ಪುರಾಣ, ವೇದ ಹಾಗೂ ಪೌರಾಣಿಕ ಹಿನ್ನೆಲೆಯನ್ನು ಅವಲೋಕಿಸುವಾಗ ‘ಕೊಡಗು’ ಪದ ನಿಷ್ಪತ್ತಿ ಕುರಿತು ಅನೇಕ ಕಥನಗಳಿವೆ. ಆದುದರಿಂದ ಪುರಾಣದ ಒಂದು ತುಣುಕನ್ನು ವಿಶ್ಲೇಷಣೆ ಮಾಡುವ ಮುಖೇನ ವಿಷಯಕ್ಕೆ ಒತ್ತುಕೊಡುವುದು ಉಚಿತ. ಬ್ರಹ್ಮಗಿರಿ ಶಿಖರ ಅರ್ಧಚಂದ್ರಾಕಾರವಾಗಿದೆ. ಇದು ಹಸಿರಿನ ಮೈಯನ್ನು ಹೊದ್ದುಕೊಂಡು ರಮಣೀಯವಾಗಿದೆ. ಈ ಶಿಖರ ಒಳಗೊಂಡಂತೆ ಪವಿತ್ರವಾದ ತೀರ್ಥಕೊಳವಿದೆ. ಈ ಸ್ಥಳದಲ್ಲಿ ಮಹಾವಿಷ್ಣು ಮೀನಿನ ರೂಪ ಪಡೆದು (ಮತ್ಸ್ಯಾವತಾರ) ಕೈಲಾಸಾಧಿಪತಿಯಾದ ಮುಕ್ಕಣ್ಣನನ್ನು ತಪಗೈದನಂತೆ. ವಿಷ್ಣುವಿನ ತಪಸ್ಸಿಗೆ ಮುಕ್ಕಣ್ಣನು ಪ್ರತ್ಯಕ್ಷನಾಗಿ ‘ಮೀನಿ’ ಗೆ ಅಮರತ್ವವನ್ನು ವರವಾಗಿ ನೀಡಿದ ಕಾರಣಕ್ಕೆ ಆ ಕ್ಷೇತ್ರಕ್ಕೆ ‘ಮತ್ಸ್ಯ’ ದೇಶವೆಂದು ಕರೆಯಲಾಗಿದೆ. ಈ ದೇಶವನ್ನು ಸಿದ್ದಾರ್ಥನೆಂಬ ರಾಜ ಬಹಳ ವೈಭವಪೂರಿತನಾಗಿ ಆಳ್ವಿಕೆ ನಡೆಸುತ್ತಿದ್ದ. ಈತನಿಗೆ ಚತುರ್ವಿದ್ಯಾ ಪಾರಂಗತರಾದ ನಾಲ್ಕು ಗಂಡುಮಕ್ಕಳಲ್ಲಿ ಕೊನೆಯವನಾದ ಚಂದ್ರವರ್ಮನು ತೀರ್ಥಕ್ಷೇತ್ರಗಳ ಸಂದರ್ಶನ ಮಾಡುತ್ತ ತಿರುಪತಿ, ಜಗನ್ನಾಥ, ಕಾಂಚಿ, ಶ್ರೀರಂಗ, ರಾಮೇಶ್ವರಕ್ಕೆ ಬಂದು ಆನಂತರ ಬ್ರಹ್ಮಗಿರಿ ಶಿಖರದ ತಪ್ಪಲಿಗೆ ಆಗಮಿಸುವನು.

ಅನಂತರ ಅ ಭೂಪ್ರದೇಶದ ಸೌಂದರ್ಯ ಹಾಗೂ ರಮಣೀಯವಾದ ಹಸಿರಿನ ಬನಸಿರಿಯ ಸೊಬಗನ್ನು ಸಂತುಷ್ಟಗೊಂಡು ಸಾಕ್ಷಾತ್ ಪರಮೇಶ್ವರಿಗೋಸ್ಕರವಾಗಿ ತಪಗೈಯುತ್ತಾನೆ. ಅವನ ತಪಸ್ಸಿಗೆ ಮೆಚ್ಚಿ ಪರಮೇಶ್ವರಿಯು ಪ್ರತ್ಯಕ್ಷಳಾಗುವಳು. “ಕ್ತ ನಿನಗೆ ಏನು ವರ ಬೇಕು ಕೇಳು?” ಎಂದಾಗ, ಚಂದ್ರವರ್ಮನು “ನನ್ನ ಪಿತನ ರಾಜ್ಯಕ್ಕಿಂತ ಉತ್ತಮವಾದ ರಾಜ್ಯ, ಸ್ವಜಾತಿ ಸತಿ ಮತ್ತು ನನ್ನ ಮರಣದ ನಂತರ ಸ್ವರ್ಗಕ್ಕೆ ಹೋಗಬೇಕು” ಎಂದು ಕೇಳಿಕೊಂಡಾಗ, “ನೀನು ಹಿಂದಿನ ಜನ್ಮದಲ್ಲಿ ಮಾಡಿದ ತಪ್ಪಿಗಾಗಿ ಸ್ವಜಾತಿ ವಿವಾಹವಾದರೂ ಪುತ್ರ ಸಂತಾನವಾಗಲಾರದು.  ಆದರೆ ಶೂದ್ರ ಸ್ತ್ರೀಯನ್ನು ವರಿಸುವುದರಿಂದ ನಿನ್ನ ಇಷ್ಟಾರ್ಥಗಳು ಈಡೇರುತ್ತವೆ” ಎಂದು ಆಶೀರ್ವದಿಸಿ ಮಾಯವಾಗುತ್ತಾಳೆ (ಸ್ಕಂದ ಪುರಾಣ, ಕಾವೇರಿ ಮಹಾತ್ಮೆ, ೧೩ ನೇ ಅಧ್ಯಾಯ).

ಪಾರ್ವತಿಯು ಆಶೀರ್ವದಿಸಿದಂತೆ ಚಂದ್ರಮರ್ವನಿಗೆ ಶೂದ್ರ ಸ್ತ್ರೀಯಿಂದ ಸಂತಾನ ಪ್ರಾಪ್ತಿಯಾಗುವುದು. ಅವರುಗಳಲ್ಲಿ ಕೆಲವರು ಉಗ್ರರು, ಶೂರರು, ಧರ್ಮಿಷ್ಟರಾಗಿ ಬೆಳೆಯುತ್ತಾರೆ. ಚಂದ್ರವರ್ಮನು ಮತ್ಸ್ಯ ದೇಶದ ರಾಜನಾದ ಸಿದ್ಧಾರ್ಥನ ಮಗನಾದ್ದರಿಂದ ಆ ಭೂಪ್ರದೇಶಕ್ಕೆ ‘ಮತ್ಸ್ಯದೇಶ’ವೆಂದು ಕರೆಯಲಾಯಿತು. ಈ ಕಥೆಯ ತಾತ್ವಿಕ ಒಳಸುಳಿಯಲ್ಲಿ ಅಡಿಗಿಕೊಂಡಿರುವ ಅಂಶವೆಂದರೆ ವಿಷ್ಣು ‘ಮತ್ಸ್ಯ’ ರೂಪ ಹೊಂದಿ ತಪಸ್ಸು ಮಾಡಿದ್ದರಿಂದ, ಮತ್ಸ್ಯ ದೇಶದ ಸಿದ್ಧಾರ್ಥರಾಜನ ‘ಮತಿ’ವುಳ್ಳ ಪುತ್ರ ಇಲ್ಲಿ ರಾಜ್ಯ ಕಟ್ಟಿ ಆಳ್ವಿಕೆ ನಡೆಸಿದ್ದರ ಪೂರಕವಾಗಿ ಕೊಡಗು ಮತ್ಸ್ಯದೇಶವೆಂದು ಕರೆಸಿಕೊಂಡಿದೆ. ಹೀಗೆ ಪುರಾಣ, ವೇದ, ಪೌರಾಣಿಕತೆ, ರಾಮಾಯಣ ಮತ್ತು ಮಹಾಭಾರತಗಳಲ್ಲಿಯೂ ಕೊಡಗು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗಿರುತ್ತದೆ. ಅವುಗಳೆಂದರೆ ಕೋಡಿಮಲೆನಾಡು, ಕ್ರೋಢದೇಶ, ಮಲೆನಾಡು, ಭಗಂಡ ಕ್ಷೇತ್ರ, ಬ್ರಹ್ಮಕ್ಷೇತ್ರ, ಸ್ಕಂದಾವನ ಮತ್ತು ಸ್ಕಂದಾಕ್ಷೇತ್ರ ಹೀಗೆ ಇನ್ನೂ ಅನೇಕ ಹೆಸರುಗಳಿಂದ ಕರಯಲಾಗಿದೆ.

ಕೊಡಗಿನಲ್ಲಿ ಅನೇಕ ರಾಜವಂಶರು ಆಳ್ವಿಕೆ ನಡೆಸಿದ್ದಾರೆ. ಅವರುಗಳಲ್ಲಿ ಗಂಗ, ಚೆಂಗಾಳ್ವ, ಚೋಳ, ಹೊಯ್ಸಳ, ಕೊಂಗಾಳ್ವ, ಬೇಲೂರು ನಾಯಕರು, ಹಾಲೇರಿ ವಂಶಸ್ಥರು ಮುಂದುವರೆದಂತೆ ವೀರರಾಜೇಂದ್ರನಿಂದ ಹಿಡಿದು ಚಿಕ್ಕವೀರರಾಜೇಂದ್ರ ಅನಂತರ ಬ್ರಿಟೀಷರು ಹೆಸರು ಕೂಡ ಚರಿತ್ರೆಯ ಒಳಪುಟಗಳಲ್ಲಿ ಹೆಸರಾಗಿದೆ.

ಕೊಡಗಿನ ನಿಸರ್ಗದ ಮಡಿಲಾದ ತಲಕಾವೇರಿಯಲ್ಲಿ ಜನ್ಮವೆತ್ತಿರುತ್ತಾಳೆ. ಶತಶತಮಾನಗಳಿಂದ ಜನಪದರು ದೇವತೆಯಾಗಿ ಸ್ವೀಕರಿಸಿ, ಆಚರಿಸಿಕೊಂಡು ಇಂದಿಗೂ ಮುಂದುವರಿಸುತ್ತಿದ್ದಾರೆ. ಒಟ್ಟಾರೆಯಾಗಿ ಅವರ ಕುಟುಂಬದ ಆರಾಧ್ಯ ದೇವತೆ. ದಕ್ಷಿಣ ಭಾರತೀಯ ಸಾಂಸ್ಕೃತಿಕ ಜಗತ್ತಿನ ಅಕ್ಷಯ ಪಾತ್ರೆಯಲ್ಲಿನ ಜೀವನದಿ. ಕಾವೇರಿ ನಿತ್ಯ ನಿರಂತರವಾಗಿ ಹರಿದೆಡೆಯಲ್ಲೆಲ್ಲ ದಡದ ಬುದಕಿನ ಜನರ ಉಸಿರಾಗಿರುತ್ತಾಳೆ. ಇವಳು ಜನಪದರ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಚೇತನವಾಗಿರುತ್ತಾಳೆ. ಇವಳ ಬೆನ್ನಿನೊಂದಿಗೆ ಬಹುಳತ್ವ ಸಂಸ್ಕೃತಿಯು ಪಡೆ ಒಡೆದಿದೆ. ಆದುದರಿಂದ ಬಹುನಂಬಿಕೆ, ಆಚರಣೆ, ಸಂಪ್ರದಾಯ, ಸಂಸ್ಕೃತಿ, ಪದ್ಧತಿ, ರೂಢಿ ನಿಯಮಗಳು, ಭಾಷೆ, ಸಾಹಿತ್ಯ, ವೇಷಭೂಷಣ, ಕ್ರೀಡೆಗಳು, ಕೃಷಿ ಆಚರಣೆಗಳು, ಹಬ್ಬ ಹರಿದಿನಗಳು, ಹಾಡು, ಕಥನ, ಗಾದೆ, ಒಗಟು ಗರಿಬಿಚ್ಚಿ ಅರಳಿವೆ. ಅಲ್ಲದೆ ಅವಳು ಹರಿಯುವ ಕಡೆಯಲ್ಲೆಲ್ಲ ಸೃಷ್ಟಿಯಾಗಿರುವ ಪ್ರೇಕ್ಷಣೀಯ ಸ್ಥಳಗಳು, ಗುಡಿಗೋಪುರಗಳು, ಪುರಾಣ ಪುಣ್ಯಕತೆಗಳು ಜೀವಂತವಾಗಿವೆ. ಜನಪದರಿಗೆ ನೀರೆರೆಯುವುದಕ್ಕಷ್ಟೇ ಸೀಮಿತವಾಗಿರದೆ ಅವರ ದಿನನಿತ್ಯದ ಬದುಕಿನ ಸೋಪಜ್ಞತೆಗೆ ಶೋಭಾಯಮಾನವಾಗಿ, ಕನ್ನಡಿಗರ ಕಣ್ಮಣಿಯಾಗಿ ಇಂದಿಗೂ ನಿರಂತರವಾಗಿ ಹರಿಯುತ್ತದ್ದಾಳೆ. ಈ ಬಹುಳತ್ವ ಸಂಸ್ಕೃತಿಗೆ ಪೂರಕವಾಗಿ ಕೊಡಗಿನಲ್ಲಿ ಅನೇಕ ಜಾತಿ, ಜನಾಂಗ, ವರ್ಗ, ವರ್ಣ, ಬುಡಕಟ್ಟು, ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಬೀಡು ಬಿಟ್ಟಿದ್ದಾರೆ. ಒಂದೊಂದು ಸಮೂಹವು ಒಂದೊಂದು ಸಂಸ್ಕೃತಿಯನ್ನು ರೂಢಿಸಿಕೊಂಡು ಮುಂದುವರೆಸಿಕೊಂಡು ಹೋಗುತ್ತಿರುವುದನ್ನು ಇವೊತ್ತು ನೋಡಬಹುದಾಗಿದೆ. ಒಂದು ರೀತಿಯಲ್ಲಿ ವೈವಿಧ್ಯಮಯತೆಯಿಂದ ಕೂಡಿದೆ.

ಈ ಮೇಲಿನ ಅಂಶಗಳಿಗೆ ಸ್ಪಷ್ಟವಾದ ಅಂಶವೆಂದರೆ ನದಿಗಳು. ಇಲ್ಲಿನ ತರ್ಕವೆಂದರೆ ಕೊಡಗಿನಲ್ಲಿ ಕಾವೇರಿ ಒಂದೇ ನದಿಯೇ….! ಇಲ್ಲಾ ಈ ನದಿ ಮಾತ್ರವೇ ಕೊಡಗಿನ ಬೆನ್ನೆಲುಬೇ? ಬಹುತೇಕ ಹೆಚ್ಚಿನ ಪಾಲಿರಬಹುದಾಗಿದೆ. ಆದರೆ ಇದಕ್ಕೆ ಪೂರಕವಾದ ನದಿಗಳು ಅಲ್ಲಿ ಜನ್ಮ ಪಡೆದು ಜನಸಾಮಾನ್ಯರ ಅಭಿವೃದ್ಧಿಗೆ ಒತ್ತು ನೀಡಿವೆಯೇ? ಎಂದು ಪ್ರಶ್ನೆ ಹಾಕಿಕೊಂಡರೆ, ಹೌದು. ಕೊಡಗಿನಲ್ಲಿ ಬೇರೆ ಬೇರೆ ನದಿಗಳು ಇವೆ. ಅವುಗಳೆಂದರೆ ಲಕ್ಷ್ಮಣತೀರ್ಥ, ಸುಜ್ಯೋತಿ, ತ್ರಿವೇಣಿ, ಹಾರಂಗಿ, ಹೇಮಾವತಿ, ಬರಪೊಳೆ, ನೂಜೆಕಲ್ಲುಹೊಳೆ, ಕುಮಾರಧಾರಾ, ಕಕ್ಕೆಹೊಳೆ, ನಾಗತೀರ್ಥ, ಕನ್ನಿಕೆ ಇನ್ನೂ ಹಲವು. ಈ ಎಲ್ಲಾ ನದಿಗಳಿಗೂ ಇವಳು ಮಾತೃ ಸ್ವರೂಪಿಣಿಯಾಗಿರುತ್ತಾಳೆ. ಅಲ್ಲದೆ ಈ ಎಲ್ಲಾ ನದಿಗಳನ್ನು ತನ್ನ ಮುಡಿಯಲ್ಲಿರಿಸಿಕೊಂಡು ಅವಳ ಮಡಿಲಲ್ಲಿ ಇರಿಸಿಕೊಂಡು ಹಿರಿಯಕ್ಕಳಾಗಿ ಕಾವೇರಿ ನದಿಸ್ವರೂಪಿಣಿ ನಿರಂತರವಾಗಿ ನಳನಳಿಸುತ್ತ ಹರಿಯುವುದನ್ನು ಕಾಣಬಹುದಾಗಿದೆ.

ಕಾವೇರಿ ಮಾತೃ ಸ್ವರೂಪಿಣಿಯ ಫಲವಾಗಿ ಇವಳು ಹರಿದೆಡೆಯಲ್ಲೆಲ್ಲಾ ಅನೇಕ ಆಚರಣೆಗಳು ಹುಟ್ಟಿಕೊಂಡಿರುತ್ತವೆ. ಒಂದು ರೀತಿಯಲ್ಲಿ ಜನಪದರ ಅಸಾಧಾರಣ ಪ್ರತಿಭೆಯ ವಿರಾಟ್ ಪ್ರದರ್ಶನಕ್ಕೆ ಕಾರಣೀಭೂಳಾಗಿರುವಳೆಂದರೆ ತಪ್ಪಾಗಲಾರದೇನೋ? ಇಲ್ಲಿ ಉತ್ಪ್ರೇಕ್ಷೆಯಾಗಿ ಈ ಮೇಲಿನ ಅಂಶಗಳನ್ನು ಉಲ್ಲೇಖಿಸುವುದಿಲ್ಲವೆಂದು ಓದುಗರ ಗಮನಕ್ಕೆ ತರಬಯಸುತ್ತೇನೆ. ಇವಳ ಆರಾಧನೆಯಲ್ಲಿ ಅನೇಕ ಕಥೆಗಳು ಜನ್ಮತಾಳಿರುತ್ತವೆ. ಹಾಡು-ಕುಣಿತಗಳು ಹುಟ್ಟಿಕೊಂಡಿರುತ್ತವೆ. ಇವು ಕಾಲಾನುಘಟ್ಟದಲ್ಲಿ ರೂಪಾಂತರಗೊಂಡಿರಲೂ ಬಹುದು. ಇಲ್ಲವೆಂದಲ್ಲ, ಅಂತಹವುಗಳಲ್ಲಿ ಮನರಂಜನೆಯ ಮಾಧ್ಯಮವಾಗಿವೆ. ಅತಿ ಹೆಚ್ಚಿನವು ಧಾರ್ಮಿಕ ಹಿನ್ನೆಲೆಯ ಪೂರಕವಾಗಿ ಇಂದು ಕೂಡ ಮೀಸಲಾಗಿರುತ್ತವೆ. ಇವು ಜನಪದರ ಬದುಕಿನೊಂದಿಗೆ ಬೆಸೆದುಕೊಂಡು ಬಂದಿದ್ದು ಇಂದಿಗೂ ರೂಢಿಯಲ್ಲಿವೆ.

ಕಾವೇರಿ ನದಿಗೆ ಸ್ಟೆಬಿಲಿಟಿ ಅನ್ನೋ ಮಾತೇ ಇಲ್ಲ. ಅವಳು ಸರ್ವಾಂತರಯಾಮಿ. ಆದುದರಿಂದ ಅವಳು ಹರಿದ ಭೂಮಿ, ನಿಂತ ನೆಲದಲ್ಲಿ ಫಲಸಮೃದ್ಧಿಯ ಸಂಕೇತವಾಗುವಳು. ಜನಪದರ ಕೃಷಿಯ ಆರಾಧ್ಯ ದೈವಿಣಿ, ಅವರ ಆರೋಗ್ಯ ಸಂಪತ್ತಿನ ಹರಿಕಾರಿಣಿ, ಪ್ರಾಣಿ ಸಂಕುಲಗಳ ಸನ್ಮಿತ್ರಿಣಿ, ಜನಪದ ಕಲೆಗಳ ಕ್ಷೀರಸಾಗರ ಅವಳು. ಒಟ್ಟಿನಲ್ಲಿ ಕಾವೇರಿ ನದಿ ಭೌಗೋಳಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಕನ್ನಡದ ಹುಟ್ಟು, ಅನನ್ಯತೆಯ ಬೆಸುಗೆಯ ಪ್ರತೀಕವಾಗಿರುವಳು.

ಈ ಹೊತ್ತಿನ ಪ್ರಶ್ನೆ ಎಂದರೆ ಮಳೆಯಿಲ್ಲ, ಬೆಳೆಯಿಲ್ಲ, ನೀರಿಲ್ಲ, ಕಾಲಕೆಟ್ಟು ಹೋಯಿತೆಂದು ಧ್ವನಿಗಳು ಮೊಳಗುತ್ತಿವೆ. ಮತ್ತೊಂದೆಡೆ ಜಾಗತೀಕರಣ, ಉದಾರೀಕರಣ ಕ್ಯಾಪಿಟಲಿಸ್ಟ್, ಲ್ಯಾಂಡ್ ಲಾರ್ಡ್ಸ್, ಊಳಿಗಮಾನ್ಯ ಹೀಗೆ ಈ ಇಸಮ್ ಗಳ ಹಾವಳಿಗಳು ತಲೆಯೆತ್ತಿ ಅಪ್ಪಳಿಸುತ್ತಿವೆ ಎಂಬ ಗುಲ್ಲು. ಮಗದೊಂದೆಡೆ ಸರ್ವಧರ್ಮಗಳ ಪೈಪೋಟಿ, ಪೈಶಾಚಿತನದ ಪರಿ.ಇನ್ನೂ ಅನೇಕ ವ್ಯಾಕುಲತೆಗಳು ಸಮಾಜದೊಳಗೆ ಕಣ್ಣಾಮುಚ್ಚಾಲೆ ಆಡುತ್ತಿವೆ ಅಂಬೋಣ. ಆದರೆ ಜನಪದೀಯರ ಎಲ್ಲಾ ಸಾಹಿತ್ಯ, ಕಲೆ, ಭಾಷೆ ಇನ್ನೂ ಅನೇಕ ಅಂಶಗಳ ಮೇಲೆ ಗ್ರಹಣ ಬಡಿಯತೊಡಗಿರುತ್ತದೆ. ಅಂತಹವುಗಳಲ್ಲಿ ಕೆಲವು ಪೂರ್ಣವಾಗಿ ಸೊನ್ನೆಯಾಗಿ ಹೋಗಿರಬಹುದು. ಅಂತಹವುಗಳಲ್ಲಿ ನಂಬಿಕೆಯ ಪರಾಕ ಕಡಿಮೆಯಾಗಿರಬಹುದು. ಅಥವಾ ನಾಗರೀಕತೆಯೊಳಗೆ ಠೇಂಕಾರಗೊಂಡು ಕಾಡುತ್ತಿರುವ ಸಂಗೀತ, ಚಲನಚಿತ್ರ, ದೂರದರ್ಶನ, ಕಂಪ್ಯೂಟರ‍್ ಇವುಗಳ ಮುಖೇನ ಹೆಚ್ಚಿನ ಜನಪದ ಸಾಹಿತ್ಯ, ಕಲೆ ಅಳಿದು ಹೋಗಿವೆ ಎಂದು ತಿಳಿದವರು ಹೆಚ್ಚು. ಅಲ್ಲದೇ ಅವು ರೂಪಾಂತರಗೊಂಡಿವೆ. ಈ ಮಾತನ್ನು ಒಪ್ಪಬಹುದಾದರೂ ಗ್ರಾಮ್ಯ ಪ್ರದೇಶಗಳಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇದ್ದು ಪ್ರತಿ ಜನಪದರ ಮನಸ್ಸಿನ ಆಳದಲ್ಲಿ ಅಡಗಿಕೊಂಡು ಸಂದರ್ಭ ಒದಗಿಬಂದಾಗ ಭುಗಿಲೇಳುತ್ತವೆ. ಆದುದರಿಂದ ಕೊಡಗಿನಾದ್ಯಂತ ಜನಪದ ಸಾಹಿತ್ಯ ಇನ್ನೂ ಜೀವಂತವಾಗಿದ್ದು, ಹಸಿರಾಗಿರುವುದಕ್ಕೆ ಕಾವೇರಿ ಜನಪದದಲ್ಲಿ ಅಡಕಗೊಂಡಿರುವ ಅಂಶಗಳೇ ಸಾಕ್ಷಿ. ಅಂತಹ ಹಸಿಯಾಗಿರುವ ಬುಡಕ್ಕೆ ನೀರೆರೆದು, ಪ್ರೋತ್ಸಾಹ ತುಂಬಬೇಕಾಗಿರುವುದು ನಮ್ಮ ಕರ್ತವ್ಯವಾಗಿರುತ್ತದೆ.

ತೀರ್ಥೋದ್ಭವ :ಶತಶತಮಾನಗಳಿಂದಲೂ ಜನಪದರು ತೀರ್ಥೋದ್ಬವ ಕುರಿತು ವಿಶಿಷ್ಟವಾದ ನಂಬಿಕೆಯನ್ನು ಇರಿಸಿಕೊಂಡು ಬಂದಿರುವರು. ಅಲ್ಲದೆ ಪುರಾಣ, ಚರಿತ್ರೆ ಮತ್ತು ನಂಬಿಕೆಯ ಹಿನ್ನೆಲೆಯಲ್ಲಿ ಹೇಳುವುದಾದರೆ, ಸೂರ್ಯನು ತುಲಾರಾಶಿಯನ್ನು ಪ್ರವೇಶಿಸುವ ಪರ್ವಕಾಲದಲ್ಲಿ ಉತ್ತರದಿಂದ ಗಂಗೆ ತನ್ನ ಸಹನದಿಗಳೊಂದಿಗೆ ದಕ್ಷಿಣದ ಕಾವೇರಿಗೆ ಬಂದು ಸ್ನಾನ ಮಾಡುವ ಗಳಿಗೆಯೇ ‘ತೀರ್ಥೋದ್ಭವ’ಎಂದು ಸಂಭೋದಿಸಲಾಗಿದೆ. ಅಲ್ಲದೆ ತುಲಾ ಮಾಸದಲ್ಲಿ ಮಾಡುವಂತ ಸ್ನಾನ ಅತ್ಯಂತ ಪವಿತ್ರ, ಅಭೀಷ್ಟ ಸಿದ್ದಿಗೆ ಮಾರ್ಗವೆಂದು ಇಂದೂ ಕೂಡ ಜನಪದರು ನಂಬಿಕೆ ಇರಿಸಿದ್ದಾರೆ.

ಕೊಡಗಿನ ಪಶ್ಚಿಮ ಘಟ್ಟಗಳ ಬ್ರಹ್ಮಗಿರಿ ಶಿಖರದ ಬುಡದಲ್ಲಿ ಕಾವೇರಿ ಸ್ವರೂಪಿಣಿ ಜನ್ಮವೆತ್ತಿದ್ದಾಳೆ. ಈ ಸ್ಥಳವೇ ಬ್ರಹ್ಮಕುಂಡಿಕೆ ಎಂದು ಇಂದಿಗೂ ಪ್ರಸಿದ್ದಿ ಪಡೆದಿದೆ. ತೀರ್ಥೋದ್ಭವವಾಗುವ ನಿಗಧಿತ ಸಮಯವನ್ನು ಊರ ಪುರೋಹಿತರು ಪ್ರತಿ ಮನೆಮನೆಗಳಿಗೂ ತೆರಳಿ ವಿಷಯವನ್ನು ತಿಳಿಸಿ ಗಂಧ, ಹೂ, ಪ್ರಸಾದವನ್ನು ನೀಡಿ ಬರುವುದು ವಾಡಿಕೆ. ಈ ಸಂದರ್ಭದಲ್ಲಿ ಅವರಿಗೆ ಮನೆಯವರು ಹರಿವಾಣದಲ್ಲಿ ಅಕ್ಕಿಯನ್ನು ದಾನವಾಗಿ ನೀಡುವುದು ಪದ್ಧತಿ. ಈ ಮೊದಲೆ ಪುರೋಹಿತರು ಶಾಸ್ತ್ರೋಕ್ತವಾಗಿ  ತೀರ್ಥೋದ್ಭವವಾಗುವ ತಿಂಗಳು, ದಿವಸ, ಗಂಟೆ ಮತ್ತು ನಿಮಿಷವನ್ನು ನಿರ್ಧಿಷ್ಟಪಡಿಸಿರುತ್ತಾರೆ. ನಿರ್ಧಿಷ್ಟ ಸಮಯಕ್ಕೆ ಸರಿಯಾಗಿ ಭಕ್ತ ಸಮೂಹ ಬ್ರಹ್ಮಕುಂಡಿಕೆಯ ಸುತ್ತ ನಿಂತಿರುತ್ತಾರೆ. ಅಲ್ಲದೆ ಭಕ್ತರು ಶ್ರೀ ಕಾವೇರಮ್ಮ ಪಾದಾರವಿಂದಕ್ಕೆ ಗೋವಿಂದಾ….ಗೋವಿಂದಾ….ಗೋವಿಂದಾ ಎಂದು ಜಯಘೋಷ ಹಾಕುತ್ತಿರುತ್ತಾರೆ. ಅರ್ಚಕರು ಶಾಸ್ತ್ರಪಟಿಸುತ್ತಿರುತ್ತಾರೆ. ಆಗ ನಿರ್ಧಿಷ್ಟ ಸಮಯಕ್ಕೆ ಬ್ರಹ್ಮಕುಂಡಿಕೆಯಲ್ಲಿ ಮೂರು ಬಾರಿ ನೀರಿನ ಬುಗ್ಗೆ ಚಿಮ್ಮಿ ಬರುತ್ತದೆ.ಕಾವೇರಿ ಮಾತೆ ಭಕ್ತಾಧಿಗಳಿಗೆ ದರ್ಶನ ನೀಡಲು ಪ್ರತಿ ವರ್ಷವೂ ಈ ರೂಪದಲ್ಲಿ ಬರುತ್ತಾಳೆ ಎನ್ನುವುದು ಜನಪದದ ನಂಬಿಕೆಯಾಗಿದೆ.