ಪಲ್ಲವಿ : ಕಾವೇರಿ ತಟವಾಸಿ ಶ್ರೀರಂಗಾ – ಮಧುರಾ ಪುರವಾಸಿ ಶ್ರೀಗೋಪ ಬಾಲ
ವೇದೋದ್ಧಾರಕ ಶ್ರೀರಂಗ ಕೃಷ್ಣಾ – ದುಷ್ಟ ನಿವಾರಕ ದೀನದಯಾಳು

ಚರಣ :  ರಿಪುಸಂಹಾರಕ ಹರೇ ಮುಕುಂದಾ – ರಾಟವ ತಿರುಗಿಸಿ ಪಾಪವ ಕಳೆಯೋ
ತನು ಮನ ನಿನ್ನದೆ ಶ್ರೀಹರಿ ಸ್ವಾಮಿ – ಪುಣ್ಯಪಾಪವೆಲ್ಲವು ನಿನ್ನದೆ ರಂಗಾ

ಟಂಕಾರ ನುಡಿಸುವೆ ನಾಮವ ಹೇಳುತ – ರಚನವ ನೀಡೋ ನನ್ನ ಮನಕೆ
ವಾಸನೆಗಳನು ದೂರಮಾಡೋ – ವಾಸಿಸು ನನ್ನಯ ಹೃದಯದಲಿ

ಸಿದ್ಧಿ ಕೊಡಿಸೋ ನನ್ನಯ ಬುದ್ಧಿಗೆ – ಸಿತವಾಹನನ ಉದ್ಧರಿಸಿದವ
ಶ್ರೀ ವನಿತೆಯನು ಹೃದಯ ದಲಿರಿಸಿ – ಶ್ರೀಪತಿಯೆಂಬ ಬಿರುದನು ಪಡೆದೆ

ರಂಗಾ ನಿನಗೆ ಅಂಗಾರಕ ಹಚ್ಚುವೆ – ಗೋವಿಂದ ಬಾ.. ಎಂದು ತುಂಬಿ ಕರೆವೆ
ಗರುಡ ವಾಹನನೇ ಗಂಭೀರ ವದನನೆ – ಪರಮಪರುಷ ಹರೇ ಪರಂಧಾಮ

ರಮ್ಯಮೋಹನ ರಂಜಿತ ವದನಾ – ಬಾಲಗೋಪಾಲ ಭಜಿಪೆನು ನಿನ್ನ
ಗಂಧರ್ವಗಾನನೆ ಸಚ್ಚಿದಾನಂದನೆ – ಲಕುಮೀ ಧರನೆ ಜಯ ನಿನಗೆಂದೆ