ಜನನ : ೧೭-೫-೧೯೪೬ ರಂದು ಮೈಸೂರಿನಲ್ಲಿ

ಮನೆತನ : ಹೆಸರಾಂತ ಸಂಗೀತ ವಿದ್ವಾಂಸರ ಮನೆತನ. ಮುತ್ತಾತ ವೀಣೆ ಶೇಷಣ್ಣನವರು. ತಂದೆ ಪ್ರಸಿದ್ಧ ವೈಣಿಕರೂ ಗಾಯಕರೂ ಆದ ಸ್ವರಮೂರ್ತಿ ವಿ. ಎನ್. ರಾವ್. ತಮ್ಮ ಮೈ. ವಿ. ಸುಬ್ರಹ್ಮಣ್ಯ ಹೆಸರಾಂತ ಕಲಾವಿಮರ್ಶಕ.

ಗುರುಪರಂಪರೆ : ಕರ್ನಾಟಕ ಸಂಗೀತದಲ್ಲಿ ತಂದೆಯಿಂದಲೇ ಶಿಕ್ಷಣ. ಪಂ. ಶೇಷಾದ್ರಿಗವಾಯಿ ಅವರಲ್ಲಿ ಹಿಂದೂಸ್ಥಾನಿ  ಸಂಗೀತದಲ್ಲಿ ಶಿಕ್ಷಣ. ನವದೆಹಲಿಯ ಎನ್.ಸಿ. ಆರ್.ಟಿ.ಯಲ್ಲಿ ಕೊರಲ್ ಮ್ಯೂಸಿಕ್ ಹಾಗೂ ಸಮೂಹ ಗಾಯನದಲ್ಲಿ ತರಬೇತಿ. ಗಾಂಧರ್ವ ವಿದ್ಯಾಲಯದ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆ.

ಸಾಧನೆ : ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಮನಃಶಾಸ್ತ್ರದಲ್ಲಿ ಬಿ.ಎ. ಪದವಿ ಗಳಿಸಿರುವ ಕಾವೇರಿ ಶ್ರೀಧರ್ ಕೇಂದ್ರೀಯ ವಿದ್ಯಾಲಯದಲ್ಲಿ ಸಂಗೀತ ಶಿಕ್ಷಕಿಯಾಗಿ ಸೇವೆಯಲ್ಲಿದ್ದರು. ರಾಷ್ಟ್ರಾದ್ಯಂತ ಕೋರಲ್ ಮ್ಯೂಸಿಕ್‌ನಲ್ಲಿ ಶಿಕ್ಷಕರನ್ನು ತರಬೇತುಗೊಳಿಸಲು ಕೇಂದ್ರ ಸರಕಾರದ ವತಿಯಿಂದ ನಿಯೋಜಿಸಲ್ಪಟ್ಟಿದ್ದಾರೆ. ರಾಜ್ಯ, ಹೊರ ರಾಜ್ಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಶಾಸ್ತ್ರೀಯ ಸಂಗೀತವೆ ಅಲ್ಲದೆ ಸುಗಮ ಸಂಗೀತ ಹಾಗೂ ಸಮೂಹ ಗಾಯನದಲ್ಲಿ ಕಾರ್ಯಕ್ರಮಗಳ ಜೊತೆಗೆ ಶಿಕ್ಷಣ ಶಿಬಿರಗಳನ್ನು ನಡೆಸಿರುತ್ತಾರೆ. ಅಮೆರಿಕಾ, ಕೆನಡಾ ಮುಂತಾದೆಡೆ ಸಂಚರಿಸಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಕಾಶವಾಣಿ ದೂರದರ್ಶನಗಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಿರ್ದೇಶಿಸಿದ್ದಾರೆ. ’ಬೆಂಗಳೂರು ಯೂತ್ ಕಾಯರ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಯುವ ಪ್ರತಿಭೆಗಳನ್ನು ತಯಾರು ಮಾಡುತ್ತಿರುವುದಲ್ಲದೆ ’ಮಯೂರ ಚಿಲ್ಡ್ರನ್ ಕಾಯರ್’ ಎಂಬ ಕೇಂದ್ರವನ್ನು ಚಿಣ್ಣರಿಗಾಗಿ ನಡೆಸುತ್ತಿದ್ದಾರೆ. ಸ್ವರ ರತ್ನ ಸಂಗೀತ ಶಾಲೆಯ ಪ್ರಾಂಶುಪಾಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ಕ್‌ ಸಮ್ಮೇಳನ, ರಷ್ಯನ್ ಉತ್ಸವಗಳಲ್ಲೂ ಪಾಲ್ಗೊಂಡಿದ್ದು ಕಾರ್ಯಕ್ರಮ ನೀಡಿದ್ದಾರೆ. ಸ್ವರಮೂರ್ತಿ ಸ್ಮಾರಕ ಪ್ರತಿಷ್ಠಾನದ ಟ್ರಸ್ಟಿಗಳಲ್ಲೊಬ್ಬರು.

ಪ್ರಶಸ್ತಿ- ಸನ್ಮಾನ : ೧೯೯೮ ರಲ್ಲಿ ಉತ್ತಮ ಶಿಕ್ಷಕಿ ರಾಷ್ಟ್ರಪ್ರಶಸ್ತಿ, ಸಮೂಹ ಗಾಯನದ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ, ಬೆಂಗಳೂರು ಗಾಯನ ಸಮಾಜದ ಶತಮಾನೋತ್ಸವದ ಸಂದರ್ಭದಲ್ಲಿ ವರ್ಷದ ಕಲಾವಿದೆ ಪ್ರಶಸ್ತಿ. ೧೯೯೪-೯೫ ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾತಿಲಕ ಪ್ರಶಸ್ತಿ ಇವರಿಗೆ ಸಂದಿದೆ.