೊಡವಿ ಚಿಮ್ಮದಂತೆ ಅವುಗಳನ್ನು ಆ ಕಡೆ- ಈ ಕಡೆ ಭದ್ರವಾಗಿ ಮಕಾಡ (ದುಡಿ ಬಳ್ಳು) ಹಾಕಿ ಹಿಡಿದ ಆಳುಗಳು. ಒಂದೊಂದು ಕಡೆ ಹಿಡಿಯಲು ಕನಿಷ್ಠ ನಾಲ್ಕು ಜನರಾದರೂ ಇರುತ್ತಾರೆ. ಕೋಣದ ಈಡಿನ ಹಿಂದೆ ಅವುಗಳನ್ನು ಸಾಕಿ-ಸಲಹಿದವರು, ಪಾಠ ಕಲಿಸಿ ಪಳಗಿಸಿದವರು ಮತ್ತು ವಿಶೇಷ ಗತ್ತಿನಿಂದ ಗಂಭೀರವಾಗಿ ನಡೆಯುವ ಯಜಮಾನ. ಯಜಮಾನರನ್ನೂ ಮೊದಲ್ಗೊಂಡು ಎಲ್ಲರೂ ತಲೆಗೆ ಕೆಂಪು ಬಣ್ಣದ ರುಮಾಲು ಸುತ್ತಿರುತ್ತಾರೆ, ಯಜಮಾನರ ಕೈಯಲ್ಲಿ ಚಿನ್ನದ ಕಡಗ ಹೊಳೆಯುತ್ತಿರುತ್ತದೆ. ಅವರ ಪಕ್ಕದಲ್ಲಿ ಅಂದಿನ ದಿನ ಕಂಬಳದಲ್ಲಿ ಕೋಣಗಳನ್ನು ಓಡಿಸುವ ಓಟಗಾರನೂ ನಡೆಯುತ್ತಿರುತ್ತಾನೆ. ಇವರಷ್ಟೇ ಅಲ್ಲದೆ ಸ್ಪರ್ದೆಗೆ ಅಗತ್ಯವಾಗಿ ಬೇಕಾದ ಸಲಕರಣೆಗಳಾದ ಹಲಗೆ, ಹಗ್ಗಗಳು, ನೊಗ ಮುಂತಾದವುಗಳನ್ನು ಹಿಡಿದ ಅಳುಗಳ ದಂಡೂ ಬರುತ್ತಿರುತ್ತದೆ. ಅಕ್ಷರಶಃ ಯುದ್ದಕ್ಕೆ ಹೊರಟ ದಂಡಿನ ರೀತಿ ಆ ಮೆರವಣಿಗೆ ಇರುತ್ತದೆ, ಎಲ್ಲರ ಮುಖದಲ್ಲಿ-ಕೋಣಗಳನ್ನೂ ಸಹ ಒಳಗೊಂಡಂತೆ- ಸಂಭ್ರಮ, ನಿರೀಕ್ಷೆ, ಆತಂಕ, ಕುತೂಹಲದ ಭಾವಗಳ ಸಮ್ಮಿಲನ.

ಹೀಗೆ ವಿವಿಧ ಭಾಗಗಳಿಂದ ಹೊರಟ ಮೆರವಣಿಗೆಗಳು ಕಂಬಳ ನಡೆಯುವ ಸ್ಥಳಕ್ಕೆ ಬಂದು ಸೇರುತ್ತವೆ, ಅಲ್ಲಿ ಈಗಾಗಲೇ ಕಂಬಳ ನಡೆಯುವ ಅಂಕವನ್ನು ಸಿದ್ಧಪಡಿಸಲಾಗಿರುತ್ತದೆ. ಆ ಅಂಕವು ಸಾಮಾನ್ಯವಾಗಿ ಮುನ್ನೂರರಿಂದ ೪೫೦ ಅಡಿಗಳಷ್ಟು ಉದ್ದವಿರುತ್ತದೆ, ಈ ಉದ್ದವನ್ನು ಕೋಲು ಎಂದು ಕರೆಯುತ್ತಾರೆ, ನೂರು ಕೋಲು ಅಂದರೆ ಮುನ್ನೂರು ಅಡಿಗಳು. ಕಂಬಳದ ಅಕ್ಕ-ಪಕ್ಕ ನೋಡುವವರಿಗೆ ಅನುಕೂಲವಾಗುವಂತೆ ಎತ್ತರದ ಸ್ಥಳವಿರುತ್ತದೆ.

ಕೋಣಗಳು ಸ್ಪರ್ದೆಯ ಸ್ಥಳ ಸೇರಿದ ತಕ್ಷಣ ಮಾಡುವ ಕೆಲಸ ಅವುಗಳ ಹಣೆಗೆ ಪಣೆನೊಗ ಕಟ್ಟುವುದು, ಅಂದರೆ ಅವುಗಳ ಹಣೆಗೆ ಮತ್ತು ಹೆಗಲಿನ ಮೇಲಿರುವ ನೊಗಕ್ಕೆ ಸೇರಿಸಿ ಅಡಿಕೆ ಮರದಲ್ಲಿ ಮಾಡಿದ ಎರಡು ಅಂಗುಲ ವ್ಯಾಸದ ದೊಣ್ಣೆಯನ್ನು ಬಿಗಿಯಾಗಿ ಎಳೆದು ಕಟ್ಟುವುದು. ಓಟದಲ್ಲಿ ಈ ಪಣೆಹಗ್ಗದ ಪಾತ್ರ ಅತ್ಯಂತ ಮುಖ್ಯವಾಗಿರುವುದರಿಂದ ನುರಿತವರು, ಅನುಭವಿಗಳು ಮಾತ್ರ ಈ ಕೆಲಸಕ್ಕೆ ನಿಯೋಜಿತವಾಗಿರುತ್ತಾರೆ. ಇಲ್ಲಿ ಹಲವಾರು ರೀತಿಯ ಹಗ್ಗಗಳನ್ನು ಬಳಸುತ್ತಾರೆ, ಪ್ರತಿಯೊಂದು ಉದ್ದೇಶಕ್ಕೂ ಬೇರೆ-ಬೇರೆ ರೀತಿಯ ಹೆಸರಿನ ಹಗ್ಗಗಳಿರುತ್ತವೆ. ಅವುಗಳ ಪ್ರತಿಯೊಂದರ ಉದ್ದ, ರಚನೆ, ಬಿಗಿತಗಳೂ ವಿಶಿಷ್ಟವಾಗಿರುತ್ತವೆ. ಇವೆಲ್ಲಾ ಅತ್ಯಂತ ಸೂಕ್ಷ್ಮ ಕೆಲಸಗಳು, ನಿಗಾ ಇಟ್ಟು ಮಾಡುವಂತಹವು.

ಈ ತಯಾರಿ ಆದ ಮೇಲೆ ಸ್ಪರ್ದೆ ಶುರು. ಕಂಬಳದಲ್ಲಿ ಮೂರು ವಿಧ,

ಒಂದು; ಹಗ್ಗದ ಓಟ, ಇಲ್ಲಿ ಕೋಣಗಳ ಹೆಗಲಿಗೆ ಕಟ್ಟಿದ ನೊಗಕ್ಕೆ ಹಗ್ಗವನ್ನು ಕಟ್ಟಿ ಓಡಿಸುವವ ಅದನ್ನು ಆಧಾರವಾಗಿ ಹಿಡಿದು ಓಡಿಸುತ್ತಾನೆ. ಇಲ್ಲಿ ಯಾವ ಈಡು ಬೇಗ ತನ್ನ ನಿಗದಿತ ಗುರಿ ಮುಟ್ಟುತ್ತದೆಯೋ ಅದನು ವಿಜೇತ ಎಂದು ತೀರ್ಮಾನಿಸುತ್ತಾರೆ.

ಎರಡನೆಯದು ಕಣೆಹಲಗೆಯ ಓಟ; ಇಲ್ಲಿ ಇಂಗ್ಲಿಷಿನ ಟಿ ಆಕಾರದ ಹಲಗೆಯನ್ನು ಕೋಣಗಳ ಕೊರಳಿನ ನೊಗಕ್ಕೆ ಕಟ್ಟಿರುತ್ತಾರೆ. ಕೋಣಗಳ ಓಟಗಾರ ಹಲಗೆಯ ಮಧ್ಯೆ ನಿಂತು ಹಗ್ಗ ಹಿಡಿದು ಸಮತೋಲನ ತಪ್ಪದಂತೆ ನಿಂತು ಓಡಿಸುತ್ತಾನೆ. ಕೋಣಗಳ ಬೆನ್ನ ಮೇಲೆ ಚಾವಟಿಯಿಂದ ಎರಡೇಟು ಹಾಕಿ ಕೂಗುತ್ತಾ             ಗಲಾಟೆ ಮಾಡುತ್ತಾ ಬಿರುಸಾಗಿ ಓಡಿಸುತ್ತಾರೆ, ಹೀಗೆ ಓಡಿಸುವಾಗ ಹಲಗೆಯ ಹಿಂಭಾಗದಿಂದ ಕೆಸರು ನೀರು ಆಕಾಶಕ್ಕೆ ಚಿಮ್ಮುತ್ತದೆ, ಆ ದೃಶ್ಯ ರೋಮಾಂಚನಕಾರಿಯಾದದ್ದು, ಅಲ್ಲದೆ ಹೀಗೆ ಕೆಸರು ನೀರು ಎತ್ತರಕ್ಕೆ ಚಿಮ್ಮುವುದೇ ಗೆಲುವನ್ನು ನಿರ್ಧರಿಸುವ ಮಾನದಂಡ. ಬೇಗ ಗುರಿಮುಟ್ಟುವುದನ್ನೂ ಸಹ ಗಣನೆಗೆ ತೆಗೆದುಕೊಳ್ಳುತ್ತಾರೆ.

ಮೂರನೆಯದು ಹಲಗೆಯ ಓಟ; ಇದೂ ಸಹ ಕಣೆ ಹಲಗೆಯ ರೀತಿಯಲ್ಲೇ ಇರುತ್ತದೆ.

ಮುಖ್ಯ ಸ್ಪರ್ದೆಯ ಮುನ್ನ ಪೊಲಬ್ಬು ಓಟವಿರುತ್ತದೆ. ಅಂದರೆ ಟ್ರಯಲ್ ಓಟ. ಇದು ಕೋಣಗಳಿಗೆ ಮತ್ತು ಓಟಗಾರನಿಗೆ ಪೂರ್ವ ತಯಾರಿ. ಸ್ಪರ್ದೆಯ ಸ್ಥಳವು ಕೋಣದ ಈಡಿನ ಮನೆಯವರು, ಅವರ ನೆಂಟರಿಷ್ಟರು, ಬಂಧುಗಳು, ಸ್ನೇಹಿತರು, ತೀರ್ಪುಗಾರರು, ಗಣ್ಯರು ಹಾಗೂ ನೋಡುಗರಿಂದ  ಮತ್ತು ಅಂಗಡಿ-ಮುಂಗಟ್ಟು ಹಾಕಿರುವವರಿಂದ ತುಂಬಿ ಹೋಗಿರುತ್ತದೆ. ಎಲ್ಲೆಲ್ಲಿಯೂ ಜನ ಜನ ಜನ.

ಒಂದೊಂದು ಈಡು ಕೋಣಗಳು ಸ್ಪರ್ದೆಗೆ ಬಂದಾಗಲೂ ಜನರ ಹೋ ಎಂಬ ಉದ್ಘಾರ, ಗುರ್ನಾಲಿನ ಸದ್ದು, ಆಳುಗಳ ಗಡಿ-ಬಿಡಿಯ ಮಾತುಗಳು, ಕೂಗಾಟಗಳು, ಕೆಲವರು ತುಳು, ಕೆಲವರು ಕನ್ನಡ, ಇಂಕೆಲವರು ತುಳುಗನ್ನಡ ಮಾತಾಡುತ್ತಾ ಗೌಜು ಗದ್ದಲ, ಕಲರವ ಏರ್ಪಟ್ಟಿರುತ್ತದೆ. ಊರ ಪ್ರಮುಖರ, ಹೆಗ್ಗಡೆಯವರ, ಶೆಟ್ಟರ ಕೋಣಗಳು ಇಳಿದಾಗಲಂತೂ ಇದು ಮತ್ತಷ್ಟು ಜೋರು. ಕೋಣಗಳ ಮತ್ತು ಓಟಗಾರನ ಕಣ್ಣುಗಳು ಗುರಿಯತ್ತ, ವೇಗದತ್ತ ನೆಟ್ಟಿದ್ದರೆ, ನೆರೆದವರ ಕಣ್ಣುಗಳು ಅವರ ಮೇಲೆ ನೆಟ್ಟಿರುತ್ತವೆ. ವರ್ಷ ಪೂರ್ತಿ ನಡೆಸಿದ ತಯಾರಿಗೆ ಪ್ರತಿಫಲ ಸಿಗುವ ಕ್ಷಣ ಅದು.

ಓಟಗಾರ ಕೇವಲ ಕಚ್ಚೆ ಪಂಚೆ ಮತ್ತು ತಲೆಗೆ ರುಮಾಲು ಸುತ್ತಿರುತ್ತಾನೆ, ಮೈ ಹುರಿಗಟ್ಟಿರುತ್ತದೆ, ನರಗಳ ಉದ್ವೇಗದ ಬಿಗಿತ ಎದ್ದು ಕಾಣುತ್ತಿರುತ್ತದೆ, ಬಲ ಗೈಯಲ್ಲಿ ಚಾವಟಿ ಅಥವಾ ಬಡು, ಎಡಗೈಯಲ್ಲಿ ಹಗ್ಗ ಹಿಡಿದಿರುತ್ತಾನೆ. ಯಜಮಾನರ ಛಲದ ಆವಾಹನೆಯಾಗಿರುತ್ತದೆ. ಆತ ಕೋಣಗಳ ಬಾಲದ ಬುಡದ ಭಾಗಕ್ಕೆ, ನೊಗಕ್ಕೆ ಮತ್ತು ನೀರಿಗೆ ಎರಡೂ ಕೈಯಿಟ್ಟು ಸಣಮಾಡಿ ಕಣ್ಣಿಗೊತ್ತಿಕೊಳ್ಳುತ್ತಾನೆ. ತೀರ್ಪುಗಾರರ ಹಸಿರು ನಿಶಾನೆ ದೊರೆತ ಮರುಕ್ಷಣ ಅಲ್ಲಿ ಮಿಂಚಿನ ಸೆಳಕು, ಕಾಣುವುದು ಕೇವಲ ಎಡಬಲಗಳಿಗೆ ಚಿಮ್ಮುವ ಕೆಸರಿನ ತೆರೆಗಳು ಮಾತ್ರ, ಓಟದ ವೇಗಕ್ಕೆ ಅನುಗುಣವಾಗಿ ಕೆಸರಿನ ತೆರೆಗಳು ಮೇಲಕ್ಕೆದ್ದು ಕೆಳಗಿಳಿಯುತ್ತವೆ. ನೆರೆದ ಮಂದಿಯ ಬಾಯಿಂದ ಹೋ ಶಬ್ದ ಮುಗಿಯುವಷ್ಟರಲ್ಲಿ ಅವು ಗುರಿ ಮುಟ್ಟಿರುತ್ತವೆ, ಇತ್ತ ಮತ್ತೊಂದು ಜೊತೆ   ಅದೇ ಉದ್ವೇಗ, ಅದೇ ನಿರೀಕ್ಷೆಯಲ್ಲಿ ಓಟಕ್ಕೆ ಸಜ್ಜು.

ಸ್ಪರ್ಧೆಗೆ ಬಂದ ಎಲ್ಲ ಈಡುಗಳ ಓಟ ಮುಗಿದ ನಂತರ ಗೆದ್ದ ಕೋಣದ ಈಡುಗಳಿಗೆ, ಓಟಗಾರನಿಗೆ ಮತ್ತು ಯಜಮಾನರಿಗೆ ಮೆಡಲ್ಲುಗಳ ವಿತರಣೆ, ಬಂಗಾರ, ಬೆಳ್ಳಿ, ಬಾಳೆಗೊನೆ ಮುಂತಾದವುಗಳ ವಿತರಣೆ, ಗೆದ್ದವರಿಗೆ ಮುಮ್ಮಡಿ ಉತ್ಸಾಹ, ಸೋತವರು ಮುಂದಿನ ವರ್ಷ ಸರಿಯಾದ ತಯಾರಿಯೊಂದಿಗೆ ಬರುವ ಉತ್ಸಾಹ. ಸೋತ ಕೆಲವು ಯಜಮಾನರು ಕೋಣಗಳನ್ನು ಗದ್ದೆ ಕೆಲಸಕ್ಕೆ ಹಚ್ಚಿ, ಅಥವಾ ಅಲ್ಲೇ ಮಾರಾಟ ಮಾಡಿ ಹೊಸ ಮರಿಗಳಿಗೆ ಹುಡುಕಾಟ ಆರಂಭಿಸುತ್ತಾರೆ. ನೆರೆದವರು ಗುಜು-ಗುಜು ಸದ್ದಿನೊಂದಿಗೆ ನಿರ್ಗಮಿಸುವುದರೊಂದಿಗೆ ಆ ದಿನದ ಕಂಬಳ ಮುಕ್ತಾಯ.

ಆದರೆ ನಾಳೆ ಮತ್ತೊಂದೆಡೆ, ಮುಂದಿನ ವಾರ ಇನ್ನೊಂದೆಡೆ ಕಂಬಳ ಇದ್ದೇ ಇರುತ್ತದೆ, ಅದೇ ಸಂಭ್ರಮ, ನಿರೀಕ್ಷೆಗಳೊಂದಿಗೆ, ಎಲ್ಲ ಕಡೆ ಮುಗಿಯಿತು ಎಂದಾದರೂ ಸಹಿತ ಮುಂದಿನ ವರ್ಷ ಇದ್ದೇ ಇರುತ್ತದೆ. ಈ ಪ್ರಕ್ರಿಯೆ ಸಾವಿರಾರು ವರ್ಷಗಳಿಂದ ನಡೆಯುತ್ತಲೇ ಬರುತ್ತಿದೆ, ಅಲ್ಪ-ಸ್ವಲ್ಪ ಬದಲಾಗಿರಬಹುದು. ಆದರೆ ಪರಂಪರೆ ಮುಂದುವರಿಯುತ್ತಿದೆ.

ಕಡುಬಡವರಿಂದ ಸಿರಿವಂತರ ತನಕ ಎಲ್ಲ ಒಂದೆಡೆ ಸೇರಿ ಸಂಭ್ರಮಿಸುವ ಕಂಬಳ ಅಪ್ಪಟ ರೈತರ ಮನರಂಜನಾ ಕ್ರೀಡೆ. ಪ್ರತಿವರ್ಷ ನವಂಬರಿನಿಂದ ಜನವರಿಯವರೆಗೆ ನಡೆಯುತ್ತಿರುತ್ತದೆ. ಮಳೆಗಾಲ ಹಿಂದೆ ಸರಿದು ಚಳಿಗಾಲ ಶುರುವಾಗುವ ಸಮಯದಲ್ಲಿ ಮೈ ಬಿಸಿಯೇರಿಸುವ ರೋಮಾಂಚಕಾರಿ ಕಂಬಳ, ನಗರದವರ ಕುದುರೆ ರೇಸಿನ ಎಲ್ಲ ಲಕ್ಷಣಗಳನ್ನೂ ಮೈಗೂಡಿಸಿಕೊಂಡಿರುವಂತಹುದು. ಹಣದ ಬಾಜಿಯ ಕೆಟ್ಟ ಮುಖವಿಲ್ಲದ ಅಪ್ಪಟ ಮನರಂಜನೆಯ ಕ್ರೀಡೆಯಾದ ಇದು ಕುದುರೆ ರೇಸಿಗಿಂತಲೂ ಒಂದು ಕೈ ಮೇಲೆ. ಮತ್ತು ಒಂದು ರೀತಿ ಸ್ಪೈನ್ ದೇಶದ  ಗೂಳಿ ಕಾಳಗವನ್ನೂ ಸಹ ಹೋಲುತ್ತದೆ. ಆದರೆ ಅಲ್ಲಿನಂತೆ ಕ್ರೂರತೆ ಇಲ್ಲಿಲ್ಲ.

ಆಣಿ-ಪೀಣಿ

ಹುಲ್ಲಿನ ಎಸಳುಗಳಲ್ಲಿ ಐದು ಅಥವಾ ಏಳು ಸುತ್ತಿನ ಅಂದರೆ ಹೆಡೆಗಳ ಸಿಂಬೆಯಾಕಾರದಲ್ಲಿ ಹೆಣೆದು ಅದರೊಳಗೆ ಹಣತೆಯನ್ನು ಕೂರಿಸುತ್ತಾರೆ, ಇದೇ ಆಣಿ-ಪೀಣಿ. ಇದನ್ನು ಕೈಯಲ್ಲಿ ಹಿಡಿದು ದನಕಾಯುವ ಹುಡುಗರು ಮನೆ-ಮನೆ ಸುತ್ತುತ್ತಾರೆ, ಪ್ರತಿಯೊಂದು ಮನೆಯೂ ದನ-ಕರುಗಳಿಂದ ತುಂಬಿರಲಿ, ಅವುಗಳಿಂದ ಸಮೃದ್ಧಿಯಾಗಲಿ, ಅವುಗಳಿಗೆ ಯಾವುದೇ ರೀತಿಯ ರೋಗ-ರುಜಿನಾದಿಗಳು ಬಾರದಿರಲಿ, ಆ ಮೂಲಕ  ಊರಿನ ಪಶು ಸಂಪತ್ತು ಹೆಚ್ಚಿ ಸರ್ವರಿಗೂ ಒಳಿತಾಗಲಿ ಎಂಬ ಅರ್ಥ ಬರುವಂತಹ ಪದಗಳನ್ನು ಹಾಡಲಾಗುತ್ತದೆ. ಹೀಗೆ ಹಾಡುತ್ತಾ-ಹಾಡುತ್ತಾ ಪ್ರತಿ ಮನೆ ಮುಂದೆ ನಿಂತಾಗಲೂ ಅಲ್ಲಿನ ಜಾನುವಾರುಗಳಿಗೆ ಆಣಿ-ಪೀಣಿಯ ಜ್ಯೋತಿಯಿಂದ ಬೆಳಗುತ್ತಾರೆ.

ಮುಂಗಾರಿನ ಬೆಳೆಗಳು ಕುಯಿಲಾಗಿ, ಒಕ್ಕಣೆಯೂ ಆಗಿ ಮನೆಯು ಕಾಳುಕಡಿಗಳಿಂದ ತುಂಬಿರುವಾಗ, ಹಿಂಗಾರಿಯ ಶೇಂಗ, ಸೂರ್ಯಕಾಂತಿ, ಕಡಲೆ, ಜೋಳ ಮುಂತಾದುವನ್ನು ಬಿತ್ತುವ ತಯಾರಿಯಲ್ಲಿರುವಾಗ ಆ ಮುಂಗಾರಿಯ ಸಮೃದ್ಧಿಗೆ ಕಾರಣವಾದ ಮತ್ತು ಹಿಂಗಾರಿನ ಕೆಲಸ ಕಾರ್ಯಗಳಿಗೆ ಹೆಗಲು ನೀಡಬೇಕಾದ  ಜಾನುವಾರುಗಳಿಗೆ  ಧನ್ಯವಾದ ಹೇಳುವ ರೀತಿಯಲ್ಲಿ ನಡೆಯುವ ಈ ಆಚರಣೆ ಅರ್ಥಪೂರ್ಣವಾದುದು.

ಸೊಣೆಹಬ್ಬ

ದನಕಾಯುವ ಹುಡುಗರ ಕೋಲ ಈ ಸೊಣೆ ಹಬ್ಬ. ಆಟಿ ಮಾಸದಲ್ಲಿ (ಜುಲೈ-ಆಗಸ್ಟ್) ಈ ಆಚರಣೆ ನಡೆಯುತ್ತದೆ. ಒಂದು ನಿರ್ದಿಷ್ಟ ದಿನ ಸಂಜೆ ದನಗಾಹಿ ಹುಡುಗರು ಕೈಯಲ್ಲಿ ಚೆಂಡು ಹೂವಿನ ಗಿಡ, ಕೆಸುವಿನ ಗೆಡ್ಡೆ, ರುಬ್ಬುವ ಗುಂಡು, ಬೊಮ್ಮಕ್ಕನ ಗಿಡ, ಮುಸುರೆ ಬಟ್ಟೆ, ಹಲಸಿನ ಬೀಜ, ಎಳ್ಳುಂಡೆ, ಅಕ್ಕಿ ಉಂಡೆ ಮುಂತಾದುವನ್ನು ತೆಗೆದುಕೊಂಡು ಅಜ್ಜಿಯಂತೆ ಕೋಲು ಹಿಡಿದು ಮನೆ-ಮನೆ ಸುತ್ತುತ್ತಾರೆ.

ಕಾರಹುಣ್ಣಿಮೆ ಮತ್ತು ಮಣ್ಣೆತ್ತಿನ ಅಮಾವಾಸ್ಯೆ

ಕಾರ ಹುಣ್ಣಿಮೆ ಉತ್ತರ ಕರ್ನಾಟಕದ ಮಂದಿಗೆ ವಿಶೇಷ ಹಬ್ಬ. ಜಾನುವಾರುಗಳೇ ಈ ಹಬ್ಬದ ಕೇಂದ್ರ ಬಿಂದು. ಬಯಲು ಸೀಮೆಯಲ್ಲಿ ಸಂಕ್ರಾಂತಿ ಇರುವಂತೆ ಬಿಸಿಲು ನಾಡಿನವರಿಗೆ ಕಾರ ಹುಣ್ಣಿಮೆ. ಜೂನ್ ತಿಂಗಳ  ಮಳೆಗಾಲ ಕಾಲಿಡುವ ಸಮಯದಲ್ಲಿ ಈ ಹಬ್ಬ ನಡೆಯುವುದು ವಿಶೇಷ. ಅಂದು ಎತ್ತುಗಳಿಗೆ ಯಾವುದೇ ಕೆಲಸವಿಲ್ಲ. ಬೆಳಿಗ್ಗೆಯೇ ಮೈತೊಳೆದು ವಿವಿಧ ರೀತಿಯಲ್ಲಿ ಶೃಂಗರಿಸುತ್ತಾರೆ. ಹೀಗೆ ಶೃಂಗರಿಸಿದ ಎತ್ತುಗಳನ್ನು ಕರಿ ಹರಿಯುವ ಸಂಪ್ರದಾಯವಿದೆ. ಈ ರೀತಿ ಮಾಡುವುದರ ಹಿಂದೆ ನಿರ್ದಿಷ್ಟವಾದ ಉದ್ದೇಶವೊಂದಿದೆ, ಅದೇನೆಂದರೆ ಯಾವ ಫಸಲು ಈ ವರ್ಷ ಉತ್ತಮವಾಗಿ ಆಗುತ್ತದೆ ಎಂಬುದನ್ನು ಇದರಿಂದ ರೈತರು ತಿಳಿಯುತ್ತಾರೆ. ಹೇಗೆಂದರೆ; ಎತ್ತುಗಳ ಕರಿ ಹರಿದಾಗ ಕೆಂಪು ಬಣ್ಣದ ಎತ್ತು ಮುಂದೆ ಬಂದರೆ ಕೆಂಪು ಧಾನ್ಯಗಳು ಆ ವರ್ಷ ಉತ್ತಮವಾಗಿ ಆಗುತ್ತವೆ, ಆ ಬೆಳೆಗಳಿಗೆ ಯಾವುದೇ ಕೀಟ-ರೋಗಾದಿಗಳು ಬರುವುದಿಲ್ಲ ಎಂದರ್ಥ. ಒಂದು ವೇಳೆ ಬಿಳಿ ಎತ್ತು ಮುಂದೆ ಬಂದರೆ ಬಿಳಿ ಫಸಲು ಅಂದರೆ ಬಿಳಿ ಜೋಳ, ಕುಸುಬೆ ಮುಂತಾದವು ಉತ್ತಮ ಫಸಲು ನೀಡುತ್ತವೆ ಎಂದು ತೀರ್ಮಾನಿಸುತ್ತಾರೆ.

ಅದೇ ದಿನ ಸಂಜೆ ಬಸವನ ಪೂಜೆ ಅರ್ಥಾತ್ ಜಾನುವಾರುಗಳಿಗೆ ಪೂಜೆ ನೆರವೇರಿಸಲಾಗುತ್ತದೆ. ಅಂದು ಬೆಳಿಗ್ಗೆ ಚೆನ್ನಾಗಿ ಮೈತಿಕ್ಕಿಸಿಕೊಂಡು ಜಳಕ ಮಾಡಿದ ಜಾನುವಾರುಗಳಿಗೆ ಗೊಟ್ಟೆ ಹಾಕುತ್ತಾರೆ. ಗೊಟ್ಟೆ ಹಾಕುವುದು ಅತ್ಯಂತ ವಿಶೇಷವಾದ ಕ್ರಿಯೆ. ಎಳ್ಳೆಣ್ಣೆ ಮತ್ತು ಕೋಳಿ ಮೊಟ್ಟೆಯನ್ನು ಹದವಾಗಿ ಮಿಶ್ರಣ ಮಾಡಿ ಬಿದಿರಿನ ಕೊಳವೆಯಿಂದ ಕುಡಿಸುತ್ತಾರೆ. ಮಳೆಗಾಲದ ಆರಂಭದ ಕಾಲವಾದ್ದರಿಂದ ಈ ರೀತಿ ಮಾಡುವ ಮೂಲಕ ಜಾನುವಾರುಗಳಿಗೆ ಪುಷ್ಟಿ ನೀಡುತ್ತಾರೆ. ಹೀಗೆ ಒಂದೇ ಆಚರಣೆಯ ಮೂಲಕ ಹಲವಾರು ಉದ್ದೇಶಗಳನ್ನು ಈಡೆರಿಸಿಕೊಳ್ಳುವ ಜನಪದರ ಜ್ಞಾನ ಹಾಗೂ ಚಾತುರ್ಯ ಮೆಚ್ಚುವಂಥದ್ದು.

ಕಾರಹುಣ್ಣಿಮೆಯಾದ ನಂತರ ಬರುವ  ಅಮಾವಾಸ್ಯೆಯನ್ನು ಉತ್ತರ ಕರ್ನಾಟಕದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಕಾರ ಹುಣ್ಣಿಮೆಯಂದು ಜೀವಂತ ಜಾನುವಾರುಗಳಿಗೆ ಪೂಜೆ-ಪುನಸ್ಕಾರಗಳು ನಡೆದರೆ ಮಣ್ಣೆತ್ತಿನ ಅಮಾವಾಸ್ಯೆಯಂದು ಮಣ್ಣಿನಲ್ಲಿ ಎತ್ತುಗಳನ್ನು ಮಾಡುತ್ತಾರೆ. ಈ ಮಣ್ಣಿನ ಎತ್ತುಗಳನ್ನು ಪೂಜಿಸಿ, ಊರೆಲ್ಲಾ ಮೆರವಣಿಗೆ ಮಾಡಿ ನಂತರ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಕಾರಹುಣ್ಣಿಮೆ

ಬೇಸಿಗೆ ಮುಗಿದು ಮುಂಗಾರು ಕಾಲಿಟ ವೇಳೆಯಲ್ಲಿ ಕಾಲಿಡುವ ಕಾರ ಹುಣ್ಣಿಮೆ ಸಂದರ್ಭದಲ್ಲಿ ಜಾನುವಾರುಗಳಿಗಾಗಿ ವಿಶೇಷ ಹಬ್ಬ ನಡೆಯುತ್ತದೆ. ಅಂದು ಜಾನುವಾರುಗಳಿಗೆ ವಿಶೇಷ ಅಡುಗೆ ಮಾಡಿ ತಿನ್ನಿಸಲಾಗುತ್ತದೆ. ಅಂದು ಕಾರಿಂಗ ಮತ್ತು ಅಳವಿಯನ್ನು ಕುದಿಸಿ ಅದಕ್ಕೆ ಕೋಳಿ ಮೊಟ್ಟೆಯನ್ನು ಬೆರೆಸಿ ಚೆನ್ನಾಗಿ ಕಲಕಿ ತೆಳುವಾಗಿ ಮಾಡಿ ಗೊಟ್ಟದಲ್ಲಿ ಎತ್ತುತ್ತಾರೆ. (ಗೊಟ್ಟ: ಬಿದಿರಿನಲ್ಲಿ ಮಾಡಿದ ಕೊಳವೆ, ದನಗಳಿಗೆ ಯಾವುದೇ ದ್ರವ ರೂಪದ ಪದಾರ್ಥ ಕುಡಿಸಲು ಗೊಟ್ಟ ಬೇಕೇ ಬೇಕು. ದನಗಳ ಗಂತಲಿಗೆ ಗೊಟ್ಟದ ತುದಿಯನ್ನು ಇಟ್ಟು ಕುಡಿಸಲು ಅನುಕೂಲವಾಗುವಂತೆ ಚೂಪಗೆ ಮಾಡಿರುತ್ತಾರೆ.) ದನಗಳಿಗೆ ಇದನ್ನು ಕುಡಿಸುವುದರಿಂದ ಕಫ, ಪಿತ್ತದೋಷ ಮುಂತಾದ ಖಾಯಿಲೆಗಳು ನಿವಾರಣೆಯಾಗುತ್ತವೆಂದು ರೈತರ ನಂಬಿಕೆ.

ಬಾಗಲಕೋಟೆ ಭಾಗದಲ್ಲಿ ಕಾರ ಹುಣ್ಣಿಮೆಗೆ ಹೊನ್ನುಗ್ಗಿ ದಿವಸ ಎಂತಲೂ ಕರೆಯುತ್ತಾರೆ. ಇಲ್ಲಿ ಹಬ್ಬದ ದಿವಸ ಪುಂಡಿ ನಾರಿನಲ್ಲಿ ಹಗ್ಗಗಳನ್ನು ತಯಾರಿಸಿ ಅವುಗಳನ್ನು ವಿವಿಧ ಬಣ್ಣಗಳಲ್ಲಿ ಅದ್ದಿ ಎತ್ತುಗಳಿಗೆ ಕಟ್ಟುತ್ತಾರೆ. ಅಂದು ಸಂಜೆ ಕರಿಹರಿಯುವ ಕಾರ್ಯಕ್ರಮ, ಈ ಭಾಗದಲ್ಲಿ ಕರಿಹರಿಯುವುದು ಸ್ವಲ್ಪ ಭಿನ್ನ. ಗ್ರಾಮದಲ್ಲಿರುವ ಕೆಂಪು ಮತ್ತು ಬಿಳಿ ಬಣ್ಣದ  ಎರಡು ಎತ್ತುಗಳನ್ನು ಕರೆತಂದು ಅವುಗಳಿಗೆ ಗೌಡ ಮತ್ತು ಕುಲPರ್ಣಿಯವರ ಎತ್ತುಗಳೆಂದು ಹೆಸರಿಡುತ್ತಾರೆ. ಕೆಂಪು ಬಣ್ಣದ ಎತ್ತು ಮುಂಗಾರಿ ಮತ್ತು ಬಿಳಿ ಬಣ್ಣದ ಎತ್ತು ಹಿಂಗಾರಿಯ ಸಂಕೇತ.  ಕರಿ ಹರಿಯುವಾಗ ಕೆಂಪು ಎತ್ತು ಮುಂದೆ ಬಂದರೆ ಮುಂಗಾರಿ ಹೆಚ್ಚು ಮತ್ತು ಬಿಳಿ ಎತ್ತು ಮುಂದೆ ಬಂದರೆ ಹಿಂಗಾರು ಉತ್ತಮ ಅನ್ನುವುದು ರೈತರ ಅನುಭವದ ಮಾತು.

ಕಾರ ಹುಣ್ಣಿಮೆಯ ಮರುದಿವಸವನ್ನು ಕರಿದಿನ ಎನ್ನುತ್ತಾರೆ. ಅಂದು ಕೋಡಬಳಗಿ ಇಲ್ಲವೇ ತಾಲಿಮ ಪಟ್ಟಿ ಎಂಬ ತಿನಿಸುಗಳನ್ನು ತಯಾರಿಸಿ ಎಲ್ಲರೂ ಹಂಚಿ ತಿನ್ನುವುದು ಸಂಪ್ರದಾಯ. ಈ ದಿನ ಎತ್ತುಗಳ ಕೊಂಬುಗಳಿಗೆ ಕೆಂಪು ಬಣ್ಣ ಬಳಿದು ಮೆರವಣಿಗೆ ಮಾಡುವ ಕ್ರಿಯೆಗೆ ಒಂದು ಕತೆಯನ್ನು ಹೇಳಲಾಗುತ್ತದೆ. ಏನೆಂದರೆ; ಪರಮೇಶ್ವರ ಅರ್ಥಾತ್ ಶಿವನು ಕಾರಹುಣ್ಣಿಮೆ ದಿವಸ ನಂದಿ ಅವತಾರವನ್ನು ತಾಳಿ ರಾಕ್ಷಸರನ್ನು ಕೋಡುಗಳಿಂದ ಸಂಹಾರ ನಡೆಸಿ ರಕ್ತ ಸಿಕ್ತ ಕೋಡುಗಳ ಸಮೇತ ಬರುತ್ತಾನೆ. ಕೋಡುಗಳಿಗೆ ರಾಕ್ಷಸರ ಕರುಳುಗಳು ಸುತ್ತಿಕೊಂದಿರುತ್ತವೆ. ಆ ನೆನಪಿಗಾಗಿ ಕಾರ ಹುಣ್ಣಿಮೆಯಂದು ಎತ್ತುಗಳ ಕೋಡಿಗೆ ಕೆಂಪು ಬಣ್ಣ ಹಚ್ಚುತ್ತಾರೆ ಮತ್ತು ಕೋಡುಬಳೆಗಳನ್ನು ಹಾಕುತ್ತಾರೆ. ಕೆಲವರು ಬಲಿ ಚಕ್ರವರ್ತಿಯನ್ನು ಸಂಹಾರ ಮಾಡಿದ ಎಂತಲೂ ಹೇಳುವುದನ್ನು ಕಾಣಬಹುದು.  

ಪಾಡ್ಯದ ದಿವಸ ಮಾಡುವ ಜಾನುವಾರುಗಳ ಪೂಜೆ ಮತ್ತೂ ವಿಶೇಷವಾದುದು. ಅಂದು ಎತ್ತುಗಳ ಮೈತೊಳೆದು ಮನೆಯನ್ನೆಲ್ಲಾ ಸಾರಿಸಿ, ಸಗಣಿಯಲ್ಲಿ ಹಟ್ಟೆವ್ವನನ್ನು ಮಾಡಿ ಕೂರಿಸಿ  ಕಸಬರಿಗೆಯನ್ನು ಪೂಜಿಸುತ್ತಾರೆ.

ಈ ಆಚರಣೆಗಳಿಗೆಲ್ಲ ನಿರ್ದಿಷ್ಟ ಕಾರಣಗಳಿದ್ದೇ ಇರುತ್ತದೆ. ಅದರೆ ಅದನ್ನು ಸ್ಪಷ್ಟವಾಗಿ ತಿಳಿಸುವ ತಲೆಗಳು   ಇಲ್ಲವಾಗಿವೆ. ಅದೊಂದು ಬಹುದೊಡ್ಡ ಕೊರತೆ.

 

ಧಾರವಾಡದ ಕಘಟಗಿ ಭಾಗದಲ್ಲಿ ದೀಪಾವಳಿ ಅಮಾವಾಸ್ಯೆಯ ಮೂರನೇ ದಿವಸ ಬಲೀಂದ್ರನನ್ನು ಪೂಜೆ ಮಾಡಿ ಮನೆಯಲ್ಲಿರುವ ಕುಡುಗೋಲು, ಹಗ್ಗ, ಕಣ್ಣಿ, ಕಸಬರಿಗೆ, ಕುಂಬಳಕಾಯಿ, ಮೋಟಿ, ವನಕೆ ಮುಂತಾದ ಸಲಕರಣೆಗಳನ್ನು ಇಟ್ಟು ಪೂಜಿಸುತ್ತಾರೆ.

ಹಾಲೋಕುಳಿ

ತಮ್ಮ ಕುರಿ-ಮೇಕೆಗಳಿಗೆ ನೀಲಿ ನಾಲಿಗೆ ರೋಗ ಬಾರದಿರಲಿ ಎಂಬ ಉದ್ದೇಶದಿಂದ ಗ್ರಾಮದ ವೆಂಕಲ ಕುಂಟಪ್ಪ ದೇವರಿಗೆ ಮಾಡುವ ಹಾಲೋಕುಳಿ ಹಬ್ಬ ಕುತೂಹಲಕಾರಿಯಾದುದು. ಕುರಿಗಾರರಾದ ಗೊಲ್ಲ ಸಮುದಾಯದವರು ಇದನ್ನು ಆಚರಿಸುತ್ತಾರೆ.

ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಚಿಕ್ಕ ವೆಂಕಲ ಕುಂಟೆ ಗ್ರಾಮದಲ್ಲಿ ಪ್ರತಿ ವರ್ಷ ಫ಼ೆಬ್ರವರಿ ಮಾಸದಲ್ಲಿ ನಡೆಯುವ ಜಾತ್ರೆಯ ಸಂದರ್ಭದಲ್ಲಿ ಈ ಅಚರಣೆ ನಡೆಯುತ್ತದೆ. ಈ ಆಚರಣೆಯ ವಿಶೆಷವೆಂದರೆ ಒಂದು ವಾರದಷ್ಟು ಹಳೆಯ ಮತ್ತು ವಾಸನೆ ಹೊಡೆಯುವ ಹಾಲನ್ನು ಹರಕೆ ರೂಪದಲ್ಲಿ ದೇವರಿಗೆ ಅರ್ಪಿಸುವುದು. ಸುತ್ತ-ಮುತ್ತಲ ಗ್ರಾಮದವರೆಲ್ಲಾರೂ ಇದರಲ್ಲಿ ಭಾಗವಹಿಸುತ್ತಾರೆ.

ಜಾತ್ರೆ ಒಂದು ವಾರ ಇದೆ ಎನ್ನುವಾಗಲೇ ಊರಿನ ಗೊಲ್ಲರು ತಮ್ಮ-ತಮ್ಮ ಮನೆಗಳಲ್ಲಿ ಕುರಿ,ಮೇಕೆ ಹಾಗೂ ಹಸುಗಳ ಹಾಲನ್ನು ಕಲೆ ಹಾಕಲು ಪ್ರಾರಂಭಿಸುತ್ತಾರೆ. ಜಾತ್ರೆಯ ಹಿಂದಿನ ದಿವಸವೇ ಎಲ್ಲ ಕುಟುಂಬದವರೂ ನೂರಾರು ಚಕ್ಕಡಿಗಳಲ್ಲಿ ಆಗಮಿಸಿ ದೇವಾಲಯದ ಅಕ್ಕ-ಪಕ್ಕ ಬಿಡಾರ ಹೂಡುತ್ತಾರೆ. ಜಾತ್ರೆಯ ದಿವಸ ಮದ್ಯಾಹ್ನದ ಹೊತ್ತಿಗೆ ಹರಕೆ ತೀರಿಸುವ ಕ್ರಿಯೆ ಆರಂಭ. ಗೊಲ್ಲ ಸಮುದಾಯದ ಯುವಕರ ಹಿಂದು ಕೇವಲ ಕಚ್ಚೆ ಪಂಚೆಯೊಂದನ್ನು ಮಾತ್ರ ಉಟ್ಟು, ಹೆಗಲಲ್ಲಿ, ಕೈಯಲ್ಲಿ ಹುಳಿ ಹಾಲಿನ ಕಾವಡಿ ಹೊತ್ತು ದೇವಾಲಯದ ಸುತ್ತಲೂ ಹಾಲು ಚೆಲ್ಲುತ್ತಾ ಬರುತ್ತಾರೆ. ಆ ಹಾಲಿನ ದುರ್ನಾತ ಮತ್ತು ಅದು ಮೈಮೇಲೆ ಬೀಳುವುದನ್ನು ತಪ್ಪಿಸಿಕೊಳ್ಳಲು ಜತ್ರೆಗೆ ಬಂದಿರುವ ಇತರರು ಈ ಗೊಲ್ಲರ ಹಿಂದಿನ ಹೊಯ್ ಹೊಯ್ ಸದ್ದು ಕೇಳಿದ ತಕ್ಷಣ ದೂರ ಸರಿಯುತ್ತಾರೆ. ಸಾವಿರಾರು ಲೀಟರ್ ಹಾಲು ಹೀಗೆ ಹರಕೆ ತೀರಿಸಲು ಖರ್ಚಾಗುತ್ತದೆ.

ಈ ಹಾಲೋಕುಳಿ ಹರಕೆ ನೂರಾರು ವರ್ಷದಿಂದ ಬಳಕೆಯಲ್ಲಿದೆ. ಹಿಂದೆ ಗೊಲ್ಲರ ಹಟ್ಟಿಗಳ ದನ-ಕರುಗಳಿಗೆ ರೋಗ ತಗುಲಿ ಹಾಲುವ ಕರೆಯುವ ಬದಲಿಗೆ ರಕ್ತ ಕರೆಯುತ್ತಿದ್ದವಂತೆ ಆಗ ಗೊಲ್ಲರ ದೊಡ್ಡಿಯ ಹಿರಿಯರೊಬ್ಬರ ಮೈಮೇಲೆ ಚಿಕ್ಕ ವೆಂಕಲಕುಂಟಪ್ಪ ಬಂದು ಹಾಲೋಕುಳಿ ಮಾಡಿದರೆ ಈ ಪೀಡೆಯಿಂದ ಮುಕ್ತಿ ಎಮ್ದು ಹೇಳಿದರಂತೆ ಅಂದಿನಿಂದ ಈ ಆಚರಣೆ ನಡೆಯುತ್ತಿದೆ. ಯಾವಾಗಲೂ ಗೊಲ್ಲರ ಹಾಲೋಕುಳಿ ಮುಗಿದ ನಂತರವೇ ತೇರು ಎಳೆಯಲಾಗುತ್ತದೆ.

ಕೊಕ್ಕಡ ಕೋರಿ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಗ್ರಾಮದಲ್ಲಿ ಒಂದು ದಿನಕಾಲ   ಬೃಹತ್ ದನಗಳ ಜಾತ್ರೆ ನಡೆಯುತ್ತದೆ. ಕೊಕ್ಕಡ ಎಂಬುದು ಊರಿನ ಹೆಸರಾದರೆ, ಕೋರಿ ತುಳು ಪದ, ಹಾಗೆಂದರೆ ಹೂಟೆ ಮಾಡಿದ ಗದ್ದೆ ಎಂದರ್ಥ.

ಈ ಜಾತ್ರೆಯಲ್ಲಿ  ಜಾನುವಾರುಗಳ ಕೊಡು-ಕೊಳ್ಳುವಿಕೆಯ ವಹಿವಾಟೇನೂ ನಡೆಯುವುದಿಲ್ಲ. ಜಾನುವಾರುಗಳ ಮಾಲೀಕರು ತಮ್ಮ ಜಾನುವಾರುಗಳಿಗೆ ಕಾಯಿಲೆ ಆದರೆ ಈ ಜಾತ್ರೆಗೆ ಹೊಡೆದುಕೊಂಡು ಬಂದು ಕೋರಿ ಗದ್ದೆಗೆ ಇಳಿಸುತ್ತೇನೆ ಅಥವಾ ಒಂದು ಹಿಡಿ ಹಸಿರು ಸೊಪ್ಪನ್ನು ಕೋರಿ ಗದ್ದೆಗೆ ಹಾಕುತ್ತೇನೆ ಎಂದು ಹರಕೆ ಹೊತ್ತಿರುತ್ತಾರೆ. ಹೀಗೆ ಹರಕೆ ಹೊತ್ತರೆ ಅವುಗಳಿಗೆ ಬಂದ ಕಾಯಿಲೆ ವಾಸಿಯಾಗುತ್ತದೆ ಎಂಬ ಬಲವಾದ ನಂಬಿಕೆ ಇದೆ. ಈ ಹರಕೆಯನ್ನು ನೆರವೇರಿಸುವ ಸಲುವಾಗಿ ಒಂದು ನಿರ್ದಿಷ್ಟ ದಿನದಂದು ಎಲ್ಲರೂ ಇಲ್ಲಿ ಸೇರುತ್ತಾರೆ.