ಕನ್ನಡ ನಾಡು ನಿನ್ನೆ ಮೊನ್ನೆಯ ಪರಿಕಲ್ಪನೆ ಅಗಿರಬಹುದು. ಆದರೆ ಕಾವೇರಿ ನದಿ ದೈವದತ್ತವಾದುದು. ಇದು ತನ್ನ ಪಾತ್ರದಲ್ಲಿ ಅನೇಕ ಫಲವತ್ತಾದ ಅಂಶಗಳನ್ನು ಭೂಮಿಗೆ ತಂದು ಇಡೀ ಭೂ ಪ್ರದೇಶವೇ ಉತ್ಪತ್ತಿಯಾಗುವಲ್ಲಿ ತನ್ನನ್ನು ತಾನೇ ಒತ್ತೆ ಇಡುತ್ತದೆ. ಇದರಿಂದ ಜನರು, ಭೂ ಪ್ರದೇಶಗಳು, ಪ್ರಾಣಿ-ಪಕ್ಷಿಗಳು ಸುಖ ಜೀವನ ನಡೆಸಲು ನೆರವಾಗುತ್ತದೆ. ಕಾವೇರಿಯಿಂದ ಗೋದಾವರಿಯವರೆಗೆ ಹೆಣೆದುಕೊಂಡಿರುವ ಕನ್ನಡ ನಾಡಿನ ಬಗ್ಗೆ ಕವಿರಾಜ ಮಾರ್ಗದ ಕರ್ತೃ ಕ್ರಿ.ಶ. ೯ನೇ ಶತಮಾನದಲ್ಲಿಯೇ ಕಾವೇರಿ ಕುರಿತು ಅಂತರಾಳದಿಂದ ಹೊರ ಚೆಲ್ಲಿದ ಹಾಡು ಕೊಡಗಿನಲ್ಲಿಯೇ ನೆಲೆ ನಿಂತಿರುವ ಜನಪದರಿಗೆ ಅನ್ವಯಿಸುವುದು. “ಎಲ್ಲಿ ಭೂರಮೆ ದೇವ ಸನ್ನಿದಿ ಬಯಸಿ ಭಿಮ್ಮನೆ ಬಂದಳೊ” ಈ ಹಾಡು ಅವಿಸ್ಮರಣೀಯವಾಗಿ ಜನಪದರ ಕಣಕಣದಲ್ಲಿ ಮಿಳಿತವಾಗಿದೆ.

ಇವಳ ನಿರಂತರ ಹರಿಯುವಿಕೆಯಿಂದ ಗುಡಿ-ಗೋಪುರಗಳು ಜನ್ಮ ತಾಳಿವೆ. ಹಸಿರಿನ ಬನಸಿರಿಯ ಬಯಲುಗಳು, ತೋಪುಗಳು, ಹಸಿರಾಗಿರುವ ಕಣಿವೆಗಳು, ಉಯ್ಯಾಲೆ ಆಡುವ ವಿಶಾಲವಾದ ಪೈರಿನ ಗದ್ದೆಗಳು, ಇಡೀ ಕೊಡಗಿನ ಜನಪದರ ರಕ್ಷಣೆಯಾಗಿ ತಲೆ ಎತ್ತಿ ನಿಂತಿರುವ ಗಿರಿಶಿಖರ, ಬೆಟ್ಟ ಗುಡ್ಡಗಳು, ಅಲ್ಲಿನ ಜನಪದರಿಗೆ ಧೈರ್ಯ, ಸ್ಥೈರ್ಯ, ಸಾಹಸಕ್ಕೆ ಇಂಬು ನೀಡುತ್ತವೆ. ಅವರಿಗೆ ಪ್ರತಿ ಹಂತದಲ್ಲಿಯೂ ಸಾಮರ್ಥ್ಯ ಮತ್ತು ಸಂತೃಪ್ತಿ ಜೊತೆಗೆ ಧ್ಯೇಯೋದ್ದೇಶಗಳನ್ನು ಪೂರೈಸುವಂತೆ ಹುರಿದುಂಬಿಸುತ್ತದೆ.

ಇಂದು ಕೊಡಗಿನಾದ್ಯಂತ ಕೊಡವರು, ಒಕ್ಕಲಿಗರು, ಲಿಂಗಾಯಿತರು, ಮಲೆಯಾಳಿಗಳು, ತಮಿಳರು, ತುಳು, ಪಾಲೆ, ಯರವ, ಅರೇಭಾಷೆ ಗೌಡರು, ಆಚಾರಿಗಳು, ಬೆಸ್ತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ನೆಲೆಸಿದ್ದಾರೆ. ಆದುದರಿಂದ ವೈವಿಧ್ಯಮಯವಾದ ರೂಢಿಗಳು, ಸಂಪ್ರದಾಯಗಳು, ಪದ್ಧತಿಗಳು, ಊಟೋಪಚಾರ, ವೇಷಭೂಷಣ, ಸಾಹಿತ್ಯ, ಸಂಗೀತ, ಕಲೆ, ಭಾಷೆ ಅಸ್ತಿತ್ವದಲ್ಲಿವೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಒಂದು ರೀತಿಯಲ್ಲಿ ಕೊಡಗು ಬಹು ಸಂಸ್ಕೃತಿಗಳ ಬಿಡಾರ. ಬಹುರೂಪಿಗಳ ವಾಸ್ತವ್ಯ ಇರುವುದನ್ನು ಕಾಣಬಹುದಾಗಿದೆ. ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಚರ್ಚಿಸಿದರೆ ಮೂಲದ ಬಗ್ಗೆ ಕೆಲವು ವರ್ಗಗಳಲ್ಲಿ ಇನ್ನೂ ಒಮ್ಮತ, ಅಭಿಪ್ರಾಯವನ್ನು ಕಾಣದೆ ತೊಳಲಾಟಕ್ಕೆ ಎಡೆಮಾಡಿಕೊಟ್ಟಿದೆ ಎಂಬ ಅಂಶವನ್ನು ಕೆಳಗಿನ ವಿವರಣೆಯಿಂದ ತಿಳಿಯಬಹುದಾಗಿದೆ.

ಪ್ರಧಾನವಾಗಿ ಕೊಡಗಿನಲ್ಲಿ ಕೊಡವರು ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಆದರೆ ಇವರು ಮೂಲತಃವಾಗಿ ಇಲ್ಲಿಯವರೇ. ಇಲ್ಲಾ ಬೇರೆ ಭೂಭಾಗದಿಂದ ಬಂದವರೇ, ಹೀಗೆ ಚರ್ಚೆಗಳು ಮುಂದುವರೆಯುತ್ತಿವೆ. ಹೀಗಿದ್ದರೂ ಕೊಡವರನ್ನು ಮೂಲ ನಿವಾಸಿಗಳೆಂದು ಗುರುತಿಸಲಾಗಿದೆ. ಆದರೆ ನನ್ನ ತರ್ಕ ಕೊಡಗಿನಾದ್ಯಮತ ಬೀಡು ಬಿಟ್ಟಿರುವ ಇತರ ವರ್ಗಗಳ ಬಗ್ಗೆ ಆಳವಾದ ಅಧ್ಯಯನ ಅವಶ್ಯಕ. ಅವರೂ ಕೂಡ ಕೊಡಗಿನ ಮೂಲ ನಿವಾಸಿಗಳಲ್ಲ. ಒಟ್ಟಾರೆಯಾಗಿ ದ್ರಾವಿಡ ಪಂಗಡಗಳಿಗೆಲ್ಲ ಇದು ಅನ್ವಯಿಸುತ್ತದೆ ಎಂಬುದನ್ನು ಮರೆಯಬಾರದು. ಆದುದರಿಂದ ಇದರ ಬಗ್ಗೆ ತಲಸ್ಪರ್ಶಿ ಸಂಶೋಧನೆಗಳು ಅವಶ್ಯಕ. ಸಾಮಾನ್ಯವಾಗಿ ಭಾರತದಲ್ಲಿ ನೆಲೆ ನಿಂತಿರುವ ಎಲ್ಲಾ ಜನಾಂಗದ ಪರಿಸ್ಥಿತಿಯೂ ಇದೇ ಎನ್ನಬಹುದು. ಶತ-ಶತಮಾನಗಳಿಂದಲೂ ಕೊಡವರು ಕೊಡಗಿನಲ್ಲಿ ವಾಸ ಮಾಡುತ್ತಾ ಬಂದಿರುತ್ತಾರೆ.

ಕೊಡಗಿನಲ್ಲಿ ಆರು ತಿಂಗಳು ಯಥೇಚ್ಛವಾಗಿ ಮಳೆ ಬರುತ್ತದೆ. ಜೊತೆಗೆ ಫಲವತ್ತಾದ ಭೂಪ್ರದೇಶವನ್ನು ಹೊಂದಿದೆ. ಈ ಅಂಶಗಳಿಂದ ಕೊಡಗು ಕೃಷಿ ಪ್ರಧಾನವಾದ ಪ್ರದೇಶ. ಅಂದಿಗೂ ಇಂದಿಗೂ ಭೂ ಒಡೆತನ ಕೊಡವ ಹಾಗೂ ಗೌಡರಲ್ಲಿತ್ತು. ವ್ಯವಸಾಯವೇ ಇವರ ಮುಖ್ಯ ಕಸುಬಾಗಿತ್ತು. ಕಾಲಘಟ್ಟಗಳು ಉರುಳಿದಂತೆ ಇವರು ಕೂಡ ಬೇರೆ ಬೇರೆ ಕಸುಬುಗಳನ್ನು ಮಾಡುತ್ತಿದ್ದಾರೆ. ಬೇರೆ ಜನವರ್ಗದವರು ಕೂಡ ಭೂ ಒಡೆಯರಾಗಿರುತ್ತಾರೆ.

ಇಲ್ಲಿನ ಪ್ರಧಾನ ಬೆಳೆ ಕಾಫಿ. ಜೊತೆಗೆ ಕಿತ್ತಳೆ, ಯಾಲಕ್ಕಿ, ಕರಿಮೆಣಸು, ಒಂದು ರೀತಿಯಲ್ಲಿ ಕಮರ್ಷಿಯಲ್ ಬೆಳೆಗಳಾಗಿರುತ್ತವೆ. ಸಮತಟ್ಟಾದ ಭೂಭಾಗದಲ್ಲಿ ವಿಶಾಲವಾದ ಗದ್ದೆಗಳ ಬಯಲು, ಕೆಲವೆಡೆ ರಬ್ಬರ‍್ ತೋಟಗಳು ಇವೆ. ಅಲ್ಲದೆ ಪಶ್ಚಿಮ ಘಟ್ಟಗಳಲ್ಲಿ ಅಡಕೆ, ತೆಂಗು, ಗೇರು ಇನ್ನೂ ಅನೇಕ ಬೆಳೆಗಳನ್ನು ಜನಪದರು ಬೆಳೆಯುತ್ತಾರೆ. ಸಾವಿರಾರು ವರ್ಷಗಳ ಹಿಂದೆ ಕೊಡಗಿನಲ್ಲಿ ಅವಿಭಕ್ತ ಕುಟುಂಬಗಳಿದ್ದವರು. ಅಂತಹ ಕುಟುಂಬದವರೆಲ್ಲರೂ ಕೂಡಿಕೊಂಡು ವ್ಯವಸಾಯ ಮಡುತ್ತಿದ್ದರು. ಕ್ರಮೇಣ ಅಂತಹ ಕುಟುಂಬಗಳು ಕಂಪ್ಲೀಟ್ ಆಗಿ ಅಳಿದು ಸಣ್ಣ ಸಣ್ಣ ಕುಟುಂಬಗಳಾಗಿವೆ. ಅದಕ್ಕೆ ಅವರವರೇ ಜಮೀನಿನ ಒಡೆಯರಾಗಿದ್ದಾರೆ. ಅವರ ಭೂಮಿಯಿಂದ ಬಂದ ಉತ್ಪತ್ತಿಯಿಂದ ಬದುಕನ್ನು ನಡೆಸುವರು. ಹೀಗೆ ಸಣ್ಣ ಸಣ್ಣ ಭೂ ಹಿಡುವಳಿದಾರರಿದ್ದೂ, ಭೂಮಿಯು ಕೂಡ ಮಿತವಾಗಿ ಹಂಚಿ ಹೋಗಿದೆ. ಇದರಿಂದ ಜೀವನೋಪಾಯಕ್ಕೆ ಬೇರೆ ಬೇರೆ ರೀತಿಯಾದ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಬದಲಾವಣೆಯನ್ನು ಕೊಡಗಿನಾದ್ಯಂತ ಕಾಣಬಹುದಾಗಿದೆ.

ಇಲ್ಲಿ ನೆಲದ ಶಕ್ತಿಯೋ ಏನೋ ಪರಾವಲಂಬನೆಯನ್ನು ಮೆಲುಕು ಹಾಕುವವರಲ್ಲ. ಇಲ್ಲಿನ ಜನಪದರಿಗೆ ದೇಶಭಕ್ತಿ ಅಪಾರ. ಇದಕ್ಕೆ ಸ್ಪೂರ್ತಿ ಎಂದರೆ ಹಿಂದಿನ ರಾಜಭಕ್ತಿ ಇರಬೇಕೆನ್ನಿಸುತ್ತದೆ. ಆದುದರಿಂದ ಸ್ವ ಪ್ರೇರಣೆಯಿಂದ ದೇಶ ಕಾಯುವ, ರಕ್ಷಿಸುವಲ್ಲಿ ಸದಾ ಮುಂದು. ದೇಶದ ರಕ್ಷಣಾ ಪಡೆಗೆ ಕೊಡಗಿನ ಕೊಡುಗೆ ಅವಿಸ್ಮರಣೀಯ, ಅದ್ವಿತೀಯ. ಅಲ್ಲಿ ಇಡೀ ದೇಶವೇ ಹೆಮ್ಮೆ ಪಡುವ ಆದರ್ಶತೆ ಅಸ್ತಿತ್ವದಲ್ಲಿದೆ. ಪ್ರತಿಯೊಂದು ಮನೆಯಿಂದ ಪ್ರತಿಯೋರ್ವ ಸೈನ್ಯಕ್ಕೆ ಸೇರುವರು. ಈ ಅಂಶಗಳ ಹಿಂದೆ ರಾಷ್ಟ್ರಭಕ್ತಿ, ಶಿಸ್ತುಪಾಲನೆ, ನಿಸ್ವಾರ್ಥ ಸೇವೆ, ಸಾಹಸ ಇನ್ನೂ ಮುಂತಾದ ಅಂಶಗಳ ಉಗ್ರಾಣ ಕೊಡಗು. ಒಟ್ಟಾರೆಯಾಗಿ ಭಾರತಕ್ಕೆ ಕೀರ್ತಿ ತರುವಂತಹ ಆದರ್ಶತೆ ಕೊಡಗಿನ ಜನಪದರಲ್ಲಿ ನೆಲೆಗೊಂಡಿದೆ.

ಸಾಂಸ್ಕೃತಿಕ ಬದುಕಿನಲ್ಲಿ ಇಂದು ಕಣ್ಮನ ಸೆಳೆಯುವ ಸಾಂಪ್ರದಾಯಬದ್ಧವಾದ ಹಾಡುಗಳು, ಹಬ್ಬ-ಹರಿದಿನಗಳು, ಕುಣಿತಗಳು, ವೇಷಭೂಷಣಗಳು ಇಂದಿಗೂ ಚಾಲ್ತಿಯಲ್ಲಿವೆ. ಸಾಂಸ್ಕೃತಿಕ ಅಕ್ಷಯ ಪಾತ್ರೆ ಎಂದರೆ ತಪ್ಪಾಗಲಾರದೇನೋ? ಕೊಡಗಿನಾದ್ಯಂತ ಕೆಲವು ಆಚರಣೆಗಳು ಒಂದೊಂದು ಪಂಗಡಕ್ಕೆ ವಿಶಿಷ್ಟವಾದರೂ ಸಹ ಅಥವಾ ಒಂದು ಕೋಮಿನವರು ಇನ್ನೊಂದು ಕೋಮಿನವರ ಜತೆಗೂಡಿ ಆಚರಿಸದೇ ಇದ್ದರೂ ಆಯಾಯ ರೀತಿಗನುಸಾರವಾಗಿಯೇ ಮಾಡುವರು. ಆದರೆ ಒಂದೇ ಜಿಲ್ಲೆಯಲ್ಲಿರುವ ಹಬ್ಬ-ಹರಿದಿನಗಳು ಕೊಡಗಿನ ಬೇರೆ ಬೇರೆ ಸ್ಥಳಗಳಲ್ಲೂ ಇವೆ.

ಆಧುನಿಕತೆ, ಜಾಗತೀಕರನದ ಪ್ರಸರಣ ಕೊಡಗಿನ ಹಳ್ಳಿಗಳಲ್ಲಿಯೂ ಬೇರು ಬಿಟ್ಟಿದೆ. ಆದುದರಿಂದ ನಗರದ ಸುಖ, ಸಂತೋಷ, ಸೌಕರ್ಯಗಳು, ಆಡಂಬರಗಳು, ಡಾಂಬಿಕತೆಗೆ ಹಳ್ಳಿಗಾಡಿನ ಜನಪದರು ಆಕರ್ಷಿತರಾಗಿದ್ದಾರೆ. ಹೊಸತನದ ಅಂಶಗಳತ್ತ ಮಾರು ಹೋಗುತ್ತಿದ್ದಾರೆ. ಮೂಲವಾದ ಮನೆತನಗಳು ಗೌಣವಾಗಿವೆ. ಪ್ರಕೃತಿಯ ಸೌಂದರ್ಯಕ್ಕೆ ಕೊಡಲಿಪೆಟ್ಟು ಬಿದ್ದು, ಹಣದಾಸೆಗೆ ಬಲಿಯಾಗಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಆಳವಾದ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಒಟ್ಟಿನಲ್ಲಿ ಅನ್ಯ ಭಾಷೆ, ಅನ್ಯ ಜನರ, ಪರ ಸಂಸ್ಕೃತಿ, ನಾಗರೀಕತೆಯ ನಾಣ್ಯ ಠೇಂಕಾರವೆಸಗುತ್ತಿದೆ. ಸದಾ ನಿರಂತರವಾಗಿ ಹರಿಯುತ್ತಿರುವ ಕಾವೇರಿಯ ಕೊನರು ಹಸಿರು ಬನಸಿರಿಯೊಂದಿಗೆ ಜನಪದರು ಸ್ಮೃತಿ ಪಟಲಗಳೊಂದಿಗೆ ಇಂದಿಗೂ ರಾರಾಜಿಸುತ್ತಿರುವಳು.