ಕೊಡಗು ಬಹುಸಂಸ್ಕೃತಿಗಳ ಆಗರ, ಅಲ್ಲಿ ಬಹುಭಾಷೆಗಳು, ಬಹುರೂಪಿ ಜನಪದರು, ಬಹುರೂಢಿಗಳು, ಬಹುಆಚರಗಣೆಗಳು, ಸಂಪ್ರದಾಯಗಳು, ಹಬ್ಬ-ಹರಿದಿನಗಳು, ಉತ್ಸವಗಳು ಅಸ್ತಿತ್ವದಲ್ಲಿವೆ. ಒಟ್ಟಾರೆಯಾಗಿ ಕಾಂಪ್ಲೆಕ್ಸ್ ಆದ ಸಂಸ್ಕೃತಿಯನ್ನು ಕಾಣಬಹುದು. ಇವೆಲ್ಲವುಗಳಿಗೆ ಕಾವೇರಿ ತಾಯಿಯೇ ಕಾರಣೀಭೂತಳೆಂದರೆ ಆಶ್ಚರ್ಯವೇನಿಲ್ಲ. ಇಲ್ಲಿ ಇನ್ನೊಂದು ತಾತ್ವಿಕವಾದ ಅಂಶವನ್ನು ಗುರುತಿಸುವುದಾದರೆ ಜನಪದರು ಏಕೆ ಹಬ್ಬ-ಹರಿದಿನಗಳರ್ಣಣೂ ಅಡಕಗೊಳಿಸಿಕೊಂಡರು? ಅಲ್ಲದೆ ನದಿಗಳಿಂದಲೇ ಹಬ್ಬ-ಹರಿದಿನಗಳು ಹುಟ್ಟಿಕೊಂಡವೇ? ಅವರ ಲೋಕ ಜ್ಞಾನದಲ್ಲಿ ಹಬ್ಬ-ಹರಿದಿನಗಳನ್ನು ಆಚರಿಸಬೇಕೆಂಬ ಆಸೆ ಏಕೆ ಚಿಗುರಿತು? ಹೀಗೆ ಅನೇಕ ತೊಡರುಗಳು ಗಂಟಿಕ್ಕಿರುತ್ತವೆ. ಈ ಎಲ್ಲಾ ಪ್ರಶ್ನೆ ಅಥವಾ ಚರ್ಚೆಗೆ ಮುಖ್ಯವಾದ ಉತ್ತರವೆಂದರೆ ನೀರು. ಮನುಷ್ಯ ತನ್ನ ಬದುಕಿನಲ್ಲಿ ದೈನಂದಿನ ದಿನಗಳಲ್ಲಿ ದೂಡುವಾಗ ನೀರು ಮುಖ್ಯವಾದ ಅಂಶವನ್ನಾಗಿ ತೆಗೆದುಕೊಂಡ. ಆ ನೀರು ಅಥವಾ ನದಿಗಳು ಹರಿಯುವ ಆಸುಪಾಸಿನಲ್ಲಿ ಜೀವಿಸತೊಡಗಿದ. ಜೀವನಕ್ಕೆ ಬೇಸಾಯ, ಬೇಟೆ, ಇನ್ನಿತರ ಕಾರ್ಯದಲ್ಲಿ ನಿರತನಾದ. ಅನಂತರ ಅವುಗಳಲ್ಲಿ ತೊಡಗಿದಾಗ ಸುಖದ ಕೊರತೆ ಉಂಟಾಯಿತು. ವರ್ಷದ ಕೆಲವು ದಿವಸಗಳಲ್ಲಿ ಹಬ್ಬ-ಹರಿದಿನಗಳನ್ನು ಆಚರಿಸಲು ನಿರ್ಧರಿಸಿದ. ಹೀಗೆ ಅವನ ಬದುಕಿನಲ್ಲಿ ಎಷ್ಟೇ ಕಷ್ಟ ಬಂದರೂ, ಸುಖದ ದಿನಗಳನ್ನು ಗುರುತಿಸಿ, ಹಬ್ಬಗಳನ್ನು ರೂಢಿಸಿಕೊಂಡು ಬಂದಿರುತ್ತಾನೆ. ಈ ಎಲ್ಲಾ ಒತ್ತಾಸೆಗಳಿಗೆ ಕಾವೇರಿ ನದಿ ಅಕ್ಷಯ ಪಾತ್ರೆಯಾಗಿ ಹೊರ ಚಿಮ್ಮುತ್ತಿದ್ದಾಳೆ. ಆದುದರಿಂದ ಹಬ್ಬಗಳು ಬಳಕೆಯಲ್ಲಿ ಬಂದಿರುತ್ತವೆ.

ಕಾವೇರಿ ನದಿಯೊಂದಿಗೆ ಅನೇಕ ನದಿಗಳು ಕೂಡಿಕೊಂಡು ಹರಿಯುತ್ತವೆ. ಇವಳು ಹರಿದೆಡೆಯಲ್ಲಿ ಅನೇಕ ಜನಪದರು ಹಲವಾರು ಹಬ್ಬ-ಹರಿದಿನಗಳನ್ನು ಆಚರಿಸುವುದನ್ನು ಇಂದಿಗೂ ನೋಡಬಹುದಾಗಿದೆ. ತಲಕಾವೇರಿಯಿಂದ ಹರಿದು ಬಂಗಾಳ ಕೊಲ್ಲಿಯವರೆಗೂ ವೈವಿಧ್ಯಮಯವಾದ ಹಬ್ಬ-ಹುಣ್ಣಿಮೆಗಳನ್ನು ಜನಪದರು ಆಚರಿಸುತ್ತಾರೆ.

ಒಟ್ಟಿನಲ್ಲಿ ಜನಪದರ ಸಂಸ್ಕೃತಿಗೆ ನದಿಗಳು ಜೀವಾಳವಾಗಿರುತ್ತವೆ. ನದಿಗಳು ತನ್ನ ಹರಿಯುವಿಕೆಯಿಂದ ಸಮಸ್ತ ಜೀವ ಕೋಟಿ ರಾಶಿಗಳಿಗೆ ಆಧಾರವಾಗಿ ನಿಲ್ಲುತ್ತವೆ. ನದಿಗಳು ಇಲ್ಲದಿದ್ದರೆ ಒಂದು ರೀತಿಯ ಭೀಭತ್ಸ, ವಿಕೋಪ ಇಂದು ಎದುರಿಸಬೇಕಾಗುತ್ತಿತ್ತೇನೋ. ಈ ಎಲ್ಲ ಅಂಶಗಳನ್ನಿಟ್ಟು ನೋಡುವುದಾದರೆ ಸಂಸ್ಕೃತಿಯೆಂಬ ಪದರು ಒದ್ದಾಡುತ್ತಿತ್ತೆನ್ನಬಹುದು. ಆದ್ದರಿಂದ ಮನುಷ್ಯನ ಬದುಕು ರೂಪಾಂತರಗೊಳ್ಳುತ್ತಿರುವುದಕ್ಕೆ ನದಿಗಳು ಪ್ರಧಾನ ಪಾತ್ರವನ್ನು ವಹಿಸಿರುತ್ತವೆ. ತರ್ಕಕ್ಕೆ ಒಡ್ಡಿದಾಗ ಇಲ್ಲಿ ಉಲ್ಲೇಖಿಸಬಹುದಾಗಿರುವ ಅಂಶವೆಂದರೆ ಯಾವುದೇ ಸಂಸ್ಕೃತಿಯ ಮೂಲ ರೂಪವೆಂದರೆ ನದಿಗಳೇ. ಈ ಮೇಲಿನ ಅಂಶಗಳಣ್ನು ಮನನ ಮಾಡಿಕೊಂಡು ಒಂದು ಸ್ಪಷ್ಟತೆಗೆ ಬರಬಹುದಾಗಿದೆ. ಕೊಡಗಿರಬಹುದು, ಮೈಸೂರಿರಬಹುದು ಅಥವಾ ಬೇರೆ ಸ್ಥಳಗಳಿರಬಹುದು. ಇಲ್ಲೆಲ್ಲ ನದಿಗಳ ಪ್ರೇರೇಪಿತವಾಗಿ ಸೃಷ್ಟಿಯಾದವುಗಳಾಗಿವೆ.

ಕಾವೇರಿ ಸಂಕ್ರಮಣ

ಕೊಡಗಿನಲ್ಲಿ ನೆಲೆನಿಂತ ಕೊಡವರ ಮನೆ ದೇವತೆ ಕಾವೇರಿ. ಜೊತೆಗೆ ಇತರ ಜನವರ್ಗದವರಾದ ಅರೆಭಾಷೆ ಗೌಡರು, ಲಿಂಗಾಯಿತರು, ತುಳು, ಮಲೆಯಾಳಿ, ತಮಿಳರು, ಪರಿಶಿಷ್ಟ ಜಾತಿ ವರ್ಗದವರು, ಯರವರು, ಹೀಗೆ ಇನ್ನೂ ಅನೇಕ ಜನವರ್ಗದ ಜನಪದರು ಕೂಡ ಕಾವೇರಿಯನ್ನು ಆರಾಧಿಸುವರು. ಕೊಡಗಿನಲ್ಲಿರುವ ಹೆಚ್ಚಿನ ಪ್ರಮಾಣದಷ್ಟು ಅಲ್ಲದಿದ್ದರೂ, ಕೆಲವು ವರ್ಗದವರು ಮೈಸೂರಿನಲ್ಲಿ ಆರಾಧಿಸುವುದನ್ನು ಕಡಿಮೆ ಪ್ರಮಾಣದಲ್ಲಿಯಾದರೂ ಕಾವೇರಿಯನ್ನು ಆರಾಧಿಸುವರು. ತಮಿಳುನಾಡಿನಲ್ಲಂತೂ ಆರಾಧ್ಯ ದೇವತೆಯಾಗಿ ಕಾವೇರಿ ಮನೆ ಮನೆ ಮಾತಾಗಿರುವಳು.

ಕಾವೇರಿ ಸಂಕ್ರಮಣ ವಿಶಿಷ್ಟವಾದ ಹಬ್ಬ. ಇದರ ಮತ್ತೊಂದು ಹೆಸರು ತುಲಾ ಸಂಕ್ರಮಣವೆನ್ನುವರು. ಈ ಹಬ್ಬ ಕೊಡಗಿನ ನಾನಾ ಭಾಗಗಳಲ್ಲಿ ಅಕ್ಟೋಬರ‍್ ತಿಂಗಳ ೧೭ ನೇ ತಾರೀಖಿನಂದು ಜರುಗುತ್ತದೆ. ಯಾಕೆ ಇಷ್ಟು ಮಹತ್ವ ಕಾವೇರಿ ಸಂಕ್ರಮಣಕ್ಕಿದೆ ಎಂದರೆ, ಅಂದು ಕಾವೇರಿ ಪುನರ‍್ ಜನ್ಮ. ಇದು ಪ್ರತಿ ವರ್ಷಗಳಲ್ಲಿ ಮರುಕಳಿಸುತ್ತಿರುದೆ. ಮಳೆ ಬರಲಿ, ಹೋಗಲಿ, ಬರ ಬರಲಿ – ಇಲ್ಲದೆ ಇರಲಿ, ಚಳಿ ಇರಲಿ, ಬಿಸಿಲಿರಲಿ. ಈ ಹಬ್ಬ ಮಾತ್ರ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ನಿನ್ನೆ ಮೊನ್ನೆ ಹಬ್ಬವಲ್ಲ. ಇದಕ್ಕೆ ತನ್ನದೇ ಆದ ಶಕ್ತಿ ಇದೆ.

ಅಕ್ಟೋಬರ‍್ ೧೭ ರಂದು ಸಂತಸದ ದಿನ. ಅಂದು ಜನಪದರು ತಮ್ಮ ಮನೆ ಮಠಗಳನ್ನು ಶುಚಿಗೊಳಿಸುವರು. ಅನಂತರ ಭಾಗಮಂಡಲಕ್ಕೆ ಬಂದು, ಅಲ್ಲಿ ಪ್ರತಿಸ್ಥಾಪಿತವಾದ ಭಗಂಡೇಶ್ವರನ ಸನ್ನಿಧಿಯಲ್ಲಿ ಮೀಯುವರು. ಆ ಸ್ಥಳವೇ ತ್ರಿವೇಣಿಯೆಂದು ಜಗತ್ಪ್ರಸಿದ್ಧಿ. ಆನಂತರ ಭಗಂಡೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವರು. ಅನಂತರ ತಲಕಾವೇರಿಗೆ ಹೋಗುವರು. ಇನ್ನೂ ಹಲವರು ಮೊದಲೇ ಕಾವೇರಿ ಉಗಮ ಸ್ಥಳಕ್ಕೆ ಹೋಗುವ ರೂಢಿಯೂ ಇದೆ. ತಲಕಾವೇರಿಯಲ್ಲಿ ‘ಪುಷ್ಕರಣೆ’(ಕೊಳ)ಯಲ್ಲಿ ಸ್ನಾನ ಮಾಡುವರು. ಅಲ್ಲಿಂದ ಅಗಸ್ತ್ಯೇಶ್ವರನಿಗೆ ಪೂಜೆ ಸಲ್ಲಿಸುವರು. ತುಲಾ ಸಂಕ್ರಮಣದ ದಿನ ತಲಕಾವೇರಿಯ ಪವಿತ್ರ ತೀರ್ಥಕುಂಡಿಕೆಯಲ್ಲಿ ತೀರ್ಥ ಉದ್ಭವವಾಗುವುದು. ಇದು ನಿಜಕ್ಕೂ ವಿಶೇಷ ಮತ್ತು ಆಶ್ಚರ್ಯವನ್ನು ಜನಪದರಲ್ಲಿ ಇಂದಿಗೂ ಮೂಡಿಸುತ್ತದೆ. ಈ ತೆರನಾದ ಕ್ರಿಯೆ ವರ್ಷಕ್ಕೊಮ್ಮೆ ಜರಗುತ್ತದೆ. ಹಾಗೆಯೇ ಈ ಹಬ್ಬವನ್ನು ವರ್ಷಕ್ಕೊಮ್ಮೆ ಜನಪದರು ಭಯ ಭಕ್ತಿಯಿಂದ ಆಚರಿಸುತ್ತಾರೆ. ಪುರಾಣದಲ್ಲಿ ಕಾವೇರಿ ಬಗ್ಗೆ ಅನೇಕ ಅಂಶಗಳನ್ನು ಅಡಕಗೊಳಿಸಲಾಗಿದೆ. ಅದರಲ್ಲಿರುವಂತೆ ಉತ್ತರದ ಗಂಗೆ ಪರಿಶುದ್ಧಿಗೊಳಿಸುವುದಕ್ಕಾಗಿ ಗುಪ್ತಗಾಮಿಯಾಗಿ ಹರಿದು ಕಾವೇರಿಯೊಡನೆ ಸೇರುವುದು ಪ್ರತೀತಿ ಎಂದು ಉಲ್ಲೇಖಿಸಲಾಗಿದೆ.

ಕಾವೇರಿ ಸಂಕ್ರಮಣ ಜನಪದರ ವಿಶಿಷ್ಟವಾದ ಹಬ್ಬ. ರಾಜ್ಯದ ವಿವಿಧ ಸ್ಥಳಗಳಲ್ಲಿ ನೆಲೆನಿಂತಿದ್ದರೂ, ತಮ್ಮ ನಾಡಿಗೆ ಬಂದು ಭಯ-ಭಕ್ತಿಯಿಂದ ಕಾವೇರಿ ಸಂಕ್ರಮಣವನ್ನು ಆಚರಿಸುವುದನ್ನು ಇಂದಿಗೂ ಕಾಣಬಹುದಾಗಿದೆ.

ಹರಿಸೇವೆ ಅಥವಾ ಹರ್ಸಾವೆ

ಇದೊಂದು ವಿಶೇಷ ರೀತಿಯ ಉತ್ಸವವಾಗಿರುತ್ತದೆ. ಕೊಡಗಿನ ಉತ್ತರ ಭಾಗದಲ್ಲಿ ಕಂಡುಬರುತ್ತದೆ. ಉದಾ.ಹೆಬ್ಬಾಲೆ, ಶಿರಂಗಾಲ, ಕಣಿವೆ, ಕೂಡಿಗೆ, ಹಳಗೋಟೆ ಇನ್ನೂ ಮುಂತಾದವು. ಇನ್ನೂ ಮೈಸೂರು ಜಿಲ್ಲೆಯ ಅನೇಕ ಊರುಗಳಲ್ಲಿ ಈ ತೆರನಾದ ಉತ್ಸವವನ್ನು ನೋಡಬಹದು. ಹರಿಸೇವೆ ಗೌಡರಲ್ಲಿಯೂ ಪ್ರಧಾನವಾಗಿ ಕಂಡುಬರುತ್ತದೆ. ಅಲ್ಲದೆ ಪರಿಶಿಷ್ಟ ಜಾತಿಯವರಲ್ಲಿಯೂ ಮುಖ್ಯವಾಗಿ ಆಚರಿಸುವ ಪರಿಪಾಠ ರೂಢಿಯಲ್ಲಿದೆ. ಇದನ್ನು ಆಯಾಯ ಊರಿನ ಮುಖ್ಯಸ್ಥರು ಸೇರಿ ಒಂದು ಗೊತ್ತಾದ ದಿನವನ್ನು ನಿರ್ಧರಿಸುವರು. ಅಂದೇ ಈ ಹರಿಸೇವೆ ಉತ್ಸವ ನಡೆಯುತ್ತದೆ.

ಹರಿಸೇವೆ ಉತ್ಸವವನ್ನು ಆಚರಿಸುವ ದಿನದಂದು ಬಂಧು-ಬಳಗದವರನ್ನು ಆಹ್ವಾನಿಸುವ ಪ್ರತೀತಿ ಇದೆ. ಅಂದು ಇಡೀ ಊರಿನ ಜನಪದರು ಸೇರಿಕೊಂಡು ಹರಿಸೇವೆ ಮಾಡುವ ಸ್ಥಳ, ಊರಿನ ಹೆಬ್ಬಾಗಿಲು, ದೇವಸ್ಥಾನ, ತಮ್ಮ ತಮ್ಮ ಮನೆ-ಮಠಗಳನ್ನು ಶುಚಿತ್ವಗೊಳಿಸುವ ರೀತಿ ಮನಸ್ಸಿಗೆ ಗೆಲುವನ್ನು ನೀಡುತ್ತದೆ. ಅಂದು ಅನ್ನದಾನ ಸಮರ್ಪಣೆ ಏರ್ಪಡಿಸಲಾಗುತ್ತದೆ. ಕೆಲವು ಗ್ರಾಮಗಳಲ್ಲಿ ಕೆಂಚರಾಯನ ಸೇವೆಯನ್ನು ಮಾಡಿ ಅವನಿಗೆ ಅದನ್ನು ಬಲಿದಾನ ಮಾಡುವರು. ಇನ್ನೂ ಕೆಲವೆಡೆ ಬರೀ ಪೂಜೆಯನ್ನು ಫಲ-ಪುಷ್ಪಗಳಿಂದ ಆ ಊರಿನ ಗ್ರಾಮದೈವವನ್ನು ಪ್ರಾರ್ಥಿಸುವ ರೂಢಿಯಲ್ಲಿದೆ. ಬಲಿಕೊಡುವ ಹಳ್ಳಿ ಅಥವಾ ಆ ಊರಿನ ಜನಪದರು ಸಂಪ್ರದಾಯದಂತೆ ಊರಿನ ಬೀದಿಗಳಲ್ಲಿ ಮೆರವಣಿಗೆ ಏರ್ಪಡಿಸುವರು. ಆ ಸಂದರ್ಭದಲ್ಲಿ ಹೆಣ್ಣು ಮಕ್ಕಳು ತಮ್ಮ ಊರಿನ ದೈವಕ್ಕೆ ಹಣ್ಣು-ಕಾಯಿ ಒಡೆದು ಆರತಿಯನ್ನು ಮಾಡಿಸುವರು. ಅನಂತರ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನೆರವೇರುತ್ತದೆ. ಈ ಮೊದಲೇ ಗೊತ್ತುಪಡಿಸಿದ ಸ್ಥಳಕ್ಕೆ ಮೆರವಣಿಗೆಯು ಬಂದು ಸೇರುತ್ತದೆ. ಅಲ್ಲಿ ಮೆರವಣಿಗೆಯಲ್ಲಿ ಹರಿಗೆ ದೇವರು ಜೊತೆಗೆ ವಾದ್ಯ ಘೋಷಣೆಗಳು ಮೊಳಗುತ್ತಿರುತ್ತವೆ. ಗ್ರಾಮ ದೈವಗಳು, ಆರತಿ, ಕಳಸ ಹಿಡಿದುಕೊಂಡವರು ಇರುತ್ತಾರೆ. ಆ ಸಂದರ್ಭದಲ್ಲಿ ಆ ಊರಿನ ಮುಖ್ಯಸ್ಥ, ಹಿರಿಯರು, ಹೆಂಗಸರು, ಮಕ್ಕಳು, ಮುದುಕರು ಭಾಗವಹಿಸುವರು. ನಿರ್ಧಿಷ್ಟ ಸ್ಥಳದಲ್ಲಿ ಹರಿಗೆ ದೇವರನ್ನು ಇಟ್ಟು ಪೂಜೆ ಅಲಂಕೃತ ಮಾಡಿರುತ್ತಾರೆ. ಆಗ ಅಲ್ಲಿ ಸೇರಿದ ಜನಪದರೆಲ್ಲರೂ ದೈವ ಭಕ್ತಿಯಲ್ಲಿ ತಲ್ಲೀನರಾಗಿರುವರು.

ಕೆಲವು ಊರುಗಳಲ್ಲಿ ಆಡು, ಕೋಳಿ, ಬಲಿ ಕೊಡುವುದು ರೂಢಿಯಲ್ಲಿದೆ. ಮತ್ತೆ ಕೆಲವು ಗ್ರಾಮಗಳಲ್ಲಿ ಅದು ಕಂಡುಬರುವುದಿಲ್ಲ. ಹರಿ ಸೇವೆಗೆ ಸಾಮಾನ್ಯವಾಗಿ ದಾಸರೆನ್ನುವ ಜಾತಿಯವರು ಪೂಜಾರಿಗಳಾಗುವರು, ಅವರೇ ಬಲಿ ಕೊಡುವ ಆಡು, ಕೋಳಿಗೆ ತೀರ್ಥ ಪ್ರೋಕ್ಷಿಸುತ್ತಾರೆ. ಆನಂತರ ಅವುಗಳನ್ನು ಕಡಿಯಲಾಗುತ್ತದೆ. ಅನಂತರ ದೇವರಿಗೆ ಎಡೆಯನ್ನು ಇಡುವರು. ಆಗ ಬಾಡು, ಅನ್ನ, ಇನ್ನಿತರ  ಆಹಾರ ಪದಾರ್ಥಗಳನ್ನಿಟ್ಟು ಪೂಜಿಸುವರು.

ಆ ಸಂದರ್ಭದಲ್ಲಿ ಹರಿಗೆ ಹಿಡಿದ ವ್ಯಕ್ತಿಯ ಮೈಮೇಲೆ ದೇವರು ಬರುತ್ತದೆ. ಆ ಸಂದರ್ಭದಲ್ಲಿ ದೇವರು ಬಂದಂತಹ ವ್ಯಕ್ತಿ ಹರಿಸೇವೆಯ ಬಗ್ಗೆ, ಆ ಊರಿನ ಬಗ್ಗೆ, ಮಳೆ ಬೆಳೆ ಬಗ್ಗೆ ಪ್ರಸ್ತಾಪ ಮಾಡುತ್ತಾನೆ. ಜೊತೆಗೆ ಘಟಿಸಬಹುದಾದ ಘಟನೆ, ಆದ ಘಟನೆಯ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತಾನೆ. ಈ ಎಲ್ಲಾ ಅಂಶಗಳ ಜೊತೆಗೆ ಇನ್ನು ಮುಂದೆ ಆ ಊರಿನ ಜನ ಯಾವ ರೀತಿ ಪೂಜೆ ರೂಢಿಸಿಕೊಂಡರೆ ಅನುಕೂಲವಾಗುತ್ತದೆ ಎಂಬ ಅಂಶವನ್ನು ದೇವರು ಬಂದ ವ್ಯಕ್ತಿ ಹೇಳುವನು. ಆಗ ಆ ಊರಿನ ಹಿರಿಯ ವ್ಯಕ್ತಿ ಇನ್ನೂ ಮುಂದಕ್ಕೆ ನೀವು ಹೇಳಿದ ಹಾಗೆ ನಡೆದುಕೊಳ್ಳುತ್ತೇವೆ. ನಮ್ಮಿಂದ ಏನಾದರೂ ತಪ್ಪು ಘಟಿಸಿದ್ದರೆ ತನ್ನ ಹೊಟ್ಟೆಯಲ್ಲಿಟ್ಟುಕೊಂಡು ನಮ್ಮನ್ನು ಕಾಪಾಡಬೇಕೆಂದು ಬೇಡಿಕೊಳ್ಳುವನು. ಅಲ್ಲದೆ ನಾವು ನಿನ್ನ ಮಕ್ಕಳು. ಇನ್ನು ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ನಡೆದುಕೊಳ್ಳುತ್ತೇವೆ ಎಂದು ನಮಸ್ಕರಿಸುವನು. ಅನಂತರ ದೇವರು ಬಂದ ವ್ಯಕ್ತಿ ಕರ್ಪೂರ ನುಂಗಿ, ಪ್ರಸಾದ ಸ್ವೀಕರಿಸಿ ನಂತರ ಮೈಮೇಲಿನ ದೇವರು ನಿರ್ಗಮಿಸುತ್ತದೆ. ಈ ರೀತಿಯ ಉತ್ಸವವನ್ನು ಇಂದಿಗೂ ಕೊಡಗಿನ ಹಾಗೂ ಮೈಸೂರು ಗ್ರಾಮ್ಯದ ಜನಪದರಲ್ಲಿ ವೀಕ್ಷಿಸಬಹುದಾಗಿದೆ.

ಕಿಡ್ಡಾಸ

ಅರೆ ಭಾಷೆಯ ಗೌಡರ ವಿಶಿಷ್ಟ ಹಬ್ಬ. ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಜನಪದರು ಕೂಡ ಆಚರಿಸುತ್ತಾರೆ. ಇದಕ್ಕೆ ತನ್ನದೇ ಆದ ಮೌಲಿಕತೆ ಇದೆ. ಏಕೆಂದರೆ ದಿನನಿತ್ಯ ಉಪಯೋಗಿಸುವ ಧಾನ್ಯದ ಪೂರಕವಾಗಿರುವಂಥದ್ದು. ಆದುದರಿಂದ ಜನಪದರು ಬಹಳ ಶ್ರದ್ಧೆಯಿಂದ, ಭಯ-ಭಕ್ತಿಯಿಂದಲೂ ಈ ಹಬ್ಬವನ್ನು ಆಚರಿಸುವರು. ಈ ಹಬ್ಬ ಕೊಡಗಿನಾದ್ಯಂತ ಇಂದಿಗೂ ಅಸ್ತತ್ವದಲ್ಲಿದೆ. ಸಾಮಾನ್ಯವಾಗಿ ಒಕ್ಕಲು ಕೆಲಸ ಮುಗಿದ ನಂತರ ಆಚರಿಸುವಂಥದ್ದು ಕ್ರಮ. ಭತ್ತ ಲಕ್ಷ್ಮಿಯ ಪ್ರತಿರೂಪ. ಅದು ಧಾನ್ಯ ಲಕ್ಷ್ಮಿ ಎಂಬುದು ಜನಪದರ ನಂಬಿಕೆ. ಬೆಳೆ ಕೊಯಿಲಿಗೆ ಬಂದ ನಂತರ ಭತ್ತವನ್ನು ಕೊಯ್ದು, ಬಡಿದು, ಕಣದಲ್ಲಿ ರಾಶಿ ಹಾಕಿ, ಅನಂತರ ಪೂಜೆ ಮಾಡುವರು. ಅಲ್ಲಿಂದ ಮನೆಯ ಕಣಜಕ್ಕೆ ತುಂಬಿಸುವ ಪದ್ಧತಿ ಇದೆ.

ಕಣಜಕ್ಕೆ ತುಂಬಿಸುವ ಮುನ್ನ ಅದನ್ನು ಗುಡಿಸಿ ಸಾರಿಸುವರು. ಆಮೇಲೆ ಮುತ್ತೈದೆಯರು ರಂಗೋಲಿ ಹಾಕುವರು. ನಂತರ ಸಗಣಿಯಿಂದ ಮಾಡಿದ ಬೆನಕನನ್ನು ಮಧ್ಯದಲ್ಲಿಟ್ಟು ಅದಕ್ಕೆ ಗರಿಕೆ (ಹುಲ್ಲು) ಗರಿಗಳನ್ನು ಚುಚ್ಚಿರುತ್ತಾರೆ. ಈ ತೆರನಾದ ಕ್ರಿಯೆ ಮುಗಿದ ನಂತರ ಕುಟುಂಬದ ಹಿರಿಯ ಮತ್ತು ಅವನ ಧರ್ಮಪತ್ನಿ ಪೂಜೆ ಸಲ್ಲಿಸುವರು. ರಾಶಿಯಿಂದ ತಂದ ಭತ್ತವನ್ನು ಕಣಜಕ್ಕೆ ತುಂಬಿಸುವರು. ಮಾಮೂಲಿನಂತೆ ಪುನಃ ಪೂಜೆ ನಡೆಯುತ್ತದೆ. ಆಮೇಲೆ ಹೊಸ ಭತ್ತವನ್ನು ಕುಟ್ಟಿ, ಅದೇ ಅಕ್ಕಿಯಲ್ಲಿ ಪಾಯಸ ಮಾಡಲಾಗುತ್ತದೆ. ಕುಟುಂಬದ ಸದಸ್ಯರೆಲ್ಲರೂ ಆ ಪಾಯಸವನ್ನು ಪ್ರಸಾದದಂತೆ ಸ್ವೀಕರಿಸಿ, ಅನಂತರ ಊಟ ಮಾಡಿ ಮುಗಿಸುವರು.

ಆ ಸಂತೋಷದಲ್ಲಿ ಕಿಡ್ಡಾಸ ಹಬ್ಬದ ಸಂಪ್ರದಾಯವಿದೆ. ಇದು ಮತ್ತೂ ಆಶ್ಚರ್ಯ ಮೂಡಿಸುತ್ತದೆ. ಹೇಗೆಂದರೆ ‘ಭತ್ತದ ಬತ್ತಳಿಕೆ’ಯನ್ನು ಮಾಡಿರುತ್ತಾರೆ. ಅದಕ್ಕೆ ‘ಕಲ್ಲುಮುಳ್ಳು’ ಇಡುವ ಪದ್ಧತಿ ಇದೆ. ಇನ್ನೊಂದು ವಿಶಿಷ್ಟತೆಯೆಂದರೆ ಭೂಮಿಗೆ ಎಣ್ಣೆಯನ್ನು ಸುರಿಯುತ್ತಾರೆ. ಕಾರಣವೇನೆಂದರೆ ಭೂಮಿ ತಾಯಿಗೆ ತಂಪು ಉಂಟಾಗಲೆಂದು. ಕೊಡಗಿನಲ್ಲಿ ಅರೇಭಾಷೆ ಗೌಡರು, ಕೊಡವರು, ಇನ್ನೂ ಕೆಲವು ಜನವರ್ಗದವರಲ್ಲಿ ಇಂದಿಗೂ ಕಾಣಬಹುದಾಗಿದೆ. ಇಂದಿಗೂ ಯುಗಾದಿ ದಿನ ತಮ್ಮ ಗದ್ದೆಗೆ ಪ್ರಥಮವಾಗಿ ಎತ್ತುಗಳನ್ನು ಕಟ್ಟಿ ಉಳುಮೆ ಮಾಡುವುದನ್ನು ಗ್ರಾಮೀಣ ಜನಪದರು ರೂಢಿಸಿಕೊಂಡಿದ್ದಾರೆ.

ಹುತ್ತರಿ

ಕೃತ್ತಿಕಾ ನಕ್ಷತ್ರ ನವೆಂಬರ‍್ ತಿಂಗಳು. ಕೊಡಗಿನಾದ್ಯಂತ ಮೈ ಕೊರೆಯುವ ಚಳಿ. ಎತ್ತ ನೋಡಿದರತ್ತ ಇಬ್ಬನಿ. ಒಬ್ಬರನ್ನೊಬ್ಬರು ಗುರುತಿಸಲಾರದಷ್ಟು ಇರುತ್ತದೆ. ಸೂರ್ಯ ಮಂಜಿನಲ್ಲಿ ಮುಪ್ಪಟ್ಟಿರುತ್ತಾನೆ. ತಣ್ಣಗೆ ಗಾಳಿ ಸೊಂಪಾಗಿ ಬೀಸುತ್ತಿರುತ್ತದೆ. ಆಗ ಕಾವೇರಿ ನದಿ ಜುಳು ಜುಳನೆ ಹರಿಯುವಾಗ ರಾಗದ ನಾದ ಕಿವಿಗಿಂಪು ನೀಡುತ್ತದೆ. ಆದರೆ ನೀರನ್ನು ಮುಟ್ಟಿದಾಗ ರಕ್ತ ಹೆಪ್ಪುಗಟ್ಟಿಸುವಂತ ಕೊರೆಯುವ ನೀರು ಅಬ್ಬಾ….! ಎಂಥವರನ್ನು ಮೈ ನಡುಗಿಸುತ್ತದೆ.

ನವೆಂಬರ‍್ ಮತ್ತು ಡಿಸೆಂಬರ‍್ ತಿಂಗಳಲ್ಲಿ ಕೊಡಗಿನಲ್ಲಿ ಹುತ್ತರಿಯ ಸಡಗರ. ಕೊಡವರ, ಕೆಂಬಟ್ಟೆಗಳ, ಕೊಡವ ಗೌಡವರ ಅಚ್ಚುಮೆಚ್ಚಿನ ಹಬ್ಬ. ಮಕ್ಕಳಿಗೆ, ಸ್ತ್ರೀಯರಿಗೆ, ಪುರುಷರಿಗೆ ಇತರ ಜನಾಂಗದವರಿಗೂ ಕ್ಯೂರಿಯಾಸಿಟಿ. ಅಲ್ಲದೆ ಈ ಹಬ್ಬದಲ್ಲಿ ಆಚರಿಸಬೇಕು, ಪಾಲ್ಗೊಳ್ಳಬೇಕೆಂಬ ಆತುರ ಕಾತುರವಿರುತ್ತದೆ. ಕೊಡವರು ಈ ಹುತ್ತರಿಯನ್ನು ಆರಂಭ ಮಾಡುವ ಮುನ್ನ ಕೋಲಾಟ, ಪಡೆಯಕಳಿ, ಜೋಗಿವೇಷ, ಕೊಂಬಾಟ್, ಕೊಡವಪಾಟ್ ಹೀಗೆ ಇನ್ನು ಅನೇಕ ಕಲೆಗಳ ಸಿದ್ಧತೆ ನಡೆಯುತ್ತಿರುತ್ತದೆ. ಒಟ್ಟಿನಲ್ಲಿ ಹಬ್ಬದ ಹರ್ಷೋದ್ಗಾರತೆ ಎಲ್ಲೆಂದರಲ್ಲಿ ತುಂಬಿರುತ್ತದೆ.

ಹುತ್ತರಿ ಅರ್ಥ

ಹುತ್ತರಿ ….ಪುತ್ತರಿ…. ಎಂಬ ಪದದಿಂದ ಬಂದಿರುತ್ತದೆ. ಮಲೆಯಾಳದಲ್ಲಿ ಪುದು ಅರಿ ಎಂದರೆ ‘ಹೊಸ ಅಕ್ಕಿ’ ಎಂದರ್ಥ, ಕೊಡವ ಭಾಷೆಯಲ್ಲಿ ಪುತ್ತರಿ ಪುಳ್ದ್ ಎಂದು, ದಕ್ಷಿಣ ಭಾರತದ ಇತರ ಜನಾಂಗದವರು ಬೇರೆ ಬೇರೆ ಹೆಸರುಗಳಿಂದ ಕರೆಯುವುದು ರೂಢಿಯಲ್ಲಿದೆ. ಸುಗ್ಗಿ ಕುಣಿತ, ಹೊಸ ಅಕ್ಕಿ ಹಬ್ಬವೆಂತಲೂ ಚಾಮರಾಜನಗರ, ಮೈಸೂರು ತಾಲೂಕಿನ ಆಸುಪಾಸಿನಲ್ಲಿ ನೆಲೆ  ನಿಂತವರು ‘ಸುಗ್ಗಿ’ ಎಂದು ಕರೆಯುತ್ತಾರೆ. ಹುತ್ತರಿಯ ಮುಖ್ಯ ದೇವತೆ ‘ಇಗ್ಗುತಪ್ಪ’ ಅಥವಾ ಸುಬ್ರಹ್ಮಣ್ಯ ಸ್ವಾಮಿ. ಎಂದರೆ ಇಷ್ಟಾರ್ಥಗಳನ್ನು ಪೂರೈಸುವಂತಹ ದೇವರು. ಮಲೆಯ ದೇಶದಲ್ಲಿ ಓಣಂ ಅನ್ನು ಶ್ರಾವಣ ಮಾಸ ಕೃತಿಕಾ-ರೋಹಿಣಿಯ ನಕ್ಷತ್ರಗಳಲ್ಲಿ ಆಚರಿಸಿದರೆ ಕೊಡಗಿನಲ್ಲಿ ಆಷಾಡ ತಿಂಗಳಲ್ಲಿ ಭತ್ತದ ಪೈರುಗಳ ಕೊಯಿಲಿಗೆ ಬಂದಿದ್ದು, ಕೃತಿಕಾ ರೋಹಿಣಿಯ ನಕ್ಷತ್ರ ಮುಹೂರ್ತದಂದು ಕೊಡಗಿನ ನಿವಾಸಿಗಳಾದ ಕೊಡವರು ಮಹಾವೈಭವದಿಂದ “ಪೊಲಿಪೊಲಿ ದೇವ ಪೊಲಿಯೇ ಬಾ”ಎಂದು ಒಡ್ಡೋಲಗ ಸಮೇತ ತಮ್ಮ ತಮ್ಮ ಮನೆಗಳಿಗೆ ತಮ್ಮ ಗದ್ದೆಯಿಂದ ಕದಿರುಗಳನ್ನು ಸಾಂಪ್ರದಾಯಿಕವಾಗಿ ಕೊಯ್ದು ತರುವುದೇ ‘ಹುತ್ತರಿ’ ಅಥವಾ ‘ಪುತ್ತರಿ’ ಆಗಿರುತ್ತದೆ.

ಆಚರಣೆ

ಪುತ್ತರಿ ಪೊಳ್ಗಂದು ಕೊಡವರು ತಮ್ಮ ನಿತ್ಯದ ಕರ್ಮವನ್ನು ಮುಗಿಸುವರು. ತಮ್ಮ ತಮ್ಮ ದನಕರುಗಳನ್ನೆಲ್ಲ ತೊಳೆದು ಕೊರಳಿಗೆ ಭೀಮನ ಹಂಬನ್ನು ಕಟ್ಟಿ, ಹಣೆಗೆ ಕುಂಕುಮವಿಟ್ಟು ಶೃಂಗಾರ ಮಾಡುತ್ತಾರೆ. ಮನೆ-ಮಠಗಳನ್ನು ಅಲಂಕರಿಸುವರು. ಮನೆ ದೈವಗಳಾದ ಇಗ್ಗುತಪ್ಪ, ಭಗವತಿ, ಸ್ವಾಮಿ ಅಯ್ಯಪ್ಪ, ಪಾಲೂರಪ್ಪ, ಕ್ಷೇತ್ರಪ್ಪ, ಮಲೆತಂಬಿರನ್, ಮುತ್ತಪ್ಪ, ಪೊವ್ವದಿ, ಕಾವೇರಿ ಇನ್ನೂ ಅನೇಕ ದೈವಗಳು ದೇವಸ್ಥಾನ ಹಾಗೂ ದೈವಗಳಿಗೆ ಶುಚಿಗೊಳಿಸಿ ಅಲಂಕರಿಸುವರು.

ಪುರುಷರು ಕಾಡಿನಿಂದ ಪೂಜೆಗೆ ಬೇಕಾದ ಕುಂಬಳಿ ಮರದ ತೊಗಟೆ, ಹಲಸು, ತೊಗಟೆ (ಎಲೆ) ಕಾಡುಗೇರು, ದೊಡ್ಡ ಆಲ, ಅಶ್ವತ್ಥ ಮರದ ಸೊಪ್ಪು ಮತ್ತು ಅಚ್ಚಿಮಠ (ಒಂದು ರೀತಿಯ ತೊಗಟೆ) ಮತ್ತು ಹೂ ತಂದು (ನೆರೆ) ಕಟ್ಟನ್ನು ಕಟ್ಟಿ ಒಂದು ಕಡೆ ಇಟ್ಟುಕೊಂಡಿರುತ್ತಾರೆ. ಅನಂತರ ತಮ್ಮ ತಮ್ಮ ಮನೆಯಲ್ಲಿರುವ ಕಣಜವನ್ನು ಗುಡಿಸಿ, ಸಗಣಿಯಿಂದ ಸಾರಿಸಿ, ಮಧ್ಯದಲ್ಲಿ ಬೆನಕನನ್ನು ಇಡುವರು. ಆಮೇಲೆ ಗದ್ದೆ ಹತ್ತಿರ ತೆಗೆದುಕೊಂಡು ಹೋಗುವಂತಹ ಹುತ್ತರಿ ಕುಕ್ಕೆ, ಕುಡಿಕೆ, ಚಾಪೆ, ಕತ್ತಿ, ಕೋವಿಗಳನ್ನು ಶುಚಿಗೊಳಿಸುವರು. ಊರಿನ ಅರ್ಚಕನನ್ನು ಮನೆಗೆ ಆಹ್ವಾನಿಸಲಾಗುತ್ತದೆ. ಆತ ಮನೆಗೆ ಬಂದು ಪುಣ್ಯತೀರ್ಥ ಪ್ರೋಕ್ಷಿಸುತ್ತಾನೆ. ಕೊಡವ ಸಂಪ್ರದಾಯದಂತೆ ಸತ್ಕಾರ ಮಾಡಿ ಕಳುಹಿಸಿಕೊಡಲಾಗುತ್ತದೆ. ಮನೆಯಲ್ಲಿ ನೆಲ್ಲಕ್ಕಿ ನಡುಬಾಡೆಯ ಜಾಗವನ್ನು ಗುಡಿಸಿ, ತೂಗುದೀಪದ ಕೆಳಗೆ ಹುತ್ತರಿ ಚಾಪೆಯನ್ನು ಹಾಕಿ, ಅದರ ಮೇಲೆ ಹುತ್ತರಿ ಪಚ್ಚೆಯಲ್ಲಿ (ಬೆತ್ತದ ಕುಕ್ಕೆ) ಪೂಜೆಗೆ ಕಟ್ಟಿಟ್ಟಂತಹ (ನೆರೆ) ಕಟ್ಟಿನಲ್ಲಿರುವ ಪ್ರತಿಯೊಂದು ತುಂಡನ್ನು ಅದರೊಳಗೆ ಇಡುವರು. ಹುತ್ತರಿ ಕುಕ್ಕೆಗೆ ಭತ್ತ ತುಂಬಿಸಿ, ಮೇಲೆ ಒಂದು ಬಳ್ಳದಲ್ಲಿ ಭತ್ತ, ಆಮೇಲೆ ಅಕ್ಕಿ, ಪುತ್ತರಿ ಕುಡಿಕೆಯ ಒಳಗೆ ತುಂಬಿಟ್ಟು, ಜೇನು ಹಾಲು ಇಡುವರು. ಮೊದಲೇ ನಿಶ್ಚಿತವಾಗಿರುವಂತಹ ಕೊಡವ ಕದಿರು ಕೊಯ್ಯುವ ಕತ್ತಿ ಹಿಡಿದುಕೊಳ್ಳುವರು. ಅಲ್ಲದೆ ಕೊಡವತಿ ತಳಿಯಕ್ಕಿ ಬೊಳಕನ್ನು ತೆಗೆದುಕೊಂಡು ಎಲ್ಲರೂ ಜೊತೆಗೂಡಿ ವಸ್ತುಗಳನ್ನು ತೆಗೆದುಕೊಂಡು ಒಡ್ಡೋಲಗದೊಂದಿಗೆ ಕದಿರು ಕುಯಿಲು ಮೊದಲೇ ನಿರ್ಧರಿಸಿದ ಗದ್ದೆಯ ಬಳಿಗೆ ಹೋಗುವರು.

ಅವರು ತೆಗೆದುಕೊಂಡು ಹೋದಂತಹ ಎಲ್ಲಾ ಸಾಮಗ್ರಿಗಳನ್ನು ಗೊತ್ತುಪಡಿಸಿದ ಗದ್ದೆಯಲ್ಲಿ ಇಟ್ಟುಕೊಂಡು ಇಗ್ಗುತಪ್ಪ ದೇವರನ್ನು ಪ್ರಾರ್ಥಿಸುವರು. ಕದಿರನ್ನು ಕುಯ್ಯುವ ಮುನ್ನ ಅದರ ಬುಡಕ್ಕೆ ಹಾಲುಜೇನು ಸುರಿದು, ಇನ್ನುಳಿದ ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. ಅನಂತರ ತಳಿಯಕ್ಕಿ ಭತ್ತವನ್ನು ಆಕ್ಕಿಯನ್ನು ಗದ್ದೆಗೆ ಚೆಲ್ಲುವರು. ಈ ಎಲ್ಲ ತೆರನಾದ ಆಚರಣೆ ಮುಗಿದಾಗ ಆಕಾಶದ ಕಡೆಗೆ ಒಬ್ಬ ಗುಂಡನ್ನು ಹಾರಿಸುವನು. ತದನಂತರದಲ್ಲಿ ಪಟಾಕಿಗಳನ್ನು ಸಿಡಿಸಲಾಗುತ್ತದೆ. ಆ ಗುಂಪಿನಲ್ಲಿದ್ದವರು ಕದಿರನ್ನು ಕುಯ್ಯಲು ಆರಂಭಿಸುವಾಗ “ಪೊಲಿಪೊಲಿ ದೇವ” ಎಂದು ಮೂರು ಬಾರಿ ಹೇಳಿ ಭತ್ತದ ಕದಿರಿನ ಬುಡವನ್ನು ಕುಯ್ಯುವುದು ಸಂಪ್ರದಾಯ.

ಸಂಪ್ರದಾಯದಂತೆ ಕುಯ್ಯುವಾಗ ಬೆಸ ಸಂಖ್ಯೆಯಂತೆ ೩, ೫, ೭, ೯ ರಂತೆ ಕಟಾವು ಮಾಡುವರು. ಆಮೇಲೆ ಹೆಚ್ಚು ಹೆಚ್ಚು ಕದಿರುಗಳನ್ನು ಹಿಡಿಯಾಗಿ ಹಿಡಿದುಕೊಂಡು ಕೊಯ್ಯಲಾಗುತ್ತದೆ. ಕೊಯ್ದಂತಹ ಕದಿರುಗಳನ್ನು ಯಾರು ಕೂಡ ಕೆಳಗಡೆ ಇಡುವಂತಿಲ್ಲ. ಇದೊಂದು ಜನಪದರ ನಂಬಿಕೆ. ಎಲ್ಲರೂ ಹಿಡಿದುಕೊಂಡು ಗುಂಪಿನಲ್ಲಿ “ಪೊಲಿಪೊಲಿ ದೇವ” ಎನ್ನುತ್ತಾ ಒಡ್ಡೋಲಗದ ಗತ್ತಿಗೆ ಕುಣಿಯುತ್ತಾ, ನಡೆಯುತ್ತಾ, ದೇವಸ್ಥಾನಗಳಿಗೆ, ಕೈಮಠಗಳಿಗೆ, ಹಿರಿಯರ ಸಮಾಧಿಯ ಮೇಲೆ ಕದಿರುಗಳನ್ನು ಇಡುತ್ತಾರೆ. ಅನಂತರ ಮನೆಯ ಹತ್ತಿರ ಹೋದಾಗ ಹೊಸಿಲೊಳಗೆ ಕಾಲಿಡುವ ಮುನ್ನ ಹಾಲು, ಜೇನು, ಸ್ವೀಕರಿಸಿದ ನಂತರವೇ ಒಳ ಹೋಗುವರು. ಅನಂತರ ಕದಿರುಗಳನ್ನು ಈ ಮೊದಲೇ ಕಟ್ಟಿಟ್ಟಂತಹ ನೆರೆಗೆ ತೂಗು ಹಾಕುವರು.

ಅನಂತರ ಮನೆ ದೇವರ ಮುಂದೆ, ಬತ್ತಳಿಕೆ, ದೇವರಗುಡಿ, ಕಾಫಿ ತೋಟ, ಮಂಚ, ದೇವರ ಮಂಟಪ, ಅಲ್ಲದೆ ನೆಲ್ಲಕ್ಕಿಬೊಳಕ್ (ತೂಗುದೀಪ) ಗೆ ಕದಿರನ್ನು ಕಟ್ಟುವರು. ಭಾಗಿಗಳಾದ ಜನಪದರು ಗದ್ದೆಯಿಂದ ತೆಗೆದುಕೊಂಡು ಹೋದ ಕದಿರಿನ ಭತ್ತದಿಂದ ಅಕ್ಕಿಯನ್ನು ಮಾಡುವರು. ಸ್ವಲ್ಪ ಅಕ್ಕಿಯಿಂದ ಪಾಯಸ ಮಾಡುವರು. ಆ ದಿನ ಮಾಡಿದ ತಿಂಡಿಗಳನ್ನು ಜೊತೆಗೆ ಪಾಯಸವನ್ನು ಇಷ್ಟದೇವರಿಗೆ ಮಡಗುವರು. ಅನಂತರ ಪೂಜೆ ಸಲ್ಲಿಸಲಾಗುತ್ತದೆ. ತದನಂತರದಲ್ಲಿ ಊಟೋಪಚಾರ ಜರುಗುವುದು. ಇದುವೇ ಹುತ್ತರಿ ಅಥವಾ ಪುತ್ತರಿ ಅಥವಾ ಪುದಿ ಅರಿ ಹೆಸರಿನಲ್ಲಿ ಸಂಭೋಧಿಸಲಾಗಿದೆ.

ಪುತ್ತರಿ ಕಳೆದು ಒಂದೆರಡು ದಿವಸಗಳ ಬಳಿಕ ಕೊಡಗಿನಾದ್ಯಂತ ಕೊಡವರು ಹಾಗೂ ಪೂರಕವಾಗಿರುವ ಜನಾಂಗದವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವರು. ಆ ಸಂದರ್ಭದಲ್ಲಿ ಯಾವುದೇ ಜಾತಿ ವೈರುಧ್ಯಗಳಿಲ್ಲದೆ ಎಲ್ಲಾ ವರ್ಗದವರು ಸಾಂಸ್ಕೃತಿಕ ಕಾರ್ಯಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸುವರು. ಬೇರೆಯ ಜನಾಂಗದವರು ಪಾಲ್ಗೊಳ್ಳುತ್ತಾರೆ. ಸಾಮಾನ್ಯವಾಗಿ ಹುತ್ತರಿಯ ಸಂದರ್ಭದಲ್ಲಿ ಕೋಲಾಟ, ಜೋಗಿವೇಷ, ಕೊಂಬಾಟ್, ಕೊಡವಪಾಟ್, ಪರಿಯಕುಳಿ, ಕೈತಲೆಆಟ್, ಜೋಯಿಪಾಟ್, ದೋಳ್ ಪಾಟ್, ಬಾಳೋಪಾಟ್, ಬಿಲ್ಲಾಟ್, ಬೊಳಕಾಟ್ ಇನ್ನೂ ಅನೇಕ ಪ್ರದರ್ಶನ ಕಲೆಗಳನ್ನು ಪ್ರದರ್ಶಿಸಲಾಗುತ್ತದೆ.