ಕನ್ನಡ ನಾಡಿನ ಜನಪದ ಕಲೆಗಳಿಗೆ ಅಥವಾ ಜಗತ್ತಿನ ಕಲೆಗಳಿಗೆ ಪ್ರಕೃತಿಯೇ ಮೂಲಾಧಾರ. ಮನುಷ್ಯ ಪ್ರಕೃತಿಯಲ್ಲಿರುವ ಒಂದೊಂದು ಅಂಶಗಳನ್ನು ಸೂಕ್ಷ್ಮವಾಗಿ ತಿಣುಕಿದ, ಗಮನಿಸಿದ. ಅಲ್ಲದೆ ಒಂದೊಂದರ ಉಪಯೋಗವನ್ನು ಕಂಡುಂಡು ಆನಂದಿಸತೊಡಗಿದ. ಆದಿ ಮಾನವನಾಗಿದ್ದಾಗಿನಿಂದಲೂ ದೈವ ಶಕ್ತಿಯನ್ನು ಆರಾಧಿಸುತ್ತಾ ಬಂದ. ಈ ಆರಾಧನೆಯಲ್ಲಿ ನೆಮ್ಮದಿಯ ಬನಿಯನ್ನು ಕಂಡುಕೊಂಡ. ಅವನ ಬದುಕಿನಲ್ಲಿ ದೇವರ ಸೇವೆ ದೈನಂದಿನ ನಿತ್ಯದಲ್ಲಿ ಒಂದು ಭಾಗವಾಯಿತು. ದಿನದ ಬದುಕಿನಲ್ಲಿ ಎಲ್ಲಾ ಆಗು-ಹೋಗುಗಳನ್ನು ನಿಯಂತ್ರಿಸುವ ಒಂದು ಅಸದೃಶ್ಯ ಶಕ್ತಿಯನ್ನು ತೃಪ್ತಿಪಡಿಸಿದ. ಅನಂತರ ಆತ್ಮಾನಂದ ಪಡೆಯುವಲ್ಲಿ ಗುರಿ ಇರಿಸಿದ. ಒಟ್ಟಾರೆಯಾಗಿ ಪೂಜಿಸುತ್ತಾ ಹಾಡನ್ನು ಹೇಳುತ್ತಾ, ಮೈ ತುಂಬಿ ಕುಣಿಯುತ್ತಾ ಆನಂದಿಸತೊಡಗಿದನು. ಈ ಎಲ್ಲಾ ರೀತಿಯ ಅಂಶಗಳಿಗೆ ಪ್ರಕೃತಿಯೇ ಪ್ರೇರಣೆ ನೀಡುತ್ತಾ ಬಂದಿರುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಈ ಮೇಲೆ ಹೇಳಲಾದ ಅಂಶಗಳಿಗೆ ಪೂರಕವಾಗಿ ಒಂದು ನಿಲುವಿಗೆ ಬರಬಹುದಾಗಿದೆ. ಜನಪದರ ದಿನನಿತ್ಯದ ಬದುಕೇ ಒಂದು ಕಲೆ. ಆದುದರಿಂದ ಜನಪದರ ಕಲೆ, ಭಾಷೆ, ಸಾಹಿತ್ಯ, ಪದ್ಧತಿ, ಆಚರಣೆಗಳು ಆಯಾಯ ಜನರ ರಾಷ್ಟ್ರದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇದು ಅವರ ಅಂತರಂಗದ ಭಾವನೆಗಳನ್ನು ಹೊರ ಚೆಲ್ಲುತ್ತದೆ.

ಜನಪದರ ಕಲೆಗಳು ಯಾವಾಗ, ಎಂದು, ಏಕೆ, ಹೇಗೆ ಅಸ್ತಿತ್ವಕ್ಕೆ ಬಂದವು ಎಂಬ ಪ್ರಶ್ನೆ ನಮ್ಮ ಮುಂದೆ ನಿಲ್ಲುತ್ತದೆ. ಈ ವಿಷಯ ಕಷ್ಟಕರವಾದುದೆಂದೆನ್ನಿಸುತ್ತದೆ. ಆದರೂ ಅಸಾಧ್ಯವೇನಲ್ಲ ಎಂಬ ಅಂಶವನ್ನು ಮನನ ಮಾಡಿಕೊಳ್ಳಬೇಕು. ಕೊಡಗಿನಲ್ಲಿಯೇ ಅಲ್ಲ ಇಡೀ  ಜಗತ್ತಿನಲ್ಲಿಯೇ ಮನುಷ್ಯ ಹುಟ್ಟಿನಿಂದಲ್ಲದೆ ದಿನನಿತ್ಯದ ಬದುಕಿನೊಂದಿಗೆ ಅವನ ಬೆನ್ನ ಹಿಂದೆಯೇ ಜನಪದ ಕಲೆಗಳು ಅಸ್ತಿತ್ವಕ್ಕೆ ಬಂದಿರುತ್ತವೆ.

ಕಾವೇರಿ ಮುನ್ನುಗ್ಗಿದ ದಾರಿಯನ್ನು ಗಮನದಲ್ಲಿರಿಸಿಕೊಂಡು ಚರ್ಚಿಸಿದರೆ, ಅನೇಕ ವಿಷಯಗಳು ನಮ್ಮ ಮುಂದೆ ಗೋಚರಿಸುತ್ತವೆ. ಎಂದರೆ ಕಾವೇರಿಯ ಸೃಷ್ಟಿಯಲ್ಲಿ ಗ್ರಾಮ, ಕಥೆ, ಗೀತೆ, ಪುರಾಣ, ಕಲೆಗಳು, ನಂಬಿಕೆ, ಆಚರಣೆಗಳು, ಪುಣ್ಯಕ್ಷೇತ್ರಗಳು, ಕೃಷಿ, ವಿವಾದ, ಸ್ತ್ರೀಪ್ರಜ್ಞೆ, ಕ್ರೀಡೆ, ಹಬ್ಬ-ಹರಿದಿನಗಳು ಇನ್ನೂ ಮುಂತಾದವುಗಳಿಗೆ ಕಾರಣೀಭೂತಳಾಗಿರುವಳು. ಕಾವೇರಿ ಹರಿದೆಡೆಯಲ್ಲೆಲ್ಲ ಅನೇಕ ಕಲೆಗಳು ಸೃಷ್ಟಿಯಾಗಿವೆ. ಕೆಲವು ಜಾಗತೀಕರಣವೆಂಬ ದಾಸ್ಯಕ್ಕೆ ಸಿಕ್ಕಿ ಜಜ್ಜಿ ಹೋಗಿವೆ. ಇನ್ನೂ ಧಾರ್ಮಿಕ, ಸಾಂಸ್ಕೃತಿಕ, ಹಿನ್ನೆಲೆಯಲ್ಲಿ ಬಂದಂಥವು ಜೀವಂತಿಕೆಯನ್ನು ಉಳಿಸಿಕೊಂಡು ಉದಾರೀಕರಣ ನೀತಿಗೆ ಸಡ್ಡು ಹೊಡೆದು ನಿಂತಿವೆ ಎನ್ನಬಹುದು. ನನ್ನ ತುಮುಲವೆಂದರೆ ಕಾವೇರಿಯು ಸ್ಫೂರ್ತಿಯ ನೆಲೆಯಲ್ಲಿ ಅನೇಕ ಕಲೆಗಳು ಜನ್ಮ ಪಡೆದಿರುತ್ತವೆ.

ಬುಸುಗುಡುತ್ತಿರುವ ಈ ಹೊತ್ತಿನಲ್ಲಿ ಕಾವೇರಿ ಬನಿಯ ಧಾರ್ಮಿಕ, ಸಾಂಸ್ಕೃತಿಕ ಕಕ್ಷಿಯಲ್ಲಿ ಎದ್ದು ನಿಂತ ಕಲೆಗಳು ತನ್ನ ಮೌಲ್ಯವನ್ನು ಕಳೆದುಕೊಂಡಿಲ್ಲ. ಇನ್ನೂ ಹೆಚ್ಚಿನ ಶಕ್ತಿಯನ್ನು ಉಳಿಸಿಕೊಂಡಿರುತ್ತವೆ. ಇಂದಿಗೂ ನಾಡು, ಊರು, ಕೇರಿಗಳ ಬನ, ದೇವಸ್ಥಾನ, ಅಂಬಗಳಲ್ಲಿ ಕಲೆಗಳನ್ನು ಜನಪದರು ಪ್ರಕೃತಿಯ ಸಿರಿಯಲ್ಲಿ ಪ್ರದರ್ಶಿಸುವರು.

ಈಗಾಗಲೇ ಹೆಚ್ಚು ಹೆಚ್ಚು ಪಾಪೂಲಾರಿಟಿಯಾಗಿರುವ ಕಲೆಗಳಿಗಿಂತ ಗ್ರಾಮ್ಯದಲ್ಲಿಯೇ ಇನ್ನೂ ಉಳಿದಿರುವ ಕಲೆಗಳನ್ನು ಪರಿಚಯ ಮಾಡಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಕರ್ನಾಟಕದಲ್ಲಿ ಅನೇಕ ಗ್ರಾಮಗಳಲ್ಲಿ, ಅದರಲ್ಲೂ ಮೈಸೂರು ಮತ್ತು ಕೊಡಗಿನ ಪರಧಿಗಳಲ್ಲಿ ಕಂಡುಬರುವ ಕಲೆಗಳನ್ನು ವಿಶ್ಲೇಷಣೆ ಮಾಡಲಾಗಿದೆ.

ಕೊಂಬು ಕಹಳೆ

ಮೈಸೂರು, ಕೊಡಗು, ವಿಜಯನಗರ, ಚಿತ್ರದುರ್ಗ ಮುಂತಾದ ಪ್ರದೇಶಗಳು ಕೋಟೆಗಳನ್ನು ಹೊಂದಿದ್ದವು. ಆಗ ಕೋಟೆಯ ಅತಿ ಎತ್ತರವಾದ ಸ್ಥಳದಲ್ಲಿ ಕಾವಲುಗಾರರು ಕೋಟೆಯನ್ನು ಕಾಯುತ್ತಿದ್ದರು. ಎಂದರೆ ಬುರುಜಿನ ಮೇಲೆ ಪ್ರತಿದಿನ ಕಾವಲುಗಾರರು ವೈರಿಗಳ ಆಗಮನವನ್ನು ತಿಳಿಯಲು ಕಾವಲು ಕಾಯುತ್ತಿದ್ದರು. ವೈರಿಗಳು ತಮ್ಮತ್ತ ಧಾವಿಸುತ್ತಿದ್ದಾರೆ ಎಂಬುದನ್ನು ಮನನ ಮಾಡಿಕೊಂಡು ಕಹಳೆ ಊದಿ ತಮ್ಮ ನಾಡಿನ ಸೈನಿಕರನ್ನು ಎಚ್ಚರಿಸುತ್ತಿದ್ದರು.

ಈ ಕೊಂಬು ಕಹಳೆಗಳನ್ನು ಯುದ್ಧ ಸಂದರ್ಭದಲ್ಲಿ ಯೋಧರಿಗೆ ಸ್ಪೂರ್ತಿ ತುಂಬಲು ಬಳಸಲಾಗುತ್ತಿತ್ತು. ಧಾರ್ಮಿಕ ಗುರುಗಳು ಬರುವಾಗ ಗೌರವದ ಸಂಕೇತವಾಗಿ ಕಹಳೆ ಬಳಸುತ್ತಿದ್ದರು. ರಾಜರನ್ನು ಆಹ್ವಾನಿಸುವಾಗ, ದೇವರ ಮೆರವಣಿಗೆ ಹೊರಡುವಂಥ ಸಂದರ್ಭದಲ್ಲಿ ಹಾಗೂ ಮದುವೆ ದಿಬ್ಬಣಗಳಲ್ಲಿ ಗಂಡು ದೂರದಿಂದಲೇ ಬರುತ್ತಿರುವುದನ್ನು ತಿಳಿಸಲು ಕಹಳೆ ಊದುತ್ತಿದ್ದರು.

ಈ ಕಲೆ ಆದಿ ಕರ್ನಾಟಕ ಪಂಗಡಕ್ಕೆ ಸೇರಿದ ಜನಪದರಲ್ಲಿ ಇರುತ್ತದೆ. ಇದು ವಂಶಪಾರಂಪರ್ಯವಾಗಿ ಬೆಳೆದು ಬಂದಿರುತ್ತದೆ. ದಕ್ಷಿಣ ಕನ್ನಡ, ಕೊಡಗು, ಭೂತಕೋಲ, ಪೂಜೆ ಸಂದರ್ಭದಲ್ಲಿ ಕಂಡುಬಂದರೆ, ಮೈಸೂರಿನಲ್ಲಿ, ಇಂದಿಗೂ ದಸರ ಸಂದರ್ಭದಲ್ಲಿ ಬಳಸುವುದು ಅಸ್ತಿತ್ವದಲ್ಲಿದೆ. ಕೊಂಬು ಕಹಳೆ ಹವ್ಯಾಸಿ ಕಲೆ. ಇದರಿಂದಲೇ ತಮ್ಮ ಬದುಕನ್ನು ನಿರ್ವಹಣೆ ಮಾಡುವುದಿಲ್ಲ. ಆದ್ದರಿಂದ ಜೀವನೋಪಾಯಕ್ಕೆ ಕೂಲಿ ಕೆಲಸ ಮಾಡುವರು. ಕೊಡಗಿನಾದ್ಯಂತ ಹಬ್ಬಿರುವ ಈ ಕಲೆ ನಾಗರೀಕತೆಯಿಂದ ಅಳಿದು ಹೋಗುತ್ತಿದ್ದರೂ, ವಿಶೇಷ ಸಂದರ್ಭಗಳಲ್ಲಿ ಕಂಡುಬರುತ್ತದೆ.

ಕೊಡಿಯಾಟ್

ಪುರುಷ ಪ್ರಧಾನ ಕಲೆ, ಹಗಲಿನಲ್ಲಿ ಪ್ರದರ್ಶಿಸುತ್ತಾರೆ. ನಿಸರ್ಗದ ಮಡಿಲಿನಲ್ಲಿ ಪ್ರದರ್ಶಿಸಲಾಗುತ್ತದೆ. ಮಹಿಳೆಯರು ಭಾಗವಹಿಸುವುದಿಲ್ಲ. ಧಾರ್ಮಿಕ ಆಚರಣೆಯ ಹಿನ್ನೆಲೆಯಲ್ಲಿ ಬಂದಿರುವಂತದ್ದು. ಪ್ರಾಚೀನ ಕಾಲದಿಂದಲೂ ಕೊಡವರು ಈ ಕಲೆಯನ್ನು ರೂಢಿಸಿಕೊಂಡು ಬಂದಿರುತ್ತಾರೆ. ಕೊಡಿ ಹಬ್ಬವನ್ನು ಪೀಲಿಯಾಟ್ ಆಡುವುದಕ್ಕಿಂತ ಮೊದಲನೆ ಹಾಗೂ ಕೊನೆಯ ದಿವಸಗಳಲ್ಲಿ ಪ್ರದರ್ಶಿಸಲಾಗುವುದು. ಇದು ಕೊಡಗಿನ ಗಾಳಿಬೀಡು, ಮೊಣ್ಣಂಗೇರಿಯಂಥ ಕೆಲವೇ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ.

ಅರ್ಥ : ಕೊಡಿ ಎಂದರೆ ೩ ಅಥವಾ ಮೂರುವರೆ ಅಡಿ ಉದ್ದದ ಒಂದು ಓಟೆಯ ಕೋಲು ಹಿಡಿದು ಸಾಂಪ್ರದಾಯಿಕ ಉಡಿಗೆ ಧರಿಸಿ ಕುಣಿಯುತ್ತಾರೆ. ಕೋಲಿನ ತುದಿಯಲ್ಲಿ ರಂಧ್ರ ಮಾಡಿ ಚಿಕ್ಕ ಓಟೆಯ ಕಡ್ಡಿಯೊಂದನ್ನು ಸಿಕ್ಕಿಸಿರಲಾಗಿರುತ್ತದೆ. ಅದಕ್ಕೆ ಕೆಂಪು ಬಟ್ಟೆಯೊಂದನ್ನು ಬಿಗಿದಿದ್ದು, ಆ ಕೋಲನ್ನು ಸಾಂಪ್ರದಾಯಿಕ ಉಡುಗೆ ಧರಿಸಿದ ವ್ಯಕ್ತಿ ಕೈಯಲ್ಲಿ ಹಿಡಿದು ಕುಣಿಯುತ್ತಾನೆ. ಊರಿನ ಪ್ರತಿಯೊಂದು ಮನೆಯಿಂದ ಒಬ್ಬರಂತೆ ಕೊಡಿ ಹಬ್ಬದಲ್ಲಿ ಭಾಗವಹಿಸುತ್ತಾರೆ. ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಅವರೆಲ್ಲರೂ ದೇವಸ್ಥಾನಕ್ಕೆ ಸೇರಿ ಅಲ್ಲಿಂದ ಕೊಡಿಯನ್ನು ತೆಗೆದುಕೊಂಡು ಮನೆಗೆ ಬರುತ್ತಾರೆ.

ಕಾಳೆ ಓಡಿಸುವುದು

ಅನೇಕ ವರ್ಷಗಳಿಂದಲೂ ಕೊಡವ ಪೂರ್ವಿಕರು ಭದ್ರಕಾಳಿ, ಕಾಲ ಭೈರವ, ಇಗ್ಗುತಪ್ಪ ಮುಂತಾದ ದೈವಗಳಿಗೆ ಕೋಣ ಅಥವಾ ಹಂದಿಯನ್ನು ಹರಕೆಯಾಗಿ ಒಪ್ಪಿಸುತ್ತಿದ್ದರು. ನೂರಾರು ವರ್ಷಗಳು ಕಳೆದಂತೆ ತಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟವಾದ ಅಂಶಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಾ ಬಂದಿರುವುದರ ಪರಿಣಾಮವೇ ಈ ಕಲೆ ಎನ್ನಬಹದು. ಧಾರ್ಮಿಕ ಹಿನ್ನೆಲೆಯಲ್ಲಿ ಬಂದಿದೆ. ಸ್ತ್ರೀಯರು ಭಾಗವಹಿಸುವುದಿಲ್ಲ. ಧಾರ್ಮಿಕ ಆಚರಣೆಯಲ್ಲಿ ಹೆಣ್ಣು ಆಡನ್ನು ಹರಕೆಯಾಗಿ ಒಪ್ಪಿಸದೆ ಗಂಡು ಆಡನ್ನು ಅರ್ಪಿಸುವುದು ಸಾಂಕೇತಿಕವಾಗಿದೆ. ಈ ಕಲೆ ಕೊಡಗಿನಾದ್ಯಂತ ಸಿಗುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಮಾತ್ರ ಸಿಗುತ್ತದೆ. ಇದು ಕುಣಿತ ಪ್ರಧಾನ ಕಲೆ. ಸಾಹಿತ್ಯವಿರುವುದಿಲ್ಲ.

ಅರ್ಥ : ಕಾಳೆ ಎಂದರೆ ಹರಕೆ. ಊರು, ನಾಡು, ಕೇರಿ ಹಾಗೂ ಊರಿನ ಜನಪದರು ತಾವು ನೆನೆದ ಕೆಲಸ ನೆರವೇರಿದ ಅನಂತರ ಹಬ್ಬದ ಸಂದರ್ಭದಲ್ಲಿ ಹರಕೆ ರೂಪದಲ್ಲಿ ಆಡನ್ನು ಭದ್ರಕಾಳಿಯ ಹೆಸರಿನಲ್ಲಿ ದೇವಸ್ಥಾನಕ್ಕೆ ತಂದುಕೊಡುತ್ತಾರೆ. ಅಂಥ ಹರಕೆ ೨,೪,೮,೧೦,೧೨ ಇರಬಹುದು.

ವಿಧಾನ : ಕಲಾವಿದರ ಸಾಂಪ್ರದಾಯಿಕ ಉಡುಗೆ ಧರಿಸುವರು. ಕಾಳೆ ಓಡಿಸುವ ದಿನ ದೇವಸ್ಥಾನ ಹತ್ತಿರ ಗದ್ದೆಯ ಬಯಲಿನಲ್ಲಿ ಆಡುಗಳನ್ನು ಬಿಡಲಾಗುವುದು. ದೇವರ ಭಂಡಾರದೊಂದಿಗೆ ಆ ಸ್ಥಳಕ್ಕೆ ಹೋಗುವ ತಕ್ಕರು ಮತ್ತು ಕೈ ತಲೆಕಾರರು ಅವುಗಳನ್ನು ಗದ್ದೆಯಲ್ಲಿಯೇ ಬೆದರಿಸಿ ಮುಂದಕ್ಕೆ ಓಡಿಸುತ್ತಾರೆ. ಅವುಗಳು ಮುಂದಿನ ಗದ್ದೆಯಲ್ಲಿ ಓಡುತ್ತಿರುತ್ತವೆ. ಓಡುತ್ತಿರುವ ಆಡುಗಳನ್ನು ಅವರೇ ಪುನಃ ಹಿಡಿದು ಅವುಗಳ ಕೊರಳಿಗೆ ಕೆಂಪು ದಾಸವಾಳದ ಹೂ ಮಾಲೆಯನ್ನು ಹಾಕುವರು. ಅಂಥ ಆಡುಗಳನ್ನು ಹಿಡಿದುಕೊಂಡ ಕೈತಲೆಕಾರರು ‘ಪೋವ್ವೋದ್ಯಮ್ಮೆ ಹರೋಹರ, ಪೋವ್ವೋದ್ಯಮ್ಮೆ ಹರೋಹರ’ ಎಂದು ಕೂಗುತ್ತಾ ಮೆರವಣಿಗೆಯಲ್ಲಿ ಬಂದು ದೇವಸ್ಥಾನದ ಮುಂದಿನ ಪಕ್ಕದಲ್ಲಿರುವ ಗಿಡ ಮರಗಳಿಗೆ ಕಟ್ಟುವುದು ಪದ್ಧತಿ. ಅಲ್ಲಿಗೆ ಈ ಕಲೆಯ ಪ್ರದರ್ಶನ ಮುಕ್ತಾಯವಾಗುತ್ತದೆ.

ಕೋಲಾಟ

ಬಹಳ ಪ್ರಧಾನವಾದ ಕಲೆಗಳಲ್ಲಿ ಕೋಲಾಟ ಒಂದು. ಮೈಸೂರು, ಕೊಡಗಿನಲ್ಲೇ ಅಲ್ಲ, ಇಡೀ ಭಾರತದಾದ್ಯಂತ ವ್ಯಾಪಿಸಿದೆ. ಪುರುಷ ಪ್ರಧಾನವಾದ ಕಲೆ, ಸಾಮಾನ್ಯವಾಗಿ ಎಲ್ಲಾ ಜನಾಂಗದವರು ಈ ಕಲೆಯನ್ನು ಪ್ರದರ್ಶಿಸುವರು. ಗಂಡು ಕಲೆಯಾದರೂ, ಸ್ತ್ರೀಯರೂ ಭಾಗವಹಿಸುವರು. ಮೈಸೂರು, ಕೊಡಗಿನಲ್ಲಿ ಗೌಡರು, ಕೊಡವರು, ಪರಿಶಿಷ್ಟ ಜಾತಿ ಮತ್ತು ವರ್ಗದವರು. ಎರವರಲ್ಲಿ ಹಾಗೂ ಇನ್ನಿತರರಲ್ಲಿಯೂ ಇದೆ. ಕೊಡವರ ಕೋಲಾಟ, ರೂಪ, ರಚನೆ, ಪ್ರದರ್ಶಿಸುವ ಬಗೆ ಕೊಡವೇತರಿಗಿಂತ ಭಿನ್ನವಾಗಿರುತ್ತದೆ. ಕೋಲಾಟದಲ್ಲಿ ಕೋಲುಗಳೇ ಪ್ರಧಾನ. ಈ ಕೋಲುಗಳನ್ನು ಹೊನ್ನೆ, ಸೀಬೆ, ತಡಸಲು, ತೇಗ, ಬೀಟೆ ಮತ್ತು ಗಟ್ಟಿ ಬಿದಿರಿನಿಂದ ಮಾಡುತ್ತಾರೆ. ಕೋಲುಗಳು ಸುಮಾರು ಒಂದು, ಒಂದೂವರೆ ಅಥವಾ ಮುಕ್ಕಾಲು ಅಡಿ ಉದ್ದ ಇರುತ್ತವೆ. ಕಲಾವಿದರಿಗೆ ವಿಶೇಷವಾದ ಉಡುಗೆ ತೊಡುಗೆಗಳಿರುವುದಿಲ್ಲ. ಆದರೆ ಮಾಮೂಲಿನಂತೆ ಚಡ್ಡಿ, ಬನೀನು, ತಲೆಗೆ ಒಂದು ವಸ್ತ್ರ ಧರಿಸಿರುತ್ತಾರೆ. ಕೊಡವರು ತಲೆಗೆ ಪೇಟ, ಕಪ್ಪು, ಬಿಳಿ ವಸ್ತ್ರವನ್ನು ಧರಿಸಿರುತ್ತಾರೆ. ಸ್ತ್ರೀಯರು ಮೊಣಕಾಲಿನವರೆಗೆ ಸೀರೆ ಉಟ್ಟು ಕುಪ್ಪಸ ತೊಟ್ಟು ಕಾಲಿಗೆ ಗೆಜ್ಜೆ ಕಟ್ಟಿ ಪ್ರದರ್ಶಿಸುವುದುಂಟು. ಸಾಮಾನ್ಯವಾಗಿ ಕೋಲಾಟ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳುವುದುಂಟು. ಕೋಲಾಟದಲ್ಲಿ ಹಲವು ಬಗೆಗಳಿವೆ. ಈ ಕಲೆಯಲ್ಲಿ ಹಾಡು ಪ್ರಧಾನವಾಗಿದ್ದು, ನಾಯಕನ ಮುಖಾಂತರ ಪ್ರಾರಂಭಿಸಿ, ಅನಂತರ ಉಳಿದ ಕಲಾವಿದರು ನಾಯಕನನ್ನು ಅನುಕರಣೆ ಮಾಡುತ್ತಾರೆ. ಕೆಲವು ಸಂದರ್ಭದಲ್ಲಿ ಹಾಡು ಹೇಳುವವರು ಬೇರೆ ಇದ್ದು, ಇನ್ನುಳಿದವರು ಪ್ರದರ್ಶನ ನೀಡುತ್ತಾರೆ. ಕೋಲಾಟದ ಹಾಡುಗಳು ಹಾಸ್ಯ, ಕರುಣೆ, ಸಂತೋಷ, ಮತ್ತು ಪ್ರೇಮ, ಬಯಲು ಸೀಮೆಯಲ್ಲಿ ಪ್ರಧಾನವಾಗಿದ್ದು, ಕೊಡವರಲ್ಲಿ ಕಾವೇರಿ ಕುರಿತು ಹಾಡುಗಳು ಇದ್ದು, ಪ್ರದರ್ಶನ ನೀಡುವರು.

ಕೋಲೆ ಬಸವ

ಕೊಡವೇತರ ಕಲೆ. ಇದನ್ನು ಉತ್ತರ ಕರ್ನಾಟಕದ ಗಂಗೆತ್ತಿನವರು, ಕಲವೆತ್ತಿನವರು ಪ್ರದರ್ಶಿಸುವರು. ಈ ಕಲೆಗೆ ಬೇರೆ ಬೇರೆ ಹೆಸರುಗಳಿವೆ. ಅವುಗಳೆಂದರೆ ಕೋಲೆ ಬಸವ, ಬಸವಣ್ಣನಾಟ , ಬುರ‍್ ಬುರ‍್ ಬಸವಣ್ಣನಾಟ ಎಂದು ಕರೆಯುವರು. ಇವರ ಪ್ರಧಾನ ಕಸುಬು ಕೃಷಿ. ಇವರ ಕೆಲಸ ಮುಗಿದ ಬಳಿಕ ಹಳ್ಳಿ-ಹಳ್ಳಿಗಳಿಗೆ ಹೋಗಿ ಪ್ರದರ್ಶನ ನೀಡುತ್ತಾರೆ. ಇವರು ಅಲೆಮಾರಿಗಳು. ಮೈಸೂರು, ಕೊಡಗು ಇನ್ನಿತರ ಪ್ರದೇಶಗಳಲ್ಲಿಯೂ ಕಂಡುಬರುತ್ತಾರೆ. ಕೊಡಗಿನ ಸೋಮವಾರಪೇಟೆ ತಾಲೂಕಿನಲ್ಲಿ ಇವರನ್ನು ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಹೆಚ್ಚಾಗಿ ಕಾಣಬಹುದು. ಸಾಮಾನ್ಯವಾಗಿ ಮಳೆ ಸಮೃದ್ಧವಾಗಿ ಬಿದ್ದು, ಬೆಳೆ ಹುಲುಸಾಗಿ ಬೆಳೆದು, ಕಟಾವಿಗೆ ಬಂದಿರುತ್ತದೆ. ನಂತರ ಬಡಿದು, ಒಡ್ಡುವ ಓಡಾಟ ನಡೆಯುತ್ತಿರುತ್ತದೆ. ಎಂದರೆ ಸುಗ್ಗಿಯ ಸಡಗರ. ಅಂತಹ ಸಂದರ್ಭದಲ್ಲಿ ಪ್ರದರ್ಶನ ನೀಡುತ್ತಾರೆ. ಈ ಕಲೆ ಪ್ರೇಕ್ಷಕರ ಮನಸ್ಸನ್ನು ಸೂರೆಗೊಳ್ಳುತ್ತದೆ. ಬಸವ ಮಾನವನ ಮಾತನ್ನು ಅರ್ಥ ಮಾಡಿಕೊಂಡು ಆಶ್ಚರ್ಯವಾದ ರೀತಿಯಲ್ಲಿ ಪ್ರದರ್ಶನ ನೀಡುತ್ತದೆ. ಅಲ್ಲದೆ ಮಾನವನಿಗಿರುವ ಬುದ್ಧಿ, ಚಾಣಾಕ್ಷತನ, ಸೂಕ್ಷ್ಮತೆ ನನಗೂ ಇದೆ ಎಂದು ತೋರಿಸಿಕೊಡುವಂತೆ ತೋರುತ್ತದೆ. ಈ ಕಲೆಯ ಪ್ರದರ್ಶನ ಹಗಲು ನಡೆಯುತ್ತದೆ. ಒಮ್ಮೊಮ್ಮೆ ಊರಿನ ಮುಖ್ಯಸ್ಥ ಅಥವಾ ಊರಿನ ಜನರ ಕೋರಿಕೆಯ ಮೇರೆಗೆ ರಾತ್ರಿ ಆಟ ಆಡುವುದುಂಟು. ಗಂಡಸರು, ಹೆಂಗಸರು ಮತ್ತು ಮಕ್ಕಳನ್ನು ಪ್ರತಿನಿಧಿಸುವಂತೆ ಈ ಕಲೆಯಲ್ಲಿ ಎತ್ತು, ಹಸು ಮತ್ತು ಕರು ಭಾಗವಹಿಸುವುದನ್ನು ಕಾಣಬಹುದು.

ಪುರುಷರು ಬಿಳಿಯ ಅಂಗಿ, ಕಪ್ಪುಕೋಟು, ಬಿಳಿ ಕಚ್ಚೆಪಂಚೆ, ತಲೆಗೆ ಪೇಟ ಧರಿಸುವರು. ಹೆಗಲ ಮೇಲೆ ಜೋಳಿಗೆ, ಹಣೆಗೆ ವಿಭೂತಿ, ಕೈಯ್ಯಲ್ಲಿ ಬಾರುಕೋಲು ಇರುತ್ತವೆ. ಬಸವನ  ಎರಡು ಕೊಂಬುಗಳ ತುದಿಗೆ ಬಣ್ಣ ಬಣ್ಣದ ಕುಚ್ಚುಗಳನ್ನು ಕಟ್ಟಿರುತ್ತಾರೆ. ಕೆಂಪು, ಹಳದಿ, ಬಿಳಿ ಹಾಘೂ ಇನ್ನಿತರ ಬಣ್ಣಗಳನ್ನು ಕಾಣಬಹುದು. ಎರಡು ಕೊಂಬುಗಳಿಗೂ ಬಣ್ಣ ಬಣ್ಣದ ಬಟ್ಟೆಯನ್ನು ಸುತ್ತಿರುತ್ತಾರೆ. ಬೆನ್ನ ಮೇಲೆ ಬಣ್ಣ ಬಣ್ಣದ ಬಟ್ಟೆಗಳು, ಕಾಲುಗಳಿಗೆ ಗೆಜ್ಜೆ, ಕೊರಳಿಗೆ ಗಂಟೆ ಹಾಗೂ ಬಿಳಿ, ಕೆಂಪು ಮಣಿಸರಗಳನ್ನು ಹಾಕಿರಲಾಗುತ್ತದೆ. ಎತ್ತಿನ ಹಣೆಯ ಮೇಲೆ ಆಂಜನೇಯನ ಮುದ್ರೆ ಇರುವ ಹಿತ್ತಾಳೆ ತಗಡಿನ ಅಲಂಕಾರ ಮಾಡಿರುತ್ತಾರೆ. ಬಸವನ ಭುಜವನ್ನು ಕರಡಿ ಚರ್ಮದಿಂದ ಅಥವಾ ಜಿಂಕೆಯ ಚರ್ಮದಿಂದ ಗೋಪುರದಂತೆ ಹೊದಿಸಿ, ಸಿಂಗರಿಸಿ ನವಿಲು ಗರಿಗಳನ್ನು ಸಿಕ್ಕಿಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಎತ್ತಿನ ಬೆನ್ನ ಮೇಲೆ ಶಾಲು ರೀತಿಯ ಬಣ್ಣ ಬಣ್ಣದ ಬಟ್ಟೆಗಳು ಅಥವಾ ರೇಷ್ಮೆ ಪಂಚೆಗಳನ್ನು ಹಾಕಿರುವರು. ಈ ಎಲ್ಲಾ ಅಲಂಕಾರಗಳನು ರಾಮ ಎಂದು ಕರೆಯಲಾಗುವ ಎತ್ತಿಗೆ ಮಾತ್ರ.

ಲಕ್ಷ್ಮಣನ ಪಾತ್ರದ ಎತ್ತಿಗೆ ವೈಭವದ ಅಲಂಕಾರಗಳು ಕಡಿಮೆ. ಇದರ ಬೆನ್ನಿನ ಮೇಲೆ ಎರಡು ಅಥವಾ ಮೂರು ಬಣ್ಣಗಳಿಂದ ಕೂಡಿದ ಬಟ್ಟೆಗಳಿದ್ದು, ಕೊರಳಿಗೆ ಸರ ಮತ್ತು ಕಾಲಿಗೆ ಗೆಜ್ಜೆ ಕಟ್ಟಲಾಗಿರುತ್ತದೆ. ಸೀತೆಯ ಪಾತ್ರವನ್ನು ನಿರ್ವಹಸುವ ಕರುವಿನ ಹಣೆಯ ಮೇಲೆ ಕುಂಕು, ಬೆನ್ನಿನ ಮೇಲೆ ಬಣ್ಣ ಬಣ್ಣದ ಸೀರೆಗಳು, ಕೊರಳಿಗೆ ಬಿಳಿ ಮಣಿಗಳ ಸರಮಾಲೆಗಳು ಇರುತ್ತವೆ. ಪ್ರಾಣಿಗಳದೇ ಪ್ರಧಾನ ಪಾತ್ರದಲ್ಲಿರುತ್ತವೆ. ಪ್ರದರ್ಶನದ ಕಥಾವಸ್ತು ರಾಮಾಯಣಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಸೀತಾರಾಮ ಕಲ್ಯಾಣದಂಥವನ್ನು ಮದುವೆಯಂತೆಯೇ ಸಂಭ್ರಮದಿಂದ ನಡೆಸುತ್ತಾರೆ. ವಾದ್ಯಗಳ ಸಹಕಾರದಿಂದ ಕಥಾವಸ್ತು ಪ್ರದರ್ಶನಗೊಳ್ಳುತ್ತಿರುವಾಗ ಎತ್ತು, ಹಸು, ಕರು ತಲೆ ಹಾಗು ಕಾಲುಗಳನ್ನು ಕದಲಿಸುತ್ತಿರುತ್ತವೆ.

ಉಮ್ಮತ್ತಾಟ್

ಕೊಡಗಿನ ಕೊಡವರಲ್ಲಿ ಕಲೆಗಳಲ್ಲಿಯೇ ವಿಶಿಷ್ಟ ಮತ್ತು ವೈವಿಧ್ಯಮಯವಾದ ಕಲೆ. ದೈವಿ ಆರಾಧನೆಯಿಂದ ಬಂದ ಸೌಮ್ಯ ಕಲೆ. ಸ್ತ್ರೀ ಪ್ರಧಾನವಾದುದು. ಅನೇಕ ವರ್ಷಗಳ ಹಿಂದೆ ಪ್ರಕೃತಿಯ ಮಡಿಲಿನಲ್ಲಿ ನಡೆಯುತ್ತಿತ್ತು. ಇಂದು ಹಗಲು ಪ್ರದರ್ಶಿಸುತ್ತಾರೆ. ಒಟ್ಟಾರೆಯಾಗಿ ಈ ಕಲೆ ಇತ್ತೀಚಿನದಲ್ಲ. ಅನೇಕ ಶತಮಾನಗಳಿಂದಲೂ ಇದು ಕೊಡವರಲ್ಲಿ ಪಾರಂಪರಿಕವಾಗಿ ಬಂದಿದೆ. ಇದಕ್ಕೆ ಪೌರಾಣಿಕವಾದ ಹಿನ್ನೆಲೆ ಇದೆ. ಈ ಕಲೆ ದೈವದತ್ತವಾಗಿ ಭೂಮಿಗೆ ಬಂದಿದೆ ಎಂಬುದು ಕೊಡವರ ನಂಬಿಕೆ.

ಈ ಕಲೆಯ ಹಿನ್ನೆಲೆಯಾಗಿ ಪೌರಾಣಿಕ ಕಥೆಗಳು ಇವೆ. ದೇವತೆಯರು ದೇವಲೋಕದಿಂದ ಭೂಲೋಕದ ಕೊಡಗಿಗೆ ಬಂದು ಅಲ್ಲಿಯ ಪ್ರಕೃತಿಯ ಸೌಂದರ್ಯಕ್ಕೆ ಮೋಹಿತರಾದರು. ಈ ಭೂ ಪ್ರದೇಶ ನಿರ್ಜನವಾಗಿದ್ದು, ಪ್ರಶಸ್ತ ಸ್ಥಳವೆಂದು ಭಾವಿಸಿದರು. ಆಗ ಮಧ್ಯರಾತ್ರಿ. ತಂಪಾದ ಗಾಳಿ, ಮುದ್ದಾದ ಚಂದ್ರನ ತಿಳಿ ಬೆಳಕಿನ ನಗುವಲ್ಲಿ ನೃತ್ಯವನ್ನು ಮಾಡುತ್ತಾ ಕಾಲ ಕಳೆಯತೊಡಗಿದರು. ಇದು ಕೊಡವರ ಪೂರ್ವಿಕರ ನಂಬಿಕೆ. ಇಂದಿಗೂ ಅವರಲ್ಲಿ ಉಳಿದಿದೆ. ಆದುದರಿಂದ ಪ್ರಾಚೀನ ಕಾಲದಲ್ಲಿ ಕೊಡವತಿಯವರು ರಾತ್ರಿ ಹೊತ್ತಿನಲ್ಲಿ ನೃತ್ಯ ಮಾಡುತ್ತಿದ್ದರು. ಆ ಕಾವೇರಿಯ ಮೈ ಸಿರಿಯ ಸೊಬಗಿನಲ್ಲಿ ಮೈ ದುಂಬಿ ಬೆಳೆದು ನಿಂತ ನಿಸರ್ಗದಲ್ಲಿ ನೃತ್ಯ ಮಾಡುವುದೆಂದರೆ ಸಂತಸ. ಆದರೆ ಇಂದು ಸಂಸ್ಕೃತಿ ಬದಲಾಗಿದೆ. ಹೊಸತನಕ್ಕೆ ಕಾಲು ಚಾಚಿದೆ. ನಾಗರೀಕತೆ ಪರಿಣಾಮ ಬೀರಿದೆ. ಆದುದರಿಂದ ಕಲೆಯು ರೂಪಾಂತರಗೊಂಡಿದೆ ಎನ್ನಬಹುದು. ಇದು ಕೊಡಗಿನ ಮಡಿಕೇರಿ. ವಿರಾಜಪೇಟೆ, ನಾಪೋಕ್ಲು, ಅಮ್ಮತ್ತಿನಾಡುಗಳಲ್ಲಿ ಅಸ್ತಿತ್ವದಲ್ಲಿದೆ.

ಅರ್ಥ : ಉಮಾದೇವಿಯ ನರ್ತನವೇ ಉಮ್ಮತ್ತಾಟ್ ಆಗಿರುತ್ತದೆ. ಸುರಾಸುರರು ಸಮುದ್ರಮಂಥನ ಮಾಡಿ ಅಮೃತವನ್ನು ಪಡೆದಾಗ ಅದನ್ನು ಕುಡಿಯಲು ನಾ ಮುಂದೆ ತಾ ಮುಂದೆ ಎಂದು ಜಗಳ ಆರಂಭವಾಗುತ್ತದೆ. ಅನಂತರದ ಕ್ಷಣದಲ್ಲಿ ಮಹಾವಿಷ್ಣುವು ಮೋಹಿನಿಯ ರೂಪ ತಾಳುವನು. ಅನೇಕ ತೆರನಾದ ನೃತ್ಯ ಮಾಡಿ ಅಮೃತವನ್ನು ಎಲ್ಲರಿಗೂ ಹಂಚಿದ ಸಂಬಂಧವೇ ಉಮ್ಮತ್ತಾಟ್ ಎನ್ನಲಾಗಿದೆ. ಮೋಹಿನಿಗೂ ಉಮೆಗೂ ಸಂಬಂಧವೇನು ಎಂದು ಕೇಳಿದರೆ ಶಿವನ ಅರ್ಧ ಭಾಗದಲ್ಲಿ ಉಮೆ ಅಥವಾ ವಿಷ್ಣು ಇರುವುದರಿಂದ ಇಬ್ಬರೂ ಒಂದೇ ಎಂದು ಜನಪದರು ಉತ್ತರಿಸುತ್ತಾರೆ. ಈ ಕಲೆಯನ್ನು ಸಾಮಾನ್ಯವಾಗಿ ನವೆಂಬರ‍್, ಡಿಸೆಂಬರ‍್ ತಿಂಗಳಿನಲ್ಲಿ ಕೊಡಗಿನ ಕೆಲವು ಊರು, ಕೇರಿ, ನಾಡುಗಳಲ್ಲಿ ಪ್ರದರ್ಶಿಸಲಾಗುತ್ತದೆ.

ಸ್ತ್ರೀ ಪ್ರಧಾನವಾದ ಕಲೆ. ಪುರುಷರು ಭಾಗವಹಿಸುವುದಿಲ್ಲ. ಸ್ತ್ರೀಯರು ಸಾಂಪ್ರದಾಯಿಕ ಉಡುಗೆಯನ್ನು ಧರಿಸುತ್ತಾರೆ. ಅವಿವಾಹಿತೆಯರು ಭಾಗವಹಿಸುವರು. ಉಮ್ಮತ್ತಾಟ್ ಭಗವತಿ, ಇಗ್ಗುತಪ್ಪ, ಕಾವೇರಿ, ಈಶ್ವರ ಇನ್ನಿತರ ದೈವಗಲ ಹಬ್ಬದ ಸಂದರ್ಭದಲ್ಲಿ ಪ್ರದರ್ಶಿಸುವುದು ರೂಢಿಯಲ್ಲಿದೆ.

ಆಚರಣೆ : ಉಮ್ಮತ್ತಾಟ್ ದೈವಗಳ ಹಿನ್ನೆಲೆಯಲ್ಲಿ ಪ್ರದರ್ಶನಗೊಳ್ಳುತ್ತದೆ. ಕಾವೇರಿ ಮತ್ತು ಭಗವತಿ ಉತ್ಸವಗಳ ಸಂದರ್ಭದಲ್ಲಿ ಇದರ ಆಚರಣೆ ವಿಶೇಷವಾಗಿ ನಡೆಯುತ್ತದೆ. ಹಬ್ಬ ಅಥವಾ ಉತ್ಸವದ ದಿನದಂದು ಪುರುಷರು ಮತ್ತು ಸ್ತ್ರೀಯರು ಬೆಳಗ್ಗೆ ೪ ಅಥವಾ ೫ ಗಂಟೆಗೆ ಎದ್ದು ತಮ್ಮ ಸಂಧ್ಯಾವಂದನೆಗಳನ್ನು ಮುಗಿಸಿ ಭಂಡಾರದ ಮನೆಗೆ ಮಡಿಕೊಟ್ಟ ಪಾಟ್ ನೊಂದಿಗೆ ಹೋಗುತ್ತಾರೆ. ಅಲ್ಲಿಂದ ದೇವಿಯ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪೂಜಾದಿಗಳನ್ನು ಮಾಡುತ್ತಾರೆ. ಉತ್ಸವದ ಸಂದರ್ಭದಲ್ಲಿ ಮುಟ್ಟಾದ ಸ್ತ್ರೀಯರು ಭಾಗವಹಿಸುವಂತಿಲ್ಲ. ಸ್ತ್ರೀ ಪುರುಷರು ಒಟ್ಟಿಗೆ ದೇವಸ್ಥಾನಕ್ಕೆ ಬರುತ್ತಾರೆ. ಭಗವತಿ ದೇವಿಯನ್ನು ವೈಭವದಿಂದ ಅಲಂಕರಿಸಿ ಪೂಜಾರಿಯು ಆರತಿ ಬೆಳಗುವುದು ಪದ್ಧತಿ. ಅನಂತರ ತಕ್ಕ ಮತ್ತು ಮುಕ್ಕಾಟಿಯವರು ನಾಲ್ಕು ನಾಡು ಹಾಗೂ ಎಂಟು ಕೇರಿಯ ಜನರಿಗೆ ಸರ್ವ ವಿಧದಲ್ಲೂ ಒಳ್ಳೆಯದು ಎಂದು ಪ್ರಾರ್ಥಿಸಿ ಆರತಿ ತೆಗದುಕೊಳ್ಳುತ್ತಾರೆ. ದೇವಸ್ಥಾನದ ಅಂಗಳದಲ್ಲಿ (ಬಲಭಾಗ) ಕುತ್ತ ದೀಪವಿರುತ್ತದೆ. ಅಲ್ಲಿ ಸಾಂಪ್ರದಾಯಿಕ ಉಡುಗೆ ಧರಿಸಿದ ನಾಲ್ವರು ಕೊಡವತಿಯರು ದೀಪದ ಪಕ್ಕದಲ್ಲಿ ನಿಂತು ಹಾಡಡಲು ಪ್ರಾರಂಭಿಸುತ್ತಾರೆ. ಆ ಹಾಡು ಮತ್ತು ಭಗವತಿ ದೇವಿಯನ್ನು ಕುರಿತದ್ದಾಗಿರುತ್ತದೆ. ಕೊಡವತಿಯರು ತಾಳ ಹಿಡಿದುಕೊಂಡು ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ ಅಲ್ಲಿಯೇ ವೃತ್ತಾಕಾರವಾಗಿ ಎರಡು ಅಥವಾ ಮೂರು ಸುತ್ತು ಕುಣಿದು ನಿಲ್ಲಿಸುತ್ತಾರೆ. ಅನಂತರ ದೇವರ ಮಂದ್ ನಲ್ಲಿ ಅಥವಾ ಕೋಲುಬಾಣಿಯಲ್ಲಿ ಉಮ್ಮತ್ತಾಟ್ ನ್ನು ಅನೇಕ ವಿಧಗಳಲ್ಲಿ ಕೊಡವ ಕಲಾವಿದೆಯರು ಪ್ರದರ್ಶಿಸುತ್ತಾರೆ.

ಸ್ತ್ರೀ ಪ್ರಧಾನವಾದ ಕಲೆ. ಹತ್ತರಿಂದ ಹನ್ನೆರಡು ಬಗೆಗಳಿವೆ. ಆದರೆ ಎಲ್ಲಾ ಬಗೆಗಳಲ್ಲೂ ಹೋಲಿಕೆ ಇದೆ. ಕೆಲವು ನಾಡುಗಳಲ್ಲಿ ಏಳು ಬಗೆಗಳನ್ನು ಪ್ರದರ್ಶಿಸುತ್ತಾರೆ. ಈ ಕಲೆಯಲ್ಲಿ ತಾಳವನ್ನು ಮಾತ್ರ ಬಳಸುತ್ತಾರೆ. ಬೇರೆ ವಾದ್ಯಗಳ ಬಳಕೆ ಇಲ್ಲ. ಕೊಡವ ಸ್ತ್ರೀಯರೇ ಈ ತಾಳ ಹಾಕುತ್ತಾ, ಅದರ ಗತ್ತಿಗೆ ಹೆಜ್ಜೆ ಹಾಕುತ್ತಾರೆ. ನಾಲ್ಕು ಜನ ಕಲಾವಿದರು ಹಿಮ್ಮೇಳ ಮತ್ತು ಮುಮ್ಮೇಳವಾಗಿ ಹಾಡುತ್ತಾರೆ. ೨,೪,೬,೮,೧೨,೧೪,೧೬,೧೮,೨೦ ಕಲಾವಿದರಿರುತ್ತಾರೆ. ಎಲ್ಲಾ ಬಗೆಗಳಲ್ಲೂ ಒಂದೊಂದು ರೀತಿಯ ಹಾವಭಾವ, ಭಂಗಿ, ಕುಣಿತಗಳಿರುತ್ತವೆ. ಊರ‍್ಮಂದ್ ಅಥವಾ ಕೋಲು ಬಾಣೆಯಲ್ಲಿ ಪ್ರದರ್ಶಿಸುತ್ತಾರೆ. ಸಂಕ್ರಾಂತಿ, ಕಾವೇರಿ ಸಂಕ್ರಮಣ, ಯುಗಾದಿ ಮುಂತಾದ ಸಂದರ್ಭಗಳಲ್ಲಿ ಇದನ್ನು ಪ್ರದರ್ಶಿಸುತ್ತಾರೆ.

ಈ ಕಲೆಯನ್ನು ಪ್ರದರ್ಶಿಸುವಾಗ ಮಹಿಳೆಯರು ಕೊಡವ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸುತ್ತಾರೆ. ಕೊಡವ ಸ್ತ್ರೀಯರು ಸೀರೆ ಉಡುವಾಗ ಸೀರೆಯ ಒಂದು ತುದಿಯನ್ನು ಹಿಂಬದಿಯಲ್ಲಿ ಒಳ ಲಂಗಕ್ಕೆ ಸಿಕ್ಕಿಸಿರುತ್ತಾರೆ. ಅನಂತರ ನೆರಿಗೆ ಹಿಡಿದು ಹಿಂದಕ್ಕೆ ಇಟ್ಟುಕೊಂಡು ಸೀರೆಯ ಇನ್ನೊಂದು ತುದಿಯನ್ನು ಮುಂಭಾಗವಾಗಿ ಸುತ್ತಿ ಎಡ ತೋಳಿನ ಕೆಳಗೆ ಹಾದು ಬಲ ಹೆಗಲ ಮೇಲೆ ತಂದು ಎದೆಯ ಬಲಭಾಗದಲ್ಲಿ ಕಟ್ಟುವರು. ಕಟ್ಟಿಗೆ ಚಿನ್ನದ ಅಥವಾ ಬೆಳ್ಳಿ ಹೂವಿನಾಕಾರದ ಪಿನ್ನುಗಳನ್ನು ಸಿಕ್ಕಿಸಿಕೊಂಡಿರುತ್ತಾರೆ. ಆ ಸೀರೆ ಕೆಂಪು ಬಣ್ಣದಿಮದ ಇದ್ದು, ತೋಳು ಮುಚ್ಚುವಂತೆ ಕೆಂಪು ರವಿಕೆ ಧರಿಸುವರು. ಅಲ್ಲದೆ ತಲೆಗೆ ಕೆಂಪು ವಸ್ತ್ರವನ್ನು ಕಟ್ಟಿಕೊಂಡಿರುತ್ತಾರೆ. ಅದಕ್ಕೆ ಕೊಡವ ಭಾಷೆಯಲ್ಲಿ ಮಂಡೆಚೌಕ ಎನ್ನುವರು. ಇದರ ಅಂಚು ಜರತಾರಿಯಿಂದ ಕೂಡಿರುತ್ತದೆ. ಕೊರಳಲ್ಲಿ ಬೆಲೆ ಬಾಳುವ ಚಿನ್ನ ಮತ್ತು ವಜ್ರದ ನೆಕ್ ಲೇಸ್ ಅಥವಾ ಸರಗಳನ್ನು ಹಾಕಿಕೊಂಡಿದ್ದು, ಕೈಯಲ್ಲಿ ಕಂಚಿನ ತಾಳವನ್ನು ಹಿಡಿದುಕೊಂಡಿರುತ್ತಾರೆ. ಅಲ್ಲದೆ ಕೈಗಳಿಗೆ ಬಳೆ, ಕೊರಳಿಗೆ ಮಣಿಮಾಲೆ, ಹಣೆಗೆ ಕುಂಕುಮದ ಬೊಟ್ಟು ಹಾಕಿಕೊಂಡಿರುತ್ತಾರೆ.

ಉಮ್ಮತ್ತಾಟ್ ಕಲೆಯು ಆರಂಭವಾದಾಗ ‘ಕಾವೇರಮ್ಮ ದೇವಿ ತಾಯಿ ಕಾಪಾಡೆಂಗಳ್’ ಎನ್ನುತ್ತಾರೆ. ಪ್ರದರ್ಶಿಸುವಾಗ ಮಂದ್ ನ  ಮಧ್ಯದಲ್ಲಿ ಕುತ್ತದೀಪ ಉರಿಯುತ್ತಿರುತ್ತದೆ. ಅಲ್ಲದೆ ಕುತ್ತುಂಬೊಳ್ವ್ (ಕಾವೇರಿ ಮಾತೆಯ ವೇಷ ಧರಿಸಿದಂತ ಕನ್ಯೆ) ಲವಲೇಶವೂ ಕದಲದ ಕೈಯಲ್ಲಿ ಆಯುಧ ಹಿಡಿದು ಏಕಾಗ್ರತೆಯಿಂದ ಮಧ್ಯೆ ನಿಂತಿರುವಳು. ಅವಳ ಸುತ್ತ ಇನ್ನುಳಿದ ಕಲಾವಿದೆಯರು ವೃತ್ತಾಕಾರವಾಗಿ ತಿರುಗುತ್ತಾ ತಾಳ ತಟ್ಟುತ್ತಾ ಅದರ ಗತ್ತಿಗೆ ಹೆಜ್ಜೆ ಹಾಕುತ್ತಾ ಕುಣಿಯುತ್ತಿರುತ್ತಾರೆ. ಮಂದ್ ರ ಪಕ್ಕದಲ್ಲಿಯೇ ನಾಲ್ಕು ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ತಟ್ಟುತ್ತಾ ಹಾಡನ್ನು ಮೊದಲಿಬ್ಬರು ಅನಂತರ ಮತ್ತಿಬ್ಬರು ಮಹಿಳೆಯರು (ಹಿಮ್ಮೇಳ ಮುಮ್ಮೇಳವಾಗಿ) ಹಾಡುತ್ತಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ನಾಲ್ಕು ಜನ ಮಹಿಳೆಯರು ಒಟ್ಟಿಗೆ ಹಾಡುತ್ತಾರೆ.

ಬೇಡ್ ಕಳಿ

ಗಂಡು ಕಲೆ. ಭದ್ರಕಾಳಿಯ ಉತ್ಸವದ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಮಹಿಳೆಯರು ಭಾಗವಹಿಸುವುದಿಲ್ಲ. ಕೊಡವರಲ್ಲಿ ಪರಂಪರಾಗತವಾಗಿ ಬಂದಿರುತ್ತದೆ. ಬೇಡ್ ಎಂದರೆ ನಾಲ್ಕು ಅಥವಾ ನಾಲ್ಕೂವರೆ ಅಡಿ ಉದ್ದದ ಒಂದು ಕೋಲು. ಆ ಕೋಲಿನ ತುದಿಗೆ ಕೆಂಪು ರುಮಾಲಿನಿಂದ ಗೊಂಬೆ ಆಕೃತಿ ಮಾಡಿ ಕಟ್ಟಿರುತ್ತಾರೆ. ಒಬ್ಬ ಕಲಾವಿದ ಸಾಂಪ್ರದಾಯಿಕ ಉಡುಗೆ ತೊಟ್ಟು ಊರ ದಾರಿಯಲ್ಲಿ ಆ ಕೋಲನ್ನು ಹಿಡಿದು ಮೆರವಣಿಗೆಯಲ್ಲಿ ಮುಂದೆ ಡೋಲಿನ ಶಬ್ದಕ್ಕೆ ಹೆಜ್ಜೆ ಹಾಕುತ್ತಾ ಬರುತ್ತಿರುತ್ತಾನೆ. ಭತ್ತದ ಹುಲ್ಲಿನಿಂದ ಎರಡು ಕೃತಿಗಳ ಆಕೃತಿ ಉಳ್ಳಂಥವುಗಳನ್ನು ತಲೆಗೆ ಕಟ್ಟಿಕೊಂಡಿರುತ್ತಾರೆ. ಅಲ್ಲದೆ ಎರಡು ಕೈಗಳಲ್ಲೂ ಒಣಗಿದ ಹುಲ್ಲನ್ನು ಹಿಡಿದು ದಾರಿಯಲ್ಲಿ ಬರುವಾಗ ಪರಸ್ಪರ ಮೊಣಕಲುಗಳಿಗೆ ಹೊಡೆಯುತ್ತಾ ಬರುವುದು ಪದ್ಧತಿ. ಹೀಗೆ ಮೆರವಣಿಗೆಯಲ್ಲಿ ಸಾಗಿ ಬಂದ ಕಲಾವಿದರು ಭದ್ರಕಾಳಿಯ ದೇವಸ್ಥಾನದ ಮುಂಭಾಗದಿಂದ ನಡೆದು ಊರ‍್ ಮಂದ್ ಗೆ ಹೋಗುವುದು ಪದ್ಧತಿ. ಅನಂತರ ಊರ‍್ ಮಂದ್ ನ ಮಧ್ಯದಲ್ಲಿ ಗೊಂಬೆ ಆಕಾರದ ಕೋಲನ್ನು ಹಿಡಿದು ಹಿರಿಯ ವ್ಯಕ್ತಿ ಕುಣಿಯುತ್ತಿರುತ್ತಾನೆ. ಅವನ ಸುತ್ತ ಇನ್ನುಳಿದ ಕಲಾವಿದರೆಲ್ಲ ಕೈ ತಲೆಕಾರರು ಕುಣಿಯುತ್ತಾ ಮೂರು ಸುತ್ತು ಬಂದು ಈ ಪ್ರದರ್ಶನವನ್ನು ಕೊನೆಗೊಳಿಸುವರು. ಇದಕ್ಕೆ ಪೂರಕವಾಗಿ ಡೋಲು ಇದ್ದು, ಯಾವುದೇ ಹಾಡು, ಸಾಹಿತ್ಯ ಇರುವುದಿಲ್ಲ.

ಕಾವೇರಿ ಸಿಂಚನದಲ್ಲಿ ಈ ಮೇಲೆ ವಿಶ್ಲೇಷಿಸಿದ ಪ್ರದರ್ಶನ ಕಲೆಗಳಲ್ಲಿ ಮಾತ್ರವಲ್ಲ ಇನ್ನೂ ಅನೇಕ ಕಲೆಗಳು ಜನಪದರಲ್ಲಿ ರೂಢಿಯಲ್ಲಿವೆ ಎಂಬುದನ್ನು ಮರೆಯುವಂತಿಲ್ಲ. ಒಟ್ಟಾರೆಯಾಗಿ ಮೂಲ ಸೆಲೆ, ಬಲೆ ಒಳಗೆ ಸೃಷ್ಟಿಗೆ ಪ್ರೇರೇಪಿಸುತ್ತಾಳೆ.