ಪ್ರಕೃತಿಯ ಕೂಸು ಮಾನವ. ಪ್ರಕೃತಿಯಿಂದಲೇ ಪ್ರೇರಣೆ. ಪ್ರಕೃತಿಯೊಳಗೆ ಉಳಿದ ಪ್ರಾಣಿಗಳಂತೆ ಜೀವನ ನಡೆಸಿದ್ದನೋ. ಯಾಕೆ ಈ ಮಾತು ಬರೆಯುತ್ತಿದ್ದೇನೆ ಎಂದರೆ ಮನುಷ್ಯ ಹುಟ್ಟಿದಾಗಲೇ ಮಾತು ಕಲಿತವನಲ್ಲ. ಇತರ ಪ್ರಾಣಿಗಳಂತೆ ಬುದುಕು ಸಾಗಿಸಿದರೂ, ಅವನ ಹಾದಿಯು ಪರಿವರ್ತನೆಯಲ್ಲಿ ಸಾಗುತ್ತಾ ಬಂದಿರುವುದೇ ಒಂದು ನಿದರ್ಶನವೆನ್ನಬಹದು. ಒಟ್ಟಿನಲ್ಲಿ ಆಹಾರದ ಹುಡುಕಾಟ, ತಡಕಾಟ, ಕೂಗಾಟ, ಹಾರಾಟ. ಚೀರಾಟ, ಒದ್ದಾಟಗಳೆಲ್ಲವೂ ಪ್ರಕೃತಿಯಿಂದಲೇ ಪಡೆದುಕೊಂಡಿರುವಂಥವು. ಕಾಡುಮೇಡುಗಳಲ್ಲಿ ನೆಲೆ ನಿಂತು ಜೀವಿಸುತ್ತಿದ್ದ. ಆರಂಭದಲ್ಲಿ ಗೆಡ್ಡೆ, ಗೆಣಸು ಅಗೆದು ಬಗೆದು ತಿಂದು ನೋಡಿದ. ತೃಪ್ತನಾಗಲಿಲ್ಲ. ಪ್ರಾಣಿಗಳನ್ನು ಬೇಟೆಯಾಡುವುದರಲ್ಲಿ ನಿರತವಾದ. ಬೇಟೆಯಾಡಿದ, ಕೊಂದ, ತಿಂದ, ಹಿಗ್ಗಿದ, ಚೀರಾಡಿದ, ತೃಪ್ತನಾದನೋ ಅದೂ ಇಲ್ಲ. ಬೇಟೆ ರಾಜ-ಮಹಾರಾಜರ ಹವ್ಯಾಸವಾಗಿ ಪರಿವರ್ತನೆ ಹೊಂದಿತು.

ಮನುಷ್ಯನಿಗೆ ನಿರಂತರವಾದ ಬದುಕು ಸಾಗಿಸಲು ಆಧಾರವಾಗಿ ವ್ಯವಸಾಯವನ್ನು ರೂಢಿಸಿಕೊಂಡ. ಇದರಿಂದ ತಾನೊಬ್ಬನೇ ಜೀವಿಸುವುದರೊಂದಿಗೆ ಜನರ ಬೆನ್ನೆಲುಬಾಗಿ ರೂಪಿತಗೊಂಡಿರುತ್ತಾನೆ. ಕೃಷಿ ಇತ್ತಿನದೂ, ಹಿಂದಿನದೂ ಅಲ್ಲ. ಮನುಷ್ಯನ ಬೆನ್ನಿನೊಂದಿಗೆ ಬೆಸೆದುಕೊಂಡು ಬಂದಿರುತ್ತದೆ. ಆದುದರಿಂದ ಕೊಡಗು, ಮೈಸೂರು ಹಾಗೂ ಸುತ್ತಮುತ್ತಲಿನಲ್ಲಿ ಕೃಷಿಯೇ ಪ್ರಧಾನವಾಗಿದೆ. ಕೃಷಿಯು ಪ್ರಧಾನವಾಗಿ ಕಾವೇರಿ ನೀರನ್ನು ಅವಲಂಬಿಸಿದೆ. ಇದರಿಂದ ಜನಪದರು ಉತ್ತಮವಾದ ಜೀವನವನ್ನು ನಡೆಸುತ್ತಿದ್ದಾರೆ. ಕಾವೇರಿ ದಂಡೆಯಲ್ಲಿ ಆಳಿ ಮೆರೆದ ರಾಜವಂಶರುಗಳು ಕೊಡಗು ಹಾಗೂ ಮೈಸೂರಿನ ನಿಸರ್ಗದ ಮಡಿಲನ್ನು ಮೆಚ್ಚಿ, ಅಲ್ಲಿನ ನೀರಾವರಿ ಸೌಲಭ್ಯ, ಮಣ್ಣಿನ ವಾಸನೆಯನ್ನು ಚೆನ್ನಾಗಿ ಅರಿತವರಾಗಿದ್ದು, ತಮ್ಮ ರಾಜ್ಯಭಾರ ಮಾಡಿ ಮರೆಯಾಗಿದ್ದಾರೆ. ಅವರುಗಳೆಂದರೆ ಸಂಗಮ, ಚೋಳ, ಗಂಗರು, ಹೊಯ್ಸಳರು, ಕೊಂಗಾಳ್ವ ಅರಸರು. ಅಲ್ಲದೆ ಮೈಸೂರಿನ ಒಡೆಯರು, ಹಾವೇರಿ ವಂಶಸ್ಥರು, ಹೈದರ ವಂಶಸ್ಥರು. ಈ ಎಲ್ಲಾ ಅರಸರ ಕಾಲದಲ್ಲಿಯೂ ಕೃಷಿಗೆ ಮಹತ್ವ ಕೊಟ್ಟಿದಾರೆಂಬುದನ್ನು ಮರೆಯುವಂತಿಲ್ಲ.

ಕೊಡಗು ಪ್ರಕೃತಿಯ ಮಡಿಲು. ಇಲ್ಲಿನ ಭೂ ಪ್ರದೇಶ ಸಮತಟ್ಟಾಗಿಲ್ಲ. ಹೇಗೆಂದರೆ ವ್ಯವಸಾಯಕ್ಕೆ ಯೋಗ್ಯವೆಂದಲ್ಲ. ಬೆಟ್ಟ, ಗುಡ್ಡ, ಶಿಖರ, ಪರ್ವತ, ಹಳ್ಳ ತಗ್ಗುಗಳಿದ್ದರೂ ಅಲ್ಲಿ ಭೌಗೋಳಿಕವಾಗಿ ವ್ಯವಸಾಯಕ್ಕೆ ಯೋಗ್ಯವಾಗಿದೆ. ಒಟ್ಟಾರೆಯಾಗಿ ಕೊಡಗು ಹೇಗೆ ಹಸಿರುಮಯವೋ ಹಾಗೆಯೇ ಕೃಷಿಮಯವೆಂದರೆ ಆಶ್ಚರ್ಯವೆನಿಸದು. ಇಲ್ಲಿನ ಜನಪದರ ವೃತ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರಿವಾಗುವುದು. ಅಲ್ಲಿ ಮಡಿಕೆ, ಕುಡಿಕೆ, ಎಣ್ಣೆ, ಬುಟ್ಟಿ ನೇಯ್ಗೆ, ಬಟ್ಟೆ ನೇಯ್ದೆ ಬಗ್ಗೆ ಇಂದಿಗೂ ಗಮನಹರಿಸುವುದು ವಿರಳವೆಂದೇ ಹೇಳಬಹುದು.

ಸುಮಾರು ೧೯ನೇ ಶತಮಾನದಲ್ಲಿ ಉತ್ತರಾರ್ಧದಲ್ಲಿ ಕಾಫಿ ಬೆಳೆ ಕೊಡಗಿನಾದ್ಯಂತ ವ್ಯಾಪಿಸಿದೆ. ಎಲ್ಲಾ ಬೆಟ್ಟ ಗುಡ್ಡಗಳಲ್ಲಿಯೂ ಈ ಬೆಳೆಯನ್ನು ಕಾಣಬಹುದು. ಆದರೂ ಇಲ್ಲಿನ ಪ್ರಧಾನ ಬೆಳೆ ಭತ್ತ. ಬೆಳೆದ ಭತ್ತವನ್ನು ಪಕ್ಕದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯಗಳಿಗೆ ಮಾರುವುದನ್ನು ಇಂದಿಗೂ ಕಾಣಬಹುದು. ಒಡೆಯರ ಆಳ್ವಿಕೆಯಲ್ಲಿ ಕೃಷಿ ಹೇಗೆ ಮುಖ್ಯವಾಗಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಬಹುದು. ಆಗ ಪಾರುಪತ್ಯಗಾರರಿಗೆ ಮತ್ತು ಪಟೇಲರಿಗೆ ಲಿಂಗರಾಜೇಂದ್ರ ಅರಸನು ಕೊಟ್ಟ ಹುಕುಂ ೧೧ ನ್ನು ಇಲ್ಲಿ ಉಲ್ಲೇಖಿಸಬಹುದು.

೧. ಹೊಸದಾಗಿ ಭತ್ತ ವ್ಯವಸಾಯ ಮಾಡುವ ಮತ್ತು ಹಲವು ವರ್ಷಗಳವರೆಗೆ ಪಾಳುಬಿದ್ದ ಭೂಮಿಯನ್ನು ತಿರುಗಿ ವ್ಯವಸಾಯ ಮಾಡುವಾಘ ಭೂಮಿಗೆ ಕಂದಾಯವನ್ನು ಎಷ್ಟು ವರ್ಷ ಮಾಘಿ ಮಾಡಬೇಕು. ಜೊತೆಗೆ ಯಾವಾಗ ಕಾಲುಭಾಗ, ಅರ್ಧಭಾಗದಂತೆ ಕಂದಾಯ ಹೆಚ್ಚಿಸಬೇಕು ಎಂಬ ಸೂಚನೆಗಳಿವೆ.

೨. ಆರಂಭದಲ್ಲಿ ಕೃಷಿ ಮಾಡುವವನು ಅಥವಾ ಎರಡು-ತೊಡರುಗಳಿಗೆ ಸಿಕ್ಕಿಹಾಕಿಕೊಂಡವನಿಗೆ ಯಾವ ರೀತಿಯಾಗಿ ಸರಕಾರ ಸಹಾಯ ಮಾಡುತ್ತಿತ್ತೆಂದರೆ ದನಕರು, ಭತ್ತ, ಹಣ, ಸಾಲವಾಗಿ ಕೊಟ್ಟು, ವ್ಯವಸಾಯವನ್ನು ನಿಲ್ಲಿಸದಂತೆ ತಾಕೀತು ಮಾಡುತ್ತಿದ್ದರು.

೩. ಭೂಮಿ ಪಾಳು ಬೀಳದಂತೆ ಮಾಡುವ ಸೂಚನೆಗಳು ಸಿಗುತ್ತವೆ. ಈ ಎಲ್ಲಾ ಅಂಶಗಳ ಜೊತೆಯಲ್ಲಿ ಪ್ರತಿ ಸೋಮವಾರದಂದು ಊರಿನ ಮನೆ ಮನೆಗಳಿಗೆ ಭೇಟಿ ಕೊಡುತ್ತಿದ್ದರು. ಯಾವ ರೈತ ಚೆನ್ನಾಗಿ ಕೃಷಿಯಲ್ಲಿ ತೊಡಗಿದ್ದಾನೆ ಎಂದು ಗುರುತಿಸುತ್ತಿದ್ದರು. ಅಲ್ಲದೆ ಯಾರು ಕಳ್ಳತನ, ಸೋಮಾರಿತನದಿಂದ ಇರುವರುಜೊತೆಗೆ ಹೊಲ, ಗದ್ದೆ, ಕೆರೆ, ಕಾಡು ಉಳುಮೆ ಕೆಲಸವನ್ನು ಮಾಡುವುದಿಲ್ಲ ಅಂತಹವರನ್ನು ಪತ್ತೆ ಮಾಡುತ್ತಿದ್ದರು. ಸರಿಯಾಗಿ ರೈತರು ತಮ್ಮ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲವೋ ಅಂತಹ ರೈತರನ್ನು ಗಮನಿಸಿ ಶಿಕ್ಷೆ ವಿಧಿಸುವ ಕರ್ತವ್ಯ ಊರ ಗೌಡ ಅಥವಾ ಪಟೇಲನಿಗೆ ವಹಿಸಿಕೊಡಲಾಗಿತ್ತು ಎಂದು ೧೧ ನೇ ಹುಕುಂ ಹೇಳುತ್ತದೆ. ನೂರಾರು ವರ್ಷಗಳ ಹಿಂದೆ ಮೈಸೂರು, ಕೊಡಗು ಹಾಗೂ ಇನ್ನಿತರ ರಾಜರ ಆಳ್ವಿಕೆಯಲ್ಲಿತ್ತೆಂದು ಈ ಮೇಲಿನ ಅಂಶಗಳಿಂದ ತಿಳಿಯುತ್ತದೆ.

ಕಾವೇರಿ ಕೊಡಗಿನ ಮುಖ್ಯ ನದಿ. ಈ ನದಿ ಸಿದ್ಧಾಪುರದವರೆಗೂ ಆಗ್ನೇಯಾಭಿಮುಖವಾಗಿ ಹರಿದು, ಅಲ್ಲಿಂದ ಈಶಾನ್ಯಕ್ಕೆ ಹರಿಯುವಳು. ಈ ಸ್ಥಳಗಳಲ್ಲಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ವ್ಯವಸಾಯಕ್ಕೆ ಪುಷ್ಟಿ ನೀಡಿದ್ದಾಳೆ. ಕೆಲವೆಡೆ ತೋಡುಗಳಾಗಿ ಹರಿಯುತ್ತಾ ನೆಲವನ್ನು ತೇವಾಂಸ ಮಾಡಿಕೊಡುವುದರೊಂದಿಗೆ ಅವಳ ವರವಿನಿಂದ ಬೇಸಾಯ ಮಾಡುವುದನ್ನು ಕಾಣಬಹುದು. ಅನಂತರ ಶಿರಂಗಾಲದ ಬಳಿ ಜಿಲ್ಲೆಯನ್ನು ಕಡಿದರೂ ಮುಂದೆ ಹೇಮಾವತಿ ನೀರನ್ನು ಹಾಸನ ಜಿಲ್ಲೆಯಲ್ಲಿ ವ್ಯವಸಾಯಕ್ಕೆ ಬಳಸಿಕೊಂಡು ಭತ್ತ, ಕಬ್ಬು, ಹತ್ತಿ, ಆಲೂಗಡ್ಡೆ, ರಾಇ ಇನ್ನಿತರ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ.

ಅನಂತರ ಕೊಡಗಿನಲ್ಲಿ ಕಾವೇರಿಯನ್ನು ಅನೇಕ ಉಪನದಿಗಳು ಸೇರಿಕೊಳ್ಳುತ್ತವೆ. ಅವುಗಳೆಂದರೆ, ಕನ್ನಿಕೆ, ಕಕ್ಕಬ್ಬೆ, ಕಾಡನೂರು ಹೊಳೆ, ಮುತ್ತಾರು ಮುಡಿ, ಚಿಕ್ಕಹೇಳೆ, ಚೇರಹೊಳೆ, ಮಾದಾಪುರ ಮತ್ತು ಹಟ್ಟೆಹೊಳೆ, ಹಾರಂಗಿಯ ಉಪನದಿಗಳಾಗಿ ಮಾರ್ಪಾಡಾಗುತ್ತವೆ. ಕೊಡಗಿನ ಉತ್ತರದಲ್ಲಿ ಬರುವ ಸೋಮವಾರಪೇಟೆ ತಾಲೂಕಿನಲ್ಲಿ ಪ್ರಧಾನವಾಗಿ ಭತ್ತ, ರಾಗಿ, ಜೋಳವನ್ನು ಬೆಳೆಯುತ್ತಾರೆ. ಈ ಭಾಗದಲ್ಲಿ ಭೂ ಪ್ರದೇಶವು ಬಹಳ ವಿಶಾಲವಾಗಿದ್ದು, ಕೃಷಿಗೆ ಯೋಗ್ಯವಾಗಿದೆ. ಅಲ್ಲಿ ವಾಣಿಜ್ಯ ಬೆಳೆಗಳಿಗಿಂತ ಭತ್ತದ ಬೆಳೆ ಪ್ರಧಾನವಾಗಿ ಬೆಳೆಯುತ್ತಾರೆ. ಹಾರಂಗಿ ನಾಲೆಯು ನಾನಾ ಊರುಗಳ ಮುಖೇನ ಹರಿದು ವ್ಯವಸಾಯಕ್ಕೆ ಅನುಕೂಲ ಮಾಡಿಕೊಟ್ಟಿದೆ.

ಒಟ್ಟಿನಲ್ಲಿ ಕೊಡುಗು ಜಿಲ್ಲೆಯ ಮೂರನೆಯ ಒಂದು ಭಾಗದಷ್ಟು ಅರಣ್ಯ ಆವೃತವಾದಂತಹ ಭೂ ಪ್ರದೇಶವನ್ನು ಹೊಂದಿದೆ. ಆದರೂ ಅಲ್ಲಿನ ಜನಪದರ ಮುಖ್ಯ ಕಸುಬು ಕೃಷಿ. ಮುಖ್ಯ ಬೆಳೆ ಭತ್ತವೆಂದು ಈಗಾಗಲೇ ಹೇಳಲಾಗಿದೆ. ಸುಮಾರು ೧,೨೨, ೫೧೬ ಎಕರೆಗಳಲ್ಲಿ ಭತ್ತವನ್ನು ಬೆಳೆಯುತ್ತಾರೆ. ಅಲ್ಲದೆ ರಾಗಿ ಇನ್ನೊಂದು ಪ್ರಧಾನ ಬೆಳೆ. ಸೋಮವಾರಪೇಟೆ ತಾಲೂಕಿನಲ್ಲಿ ಇಂದಿಗೂ ಜನಪದರು ಅಚ್ಚುಮೆಚ್ಚಿನ ಆಹಾರ. ಕಾಫಿ ಕೊಡಗಿನ ಮತ್ತೊಂದು ಪ್ರಧಾನ ಉತ್ಪನ್ನ ಬೆಳೆ. ಕೊಡಗಿನಾದ್ಯಂತ ಅಂದರೆ ೭೫,೦೦೦ ಎಕರೆಗಿಂತ ಹೆಚ್ಚು ಕಾಫಿ ತೋಟಗಳಿವೆ. ಅಲ್ಲದೆ ಕಿತ್ತಳೆ, ಏಲಕ್ಕಿ, ಮೆಣಸು ಬೆಳೆಯನ್ನು ಬೆಳೆಯಲಾಗುತ್ತದೆ.

ನೀರು ಸಮೃದ್ಧವಾಗಿ ಹರಿದೆಡೆಯಲ್ಲೆಲ್ಲ ಅದರ ಅಕ್ಕಪಕ್ಕದ ಜಮೀನಿನಲ್ಲಿ ಅಡಕೆ, ಬಾಳೆಯನ್ನು ಬೆಳೆಯುತ್ತಾರೆ. ವಿರಾಜಪೇಟೆ ಹಾಗೂ ಮಡಿಕೇರಿ ತಾಲೂಕುಗಳಲ್ಲಿ ಚಹ ತೋಟಗಳು ಕಂಡುಬರುತ್ತವೆ. ಸುಮಾರು ೧,೨೨೨ ಎಕರೆ ಭೂಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಅಲ್ಲದೆ ಜೋಡುಪಾಲ, ಮಾವುಕೂಟ, ಸಂಪಾಜೆ ಮತ್ತು ಕಡಮಕಲ್ಲುಗಳಲ್ಲಿ ರಬ್ಬರ‍್ ತೋಟಗಳಿವೆ. ಅಲ್ಲದೆ ಮಡಿಕೇರಿಯಿಂದ ಮುಂದೆ ಸಾಗುತ್ತಾ ಹೋದರೆ ಆ ನಿಸರ್ಗದ ಗಡಿಯಲ್ಲಿ ಸಂಪಾಜೆ, ಪೆರಾಜೆ, ಆಜುಬಾಜಿನಲ್ಲಿ ಗೇರು ಮತ್ತು ತೆಂಗನ್ನು ಬೆಳೆಯುತ್ತಾರೆ. ಇತ್ತೀಚೆಗೆ ಅಷ್ಟು ಫಲಕಾರಿಯಾಗಿಲ್ಲವೆನ್ನಬಹುದು.

ಕೃಷಿಯೊಂದಿಗೆ ಕೊಡಗಿನಾದ್ಯಂತ ಹೈನು ಕೈಗಾರಿಕೆಗಳಿಗೂ ಅಲ್ಲಿನ ಜನಪದರು ಗಮನ ಹರಿಸುತ್ತಾರೆ. ಜೇನು ಸಾಕುವುದು ಪ್ರಧಾನವಾದ ಉದ್ಯಮವಾಗಿದೆ. ಭಾಗಮಂಡಲ, ನಾಪೋಕ್ಲು, ಊರುಗಳಲ್ಲಿ ಜೇನು ಸಾಕಾಣಿಕೆಯ ಕೇಂದ್ರಗಳಿವೆ. ಕೊಡಗಿನ ಕೊಡ್ಲಿಪೇಟೆ, ಶನಿವಾರಸಂತೆ ಮತ್ತು ಶಿರಂಗಾಲಗಳಲ್ಲಿ ಜನರು ಕೈಮಗ್ಗದ ಬಟ್ಟೆಯನ್ನು ನೇಯ್ಗೆ ಮಾಡುವರು. ಇತ್ತೀಚಿನ ದಿನಗಳಲ್ಲಿ ಕೆಲವರು ಪಟ್ಟಣಗಳಿಗೆ ಹೋಗಿ ತಮ್ಮ ವೃತ್ತಿಯನ್ನು ಆರಂಬಿಸುತ್ತಾರೆ. ವಿರಾಜಪೇಟೆ ಕೇರಳದ ಸಂಪರ್ಕ ಹೊಂದಿದೆ. ಅಲ್ಲದೆ ಅಲ್ಲಿ ಬೆತ್ತ ಸಾಮಾನುಗಳನ್ನು ತಯಾರಿಸುವರು.

ಇತ್ತೀಚಿನ ದಿನಗಳಲ್ಲಿ ಕೊಡಗಿನ ಸೋಮವಾರಪೇಟೆ ತಾಲೂಕಿನಲ್ಲಿ ಬರುವ ಶಿರಂಗಾಲ, ಹೆಬ್ಬಾಲೆ, ಕುಶಾಲನಗರ, ಬಾಣವರ ಹಾಗೂ ಇನ್ನಿತರ ಗ್ರಾಮಗಳಲ್ಲಿ ರೇಷ್ಮೆಯನ್ನು ಕಾಣಬಹುದು. ಇಂದು ಆದಾಯದ ಮೂಲವಾಗಿ ಈ ಬೆಳೆ ಮಾರ್ಪಾಡಾಗಿರುತ್ತದೆ. ಒಟ್ಟಿನಲ್ಲಿ ಕೊಡಗಿನಲ್ಲಿ ವೈವಿಧ್ಯಮಯವಾದ ಬೆಳೆಗಳನ್ನು ರೂಢಿಸಿಕೊಂಡು ತಮ್ಮ ಬದುಕನ್ನು ಮುಂದುವರೆಸಿಕೊಂಡು ಮುನ್ನುಗ್ಗುತ್ತಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ ಕೃಷಿಯಲ್ಲಿ ಅನೇಕ ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆರಂಭದ ಹಂತದಲ್ಲಿ ಯಾವುದೇ ರೀತಿಯ ಹೊಸ ಮಾದರಿಗಳನ್ನು ಕೃಷಿಯಲ್ಲಿ ಕಾಣಸಿಗುವುದಿಲ್ಲ. ಪ್ರಕೃತಿಯ ವಿಕೋಪದೊಳಗೆ ಒಂದಲ್ಲ ಒಂದರಲ್ಲಿ ತಲೆಬಾಗಬೇಕಾಗಿರುತ್ತದೆ. ಕೆಲವು ವರ್ಷಗಳ ಹಿಂದೆ ಕಾವೇರಿ ನದಿ ತುಂಬಿ ಹರಿಯುತ್ತಿತ್ತು. ಇದರಿಂದ ಕೃಷಿಯು ಉತ್ತಮವಾಗಿಯೇ ಇತ್ತು. ದನಕರುಗಳ ಗೊಬ್ಬರವನ್ನು ಬಳಸಲಾಗುತ್ತಿತ್ತು. ಅಲ್ಲದೆ ಕಾಡು ಮಣ್ಣು, ಸೊಪ್ಪುಸದೆಗಳಿಂದ ಗೊಬ್ಬರವನ್ನು ಮಾಡಿ ಕೃಷಿಗೆ ಬಳಸಲಾಗುತ್ತಿತ್ತು. ಭೂಮಿಯು ಕೂಡು ಕುಟುಂಬಗಳಲ್ಲಿ ಕೇಂದ್ರೀಕೃತಗೊಂಡು ವಿಶಾಲವಾದ ಹೊಲ-ಗದ್ದೆಗಳನ್ನು ಹೊಂದಿದ್ದರು. ಕುಟುಂಬಗಳು ವಿಭಾಗೀಕರಣಗೊಂಡಿರಲಿಲ್ಲ. ಕಾಡು ನಾಡಾಗಿರಲಿಲ್ಲ. ಪ್ರಕೃತಿಯು ಕೂಡ ವಿಕೋಪಕ್ಕೆ ಗುರಿಯಾಗುತ್ತಿರಲಿಲ್ಲ. ಸಕಾಲಕ್ಕೆ ಮಳೆ ಬೀಳುತ್ತಿದ್ದುದರಿಂದ, ವ್ಯವಸಾಯದಲ್ಲಿ ಏರುಪೇರುಗಳಾಗುತ್ತಿರಲಿಲ್ಲ. ಭೂ ಕುಸಿತ, ಮಳೆ ಅಬ್ಬರ, ಹೊಲ, ಗದ್ದೆಗಳಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗದಂತೆ ಎಚ್ಚರ ವಹಿಸಲಾಗುತ್ತಿತ್ತು. ಗಿಡ, ಮರಗಳನ್ನು ನೆಟ್ಟ ಮಣ್ಣು ಕೊಚ್ಚಿ ಹೋಗದಂತೆ ಜನಪದರು ಮುಂಜಾಗ್ರತೆಯನ್ನು ಅನುಸರಿಸುತ್ತಿದ್ದರು.

ಅಂದು ಕೃಷಿ ಆರ್ಥಿಕತೆಯು ಭೂ ಬಾಂಧವ್ಯವನ್ನು ಸಾರುತ್ತಿತ್ತು. ಅಲ್ಲದೆ ಭೂ ಒಡೆಯರು ಭೂಮಿ ಬಗ್ಗೆ ತುಂಬಾ ಉತ್ಸಾಹ ಹಾಗೂ ಆಸಕ್ತಿಗಳನ್ನು ವ್ಯಕ್ತಪಡಿಸುತ್ತಿದ್ದರು. ಭೂ ಮಾಲೀಕರು ಉತ್ತಮ ಮಾರ್ಗಗಳನ್ನು ಉಳ್ಳವರಾಗಿದ್ದರು. ಒಟ್ಟಾರೆಯಾಗಿ ಗ್ರಾಮೀಣ ಪ್ರದೇಶದಲ್ಲಿನ ಸ್ಥಿರತೆ ಹಾಗೂ ಸಾಮಾಜಿಕ ಅನ್ಯೋನ್ಯತೆ ಕಾಣುತ್ತಿತ್ತು. ಒಟ್ಟಾರೆಯಾಗಿ ಸಾಂಸ್ಕೃತಿಕ ಜೀವನದಲ್ಲಿ ಕೃಷಿ ಬಹಳ ಪ್ರಧಾನ ಪಾತ್ರ ನಿರ್ವಹಿಸುತ್ತಿತ್ತು ಎಂದರೆ ಆಶ್ಚರ್ಯವೇನಿಲ್ಲ.

ಪ್ರಸ್ತುತ ಸಂದರ್ಭದಲ್ಲಿ ಜಾಗತೀಕರಣ, ಕೈಗಾರೀಕರಣ, ಉದಾರೀಕರಣ, ಯಾಂತ್ರೀಕರಣ, ನಗರೀಕರಣ ಪರಿಕಲ್ಪನೆಗಳು ಅಬ್ಬರಿಸುತ್ತಿದ್ದು ಇಂದು ಕೃಷಿಯಲ್ಲಿಯೂ ಹಾಗೂ ಇನ್ನಿತರ ಕ್ಷೇತ್ರಗಳಲ್ಲೂ ಪರಿದಾಡುವಂತಹ ಪರಿಸ್ಥಿತಿ ನಮ್ಮ ಮುಂದೆ ಸುಳಿದಾಡುತ್ತಿದೆ. ಯಾವ ರೀತಿಯಾದ ದಾರಿಯನ್ನು ಆರಿಸಿಕೊಳ್ಳಬೇಕೆಂಬುದರಲ್ಲಿ ಬದುಕು ದುಸ್ತರವಾಗಿದೆ. ಜಾಗತಿಕ ಮಾನವನ ಇತಿಹಾಸದ ತುಣುಕು ಕ್ರಿ.ಶ. ೧೮ನೇ ಶತಮಾನದಲ್ಲಿ ಯುರೋಪಿನಲ್ಲಿ ಆರಂಭವಾದ ಔದ್ಯೋಗಿಕ ಕ್ರಾಂತಿಯು ಒಂದು ಮೈಲಿಗಲ್ಲು ಎನ್ನಬಹುದು. ಆರಂಭದಲ್ಲಿ ಇಂಗ್ಲೆಂಡಿನಲ್ಲಿ ಅನಂತರ ಯುರೋಪ್ ಖಂಡದ ಮುಖೇನ ಪಸರಿಸಿ ಔದ್ಯೋಗಿಕ ಕ್ರಾಂತಿ ಅಪ್ಪಳಿಸಿತು. ಇದರ ಕ್ರಾಂತಿ ಆರ್ಥಿಕ ರಂಗದಲ್ಲೂ ಕಂಡುಬಂದರೂ ವಾಣಿಜ್ಯ, ಕೃಷಿ, ಮಾನವನ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ, ವೈಜ್ಞಾನಿಕ ಕ್ಷೇತ್ರಗಳ ಮೇಲೂ ವ್ಯಾಪಕ ಪರಿಣಾಮ ಬೀರಿರುತ್ತದೆ ಎಂಬ ಅಂಶವನ್ನು ಮರೆಯುವಂತಿಲ್ಲ.

ಬಹುಕಾಲದಿಂದಲೂ ಕೃಷಿಯಲ್ಲಿ ರೂಢಿಸಿಕೊಂಡು ಬಂದಿದ್ದ ಬಿಲ್ಲು, ಬಾಣ, ಕಲ್ಲಿನ ಆಯುಧಗಳು ಹೋಗಿ ಇಂದು ನೇಗಿಲು, ನೆಲ ಅಗೆಯುವ ಕೋಲು, ಗುದ್ದಲಿ, ಕುಡುಗೋಲು, ಟ್ರಾಕ್ಟರ‍್ ಹೀಗೆ ಕೃಷಿಕರು ಬಳಸುತ್ತಿದ್ದಾರೆ. ಆದರೆ ಸಣ್ಣ ಕೃಷಿಕರು ಹೇಗೆ ನಿಭಾಯಿಸಬೇಕೆಂದು ತಿಳಿಯದಾಗಿದೆ. ಆಧುನಿಕ ಯುಗ ಮಾನವನ ಬದುಕನ್ನು ತಿರುಗು ಮುರುಗು ಮಾಡುತ್ತಿದೆ. ಅದು ನಾಗರೀಕತೆಯ ದಿಕ್ಕು, ಗತಿ, ವೇಗಗಳನ್ನು ಪರಿವರ್ತಿಸುತ್ತದೆ.

ಮಿಡಿವಲ್ ಯೇಜ್ ನಲ್ಲಿದ್ದ ಆಚಾರ-ವಿಚಾರ, ರೂಢಿ, ಪದ್ಧತಿ, ನಂಬಿಕೆ, ಶ್ರದ್ಧೆ, ಮೌಲ್ಯಗಳು ಇಂದು ಕೃಷಿಯಲ್ಲಿ ನಾಶವಾಗಿವೆ. ಅಥವಾ ಕ್ರಾಂತಿಯಿಂದ ಬದಲಾಗುತ್ತಿವೆ ಎನ್ನಬಹುದು. ಸರಳವಾಗಿದ್ದ ಕೃಷಿ ಜಗತ್ತು ಇಂದು ವೈವಿಧ್ಯಮಯವಾಗಿದೆ. ಬೃಹತ್ ಹಾಗೂ ಮಧ್ಯಮ ಉದ್ಯಮಗಳನ್ನು ಪಟ್ಟಣಗಳಲ್ಲಿ ತೆರೆದು ಗ್ರಾಮೀಣ ಜನಪದರೂ ಕೂಡ ತಂಡೋಪತಂಡವಾಗಿ ನಗರಗಳತ್ತ ಹೋಗುತ್ತಿದ್ದಾರೆ. ಇದರಿಂದ ಕೃಷಿಕರಿಗೆ ಆಸಕ್ತಿ ಕ್ಷೀಣಿಸುತ್ತಿದೆ.

ಇಂದು ಆಧುನಿಕಮಯ. ಹಳೆಯ ಕೃಷಿಯಂತ್ರಗಳು ಕಣ್ಮರೆಯಾಗಿವೆ. ನವೀನ ಯಂತ್ರಗಳು ಪ್ರಭುತ್ವ ಸಾಧಿಸುತ್ತಿವೆ. ಗ್ರಾಮದಲ್ಲಿ ಜಮೀನ್ದಾರ, ಬಂಡವಾಳಶಾಹಿ, ಭೂ ಹಿಡುವಳಿದಾರರು ಮಾತ್ರ ಉಸಿರಾಡುತ್ತಿದ್ದಾರೆ. ಆದರೆ ಸಣ್ಣ ಭೂಹಿಡುವಳಿದಾರರು, ಗೇಣಿದಾರರು ಅಪಾಯದಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾರೆ. ಹೊಸ ಮಾದರಿಯ ಗೊಬ್ಬರಗಳು, ನವೀನ ರೀತಿಯ ಬೇಸಾಯ ಕ್ರಮ, ಸತತವಾಗಿ ಬೆಳೆ ತೆಗೆಯುವ ಪದ್ಧತಿ, ಇನ್ನೂ ಅನೇಕ ಕಾರಣಗಳಿಂದ ಮುಂದೆ ಕೃಷಿಯಲ್ಲಿ ವೈರುಧ್ಯಗಳು ಘಟಿಸುತ್ತವೆ ಅನ್ನಿಸುತ್ತದೆ.

ಮನುಷ್ಯ ದಿನೇದಿನೇ ಒಂದಲ್ಲ ಒಂದು ರೀತಿ ಆಲೋಚನೆಯತ್ತ ದಾಪುಗಾಲು ಹಾಕುತ್ತಿದ್ದಾನೆ. ಕಾಡನ್ನು ಕಡಿದು ಆ ಭೂಮಿಯಲ್ಲಿ ಕೃಷಿ ಮಾಡತೊಡಗಿದ್ದಾನೆ. ಕಾಡಿನೊಂದಿಗೆ ಇದ್ದ ಕೆಲವು ಸಸ್ಯಗಳು, ಪ್ರಾಣಿ ಸಂಕುಲ ಕಣ್ಮರೆಯಾಗುತ್ತಿವೆ. ಇದರಿಂದಾಗಿ ಭೂಮಿ ಹಾಗೂ ನೈಸರ್ಗಿಕ ಪರಿಸರಕ್ಕೆ ಹಾನಿ ಎಸಗುತ್ತಿರುವುದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸುತ್ತಾ ಅಧಿಕ ಲಾಭದ ಆಸೆಯಿಂದ ಅನೇಕಾನೇಕ ದುಷ್ಪರಿಣಾಮಗಳಿಗೆ ಎಡೆ ಮಾಡಿಕೊಟ್ಟು, ಇನ್ನು  ಮುಂದೆಯೂ ಅನೇಕ ಸವಾಲುಗಳನ್ನು ಸಹ ಎದುರಿಸಬೇಕಾಗುತ್ತದೆ ಎಂಬ ಮಾತನ್ನು ಮನನ ಮಾಡಿಕೊಳ್ಳಬೇಕು.