ನಿಸರ್ಗದ ಮಡಿಲಿನಲ್ಲಿ ಎಲ್ಲವೂ ಮಿಳಿತಗೊಂಡಿರುತ್ತದೆ. ಅದು ಉಂಟು ಇಲ್ಲವೆಂಬ ಮಾತಿಲ್ಲ. ಸಾಮಾನ್ಯವಾಗಿ ಗುಡ್ಡ, ಬೆಟ್ಟ, ಪರ್ವತಗಳಲ್ಲಿ ನದಿಗಳು ಜನ್ಮ ಪಡೆದಿರುತ್ತವೆ. ಕಾವೇರಿ ನದಿ ಸ್ವರೂಪಿಣಿ ಇದಕ್ಕೆ ಹೊರತಾಗಿಲ್ಲ. ಆದುದರಿಂದ ಜನಪದರು ಶತಶತಮಾನಗಳಿಂದಲೂ ನದಿಯನ್ನು ದೈವವೆಂದು ನಂಬಿ ಆರಾಧಿಸಿಕೊಂಡು ಬಂದಿರುತ್ತಾರೆ. ಇವತ್ತು ನಾವು ಏನು ಜಾಗತೀಕರಣದ ಅಬ್ಬರ, ಉದಾರೀಕರಣದ ನೀತಿ, ಆಧುನಿಕತೆಯ ಆದ್ಯತೆ ಎಂದು ಬಡಬಡಿಸುತ್ತಿದ್ದರೂ, ಜನರಲ್ಲಿರುವ ನಂಬಿಕೆ, ಆಚರಣೆ, ಪದ್ಧತಿ, ರೂಢಿಗಳಿಗೆ ಪ್ರಬಲವಾಗಿ ತಡೆಯನ್ನುಂಟುಮಾಡಿರುವುದಿಲ್ಲ. ಇವತ್ತಿನ ಸಂದರ್ಭದಲ್ಲಿಯೂ ನದಿಯ ಹುಟ್ಟಿನ ಬಗ್ಗೆ ಅನೇಕ ಹಾಡುಗಳು, ಕಥೆಗಳು, ಐತಿಹ್ಯ, ಪುರಾಣಗಳಿವೆ. ಮುಂದುವರೆದು ಚರ್ಚಿಸುವುದಾದರೆ ಉಲ್ಲೇಖಗಳು, ಹಸ್ತಪ್ರತಿಗಳು, ಅಲ್ಲಲ್ಲಿ ಶಿಲಾಶಾಸನಗಳನ್ನು ಕಾಣಬಹುದಾಗಿದೆ.

ಒಟ್ಟಿನಲ್ಲಿ ನದಿಗಳಿಗೆ ಸ್ಟೆಬಿಲಿಟಿ ಇರುವುದಿಲ್ಲ. ಯಾವೊತ್ತೊ ಪ್ಲೊಯಿಂಗ್ ನಲ್ಲಿ ಇರುತ್ತವೆ. ಆದುದರಿಂದ ಕಾವೇರಿ ನದಿ ಹರಿದೆಡೆಯಲ್ಲೆಲ್ಲ ಕೃಷಿ ಸಮೃದ್ಧವಾಗಿರುತ್ತದೆ. ಕೃಷಿಯೊಂದಿಗೆ ಇಲ್ಲಿನ ನಾಗರಿಕತೆ ಹಂತಹಂತವಾಗಿ ಬೆಳವಣಿಗೆ ಕಂಡಿರುತ್ತದೆ. ಪುಣ್ಯಕ್ಷೇತ್ರಗಳು ರೂಪ ತಳೆದಿರುತ್ತವೆ. ಇದಕ್ಕೆ ಪೂರಕವಾಗಿ ದೇವಾಲಯಗಳು ಸೃಷ್ಟಿಗೊಂಡಿವೆ. ಜನಪದ ಕಲೆಗಳು, ಹಬ್ಬ ಹರಿದಿನಗಳು, ಜಾತ್ರೆ, ಉತ್ಸವ, ಫಲಸಮೃದ್ಧಿ, ಧಾರ್ಮಿಕ ಆಚರಣೆಗಳು ಜೀವಂತವಾಗಿವೆ. ಗಟ್ಟಿ ಸಂಸ್ಕೃತಿಗೆ ಕಾವೇರಿ ನದಿ ಚೇತನ ತುಂಬಿರುತ್ತಾಳೆ.

ಇತಿಹಾಸದ ಪಿತಾಮಹನಾದ ಹೆರಡೋಟಸ್ ಪ್ರಕಾರ ಈಜಿಪ್ಟ್ ನಾಗರಿಕತೆಗೆ ನೈಲ್ ನದಿ ಕೊಡುಗೆಯಾದರೆ, ಕೊಡಗಿನ ನಾಗರಿಕತೆಗೆ ಕಾವೇರಿ ನದಿ ಅಕ್ಷಯ ಪಾತ್ರೆಯಾಗಿರುತ್ತಾಳೆ. ಒಟ್ಟಾರೆಯಾಗಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ ಅಂಶಗಳ ಮೇಲೆ ಕಾವೇರಿ ನದಿಯು ನಿರಂತರವಾಗಿ ಸಂಬಂಧವನ್ನಿರಿಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯುವಂತೆ ಪ್ರೇರೇಪಿಸುತ್ತಿದ್ದಾಳೆಂದರೆ ಅತಿಶಯೋಕ್ತಿಯೆನಿಸದು.

ಕಾವೇರಿ ಹುಟ್ಟಿನ ಬಗ್ಗೆ ಅನೇಕ ಕಥೆಗಳಿವೆ. ಮುಂದೆ ಅವುಗಳನ್ನು ವಿಶ್ಲೇಷಿಸಲಾಗಿದೆ. ಪ್ರಸ್ತುತವಾಗಿ ಅವಳ ಹುಟ್ಟಿನ ಬಗ್ಗೆ ಒಂದು ಕಥೆಯನ್ನು ಪರಿಚಯಿಸುತ್ತಾ ಚರ್ಚೆಯನ್ನು ಮುಂದುವರೆಸುತ್ತೇನೆ. ನನ್ನ ಕ್ಷೇತ್ರಕಾರ್ಯದ ಹೊತ್ತಿನಲ್ಲಿ ಭಾಗಮಂಡಲದ ಸುತ್ತಮುತ್ತ ಸುತ್ತಾಡಿದೆ. ಅಲ್ಲಿಯೇ ಅನೇಕ ವರ್ಷಗಳಿಂದ ನೆಲೆ ನಿಂತ ಜನಪದರನ್ನು ಕಂಡು ಮಾತನಾಡಿದೆ. ಆ ನೀರಿನ ಶಕ್ತಿಯೇ ಏನೋ; ಅವಳ ಬಗ್ಗೆ ಅಪಾರವಾದ ನಂಬಿಕೆ, ಜೊತೆಗೆ ಪೂಜ್ಯ ಭಾವನೆ ಅವರಿಗೆ. ಅವರ ಒಡನಾಡಿಯಾಗಿದೆ. ಸನ್ನಿವೇಶ ನೋಡಿ ಕಾವೇರಿ ನದಿಯ ಬಗ್ಗೆ ಕೆಲವಾರು ವಿಷಯಗಳನ್ನು ಕೆದಕಿದೆ. ಅನೇಕ ವಿಷಯಗಳು ಹೊರ ಚೆಲ್ಲಿದವು. ಬೇಕಾದವುಗಳನ್ನು ಆಯ್ದುಕೊಂಡೆ. ಅಂತವುಗಳಲ್ಲಿ ಕಥೆಗಳು ಬಹಳ ಮುಖ್ಯವಾದವುಗಳು. ಕೆಲವು ಲೇಖನಿ ಸಹಾಯದಿಂದ ಬಿಳಿ ಹಾಳೆ ಮೇಲೆ ಅಕ್ಷರ ರೂಪು ಪಡೆದು ನಿಮ್ಮ ಮುಂದೆ ತೆರೆದಿಡಲಾಗಿದೆ. ಇನ್ನು ಕೆಲವು ಟೇಪ್ ರೆಕಾರ್ಡರ‍್ ಪೆಟ್ಟಿಗೆಯಲ್ಲಿ ಸಂಗ್ರಹಗೊಂಡಿವೆ.

ಕಾವೇರಿ ನದಿಯ ಕುರಿತು ಅನೇಕ ಕಥೆಗಳನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಭಿವ್ಯಕ್ತಪಡಿಸಿರುತ್ತಾರೆ. ಅನೇಕವು ಪಾಠಾಂತರಗಳಾಗಿ ಹೊರಹೊಮ್ಮಿದರೂ, ಕಥೆಯ ಮೂಲ ಒಂದೇ ಇರುತ್ತಿತ್ತು. ಆದುದರಿಂದ ಕಾವೇರಿ ಸೃಷ್ಟಿ ಹಿನ್ನೆಲೆಯಲ್ಲಿನ ಒಂದು ಕಥೆಯನ್ನು ಓದಲು ತೆರವು ಮಾಡಿಕೊಡುತ್ತೇನೆ.

ಸಹ್ಯಾದ್ರಿ ಪರಶಿವನ ಕೈಲಾಸವಾಗಿರುತ್ತದೆ. ಅಗಸ್ತ್ಯ ಮುನಿ ತನ್ನ ಶಿಷ್ಯರೊಂದಿಗೆ ಅಲ್ಲಿಗೆ ಹೋಗುತ್ತಾನೆ. ಆ ಸ್ಥಳವು ಋಷಿ ಪುಂಗರ ಆಶ್ರಮವನ್ನೊಳಗೊಂಡಿರುತ್ತದೆ. ಅಲ್ಲಿಂದ ಶಿಷ್ಯರೊಡಗೂಡಿ ಬ್ರಹ್ಮಗಿರಿಗೆ ಬರುತ್ತಾನೆ. ಅಲ್ಲಿ ವಶಿಷ್ಟರು ಇರುತ್ತಾರೆ. ಅಗಸ್ತ್ಯ ಮುನಿ ಹಾಗೂ ಶಿಷ್ಯರನ್ನು ಗೌರವದಿಂದ ಸ್ವಾಗತಿಸುವರು. ಅಗಸ್ತ್ಯ ಋಷಿಮುನಿ ವಶಿಷ್ಟರಿಂದ ಆತಿಥ್ಯವನ್ನು ಸ್ವೀಕರಿಸುವರು. ಅಲ್ಲದೆ ಅಲ್ಲಿರುವ ಅಖಿಲಧಾರೆ ಶುಚಿಸ್ಮಿತೆಯಾದ ಕಾವೇರಿಯನ್ನು ಕಾಣುತ್ತಾನೆ. ಅವಳನ್ನು ಕಂಡಕೂಡಲೇ ಮೋಹಿತನಾಗುವನು. ವಿಧಿಯುಕ್ತವಾಗಿ ವಿವಾಹವಾಗುತ್ತಾನೆ (ಕಾವೇರಿ ಮಹಾತ್ಮ್ಯೆಯ ೨ನೇ ಅಧ್ಯಾಯದಲ್ಲಿ ಪ್ರಸ್ತಾಪ).

ವಿವಾಹದ ನಿರ್ಬಂಧದಂತೆ ಕಾವೇರಿ ಅಗಸ್ತ್ಯರಿಗೆ ತನ್ನ ಷರತ್ತನ್ನು ಹಾಕುವಳು. ಏನೆಂದರೆ ನನ್ನನ್ನು ಯಾವತ್ತೂ ಎಂದೂ ಒಬ್ಬೊಂಟಿಗಳಾಗಿ ತೊರೆದು ಹೋಗಬಾರದು ಎಂದು. ಆದರೆ ಅಗಸ್ತ್ಯ ಕಾವೇರಿಯನ್ನು ತನ್ನ ಕಮಂಡಲುವಿನಲ್ಲಿರಿಸಿ ’ಕನಿಕೆ’ ನದಿಯಲ್ಲಿ ಸ್ನಾನಕ್ಕೆ ಹೋಗುತ್ತಾನೆ. ಅದನ್ನು ಸಹಿಸದ ಕಾವೇರಿ ಕಮಂಡಲುವಿನಿಂದ ಧುಮುಕಿ ಜಲರೂಪಿಣಿಯಾಗಿ ಹರಿಯುತ್ತಾಳೆ. ಆ ಸಂದರ್ಭದಲ್ಲಿ ಅಗಸ್ತ್ಯನ ಶಿಷ್ಯರು ಬೇಡವೆಂದು ಅಂಗಲಾಚಿ ಬೇಡಿಕೊಳ್ಳುತ್ತಾರೆ. ಆದರೂ ಅಲ್ಲಿಂದ ಮುಂದೆ ಗುಪ್ತಗಾಮಿನಿಯಾಗಿ ಹರಿದು ಮುಂದುವರೆದಿರುತ್ತಾಳೆ. ಇವತ್ತಿಗೂ ತಲಕಾವೇರಿ ಕುಂಡಿಕೆಯಲ್ಲಿ ಹುಟ್ಟಿ ಸ್ವಲ್ಪ ದೂರ ಹರಿದು ಅನಂತರ ಮರೆಯಾಗಿ ಪುನಃ ಮುಂದುವರೆಯುವುದನ್ನು ಕಾಣಬಹುದಾಗಿದೆ. ಇಂದಿಗೂ ಜನಪದರಲ್ಲಿ ಈ ನಂಬಿಕೆ ಮುಂದುವರೆಯುತ್ತಿದೆ.

ಶಿಷ್ಯರಿಂದ ವಿಷಯವನ್ನು ಅರಿತ ಅಗಸ್ತ್ಯ ಕಾವೇರಿ ಹರಿದೆಡೆಯಲ್ಲೆಲ್ಲಾ ಹುಡುಕುತ್ತಾ ಹಿಂಬಾಲಿಸುತ್ತಾನೆ. ಆದರೆ ವಿಧಿ ನಿಯಮವೋ ಎಂತೊ ಕೊಡಗಿನ ಪಾಲೂರು ಗ್ರಾಮದಲ್ಲಿ ’ಹರಿಶ್ಚಂದ್ರ ದ ಬಳಿಯಲ್ಲಿ ಭೇಟಿಯಾಗುತ್ತಾರೆ. ಈರ್ವರಿಗೂ ವಾದ-ವಿವಾದಗಳು ಜರುಗುತ್ತವೆ. ಕಾವೇರಿ ಪುನಃ ಅಲ್ಲಿಂದ ತಪ್ಪಿಸಿಕೊಂಡು ಮುನ್ನುಗ್ಗುತ್ತಾ ಬಲಮುರಿ ಗ್ರಾಮ ತಲುಪುವಳು. ಅಲ್ಲಿ ತಡೆಯುವ ಪ್ರಯತ್ನ ಅಗಸ್ತ್ಯನಿಂದ ಉಂಟಾಗುತ್ತದೆ. ಅಲ್ಲಿಂದ ತಪ್ಪಿಸಿಕೊಂಡು ತನ್ನ ಹರಿಯುವ ದಿಕ್ಕನ್ನೇ ಬದಲಾಯಿಸುತ್ತಾಳೆ. ಆದುದರಿಂದ ಆ ಊರಿಗೆ ‘ಬಲಮುರಿ’ ಗ್ರಾಮವೆಂದು ಇಂದಿಗೂ ಖ್ಯಾತಿ ಪಡೆದಿರುತ್ತದೆ. ಆದರೂ ಕಾವೇರಿಯನ್ನು ಬೆಂಬಿಡದೆ ಹಿಂಬಾಲಿಸುತ್ತಾನೆ. ಕೊನೆಗೆ ಕಾವೇರಿಯನ್ನು ತಡೆದು ನನ್ನನ್ನು ಬಿಟ್ಟು ಹೋಗಬೇಡ. ನನ್ನ ಪತ್ನಿಯಾಗಿರು ಎಂದು ಪರಿಪರಿಯಾಗಿ ಬೇಡುತ್ತಾನೆ ಅವನ ಮಾತಿನಿಂದ ಮನಃ ಕರಗಿದ ಕಾವೇರಿಯ ಒಂದು ರೂಪ ಲೋಪ ಮುದ್ರೆಯೆಂಬ ಹೆಸರಿನಿಂದ ಕರೆಸಿಕೊಂಡು, ಅಗಸ್ತ್ಯನ ಪತ್ನಿಯಾಗಿರುವಳು. ಅವಳ ಮತ್ತೊಂದು ರೂಪ ಕಾವೇರಿ ನದಿಯಾಗಿ ಹರಿದು ಪಂಚಸಾಗರ ಸೇರಿರುತ್ತಾಳೆ ಎಂದು ಇಂದಿಗೂ ಜನಪದರ ನಂಬಿಕೆಯಾಗಿರುತ್ತದೆ.

ಈ ಮೇಲೆ  ವಿಶ್ಲೇಷಿಸಲಾದ ಕಥೆಯ ತಿರುಳನ್ನು ಅವಲೋಕಿಸುವಾಗ ಕಾವೇರಿಯನ್ನು ಅಗಸ್ತ್ಯರು ಭೂಲೋಕಕ್ಕೆ ಕರೆತಂದಿರುತ್ತಾರೆ ಎಂಬುದು ಮನನವಾಗುತ್ತದೆ. ಒಟ್ಟಾರೆಯಾಗಿ ಒಬ್ಬ ಸೃಜನಶೀಲ ಲೇಖಕನಾಗಿ ಅದರ ವರ್ಣನೆಯನ್ನು ಬಹಳ ಚಂದ ಮಾಡಿ ಬರೆಯಬಹುದು. ಆದರೆ ಇದು ಸತ್ಯ ಶೋಧನೆಯತ್ತ ಸಾಗಿರುವುದರಿಂದ ಮೌಲ್ಯಯುತದತ್ತ ಗಮನ ಹರಿಸುತ್ತೇನೆ.

ಕೊಡಗಿನ ಬ್ರಹ್ಮಗಿರಿಯ ಬೆಟ್ಟ ರಮಣೀಯವಾಗಿದೆ. ಅಲ್ಲಿ ಕಾವೇರಿ ಮಾತೆ ಜನ್ಮವೆತ್ತಿರುತ್ತಾಳೆ. ಇವಳ ಉಗಮ ಸ್ಥಳವೇ ತಲಕಾವೇರಿ. ಇವಳು ಬ್ರಹ್ಮಗಿರಿ, ಅಗ್ನಿಗಿರಿ, ವಾಯುಗಿರಿ, ಗಜರಾಜಗಿರಿ ಎಂಬ ಪರ್ವತಗಳ ಮಧ್ಯದಲ್ಲಿ ಗುಪ್ತಗಾಮಿನಿಯಾಗಿ ನೆಲೆಗೊಂಡಿರುತ್ತಾಳೆ (ಈ ಬೆಟ್ಟಗಳಲ್ಲಿ ಪಾಂಡವರು ಕೂಡ ಅಲೆದಾಡಿರುತ್ತಾರೆಂಬ ಅಂಶಗಳು ಪುರಾಣದಲ್ಲಿ ಕಂಡುಬರುತ್ತದೆ). ಅವಳು ಹುಟ್ಟಿದ ಸ್ಥಳವೇ ‘ಕಾವೇರಿ ಕುಂಡಿಕೆ’ ಅಥವಾ ‘ಪುಷ್ಕರಣಿ’ ಎಂದು ಇಂದಿಗೂ ಪ್ರಸಿದ್ಧಿ ಪಡೆದಿದೆ. ಮಳೆ ಬೀಳಲಿ, ಬೀಳದ ಇರಲಿ, ಬೇಸಿಗೆಯಾಗಲೀ, ಚಳಿಗಾಲವಾಗಲೀ ಸದಾ ಕುಂಡಿಕೆಯಲ್ಲಿ ನೀರಿರುತ್ತದೆ. ಯಾವ ಸಂದರ್ಭದಲ್ಲೂ ನೀರು ಹೆಚ್ಚು ಕಡಿಮೆಯಾಗುವುದಿಲ್ಲ. ಈ ಸ್ಥಳದಲ್ಲಿ ಪುಟ್ಟದಾದ ಕಾವೇರಿ ಮಾತೆಯ ವಿಗ್ರಹವನ್ನು ಕಡೆದು ನಿಲ್ಲಿಸಿರುತ್ತಾರೆ. ಅದರ ಮುಂದೆ ಕುಂಡಿಕೆ ಇರುತ್ತದೆ. ಇದರ ಮುಂದೆ ಒಂದು ಕೊಳವಿದೆ. ಕೆಲವು ವರ್ಷಗಳ ನಂತರ ಆ ಕೊಳದ ಸುತ್ತ ಕಲ್ಲು ಕಟ್ಟಡವನ್ನು ಕಟ್ಟಿರುತ್ತಾರೆ. ಆ ಕೊಳದ ಕಟ್ಟಡ ಹೆಚ್ಚು ಕಡಿಮೆ ನೋಡಲು ಚೌಕಾಕಾರದಂತೆ ಕಾಣುತ್ತದೆ. ಕುಂಡಿಕೆಯಿಂದ ನೀರು ಆ ಕೊಳಕ್ಕೆ ಬೀಳುತ್ತದೆ. ಆ ಕೊಳದಿಂದ ಕಾವೇರಿ ನದಿ ತುಂಬಿ ಗುಪ್ತಗಾಮಿನಿಯಾಗಿ ನಿರಂತರವಾಗಿ ಹರಿಯುತ್ತಿದ್ದಾಳೆ. ಅವಳು ಗುಪ್ತವಾಗಿ ಹರಿದ ಸ್ಥಳ ಮೌನ. ನೋಡಲು ದಟ್ಟಾರಣ್ಯ ಹಸಿರುಮಯ ಇಳಿಜಾರು ಪ್ರದೇಶ ಬೃಹದಾಕಾರವಾಗಿ ಬೆಳೆದು ನಿಂತ ಮರಗಳು ನೋಡಲು ಆಕರ್ಷಕ. ಕಲ್ಲುಬಂಡೆಗಳನ್ನು ಹಾವಿನಂತೆ ಸುತ್ತಿಕೊಂಡು ಹರಿಯುತ್ತಾ ಕಣ್ಮರೆಯಾಗುವಳು. ಪುನಃ ಹರಿಯುತ್ತಾ ಕಂಗೊಳಿಸುವಳು. ಆ ಸ್ಥಳವೇ ನಾಗತೀರ್ಥವೆಂದು ಪ್ರಸಿದ್ಧಿ ಪಡೆದಿದೆ. ಹೆಚ್ಚು ಮನೆಗಳಿಲ್ಲದ ನಿಸರ್ಗದ ಮಡಿಲಿನಲ್ಲಿ ಮುಚ್ಚಿಕೊಂಡಿರುವ ಗ್ರಾಮವೇ ಚೇರಂಗಾಲ. ಇಲ್ಲಿಂದ ತನ್ನ ಹರಿಯುವಿಕೆ ಮುಂದುವರೆಯುತ್ತದೆ. ಇಲ್ಲಿಂದ ಮುಂದೆ ಇಳಿಜಾರು ಪ್ರದೇಶ, ಶೀತಮಯ, ಜೊತೆಗೆ ಕಡಿದಾದ ಭೂಪ್ರದೇಶ ಅದೇ ಭಾಗಮಂಡಲ. ಕಾವೇರಿ ತಾಯಿಯ ಸಂಗಮದ ತವರೂರು. ಇಲ್ಲಿ ಭಗಂಡೇಶ್ವರ ಸ್ವಾಮಿ ಒಡೆದು ಮೂಡಿರುತ್ತಾರೆ. ಭಾಗಮಂಡಲದಲ್ಲಿ ಕಾವೇರಿಯೊಂದಿಗೆ ಕನಕೆ ಅಥವಾ ಕನ್ನಿಕೆ, ಸುಜ್ಯೋತಿ ನದಿಗಳು ಒಟ್ಟುಗೂಡಿ ತ್ರಿವೇಣಿ ಸಂಗಮ ಕ್ಷೇತ್ರವೆಂದು ಖ್ಯಾತಿ ಪಡೆದಿದೆ. ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸುವಂತೆ ತ್ರಿವೇಣಿಯಲ್ಲಿ ಮಿಂದು ಭಗಂಡೇಶ್ವರನಲ್ಲಿ ಭಯಭಕ್ತಿಯಿಂದ ಪೂಜಿಸುವರು.

ಕನಿಕೆ ನದಿಯು ತಲಕಾವೇರಿಯ ಸ್ಥಳಕ್ಕೆ ಹೊಂದಿಕೊಂಡು ಇರುವ ಬ್ರಹ್ಮಗಿರಿ ಬೆಟ್ಟದ ಉತ್ತರದಲ್ಲಿ ಹುಟ್ಟುವಳು. ಇವಳು ಭಾಗಮಂಡಲಕ್ಕೆ ಹರಿಯುತ್ತಾ ಬಂದು ಕಾವೇರಿಯನ್ನು ಕೂಡುವಳು. ಸುಜ್ಯೋತಿ ನದಿಯು ಒಳ ಹರಿಯುವಿಕೆಯಾಗಿದ್ದು, ಕನ್ನಿಕೆ ಮತ್ತು ಕಾವೇರಿ ಜೊತೆಯಲ್ಲಿ ವಿಲೀನವಾಗುವಳು. ಈ ಮೂರು ಸೇರುವ, ವಿಲೀನವಾಗುವ ಸ್ಥಳವೇ ‘ತ್ರಿವೇಣಿ’ ಎಂದು ಇಂದಿಗೂ ಕರೆಯುತ್ತಾರೆ. ಇದು ದಕ್ಷಿಣ ಭಾರತೀಯರಿಗೆ ‘ದಕ್ಷಿಣ ಪುಣ್ಯಕ್ಷೇತ್ರ’ ಎಂದು ಪ್ರಸಿದ್ಧಿ ಪಡೆದಿದೆ.

ಭಾಗಮಂಡಲದಿಂದ ಜುಳುಜುಳನೆ ಹರಿಯುತ್ತಾ ಹೋದ ಕಾವೇರಿ ಕೋರಂಗಾಲವೆಂಬ ಪುಟ್ಟ ಗ್ರಾಮದಲ್ಲಿ ಕಾಣಸಿಗುವಳು. ಅಲ್ಲಿ ವಾಸಿಸುವ ಜನಪದರು ಕಾವೇರಿ ಮಾತೆಯ ಆರಾಧಕರು. ಗ್ರಾಮಕ್ಕೆ ಹೊಂದಿಕೊಂಡ ಬೆಟ್ಟವಿದೆ. ಅದನ್ನು ಸುಬ್ರಹ್ಮಣ್ಯಸ್ವಾಮಿ ಬೆಟ್ಟವೆಂದು ಕರೆಯುವರು. ಅಲ್ಲಿಂದ ಮುಂದೆ ಹೋಗುತ್ತಾ ಹರಿಶ್ಚಂದ್ರ ಸ್ಥಳವಿದೆ. ಭಾಗಮಂಡಲದಿಂದ ಸುಮಾರು ೨೨ ಕಿ.ಮೀ. ಅಂತರವಿದೆ. ಇಂದಿಗೂ ಈ ಹರಿಶ್ಚಂದ್ರ ಸ್ಥಳದ ಬಗ್ಗೆ ಅನೇಕ ಕಥೆಗಳಿವೆ. ಹರಿಶ್ಚಂದ್ರ ಈ ಸ್ಥಳದಲ್ಲಿ ಬಂದು ಹೋದ ಎಂಬ ಪ್ರತೀಕ ಜನರಲ್ಲಿ ಇಂದಿಗೂ ಗಾಢವಾಗಿದೆ. ವಿಶೇಷತೆಯೆಂದರೆ ಈ ಸ್ಥಳವು ಕಾವೇರಿಯ ಬಲದಂಡೆಯಲ್ಲಿ ಊರ್ಜಿತವಾಗಿದ್ದರೆ ಪಾಲೂರಿನಲ್ಲಿ ಶಿವನ ಕ್ಷೇತ್ರದ ಸನ್ನಿಧಿ ಇದ್ದು ಇದು ಎಡದಂಡೆಯ ಮೇಲಿದೆ.

ಮುಂದೆ ಕಾವೇರಿಯು ನಾಪೋಕ್ಲು ಎಂಬ ಗ್ರಾಮವನ್ನು ಸವರಿಕೊಂಡು ಮುನ್ನುಗ್ಗುವಳು. ಈ ಸ್ಥಳ ಕೊಡವ ಸಂಸ್ಕೃತಿಯ ಉಗ್ರಾಣ. ಇಲ್ಲಿ ವಾಸಿಸುವ ಬಹುಪಾಲು ಜನರ ಆರಾಧ್ಯ ದೈವ ಕಾವೇರಿ. ಅಲ್ಲದೆ ಭಗವತಿ, ಇಗ್ಗುತಪ್ಪ, ಪಾಲೂರಪ್ಪ, ಭದ್ರಕಾಳಿ ದೈವವನ್ನು ಆರಾಧಿಸುವರು. ಕಾಫಿಯೇ ಮುಖ್ಯ ಬೇಸಾಯ. ಭತ್ತ ಇನ್ನೊಂದು ಬಹುಮುಖ್ಯವಾದ ಬೆಳೆ. ಏಲಕ್ಕಿ ಹಾಗೂ ಮೆಣಸು ಆದಾಯ ತರುವ ವಾಣಿಜ್ಯ ಬೆಳೆಗಳಾಗಿರುತ್ತವೆ. ಈ ಭೂಪ್ರದೇಶ ತಗ್ಗು, ಎತ್ತರ ಹಳ್ಳಕೊಳ್ಳಗಳಿಂದ ಕೂಡಿದೆ. ಅನಂತರ ಅನೇಕ ಮೈಲುಗಳನ್ನು ಹರಿಯುತ್ತಾ ಬಲಮುರಿ ಕ್ಷೇತ್ರಕ್ಕೆ ಬರುವಳು.

ಬಲಮುರಿ ಪುರಾಣ ಪ್ರಸಿದ್ಧವಾದ ಸ್ಥಳ. ಎರಡು ತೀರಗಳಲ್ಲಿ ಮುನೀಶ್ವರ ಮತ್ತು ಅಗಸ್ತ್ಯರ ದೇವಾಲಯಗಳಿವೆ. ಅಗಸ್ತ್ಯರು ಹಾಗೂ ಕಾವೇರಿಗೆ ವಾಗ್ವಾದ ನಡೆದು, ಅಲ್ಲಿಂದ ಬಲಗಡೆ ತಿರುಗಿ ಹರಿಯುತ್ತಾಳೆ. ಅನಂತರ ಬೇತರಿ, ನೆಲ್ಲಿಹುದಿಕೇರಿ, ಸಿದ್ದಾಪುರ, ನಂಜರಾಯಪಟ್ಟಣವನ್ನು ತಲುಪುತ್ತಾಳೆ. ಅಲ್ಲಿಯೇ ಕೊನೆಗೊಳ್ಳುವುದಿಲ್ಲ. ಶ್ರೀರಂಗ ಸಮುದ್ರಕ್ಕೆ ಹರಿಯುತ್ತಾ ಬಂದು ಸೇರುವಳು. ಈ ಗ್ರಾಮದ ಹೆಸರೇ ರಂಗಸಮುದ್ರ. ಅಲ್ಲಿ ರಂಗನಾಥಸ್ವಾಮಿ ದೇವಸ್ಥಾನವಿದೆ. ವರ್ಷಕ್ಕೊಮ್ಮೆ ದೇವರ ಉತ್ಸವ ನಡೆಯುತ್ತದೆ. ಕಾವೇರಿಯು  ಉತ್ತರವಾಹಿನಿಯಾಗಿ ಮುಂದುವರೆಯುತ್ತಾಳೆ. ‘ಚಿಕೋಲಿ’ ಹೊಳೆಯು ಕಾವೇರಿಯೊಂದಿಗೆ ಬೆರೆತು, ಸುಮಾರು ಒಂಭತ್ತು ಕಿ.ಮೀ.ಗಳಷ್ಟು ದೂರವಿರುವ ಈಗಿನ ಕುಶಾಲನಗರಕ್ಕೆ ತಲುಪುವಳು. ಬ್ರಿಟೀಷರು ನಮ್ಮ ದೇಶದಲ್ಲಿ ಆಡಳಿತಾರೂಢರಾದಾಗ ಪ್ರೇಸರ‍್ಪೇಟೆ ಎಂದು ಖ್ಯಾತಿ ಹೊಂದಿತ್ತು. ಶ್ರೀರಂಗಪಟ್ಟಣದಲ್ಲಿ ಟಿಪ್ಪುವಿನ ಆಡಳಿತವಿತ್ತು. ಆಗ ಪ್ರೇಸರ‍್ಪೇಟೆಯಲ್ಲಿ ಮುಸ್ಸಿಂ ರಾಜನ ಆಡಳಿತವಿತ್ತು. ಆ ಸಂದರ್ಭದಲ್ಲಿ ಮುಸ್ಸಿಂ ರಾಜನ ಪತ್ನಿ ಗಂಡುಮಗುವಿಗೆ ಜನ್ಮ ನೀಡಿದಳು. ಆ ಸಂತೋಷದಿಂದ ಪ್ರೇಸರ‍್ಪೇಟೆಯನ್ನು ಖುಷಿಯಿಂದ ಕುಶಾಲನಗರವೆಂದು ಕರೆದನೆಂದು ಅಲ್ಲಿನ ಜನಪದರು ಇಂದಿಗೂ ಹೇಳುತ್ತಾರೆ.

ಕುಶಾಲನಗರದಲ್ಲಿ ಕಾವೇರಿಯು ಉತ್ತರವಾಹಿನಿಯಾಗಿ ಹರಿಯತ್ತಾಳೆ. ಅಲ್ಲಿ ಗಣಪತಿ, ಕನ್ನಿಕಾ ಪರಮೇಶ್ವರಿ ಮತ್ತು ಆಂಜನೇಯ ಸ್ವಾಮಿ ದೇವಾಲಯಗಳು ಇವೆ. ಕಾವೇರಿ ನದಿಯು ೨ ರಿಂದ ೩ ಕಿ.ಮೀ.ನಷ್ಟು ಅಗಲವಾಗಿ ಹರಿಯುತ್ತಿದ್ದಾಳೆ. ನದಿಯ ಎಡದಂಡೆಯಲ್ಲಿ ಸ್ವಾಮಿ ಅಯ್ಯಪ್ಪನ ದೇವಸ್ಥಾನವಿದೆ. ಇಂದಿಗೂ ಅಯ್ಯಪ್ಪನ ಭಕ್ತರು ಬೆಳಗಿನ ಜಾವ ನದಿಯಲ್ಲಿ ಮಿಂದು, ಆರಾಧಿಸುವರು.

ಮುಂದುವರಿಯುತ್ತಾ ಕಾವೇರಿ ನದಿಯು ಕೂಡಿಗೆ ಹೋದಾಗ, ಅಲ್ಲಿ ಹಾರಂಗಿ ನದಿಯು ಮಿಲನ ಹೊಂದಿ ಸಂಗಮವಾಗುವಳು. ಅನಂತರ ೩ ಕಿ.ಮೀ.ಗಳಷ್ಟು ನಡೆದಾಗ ಕಣಿವೆ ಸಿಕ್ಕುತ್ತದೆ. ಕಣಿವೆಯ ಎಡದಂಡೆಯ ದಿಬ್ಬದಲ್ಲಿ ರಾಮಸ್ವಾಮಿ ದೇವಾಲಯವಿದೆ. ವರ್ಷಕ್ಕೊಮ್ಮೆ ರಾಮಸ್ವಾಮಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಎಲ್ಲಾ ಜನವರ್ಗದವರು ಭಾಗವಹಿಸುವರು. ರಾಮಸ್ವಾಮಿ ಕಣಿವೆಗೆ ಈ ಹೆಸರು ಬರಲು ಕಾರಣವೇನೆಂದರೆ ಶ್ರೀರಾಮನು ವನವಾಸದ ಸಂದರ್ಭದಲ್ಲಿ ಅಲ್ಲಿಗೆ ಬಂದು ನೆಲೆಸಿದ್ದ ಎಂಬ ರೂಢಿ ಇಂದಿಗು ಜನಪದರಲ್ಲಿ ಬೇರೂರಿದೆ. ಆದುದರಿಂದ ಆ ಕಣಿವೆಗೆ ರಾಮಸ್ವಾಮಿ ಕಣಿವೆ ಎಂದು ಖ್ಯಾತಿ ಪಡೆದಿರುತ್ತದೆ. ಅಲ್ಲಿ ಕಾವೇರಿ ನದಿಗೆ ಸುಮಾರು ಅರ್ಧ ಕಿ.ಮೀ.ನಷ್ಟು ಅಣೆಕಟ್ಟನ್ನು ಕಟ್ಟಲಾಗಿದೆ. ಅಲ್ಲಿ ಇವಳು ತುಂಬಾ ಮೋಹಕವಾಗಿ, ರಮಣೀಯವಾಗಿ, ವಿಶಾಲವಾಗಿ ಹರಿಯುತ್ತಾಳೆ. ಈ ದೃಶ್ಯವನ್ನು ಅವಲೋಕಿಸಿದ ಎಂತವರಿಗೂ ಹೃನ್ಮನಗಳಿಗೆ ಉಲ್ಲಾಸವಾಗುತ್ತದೆ.

ಕಣಿವೆಯಿಂದ ಕಣ್ಣು ಬಿಟ್ಟು ಮುಂದೆ ಸಾಗುತ್ತಾ ಹೋದರೆ ಹೆಬ್ಬಾಲೆಯಲ್ಲಿ ಕಾಣಸಿಗುವಳು. ಅಲ್ಲಿ ಈ ನದಿಗೆ ೧ ಕಿ.ಮೀ.ನಷ್ಟು ಉದ್ದಕ್ಕೆ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದರಿಂದ ಕಣಿವೆ, ಕೂಡಿಗೆ, ಕುಶಾಲನಗರ ಜೊತೆಗೆ ಪ್ರಧಾನವಾಗಿ ಸೂಳೆಕೊಟ್ಟೆ ಗ್ರಾಮಕ್ಕೆ ಸಂಪರ್ಕವಿರಿಸಿಕಳ್ಳಲು ಸಾಧ್ಯವಾಗಿರುತ್ತದೆ. ಹೆಬ್ಬಾಲೆಯಿಂದ ಮುಂದೆ ಹೋದರೆ ಶಿರಂಗಾಲ, ಸರಗೂರು, ಕೊಣ್ಗುರುಗಳಲ್ಲಿ ತನ್ನ ನೀರಿನ ಸಮೃದ್ಧಿಯನ್ನು ಸೂಸುತ್ತಾ ರಾಮನಾಥಪುರವೆಂಬ ಪುಣ್ಯಕ್ಷೇತ್ರಕ್ಕೆ ಕಾಲಿರಿಸಿರುವಳು.

ರಾಮನಾಥಪುರ ಯಾತ್ರಿಕರ ಪುಣ್ಯಕ್ಷೇತ್ರ. ಅಲ್ಲಿ ರಾಮೇಶ್ವರ ದೇವಾಲಯವಿದೆ. ವರ್ಷಕ್ಕೊಮ್ಮೆ ಜಾತ್ರೆ ಏರ್ಪಡುತ್ತದೆ. ದನಕರುಗಳ ಜಾತ್ರೆಯೂ ಜರುಗುತ್ತದೆ. ಲಕ್ಷ್ಮಿ, ರಾಮಸ್ವಾಮಿ, ಅಗಸ್ತ್ಯೇತರ ಹೀಗೆ ಅನೇಕ ಪ್ರಸಿದ್ಧ ದೇಗುಲಗಳಿವೆ. ಕಾವೇರಿ ನದಿಯ ದಂಡೆಯನ್ನು ಒತ್ತಿಕೊಂಡಂತೆ ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ ನದಿ ಒಳಗೆ ಗವಿಗಲ್ಲು ಇದೆ. ನದಿಯೊಳಗೆ ಇಳಿದು ಈ ಗವಿಗಲ್ಲಿನ ಒಳಗೆ ನುಗ್ಗಿ ಬಂದರೆ ಪ್ರೇತ, ಭೂತ, ರೋಗರುಜಿನಗಳು ಶರೀರದಿಂದ ಹೊರಹಾಕಲ್ಪಡುತ್ತವೆ ಎಂಬ ನಂಬಿಕೆ ಜನಪದರಲ್ಲಿದೆ. ಅಲ್ಲಿ ದೇವರ ಹೆಸರುಗಳಲ್ಲಿ ಮೀನುಗಳನ್ನು ಬಿಡಲಾಗಿದೆ. ಕೆಲವು ಮೀನುಗಳಿಗೆ ಕೊಂಡಿಗಳನ್ನು ಹಾಕಲಾಗಿದೆ. ಇದರ ಅರ್ಥ ದೇವರ ಮೀನುಗಳೆಂದು ಕರೆಯುವರು. ಒಂದು ಹಂತದವರೆಗೆ ಇಂತಹ ಮೀನುಗಳನ್ನು ಹಿಡಿದು ಆಹಾರವಾಗಿ ಉಪಯೋಗಿಸುವಂತಿಲ್ಲ. ಹಾಗೇನಾದರೂ ಉಪಯೋಗಿಸಿದರೆ ಅಂತಹವರು ರಕ್ತಕಾರಿ ಸಾಯುವರು ಎಂಬ ನಂಬಿಕೆ ಆ ಗ್ರಾಮದ ಜನಪದರಿಗಿದೆ. ಸಾಮಾನ್ಯವಾಗಿ ದೇವಸ್ಥಾನದ ಉಸ್ತುವಾರಿಯವರು ನಿಗದಿಪಡಿಸಿದ ಸರಹದ್ದಿನವರೆಗೆ ಮೀನುಗಳಿಗೆ ಬಲೆ ಬೀಸುವುದಾಗಲೀ, ಗೋರಿ ಹಾಕುವುದಾಗಲೀ ಅಥವಾ ಗಾಣ ಹಾಕುವುದಾಗಲೀ ಮಾಡುವಂತಿಲ್ಲ.

ರಾಮನಾಥಪುರದಿಂದ ಮುಂದುವರೆದು ಹೋದರೆ ಬಸವಾಪಟ್ಟಣ, ಸ್ವಲ್ಪ ಆಜುಬಾಜಿಗೆ ರುದ್ರಪಟ್ಟಣ. ಇನ್ನೂ ಮುಂದುವರೆದರೆ ಹೊಳೆನರಸೀಪುರಕ್ಕೆ ಹೋಗಿ, ಹೆಪ್ಪೆಸೂರಿಗೆ ಕಾವೇರಿ ಬಂದು ಅಲ್ಲಿ ತನ್ನ ಹರಿವನ್ನು ದಕ್ಷಿಣಾಭಿಮುಖವಾಗಿ ಆರಂಭಿಸುವಳು. ಅಲ್ಲಿಂದ ಇತ್ತೀಚಿಗೆ ಜಿಲ್ಲೆ ಎಂದು ಕರೆಸಿಕೊಂಡ ಚಾಮರಾಜನಗರ, ಜೊತೆಗೆ ರಾಮಸಮುದ್ರ, ಸಾಲಿಗ್ರಾಮಕ್ಕೆ ಬಂದು ಸೇರುವಳು. ಈ ಮೇಲಿನ ಸ್ಥಳಗಳಲ್ಲಿ ಬಹುಪಾಲು ವೀರಶೈವ, ವೈಷ್ಣವರಿದ್ದಾರೆ. ಒಕ್ಕಲಿಗರು, ಕುರುಬರು, ಮಡಿವಾಳರು, ಜೊತೆಗೆ ಪರಿಶಿಷ್ಟ ಜಾತಿ ಮತ್ತು ವರ್ಗದವರು ಕೂಡ ನೆಲೆ ನಿಂತಿದ್ದಾರೆ. ಆದರೆ ಅವಳು ಈ ಮೇಲಿನ ಸ್ಥಳಗಳಲ್ಲಿ ಹರಿದು ಭಕ್ತರ ಆರಾದ್ಯ ದೇವತೆಯಾಗಿ ನಿಂತಿದ್ದು, ತನ್ನದೇ ಛಾಪುವಿನಿಂದ ಪುಣ್ಯಕ್ಷೇತ್ರಗಳೆಂದು ಪ್ರಸಿದ್ಧಿ ಹೊಂದಿವೆ. ಅಲ್ಲದೆ ವೀರಶೈವ ಮತ್ತು ವೈಷ್ಣವ ದೇವಾಲಯಗಳು ಅಸ್ತಿತ್ವದಲ್ಲಿರುವುದುನ್ನು ಇಂದಿಗೂ ಕಾಣಬಹುದಾಗಿದೆ.

ಇಂದಿನ ಸಾಲಿಗ್ರಾಮ ಅಂದು ಪೌರಾಣಿಕ ನಾಟಕಗಳಿಗೆ ತವರೂರು. ಅಲ್ಲಿ ವಿಶಾಲವಾಗಿ ಹರಿಯುತ್ತಾ ಕಾವೇರಿ ಚುಂಚನಕಟ್ಟೆಗೆ ಬರುತ್ತಾಳೆ. ಇಲ್ಲಿ ಕಲ್ಲು ಬಂಡೆಗಳ ಸುತ್ತಮುತ್ತ ಇಳಿದು, ಧುಮುಕಿ, ಭೋರ್ಗರೆಯುತ್ತಾ ಸುಮಾರು ಒಂದೂವರೆ ಕಿ.ಮೀ. ಅಗಲವನ್ನು ಆಕ್ರಮಿಸಿರುತ್ತಾಳೆ. ಸಮೀಪದಲ್ಲಿ ಪಟ್ಟಾಭಿರಾಮನ ದೇವಾಲಯವಿದೆ. ಇದರ ಮುಂದೆ ಬೃಹದಾಕಾರವಾದ ಬೆಳೆದು ನಿಂತ ಅರಳಿ ಮರವಿದೆ. ಸದಾ ತಂಪು ಮತ್ತು ತನ್ಮಯತೆಯನ್ನು ನೀಡುತ್ತದೆ. ವರ್ಷಕ್ಕೊಮ್ಮೆ ರಾಮದೇವರ ಜಾತ್ರೆ ನಡೆಯುತ್ತದೆ. ಜಾತಿ, ಮತ, ಭೇದವಿಲ್ಲದೆ ಜನಪದರು ಸೇರಿ ಆರಾಧಿಸುವರು. ಅಲ್ಲಿ ನಿಂತು ನೋಡಿದರೆ ಸುಮಾರು ೩೫ ಮೀಟರ‍್ ಎತ್ತರದಿಂದ ಬಿಳಿಬುಗ್ಗೆಯನ್ನು ಹೊತ್ತುಕೊಂಡು ಧುಮುಕಿ ಜಲಪಾತ ನಿರ್ಮಿಸುವಳು. ಅದನ್ನು ನೋಡುವುದೇ ಉಲ್ಲಾಸ. ಕಾವೇರಿ ಅಲ್ಲಿಗೆ ತನ್ನ ಹರಿಯುವಿಕೆಯನ್ನು ನಿಲ್ಲಿಸುವುದಿಲ್ಲ. ಅಲ್ಲಿಂದ ಕಾವೇರಿ ಮೌನಮುರಿದು ಹೋಗುವ ಸ್ಥಳವೇ ಎಡತೊರೆ. ಒಂದು ಪುಟ್ಟ ಗ್ರಾಮ. ಇವಳು ಚುಂಚನಕಟ್ಟೆಯಿಂದ ಎಡಕ್ಕೆ ಹರಿದು ಹೋಗಿ ನಿರ್ಮಿಸಿದ ಸ್ಥಳವಾದ್ದರಿಂದ ಎಡತೊರೆ ಎಂದು ಪ್ರಸಿದ್ಧಿ. ಅಲ್ಲಿ ಅರ್ಕೇಶ್ವರ ಸ್ವಾಮಿ ದೇಗುಲವಿದೆ. ಅನಂತರ ಮುಂದೆ ಹೋಗುತ್ತಾ ತಲುಪುವ ಸ್ಥಳವೇ ಸಾಗರಕಟ್ಟೆ. ಈ ಸ್ಥಳದಲ್ಲಿ ಲಕ್ಷ್ಮಣತೀರ್ಥ ಮತ್ತು ಹೇಮಾವತಿ ನದಿಗಳು ಕಾವೇರಿಯನ್ನು ಒಂದುಗೂಡುತ್ತವೆ. ಮುಂದೆ ಸಾಗುತ್ತಾ ಹೋದಂತೆ ಸಿಕ್ಕುವುದೇ ಕನ್ನಂಬಾಡಿಕಟ್ಟೆ.

ಕನ್ನಂಬಾಡಿಕಟ್ಟೆ ಮಂಡ್ಯ ಜಿಲ್ಲೆಯೊಳಗೆ ಇದೆ. ಈ ನದಿ ಅಲ್ಲಿ ವಿಶಾಲವಾಗಿ ಹರಿಯುತ್ತಿದ್ದಾಳೆ. ಈ ನದಿಗೆ ಅಡ್ಡಲಾಗಿ ಕೃಷ್ಣಸಾಗರ ಅಣೆಕಟ್ಟನ್ನು ಕಟ್ಟಲಾಗಿದೆ. ಇದು ಜಗತ್ಪ್ರಸಿದ್ಧಿ ಪಡೆದಿದೆ. ಲೋಕವಿಖ್ಯಾತವಾದ ಬೃಂದಾವನವಿದೆ. ಕನ್ನಂಬಾಡಿಕಟ್ಟೆಗೆ ಹೊಂದಿಕೊಂಡಂತೆ ಶ್ರೀ ಕಾವೇರಿ ಮಾತೆಯ ಶಿಲಾವಿಗ್ರಹವನ್ನು ಕಡೆದು ಪ್ರತಿಷ್ಠಾಪನೆ ಮಾಡಲಾಗಿದೆ. ಕಾವೇರಿಯು ಹಿಡಿದ ಕೊಡಪಾನದಲ್ಲಿ ನೀರು ಸಣ್ಣದಾಗಿ ಬೀಳುತ್ತಿರುತ್ತದೆ. ದಿನನಿತ್ಯ ಪೂಜೆ ನಡೆಯುತ್ತದೆ. ಅಲ್ಲಿಗೆ ಹೋದಂತಹ ಭಕ್ತಾದಿಗಳು ಕಾವೇರಿ ಮಾತೆಗೆ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸುವರು. ಕನ್ನಂಬಾಡಿಕಟ್ಟೆ, ಕಾವೇರಿ ನಿಂತ ವಿಶಿಷ್ಟತೆ, ಬೃಂದಾವನ, ಆಕರ್ಷಣೀಯ. ಸದಾ ಪ್ರವಾಸಿಗರ ನೂಕುನುಗ್ಗಲು, ಒಟ್ಟಾರೆಯಾಗಿ ಸುಖ, ಶಾಂತಿ, ಮನಸ್ಸಿಗೆ ನೆಮ್ಮದಿ ತರುವ ಕೇಂದ್ರ. ಕಾವೇರಿ ಮೈಸೂರಿನ ಸುತ್ತಮುತ್ತ ಜನಪದರ ಕಣ್ಮಣಿಯಾಗಿ ಆರಾಧ್ಯದೇವಿಯಾಗಿರುತ್ತಾಳೆ.

ಎಡಕ್ಕೆ ತಿರುಗಿ ಸೇರುವ ಸ್ಥಳ ಕನ್ನಂಬಾಡಿಯಾದರೆ, ಮುಂದೆ ಇವಳು ಪೂರ್ವಾಭಿಮುಖವಾಗಿ ಸಾಗಿ ಸುಮಾರು ಐದು ಕಿ.ಮೀ.ಇರುವ ಬಲಮುರಿಗೆ ಬರುವಳು. ಅಲ್ಲಿ ಶಿವ ದೇವಾಲಯವಿದೆ. ಅಲ್ಲಿಂದ ಮುಂದೆ ಹೋಗುತ್ತಾ ಹೋಗುತ್ತಾ ‘ರಂಗನತಿಟ್ಟು’ವಿನಲ್ಲಿ ಹರಿಯುತ್ತಾಳೆ. ರಂಗನತಿಟ್ಟಿನಲ್ಲಿ ಸಮಾನಾಂತರವಾಗಿ ಹರಿಯುವುದಿಲ್ಲ. ಅಲ್ಲಲ್ಲಿ ಬಂಡೆಗಳು ಹಾಗೂ ಮರಳಿನಿಂದ ಕೂಡಿದ ದ್ವೀಪಗಳು ಇವೆ. ಕೆಲವು ದ್ವೀಪಗಳಲ್ಲಿ ಮರಗಡಿಗಳು ಬೆಳೆದು ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಭಿನ್ನಭಿನ್ನವಾದ ಪಕ್ಷಿಗಳು ಒಂದೊಂದು ದ್ವೀಪದಲ್ಲಿ ಕುಳಿತು ತಮ್ಮದೇ ಆದ ರಾಗಗಳಿಂದ ಸಂಗೀತಮಯವಾದ ವಾತಾವರಣ ಏರ್ಪಡುವಂತೆ ಮಾಡುತ್ತವೆ. ಬಿದುರುಮೆಳೆಗಳು ಬೃಹದಾಕಾರವಾಗಿ ಬೆಳೆದು ನೋಡಲು ಆಕರ್ಷಕವಾಗಿವೆ. ಇತ್ತೀಚಿನ ದಿನಗಳಲ್ಲಿ ಸರಕಾರವು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬೋಟ್ ನ ವ್ಯವಸ್ಥೆ, ಕುಳಿತುಕೊಳ್ಳುವ ಆರಾಮವಾದ ಕಲ್ಲುಗಳನ್ನು ಕೂರಲು ಅನುಕೂಲವಾಗುವಂತೆ ಮಾಡಲಾಗಿದೆ. ದಿನನಿತ್ಯ ನೂರಾರು ನಿಸರ್ಗ ಒಲವುಳ್ಳವರು ಅಲ್ಲಿಗೆ ಹೋಗಿ ಬರುವುದು ವಾಡಿಕೆಯಾಗಿರುತ್ತದೆ. ಒಟ್ಟಾರೆಯಾಗಿ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರಸಿದ್ಧಿ ಪಡೆದಿದೆ.

ರಂಗನತಿಟ್ಟಿನಿಂದ ಮುಂದೆ ಸಾಗುತ್ತಾ ಹೋದಂತೆ ಎರಡು ಕವಲುಗಳಾಗಿ ಕಾವೇರಿ ಬೇರ್ಪಟ್ಟು ಮುನ್ನುಗ್ಗುವಳು. ಒಂದು ಕವಲು ಪಶ್ಚಿಮವಾಹಿನಿಯಾಗಿ ಮುಂದುವರೆದರೆ, ಇನ್ನೊಂದು ದಾರಿಯಲ್ಲಿ ಕಾವೇರಿ ಹರಿಯುತ್ತಾ ಶ್ರೀರಂಗಪಟ್ಟಣವನ್ನು ತಲುಪುತ್ತಾಳೆ. ಈ ಎರಡು ಕವಲುಗಳ ಮಧ್ಯದಲ್ಲಿ ಶ್ರೀರಂಗಪಟ್ಟಣವಿದ್ದು, ದ್ವೀಪವಾಗಿ ಮಾರ್ಪಾಡಾಗಿದೆ. ಅಲ್ಲಿ ಶ್ರೀರಂಗನ ದೇವಸ್ಥಾನವಿದೆ. ಭಕ್ತರು ಹೊಳೆಯಲ್ಲಿ ಮಿಂದು, ಭಯ-ಭಕ್ತಿಯಿಂದ ಶ್ರೀರಂಗನಿಗೆ ಪ್ರಾರ್ಥನೆ ಸಲ್ಲಿಸುವರು. ಹೊಳೆ ತುಂಬಿ ಹರಿಯುವಾಗ ನೋಡಿದರೆ ವಿಸ್ಮಯ ಉಂಟುಮಾಡುತ್ತದೆ. ಶ್ರೀರಂಗಪಟ್ಟಣದಿಂದ ಹೊರಟು ಘೋಸಾಯಿ ಘಾಟ್ ಎಂಬ ಸ್ಥಳಕ್ಕೆ ಧಾವಿಸುವಳು (ಶ್ರೀರಂಗಪಟ್ಟಣ).

ಶ್ರೀರಂಗಪಟ್ಟಣದ ನಂತರ ಮುಂದೆ ಹೋಗುತ್ತಾ ಕರಿಘಟ್ಟ, ಸೋಮನಾಥಪುರ, ಸೋಸಲೆ ಗ್ರಾಮಗಳನ್ನು ಸುತ್ತುವರೆದು ಹರಿಯುತ್ತಾ ಮೈಸೂರಿಗೆ ವಾಪಸ್ಸಾಗುವಳು. ಅನಂತರ ಟಿ.ನರಸೀಪುರ, ತಿರುಮಕೂಡಲು, ನರಸೀಪುರಕ್ಕೆ ಬಂದಾಗ ಅಲ್ಲಿ ಕಪಿಲ ಹೊಳೆಯು ಕಾವೇರಿಯೊಂದಿಗೆ ಬೆರೆಯುವಳು. ಕಪಿಲೆಯು ಅಂತರ್ವಾಹಿನಿಯಾಗಿ ಕಾವೇರಿಯನ್ನು ಸೇರುವುದು ವಿಶೇಷ. ಕಾವೇರಿ ಮುಂದುವರೆದು ಮಂಡ್ಯ, ಮೈಸೂರು ಜಿಲ್ಲೆಗಳನ್ನು ದಾಟುತ್ತಾ ದಕ್ಷಿಣ ದಿಕ್ಕಿಗೆ ಬರುವಳು. ಅಲ್ಲಿ ಹರಿಯುವಾಗ ಮುಡುಕು ತೊರೆಯಾಗಿ ಮುನ್ನುಗ್ಗಿ ತಲಕಾಡಿಗೆ ಹೋಗುವಳು. ತಲಕಾಡು ಇತಿಹಾಸ ಪ್ರಸಿದ್ಧ ಭೂ ಪ್ರದೇಶ. ಅನೇಕ ರಾಜರು ಆಳಿದ ನಾಡು. ಅಲ್ಲಿ ಸುವರ್ಣಾವತಿ ನದಿ ಕಾವೇರಿಯೊಂದಿಗೆ ಬೆರೆಯುವಾಗ ಸಂಗಮವಾಗಿ ಪುಣ್ಯಕ್ಷೇತ್ರವೆಂದು ಇಂದಿಗೂ ಖ್ಯಾತಿ ಹೊಂದಿದೆ. ತಲಕಾಡಿನಲ್ಲಿ ಈ ನದಿಗೆ ಅಣೆಕಟ್ಟನ್ನು ಕಟ್ಟಿ ವ್ಯವಸಾಯಕ್ಕೆ ಅನುಕೂಲವಾಗುವಂತೆ ಮಾಡಲಾಗಿದೆ. ಎಲ್ಲೆಂದರಲ್ಲಿ ಮರಳುಗಾಡು. ಮಧ್ಯ ಮಧ್ಯದಲ್ಲಿ ಒಂದೊಂದು ಹಸಿರು ಗಿಡ ಮರಗಳು ಬೆಳೆದು ಆಕರ್ಷಣೀಯವಾಗಿ ಕಾಣುತ್ತದೆ. ಜೊತೆಗೆ ಯಾತ್ರಿಕರ ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿದೆ. ಮರಳ ಹಾಗೂ ನದಿಯ ಅಕ್ಕಪಕ್ಕದಲ್ಲಿ ಶ್ರೀ ವೈದ್ಯೇಶ್ವರ, ಅರ್ಕೇಶ್ವರ, ಕೀರ್ತಿನಾರಾಯಣ ದೇಗುಲಗಳು ಪ್ರತಿಷ್ಠಾಪನೆಗೊಂಡಿವೆ. ಸಾವಿರಾರು ಭಕ್ತರು ಸಂಗಮದಲ್ಲಿ ಮಿಂದು ದೇವರುಗಳಲ್ಲಿ ಅಡ್ಡಬಿದ್ದು, ಪೂಜೆ ಮಾಡಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಬೇಕೆಂದು ಕೇಳಿಕೊಳ್ಳುವ ಪರಿಪಾಠ ಇಂದಿಗೂ ನಡೆಯುತ್ತಿದೆ. ತಲಕಾಡನ್ನು ನೋಡುವುದೇ ಆನಂದಮಯ.

ಹೀಗೆ ಕಾವೇರಿ ನಿರಂತರವಾಗಿ ಹರಿಯುತ್ತಾ ತಲಕಾಡಿನ ಪೂರ್ವಾಭಿಮುಖ ಪಡೆದುಕೊಂಡು, ಸತ್ಯಗಾಲದಲ್ಲಿ ಇಂಪಾಗಿ ಹರಿಯುವಳು. ಇದು ಕೊಳ್ಳೆಗಾಲ ತಾಲೂಕಿಗೆ ಸೇರಿರುತ್ತದೆ. ಒಟ್ಟಿನಲ್ಲಿ ಸತ್ಯಗಾಲ ದಕ್ಷಿಣ ಗಯವೆಂದು ಖ್ಯಾತಿ ಹೊಂದಿದೆ. ಅಲ್ಲಿ ವಿಷ್ಣು, ಶಿವ, ಗಣಪತಿ ದೇವಾಲಯಗಳೂ ಕೂಡ ಇವೆ. ಮುಂದುವರೆದು ಕಾವೇರಿಯು ಇಬ್ಭಾಗವಾಗಿ ಹರಿಯುವಳು. ಆದ್ದರಿಂದ ಒಂದು ರಮ್ಯ ಮನೋಹರವಾದ ದ್ವೀಪ ಏರ್ಪಡುತ್ತದೆ. ಆ ದ್ವೀಪವೇ ಶಿಂಸ ಅಥವಾ ಶಿವನಸಮುದ್ರ. ಇಂದು ಪ್ರೇಕ್ಷಣೀಯವಾದ ಸ್ಥಳವಾಗಿದೆ. ಅಲ್ಲಿ ಕಾವೇರಿ ಎರಡು ಕವಲುಗಳ ಮೂಲಕ ಹರಿದು ತುಂಬ ವಿಶಿಷ್ಟವಾಗಿ ಜಲಪಾತವನ್ನು ನಿರ್ಮಿಸಿದ್ದಾಳೆ. ಅವಳು ಪ್ರಪಾತಕ್ಕೆ ಬೀಳುವುದರಿಂದ ಒಂದನ್ನು ಗಗನ ಚುಕ್ಕಿ ಎಂದರೆ ಮತ್ತೊಂದನ್ನು ಭರ ಚುಕ್ಕಿ ಎಂದು ಕರೆಯುವುದು ಇಂದಿಗೂ ವಾಡಿಕೆ ಇದೆ. ಅಲ್ಲಿ ಶ್ರೀರಂಗನಾಥ ಸ್ವಾಮಿ, ಸೋಮೇಶ್ವರ ದೇವಾಲಯಗಳಿವೆ. ಅಲ್ಲದೆ ನದಿಯ ದಂಡೆಯ ಬಲಭಾಗದಲ್ಲಿ ರಂಗನಾಥ ಸ್ವಾಮಿಯ ಎರಡನೆ ದೇವಸ್ಥಾನ ಪ್ರತಿಷ್ಠಾಪನೆಗೊಂಡಿರುವುದರಿಂದ ಮಧ್ಯರಂಗವೆಂದು ಖ್ಯಾತಿ ಪಡೆದಿದೆ. ಇಂದು ಶಿವನ ಸಮುದ್ರ ಜಗತ್ಪ್ರಸಿದ್ಧಿ ಪಡೆದಿದೆ. ಜನಪದರಿಗೆ ಆಶ್ಚರ್ಯ ಮೂಡಿರುವಂಥ ಭೂ ಪ್ರದೇಶ. ಇದಕ್ಕೆ ತನ್ನದೇ ಆದ ಕಾರಣಗಳಿವೆ. ಇಂದು ವಿದ್ಯುತ್ ಉತ್ಪಾದಿಸುವ ಕೇಂದ್ರ. ನಿಸರ್ಗದ ಮಡಿಲು ಆಕರ್ಷಣೀಯವಾಗಿದೆ. ಆ ಭೂ ಪ್ರದೇಶವನ್ನು ಬ್ಲಫ್ ಎಂದು ಕರೆಯುವರು. ಅಲ್ಲಿ ಜೋಡಣೆಗೊಂಡಿರುವ ಉತ್ಪಾದನ ಯಂತ್ರಗಳು ಲಂಡನ್ ನಿಂದ ಆಮದು ಮಾಡಿಕೊಂಡವು. ಈ ಪ್ರದೇಶ ಬೆಟ್ಟ-ಗುಡ್ಡ ಪರ್ವತ, ಪ್ರಪಾತಗಳಿಂದ ಕೂಡಿದ್ದು, ಅಲ್ಲಿ ಕಾವೇರಿ ಭೋರ್ಗರೆಯುತ್ತಾ, ಬಿಳಿ ಬುಗ್ಗೆಯನ್ನು ಹೊರ ಚೆಲ್ಲುತ್ತಾ ಹರಿಯುತ್ತಿದ್ದಾಳೆ.

ಶಿವನ ಸಮುದ್ರದಲ್ಲಿ ಎರಡು ಕವಲುಗಳಾಗಿ ಸಾಗಿದ ಕಾವೇರಿ ಸ್ವಲ್ಪ ದೂರದಲ್ಲಿ ತನ್ನ ನಾಡನ್ನು ಕಡಿದು ತಮಿಳುನಾಡಿನ ಎಲ್ಲೆ ಒಳಗೆ ಇಣುಕುವಳು. ಅಲ್ಲಿಂದ ಪುನಃ ಬೆಂಗಳೂರು ಜಿಲ್ಲೆಯ ಕನಕಪುರದ ಹತ್ತಿರ ಬರುವಾಗ ಅರ್ಕಾವತಿ ನದಿಯು ಕಾವೇರಿಯನ್ನು ಬೆರೆತು ಸಂಗಮವಾಗಿ ಪಡೆಯೊಡೆಯುವಳು. ಈ ನದಿಯ ಹರಿಯುವಿಕೆ ಬಲದಂಡೆಗಳಲ್ಲಿ ಸಂಗಮೇಶ್ವರ ದೇವಸ್ಥಾನವಿದೆ. ಅಲ್ಲಿನ ಜನಪದರು ಮೂಲ ದೈವವಾಗಿ ಆರಾಧಿಸಿಕೊಂಡು ಕೆಲವರು ಬರುತ್ತಿದ್ದಾರೆ. ಹೀಗೆ ಕಾವೇರಿ ಹರಿಯುತ್ತಾ ಸುಮಾರು ೭ ಕಿ.ಮೀಟರ‍್ ದೂರದವರೆಗೂ ಹರಿಯುತ್ತಾ ಕರ್ನಾಟಕದಲ್ಲಿ ತನ್ನ ಹರಿಯುವಿಕೆಯಿಂದ ಅಲ್ಲಿನ ಭೌಗೋಳಿಕ ಎಲ್ಲೆಯನ್ನು ಕಡಿದುಕೊಳ್ಳುತ್ತಾಳೆ.

ಅನಂತರ ತಮಿಳುನಾಡಿನ ಜನಪದರ ಆರಾಧ್ಯ ದೈವವಾಗಿ, ಕೃಷಿಗೆ ಬೆನ್ನೆಲುಬಾಗಿ, ಕುಡಿಯುವ ಅಕ್ಷಯ ಪಾತ್ರೆಯಾಗಿ ಎಲ್ಲರ ಪ್ರೀತಿಗೆ ಪಾತ್ರಳಾಗಿ ತಮಿಳುನಾಡಿನ ಭೂ ಭಾಗದಲ್ಲಿ ಹರಿಯುತ್ತಾಳೆ. ಅವಳ ವೇಗ ನಿಯಂತ್ರಿಸಲಾರದಷ್ಟಿದೆ. ನಿರಂತರವಾಗಿ ಭೋರ್ಗರೆಯುತ್ತಾ ಹರಿಯುವಾಗ ಕಲ್ಲುಬಂಡೆಗಳು ಸವೆದು ಸವೆದು ಚಿಕ್ಕಪುಟ್ಟ ಗಾತ್ರಕ್ಕೆ ಬಂದಿರುತ್ತವೆ. ಅಲ್ಲಿ ಅತಿ ದೊಡ್ಡ ಬೆಟ್ಟವನ್ನು ಸೀಳಿಕೊಂಡು ಮುನ್ನುಗ್ಗುವಾಗ ಅತ್ಯಂತ ಪಾತಾಳಕ್ಕೆ ಬಿದ್ದು, ತುಂಬಾ ಚಿಕ್ಕದಾದ ಗಾತ್ರದಲ್ಲಿ ಹರಿಯುತ್ತಾಳೆ. ಅಲ್ಲಿ ನಿಂತು ಅವಳ ಗಾತ್ರವನ್ನು ನೋಡಿದರೆ ಆಶ್ಚರ್ಯವಾಗುವುದು. ಅತ್ಯಂತ ವಿಶಾಲವಾಗಿ ಹರಿದ ಅವಳು ಎಷ್ಟೊಂದು ಚಿಕ್ಕದಾಗಿ ಹರಿಯುತ್ತಿದ್ದಾಳೆಯೋ ಎಮದು ಬೆರಗುಗೊಳ್ಳಬಹುದು. ಅವಳು ಹರಿಯುವ ಆ ಚಿಕ್ಕದಾದ ಸಿಳಾಲಿಗೆ ಮೇಕೆದಾಟು ಎಂದು ಇಂದಿಗೂ ಜನಪದರು ಕರೆಯುವರು. ಏಕೆಂದರೆ ಅವಳು ಹರಿಯುವಾಗ ಒಂದು ಬದಿಯಿಂದ ಇನ್ನೊಂದು ಬದಿಗೆ ಮೇಕೆಯು ದಾಟಬಹುದು. ಈ ಕಾರಣದಿಂದ ಮೇಕೆದಾಟು ಎಂದು ಖ್ಯಾತಿ ಹೊಂದಿ, ಇಂದಿಗೂ ಪ್ರವಾಸಿಗರ ಕೇಂದ್ರ ಎಂದು ಪ್ರಸಿದ್ಧಿ ಪಡೆದಿದೆ. ಈ ಮೊದಲು ಕಾವೇರಿ ತಮಿಳುನಾಡಿಗೆ ತನ್ನ ವೈಶಿಷ್ಟ್ಯವನ್ನು ತೋರುತ್ತಿದ್ದರೂ, ಸಂಪೂರ್ಣವಾಗಿ ಅದು ತಮಿಳುನಾಡಾಗಿರುವುದಿಲ್ಲ. ಆದರೆ ಮೇಕೆದಾಟುವಿನಿಂದ ಸುಮಾರು ೪೫ ಕಿ.ಮೀ. ದೂರಕ್ಕೆ ಹೋದಾಗ ಕನ್ನಡ-ತಮಿಳುನಾಡುಗಳ ಗಡಿ ಪ್ರದೇಶವನ್ನು ಕಾಣಬಹುದು. ಅಲ್ಲಿಂದ ಕನ್ನಡ ನಾಡಿನ ಎಲ್ಲೆಯನ್ನು ಬಿಟ್ಟು ತಮಿಳುನಾಡಿನ ಅಂಗಳದಲ್ಲಿ ದಿಂಬಾಗಿ ಹರಿಯುವಳು. ಆ ಗಡಿ ಭಾಗವೇ ‘ಹೊಗೆನಕಲ್ ಪಾಲ್ಸ್’ ಎಂದು ಖ್ಯಾತಿ ಪಡೆದಿದೆ. ಈ ಭೂ ಭಾಗ ತಮಿಳುನಾಡಿನ ಧರ್ಮಪುರಿ ಜಿಲ್ಲೆಗೆ ಸೇರಿರುತ್ತದೆ. ಅಲ್ಲಿ ಕಾವೇರಿಯು ಎತ್ತರದಿಂದ ಬೀಳುತ್ತಾ ಜಲಪಾತವನ್ನು ನಿರ್ಮಿಸಿರುತ್ತಾಳೆ. ಅದು ಇಂದಿಗೂ ಪ್ರಿಸಿದ್ಧಿ ಪಡೆದು ಪ್ರವಾಸಿಗರ ಆಕರ್ಷಣೀಯ ತಾಣವಾಗಿ ರೂಪಿತಗೊಂಡಿದೆ.

ಜಲಪಾತವನ್ನುಂಟು ಮಾಡಿದ ಕಾವೇರಿ ನಿಶ್ಯಬ್ಧವಾಗಿ ಕಾಡಿನಲ್ಲಿ ಮರೆಯಾಗಿ ಬಂಡೆಗಳ ಆಸರೆಯಾಗಿ ಬೆಟ್ಟ ಗುಡ್ಡಗಳಲ್ಲಿ ಸುತ್ತುವರೆದು ನಾಟ್ಯವಾಡುತ್ತಾ ಪ್ರಾಣಿ, ಪಕ್ಷಿ ಕುಲಗಳೊಂದಿಗೆ ಬೆರೆಯುತ್ತಾ ಅವರ ಕಷ್ಟಗಳಲ್ಲಿ ಭಾಗಿಯಾಗುತ್ತಾ ಬರುತ್ತಿರುವಾಗ ‘ಚಿಣ್ಣಾರ‍್’ ಎಂದು ಖ್ಯಾತಿ ಹೊಂದಿದ ಸನತ್ಕುಮಾರ ನದಿಯನ್ನು ಕೂಡಿಕೊಳ್ಳುವಳು. ಇಬ್ಬರು ಸೇರಿ ಹರಿಯುತ್ತಾ ಧರ್ಮಪುರಿ ಜಿಲ್ಲೆಗೆ ಬರುತ್ತಾಳೆ. ಅಲ್ಲಿ ತನ್ನ ಹರಿಯುವಿಕೆಯ ರೂಪ ಬದಲಾವಣೆಗೊಳ್ಳುತ್ತದೆ. ಅಲ್ಲಿ ಅವಳು ದಕ್ಷಿಣ-ಪಶ್ಚಿಮಾಭಿಮುಖವಾಗಿ ಮುನ್ನುಗ್ಗುತ್ತಾ ಸೇಲಂ ಜಿಲ್ಲೆಯಾದ ಮೆಟ್ಟೂರಿಗೆ ಬರುವಳು. ಅಲ್ಲಿಂದ ಕೊಯಂಬತ್ತೂರು, ತಿರುಚೆಂಗೋಡು ಹಾಗೂ ಭವಾನಿ ತಾಲೂಕುಗಳನ್ನು ತಾಗಿಕೊಂಡು ಹರಿಯುವಳು. ಅಲ್ಲಿಂದ ಹೊರಟಾಗ ಕಾವೇರಿಗೆ ಸರ್ಭಾಂಗ ನದಿ ವಿಲೀನವಾಗುವಳು. ಅಲ್ಲಿಂದ ಭವಾನಿ ಊರಿಗೆ ಬರುತ್ತಾಳೆ. ಇದರ ಹಿನ್ನೆಲೆಯಾಗಿ ಅನೇಕ ಪುರಾಣ ಕಥೆಗಳೂ ಇವೆ. ಆದರೆ ವಾಸ್ತವವಾಗಿ ಆ ಚರ್ಚೆಗೆ ತೊಡಗದೆ ಅವಳ ಹರಿಯುವಿಕೆಯ ಪರಿಕಲ್ಪನೆಯನ್ನು ವಿಶ್ಲೇಷಣೆ ಮಾಡುವತ್ತ ಗಮನ ಹರಿಸಲಾಗಿದೆ. ಭವಾನಿ ಊರಿನಲ್ಲಿ ಭವಾನಿ ನದಿಯು ಕಾವೇರಿಯೊಂದಿಗೆ ಬೆರೆತು ಸಂಗಮವಾಗುವಳು. ಆ ಊರಿನಲ್ಲಿ ಹರಿಯುವಾಗ ಎಡ-ಬಲ ದಂಡೆಗಳಲ್ಲಿ ಕುಮಾರಪಾಳ್ಯಂ ಹಾಗೂ ಭವಾನಿ ಊರುಗಳು ಅಸ್ತಿತ್ವದಲ್ಲಿರುತ್ತವೆ. ಆ ಊರುಗಳಲ್ಲಿ ಕಾವೇರಿ ಹಾಗೂ ಭವಾನಿ ದೇವಿಯರನ್ನು ಅಲ್ಲಿನ ಜನಪದರು ಆರಾಧಿಸುತ್ತಾರೆ. ಪ್ರತಿ ವರ್ಷಕ್ಕೊಮ್ಮೆ ಅಲ್ಲಿ ಹಬ್ಬ-ಹರಿದಿನಗಳು ಸದ್ದುಗದ್ದಲವಿಲ್ಲದೆ ಅಂತರ್ವಾಹಿನಿಯಾಗಿ, ಯಾರಿಗೂ ಸ್ವಲ್ಪ ದೂರ ಗೋಚರಿಸದೆ ಅಮೃತ ನದಿಯೂ ಕಾವೇರಿಯನ್ನು ಸೇರುವಳು. ಅಲ್ಲಿ ತ್ರಿವೇಣಿ ಸಂಗಮವೆಂದು ಇಂದಿಗೂ ಪ್ರಸಿದ್ಧಿ ಪಡೆದಿದೆ. ಅಲ್ಲಿ ಶಿವನ ದೇವಾಲಯವಿದೆ. ತ್ರಿವೇಣಿಗಳು ಬೆರೆತಿರುವ ಆ ಕ್ಷೇತ್ರದಲ್ಲಿ ನೆಲೆಸಿರುವ ಶಿವನನ್ನು ‘ಶ್ರೀ ಸಂಗಮೇಶ್ವರ’ ಎಂದು ಖ್ಯಾತಿ ಪಡೆದಿದೆ. ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಜನಪದರ ಪಾಪ ನಿರ್ಮೂಲ ಮಾಡುವ ಕ್ಷೇತ್ರವಾಗಿ ಪರಿಣಮಿಸಿದೆ. ಕಾವೇರಿ ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ಅಲ್ಲಿಂದ ಪಶ್ಚಿಮಾಭಿಮುಖವಾಗಿ ಮುನ್ನುಗ್ಗುವಳು. ಹೀಗೆ ಸಾಗಿದಾಗ ಕರುಂಗಲ್ ಪಾಳ್ಯ, ಈರೋಡು, ಚಾವಡಿಪಾಳ್ಯಂ, ಬಾಸೂರು, ಊಂಜಲೂರುಗಳಲ್ಲಿ ಜನಸಾಮಾನ್ಯರ ಅಭಿವೃದ್ಧಿ ಸಂಕೇತವಾಗಿ ನಿಂತು ಶೈವ ಕ್ಷೇತ್ರವೆಂದು ಕರೆಯಲಾಗುತ್ತಿರುವ ಕೊಡುಮುಡಿ ಊರನ್ನು ಕಾವೇರಿ ತಲುಪುತ್ತಾಳೆ. ಈ ಊರು ಕೊಯಂಬತ್ತೂರು ಜಿಲ್ಲೆಗೆ ಬರುತ್ತದೆ.

ಕಾವೇರಿಯು ಕೊಡುಮುಡಿಯಿಂದ ತನ್ನ ತಿರುವನ್ನು ಪೂರ್ವಾಭಿಮುಖಕ್ಕೆ ತಿರುಗಿಸುತ್ತಾಳೆ. ಹಾಗೆ ಮುಂದುವರೆಯುವಾಗ ಕರೂರು ಗ್ರಾಮದಲ್ಲಿ ಆರಾಧಿಸಿಕೊಂಡು ನೆರೂರಿಗೆ ತಲುಪುವಳು. ಈ ಊರು ಸದಾಶಿವ ಬ್ರಹ್ಮೇಂದ್ರಸ್ವಾಮಿಗಳ ಸಮಾಧಿ ಅದಿಷ್ಠಾನ ಕ್ಷೇತ್ರವೆಂದು ಇಂದಿಗೂ ಖ್ಯಾತಿ ಹೊಂದಿದೆ. ಅಲ್ಲಿಂದ ಮುಂದೆ ತಿರುಮಕೂಡಲ್ ಹತ್ತಿರಕ್ಕೆ ಬಂದಾಗ ಕಾವೇರಿಯೊಂದಿಗೆ ಅಮರಾವತಿ ನದಿಯು ಸಂಗಮವಾಗುವಳು. ಹೀಗೆ ಮುಂದುವರೆಯುತ್ತಾ ತಿರುಚನಾಪಳ್ಳಿ ಜಿಲ್ಲೆಯೊಳಗೆ ನುಸುಳಿದಾಗ ಮುಸಿರಿ, ಪೆರಂಬೂರು, ಅನಂತರ ಕುಳಿತಳ್ಯೆ ಊರಿಗೆ ಬರುವಳು. ಇಲ್ಲಿಂದ ಮುಂದೆ ಸಿಗುವುದೇ ತಿರುಪ್ಪಾರೈತುರೈ ಊರು. ಇಲ್ಲಿ ತುಂಬಾ ವಿಶಾಲವಾಗಿ ಹರಿಯುತ್ತಿದ್ದಾಳೆ. ಮಳೆಗಾಲದಲ್ಲಿಯಂತೂ ಅವಳ ಮೈಸಿರಿ ಬಣ್ಣಿಸಲಾಗದು. ಅಲ್ಲಿ ಶಿವ ಮಂದಿರವಿದ್ದು, ಯಾತ್ರಿಕರ ಪ್ರವಾಸ ಸ್ಥಳವಾಗಿ ಪ್ರಸಿದ್ಧಿ ಪಡೆದಿದೆ. ಅಲ್ಲಿ ಅಖಂಡ ಕಾವೇರಿ ಎಂದು ಜನಪದರು ಕರೆದು, ಆರಾಧಿಸುವರು. ಈ ಊರಿನ ಮುಂಭಾಗವೇ ಮುಕ್ಕುಂ ಸ್ಥಳವಿದೆ. ಇಲ್ಲಿ ಒಬ್ಬಳಾಗಿದ್ದ ಕಾವೇರಿ ಅಲ್ಲಿ ಇಬ್ಭಾಗವಾಗಿ ಅಂದರೆ ಎರಡು ಕವಲುಗಳಾಗಿ ಹರಿಯುತ್ತಾಳೆ. ಆ ಎರಡು ಕವಲುಗಳು ರಮ್ಯ ಮನೋಹರ, ಆಕರ್ಷಕ ಅಲ್ಲದೆ ಒಂದೊಂದು ಕವಲನ್ನು ಒಂದೊಂದು ಹೆಸರಿನಿಂದ ಕರೆಯುವುದು ವಾಡಿಕೆ. ಅವುಗಳೆಂದರೆ ಒಂದಕ್ಕೆ ‘ಕಾವೇರಿ’ಎಂದು ಕರೆದರೆ ಮತ್ತೊಂದಕ್ಕೆ ‘ಕೊಲ್ಲಡಂ’ ಎನ್ನುವರು. ಇವೆರಡು ಹರಿದು ಮುಂದೆ ಹೋಗುತ್ತವೆ. ಆದರೆ ಅವೆರಡರ ನಡುವೆ ದ್ವೀಪ ಕಂಡುಬರುತ್ತದೆ. ಆ ಮಧ್ಯದ ಭೂ ಪ್ರದೇಶವೇ ‘ಶ್ರೀರಂಗಂ’ ಎಂದು ಪ್ರಸಿದ್ಧಿ ಪಡೆದಿದೆ. ಈ ಸ್ಥಳ ಮುಕ್ಕಂ ಗ್ರಾಮದಿಂದ ೧೫ ಕಿ.ಮೀ. ದೂರದಲ್ಲಿದೆ. ಕಾವೇರಿ ಇಲ್ಲಿ ವಿಶಿಷ್ಟತೆಯಿಂದ ಮೆರೆದಿರುವುದು ಕಾಣುತ್ತದೆ. ಏಕೆಂದರೆ ತಿರುಚರಾಪಳ್ಳಿ ಶ್ರೀರಂಗಂ ಪ್ರದೇಶಗಳನ್ನು ಕಡಿದು ಅಥವಾ ಬೇರ್ಪಡಿಸಿರುವುದು. ಇದರಿಂದ ಕಾವೇರಿಗೆ ತುಂಬಾ ದೊಡ್ಡದಾದ ಸೇತುವೆಯನ್ನು ಅಡ್ಡವಾಗಿ ನಿರ್ಮಿಸಲಾಗಿದೆ. ಒಟ್ಟಾರೆಯಾಗಿ ತಿರುಚಿ ಹಾಗೂ ಶ್ರೀರಂಗಂಗೂ ಸುಮಾರು ಐದು ಕಿ.ಮೀ.ದೂರವಿದೆಯಷ್ಟೇ.

ಶ್ರೀರಂಗಂ ‘ಅಂತ್ಯರಂಗ’ವೆಂದು ಖ್ಯಾತಿ. ಅಲ್ಲಿ ಶ್ರೀರಂಗನಾಥ ಸ್ವಾಮಿಯ ದೇವಸ್ಥಾನವಿದೆ. ಈ ದೇವಸ್ಥಾನ ಕಾವೇರಿ ದಂಡೆಯಲ್ಲಿರುವ ರಂಗನಾಥ ದೇವಮಂದಿರಗಳಲ್ಲಿ ಕಡೆಯದಾಗಿರುತ್ತದೆ. ಆದುದರಿಂದ ಇಂದಿಗೂ ಜನಪದರಿಗೆ ಪುಣ್ಯಕ್ಷೇತ್ರವೆಂದು ಪ್ರಸಿದ್ಧಿ. ಜೊತೆಗೆ ವೈಷ್ನವ ಭಕ್ತರು ಆರಾಧಿಸುವ ನೆಲೆವೀಡಾಗಿರುತ್ತದೆ. ವೈಷ್ಣವ ಭಕ್ತರು ಅಲ್ಲಿ ವರ್ಷಕ್ಕೊಮ್ಮೆ ಸೇರಿ ಸ್ತ್ರೋತ್ರ ಮಾಡುವ ಪರಿಪಾಠವಿದೆ. ಹೀಗಿದ್ದರೂ ತಿರುಚಿಗೂ ಶ್ರೀರಂಗಂಗೂ ಮಧ್ಯೆ ಕಾವೇರಿ ಮುಂದುವರೆದಂತೆ ತಿರುವಾನೆಕ್ಕಾವಲ್ ಶಿವಶಕ್ತಿ ಕ್ಷೇತ್ರವಿದೆ. ಅಲ್ಲದೆ ರಾಕ್ ಫೋರ್ಟ್‌ಟೆಂಪಲ್, ತಾಯುಮಾನವರ ದೇವಾಲಯಗಳಿವೆ.

ಶ್ರೀರಂಗಂನಲ್ಲಿ ಇನ್ನೊಂದು ನದಿಯನ್ನು ಕಾಣಬಹುದು. ಇದರ ಹೆಸರು ಕೊಲ್ಲಡಂ ಕವಲು. ಈ ನದಿ ಅಲ್ಲಿ ಎಡಕ್ಕೆ ತಿರುಗಿ ಸಾಗುವಾಗ ಕಾವೇರಿಗೆ ಸೇರ್ಪಡೆಯಾಗುವಳು. ಜೊತೆಗೆ ಕೊಲ್ಲಡಂ ಕವಲಿಗೆ ಬಹುದೊಡ್ಡದಾದ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದರಿಂದ ಸಾವಿರಾರು ಜನಪದರಿಗೆ ಅನುಕೂಲವಾಗಿರುವುದನ್ನು ಪ್ರತಿಬಿಂಬಿಸುತ್ತದೆ. ಐತಿಹಾಸಿಕವಾಗಿ ಗುರುತಿಸಿರುವಂತ ಕ್ಷೇತ್ರವಾಗಿದೆ. ಇಲ್ಲಿ ಕಾವೇರಿಯು ಹರಿಯುವ ರೂಪವನ್ನು ಬದಲಾಯಿಸುತ್ತಾಳೆ. ಕವಲು ಎಂಬ ಪದವೇ ಸೂಚಿಸುವ ಹಾಗೆ ಇವಳ ಒಂದು ಹರಿಯುವಿಕೆಯ ಕವಲಿಗೆ ಕೊಲ್ಲಡಂ ಎಂದು ಕರೆಯುವುದು ವಾಡಿಕೆಯಲ್ಲಿದೆ. ಈ ಕೊಲ್ಲಡಮ ತಂಜಾವೂರನ್ನು ತಾಗಿಕೊಂಡು ಚಿಂಗಲ್ ಪೇಟ್ ಬಳಿ ದೇವಿಕೋಟೆಗೆ ಬಂದಾಗ ಅಲ್ಲಿ ಬಂಗಾಳ ಸಮುದ್ರದಲ್ಲಿ ಬೆರೆಯುವಳು.

ಇನ್ನೊಂದು ಕವಲಾದ ವೆಣ್ಣಾರು ತಂಜಾವೂರನ್ನು ಹಾಯ್ದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಇಂದು ತಂಜಾವೂರು ಏಕೆ ಪ್ರಸಿದ್ಧಿ ಪಡೆದಿದೆ ಎಂಬುದಕ್ಕೆ ತಾತ್ವಿಕವಾದ ಅಂಶಗಳೇ ಕಾರಣ. ಇಂದು ತಂಜಾವೂರು ಹಸಿರು ಬನಸಿರಿಯ ಸೃಷ್ಟಿಯ ತಾಣ. ಕೃಷಿಕ ಜೀವದ ಜೀವಾಳ. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ವಿಶಿಷ್ಟತೆಯನ್ನುಲ್ಲಂಥದ್ದು. ಇಂದು ಭತ್ತದ ಉಗ್ರಾಣವಾಗಿ ರೂಪಿತಗೊಂಡಿದೆ. ಅಲ್ಲಿನ ಜನಪದರ ಉಸಿರಾಗಿರುವ ಕಾವೇರಿ ಮನೆ ದೇವರಾಗಿ ರಾರಾಜಿಸುತ್ತಿರುವಳು. ಇದಕ್ಕೆ ಕಾರಣೀಭೂತಳಿವಳೆ. ಅಲ್ಲಿ ಕಾವೇರಿ ಅನೇಕ ಗೊಂಚಲು ಅಥವಾ ಕವಲುಗಳಾಗಿ ಹರಿಯುತ್ತಿದ್ದಾಳೆ. ಅವುಗಳೆಂದರೆ ವೆಣ್ಣೂರು, ವೆಟ್ಟಾರು, ಕೊಡುಮುರುಟಿ, ಅರಸಲಾರು. ಜೊತೆಗೆ ಕಾವೇರಿ ನಾಮದಿಂದಲೇ ಮುನ್ನುಗ್ಗಿ ತಿರುವೈಯಾರು, ಈಶನ್ ಗುಡಿ, ಗಣಪತಿ ಅಗ್ರಹಾರ, ಗಭಿಸ್ಥಲಮ್, ತ್ಯಾಗ ಸಮುದ್ರಮ್, ಗಂಗಾಧರಪುರಂ, ಸ್ವಾಮಿಮಲೈಯನ್ನು ಮುಟ್ಟಿ ಇತಿಹಾಸ ಪ್ರಸಿದ್ಧವಾದ ಕ್ಷೇತ್ರಕ್ಕೆ ಆಗಮಿಸುವಳು. ಆ ಸ್ಥಳವನ್ನು ‘ಕುಂಭಕೋಣ’ ಎಂದೇ ಖ್ಯಾತಿ. ಅಲ್ಲಿ ಶೈವ, ವೈಷ್ಣವ ದೇವಸ್ಥಾನಗಳಿವೆ. ಆದರೆ ಬಹುಸಂಸ್ಕೃತಿಯ ಜನಪದರು ಹೋಗಿ ವಿಷ್ಣು, ಶಿವ ದೈವಗಳನ್ನು ಆರಾಧಿಸುವರು. ಅಲ್ಲಿ ಮಹಾಮುಖ ಸರೋವರವಿದ್ದು, ಗಾಂಭೀರ್ಯವನ್ನು ಪ್ರತಿನಿಧಿಸುತ್ತದೆ.

ಅಲ್ಲಿಂದ ಮುಂದೆ ಮಯೂರಂ, ತಿರುವಡೈ, ಮರತ್ತೂರು, ಗೋವಿಂದಪುರ, ಛಾಯಾವನಂ, ಪಲ್ಲವನಿಶಮ್ ಗೆ ಬರುವಳು. ಹೀಗೆ ನಿರಂತರವಾಗಿ ಹರಿಯುತ್ತಾ ಕಾವೇರಿಯು ಬಂಗಾಳ ಕೊಲ್ಲಿ ಎಂದು ಖ್ಯಾತಿ ಪಡೆದ ಕಡಲ ಕಿನಾರೆಯಲ್ಲಿರುವ ಪೂಂಪಟ್ಟಣವನ್ನು ತಲುಪುವಳು. ಒಟ್ಟಾರೆಯಾಗಿ ಕಾವೇರಿಯು ಹರಿದೆಡೆಯಲ್ಲೆಲ್ಲ ದೇವಸ್ಥಾನಗಳು, ಪುಣ್ಯಕ್ಷೇತ್ರಗಳು ಸ್ಥಾಪನೆಗೊಂಡಿವೆ. ಕೋಟ್ಯಾನುಕೋಟಿ ಜೀವರಾಶಿಗೆ ಆಸರೆಯಾಗಿ ನಿಂತಿದ್ದಾಳೆ. ಕಾವೇರಿಯು ಕೊಡಗಿನ ತಲಕಾವೇರಿಯಲ್ಲಿ ಜನ್ಮ ಪಡೆದು ಕನ್ನಡಿಗರ ಕಣ್ಮಣಿಯಾಗಿ ತಮಿಳುನಾಡಿನ ಮನೆಮಾತಾಗಿ ಮೇಲು-ಕೀಳು, ಉಚ್ಚ-ನೀಚ, ಜಾತಿ-ಭೇದ, ಬಡವ-ಬಲ್ಲಿದ, ಶ್ರೀಮಂತ-ರಾಜ ಎಂದು ತಾರತಮ್ಯ ಮಾಡದೆ ಎಲ್ಲ ನೋವು-ನಲಿವುಗಳನ್ನು ತನ್ನ ಒಡಲಿನಲ್ಲಿರಿಸಿಕೊಂಡು ಸರ್ವಂತರ್ಯಾಮಿಣಿಯಾಗಿ ಸುಮಾರು ಏಳುನೂರು ಅರವತ್ತೈದು ಕಿಲೋ ಮೀಟರ‍್ ಗಳಷ್ಟು ಸಾಗಿ, ಎಲ್ಲೂ ಗಾಂಭೀರ್ಯತೆಗೆ ಚ್ಯತಿ ಬರದ ಹಾಗೆ ಹರಿಯುತ್ತಾ ಪೂಂಪಟ್ಟಣದಲ್ಲಿಗೆ ಬಂದು ಬಂಗಾಳಕೊಲ್ಲಿಯಲ್ಲಿ ವಿಲೀನವಾಗುವಳು.