ಪ್ರಪಂಚದಲ್ಲಿ ನೂರಾರು ಭಾಷೆಗಳಿವೆ. ಪ್ರಪಂಚದ ಎಲ್ಲ ದೇಶಗಳವರೂ ಓದಬೇಕು ಎನ್ನುವಂತಹ ಶ್ರೇಷ್ಠ ಸಾಹಿತ್ಯ ಇರುವುದು ಕೆಲವು ಭಾಷೆಗಳಲ್ಲಿ. ಇಂಥ ವಿಶ್ವ ಮಾನ್ಯವಾದ ಸಾಹಿತ್ಯವನ್ನು ಪಡೆದಿರುವ ಭಾಷೆಗಳಲ್ಲಿ ಸಂಸ್ಕೃತವು ಅತಿ ಪ್ರಾಚೀನವಾದ ಭಾಷೆ. ಇದು ಹಿಂದಿ, ಬಂಗಾಲಿ, ಮರಾಠಿ ಮೊದಲಾದ ಉತ್ತರ ಭಾರತದ ಭಾಷೆಗಳಿಗೆ ತಾಯಿ ಭಾಷೆ. ದಕ್ಷಿಣ ಭಾರತದ ಕನ್ನಡ, ತೆಲುಗು ಮೊದಲಾದ ಭಾಷೆಗಳೂ ಇದರಿಂದ ಪೋಷಣೆಯನ್ನು ಪಡೆದಿವೆ.

ಒಂದು ಭಾಷೆಯು ವಿಶ್ವಮಾನ್ಯತೆಯನ್ನು ಪಡೆಯಬೇಕಾದರೆ ಅದರಲ್ಲಿ ವಿಶ್ವವಿಖ್ಯಾತವಾಗುವಂಥ ಕೃತಿಗಳನ್ನು ರಚಿಸಿರುವ ಕವಿಗಳಿರಬೇಕು, ಜೀವನದ ವಿಷಯ ಆಳವಾಗಿ ಯೋಚಿಸಿದ ಜ್ಞಾನಿಗಳಿರಬೇಕು . ಈ ಭಾಗ್ಯವನ್ನು ಸಂಸ್ಕೃತವು ಪಡೆದಿದೆ. ಋಷಿಗಳು ಆಕಾಶ, ನಕ್ಷತ್ರ, ನದಿ, ಪರ್ವತ, ಸೂರ್ಯ, ಚಂದ್ರ, ಮೇಘ, ಅಗ್ನಿ ಇವುಗಳನ್ನು ನೋಡಿ ವಿಸ್ಮಿತರಾಗಿ ವಿಶ್ವಶಕ್ತಿಯನ್ನು ಸ್ತುತಿಸಿ ಹಾಡಿದ ವೇದಕಾವ್ಯಗಳು ಸಂಸ್ಕೃತದಲ್ಲಿವೆ. ಒಳ್ಳೆಯದು ಮತ್ತು ಕೆಟ್ಟದ್ದು ಇವುಗಳ ಹೋರಾಟವನ್ನು ತೋರಿಸುವ ಮತ್ತು ಸತ್ಯನಿಷ್ಠೆ, ತ್ಯಾಗ, ಶೌರ್ಯ ಮೊದಲಾದ ಗುಣಗಳನ್ನು ಚಿತ್ರಿಸುವ ರಾಮಾಯಣ, ಮಹಾಭಾರತ ಮೊದಲಾದ ಇತಿಹಾಸ-ಪುರಾಣಗಳಿವೆ. ವ್ಯವಹಾರಚಾತುರ್ಯ ಮತ್ತು ವಿವೇಕವನ್ನು ತಂದುಕೊಡುವ ಪಂಚತಂತ್ರವೇ ಮೊದಲಾದ ಪಶುಪಕ್ಷಿಗಳ ಕಥೆಗಳಿವೆ. ವಿಪುಲವಾಗಿ ಬೆಳೆದ ಕಾವ್ಯ-ನಾಟಕ ಸಾಹಿತ್ಯವು, ಶಾಸ್ತ್ರ ಸಾಹಿತ್ಯವೂ ಇದೆ.

ಇಷ್ಟೊಂದು ವಿಶಾಲವಾಗಿ ಬೆಳದ ಸಂಸ್ಕೃತ ಸಾಹಿತ್ಯಕ್ಕೆ ಕಾಣಿಕೆಯನ್ನು ಸಲ್ಲಿಸಿದವರಲ್ಲಿ ಕಾಳಿದಾಸನ ಹೆಸರು ಎಂದೂ ನಿಲ್ಲುವಂತಹದು. ಜೀವನದಲ್ಲಿ ಸುಂದರವಾದದ್ದು, ಸಂತೋಷವನ್ನು ಕೊಡುವುದು ಇವನ್ನು ಬಹು ಚೆನ್ನಾಗಿ ವರ್ಣಿಸಿದ್ದಾನೆ. ಸೊಗಸಾದ, ಕಣ್ಣಿಗೆ ಚಿತ್ರಗಳನ್ನು ಕಟ್ಟುವಂತಹ ಮಾತುಗಳನ್ನು ಆರಿಸುತ್ತಾನೆ; ಕೆಲವೇ ಮಾತುಗಳಲ್ಲಿ ತುಂಬ ಅರ್ಥವನ್ನು ತುಂಬುತ್ತಾಣೆ. ಒಳ್ಳೆಯ ಜೀವನ, ಮನುಷ್ಯರಿಗೆ ಯೋಗ್ಯವಾದ ಜೀವನ ಇದನ್ನು ಚಿತ್ರಿಸಿದ್ದಾನೆ- ಈ ಚಿತ್ರ ವಿಚಾರವಂತರ ಮನಸ್ಸನ್ನು ಸೆಳೆಯುವಂತಹದು.

ವಿದ್ವಾಂಸಶ್ರೇಷ್ಠ ಕವಿ

ಈ ಕಾಳಿದಾಸ ಯಾರು? ಯಾವ ಕಾಲದಲ್ಲಿದ್ದ ಭಾರತದಲ್ಲಿ ಎಲ್ಲಿದ್ದ?

ಕಾಳಿದಾಸನ ದೇಶ, ಕಾಲಗಳ ವಿಚಾರದಲ್ಲಿ ಬೇಕಾದಷ್ಟು ಚರ್ಚೆಯಾಗಿದೆ. ಆದರೆ ಹೀಗೆಯೇ ಎಂದು ಖಚಿತವಾಗಿ ಉತ್ತರ ಹೇಳುವ ಹಾಗಿಲ್ಲ.

ಇವನ ವಿಷಯವಾಗಿ ಅನೇಕ ಕಥೆಗಳು ಹಬ್ಬಿವೆ. ಉದಾಹರಣೆಗೆ ಒಂದು ಕಥೆಯ ಪ್ರಕಾರ ಇವನು ಒಬ್ಬ ಬ್ರಾಹ್ಮಣನ ಮಗ. ಆರು ತಿಂಗಳ ಮಗುವಾಗಿದ್ದಾಗಲೇ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡ. ಗೊಲ್ಲನೊಬ್ಬ ಇವನನ್ನು ಸಾಕಿದ. ಇವನು ಏನೂ ವಿದ್ಯೆ ಇಲ್ಲದೆ ಬೆಳೆದ. ಕಾಶಿಯ ದೊರೆ ಭೀಮಶುಕ್ಲ ಎಂಬುವನು. ಅವನಿಗೊಬ್ಬ ಮಗಳು, ವಾಸಂತಿ. ದೊರೆಯ ಆಸ್ಥಾನದಲ್ಲಿ ವರರುಚಿ ಎಂಬ ಪ್ರಸಿದ್ಧ ವಿದ್ವಾಂಸ. “ವರರುಚಿಯನ್ನು ಮದುವೆ ಮಾಡಿಕೋ” ಎಂದು ರಾಜ ಮಗಳಿಗೆ ಹೇಳಿದ. ಅವನಿಗಿಂತ ತಾನೇ ವಿದ್ವಾಂಸಳು ಎಂಬ ಹೆಮ್ಮೆಯಿಂದ ವಾಸಂತಿ ಒಪ್ಪಲಿಲ್ಲ. ವರರುಚಿಗೆ ತುಂಬ ಕೋಪ ಬಂದಿತು. ಒಂದ ದಿನ ಗೊಲ್ಲರ ಹುಡುಗ ಒಂದು ಮರದ ತುದಿಯ ಮೇಲೆ ಕುಳಿತಿದ್ದ, ಕೊಂಬೆಯ ಬುಡವನ್ನು ಕತ್ತರಿಸುತ್ತಿದ್ದ. ಇದನ್ನು ನೋಡಿ ರಾಜ್ಯದ ಮಂತ್ರಿ, ಎಷ್ಟು ದಡ್ಡ ಇವನು! ಇವನೇ ರಾಜಕುಮಾರಿಯ ಗಂಡನಾಗಲಿ! ಎಂದು ಅವನನ್ನು ಕರೆದುಕೊಂಡು ಬಂದ. ಗೊಲ್ಲರ ಹುಡುಗನಿಗೆ ಒಳ್ಳೆಯ ಉಡುಪು ಹಾಕಿ ಆಸ್ಥಾನಕ್ಕೆ ಕರೆದುಕೊಂಡು ಹೋದರು. ‘ಓಂ ಸ್ವಸ್ತಿ’ ಎಂದು ಮಾತ್ರ ಹೇಳಬೇಕು, ಮತ್ತೆ ಬಾಯಿ ಬಿಡಬಾರದು ಎಂದು ಹೇಳಿಕೊಟ್ಟಿದ್ದರು. ಹುಡುಗ ಒಳ್ಳೆಯ ತೇಜಸ್ವಿ. ವರರುಚಿಯೂ, ಮಂತ್ರಿಯೂ ಸೇರಿ ಅವನು ಬಹು ದೊಡ್ಡ ವಿದ್ವಾಂಸ ಎಂದು ವಾಸಂತಿಗೆ ನಂಬಿಕೆ ಬರುವ ಹಾಗೆ ಮಾಡಿದರು. ಅವಳು ಅವನನ್ನು ಮದುವೆಯಾದಳು. ಮದುವೆಯಾದ ಮೇಲೆ ಅವಳಿಗೆ ನಿಜಾಂಶ ತಿಳಿಯಿತು. ತುಂಬ ದುಃಖವಾಯಿತು. ಅವಳು ಪೂಜಿಸುತ್ತಿದ್ದುದು ಕಾಳಿದೇವಿಯನ್ನು. ಆ ದೇವಿಯನ್ನೆ ಪೂಜಿಸುವಂತೆ ಗಂಡನಿಗೆ ಹೇಳಿಕೊಟ್ಟಳು. ಹುಡುಗ ಎಷ್ಟೇ ಪೂಜಿಸಿದರೂ ಪ್ರಯೋಜನವಾಗಲಿಲ್ಲ. ಕಡೆಗೆ ಕಾಳಿ ಅನುಗ್ರಹ ಮಾಡದಿದ್ದರೆ ಪ್ರಾಣ ಒಪ್ಪಿಸುವೆನೆಂದು ಹಠ ಹಿಡಿದ . ಅವನ ಭಕ್ತಿಗೆ ಮೆಚ್ಚಿ ದೇವಿ ಪ್ರತ್ಯಕ್ಷಳಾದಳು. ಅವನ ನಾಲಿಗೆಯ ಮೇಲೆ ಅಕ್ಷರಗಳನ್ನು ಬರೆದಳು. ಅವನು ಮಹಾಕವಿಯಾದ, ವಿದ್ವಾಂಸನಾದ. ಕಾಳಿ ತನಗೆ ಅನುಗ್ರಹ ಮಾಡಿದ್ದರಿಂದ, ‘ಕಾಳಿದಾಸ’ ಎಮಬ ಹೆಸರಿಟ್ಟುಕೊಂಡ. ಇದು ಬಹು ಜನಪ್ರಿಯವಾದ ಕಥೆ. ಇಂತಹ ಕಥೆಗಳು ಹಲವು ಉಂಟು. ಕೇಳಲು ಚೆನ್ನಾಗಿವೆ, ಆದರೆ ಇವನ್ನು ವಾಸ್ತವಿಕ ಎಂದು ನಂಬುವಂತಿಲ್ಲ.

ಕಾಳಿದಾಸ ವಿಕ್ರಮಾದಿತ್ಯ ಎಂಬ ಚಕ್ರವರ್ತಿಯ ಆಸ್ಥಾನದಲ್ಲಿದ್ದ ಎಂದು ಕಾಣುತ್ತದೆ. ಆದರೆ ಈ ವಿಕ್ರಮಾದಿತ್ಯ ಯಾವ ಕಾಲದಲ್ಲಿದ್ದ, ಎಲ್ಲಿದ್ದ ಎಂಬುದನ್ನು ಖಂಡಿತವಾಗಿ ಹೇಳುವುದು ಸಾಧ್ಯವಿಲ್ಲ. ಕ್ರಿಸ್ತಶಕ ಆರನೆಯ ಶತಮಾನಕ್ಕೆ ಮೊದಲು-ಎಂದರೆ ಸುಮಾರು ಒಂದು ಸಾವಿರದ ನಾಲ್ಕು ನೂರು ವರ್ಷಗಳಿಗೂ ಮೊದಲು ಕಾಳಿದಾಸ ಜೀವಿಸಿದ್ದ ಎಂಬುದಂತೂ ಖಚಿತ. ಆದರೆ, ಆರನೆಯ ಶತಮಾನಕ್ಕೆ ಎಷ್ಟು ಮೊದಲು? ಸರಿಯಾಗಿ ತಿಳಿದಿಲ್ಲ. ಅವನು ಬರೆದಿರುವ ಕೃತಿಗಳಿಂದ ಉಜ್ಜಯಿನಿ ಎಂದರೆ ಅವನಿಗೆ ತುಂಬ ಪ್ರೀತಿ ಎಂದು ತೋರಿಬರುತ್ತದೆ. ಅವನು ಉಜ್ಜಯಿನಿಯಲ್ಲಿಯೆ ಹುಟ್ಟಿದವನೆ? ಇದನ್ನೂ ಹೇಳುವಂತಿಲ್ಲ . ಆದರೆ ಅವನು ಎಲ್ಲಿಯೇ ಹುಟ್ಟಿರಲಿ, ಉಜ್ಜಯಿನಿ ನಗರದಲ್ಲಿ ವಾಸ ಮಾಡುತ್ತಿದ್ದ ಎನ್ನಬಹುದು.

ಆದರೆ ಅವನಿಗೆ ಸಮಗ್ರ ಭಾರತದ ಪರಿಚಯವಿದ್ದಿತು. ‘ಮೇಘದೂತ’ ಎನ್ನುವ ಕಾವ್ಯದಲ್ಲಿ ಮಧ್ಯಭಾರತದಲ್ಲಿದ್ದ ರಾಮಗಿರಿಯಿಂದ ಹಿಮಾಲಯದ ಪ್ರದೇಶದಲ್ಲಿದ್ದ ಅಲಕಾನಗರಿಯವರೆಗಿನ ನದಿ, ಪರ್ವತ, ನಗರ, ಗ್ರಾಮಾಂತರ ಪ್ರದೇಶಗಳನ್ನು ಸುಂದರವಾಗಿ ವರ್ಣಿಸುತ್ತಾನೆ. ‘ರಘುವಂಶ’ ಎಂಬ ಕಾವ್ಯವನ್ನು ಕಾಳಿದಾಸ ಬರೆದ. ಇದರ ನಾಲ್ಕನೆಯ ಸರ್ಗ (ಅಧ್ಯಾಯ) ದಲ್ಲಿ ರಘು ಎಂಬ ಮಹಾರಾಜನ ದಿಗ್ವಿಜಯವನ್ನು ವರ್ಣಿಸುವಾಗ ಅಸ್ಸಾಂ, ಬಂಗಾಳ, ಉತ್ಕಲ ಮೊದಲಾದ ಪೂರ್ವ ಭಾರತದ ಪ್ರದೇಶಗಳನ್ನೂ ಪಾಂಡ್ಯ, ಕೇರಳ ಮೊದಲಾದ ದಕ್ಷಿಣ ಭಾರತದ ಪ್ರದೇಶಗಳನ್ನೂ ಸಿಂಧ, ಗಾಂಧಾರ ಮೊದಲಾದ ವಾಯುವ್ಯ ಭಾರತದ ಪ್ರದೇಶಗಳನ್ನೂ ಅಲ್ಲಿರುವ ನದಿ, ಪರ್ವತಗಳನ್ನೂ ಜನರ ಸ್ವಭಾವ, ಆಹಾರ-ವ್ಯವಹಾರಗಳನ್ನು ವರ್ಣಿಸುತ್ತಾನೆ. ಈ ವರ್ಣನೆಗಳನ್ನು ಓದಿದರೆ ಇವನ್ನು ಅವನು ಕಣ್ಣಾರೆ ನೋಡಿದ್ದಿರಬೇಕು ಎಂದು ತೋರುತ್ತದೆ. ಇದರಿಂದ ಅವನು ಸಮಗ್ರ ಭಾರತವನ್ನು ಸಂಚರಿಸಿದ್ದಿರಬೇಕು. ಪ್ರತಿ ಪ್ರದೇಶದಲ್ಲಿ ಸುಂದರವಾದ ಸ್ಥಳಗಳನ್ನು ನೋಡಿದ್ದಿರಬೇಕು. ಜನರೊಡನೆ ಓಡಾಡಿ ಮಾತನಾಡಿ ಅವರ ಸ್ವಭಾವವನ್ನು ಚೆನ್ನಾಗಿ ತಿಳಿದು ಕೊಂಡಿದ್ದಿರಬೇಕು.

ಕಾಳಿದಾಸನಿಗೆ ಒಳ್ಳೆಯ ಕವಿಗೆ ಇರಬೇಕಾದ ವಿಶೇಷ ಬುದ್ಧಿಶಕ್ತಿ ಇದ್ದಿತು.  ಜೊತೆಗೆ ಅವನು ಅಸಾಧಾರಣ ವಿದ್ವಾಂಸನೂ ಆಗಿದ್ದ. ಅವನ ಕೃತಿಗಳಲ್ಲಿ ಕವಿಯ ಪ್ರತಿಭೆಯು ಒಡೆದು ಕಾಣುವಂತೆ, ಅವನ ವಿದ್ವತ್ತೂ ಮೂಡಿಬಂದಿರುವುದು. ನಮ್ಮ ಜನರ ಜೀವನದಲ್ಲಿ ಯಾವುದು ಒಳ್ಳೆಯದೋ, ನಮ್ಮ ಜನ ಯಾವ ಒಳ್ಳೆಯ ಗುರಿಗಳನ್ನು ಇಟ್ಟುಕೊಂಡಿದ್ದಾರೋ ಅವೆಲ್ಲ ಅವನ ಕೃತಿಗಳಲ್ಲಿ ಸೇರಿಹೋಗಿವೆ. ಅವನು ಅರಮನೆಯ ಐಶ್ವರ್ಯವನ್ನೂ ವರ್ಣಿಸಬಲ್ಲ; ಆಶ್ರಮದ ಸತಿ ಸರಳವಾದ ಶಾಂತವಾದ ಜೀವನವನ್ನೂ ವರ್ಣಿಸಬಲ್ಲ. ಒಟ್ಟಿಗೆ ಇರುವ ಗಂಡ-ಹೆಂಡತಿಯರ ಸಂತೋಷವನ್ನು ವರ್ಣಿಸಬಲ್ಲ. ದೂರ ದೂರವಾದಾಗ ಅವರ ವ್ಯಥೆಯನ್ನೂ ಚಿತ್ರಿಸಬಲ್ಲ. ಗಂಭೀರವಾದ ಸನ್ನಿವೇಶಗಳನ್ನೂ ಸೃಷ್ಟಿಸಬಲ್ಲ; ತಿಳಿಹಾಸವನ್ನೂ ಹರಿಯಿಸಬಲ್ಲ. ಅವನ ಕಲಾಪ್ರೀತಿ, ಮಾತಿನ ಚಾತುರ್ಯ , ವರ್ಣನೆಯ ಜಾಣ್ಮೆ ಅವನ ಎಲ್ಲ ಕೃತಿಗಳಲ್ಲಿಯೂ ಮೂಡಿ ಬಂದಿವೆ.

ಅವನ ಕೃತಿಗಳು ಏಳು. ‘ಕುಮಾರಸಂಭವ’ ಮತ್ತು ‘ರಘುವಂಶ’ ಮಹಾಕಾವ್ಯಗಳು. ‘ಮಾಲವಿಕಾಗ್ನಿ ಮಿತ್ರ’ , ‘ವಿಕ್ರಮೋರ್ವಶೀಯ’, ‘ಅಭಿಜ್ಞಾನ ಶಾಕುಂತಲ’ ಈ ಮೂರ ನಾಟಕಗಳು. ‘ಮೇಘದೂತ’ ಮತ್ತು ‘ಋತು ಸಂಹಾರ’ ಭಾವಕಾವ್ಯಗಳು.

ಕುಮಾರಸಂಭವ

‘ಕುಮಾರಸಂಭವ’ದ ಮೊದಲಿನ ಎಂಟು ಸರ್ಗಗಳು ಮಾತ್ರ ಕಾಳಿದಾಸ ವಿರಚಿತವೆಂದು ವಿಮರ್ಶಕರ ಅಭಿಪ್ರಾಯ. ಇಲ್ಲಿ ಪಾರ್ವತಿ-ಪರಮೇಶ್ವರರ ವಿವಾಹದ ವರ್ಣನೆಯಿದೆ. ಈ ಮಹಾಕಾವ್ಯವು ಹಿಮಾಲಯ ಪರ್ವತದ ವರ್ಣನೆಯಿಂದ ಆರಂಭವಾಗುತ್ತದೆ. “ಹಿಮಾಲಯದಲ್ಲಿ ಅನೇಕ ಶ್ರೇಷ್ಠ ವಸ್ತುಗಳಿವೆ. ಸಿದ್ಧರು, ಕಿನ್ನರರು ಮತ್ತು ವಿದ್ಯಾಧರ ಸುಂದರಿಯರು ಇಲ್ಲಿ ವಾಸ ಮಾಡುತ್ತಾರೆ. ಮೋಡಗಳು ಗುಹೆಗಳ ಬಾಗಿಲುಗಳಿಗೆ ತೆರೆಗಳಂತಿರುವುವು. ಇಲ್ಲಿ ಓಡಾಡುವ ಸಿಂಹಗಳ ಮಾರ್ಗಗಳನ್ನು ಆನೆಯ ತಲೆಗಳಿಂದ ಉದುರಿದ ಮುತ್ತುಗಳಿಂದಲೇ ಗುರುತಿಸಬೇಕು, ರಕ್ತದ ಹನಿಗಳು ಕಾಣುವುದಿಲ್ಲ. ಸರಲ ವೃಕ್ಷಗಳಿಂದ ಸುರಿಯುವ ಮರದ ಹಾಲಿನ ಸುವಾಸನೆಯಿಂದ ಆನೆಗಳು ಈ ವೃಕ್ಷಗಳಿಗೆ ಗಲ್ಲಗಳನ್ನು ತಿಕ್ಕಿಕೊಂಡು ಮುಂದೆ ಹೋದದ್ದನ್ನು ಗುರುತಿಸಬೇಕು. ಇಲ್ಲಿ ಯಜ್ಞಕ್ಕೆ ಬೇಕಾಗುವ ವಸ್ತುಗಳೆಲ್ಲ ದೊರೆಯುವುದರಿಂದ ಸ್ವತಃ ಬ್ರಹ್ಮನೇ ಈ ಹಿಮಾಲಯವನ್ನು ಪರ್ವತ ರಾಜನನ್ನಾಗಿ ಮಾಡಿರುವನು” ಹೀಗೆಂದು ಹಿಮಾಲಯವನ್ನು ವರ್ಣಿಸಿದ್ದಾನೆ. ಪ್ರೇಮದಿಂದ ಸುಖ ಸಂತೋಷ ಪಡುವವರಿಗೂ ಸ್ಥಾನ, ತಪಸ್ಸು ಮಾಡುವವರಿಗೂ ಸ್ಥಳ ಎಂದು ವರ್ಣಿಸಿರುವನು.

ಈ ಹಿಮಾಲಯದ ಪರ್ವತರಾಜನ ಮಗಳು ಪಾರ್ವತಿ. ಕಾಲ ಕಳೆದಂತೆ ಪಾರ್ವತಿ ಸುಂದರಿಯಾದ ತರುಣಿಯಾದಳು. ಶ್ರೇಷ್ಠ ಚಿತ್ರಗಾರನೊಬ್ಬ ಚೆಲುವೆಯಾದ ಹುಡುಗಿಯ ಚಿತ್ರವನ್ನು ಬರೆದ ಎಂದುಕೊಳ್ಳೋಣ. ಚಿತ್ರದಲ್ಲಿ ಹುಡುಗಿ ಎಷ್ಟು ಸುಂದರಿಯಾಗಿರುತ್ತಾಳೆ! ಹಾಗಿದ್ದಳು ಪಾರ್ವತಿ. ಹೆಂಗಸರು ಒಡವೆಗಳನ್ನು ಹಾಕಿಕೊಳ್ಳುತ್ತಾರೆ, ಏಕೆ? ಅದರಿಂದ ಅವರು ಇನ್ನೂ ಚೆನ್ನಾಗಿ ಕಾಣುತ್ತಾರೆ ಎಂದು, ಅಲ್ಲವೆ? ಆದರೆ ಪಾರ್ವತಿಯ ಕೊರಳಲ್ಲಿಯ ಮುತ್ತಿನ ಹಾರವು ಅವಳಿಗೆ ಆಭರಣವಾಗಲಿಲ್ಲವಂತೆ, ಅವಳ ಕೊರಳಿನಿಂದ ಹಾರ ಇನ್ನೂ ಸುಂದರವಾಗಿ ಕಂಡಿತಂತೆ. ಪಾರ್ವತಿಯು ಮಾತನಾಡಿದರೆ ವೀಣೆಯನ್ನು ನುಡಿಸಿದಂತಾಗುವುದು. ನೋಡಿದರೆ ಜಿಂಕೆ ನೋಡಿದಂತಾಗುವುದು.

ನಾರದರು ಎಂಬ ಮಹರ್ಷಿಗಳು ಸದಾ ಸಂಚಾರ ಮಾಡುತ್ತಿದ್ದವರು. ಅವರು ಹಿಮಾಲಯ ಪರ್ವತ ರಾಜನಲ್ಲಿಗೆ ಬಂದರು. ಈ ಸುಂದರ ಕನ್ಯೆಯು ಶಿವನ ಪತ್ನಿಯಾಗುವಳೆಂದು ಭವಿಷ್ಯ ನುಡಿದರು. ಶಿವನು ತನ್ನ ಪ್ರಾರ್ಥನೆ ಎಲ್ಲಿ ಒಪ್ಪುವುದಿಲ್ಲವೋ ಎಂದು ಪರ್ವತ ರಾಜನಿಗೆ ಭಯ. ಅವನು ಪಾರ್ವತಿಯನ್ನು ಮದುವೆಯಾಗು ಎಂದು ಶಿವನನ್ನು ತಾನಾಗಿಯೇ ಕೇಳಲಿಲ್ಲ. ಶಿವನೂ ಹೇಳಿ ಕಳಿಸಲಿಲ್ಲ. ಅವನು ಹಿಮಾಲಯ ಪರ್ವತದ ಅತ್ಯುನ್ನತ ಶಿಖರದಲ್ಲಿ ತಪಸ್ಸಿನಲ್ಲಿ ಮಗ್ನನಾಗಿದ್ದನು. ಹೀಗ ತಪಸ್ಸಿನಲ್ಲಿದ್ದ ಪರಮೇಶ್ವರನ ಸೇವೆಯನ್ನು ಮಾಡಲು ಪರ್ವತರಾಜನು ಪಾರ್ವತಿಯನ್ನು ಕಳಿಸಿಕೊಟ್ಟನು. ಶಿವನು ಅವಳಿಗೆ ಸೇವೆ ಮಾಡಲು ಒಪ್ಪಿಗೆಯನ್ನುಕೊಟ್ಟನು. ಶುದ್ಧಮನಸ್ಸಿನಿಂದ, ಭಕ್ತಿಯಿಂದ ಪಾರ್ವತಿಯು ನಿತ್ಯವೂ ವೇದಿಕೆಯನ್ನು ಸಾರಿಸಿ, ನೀರು, ಹೂವು, ದರ್ಭೆ ಮೊದಲಾದ ತಪಸ್ಸಾಮಗ್ರಿಗಳನ್ನು ತಂದುಕೊಟ್ಟುಪರಮೇಶ್ವರನ ಸೇವೆಯಲ್ಲಿ ನಿರತಳಾದಳು.

ಇದೇ ಸಮಯದಲ್ಲಿ ತಾರಕಾಸುರ ಎಂಬ ರಾಕ್ಷಸನಿಂದ ದೇವತೆಗಳಿಗೆ ಬಹಳ ಕಷ್ಟವಾಯಿತು. ಅವರು ಬ್ರಹ್ಮನನ್ನು ಮೊರೆಹೊಕ್ಕರು. ಪರಮೇಶ್ವರನು ಪಾರ್ವತಿಯನ್ನು ಮದುವೆಯಾಗಬೇಕು, ಅವರ ಮಗ ತುಂಬ ಶೂರನಾಗುತ್ತಾನೆ, ತಾರಕಾಸುರನನ್ನು ಗೆಲ್ಲುತ್ತಾನೆ ಎಂದು ಬ್ರಹ್ಮ ಹೇಳಿದ. ಆದುದರಿಂದ ಪರಮೇಶ್ವರನಿಗೆ ಪಾರ್ವತಿಯನ್ನು ಮದುವೆಯಾಗಬೇಕು ಎನ್ನಿಸುವಂತೆ ಮಾಡಿ ಎಂದು ಬ್ರಹ್ಮನು ಸೂಚಿಸಿದನು.

ಪರಮೇಶ್ವರನು ಒಂದೇ ಮನಸ್ಸಿನಿಂದ ತಪಸ್ಸು ಮಾಡುತ್ತಿದ್ದ. ಅವನು ಪಾರ್ವತಿಯನ್ನು ಮದುವೆಯಾಗುವಂತೆ ಹೇಗೆ ಮಾಡುವುದು?

ದೇವೇಂದ್ರ ದೇವತೆಗಳ ರಾಜ. ಅವನ ಆಸ್ಥಾನದಲ್ಲಿ ಒಬ್ಬ ದೇವತೆ ಕಾಮ. ಅವನ ಹೆಂಡತಿ ರತಿ. ಮದುವೆಯಾಗಬೇಕೆಂಬ ಆಸೇ ಬರುವಂತೆ ಮಾಡಬಲ್ಲ ಶಕ್ತಿ ಕಾಮನಿಗಿತ್ತು. ದೇವೇಂದ್ರ ಅವನನ್ನು ಕರೆದ. ಪಾರ್ವತಿಯನ್ನು ಮದುವೆಯಾಗಬೇಕು ಎಂದು ಅಪ್ಪಣೆ ಮಾಡಿದ. ಕಾಮನು ರತಿಯನ್ನು ತನ್ನ ಸ್ನೇಹಿತ ವಸಂತನನ್ನೂ ಕರೆದುಕೊಂಡು ಹೊರಟ.

ಅದು ವಸಂತ ಋತುವಿನ ಸಮಯವಾಗದಿದ್ದರೂ ಕಾಮನು ವಸಂತ ಋತುವಿನ ವೈಭವವನ್ನು ಸೃಷ್ಟಿಸಿದನು. ದಕ್ಷಿಣ ದಿಕ್ಕಿನಿಂದ ನಿಧಾನವಾಗಿ ಗಾಳಿಯು ಬೀಸತೊಡಗಿತು. ಅಶೋಕ ವೃಕ್ಷವು ಪುಷ್ಪಗಳನ್ನು ಸುರಿಸಿತು. ಮಾವಿನೆಲೆಗಳು ಚಿಗುರಿದವು. ಅವುಗಳಲ್ಲಿ ಭ್ರಮರಗಳು ಗುಂಯಿಗುಟ್ಟತೊಡಗಿದವು. ಮಾವಿನ ಚಿಗುರನ್ನು ಸವಿದು ಕೋಗಿಲೆಗಳು ಹಾಡತೊಡಗಿದವು. ಸೆಕೆಯಿಂದ ಹಿಮವು ಕರಗಿತು.

ಹೀಗೆ ವಸಂತದ ಶೋಭೆಯು ವಿಜೃಂಭಿಸಿದರೂ ಪರಮೇಶ್ವರನು ಒಂದೇ ಮನಸ್ಸಿನಿಂದ ತಪಸ್ಸು ಮಾಡುತ್ತಿದ್ದ. ಕಾಮನು ಪರಮೇಶ್ವರನು ಧ್ಯಾನಮಗ್ನನಾದ ಸ್ಥಳಕ್ಕೆ ಹೋದನು. ಪರಮೇಶ್ವರನು ದೇವದಾರು ವೃಕ್ಷದ ವೇದಿಕೆಯ ಮೇಲೆ ಹುಲಲಿಯ ಚರ್ಮವನ್ನು ಹಾಸಿ ಧ್ಯಾನ ಮಗ್ನನಾಗಿದ್ದ. ಪರಮೇಶ್ವರನ ಭವ್ಯರೂಪವನ್ನು ಕಂಡು ಕಾಮನ ಕೈಯಲ್ಲಿಯ ಬಿಲ್ಲು ಕೆಳಕ್ಕೆ ಬಿದ್ದಿತು. ಇದೂ ಅವನಿಗೆ ತಿಳಿಯಲಿಲ್ಲ. ಆದರೆ ಇದೇ ಸಮಯಕ್ಕೆ ನಿತ್ಯದಂತೆ ಸೇವೆಗೆ ಪಾರ್ವತಿಯು ಅಲ್ಲಿಗೆ ಬಂದಳು. ಇದೀಗ ಮೂಡಿದ ಸೂರ್ಯನ ಕಿರಣಗಳ ಬಣ್ಣದ ಸೀರೆಯನ್ನುಟ್ಟಿದ್ದಳು. ವಸಂತ ಋತುವಿನ ಹೂವುಗಳನ್ನು ಮುಡಿದಿದ್ದಳು. ಬೈತಲೆಯಲ್ಲಿ ಮುತ್ತಿನ ಸರ. ಮುಖಕ್ಕೆ ಮುತ್ತುತ್ತಿದ್ದ ದುಂಬಿಯನ್ನು ಕೈಯಲ್ಲಿರುವ ಕಮಲದಿಂದ ಅತ್ತ ಓಡಿಸಿದಳು. ಒಂದು ಹೂಬಳ್ಳಿಯೇ ನಡೆದುಕೊಂಡು ಬರುವಂತಿದ್ದಳು.

ಪಾರ್ವತಿಯನ್ನು ಕಂಡು ಕಾಮನಿಗೆ ಮತ್ತೆ ತನ್ನ ಕಾರ್ಯವನ್ನು ಸಾಧಿಸುವ ಉತ್ಸಾಹ ತುಂಬಿತು. ಪಾರ್ವತಿಯು ಪ್ರಣಾಮ ಮಾಡಿ ಕಮಲದ ಮಾಲೆಯನ್ನು ಸಮರ್ಪಿಸಲು ಮುಖವೆತ್ತಿ ಕೈಚಾಚಿದಳು. ಪರಮೇಶ್ವರನೂ ಸ್ವೀಕರಿಸಲು ಮುಂದಾದನು. ಇದೇ ಸಮಯವನ್ನು ಸಾಧಿಸಿ ಕಾಮನು ಸಂಮೋಹನಾಸ್ತ್ರವನ್ನು ಹೆದೆಗೇರಿಸಿದನು. ಪರಮೇಶ್ವರನು ಒಂದು ಸಲ ಪಾರ್ವತಿಯ ಕಡೆಗೆ ನೋಡಿದನು. ಕೂಡಲೇ ತನ್ನ ಮನಸ್ಸು ತಪಸ್ಸಿನಿಂದ ಬೇರೆ ಕಡೆಗೆ ತಿರುಗಿದೆ ಎಂದು ತಿಳಿಯಿತು. ಹೀಗೇಕಾಯಿತು ಎಂದು ಎದುರಿಗೆ ನೋಡಿದನು.

ಸಂಮೋಹನಾಸ್ತ್ರವನ್ನು ಹೆದೆಗೆ ಏರಿಸಿ ನಿಂತಿದ್ದ ಕಾಮ.

ಅವನನ್ನು ಕಂಡು ಪರಮೇಶ್ವರನಿಗೆ ಕೋಪ ಬಂದಿತು. ತನ್ನ ಮೂರನೆಯ ಕಣ್ಣನ್ನು ತೆರೆದ. ಧಗಧಗಿಸುವ ಬೆಂಕಿ ಮುಂದೆ ನುಗ್ಗಿತು. ಕಾಮ ಭಸ್ಮವಾಗಿಹೋದ. ಪತಿಯು ಭಸ್ಮವಾದುದನ್ನು ನೋಡಿ ರತಿಯು ಮೂರ್ಛೆ ಹೊಂದಿದಳು. ಪರಮೇಶ್ವರನು ಅಂತರ್ಧಾನನಾದುದರಿಂದ ಖಿನ್ನಳಾದ ಪಾರ್ವತಿಯನ್ನು ತಂದೆ ಮನೆಗೆ ಕರೆದುಕೊಂಡು ಹೋದನು.

ಸ್ವಲ್ಪ ಕಾಲದ ನಂತರ ರತಿ ಮೂರ್ಛೆಯಿಂದ ಎದ್ದಳು. ಬಹುವಿಧವಾಗಿ ದುಃಖಿಸಿದಳು. ನಾನೂ ಪ್ರಾಣ ಬಿಡತ್ತೇನೆ ಎಂದು ತೀರ್ಮಾನಿಸಿದಳು. ಅಷ್ಟರಲ್ಲಿ ಆಕಾಶವಾಣಿಯು, “ಪರಮೇಶ್ವರನು ಪಾರ್ವತಿಯನ್ನು ಮದುವೆಯಾಗುವನು. ಆಗ ನಿನ್ನ ಪತಿಯು ಮತ್ತೆ ಬರುವನು” ಎಂದು ಆಶ್ವಾಸನೆಯನ್ನು ಕೊಟ್ಟಿತು. ರತಿಯು ತನ್ನ ದುಃಖವನ್ನು ತಡೆದು ಕೊಂಡಳು.

ಇತ್ತ ಪಾರ್ವತಿಯು ಕಠೋರವಾದ ತಪಸ್ಸನ್ನು ಕೈಗೊಂಡಳು. ಸುತ್ತಲು ಅಗ್ನಿಯನ್ನು ಹೊತ್ತಿಸಿಕೊಂಡು ಉರಿ ಬಿಸಿಲಿನಲ್ಲಿ ಸೂರ್ಯನನ್ನು ದಿಟ್ಟಿಸುವಳು. ಸುರಿಯುವ ಮಳೆಯಲ್ಲಿಯೇ ಕುಳಿತಿರುವಳು. ಕೊರೆಯುವ ಚಳಿಯನ್ನು  ಸಹಿಸುವಳು. ಹೀಗ ಘೋರ ತಪಸ್ಸಿನಲ್ಲಿ ತೊಡಗಿದ ಅವಳ ಮನಸ್ಸನ್ನು ಪರೀಕ್ಷಿಸಲು ಪರಮೇಶ್ವರನೇ ಬ್ರಹ್ಮಚಾರಿಯ ವೇಷದಲ್ಲಿ ಬಂದ. ಪಾರ್ವತಿಯ ಮುಂದೆ ಶಿವನನ್ನು ನಿಂದಿಸಿದ. “ಅವನ ಹಾವು ಸುತ್ತಿದ ಕೈಗೆ ಕಂಕಣದ ಕೈಯನ್ನೇಕೆ ತೊಡಕಿಸುವೆ? ಗಜ ಚರ್ಮವನ್ನು ಸುತ್ತಿದ ಅವನ ಮೈಗೆ ರೇಶ್ಮೆಯ ಬಟ್ಟೆಯ ಸಂಪರ್ಕವೇಕೆ? ಮುದಿ ಎತ್ತಿನ ಮೇಲೆ ಶಿವನೊಡನೆ ಸವಾರಿ ಮಾಡಿದರೆ ಜನರು ನಗಲಿಕ್ಕಿಲ್ಲವೆ? ಮೂರು ಕಣ್ಣುಗಳ ವಿರೂಪ. ದಿಗಂಬರತೆಯೇ ಐಶ್ವರ್ಯ. ಇಂಥ ವರನನ್ನೇಕೆ ಮದುವೆಯಾಗುವೆ? ಎಂದು ನಿಂದಿಸಿದ. ಪಾರ್ವತಿಯ ಮನಸ್ಸನ್ನು ಪರೀಕ್ಷಿಸಿದ. ಪಾರ್ವತಿಗೆ ಬ್ರಹ್ಮಚಾರಿ ಶಿವ ಎಂದು ತಿಳಿಯದು. ಇವನ ಈ ಮಾತುಗಳಿಂದ ಕೋಪಗೊಂಡು, ಈ ವಟುವಿಗೆ ಆಚೆಗೆ ಹೋಗಲು ಹೇಳು” ಎಂದು ಸಖಿಗೆ ಹೇಳಿದಳು, ತಾನೇ ಅಲ್ಲಿಂದ ಹೊರಟಳು. ಆಗ ಶಿವನು ಪ್ರತ್ಯಕ್ಷನಾದ. ಶಿವನನ್ನು ಕಂಡ ಸಂಭ್ರಮದಿಂದ ಪಾರ್ವತಿಯು ಬೆವೆತು ಮುಂದೆಯೂ ಹೆಜ್ಜೆಯಿಡದೆ ಇದ್ದಲ್ಲಿಯೂ ಇರದೆ ಕಕ್ಕಾವಿಕ್ಕಿಯಾದಳು ಎಂಬುದನ್ನು ಕವಿಯು ಸುಂದರವಾಗಿ ವರ್ಣಿಸಿದ್ದಾನೆ.

ಬ್ರಹ್ಮಚಾರಿಯ ಮಾತುಗಳನ್ನು ಕೇಳಿ ಪಾರ್ವತಿಯು ಹೊರಟಾಗ ಶಿವನು ಪ್ರತ್ಯಕ್ಷನಾದ.

ತನ್ನೊಡನೆ ವಿವಾಹದ ವಿಷಯವನ್ನು ತನ್ನ ತಂದೆಯೊಡನೆ ಮಾತನಾಡಬೇಕೆಂದು ಪಾರ್ವತಿಯು ಸಖಿಯ ಮುಖಾಂತರ ಪರಮೇಶ್ವರನಿಗೆ ಸೂಚಿಸಿದಳು. ಪರಮೇಶ್ವರನು ಸಪ್ತರ್ಷಿಗಳ ಮುಖಾಂತರ ಸಂದೇಶವನ್ನು ಕಳಿಸಿದ. ಹಿಮಾಲಯ ಪರ್ವತರಾಜನು ಸಂತೋಷದಿಂದ ಒಪ್ಪಿಕೊಂಡನು.  ಪಾರ್ವತಿ ಪರಮೇಶ್ವರರ ವಿವಾಹವು ವಿಜೃಂಭಣೆಯಿಂದ ನಡೆಯಿತು.

‘ಕುಮಾರಸಂಭವ’ದಲ್ಲಿ ಕಾಳಿದಾಸನೇ ಬರೆದ ಭಾಗವು ಇಲ್ಲಿಗೆ ಮುಗಿಯುತ್ತದೆ. ಅವನ ಮಗ ಕುಮಾರನ ಜನ್ಮ, ಅವನು ದೇವತೆಗಳು ಸೇನಾಪತ್ಯವನ್ನು ವಹಿಸುವುದು ಮತ್ತು ತಾರಕಾಸುರನ ವಧೆ ಇವುಗಳ ಮುಂದಿನ ಭಾಗವನ್ನು ಬೇರೊಬ್ಬ ಕವಿಯು ಬರೆದಿರುವನು.

ಕಾಳಿದಾಸನು ಬರೆದ ‘ಕುಮಾರಸಂಭವ’ದ ಭಾಗದಲ್ಲಿ ಕಾಳಿದಾಸನ ಕೃತಿಗಳ ಮೂರು ವೈಶಿಷ್ಟ್ಯಗಳು-ಸೌಂದರ್ಯ, ರಸಿಕತೆ ಮತ್ತು ಸಂಸ್ಕೃತಿ – ಎದ್ದು ಕಾಣುತ್ತವೆ. ಹಿಮಾಲಯ ಪರ್ವತವನ್ನು ಶಿವನು ತಪಸ್ಸು ಮಾಡುತ್ತಿದ್ದ ವನದಲ್ಲಿ ವಸಂತ ಋತು ಬೆಳಗಿದುದನ್ನೂ ಕಾಳಿದಾಸ ವರ್ಣಿಸುತ್ತಾನೆ; ಓದುತ್ತಿದ್ದರೆ ಆ ದೃಶ್ಯಗಳು ನಮ್ಮ ಕಣ್ಣ ಮುಂದೆಯೇ ಇವೆ ಎನ್ನಿಸುತ್ತದೆ. ಸುಂದರಿಯಾದ ಪಾರ್ವತಿಯ ವರ್ಣನೆಯೂ ಕಾಳಿದಾಸನ ಪ್ರತಿಭೆಗೆ ಸಾಕ್ಷಿ. ಕಾಮನು ಬೂದಿಯಾದಾಗ ರತಿಯ ದುಃಖ ಮನಸ್ಸನ್ನು ಕರಗಿಸುವಂತಿದೆ. ಮದುವೆಯಾದನಂತರ ಪಾರ್ವತಿ – ಪರಮೇಶ್ವರರ ಸುಖ ಸಂತೋಷದ ವರ್ಣನೆ, ಒಬ್ಬರನ್ನೊಬ್ಬರು ಪ್ರೀತಿಸುವ ಗಂಡ-ಹೆಂಡತಿಯರ ಜೀವನದ ಸುಂದರ ವರ್ಣನೆ, ಹೀಗೆ ಕಾಳಿದಾಸ ನಿಸರ್ಗದ ಚೆಲುವು ಮನುಷ್ಯರ ಚೆಲುವು ಎರಡನ್ನೂ ಕಣ್ಣಿಗೆ ಕಟ್ಟುವಂತೆ ವರ್ಣಿಸಬಲ್ಲ; ದುಃಖ, ಸಂತೋಷ ಎಲ್ಲ ಭಾವಗಳನ್ನೂ ವರ್ಣಿಸಬಲ್ಲ.

ದುಷ್ಯಂತನು ಮಾರೀಚಾಶ್ರಮದಲ್ಲಿ ಶಕುಂತಲೆ ಮತ್ತು ಸರ್ವದಮನರನ್ನು ಮತ್ತೆ ಸೇರುತ್ತಾನೆ.

 ಈ ಸೌಂದರ್ಯ ಮತ್ತು ಸರಸತೆಗಿಂತಲೂ ಮಿಗಿಲಾಗಿ ಚಿತ್ರಿತವಾದುದು ಸಂಸ್ಕೃತಿ. ಸಂಸ್ಕೃತಿ ಎಂದರೆ ಚೆನ್ನಾಗಿ ನಡೆದುಕೊಳ್ಳುವ ಮನಸ್ಸಿನ ಸ್ಥಿತಿ. ಅರಳಿದ ಹೂವಿನ ಬಣ್ಣ, ಸುವಾಸನೆ ಎಲ್ಲರಿಗೂ ಸಂತೋಷವನ್ನು ಕೊಡುವುದಲ್ಲದೆ? ಅರಳಿದ ಮನಸ್ಸಿನ ವ್ಯಕ್ತಿಯ ಯೋಚನೆ, ಮಾತು, ನಡೆ ಇವೂ ಹೀಗೆಯೇ – ಇತರರಿಗೆ ಸಂತೋಷವನ್ನು ಕೊಡುವಂತಹವು. ಕಾಳಿದಾಸ ಕಣ್ಣಿಗೆ ಕಾಣುವ ರೂಪದ ಸೌಂದರ್ಯವನ್ನು ಸೊಗಸಾಗಿ ಚಿತ್ರಿಸಿದ್ದಾನೆ ಎಂದು ಆಗಲೇ ನೋಡಿದೆವು. ನಡತೆಯ ಸೌಂದರ್ಯವನ್ನೂ ಅವನು ಬಹು ಸೊಗಸಾಗಿ ಚಿತ್ರಿಸಬಲ್ಲ. ಪಾರ್ವತಿಯು ಪರಮೇಶ್ವರನ ಪತ್ನಿಯಾಗಲಿರುವಳು ಎಂಬುದನ್ನು ನಾರದರು ಸೂಚಿಸಿದರೂ ಹಿಮಾಲಯ ಪರ್ವತರಾಜನು ತಾನಾಗಿಯೇ ಕೇಳಲು ಹೋಗದಿರುವುದು. ಪರಮೇಶ್ವರನ ಸೇವೆಗೆ ಪಾರ್ವತಿ ಹೋಗಲು ಅವನು ಒಪ್ಪಿಗೆ ಕೊಡುವುದು , ಅವಳ ತಪಸ್ಸಿಗೆ ಒಪ್ಪುವುದು, ಸಪ್ತರ್ಷಿಗಳು ಬಂದು ಕೇಳಿದಾಗ ಒಪ್ಪುವುದು, ಇವೆಲ್ಲ ಪರ್ವತರಾಜನ ಗೌರವಯುತವಾದ ಆದರೆ ವಿನಯ ಮಧುರವಾದ ವರ್ತನೆಯನ್ನು ಸೂಚಿಸುವವು. ಪಾರ್ವತಿಯು ಬೇರೆ ಯಾವ ಯೋಚನೆಯೂ ಮನಸ್ಸಿಗೆ ಬರಲು ಅವಕಾಶವನ್ನೇ ಕೊಡುವುದಿಲ್ಲ. ಪರಮೇಶ್ವರನ ಆರಾಧನೆಯಲ್ಲಿ ತೊಡಗುತ್ತಾಳೆ. ಅವನಿಗಾಗಿ ಕಠೋರ ತಪಸ್ಸನ್ನು ಮಾಡುತ್ತಾಳೆ, ಅವನ ನಿಂದೆಯನ್ನು ಸಹಿಸದೆ ತಾನೇ ಹೊರಟುಬಿಡುತ್ತಾಳೆ; ಇವೆಲ್ಲ ಅವಳ ಅತ್ಯುನ್ನತ ಸಂಸ್ಕೃತಿಯನ್ನು ಸೂಚಿಸುವುವು. ಪರಮೇಶ್ವರನು ಪಾರ್ವತಿಯ ಲಾವಣ್ಯದಿಂದ ತುಸು ವಿಚಲಿತನಾದರೂ ಕಾಮನನ್ನೇ ದಹಿಸುವುದು, ಪಾರ್ವತಿಯ ಮನಸ್ಸಿನ ಪರೀಕ್ಷೆಯನ್ನು ಮಾಡುವುದು, ಸಪ್ತರ್ಷಿಗಳ ಮುಖಾಂತರ ಸಂದೇಶವನ್ನು ಕಳಿಸುವುದು ಇವೆಲ್ಲ ಅವನ ಪಕ್ವ ಮನಸ್ಸಿನ ರೀತಿಯನ್ನು ತೋರಿಸುತ್ತವೆ. ಪರಮೇಶ್ವರನು ಪಾರ್ವತಿಯ ಸೌಂದರ್ಯವನ್ನು ನೋಡಿ ಅವಳನ್ನು ಮದುವೆಯಾಗಬೇಕೆಂದು ಆಸೆಪಡಲಿಲ್ಲ. ಹಾಗೆ ಆಸೆ ಬರುವಂತೆ ಮಾಡಲು ಬಂದ ಕಾಮನನ್ನು ಸುಟ್ಟ. ಆದರೆ ಪಾರ್ವತಿಯ ಒಳ್ಳೆಯ ಗುಣಗಳು, ತಪಸ್ಸು ಇವನ್ನು ಮೆಚ್ಚಿದ. ಪರಮೇಶ್ವರನೂ ತಪಸ್ವಿ, ಪಾರ್ವತಿಯೂ ತಪಸ್ವಿನಿ. ಇಂತಹ ಶುದ್ಧ ಮನಸ್ಸಿನ ತಪಸ್ವಿಗಳ ಮಗ ಕುಮಾರ. ತಂದೆತಾಯಿಯರ ತಪಸ್ಸು ಅವನಿಗೆ ತಾರಕಾಸುರನನ್ನೂ ಕೊಲ್ಲುವ ಶಕ್ತಿಯನ್ನು ಕೊಟ್ಟಿತು.

ನಮ್ಮ ಹಿರಿಯರು ಎಂತಹ ಮನುಷ್ಯನ ಬಾಳು ಚೆನ್ನ ಎಂದು ಹೇಳುತ್ತಿದ್ದರು ಎಂಬುದನ್ನು ಕಾಳಿದಾಸನ ಕಾವ್ಯದಿಂದ ತಿಳಿಯಬಹುದು.

ರಘುವಂಶ

ಕಾಳಿದಾಸನ ಎರಡನೆಯ ಮಹಾಕಾವ್ಯ ‘ರಘುವಂಶ’ ಈ ಮಹಾಕಾವ್ಯದಲ್ಲಿ ಹತ್ತೊಂಬತ್ತು ಸರ್ಗಗಳಿವೆ. ದಿಲೀಪ, ರಘು, ಅಜ, ದಶರಥ, ರಾಮ, ಕುಶ, ಅತಿಥಿ ಈ ರಾಜರ ಚರಿತ್ರೆಯನ್ನು ವಿಶದವಾಗಿಯೂ ನಿಷಧ, ನಲರಿಂದ ಅಗ್ನಿ ವರ್ಣನವರೆಗಿನ ಇಪ್ಪತ್ತು ರಾಝರ ಚರಿತ್ರೆಯನ್ನು ಸಂಕ್ಷಿಪ್ತವಾಗಿಯೂ ವರ್ಣಿಸಲಾಗಿದೆ. ಕಾವ್ಯದ ಆರಂಭದಲ್ಲಿ ರಘುವಂಶದ ರಾಜರ ಸದ್ಗುಣಗಳನ್ನು ಕವಿಯು ಉಲ್ಲೇಖಿಸುತ್ತಾನೆ. ಇವರು ಬಾಲ್ಯದಲ್ಲಿ ವಿದ್ಯೆಯನ್ನು ಕಲಿಯುತ್ತಾರೆ. ತರುಣರಾದಾಗ ಮದುವೆ ಮಾಡಿಕೊಂಡು, ಧರ್ಮದಿಂದ ರಾಜ್ಯವಾಳುತ್ತಾರೆ. ಮುಪ್ಪಿನಲ್ಲಿ ರಾಜ್ಯವನ್ನು ಬಿಟ್ಟು ಹೋಗಿ ಋಷಿಗಳಂತೆ ಬಾಳುತ್ತಾರೆ. ಕೊನೆಗೆ ಯೋಗದಿಂದ ಶರೀರ ತ್ಯಾಗವನ್ನು ಮಾಡುವರು. ಸತ್ಪಾತ್ರರಿಗೆ ಕೊಡುವುದಕ್ಕಾಗಿಯೇ ಧನವನ್ನು ಸಂಪಾದಿಸುವರು. ಯಶಸ್ವಿಗೋಸ್ಕರ ದಿಗ್ವಿಜಯವನ್ನು ಕೈಕೊಳ್ಳುವರು. ಅಪರಾಧಿಗಳನ್ನು ಶಿಕ್ಷಿಸುವರು. ಯಾವಾಗಲು ಜಾಗರೂಕರಾಗಿರುವರು. ಕಾರ್ಯಸಿದ್ಧಿಯಾಗುವವರೆಗೆ ತಮ್ಮ ಪ್ರಯತ್ನವನ್ನು ಬಿಡುವುದಿಲ್ಲ. ಸಮುದ್ರದವರೆಗಿನ ಪ್ರದೇಶಕ್ಕೆ ಒಡೆಯರು. ದೇವಲೋಕಕ್ಕೂ ರಥವನ್ನು ಹೂಡುವರು. ಹೀಗೆ ರಘುವಂಶದ ರಾಜರ ಆದರ್ಶ ಗುಣಗಳನ್ನು ಚಿತ್ರಿಸಿ ಈ ಗುಣಗಳುಳ್ಳ ಮಹಾ ಪುರುಷರ ಚರಿತ್ರೆಯನ್ನು ನಿವೇದಿಸಬೇಕೆಂದೇ ಈ ಕಾವ್ಯವನ್ನು ಬರೆಯುತ್ತಿರುವುದಾಗಿ ಕವಿ ಹೇಳುವನು. ಕಥೆಯು ದಿಲೀಪನಿಂದ ಆರಂಭವಾಗುವುದು.

ದಿಲೀಪನು ಎತ್ತರವಾದ ವ್ಯಕ್ತಿ. ಅವನದು ವಿಶಾಲವಾದ ಎದೆ, ಎತ್ತರವಾದ ಹೆಗಲುಗಳು, ಆಜಾನು ಬಾಹುಗಳು. ಕ್ಷಾತ್ರಧರ್ಮವೇ ರೂಪವನ್ನು ತಾಳಿ ಬಂದಂತಿರುವವನು. ಅವನ ಆಕಾರಕ್ಕೆ ತಕ್ಕಂತೆ ಅವನ ಪ್ರಜ್ಞೆ, ಪ್ರಜ್ಞೆಗೆ ತಕ್ಕಂತೆ ಶಾಸ್ತ್ರಜ್ಞಾನ, ಜ್ಞಾನಕ್ಕೆ ತಕ್ಕಂಥ ಕಾರ್ಯಾರಂಭ, ಕಾರ್ಯಾರಂಭಕ್ಕೆ ತಕ್ಕಂತೆ ಕಾರ್ಯಸಿದ್ಧಿಯುಳ್ಳವನು. ಸುದಕ್ಷಿಣೆ ಇವನಿಗೆ ಅನುರೂಪಳಾದ ಪತ್ನಿ. ಆದರೆ ಇವರಿಗೆ ಸಂತಾನವಿರಲಿಲ್ಲ. ಆದುದರಿಂದ ಈ ಕೊರೆತಯ ಪರಿಹಾರಕ್ಕಾಗಿ ಇಬ್ಬರು ಒಂದು ದಿನ ವಸಿಷ್ಠರ ಆಶ್ರಮಕ್ಕೆ ಹೋಗುವರು. ತಮ್ಮಲ್ಲಿದ್ದ ಕಾಮಧೇನುವಿನ ಮಗಳಾದ ನಂದಿನಿಯನ್ನು ಸೇವಿಸಬೇಕು ಎಂದು ವಸಿಷ್ಠರು ಆಜ್ಞಾಪಿಸುತ್ತಾರೆ.

ದಿಲೀಪನು ಇಪ್ಪತ್ತೊಂದು ದಿನ ನಂದಿನಿಯನ್ನು ನಿತ್ಯವೂ ಅಡವಿಗೆ ಹಿಂಬಾಲಿಸಿಕೊಂಡು ಹೋಗಿ ಸೇವಿಸುವನು. ಇಪ್ಪತ್ತೊಂದನೆಯ ದಿನ ಒಂದು ಸಿಂಹವು ನಂದಿನಿಯನ್ನು ಆಕ್ರಮಿಸುವದು. ಅದನ್ನು ಬಿಡಿಸಿಕೊಳ್ಳಲು ದಿಲೀಪನು ಬಾಣವನ್ನು ಬಿಡಲು ಪ್ರಯತ್ನಿಸುತ್ತಾನೆ. ಆಶ್ಚರ್ಯ! ಅವನ ಕೈಯು ಬತ್ತಳಿಕೆಯಲ್ಲಿಯೇ ನಿಲ್ಲುವುದು. ಸಿಂಹವು ಮನುಷ್ಯರಂತೆ ಮಾತನಾಡುತ್ತದೆ. ತನಗೆ ಆಹಾರವಾಗಿ ದೊರೆತ ನಂದಿನಿಯ ಆಶೆಯನ್ನು ಬಿಟ್ಟು ತಿರುಗಿ ಆಶ್ರಮಕ್ಕೆ ಹೋಗು ಎಂದು ದಿಲೀಪನಿಗೆ ಹೇಳುತ್ತದೆ. ದಿಲೀಪನು ತನ್ನ ದೇಹವನ್ನೇ ಸಿಂಹದ ಆಹಾರಕ್ಕಾಗಿ ಕೊಡುತ್ತೇನೆ ಎಂದು ಸಿದ್ಧನಾಗುತ್ತಾನೆ. ಆದರೆ ಸಿಂಹವು ಮಾಯವಾಗುವುದು. ಇದು ದಿಲೀಪನ ಸತ್ವ ಪರೀಕ್ಷೆಯನ್ನು ಮಾಡಲು ನಂದಿನಿಯೇ ಸೃಷ್ಟಿಸಿದ ಕೃತಕ ಸಿಂಹವಾಗಿದ್ದಿತು. ನಂದಿನಿಯು ದಿಲೀಪನನ್ನು ಆಶೀರ್ವದಿಸಿ ತನ್ನ ಹಾಲು ಕುಡಿದು ಸಂತಾನವನ್ನು ಪಡೆಯಲು ಸೂಚಿಸುವುದು. ದಿಲೀಪನು ನಂದಿನಿಯೊಡನೆ ಆಶ್ರಮಕ್ಕೆ ಮರಳಿ ಗುರುಗಳ ಅಪ್ಪಣೆಯನ್ನು ಪಡೆದು ಸುದಕ್ಷಿಣೆಯೊಡನೆ ಹಾಲನ್ನು ಸ್ವೀಕರಿಸುತ್ತಾನೆ. ರಾಜಧಾನಿಗೆ ಹಿಂದಕ್ಕೆ ಹೋಗುತ್ತಾಣೆ. ಸುದಕ್ಷಿಣೆಯು ಗರ್ಭಿಣಿಯಾಗಿ ಸತ್ವಶಾಲಿಯಾದ ಮಗುವನ್ನು ಪಡೆಯುವಳು. ಅವನಿಗೆ ರಘುರಾನೆಂದು ನಾಮಕರಣ ಮಾಡುವರು. ದಿಲೀಪನ ಈ ವರ್ಣನೆಯಲ್ಲಿ ಅವನ ಸತ್ಯನಿಷ್ಠೆ ಮತ್ತು ಅವನು ಹೇಗೆ ಧರ್ಮದಿಂದಲೇ ನಡೆಯುತ್ತಿದ್ದ ಎಂಬುದನ್ನು ತೋರಿಸಿದೆ. ರಾಜರಿಗೂ ಋಷಿಗಳಿಗೂ ಇರುವ ಅನ್ಯೋನ್ಯ, ವೀರನ ಕ್ಷಾತ್ರ ತೇಜಸ್ಸು ಶುದ್ಧ ಜೀವನ ನಡೆಸಿದ ಋಷಿಯ ಬ್ರಹ್ಮತೇಜಸ್ಸಿನ ಆಶೀರ್ವಾದವನ್ನು ಪಡೆದಾಗಲೇ ಸತ್ವಶಾಲಿಗಳಾದ ವ್ಯಕ್ತಿಗಳು ಉದಯಿಸುವರು ಎಂಬುದರ ನಿದರ್ಶನ ಚಿತ್ರಿತವಾಗಿದೆ.

ಮುಂದೆ ಕವಿ ರಘುರಾಜನ ಕತೆಯನ್ನು ಹೇಳುತ್ತಾನೆ. ರಘುರಾಜನು ಯುವರಾಜನಾಗಿರುವಾಗಲೇ ತಂದೆಯ ಅಶ್ವಮೇಧದ ಕುದುರೆಯನ್ನು ರಕ್ಷಿಸಿ ತನ್ನ ಶೌರ್ಯವನ್ನು ತೋರಿಸುವನು. ನೂರನೆಯ ಅಶ್ವಮೇಧದ ಕುದುರೆಯನ್ನು ಅಪಹರಿಸಲು ಬಂದ ಇಂದ್ರನಿಗೂ ರಘುವಿಗೂ ತುಮುಲ ಯುದ್ಧವಾಗುವುದು. ರಘುರಾಜನ ಪರಾಕ್ರಮಕ್ಕೆ ಮೆಚ್ಚಿದ ಇಂದ್ರನು ಅವನ ತಂದೆಗೆ ಯಜ್ಞಫಲ ಬರಲೆಂದು ಅನುಗ್ರಹಿಸುವನು. ದಿಲೀಪನು ರಾಜ್ಯಭಾರವನ್ನು ರಘುವಿಗೆ ಒಪ್ಪಿಸಿ ಅರಣ್ಯಕ್ಕೆ ಹೋಗುವನು. ಅನೇಕ ದೇಶಗಳ ರಾಜರನ್ನು ಸೋಲಿಸಿ ವಿಪುಲ ಐಶ್ವರ್ಯವನ್ನು ತಂದ ರಘುರಾಜನು ವಿಶ್ವಜಿದ್‌ ಯಾಗವನ್ನು ಮಾಡಿ ಸರ್ವಸ್ವವನ್ನೂ ದಾನ ಮಾಡಿಬಿಡುವನು. ಆ ಹೊತ್ತಿಗೆ ಕೌತ್ಸನೆಂಬ ಋಷಿ ಕುಮಾರ ಗುರುದಕ್ಷಿಣೆಯನ್ನು ಕೊಡಲು ಹಣವನ್ನು ಬೇಡುತ್ತಾನೆ. ಎಲ್ಲವನ್ನೂ ದಾನಮಾಡಿಬಿಟ್ಟ ರಾಜ ಮಣ್ಣಿನ ಪಾತ್ರೆಯಲ್ಲಿ ಅರ್ಘ್ಯವನ್ನು ಕೊಡಬೇಕಾಗಿ ಬರುವುದು. ಋಷಿಕುಮಾರನ ಬೇಡಿಕೆಯನ್ನು ಪೂರೈಸಲು ಹಣದ ದೇವತೆಯಾದ ಕುಬೇರನ ಮೇಲೆ ದಂಡೆತ್ತಿ ಹೋಗಬೇಕೆಂದು ರಘು ಸಿದ್ಧನಾಗುತ್ತಾನೆ. ಅಷ್ಟರಲ್ಲಿ ಕುಬೇರನೇ ಬೊಕ್ಕಸವನ್ನು ತುಂಬಿಬಿಡುವನು. ಋಷಿಕುಮಾರನ ಬೇಡಿಕೆ ಪೂರೈಸುವುದು.

ರಘುರಾಜನು ಅಜನೆಂಬ ಕುಮಾರನನ್ನು ಪಡೆಯುವನು. ಈ ಅಜನು ತುಂಬ ಸುಂದರನು. ಕೋಮಲ ಸ್ವಭಾವದವನು. ಇವನು ವಯಸ್ಸಿಗೆ ಬಂದಮೇಲೆ ವಿದರ್ಭ ದೇಶದ ರಾಜಕುಮಾರಿ ಇಂದುಮತಿಯ ಸ್ವಯಂವರಕ್ಕೆ ಹೋಗುವನು. ಇಂದುಮತಿಯು ಸ್ವಯಂವರ ಮಂಟಪವನ್ನು ಪ್ರವೇಶಿಸುವಳು. ಸಖಿಯಾದ ಸುನಂದೆಯು ಒಬ್ಬೊಬ್ಬ ರಾಜರ ಪರಿಚಯ ಮಾಡಿಸುತ್ತ ಅವರ ಪರಾಕ್ರಮವನ್ನೂ ಸೌಂದರ್ಯವನ್ನೂ ಹೊಗುಳುತ್ತಾ ಹೋಗುವಳು. ಆದರೆ ಇಂದುಮತಿಗೆ ಯಾರೂ ಒಪ್ಪಿಗೆಯಾಗುವುದಿಲ್ಲ. ಸುನಂದೆಯು ಅಜರಾಜನನ್ನು ಹೊಗಳುತ್ತಾಳೆ. ಇಂದುಮತಿಯು ಅವನ ಕೊರಳಿಗೆ ಮಾಲೆಯನ್ನು ಹಾಕುತ್ತಾಳೆ. ಕಾಳಿದಾಸನ ಈ ಸ್ವಯಂವರದ ವರ್ಣನೆ ತುಂಬ ಸರಸವಾಗಿದೆ. ರಾಜಕುಮಾರರ ವರ್ಣನೆ ಅತಿಯಾಗಿಲ್ಲ. ಕ್ಷತ್ರಿಯ ಕುಮಾರರಲ್ಲಿರಬೇಕಾದ ಧೈರ್ಯ, ಶೌರ್ಯ, ಐಶ್ವರ್ಯಗಳ ವರ್ಣನೆ ಸೊಗಸಾದಿಗದೆ. ಯಾರ ಅವಹೇಳನವೂ ಇಲ್ಲ. ಇಂದುಮತಿಯು ಅವರನ್ನು ಬಿಡುವುದಕ್ಕೆ ಅವರಲ್ಲಿ ಯಾವ ಕೊರತೆಯೂ ಕಾರಣವಲ್ಲ. ಆದರೆ ಒಬ್ಬೊಬ್ಬರ ಸ್ವಭಾವ ಒಂದೊಂದು ರೀತಿ, ಏಕೆ ಪ್ರೇಮ ಬರುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ ಎಂದು ಕವಿಯು ಹೇಳುತ್ತಾನೆ. ಕವಿಯ ಸದಭಿರುಚಿ, ಸೌಂದರ್ಯ ದೃಷ್ಟಿ ಮತ್ತು ಸರಸತೆಗಳು ಇಲ್ಲಿ ಸ್ಫುಟವಾಗಿ ವ್ಯಕ್ತವಾಗಿವೆ.

ದುಷ್ಯಂತನು ಮಾರೀಚಾಶ್ರಮದಲ್ಲಿ ಶಕುಂತಲೆ ಮತ್ತು ಸರ್ವದಮನರನ್ನು ಮತ್ತೆ ಸೇರುತ್ತಾನೆ.

ಇಂದುಮತಿ-ಅಜರ ವಿವಾಹವು ವೈಭವದಿಂದ ನಡೆಯಿತು. ಸ್ವಯಂವರದಲ್ಲಿ ಹತಾಶರಾದ ರಾಜಕುಮಾರರು ಅವರನ್ನು ಮುತ್ತಿದರು. ಭೀಕರ ಯುದ್ಧವಾಯಿತು. ಅಜನು ಎಲ್ಲರನ್ನೂ ಸೋಲಿಸಿ ಪ್ರೇಯಸಿಯೊಡನೆ ನಗರಕ್ಕೆ ಹಿಂದಿರುಗಿದ. ತನ್ನ ಪರಾಕ್ರಮವನ್ನು ಸ್ಥಾಪಿಸಿ ಬಂದ ಮಗ ಅಜನಿಗೆ ರಘುವು ರಾಜ್ಯವನ್ನು ಸಂತೋಷದಿಂದ ಒಪ್ಪಿಸಿದ, ಅಯೋಧ್ಯೆಯ ಹೊರ ಅಂಚಿನಲ್ಲಿಯ ಆಶ್ರಮದಲ್ಲಿ ವಾಸಮಾಡಲು ಪ್ರಾರಂಭಿಸಿದ. ಯೋಗಾಸನವನ್ನು ಏರಿದ ತಂದೆ, ಸಿಂಹಾಸನವನ್ನು ಏರಿದ ಮಗ-ಇವರೀರ್ವರ‍ ನಡವಳಿಕೆಯನ್ನು ಕವಿಯು ಸೊಗಸಾಗಿ ವರ್ಣಿಸಿದ್ದಾನೆ. ತಂದೆಯಲ್ಲಿ ಹಿರಿಯ ತ್ಯಾಗವನ್ನು ಕಾಣುತ್ತೇವೆ, ಮಗನಲ್ಲಿ ಸೊಗಾಸಾದ ಅಭ್ಯುದಯವನ್ನು ಕಾಣುತ್ತೇವೆ. ತಂದೆಗೆ ಋಷಿಗಳ ನೆರವು, ಮಗನಿಗೆ ಮಂತ್ರಿಗಳ ನೆರವು. ತನ್ನ ಒಳಗಿನ ಎಲ್ಲ ಆಸೆಗಳನ್ನೂ ಗೆದ್ದವನು, ಮಗ ಹೊರಗಿನ ಶತ್ರುಗಳನ್ನು ಗೆದ್ದವನು. ಮನುಷ್ಯ ತನ್ನ ಮನಸ್ಸನ್ನು ದೇವರಲ್ಲಿಯೇ ನಿಲ್ಲಿಸಿದರರೆ ಅವನ ಜೀವನದಲ್ಲಿ ಎಷ್ಟು ಸಮಾಧಾನ ಮತ್ತು ಶಾಂತಿ ಇರುತ್ತದೆ ಎಂಬುದನ್ನು ತಂದೆಯ ಜೀವನದಲ್ಲಿ ಕಾಣಬಹುದು. ಮನುಷ್ಯ ಎಷ್ಟು ಸುಖವನ್ನು ಅನುಭವಿಸಬಹುದು ಎನ್ನುವುದನ್ನು ಮಗನ ಜೀವನದಲ್ಲಿ ಕಾಣಬಹುದು.

ದಿಲೀಪ ಮತ್ತು ರಘು ಇಬ್ಬರೂ ಮಹಾ ಪುರುಷರೇ. ಇವರಲ್ಲಿ ವ್ಯತ್ಯಾಸವನ್ನು ನೋಡುತ್ತೇವೆ. ನಮ್ಮ ಹಿರಿಯರು , ಮನುಷ್ಯ ನಾಲ್ಕು ಗುರಿಗಳನ್ನು ಮುಂದಿಟ್ಟುಕೊಳ್ಳಬೇಕು ಎಂದರು. ಇವು ಧರ್ಮ, ಅರ್ಥ್ಯ, ಕಾಮ, ಮೋಕ್ಷ. ಅರ್ಥ ಎಂದರೆ ಹಣ, ಸಂಪತ್ತು, ಮನುಷ್ಯ ಹಣ ಸಂಪಾದಿಸುವುದೇ ತಪ್ಪಲ್ಲ. ಕಾಮ ಎಂದರೆ ಸುಖದ ಆಸೆ. ಸಾಮಾನ್ಯವಾಗಿ ಪ್ರತಿಯೊಬ್ಬನಿಗೂ ಸುಖವಾಗಿರಬೇಕು ಎಂಬ ಆಸೆ, ಅಲ್ಲವೇ? ಇದೂ ತಪ್ಪಿಲ್ಲ. ಆದರೆ ಇವೆರಡರ ಜೊತೆಗೆ ಧರ್ಮ ಸೇರಬೇಕು. ಎಂದರೆ ಹಣವನ್ನು ಧರ್ಮದಿಂದ ಸಂಪಾದಿಸಬೇಕು. ತನ್ನ ಶಕ್ತಿಯಿಂದ, ಶ್ರಮದಿಂದ, ಇತರರಿಗೆ ಅನ್ಯಾಯವಾಗದ ಹಾಗೆ ಸಂಪಾದಿಸಬೇಕು. ಒಳ್ಳೆಯ ರೀತಿಯಲ್ಲಿ ವೆಚ್ಚಮಾಡಬೇಕು. ತಾನು ಸುಖ ಪಡಬೇಕು- ಆದರೆ ಕೆಟ್ಟ ರೀತಿಯಲ್ಲಿ ಹೋಗದೆ, ಇತರರಿಗೆ ಕಷ್ಟ ಕೊಡದೆ ಸುಖಪಡಬೇಕು. ಭೂಮಿಯಲ್ಲಿ ಜೀವನ ಮುಗಿದಮೇಲೆ ಮೋಕ್ಷ ಸಿಕ್ಕುವ ಹಾಗೆ, ಪರಮಾತ್ಮನ ಬಳಿ ಹೋಗುವ ಹಾಗೆ ಬದುಕಬೇಕು. ದಿಲೀಪನ ಜೀವನದಲ್ಲಿ ಧರ್ಮವೇ ಮುಖ್ಯವಾಗಿದುದನ್ನು ಕಾಣುತ್ತೇವೆ. ನಂದಿನಿಗಾಗಿ ತಾನೇ ಸಿಂಹಕ್ಕೆ ಆಹಾರವಾಗಲು ಸಿದ್ಧನಾದ ಮಹಾಪುರುಷ ಅವನು. ರಘುವಿನ ಜೀವನದಲ್ಲಿ ‘ಅರ್ಥ’ದ ನಿಜವಾದ ಅರ್ಥವನ್ನು ಕಾಣಬಹುದು. ಹಣವನ್ನು ಸಂಪಾದಿಸುವುದು ಹೇಗೆ, ವೆಚ್ಚ ಮಾಡುವುದು ಹೇಗೆ? ಎಂಬುದನ್ನು ನೋಡಬಹುದು.  ತನ್ನ ಪರಾಕ್ರಮದಿಂದ ಅನೇಕ ರಾಜ್ಯಗಳನ್ನು ಗೆದ್ದು ಯೋಗ್ಯರಾದವರನ್ನು ಆರಿಸಿ ತನ್ನ ಸಂಪತ್ತನ್ನೆಲ್ಲ ದಾನ ಮಾಡಿದ. ಕಡೆಗೆ ಅವನು ಉಪಯೋಗಿಸಲು ಉಳಿದದ್ದು ಮಣ್ಣಿನ ಮಡಕೆಯೇ.

ಅಜನು ಪ್ರಜೆಗಳ ಪ್ರೀತಿಗೆ ಪಾತ್ರನಾಗಿ ರಾಜ್ಯವನ್ನಾಳಿದನು. ಒಂದು ದಿನ ವಿಹಾರಕ್ಕೆಂದು ನಗರದ ಹೊರ ಅಂಚಿನಲ್ಲಿರುವ ಉದ್ಯಾನಕ್ಕೆ ಇಂದುಮತಿಯೊಡನೆ ಹೋದ . ನಾರದರು ಆಕಾಶಮಾರ್ಗದಿಂದ ಗೋಕರ್ಣಕ್ಕೆ ಹೊರಟಿದ್ದರು. ಅವರ ವೀಣೆಯ ಮೇಲಿದ್ದ ದೇವಲೋಕದ ಹೂಮಾಲೆಯು ಹಾರಿಬಂದು ಇಂದುಮತಿಗೆ ತಗುಲಿತು.  ಇಂದುಮತಿಯು ಕೂಡಲೆ ನೆಲಕ್ಕೆ ಕುಸಿದು ಪ್ರಾಣವನ್ನು ಬಿಟ್ಟಳು. ಇದನ್ನು ನೋಡಿ ಅಜನು ಮೂರ್ಛೆ ಹೊಂದಿದ. ಹತ್ತಿರವಿದ್ದವರು ಉಪಚಾರ ಮಾಡಿದ ಮೇಲೆ ಎಚ್ಚರಗೊಂಡ. ಅವನಿಗೆ ತಡೆಯಲಾಗದ ದುಃಖ. ಇಂದುಮತಿಯನ್ನು ತೊಡೆಯ ಮೇಲಿಟ್ಟುಕೊಂಡು ಅತ್ತ.  “ಹೂವು ಪ್ರಾಣವನ್ನು ತೆಗೆಯಬೇಕೆ? ಇದೇ ಮಾಲೆಯನ್ನು ನಾನು ಮುಟ್ಟಿದರೆ ನನ್ನ ಪ್ರಾಣವು ಏಕೆ ಹೋಗುವುದಿಲ್ಲ. ಈಶ್ವರನ ಇಚ್ಛೆಯಿಂದ ವಿಷವು ಅಮೃತವಾಗಬಲ್ಲದು. ಅಮೃತವೂ ವಿಷವಾಗಬಲ್ಲದು. ನೀನು ನನಗೆ ಗೃಹಿಣಿ, ಸಚಿವೆ, ಸಖಿ, ಕಲೆಗಳಲ್ಲಿ ಶಿಷ್ಯೆ – ಹೀಗೆ ಎಲ್ಲವೂ ಆಗಿದ್ದಿ. ನಿನ್ನನ್ನು ಅಪಹರಿಸಿದಂತಾಗಿದೆ”- ಎಂದು ಅಜನು ದುಃಖಪಟ್ಟನು. ಅಜನ ಮಗ ದಶರಥ. ಅವನು ಇನ್ನೂ ಚಿಕ್ಕವನಾದುದರಿಂದ ಅಜನು ಎಂಟು ವರ್ಷಗಳನ್ನು ಹೇಗೋ ಕಳೆದು ಮಗನಿಗೆ ರಾಜ್ಯಭಾರವನ್ನು ಒಪ್ಪಿಸಿ ಗಂಗಾ ಮತ್ತು ಸರಯೂ ನದಿಗಳ ಸಂಗಮದಲ್ಲಿ ಜಲಸಮಾಧಿಯನ್ನು ಹೊಂದಿದನು.

ಅಜನು ಈ ವ್ಯಕ್ತಿಚಿತ್ರದಲ್ಲಿ ಕವಿಯು ಕಾಮನೆಂಬ ಪುರಷಾರ್ಥವನ್ನು  ಚಿತ್ರಿಸಿದ್ದಾನೆ. ಅಜನು ಇಂದುಮತಿಯ ಜೊತೆಗೆ ಸಂತೋಷದಿಂದ ಇದ್ದುದನ್ನೂ ಚಿತ್ರಿಸಿದ್ದಾನೆ, ಅವಳು ಹೋದಮೇಲೆ ಪಟ್ಟ ದುಃಖವನ್ನೂ ಚಿತ್ರಿಸಿದ್ದಾನೆ. ಅಜನು ಅವಳಿಗಾಗಿ ಪರಿತಪಿಸಿದನು. ಅವಳ ಸ್ಮರಣೆಯಲ್ಲಿಯೇ ಜಲಸಮಾಧಿಯನ್ನು ಹೊಂದಿದನು.  ಇದು ಅವನ ನಿಷ್ಠೆಯನ್ನು  ತೋರಿಸುವುದು.

ದಿಲೀಪ, ರಘು, ಅಜರ ಕಥೆಯು ರಘುವಂಶದ ಮೊದಲಿನ ಎಂಟು ಸರ್ಗಗಳಲ್ಲಿ ಬಂದಿದೆ. ಮುಂದಿನ ಎಂಟು ಸರ್ಗಗಳಲ್ಲಿ ದಶರಥ, ಶ್ರೀರಾಮ ಮತ್ತು ಲವಕುಶರ ಪಾತ್ರಗಳನ್ನು ಚಿತ್ರಿಸಿ ಕವಿಯು ರಾಮಾಯಣದ ಸುಂದರವಾದ ಸಾರಸಂಗ್ರಹವನ್ನು ಮಾಡಿದ್ದಾನೆ. ಇಲ್ಲಿಯ ಕಥಾಭಾಗ ಬಹು ಜನರಿಗೆ ಗೊತ್ತಿರುವುದೇ. ಆದರೆ ಕಾಳಿದಾಸ ಕಥೆಯನ್ನು ಹೇಳುವ ರೀತಿ ಅಪೂರ್ವವಾಗಿದೆ. ವಾಲ್ಮೀಕಿಯ ನಿರೂಪಣೆಯು ಸರಳ, ಸುಂದರ ಹಾಗೂ ಸಹುಜವಾದ ರತ್ನ; ಕಾಳಿದಾಸನ ನಿರೂಪಣೆಯು ಅದೇ ರತ್ನಕ್ಕೆ ಹೊಳಪು ಕೊಟ್ಟಹಾಗಿದೆ.

ಕುಶನ ತರುವಾಯ ಅವನ ಮಗ ಅತಿಥಿಯು ಪಟ್ಟಕ್ಕೆ ಬಂದ. ಅವನನ್ನು ಕಾಳಿದಾಸನು ಬಹಳ ಹೊಗಳಿದ್ದಾನೆ. ಧರ್ಮವಾಗಿಯೇ ನಡೆಯುತ್ತಿದ್ದ, ರಾಜ್ಯವನ್ನು ಶತ್ರುಗಳಿಂದ ಚೆನ್ನಾಗಿ ರಕ್ಷಿಸುತ್ತಿದ್ದ. ತಪಸ್ವಿಗಳು ತೊಂದರೆ ಇಲ್ಲದೆ ತಪಸ್ಸು ನಡೆಸಿಕೊಂಡು ಹೋಗುತ್ತಿದ್ದರು ಎಂದು ವರ್ಣಿಸಿದ್ದಾನೆ.

ಅತಿಥಿಯ ನಂತರ ಸುಮಾರು ಇಪ್ಪತ್ತು ಜನ ರಘುವಂಶದ ರಾಜರ ಹೆಸರುಗಳನ್ನು ಹೇಳುತ್ತಾನೆ. ಕೊನೆಯವನಾದ ಅಗ್ನಿವರ್ಣನು ಮಾತ್ರ ಸುಖ ಪಡುವುದರಲ್ಲಿ ತನ್ನ ಕರ್ತವ್ಯವನ್ನು ಮರೆತಿದ್ದ ಎಂದು ಹೇಳುತ್ತಾನೆ. ಪ್ರಜೆಗಳು ದರ್ಶನವನ್ನು ಅಪೇಕ್ಷಿಸಿದಾಗ ಕಿಟಕಿಯಿಂದ ಕಾಲು ಚಾಚಿ ದರ್ಶನ ಕೊಡುತ್ತಿದ್ದನಂತೆ. ರೋಗಕ್ಕೆ ಬಲಿಯಾಗಿ ಇವನು ಮೃತನಾದಾಗ ಇವನ ಪತ್ನಿಯೇ ವೃದ್ಧ ಮಂತ್ರಿಗಳ ಸಹಾಯದಿಂದ ರಾಜ್ಯವಾಳಿದಳು ಎಂಬಲ್ಲಿಗೆ ರಘುವಂಶದ ಕಥೆಯು ಮುಗಿಯುತ್ತದೆ. ರಘುವಂಶದ ಮೊದಲಿನ ಪ್ರಮುಖ ರಾಜರ ಉಜ್ವಲವಾದ ಚರಿತ್ರೆಯನ್ನು ಓದಿದವರಿಗೆ ಕೊನೆಯ ಈ ಕೆಟ್ಟ ಸ್ಥಿತಿಯನ್ನು ನೋಡಿ ವ್ಯಥೆಯಾಗುತ್ತದೆ.

ಹೀಗೆ ‘ರಘುವಂಶ’ ನಮ್ಮ ದೇಶದ ಹಿಂದಿನ ಕಾಲದ ಸಂಸ್ಕೃತಿಯನ್ನು ಚಿತ್ರಿಸುತ್ತದೆ. ಒಳ್ಳೆಯ ರಾಜನೆಂದರೆ ಯಾರು, ಒಳ್ಳೆಯ ತಪಸ್ವಿ ಎಂದರೆ ಯಾರು, ಮನುಷ್ಯ ಹೇಗೆ ಬದುಕಬೇಕು – ಇಂತಹ ಪ್ರಶ್ನೆಗಳನ್ನು ನಮ್ಮ ಹಿರಿಯರೂ ಕೇಳಿಕೊಂಡಿದ್ದರು.  ವಸಿಷ್ಠ, ದಿಲೀಪ, ರಘು, ಅಜ ಮೊದಲಾದವರಲ್ಲಿ ಹಿರಿಯ ತಪಸ್ವಿ, ಬೇರೆ ಬೇರೆ ರೀತಿಯ ಶ್ರೇಷ್ಠ ರಾಜರು ಇವರನ್ನು ಕವಿ ಚಿತ್ರಿಸಿದ; ಅಗ್ನಿವರ್ಣನಲ್ಲಿ ರಾಜ ಹೇಗಿರಬಾರದು ಎಂಬುದನ್ನು ತೋರಿಸಿದ.

ಮೇರುಕೃತಿಶಾಕುಂತಲ

ಕಾಳಿದಾಸನ ನಾಟಕಗಳಲ್ಲಿ ‘ಮಾಲವಿಕಾಗ್ನಿ ಮಿತ್ರ’ವು ಅವನು ಮೊದಲು ಬರೆದ ನಾಟಕ. ತನ್ನ ಈ ಹೊಸ ನಾಟಕವನ್ನು ವಾಚಕರು ಆದರಿಸುವರೊ ಇಲ್ಲವೋ ಎಂಬ ಆತಂಕದಿಂದ ‘ಪುರಾಣಮಿತ್ಯೇವ ನ ಸಾಧು ಸರ್ವಮ್‌ ನ ಚಾಪಿ ಕಾವ್ಯಂ ನವಮಿತ್ಯವದ್ಯಮ್‌’ (ಹಳೆಯದೆಲ್ಲ ಒಳ್ಳೆಯದಲ್ಲ, ಹೊಸದು ಕೆಲಸಕ್ಕೆ ಬಾರದುದಲ್ಲ, ಹಳೆಯ ದರದಲ್ಲಿಯೂ ನಿಷ್ಪ್ರಯೋಜಕವಾದದ್ದಿರಬಹುದು, ಹೊಸದೂ ಚೆನ್ನಾಗಿರಬಹುದು) ಎಂದು ಎಚ್ಚರಿಸಿದ್ದಾನೆ. ಈ ನಾಟಕದ ಕಥೆ ಅಗ್ನಿಮಿತ್ರ ಮತ್ತು ಮಾಲವಿಕೆಯರ ಪ್ರೇಮದ ಕಥೆ.

ಕಾಳಿದಾಸನ ಎರಡನೆಯ ನಾಟಕ ‘ವಿಕ್ರಮೋರ್ವಶಿಯ’. ಇದು ಪುರೂರವ ಮತ್ತು ಊರ್ವಶಿ ಎಂಬುವರ ಪ್ರೇಮದ ಕಥೆ.

‘ಅಭಿಜ್ಞಾನ ಶಾಕುಂತಲ’ ವು ಕಾಳಿದಾಸನ ಕೃತಿಗಳಲ್ಲಿಯೇ ಶ್ರೇಷ್ಠವಾದ ಕೃತಿ. ಹಲವು ದೇಶಗಳ ಭಾಷೆಗಳಿಗೆ ಇದನ್ನು ಅನುವಾದ ಮಾಡಿದ್ದಾರೆ.

ಶಾಕುಂತಲದ ಕತೆ ಮಹಾಭಾರತದ ಆದಿಪರ್ವದಲ್ಲಿ ಬರುತ್ತದೆ. ದುಷ್ಯಂತನೆಂಬ ರಾಜನು ಬೇಟೆಯಾಡುತ್ತ ಕಣ್ವರ ಆಶ್ರಮಕ್ಕೆ ಬರುತ್ತಾನೆ. ಕಣ್ವರು ಆಶ್ರಮದಲ್ಲಿರುವುದಿಲ್ಲ. ಅವರ ಸಾಕುಮಗಳು ಶಕುಂತಲೆ ಅವನನ್ನು ಉಪಚರಿಸುತ್ತಾಳೆ. ಅವಳ ಸೌಂದರ್ಯದಿಂದ ಮುಗ್ಧನಾದ ದುಷ್ಯಂತನು ಅವಳಿಗೆ ತನ್ನನ್ನು ವರಿಸಲು ಸೂಚಿಸುತ್ತಾನೆ. ತನ್ನ ಮಗನಿಗೇ ಮುಂದೆ ರಾಜ್ಯ ಕೊಡಬೆಕು ಎನ್ನುತ್ತಾಳೆ ಶಕುಂತಲೆ. ದುಷ್ಯಂತ ಒಪ್ಪುತ್ತಾನೆ. ಅವರಿಗೆ ಮದುವೆಯಾಗುತ್ತದೆ. ದುಷ್ಯಂತ ಅವಳೊಡನೆ ಕೆಲಕಾಲ ಸಂತೋಷವಾಗಿದ್ದು ರಾಜಧಾನಿಗೆ ಮರಳುತ್ತಾನೆ. ಕಾಲಕ್ರಮದಲ್ಲಿ ಶಕುಂತಲೆ ಗರ್ಭಿಣಿಯಾಗಿ ಗಂಡು ಮಗುವನ್ನು ಪ್ರಸವಿಸುತ್ತಾಳೆ. ಮಗ ಸರ್ವದಮನನಿಗೆ ಆರು ವರ್ಷವಾದರೂ ದುಷ್ಯಂತನಿಂದ ಕರೆ ಬರುವುದಿಲ್ಲ. ಕಣ್ವರು ತಾವೇ ಕಳಿಸಿಕೊಡುತ್ತಾರೆ. ಶಕುಂತಲೆ ಅರಮನೆಯನ್ನು ಸೇರಿದಾಗ ದುಷ್ಯಂತನು ಅವಳು ಯಾರು ಎಂದು ತಿಳಿಯದು ಎನ್ನುವ ಹಾಗೆ ನಟಿಸುತ್ತಾನೆ. ಶಕುಂತಲೆಗೆ ಕೋಪ ಬರುತ್ತದೆ. ದುಃಖವಾಗುತ್ತದೆ. ಆದರೂ ದುಷ್ಯಂತನಿಗೆ ದಯೆ ಬರುವುದಿಲ್ಲ. ಕೊನೆಗೆ “ದುಷ್ಯಂತ! ಇವನು ನಿನ್ನ ಮಗ ಸ್ವೀಕರಿಸು” ಎಂದು ಆಕಾಶವಾಣಿಯಾಗುತ್ತದೆ. ದುಷ್ಯಂತನು ಸ್ವೀಕರಿಸುತ್ತಾನೆ. ಸರ್ವದಮನ ಮುಂದೆ ಭರತ ಎಂದು ಪ್ರಸಿದ್ಧನಾಗುತ್ತಾನೆ.

ಮಹಾಭಾರತದ ಈ ಕಥೆಯನ್ನು ಕಾಳಿದಾಸನು ಶ್ರೇಷ್ಠ ನಾಟಕವನ್ನಾಗಿ ಪರಿವರ್ತಿಸಿದ್ದಾನೆ. ನಾಟಕದಲ್ಲಿ ದುಷ್ಯಂತ ಶಕುಂತಲೆಯರ ಪ್ರಥಮ ದರ್ಶನದ ಸನ್ನಿವೇಶವು ಸೊಗಸಾಗಿ ಚಿತ್ರಿಸಲ್ಪಟ್ಟಿದೆ. ಬೇಟೆಗೆಂದು ಹೊರಟ ದುಷ್ಯಂತನು ಕಣ್ವರ ಆಶ್ರಮಕ್ಕೆ ಬಂದು ಆಶ್ರಮದ ಉದ್ಯಾನದಲ್ಲಿ ಸಖಿಯರೊಡನೆ ಬಳ್ಳಿಗಳಿಗೆ ನೀರೆರೆಯುತ್ತಿದ್ದ ಶಕುಂತಲೆಯನ್ನು ನೋಡುತ್ತಾನೆ. ಅವಳನ್ನು ಮದುವೆಯಾಗಬೇಕು ಎಂದು ಆಸೆಯಾಗುತ್ತದೆ. ಶಕುಂತಲೆಗೂ ಅವನನ್ನು ಮದುವೆಯಾಗಬೇಕು ಎನ್ನಿಸುತ್ತದೆ. ಹೀಗೆ ಅವರಲ್ಲಿ ಅನುರಾಗವುಂಟಾಗಿ ಗಾಂಧರ್ವ ವಿವಾಹವಾಗುತ್ತದೆ. ಶಕುಂತೆಯು ತನ್ನ ಮಗನೇ ಪಟ್ಟಕ್ಕೆ ಬರಬೇಕೆಂಬ ವಚನವನ್ನೇನೂ ಪ್ರತ್ಯಕ್ಷವಾಗಿ ಬೇಡುವುದಿಲ್ಲ. ರಾಜನು ಅರಮನೆಗೆ ಮರಳುತ್ತಾನೆ. ಮಹಾಋಷಿಗಳಾದ ದೂರ್ವಾಸರು ಕಣ್ವರ ಆಶ್ರಮಕ್ಕೆ ಬರುತ್ತಾರೆ. ಕಣ್ವರು ಆಶ್ರಮದಲ್ಲಿಲ್ಲ. ಶಕುಂತಲೆ ದುಷ್ಯಂತನನ್ನು ಕುರಿತು ಯೋಚಿಸುತ್ತಿದ್ದಾಳೆ. “ನಾನು ಅತಿಥಿ , ಬಂದಿದ್ದೇನೆ” ಎಂದು ದೂರ್ವಾಸರು ಹೇಳಿದರೂ ಅವಳಿಗೆ ಕೇಳಿಸುವುದಿಲ್ಲ. ಅವರಿಗೆ ಕೋಪ ಬರುತ್ತದೆ. “ನೀನು ಯಾರ ಯೋಚನೆ ಮಾಡುತ್ತಿದ್ದೀಯೋ ಅವನು ನಿನ್ನನ್ನು ಮರೆಯಲಿ” ಎಂದು ಶಾಪ ಕೊಡುತ್ತಾರೆ. ಅನಂತರ ಕರುಣೆಯಿಂದ “ಅವನು ಕೊಟ್ಟ ಒಂದು ವಸ್ತು ಕಂಡಾಗ ನಿನ್ನ ನೆನಪಾಗಲಿ” ಎಂದು ಹೇಳುತ್ತಾರೆ. ದುರದೃಷ್ಟ, ದುಷ್ಯಂತ ಕೊಟ್ಟ ಉಂಗುರವನ್ನು ಶಕುಂತಲೆ ಕಳೆದುಕೊಳ್ಳುತ್ತಾಳೆ. ಇವರಿಮದ ದುಷ್ಯಂತ ಅವಳನ್ನು ಮರೆತು ಬಿಡುತ್ತಾನೆ.  ಕಣ್ವರು ಶಕುಂತಲೆಯನ್ನು ಅವಳಿನ್ನೂ ಗರ್ಭಿಣಿಯಾಗಿರುವಾಗಲೇ ರಾಜಧಾನಿಗೆ ತಮ್ಮ ಶಿಷ್ಯರೊಡನೆ ಕಳಿಸುತ್ತಾರೆ. ಮಹಾಭಾರತದಲ್ಲಿಯಂತೆ ಮಗು ಆರು ವರ್ಷದವನಾಗುವವರೆಗೂ ಸುಮ್ಮನಿರುವುದಿಲ್ಲ. ಶಕುಂತಲೆಯನ್ನು ಕಳಿಸುವಾಗಾದ ವಿರಹ ವ್ಯಥೆಯನ್ನು ಕಾಳಿದಾಸನು ಮನಸ್ಸು ಕರಗುವಂತೆ ಚಿತ್ರಿಸಿದ್ದಾನೆ. ಕಣ್ವರು, ಸಖಿಯರು, ಶಕುಂತಲೆ ಹೋಗುವಳಲ್ಲ ಎಂದು ದುಃಖ ಪಡುತ್ತಾರೆ. ಮೃಗಪಕ್ಷಿಗಳೂ ಮರಬಳ್ಳಿಗಳೂ ದುಃಖಿಸುತ್ತವೆ. ಅರಮನೆಗೆ ಬಂದ ಶಕುಂತೆಲೆಯ ಗುರುತೇ ರಾಜನಿಗೆ ಸಿಗುವುದಿಲ್ಲ. ರೂಪವತಿಯಾದ ಈ ಪರಸ್ತ್ರೀಯನ್ನು ನೋಡುವುದೂ ಉಚಿತವಲ್ಲ ಎಂದು ಅವನು ಭಾವಿಸುತ್ತಾನೆ. ತನ್ನ ಪತ್ನಿ ಎಂದು ಹೇಳಿದರೆ ನಂಬಿಕೆಯಾಗುವುದಿಲ್ಲ. ಅವನು ಕೊಟ್ಟ ಉಂಗುರವು ದುರ್ದೈವದಿಂದ ದಾರಿಯಲ್ಲಿ ಕಳೆದುಹೋಗಿರುತ್ತದೆ. ಹೀಗೆ ದುಷ್ಯಂತನಿಂದ ತಿರಸ್ಕೃತಳಾದ ಶಕುಂತಲೆಗೆ ಬಹಳ ದುಃಖವಾಗುತ್ತದೆ. ದುಃಖದಿಂದ ನೆಲಕ್ಕೆ ಕುಸಿದ ಅವಳನ್ನು ದಿವ್ಯ ತೇಜಸ್ಸೊಂದು ಎತ್ತಿಕೊಂಡು ಹೋಗುತ್ತದೆ. ಕೆಲದಿನಗಳಾದ ಮೇಲೆ ಒಂದು ಮೀನಿನ ಹೊಟ್ಟೆಯಲ್ಲಿ ಉಂಗುರ ಸಿಕ್ಕುತ್ತದೆ. ಉಂಗುರ ಕಂಡಾಗ ದುಷ್ಯಂತನಿಗೆ ಎಲ್ಲವೂ ನೆನಪಾಗುತ್ತದೆ. ಶಕುಂತಲೆಯನ್ನು ತಿಸ್ಕರಿಸಿದ್ದಕ್ಕಾಗಿ ಪರಿತಪಿಸುತ್ತಾನೆ. ಮುಂದೆ ಇಂದ್ರನ ಸಹಾಯಕ್ಕಾಗಿ ಸ್ವರ್ಗ ಲೋಕಕ್ಕೆ ಹೋಗಿ ತಿರುಗಿ ಬರುವಾಗ ದಾರಿಯಲ್ಲಿ ಮಾರೀಚಾಶ್ರಮಕ್ಕೆ ಬರುತ್ತಾನೆ. ಅಲ್ಲಿ ಸಿಂಹದ ಮರಿಯ ಬಾಯಿ ಬಿಡಿಸುತ್ತಿರುವ ಹುಡುಗನನ್ನು ನೋಡುತ್ತಾನೆ. ಅವನು ತನ್ನ ಮಗ ಸರ್ವದಮನ ಎಂದು ಗೊತ್ತಾಗುತ್ತದೆ. ಶಕುಂತಲೆ ಮತ್ತು ಸರ್ವದಮನರನ್ನು ಮತ್ತೆ ಪಡೆಯುತ್ತಾನೆ. ನಾಟಕ ಮುಗಿದಾಗ ದುಷ್ಯಂತನನ್ನು ಹಳಿಯಬೇಕೋ ದೈವವನ್ನು ಹಳಿಯಬೇಕೋ ತಿಳಿಯುವುದಿಲ್ಲ. ಆಶ್ರಮದ ಕುವರಿ ಶಕುಂತಲೆ ಅರಸನ ಕೈಗೆ ಬಿದ್ದು ಎಷ್ಟು ಕಷ್ಟಪಟ್ಟಳಲ್ಲಾ ಎಂಬ ವ್ಯಥೆಯಾಗುತ್ತದೆ. ಕಡೆಯ ಅಂಕದಲ್ಲಿ ಶಕುಂತಲೆ ಸಾಮಾನ್ಯ ವಸ್ತ್ರ ಉಟ್ಟಿದ್ದಾಳೆ, ತುಂಬ ಗಂಭೀರಳಾಗಿದ್ದಾಳೆ, ಆಡುವ ಮಾತು ಬಹು ಸ್ವಲ್ಪ. ಇನ್ನೂ ಚಿಕ್ಕ ವಯಸ್ಸು ಅವಳಿಗೆ. ಆಗಲೇ ತಪಸ್ವಿನಿಲಯೇ ಆಗಿದ್ದಾಳೆ. ಅವಳನ್ನು ಕಂಡು ನಮಗೆ ಆಶ್ಚರ್ಯವಾಗುತ್ತದೆ, ಗೌರವ ಬೆಳೆಯುತ್ತದೆ. ಜೊತೆಗೇ ‘ನಗುನಗುತ್ತಾ ಸಂತೋಷದ ಮೂರ್ತಿಯಾಗಿದ್ದ ಹುಡುಗಿ ಈಗ ಇಂತಹ ತಪಸ್ವಿನಿಯಾಗಿದ್ದಾಳೆ. ಈ ಸ್ಥಿತಿಯನ್ನು ಮುಟ್ಟಲು ಎಷ್ಟು ದುಃಖ ಪಡಬೇಕಾಯಿತು ಎಂದು ಮರುಕ ಉಂಟಾಗುತ್ತದೆ. ಸಖಿಯರ ಆ ಸ್ನೇಹದ ಶುದ್ಧ ಮನಸ್ಸಿನ ಚೆಲ್ಲಾಟ, ಕಣ್ವರ ಭವಿಷ್ಯದೃಷ್ಟಿ, ಅರಸನ ಅನುರಾಗ, ಶಕುಂತಲೆ ದೂರವಾದ ಮೇಲೆ ಅವನ ದುಃಖ, ಶಕುಂತಲೆಯ ನಿಷ್ಕಳಂಕ ಪ್ರೇಮ, ದೈವ ತಂದ ತಿರಸ್ಕಾರ, ಅದೇ ದೈವ ಒದಗಿಸಿದ ಪುನರ್ಮಿಲನ, ಹೀಗೆ ನಾಟಕದಲ್ಲಿಯ ಘಟನೆಗಳು ಕಹಿ-ಸಿಹಿ ಭಾವನೆಗಳ ಏರಿಳಿತಗಳಿಂದ ತುಂಬಿವೆ. ಸಹೃದಯರ ಮನಸ್ಸನ್ನು ಸೆರೆ ಹಿಡಿಯುತ್ತವೆ.

‘ಮೇಘಧೂತ’ವು ಭಾವಕಾವ್ಯ. ಒಂದು ವರ್ಷ ಕಾಲ ಪ್ರಿಯತಮೆಯನ್ನು ಆಗಲಿ ಇರಬೇಕಾಗಿ ಬಂದ ಒಬ್ಬ ಯಕ್ಷನು ಅಲಕಾನಗರಿಯಲ್ಲಿದ್ದ ತನ್ನ ಪ್ರಿಯತಮೆಗೆ ಸಂದೇಶ ಕಳಿಸುತ್ತಾನೆ. “ನೀನು ಅವಳಿಗೆ ಹೀಗೆ ಹೇಳು, ಹೀಗೆ ಹೇಳು” ಎಂದು ತಿಳಿಸುತ್ತಾನೆ. ಹೀಗೆ ಮೇಘ ಇಲ್ಲಿ ದೂತ. ಮೇಘನನ್ನು ಪ್ರೇಮದೂತನನ್ನಾಗಿ ಆಯ್ದುಕೊಂಡುದೇ ಒಂದು ಸೊಗಸು. ಆ ಮೇಘವು ಯಕ್ಷನಿರುವ ರಾಮಗಿರಿಯಿಂದ ಅಲಕಾನಗರಿಯವರೆಗೆ ಕ್ರಮಿಸಬೇಕಾದ ಮಾರ್ಗದ ವರ್ಣನೆ ಇನ್ನೂ ಸೊಗಸು. ದಾರಿಯಲ್ಲಿರುವ ನದಿಗಳು, ಪರ್ವತಗಳು, ನಗರಗಳು, ವಿಶಾಲ ಮೈದಾನಗಳು, ರೈತ ಯುವತಿಯರು, ನಾಗರಿಕ ತರುಣಿಯರು, ಮೃಗ-ಪಕ್ಷಿಗಳು ಹೀಗೆ ಕಾಳಿದಾಸನು ಸೌಂದರ್ಯದ ಒಂದು ವಿಶ್ವನ್ನೇ ನಿರ್ಮಿಸಿದ್ದಾನೆ. ಅಲಕಾನಗರಿ, ಅಲ್ಲಿ ಯಕ್ಷನ ಮನೆ, ಅದರಲ್ಲಿಯ ತೋಟ, ವೀಣೆಯನ್ನು ತೊಡೆಯ ಮೇಲಿಟ್ಟು ಕೊಂಡು ಕುಳಿತ ಯಕ್ಷನ ಪತ್ನಿ, ಅವಳ ಸೌಂದರ್ಯ ವಾಚಕರನ್ನು ಸಂತೋಷಗೊಳಿಸುತ್ತವೆ.

‘ಋತುಸಂಹಾರ’ವು ಆರು ಋತುಗಳ ಸೌಂದರ್ಯವನ್ನು ವರ್ಣಿಸುವ ಚಿಕ್ಕ ಕಾವ್ಯ. ಕವಿಯ ಕಣ್ಣಿಗೆ ಎಲ್ಲದರಲ್ಲಿಯೂ ಚೆಲುವು ಕಾಣುತ್ತದೆ. ಒಂದೊಂದು ಋತುವಿನಲ್ಲಿಯೂ ನಿಸರ್ಗದ ಒಂದೊಂದು ಮುಖ ಕಾಣಿಸುತ್ತದೆ. ಅದರಲ್ಲಿಯ ಚೆಲುವನ್ನು ಕವಿ ಕಾಣುತ್ತಾನೆ.

ಹೀಗೆ ಕಾಳಿದಾಸನು ಕೃತಿಗಳನ್ನು ಓದುವುದೇ ಸಂತೋಷದ ಅನುಭವ. ಏನನ್ನೇ ವರ್ಣಿಸಲಿ, ಕಣ್ಣಿಗೆ ಕಟ್ಟುವ ಹಾಗೆ ಮನಸ್ಸಿಗೆ ಸಂತೋಷವಾಗುವ ಹಾಗೆ ವರ್ಣಿಸುತ್ತಾನೆ. ಜೊತೆಗೆ, ಸುಸಂಸ್ಕೃತರ ಜೊತೆ ಇರುವ ಅನುಭವವಾಗುತ್ತದೆ. ಹೂವು ಅರಳಿದರೆ, ಅದರ ಸುವಾಸನೆ ಸಂತೋಷವನ್ನು ಕೊಡುತ್ತದೆ. ಮನುಷ್ಯನ ಮನಸ್ಸು ಅರಳಿದರೆ ಜೊತೆಗಿರುವವರಿಗೆಲ್ಲ ಸಂತೋಷ. ಶುದ್ಧ ಮನಸ್ಸಿನವರು, ಶುಭ್ರ ಜೀವನದವರು, ಸುಸಂಸ್ಕೃತರು ಇವರ ಪ್ರಪಂಚಕ್ಕೆ ಕಾಲಿಡುತ್ತೇವೆ. ಕಾಳಿದಾಸನ ಕಾವ್ಯಗಳಲ್ಲಿ ನಾಟಕಗಳಲ್ಲಿ. ಮನುಷ್ಯರ ಸ್ವಭಾವ ಎಷ್ಟು ಚೆನ್ನಾಗಿ ಆಗಬಹುದು ಎಂಬುದನ್ನು ಇಲ್ಲಿ ಕಾಣುತ್ತೇವೆ. ಪಾರ್ವತಿ, ದಿಲೀಪ, ರಘು, ಅಜ, ಶಕುಂತಲೆ, ದುಷ್ಯಂತ, ಕಣ್ವ-ಇಂತಹವರ ಸ್ವಭಾವದ ಪರಿಚಯವೇ ಒಂದು ಸಂತೋಷ. ಇದರಿಂದಲೇ ಕಾಳಿದಾಸನ ಕೃತಿಗಳನ್ನು ಇಂದೂ ನಾವು ಓದುವುದು, ಬೇರೆ ದೇಶಗಳವರೂ ಓದುವುದು.