೧೩

ನಾವಿಲ್ಲಿ, ಸ್ವಲ್ಪ ನಿಂತು, ಭಾರತ ಯುದ್ಧದ ಧರ್ಮಾಧರ್ಮಗಳನ್ನು ನಿಷ್ಪಕ್ಷಪಾತವಾಗಿ ಮಿಜರ್ಶೆ ಮಾಡಬಹುದು. ಸಾಮಾನ್ಯವಾಗಿ, ಪಾಂಡವರು ಮಾಡಿದ್ದೆಲ್ಲವೂ ಧರ್ಮ, ಕೌರವರು ಮಾಡಿದ್ದೆಲ್ಲವೂ ಅಧರ್ಮ ಎಂಬ ಅಭಿಪ್ರಾಯ ಜನರ ತಲೆಯಲ್ಲಿ ತುಂಬಿಕೊಂಡಿದೆ. ಇದು ಎಷ್ಟರಮಟ್ಟಿಗೆ ನಿಜ? ಸಮಸ್ತ ಮಹಾಭಾರತವನ್ನು ಎರಡು ಭಾಗವಾಗಿ ವಿಭಾಗಿಸಬಹುದು. ಮೊದಲನೆಯ ಭಾಗ ಉದ್ಯೋಗಪರ್ವದ ಕೊನೆಯಲ್ಲಿ ಕೊನೆಗಾಣುತ್ತದೆ. ಎರಡನೆಯದು ಭೀಷ್ಮಪರ್ವದಿಂದ ಮೊದಲಾಗುತ್ತದೆ. ಪರುಟವಣೆಗೆ ಕೈಹಾಕದೆ ವಿಹಂಗಮದೃಷ್ಟಿಯಿಂದ ನೋಡಿ ಹೇಳುವುದಾದರೆ ಪ್ರಥಮ ಭಾಗದಲ್ಲಿ ಕೌರವ ಪಕ್ಷದಲ್ಲಿ ಅಧರ್ಮವಿದೆಯೆಂದು ಹೇಳಿಬಿಡಬಹುದು. ಅಲ್ಲಿಯೂ ಕೂಡ ಕಠಿನ ವಿಮರ್ಶೆಗೆ ಕೈಯಿಟ್ಟರೆ, ಈಗ ಸಾಧಾರಣವಾಗಿ ಅಧರ್ಮಗಳೆಂದು ಜನರು ಪರಿಗಣಿಸಿರುವ ಕೌರವನ ಕಾರ್ಯಗಳನ್ನು ಧರ್ಮ ಕಾರ್ಯಗಳೆಂದು ಸಾಧಿಸಲಾಗದಿದ್ದರೂ ಅಧರ್ಮ ಕಾರ್ಯಗಳಲ್ಲವೆಂದಾದರೂ ಪ್ರತಿಪಾದಿಸಬಹುದು. ಅಥವಾ ಪಾಂಡವರಷ್ಟೇ ಕೌರವರು ಅಧರ್ಮೀಗಳೆಂದಾದರೂ ಪ್ರತಿಪಾದಿಸಬಹುದು. ದ್ವಿತೀಯ ಭಾಗದಲ್ಲಿ, ಪಾಂಡವರು “ಕೈತವದ ಶಿಕ್ಷಾಗುರು “ವಿನ ಸಹಾಯ ಪಡೆದು ಪ್ರತಿಭಟಿಸಿ ನಿಂತಮೇಲೆ, “ರಾಜನೀತಿ” “ಸಮರನೀತಿ” ಎಂಬ ಹೆಸರುಗಳನ್ನು ಇಟ್ಟುಕೊಂಡು ಅನೇಕ ಅಯೋಗ್ಯವಾದ ಅಧರ್ಮಗಳನ್ನು ಆಚರಿಸಿಬಿಟ್ಟಿದ್ದಾರೆ. ಧರ್ಮಸಂಸ್ಥಾಪಕ ಧರ್ಮಮೂರ್ತಿ ಶ್ರೀಕೃಷ್ಣನ ನೇತೃತ್ವ ಮಂತ್ರಿಗಳಲ್ಲಿ ಪಾಂಡವರು ಕ್ಷತ್ರಿಯರಿಗೆ ಅಯೋಗ್ಯವಾದ ಅನೇಕ ಅಧರ್ಮಗಳನ್ನು ಮಾಡಿ ಕೌರವರನ್ನು ನಾಶಪಡಿಸಿದರು. ದ್ವಿತೀಯ ಭಾಗದಲ್ಲಿ ಕೌರವನ ಪಕ್ಷದಲ್ಲಿ ವೀರರಿಗೆ ಸಹಜವಾದ ಧರ್ಮಗಳು ನಲಿದಾಡುವುದನ್ನು ನಾವೆಲ್ಲರೂ ನೋಡಬಹುದು. ಕೌರವ ಪಕ್ಷದಲ್ಲಿ ದುರ್ಯೋಧನನ್ನು ಒಳಕೊಂಡು ಒಬ್ಬೊಬ್ಬ ವೀರನೂ ನಮ್ಮೆಲ್ಲರ ಪ್ರಶಂಸೆಗೆ ಪಾತ್ರನಾಗುತ್ತಾನೆ. ಸ್ವಲ್ಪ ಅಧರ್ಮವನ್ನು ಕೈಕೊಂಡಿದ್ದರೂ ವಿಜಯಿಗಳಾಗಬಹುದಾಗಿದ್ದ ವಿಷಮ ಸಮಯಗಳಲ್ಲಿಯೂ ಕೂಡ ಕೌರವನ ವೀರರು ಅಧರ್ಮದಲ್ಲಿ ಕಾಲಿಟ್ಟಿಲ್ಲ. ಅಷ್ಟೇ ಅಲ್ಲ. ಪ್ರತಿಪಕ್ಷದವರಿಗೆ ಸಹಾಯವನ್ನೂ ಮಾಡಿಬಿಟ್ಟಿದ್ದಾರೆ! ಆದರೆ ಧರ್ಮರಾಯನ ಕಡೆಯವರು ಮುದುಕನಾದ ಭೀಷ್ಮನನ್ನು ಎಂತಹ ಮಹಾಧರ್ಮದಿಂದ ಗೆದ್ದರು? ಗರುಡಿಯಾಚಾರ್ಯ ದ್ರೋಣನನ್ನು ಹೇಗೆ ಸಂಹರಿಸಿದರು? ಸ್ನೇಹಮೂರ್ತಿ ಕಲಿಕರ್ಣನನ್ನು ಎನಿತು ಸುಲಿದು ಕೊಂದರು? ಕುರುಕುಲ ಸಾರ್ವಭೌಮನನ್ನು ಎಷ್ಟು ವಿಶಾಲಹೃದಯದಿಂದ ಸಂಹರಿಸಿದರು? ಇದನ್ನೆಲ್ಲ ಕುರಿತು ಅಲೋಚಿಸಿದರೆ ಪಾಂಡವರ ಧರ್ಮವು ಬರಿಯ ಬಿಸಿಲ್ಗುದುರೆ ಎಂದು ಎಂಥವನಿಗೂ ವೇದ್ಯವಾಗದೆ ಇರದು! “*

ಧರ್ಮಸಮರದಲ್ಲಿ ವೀರವರನೊಬ್ಬನು ಪ್ರತಿವೀರನನ್ನು ಕುರಿತು “ಸೈರಿಸು. ಇನ್ನರೆಗಳಿಗೆಯಲಿ ರಥವೆತ್ತಿ ನಿನಗಾನಳವಿಗೊಡುವೆನು” ಎಂದು ಹೇಳಿ ಬಿಲ್ಲನ್ನು ಕೆಳಗಿಳಿಸಿ ತೇರಿಳಿದು ರಥದ ಗಾಲಿಗಳನ್ನು ಕಷ್ಟಪಟ್ಟು ಎತ್ತುತ್ತಿರಲು “ಎಸೆ, ಮರುಳೆ ಗಾಂಡೀವಿ! ಆಪತ್ತಸಗಿದಾಗಲೆ ಹಗೆಯ ಗೆಲುವುದು ವಸುಮತೀಶರ ನೀತಿ” ಎಂದು ಸಾರಥಿ ರಥಿಗೆ ಉಪದೇಶ ಮಾಡುತ್ತಿರುವುದನ್ನು ಕೇಳಿದರೆ ಎಂತಹವನಿಗೂ ಎದೆ ಕುದಿಯದಿರದು; ಬಗೆ ಮರುಗದಿರದು. ಅದನ್ನಾದರೂ ಎಲ್ಲರೂ ಕೇಳುವಂತೆ ಗಟ್ಟಿಯಾಗಿ ಹೇಳುವುದಿಲ್ಲ; ಕಳ್ಳನಂತೆ “ದನುಜರಿಪು ಚಮ್ಮಟಿಕೆಯಲಿ ಫಲುಗುಣನ ತಿವಿದನು, ನೋಡು ರಾಧಾತನಯನಿರವನು ಬೇಗಮಾಡೆಂದುರ್ಜುನನ ಜರೆದ!” ದನುಜರಿಪುವಿನ ಅಭಿನಯ ನಮ್ಮ ಕಣ್ಣಿಗೆ ಕಟ್ಟಿದಂತಿದೆ; ಆತನ ಪಿಸುಮಾತುಗಳನ್ನು ನಾವೂ ಕೇಳುತ್ತೇವೆ. ಆದರೆ ಧೂರ್ತ ಮುರಾರಿಯ ಮಾತಿಗೆ ಅರ್ಜುನನು ತೆಕ್ಕನೆ ಮರುಳಾಗಲಿಲ್ಲ. ಕರ್ಣನ ಮೇಲೆ ಅವನಿಗೇನೋ ಒಂದು ಅಕ್ಕರೆಯುಂಟಾಯಿತು. “ಕಣ್ಣರಿಯದೊಡಂ ಕರುಳರಿಯದೆ?” “ಅಹಿತನೊಳುಕ್ಕಿದನು ರಾಗದಲಿ” “ಸಿಕ್ಕಿದನು ಕರುಣಾ ಲತಾಂಗಿಯ ತೆಕ್ಕೆಯಲಿ” “ತೇರಿನಲಿ ಚಾಚಿದನು ಮೆಲ್ಲನೆ ಭಾರಿ ಧನುವನು.” ಅರ್ಜುನನ ಆ ಅವಸ್ಥೆಯನ್ನು ಕಂಡು ಕುಹಕಿಯಾದ ಮುರಾರಿ “ವಿಪರೀತವೇನೆಲೆ ಪಾರ್ಥ?” ಎಂದು ಹೂಂಕರಿಸಿದನು. ಪಾಪ! ಆತನಿಗೆ ಇನ್ನೆಲ್ಲಿ ಮತ್ತೊಂದು ಭಗವದ್ಗೀತೆಯನ್ನು ಊದುವ ಪ್ರಸಂಗ ಒದಗುವುದೊ ಎಂದು ಭಯವಾಗಿರಬಹುದು! ಪಾರ್ಥನಿಗೆ ಕರ್ಣನ ಮೇಲೆ ಮಮತೆ ಹುಟ್ಟಿ ಎದೆ ಕರಗಿ “ಕರ್ಣನಾರು?” ಎಂದು ಮರಳಿ ಮರಳಿ ಶೋಕವಿಹ್ವಲನಾಗಿ ಕೇಳುತ್ತಾನೆ. ಆ ಮಾತುಗಳ ಕಣ್ಣೀರಿನಂತೆ ಹರಿಯುತ್ತವೆ:

ದೇವ, ಹಗೆಯಾಗಿರನು ಕರ್ಣನದಾವ ಹದನೆಂದರಿಯೆ; ಮನದಲಿ
ನೋವು ಮಿಗುತಿದೆ; ಕೈಗಳೇಳವು ತುಡುಕುವರೆ ಧನುವ.
ಜೀವವಾತನ ಮೇಲೆ ಕರಗುವುದಾವ ಸುಖನೋ? ಶತ್ರುವೆಂಬೀ
ಭಾವನೆಯ ಬಗೆ ಬೀಳುಕೊಂಡುದು. ಕರ್ಣನಾರೆಂದ!

ಈತನೀ ಭವನದಲ್ಲಿಯೊಡವಂದಾತನೋ? ಮೇಣ್ ಪೋದ ಜನ್ಮದ
ಲೀತನೊಡವಂದಾತನೋ ಮೇಣೆನ್ನ ಸಂದೇಹ!
ಮಾತಿನಲಿ ಮನದಲ್ಲಿ ಗುಣದಲಿ ನೀತಿಯಲಿ ಸತ್ವಾತಿಶಯದಲಿ
ಸೂತಕುಲದವನಲ್ಲ! ಕರ್ಣನದಾರು? ಹೇಳೆಂದ… ..

ಭೇದವನು ಕೆಡೆಯೊತ್ತಿ, ರೋಷವಿಷಾದ ತಲೆಯೊತ್ತುವುದು, ರೋಷವಿ
ಷಾದಶಿಖಿಯನು ನಂದಿಸುವುವೀ ನಯನವಾರಿಗಳು!
ಕೈದುವಲ್ಲವು! ಕೈಗಳೇ ಮುನ್ನಾದಿಯಲಿ ಹಿಂಗಿದುವು! ಮನ ಲೇ
ಸಾದುದೆಂದಾನರಿಯೆನಕಟಾ ಕರ್ಣನಾರೆಂದ!… ..

ದೂರುವವರಾವಲ್ಲ: ಕರುಣವ ತೋರು. ಬಿನ್ನಹ ಮಾಡಿದೆನು. ಹಗೆ
ಏರದಿವನಲಿ! ತೋರುವುದು ಸೋದರದ ಸಂಬಂಧ!
ಅರೆನೀತನ ಕೊಲೆಗೆ! ಹೃದಯವ ಸೂರೆಗೊಂಡನು ಕರ್ಣನಕಟಾ!
ತೋರಿ ನುಡಿಯಲು ಕೃಷ್ಣ ಕರುಣಿಸು ಕರ್ಣನಾರೆಂದ.

ಧರೆಯ ಬಿಟ್ಟೆವು ಕುರುಪತಿಗೆ! ನಾವರುವರೊಡಹುಟ್ಟಿದರು ವಿಪಿನಾಂ
ತರದೊಳಗೆ ಭಜಿಸುವೆವು ನಿಮ್ಮನು ಭಾವಶುದ್ಧಿಯಲಿ!
ತೆರಳುವೀ ಸಿರಗೋಸುಗವು ಸೋದರನ ಕೊಲವೆನೆ, ಕೃಷ್ಣ? ಕರುಣಿಸು
ಕರುಣಿಸಕಟಾ ಕೃಷ್ಣ! ಹೇಳೈ ಕರ್ಣನಾರೆಂದ!

“ಬಳಿಕ ಪಾರ್ಥವ ಕರುಣರಸಧಾರೆಗಳ ವಾಗ್ವಿಸ್ತರಕೆ ಮನದಲಿ ಮರುಗಿದನು ಮುರವೈರಿ ನಸುನಗುತ! ಕರಳಿದನು ಮಾತಿನಲಿ, ‘ಸುಡು ಬಾಹಿರನಲಾ ನೀನ್! ನಿನ್ನ ವಂಶಕೆ ಸರಿಯೆ ಸೂತಜನ್?’ ಎಂದು ಮುರರಿಪು ಜರೆದನರ್ಜುನನ!” ಅಂತೂ ಸಾರಥಿಗೂ ರಥಿಗೂ ಒಂದು ಪುಟ್ಟ ವಾಗ್ಯುದ್ಧ ನಡೆಯುತ್ತದೆ. ಎಷ್ಟು ಹೇಳಿದರೂ ಕೃಷ್ಣನು ಗುಟ್ಟು ಬಿಡದೆ. “ತೊಲಗಿಸು ಸೂತಜನ ಶಿರವ” ಎಂದೇ ಬೆಸಸುತ್ತಾನೆ. ಕಡೆಗೆ ಅರ್ಜುನನು ಸಿಟ್ಟುಗೊಂಡು,

ಅಕಟ, ಇಷ್ಕರುಣಿಯೆ! ವೃಥಾ ಪಾತಕವದೇಕೈ ನಿನಗೆ? ಜಯಕಾ
ಮುಕರು ನಾವ್ ಕೊಲ್ಲದೊಡೆ ನಿಮಗೇಕೀಸು ನಿರ್ಬಂಧ?
ಪ್ರಕಟ ಕುರುವಂಶದಲಿ ಯದುರಾಜಕದೊಳಗೆ ಹಗೆಯಿಲ್ಲಲೇ! ಮತಿ
ವಿಕಳನಾದೆನು ಕೃಷ್ಣ; ಕರ್ಣನ ಕೊಲುವನಲ್ಲೆಂದ!

ಬಿಸುಟು ಹೋದನು ರಥವ ಸಾರಥಿ! ವಸುಧೆಯೊಳು ತೇರದ್ದಿ ಕೆಡೆದುದು!
ನಿಶಿತ ಮಾರ್ಗಣವಿಲ್ಲ ಕೈಯಲಿ! ದಿವ್ಯಧನುವಿಲ್ಲ!
ಎಸೆಯಲೆಂತೇಳುವುದು ಕೈ? ನೀ ಬೆಸಸುವೊಡೆ ಮನವೆಂತು ಬಂದುದು?
ಬಸುರ ಶಿಖಿ ಬಲುಹಾಯ್ತು! ಕರ್ಣನ ಕೊಲುವನಲ್ಲೆಂದ!

ಗುರುವನೆಸುವೊಡೆ, ಮೇಣು ಭೀಷ್ಮರ ಸರಳುಮಂಚಕೆ ಚಾಚುವೊಡೆ, ಧಿ
ಕ್ಕರಿಸಿದನೆ? ಕುರುಪತಿಯ ಶಕುನಿಯ ಶಲ್ಯ ಸೈಂಧವರ
ಕೆರಳಿಚಲು ತೇರೈಸಿದನೆ? ಹಾ! ಮರುಗಿದೆನು ಕರ್ಣನಲಿ! ಕಲಿತನ
ಕರಗಿತೇನೆಂದರಿಯೆ! ಕರ್ಣನು ಕೊಲುವನಲ್ಲೆಂದ!

ಕೃಷ್ಣನು ಪಾರ್ಥನನ್ನು ಹೀಯಾಳಿಸಿ, ಕರ್ಣನ ಬೆಂಬಲದಿಂದ ಕೌರವನು ಮಾಡಿದ ಅನ್ಯಾಯಗಳನ್ನೆಲ್ಲಾ ಹೇಳಿ, ಅಭಿಮನ್ಯುವಿನ ಮರಣದ ಕತೆಯನ್ನು ವಿಸ್ತರಿಸಿ, ಭೀಮನ ಪರಾಜಯವನ್ನು ಬಣ್ಣಿಸಿ, ಧರ್ಮಜನ ಅಪಜಯದ ಗಾಯಗಳನ್ನು ಚಿತ್ರಿಸಿ, “ನೀತಿಯ ನೆನೆಯದಿರು! ನೀನೆಲ್ಲಿಯವನು, ಇವ ವೈರಿ ಕರ್ಣನದೆಲ್ಲಿಯವನು? ಎಸೆ ಮರುಳೆ.” ಎಂದು ಉಪದೇಶ ಮಾಡಿ,

ಬೀಸಿದನು ನಿಜಮಾಯೆಯನು, ಡೊಳ್ಳಾಸದಲಿ ಹರಹಿದನು ತಮವನು,
ರೋಷವನು ಬಿತ್ತಿದನು ಮನದಲಿ, ನರನ ಕಲಿಮಾಡಿ.

ಬಳಿಕ ಧನಂಜಯನು

ಐಸೆ! ಬಳಿಕಿನ್ನೇನಖಿಲ ಗುಣದೋಷ ನಿನ್ನದು, ಪುಣ್ಯಪಾಪದ
ವಾಸಿ ಎನಗೇಕೆನುತ ಕೊಂಡನು ಧನುವನಾ ಪಾರ್ಥ!
ಹಿಡಿ ಧನುವನನುವಾಗು! ಸಾಕಿನ್ನೆಡಬಲನ ಹಾರದಿರೆನುತ ಕೈ
ಗಡಿಯಲೆಚ್ಚನು ನೂರು ಶರದಲಿ ಸೂತನಂದನನ!

ಆದರೆ ಕರ್ಣನು ಕಲಿಯಲ್ಲವೇನು?

ತೊಡಗಿತೇ ಕಕ್ಕುಲೆತೆ ಮನದಲಿ? ಫಡ! ಎನುತ ನೂರಂಬನೆಡೆಯಲಿ
ಕಡಿದು ಬಿಸುಟನು ಸೆಳೆದ ಕಿಗ್ಗಟ್ಟಿನ ಕಠಾರಿಯಲಿ;

ಅರ್ಜುನನು ಕರೆಯುತ್ತಿದ್ದ ಶರವರ್ಷವನ್ನು ಕಠಾರಿಯ ಕೈಚಳಕದಿಂದಲೆ ಪರಿಹರಿಸಿಕೊಳ್ಳುತ್ತ

ರಥವ ಸಂವರಿಸಿದನು. ಬಳಕತಿರಥಭಯಂಕರನೇರಿದನು ನಿಜ
ರಥವನತಿ ಹರುಷದಲಿ! ತೊಳೆದನು ಚರಣಕರತಳವ!

ಮರಳಿ ಭೈರವ ಸಮರ ಪ್ರಾರಂಭವಾಯಿತು. ವಂದಿಗಳು ಕರ್ಣನನ್ನು ಹೊಗಳಿದರು:

ಅಳುಕಿದನೆ ರಥ ಮುಗ್ಗಿದೊಡೆ? ಕಳವಳಸಿದನೆ ಶಲ್ಯಾಪಸರಣಕೆ?
ಕೆಲಬಲನ ಹಾರಿದನೆ ನರನವಗಡಿಸಿ ಕಾದಿದೊಡೆ?
ಬಲಿಮಥನ ಮಝ ಭಾಪು! ಪಾಂಡವಬಲದಿಶಾಪಟರಾಯ ಮದನ
ಪ್ರಳಯಹರ ಭಾಪೆಂದು ಹೊಗಳಿತು ಭಟ್ಟಸಂದೋಹ!

ಇಲ್ಲಿಯವರೆಗೆ ಕರ್ಣಾರ್ಜುನರ ಕಾಳಗವನ್ನು ವಣಿಸಿದ ಸಂಜಯನು ಧೃತರಾಷ್ಟ್ರನನ್ನು ಕುರಿತು

ಸಾಲದೇ ಕಥೆಯಿನ್ನು? ಮೇಲಣ ಕಾಳಗದ ಮಾತುಗಳನಾಲಿಸಿ
ಕೇಳಿ ಜೀವನ ಹಿಡಿಯಲಾಪೈ, ತಂದೆ, ಧೃತರಾಷ್ಟ್ರ?
ಹೇಳುವೊಡೆ, ಕರ್ಣವ್ಯಥೆಯ ನೀನಾಲಿಸುವೊಡೇನರಿದು! ನುಡಿಗಳ
ಕಾಳಕೂಟವ ಬಡಿಸುವೆನು ಕಿವಿಯಾರ ಕೇಳೆಂದ!

ದ್ವಾಪರಯುಗದ ಮಹಾವ್ಯಕ್ತಿಯೊಬ್ಬನ ದುರ್ವಿನಾಶ ಯಾರನ್ನು ತಾನೆ ಮರುಗಿಸದು? ಯುದ್ಧ ಭಯಂಕರವಾಯಿತು. ಕರ್ಣನ ಕೈ ಹಿಂದಾಯಿತು. ಕುರುಸೈನ್ಯ “ಧೂಮಚುಂಬಿತ ಚಿತ್ರದಂತೆ” ಇದ್ದುದು. ತನ್ನ ಸೋಲಿನ ಸುಳಿವನ್ನು ಅರಿತ ಕರ್ಣನ “ಚಿತ್ರದಲಿ ಕರುಣಾರಸದ ಕಾಲಾಟವಾಯ್ತು!” ತನ್ನ ಅಪಜಯಕ್ಕಾಗಿ ಅವನು ಮರುಗಲಿಲ್ಲ; ಅರಿಯ ಗೆಲವಿಗಾಗಿ ಶೋಕಿಸಲಿಲ್ಲ. ತನ್ನ ಮಿತ್ರಸ್ವಾಮಿಯ ಕೇಡಿಗಾಗಿ ಮಮ್ಮಲ ಮರುಗಿದನು.

ದ್ರೋಣಭೀಷ್ಮರ ನೆಚ್ಚಿದರೆ ಮುಂಗಾಣಿಕೆಯಲೇ ಮಡಿದರೆನ್ನಯ
ಗೋಣ ಕೊಯ್ದನು ಕೃಷ್ಣ ಮುನ್ನಿನ ಕುಲವನೆಚ್ಚರಿಸಿ!
ಪ್ರಾಣ ಪಾಂಡವರೆಂಬ ನುಡಿಯನು ಜಾಣಿನಲಿ ಹರಿ ಬಲಿದನೊಡೆಯಗೆ
ಕಾಣೆನಾಪ್ತರನೆಂದು ಮಮ್ಮಲ ಮರುಗಿದನು ಕರ್ಣ!… ..

ಮೊದಲಲಾತ್ಮಜರಳಿವನ್ ಒಡಹುಟ್ಟಿದರ ಮರಿಯಲಿ ಮರೆದನ್ ಒಡಹು
ಟ್ಟಿದರು ನೂರ್ವರು ಮಡಿಯೆ ಮರೆದನು ಎನ್ನ ಸುಳಿವಿನಲಿ;
ಕದನವೆನ್ನಯ ಸುಳಿವನೊಳಕೊಂಡುದು; ಸುಯೋಧನ ನೃಪತಿಗೆನ್ನಾ
ವುದನು ಕಾಣೆನು! ಶಿವಾಶಿವಾ! ಎಂದೊರಲಿದನು ಕರ್ಣ!

ಸಲಹಿದೊಡೆಯನ ಜೋಳವಾಳಿಗೆ ತಲೆಯ ಮಾರುವುದೊಂದು ಪುಣ್ಯದ
ಬೆಳಸು, ಮರಣದ ಹೊತ್ತು ಕೃಷ್ಣನ ಕಾಬ ಸುಕೃತ ಫಲ,
ಇಳೆಯೊಳಿಂದೆನಗಲ್ಲದಾರಿಗೆ ಫಲಿಸುವುದು. ತಾ ಧನ್ಯನೆನುತವೆ
ಹಳಚದಸುರಾಂತಕನನೀಕ್ಷಿಸುತಿರ್ದನಾ ಕರ್ಣ!

ಇತ್ತ ಕರ್ಣನು ಧ್ಯಾನಾವಸ್ಥೆಯಲ್ಲಿರಲು ಅತ್ತ ಕೃಷ್ಣನು ಧನಂಜಯನನ್ನು ಕುರಿತು

ಸರಳ ತೊಡು ಬೇಗದಲಿ, ಕರ್ಣನ ಶಿರವನಿಳುಹೈ! ಹರದಿರು; ಹೇ
ವರಿಸದಿರು! ತೆಗೆ ದಿವ್ಯಶರವನು; ಬೇಗ ಮಾಡು!……
ಕರಗುವರೆ, ನೀ ಸಾರು! ಭೀಮನ ಕರೆದು ಕೊಲಿಸುವೆನೀತನನು! ನಿ
ಷ್ಠುರನಲಾ ಎನ್ನದಿರು, ತೆಗೆ! ನಿನ್ನಿಂದ ತನ್ನಿಂದ
ಹರಿಯದಿರೆ ಹಗೆ, ನಮ್ಮ ಚಕ್ರದಲರಿಭಟನ ಮುರಿವೆನು! ಯುಧಿಷ್ಠಿರ
ನರಸುತನವನು ನಿಲಿಸು ತೋರುವೆನೆಂದನಸುರಾರಿ!

“ಈಸು ಕರ್ಣನ ಮೇಲೆ ಬಹಳ ದ್ವೇಷವೇನೋ? ಎನುತ ಮನದಲಿ ಗಾಸಿಯಾದನು ಪಾರ್ಥ ಕರುಣಕ್ರೋಧದುಪಟಳಕೆ!” ಅಂತೂ ಸ್ವಬುದ್ಧಿಯನ್ನು ಕೃಷ್ಣಾರ್ಪಣಮಾಡಿ ಅರ್ಜುನನೆಚ್ಚನು. ನಿರಾಯುಧನಾಗಿದ್ದ ಕರ್ಣನ ಎದೆಯನ್ನು ಆ ಬಾಣ ಭೇದಿಸಿತು. ಆದರೆ ಅಮೃತ ಕಲಶ ಕರ್ಣಕುಂಡಲಗಳು ಸ್ವಾಧೀನದಲ್ಲಿ ಇರುವ ತನಕ ಕರ್ಣನ ಅಸು ತೊಲಗದು ಎಂಬ ಮರ್ಮವನ್ನರಿತ ಮುರಾರಿ ಮತ್ತಎ ಸುಲಿಗೆಗೆ ಕೈ ಹಾಕಿದನು. ವಿಪ್ರವೇಷ ತಾಳಿ ರಣರಂಗದಲ್ಲಿ ರಾಧೇಯನ ಹೊರೆಗೆ ಬಂದು ಬಿಕ್ಕೆ ಬೇಡಿದನು. ಬಿದಿಯೇ ಸುಲಿಗೆಗೆ ಹೊರಟ ಮೇಲೆ ತಡೆಯುವವರಾರು? ತ್ಯಾಗಮೂರ್ತಿಯಾದ ಕರ್ಣನು ಕುಂಡಲವನ್ನು ತೆಗೆದು, ಎದೆಯ ಅಮೃತಬಿಂದುಗಳನ್ನು “ಘರಿಘರಿಸಲು ಘರಿಲೆನಲು” ತೆಗೆದು ದಾರೆಯೆರೆದೇ ಬಿಟ್ಟನು.* ತರುವಾಯ ಅರ್ಜುನನು ಗಿರಿಜಾದತ್ತ ಅಂಜನ ಬಾಣವನ್ನು ಪ್ರಯೋಗಿಸಿ ಕೌರವ ಮಿತ್ರ ರಾಧೇಯನ ಶಿರವನ್ನು ತುಂಡು ಮಾಡಿದನು. “ಶಿವಶಿವಾ! ಎನುತಿರ್ದುದೈ ತ್ರೈಭುವನವು!” “ಪರಮಕರುಣಾ ಸಿಂಧು ಕರ್ಣಂಗಿರದೆ ನಿಜಮೂರ್ತಿಯನು ತೋರಿಸಿ, ಉರುತರ ಪ್ರೇಮದಲಿ ಮುಕ್ತಿಯ ಪದವ” ನೇಮಿಸಿದನಂತೆ!

ಅರರೆ ಭಾಪುರೆ ಕರ್ಣ! ವಝ ಭಾಪುರೆ ಭಾಟಾಗ್ರಣಿ! ನಿನ್ನ ಸರಿದೊರೆ
ಯೆರಡು ಯುಗದಲಿ ಕಾಣೆನೆಂದುಳಲಿದನು ಕಲಿ ಹನುಮ!

“ಕೌರವ ಕೆಟ್ಟನಕಟಕಟೆಂದು ಕಾಯವ ಬಿಟ್ಟು ಕರ್ಣಂಗಾರು ಸರಿಯೆನು ತಿರ್ದುದಮರಗಣ! “

ಬಲುವಿಡಿಯ ಬಿಲು ವಾಮದಲಿ, ಬೆರಳೊಳಗೆ ಸವಡಿಸಿ ತೆಗೆದು ತಿರುವಿನ
ಹಿಳಕು, ನಿಮಿರಿದ ತೋಳ ತೋರಿಕೆ ಬಲದ ಭಾಗದಲಿ!
ಬಲಿದ ಮಂಡಿಯ ಬಾಗಿದೊಡಲಿನ ಹೊಳೆವ ತನುಕಾಂತಿಯ, ಮಹೀಪತಿ
ತಿಲಕ, ಕೇಳೈ, ಕರ್ಣನೆಸೆದನು ರಥದ ಮಧ್ಯದಲಿ!

ಕಳಚಿ ದುರ್ಯೋಧನನ ಬೆಳುಗೊಡೆ ನೆಲಕೆ ಬೀಳ್ವಂದದಲಿ ಕೌರವ
ಕುಲದ ನಿಖಿಳೈಶ್ವರ್ಯವಿಳೆಗೊರ್ಗುಡಿಸಿ ಕೆಡೆದಂತೆ,
ಥಳಥಳಿಪ ನಗೆಮೊಗದ, ಬಿಗು ಹೆಕ್ಕಳದ ಹುಬ್ಬಿನ, ಬಿಟ್ಟ ಕಂಗಳ,
ಹೊಳೆವ ಹಲುಗಳ, ಕರ್ಣಶಿರ ಕೆಡೆದುದು ಧರಿತ್ರಿಯಲಿ!

ಕರ್ಣ ಹಾ! ಹಾ ಸೂತಸುತ! ಹಾ ಕರ್ಣ! ಹಾ ರಾಧಾತನಯ! ಹಾ
ಕರ್ಣ! ಹಾ ಎನ್ನಾನೆ! ಹಾ ಬಹಿರಂಗ ಜೀವನನೆ!
ನಿರ್ಣಯವು ಕುರುಬಲಕೆ ಹಾ! ಹಾ ಕರ್ಣ ಬಾರೈ, ತಂದೆ! ಎನುತವೆ
ನಿನ್ನ ಮಗ ರಥದಿಂದ ದೊಪ್ಪನೆ ಕೆಡೆದನವನಿಯಲಿ!

ಕರ್ಣನ ಸಾವಗೆ “ಕರಿತುರಗ ಕಂಬನಿ ಕರೆದುದೈ!” “ನರಗೆ ಸೈರಣೆಯಲ್ಲಿಯದು?” ಭೀಮ ನಕುಲ ಸಹದೇವ ದ್ರೌಪದಿಯರ ಚಿಂತೆ ದುರಂತವಾಯ್ತು! “ಒರಲಿತ್ತು ವಂದಿಗಳೆರಡು ಥಟ್ಟಿನಲಿ!” “ಅರ್ಜುನ ತಿರುಗಿದನು ಪಾಳಯಕೆ ದುಮ್ಮಾನದಲಿ ಹರಿಸಹಿತ!” “ಕೃಷ್ಣ ಕುದಿದನು ಕರ್ಣನಳಿವನು!” “ತೆತ್ತನೇ ಮಗನಸುವನಕಟಾ ಎನುತ ತತ್ತ ಚಿಂತಾರಾಗದಲಿ ಕಡಲತ್ತ ಹಾಯ್ದರು, ಬಿಸುಟನಂಬುಜಮಿತ್ರನಂಬರವ! “

ದ್ಯುಮಣಿ ಕರ್ಣದ್ಯುಮಣಿಯೊಡನಸ್ತಮಿಸೆ, ಕಮಲಿನ ಕೌರವನ ಮುಖ
ಕಮಲ ಬಾಡಿತು, ತಿಮಿರ ಹೆಚ್ಚಿತು ಶೋಕತಮದೊಡನೆ!
ಅಮಳ ಚಕ್ರಾಂಗಕ್ಕೆ ಭೂಪೋತ್ತಮನ ವಿಜಯಾಂಗನೆಗೆ ಅಗಲಿಕೆ
ಸಮನಿಸಿತು; ನೀ ಕೇಳು ಜನಮೇಜಯ ಮಹೀಪಾಲ!* ಲೌಕಿಕ ಮತ್ತ ಸಾಮಾಜಿಕ ನೀತಿದೃಷ್ಟಿಗೆ ಇದು ಅನಿವಾರ್ಯ ಮತ್ತು ಅಪರಿಹಾರ್ಯ.

* ಇಲ್ಲಿ ನಾವು ಬಲಿಚಕ್ರವರ್ತಿಯ ದಾನ ಪ್ರಕರಣವನ್ನು ನೆನೆಯಬಹುದು.