ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ
ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ
ಕುರು

ಹಿರಿಯರು ಸ್ನಾನ ಮಾಡುವಾಗ ಹೇಳುವ ಸ್ತೋತ್ರವಿದು.

‘ನಾವು ಸ್ನಾನ ಮಾಡುವ ನೀರಿನಲ್ಲಿ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು, ಕಾವೇರಿ ಮುಂತಾದ  ನದಿಗಳ ನೀರು ಸಾನಿಧ್ಯಗೊಳ್ಳಲಿ, ನೆಲಸಲಿ’ ಎಂದರ್ಥ.

ಈ ನದಿಗಳನ್ನು ಪುಣ್ಯನದಿಗಳೆಂದೂ ಅವುಗಳಲ್ಲಿ ಸ್ನಾನ ಮಾಡುವುದು ಪುಣ್ಯಕರವೆಂದೂ ಭಾರತೀಯರು ಪರಿಗಣಿಸುತ್ತಾರೆ.

ಈ ನದಿಗಳ ದಡ ಪ್ರದೇಶದಲ್ಲಿ ನೆಲಸಿ, ತಪಸ್ಸು ಮಾಡಿ, ಊರು ರಾಜ್ಯಗಳನ್ನು ಕಟ್ಟಿ, ವೇದಪುರಾಣ ಇತಿಹಾಸಾದಿಗಳನ್ನು ವಿರಚಿಸಿ, ಭವ್ಯವಾದ ಹಿಂದು ಸಂಸ್ಕೃತಿಯನ್ನೂ ನಾಗರಿಕತೆಯನ್ನೂ ಉಜ್ವಲ್ವಾಗಿ ಬೆಳಗುವಂತೆ ಮಾಡಿದ ನಮ್ಮ ಹಿರಿಯರು ಈ ನದಿಗಳಲ್ಲಿ ಪಾವಿತ್ರ್ಯವನ್ನೂ ಮಾತೃವಾತ್ಸಲ್ಯದ ಮಮತೆಯನ್ನೂ ಗುರುತಿಸಿದ್ದರಲ್ಲಿಯೂ ಪೂಜ್ಯ ಭಾವನೆಯನ್ನು ಇಟ್ಟಿದ್ದರಲ್ಲಿಯೂ ಆಶ್ಚರ್ಯವೇನಿದೆ? ಸಿಂಧೂ ಕಣಿವೆಯ ಸಂಸ್ಕೃತಿ, ಗಂಗಾ ಕಣಿವೆಯ ಸಂಸ್ಕೃತಿ ನಮ್ಮ ದೇಶದ ಇತಿಹಾಸದ ಒಂದು ವೈಭವಯುಗವನ್ನು ಸಾರುತ್ತವೆ. ಹೀಗಾಗಿ ಮೇಲ್ಕಂಡ ಪ್ರತಿ ನದಿಯೂ ತನ್ನದೇ ಆದ ಉಜ್ವಲ ಧಾರ್ಮಿಕ, ಪೌರಾಣಿಕ, ಐತಿಹಾಸಿಕ ಹಿನ್ನೆಲೆಯನ್ನು ಉಳ್ಳದಾಗಿದೆ.

ಉತ್ತರದಲ್ಲಿ ಗಂಗೆಯು ಎಷ್ಟು ಪವಿತ್ರವೋ ದಕ್ಷಿಣದಲ್ಲಿ ಕಾವೇರಿಯೂ ಅಷ್ಟೇ ಪವಿತ್ರವಾದ ನದಿ. ಕಾವೇರಿಯನ್ನು ‘ದಕ್ಷಿಣದ ಗಂಗೆ’ ಎಂದು ಕರೆಯುತ್ತಾರೆ. ಭಗೀರಥನ ಪ್ರಯತ್ನದಿಂದ ಗಂಗೆ ಉತ್ತರ ಭಾರತಕ್ಕೆ ಲಭ್ಯವಾದಂತೆ ಮಹರ್ಷಿ ಅಗಸ್ತ್ಯರ ಅನುಗ್ರಹದಿಂದ ಕಾವೇರಿ ದಕ್ಷಿಣ ಭಾರತದಲ್ಲಿ ಹೊನಲಾಗಿ ಹರಿದಳು.

ಮಂಗಳಕರವಾದ ನದಿ

ಕಾವೇರಿ ಅಗಸ್ತ್ಯರ ಪತ್ನಿ. ರಾಮಾಯಣದಲ್ಲಿ ಈ ದಿವ್ಯ ದಂಪತಿಗಳ ಚಿತ್ರಣವನ್ನು ವಾಲ್ಮೀಕಿ ಮಹರ್ಷಿಗಳು ಭವ್ಯವಾಗಿ ಕೊಟ್ಟಿದ್ದಾರೆ.

‘ತತಸ್ತು  ಮಾಪಗಾಂ  ದಿವ್ಯಾಂ ಪ್ರಸನ್ನಸಲಿಲಾಂ ಶಿವಾಂ
ತತ್ರದ್ರ್ಯಕ್ಷಥ ಕಾವೇರೀಂ ವಿಹಿತಾ ಮಪ್ಸರೋಗಣೈಃ
ತತ್ರಾಸೀನಂ ನಗಸ್ಯಾಗ್ರೇ ಮಲಯಸ್ಯ ಮಹೌಜಸಂ
ದ್ರ್ಯಕ್ಷಥಾದಿತ್ಯ ಸಂಕಾಶಂ ಅಗಸ್ತ್ಯಮೃಷಿಸತ್ತಮಂ’

ಕಿಷ್ಕಿಂಧಾ ಕಾಂಡದಲ್ಲಿ ವಾನರ ಮಹಾರಾಜ ಸುಗ್ರೀವನು ಸೀತಾನ್ವೇಷಣ ಕಾರ್ಯಕ್ಕೆ ಕಪಿಗಳನ್ನು ನಿಯೋಜಿಸಿ ದಕ್ಷಿಣ ದಿಕ್ಕಿಗೆ ಹೊರಟು ನಿಂತ ಅವರಿಗೆ ಆ ಪ್ರದೇಶದ ಗುರುತುಗಳನ್ನು ವರ್ಣಿಸುತ್ತಾ ಬಂದಾಗ ಕಾವೇರಿಯನ್ನೂ ಕುರಿತು ಆಡಿದ ಮಾತುಗಳಿವು:

“ಆ ಪ್ರದೇಶದಲ್ಲಿ ಶ್ರೇಷ್ಠವಾದ ಜಲವುಳ್ಳದ್ದೂ ಮಂಗಳಕರವಾದದ್ದೂ ಅಪ್ಸರೆಯರಿಂದ ಸಂಸೇವ್ಯವಾದದ್ದೂ ಆದ ಕಾವೇರಿಯನ್ನು ಕಾಣುವಿರಿ ; ಆ ನದಿಯ ತೀರದಲ್ಲೇ ಪ್ರಸಿದ್ಧ ಮಲಯ ಪರ್ವತದ ಮೇಲೆ ಕುಳಿತು ತಪಸ್ಸು ಮಾಡುತ್ತಿರುವ ಮಹಾ ತೇಜಸ್ವಿಯೂ ಸೂರ್ಯನಂತೆ ಪ್ರಕಾಶವುಳ್ಳವರೂ ಆದ ಅಗಸ್ತ್ಯ ಮಹರ್ಷಿಗಳನ್ನು ನೋಡುವಿರಿ.”

ಹಲವು ಕಥೆಗಳು

ಕಾವೇರಿಯ ದಿವ್ಯ ಕಥೆ ಹಲವು ಪುರಾಣಗಳಲ್ಲಿ ವಿವಿಧ ರೀತಿಯಲ್ಲಿ ನಿರೂಪಿತವಾಗಿದೆ. ಸ್ಕಂದ ಪುರಾಣದ ಪ್ರಕಾರ ಕಾವೇರಿ ಕೈಲಾಸದಲ್ಲಿ ಹರಿಯುತ್ತಿದ್ದ ನದಿ. ಈಶ್ವರನ ಆಣತಿಯಂತೆ ಅಗಸ್ತ್ಯರು ಅದರ ನೀರನ್ನು ಕಮಂಡಲದಲ್ಲಿ ತುಂಬಿಕೊಂಡು ದಕ್ಷಿಣ ದೇಶಕ್ಕೆ ತಂದರಂತೆ! ಶೂರಪದ್ಮ ನೆಂಬ ಅಸುರನು ಮಳೆಯನ್ನು ತನ್ನ ಮಂತ್ರ ಸಾಮರ್ಥ್ಯ ದಿಂದ ತಡೆದು ಹಿಡಿದಿರಲು ಕ್ಷಾಮ ಪ್ರದೇಶವಾಗಿದ್ದ ಈ ತಾಣಕ್ಕೆ ಅಗಸ್ತ್ಯರು ಆಗಮಿಸಿದರು. ಅವರು ತಪಸ್ಸಿಗೆ ಕುಳಿತಿರುವಾಗ ಪರಿಸ್ಥಿತಿಯಿಂದ ಕೆಂಗೆಟ್ಟಿದ್ದ ದೇವೇಂದ್ರನು ವಿನಾಯಕನನ್ನು ಪ್ರಾರ್ಥಿಸಿ ಕಾಗೆಯ ರೂಪ ತಳೆದ ಅವನಿಂದ ಅಗಸ್ತ್ಯರ ಕಮಂಡಲವನ್ನು ಉರುಳುವಂತೆ ಮಾಡಿಸಿದನು. ಹೊನಲಾಗಿ ಹರಿದ ಆ ನೀರೇ ಕಾವೇರಿ! ಬ್ರಹ್ಮನಿಂದ ಕವೇರನಿಗೆ ಕೊಡಲ್ಪಟ್ಟ ವಿಷ್ಣು ಮಾಯೆಯೆಂಬ ಕನ್ಯೆ ವಿಷ್ಣುವಿನ ಅನುಗ್ರಹದಿಂದ ಎರಡು ರೂಪಗಳನ್ನು ಧರಿಸುವ ಸಾಮರ್ಥ್ಯ ಹೊಂದಿ ಒಂದು ರೂಪದಲ್ಲಿ ಅಗಸ್ತ್ಯರ ಹೆಂಡತಿ ಲೋಪಾಮುದ್ರೆಯಾದಳೆಂದು ಇನ್ನೊಂದು ರೂಪದಲ್ಲಿ ಕಾವೇರಿಯಾಗಿ ಹರಿದಳೆಂದೂ ಆಗ್ನೇಯ ಪುರಾಣ ಹೇಳುತ್ತದೆ.

ಇನ್ನೊಂದು ಕಥೆ ಹೀಗಿದೆ – ಕಾವೇರಿ ತನ್ನ ಪತಿ ಅಗಸ್ತ್ಯರಿಗೆ ಹೇಳಿದ್ದಳು, ‘ನನಗೆ ಹೇಳದೇ ನನ್ನನ್ನು ಬಿಟ್ಟು ಒಂದು ನಿಮಿಷವೂ ಹೋಗಬಾರದು. ಹಾಗೆ ಹೋದರೆ ನಾನು ಮತ್ತೆ ನಿಮ್ಮ ಕೈಗೆ ಸಿಕ್ಕುವುದಿಲ್ಲ’ ಎಂದು. ಒಮ್ಮೆ ಅಗಸ್ತ್ಯರು ಅವಳಿಗೆ ತಿಳಿಸದೆ ಎಲ್ಲಿಯೋ ಹೋದರು. ಕಾವೇರಿಗೆ ಕೋಪ ಬಂದಿತು. ಹತ್ತಿರದಲ್ಲಿ ಹರಿಯುತ್ತಿದ್ದ ತೊರೆಯೊಂದರಲ್ಲಿ ಧುಮುಕಿದಳು, ತಾನೂ ನದಿಯಾದಳು. ಇನ್ನೊಂದು ಆಧಾರದ ಪ್ರಕಾರ ಕಾವೇರಿಯು ತಾನು ಲೋಕೋಪಕಾರಾರ್ಥವಾಗಿ ನದಿಯಾಗಿ ಹರಿಯ ಬೇಕೆಂದೂ ತನ್ನಲ್ಲಿ ಸಕಲ ತೀರ್ಥಗಳೂ ನೆಲೆಗೊಳ್ಳ ಬೇಕೆಂದೂ ಪತಿ ಅಗಸ್ತ್ಯರಲ್ಲಿ ಬೇಡಿಕೊಂಡಳು. ಅದಕ್ಕೆ ಪ್ರೀತರಾದ ಅಗಸ್ತ್ಯರು ತಮ್ಮ ಕಮಂಡಲದಲ್ಲಿ ಆ ಎಲ್ಲ ಪುಣ್ಯ ತೀರ್ಥಗಳೂ ಸಂಗಮಿಸಿವೆಯೆಂದೂ ಅದರಲ್ಲಿ ಕಾವೇರಿಯೂ ತೀರ್ಥರೂಪದಿಂದ ಸೇರಬಹುದೆಂದೂ ಅನುಮತಿಸಿದರು. ಅಗಸ್ತ್ಯರ ಕಮಂಡಲವನ್ನು ಸೇರಿದ ನಂತರ ಮುನಿಗಳು ತಾವು ಸ್ನಾನಕ್ಕಾಗಿ ತೆರಳುವುದಾಗಿಯೂ ತಾವು ಬರುವವರೆಗೂ ಬ್ರಹ್ಮಗಿರಿಯ ಅಗ್ರದಲ್ಲಿ ಇಟ್ಟಿದ್ದ ಕಮಂಡಲವನ್ನು ಜೋಪಾನವಾಗಿ ನೋಡಿ ಕೊಳ್ಳುತ್ತಿರ ಬೇಕೆಂಬುದಾಗಿಯೂ ಶಿಷ್ಯರಿಗೆ ತಿಳಿಸಿ ಹೋದರು. ಆದರೆ ದಿನಗಳು ಉರುಳಿದರೂ ಅಗಸ್ತ್ಯರು ಮಾತ್ರ ಬರಲಿಲ್ಲ. ಕಮಂಡಲದೊಳಗೆ ಸೇರಿದ್ದ ಕಾವೇರಿಗೂ ಬೇಸರವಾಯಿತು. ಅದರಿಂದ ಬಿಡುಗಡೆ ಹೊಂದಬೇಕೆಂಬ ಅವಳ ಆಸೆ ಬಲವಾಯಿತು. ದೇವೇಂದ್ರನೂ ಈ ಕಾರ್ಯಕ್ಕೆ ಸಹಾಯ ಮಾಡಿದನು. ಮೋಡಗಳನ್ನು ಸೇರಿಸಿ ಮಳೆ ಹೊಯ್ಯುವಂತೆ ಮಾಡಿದನು. ಮಳೆ ಸುರಿದು ಕಮಂಡಲ ತುಂಬಿ ಹರಿಯಿತು. ಕಾವೇರಿ ಬಂಧವಿಮುಕ್ತಳಾದಳು !

ತಮಿಳು ಕಾವ್ಯಗಳಲ್ಲಿ ಕಾವೇರಿಯ ಕಥೆ ಬೇರೆ ರೀತಿ ಚಿತ್ರಿತವಾಗಿದೆ. ಅಲ್ಲಿ ಕಾವೇರಿಯ ಹೆಸರು ಪೊನ್ನಿ. ಪೊನ್ನಿ ಒಮ್ಮೆ ತನ್ನ ಜೊತೆಯ ನದಿಗಳೊಂದಿಗೆ ಮನುಷ್ಯರೂಪ  ತಳೆದು ವಿಹಾರ ನಡೆಸುತ್ತಿರುತ್ತಾಳೆ. ದಾರಿಯಲ್ಲಿ ಎದುರಾದ ‘ಕುಳ್ಳ ಮುನಿ’ ಅಗಸ್ತ್ಯರನ್ನು ಕಂಡು ಅಪಹಾಸ್ಯ ಮಾಡುತ್ತಾಳೆ. ಕ್ರುದ್ಧರಾದ ಅಗಸ್ತ್ಯರು ಅವಳನ್ನು ನೀರನ್ನಾಗಿ ಪರಿವರ್ತಿಸಿ ತಮ್ಮ ಕಮಂಡಲದಲ್ಲಿ ತುಂಬಿಕೊಳ್ಳುತ್ತಾರೆ. ಕಂಗೆಟ್ಟ ಗೆಳತಿಯರು ಅಗಸ್ತ್ಯರನ್ನು ಬೇಡಿದರೂ ಋಷಿ ಪೊನ್ನಿಯ ಬಿಡುಗಡೆ ಮಾಡದಿರಲು ಬೇರೆ ಮಾರ್ಗ ತೋರದೆ ವಿನಾಯಕನನ್ನು ಪ್ರಾರ್ಥಿಸಿದರು. ಅವನು ಕಾಗೆಯ ರೂಪ ಧರಿಸಿ ಅಗಸ್ತ್ಯರನ್ನು ಹಿಂಬಾಲಿಸಿದನು. ಒಂದು ಸಥಳದಲ್ಲಿ ಅಗಸ್ತ್ಯರು ಕಮಂಡಲವನ್ನಿರಿಸಿ ಸಂಧ್ಯಾವಂದನೆಗೆ ಇಳಿದಿರಲು ಕಾಗೆಯು ಕಮಂಡಲವನ್ನು ಉರುಳಿಸಿರು. ಕಾಗೆಯಿಂದ ಬಂಧವಿಮೋಚನೆಗೊಂಡ ಪೊನ್ನಿ ‘ಕಾ+ವಿರಿ’ಯಾದಳು. ಕಾಲಕ್ರಮದಲ್ಲಿ ಈ ನದಿ ಕಾವೇರಿಯೆಂದು ನಾಮಾಂತರಗೊಂಡಿತು !

ಹೀಗೆ ಹಲವು ಕಲ್ಪನಾ ವಿಲಾಸಗಳಲ್ಲಿ ಕಾವೇರಿಯ ಕಥೆ ಓಡಿದ್ದರೂ ಇವುಗಳೆಲ್ಲವನ್ನೂ ಮಥಿಸಿ ಒಂದು ಸಾರೋದ್ಧಾರವಾದ ಕಥನವನ್ನು  ನಾವು ಮೂಲದಿಂದ ಬೇರೆಯಾಗುವ ರೀತಿಯಲ್ಲಿ ಗುರುತಿಸಬಹುದೆಂದು ತೋರುತ್ತದೆ. ಮೇಲಿನ ಕಥೆಗಳಲ್ಲೆಲ್ಲಾ ನಮಗೆ ಕಂಡು ಬರುವುದು ಕಾವೇರಿಯ ಆದರ್ಶ, ಆಕಾಂಕ್ಷೆ, ಪರೋಪ ಕಾರದದ ಮನೋಭಾವ, ಆದರ್ಶ ದಾಂಪತ್ಯ, ನಿಷ್ಠ ಜೀವನ, ಧ್ಯೇಯ, ಸಾಧನೆ, ಮಹಿಮೆ ಹಿರಿಮೆಗಳು.

ಕವೇರ

ಕವೇರನೆಂಬವನು ಸಹ್ಯಾದ್ರಿಯ ಸಾಲಿನ ಬ್ರಹ್ಮಗಿರಿ ಎನ್ನುವ ಪ್ರದೇಶದ ಅರಸ. ಒಬ್ಬಂಟಿಗನಾಗಿದ್ದ ಅವನಿಗೆ ಜೀವನದಲ್ಲಿ ಜಿಗುಪ್ಸೆಯುಂಟಾಗಿ ಸಮಸ್ತವನ್ನೂ ತೊರೆದು ವಿರಕ್ತ ಜೀವನ ಕೈಗೊಂಡು ತಪೋಮಾರ್ಗದಲ್ಲಿ ತನ್ನ ಪಾಡಿಗೆ ತಾನು ಕಾಲ ಕಳೆಯುತ್ತಿದ್ದ. ಅವನಿಗಿದ್ದ ಪ್ರಬಲ ಆಕಾಂಕ್ಷೆ ಒಂದೇ ಒಂದು – ‘ಲೋಕಕ್ಕೆ ಯಾವ ರೀತಿ ಯಲ್ಲಾದರೂ ಉಪಕಾರ ಮಾಡಿ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು’ ಎಂದು. ಎಷ್ಟೋ ವರ್ಷ ತಪಸ್ಸು ಮಾಡಿದ. ಕಡೆಗೆ ಬ್ರಹ್ಮ ಪ್ರತ್ಯಕ್ಷನಾಗಿ ತನ್ನ ಮಗಳಾದ ವಿಷ್ಣುಮಾಯೆ ಎಂಬವಳನ್ನು  ಕವೇರ ಮುನಿಗೆ ಕೊಟ್ಟು, “ಇವಳನ್ನು ಚೆನ್ನಾಗಿ ನೋಡಿಕೊಂಡು ಸಾಕು. ಮುಂದು ಇವಳಿಂದ ನಿನ್ನ ಆಶಯ ಪೂರ್ಣವಾಗುತ್ತದೆ” ಎಂದು ಆಶ್ವಾಸನೆ ನೀಡಿದನು. ವಿನೀತನಾದ ಕವೇರ ವಿಷ್ಣುಮಾಯೆ ಯನ್ನು ವಿಶ್ವಾಸದಿಂದ ಸ್ವೀಕರಿಸಿ ಪ್ರೀತಿಯಿಂದ ಪೋಷಿಸ ಲಾರಂಭಿಸಿದ.

ಅವಳಿಗೆ ವೇದ, ಶಾಸ್ತ್ರ, ಇತ್ಯಾದಿಗಳನ್ನು ಬೋಧಿಸಿದ; ಪುರಾಣ, ಇತಿಹಾಸಗಳನ್ನು ಹೇಳಿಕೊಟ್ಟ, ಅವುಗಳಲ್ಲಿ ಬರುವ ಉಪಾಖ್ಯಾನಗಳನ್ನು ವಿವರಿಸಿದ ; ವ್ಯಾಖ್ಯಾನಗಳ ಸೂಕ್ಷ್ಮಗಳನ್ನೆಲ್ಲಾ ತಿಳಿಸಿಕೊಟ್ಟ ಪುರಾಣ ಕಥೆಗಳಲ್ಲಿ ಬರುವ ವ್ಯಕ್ತಿಗಳ ಆದರ್ಶವೆಲ್ಲ ಮನದಟ್ಟಾಗುವಂತೆ ವರ್ಣಿಸಿದ. ಪುರಾಣಗಳಲ್ಲಿ ನಿರೂಪಿತವಾಗಿರುವುದೆಲ್ಲ ತ್ಯಾಗ, ದಾನ, ಧರ್ಮ, ಪರೋಪಕಾರ, ಪುಣ್ಯಾರ್ಜನೆಗಳು ತಾನೆ! ಈ ಭಾವನೆಗಳನ್ನೆಲ್ಲಾ ಸದಾ ಮೈತುಂಬಿ, ಮನಸ್ಸು ತುಂಬ ತುಂಬಿಕೊಂಡಿದ್ದ ಕವೇರ ಮಗಳಲ್ಲೂ ಈ ಗುಣಗಳು ಬೇರೂರುವಂತೆ ಮಾಡಿದ.

‘ನನ್ನಿಂದ ಜೀವಕೋಟಿಗೆ ಸಹಾಯವಾಗುವಂತೆ ಕೃಪೆದೋರು.’

ಪರೋಪಕಾರಕ್ಕೆ ಮುಡಿಪು

ಕವೇರನ ಉದಾತ್ತ ಧ್ಯೇಯ ಸಾಕುಕನ್ಯೆ ಕಾವೇರಿ ಯಲ್ಲಿಯೂ ಪ್ರೇರಕ ಶಕ್ತಿಯಾಗಿ ಅಂಕುರಗೊಂಡಿತು. ಈ  ಭಾವವೇ ಅವಳು ಬೆಳೆದಂತೆಲ್ಲಾ, ಗಿಡವಾಗಿ ಹಬ್ಬಯಕೆಯ ಹೆಮ್ಮರವಾಗಿ ಹೊಮ್ಮತೊಡಗಿತು. ತಂದೆಯು ತಪಸ್ಸಿಗೆ ಕುಳಿತರೆ ತಾನೂ ಜೊತೆಯಲ್ಲಿ ಕುಳಿತು ಅನುಕರಿಸುವಳು; ತಂದೆ ಯೋಗ ಸಮಾಧಿಯನ್ನು ಅಡರಿದರೆ ತಾನೂ ಅದೇ ಘಟ್ಟವನ್ನು ಮುಟ್ಟಲು ಪ್ರಯತ್ನಪಡುವಳು. ಹೀಗೆ ತಪಸ್ಸಿನಲ್ಲಿ ಹಂತಹಂತವಾಗಿ ಮೇಲೇರಿ ಸಿದ್ಧಿಯ ಮಜಲನ್ನು ಮುಟ್ಟಿದಳು. ಇನ್ನು ಸುಮ್ಮನೆ ಕೂಡಲು ಸಾಧ್ಯವೇ? ವಿಷ್ಣುವನ್ನು ಕುರಿತು ತಪಸ್ಸನ್ನಾಚರಿಸಿದಳು. ವಿಷ್ಣು ಒಲಿದನು. ಪ್ರತ್ಯಕ್ಷನಾದ ಅವನನ್ನು ಕುರಿತು ಕಾವೇರಿ ವರವನ್ನು ಕೇಳಿಕೊಂಡಳು. “ತಂದೆಯೇ, ನನ್ನ ಜೀವನ ಸಾರ್ಥಕವಾಗುವಂತೆ ಅನುಗ್ರಹ ಮಾಡು; ದೇಹ, ಜೀವ, ದೇಹದ ಕಣಕಣವೂ ಪರೋಪಕಾರಕ್ಕಾಗಿಯೇ ಮುಡಿಪಾಗುವಂತೆ ದಯೆಮಾಡು; ನನ್ನಿಂದ ಜೀವಕೋಟಿಗಳಿಗೆ ಸಹಾಯವಾಗುವಂತೆ ಕೃಪೆದೋರು” ಎಂದು ಕೇಳಿ ಕೊಂಡಳು. ಅವಳ ಬಿನ್ನಹಕ್ಕೆ ಸಂಪ್ರೀತನಾಗಿ ವಿಷ್ಣುವು, “ಕಾವೇರಿ, ಅಗಸ್ತ್ಯರೆಂಬ ಋಷಿ ನಿಮ್ಮಲ್ಲಿಗೆ ಬರುವರು; ಅವರನ್ನು ನೀನು ಆಶ್ರಯಿಸು; ನಿನ್ನ ಉದ್ದೇಶ ನೆವೇರುವುದು; ನೀನು ನದಿಯಾಗಿ ಹರಿದು ಲೋಕಕ್ಕೆ ದಿಕ್ಕಾಗುವೆ” ಎಂದು ಹೇಳಿ ಅಂತರ್ಧಾನನಾದನು.

ಕಾವೇರಿಯ ಹೃದಯ ಸಂತೋಷದಿಂದ ಉಕ್ಕಿ ಹರಿಯಿತು. ವಿಷಯವನ್ನು ತಂದೆಯ ಮುಂದೆ ನಿವೇದಿ ಸಿದಳು. ಕಾವೇರಿಯ ಮೂಲಕ ತನ್ನ ಉದ್ದೇಶ ಸಾಧನೆಯಾಗುವುದೆಂಬುದನ್ನು ತಿಳಿದುಕೊಂಡ ಕವೇರ ಆನಂದಭರಿತನಾದ. ಎಂದಿಗೆ ಅಗಸ್ತ್ಯರ ಆಗಮನವಾಗು ವುದೋ ಎಂದು ಚಾತಕ ಪಕ್ಷಿಯಂತೆ ಆ ಕಾಲವನ್ನೇ ಎದುರು ನೋಡತೊಡಗಿದ.

ಅಗಸ್ತ್ಯರು

ಲೋಕಕ್ಕೆ ಕಲ್ಯಾಣ ಮಾಡಲೆಂದೇ ತಾನೆ ಅಗಸ್ತ್ಯ ಮಹರ್ಷಿಗಳು ಅವತ್ತಾರವೆತ್ತಿದುದು? ಅವರ ಮಹಿಮೆಗೆ ಸರಿಯುಂಟೆ?

ಸಾಕ್ಷಾತ್ ಅಗ್ನಿ ಭಗವಾನನೇ ಶಾಪದಿಂದ ಅಗಸ್ತ್ಯ ನಾಗಿ ಭೂಲೋಕದಲ್ಲಿ ಜನ್ಮ ತಾಳಿದ ಎಂದು ನಂಬಿಕೆ ಉಂಟು.

ಶಿವನು ಪಾರ್ವತಿಯನ್ನು ಮದುವೆಯಾದಾಗ ಆ ಮಂಗಳ ಮಹೋತ್ಸವವನ್ನು ನೋಡಲು ದೇವತೆಗಳೂ ಋಷಿಗಳೂ ಜನಸಾಮಾನ್ಯರೂ ಕೈಲಾಸದಲ್ಲಿ ಕಿಕ್ಕಿರಿದು ನೆರದರಂತೆ. ಅಷ್ಟು ಜನರ ಭಾರಕ್ಕೆ ಭೂಮಿಯ ಸಮತೋಲನ ತಪ್ಪಿಹೋಗಿ ಅಲ್ಲೋಲಕಲ್ಲೋಲವಾದ ಕಡಲಿನಲ್ಲಿ ಅದು ಉಯ್ಯಾಲೆಯಂತೆ ಆಡತೊಡಗಿತು. ಮುಳುಗತೊಡಗಿತು. ಪ್ರಳಯವೇನಾದರೂ ಸಂಭವಿಸಿತೋ ಎಂದು ಎಲ್ಲರೂ ಭಯದಿಂದ ನಡುಗುತ್ತಿದ್ದರು. ಇದನ್ನು ಪರಮೇಶ್ವರನು ಗಮನಿಸಿದ. ಈ ಪರಿಸ್ಥಿತಿಯನ್ನು ತಹಬಂದಿಗೆ ತರಬಲ್ಲ ಶಕ್ತಿಯುಳ್ಳ ಏಕೈಕ ವ್ಯಕ್ತಿ ಅಗಸ್ತ್ಯರೇ ಎಂದು ತೀರ್ಮಾನಿಸಿದ. ಅವರಿಗೆ ದಕ್ಷಿಣಕ್ಕೆ ತೆರಳಿ ತಪೋಬಲದಿಂದ ಭೂಮಿಯ ಸಮತೋಲನವನ್ನು ಮತ್ತ ಸಾಧಿಸುವಂತೆ ಅಪ್ಪಣೆಯಿತ್ತನು. ಅಗಸ್ತ್ಯರು ಅದೇ ರೀತಿ ಅಕ್ಷರಶಃ ನಡೆದು ಭೂಮಿಯನ್ನು ಸ್ಥಿರವಾಗಿ ನಿಲ್ಲಿಸಿದರು. ಒಂದು ಬಾರಿ ಅವರ ಪತ್ನಿ ಲೋಪಾಮುದ್ರೆಯು ಒಡವೆಗಳು ಬೇಕೆ ಎಂದು ಆಸೆಪಟ್ಟಳು. ಅವಳ ಅಪೇಕ್ಷೆಯನ್ನು ನಡೆಸಿಕೊಡಲು ರಾಜಮಹಾರಾಜರಲ್ಲಿ ಬೇಡಿ ಒಡವೆಗಳನ್ನು ತಂದುಕೊಡುತ್ತೇನೆ ಎಂದು ಹೊರಟರು ಅಗಸ್ತ್ಯರು. ಅದೇ ನೆಪದಿಂದ ಅನೇಕ ಅಸುರರನ್ನು ನಿಗ್ರಹಿಸಿದರು. ಈ ಅಸುರ ಸಂಹಾರವನ್ನು ಕಂಡು  ಹೇಗಾದರೂ ಅಗಸ್ತ್ಯರನ್ನೇ ಮುಗಿಸಿ ಬಿಡಬೇಕೆಂದು ಮಾಯಾವಿ ರಾಕ್ಷಸರಾದ ವಾತಾಪಿ ಮತ್ತು ಇಲ್ವಲ ಎಂಬವರು ಸಂಚು ಮಾಡಿದರು. ಅಗಸ್ತ್ಯರ ಬಳಿಗೆ ಹೋಗಿ ವಿನಯದಿಂದ ಅವರನ್ನು ತಮ್ಮಲ್ಲಿಗೆ ಭೋಜನಕ್ಕೆ ಬರುವಂತ ಬೇಡಿಕೊಂಡರು. ಈ ರಾಕ್ಷಸ ಅಣ್ಣತಮ್ಮಂದಿರು ಮಾಯಾಶಕ್ತಿ ಇದ್ದವರು. ಇವರು ಒಂದು ಉಪಾಯ ಮಾಡುತ್ತಿದ್ದರು. ಯಾರನ್ನಾದರೂ ಊಟಕ್ಕೆ ಕರೆಯುವರು. ವಾತಾಪಿ ಆಡಿನ ರೂಪ ಧರಿಸುವನು. ಇಲ್ವಲ ಆಡನ್ನು ಕೊಂದು ಅಡಿಗೆ ಮಾಡಿ ಅತಿಥಿಗೆ ಬಡಿಸುವನು. ಊಟವಾದ ಅನಂತರ ಇಲ್ವಲನು, “ವಾತಾಪಿ ಹೊರಕ್ಕೆ ಬಾ” ಎನ್ನುವನು. ಮಾಯಾವಿ ವಾತಾಪಿ ಅತಿಥಿಯ ಹೊಟ್ಟೆ ಸೀಳಿಕೊಂಡು ಬರುವನು.

ಅಗಸ್ತ್ಯರಿಗೆ ಮೊದಲೇ ಈ ರಾಕ್ಷಸರ ಮೋಸ ಕೃತ್ಯಗಳ ಅರಿವಿದ್ದಿತು. ಈ ರಾಕ್ಷಸರಿಗೆ ಬುದ್ಧಿ ಕಲಿಸಲೆಂದೇ ಭೋಜನಕ್ಕೆ ಒಪ್ಪಿ ಬಂದರು ಅವರು. ಅಗಸ್ತ್ಯರು ಬಂದಾಗಲೂ ಅಣ್ಣತಮ್ಮಂದಿರು ಇದೇ ಉಪಾಯ ಮಾಡಿದರು. ಆದರೆ ಊಟವಾಗುತ್ತಲೇ ಅಗಸ್ತ್ಯರು ‘ವಾತಾಪಿ ಜೀರ್ಣೋಭವ’ ಎನ್ನುತ ಹೊಟ್ಟೆಯ ಮೇಲೆ ಕೈಯಾಡಿಸಿದರು. ವಾತಾಪಿ ಜೀರ್ಣವಾಗಿ ಹೋದ. ಇಲ್ವಲ ಕರೆದಾಗ ಬರಲೇ ಇಲ್ಲ. ತನಗೇ ತಿರುಗು ಮಂತ್ರ ಹಾಕಿದ ಅಗಸ್ತ್ಯರನ್ನು ತೀರಿಸಿಬಿಡಲು ಮೇಲೆರಗಿದ ಇಲ್ವಲನನ್ನೂ ಸಹ ಅವರು ತಮ್ಮ ತಪಸ್ಸಿನ ಪ್ರಭಾವದಿಂದ ನಿವಾರಿಸಿದರು. ವಿಂಧ್ಯಪರ್ವತದ ಪ್ರಭು ವಿಂಧ್ಯನು, ಸೂರ್ಯನು ಮೇರುವಂತೆ ಸುತ್ತುವಂತೆ ತನ್ನನ್ನೂ ಪ್ರದಕ್ಷಿಣೆ ಮಾಡ ಬೇಕೆಂದು ಹಟ ಹಿಡಿದ. ಆಕಾಶದವರೆಗೆ ಬೆಳೆದು ನಿಂತ. ಲೋಕಕ್ಕೇ ಸವಾಲು ಹಾಕಿದ. ದೇವತೆಗಳು ಅಗಸ್ತ್ಯರ ಮೊರೆಹೊಕ್ಕರು. ನಯವಾಗಿ ವಿಂಧ್ಯನು ತಲೆ ತಗ್ಗುವಂತೆ ಮಾಡಿದರು ಅಗಸ್ತ್ಯರು ! ರಾತ್ರಿಯ ಹೊತ್ತು ದೇವತೆಗಳಿಗೆ ತೊಂದರೆಯನ್ನಿತ್ತು ಹಗಲಿನಲ್ಲಿ ಕಡಲಿನಲ್ಲಿ ಅವಿತು ಕೂರುತ್ತಿದ್ದ ಕಾಲಕೇಯ ರಾಕ್ಷಸರನ್ನು ನಾಶಪಡಿಸಲು ದೇವತೆಗಳಿಗೆ ಅಸಾಧ್ಯವಾಯಿತು. ಆಗ ಮತ್ತೆ ಅಗಸ್ತ್ಯರನ್ನು ಪ್ರಾರ್ಥಿಸಿದರು. ಅಗಸ್ತ್ಯರು ಸಾಗರದ ನೀರನ್ನೆಲ್ಲ ಒಂದೇ ಆಪೋಶನಕ್ಕೆ ಕುಡಿದರು. ಆಗ ಅದರಲ್ಲಿ ಅಡಗಿದ್ದ ರಾಕ್ಷಸರನ್ನು ದೇವತೆಗಳು ನೋಡಲು ಸಾಧ್ಯವಾಯಿತು. ದೇವತೆಗಳು ರಾಕ್ಷಸರನ್ನು ಕೊಂದರು.

ಮೇಲಿನ ಉದಾಹರಣೆಗಳು ಅಗಸ್ತ್ಯರ ಅಸಾಧಾರಣ ಕಾರ್ಯಗಳಲ್ಲಿ ಕೆಲವು ಮಾತ್ರ !

ಇಂತಹ ಅಗಸ್ತ್ಯರು ಈ ಭರತವರ್ಷದ ದಕ್ಷಿಣಕ್ಕೆ ಎಂದರೆ ವಿಂಧ್ಯಪರ್ವತಕ್ಕೆ ದಕ್ಷಿಣಕ್ಕಿರುವ ಭೂಭಾಗಕ್ಕೆ ಮೊತ್ತಮೊದಲಿಗೆ ಆಗಮಿಸಿದ ಋಷಿವರ್ಯರು. ಅರಣ್ಯ ವಾಗಿ ಬೆಳೆದು ನಿಂತಿದ್ದ ಈ ಭೂಮಿಯಲ್ಲಿ ರಾಕ್ಷಸರು ತುಂಬಿದ್ದರು. ತಮ್ಮ ಹಿರಿಮೆಯ ಜ್ಯೋತಿಯು ತನ್ನ ದಿವ್ಯ ಕಾಂತಿಯಿಂದ ಈ ಪ್ರದೇಶವನ್ನೆಲ್ಲಾ ಬೆಳಗುವಂತೆ ಅಗಸ್ತ್ಯರು ಮಾಡಿದರು.

ಕವೇರಮುನಿಯ ಆಶ್ರಮದಲ್ಲಿ

ಈಗ ಸಾಕ್ಷಾತ್ ಶಂಕರನಿಂದ ಪ್ರೇರಣೆಗೊಂಡು ತಮ್ಮ ಕಮಂಡಲದಲ್ಲಿ ಪುಣ್ಯವಾಹಿನಿಗಳ ಪವಿತ್ರ ತೀರ್ಥಗಳನ್ನು ತುಂಬಿಕೊಂಡು ದಕ್ಷಿಣ ಭಾರತಕ್ಕೆ ಅಗಸ್ತ್ಯರು ಕಾಲಿಟ್ಟರು.

ಹೆಸರನ್ನು ಕೇಳಿದರೇ ಸಕಲ ಪಾಪಗಳೂ ಪರಿಹಾರ ವಾಗತಕ್ಕ ಹಿರಿಯರು ! ಇನ್ನು ಅವರ ದರ್ಶನವನ್ನು ಪಡೆಯುವುದಂತೂ ಏಳೇಳು ಜನ್ಮದ ಭಾಯೋದಯ ಎಂದು ಬಗೆದ ಜನ ಎಲ್ಲೆಲ್ಲೂ ನೆರೆದು ಆದರದಿಂದ ಸಂಭ್ರಮ, ಸಡಗರದಿಂದ ಅಗಸ್ತ್ಯರಿಗೆ ಸ್ವಾಗತವಿತ್ತರು. ತಮ್ಮ ತೊಂದರೆಗಳನ್ನೆಲ್ಲಾ ನಿವಾರಿಸತಕ್ಕ ದೈವಾಂಶ ಸಂಭೂತ ನೆಂದು ಹಾಡಿದರು; ಹೊಗಳಿದರು.

ಆ ಜನರಿಂದ ಬ್ರಹ್ಮಗಿರಿಯ ಮೇಲೆ ಸಾತ್ವಿಕ ಜೀವನ ನಡೆಸುತ್ತಿದ್ದ ಕವೇರ ತಪಸ್ವಿಯ ವಿಚಾರ ಅಗಸ್ತ್ಯರಿಗೆ ತಿಳಿಯಿತು. ಆ ಹಿರಿಯನ ದರ್ಶನಕ್ಕಾಗಿ ಅಲ್ಲಿಗೆ ಹೋದರು.

ಕವೇರಮುನಿಗೆ ಸಂಭ್ರಮವೋ ಸಂಭ್ರಮ. ತನ್ನ ಕನಸು ನನಸಾಗುವ ಕಾಲ ಸನ್ನಿಹಿತವಾಗಿ ಬಿಟ್ಟಿತು. ತನ್ನ ಯುಗಯುಗದ ತಪಸ್ಸು ಫಲ ಕೊಡುವ ಸಮಯ ಬಂದು ಬಿಟ್ಟಿತು. ಹಿರಿಯ ತಪಸ್ವಿಯೆಂದು ತನ್ನ ಕಾಲಿಗೆರಗಿದ ಅಗಸ್ತ್ಯರನ್ನು ಕವೇರಮುನಿ ಪ್ರತ್ಯಕ್ಷವಾಗಿ ಎದುರಿಗೆ ನಿಂತ ತ್ರಿಮೂರ್ತಿಸ್ವರೂಪರೆಂದು ಕೀರ್ತಿಸುತ್ತ ಮೇಲಕ್ಕೆತ್ತಿ ತಾನೂ ನಮಸ್ಕರಿಸಿದನು. ಪ್ರೀತಿಯಿಂದ ಸತ್ಕರಿಸಿದನು.

ಎಂತಹ ಜಾಣೇ !

ಅಂತಹ ಪ್ರೀತಿ ವಿಶ್ವಾಸದ ಅತಿಥಿ ಸತ್ಕಾರಕ್ಕೆ ಮರುಳಾಗಿಹೋದರು ಅಗಸ್ತ್ಯರು. ಕವೇರ ತನ್ನ ಮಗಳನ್ನು ಕರೆದು ಅಗಸ್ತ್ಯರಿಗೆ ನಮಸ್ಕರಿಸಲು ಹೇಳಿದ. ಕಾವೇರಿ ಹಾಗೆಯೇ ಮಾಡಿದಳು. ಕವೇರ ಅಗಸ್ತ್ಯರ ವಿಷಯವನ್ನು ಕಾವೇರಿಗೆ ಹೇಳಲು ತೊಡಗಿದಾಗ ಕಾವೇರಿ, “ಅಪ್ಪ, ಬೇಡ, ಅವರನ್ನು ಪರಿಚಯ ಮಾಡುವುದೂ ಒಂದೇ; ಲೋಕದ ಕಣ್ಣಾದ ಸೂರ್ಯನನ್ನು ಪರಿಚಯ ಮಾಡುವುದೂ ಒಂದೇ. ಅವರ ಮಹಿಮೆ ಅವರಿಗಿಂತ ಮುಂಚೆ ಲೋಕವೆಲ್ಲಾ ಹಬ್ಬಿದೆ. ನಾವು ಅದನ್ನು  ಮಾತಿನಲ್ಲಿ ಹೇಳಲು ಹೋದರೆ ನಾವು ಅದನ್ನು ಸಂಪೂರ್ಣವಾಗಿ ಹೇಳಲು ಸಾಧ್ಯವಾಗದೆ ತಪ್ಪು ಮಾಡಿದಂತಾಗುತ್ತದೆ” ಎಂದು ಮಧುರವಾಗಿ ನುಡಿದಳು.

ಕವೇರಮುನಿ, “ನೀನು ಹೇಳುವುದು ನಿಜವೇ. ಹಿರಿಮೆ ಮಹಿಮೆಗಳು ಮಾತಿಗೆ ಸಿಕ್ಕತಕ್ಕವಲ್ಲ, ಅಳೆಯ ತಕ್ಕವಲ್ಲ; ಅನುಭವದಿಂದಲೇ ವೇದ್ಯ” ಎಂದು ಸಮ್ಮನಾದನು.

ಕಾವೇರಿಯ ಮಾತಿನ ಚಾತುರ್ಯ, ಗಾಂಭೀರ್ಯ, ಅದರ ಹಿಂದೆ ಅಡಗಿದ್ದ ಸಂಸ್ಕೃತಿ, ಪರಿಪಕ್ವ ಜ್ಞಾನ ಇವುಗಳನ್ನು ಗಮನಿಸಿದ ಅಗಸ್ತ್ಯರು ಆಶ್ಚರ್ಯದಿಂದ ಮೂಕರಾದರು. ಇಷ್ಟು ಕಿರಿಯ ವಯಸ್ಸಿನಲ್ಲೇ ಎಂತಹ ಅದ್ಭುತ ವಿವೇಚನೆ ಹೊರಸೂಸುತ್ತಿದೆ ಕಾವೇರಿಯ ಮಾತಿನಲ್ಲಿ ! ಇದು ಕವೇರಮುನಿಯ ಅವಳಿಗೆ ಅರೆದು ಕುಡಿಸಿರುವ ವಿದ್ಯೆ, ಜ್ಞಾನಗಳ ಅಮೃತದ ಪ್ರಭಾವ !

ನದಿಯಾಗಿ ಹರಿದಳು ಕಾವೇರಿ.

ಅಗಸ್ತ್ಯರಿಗೆ ಅವಳ ಪಾಂಡಿತ್ಯ ಪ್ರೌಢಿಮೆಗಳು ಹೆಚ್ಚೋ ಅವಳ ಸೌಂದರ್ಯವು ಹೆಚ್ಚೋ ಎನ್ನುವುದನ್ನು ತೀರ್ಮಾನಿ ಸಲಾಗಲಿಲ್ಲ. ಅವಳ ಜಾಣ್ಮೆ ಇಂಗಿತಗಳನ್ನು ಮನಸಾರೆ ಇಚ್ಚಿಸಿದರು, ಅವಳ ಸೌಂದರ್ಯವನ್ನೂ ಮೆಚ್ಚಿದರು.

ಅಗಸ್ತ್ಯರ ಪತ್ನಿ

ಅತಿಥಿಗಳಾದ ಅಗಸ್ತ್ಯರು ಸತ್ಕರಿಸುವ ಕೆಲಸವನ್ನು ಕವೇರಮುನಿ ಮಗಳಿಗೆ ಒಪ್ಪಿಸಿದ್ದ. ಅವಳು ಅವರನ್ನು ಬಹು ಶ್ರದ್ಧೆಯಿಂದ, ಭಕ್ತಿಯಿಂದ ನೋಡಿಕೊಂಡಳು, ಅವರ ಧ್ಯಾನ ಪೂಜೆಗಳಿಗೆ ಕಾಲಕಾಲಕ್ಕೆ ಸರಿಯಾಗಿ ಎಲ್ಲವನ್ನೂ ಅಣಿಮಾಡಿಕೊಡುತ್ತಿದ್ದಳು. ಅವರ ಊಟ ಉಪಚಾರಗಳಿಗೆ ಸ್ವಲ್ಪವೂ ಲೋಪವಾಗದಂತೆ ಎಚರಿಕೆ ವಹಿಸುತ್ತಿದ್ದಳು. ನಗುನಗುತ್ತ ಕಾಲಕ್ಕೆ ಸರಿಯಾಗಿ ಶ್ರದ್ಧೆಯಿಂದ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದ ಅವಳ ರೀತಿ ಅಗಸ್ತ್ಯರಿಗೆ ಮೆಚ್ಚಿಕೆ ಯಾಯಿತು. ‘ಇವಳನ್ನೆ ಏಕೆ ಮದುವೆಯಾಗಬಾರದು?’ ಎಂದು ಯೋಚನೆ ಬಂದಿತು.

ಕವೇರನೂ ವೃದ್ಧ ; ತಮ್ಮ ಇಂಗಿತವನ್ನು ವಯಕ್ತ ಪಡಿಸಿದ ಅಗಸ್ತ್ಯರಿಗೆ ಅವನೂ ವಿಷ್ಣುವಿನ ಆದೇಶವನ್ನು ತಿಳಿಸಿದನು. ಅಗಸ್ತ್ಯರಿಗೆ ಆಶ್ಚರ್ಯವಾಯಿತು; ತನಗೋಸ್ಕ ರವೇ ಇವರು ಕಾಯುತ್ತಾ ಕುಳಿತ್ತಿದ್ದುದನ್ನು ತಿಳಿದಾಗ ಸಂತೋಷವೂ ಆಯಿತು. ಕಾವೇರಿಗೂ ವಿಷ್ಣುವು ಕೊಟ್ಟ ವರ ಈಗ ಕೈಗೂಡುತ್ತಿದೆಯೆಂದು ಬಹಳ ಸಂತೋಷ ವಾಯಿತು.

ಕವೇರ ಶುಭ ಮುಹೂರ್ತವನ್ನು ನೋಡಿ ಕಾವೇರಿ ಯನ್ನು ಅಗಸ್ತ್ಯರಿಗೆ ಧಾರೆಯೆರೆದುಕೊಟು ‘ಧನ್ಯನಾದೆ’ ಎಂದು ತೃಪ್ತಿ ಹೊಂದಿದ. ಅಗಸ್ತ್ಯರೂ ಬ್ರಹ್ಮಗಿರಿಯಲ್ಲಿಯೇ ಆಶ್ರಮ ರಚಿಸಿಕೊಂಡರು. ಪ್ರೀತಿಯ ಮಡದಿ ಕಾವೇರಿಯ ಆದರಣೆಯಲ್ಲಿ ತಮ್ಮ ಜಪತಪ ಅನುಷ್ಠಾನಗಳನ್ನು ಮುಂದುವರಿಸಿಕೊಂಡಿದ್ದರು. ಕಾವೇರಿ ಅವರ ನಿತ್ಯ ಕರ್ಮ ಗಳಿಗೆ ಸ್ವಲ್ಪವೂ ಕುಂದುಬಾರದಂತೆ ನೋಡಿಕೊಳ್ಳುತ್ತಾ ಉತ್ತಮ ಗೃಹಿಣಿ ಎನಿಸಿಕೊಂಡಿದ್ದಳು.

ಶೂರಪದ್ಮ

ಸ್ವಲ್ಪ ಕಾಲ ಕಳೆಯಿತು. ಇದ್ದಕಿದ್ದಂತೆ ದಾರುಣವಾದ ವಾರ್ತೆಯೊಂದು ಬಂದಿತು. ಅಗಸ್ತ್ಯಾಶ್ರಮದ ಜನರನ್ನೆಲ್ಲಾ ದಿಗ್ಮೂಢರನ್ನಾಗಿ ಮಾಡಿತು. ಅದೇ ಶೂರಪದ್ಮನೆಂಬ ಮಹಾ ಸುರನ ಮಾಯಾ ವೈಭವ ವಿಕಟ್ಟಾಟ್ಟಹಾಸದ ಸುದ್ದಿ !

ಶೂರಪದ್ಮನು ಮಾಂತ್ರಿಕ ರಾಜ. ಆ ದಕ್ಷಿಣ ಪ್ರದೇಶವ ನ್ನೆಲ್ಲಾ ಆಕ್ರಮಿಸಿಕೊಂಡು ತಾನೇತಾನಾಗಿ ವರ್ತಿಸುತ್ತಿದ್ದ. ಅವನ ಆಡಳಿತದ ಅತಿರೇಕದಲ್ಲಿ ಸಿಕ್ಕಿಕೊಂಡು ಪ್ರಜೆಗಳು ತಲ್ಲಣಿಸಿ ನಡಗುತ್ತಿದ್ದರು. ಶೂರಪದ್ಮ ಮೂರು ಲೋಕ ಗಳಿಗೂ ತಾನೂ ಒಡೆಯನೆಂದು ತಿಳಿದುಕೊಂಡಿದ್ದ. ದೇವತೆಗಳ ಮೇಲೆ ಜನ್ಮಸಹಜವಾದ ವೈರ. ಮನುಷ್ಯರು ದೇವತಗಳಿಗೆ ಮಣಿಯುತ್ತಾರೆ, ಮರ್ಯಾದೆ ಮಾಡುತ್ತಾರೆ ಎಂದು ಅವರನ್ನು ಕಂಡರೆ ಅವನಿಗೆ ಕೋಪ. ಇನ್ನು ದೇವತಗಳನ್ನು ಕುರಿತು ತಪಸ್ಸು ಮಾಡುತ್ತಿರುವ,  ಅವರಿಗೆ ಹವಿಸ್ಸನ್ನರ್ಪಿಸಿ ಯಜ್ಞಯಾಗಗಳನ್ನು ಆಚರಿಸುವ ಋಷಿಮುನಿಗಳನ್ನು ಕಂಡರಂತೂ ಉರಿದುಬೀಳುವುದರಲ್ಲಿ ಅಚ್ಚರಿಯೇನು? ಇಂತಹ ಜನರನ್ನು ತನ್ನ ದಾಸಾನು ದಾಸರನ್ನಾಗಿ ಮಾಡಿಕೊಳ್ಳುವುದು ಹೇಗೆ? ಮಳೆಬೆಳೆಗೋಸ್ಕರ ವಲ್ಲವೆ ಮನುಷ್ಯರು ದೇವತೆಗಳನ್ನು ಆಶ್ರಯಿಸುವುದು? ಅವರಿಗೆ ಗೌರವ ಸಲ್ಲಿಸುವುದು? ಮಳೆಯನ್ನೇ ತಡೆದುಬಿಟ್ಟಾಗ ಮನುಷ್ಯರು ಬೇರೆ ಮಾರ್ಗ ಕಾಣದೆ ತನ್ನನ್ನೇ ಆಶ್ರಯಿಸುವರು; ದೇವತೆಗಳ ಅಟ್ಟಹಾಸವೂ ತಾನೇತಾನಾಗಿ ತಪ್ಪಿಹೋಗುವುದು. ಹೀಗೆಲ್ಲಾ ಯೋಚಿಸಿದ ವಿಪರೀತ ಬುದ್ಧಿಯ ಶೂರಪದ್ಮ ಮಳೆಯ ಒಂದು ತೊಟ್ಟೂ ನೆಲಕ್ಕೆ ಸೋಕದಂತೆ ತಡೆಹಿಡಿದುಬಿಟ್ಟ; ತನ್ನ ಮಂತ್ರಶಕ್ತಿಯ ಪ್ರಭಾವದಿಂದ.

ಕ್ಷಾಮ, ಕ್ಷಾಮ !

ಮಳೆಯಿದ್ದರಲ್ಲವೆ ಬೆಳೆ; ಬೆಳೆಯಿದ್ದರಲ್ಲವೆ ಅನ್ನ, ಆಹಾರಗಳು? ಆಹಾರವಿದ್ದರಲ್ಲವೆ ಮನುಷ್ಯ ಜೀವಿಸ ಬಲ್ಲ?

ಜನರೆಲ್ಲ ಮಳೆಯಿಲ್ಲದೆ ಬೆಳೆ ಕಾಣದೆ ತಲ್ಲಣಿಸಿದರು. ತಿನ್ನಲು ಮೇವಿಲ್ಲದೆ, ಕುಡಿಯಲು ನೀರಿಲ್ಲದೆ ಪ್ರಾಣಿಗಳು ಸಂಕಟಪಟ್ಟವು. ಇವನ್ನೆಲ್ಲ ಕಂಡು ಶೂರಪದ್ಮ ಸಂತೋಷ ಪಟ್ಟು ಕುಣಿದಾಡಿದ.

ಮಳೆ ಬೀಳದೆ, ಬೆಳೆ ಕಾಣದೆ ಬಿರಿದು ನಿಂತ ಭೂಪ್ರದೇಶ; ತರಗೆಲೆಯಂತೆ ತಪತಪನೆ ಉದುರಿ ಹೋಗುತ್ತಿರುವ ಜೀವಕೋಟಿ ನಿಸ್ಸಹಾಯಕತೆಯಿಂದ ನರಳುತ್ತಿತ್ತು. ಕರುಳು ಕತ್ತರಿಸುವ ದಾರುಣ ಪರಿಸ್ಥಿತಿಯಲ್ಲಿ ದಕ್ಷಿಣ ದೇಶದ ಜನತೆಯೆಲ್ಲ ಸಿಲುಕಿಕೊಂಡಿದ್ದಿತು. ಭೀಕರ ಕ್ಷಾಮದಲ್ಲಿ ಲೋಕ ತಲ್ಲಣಿಸಿತು. ಕ್ಷಾಮವೇ ಮನುಷ್ಯ ರೂಪವನ್ನು ಹೊತ್ತುಕೊಂಡಿದೆಯೆನ್ನುವಂತೆ ಮೂಳೆ ಎಲುಬುಗಳ ಹಂದರವಾಗಿ ತೋರುತ್ತಿದ್ದರು ಮನುಷ್ಯರೆಲ್ಲ. ಇವೆಲ್ಲವನ್ನೂ ನೋಡಿದ ಕಾವೇರಿಗೆ ಕರುಳು ಕವಿಚಿದಂತಾ ಯಿತು. ಏನೂ ಅರಿಯದ ಮುಗ್ಧ ಹಸುಳೆಗಳು ಪಡಬಾರದ ಪಾಡನ್ನು ಅನುಭವಿಸುತ್ತಿರುವುದನ್ನು ಕಂಡು ಅವಳಿಗೆ ಕರುಳು ಮಿಡಿಯಿತು. ಅಗಸ್ತ್ಯರಿಗೂ ಹೃದಯ ಹಿಂಡಿಹೋಯಿತು.

ರಾತ್ರಿಯೆಲ್ಲಾ ಕಾವೇರಿಗೆ ನಿದ್ರೆಯಿಲ್ಲೆ ! ಹಾಗೆ ನಿದ್ರೆ ಬಂದಂತಾದರೂ ಏನೇನೋ ಸ್ವಪ್ನಗಳು. ಕಣ್ಣುಕಾಣದ ಯಾವುದೋ ಪ್ರದೇಶ. ಏರುತಗ್ಗಿಲ್ಲದ ಸಮಭೂಮಿ. ಎಲ್ಲಿಂದೆಲ್ಲಿಗೆ ಕಣ್ಣು ಹಾಯಿಸಿ ನೋಡಿದರೂ ಬರಡು ಬರಡಾದ ನೆಲ. ಹಾರುವ ಹಕ್ಕಿ ಇಲ್ಲ, ಚಿಲಿಪಿಲಿ ಇಲ್ಲ ; ನಡೆದಾಡುವ ಪಶುಪ್ರಾಣಿಗಳಲ್ಲಿ ನಲಿವೇ ಇಲ್ಲ. ಬೀಸುವ ಗಾಳಿಯೋ ಬಿಸಿಬಿಸಿಯಾಗಿ ಹಾಯ್ದುಬರುತ್ತಿದೆ. ಮರದಲ್ಲಿ ಎಲೆಯೇ ಇಲ್ಲ. ಬೇತಾಳನ ಕೈಯಂತೆ ಕೊಂಬೆಗಳು ಬಾಚಿಕೊಂಡಿವೆ. ಜನ ಸಂಚಾರವೇ ಕಾಣದ ಆ ಪ್ರಾಂತ ಬರೆದ ಚಿತ್ರದಂತಿದೆ. ಎಲ್ಲಿಯೂ ಓಡಾಟವಿಲ್ಲ, ಚಟುವಟಿಕೆ ಇಲ್ಲ. ಅಲ್ಲೇ ಒಂದು ಗ್ರಾಮ, ಮನೆ ಬಾಗಿಲುಗಳಲ್ಲಿನ ಮೌನವಾಗಿ ಜನರು ಕುಳಿತ್ತಿದ್ದಾರೆ. ಮಾತನಾಡಲು ಚೈತನ್ಯ ಇದ್ದರೆ ತಾನೆ! ಬೊಂಬೆ ಬಿಡಿಸಿದಂತೆ ಕುಳಿತಿದ್ದಾರೆ. ಎಲ್ಲರೂ ಯಾರನ್ನೋ ನಿರೀಕ್ಷಿಸುತ್ತಿದ್ದಾರೆ. ಅವರು ನೋಟ ಅಗಸದತ್ತು ತಿರುಗುತ್ತಿದೆ. ಕೈ ಎರಡನ್ನೂ ಎತ್ತಿ ದೀನರಾಗಿ ನೋಡುತ್ತಾರೆ. ‘ಎಂದಿಗೆ ಇಳಿದುಬರುವೆ ತಾಯಿ!’ ಎನ್ನುವಂತೆ ಆರ್ತರಾಗಿ ಮೂಕ ಪ್ರಾರ್ಥನೆ ಮಾಡುತ್ತಿದ್ದಾರೆ. ಹಿನ್ನೆಲೆಯಲ್ಲಿ ಒಂದೇ ಆರ್ತನಾದ, ಒಂದೇ ನೋವು, ನರಳಿಕೆ. ಆ ಕೂಗು ಯಾರನ್ನೋ ಹತ್ತಿರಕ್ಕೆ ತರುತ್ತಿರುವಂತೆ ತೋರುತ್ತಿದೆ. ‘ಇದೋ ಬಂದುಬಿಟ್ಟೆ, ಕಂದಗಳಿರ ಬಂದೆ’ ಎನ್ನುತ್ತಾ ದೇವಮಾತೆಯೊಬ್ಬಳು ಕರಣೆಯ ದೃಷ್ಟಿಯನ್ನು ಎಲ್ಲೆಡೆಯೂ ಪ್ರಸರಿಸುತ್ತಾ ಕೆಳಗಿಳಿಯುವುದು ಕಂಡು ಬರುತ್ತಿದೆ. ಅವಳ ಅಭಯ ಮುದ್ರೆ, ನಿಲುವು, ಕಣ್ಣಿನಲ್ಲಿ ತುಂಬಿಕೊಂಡ ಅವಾಜ್ಯ ಕರುಣೆ ಎಲ್ಲವನ್ನೂ ಕಾವೇರಿ ದೃಷ್ಟಿಸಿ ನೋಡುತ್ತಿದ್ದಾಳೆ. ಆ ದೇವತೆ ತನ್ನನ್ನೇ ಹೋಲುತ್ತಿದ್ದಾಳೆ. ಹಾಗಿದ್ದರೆ ಜನ ನಿರೀಕ್ಷಿಸುತ್ತಿರುವುದು ತನ್ನನ್ನೇ. ‘ಎಷ್ಟು ಬೇಗ ಬರುವೆ’ ಎಂದು ಎದುರುನೋಡುತ್ತಿದೆಯೆ! ಇರಬೇಕು ಎನ್ನಿಸುತ್ತಿತ್ತು ಕಾವೇರಿಗೆ.

ನಾನು ನೆರವಾಗಬೇಕು

ಕರುಣೆಯ ಅಪರಾವತಾರವೇ ಅಗಸ್ತ್ಯರು ; ಅವರಿಗೆ ಅನುರೂಪಳಾದ ಸತಿ ಕಾವೇರಿ. ಇಬ್ಬರಿಗೂ ಈ ಜನರನ್ನು ಹೇಗಾದರೂ ಮಾಡಿ ಈ ದಾರುಣ ಪರಿಸ್ಥಿತಿಯಿಂದ ದಾರಿ ಕಾಣಿಸಬೇಕೆಂಬ ಚಿಂತೆ ಬಲವಾಯಿತು ! ಕಾವೇರಿಗೆ ತಟಕ್ಕನೆ ವಿಷ್ಣುವಿನ ವರ ನೆನಪಿಗೆ ಬಂದಿತು. ಅದು ಅಗಸ್ತ್ಯರಿಂದ ಕಾರ್ಯರೂಪಕ್ಕೆ ಇಳಿಯುವುದೆಂಬ ಅವನ ಮಾತಿನ ಅರ್ಥ ಈಗ ಸಹಾಯಕ್ಕೆ ಬರುವುದೆ? ಸಂದರ್ಭವೂ ಈಗ ಸರಿಯಾಗಿ ಒದಗಿದೆ. ‘ನದಿಯಾಗಿ ಹರಿದು ನೀನು ಜನರಿಗೆ ನೆರವಾಗಿ ನಿಲ್ಲುವೆ’ ಎಂದು ವಿಷ್ಣುವಿನ ಆದೇಶ ಈಗ ಉಪಯೋಗಕ್ಕೆ ಬರುತ್ತದೆಯಲ್ಲವೆ!

ಕಾವೇರಿ ಅಗಸ್ತ್ಯರಿಗೆ ವಿನಯವಾಗಿ ನಮಸ್ಕರಿಸಿ ಕೇಳಿಕೊಂಡಳು : “ಸ್ವಾಮಿ, ನಾನು ನದಿಯಾಗಿ ಹರಿಯುವಂತೆ ಅನುಗ್ರಹಿಸಿರಿ. ಅದೇ ವಿಷ್ಣುವು ನನಗಿತ್ತಿರುವ ವರಸಂಪತ್ತು. ಅದು ತಮ್ಮಿಂದ ಕೈಗೂಡುವುದೆಂದೂ ದೇವನು ತಿಳಿಸಿದ್ದಾನೆ. ನೋವಿನಿಂದ ನರಳುತ್ತಿರುವ ಈ ನರಜೀವಿಗಳಿಗೆ ನಾನು ನೆರವಾಗಿ ನಿಲ್ಲಬೇಕು. ನನ್ನಲ್ಲಿ ಭಾರತ ಭೂಮಿಯ ಹದಿನಾಲ್ಕು ಸಾವಿರ ನದಿಗಳ ತೀರ್ಥವೂ ಸನ್ನಿಹಿತವಾಗುವಂತೆ ಅನುಗ್ರಹ ಮಾಡಿರಿ ; ನನ್ನಲ್ಲಿ ಸ್ನಾನ ಮಾಡುವ, ನನ್ನನ್ನು ಕುಡಿಯುವ ಪ್ರತಿ ಜೀವದ ಪಾಪವೆಲ್ಲ ಪರಿಹಾರಮಾಡುವಂತೆ ಕೃಪೆಮಾಡಿರಿ.”

ಅಗಸ್ತ್ಯರಿಗೆ ತಾವು ಕಮಂಡಲದಲ್ಲಿ ಸಕಲ ಪುಣ್ಯ ನದಿಗಳ ತೀರ್ಥಗಳನ್ನು  ತುಂಬಿಕೊಂಡು ಬಂದುದು, ಕವೇರ ಮುನಿಯನ್ನು, ಕಾವೇರಿಯನ್ನು ಸಂಧಿಸಿದುದು ಎಲ್ಲ ನೆನಪಾಯಿತು. ದೇವಶಂಕರನು ನಮ್ಮನ್ನು ದಕ್ಷಿಣ ದೇಶಕ್ಕೆ ಕಳುಹಿಸಿದ ಅಭಿಪ್ರಾಯ ಈಗ ತೆರೆದಿಟ್ಟ ಪುಸ್ತಕದಂತೆ ಸ್ಪಷ್ಟವಾಯಿತು.

ಅಗಸ್ತ್ಯರು ನಸುನಗುತ್ತಾ, “ಕಾವೇರಿ, ಇದು ನನಗೂ ಬ್ರಹ್ಮನು ತಿಳಿಸಿರುವ ವಿಷಯ. ಈಶ್ವರನು ಇದಕ್ಕೆಂದೇ ಇಲ್ಲಿಗೆ ನನ್ನನ್ನು ಕಳುಹಿಸಿರುವುದು. ಈ ಕಾರ್ಯವನ್ನು ನಿರ್ವಹಿಸುತ್ತೇನೆ. ಇದೋ ಈ ಕಮಂಡಲದಲ್ಲಿ ನೀನು ಕೋರುವ ತೀರ್ಥಗಳು ನೆಲೆಸಿವೆ. ನಿನಗೆ ಯಾವಾಗ ತೋರುವುದೋ ಆಗ ಅವುಗಳಲ್ಲಿ ಸೇರಿಕೊಳ್ಳಬಹುದು” ಎಂದು ಹೇಳಿದರು.

ಅಗಸ್ತ್ಯರ ಕಮಂಡಲುವಿನಲ್ಲಿ

ಸ್ವಪ್ನದಲ್ಲಿ ತಾನು ಕಂಡ ಜನರ ಮೊರೆ ಇನ್ನೂ ಕಿವಿಯಲ್ಲೇ ನಿಂತಿದೆ. ಅವರ ನಿರಾಸೆ ತುಂಬಿದ ನಿರೀಕ್ಷಣೆಯ ನೋಟ ಕಣ್ಣಲ್ಲೇ ಕುಳಿತಿದೆ. ಕಾವೇರಿಗೆ ತಾನು ಆದಷ್ಟು ಬೇಗ ಆ ಜನರಿಗೆ ದಿಕ್ಕಾಗಿ ನಿಲ್ಲಬೇಕು ಎನ್ನಿಸಿತು. ಸ್ವಪ್ನದಲ್ಲಿ ಕಂಡ ದೃಶ್ಯಗಳೇ ಇನ್ನೂ ಕಣ್ಮುಂದೆ ಹಾಯುತ್ತಿವೆ. ಮೈಮನಗಳೆರಡೂ ಜಡವಾಗಿಬಿಟ್ಟಿವೆ. ಮನಸ್ಸಿನಲ್ಲಿ ಯಾವುದೋ ಅಸ್ವಸ್ಥತೆ ತುಂಬಿಹೋಗಿದೆ. ಮನೆ, ಮಠ ಯಾವುದೂ ಬೇಡವಾಗಿದೆ. ಜೀವನವೇ ಜಂಜಡವಾದಂತೆ ತೋರುತ್ತಿದೆ.

ಅಗಸ್ತ್ಯರಲ್ಲಿ ಬಿನ್ನವಿಸಿಕೊಂಡಳೂ ಕಾವೇರಿ :

“ಪೂಜ್ಯರೇ, ನಾನಿನ್ನು ತಡೆದುಕೊಳ್ಳಲಾರೆ. ಇನ್ನು ಕಮಂಡಲದೊಳಕ್ಕೆ ಸೇರಿಕೊಳ್ಳುವೆ. ನನ್ನನ್ನು ತೀರ್ಥವಾಗಿ ಪರಿವರ್ತಿಸಿ”.

ಅಗಸ್ತ್ಯರಿಗೆ ಪತ್ನಿಯಲ್ಲಿ ನಡೆಯುತ್ತಿರುವ ತುಮುಲ ಅರ್ಥವಾಯಿತು. ‘ಎಲ್ಲವೂ ನಡೆಯಬೇಕಾದದ್ದೇ’ ಎಂದುಕೊಂಡು ಅಗಸ್ತ್ಯರು, “ಸರಿ, ಆಯಿತು” ಎಂದು ಸುಮ್ಮನಾದರು.

ಕಾವೇರಿಗೆ ಅಗಸ್ತ್ಯರ ಕಮಂಡಲದೊಳಗೆ ತೀರ್ಥ ರೂಪದಲ್ಲಿ ಸೇರಿಕೊಂಡಳು.

ಅಗಸ್ತ್ಯರಿಗೂ ನೋವು

ಅಗಸ್ತ್ಯರಿಗೂ ಅಂದು ಏತಕ್ಕೋ ಮೈಮನಸ್ಸುಗಳು ಅಷ್ಟು ಹಿತವಾಗಿರಲಿಲ್ಲ. ಏನೋ ಆತಂಕ, ಚಿಂತೆ. ಕಾವೇರಿಯು ತಮ್ಮನ್ನು ಬಿಟ್ಟಿರುವುದೇ ಅವರಿಗೆ ಸಮಸ್ಯೆ ಯಂತಾಗಿಬಿಟ್ಟಿತು. ಅವರು ಋಷಿಗಳು; ಈ ಮಾಯೆಯಿಂದ ಬಿಡಿಸಿಕೊಳ್ಳಲು ನೋಡಿದರು. ಅಷ್ಟೊಂದು ತಪಸ್ಸು ಮಾಡಿದ್ದರೂ ಸಂಯಮಶಾಲಿಗಳಾದರೂ ಕಾವೇರಿಯ ಅಗಲಿಕೆಯ ಚಿಂತೆ ಅವರ ಮನಸ್ಸನ್ನು ಮಂಕುಮಾಡಿತ್ತು.

ಯಾವುದು ನಿಂತರೂ ಕಾಲ ನಿಲ್ಲುತ್ತದೆಯೇ? ತೂತು ಬಟ್ಟಲಿನಲ್ಲಿ ಸೋರಿಹೋಗುವ ನೀರಿನಂತೆ ತನ್ನ ಪಾಡಿಗೆ ತಾನು ಮುಂದುವರಿಯುತ್ತಲೇ ಇದೆ.

ನಿತ್ಯವಿಧಿಗಳನ್ನು ನೆರವೇರಿಸಲೋಸುಗ ಅಗಸ್ತ್ಯರು ಶಿಷ್ಯರೊಂದಿಗೆ ತೆರಳಿದರು.

ಸಮೀಪದಲ್ಲೇ ಒಂದು ಕೊಳ. ಇಂದು ಅಲ್ಲಿಯೇ ಜಪತಪ ಅನುಷ್ಠಾನಾದಿಗಳನ್ನು ಮಾಡಿ ಮುಗಿಸಿಕೊಂಡು ಬರೋಣವೆಂದು ಅಲ್ಲಿಗೆ ತೆರಳಿದರು ಅಗಸ್ತ್ಯರು.

‘ಸ್ವಾಮಿ, ನಾನು ನದಿಯಾಗಿ ಹರಿಯುವಂತೆ ಅನುಗ್ರಹಿಸಿರಿ.’

ಪ್ರಶಸ್ತವಾದ ಸ್ಥಳವೊಂದರಲ್ಲಿ ಕಮಂಡಲವನ್ನು ಇರಿಸಿ ಕೊಳದಲ್ಲಿ ಸ್ನಾನಕ್ಕೆ ಇಳಿದರು. ಶಿಷ್ಯರು ಕುಳಿತರು, ಕೆಲವರು ಕುಶಸಮಿತ್ತುಗಳ ಸಂಗ್ರಹಣೆಗೆ ತೊಡಗಿದರು, ಕೆಲವರು ತಾವೂ ಸ್ನಾನಕ್ಕೆಂದು ಕೊಳಕ್ಕೆ ಇಳಿದರು.

ನದಿಯಾಗಿ ಹರಿದಳು ಕಾವೇರಿ

ಇಂದ್ರನು ಇದೇ ಸಂದರ್ಭವನ್ನು ಎದುರು ನೋಡುತ್ತಿದ್ದ ಕಾಲ ಈಗ ಒದಗಿಬಂದಿದೆ. ಇದನ್ನು ಬಿಟ್ಟು ಬಿಟ್ಟರೆ ಇನ್ನು ಎಷ್ಟು ವರ್ಷಗಳು ಕಾಯಬೇಕಾಗುವುದೋ ಏನೋ! ಅವನು ಸಮಸ್ತ ದೇವತೆಗಳೊಡನೆ ವಿನಾಯಕ ನನ್ನು ತಮ್ಮ ಕಾರ್ಯ ಅಡ್ಡಿ ಇಲ್ಲದೆ ನಡೆಯುವಂತೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿದನು. ‘ದೇವತೆಗಳು ದೊರೆ ಯಿಡಬೇಕಾದರೆ ಅದೊಂದು ಮಹತ್ವದು ಸಂದರ್ಭವೇ ಇರಬೇಕು. ಶೀಘ್ರವಾಗಿ ಯಾವುದೋ ಕೆಲಸ ಜರುಗಬೇಕು, ನಿರ್ವಿಘ್ನವಾಗಿ ಈ ಕಾರ್ಯ ನೆರವೇರಬೇಕು ! ಅದನ್ನು ತಾನೇ ನಿರ್ವಹಿಸಿಬಿಟ್ಟರೆ’ ಎಂದುಕೊಂಡ ಗಣೇಶ.

ಪ್ರತ್ಯಕ್ಷನಾದ ವಿನಾಯಕನನ್ನು ಕುರಿತು ದೇವೇಂಧ್ರ, “ವಿಘ್ನರಾಜ, ಕಾವೇರಿ ನದಿಯಾಗಿ ಹರಿಯುವುದನ್ನೇ ನಿರೀಕ್ಷಿಸುತ್ತಾ ಅಗಸ್ತ್ಯರ ಕಮಂಡಲದಲ್ಲಿ ಕುಳಿತಿದ್ದಾಳೆ. ಮಹಾವಿಷ್ಣುವಿನ ಉದ್ದೇಶವೂ ಇದೇ. ಕಾರಣಗಳೆಲ್ಲ ಸಿದ್ಧವಾಗಿವೆ, ಇನ್ನು ಕಾರ್ಯ ಜರುಗಬೇಕಾಗಿದೆ ನೆವೇರಿಸಿ ಕೊಡಬೇಕು” ಎಂದು ನಯವಾಗಿ ನಿವೇದಿಸಿಕೊಂಡನು.

ವಿನಾಯಕನು ಲೋಕಕ್ಕೆ ಉಪಕಾರವಾಗುವ ಈ ಕಾರ್ಯ ಅಗತ್ಯವಾಗಿ ನಡೆಯಬೇಕು ಎಂದು ನಿರ್ಧರಿ ಸಿದನು. ಒಂದು ಕಾಗೆಯ ರೂಪ ತಾಳಿದನು. ದೇವತೆಗಳೆಲ್ಲ ವಿಸ್ಮಿತರಾಗಿ ನೋಡುತ್ತಿದ್ದರು. ಆ ಕಾಗೆಯು ಹಾರಿಹೋಗಿ ಕೋಡು ಬಂಡೆಯ ಮೇಲೆ ಕುಳಿತುಕೊಂಡಿತು. ಮೆಲ್ಲಗೆ ಅತ್ತಿತ್ತ ನೋಡುತ್ತಾ ಕಮಂಡಲದ ಹತ್ತಿರಕ್ಕೆ ಹೇಗೋ ಸೇರಿಕೊಂಡಿತು. ಹತ್ತಿರ ಬಂದ ಕಾಗೆಯನ್ನು ಶಿಷ್ಯರು ಓಡಿಸಲು ಕೈ ಮೇಲೆ ಮಾಡಿದರು. ಗಾಬರಿ ಬಿದ್ದಂತೆ ಕಾಗೆಯು ಅತ್ತಿತ್ತ ಸರಿದಾಡುವಾಗ ಕಮಂಡಲವನ್ನು ಉರುಳಿಸಿಬಿಟ್ಟಿತು. ಅದರಲ್ಲಿನ ತೀರ್ಥವೆಲ್ಲ ಕಳಗೆ ಚೆಲ್ಲಿತು; ಮಾತ್ರವಲ್ಲ, ಒಂದೇ ಸಮನೆ ಮುಂದೆಮುಂದೆ ಹರಿಯಲಾರಂಭಿಸಿ ಬಿಟ್ಟಿತು. ಏನೂ ತೋರದೆ ದಿಗ್ಭ್ರಾಂತರಾದ ಶಿಷ್ಯರು ತಮ್ಮ ಗುರುಗಳನ್ನು ಕರೆದರು. ಏನಾಯಿತೆಂಬುದನ್ನು ತಿಳಿಯರು ಲಗುಬಗನೆ ಮೇಲೇರಿ ಬಂದ ಅಗಸ್ತ್ಯರು ಅಲ್ಲಿ ಕಂಡದ್ದೇನು ?

ಕಮಂಡಲದಿಂದ ಬಿಡುಗಡೆ ಹೊಂದಿದ ಕಾವೇರಿ ಹೊನಲಾಗಿ ಹರಿದು ಮುಂದೆಮುಂದೆ ಸಾಗುತ್ತಿದ್ದಾಳೆ. ಶಿಷ್ಯರು ಕೂಗಿಕೊಂಡಂತೆ ಕಾಗೆಯೊಂದು ಕಮಂಡಲವನ್ನು ಉರುಳಿಸಿದೆ !

ಅಗಸ್ತ್ಯರಿಗೆ ಎಲ್ಲವೂ ಅರ್ಥವಾಯಿತು.

ಕರುಣೆಯ ತಾಯಿಯಾಗಿದ್ದಾಳೆ

ಅನಿರೀಕ್ಷಿತ ಘಟನೆಯಿಂದ ವಿಚಲಿತರಾದ ಅಗಸ್ತ್ಯರು ಹರಿಯುತ್ತಿದ್ದ ಹೊನಲಿನ ಮುಂದೆಮುಂದೆ ಭ್ರಾಂತರಾಗಿ ಓಡಿದರು. “ಕಾವೇರಿ, ಕಾವೇರಿ, ನನ್ನನ್ನು ಬಿಟ್ಟು ಹೊರಟು ಹೋದೆಯಾ ?” ಎಂದು ಹುಚ್ಚರಂತೆ ಕೂಗಿಕೊಂಡರು; ಅಲ್ಲೆಲ್ಲಾ ಅಲೆದಾಡಿದರು. ನೀರನ್ನೆಲ್ಲಾ ಕಮಂಡಲದಲ್ಲಿ ಮೊಗೆದುಹಾಕಲು ನೋಡಿದರು. ಸಮುದ್ರವನ್ನೇ ಆಪೋಶನ ತೆಗೆದುಕೊಂಡ ಅಗಸ್ತ್ಯರಿಗೆ ಅಸಾಧ್ಯವಾದುದು ಯಾವುದಿದೆ?

‘ಇನ್ನು ಸುಮ್ಮನೆ ಕುಳಿತರೆ ಕೆಲಸ ಕೆಟ್ಟುಹೋಗುವುದು’ ಎಂದು ಕೊಂಡ ಬ್ರಹ್ಮವಿಷ್ಣು ಮಹೇಶ್ವರರೂ ದೇವೇಂದ್ರಾದಿ ಗಳೂ ಅಗಸ್ತ್ಯರಿಗೆ ಪ್ರತ್ಯಕ್ಷರಾಗಿ ಹೀಗೆ ಬಿನ್ನವಿಸಿದರು :

“ಮಹರ್ಷಿಯೇ, ಕಾವೇರಿಯನ್ನು ತಡೆಯಲು, ಕಮಂಡಲದಲ್ಲಿ ತುಂಬಿಕೊಳ್ಳಲು ಪ್ರಯತ್ನಿಸಬೇಡಿರಿ. ನಿಮ್ಮ ಅನುಗ್ರಹದಿಂದಲೇ ಕಾವೇರಿಯು ಜಲರೂಪ ಧರಿಸಿರು ವುದು. ಅವಳ ಉದ್ದೇಶವೂ ನದಿಯಾಗಿ ಹರಿದು ಲೋಕೋ ಪಕಾರ ಮಾಡಲೆಂದಲ್ಲವೆ ? ದಕ್ಷಿಣ ಪ್ರಾಂತದಲ್ಲಿ ನದಿಯೇ ಇರಲಿಲ್ಲ. ಈ ಭಾಗದ ಜನರಿಗೆ ನಿಮ್ಮ ಪತ್ನಿ ದಿಕ್ಕಾಗುತ್ತಿದ್ದಾಳೆ. ಈ ಸಾರ್ಥಕ ಕಾರ್ಯಕ್ಕೆ ನಿಮ್ಮ ಸಮ್ಮತಿಯನ್ನು ಸಂತೋಷ ದಿಂದ ನೀಡಿರಿ. ನೀವು ಇದುವರೆಗೂ ಈ ಪ್ರಪಂಚಕ್ಕೆ ಹಲವಾರು ಉಪಕಾರ ಮಾಡಿರುವಿರಿ. ನಿಮ್ಮ ಅನುಗ್ರಹ ದಿಂದ ಕಾವೇರಿಯು ಎಂದಿಗೂ ಹೊನಲಾಗಿ ಹರಿಯುತ್ತ ಲೋಕಕ್ಕೆ ಉಪಕಾರ ಮಾಡಲು ಹೊರಟಿದ್ದಾಳೆ. ಅವಳನ್ನು ಆರ್ಶೀವದಿಸಿ. ಇದೋ ನಿಮ್ಮ ಅಪ್ಪಣೆಯನ್ನೇ ಎದುರು ನೋಡುತ್ತಿದ್ದಾಳೆ.”

ಅತ್ತ ತಿರುಗಿ ನೋಡಿದರು ಅಗಸ್ತ್ಯರು. ಕಾವೇರಿ ನಿಂತು ತಮ್ಮೆಡೆಗೆ ದೈನ್ಯದಿಂದ, ಆಸೆಯಿಂದ ನೋಡುತ್ತಾ ತನಗೆ ಅನುಮತಿ ನೀಡಬೇಕೆಂದು ಕೇಳಿಕೊಳ್ಳುತ್ತಿರುವಂತೆ ಕಾಣಿಸುತ್ತಿದೆ.

‘ನಿಜ, ತಮ್ಮ ಪತ್ನಿ ಕಾವೇರಿ ಲೋಕಕ್ಕೆಲ್ಲಾ ಕರುಣೆಯ ತಾಯಿಯಾಗಿ ಕಾಪಾಡಲು ಹೊರಟಿದ್ದಾಳೆ. ಆಚಂದ್ರಾರ್ಕ ವಾಗಿ ಹರಿಯುತ್ತಾ ಜನರ ಪಾಪಗಳನ್ನು ತೊಳೆಯುವ ಪುಣ್ಯವಾಹಿನಿಯಾಗಿದ್ದಾಳೆ. ಅವಳ ಜೀವನ ವೈವ ಇನ್ನಾರಿಗಿದೆ? ಅವಳ ಬಾಳು ಸಾರ್ಥಕವಾಯಿತು’ ಎಂದು ಹೆಮ್ಮೆ ಪಟ್ಟುಕೊಂಡರು ಅಗಸ್ತ್ಯರು; ‘ತಥಾಸ್ತು’ ಎಂದು ಒಪ್ಪಿಗೆ ಇತ್ತರು.

ದಕ್ಷಿಣ ಭಾರತಕ್ಕೆ ಈ ರೀತಿ ಕಾವೇರಿಯ ಕೃಪಾ ವರ್ಷವಾಯಿತು. ಕಾವೇರಿಯು ಮುಂದಕ್ಕೆ ಹೇಗೆ ಹರಿಯಬೇಕು ಎಂದು ಮಾರ್ಗನಿರ್ದೇಶನ ಮಾಡುತ್ತಾ ಅಗಸ್ತ್ಯರು ದಕ್ಷಿಣ ದಿಕ್ಕಿಗೆ ತೆರಳಿ ಅಲ್ಲಿನ ಮಲಯ ಪರ್ವತದಲ್ಲಿ ನೆಲೆಸಿದರು.

ಕವೇರ ರಾಜನು ಎಂದೋ ಸ್ವರ್ಗವನ್ನು ಸೇರಿ ಬಿಟ್ಟಿದ್ದನು. ಅಲ್ಲಿಂದಲೇ ಕಾವೇರಿಯ ಜೀವನ ವೈಭವವನ್ನು ಅವಲೋಕಿಸುತ್ತಿದ್ದನು. ಅವನ ಉದ್ದೇಶ ಈ ರೀತಿ ಕಾವೇರಿಯ ಮೂಲಕ ಸಾರ್ಥಕಗೊಂಡಿತು.

ಧನ್ಯ ಕವೇರ ರಾಜ ! ಧನ್ಯೆ ಕಾವೇರಿ !

ಈ ರೀತಿ ಜಗತ್ಪಾವನೆಯಾದ ಕಾವೇರಿ ದಕ್ಷಿಣ ಭಾರತದಲ್ಲಿ ಹರಿದು ಕೋಟಿಕೋಟಿ ಜೀವಿಗಳಿಗೆ ನೀರನ್ನೂ ಅನ್ನವನ್ನೂ ಕೊಟ್ಟು ಕಾಪಾಡುತ್ತಿದ್ದಾಳೆ. ಕಾವೇರಿಯನ್ನು ದಕ್ಷಿಣ ಭಾರತದ ಬಂಗಾರದ ನದಿ ಎಂದು ಜನ ಕರೆಯುತ್ತಿದ್ದಾರೆ. ತಮಿಳುನಾಡಿನಲ್ಲಿ ಜನ ‘ಪೊನ್ನಿ’ ಎಂದು ಪ್ರೀತಿಯಿಂದ ಆದರಿಸುತ್ತಾರೆ. ಪೊನ್ನಿ ಎಂದರೆ ಹೊನ್ನಿನಂತೆ ಅಮೂಲ್ಯ ಎಂದರ್ಥ. ಕಾವೇರಿಯು ಹರಿಯುವ ಜಾಗವೆಲ್ಲ ಹಸಿರಿನಿಂದ ನಲಿಯುತ್ತದೆ. ಮೈಲು ಮೈಲುಗಟ್ಟಲೆ ಹಬ್ಬಿ ನಿಂತ ಬತ್ತದ ಮತ್ತು ಕಬ್ಬಿನ ಗದ್ದೆಗಳೂ ತೆಂಗೂ ಬಾಳೆಯ ತೋಟಗಳೂ ಕಣ್ಣಿಗೆ ಹಬ್ಬವನ್ನು ನೀಡುತ್ತದೆ. ಈ ಪುಣ್ಯ ನದಿಯ ದಡದ ಮೇಲೆ ಪುಣ್ಯಕ್ಷೇತ್ರಗಳು ಕಿಕ್ಕಿರಿದು ನಿಂತಿವೆ. ಇವುಗಳಲ್ಲಿ ಆದಿರಂಗವೆನಿಸುವ ಶ್ರೀರಂಗಪಟ್ಟಣ, ಮಧ್ಯರಂಗವೆನಿಸುವ ಶಿವನಸಮುದ್ರ, ಅಂತ್ಯರಂಗವೆನಿಸುವ ಶ್ರೀರಂಗಗಳು ಪ್ರಖ್ಯಾತವಾದವು.

ಕಾವೇರಿ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಬ್ರಹ್ಮಗಿರಿಯ ತಲಕಾವೇರಿ ಎಂಬಲ್ಲಿ ಉದ್ಭವಗೊಳ್ಳುತ್ತದೆ. ಕರ್ನಾಟಕದ ದಕ್ಷಿಣದಲ್ಲಿ ಗಡಿಯಾಗಿ ಪಶ್ಚಿಮದಿಂದ ಪೂರ್ವಕ್ಕೆ ಹರಿದು ತಮಿಳುನಾಡಿನಲ್ಲಿ ದಕ್ಷಿಣಕ್ಕೆ ತಿರುಗಿ ಹಲವು ಮೈಲಿಗಳು ಹರಿದ ಅನಂತರ ಮತ್ತೆ ಪೂರ್ವಾಭಿ ಮುಖಿಯಾಗಿ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಈ ನದಿಯ ಉದ್ದ ೪೭೫ ಮೈಲಿಗಳು (ಸುಮಾರು ೭೬೦ ಕಿಲೋ ಮೀಟರುಗಳು). ಈ ನದಿಯಿಂದ ಪ್ರಯೋಜನ ಪಡೆಯುವ ನೆಲ ಸಾವಿರಾರು ಎಕರೆಗಳು. ಇಲ್ಲಿನ ಜನರನ್ನು ಕೈಹಿಡಿದು ಕಾಪಾಡುವ ಪ್ರತ್ಯಕ್ಷ ದೇವತೆ ಕಾವೇರಿ.

ಹುಟ್ಟುಹಬ್ಬ

ಕಾವೇರಿಯು ಜನ್ಮ ತಾಳಿದ ದಿನವನ್ನು ಕಾವೇರಿ ಸಂಕ್ರಮಣವೆಂದು ಈ ಪ್ರಾಂತದ ಜನರು ಆಚರಿಸುತ್ತಾರೆ. ತುಲಾ ಮಾಸದ ಸಂಕ್ರಮಣದಂದು ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುತ್ತಿರಬೇಕಾದರೆ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿರುವ ತಲಕಾವೇರಿಯ ಕುಂಡದಲ್ಲಿ ಕಾವೇರಿಯ ಉದ್ಭವವಾಗುತ್ತದೆ. ಈ ಪುಣ್ಯ ಸಂದರ್ಭದಲ್ಲಿ ಭಾಗಗೊಳ್ಳಲು ಸಾವಿರಾರು ಮಂದಿ ಕರ್ನಾಟಕ, ತಮಿಳು ನಾಡುಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ತಲಕಾವೇರಿಯಲ್ಲಿ ಸ್ನಾನ ಪೂಜೆಗಳನ್ನು ಮಾಡುತ್ತಾರೆ. ತುಲಾ ಮಾಸದಲ್ಲಿ ಕಾವೇರಿಯ ಸ್ನಾನ ಪುಣ್ಯಕಾರ್ಯವೆಂದು ಪರಿಗಣಿಸಲ್ಪಟ್ಟಿದೆ.

ಕಾವೇರಿಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುವಂತೆಯೇ ಕಾವೇರಿಯು ಸಮುದ್ರದೊಡನೆ ಸಂಗ ಮಿಸಿದ ದಿನವನ್ನು ತಮಿಳುನಾಡಿನಲ್ಲಿ ಸಂಭ್ರಮದಿಂದ ಕೊಂಡಾಡುತ್ತಾರೆ. ಆಡಿ ಮಾಸದ ಹದಿನೆಂಟನೆಯ ದಿನ ಕಾವೇರಿ ಸಮುದ್ರದೊಡನೆ ಮಿಲನಗೊಂಡ ದಿನ ‘ಪದಿನೆಟ್ಟಾಮ ಪರಪ್’ (ಹದಿನೆಂಟನೆ ದಿನದ ಹುಟ್ಟು) ಎಂದು ಹಬ್ಬದ ರೂಪದಲ್ಲಿ ಆಚರಿಸಲ್ಪಡುತ್ತದೆ. ಶ್ರೀರಂಗ ದಲ್ಲಿ ಅಂದು ದೊಡ್ಡ ಜಾತ್ರೆ. ಕಾವೇರಿಯು ಸಮುದ್ರವನ್ನು ಸೇರುವ ಜಾಗದಲ್ಲಿ ಜನರು ಸ್ನಾನ ಮಾಡಲು ಸೇರುತ್ತಾರೆ. ಈ ಪವಿತ್ರ ಸಂಗಮಕ್ಕೆ ಸೀರೆ ವಸ್ತ್ರಗಳನ್ನು ಸಮರ್ಪಿಸುತ್ತಾರೆ, ಪೂಜೆ ನಡೆಸುತ್ತಾರೆ.

ಜನರ ಭಾಗ್ಯ

ಕಾವೇರಿ ನದಿ ಬ್ರಹ್ಮಗಿರಿಯಲ್ಲಿ ಹುಟ್ಟಿ ಕೊಡಗು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಹರಿದು ನೆರೆ ಸಂಸ್ಥಾನ ವಾದ ತಮಿಳುನಾಡನ್ನು ಪ್ರವೇಶಿಸಿ, ಸೇಲಂ, ತಿರುಚಿರಪಳ್ಳಿ ಯಲ್ಲಿ ಮುಂದುವರಿದು ಶ್ರೀರಂಗದ ಹತ್ತಿರ ಹಲವು ಹೊನಲುಗಳಾಗಿ ಬಿರಿಯುತ್ತದೆ. ಇವುಗಳಲ್ಲಿ ಮುಖ್ಯವಾದ ಕಾವೇರಿ ಶಾಖೆಯು ಮಯಾವರಂ ಹತ್ತಿರದಲ್ಲಿ ಕಾವೇರಿ ಪಟ್ಟಣಂ ಎನ್ನುವ ಜಾಗದಲ್ಲಿ ಸಮುದ್ರವನ್ನು ಸೇರುತ್ತದೆ.

ಕಾವೇರಿಯನ್ನು ನೂರಾರು ಉಪನದಿಗಳು ಕೂಡಿ ಕೊಳ್ಳುತ್ತವೆ. ಲಕ್ಷ್ಮಣತೀರ್ಥ, ಹೇಮಾವತಿ, ಲೋಕಪಾವನಿ, ಷಿಂಷಾ, ಅರ್ಕಾವತಿ, ಕಪಿನಿ, ಭವಾನಿ, ಅಮರಾವತಿ, ನೊಯ್ಯಲ್ ಮುಂತಾದವು ಇವುಗಳಲ್ಲಿ ಪ್ರಖ್ಯಾತವಾದವು. ಕಾವೇರಿಗೆ ಕನ್ಮಂಬಾಡಿ ಮತ್ತು ಮೆಟ್ಟೂರು ಎನ್ನುವ ಕಡೆಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿದ್ದಾರೆ. ಈ ಅಣೆಕಟ್ಟುಗಳ ಹಿಂದೆ ಜಲಾಶಯಗಳನ್ನು ಏರ್ಪಾಡು ಮಾಡಿ ವ್ಯವಸಾಯ, ವಿದ್ಯುಚ್ಛಕ್ತಿಗೆ ಕಾವೇರಿಯ ನೀರನ್ನು ಬಳಸುತ್ತಾರೆ. ಈ ಜಲಾಶಯಗಳಿಂದ ಹಲವಾರು ಎಕರೆ ಪ್ರದೇಶಗಳು ಕೃಷಿಭೂಮಿಯಾಗಿ ನಾಡಿನ ಮಕ್ಕಳಿಗೆ ಅನ್ನವನ್ನು ನೀಡುತ್ತವೆ. ಶಿವನಸಮುದ್ರದಲ್ಲಿ ವಿದ್ಯುಚ್ಛಕ್ತಿ ಉತ್ಪತ್ತಿಯಾಗುತ್ತದೆ. ಮನೋಹರವಾದ ಜಲಪಾತದಲ್ಲಿ ಕಾವೇರಿ ನದಿಯು ಗಗನಚುಕ್ಕಿ ಭರಚುಕ್ಕಿ ಎಂಬ ಎರಡು ಕಡೆಗಳಲ್ಲಿ ಬೆಟ್ಟದಿಂದ ಕೆಳಗೆ ಧುಮುಕಿ ಮುಂದೆ ಹರಿಯುವುದು. ಇಲ್ಲಿಂದ ಉತ್ಪತ್ತಿಯಾಗುವ ವಿದ್ಯುಚ್ಛಕ್ತಿ ದಕ್ಷಿಣ ದೇಶಕ್ಕೆ ಬೆಳಕು ನೀಉವುದಲ್ಲದೆ ಹಲವು ಕೈಗಾರಿಕೆಗಳಿಗೆ ಸಹಾಯ ಮಾಡುತ್ತದೆ.

ಕಾವೇರಿ ತೀರದ ಚರಿತ್ರೆ ಎರಡು ಸಾವಿರ ವರ್ಷಗಳಿಗೂ ಹಿಂದಕ್ಕೆ ಚಾಚಿದೆ. ಕಾವೇರಿ ಮುಖಜ ಭೂಮಿಯು ಚೋಳರ ಕಾಲದಲ್ಲಿ ಪ್ರಖ್ಯಾತವಾಗಿದ್ದಿತು. ರೋಮ್, ಮಲಯ ಇವುಗಳ ಜೊತೆಯಲ್ಲಿ ಚೋಳು ವಾಣಿಜ್ಯ ವ್ಯವಹಾರ ನಡೆಸುತ್ತಿದ್ದಾಗ ಹಡಗುಗಳು ಕಾವೇರಿಯ ಮೂಲಕ ದೇಶದೊಳ್ಳಕ್ಕೆ ಬರುತ್ತಿದ್ದವಂತೆ. ಪೂಂಬುಣರ್, ಕಾರೈಕಾಲ್ ಎನ್ನುವ ರೇವುಪಟ್ಟಣಗಳು ಪ್ರಖ್ಯಾತವಾಗಿದ್ದವು.

ಕಾವೇರಿ ಕನ್ನಡನಾಡಿನ ದಕ್ಷಿಣದ ಸೀಮಾರೇಖೆ, ನೃಪತುಂಗ ಕಾವೇರಿಯಿಂದ ಗೋದಾವರಿಯವರೆಗಿನ ವಿಸ್ತಾರ ಪ್ರದೇಶ ಕನ್ನಡನಾಡು ಎಂದು ಗಡಿ ನಿರ್ದೇಶನ ಮಾಡಿದ್ದಾನೆ. ಕಾವೇರಿ ಗೋದೆಯರು ಮೈದೊಳೆವ ನಲುನಾಡು ನಮ್ಮ ಕರ್ನಾಟಕ. ಉದಾರತೆಯೇ ಮೂರ್ತಿವೆತ್ತಂತೆ ಮೆರೆವ ಕಾವೇರಿ ಮಾತೆ ನಮ್ಮನ್ನು ಅನವರತವೂ ಅನುಗ್ರಹಿಸಲಿ !