ನನಗೆ ನಾನೇ ಪ್ರಶ್ನೆ ಹಾಕಿಕೊಂಡೆ. ಒಂದು ರೀತಿಯ ದುಗುಡತೆ ಕಾಡಿತು. ಆಶ್ಚರ್ಯ ಜೊತೆಗೆ ಮೌನ ಆವರಿಸಿತು. ಚರ್ಚೆಯ ಆಳಕ್ಕೆ ಇಳಿದಾಗ ಕಾವೇರಿಗೂ ಮತ್ತು ಕ್ರೀಡೆಗೂ ಸಂಬಂಧ ಇರಬೇಕು ಅನ್ನಿಸಿತು. ಇದ್ದರೂ ಅದು ಹೇಗೆ ಎಂಬುದರ ಸುತ್ತ ತಳಮಳಕ್ಕೆ ಒಳಗಾದೆ. ಆದರೂ ಇನ್ನೂ ಯೋಚನೆಯಲ್ಲಿ ತೊಡಗಿದಾಗ ಒಂದಕ್ಕೊಂದು ಬೆಸೆದುಕೊಂಡಿವೆ ಎಂಬುದು ಅರಿವಾಯಿತು. ಮನುಷ್ಯ ಪ್ರಾಣಿ ಪ್ರಕೃತಿಯಲ್ಲಿರುವ ಪ್ರತಿಮೆಯೊಂದನ್ನು ವೀಕ್ಷಸಿ ಅನುಸರಿಸುತ್ತಾ ಬಂದಿರುತ್ತಾನೆ. ಆದ್ದರಿಂದ ಕ್ರೀಡೆಗಳು ಅವನ ಬೆನ್ನ ಹಿಂದೆಯೇ ಬಂದಿರುತ್ತವೆ.

ಕಾವೇರಿ ಜನಪದರ ಆರಾಧ್ಯ ದೇವತೆ. ಇವಳು ಹರಿದೆಡೆಯಲ್ಲೆಲ್ಲ ಫಲ ಸಮೃದ್ಧತೆ, ವ್ಯವಸಾಯಕ್ಕೆ ಅಭಿವೃದ್ಧಿ, ಮನುಷ್ಯರ ಆರೋಗ್ಯ, ಪ್ರಾಣಿ ಸಂಕುಲಕ್ಕೆ ನೆಮ್ಮದಿ ತಂದುಕೊಟ್ಟಿರುತ್ತಾಳೆ. ಸಾಮಾನ್ಯವಾಗಿ ಸುಗ್ಗಿಯ ಸಂದರ್ಭದಲ್ಲಿ ಕ್ರೀಡೆಗಳು ಪ್ರಾರಂಭವಾಗುತ್ತವೆ. ಆದರೆ ಕೊಡಗಿನಲ್ಲಿ ಆರು ತಿಂಗಳು ಜಟಿ ಜಟಿ ಮಳೆ ಮಂಪರು ಆವರಿಸಿರುತ್ತದೆ. ಆದುದರಿಂದ ಅಲ್ಲಿ ಆಗಸ್ಟ್ ಕೊನೆಯ ವಾರ ಮತ್ತು ಅಕ್ಟೋಬರ‍್ ಮೊದಲನೇ ವಾರದಲ್ಲಿ ಕ್ರೀಡೆಗಳನ್ನು ಜನಪದರಲ್ಲಿ ಇಂದಿಗೂ ಕಾಣಬಹುದು.

ಇಂದು ಆಧುನಿಕಮಯ. ಇದರೊಳಗೆ ಆರೋಗ್ಯದ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ವಹಿಸುತ್ತಿದೇವೆ. ಆರೋಗ್ಯವೇ ಸಂಪತ್ತು ಎಂಬುದು ಅರಿವಾಗಿದೆ. ಪ್ರಸ್ತುತ ದಿನಗಳಲ್ಲಿ ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಪಟ್ಟಗಳಲ್ಲಿ, ಹಳ್ಳಿಗಳಲ್ಲಿ ವ್ಯಾಯಾಮ ಶಾಲೆಗಳು ಅಸ್ತಿತ್ವಕ್ಕೆ ಬಂದಿರುತ್ತವೆ.

ಹಬ್ಬ ಉತ್ಸವಗಳಲ್ಲಿಯೂ ಕೂಡ ಕ್ರೀಡಾ ಸ್ಪರ್ಧೆ ನಡೆಸಲಾಗುತ್ತದೆ. ಆದರೆ ಶತಶತಮಾನಗಳ ಹಿಂದೆಯೇ ಆದಿ ಮಾನವ ಸಂಸ್ಕೃತಿಯಲ್ಲಿಯೇ ಅನೇಕ ಕ್ರೀಡೆಗಳಿದ್ದವು ಎಂಬುದನ್ನು ನಾವು ಮನನ ಮಾಡಿಕೊಳ್ಳಬಹುದು. ಆದಿಯ ಸಂಸ್ಕೃತಿಯ ತುಣುಕಗಳ ವಿಶ್ಲೇಷಣೆಯನ್ನು ಟಚ್ ಮಾಡುವುದಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಕಾವೇರಿ ನೆಲದ ಜನದಲ್ಲಿ ಸೃಷ್ಟಿಗೊಂಡ ಕೆಲವು ಕ್ರೀಡೆಗಳ ಚರ್ಚೆಯನ್ನು ಇಲ್ಲಿ ಮಾಡಲಾಗಿದೆ.

ಕೊಡಗು ಬಹು ಸಂಸ್ಕೃತಿಗಳ ಕೇಂದ್ರ. ಬಹುರೂಪಿಯ ಜನಪದರ ನೆಲೆವೀಡು. ಬಹುಭಾಷೆಗಳು ನೆಲೆಗೊಂಡ ಜನವೀಡು. ವೈವಿಧ್ಯಮಯ ವೇಷಭೂಷಣ, ಊಟೋಪಚಾರ, ಭಿನ್ನ ಕಲೆಗಳು, ಮೌಲ್ಯಯುತವಾದ ಕ್ರೀಡೆಗಳು, ಹಬ್ಬ, ಉತ್ಸವಗಳ ತಾಣ ಕೊಡಗು. ಆದ್ದರಿಂದ ಅಲ್ಲಿ ಕೊಡವ, ಲಿಂಗಾಯಿತ, ಗೌಡ, ಅರೆಭಾಷಿಕ ಗೌಡ, ಕ್ರೈಸ್ತ, ಮುಸಲ್ಮಾನ, ನೇಕಾರ, ಕುಂಬಾರ, ಬೆಸ್ತ, ಕೆಂಬಟ್ಟೆ, ಯರವ, ಮಲೆಯಾಳಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವಗೃದ ಜನರು ವಾಸಿಸುತ್ತಿದ್ದಾರೆ. ಪ್ರತಿಯೊಂದು ಸಮೂಹಗಳಲ್ಲಿ ಒಂದೊಂದು ರೀತಿಯ ಕ್ರೀಡೆಗಳು ಚಾಲ್ತಿಯಲ್ಲಿವೆ. ಅಧ್ಯಯನದಲ್ಲಿ ಸಾರ್ವತ್ರಿಕವಾಗಿ ಇರುವ ಕ್ರೀಡೆಗಳನ್ನು ವಿಶ್ಲೇಷಿಸಲಾಗಿದೆ.

ಉಗಾದಿ : ಯುಗಾದಿ ಮತ್ತು ಗೌರಿ ಹಬ್ಬವನ್ನು ವಿಶೇಷವಾಗಿ ಆಚರಿಸುವರು. ಈ ಹಬ್ಬದ ದಿನ ಮುಂಜಾನೆಯೇ ಎದ್ದು, ಅವರವರ ಮನೆಯ ಕೆಲಸವನ್ನು ಮುಗಸುವರು. ಹೆಣ್ಣು ಮಕ್ಕಳು, ಹೆಂಗಸರು ತಮ್ಮ ಮನೆಯಲ್ಲಿ ಹಬ್ಬದ ಸಡಗರದಲ್ಲಿ ಮಗ್ನರಾಗಿರುತ್ತಾರೆ. ಸುಮಾರು ಒಂಭತ್ತು ಗಂಟೆಯ ನಂತರ ‘ತೆಂಗಿನಕಾಯಿ ಜೂಟ್’ ಕ್ರೀಡೆ ಆರಂಭವಾಗುತ್ತದೆ. ಇದು ಪುರುಷರ ಕಲೆ. ಸ್ತ್ರೀಯರು ಭಾಗವಹಿಸುವುದಿಲ್ಲ, ಪ್ರೇಕ್ಷಕರಾಗಿರುವರು. ಯಾವುದೇ ಸಾಂಪ್ರದಾಯಿಕ ವೇಷಭೂಷಣಗಳಿಲ್ಲ. ವಾದ್ಯೋಪಕರಣಗಳಿಲ್ಲ, ಧಾರ್ಮಿಕ ಆಚರಣೆ ಏನು ಇರುವುದಿಲ್ಲ. ವಂಶ ಪಾರಂಪರಿಕವಾಗಿ ಬಂದಿರುವುದಿಲ್ಲ. ಈ ಕಲೆಯನ್ನು ಗ್ರಾಮ ದೇವರ ಗುಡಿಗಳ ಬಯಲಿನಲ್ಲಿ ಪ್ರದರ್ಶಿಸಲಾಗುತ್ತಿತ್ತು. ಆದರೆ ಬರುಬರುತ್ತಾ ಕೆಲವು ಬದಲಾವಣೆಗಳಾಗಿವೆ. ಇಂದು ಹಳ್ಳಿ ಬೀದಿಗಳಲ್ಲಿ ಈ ಕ್ರೀಡೆ ಆಡುವುದನ್ನು ನೋಡಬಹುದು. ಇದೇ ವರ್ಗದವರು ಆಡಬೇಕೆಂಬ ಕಟ್ಟುನಿಟ್ಟುಗಳಿಲ್ಲ. ಆಸಕ್ತಿ ಇದ್ದವರು ಸೇರಿ ಕೂಡಿ ಆಡಬಹುದಾಗಿದೆ.

ಈ ತೆಂಗಿನ ಕಾಯಿ ಆಟದ ವಿಶಿಷ್ಟತೆ ಎಂದರೆ ಸುಮಾರು ೧೯,೨೦,೨೧,೨೫ ಅಡಿ ದೂರದಲ್ಲಿ ಒಂದು ತೆಂಗಿನ ಕಾಯಿಯನ್ನು ಒಬ್ಬ ತಂದು ಒಡ್ಡುತ್ತಾನೆ. ಅದೇ ಗಾತ್ರದ ಕಲ್ಲಿನಿಂದ ಮೊದಲು ೧೦, ೨೦ ಪೈಸೆ ಇತ್ತು. ಈಗ ೧ ರೂಪಾಯಿ ಬಾಜಿ ಕಟ್ಟುವರು. ಒಡೆದವನು ಒಡೆದ ತೆಂಗಿನ ಕಾಯಿಯನ್ನು ತೆಗೆದುಕೊಳ್ಳುವನು. ಒಡೆಯದಿದ್ದರೆ ೧ ರೂಪಾಯಿಯನ್ನು ತೆಂಗಿನಕಾಯಿ ಒಡೆದವನಿಗೆ ಕೊಡಬೇಕಾಗುತ್ತದೆ. ಇದೊಂದು ವಿಶಿಷ್ಟ ರೀತಿಯ ಪಂದ್ಯ. ಇಂದಿಗೂ ಕೊಡಗಿನ ಅನೇಕ ಗ್ರಾಮಗಳಲ್ಲಿ ಇದೆ. ಸಾಮಾನ್ಯವಾಗಿ ಎಲ್ಲಾ ಜನವರ್ಗಗಳಲ್ಲಿ ಈ ಕಲೆ ಕಂಡುಬರುತ್ತದೆ.

ಕೊಡವರು ‘ಕೈಲ್ ಮುಹೂರ್ತ’ ಅಥವಾ ಆಯುಧ ಪೂಜೆಯ ದಿನದಂದು ಕ್ರೀಡೆಗಳನ್ನು ಪ್ರದರ್ಶಿಸುವರು. ಇವರಲ್ಲಿ ವೈವಿಧ್ಯಮಯವಾದ ತೆಂಗಿನಕಾಯಿ ಕ್ರೀಡೆಗಳಿವೆ. ಪ್ರಧಾನವಾಗಿ ತೆಂಗೆಬೊಡಿ, ಓಟ್ ಬೊಡೆ, ತೆಂಗೆಪೋರ‍್, ಜೂಜ್ ಕಲ್ಲ್, ಬಾಳೆ ಬಿರುದ್ ಬೋಟೆಕಾರ ಅಯ್ಯಪ್ಪ, ಕುದುರೆ ಓಟ್, ನಾಟಿ ಓಟ್ ಅಥವಾ ನಾಟಿ ಓಟಗದ್ದೆ ಓಟ್, ಇದ್ದರೆ ಇತರ ಜನಾಂಗದವರಲ್ಲಿ ಗದ್ದೆ ಓಟ, ಗಾಡಿ ಓಟ, ಕಲ್ಲುಬಂಡೆ ಎತ್ತುವ ಆಟ, ಹೀಗೆ ಇನ್ನೂ ಮುಂತಾದ ಕ್ರೀಡೆಗಳಿವೆ.

ತೆಂಗೆಬೊಡಿ : ದೇವರ ಬನದ ಮುಂದಿನ ತೋಟ ಅಥವಾ ಅಕ್ಕಪಕ್ಕದಲ್ಲಿರುವ ಮರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಮರದ ಉದ್ದವಾದ ರೆಂಬೆಯನ್ನು ಆರಿಸಿಕೊಂಡು ಅದರ ರೆಂಬೆಗಳನ್ನು ಕಡಿದು ಹಾಕಲಾಗುತ್ತದೆ. ೨ ಅಥವಾ ಎರಡೂವರೆ ಅಡಿ ಉದ್ದಗಲದ ಕೋಲುಗಳನ್ನು ಕಟ್ಟಿ ಅದರ ತಲೆ ಭಾಗವನ್ನು ಚೂಪಾಗಿ ಮಾಡಲಾಗುತ್ತದೆ. ಆ ಚೂಪಾದ ರೆಂಬೆಗೆ ತೆಂಗಿನಕಾಯಿಯನ್ನು ಸಿಕ್ಕಿಸುವರು. ಅಡ್ಡಕಟ್ಟಿದ ಕೋಲಿಗೆ ಮತ್ತೆರಡು ತೆಂಗಿನ ಕಾಯಿಯನ್ನು ಚುಚ್ಚುವರು. ಆ ಕಡಿದ ಮರದ ರೆಂಬೆಗೆ ಶಿಲುಬೆಯಾಕಾರದ ಕೋಲನ್ನು ಒಬ್ಬ ಹತ್ತಿ ಕಟ್ಟುತ್ತಾನೆ. ಅವನು ಕಟ್ಟಿ ಇಳಿಯುತ್ತಾನೆ. ಕೆಳಗೆ ಕೊಡವ ಸಾಂಪ್ರದಾಯಿಕ ಉಡುಗೆ ಧರಿಸಿ ನಿಂತ ಪುರುಷರು ಸ್ಪರ್ಧೆಗೆ ಕಾಯುತ್ತಿರುತ್ತಾರೆ. ಬಂದೂಕು ಹಿಡಿದು ಒಬ್ಬೊಬ್ಬರೆ ಕಾಯಿಗೆ ಗುರಿ ಇಟ್ಟು ಗುಂಡು ಹಾರಿಸುವರು. ಯಾರು ಗುಂಡು ಹಾರಿಸಿ ಕಾಯಿ ಒಡೆಯುತ್ತಾರೆಯೋ ಅವರಿಗೆ ಹಣ ಅಥವಾ ಪ್ರಥಮ ಬಹುಮಾನ ಕೊಡುವರು. ಉಳಿದೆರಡು ತೆಂಗಿನಕಾಯಿಯನ್ನು ಯಾರು ಹೊಡೆದು ಉರುಳಿಸುತ್ತಾರೆಯೋ ಅವರಿಗೆ ಕ್ರಮವಾಗಿ ಎರಡನೇ ಮತ್ತು ಮೂರನೇ ಬಹುಮಾನ ನೀಡುವರು. ಈ ಕ್ರೀಡೆಗೆ ‘ತೆಂಗೆಬೊಡಿ’ ಎಂದು ಕತೆಯುವರು. ಇಂದಿಗೂ ಕೊಡಗಿನ ಗ್ರಾಮೀಣ ಊರು, ನಾಡು, ಕೇರಿಗಳಲ್ಲಿ ಕಾಣಬಹುದಾದರೂ ತೀರ ಕಡಿಮೆ ಪ್ರಮಾಣದಲ್ಲಿದೆ ಎಂದು ಹೇಳಬಹದು.

ಓಟ್ ಬೋಡಿ : ಇದು ತೆಂಗಿನಕಾಯಿಯ ಇನ್ನೊಂದು ಬಗೆ. ಪುರುಷರ ಕ್ರೀಡೆ. ಸ್ತ್ರೀ ಪ್ರಧಾನವಾದುದಲ್ಲ. ಆಳೆತ್ತರದ ಜಾಗದಲ್ಲಿ ಮೂರು ತೆಂಗಿನಕಾಯಿಗಳನ್ನು ಸಾಲಾಗಿ ಕಟ್ಟಿರುತ್ತಾರೆ. ಸಾಂಪ್ರದಾಯಿಕ ಉಡುಗೆ ಧರಿಸಿದ ಕೊಡವ ಪುರುಷರು ಬಂದೂಕು ಹಿಡಿದು ನಿರ್ದಿಷ್ಟವದ ಅಂತರದಲ್ಲಿ ನಿಂತಿರುತ್ತಾರೆ. ಅವರು ಓಡುತ್ತಾ ಸಾಲಾಗಿ ಇಟ್ಟಿದ್ದ ಮೂರು ತೆಂಗಿನಕಾಯಿಗಳಲ್ಲಿ ಮಧ್ಯದ ತೆಂಗಿನಕಾಯಿಗೆ ಗುಂಡಿಕ್ಕಿ ಒಡೆದು ಹಾಕಬೇಕು. ಹೀಗೆ ಒಡೆದವರಿಗೆ ಬಹುಮಾನವನ್ನು ಕೊಡುತ್ತಾರೆ. ಈ ಕ್ರೀಡೆಗೆ ಓಟ್ ಬೋಡಿ ಎಂದು ಕರೆಯುವರು. ಕೊಡಗಿನಲ್ಲಿಯೇ ನೆಲೆ ನಿಂತ ಇತರ ಜನಾಂಗದವರಲ್ಲಿ ಈ ಕ್ರೀಡೆ ಚಾಲ್ತಿಯಲ್ಲಿಲ್ಲ.

ನಾಟಿಓಟ್ : ಮಳೆಯ ಅಬ್ಬರದಿಂದ ಕಾವೇರಿ ನೀರು ಭೋರ್ಗರೆಯುತ್ತಾ ಹರಿಯುತ್ತಿದ್ದರೆ, ಇತ್ತ ಕಡೆ ಗದ್ದೆಯಲ್ಲಿ ನೀರು ತುಂಬಿ ಇನ್ನೊಂದು ಗದ್ದೆಗೆ ಬೀಳುವ ನಾದ ಅವಿಸ್ಮರಣೀಯ. ಆ ಸಂದರ್ಭದಲ್ಲಿ ಎಲ್ಲಾ ಗದ್ದೆಗಳನ್ನು ಐದು ಬಾರಿ ಉತ್ತು ನಾಟಿ ಮಾಡಿರುತ್ತಾರೆ. ಕೊಡಗಿನಲ್ಲಿ ಕೆಲವು ಗದ್ದೆಗಳು ಒಂದು ಫರ್ಲಾಂಗ್ ನಷ್ಟು ದೊಡ್ಡದಾಗಿರುತ್ತದೆ. ಅಂತಹ ಗದ್ದೆಗಳಲ್ಲಿ ಒಂದನ್ನು ಆರಿಸಿಕೊಂಡು ಸುತ್ತ ನಾಟಿ ಮಾಡಿದ್ದು, ಆ ಗದ್ದೆಯ ಮಧ್ಯದಲ್ಲಿ ಹತ್ತು ಅಡಿ ಅಗಲ ನಾಡಿ ಮಾಡದೆ ಸ್ಪರ್ಧೆಗಾಗಿ ಹಾಗೆ ಬಿಟ್ಟಿರುತ್ತಾರೆ. ಗದ್ದೆಯ ಒಂದು ಬದಿಯಲ್ಲಿ ಸ್ಪರ್ಧಾಭ್ಯರ್ಥಿಗಳು ಚಡ್ಡಿ, ಬನಿಯನ್ ಹಾಕಿಕೊಂಡು ನಿಂತಿರುತ್ತಾರೆ. ಸೂಚನೆ ಕೊಡುವ ವ್ಯಕ್ತಿ ಬಂದೂಕನ್ನು ಆಕಾಶಕ್ಕೆ ತಿರುಗಿಸಿ ಹಾರಿಸಿದಾಗ ತಕ್ಷಣ ಸ್ಪರ್ಧಾಳುಗಳು ಆ ಕೆಸರಿನ ಗದ್ದೆಯಲ್ಲಿ ಓಡುವರು. ಓಡುವಾಗ ಗದ್ದೆಯ ಕೆಸರು ಅವರ ಮೈಯನ್ನು ಆವರಿಸಿರುತ್ತದೆ. ಕೆಲವರು ಓಡಲಾಗದೆ ಅರ್ಧಕ್ಕೆ ಹಿಂತಿರುಗುವರು. ಇನ್ನೂ ಕೆಲವರು ಬೀಳುವರು. ಮತ್ತೆ ಕೆಲವರು ಓಡಲಾಗದೆ ನಿಂತು ಬಿಡುವರು. ಒಂದು ರೀತಿಯಲ್ಲಿ ಹಾಸ್ಯ ಹಾಗು ಉತ್ಸಾಹ ಈ ಕ್ರೀಡೆಯಲ್ಲಿ ಕಂಡುಬರುತ್ತದೆ. ಯಾರು ಓಡಿ ಗದ್ದೆಯ ಇನ್ನೊಂದು ತುದಿಯನ್ನು ಮುಟ್ಟುತ್ತಾರೆಯೋ ಅವರು ಕ್ರಮವಾಗಿ ಮೊದಲ, ಎರಡನೇ, ಮೂರನೇ ಬಹುಮಾನ ಪಡೆಯುತ್ತಾರೆ. ಈ ಕ್ರೀಡೆಯಲ್ಲಿ ಎರಡು, ಮೂರು ತಂಡದವರು ಭಾಗವಹಿಸುವರು. ಕ್ರೀಡೆ ಮುಕ್ತಾಯವಾದಾಗ, ನಾಡಿ ಮಾಡದೆ ಸ್ಪರ್ಧೆಗಾಗಿ ಬಿಟ್ಟಿದ್ದ ಜಾಗವನ್ನು ತಂಡದಲ್ಲಿ ಭಾಗವಹಿಸಿದವರೆಲ್ಲರೂ ಬಹಳ ಸಂತೋಷದಿಂದ ನಾಟಿ ಮಾಡುವರು. ಅನಂತರ ಫಲಹಾರವನ್ನು ಮುಗಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗುವರು.

ಈ ಕ್ರೀಡೆ ಕೊಡವರನ್ನೊಳಗೊಂಡಂತೆ ಅಲ್ಲಿಯೇ ವಾಸವಾಗಿರುವ ಅರೇಭಾಷೆ ಗೌಡ, ಒಕ್ಕಲಿಗ, ಲಿಂಗಾಯಿತರಲ್ಲಿಯೂ ಈ ಕ್ರೀಡೆಯನ್ನು ರೂಢಿಸಿಕೊಂಡು ಬಂದಿರುತ್ತಾರೆ.

ಬೋಟೆಕಾರ ಅಯ್ಯಪ್ಪ ಕ್ರೀಡೆ : ಕೊಡಗಿನಾದ್ಯಂತ ನೆಲೆ ನಿಂತಿರುವ ಇತರ ಜನವರ್ಗದವರಲ್ಲಿ ಈ ಕ್ರೀಡೆ ಕಂಡುಬಂದಿರುವುದಿಲ್ಲ. ಈ ತೆರನಾದ ಕ್ರೀಡೆಯ ಹಿನ್ನೆಲೆಗೆ ಅಲ್ಲಿಯ ಭೌಗೋಳಿಕ ಅಂಶಗಳೇ ಕಾರಣ. ಏಕೆಂದರೆ ಕೊಡಗು ದಟ್ಟಾರಣ್ಯ ಭೂಪ್ರದೇಶ ಉಳ್ಳಂತದ್ದು. ಅಲ್ಲಿ ಬೃಹದಾಕಾರವಾಗಿ ಬೆಳೆದು ನಿಂತ ಮರಗಳೂ, ಪರ್ವತಶ್ರೇಣಿ, ಅಲ್ಲಲ್ಲಿ ಕಂಡುಬರುವ ದೊಡ್ಡ ದೊಡ್ಡ ಕಣಿವೆಗಳು, ಇಳಿಜಾರು, ಭೋರ್ಗರೆದು ಹರಿಯುವ ನದಿಗಳಿಂದ ಕೂಡಿದೆ. ಸುತ್ತ ಕಾಡನ್ನು ಆವರಿಸಿರುವುದರಿಂದ ಕೊಡಗಿನಲ್ಲಿ ಆಲೆ, ಹುಲಿ, ಚಿರತೆ, ಕರಡಿ ಅನೇಕ ವರ್ಷಗಳ ಹಿಂದೆ ಸಿಂಹಗಳು ಆಗಿಂದಾಗ್ಗೆ ಭಯಭೀತಿ ಒಡ್ಡುವುದರಜೊತೆಗೆ ಅವರು ಬೆಳೆದ ಬೆಳೆಗಳನ್ನು ಹಾನಿ ಮಾಡುತ್ತಿದ್ದವು. ಇದಕ್ಕೆ ಪರಿಹಾರೋಪಾಯವಾಗಿ ಬೇಟೆಯಾಡುವ ಅಯ್ಯಪ್ಪ ಕ್ರೀಡೆ ಬಂದಿರಬೇಕು ಎನ್ನಿಸುತ್ತದೆ.

ಸಾಮಾನ್ಯವಾಗಿ ಒಂದೊಂದು ಜನಾಂಗದವರು ಒಂದೊಂದು ಬೇಟೆ ದೈವವನ್ನು ಸ್ವೀಕರಿಸಿ ಆರಾಧಿಸುತ್ತಾ ಬಂದಿದ್ದಾರೆ. ಅವುಗಳೆಂದರೆ, ಅಗ್ನಿ, ಜಲ, ವಾಯು ದೇವತೆ ಅಯ್ಯಪ್ಪ ಅಲ್ಲದೆ ತಮ್ಮ ಕುಲ ದೈವಗಳನ್ನು ಪ್ರಾರ್ಥಿಸುವರು. ಕೊಡವರು ಬೇಟೆಗೆ ಹೋಗುವ ಮುನ್ನ ಅಯ್ಯಪ್ಪ ಅಥವಾ ಸಾರ್ಧಾವು ದೈವವನ್ನು ಪ್ರಾರ್ಥನೆ ಮಾಡಿ ನಂತರ ಹೋಗುತ್ತಾರೆ. ಆದುದರಿಂದ ಬೇಟೆಕಾರ ಅಯ್ಯಪ್ಪನ ಕ್ರೀಡೆ ಎಂದು ಕರೆಯಲಾಗಿದೆ. ಇದು ಇತ್ತೀಚಿನದಲ್ಲ. ತಲತಲಾಂತರದಿಂದ ಬಂದದ್ದಾಗಿದೆ.

ಕೊಡಗಿನಲ್ಲಿಯೇ ವಾಸಿಸುವ ಇನ್ನಿತರ ಜನವರ್ಗದವರು ತಮ್ಮ ತಮ್ಮ ಕುಲ ದೈವಗಳಾದ ಬನಶಂಕರಿ, ದುರ್ಗಿ, ದಂಡೆಮ್ಮ, ರಾಜೇಶ್ವರಿ, ಶಿವ ಹೀಗೆ ಅನೇಕ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿ ಹೊರಡುತ್ತಾರೆ. ಬೇಟೆಗೆ ಹೋಗುವಾಗ ಒಂದೊಂದು ಗುಂಪು ಅರಣ್ಯಕ್ಕೆ ಬೇಟೆಯಾಡಲು ಸಿದ್ಧರಾಗಿ ಹೊರಡುವರು. ಹೊರಡುವಾಗ ಬೇಟೆ ತರಬೇತಿಯನ್ನು ಹೊಂದಿದ ನುರಿತ ನಾಯಿಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವರು.

ಸಾಮಾನ್ಯವಾಗಿ ಯಾವ ವ್ಯಕ್ತಿ ಮೊದಲು ಗುಂಡು ಹಾರಿಸಿ ಪ್ರಾಣಿಯನ್ನು ಕೊಲ್ಲುತ್ತಾನೆಯೋ ಆತನಿಗೆ ಅಧಿಕ ಭಾಗ ಕೊಡುತ್ತಾರೆ. ಆತ ಇಷ್ಟಪಟ್ಟು ಎಲ್ಲರಿಗೂ ಸಮಭಾಗ ಮಾಡಿ ಎಂದರೆ ಹಾಗೆ ಮಾಡಿ ಎಲ್ಲರೂ ಹಂಚಿಕೊಳ್ಳುವರು. ಕೆಲವೊಮ್ಮೆ ಒಬ್ಬ ಅಥವಾ ಇಬ್ಬರೂ ಬೇಟೆಗೆ ಹೋಗುವ ಪದ್ಧತಿ ಇದೆ.

ನರಿಮಂಗಲ : ಇದೊಂದು ಕೊಡವರಲ್ಲಿರುವ ವಿಶಿಷ್ಟ ಕ್ರೀಡೆಯಾಗಿರುತ್ತದೆ. ಇದನ್ನು ಹುಲಿ ಮದುವೆ ಎಂದು ಕರೆಯುವರು. ಇತರ ಜನವರ್ಗದವರಲ್ಲಿ ಇರುವುದಿಲ್ಲ. ಯಾರು ಹುಲಿ ಕೊಲ್ಲುತ್ತಾನೆಯೋ ಅವರ ಜೊತೆಗೆ ಹುಲಿಯನ್ನು ಗ್ರಾಮದಲ್ಲೆಲ್ಲಾ ಮೆರವಣಿಗೆ ಮಾಡುತ್ತಾರೆ. ಅನಂತರ ಹುಲಿಯೊಂದಿಗೆ ಆತನನ್ನು ಕೂರಿಸಿ ಮದುವೆ ಮಾಡುತ್ತಾರೆ. ಆದುದರಿಂದ ಆತ ಹುಲಿ ಕೊಂದ ವೀರನೆಂದು ಪರಿಗಣಿಸಿ ವಿಶೇಷ ರೀತಿಯ ಗೌರವವನ್ನು ಅವನಿಗೆ ಕೊಡಲಾಗುತ್ತದೆ.

ಅವರಲ್ಲಿರುವ ನಂಬಿಕೆ ಎಂದರೆ ಅಯ್ಯಪ್ಪ ದೇವರು ಕೆನ್ನಾಯಿಗಳೊಳಗೂಡಿ ಬೇಟೆಯಾಡುತ್ತಾನೆ ಎಂಬ ಪ್ರತೀತಿ ಇದೆ. ಶನಿವಾರ, ಬುಧವಾರ ಆ ಎರಡು ದಿವಸಗಳಲ್ಲಿ ಅವರು ಬೇಟೆಯಾಡುವುದಿಲ್ಲ.