ಭಗವಂತನ ಸೃಷ್ಟಿ ಈ ವಿಶ್ವ. ನಿಸರ್ಗವೂ ಅದರಲ್ಲಿ ಒಂದು. ಇದರೊಳಗೆ ಸರ್ವಸ್ವವೂ ಮಿಳಿತವಾಗಿದೆ. ಈ ಪಾತಾಳದಲ್ಲಿ ನೀರು ಹುದುಗಿಕೊಂಡಿದೆ. ಆದುದರಿಂದ ಅದರ ಆಳಕ್ಕೆ ಇಳಿದು ಸೆಣಸುವುದು ಕಷ್ಟಕರವಾದರೂ ಸಾಧ್ಯವೆಂಬುದು ನನ್ನ ಅಭಿಪ್ರಾಯ. ಮನುಷ್ಯ ಪ್ರಾಣಿಗೆ ನಿಸರ್ಗವೇ ಪ್ರೇರಣೆ ವಸ್ತು. ಅಂದರೆ ನಿಸರ್ಗವೂ ಅತ್ಯಂತ ಸಂತತ ಹಾಗೂ ಪ್ರಾಚ್ಯವೆಂಬುದು ಸ್ಪಷ್ಟ. ಆದರೆ ಕಾವ್ಯದ ಸೃಷ್ಟಿಗೆ ಕವಿ ಮೂಲ. ಆದುದರಿಂದ ಕನ್ನಡ ಭಾಷೆ ಸೃಷ್ಟಿಗೆ, ವಿಕಾಸಕ್ಕೆ, ರೂಪಾಂತರಕ್ಕೆ, ನಿತ್ಯ ನಿರಂತತೆಗೆ, ಪರಿವರ್ತನೆಗೆ, ಮಾನವನೇ ಕಾರಣೀಭೂತನಾದರೂ, ಪ್ರೇರಣೆಯಾಗಿ ನಿಸರ್ಗ ಅವನೆದುರಿಗೆ ತನ್ನೆಲ್ಲ ರೆಂಬೆ-ಕೊಂಬೆಗಳನ್ನು ಹಾಸಿ ಚೆಲ್ಲಿರುತ್ತದೆ. ಸೂಕ್ಷ್ಮ ದೃಷ್ಟಿಯಿಂದ ತಡಕಾಡಿದರೆ ಕನ್ನಡದ ಬೇರು ಮತ್ತು ನದಿಯ ಉಸಿರು ಏಕಕಾಲದಲ್ಲಿ ಬೆರೆತು ಬಂದಿರುವುದಿಲ್ಲ. ಆರಂಭದಲ್ಲಿ ನೀರು ಅನಂತರದಲ್ಲಿ ಕನ್ನಡ ನುಡಿಗಟ್ಟು ಬಂದಿರುತ್ತದೆ. ಕೊಡಗಿನ ಬ್ರಹ್ಮಗಿರಿ ಬೆಟ್ಟದ ಮಡಿಲಿನಲ್ಲಿ ಉದ್ಭವಗೊಂಡ ಕಾವೇರಿ ನದಿ ಅಲ್ಲಿಯೇ ನೆಲೆ ನಿಲ್ಲಲಿಲ್ಲ. ಇವಳು ಪರ್ವತ, ಶಿಖರ, ಬೆಟ್ಟ, ಗುಡ್ಡ, ತಗ್ಗು, ಹಳ್ಳಕೊಳ್ಳ, ಸಮತಟ್ಟಾದ ಸ್ಥಳ ಹೀಗೆ ಅನೇಕ ಕಡೆಗಳಲ್ಲೆಲ್ಲ ಹರಿದು ತಿರುಗಿ ಕರ್ನಾಟಕದಾದ್ಯಂತ ಮನೆ ಮಾತಾಗಿ ಜನಪದರೊಳಗೆ ಬೆರೆತಿರುವಳು. ಇಲ್ಲಿಯೂ ನೆಲೆ ನಿಲ್ಲದೆ ಮುಂದುವರೆದು ತಮಿಳುನಾಡಿನ ಮಣ್ಣಿನಲ್ಲಿ ಮೈಮರೆತು ಬೆರೆತು ಅನಂತರ ಬಂಗಾಳ ಕೊಲ್ಲಿಯಲ್ಲಿ ವಿಲೀನವಾಗಿರುತ್ತಾಳೆ.

ಇವಳು ನಿತ್ಯ ನಿರಂತರವಾಗಿ ಹರಿದೆಡೆಯಲ್ಲೆಲ್ಲ ತನ್ನದೇ ಆದ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಧಾರ್ಮಿಕತೆ, ಆಚರಣೆ, ಪದ್ಧತಿ, ರೂಢಿಗಳು, ಸಂಪ್ರದಾಯ ಉಡುಗೆ-ತೊಡುಗೆ, ಊಟೋಪಚಾರ, ಹಬ್ಬ-ಹರಿದಿನ, ಉತ್ಸವಗಳು, ಸಂಪತ್ತು, ವ್ಯವಸಾಯ, ದೈವಗಳು, ಬೆಳೆಗಳು, ಇಂದಿಗೂ ಪ್ರತಿರೂಪವಾಗಿ ನಮ್ಮೆದುರಿಗೆ ಉಳಿದು ಬೆಳೆದುಕೊಂಡು ಬಂದಿರುತ್ತವೆ. ಹಾಗೆಯೇ ಮುಂದುವರೆಯುತ್ತಿವೆ. ಈ ಎಲ್ಲವುಗಳಿಗೆ ಕಾವೇರಿ ನದಿಯೇ ಕಾರಣ. ಇವಳು ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಕನ್ನಡದ ಹುಟ್ಟು, ನಾಡು-ನುಡಿ, ಜನಪದರಲ್ಲಿ ಅನನ್ಯತೆಯನ್ನು ಹುಟ್ಟು ಹಾಕಿರುವಳು. ಆದುದರಿಂದ ಇವಳು ಹರಿದೆಡೆಯಲ್ಲೆಲ್ಲ ಕನ್ನಡದ ಅಭಿಮಾನ, ಇಂದಿಗೂ ಜನಪದರ ಶರೀರದಲ್ಲಿ ರಕ್ತವಾಗಿ ಅವರ ನರನಾಡಿಗಳಲ್ಲಿ ಹರಿಯುತ್ತಿದೆ ಎಂದರೆ ತಪ್ಪಾಗಲಾರದೇನೋ.

ಜನಪದರಿಗೆ ತಮ್ಮದೇ ಆದ ಮೌಲಿಕತೆ ಇದೆ. ಇವರ ಆತ್ಮದಲ್ಲಿರುವ ಸ್ಮೃತಿಗಳು ರಕ್ತದಲ್ಲಿ ಹರಿದಾಡುತ್ತಿರುತ್ತವೆ. ಅವರಲ್ಲಿ ಕಲ್ಮಷವಿಲ್ಲದ ಭಾವನೆ ಇದೆ. ವೈರುಧ್ಯಗಳಿಗೆ ಎಡೆಯಿಲ್ಲ. ನಿತ್ಯದ ಬದುಕಿನಲ್ಲಿ ಅರಿವು ಇಲ್ಲದೆ ನೋವು, ನಲಿವು, ತೊಳಲಾಟ, ಜಂಜಾಟ, ಪರದಾಟ, ತಾಕಲಾಟ, ಬಡಿದಾಟ, ಆಹಾರ ಬೇಟೆ, ರಕ್ಷಣೆ, ಭಕ್ಷಣೆ ಮತ್ತು ಹೊಣೆ, ನೆಲೆ, ಬೆತ್ತಲೆ ಮೈ ಮುಚ್ಚಿಕೊಳ್ಳುವ ತವಕ, ಅವಸರ ಆತ್ಮಸ್ಥೈರ್ಯ, ನಿಷ್ಕಪಟ ಹೃದಯ ಹಾಗೂ ಕ್ರೂರ ಧ್ವನಿಗಳು ಕಂಡುಬರುತ್ತವೆ. ಇಂತಹ ಸೂಕ್ಷ್ಮ ಅಂಶಗಳು ಬೇರಾವುದೇ ಕ್ಷೇತ್ರದಲ್ಲಿ ಸಿಗುವುದು ಕಷ್ಟ. ಆದರೆ ಶತ-ಶತಮಾನಗಳಿಂದ ಇಂದಿನ ಜಾಗತೀಕರಣದ ಭರಾಟೆ, ತೀವ್ರತೆ ತಿಕ್ಕಾಡುತ್ತಿದೆ. ಹೀಗಿದ್ದರೂ ನಿಸರ್ಗದ ನಿಗೂಢತೆಯಲ್ಲಿ ಅದೆಷ್ಟೋ ನದಿಗಳು ಗೋಚರವಾಗದೆ, ಜನರಿಂದ ಸ್ವೀಕೃತವಾಗದೇ ಮನುಷ್ಯರಿಂದ ಅತೀ ದೂರದಲ್ಲಿಯೇ ಉಳಿದಿರುತ್ತವೆ.

ಸಾಮಾನ್ಯವಾಗಿ ನದಿಗಳು ಸತ್ಯದ ನಿಧಿಗಳು. ಘಟಿಸಿದ ಘಟನೆಗಳಿಗೆ ಪ್ರತಿರೂಪವಾಗಿ, ಸಂಕೇತವಾಗಿ ಇಂದಿಗೂ ಹರಿಯುತ್ತಿವೆ. ಇವು ನಮ್ಮ ಹಿಂದಿನ, ಮಧ್ಯೆ ಘಟಿಸಿ ಹೋದ ಪ್ರಸ್ತುತ ದಿವಸಗಳಲ್ಲಿ ಘಟಿಸುತ್ತಿರುವ ಘಟನೆಗಳನ್ನು ಸವಿಯುತ್ತಿವೆ. ಕೆಲವು ಸೂಕ್ಷ್ಮ ವಿಷಯಗಳನ್ನು ತಮ್ಮ ಪಾತಾಳದಲ್ಲಿ ಅಡಗಿಸಿಕೊಂಡಿವೆ. ಹೀಗಿರುವಾಗ ಕೆಲವು ಶೋಧಿಸುವ ಕೆಲಸ ನಡೆದಿದೆ. ಇನ್ನೂ ಕೆಲವು ಮುಗಿದಿವೆ. ಕೆಲವು ನಡೆಯುತ್ತಲಿವೆ. ಆದರೆ ಇನ್ನೂ ಆವಿಷ್ಕಾರಣೆಯ ಶೋಧ ನಡೆಯಬೇಕಾಗಿದೆ. ನದಿಗಳು ನಿಜ ಬದುಕಿನ, ನಿರಂತತೆಯ ಸೇತುವೆಗಳಾಗಿವೆ. ಇವು ಕ್ರಿಯೆ, ಪ್ರಕ್ರಿಯೆ, ಪ್ರತಿಕ್ರಿಯೆಗಳನ್ನು ನೋಡುತ್ತಾ, ತೆವಳುತ್ತಾ, ಹೆಣೆಯುತ್ತಾ ಸಾಕ್ಷಿಗಳಾಗಿ ಸಾಗುತ್ತಿವೆ. ಜನಪದರ ಸುತ್ತಮುತ್ತ ಸುರುಳಿಯಂತೆ ಸುತ್ತಿಕೊಂಡಿವೆ. ಅಲ್ಲದೆ ಜನಪದರೊಂದಿಗೆ ಬೆರೆಯುತ್ತಿದ್ದು, ಒಳ್ಳೆ ಮಾರ್ಗದತ್ತ ಅವರ ಗಮನ ಹರಿಯುವುದಕ್ಕೆ ತೊಡಗಿಸಿಕೊಳ್ಳುತ್ತಿವೆ ಎಂಬುದು ಸ್ಪಷ್ಟ.

ಶತ ಶತಮಾನಗಳಿಂದಲೂ ಕೊಡಗಿನಲ್ಲಿ ನೆಲೆನಿಂತ ಜನಪದರು ಕಾವೇರಿ ಕುರಿತು ಅನೇಕ ಕಥೆಗಳನ್ನು ಹೇಳುವರು. ಇಂಥ ಕತೆಗಳು ಜನರಿಂದ ಜನರಿಗೆ, ಬಾಯಿಂದ ಬಾಯಿಗೆ, ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬಂದಿರುತ್ತವೆ. ಕತೆ ಹೇಳುವವ ಒಂದೊಂದು ನೆಲೆಯಲ್ಲಿ ತನ್ನದೇ ವಾಕ್ ಚಾತುರ್ಯದಿಂದ ವಿಶ್ಲೇಷಿಸುತ್ತಾ ಹೋಗುತ್ತಾನೆ. ಆದರೆ ಆ ಕತೆಯ ಮೂಲ ದೃಷ್ಟಿ ಒಂದೇ ಆಗಿರುತ್ತದೆ.ಆದುದರಿಂದ ಕಾವೇರಿ ನದಿ ದೈವ ಮತ್ತು ಮನುಷ್ಯ ಸಂಬಂಧದ ಕೊಂಡಿಯಾಗಿ ಕತೆಗಳು, ಐತಿಹ್ಯಗಳು, ಪುರಾಣಗಳು, ಆಚಾರ, ವಿಚಾರಗಳು, ಭಾಷೆ, ಹಬ್ಬ, ಉತ್ಸವ, ಕಲೆಗಳು ನಮ್ಮೆದುರಿಗೆ ಇರುವುದನ್ನು ಅರಿಯಬಹುದು.

ಯಾವುದೇ ಭಾಷೆಯನ್ನು ಆಡುವ ಜನರಲ್ಲಿ ಸಾಮಾನ್ಯವಾಗಿ ಕತೆ, ಗೀತೆ, ಹಾಡುಗಳ ಸಂಗ್ರಹವನ್ನು ಕಾಣಬಹುದು. ಅದರಲ್ಲಿಯೇ ಬೇರೆ ಬೇರೆ ವೈರುಧ್ಯ ಹಾಗೂ ಗುಣದ ಕೊರತೆ ಇದ್ದರೂ, ಅದರೊಳಗೆ ನಮಗೆ ಕಾಣದಂತೆ ಸಾಹಿತ್ಯದ ಸತ್ವವಿರುತ್ತದೆ. ಇದು ನಾಲಿಗೆಯಲ್ಲಿ ಒಳಲಾಡುತ್ತಿರುತ್ತದೆ. ಶಿಷ್ಟದಲ್ಲಿ ಇರುವುದಿಲ್ಲ. ಆದ್ದರಿಂದ ಕನ್ನಡದಲ್ಲಿ ಹಿಂದೆ ಜನಪದ ಸಾಹಿತ್ಯವಿರಬಹುದಾಗಿದೆ. ಇದಕ್ಕೆ ನಮ್ಮಲ್ಲಿ ಆಧಾರಗಳಿರುತ್ತವೆ. ಆದರೆ ಕನ್ನಡ ಸಾಹಿತ್ಯ ಅಥವಾ ಕನ್ನಡದ ಆರಂಭದ ಬಗ್ಗೆ ಚರ್ಚಿಸುವಾಗ ಜನಪದ ಸಾಹಿತ್ಯವನ್ನು ಪರಿಗಣಿಸುವುದಿಲ್ಲ. ಅಲ್ಲಿ ಶಿಷ್ಟ ಗ್ರಂಥಸ್ಥವಾದ ಸಾಹಿತ್ಯವನ್ನು ನೋಡುತ್ತೇವೆ. ಆದುದರಿಂದ ಕನ್ನಡದ ಜೀವ ಕಾವೇರಿ ನದಿಯ ದೇಹದೊಳಗೆ ಮಿಳಿತಗೊಂಡು ಬಂಗಾಳ ಕೊಲ್ಲಿಗೆ ಸೇರಿಕೊಂಡಿದೆ. ಇಲ್ಲಿ ಕಾವೇರಿ ನದಿಯ ಪ್ರಾಚೀನತೆ ಬಗ್ಗೆ ತರ್ಕಿಸುವುದು ಅಷ್ಟು ಸಮಂಜಸವಲ್ಲ.

ಕನ್ನಡದ ಸೊಬಗು ತುಂಬಾ ಪ್ರಾಚೀನ. ಇದರ ಪಾತಳಿಯನ್ನು ಅರಿಯಬೇಕಾದರೆ, ಭಾರತೀಯ ಸಾಹಿತ್ಯ ಚರಿತ್ರೆಯ ಪುಟಗಳನ್ನು ತಡಕಬೇಕು. ಆಗ ಇದರ ಜನ್ಮ ಬೆಳೆದು ಬಂದ ಹಾದಿ, ರೂಪಾಂತರ, ಶೈಲಿ ಮತ್ತು ಮೌಲಿಕತೆ ತಿಳಿಯುತ್ತದೆ. ಇದು ಆರಂಭದಿಂದಲೂ ಭಾರತದಲ್ಲಿಯೇ ಉಸಿರಾಡುತ್ತಿರುವ ಬೇರೆ ಬೇರೆ ಭಾಷೆ, ಸಂಸ್ಕೃತಿ, ಆಚರಣೆಗಳು, ಪದ್ಧತಿ ಇನ್ನೂ ಅನೇಕ ಅಂಶಗಳ ಪ್ರಭಾವಗಲಿಗೆ ಮಣಿದಿಲ್ಲ. ಅಲ್ಲದೆ ತನ್ನ ಮೌಲ್ಯತೆಯನ್ನು ಕಳೆದುಕೊಂಡಿಲ್ಲ. ಇದು ದೇಶೀಯತೆಯಲ್ಲಿ ಪ್ರಾದೇಶಿಕವಾಗಿ ಸಮನ್ವಯವನ್ನು ತೂಗಿಸಿಕೊಂಡು ಬರುತ್ತಿದೆ.

ಕರ್ನಾಟಕದಲ್ಲಿ ಸುಮಾರು ನಾಲ್ಕು ಕೋಟಿಗೂ ಹೆಚ್ಚು ಕನ್ನಡಿಗರು ಬದುಕನ್ನು ಸವೆಸುತ್ತಿದ್ದಾರೆ. ಇವರ ಮನೆ ಮಾತು ಕನ್ನಡ. ವ್ಯವಹಾರಿಕ ಭಾಷೆ ಕನ್ನಡ. ಉಸಿರಾಡುತ್ತಿರುವುದು ಕನ್ನಡ ನೆಲದಲ್ಲಿ. ಇವರ ದೇಹ ಕನ್ನಡದಲ್ಲಿ ಮಿಳಿತು, ಬೆರೆತು ತಮ್ಮದೇ ಆರ್ದ್ರತೆಯನ್ನು ಮೈ ಇಳಿಸಿಕೊಂಡಿವೆ. ಇಷ್ಟಾದರೂ ಕನ್ನಡ ತುಂಬಾ ಪ್ರಾಚೀನದ್ದೆ, ಹಿಂದಿನದೇ ಅಥವಾ ಇವತ್ತಿನದೇ ಎಂಬ ಪ್ರಶ್ನೆಗಳು ಉದ್ಭವಿಸುವುದು ಸಹಜ. ಇದು ಪ್ರಾಚೀನವೆಂಬುದಕ್ಕೆ ಕೆಲವು ಆಧಾರಗಳು ನಮ್ಮಲ್ಲಿವೆ. ಹೀಗಿದ್ದರೂ ಅಂಥವು ಕಡಿಮೆ ಪ್ರಮಾಣದಲ್ಲಿವೆ. ನಮಗೆ ದೊರೆತಿರುವ ಆಧಾರಗಳು, ಉಲ್ಲೇಖಗಳು, ಐತಿಹ್ಯಗಳ ಪ್ರಕಾರ ಇದರ ಪೂರ್ವ ಇತಿಹಾಸ ಸುಮಾರು ಎರಡು ಸಾವಿರ ವರ್ಷಗಳಿಗಿಂತ ಹಿಂದಿನದು ಎಂದು ಕನ್ನಡದ ಪಾಮರರ ಅಭಿಪ್ರಾಯ. ದಿನಗಳು ಕ್ಷೀಣಿಸಿ, ತಿಂಗಳುಗಳು ಸವೆದು, ವರ್ಷಗಳು ಮುಳುಗಿ ಎದ್ದು, ಶತಶತಮಾನಗಳು ಬೆಂದು ಬಸವಳಿದು ಹೋಗಿವೆ. ಇದಕ್ಕೆ ಇಂದಿಗೂ ಕನ್ನಡಿಯಂತೆ ಜನರಿಂದ ಜನರಿಗೆ ಮೌಖಿಕವಾಗಿ ಬಂದಿರುವ ಕಥೆಗಳು, ಪುರಾಣಗಳೇ ಕುರುಹುಗಳಾಗಿ ಸಾಗುತ್ತಿವೆ. ಕನ್ನಡ ಕಾವೇರಿ ನೀರಿನಷ್ಟು ಪ್ರಾಚ್ಯವಲ್ಲವೆನ್ನಬಹುದು.

ಕನ್ನಡ ಆಡು ಮಾತಾಗಿ ಬಳಕೆಗೆ ಬಂದದ್ದು, ಮನುಷ್ಯ ಬುದ್ಧಿವಂತನಾದ ಮೇಲೆಯೇ. ಆದಿ ಮನುಷ್ಯನಿಗೆ ಅದರ ಪ್ರಜ್ಞೆ ಇರಲಿಲ್ಲ. ಸಾಂಕೇತಿಕವಾಗಿ ತನ್ನ ಬೇಕು-ಬೇಡಗಳನ್ನು ವ್ಯವಹರಿಸಿಕೊಳ್ಳುತ್ತಿದ್ದ. ಆದರೆ ನಾಗರಿಕನಾದಂತೆ, ಭಾಷೆಗಳೂ ಅವನ ಬೆನ್ನ ಹಿಂದೆಯೇ ಹುಟ್ಟಿಕೊಳ್ಳುತ್ತಾ ಬಂದವುಗಳಾಗಿರುತ್ತವೆ. ಅನೇಕ ಕಾಲಘಟ್ಟಗಳ ಆವರ್ತನೆಯೇ ಭಾಷೆಯ ಬೆಳವಣಿಗೆ ಮತ್ತು ರೂಪಾಂತರಗಳಿಗೆ ಕಾರಣವಾಗಿರುತ್ತದೆ. ಹೀಗೆ ಭಾಷೆಗಳು ಆಯಾಯ ಭೌಗೋಳಿಕ ಆಧಾರಗಳಿಗನುಗುಣವಾಗಿ ಅಸ್ತಿತ್ವಕ್ಕೆ ಬಂದಿರುತ್ತವೆ. ಕನ್ನಡದ ಹೊಳವುವನ್ನು ಕನ್ನಡ ನೆಲದಲ್ಲಿ ಆವಿಷ್ಕರಣೆ ಮಾಡಿದವರನು ಆರಂಭದಲ್ಲಿ ಟಾಲೆಮಿ. ಇವನೊಬ್ಬ ಗ್ರೀಕ್ ಭೂಗೋಳ ತಜ್ಞ. ಭಾರತಕ್ಕೆ ಕ್ರಿ.ಶ. ಆರಂಭದಲ್ಲಿಯೇ ಕನ್ನಡದ ಇರುವಿಕೆಯನ್ನು ಕಂಡುಹಿಡಿದವನು. ಅದರಲ್ಲೂ ಉತ್ತರ ಕರ್ನಾಟಕದಲ್ಲಿರುವ ಬಾದಾಮಿ, ಇಂಡಿ, ಕಲಕೇರಿ, ಮುದಗಲ್ಲು, ಇನ್ನೂ ಅನೇಕ ಊರ ಹೆಸರುಗಳನ್ನು ಪತ್ತೆ ಮಾಡಿರುವನು. ‘ಪುನ್ನಾಟ’ ಪದವು ಒಂದು ದೇಶ ವಾಚಕವಾದ ಕನ್ನಡ ಪದ. ಈ ಪದವನ್ನು ‘ಪೌನ್ನಾಟ’ಎಂದು ಬಳಕೆ ಮಾಡಿರುತ್ತಾನೆ. ಕ್ರಿ.ಶ. ೨೦೦ ರಲ್ಲಿ ಕನ್ನಡದ ಇರುವ ಅಂಶಗಳ ಬಗ್ಗೆ ಆಧಾರವನ್ನು ಗಮನಿಸಬಹುದಾಗಿದೆ. ಹಾಲರಾಜ ಬರೆದ ‘ಗಾಥಾಸಪ್ತಸತಿ’ ಇದೊಂದು ಪ್ರಾಕೃತ ಪದ್ಯ ಸಂಕಲನ. ಇದರಲ್ಲಿ ಕನ್ನಡ ಶಬ್ದಗಳು ಸಂಕಲನದುದ್ದಕ್ಕೂ ಕಂಡುಬರುತ್ತದೆಂಬುದು ವಿದ್ವಾಂಸರ ಅನಿಸಿಕೆಯಾಗಿದೆ.

ಕನ್ನಡ ತುಂಬಾ ಪ್ರಾಚೀನವೆಂಬುದಕ್ಕೆ ಅನೇಕ ಗ್ರಂಥಗಳು, ಮಹಾ ಕಾವ್ಯಗಳು, ವ್ಯಾಕರಣಗಳೇ ಸಾಕ್ಷಿ. ವ್ಯಾಸನು ರಚಿಸಿದ ಮಹಾಭಾರತ ಮತ್ತು ಪಾಣಿನಿಯ ವ್ಯಾಕರಣ ಗ್ರಂಥಗಳಲ್ಲಿ ‘ಕರ್ನಾಟ’ಹಾಗೂ ‘ಕುಂತಲ’ದೇಶಿ ವಾಚಕಗಳ ಬಳಕೆ ಕಂಡುಬರುತ್ತದೆ. ಉದಾಹರಣೆಗೆ ಸಂಸ್ಕೃತ ಪದ. ಕನ್ನಡದಲ್ಲಿ ಕಪ್ಪು ನೆಲದ ನಾಡು. ಕಮ್ಮಿ ತುನಾಡು ಕಂಪುಳ್ಳ ದೇಸ. ಮುಂದುವರೆದಂತೆ ‘ಕರುನಾಡು’, ‘ಕರ್ನಾಡು’ ಪದಗಳು ದೊಡ್ಡ ನಾಡು ಅಥವಾ ಎತ್ತರದ ಪ್ರದೇಶ ಎಂದು ಕನ್ನಡದಲ್ಲಿ ಅರ್ಥ ಕೊಡುತ್ತವೆ. ಇಲ್ಲಿ ಹೇಳಲಾಗಿರುವ ಪದಗಳ ಬಳಕೆಗಳನ್ನು ಸೂಕ್ಷ್ಮವಾಗಿ ತುಲನೆ ಮಾಢಿದಾಗ ಅವುಗಳ ಮೂಲ ಕನ್ನಡವಾಗಿರುತ್ತದೆ. ಕನ್ನಡ ಪದಗಳ ಮೇಲೆ ಪೂರ್ಣ ಪ್ರಮಾಣದ ಸಂಸ್ಕೃತ ಪ್ರಭಾವ ಬೀರಿರುವುದು ನಿಶ್ಚಿತವಾಗುವುದು ಕಂಡುಬರುತ್ತದೆ. ಆದ್ದರಿಂದ ಮೂಲದಲ್ಲಿರುವ ಕನ್ನಡ ಶಬ್ದದ ಸಂಸ್ಕೃತ ರೂಪಾಂತರವೆಂಬುದರಲ್ಲಿ ಅನುಮಾನವಿಲ್ಲ. ಕಾಲಾನುಘಟ್ಟಗಳು ಉರುಳಿದಂತೆ ಅದೇ ‘ಕರ್ನಾಡು’ ಪದ ‘ಕನ್ನಡ’ವಾಗಿ ರೂಪಾಂತರಗೊಂಡಿರುತ್ತದೆ. ಇದೇ ಮುಂದೆ ದೇಶೀಯವಾಗಿ ಪ್ರಾಮಾಣಿಕವಾಗಿ ಜೊತೆಗೆ ಭಾಷೆಯನ್ನು ಪ್ರತಿ ಸೂಸುವ ಪದವಾಗಿ ನಿಂತಿರುತ್ತದೆ. ಹೀಗೆ ಕನ್ನಡ ಶಬ್ದವು ತನ್ನದೇ ಆದ ಮೌಲಿಕತೆಗೆ ಸಾಕ್ಷಿ ಕಲ್ಲಾಗಿ ಕರ್ನಾಟಕದಲ್ಲಿ ಜನಪದರ ಜೀವಾಳವಾಗಿದೆ. ಕನ್ನಡ ನೆಲದಲ್ಲಿ ಹರಿಯುತ್ತಿರುವ ಕಾವೇರಿ ನದಿ ಕರ್ನಾಟಕ ಜನತೆ ಸಂಪನ್ಮೂಲ ಅಭಿವೃದ್ಧಿಗೆ ಕಾರಣೀಭೂತಳಾಗಿರುವಳು.

ಕನ್ನಡ ಸ್ಮೃತಿಯು ಜನಪದರಲ್ಲಿ ಕ್ರಿ.ಶ. ೫ ನೇ ಶತಮಾನಕ್ಕಿಂತಲೂ ಮೊದಲು ಕಂಡುಬರುತ್ತದೆ. ಇದಕ್ಕೆ ಪೂರಕವಾಗಿ ನಮ್ಮಲ್ಲಿ ಆಧಾರಗಳು ದೊರೆತಿರುತ್ತವೆ. ಕರ್ನಾಟಕದ ಸಂದರ್ಭದಲ್ಲಿ ಕನ್ನಡದ ಬಗ್ಗೆ ಕಂಡುಬರುವ ತಾಮ್ರ ಪಟಗಳು ಮತ್ತು ಶಿಲಾ ಲೇಖಗಳು ಅಶೋಕನ ಕಾಲದವು. ಇವುಗಳು ಸಂಸ್ಕೃತ ಅಥವಾ ಪ್ರಾಕೃತದಲ್ಲಿವೆ. ಈ ಶಿಲಾ ಲೇಖಗಳು ಕನ್ನಡದಲ್ಲಿಯೇ ರಚಿತಗೊಂಡಿರುತ್ತದೆ. ಅಂದರೆ ೫, ೬ನೇ ಶತಕಗಳಲ್ಲಿ ಕನ್ನಡ ಪ್ರಜ್ಞೆ ಜನರಲ್ಲಿ ಬೇರೂರಿತ್ತು ಎಂಬುದಕ್ಕೆ ಆಗ ಬರೆಯಲಾಗಿರುವ ಶಿಲಾಲೇಖಗಳೇ ಸಾಕ್ಷಿ. ಕನ್ನಡದ ಕಾವು ಜನಪದರಲ್ಲಿ ಆಡುಮಾತಾಗಿ ರೂಢಿಯಾಗಿದ್ದರಿಂದ ಸಂಸ್ಕೃತವು ಎಚ್ಚರಗೊಂಡು ಅದರ ಔನ್ನತೆಗೆ ಅಡ್ಡಿಪಡಿಸಿತು. ಕನ್ನಡವೂ ಅನನ್ಯತೆಯನ್ನು ಕಂಡುಕೊಳ್ಳುವುದರಲ್ಲಿ ದಾಪುಗಾಲು ಹಾಕಿತು ಎನ್ನಬಹುದು.

ಕ್ರಿ.ಶ. ೪೫೦ ರಲ್ಲಿ ‘ಹಲ್ಮಿಡಿಯ ಶಿಲಾಲೇಖ’ವು ಕನ್ನಡದಲ್ಲಿಯೇ ಬರೆಯಲಾಗಿದ್ದು, ಪ್ರಪ್ರಥಮದ್ದಾಗಿದೆ. ಇದರಲ್ಲಿ ಕನ್ನಡ ನುಡಿ, ರೂಪ, ಪದಗಳ ಬಳಕೆ, ಈ ಶಿಲಾಲೇಖದಲ್ಲಿ ಕಂಡುಬರುತ್ತದೆ. ಇದಕ್ಕೆ ಕಾರಣವೇನೆಂದರೆ ಕ್ರಿ.ಶ. ೬, ೭ ನೇ ಶತಕಗಳಲ್ಲಿ ಕನ್ನಡದಲ್ಲಿಯೇ ಹೆಚ್ಚಾಗಿ ಶಿಲಾಶಾಸನಗಳು ಬರವಣಿಗೆಯನ್ನು ಕಂಡುಕೊಂಡಿರುತ್ತದೆ. ಈ ಮೇಲಿನ ಎಲ್ಲ ಅಂಶಗಳನ್ನು ತುಲನೆ ಮಾಡಿ ನೋಡುವಾಗ, ಕನ್ನಡದ ಉಸಿರು ಜನಪದರಲ್ಲಿ ಆಳವಾದ ಪಾತಳಿಯನ್ನು ೫ನೇ ಶತಕದಲ್ಲಿ ಬರೆಯಲಾದ ‘ಕವಿರಾಜಮಾರ್ಗ’ವು ಕನ್ನಡದ ಮೊದಲ ಗ್ರಂಥ. ಈ ಗ್ರಂಥಕ್ಕಿಂತ ಮೊದಲು ಅಂದರೆ ಸುಮಾರು ೪೦೦ ವರ್ಷಗಳ ಹಿಂದಿನಿಂದಲೇ ಕನ್ನಡದಲ್ಲಿ ಗ್ರಂಥಗಳನ್ನು ಬರೆಯುತ್ತಿದ್ದರು ಎಂಬುದಂತೂ ಸತ್ಯಕ್ಕೆ ಹತ್ತಿರವಾದ ಮಾತು. ಇಂದಿನ ಮನೆ ಮಾತಾಗಿರುವ ಕನ್ನಡ ಸುಮಾರು ಇಪ್ಪತ್ತು ಶತಕಗಳಿಂದಲೂ ರೂಢಿಯಲ್ಲಿ ಜನರು ಅಳವಡಿಸಿಕೊಂಡು ಬಂದಿದ್ದಾರೆ.

ಈ ಭಾಷೆ ಕಾಲಘಟ್ಟಗಳ ಹೊಡೆತಕ್ಕೆ ಸಿಕ್ಕಿರುತ್ತದೆ. ಆದ್ದರಿಂದ ಸ್ಥಿತ್ಯಂತರಗೊಂಡಿದೆ. ಹೀಗಿದ್ದರೂ ಜನರ ಒಡನಾಡಿಯಾಗಿ, ಎಲ್ಲರ ಪ್ರೀತಿಗೆ ಪಾತ್ರವಾಗಿರುತ್ತದೆ. ಸಾಗರದಲ್ಲಿ ಮೀನುಗಳು ಕ್ಷಣಕ್ಷಣಕ್ಕೂ ಉಸಿರಾಡುವಂತೆ, ದುಂಬಿಗಳು ಹೂಗಳ ಮೇಲೆ ಹಾರಾಡುವಂತೆ ಕನ್ನಡವು ಆಯಾಯ ಪರಿಸರಕ್ಕೆ ಅನುಗುಣವಾಗಿ ಹೊಂದಿಕೊಳ್ಳುತ್ತಾ, ಬೆಳೆಯುತ್ತಾ, ತನ್ನದೇ ಆದ ವಿಶಿಷ್ಟತೆಯನ್ನು ಉಳಿಸಿಕೊಳ್ಳುತ್ತಾ ಬಂದಿದೆ. ಇದು ೧೫ ಶತಮಾನಗಳಿಂದಲೂ ಗ್ರಂಥಸ್ಥ ಸ್ಥಾನಮಾನ ಪಡೆದುಕೊಂಡು, ರೂಪವನ್ನು ಸಾಹಿತ್ಯ ಆರ್ದ್ರತೆಯನ್ನು ಜನಪದರ ಭಾಷೆಯಾಗಿ ಪಡೆದುಕೊಂಡಿದೆ.

ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟವಿದೆ. ಈ ಬೆಟ್ಟದ ಇಳಿಜಾರಿನಲ್ಲಿ ತಲಕಾವೇರಿ ಭೂಪ್ರದೇಶ. ಇಲ್ಲಿ ತಲಕಾವೇರಿ ನೈಸರ್ಗಿಕವಾಗಿ ಉದ್ಭವಗೊಂಡಿರುವಳು. ಅನಂತರ ನಿಧಾನವಾಗಿ ನಿರಂತರವಾಗಿ ಹರಿಯುತ್ತಾ, ಜನಪದರ ಜೀವನಾಡಿಯಲ್ಲಿ ಬೆರೆಯುತ್ತಾಳೆ. ಅಲ್ಲಿಂದ ಕನ್ನಡ ಗರ್ಭದಲ್ಲಿ ತೊಯಿದುಕೊಂಡು ಪಕ್ಕದ ರಾಜ್ಯವಾದ ತಮಿಳುನಾಡಿಗೆ ಬನಿಯನ್ನು ಬರಿಸುತ್ತಾ ವಿಲೀನವಾಗುವಳು.

ಹೀಗೆ ಹರಿದೆಡೆಯಲ್ಲೆಲ್ಲ ತನ್ನದೇ ಆದ ಭೌಗೋಳಿಕ ನೆಲೆಯನ್ನು ಸೃಷ್ಟಸಿಕೊಂಡಿರುತ್ತಾಳೆ. ಅಲ್ಲದೆ ಕಲೆ, ಸಂಸ್ಕೃತಿ, ಆಚರಣೆಗಳು, ಸಾಹಿತ್ಯ, ಭಾಷೆ, ಶೌರ್ಯ, ಸಾಹಸ ಇನ್ನೂ ಅನೇಕ ಅಂಶಗಳನ್ನು ಸಮ್ಮಿಳಿಸಿಕೊಂಡಿರುವಳು. ಆದುದರಿಂದ ಕೊಡಗಿನಲ್ಲಿಯೂ ಅನಾದಿ ಕಾಲದಿಂದಲೂ ಕನ್ನಡದ ಬನಿ ಜನಪದರಲ್ಲಿ ಉಸಿರಾಗಿತ್ತು. ಇದಕ್ಕೆ ಪ್ರತಿಯಾಗಿ ಅಲ್ಲಿನ ಚರಿತ್ರೆಯ ಪುಟಗಳನ್ನು ತಡಕಾಡುವಾಗ ಕೆಲವು ಮಹಿತಿಗಳು ಉಪಲಬ್ಧವಾಗಿವೆ. ಗಂಗರಸರು ಕೊಡಗಿನಲ್ಲಿ ಆಳ್ವಿಕೆಯನ್ನು ನಡೆಸುವ ಸಂದರ್ಭದಲ್ಲಿ ದೊರೆತಿರುವ ಶಾಸನಗಳು. ಇವು ಸುಮಾರು ೦೮೮೮ ಕಾಲದ್ದೆಂದು ಹೇಳಬಹುದಾಗಿದೆ. ಇದು ಕೊಡಗಿನ ಕಿಗ್ಗಟ್ಟು ನಾಡಿನಲ್ಲಿ ಸಿಕ್ಕಿರುತ್ತದೆ. ಗಂಗರಸರ ಕಾಲದಲ್ಲಿ ವ್ಯಾವಹಾರಿಕ ಭಾಷೆಯಾಗಿ ಕನ್ನಡವನ್ನೇ ಬಳಸುತ್ತಿರಬಹುದಾಗಿದೆ. ಏಕೆಂದರೆ ಕೊಡಗಿನಲ್ಲಿ ಬೇರೆ ಬೇರೆ ಜನಾಂಗ, ವರ್ಗ, ವರ್ಣದವರು ನೆಲೆ ನಿಂತಿರುವುದರಿಂದ ಅವರು ತಮ್ಮದೇ ಆದ ಲಿಪಿಯಿಲ್ಲದ ಭಾಷೆಯನ್ನು ಬಳಸುತ್ತಿರಬಹುದಾಗಿದೆ. ಆದುದರಿಂದ ಕನ್ನಡವೇ ಆಡಳಿತ ಭಾಷೆಯಾಗಿರಬಹುದು. ಏಕೆಂದರೆ ಕೊಡಗು ಭಾಷೆ ಲಿಪಿ ಇಲ್ಲದ ಭಾಷೆಯಾಗಿದ್ದು, ವ್ಯವಹಾರಿಕವಾಗಿ ಕನ್ನಡವನ್ನೇ ಇವತ್ತಿಗೂ ಬಳಸುತ್ತಿದ್ದಾರೆ. ಇದರಿಂದ ಕೊಡವರಲ್ಲಿ ಹಾಗೂ ಇನ್ನಿತರ ಜನಾಂಗಗಳಿಗೂ ಕನ್ನಡ ಆಡು ಭಾಷೆಯಾಗಿ ಬಳಕೆಯಾಗುತ್ತಿರಬಹುದಾಗಿದೆ.

ಹಾಲೇರಿ ವಂಶಜರು ಕೊಡಗಿನಲ್ಲಿ ೧೬೦೦ ರಿಂದ ೧೮೩೪ ವರೆಗೆ ಆಳ್ವಿಕೆ ನಡೆಸಿರುವರು. ಇವರು ಇಕ್ಕೇರಿಯಿಂದ ಕೊಡಗಿಗೆ ಬಂದವರು. ಇಲ್ಲಿ ತಮ್ಮ ರಾಜ್ಯ ಸ್ಥಾಪಿಸಿ ಕನ್ನಡವನ್ನೇ ಆಡಳಿತ ಭಾಷೆಯನ್ನು ಮಾಡಿಕೊಂಡು ಕೊಡಗನ್ನು ಆಳುತ್ತಿದ್ದರು. ಇದರಿಂದ ಕನ್ನಡ ಭಾಷೆ ಕಾವೇರಿ ನೀರಿನೊಂದಿಗೆ ಬೆರೆತು ಜನರ ವ್ಯವಹಾರಿಕ ಭಾಷೆಯಾಗಿರಬಹುದಾಗಿದೆ. ಅನಂತರ ಚೆಂಗಾಳ್ವರ ಕಾಲವನ್ನು ಉಲ್ಲೇಖಿಸುವುದಾದರೆ, ಕ್ರಿ.ಶ. ೧೫೦೨ – ೧೫೩೩. ಚೆಂಗಾಳ್ವರ ನಂಜರಾಜನ ಮಗನ ಕಾಲದಲ್ಲಿ ದೇವಪ್ಪ ಕವಿ ಇದ್ದನೆಂದು ತಿಳಿದುಬರುತ್ತದೆ. ಇವನು ‘ರಾಮವಿಜಯ’ ಕನ್ನಡ ಕಾವ್ಯ ಬರೆದಿರುತ್ತಾನೆ. ಇತ್ತೀಚೆಗೆ ಅಂದರೆ ಕೊಡಗನ್ನು ಆಳಿದ ದೊಡ್ಡವೀರ ರಾಜೇಂದ್ರ ಸುಮರು ೧೮೦೭ ರಲ್ಲಿ ‘ಕೊಡಗು ರಾಜೇಂದ್ರನಾಮೆ’ಯನ್ನು ಬರೆಸಿರುತ್ತಾನೆ. ಸರಿ ಸುಮಾರು ಇವರ ಕಾಲದಲ್ಲಿಯೇ ಇಂಗ್ಲೀಷರು ಕೊಡಗಿಗೆ ಆಗಮನವಾಗುತ್ತದೆ. ಹೀಗಿದ್ದರೂ ಕನ್ನಡ ಮರೆಯಾಗುವುದಿಲ್ಲ.

ಕಾವೇರಿ ನದಿ ತನ್ನ ಮೂಲ ಹಾಗೂ ನೈಸರ್ಗಿಕತೆಯನ್ನು ಉಳಿಸಿಕೊಂಡಿದೆ. ಕನ್ನಡವು ಕೊಡಗಿನಲ್ಲಿ ದೇಶಿ ಶಕ್ತಿಯನ್ನು ಜನಪದರಲ್ಲಿ ಆಳವಡಿಸಿಕೊಂಡಿದೆ. ಕನ್ನಡವನ್ನು ತಾಯಿಯೆಂದು ಜನಪದರು ನಂಬಿಕೊಂಡು ಬರುತ್ತಿದ್ದಾರೆ. ಇದರ ಜೊತೆಯಲ್ಲಿ ಕನ್ನಡ ಸಾಹಿತ್ಯ ಸ್ವರೂಪದ ನೆಲೆಯನ್ನು ಗಟ್ಟಿಗೊಳಿಸಿಕೊಂಡು ಬಂದಿರುವುದು ಸ್ಪಷ್ಟ. ಕೊಡಗಿನಲ್ಲಿ ಹೆಸರುವಾಸಿಯಾದ ಹಾಗೂ ಕರ್ನಾಟಕ ಜನತೆಯು ಕಂಡುಕೊಂಡ ಕಾದಂಬರಿಕಾರರಲ್ಲಿ ಭಾರತೀಸುತರು ಒಬ್ಬರು. ಇವರು ಅನೇಕ ಕಾದಂಬರಿಗಳನ್ನು ಕನ್ನಡದಲ್ಲಿ ರಚಿಸಿರುತ್ತಾರೆ. ಇವರು ಕನ್ನಡ ಅಭಿಮನ, ಕಾವೇರಿ ಮಾತೆಯ ಮೈಸಿರಿಯಲ್ಲಿ ಈಜಾಡಿ ಕನ್ನಡ ಸಾಹಿತ್ಯವನ್ನು ಬೆಳೆಸಿದ್ದಾರೆ. ಆದುದರಿಂದ ಕನ್ನಡ ಭಾಷೆ, ಸಾಹಿತ್ಯ ವಿಕಾಸ ಮತ್ತು ಕಾವೇರಿ ನದಿಯ ಅನನ್ಯತೆ ಪ್ರತೀಕ. ಈ ಸಂದರ್ಭದಲ್ಲಿ ಹೆಸರಿಸಬಹುದಾದ ಇನ್ನೊಂದು ಮೈಲಿಗಲ್ಲು ಎದುರ್ಕುಳ ಶಂಕರನಾರಾಯಣ ಭಟ್ಟರು. ಕನ್ನಡ ಒಡಲಿನ ಹಿರಿಯ ಆರಾಧ್ಯರೆಂದರೂ ತಪ್ಪಾಗಲಾರದು. ಇವರು ‘ಕಾವೇರಿ ವೈಭವ’ದ ಮೂಲ ಕರ್ತೃ. ಕಾವೇರಿಯ ಬಗ್ಗೆ ಅವಳ ಹುಟ್ಟಿನಿಂದ ಅಂತ್ಯದತನಕ ಮೈಗೂಡಿಸಿಕೊಂಡಿರುವ ಪರಿಪೂರ್ಣ ಸತ್ವದ ಅಂಶಗಳನ್ನು ವಿವರಿಸಿದ್ದಾರೆ. ಇದು ಎಂದೆಂದಿಗೂ ಕಾವೇರಿ ನದಿ ಬಗ್ಗೆ ಇರುವ ಆಧಾರ ಸ್ತಂಭ ಎಂಬುದರಲ್ಲಿ ಎರಡು ಮಾತಿಲ್ಲ. ಕೊಡಗಿನ ಇತಿಹಾಸ ಕರ್ತೃ ಡಿ.ಎನ್. ಕೃಷ್ಣಯ್ಯ ಇವರು ಕೊಡಗಿನ ಒಟ್ಟು ಚರಿತ್ರೆಯನ್ನು ನಿರೂಪಿಸಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಈ ಕೃತಿ ಕೊಡಗಿನ ಚರಿತ್ರೆಯ Documentary Product ಎಂಬುದು ನನ್ನ ಅಭಿಪ್ರಾಯ.

ಕೊಡಗಿನವರೇ ಆದ ಗೌರಮ್ಮ ನವರು ಇಂದಿಗೂ ಕನ್ನಡಿಗರಲ್ಲಿ ಹಾಗೂ ಇತರರಲ್ಲಿಯೂ ಉಳಿದಿರುವ ನೆನಪು. ಇವರಿಗಿದ್ದ ಕನ್ನಡ ಪ್ರೀತಿ, ಅಭಿಮಾನ, ಅದರಲ್ಲೂ ಜನಪದ ಸಂಗ್ರಹದ ಕೆಲಸ, ಬರವಣಿಗೆಗಳು ಕಾವೇರಿ ನದಿಯ ಉಸಿರಿನೊಂದಿಗೆ ಬೆಸೆದುಕೊಂಡಿವೆ. ಕನ್ನಡ ಪ್ರಜ್ಞೆ ಮೂಡಿಸುವಲ್ಲಿ ಕೊಡವ ಜನಾಂಗದವರು ಶ್ರಮಿಸಿರುವರು. ಇವರ ಭಾಷೆ ಕೊಡವ. ಇದಕ್ಕೆ ಲಿಪಿಯಿಲ್ಲ. ಆದರೆ ಕನ್ನಡವು ಪರಭಾಷೆ ಎಂಬ ವೈರುಧ್ಯವಿಲ್ಲ. ಕಾವೇರಿ ನದಿಯೊಂದಿಗೆ ಸಮ್ಮಿಳಿತವಾಗಿರುವಂತೆ ಕನ್ನಡದ ಉಸಿರಾಗಿಯೂ, ಅದರ ವಿಕಾಸತೆಗೂ, ಶೌರ್ಯ ಸಾಹಸತೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿರುವರು. ಅವರ ಭಾಷೆ ಗ್ರಾಂಥಿಕ ಭಾಷೆ. ಆದರೂ ಗಂಗರಸರ ಕಾಲದಿಂದ ಇವತ್ತಿನವರೆಗೂ ಕನ್ನಡವೇ ಬದುಕಾಗಿ ವ್ಯವಹಾರಿಕ ಭಾಷೆಯಾಗಿ ಬಳಸಿರುವುದನ್ನು ಇಂದಿಗೂ ನೋಡಬಹುದಾಗಿದೆ.

ಲಿಪಿಯಿಲ್ಲದ ಈ ಗ್ರಾಂಥಿಕ ಭಾಷೆ ಕನ್ನಡ ಲಿಪಿಯನ್ನೊಳಗೊಂಡಿದೆ. ಇದರ ಫಲವೇ ಜನಪದ ಸಾಹಿತ್ಯದ ಅಕ್ಷಯ ಪಾತ್ರೆಯಾದ ‘ಪಟ್ಟೋಲೆ ಪಳಮೆ’. ಇದರ ಕರ್ತೃ ನಡಿಕೇರಿಯಂಡ ಚಿಣ್ಣಪ್ಪ. ಅಪ್ಪಚ್ಚು ಕವಿಯು ಅನೇಕ ನಾಟಕಗಳನ್ನು ರಚಿಸಿದ್ದಾರೆ. ಕೊಡವರಾದರೂ ಕನ್ನಡ ನುಡಿ ಹಾಗೂ ಸಾಹಿತ್ಯ ಸತ್ವದ ಆಸಕ್ತಿ ಉಳ್ಳವರಲ್ಲಿ ಬಿ.ಡಿ.ಗಣಪತಿ, ಐ.ಮಾ. ಮುತ್ತಣ್ಣ, ಕಾಕೆಮಾನಿ, ಕೋಟೇರ ಮುತ್ತಣ್ಣನವರು ಕೂಡ ಕನ್ನಡದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ಅನೇಕ ಬರವಣಿಗೆಯನ್ನು ಮಾಡಿರುವರು. ಈ ಮೇಲೆ ವಿವರಿಸಲಾಗಿರುವವರೆಲ್ಲರೂ ಕಾವೇರಿ ನದಿ ನೀರಿನ ಸೆರಗಿನಲ್ಲಿ ಮಗುವಿನಂತೆ ಬೆಳೆದು ಉಸಿರಾಡಿದವರು. ಆ ನೀರು ಬೌದ್ಧಿಕತೆಗೆ ಪ್ರೇರಣೆ ಮೂಡಿಸಿದೆ. ಆದ್ದರಿಂದ ಕನ್ನಡಮ್ಮನ ಕೀರ್ತಿ ಶಿಖರ ಮುಟ್ಟುತ್ತಲಿದೆ ಎನ್ನಬಹುದು.

ಪಂಪ, ಪೊನ್ನ, ರನ್ನ, ಹರಿಹರ, ರಾಘವಾಂಕ, ನೇಮಿಚಂದ್ರ, ರುದ್ರ, ಜನ್ನ, ಕುಮಾರವ್ಯಾಸ, ಚಾಮರಸ, ನಿಜಗುಣಿ, ಸರ್ವಜ್ಞ, ಪುರಂದರದಾಸ, ಕನಕದಾಸ, ರತ್ನಾಕರವರ್ಣಿ ಹೀಗೆ ಮುಂತಾದವರ ಬಗ್ಗೆ ಅಪರಿಚಿತತೆ ಆರಂಭದಲ್ಲಿ ಕೊಡಗಿನಾದ್ಯಂತ ಇತ್ತು. ಆದರೆ ಇಂದು ಆ ಕೊರತೆ ಕಡಿಮೆಯಾಗಿದೆ. ಅಲ್ಲಿ ಅನೇಕ ಸಂಘ-ಸಂಸ್ಥೆಗಳು ಆರಂಭಗೊಂಡಿವೆ. ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಶಾಲಾ, ಕಾಲೇಜುಗಳು ಜನ್ಮ ಎತ್ತಿವೆ. ಇದರಿಂದ ಕನ್ನಡ ನಾಡು, ನುಡಿ ಕಾವೇರಿಯೊಂದಿಗೆ ಬೆರೆತು ಜನಪದರಲ್ಲಿ ಶ್ರೇಯೋಭಿವೃದ್ಧಿ ದಿನದಿಂದ ದಿನಕ್ಕೆ ವೃದ್ಧಿಸುತ್ತದೆ.

ಕಾವೇರಿ ನದಿಯ ಸೊಗಡು ಕನ್ನಡಕ್ಕೆ ಅಪ್ಪಿಕೊಂಡಂತೆ, ಬಹುಭಾಷೆಗಳಿಗೂ ತಾಣವಾಗಿದೆ. ಪ್ರಧಾನವಾಗಿ ಇಂದಿನ ದಿವಸಗಳು ಇಂಗ್ಲೀಷ್ ಭಾಷೆ. ಇದು ಅನ್ಯರ ಭಾಷೆ. ಇವತ್ತಿನ ದಿನಗಳಲ್ಲಿ ಜನರ ಜೀವನಮಟ್ಟವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ. ಕೊಡಗಿನಲ್ಲಿ ಕನ್ನಡದ ಮೇಲೆ ತನ್ನ ಪ್ರಭಾವವನ್ನು ಬೀರಿ ಬದಲಾವಣೆಗೆ ದಾರಿ ಮಾಡಿಕೊಡುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ. ಬಾಹ್ಯವಾಗಿ ಕನ್ನಡವನ್ನು ಅಂಗೀಕರಿಸುವುದು ಇನ್ನೊಂದು ಕಡೆ ಆಂತರಿಕವಾಗಿ ಕನ್ನಡದ ಬಗ್ಗೆ ಕುತೂಹಲವಿಲ್ಲದಿರುವುದನ್ನು ವ್ಯಕ್ತಪಡಿಸುವುದು. ಇಂತಹ ಅಂಶಗಳು ಮನಸ್ಸಿಗೆ ನೋವನ್ನುಂಟುಮಾಡುತ್ತವೆ.

ಕೊಡಗಿನಲ್ಲಿ ಇಂಗ್ಲೀಷ್ ಕುರಿತು ಚರ್ಚೆ ಮಾಡುವುದಾದರೆ ಅದು ಒಂದು ಕಾಲದಲ್ಲಿ ನಿರ್ಜೀವವಾಗಿತ್ತು. ಕನ್ನಡದ ಸ್ಮೃತಿ ಜನಪದರ ಜೀವನಾಡಿಯಲ್ಲಿ ಬೆರೆತು ಕಾವೇರಿ ನದಿಯೊಂದಿಗೆ ಉಸಿರಾಡುತ್ತಿತ್ತು. ೧೮೫೫ ರಲ್ಲಿ ಡಾ.ಮೋಗ್ಲಿಂಗ್ ನು ಕೊಡಗಿನಲ್ಲಿ ಇಂಗ್ಲೀಷ್ ಶಾಲೆಗಳ ಅಧಿಕಾರವನ್ನು ವಹಿಸಿಕೊಂಡನು. ಆಗ ಜನರು ಉತ್ಸಾಹವನ್ನು ತೋರಲಿಲ್ಲ. ಶಾಲೆಗಳಲ್ಲೂ ವಿದ್ಯಾರ್ಥಿಗಳು ತಿರಸ್ಕಾರ ಮಾಡಿ ದೂರವಿಟ್ಟರು. ಆದರೆ ಕಾಲಘಟ್ಟಗಳು ಸರಿಯುತ್ತಿದ್ದಂತೆ ಡಾ.ಮೋಗ್ಲಿಂಗ್ ನೇ ಆಶ್ಚರ್ಯ ಹಾಗೂ ಕುತೂಹಲವನ್ನು ಕಂಡನಂತೆ. ಯಾವಾಗ ಕೊಡಗು ಆಂಗ್ಲರ ಆಳ್ವಿಕೆಗೆ ಒಳಪಟ್ಟಿತೋ, ಯುರೋಪಿಯನ್ನರು ಅಲ್ಲಿನ ಗುಡ್ಡಗಾಡುಗಳಲ್ಲಿ ವಾಸಿಸತೊಡಗಿದರು. ಸುಮ್ಮನೆ ಕೈಕಟ್ಟಿ ಕೂರಲಿಲ್ಲ. ಅಲ್ಲಿನ ಬೆಟ್ಟ-ಗುಡ್ಡ, ತಗ್ಗುಗಳಲ್ಲಿ ಕಾಫಿ ತೋಟವನ್ನು ಮಾಡಲು ಮುಂದಾದರು. ಇದರಿಂದ ಅಲ್ಲಿನ ಸ್ಥಳೀಯರಿಗೆ ಅವರ ಸಂಪರ್ಕದ ಕೊಂಡಿ ಬೆಸೆಯಿತು. ಸ್ಥಳೀಯರು ಅವರ ಭಾಷೆ, ಉಡುಪು, ಜೀವನ ವಿಧಾನಗಳನ್ನು ಅನುಕರಣೆ ಮಾಡಿಕೊಂಡರು. ಇಂಗ್ಲೀಷ್ ಭಾಷೆಗೆ ಮಹತ್ವ ಬಂತು. ಆದರೂ ಎಲ್ಲಾ ಶಾಲಾ-ಕಾಲಲೇಜುಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಲಾಯಿತು. ಅಲ್ಲದೆ ವ್ಯವಹಾರಿಕ ಭಾಷೆಯಾಗಿ ಕನ್ನಡ ಕೊಡಗಿನಾದ್ಯಂತ ಬೇರೂರಿತು.