ಸೂಕ್ಷ್ಮ ತೆರನಾದ ತರ್ಕ ಒಡ್ಡುವುದರೊಂದಿಗೆ ಚರ್ಚೆಯನ್ನು ವಿಶ್ಲೇಷಿಸುವ ಪ್ರಯತ್ನ ಸಾಗುತ್ತದೆ. ಪ್ರಕೃತಿ ಒಳಗೆ ಅಡಕಗೊಂಡಿರುವ ಬೆಟ್ಟ, ಗುಡ್ಡ, ಶಿಖರ, ಪರ್ವತ, ನದಿ ಸರೋವರಗಳು, ದೈವದ ಸೃಷ್ಟಿ ಎಂಬುದು ಜನಪದರ ನಂಬಿಕೆಯಾಗಿರುತ್ತದೆ. ಇಂದಿಗೂಅದೇ ಜ್ಞಾನದ ದೃಷ್ಟಿ ಮುಂದುವರೆಯುತ್ತಿದೆ. ಹೀಗಿರುವುದರಿಂದಲೇ ಆರಾಧಿಸುವರು, ಪೂಜಿಸುವರು, ಕೈಯೆತ್ತಿ ಮುಗಿಯುವರು ಇವತ್ತು ಪದ್ಧತಿಯಾಗಿ, ಜನಪದರಲ್ಲಿ ರೂಢಿಯಗಿ ಒಡಲಿನಲ್ಲಿ ಬೆರೆತುಕೊಂಡಿದೆ. ಅವುಗಳೊಂದಿಗೆ ತಮ್ಮ ಬದುಕನ್ನು ಕಂಡುಕೊಂಡು ಬಂದಿರುತ್ತಾರೆ. ಜನಪದರ ಪೂರ್ವಜರು ಯಾವುದೇ ವಸ್ತು ವಿಷಯವನ್ನು ಅರಿಯುವಾಗ ಅವುಗಳ ಆಳಕ್ಕೆ ಇಳಿಯುವರು. ಅನಂತರ ಅಳೆದು-ಸುರಿದು ತಾಳ ಹಾಕುವರು. ಅಲ್ಲದೆ ಎಷ್ಟು ಪೊಳ್ಳು, ಸುಳ್ಳು, ಜಳ್ಳು, ಇಲ್ಲ ಉಪಯೋಗವಾಗುತ್ತದೆಯೇ ಇಲ್ಲ ಅನುಪಯುಕ್ತವೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಅಲ್ಲದೆ ಜನಪದರ ದೈನಂದಿನ ಬದುಕಿನೊಂದಿಗೆ ಬೆಸೆದುಕೊಂಡಿದೆಯೇ ಇನ್ನೂ ಮುಂತಾದ ಅಂಶಗಳನ್ನು ಮನನ ಮಾಡುತ್ತಿದ್ದರು. ಹೀಗೆಲ್ಲ ವಿಷಯಗಳನ್ನು ರೊಟ್ಟಿ ಮುಗುಚಿ ಹಾಕಿದಂತೆ ತಿರುಗಿ ಹಾಕುತ್ತಿದ್ದರು. ಅನಂತರ ಅಂತವುಗಳನ್ನು ನಂಬಿ, ಆರಾಧಿಸಿ, ಪೂಜಿಸಿ ಮಹತ್ವದ ಸ್ಥಾನ ಕೊಟ್ಟು ಪವಿತ್ರವೆಂದು ಭಾವಿಸುತ್ತಿದ್ದರು. ಜೊತೆಗೆ ಅಂತಹವುಗಳಿಂದ ನಾಡು ನುಡಿಗೆ ಮತ್ತು ಜನರ ಕಲ್ಯಾಣವಾಗುತ್ತದೆ ಎಂದು ನಂಬಿದ್ದರು.

ಈ ಮೇಲೆ ಚರ್ಚಿಸಿದ ವಿಷಯಗಳಿಗೆ ಪ್ರತಿಯಗಿ ನಮ್ಮಲ್ಲಿ ಕೆಲವು ಆಧಾರಗಳು ಕೂಡ ಇವೆ ಎಂಬುದನ್ನು ಮರೆಯುವಂತಿಲ್ಲ. ಸ್ಥಳೀಯವಾಗಿರುವ ಪುರಾಣಗಳು, ಪುಣ್ಯ ಕಥನಗಳು, ಹಾಡುಗಳು, ವೇದಗಳು, ಐತಿಹ್ಯಗಳು, ಹಸ್ತಪ್ರತಿಗಳು, ಛಾಯಾ ಚಿತ್ರಗಳು, ಶಿಲ್ಪಶಾಸನಗಳು ಇನ್ನೂ ಅನೇಕವುಗಳನ್ನು ಸೂಕ್ಷ್ಮ ದೃಷ್ಟಿಯಲ್ಲಿ ಅವಲೋಕಿಸಿದರೆ ಜನಪದರು ನದಿಗಳನ್ನು, ದೇವತೆಗಳೆಂದು ನಂಬಿ ಆರಾಧಿಸುತ್ತಾ ಬಂದಿರುವುದು ಸತ್ಯ. ಇಂದಿಗೂ ನದಿಗಳಿಗೆ ಮಹತ್ವದ ಸ್ಥಾನ ಕೊಟ್ಟು ಪವಿತ್ರ ಎಂದು ಭಾವಿಸಿರುತ್ತೇವೆ.

ಪ್ರಾಣಿಗಿಂತ ಮನುಷ್ಯ ಭಿನ್ನ. ಇವನು ವಿಕಾಸವಾಗುತ್ತಾ ಬಂದ. ಆಲೋಚನೆಯಲ್ಲಿ ನಿರತನಾದ. ಸರಿಯಾದುದನ್ನು ಆರಿಸಿಕೊಳ್ಳತೊಡಗಿದ. ತನ್ನ ಅಂತರಂಗದಲ್ಲಿ ಉದ್ಭವವಾದ ಭಾವನೆಗಳಲ್ಲಿ ಸೂಕ್ತ ಯಾವುದೆಂದು ಕಲ್ಪಿಸಿಕೊಂಡು ಒಂದು ರೂಪ ಕೊಟ್ಟ. ಆ ಚಿತ್ರವನ್ನು ಬಿಡಿಸಿದ. ಇವರಲ್ಲಿ ಬೆರೆತ. ಅದರಲ್ಲೇ ನೆಮ್ಮದಿ ಕಂಡ. ಬದುಕನ್ನು ಸಾಗಿಸಿದ. ಆಲೋಚಿಸುವ ವ್ಯಕ್ತಿಯಾದ. ವಿಕಾಸತೆಯ ದಾರಿ ಕಂಡ. ಆಗ ಹಲವು ಕಲ್ಪನೆಗಳು, ಕನಸುಗಳು, ಕಥೆಗಳು, ವಿಶ್ವಾಸದ ಅಲೆಗಳು ತಮ್ಮ ಮುಂದೆ ಗೋಚರವಾದವು. ಅವನ ಬದುಕು ಭಿನ್ನವಾಗತೊಡಗಿತು. ಈ ರೂಪಾಂತರಗಳು ಕಂಡುಕೊಂಡಾಗ ಮನುಷ್ಯ ತನಗೆ ಹೆಸರು ಕೊಟ್ಟುಕೊಂಡ. ಅಲ್ಲದೆ ತನ್ನ ಸುತ್ತಮುತ್ತ ವೀಕ್ಷಿಸಿದ. ನಿಸರ್ಗದ ಪರದೆಯಲ್ಲಿರುವ ಜಲಚರ ಪ್ರಾಣಿಗಳಿಗೂ ಒಂದೊಂದು ನಾಮಕರಣ ಮಾಡಿದ. ಇಂದಿಗೂ ಈ ವಿಧಾನವನ್ನು ಮುಂದುವರೆಸಿದ್ದಾನೆ.

ಮನುಷ್ಯ ಹೆಸರು ಇಟ್ಟುಕೊಂಡು ಇತರ ವಸ್ತುಗಳಿಗೆ ಹೆಸರಿಟ್ಟು ಕರೆದ. ಅಂತ ಹೆಸರುಗಳು ಹಲವು. ಕರೆಯಲು ಇಂಪಾಗಿ ಸೊಂಪಾಗಿರುತ್ತವೆ. ಮತ್ತೆ ಕೆಲವು ಸಂಗೀತಮಯವಾಗಿರುತ್ತವೆ. ಕೆಲವು ಅಂತರಾಳದಲ್ಲಿ ಉಳಿದು, ಬೆಳೆದು ಮನದಲ್ಲಿ ನೆನೆಕೆಯಾಗಿ ಪುನಃ ಪುನಃ ಕರೆಯಬೇಕು ಅನ್ನಿಸುತ್ತದೆ. ಭಾರತದಾದ್ಯಂತ ಹರಿಯುವ ನದಿಗಳಿಗೂ ಒಂದೊಂದು ವಿಶಿಷ್ಟವಾದ ಸಂಗೀತಮಯವಾದ ಹೆಸರುಗಳಿವೆ. ಅವುಗಳಲ್ಲಿ ಗಂಗ, ಯಮುನಾ, ಗೋದಾವರಿ, ಸರಸ್ವತಿ ಮುಂತಾದವು. ಕರ್ನಾಟಕದಲ್ಲಿ ತುಂಗಭದ್ರೆ,ಕೃಷ್ಣೆ, ಹೇಮಾವತಿ, ಕನ್ನಿಕೆ, ಲಕ್ಷ್ಮಣತೀರ್ಥ, ಕಾವೇರಿ ಮುಂತಾದವು. ನೆನೆಗುಳಿಯಲ್ಲಿ ಸದಾ ರಾರಾಜಿಸುವ ನದಿಗಳಲ್ಲಿ ಕಾವೇರಿ ನದಿಯ ಹೆಸರು ಅವಿಸ್ಮರಣೀಯ. ಹೆಸರೇ ಸಂಗೀತಮಯ, ಹೃನ್ಮನಗಳಿಗೆ ನೆಮ್ಮದಿಯ ಸೆಲೆ ನೆಲೆ. ಇಂಪು ನೀಡುತ್ತದೆ. ಪವಿತ್ರ ಭಾವನೆಯನ್ನು ಹೊರ ಹೊಮ್ಮಿಸುತ್ತದೆ. ಜನಪದರ ಬದುಕಿನ ಅವಿಭಾಜ್ಯ ಅಂಗವಾಗಿದೆ.

ಕಾವೇರಿಯನ್ನು ಹಲವು ಹೆಸರುಗಳಲ್ಲಿ ಅಭಿವ್ಯಕ್ತಪಡಿಸುವರು. ಒಂದು ಮಗ್ಗುಲಲ್ಲಿ ಸುವರ್ಣ ಎನ್ನುವರು. ಇನ್ನೊಂದು ದಡದಲ್ಲಿ ಕನ್ನಡ ಕುಲಸಿರಿ, ಕುಲದೇವಿ ಅಂತಲೂ, ಮಧ್ಯದ ಭೂಪ್ರದೇಶ ಜನಪದರು ಭೂರಮೆ ಎನ್ನುವರು. ಹೀಗೆ ಒಂದು ಕಡೆ ಭಾಗೀರಥಿಯಾದರೆ, ಮತ್ತೊಂದೆಡೆ ಹರಿಯುತ್ತಾ ದಕ್ಷಿಣದ ಗಂಗೆ ಅನ್ನಿಸಿಕೊಂಡು ಮುನ್ನುಗ್ಗುವಳು. ಅನೇಕ ಹೆಸರುಗಳಿಗೆ ಕೀರ್ತಿಗೆ ಪಾತ್ರರಾಗಿರುವಳು. ಇವಳು ತಣ್ಣಗೆ, ನುಣ್ಣಗೆ, ಮೆಲ್ಲಗೆ ಹರಿದೆಡೆಯಲ್ಲೆಲ್ಲ ಸಮೃದ್ಧಿ, ನೆಮ್ಮದಿ, ಅನನ್ಯತೆ, ಸಂತುಷ್ಟಿಯ ಚಿಲುಮೆಯಾಗಿ ಜನಪದರ ಜೀವನದ ಜೀವಾಳವಾಗಿ ಪಸರಿಸುತ್ತಾ ಹರಿಯುತ್ತಿರುವಳು. ಇವಳ ಹೆಸರು ಅಂತರಾಳದಲ್ಲಿ ಉಳಿದು ಮನದಲ್ಲಿ ಪುನರಾವರ್ತನೆಯಾಗುತ್ತಿರುತ್ತದೆ. ಒಟ್ಟಿನಲ್ಲಿ ಕಾವೇರಿ ಹೆಸರು ಅವಿಸ್ಮರಣೀಯ.

ಭಾರತದಾದ್ಯಂತ ಹರಿಯುತ್ತಿರುವ ನದಿಗಳಿಗೆ ತನ್ನದೇ ಅದ ಕಥೆ, ಐತಿಹ್ಯ, ಪುರಾಣಗಳಿವೆ. ಕಾವೇರಿ ನದಿಗೂ ‘ಕಾವೇರಿ ಪುರಾಣ’ವಿದೆ. ‘ಕಾವೇರಿ ಮಹಾತ್ಮೆ’, ‘ಕಾವೇರಿ ವೈಭವ’ ಹಾಗೂ ಇನ್ನಿತರ ಕಥೆಗಳಿವೆ. ಆದರೆ ಇಂದಿನ ಜಾಗತೀಕರಣದ ಅಲೆಗಳ ಬಿಸಿ ಎಲ್ಲೆಲ್ಲೂ ಆರ್ಭಟಿಸುತ್ತಿದೆ. ಆದ್ದರಿಂದ ಉದಾರೀಕರಣದ ನೀತಿ, ಸಾಮಾಜೀಕರಣ, ಖಾಸಗೀಕರನ, ಸ್ತ್ರೀವಾದಿ ಚಿಂತನೆಗಳು, ಕೈಗಾರೀಕರನ, ದೇಶೀವಾದ, ಸಮತಾವಾದ ಹೀಗೆ ಇನ್ನೂ ಅನೇಕ ವಿಷಯಗಳ ಮೇಲೆ ತರ್ಕಗಳು, ಚಿಂತನೆಗಳು, ಚರ್ಚೆಗಳು ಪ್ರತಿಕ್ಷಣ, ಪ್ರತಿ ದಿನಗಳಲ್ಲಿ ತಮ್ಮದೇ ಮೌಲಿಕತೆಯನ್ನು ಸೃಷ್ಟಿಸುತ್ತದೆ. ಇಂತಹ ಸಂದರ್ಭದಲ್ಲಿ ಪುರಾಣದಲ್ಲಿ ಬರುವ ಚಿತ್ರಗಳು ಕೂಡ ಕೆಲವು ಚರ್ಚೆಗೆ ಅವಕಾಶ ಮಾಡಿಕೊಡುತ್ತವೆ. ಕಾವೇರಿ ಪುರಾಣದಲ್ಲಿ ಕಂಡುಬರುವ ಕೆಲವು ತುಣುಕುಗಳನ್ನು ಮೆಲುಕು ಹಾಕಬಹುದು. ಬ್ರಹ್ಮನ ಮಗಳು ಕಾವೇರಿ. ಇವಳು ಅಗೋಚರ ಶರೀರಧಾರಿಣಿ. ಇವಳು ದೇಹದಿಂದ ಎರಡು ಭಾಗವಾಗುತ್ತಾಳೆ. ಒಬ್ಬಳು ಅಗಸ್ತ್ಯನ ಪತ್ನಿಯಾಗುವಳು. ಇನ್ನೊಂದು ಅವಳ ಅಂಶ ಕಾವೇರಿ ನದಿಯಾಗಿ ಹರಿಯುವಳು. ಇಲ್ಲಿ ಸ್ವಲ್ಪ ಇಣುಕಿ ನೋಡುವಾಗ ಬ್ರಹ್ಮನ ಮಗಳಾದರೂ, ಅವಳನ್ನು ಪಡೆದ ನೆಲೆಗಳು ವಿಚಾರವಾದಿಯ ದೃಷ್ಟಿಯಿಂದ ಬೇರೆ ರೂಪಗಳನ್ನು ಪಡೆಯಬಹುದಾಗಿದೆ.

ಇನ್ನೊಂದು ಪ್ರಸಂಗದ ಬಗ್ಗೆ ಚರ್ಚಿಸುವುದಾದರೆ, ಕಾವೇರಿ ನದಿ ಪ್ರತಿವರ್ಷವೂ ನವೆಂಬರ‍್ ತಿಂಗಳಲ್ಲಿ ತಲಕಾವೇರಿಯಲ್ಲಿ ವಿಚಾರವಾದಿಗಳು ಪ್ರಶ್ನಿಸಿದರೆ ಅನುಮಾನಗಳು ಎದುರಾಗುತ್ತವೆ. ಇಂತಹ ಚರ್ಚೆಗಳು ಕಾವೇರಿ ನದಿಗೆ ಮಾತ್ರ ಸೀಮಿತವಾಗುವುದಿಲ್ಲ. ಗಂಗ, ಯಮುನ, ಗೋದಾವರಿ, ಸರಸ್ವತಿ, ನರ್ಮದ, ಸಿಂಧು ಇನ್ನೂ ಅನೇಕ ನದಿಗಳಿಗೂ ಅನ್ವಯವಾಗುತ್ತವೆ.

ವಿಶ್ವದ ಸೃಷ್ಟಿಯ ಬಗ್ಗೆ ವಿಚಾರವಾದಿಗಳು ತಮ್ಮದೇ ಆದ ತಾತ್ವಿಕ ಹೊಳಹುಗಳನ್ನು ವ್ಯಕ್ತಪಡಿಸಿರುವರು. ಅಂತವುಗಳು ವೈವಿಧ್ಯಮಯ ಹಾಗೂ ಮೌಲಿಕತೆಯಿಂದ ಕೂಡಿವೆ. ಹಲವು ಸಾಮಾನ್ಯ ಅಭಿಪ್ರಾಯಗಳನ್ನು ಒಳಗೊಂಡಿರುತವೆ. ಕೆಲವಂತೂ ತರ್ಕಕ್ಕೆ ದಾರಿ ಮಾಡಿಕೊಟ್ಟಿವೆ. ಮಗದೊಮ್ಮೆ ಸಾರ್ವತ್ರಿಕವಾಗಿ ಸ್ವೀಕಾರಾರ್ಹ. ಹಾಗೆಯೇ ಅರ್ಥಪೂರ್ಣವಾಗಿರಲೂಬಹುದು. ನಾವು ನೋಡುತ್ತಿರುವ ಜೊತೆಗೆ ಅವರಿವರಿಂದ ಕೇಳಿ ತಿಳಿದುಕೊಂಡಿರುವ ಅಂಶಗಳತ್ತ ಸೂಕ್ಷ್ಮವಾಗಿ ಗ್ರಹಿಸುವಾಗ ಸೌರಮಂಡಲದಲ್ಲಿ ಭೂಮಿ, ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಇನ್ನೂ ಅನೇಕ ಗ್ರಹಗಳಿವೆ. ಇವು ಸೂರ್ಯನಿಂದ ಒಡೆದು, ಸಿಡಿದು ಬೇರೆಯಾದ ಭಾಗಗಳೆಂದು ವಿಚಾರವಾದಿಗಳು, ವಿಜ್ಞಾನಿಗಳು ಸಾಬೀತುಪಡಿಸಿರುವರು. ಒಂದೊಂದರ ಅರ್ಥ, ಸ್ವರೂಪ, ವಿಕಾಸ, ಮೌಲ್ಯದ ಬಗ್ಗೆ ಅರಿವು ಮೂಡಿಸಿರುತ್ತಾರೆ. ಅಲ್ಲದೆ ಅವುಗಳ ಮಹತ್ವ, ಉಪಯೋಗತೆ ಕುರಿತು ಚರ್ಚೆಗಳು ಜರುಗುತ್ತಿರುತ್ತವೆ. ಒಟ್ಟಾರೆಯಾಗಿ ಅರ್ಥಪೂರ್ಣವಾಗಿರಲೂಬಹುದು.

ಈ ಮೇಲೆ ಪ್ರಸ್ತಾಪ ಮಾಡಲಾದ ಅಂಶಗಳಿಗೆ ಭಿನ್ನವಾಗಿ ಜನಪದರ ಸ್ಮೃತಿಗಳು ಆಲೋಚನೆಗಳಲ್ಲಿ ಮುಳುಗಿವೆ. ಅಂತಹವುಗಳ ಜೊತೆಗೆ ಭಾವನಾತ್ಮಕ ಸಂಬಂಧವಿರಿಸಿಕೊಂಡಿವೆ. ಆಧ್ಯಾತ್ಮಿಕವಾದ ಬೆಸುಗೆ ಬೆಸೆದುಕೊಂಡಿದೆ. ಆದುದರರಿಂದ ಅವುಗಳೆಲ್ಲ ದೈವಪ್ರೇರಣೆಯಿಂದ ಬಂದಂಥವು ಎಂದು ನಂಬಿಕೊಮಡು, ಪೂಜಿಸುತ್ತಾ, ಆರಾಧಿಸುತ್ತಾ ಅವರ ಪೂರ್ವಿಕರು ಬಂದಿರುವರು. ಹಾಗೆಯೇ ಜನಪದರು ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಆಚರನೆ ಅನುಸರಿಸದೇ ಇದ್ದಾಗ ಅವರಿಗೆ ಸಂಕಷ್ಟಗಳ ಸರಳುಗಳು ಬೇರೆ ರೂಪದಲ್ಲಿ ಘಟಸುತ್ತವೆ ಎಂಬುದು ಅವರ ನಂಬಿಕೆ. ಇವತ್ತಿಗೂ ಹಳ್ಳಿಗಾಡಿನ ಅನಕ್ಷರಸ್ಥ, ಅಲಕ್ಷಿತ ಜನಪದರಲ್ಲಿ ಗುರುತಿಸಬಹುದು. ಸರ್ವೇ ಸಾಮಾನ್ಯವಾಗಿ ಕೆಲವು ನಂಬಿಕೆಗಳು ಇನ್ನೂ ಗ್ರಾಮಾಂತರದಲ್ಲಿ ಬೇರೂರಿ ಮನ್ನಣೆ ಪಡೆದಿವೆ.

ಕಾವೇರಿ ಬಗ್ಗೆ ಸಾಕಷ್ಟು ಕಥೆಗಳು, ಪುರಾಣ, ಐತಿಹ್ಯ, ಹಾಡುಗಳು, ಸ್ಮಾರಕಗಳು ಇವೆ. ಇವಳ ಸೃಷ್ಟಿ ಕುರಿತು ತಾತ್ವಿಕ ಚಿಂತನೆಗಳು ನಡೆದಿವೆ. ಅಲ್ಲದೆ ಬ್ರಹ್ಮನ ಮಗಳು ಎಂಬುದು ಜನಾಭಿಪ್ರಾಯ. ಮುಂದುವರೆದಂತೆ ಕಾವೇರಿ ತೀರ್ಥ ವರ್ಷಕ್ಕೊಮ್ಮೆ ಉದ್ಭವವಾಗುತ್ತದೆ. ಈ ಅಂಶಗಳನ್ನು ಸೂಕ್ಷ್ಮವಾಗಿ ಗ್ರಹಿಸುವಾಗ ಅನೇಕ ಭಿನ್ನಾಭಿಪ್ರಾಯಗಳಿಗೆ ಎಡೆ ಮಾಡಿಕೊಡುತ್ತವೆ. ಪ್ರಸ್ತುತ ಸಂದರ್ಭದಲ್ಲಿ ಅದರ ಚರ್ಚೆಸೂಕ್ತವಲ್ಲವೆಂಬುದು ನನ್ನ ಅಭಿಪ್ರಾಯ. ಆದರೆ ‘ಕಾವೇರಿ’ ಎಂಬ ಪದ ಹೆಣ್ಣುತನವನ್ನು ಪ್ರತಿಸೂಸುವ ಅಂಶವನ್ನು ಮಿಳಿತಗೊಂಡಿರುತ್ತದೆ. ಈ ನದಿಯಿಂದ ಉಂಟಾಗುವ ಜನಕಲ್ಯಾಣ ಮುಖ್ಯವೇ ಹೊರತು, ಅವಳ ಬಗ್ಗೆ ಅನಿಸ್ಸಾಯಕ ಮನಸ್ಸುಗಳಿಂದ ಅಳೆಯುವುದು ವ್ಯರ್ಥ.

ಇವಳ ಸೃಷ್ಟಿಯ ಚೇತನವು ದ್ರವ ರೂಪದಲ್ಲಿನ ಜಲವಾಗಿರಬಹದು. ಆದರೆ ದೈವದ ಪರಿಕಲ್ಪನೆಯಿಂದ ಧರೆಗೆ ಧುಮುಕಿ ನಿತ್ಯ ನಿರಂತರವಾಗಿ ಹರಿಯುತ್ತಾ ಬಂದಿರುವಳು. ಜನಪದರ ರೂವಾರಿ. ಇಂದಿಗೂ ಅವಳು ಆರಾಧಿಸಿಕೊಮಡು ಪ್ರಶಂಸೆಗೆ ಅರ್ಹಳಾಗಿರುವಳು. ಇವಳ ಸನ್ನಿಧಿಯಲ್ಲಿ ಮಿಂದರೆ ಪಾಪವು ಕಳೆದು, ಪುಣ್ಯವು ಪ್ರಾಪ್ತಿ ಆಗುತ್ತದೆ ಎಂಬುದು ಜನಪದರ ನಂಬಿಕೆ. ಈ ಹಿನ್ನೆಲೆಯನ್ನು ಅರಿತ ಮನುಷ್ಯ ಪ್ರಾಣಿ ಭಯದಿಂದ ಅನ್ಯಾಯದ ದಾರಿಯಲ್ಲಿ ನಡೆಯುವುದನ್ನು ಬಿಡುವನು. ಸ್ವಾರ್ಥ ಭಾವನೆ ಗೌಣ ಹೊಂದುವುದು. ಹೀನ ಮನಸ್ಸು ಹಿಂದೆ ಸರಿಯುವುದು. ಕೋಪವು ಕಮರಿ ಹೋಗುವುದು. ದುರಹಂಕಾರದ ಚಿಂತನೆ ದೂರವಾಗಿ ದೀನತೆಗೆ ಬಾಗುತ್ತದೆ. ಒಬ್ಬ ಮಗದೊಬ್ಬನನ್ನು ಬೇಟೆಯಾಡುವುದು, ನಿಂದಿಸುವುದು ಮರುಕಳಿಸುವುದಿಲ್ಲ. ದ್ವೇಷಿಸುವಂತ ಹೆಪ್ಪುಗಟ್ಟಿದ ಮನಸ್ಸುಗಳು ಛಿದ್ರವಾಗುತ್ತವೆ. ಇವಳ ತುಂತುರು ಹನಿಗಳು ಕೂಡ ಮನುಷ್ಯರನ್ನು ಆಕರ್ಷಿಸಿಕೊಂಡು ಅವರಲ್ಲಿರುವ ಕೊಳಕು ಮೌಢ್ಯತೆಯನ್ನು ತೊಡೆಯುವ ಪ್ರಯತ್ನದಲ್ಲಿ ಭಾಗಿಯಾಗಿ ಆಧ್ಯಾತ್ಮಿಕತೆಯ ದಾರಿಯನ್ನು ತೋರಿಸುವಳು. ಇದು ಪೂರ್ಣಪ್ರಮಾಣದಲ್ಲಿಯೂ ಇರಬೇಕೆಂದು ಅಲ್ಲ. ಕಾಲಘಟ್ಟಗಳಲ್ಲಿ ಇಳಿಮುಖವಾಗುವುದಂತೂ ಸತ್ಯ.

‘ಕಾವೇರಿ ಮತ್ತು ಸ್ತ್ರೀ ಸ್ಮೃತಿ’ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಾವೇರಿ ಪದವೇ ಸ್ತ್ರೀ ಸ್ಮೃತಿಗಳ ಬತ್ತಳಿಕೆಯಲ್ಲಿ ಹುದುಗಿಕೊಂಡಿದೆ. ಇವು ಪ್ರತಿ ಕ್ಷಣ, ಪ್ರತಿದಿನ ಒಂದನ್ನೊಂದು ಅಗಲಿರುವುದಿಲ್ಲ. ಎಣಿಸಲಾರದಷ್ಟು ಸ್ತ್ರೀ ಸ್ಮೃತಿಗಳು ಕಾವೇರಿಯ ಜೀವಾಳದಲ್ಲಿ ಆಂತರಿಕವಾಗಿ ಮಿಳಿತವಾಗಿದ್ದು, ಬಾಹ್ಯವಾಗಿ ಒಂದಿಲ್ಲೊಂದು ರೂಪ ಪಡೆದು ಚೇತನವಾಗಿ ಬೆಳಗುತ್ತಿರುತ್ತದೆ. ಆದಿಮ ಸಂಸ್ಕೃತಿ ಅಂತ್ಯಗೊಳ್ಳುತ್ತಾ, ನಾಗರಿ ಪ್ರಜ್ಞೆ ಮೂಡಿ ಶಿಷ್ಟವಾಗುತ್ತ ಬಂದ ಎರಡು ಕಾಲಿನ ಮನುಷ್ಯ ಪ್ರಾಣಿ THE TERM CAVERY ಯನ್ನು Coin ಮಾಡಿದ. ಆದಿಮ ಮನುಷ್ಯ ನದಿಯೆಂದು ಕರೆದುಕೊಂಡಿಲ್ಲ. ಅಥವಾ ಕಾವೇರಿ ಎಂದು ಕೂಗಿಲ್ಲ. ಆದರೆ ದೈವವು ನಮಗೆ ನೀಡಿದ ವರವೆಂದು ಬಗೆದ. ಅದನ್ನು ಸವಿದಾಗ ಅವನ ಭಾವನೆಯೇ ಬೇರೆ. ಉದಾಹರಣೆಗೆ ಜೇನುತುಪ್ಪವನ್ನು ನಾವು ನಾಲಗೆಯಲ್ಲಿ ರುಚಿ ನೋಡಿದಾಗ ಸಿಹಿಯಾಗಿರುತ್ತದೆಯಷ್ಟೇ. ರುಚಿ ಹೇಗಿರುತ್ತದೆ? ಎಷ್ಟರ ಪ್ರಮಾಣದಲ್ಲಿರುತ್ತದೆ? ಇಂಥ ಮಾನದಂಡಗಳು ಗೌಣವಾಗುತ್ತವೆ. ಒಟ್ಟಾರೆಯಾಗಿ ಸಿಹಿಯಾಗಿರುತ್ತದೆ ಅಷ್ಟೇ. ಆದುದರಿಂದ ಬಾಯಾರಿಕೊಂಡ ಮನುಷ್ಯ ನೀರನ್ನು ಕುಡಿದಾಗ ಅಪ್ಪಾ…., ತುಂಬಾ ಸಂತೋಷವಾಯಿತು ಎಂದು ಹೇಳುತ್ತಾನೆ. ಆದರೆ ಆ ಸಂದರ್ಭದಲ್ಲಿ ಎಷ್ಟರ ಪ್ರಮಾಣ ಎಂಬುದು ನಿಗೂಢ. ಅದರ ನಂತರದ ಚರ್ಚೆಗಳು ಬೇರೆ. ಕಾವೇರಿ, ಕಾವೇರಮ್ಮ, ಕಾವೇರಿ ತಾಯಿ, ಹೀಗೆ ಅನೇಕ ಹೆಸರುಗಳಿಂದ ಜನಪದರು ಕರೆಯುವರು. ಈ ಹೆಸರಿನಲ್ಲಿಯೇ ಹೆಣ್ಣುತನದ ಅಂಶಗಳು ಭೌತಿಕವಾಗಿ, ಆಂತರಿಕವಾಗಿ ಬೆಸೆದುಕೊಂಡಿರುವುದನ್ನು ಅರಿಯಬಹುದಾಗಿದೆ. ಉಚ್ಚರಿಸುವಾಗಲೇ ಒಂದು ರೀತಿಯ ಭಾವನಾತ್ಮಕದ ಉನ್ಮಾದತೆ ಹುಟ್ಟಿಕೊಳ್ಳುವುದು. ಈಕೆ ನಿರ್ಮಲತೆಯಿಂದ ಹರಿಯುತ್ತಿರುತ್ತಾಳೆ ಎಂಬ ಕಲ್ಪನೆ ನಮಗೆ ಬರುತ್ತದೆ. ಪ್ರತಿ ದಿನ ಸೂರ್ಯೋದಯ ಉದಯಿಸಿ ಕಣ್ಮರೆಯಾಗುತ್ತಾನೆ. ಚಂದ್ರ ಅವನ ಕತ್ತಲೆಯನ್ನು ಸರಿಸಿ ಬೆಳದಿಂಗಳ ಹೊನಲನ್ನು ನೀಡುವನು. ಮನುಷ್ಯ ತನ್ನ ದಿನನಿತ್ಯದ ಕೆಲಸ ಮುಗಿಸಿ, ಒಂದು ಹೊತ್ತಾದರೂ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಆದರೆ ಪ್ರತಿದಿನ, ಪ್ರತಿಕ್ಷಣ, ಸಂಕಷ್ಟಗಳ ಸರಮಾಲೆಯ ಸುಳಿಯಲ್ಲಿ ಸಿಲುಕುವಳು ಕಾವೇರಿ. ಇವಳು ಶಿಖರದಿಂದ ಜಾರಿ ಪರ್ವತದಿಂದ ಪ್ರಪಾತಕ್ಕೆ ಧುಮುಕುವಳು. ಅನಂತರ ಭೋರ್ಗರೆಯುವ ಬಿಳಿ ಬುಗ್ಗೆಯನ್ನು ಹೊರಸೂಸುತ್ತಾ ಹರಿಯುತ್ತಿರುತ್ತಾಳೆ. ಹೀಗೆ ಹಳ್ಳಕೊಳ್ಳ, ಬೆಟ್ಟ-ಗುಡ್ಡ, ತಗ್ಗು ಎತ್ತರದಲ್ಲಿ, ಬಿದ್ದು, ಎದ್ದು, ನಿಂತು ಹರಿಯುವಾಗ ಅಪಾರವಾದ ನೋವಿನಿಂದ ಕಣ್ಣೀರು ಹರಿಸುವಳೇನೋ ಯಾರು ಬಲ್ಲರು? ಹರಿಯುವಾಗ ತನ್ನ ಒಡಲಿನ ಒಳಲಾಟವನ್ನು ಬಿಚ್ಚಿಕೊಳ್ಳದೆ ಮೌನವಾಗುವಳೇನೋ ಅನ್ನಿಸುತ್ತದೆ. ಆಗ ಹಿಂಸೆಯಷ್ಟು ಊಹಿಸಲಾಗದು. ಸ್ತ್ರೀಯರು, ಜಲರೂಪದ ನೀರಿನ ಅಂಕಿತನಾಮದಿಂದ ಕರೆಯಲ್ಪಡುವರು. ಅಂತವುಗಳಲ್ಲಿ ಗಂಗಾ, ಯಮುನಾ, ಸರಸ್ವತಿ, ಗೋದಾವರಿ, ನರ್ಮದ, ಕೃಷ್ಣೆ, ಕಾವೇರಿ, ತುಂಗಭದ್ರೆ, ಕನ್ನಿಕೆ, ತಾಯಿಯಾಗಿ, ಪತಿಗೆ ಪತ್ನಿಯಾಗಿ, ಅತ್ತೆಗೆ ಸೊಸೆಯಾಗಿ ಕುಟುಂಬಕ್ಕೆ ಊರುಗೋಲಾಗಿ ನಿಂತಾಗ ಅವಳ ನೋವುಂಡು ಇತರರಿಗೆ ಸಂತೋಷದ ಆಸರೆಯಾಗಿ ನಿಲ್ಲುವಳು.

ಇವಳು ಕಾಲಾನುಘಟ್ಟದಲ್ಲಿ ಅನೇಕ ರೂಪಾಂತರವಾಗಿ ನಮ್ಮ ಮಧ್ಯ ನಿಲ್ಲುವಳು. ಒಮ್ಮೆ ತಾಯಿಯಾಗುವಳು, ಗಂಡನ ಆರಾಧ್ಯ ದೇವತೆ, ಮಕ್ಕಳ ಕ್ಷೀರ ರೂಪಿಣಿ, ಅತ್ತೆಗೆ ಸೊಸೆಯಾಗುವಳು. ಒಟ್ಟಿನಲ್ಲಿ ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲುವಳು. ಹೀಗೆ ಅನೇಕ ಮೌಲಿಕತೆಯಿಂದ ಮೆರೆಯುವಳು. ತನ್ನ ಜೀವಿತ ಕ್ಷಣಗಳಲ್ಲಿ ಕಂಡುಂಡ ಸಂಕಷ್ಟಗಳೆಷ್ಟೋ. ಅವುಗಳನ್ನು ತೋರ್ಪಡಿಸಲು ಆಗದೆ, ನೆಮ್ಮದಿಯ ನೆನಪುಗಳನ್ನು ಮೆಲುಕು ಹಾಕಲು ಸಾಧ್ಯವಾಗದೇ ನಿರಂತರವಾಗಿ ಬದುಕನ್ನು ಸಾಗಿಸುವ ಗಣಿಯಾಗಿರುತ್ತಾಳೆ. ಆದುದರಿಂದ ಕಾವೇರಿ ಶೀರ್ಷಿಕೆಯೇ ಭಾವನಾತ್ಮಕವಾದುದು. ಅಲ್ಲದೆ ಇದು ಇಂಪಾದ ನಾದದ ಉನ್ಮಾದಕತೆ ಅದರೊಳಗೆ ಅಡಗಿರುತ್ತದೆ.

ನಾವು ನೋಡುತ್ತಿರುವ ಪರಿಸರದಲ್ಲಿ ಅಥವಾ ಸೃಷ್ಟಿಯ  ದೃಷ್ಟಿಯಲ್ಲಿ ಅನೇಕ ಜಂಜಾಟಗಳು ಎದುರುಗೊಳ್ಳುತ್ತಿರುತ್ತವೆ.ಇಲ್ಲಿ ಇದೇ ಶ್ರೇಷ್ಠ. ಮತ್ತೊಂದು ಪಾಪ. ಮಗದೊಂದು ಪುಣ್ಯವೆಂಬುದು ಸರಿಯಲ್ಲ. ಅವೆಲ್ಲವೂ ಕೂಡ ನಮ್ಮ ಮಾನಸಿಕದೊಳಗೆ ಉಂಟಾಗುವಂತಹ ಕಲ್ಪನೆಗಳು. ಇಂಥ ಕಲ್ಪನೆಗಳನ್ನು ಮಾಡಿಕೊಂಡು ಮಾನವನ ಉಪಯೋಗಕ್ಕೆ ಬಾರದಂತಹವುಗಳನ್ನು ತಿರಸ್ಕರಿಸಿ ಅದಕ್ಕೆ ಕೆಟ್ಟ ರೂಪ ಕೊಟ್ಟು ತಿರಸ್ಕರಿಸುವುದೂ ಅಲ್ಲದೆ ಸಾಧಕವಾದವುಗಳ ಕುರಿತು ಹೊಗಳಿ ತುಂಬಾ ಉತ್ತಮವಾಗಿದೆ ಎಂದು ಹೇಳುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ವಿಶ್ವದ ಸೃಷ್ಟಿಯಲ್ಲಿರುವಂತಹವೆಲ್ಲ ಮನುಷ್ಯನ ಉಪಯೋಗಕ್ಕೆ ಇರುವಂತದ್ದೆಯಾಗಿರುತ್ತದೆ. ಅದು ನಮ್ಮ ಮನಸ್ಸಿನ ಪ್ರತಿಕ್ರಿಯೆಗಳೇ ಹೊರತು ಬೆರೆಯಲ್ಲ. ನಮ್ಮ ಅಕ್ಕಪಕ್ಕದಲ್ಲಿರುವ ಮರ, ನದಿ, ಕಲ್ಲಿನ ವಿಗ್ರಹವನ್ನು ದೇವರೆಂದು ಆರಾಧಿಸುತ್ತೇವೆ. ಇಂದು ಕುಡ ಸಮಾಜ ಮನ್ನಣೆ ಕೊಡುತ್ತಿದೆ. ಇದನ್ನು ತಪ್ಪೆಂದು ಹಳಿಯುವುದು ಸಲ್ಲದು. ಅಥವಾ ಆ ದೇವರು ಮಾತ್ರ ಶ್ರೇಷ್ಠ, ಮತ್ತೊಬ್ಬರು ಪೂಜಿಸುವ ದೈವ ಅಸಾಧ್ಯವೆಂಬುದು ಸಲ್ಲದು. ಈ ರೀತಿಯ ಮನಸ್ಸುಳ್ಳವರ ಮಾನಸಿಕ ಪ್ರತಿಕ್ರಿಯೇಗಳೇ ದ್ವಂದ್ವತೆಗೆ ಎಡೆ ಮಾಡಿಕೊಡುತ್ತವೆ.

ಬ್ರಹ್ಮಗಿರಿ ಬೆಟ್ಟದಲ್ಲಿ ಬ್ರಹ್ಮನ ಮಗಳು ಕಾವೇರಿ ಇದ್ದಳೋ ಅಥವಾ ಇರಲಿಲ್ಲವೋ ಎಂಬ ಅಂಶ ಮುಖ್ಯವಲ್ಲ. ಆದರೆ ತಲಕಾವೇರಿಯಲ್ಲಿರುವ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಗರ್ಭೀಕರಿಸಿಕೊಂಡು ಸ್ತ್ರೀ ಸ್ಮೃತಿಯ ಸಂಕೇತವಾಗಿ ಜಲರೂಪಿಣಿಯಾಗಿ ಹರಿದ ಕಲ್ಪನೆ ಬಗ್ಗೆ ಜನಪದರ ಆಸಕ್ತಿ ತುಂಬಾ ಶ್ರೇಷ್ಠವಾದದ್ದು.

ಜನಪದರ ಪೂರ್ವಿಕರು ಕಾವೇರಿಯನ್ನು ಪರಮ ಪಾವಿತ್ರವೆಂದು ಬಗೆದಿರುತ್ತಾರೆ. ಇಂದಿಗೂ ಕೂಡ ಮುಂದುವರೆಯುತ್ತಿದೆ. ಅಲ್ಲದೆ ಅವಳಲ್ಲಿ ಮಿಂದರೆ ಪಾಪ ನಿವಾರಣೆಯಾಗಿ, ನೆಮ್ಮದಿಯ ಸೆಲೆಯಾಗುವುದೆಂಬ ಸತ್ಯಾಂಶವನ್ನು ಅರಿತಿದ್ದಾರೆ. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರಿಗೆ ಅವಳ ಬಗ್ಗೆ ಕಲ್ಪನಾಶಕ್ತಿ ಇತ್ತೆಂಬುದು ಪ್ರಶಂಸನೀಯ. ಅವಳನ್ನು ಸೂಕ್ಷ್ಮದೃಷ್ಟಿಯಲ್ಲಿ ಭಾವನಾತ್ಮಕವಾಗಿ ಮನಸ್ಸಿನೊಳಗೆ ತಿಣುಕುವಾಗ ಅರಿವಾಗುತ್ತದೆ. ಇವಳು ಒಂದು ಜಲಬುಗ್ಗೆಯಾಗಿ ಹರಿಯುತ್ತಾ ಸ್ತ್ರೀ ಸ್ಮೃತಿಯ ರೂಪದ ಪಾತಳಿಯಾಗಿರುವಳು. ಮನುಷ್ಯ ಎಂದು ಧರೆಯ ಮೇಲೆ ಬದುಕನ್ನು ಸವೆಸುತ್ತಾ ಬಂದನೋ, ಲೋಕರೂಪಿಣಿಯಾದ ನೀರನ್ನು ಕಾವೇರಿ ನದಿಯನ್ನು ತನ್ನ ಜೀವನದಲ್ಲಿ ಬಳಸುತ್ತಾ ಬಂದಿರುತ್ತಾನೆ. ಇವಳು ಜಲರೂಪಿಣಿಯಾಗಿ ಹರಿಯುತ್ತಾ ಜಗತ್ತಿನ ಕಲ್ಯಾಣದ ಕಡೆಗೆ ತನ್ನನ್ನು ತೊಡಗಿಸಿಕೊಂಡು, ಅಭಿವೃದ್ಧಿಸುವ ಸ್ತ್ರೀ ಸ್ಮೃತಿಯ ಕಲ್ಪನೆ ಅಡಗಿದೆಯೆಂದು ಹೇಳಬಹುದು. ಈ ಅಂಶಗಳು ಬರೀ ಸ್ತ್ರೀಗೆ ಅಥವಾ ಸ್ತ್ರೀ ಸ್ಮೃತಿಗಳಿಗೆ ಮಾತ್ರ ಅನ್ವಯವಾಗುವುದಿಲ್ಲ. ಸಮಸ್ತ ಮನುಷ್ಯ ಪ್ರಾಣಿಗಳಿಗೂ ಅನ್ವಯಿಸುತ್ತದೆ ಎಂಬ ಮಾತು ನೆನಪಿರಬೇಕಾಗುತ್ತದೆ. ಒಟ್ಟಾರೆಯಾಗಿ ಕಾವೇರಿ ನದಿಗೆ ಪರಮಪೂಜ್ಯ ಪಾವಿತ್ರದ ಭಾವನಾತ್ಮಕ ಸ್ತ್ರೀಯ ರೂಪ ಬೆಸೆದುಕೊಂಡಿರುತ್ತದೆ.

ಸ್ತ್ರೀಯು ಕೂಡ ಹಂತಹಂತವಾಗಿ ಬದುಕಿನ ಜಂಜಾಟಗಳಲ್ಲಿ ಸಿಲುಕಿರುತ್ತಾಳೆ. ಆದರೆ ಅದರಲ್ಲೇ ಕಮರುವುದಿಲ್ಲ. ಅವಳು ಆರಂಭದಿಂದ ಅಂತಿಮದವರೆಗೆ ಪ್ರಗತಿಯ ಚೇತನವಾಗಿ ಮುನ್ನುಗ್ಗುತ್ತಾ ಜಗತ್ತಿನ ಕಲ್ಯಾಣ ಮಾಡುವ ದೃಷ್ಟಿಯಲ್ಲಿ ಅವಳ ಒಳ ಒಳಲಾಟದ ಕಲ್ಪನೆಯಾಗಿರಬಹುದಾಗಿದೆ. ನಮಗೆ ನಾವೇ ಈ ಪ್ರಶ್ನೆಯನ್ನು ಹಾಕಿಕೊಂಡಾಗ ಇದು ಸ್ತ್ರೀಯರಿಗೆ ಮಾತ್ರ ಅನ್ವಯಿಸುತ್ತದೆಯೇ? ಇಲ್ಲ. ಪ್ರತಿಯೋರ್ವರಿಗೂ ಸಂಬಂಧಪಟ್ಟಿರುತ್ತದೆ. ಅದನ್ನು ಒಳಗಣ್ಣು ಬಿಟ್ಟು ನೋಡಬೇಕು. ಆಗ ಮಾತ್ರ ಅರಿವಾಗುತ್ತದೆ. ವೈಚಾರಿವಾದ ನೆಲೆಯಲ್ಲಿ ನೋಡುವಾಗ ಕಾವೇರಿ ನದಿ ಒಂದು ಜಲ ಬುಗ್ಗೆಯಾಗಿರಬಹುದು. ಅದೇ ಸಂದರ್ಭದಲ್ಲಿ ಭಾವುಕ ಭಾವನಾತ್ಮಕ ದೃಷ್ಟಿಯಿಂದ ಅದೇ ಜಲಬುಗ್ಗೆ ಪವಿತ್ರ ತೀರ್ಥವಾಗುತ್ತದೆ. ಇದನ್ನು ತಪ್ಪೆಂದು ಹಳಿಯುವುದು ಸಲ್ಲದು. ಇದು ಇಲ್ಲಿಗೆ ಕೊನೆಗೊಳ್ಳಬಾರದು.

ನಮ್ಮ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿಯೂ ಕೂಡ ಕಾವೇರಿ ನದಿಯ ಬಗ್ಗೆ ಕತೆಗಳು ಸಿಗುತ್ತವೆ. ಇಲ್ಲಿ ಈ ನದಿಯು ಕಾವ್ಯಗಳು ರಚನೆಯಾಗುವುದಕ್ಕಿಂತಲೂ ಮೊದಲು ಹರಿಯುತ್ತಿದ್ದಳು ಎನ್ನಬಹುದು. ಏಕೆಂದರೆ ಯಾವುದೇ ವಸ್ತುವಿನ ಬಗ್ಗೆ ಬರೆಯುವಾಗ ಅದನ್ನು ನೋಡಿಯೋ, ಕೇಳಿಯೋ, ಆಲಿಸಿಯೋ ಇವು ಯಾವುದು ಇಲ್ಲದಿದ್ದರೆ ಕೇಳಿಯಾದರೂ ತಿಳಿದುಕೊಂಡಿರುತ್ತೇವೆ.

ನಮ್ಮ ಕಲ್ಪನೆಯಲ್ಲಿ ಅನೇಕ ವಸ್ತು ವಿಷಯಗಳ ಬಗ್ಗೆ ಚರ್ಚೆಗಳು ಘಟಿಸುತ್ತಿರುತ್ತವೆ. ಅಥವಾ ನಿಸರ್ಗದ ಬಲೆಯೊಳಗೆ ಸಿಲುಕಿ ಅರಿವಿಲ್ಲದೆ ಸವಿದಿರುತ್ತವೆ. ಅವು ಯಾವುದೋ ಸಂದರ್ಭದಲ್ಲಿ ಮರುಕಳಿಸಬಹುದಾಗಿದೆ. ರಾಮಾಯಣದ ಪುಟಗಳಲ್ಲಿ ಮೆಲುಕು ಹಾಕುವಾಗ ಕಾವೇರಿ ಅಗಸ್ತ್ಯರ ತುಣುಕುಗಳು ನಮ್ಮೆದುರಿಗೆ ಬಂದು ನಿಲ್ಲುತ್ತವೆ. ಅಗಸ್ತ್ಯ ಋಷಿಯು ರಾಮನಿಗೆ ಮಂತ್ರ ದೀಕ್ಷೆ ಮಾಡಿದ ಅಂಶಗಳು ಬೆಳಕಿಗೆ ಬರುತ್ತವೆ. ಅಂದರೆ ರಾಮಾಯಣದ ಕಾಲ ಕ್ರಿಸ್ತಪೂರ್ವ ಐನೂರು ವರ್ಷ ಹಿಂದಕ್ಕೆ ಹೋಗುತ್ತದೆ. ಇವಳು ಜಲರೂಪಿಣಿಯಾಗಿ ಹರಿದು ತಲಕಾವೇರಿ ಪ್ರತಿಷ್ಟಾಪನೆಗೊಂಡಿದ್ದು ಸುಮಾರು ೨೫೦೦ ವರ್ಷಗಳಿಗೂ ಹಿಂದೆ ಎನ್ನಬಹುದಾಗಿದೆ. ಇನ್ನೂ ಮಹಾಭಾರತದಲ್ಲಿ ಬರುವಂತಹ ಪಾತ್ರಗಳಲ್ಲಿ ಭೀಮನ ಸ್ಥಾನ ತುಂಬ ಮಹತ್ವದ್ದು. ಇದರ ಬಗ್ಗೆ ಜನಪದರ ಕತೆಗಳು ಇನ್ನೂ ಹಸಿಯಾಗಿದೆ ಎನ್ನಬಹುದು. ಪಾಂಡವರು ವನವಾಸ ಮಾಡುತ್ತಾ ಬ್ರಹ್ಮಗಿರಿಬೆಟ್ಟಕ್ಕೆ ಬರುತ್ತಾರೆ. ಅಲ್ಲಿ ಅಲೆದಾಡುವಾಗ ಭೀಮನು ಬ್ರಹ್ಮಗಿರಿ ಬೆಟ್ಟದಲ್ಲಿ ಪಾದ ಇಟ್ಟು ನಡೆಯುವಾಗ ಅವನು ನಿಂತ ಸ್ಥಳ ಜಗ್ಗಿ ಅವನ ಪಾದ ಇವತ್ತಿಗೂ ಇದೆ ಎನ್ನುವರು. ಆದರೆ ಇಂದಿಗೂ ತಂದೆ ತಾಯಿ ಜೀವಂತವಿದ್ದು, ಇವರಿಗೆ ಹುಟ್ಟಿದ ಹಿರಿಯ ಮಗ ಅ ಬೆಟ್ಟವನ್ನು ಹತ್ತಬಾರದೆಂಬ ನಂಬಿಕೆ ಇದೆ. ಏಕೆಂದರೆ ಹಾಗೇನಾದರೂ ಹತ್ತಿದರೆ ಅವನು ಮರಣವನ್ನಪ್ಪುವನು ಎಂಬುದಾಗಿ ಹೇಳುವರು. ಹೀಗೆ ಅನೇಕ ಅಂಶಗಳು ಕಾವೇರಿ ಪೂವೃ ಇತಿಹಾಸವನ್ನು ತಿಳಿಸಿಕೊಡುತ್ತದೆ.

ವಿಚಾರವಾಧಿಗಳ ವಾದ ಮಂಡನೆಯೇ ಬೇರೆಯಾಗಿರುತ್ತದೆ. ಏಕೆಂದರೆ ಜಗತ್ತಿನ ಸೃಷ್ಟಿಯಾಗಿ ಮಿಲಿಯಗಟ್ಟಲೆ ವರ್ಷಗಳು ಉರುಳಿವೆ. ನದಿಗಳು ಹುಟ್ಟಿ ಹರಿಯುತ್ತಾ ಲಕ್ಷಾಂತರ ವರ್ಷಗಳು ಕಳೆದಿವೆ. ಇವುಗಳ ಬಗ್ಗೆ ಅನೇಕ ವಾಗ್ವಾದಗಳಿರಬಹದು. ಇಂದಿಗೂ ನಮ್ಮ ಪೂರ್ವಿಕರು ಹಾಗೂ ಹಿರಿಕರು ಕೆಲವು ಮಾತುಗಳನ್ನು ಪಿಸುಗುಡುವರು. ಏಕೆಂದರೆ ಸಂಶಯವನ್ನು ವ್ಯಕ್ತಪಡಿಸುತ್ತಾ ಹೋದರೆ ಅವು ಮತ್ತೆ ಮತ್ತೆ ಮರುಕಳಿಸುತ್ತಾ ಹೋಗುತ್ತವೆ. ನಮ್ಮಲ್ಲಿರುವ ನಾಣ್ನುಡಿಯಂತೆ ಋಷಿ ಮೂಲ, ನದಿ ಮೂಲವನ್ನು ಕೇಳಬಾರದು ಎಂಬುದು ಅವರ ಅಭಿಪ್ರಾಯ. ಆದುದರಿಂದ ಇಂತಹ ವಿಷಯಗಳ ಕುರಿತು ಭಾವುಕರ ಮೌನವೇ ಉತ್ತರವಾಗಿದೆ.

ಕಾವೇರಮ್ಮನ ಹಾಡು, ಐತಿಹ್ಯ,ಕಥೆ, ಪುರಾಣ, ವಾಸ್ತುಶಿಲ್ಪ, ಕಲೆ ಯಾವುದೇ ಇದ್ದರೂ ವೈಚಾರಿಕವಾಗಿ ಮಾತನಾಡುವವರಿಗೆ ಮುಖ್ಯವೆನ್ನಿಸುವುದಿಲ್ಲ. ಅಲ್ಲದೆ ವರ್ಷಕ್ಕೊಮ್ಮೆ ತೀರ್ಥ ಉದ್ಭವ ಸರಿ ಕಾಣದೆ ಇರಬಹುದು. ಇಲ್ಲಿ ಸೃಷ್ಟಿ ಚೇತನ ಕಂಡು ನಿಧಾನವಾಘಿ ಹರಿಯುತ್ತಾ ಜನಪರ ಕಲ್ಯಾಣ ಜೊತೆಗೆ ಜಗತ್ತಿನ ಹಿತವನ್ನು ಕಾಪಾಡುವಲ್ಲಿ ಸ್ತ್ರೀ ಸ್ಮೃತಿಗಳೊಂದಿಗೆ ಬೆರೆತು ಪ್ರಧಾನ ಪಾತ್ರ ವಹಿಸುವಳು.

ಶತಶತಮಾನಗಳಿಂದ ನಮ್ಮ ಜನಪದ ಪೂರ್ವಿಕರು ಕಾವೇರಿ ಕ್ಷೇತ್ರದಲ್ಲಿ ಪುಣ್ಯ ಸ್ನಾನ ಮಾಡುತ್ತಾ ಬಂದಿರುವರು. ಅಲ್ಲದೆ ಭಕ್ತಿ, ಭಜನೆಗಳು, ಉತ್ಸವ, ಜಾತ್ರೆಗಳು ಆಚರಿಸಿಕೊಂಡು, ಆರಾಧಿಸಿಕೊಂಡು ಬಂದಿದ್ದನ್ನು ಕೇಳಿದ್ದೇವೆ. ಇವೆಲ್ಲವೂ ಔಪಚಾರಿಕತೆಯಿಂದಲ್ಲ. ಇಲ್ಲಿ ಜನಪದರ ಅನನ್ಯತೆ, ನಿಷ್ಠೆ, ಭಕ್ತಿ, ಭಾವುಕತೆಯಿಂದ ಬೆರೆತು ತೀರ್ಥಸ್ನಾನ ಮಾಡಿ ನಮ್ಮ ಬದುಕು ಪರಿಪೂರ್ಣವಾಯಿತು ಎಂದು ನೆಮ್ಮದಿಯನ್ನು ಕಂಡುಕೊಮಡಿರುವರು. ಅವರೆಲ್ಲರು ಇಂದು ನಮ್ಮೊಂದಿಗೆ ಇಲ್ಲ. ದೂರವಾಗಿದ್ದಾರೆ. ಆದರೆ ಅವರು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಇಂದು ಹಿಂದಿನವರಷ್ಟೇ ಭಯ-ಭಕ್ತಿ ಇಲ್ಲದಿರಬಹದು. ಅವರಂತೆಯೇ ವೈವಿಧ್ಯಮಯವಾದ ಆಶಾಭಾವನೆಯನ್ನು ನಮ್ಮಂತರಾಳದಲ್ಲಿ ಇರಿಸಿಕೊಂಡು ಕಾವೇರಮ್ಮನನ್ನು ಆರಾಧಿಸುತ್ತಿದ್ದೇವೆ ಎಂದರೆ ಅತಿಶಯೋಕ್ತಿಯಾಗಲಾರದು.

ಪ್ರಸ್ತುತ ಸಂದರ್ಭದಲ್ಲಿ ಜಗತ್ತಿನಲ್ಲಿ ಅನೇಕ ರೂಪಾಂತರಗಳಾಗಿವೆ. ಬದಲಾವಣೆಗಳು ದಿನನಿತ್ಯ ಮರುಕಳಿಸುತ್ತಿವೆ. ನಾವೆಲ್ಲ ಕಂಡರಿಯಂದಂತೆ ಎಲ್ಲೆಲ್ಲೂ ಜಾಗತೀಕರಣದ ಅಲೆಗಳು ಜನರನ್ನು ಬಡಿದೆಬ್ಬಿಸುತ್ತಿವೆ. ಅಲ್ಲದೆ ಔದ್ಯೋಗೀಕರಣ, ಉದಾರೀಕರಣ, ಕೈಗಾರೀಕರಣ, ಸ್ತ್ರೀವಾದಿ ನೆಲೆ, ಮಾರ್ಕ್ಸ್‌ವಾದ ಹಾಗೂ Postmodernism ಅಥವಾ concept ಗಳಲ್ಲಿ ಪೈಪೋಟಿ ನಡೆಯುತ್ತಿದೆ. ಇಂಥ ಅಂಶಗಳಲ್ಲಿ ಚರ್ಚೆಗಳು ಬಡಬಡಿಸುತ್ತಿದ್ದೇವೆಯೋ. ಇವು ಹಳ್ಳಿಗಾಡಿನಲ್ಲಿ ತಮ್ಮ ಯಾತ್ರೆ ಕೈಗೊಂಡಿಲ್ಲ. ಕೈಗೊಂಡಿದ್ದರೂ ಅವು ಅಲಕ್ಷಿತ ಜನರಿಗೆ ತಲುಪಿಲ್ಲ. ತಲುಪಿದ್ದರೂ ಎಲ್ಲವೂ ಸ್ವೀಕರಿಸಿಲ್ಲ. ಕೆಲವರು ಒಪ್ಪಿಕೊಂಡಿದ್ದರೇ ಮತ್ತೆ ಕೆಲವರು ದಿನನಿತ್ಯ ಚಟುವಟಿಕೆಗಳಲ್ಲಿ ರೂಢಿಸಿಕೊಂಡಿಲ್ಲ. ಇಂಥ ಕಾಲಘಟ್ಟದಲ್ಲಿ ನಮ್ಮ ಪೂರ್ವಜರಷ್ಟೇ ಅನನ್ಯತೆ ಇರಿಸಿಕೊಂಡಿಲ್ಲದೆ ಇರಬಹುದು. ತುಷ್ಠಿಗುಣ (Utility) ಹೇಗೆ ಕಡಿಮೆಯಾಗುತ್ತಾ ಹೋಗುತ್ತದೆಯೋ ಹಾಗೆ ನಮ್ಮ ಮುಂದಿನ ಪೀಳಿಗೆಯವರು ಕಡಿಮೆ ಪ್ರಮಾಣದಲ್ಲಿ ಕಾವೇರಿ ನದಿಯನ್ನು  ಭಕ್ತಿಯಿಂದ ಆರಾಧಿಸಬಹುದು. ಅಥವಾ ಇನ್ನೂ ಹೆಚ್ಚಿನ ನಿಷ್ಠೆ, ಭಾವುಕತೆ, ಪೂಜೆಗಳು ನಡೆಯಲೂಬಹುದು.

ಕಾವೇರಮ್ಮ ಜಗತ್ತಿನ ಇತರ ವಸ್ತುಗಳಿಗೂ ಅನ್ವಯಿಸದೇ ಇದ್ದಾಗ ಅವಳು ಒಂದು (Frame) ಚೌಕಟ್ಟಿಗೆ ಒಳಪಡುತ್ತಿದ್ದಳು. ಆದರೆ ಜಲರೂಪಿಣಿಯಾಗಿ ಸರ್ವಂತರ್ಯಾಮಿನಿಯಾಗಿ ಸಮಸ್ತ ವಸ್ತುಗಳಲ್ಲಿಯೂ ಚೇತನವಾಗಿರುವಳು. ಇವಳು ಬ್ರಹ್ಮ ಕುಂಡಿಕೆಯಲ್ಲಿ ಅಡಗಿಸಿಟ್ಟುಕೊಂಡ ಜಲ ದ್ರವರೂಪವಲ್ಲ. ಸೂಕ್ಷ್ಮ ದೃಷ್ಟಿಯಲ್ಲಿ ಅವಲೋಕಿಸಿ ನೋಡುವಾಗ ಸ್ಥಿರತೆ ಅಥವಾ ಸೀಮಿತ ಎಲ್ಲೆ ಒಳಗೆ ಇರುವ ಶಕ್ತಿಯವಳಲ್ಲ. ಈಕೆಯ ಜಲದ ವರವು ಇರುವೆಡೆಯಲ್ಲೆಲ್ಲ ಕಾಣಬಲ್ಲ ದೃಷ್ಟಿಯೇ ಮುಕ್ತ ದೃಷ್ಟಿ ಅನ್ನಿಸುವುದು. ಅವಳ ಉದ್ಭವ ಬ್ರಹ್ಮಕುಂಡಿಕೆ. ಇದೊಂದು ದೇಗುಲ. ಜನಪದರು ಭಾವುಕತೆಯಿಂದಲೇ ಆರಾಧಿಸುವರು. ಇಲ್ಲಿ ಆ ಕ್ಷೀರ ಶಕ್ತಿಯನ್ನು ಹಿಡಿದಿಡುವ ದೇವಸ್ಥಾನ ಒಂದು ಸಂಕೇತವಷ್ಟೇ. ಈಕೆಯನ್ನು ದೇಗುಲದಲ್ಲಿ ಕಟ್ಟಿಹಾಕಿ ಪೂಜಿಸುವ ವ್ಯಕ್ತ ದೃಷ್ಟಿ ಸಲ್ಲದು. ಅಲ್ಲದೆ ಇವಳನ್ನು ಸಂಕ್ರಮಣದಲ್ಲಿ ಮಿಂದು, ತೀರ್ಥ ಸೇವಿಸಿದರೆ ಇವಳನ್ನು ಮರೆತಂತೆಯೇ. ಆಗ ಆಸಕ್ತ ದೃಷ್ಟಿಯಾಗುತ್ತದೆ. ಆದರೆ ಮುಕ್ತ ಮತ್ತು ಒಳ ದೃಷ್ಟಿಯಿಂದ ಅಪ್ಪಬೇಕು. ವ್ತಕ್ತಿ ದೃಷ್ಟಿ ಗೌಣವಾಗಬೇಕು. ಇವಳು ಸಮಸ್ತ ವಸ್ತುಗಳಲ್ಲಿಯೂ ಅನ್ವಯಿಸುವಳೆಂಬ ಕಲ್ಪನೆ ಬಂದಾಗ ಮಾತ್ರ ಜಗತ್ತಿನ ಚಿನ್ಮಯವಾಗುವಳು. ಕಾವೇರಿಯಂತೆ ಸ್ತ್ರೀಯ ಸ್ಮೃತಿಯೂ ಕೂಡ. ನಮ್ಮ ನಿಮ್ಮೆಲ್ಲರ ಬದುಕು ಕೂಡ. ಮನುಷ್ಯ ಹಸುಗೂಸಾಗಿ, ಯೌವ್ವನಾವಸ್ಥೆ ಪಡೆದು, ಅನಂತರ ಗೃಹ ಬಂಧನ ಅನಂತರದಲ್ಲಿ ವೃದ್ಧಾಪ್ಯ ಪಡೆಯುವನು. ಇವು ಕಾಲಾನುಘಟ್ಟಗಳಲ್ಲಿ ಅವನ ಶರೀರದಲ್ಲಿ ಆಗುವಂಥ ಬದಲಾವಣೆಗಳು. ಆದರೆ ಕಾವೇರಿಗೆ ವೃದ್ಧಾಪ್ಯವಿಲ್ಲ, ಮೃತ್ಯುವಿಲ್ಲ, ನಿತ್ಯ ನಿರಂತರವಾಗಿ ಹರಿಯುತ್ತಿರುವ ಚಿನ್ಮಯಿ. ಇವಳಲ್ಲಿ ರೂಪಾಂತರಗಳು ಮಾತ್ರ ಘಟಿಸುತ್ತಿರುತ್ತವೆ. ಇವಳು ಉದ್ಭವದಿಂದ ಕ್ಷಣ ಕ್ಷಣ, ದಿನ ದಿನ, ಹಂತ ಹಂತದಲ್ಲಿ ಮಳೆ-ಬಿಸಿಲೆನ್ನದೆ ಶಿಖರ-ಪರ್ವತ, ಹಳ್ಳ-ಕೊಳ್ಳದಲ್ಲಿ ತಿರುವಿನಲ್ಲಿ, ಸಂಗಮದಲ್ಲಿ, ಜಲಪಾತದಲ್ಲಿ, ಸುಳಿಯಲ್ಲಿ ನಾದದ ಉನ್ಮಾದಕತೆಯಲ್ಲಿ ಸದಾ ಗೋಚರಿಸುವ ಶಕ್ತಿ ಅವಳಲ್ಲಿ ಅಡಗಿದೆ. ಮನುಷ್ಯ ಮುಕ್ತ ದೃಷ್ಟಿಯಿಂದ, ಅನನ್ಯತೆ, ನಿಷ್ಠೆಯಿಂದ ಕಾವೇರಿಯು ಸಮಸ್ತ ವಸ್ತುಗಳಲ್ಲಿ ಜೀವಂತದಲ್ಲಿ ಬೆರೆತಿರುವಳೆಂಬ ಕಲ್ಪನೆ ಇದ್ದರೆ ಇವಳು ಸದಾ ಸತ್ಯವನ್ನು ಪ್ರತಿಬಿಂಬಿಸುವ ಚೇತನವಾಗಿರುವಳು.