ಜನಪದರ ಜೀವನದಿ ಕಾವೇರಿ ಇರಬಹದು. ಆದರೆ ಜಲವಿವಾದ ಪರಿಕಲ್ಪನೆ ಜನಪದರಲ್ಲಿತ್ತೇ ಎಂಬ ತಳಮಳ ನನ್ನಲ್ಲಿ ಕಾಡುತ್ತದೆ. ಇದ್ದರೂ ಅದರ ತುಣುಕುಗಳು ಯಾವಾಗಿನಿಂದ ಜೀವಂತಿಕೆ ಪಡೆದವು. ಪ್ರಧಾನವಾಗಿ ಯಾವ ತೆರವಾದ ವಿಷಯಕ್ಕೆ ಪೂರಕವಾಗಿ ಈ ಜಲವಿವಾದದ crisis  ಹುಟ್ಟಿಕೊಂಡಿತು? ಹೀಗೆ ನನ್ನೊಳಗೆ ನಾನೇ ಪ್ರಶ್ನೆ ಹಾಕಿಕೊಂಡು, ಕಾವೇರಿ ಹಾಗೂ ಜಲವಿವಾದದ ಚರ್ಚೆಯನ್ನು ಕರೆಯಬಹುದು.

ಇಲ್ಲಿ ನನ್ನ ಜಿಜ್ಞಾಸೆ ಇಷ್ಟೆ. ದಟ್ಟಾರಣ್ಯದಲ್ಲಿ ನಾಲ್ಕು ಕಾಲಿನ ಪ್ರಾಣಿ ಅಲೆದು, ಗೆಡ್ಡೆ ಗೆಣಸುಗಳನ್ನು ಬಗೆದು, ತಿಂದು, ಕುಪ್ಪಳಿಸಿ ದಿನನಿತ್ಯ ಕಳೆಯುತ್ತಿದ್ದ. ಅಂದು ನೀರು ಬಾಯಾರಿಕೆಗೆ ಅಷ್ಟೇ. ಅದೇ ಪ್ರಾಣಿ ಹಲವು ಶತಕಗಳನ್ನು ಪೂರೈಸಿದ. ಜ್ಞಾನೋದಯವಾಗಲಿಲ್ಲ. ಕ್ರಮೇಣ ನಾಲ್ಕು ಕಾಲಿನ ಪ್ರಾಣಿ ಎರಡೇ ಕಾಲಿನ ಮೇಲೆ ನಿಂತು ನಡೆದು, ನಡುಗಿ ಬೀಳುತ್ತಾ, ಏಳುತ್ತಾ ಎರಡೇ ಕೈಗಳ ಬಳಕೆಗೆ ರೂಢಿಸಿಕೊಂಡು ಮರಗಳ ಪೊಟರೆಯಲ್ಲಿ, ಗವಿ ಗುಹೆಗಳ ಅರಮನೆಯಲ್ಲಿ, ಪೊದೆಯ ಗೂಡಿನಲ್ಲಿ ಗುಟುಕರಿಸುತ್ತಾ, ಮುದುರಿಕೊಂಡಿ‌ದ್ದ. ನೀರಡಿಕೆಯಾದಾಗ ಬಾಯಾರಿಕೆ ನೀಗಿಸಿಕೊಂಡ ಅಷ್ಟೇ. ನೀರಿಗಾಗಿ ಬಡಿದಾಡಲಿಲ್ಲ, ಚಲ್ಲಿಕೊಂಡ ಅಷ್ಟೇ.

ಹೀಗಿರುವಾಗ ಆ ಬದುಕಿನಲ್ಲಿ ತೃಪ್ತಿಪಟ್ಟನೋ…. ಅದೂ ಅಲ್ಲ ಅಥವಾ ಸುಮ್ಮನಿರಬಹುದಾಗಿತ್ತು. ಆದರೆ ಬರೀ ಗೆಡ್ಡೆ ಗೆಣಸು ತಿನ್ನುವುದರಲ್ಲಿ ಕಾಲ ಕಳೆಯಲಿಲ್ಲ. ಮುಂದುವರೆದು ತನ್ನ ಬದುಕಿಗೆ ಬೇರೆ ದಾರಿಯ ಮಗ್ಗಲನ್ನು ಆರಿಸಿಕೊಂಡ. ಅದೇ ಬೇಟೆ, ಒಬ್ಬೊಬ್ಬರಾಗಿ ಬೇಟೆಯಾಡದೆ, ಗುಂಪುಗುಂಪುಗಳಲ್ಲಿ ಬೇಟೆ ಆಡತೊಡಗಿದ. ಅಲೆದ, ಸುಸ್ತಾದ, ಕೊಂದ, ತಿಂದ, ತೃಪ್ತವಾದ. ಗಿಡ, ಮರ, ಎಲೆಗಳ ತೊಗಟೆಗಳನ್ನು ಸುತ್ತಿಕೊಂಡು ತನ್ನನ್ನು ರಕ್ಷಿಸಿಕೊಳ್ಳುತ್ತಿದ್ದವನು, ಇದ್ದಕ್ಕಿದ್ದ ಹಾಗೆಯೇ ಸತ್ತ ಪ್ರಾಣಿಗಳ ಚರ್ಮ ಹದಮಾಡಿ ಶರೀರವನ್ನು ಬೆಚ್ಚನೆಯಾಗಿ ರಕ್ಷಿಸಿಕೊಂಡ. ಆಗಲೂ ನೀರಿಗಾಗಿ ಬಡಿದಾಡಬೇಕು ಅನ್ನಿಸಲಿಲ್ಲ. ಕ್ಷಣ, ದಿನ, ವಾರ, ತಿಂಗಳು, ವರುಷಗಳ ಮರೆಯಲ್ಲಿ ಮನುಷ್ಯ ಮನೋವಿಕಾಸತೆ ಹೊಂದಿದ. ಅನಾಗರಿನಾಗಿದ್ದವನು ನಾಗರಿಕತೆಯ ಮೆಟ್ಟಿಲುಗಳತ್ತ ಹೆಜ್ಜೆ ಹಾಕತೊಡಗಿದ. ಬದುಕಿಗಾಗಿ ಕೃಷಿಯನ್ನು ಅವಲಂಬಿಸಿದ. ಇದರಿಂದ ಉತ್ಪಾದನೆ ಕಂಡು ಆರಾಮವಾದ ಜೀವನಕ್ಕೆ ಒಗ್ಗಿ ಹೋದ. ಪ್ರಾಣಿಗಳನ್ನು ಬಳಸಿ ಅವುಗಳನ್ನು ಉಪಯೋಗಕ್ಕೆ ಒಗ್ಗಸಿಕೊಂಡ. ಕ್ರಮೇಣ ನವೀನ ಮಾದರಿಗಳ ಕಡೆಗೆ ವಾಲಿದ.

ಪ್ರಜ್ಞಾವಂತನಾಗುತ್ತ ದಾಪುಗಾಲು ಇರಿಸಿದ. ಉತ್ಪಾದನೆಯ ದೃಷ್ಟಿಯಿಂದ ಕೃಷಿ ಕಡೆಗೆ ಹೆಚ್ಚು ಮಹತ್ವ ಕೊಟ್ಟ. ಆದಾಯ ಕಂಡುಂಡ. ನೀರಿನ ಬಗ್ಗೆ ಕಾಳಜಿ ವಹಿಸಿದ. ಒಟ್ಟಿನಲ್ಲಿ ಕೃಷಿಯ ಹಿನ್ನೆಲೆಯನ್ನು ಅರಿಯಬೇಕಾದರೆ ಕರ್ನಾಟಕದ ಆಳರಸರ ಚರಿತ್ರೆಯ ಮೊರೆಹೋದರೆ ಕೆಲವು ಅಂಶಗಳನ್ನು ತಮ್ಮ ಮುಂದೆ ತೆರೆದಿಡಬಹುದು ಎಂದೆನಿಸುತ್ತದೆ.

ಕರ್ನಾಟಕದ ಚರಿತ್ರೆಯಲ್ಲಿ ಹೊಯ್ಸಳರ ಕಾಲ ಬಹಳ ಮುಖ್ಯವಾದುದು. ಸುಮಾರು ಮೂರು ಶತಮಾನಕ್ಕಿಂತಲೂ ಹೆಚ್ಚು ಕಾಲಾವಧಿ ರಾಜ್ಯವನ್ನಾಳಿದ್ದಾರೆ. ಅಷ್ಟರವರೆಗೂ ಕರ್ನಾಟಕದ ಸಂಸ್ಕೃತಿಯು ತುಂಬ ಪರಿಪಕ್ವವಾದ ಕಾಲವಾಗಿದೆ. ಒಟ್ಟಿನಲ್ಲಿ ಮಧ್ಯಕಾಲೀನ ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಚಿರಸ್ಮರಣೀಯ. ಹೊಯ್ಸಳರು ಆರಂಭದಲ್ಲಿ ರಾಜಕೀಯವಾಗಿ ಕಲ್ಯಾಣದ ಚಾಲುಕ್ಯರ ಅಧೀನರಾಗಿದ್ದರು. ಚಾಲುಕ್ಯರು ಅವನತಿ ಹೊಂದಿದ ಮೇಲೆ ತಮ್ಮ ಸ್ವಾತಂತ್ರ ಸ್ಥಾಪಿಸಿ ಸಾಮ್ರಾಜ್ಯ ವಿಸ್ತಿರಿಸಿರುತ್ತಾರೆ. ಇವರ ಆಳ್ವಿಕೆಯ ಕಾಲದಲ್ಲಿ ಕರ್ನಾಟಕದ ಸಂಸ್ಕೃತಿಯು ಅಕ್ಷಯ ಪಾತ್ರೆಯಾಗಿರುತ್ತದೆ. ಒಟ್ಟಿನಲ್ಲಿ ಕ್ರಿ.ಶ. ೧೩೦೦ ವರೆಗಿನ ಕಾಲಗಣನೆಯನ್ನು ತೆಗೆದುಕೊಂಡರೆ ಪ್ರಕೃತಿಯ ಸವಾಲುಗಳಿಗೆ ಪ್ರತಿಕ್ರಿಯೆ ಒಡ್ಡದಂತ ಕಾಲ ಎನ್ನಬಹುದಾಗಿದೆ. ಟಾಯ್ನಬಿ ಯವರು ತಮ್ಮ ಅಭಿಪ್ರಾಯವನ್ನು ಈ ಮೇಲಿನಂತೆ ವ್ಯಕ್ತಪಡಿಸುತ್ತಾರೆ.

೧೩೦೦ ರ ನಂತರ ನಾಗರೀಕತೆಯ ಅಲೆಗಳು ಕಂಡುಬರುತ್ತವೆ ಎನ್ನಬಹದು. ಕರ್ನಾಟಕ ಸಂಸ್ಕೃತಿಯ ವಸಂತ ಮತ್ತು ಗ್ರೀಷ್ಮಗಳು ಮರೆಯಾಗಿ ವಿನೂತನವಾದ ಕೈಗಾರಿಕೆ ಕ್ಷೇತ್ರದತ್ತ ನಾಗರೀಕತೆ ವಾಲುತ್ತದೆ. ಈ ನೆಪದಲ್ಲಿ ಬೃಹತ್ ಸಂಸ್ಕೃತಿಯನ್ನು ಅಡಕಗೊಳಿಸಿಕೊಂಡ ಚಕ್ರಾಧಿಪತ್ಯಗಳು ತಮ್ಮ ಎದುರಿಗೆ ಬಂದು ನಿಲ್ಲುತ್ತವೆ. ವಿಜಯನಗರವು ಪ್ರತಿನಿಧಿಸಿ, ಉಳಿಸಿ, ಬೆಳೆಸಿ, ರಕ್ಷಿಸುವ ಲಕ್ಷಣವನ್ನು ತೋರುತ್ತದೆ. ಬಹಳ ಮುಖ್ಯವಾಗಿ ಹೊಯ್ಸಳರು ರಚನಾತ್ಮಕತೆ Reformation ಮತ್ತು ಎಟಾಸ್ಟಿಸಿಟಿ ಅವಧಿಯನ್ನು ನಿರ್ಮಾಣ ಮಾಡುತ್ತದೆ. ಹೊಯ್ಸಳರು ಚಾಲುಕ್ಯರ ಅಥವಾ ಅವರಿಗಿಂತ ಹಿಂದೆ ಇದ್ದಂತಹ ರಾಜಮನೆತನಗಳ ಜೊತೆಗೆ ಜನರ ಸಾಂಸ್ಕೃತಿಕ ಲಕ್ಷಣಗಳನ್ನು ಉಳಿಸಿ ರೂಢಿಸಿಕೊಂಡು ಬರಲಿಲ್ಲ. ಇವರು ಭಿನ್ನ ನೆಲೆಯಲ್ಲಿ ಹೊಸ ದಾರಿಯನ್ನು ನಿರ್ಮಿಸಿಕೊಂಡರು. ಒಟ್ಟಾರೆಯಾಗಿ ಹೊಯ್ಸಳರ ಶ್ರೇಯಸ್ಸು, ಕೀರ್ತಿ, ಪ್ರತಿಭೆ, ಸಂಸ್ಕೃತಿಯ ಎಲ್ಲಾ ಮಗ್ಗಲುಗಳಲ್ಲು ಕಂಡುಬರುತ್ತದೆ.

ಇಲ್ಲಿ ಹೊಯ್ಸಳರ ಮೂಲ ತಡಕಾಡುವುದಾಗಲೀ, ಇಲ್ಲಾ ರಾಜರ ಆಡಳಿತ ವೈಖರಿಯನ್ನು ವೈಭವೀಕರಿಸುವುದಾಗಲೀ ಅಥವಾ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಕಲೆ, ಸಾಹಿತ್ಯ, ಸಂಸ್ಕೃತಿಯ ವಿವಿಧ ಪುಟಗಳನ್ನು ನಿಮ್ಮೆದುರಿಗೆ ಓದಿಸುವ ಪ್ರಯತ್ನಕ್ಕೆ ಹೋಗುವುದಿಲ್ಲ. ಆದರೆ ಕೃಷಿಯ ಕ್ರಿಯೆಯಿಂದ ನೀರಿನ ಬಗ್ಗೆ ಹೊರಹೊಮ್ಮಿದ ಪ್ರಕ್ರಿಯೆಗಳನ್ನು ಬಿಚ್ಚಿಡುವ ಒಂದು ಎಳೆಯಾಗಿ ಹೊಯ್ಸಳರ ಚರಿತ್ರೆಯ ಕೆಲವು ತುಂಡುಗಳನ್ನು ಇಟ್ಟಿದ್ದೇನೆ ಅಷ್ಟೇ.

ಹೊಯ್ಸಳರ ಮೂಲ ಮಂಜಿನಲ್ಲಿ ಮುಚ್ಚಿರಬಹದು. ಅವರ ಬಗ್ಗೆ ವೈವಿಧ್ಯಮಯವಾದ ವ್ಯಾಖ್ಯಾನಗಳನ್ನು ವಿದ್ವಾಂಸರುಗಳು ನೀಡಿರಬಹದು ಅಥವಾ ಹಿನ್ನೆಲೆ ಕುರಿತು ಅನೇಕ ಕಥೆಗಳು ಹೆಣೆದುಕೊಂಡಿರಲೂಬಹದು. ಬೇರೆ ಬೇರೆ ಐಡಿಯಾಲಜಿ ಇದ್ದರೂ, ಹನ್ನೊಂದನೇ ಶತಮಾನ ಹೊಯ್ಸಳರ ಸಂಘಟನೆಯ ಯುಗ. ಅಂದರೆ ವಿಷ್ಣುವರ್ಧನನ ಕಾಲವಾಗಿರುತ್ತದೆ. ಹೊಯ್ಸಳರ ಕಾಲದಲ್ಲಿ ನಗರ ಕೇಂದ್ರಗಳ ಹುಟ್ಟು ಮತ್ತು ಬೆಳವಣಿಗೆಗೆ ಪೂರಕವಾಗಿ ವಾಣಿಜ್ಯ, ಸಂಸ್ಕೃತಿ ಮತ್ತು ರಾಜ್ಯ ತಂತ್ರ ಅಗತ್ಯಗಳು ವರ್ತಿಸಿದವು. ಪ್ರಧಾನವಾಗಿ ಹೊಯ್ಸಳ ಆಳ್ವಿಕೆಯಲ್ಲಿದ್ದ ಭೂಪ್ರದೇಶಗಳಲ್ಲಿ ಕೃಷಿ ಉತ್ಪನ್ನಗಳು ಬೆಳೆಯುತ್ತಿದ್ದು, ಅವುಗಳಿಗೆ ಬಗೆ ಬಗೆಯ ತಾಪಮಾನ, ತೇವಾಂಶ ಮತ್ತು ಭೂಗುಣ ನೀರಿನ ಪೂರೈಕೆ ಅವಶ್ಯಕವಾಗಿದ್ದವು.

ಕರಾವಳಿ, ಮಲೆನಾಡು, ಪಶ್ಚಿಮಘಟ್ಟಗಳ ಪರ್ವತ ಪ್ರದೇಶ ಹಾಗೂ ಮೈದಾನ ಅಥವಾ ಬಯಲು ಪ್ರದೇಶಗಳ ಮೇಲೆ ಹೊಯ್ಸಳರು ಹಿಡಿತ ಸಾಧಿಸಿದ್ದರು. ಅಲ್ಲದೇ ಮಣ್ಣು, ವಾಯುಗುಣ ಹಾಗೂ ನೀರಿನ ಸೌಕರ್ಯ ಇನ್ನೂ ಅನೇಕ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಬೇರೆ ಬೇರೆ ಬೆಳೆಗಳನ್ನು ಉತ್ಪಾದಿಸುವ ಕೆಲಸಗಳನ್ನು ಜನಪದರು ಅಳವಡಿಸಿಕೊಂಡಿದ್ದರು ಎಂಬುದನ್ನು ಚರಿತ್ರೆ ಸಾರುತ್ತದೆ. ಉದಾ. ಆ ಕಾಲದಲ್ಲಿ ಎಲ್ಲಾ ಕೆರೆಗಳು, ಬಾವಿಗಳು ಹಾಗೂ ನಾಲೆಗಳ ಮೂಲಕ ನೀರಾವರಿ ಸೌಲಭ್ಯ ಚೆನ್ನಾಗಿತ್ತೊ  ಆ ಸ್ಥಳವನ್ನು ಸಹಜವಾಗಿ ಬಳಸಿಕೊಳ್ಳುತ್ತಿದ್ದರು.

ಮೇಲೆ ಚರ್ಚಿಸಿದ ವಿಷಯಗಳು ಬರೀ ಹೊಯ್ಸಳರ ಕಾಲದಿಂದಲೇ ಎಂಬುದನ್ನು ಪುಷ್ಟೀಕರಿಸಲಿಕ್ಕಲ್ಲ. ಕೃಷಿ ಮನುಷ್ಯರೊಡನೆ ಬಂದಿರುತ್ತದೆ. ಆದರೆ ಹನ್ನೊಂದನೇ ಶತಮಾನದಲ್ಲಿ ನೀರಿನ ಬಗ್ಗೆ ಕಾಳಜಿ ಇತ್ತೆಂಬುದಕ್ಕೆ ಸಾಕ್ಷಿ. ಒಟ್ಟಿನಲ್ಲಿ ಮನುಷ್ಯ ಕೃಷಿಗೆ ಎಂದು ಆರಂಭಿಸಿದನು ಅಂದಿನಿಂದಲೇ ಸೂಕ್ಷ್ಮವಾಗಿ ನೀರಿನ ಬಗ್ಗೆಯೂ ಕಾಳಜಿ ವಹಿಸಿಕೊಳ್ಳುತ್ತಾ ಬಂದಿದ್ದಾನೆ ಎಂಬ ಅಂಶವನ್ನು ಮರೆಯುವಂತಿಲ್ಲ.

ಕರ್ನಾಟಕದಲ್ಲಿ ಅನೇಕ ದಶಕಗಳ ಹಿಂದಿನಿಂದ ಕೆರೆ ಮತ್ತು ಅಣೆಕಟ್ಟುಗಳ ಮೂಲಕ ನೀರಾವರಿಯನ್ನು ಅಭಿವೃದ್ಧಿಪಡಿಸುತ್ತಾ ಬಂದಿರುವುದನ್ನು  ನಾವು ಓದಿಯೋ ಇಲ್ಲವೋ ಕೇಳಿಯೋ ತಿಳಿದುಕೊಂಡಿರುತ್ತೇವೆ. ದಿವಾನ್ ಪೂರ್ಣಯ್ಯ ರವರ ಕಾಲದಲ್ಲಿ ೧೮೦೦-೧೮೧೦ ರವರೆಗೆ ಕೆರೆಗಳನ್ನು ಹೂಳೆತ್ತಿಸಿ ನೀರನ್ನು ಬಳಸುವ ಕಾರ್ಯಕ್ಕೆ ಹೆಚ್ಚು ಗಮನವನ್ನು ಕೊಟ್ಟಿರುತ್ತಾರೆ. ಪ್ರಧಾನವಾಗಿ ಕೃಷ್ಣರಾಜಸಾಗರದ ನಿರ್ಮಾಣದೊಂದಿಗೆ ಕರ್ನಾಟಕದಲ್ಲಿ ನೀರಾವರಿ ಚಟುವಟಿಕೆಗಳು ೧೯೧೧ ರಲ್ಲಿ ಆರಂಭವಾದವು. ಅಂದರೆ ೧೯೧೧ ನವೆಂಬರ‍್ ನಲ್ಲಿ ಕೃಷ್ಣರಾಜಸಾಗರದ ಕಟ್ಟೆಗೆ ಶಿಲಾನ್ಯಾಸ ಮಾಡಲಾಯಿತು. ಅದೃಷ್ಟ ಕರ್ನಾಟಕದ ಕಡೆಗೆ ಇರಲಿಲ್ಲವೆಂದು ಕಾಣುತ್ತೆ. ಮದ್ರಾಸ್ ಸರ್ಕಾರ ಕೆಲವು ಆಕ್ಷೇಪಣೆಗಳನ್ನು ಎತ್ತಿತು. ಇದರಿಂದ ೧೯೨೪ ರವರೆಗೆ ಇದರ ನಿರ್ಮಾಣದಲ್ಲಿ ವಿಳಂಬ ಉಂಟಾಯಿತು. ಬಹಳ ಮುಖ್ಯವಾಗಿ ಈ ಯೋಜನೆಯ ಉದ್ದೇಶ ೪೪.೮ ಟಿಎಂಸಿ ನೀರನ್ನು ಸಂಗ್ರಹಿಸಿ ೫೦,೬೦೭ ಹೆಕ್ಟೇರು ಭೂಮಿಗೆ ನೀರನ್ನು ಒದಗಿಸುವುದು. ಅಲ್ಲದೇ ಶಿವನಸಮುದ್ರದಲ್ಲಿ ವಿದ್ಯುತ್ ಕೇಂದ್ರಕ್ಕೆ ನೀರು ಸರಬರಾಜು ಮಾಡುವುದು ಪ್ರಧಾನ ವಿಷಯವಾಗಿತ್ತು.

ಕರ್ನಾಟಕದಲ್ಲಿ ನೀರಾವರಿ ಅಭಿವೃದ್ಧಿ ಬಗೆಗೆ ಅನೇಕ ಏರುಪೇರುಗಳು ಉಂಟಾದವು. ಮೈಸೂರು ಸಂಸ್ಥಾನ ಮತ್ತು ಬ್ರಿಟಿಷ್ ಪ್ರೆಸಿಡೆನ್ಸಿ ಆಫ್ ಮದ್ರಾಸ್ ಆಡಳಿತಕ್ಕೊಳಪಟ್ಟಿದ್ದ ಮದರಾಸು ನಡುವೆ ೧೮೯೨ ಮತ್ತು ೧೯೨೪ ರ ಒಪ್ಪಂದಗಳು ನೇರ ಕಾರಣವೆಂದು ಹೇಳಬಹುದು. ೧೮೯೨ ರ ಒಪ್ಪಂದವು ಕಾವೇರಿ ಹಾಗೂ ಅದರ ಉಪನದಿಗಳನ್ನು ನೀರಾವರಿಗೆ ಯೋಜನೆಯನ್ನು ಎತ್ತಿಕೊಳ್ಳಬೇಕಾದಾಗ ಪೂರ್ವಭಾವಿಯಾಗಿ ಅಂದಿನ ಮದರಾಸು ಪ್ರಾಂತ್ಯದ ಅನುಮತಿಯನ್ನು ಪಡೆಯಬೇಕಿತ್ತು. ಇದು ೧೯೨೪ ರ ಒಪ್ಪಂದವು ೧೮೬೨ರ ಒಪ್ಪಂದವದ ನಿರ್ಮಾಣ ಕಾರ್ಯ ಆರಂಭವಾದಾಗ ಮಾಡಿಕೊಂಡ ಒಪ್ಪಂದವಾಯಿತು. ಈ ಒಪ್ಪಂದವು ಅನೇಕ ಷರತ್ತುಗಳನ್ನು ಮೈಸೂರಿನ ಮೇಲೆ ಹೇರಿತು.

ಮೈಸೂರಿನ ಮೇಲೆ ಒಪ್ಪಂದ ಮಾಡಿಕೊಳ್ಳಲಿಕ್ಕೆ ಕಾರಣವೇನೆಂದರೆ ಮದ್ರಾಸ್ ಪ್ರಾಂತ್ಯಗಳನ್ನು ಬ್ರಿಟಿಷರು ನೇರವಾಗಿ ಆಳುತ್ತಿದ್ದರು. ಈ ಪ್ರಾಂತ್ಯದೊಳಗೆ ತಮಿಳುನಾಡು, ಆಂಧ್ರ, ಮಲಬಾರ‍್, ದಕ್ಷಿಣ ಕನ್ನಡ ಎಲ್ಲವೂ ಸೇರಿಕೊಂಡಿದ್ದವು. ಆ ಸಂದರ್ಭದಲ್ಲಿ ಮೈಸೂರು ಸಂಸ್ಥಾನ ಒಟ್ಟಾರೆಯಾಗಿ ಎಂಟು ಜಿಲ್ಲೆಯ ಒಂದು ಪುಟ್ಟ ಸಂಸ್ಥಾನವಾಗಿತ್ತು. ಈ ಹೊತ್ತಿನಲ್ಲಿ ನಿಂತು ಯೋಚಿಸಿದರೆ ಆಶ್ವರ್ಯವೆನ್ನಿಸುತ್ತದೆ. (ಮಂಡ್ಯ ಜಿಲ್ಲೆ ಅನಂತರ ರೂಪುಗೊಂಡಿರುತ್ತದೆ.) ಬ್ರಿಟಿಷರು ಮೈಸೂರು ಸಂಸ್ಥಾನದಲ್ಲಿಯೂ ಕೂಡ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದರು. ಹೇಗೆಂದರೆ ದೇಶೀಯ ಸಂಸ್ಥಾನಗಳ ಮೇಲೂ ಬ್ರಿಟಿಷರ ಪ್ರಭಾವವಿತ್ತು. ಈ ಸಂದರ್ಭದಲ್ಲಿ ಮಾಡಿಕೊಂಡ ಒಪ್ಪಂದ. ವಿಶ್ವೇಶ್ವರಯ್ಯನವರೆ ೧೯೨೪ ರ ಒಪ್ಪಂದದಿಂದ ಮೈಸೂರು ಸಂಸ್ಥಾನಕ್ಕೆ ಅನ್ಯಾಯವಾಯಿತೆಂದು ಹೇಳಿದ್ದಾರೆ.

೧೯೭೪ ರಲ್ಲಿ ಆ ಒಪ್ಪಂದದ ಅವಧಿ ಅಂದರೆ ೧೯೨೪ ರ ಅವಧಿ ಮುಗಿದಿತ್ತು. ಆದರ ಪರಿಸ್ಥಿತಿ ಬದಲಾಗಿತ್ತು. ಇತ್ತ ಕರ್ನಾಟಕದ ೨೨ ವರ್ಷದ ನಂತರ ಒಪ್ಪಂದವನ್ನು ನವೀಕರಿಸಲು ಸಿದ್ಧವಿರಲಿಲ್ಲ. ಜೊತೆಗೆ ನೀರಿನ ಹಂಚಿಕೆಯಲ್ಲಾದ ಅನ್ಯಾಯ ಮನನ ಮಾಡಿಕೊಂಡಿತ್ತು. ಅಲ್ಲದೆ ಮಾತುಕತೆಯ ಮುಖೇನ ಇತ್ಯರ್ಥ ಮಾಡಿಕೊಳ್ಳುವುದಕ್ಕೆ ಹಸ್ತಲಾಘವ ನೀಡಿತು. ಆದರೆ ಪ್ರತಿಯಾಗಿ ಮದ್ರಾಸ್ ಹಸ್ತಲಾಘವ ನೀಡಲಿಲ್ಲ. ಇದರಿಂದ ನ್ಯಾಯಮಂಡಲಿಗೆ ವಿವಾದವನ್ನು ಒಪ್ಪಿಸುವಂತೆ ಕೇಂದ್ರ ಸರಕಾರವನ್ನು ಕೇಳಿಕೊಂಡಿತು. ಇದರ ಪರಿಣಾಮವಾಗಿ ವಿಶ್ವನಾಥ ಪ್ರತಾಪಸಿಂಗ್ ಸರಕಾರು ಆರು ವರುಷಗಳ ಹಿಂದೆ ನ್ಯಾಯಮಂಡಲಿ ರಚಿಸಿತು. ಇದಕ್ಕೆ ಕರ್ನಾಟಕ ಸಮ್ಮತಿಸಲಿಲ್ಲ. ಕಾರಣವೇನೆಂದರೆ ರಾಷ್ಟ್ರೀಯ ಜಲನೀತಿಯಲ್ಲಿದ್ದ ಮಾರ್ಗಸೂಚಿ ಇಲ್ಲದ ಕಾನೂನು ಬದ್ಧವಾಗಿಲ್ಲ ಎಂಬುದು. ಆದುದರಿಂದ ರಾಷ್ಟ್ರೀಯ ನೀತಿ ಮತ್ತು ಮಾರ್ಗಸೂಚಿಗಳು ರೂಪುಗೊಳ್ಳುವವರೆಗೆ ನ್ಯಾಯಮಂಡಲಿಯ ಕೆಲಸ ಸ್ಥಗಿತಗೊಳ್ಳಬೇಕು. ಇದು ಕರ್ನಾಟಕದ ಜನಪದರ ಆಶಯವೂ ಹೌದು ಎಂಬ ನಿಲುವಿಗೆ ಬಂದಿತು.

ತಮಿಳುನಾಡಿನಲ್ಲಿ (ಕೃಷಿ) ಬೆಳೆ ಪದ್ಧತಿಯಿಂದ ಮತ್ತಷ್ಟು ಸಮಸ್ಯೆಗಳು ಹುಟ್ಟಿಕೊಂಡಿವೆ ಎನ್ನಬಹುದು. ಕಾವೇರಿ ನೀರಿನ ಹರಿಯುವಿಕೆಯಿಂದ ಬಯಲಿನಲ್ಲಿ ನೆಲೆಯೂರಿದ್ದ ರೈತಾಪಿ ಜನರು ಒಂದೇ ಬೆಳೆಗೆ ತೃಪ್ತರಾಗಲಿಲ್ಲ. ಕೆಲವು ಸಂದರ್ಭಗಳಲ್ಲಿ ೨ ಅಥವಾ ೩ ಬೆಳೆಯಲ್ಲಿ ತೊಡಗಿದರು. ನಮಗೆ ನೀರು ಎಷ್ಟು ಹರಿದು ಬರುತ್ತಿದೆ ಎಂಬುದರ ಅರಿವೆ ಇಲ್ಲದಂತಾಯಿತು. ಅವರು ತಮ್ಮ ಸಾಗುವಳಿಯ ವಿಸ್ತೀರ್ಣವನ್ನು ಹೆಚ್ಚಿಸಿಕೊಳ್ಳತೊಡಗಿದರು. ಆದ್ದರಿಂದ ನೀರು ಬೇಕೇ ಬೇಕು ಎಂಬ ಸೊಲ್ಲುಗಳು ತಮಿಳುನಾಡಿನಿಂದ ಹೊರಟಿತು. ಕರ್ನಾಟಕದಲ್ಲಿ ಕಾವೇರಿ ಬಯಲಿನಲ್ಲಿ ನೀರಾವರಿ ವಿಸ್ತರಣೆ ಕಡಿಮೆಯಾಗುತ್ತಾ ಬಂತು. ಇದಕ್ಕೆ ಸ್ಥಳೀಯವಾದ ಹೇಮಾವತಿಯಂಥ ಯೋಜನೆಗಳ ಮೊರೆಹೋಗಬೇಕಾಯಿತು. ಒಟ್ಟಾರೆಯಾಗಿ ಕರ್ನಾಟಕದಲ್ಲಿ ಕಾವೇರಿ ಬಯಲಿನಲ್ಲಿ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡರೆ ತಮಿಳುನಾಡಿನಿಂದ ಅಪಸ್ವರ ಕೇಳಿಬರುತ್ತದೆ. ಜೊತೆಗೆ ಯೋಜನೆಗಳನ್ನು ತಡೆ ಹಿಡಿಯಲಾಗುತ್ತದೆ. ನಮ್ಮ ಜನಪದರ ಅವರ ನೀರಿನ ಬಳಸುವಿಕೆಗೂ ಅಪ್ಪಣೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಇಂದು ಒದಗಿರುವುದು ವಿಪರ್ಯಾಸವಲ್ಲವೆ.

ಮುಂದುವರೆದು ಚರ್ಚಿಸುವುದಾದರೆ ೧೯೭೨ ರ ನೀರಾವರಿ ಆಯೋಗ, ೧೯೭೬ ರ ಕೃಷಿ ಆಯೋಗ ಕೆಲವು ವಿಷಯಗಳನ್ನು ಸರಕಾರದ ಮುಂದೆ ತಂದವು. ಆಗಸ್ಟ್ ಮತ್ತು ಫೆಬ್ರವರಿಯಲ್ಲಿ ತಮಿಳುನಾಡಿನಲ್ಲಿ ಸಾಕಷ್ಟು ಮಳೆ ಬೀಳುವುದರಿಂದ ಆ ನೀರನ್ನು ಕೃಷಿಗೆ ಉಪಯೋಗಿಸಿಕೊಳ್ಳಬಹುದು ಎಂದು ಸಲಹೆ ಕೊಡಲಾಯಿತು. ಜೊತೆಗೆ ಎರಡು ಅಥವಾ ಮೂರು ಬೆಳೆ ಬೆಳೆಯುವುದರಿಂದ ನೀರು ಪೋಲಾಗುವುದನ್ನು ತಪ್ಪಿಸಬಹುದೆಂದು ಆಯೋಗವು ಅಭಿಪ್ರಾಯಪಟ್ಟಿತು. ಆದರೆ ೧೯೭೨, ೧೯೭೬ ಆಯೋಗಗಳ ಸಲಹೆಗಳನ್ನು ತಳ್ಳಿ ಹಾಕುವುದರಲ್ಲಿ ತಮಿಳುನಾಡು ಮುಂದಾಯಿತು. ೧೯೮೦ ರಲ್ಲಿ ಕಾವೇರಿ ನೀರಿಗೆ ಪೂರಕವಾಗಿ ಅಂತರರಾಜ್ಯ ಸಮ್ಮೇಳನವನ್ನು ಸರಕಾರ ಹಮ್ಮಿಕೊಂಡ ಕೆಲವು ಸೂಚನೆಗಳನ್ನು ಕೂಡ ಮಂಡಿಸಿತು. ಅವುಗಳೆಂದರೆ ಕಾವೇರಿ ನೀರನ್ನು ಬಯಲಿನ ಕೊಡುಗೆಯ ಆಧಾರದ ಮೇಲೆ ನಾಲ್ಕು ರಾಜ್ಯಗಳಿಗೆ ಹಂಚುವ ವ್ಯವಸ್ಥೆ ಮಾಡಲಾಯಿತು. ಅವುಗಳೆಂದರೆ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ. ಆದರೆ ಈ ತೆರನಾದ ಸೂಚನೆಗಳನ್ನು ಕೇಂದ್ರ ಸರಕಾರ ಮತ್ತು ತಮಿಳುನಾಡು ಗಂಭೀರವಾಗಿ ಪರಿಗಣಿಸಲಿಲ್ಲ. ತಮಿಳುನಾಡು ೧೯೨೪ ರ ಒಪ್ಪಂದದಂತೆಯೇ ಹಂಚಿಕೆಯಾಗಬೇಕೆಂದು ತನ್ನ ಅಹವಾಲನ್ನು ಮುಂದಿಟ್ಟಿತು. ೧೯೯೦ ರಲ್ಲಿ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಒಂದು ಆದೇಶವನ್ನು ಹೊರಡಿಸಿ, ಜಲವಿವಾದಕ್ಕೆ ಒಂದು ಪ್ರತ್ಯೇಕವಾದ ನ್ಯಾಯಮಂಡಲಿ ರಚಿಸುವಂತೆ ಕೋರಿತು.

ಅನಂತರದಲ್ಲಿ ಜೋವನದೊಂದಿಗೆ ಬೆಸೆದುಕೊಂಡಿದ್ದ ಜನಪದರ ಮನಸ್ಸುಗಳು ಮೌನ ಮುರಿಯತೊಡಗಿದವು. ಆರಂಭದಲ್ಲಿ ರಾಜ್ಯಗಳ ಉದ್ದಕ್ಕೂ ಹರಿಯುತ್ತಿದ್ದಂತಹ ಪರಸ್ಪರ ಪ್ರೀತಿ ಪ್ರೇಮಗಳು ರಕ್ತದ ಕಡಲಾಗಿ ಹರಿಯತೊಡಗಿದವು. ನಿರಂತರವಾಗಿ ಸುಖದ ಸಂದೇಶವನ್ನು ಹರಿಸುವ ಬದಲು, ನೆಲವನ್ನು ನಿಂದಿಸುವ, ಬಾಯನ್ನು ಬಯಿಸುವ ಮನವನ್ನು ಮಚ್ಚಿನಿಂದ ಕೊಯ್ಯುವ ಸಮಸ್ಯೆಗಳಿಗೆ ಪ್ರೇರಣೆಯಾಗಿ ನಿಂತಿತು. ಈ ಎಲ್ಲಾ ನೋವಿನ ಘರ್ಷಣೆಗಳ ನಡುವೆಯೂ ೧೯೯೧ ರ ಜೂನ್ ನಲ್ಲಿ ನ್ಯಾಯಮಂಡಲಿ ಒಂದು ತೀರ್ಮಾನಕ್ಕೆ ಬಂತು. ಪ್ರತಿವರ್ಷ ಮೆಟ್ಟೂರು ಆಣೆಕಟ್ಟೆಯಿಂದ ಸುಮಾರು ೨೦೫ ಟಿ.ಎಂ.ಸಿ. ನೀರನ್ನು ಬಿಡುವಂತೆ ಕರ್ನಾಟಕ ಸರಕಾರಕ್ಕೆ ನ್ಯಾಯಮಂಡಲಿ ಆದೇಶ ಹೊರಡಿಸಿತು.

೧೯೯೧ ರಲ್ಲಿನ ಸರಕಾರ ಕರ್ನಾಟಕದ ನೀರಾವರಿ ಹಿತ ರಕ್ಷಿಸಲು ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತು. ಸುಗ್ರೀವಾಜ್ಞೆ ಸಂವಿಧಾನ ಬಾಹಿರವೆಂದು ನ್ಯಾಯಾಲಯವು ತೀರ್ಪನ್ನು ನೀಡಿರುತ್ತದೆ. ಈ ಹೊತ್ತಿಗೆ ಕರ್ನಾಟಕದಾದ್ಯಂತ ಎಲ್ಲೆಂದರಲ್ಲಿ ಪ್ರತಿಭಟನೆಗಳು, ಚಳುವಳಿಗಳು, ರಸ್ತೆ ತಡೆಗಳು, ಉಪವಾಸ ಚಳುವಳಿ, ಅರೆಬೆತ್ತಲೆ ಚಳುವಳಿಗಳು ಕಾಣಿಸಿಕೊಂಡು ಹಿಂಸಾಚಾರವೂ ಕಂಡುಬರುವುದರೊಂದಿಗೆ ಆಸ್ತಿ ಹಾನಿಯಾಯಿತು. ಅಮಾಯಕರು ಜೀವವನ್ನು ಕಳೆದುಕೊಂಡರು.

ನ್ಯಾಯಮಂಡಲಿಯ ಆಜ್ಞೆಯ ಪರಿಣಾಮವೆಂದರೆ ೧೯೭೪ ರ ನಂತರ ಇರದಿದ್ದ ಒಂದು ಕಡ್ಡಾಯವನ್ನು ಅನುಷ್ಠಾನಕ್ಕೆ ತಂದದ್ದು. ಅಲ್ಲದೆ ೧೯೮೦ ರ ದಶಕದಲ್ಲಿ ತಮಿಳುನಾಡಿಗೆ ಇಂತಿಷ್ಟೇ ನೀರನ್ನು ಬಿಡಬೇಕೆಂಬ ಕಡ್ಡಾಯವಿರಲಿಲ್ಲ. ಇಂತಹ ಸೂಕ್ಷ್ಮ ವಿಷಯಗಳನ್ನು ನಮ್ಮ ಪಕ್ಕದ ರಾಜ್ಯದವರು ಪರಿಗಣಿಸಲಾರದಾದರು. ಈ ಎಲ್ಲಾ ಅಂಶಗಳಿಗಿಂತ ಮಿಗಿಲಾಗಿ ೧೯೮೦ ರ ದಶಕದ ಹೊತ್ತಿಗೆ ಯಾರು ಕಂಡರಿಯದ ವಿಸ್ಮಯಗಳು ತಮ್ಮನ್ನು ಭಯ ಬೆಚ್ಚಿಸಿದವು.

ಪ್ರಕೃತಿಯೇ ಪ್ರಕೋಪಕ್ಕೆ ಒಗ್ಗಿಕೊಂಡಿತು. ಜನಪದರು, ದನಕರುಗಳು ಅಲ್ಲದೆ ನಾಗರಿಕತೆಯು ಒಂದು ರೀತಿಯಲ್ಲಿ ಸವಾಲಾಗಿ ನಿಂತವು. ಅತ್ತ ತಮಿಳಿನ ರೈತಾಪಿ ವರ್ಗವು ಅವಶ್ಯಕತೆಗಿಂತ ಹೆಚ್ಚಿನದಾಗಿ ವ್ಯವಸಾಯಕ್ಕೆ ತೊಡಗಿದರು. ಒಂದಲ್ಲ ಮೂರು ಬೆಳೆಗಳಿಗಾಗಿ ಹಾತೊರೆದರು. ಸ್ಥಳೀಯ ಜನಪದರಿಗೆ ಕಾವೇರಿ ನೀರಿನ ಅವಶ್ಯಕತೆ ಎಷ್ಟಿರುತ್ತದೆ ಎಂಬುದರತ್ತ ಗಮನಹರಿಸಲೇ ಇಲ್ಲ.  ಸರಕಾರವೂ ಕೂಡ ಬಿಸಿಯಾದಾ ಮಾತ್ರ ಎಚ್ಚರವಾಗುತ್ತಾ ಬಂದವು. ಇಂಥಹ ಪರಿಸ್ಥಿತಿ ಇದ್ದಾಗ ಮೆಟ್ಟೂರಿನ ಅಣೆಕಟ್ಟಿನಲ್ಲಿ ನೀರು ಇಲ್ಲದಾಯಿತು. ನೀರು ಹರಿಬಿಡುವ ಪರಿ ಹೇಗೆ? ಅಲ್ಲದೆ ತಮಿಳು ರೈತಾಪಿ ವರ್ಗಕ್ಕೆ ತಮಿಳುನಾಡಿನ ಆಯ್ಕೆಗೊಂಡ ಸದಸ್ಯರೂ ಕೂಡ ಎಡರುತೊಡರಿನ ಬಗ್ಗೆ ಸರಿಯಾಗಿ ವಿವೇಚಿಸಿ ತಿಳಿ ಹೇಳಿದರೆ ಒಳ್ಳೆಯದಿತ್ತು. ಇಂತಹ ಸಮಸ್ಯೆಯನ್ನು ತುಂಬಾ ಗಂಭೀರವಾಗಿ ಯೋಚಿಸಿ, ಚರ್ಚಿಸಿ, ಇತ್ಯರ್ಥಕ್ಕೆ ಬರುವುದು ಒಳ್ಳೆಯದಾಗಿತ್ತು. ಆದರೆ ಹಾಗಾಗಲೇ ಇಲ್ಲ.

ಎರಡು ರಾಜ್ಯಗಳ ಜನರಿಗೆ ಜಲನೀತಿಯ ವಿವೇಚನೆಯನ್ನು ತಿಳಿಸುವ ಪರಿ ಹೇಗೆ ಎಂಬ ಜಿಜ್ಞಾಸೆ ಮೂಡಲಿಲ್ಲ. ಒಟ್ಟಾರೆಯಾಗಿ ಒಂದು ಕಡೆಯಿಂದ ನೀರು ಬಿಡಬಾರದು ಎಂಬ ಒತ್ತಡ ಬಂದರೆ ಇನ್ನೊಂದು ಮಗ್ಗಲಲ್ಲಿ ನೀರು ಬೇಕು ಎಂಬ ಹಪಹಪಿಸುವಿಕೆ ಸೃಷ್ಟಿಗೊಂಡಿತು. ವಿಶೇಷ ನ್ಯಾಯಮಂಡಲಿಯಿಂದ ಅತ್ತ ತಮಿಳುನಾಡಿನ ಕೃಷಿ ಜನತೆ ತೃಪ್ತರಾಗಲಿಲ್ಲ. ಬದಲಾಗಿ ನ್ಯಾಯಮಂಡಲಿಯನ್ನು ಮೊರೆ ಹೋದರೆ ವಿವಾದ ಬೇಗ ಬಗೆಹರಿಯುವುದಿಲ್ಲ ಎಂಬ ತಳಮಳ ಶುರುವಾಯಿತು. ಆದ್ದರಿಂದ ಈ ವಿಷಯ ಎರಡು ರಾಜಕಾರಣಿಗಳ ಮಧ್ಯ ನುಸುಳಿತು. ಅಂದು ಪ್ರಧಾನಿಯಾಗಿದ್ದ ನರಸಿಂಹರಾಯರು ಮುಖ್ಯಮಂತ್ರಿಗಳಿಗೆ ಕನ್ ವಿನ್ಸ್ ಮಾಡಿ ಆರು ಟಿ.ಎಂ.ಸಿ. ನಿರನ್ನು ಬಿಡುವಂತೆ ಮುಖ್ಯಮಂತ್ರಿಗಳಿಗೆ ತಾಕೀತು ಮಾಡಿದರು. ಅಲ್ಲಿ ನರಸಿಂಹರಾಯರ ಆಜ್ಞೆಯೂ ಅಥವಾ ಸುಪ್ರೀಂಕೋರ್ಟ್‌ನ ಆಜ್ಞೆಯೂ ಆಗಿರಲಿಲ್ಲ. ಒಟ್ಟಾರೆಯಾಗಿ ಒಂದು ತೆರನಾದ ಸಲಹೆಗಳಾಗಿದ್ದವಷ್ಟೇ. ಈ ಹೊತ್ತಿಗೆ ತಮಿಳುನಾಡು ಸರಕಾರ ನ್ಯಾಯಮಂಡಲವನ್ನು ಸ್ಥಾಪಿಸಿಕೊಳ್ಳುವುದರಲ್ಲಿ ತನ್ನ ಆಶಯವನ್ನು ಪೂರೈಸಿಕೊಂಡಿತ್ತು. ಸ್ಥಾಪಿಸಿ ಆರು ವರುಷ ಕಳೆದರೂ ತಂಜಾವೂರಿನ ರೈತರಿಗಂತ ಸ್ಥಿರತೆ ಉಂಟಾಗಲಿಲ್ಲ. ತಾತ್ಕಾಲಿಕ ತೀರ್ಮಾನಗಳಿಂದ ಪ್ರಧಾನಿಯವರು ನೀರು ಅಥವಾ ಸಲಹೆಯನ್ನೇ ಜಯವೆಂದು ತಮಿಳುನಾಡು ಸರಕಾರ ತಿಳಿದುಕೊಂಡಿತು.

ಈ ಮಧ್ಯೆ ರಾಜತಾಂತ್ರಿಕವಾದ ಕೆಲವು ಸಮಸ್ಯೆಗಳು ಏರ್ಪಟ್ಟವು. ೧೯೯೧ ರಲ್ಲಿ ಲೋಕಸಭೆಯ ಚುನಾವಣೆಯೊಂದಿಗೆ ತಮಿಳುನಾಡಿನ ವಿಧಾನಸಭೆ ಚುನಾವಣೆಯೂ ನಡೆಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಎ.ಐ.ಎ.ಡಿ.ಎಂ.ಕೆ. ಪಕ್ಷಗಳ ಹೊಂದಾಣಿಕೆಯಿಂದ ಎರಡು ಪಕ್ಷಗಳೂ ಲಾಭವನ್ನು ಪಡೆದಿದ್ದವು. ಸತತವಾಗಿ ಮೂವತ್ತು ವರ್ಷಗಳಿಂದಲೂ ತಮಿಳುನಾಡು ಸರಕಾರ ಒಂದಲ್ಲ ಒಂದು ರೀತಿಯಿಂದ ದ್ರಾವಿಡ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರವನ್ನು, ಸ್ಥಾನವನ್ನು ಉಳಿಸಿಕೊಂಡು ಬಂದಿರುವುದನ್ನು ರಾಜಕೀಯದಲ್ಲಿ ಗುರುತಿಸಬಹುದಾಗಿದೆ.

ಈ ಎಲ್ಲಾ ಗೊಂದಲಗಳ ನಡುವೆ ಕರ್ನಾಟಕ ಸರಕಾರ ೧೧ ಟಿ.ಎಂ.ಸಿ. ನೀರನ್ನು ತಮಿಳುನಾಡಿಗೆ ಬಿಡಲು ನಿರಾಕರಿಸಿತು. ಇದ್ದಕ್ಕಿದ್ದಂತೆ ತಮಿಳುನಾಡಿನ ರಾಜಕೀಯದಲ್ಲಿ ಏಳುಬೀಳುಗಳು ಉಂಟಾಗಿ, ಸರಕಾರದ ಪ್ರತಿಷ್ಠೆ ಕುಗ್ಗಿತು. ಅನಂತರ ಸುಮಾರು ಮುಕ್ಕಾಲು ಶತಮಾನ ಕಾವೇರಿ ಜಲಹಂಚಿಕೆ ಪ್ರಶ್ನೆಯೊಂದಿಗೆ ರಾಜಕೀಯ ರಾಡಿ ಹತ್ತಿಕೊಂಡಿತು. ಇಂದು ರಾಜಕೀಯದಿಂದ ನೀರನ್ನು ಬಿಟ್ಟರೂ ಬಿಡದಿದ್ದರೂ, ಒಂದಲ್ಲ ಒಂದರಂತೆ ರೋಸಿ ಹೋಗುತ್ತಿರುವುದನ್ನು ತಾವು ಅಲ್ಲಿ ಇಲ್ಲಿ ಕೇಳಿ, ಆಲಿಸಿ, ತಿಳಿದುಕೊಂಡು ಸುಮ್ಮನಿರುವ ಸ್ಥಿತಿ ಜನರಿಗೆ ಉಂಟಾಗಿದೆ. ಹೀಗೆ ಬೆಳೆಸುತ್ತಾ ಹೋದರೆ ವಿಷಯವನ್ನು ಇನ್ನೂ ಬೆಳೆಸುತ್ತಿದ್ದರೆ, ಒಂದೋ ಕಾವೇರಿ ಬಗ್ಗೆ ಇರುವ ವ್ಯಾಮೋಹ ಎಂದು ಕೆಲವರು ತಿಳಿಯಬಹುದು. ಇಲ್ಲ ಕರ್ನಾಟಕದವನು ಎಂದು ಸ್ಥಳೀಯ ವಾದವನ್ನು ಮಂಡಿಸಬಹುದು. ಆದರೆ ಕರ್ನಾಟಕ ಹಾಗೂ ತಮಿಳುನಾಡಿನ ಜನಪದರ ಆಶಯವನ್ನಿಟ್ಟುಕೊಂಡು ಚರ್ಚೆ ಮಾಡಲಾಗಿದೆ ಅಷ್ಟೇ. ಪ್ರಕೃತಿಯನ್ನು ಮನುಷ್ಯ ಬಿಟ್ಟು ಬದುಕಲಾರ. ಅದರೊಂದಿಗೆ ಮುಂದುವರೆಯಬೇಕಾಗುತ್ತದೆ. ಪ್ರಕೃತಿಯೊಳಗೆ ನೀರು ಒಂದಾಗಿರುವುದರಿಂದ ನೀರು ಕಿಡಿಕಾರುತ್ತದೆ. ಇದೊಂದು ರೀತಿಯ ದುಸ್ತರವಾದುದು ಹೌದು. ಇಲ್ಲಿ ಕಾವೇರಿಯಿಂದ ರಾಡು ಹತ್ತುವುದಿಲ್ಲ. ಆ ನೀರಿನಿಂದ ತಮ್ಮ ತಮ್ಮ ದೋಸೆಗಳಲ್ಲಿರುವ ತೂತುಗಳನ್ನು ಮುಚ್ಚಿಕೊಳ್ಳಲು ಕೊಳಕರು ಪುನಃ ಪುನಃ ಸಮಸ್ಯೆಯನ್ನು ಎತ್ತುತ್ತಿರುವವರನ್ನು ಹೇಳಬೇಕಾಗಿಲ್ಲ. ಕಾವೇರಿಯ ಜಲವಿವಾದದ ಸಮಸ್ಯೆ ಇಂದಿನದೊ, ಇವತ್ತಿನದೊ, ನೆನ್ನೆ ಮೊನ್ನೆಯದೊ ಅಲ್ಲ. ಅದು ಒಂದು ಶತಮಾನದಷ್ಟು ಹಳೆಯ ವಿಚಾರವಾಗಿರುವುದು.

ನಮ್ಮ ಮುಂದೆ ಅನೇಕ ಪ್ರಶ್ನೆಗಳು ಏಳಬಹದು. ಸಮಸ್ಯೆಗಳೂ ಸುಳಿಯಬಹುದು. ಪರಿಹಾರಗಳೂ ಸಿಗಬಹುದು. ಆದರೆ ಪರಿಸ್ಥಿತಿ ಬೇರೆ ಇರಲೂಬಹದು. ಆದರೆ ಅನೇಕರಿಗೆ ಅಂತಹ ಪರಿಹಾರಗಳು ಬೇಕಾಗಿರುವುದಿಲ್ಲ. ಒಟ್ಟಿನಲ್ಲಿ ವಿವಾದವನ್ನು ಜೀವಂತವಾಗಿ ಉಳಿಸಲು ಇಚ್ಛೆಪಡುತ್ತಾರೆ. ಅದರಂತೆ ತಮ್ಮ ಬದುಕನ್ನು, ಆಲೋಚನೆಗಳನ್ನು ತೂಗಿಸುವಲ್ಲಿ ಸಫಲರಾಗುತ್ತಾರಷ್ಟೆ.

ಇಲ್ಲಿ ನನ್ನ ಅಭಿಪ್ರಾಯವಿಷ್ಟೇ. ವಿವಾದವೇ ಪ್ರಧಾನವಲ್ಲ. ಯಾರೇ ಇತ್ಯರ್ಥಗೊಳಿಸಿದರೂ, ಅದಕ್ಕೊಂದು ಸ್ಪಷ್ಟ ಆಧಾರವಿರಬೇಕು. ಅದು ಜನಪದರವಾಗಿರಬೇಕು. ಹಾಗಿದ್ದಾಗ ಎರಡು ರಾಜ್ಯಗಳ ಜನಪದರ ದೈವವಾಗಿ ಕಾವೇರಿ ಕಂಗೊಳಿಸುವಳು. ಪರಸ್ಪರ ಪ್ರೀತಿ, ವಿಶ್ವಾಸದ, ನೆಮ್ಮದಿ ಸಂದೇಶವನ್ನು ನಿರಂತರವಾಗಿ ಸಾರಿ ಹೇಳುವ ಸಂಕೇತವಾಗಿ ಹರಿದು ಕಾವೇರಿಯು ಜೀವನದಿಯಾಗಿ ಮಾರ್ಪಾಟಾಗುವಳು.