ಹೃದಯಾಂತರಾಳದಲಿ ಹುದುಗಿ ಹೊಮ್ಮುವ ನೋವ
ಬಡನುಡಿಯಲೆಂತಡಕಿ ತೋರಬಹುದು ?
ಆಂತರಿಕ ಶ್ರೀಮಂತದನುಭವದ ಸಾರವನು
ಸಾಂತ ಭಾಷೆಯೊಳೆಂತು ಹಿಡಿಯಬಹುದು ?

ಅಂತರಂಗದನಂತ ಧೀಮಂತಲೋಕದಲಿ
ಜಗದ ಶ್ರೀಮಂತಿಕೆಯ ಸವಿಯಬಹುದು.
ತೊದಲು ನುಡಿವಣುಗನೊಲು ಕವಿಜೀವ ನೋಯುತ್ತ
ದಿನದಿನವು ತಪಿಸುತ್ತ ಕೊರಗುತಿಹುದು.

ಹೇಗೋ ಏನೋ ಎಂತೊ ಒಳದನಿಯ ಹೊಮ್ಮಿಸುವ
ಕಾವ್ಯಕೃಪೆಗೆನ್ನೆದೆಯು ಮಣಿಯುತಿಹುದು,
ಇನಿತಾದರೂ ಇಂಥ ಶಕ್ತಿಯನು ವ್ಯಕ್ತಿಯಲಿ
ಕೃಪೆಗೈದ ಶಕ್ತಿಗಿದು ನಮಿಸುತಿಹುದು.