೧೦

ಮಾದ್ರೇಶನನ್ನು ಸಾರಥಿಯನ್ನಾಗಿ ಮಾಡಿಕೊಂಡು ಅತಿರಥ ಭಯಂಕರ ಭಾನುಸುತನು ಆಹವಕ್ಕೆ ಹೊರಹೊರಟನು. ಅಂದಿನ ಸಂಗರದಲ್ಲಿ ಜಯಮರಣಗಳಲ್ಲಿ ಯಾವುದಾದರೊಂದನ್ನು ಸಾಧಿಸಲೆಬೇಕೆಂದು ಆತನು ದೃಢನಿಶ್ವಯ ಮಾಡಿಕೊಂಡನು. ಸೇನಾಪತಿಯ ಇಕ್ಕೆಲದಲ್ಲಿಯೂ ರಣಕ್ರೀಡಾಸಕ್ತರಾದ ಸೈನಿಕರು ಬಹು ವಿಜೃಂಭಣೆಯಿಂದ ಹೊರಟರು.

ಇಕ್ಕೆಲದ ರಾವುತರ ತೇರಿನ ತೆಕ್ಕೆಗಳ ಗಜಘಟೆಯ ಕಾಲಾ
ಳಕ್ಕಜದ ನಿಸ್ಸಾಳದೊಳಗಿನ ಲಗ್ಗೆ ತಂಬಟದ,
ಉಕ್ಕಿ ಚಲಿಸಿದುದಬ್ಧಿಯೆನೆ ಸಾಲಿಕ್ಕಿ ನಡೆದುದು ಸೇನೆ, ರಾಯನ
ಉಕ್ಕಿನವಸರದಾನೆ ನಿಜಪಾಳೆಯವ ಬೀಳ್ಕೊಟ್ಟ!

ಅಷ್ಟರಲ್ಲಿ ಮುಂದೆ ಆ ದಿನ ಕರ್ಣನಿಗಾಗುವ ‘ಅಮಂಗಳ’ವನ್ನು ಸೂಚಿಸುವ ಕೆಲವು ಉತ್ಪಾತಗಳು ತೋರಿದುವು. ನರಿ ಒದರಿದುವು; ಮುಗ್ಗಿದುವು ಕುದುರೆ, ಆನೆ ಅತ್ತುವು. ಬಿರುಗಾಳಿ ಧೂಳಿಯನ್ನು ಕೆದರಿ ಬೀಸಿತು. ಮಹಾಸೈನ್ಯ ಆ ಅಮಂಗಳ ಸೂಚನೆಯನ್ನು ಕಂಡು ಬೆರಗಾಯಿತು. ಬಿದಿಯನ್ನು ಮೂದಲಿಸಿ ಕೆರಳಿಸಲು ಹೊರಟ ಕರ್ಣನು ಆ ಉತ್ಪಾತಗಳನ್ನು ತೃಣವೆಂದೆಣಿಸಿದನು. ಅಲ್ಲದೆ ಸೈನಿಕರನ್ನು ಹುರಿದುಂಬಿಸಲು ಅವರೆದೆಗಳಲ್ಲಿ ಕೆಚ್ಚಿನ ಕಿಚ್ಚನ್ನು ಹೊತ್ತಿಸಲು,

ರಣ ಮನೋರಾಗದಲಿ ದಳಸಂದಣಿಯ ನಿಲಿಸದನ್, ಅತಿರಥರ ಲಾ
ವಣಿಗಗೊಂಡನು; ಕರ್ಣ ಪರಿವಾರಕ್ಕೆ ಕೈಮುಗಿದು,

ವೀರಭಾಷಣ ಮಾಡಿದನು

ನೊಂದವರು ನಿಲಿ; ಸ್ವಾಮಿಕಾರ್ಯಕೆ ಹಿಂದೆಗೆದವರು ಮರಳಿ; ಮನೆಗಳ
ಮುಂದಣಾಸೆಯ ಹೇವ ಮಾರಿಗಳಿಗೆದೆ ಮಾನವಮಿ!
ನಿಂದಡೊಳ್ಳಿತು ನೃಪನ ದೆಸೆಯಲಿ; ಕಂದುಕಳೆಯುಳ್ಳವರು ಕಾಳೆಗ
ವಿಂದು ಬೀಳ್ಕೊಂಬುವುದು. ನಿಮಗೆಯು ಭೀತಿ ಬೇಡಂದ.

ಓಡಿ ವಾಚಿಸುವವರು ನಿಲಿ; ರಣಖೇಡರೀಗಳೆ ಹೊಗಿ; ಮನವ
ಲ್ಲಾಡಿ ಮರುಗುವರೇಳಿ! ಮರಣದಲಾವ ಫಲಸಿದ್ಧಿ?
ಕೂಡಗಲಕರು ನಿಲ್ಲಿ; ಇಹಪರಗೇಡಿಗಳು ಹೆರಸಾರಿ! ಗುಣದಲಿ
ಬೇಡಿಕೊಂಬೆನು, ಖಾತಿಗೊಳ್ಳೆನು! ಮರಳಿ! ಸಾಕೆಂದ.

ಸಂದ ಸುಭಟರು ಬನ್ನಿ! ಸ್ವರ್ಗದ ಬಂದಿಕಾರರು ಬನ್ನಿ! ಮನದಿಂ
ಮುಂದು ಹೆಜ್ಜೆಯ ತವಕಿಗರು ಬಹುದೆಮ್ಮ ಸಂಗಾತ!
ನೊಂದಡುಬ್ಬುವರಿತ್ತ ಬನ್ನಿ! ಪುರಂದರನ ಸಮಗದ್ದುಗೆಯ ಮನ
ಸಂದವರು ಹೋಗಿ ರಣವನೆಂದನು ಕರ್ಣ ಕೈಮುಗಿದು!.. …

ಕೇಳಿರೈ ಪರಿವಾರ, ಇಂದಿನ ಕಾಳೆಗವಲೇ ನಮಗೆ ಭೀಷ್ಮನ
ಕೋಲಗುರುವಿನ ಹರಿಬವನು ಮನವಾರೆ ಹೋಯ್ತೆನಲು,
ಸೋಲವೋ? ಕುರುಪತಿಯ ಭಾಗ್ಯದ ಕಾಲವೋ? ಹರಿ ಬಲ್ಲ! ಎನ್ನಯ
ತೊಳ ಬಲುಹನು ಹಗೆಗೆ ತೋರುವೆನೆಂದನಾ ಕರ್ಣ!

ಆವ ತೋರಿಸಲಾವನರ್ಜುನದೇವನದು ರಿಪುಬಲದೊಳಾತಂ
ಗೀವೆನೀ ಪದಕವನು ಖಡೆಯುವ ವಜ್ರಮಾಣಿಕದ!
ಆವನಾ ಫಲುಗುಣನ ತೇರಿನ ಠಾವದೇ ಎಂದವಗೆ ಇದೆ ಮು
ಕ್ತಾವಳಿಯಲಂಕಾರವೆಂದನು ಕರ್ಣ ನಿಜಬಲಕೆ…

ನರನ ಶರಹತಿಗೆನ್ನ ತನು ಜಜ್ಝರಿತವಾಗಲಿ, ಎನ್ನ ಕಣೆಯಲಿ
ಬಿರಿಯಲಾತನ ದೇಹ ಖಾಡಾಖಾಡಿ ಯುದ್ಧದಲಿ!
ಕರುಳು ಕರುಳಲಿ ತೊಡಕಿ, ನೊರೆ ನೆತ್ತರಲಿ ನೆತ್ತರುಗೂಡಿ, ಕಡಿಕಡಿ
ವೆರೆಸಿ ಮಿಗೆ ಪಲ್ಲಟಿಸಿ ಕಾದುವೆನಿಂದು ಹಗೆಯೊಡನೆ.

ಸರಳು ಸರಳಿಂಗೊಮ್ಮೆ ರೋಮಾಂಕುರದ ಗುಡಿಯಲಿ ರಕ್ತಜಲದಲಿ
ಕರುಳ ಹೂಮಾಲೆಯಲಿ ವೀರರಣಾಭೀಷೇಕವನು
ಧರಿಸಿದರೆ ಪ್ರತಿಗಾಯಗಾಯದ ಧುರಧುರಕೆ ಮೈಹಚ್ಚಿ ಮನದು
ಬ್ಬರದಲಿರಿದಾಡಿದರೆ ದಿಟ ಕೃತಕೃತ್ಯರಾವೆಂದ.

ಅವನ ಮುಂದೆಲೆ ತನ್ನ ಕೈಯಲಿ! ಅವನ ಕೈಯಲಿ ತನ್ನ ಮುಂದಲೆ!
ಅವನ ಗಾಯನ ತನ್ನದೇಹದ ಗಾಯ ಚುಂಬಿಸುತ
ಅವನ ಖಡುಗಕೆ ತನ್ನ ಮೈ, ತಾ ತಿವಿದ ಖಡುಗಕ್ಕವನ ಮೈ, ಲವ
ಲವಿಸಿದಡಿಮೇಲಾಗಿ ಹೊರಳ್ದಡೆ ಧನ್ಯ ತಾನೆಂದ !…

ಹಾಯ್ದ ಕರುಳಿನ ಮೆದುಳ ಜೋರಿನ ತೊಯ್ದ ರಕ್ತಾಂಬರದಲಾನಿರ
ಲೈದೆ ಕುರುಪತಿ ಬಂದು ಕಂಡಡೆ ಧನ್ಯತಾನೆಂದ !

ಸೈನಿಕರು ಮಿಂಚಿನ ಹೊಳೆಯಲ್ಲಿ ಮಿಂದರು. ಮೊಳಗಿದುವು ನಿಸ್ಸಾಳ ಕೋಟಿ. ಮಹಾಸೈನ್ಯ ದಾಳಿಟ್ಟಿತು ಕುರುಕ್ಷೇತ್ರ ಸಂಗಾಮರಂಗಕ್ಕೆ!

ಸಾರಥಿಯಾಗಿದ್ದ ಶಲ್ಯನು ಕರ್ಣನ ವೀರ ವಚನಗಳನ್ನು ಕೇಳಿ ಕರುಬಿದನು. ಹೀಯಾಳಿಸತೊಡಗಿದನು. “ಮಾವ, ಸಾರಥಿಯಾಗಿ ಕರ್ಣನ ನೀವು ಕೊಂಡಾಡಿದಡೆ ಫಲುಗುಣನಾವ ಪಾಡು?” ಎಂದು ಹೇಳಿದ ಕೌರವನ ಮಾತುಗಳನ್ನು ಲೆಕ್ಕಿಸದೆ ವೀರನನ್ನು ಬೀಳುಗಳೆಯತೊಡಗಿದನು. ರಿಪುಗಳನ್ನು ಹೊಗಳತೊಡಗಿದನು. ಮಹಾಕಾರ್ಯದಲ್ಲಿ ತೊಡಗುವಾತಗೆ ಉತ್ತೇಜನ ಕೊಡುವುದು ಸುಸಂಸ್ಕೃತರ ಕರ್ತವ್ಯ. ಅದಕ್ಕೆ ಬದಲಾಗಿ ಆತನನ್ನು ಅಲ್ಲಗಳೆದು, ಆತನ ಅಪಜಯ ಮೃತ್ಯುಗಳನ್ನು ಸಾರುವುದು ಕುಸಂಸ್ಕೃತರ ಕಾರ್ಯವಲ್ಲದೆ ಮತ್ತೇನು? ಧರ್ಮವೋ ಆಧರ್ಮವೋ, ಕೌರವಸ್ವಾಮಿ ಒಂದು ಕಾರ್ಯದಲ್ಲಿ ಕಾಲಿಟ್ಟಿರಲು ಸ್ವಾಮಿಗೆ ಮನಃಪೂರ್ವಕವಾಗಿ ನೆರವಾಗುವುದು ವೀರರ ಕೆಲಸ.

ಹೇಳುವುದಕವರಲ್ಲ.
ಕೇಳುವುದಕವರಲ್ಲ,
ಮಾಡಿ ಮಡಿವುದಕವರು!

ಅದನ್ನು ಬಿಟ್ಟು ಭೀಷ್ಮ, ಕೃಪ, ಆಶ್ವತ್ಥಾಮ, ಶಲ್ಯ ಇವರುಗಳು ಸದಾ ಅರಮನೆಯೆಂದಲ್ಲ, ಯುದ್ಧರಂಗವೆಂದಲ್ಲ, ಉದ್ಯಾನವೆಂದಲ್ಲ, ಆಸ್ಥಾನವೆಂದಲ್ಲ, ಎಲ್ಲೆಲ್ಲಿಯೂ ಕೌರವನಿಗೆ ಪುಕ್ಕಟೆಯಾಗಿ ಉಪದೇಶ ಮಾಡುತ್ತಿದ್ದರು: ಅದರಂತೆಯೆ ಕರ್ಣನನ್ನು ಜರೆದಾಡಿದರು.

ಕೇಳುತಿರ್ದುನು ಕರ್ಣನೀತನ ಬೀಳುವಚನವನಧಿಕ ರೋಷ
ಜ್ವಾಲೆ ಝಳಪಿಸಿ ಕಡಿದನೌಡನು; ತೂಗಿದನು ಶಿರವ !….

ಈಸು ನೀನರ್ಜುನನ ಪಕ್ಷಾವೇಶಿಯೇ ಶಿವಶಿವ ಮಹಾದೇ
ವೇಸುನಂಬಿಹನೋ ಸುಯೋಧನನೇನ ಮಾಡುವನೋ?
ಸೀಸವೇ ರವಿಕಾಂತವಾಗಿ ದಿನೇಶನನು ಕೆಣಕಿದವೊಲೀಗವ
ನೀಶನೀತನ ನಂಬಿ ಕೆಟ್ಟನು ಕೆಟ್ಟನಕಟೆಂದ….

ರೂಢಿಯೋಲೆಯ ಕಾರನ್ ಅರ್ಜುನನ್, ಆಡಿ ಪತೀಕರಿಸುವನು ನೀನ್, ಇದ
ನೋಡಿ ಸಂತಸಬಡುವರಿಬ್ಬರು ಕೃಪನು ಗುರುಸುತರು.
ಕೋಡಗದ ಮೊಗಸಿರಿಗೆ ಕಾವಲಿಯೋಡು ಕನ್ನಡಿಯಾಯ್ತು ಗಡ! ಕೃತ
ಗೇಡಿಗುಚಿತವನೇನ ಮಾಡುವೆನೆಂದನಾ ಕರ್ಣ!

ಹಗೆಯನೇ ಕೊಂಡಾಡಿ, ಸ್ವಾಮಿಗೆ ಬೆಗಡು ಬೆರಸಿ, ತದೀಯ ಸುಭಟರ
ನಗಡು ಮಾಡಿ, ನಿಜಾಪ್ತಬಲ ನಿಸ್ತೇಜರೆಂದೆನಿಸಿ,
ಹೊಗಳಿಕೆಗೆ ಗುರಿಯಾದರೈವರು ವಿಗಡರ್, ಅದರೊಳಗಿಬ್ಬರಳಿದರು,
ಹಗೆಗಳುದಿರಿ ಮೂವರೆಂದನು ಭಾನುಸುತ ಮುಳಿದು.

ಕಡೆಗೆ ಶಲ್ಯನು ಸಿಟ್ಟುಗೊಂಡು ವಾಘೆಯನ್ನು ಬಿಸುಟು ಸ್ಯಂದನವನುಳಿಯಲು ‘ಭಂಡ, ಫಡ ಹೋಗೆನುತ ಕಡುಗವ ಜಡಿದು ನುಡಿದನು ಭಾನುಸುತ ಮುಳಿದು!’

ಒಡೆದು ತಲೆಯನು ನಿನ್ನ ರಕುತವ ಕುಡಿಸುವೆನು ಕೂರಸಿಗೆ! ಪವನಜ
ನೊಡಲ ನೆತ್ತರು ತುಂಬುವೆನು ಪಾರ್ಥನ ಕಪಾಲದಲಿ!
ಮಿಡುಕಬಾರದಲೇ! ಸುಯೋಧನ ತೊಡಗಿದಗ್ಗದ ರಾಜಕಾರ್ಯವು
ಕೆಡುವುದೆಂದೇ ನಿನ್ನನುಳುಹಿದೆನೆಂದನಾ ಕರ್ಣ!

ತರುವಾಯ ಕೌರವ ಮಹೀಪಾಲನು ಕರ್ಣಶಲ್ಯರ ಕಿತ್ತಾಟದ ಗಲಭೆಯನ್ನು ಕೇಳಿ ಇಬ್ಬರನ್ನೂ ಸಂತೈಸಿ, ಶಲ್ಯನನ್ನು ಮರಳಿ ತೇರೆಸಗುವಂತೆ ಮಾಡಿದನು. ರವಿಸುತನು ತನ್ನ ಸ್ವಾಮಿಯ ಬಯಕೆಯಂತೆ, ಶಲ್ಯನ ಕೋಪವನ್ನು ಶಮನ ಮಾಡಲು ಅವನ ಕಾಲಿಗೆಬೀಳಬೇಕಾಯಿತು. ವೀರಕರ್ಣನು ನೂರು ಜನ ಶಲ್ಯರನ್ನು ಮಿರಿದ ಮಹಾತ್ಮನು. ಆತನು ಎಂದೆಂದಿಗೂ ನೀಚನ ಕಾಲಿಗೆ ಬೀಳುತ್ತಿರಲಿಲ್ಲ. ಆದರೆ ತನ್ನ ಮಿತ್ರ-ಸ್ವಾಮಿಗೆ ಮಂಗಳವಾಗುವುದಾದರೆ, ಏತಕ್ಕೆ ಹಾಗೆ ಮಾದಬಾರದೆಂದು ಬಗೆದು ಕುಸಂಸ್ಕೃತನ ಅಡಿಗೂ ಎರಗಿಬಿಟ್ಟನು. ಮರಳಿ ಸಮರಯಾತ್ರೆ ಮುಂದುವರಿಯಿತು.

ಕಡೆಹದಂಬುಧಿಯಂತೆ ವಾದ್ಯದ ಗಡಣ ಮೆರೆದುದು! ವಿಳಯ ಸಮಯದ
ಸಿಡಿಲವೊಲು ಸೂಳೈಸಿದವು ನಿಸ್ಸಾಳ ಕೋಟಿಗಳು!

ಆ ದಿನದ ರಣಲೀಲೆಯಲ್ಲಿ ವಾಯುಸುತನು ಕರ್ಣನಂದನನನ್ನು ಕೊಂದನು. ಕರ್ಣನು ಧರ್ಮರಾಯನನ್ನು ಜಯಸಿ “ಕೊಲುವಡವ್ವೆಗೆ ಕೊಟ್ಟ ಭಾಷೆಗೆ ಅಳುಕಿದೆನು; ನೀ ಹೋಗು!” ಎಂದು ಕೆಡೆನುಡಿದು ಕಳುಹಿಸಿಬಿಟ್ಟನು. ಭೀಮನಿಂದ ಕೌರವಾನಿಜರು ಮಡಿದರು. ಯುದ್ಧದ ಮಧ್ಯೆ ಕೌರವರಾಯನು ರಿಪುಗಳ ತೆಕ್ಕೆಯಲಿ ಸಿಕ್ಕಿದುದನ್ನು ಕಂಡು, ಕರ್ಣನು ಮೊಹರದ ನಡುವೆ ನುಗ್ಗಿ ಆತನನ್ನು ಬಿಡಿಸಿದನು. “ಭೂತನಾಥನ ಭಾಳನಯನೋದ್ಧೂತ ಧೂಮ ಧ್ವಜದ ಶಿಖಸಂಘಾತವಿದೆಯೆನೆ ಕೆದರಿದನು ಮಾರ್ಗಣ ಮಹೋದಧಿಯ!” ಕರ್ಣನು ಆ ದಿನ ತೋರಿದ ರಣಭಯಂಕರತೆಯನ್ನು ಕಂಡು ಸಾರಥಿಯಾಗಿದ್ದ ಶಲ್ಯನೂ ಕೂಡ “ಕರ್ಣ, ನಾವಿಂದರಿದೆವೈ, ದಿಟ, ನಿನ್ನನೋಲೆಯಕಾರ ನೆಂಬುದನು. ಇರಿತವಿದಕಾರಿದಿಹರು? ನಿನ್ನುರವಣೆಯನಾರಾನುವರು? ಮತ್ಸರವ ಬಿಟ್ಟೆನ್. ಪೂತು ರವಿಸುತ!” ಎಂದು ಕೊಂಡಾಡಿದನು.

೧೧

ಕುಮಾರವ್ಯಾಸ ನಿರ್ಮಿತ ದುರಂತ ಕರ್ಣನ ಜೀವನ ನಾಟಕದ ಕಡೆಯ ಅಂಕದ ಕೊನೆಯ ದೃಶ್ಯ ಹೃದಯವಿದ್ರಾವಕವಾಗಿದೆ; ರುದ್ರರಸಪರಿಪೂರ್ಣವಾಗಿದೆ. ಆ ದೃಶ್ಯದಲ್ಲಿ ಒಬ್ಬಳೆ ತಾಯಿಯ ಇಬ್ಬರು ಮಕ್ಕಳು ವಿಚಿತ್ರ ಘಟನಾ ಕ್ರಮದಲ್ಲಿ ಸಿಕ್ಕಿ, ಬೇರೆ ಬೇರೆ ಪಥಗಳಲ್ಲಿ ಸಂಚರಿಸಿ ಕಡೆಗೆ ರಣರಂಗದಲ್ಲಿ ವೈರಿಗಳಾಗಿ ಸಂಘಟ್ಟಿಸುವ ವಿಧಿವಿನೋದಕ್ರೂರಲೀಲೆಯನು ನೋಡುತ್ತೇವೆ. ಅಲ್ಲಿ ದ್ವಾಪರಯುಗದ ವೀರಾಗ್ರಣಿಗಳಿಬ್ಬರ ದರ್ಶನೀಯ ಭೀಷಣ ಸಮರ ಕೌಶಲವನ್ನು ಸಂದರ್ಶಿಸುತ್ತೇವೆ. ಧರ್ಮದ ಅಭ್ಯುತ್ಥಾನಕ್ಕಾಗಿಯೂ ಅಧರ್ಮದ ಸಂಹಾರಕ್ಕಾಗಿಯೂ ಭಗವಂತನ ‘ಅಧರ್ಮ’ ಮಾರ್ಗವಲಂಬಿಯಾದ ಅನಿರ್ವಚನೀಯ ರಹಸ್ಯವನ್ನು ಅಲ್ಲಿ ಇದಿರುಗೊಳ್ಳುತ್ತೇವೆ.

ಅರಸ ಕೇಳೈ, ಧೂರ್ಜಟಿಯ ಡಾವರದ ಡಮರಧ್ವನಿಯೊ? ವಿಲಯದ
ಬರಸಿಡಿಲ ಬೊಬ್ಬಾಟವೋ? ಕಲ್ಪಾಂತಸಾಗರದ
ತೆರೆಗಳಬ್ಬರವೋ? ಧನಂಜಯ ಕರದಲಿಹ ಗಾಂಡೀವ ಮೌರ್ವೀ
ಸ್ಫುರಿತ ಕಳವಳ ಕೋದುದಬುಜಭವಾಂಡ ಮಂಡಲವ!….

ಅರಸ ಕೇಳಾದರೆ ಮಹಾ ವಿಸ್ತರವನಾ ಕರ್ಣಾರ್ಜುನರ ರಥ
ಸರಿಸದಲಿ ಚಾಚಿದುವು; ನೋಟಕರಾದುದುಭಯ ಬಲ!
ಹರಿ ವಿರಿಂಚಿ ಸುರೇಂದ್ರ ದಿಕ್ಪಾಲರು ಚತುರ್ದಶ ಮನುಗಳದಿ
ತ್ಯರು ಭುಜಂಗಮ ವಿಶ್ವವಸುಗಳು ನೆರೆದುದಭ್ರದಲಿ!

ನಾರಣಪ್ಪನು ತನಗೆ ಸಹಜಸುಲಭವಾದ ವೀರಶೈಲಿಯಲ್ಲಿ ಕರ್ಣಾರ್ಜುನರ ಯುದ್ಧವನ್ನು ಬಾಯಿತುಂಬ ಬಣ್ಣಿಸಿದ್ದಾನೆ. ಮಧ್ಯೆ ಮಧ್ಯೆ ಆತನೂ ಕೂಡ ತನ್ನ ನುಡಿಗಳ ಬಡತನವನ್ನು ಮನಗಂಡು “ಅರಸ ಹೇಳುವುದೇನು?” “ಏನು ಹೇಳಲಿ?” “ಬಣ್ಣಿಸಲಳವೆ?” ಎಂಬ ಮಾತುಗಳನ್ನು ಉಪಯೋಗಿಸಿದ್ದಾನೆ. ಯುದ್ಧ ಮಧ್ಯೆ ಕರ್ಣನ ಸರಳಸಾರದಿಂದ ಕೃಷ್ಣನ ಜೋಡು ಬಿರಿಯಿತು. ವಜ್ರಾಂಗಿಯಾದ ಹನುಮಂತನ ದೇಹವೂ ಬಾಣಗಳಿಂದ ಕಬಳಿಸಿತು. ಪಾರ್ಥಸಾರಥಿಯ ಕುದುರೆ ಗದಗದಿಸಿದುವು.

ಮೊದಲಲೇ ಭೀಷ್ಮನ ಶರವ್ರಾತದಲೆ ನೊಂದುದು. ಬಳಿಕ ಕರ್ಣನ
ಕದನದಲಿ! ತಪ್ಪಲ್ಲ ತಪ್ಪಲ್ಲೆನುತ ಮುರವೈರಿ
ಗದಗದಿಸುವಶ್ವವನು ಬೋಳೈಸಿದನು. ಹನುಮನ ನೋಡಿ ತಲೆದೂ
ಗಿದನು ಮಂದಸ್ಮಿತ ಮಧುರ ಮುಖಕಮಲನೊಲವಿನಲಿ!

ಕರ್ಣಾರ್ಜುನರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂಬುದು ಯಾರಿಗೂ ಬಗೆಹರಿಯುವಂತಿರಲಿಲ್ಲ. ಆದ್ದರಿಂದ ಕವಿ “ಇಬ್ಬರಿಗೆ ಫಡ ಹುಬ್ಬನಿಕ್ಕುವಳೊಬ್ಬಳೇ ಜಯವನಿತೆ!” ಎಂದು ಹಾಡಿದ್ದಾನೆ. ವೀರರ ಪ್ರತಾಪಕ್ಕೆ ಮಿತ್ರ ಪಕ್ಷದವರ ಮಾತುಗಳು ಹೆಚ್ಚು ಪ್ರಮಾಣವಲ್ಲ. ಅವರಿವರ ಪಕ್ಷವನ್ನು ವಹಿಸಿ ಹೊಗಳುವ ತೆಗಳುವ ಕಬ್ಬಿಗನ ಮಾತು ಕೂಡ ಪ್ರಮಾಣವಲ್ಲ. ಆದರೆ ಶತ್ರು ಪಕ್ಷದವರ ಪ್ರಶಂಸೆಗೆ ಬಹಳ ಬೆಲೆಯಿದೆ. ಕರ್ಣನ ಸರಳಿನ ಹತಿಗೆ ಪಾರ್ಥನ ತೇರು ತಿರ್ರನೆ ತಿರುಗಿ ಬಿಲ್ಲಂತರಕೆ ಹಿಮ್ಮೆಟ್ಟಲು ಅದನ್ನು ಕಂಡು ಅಸುರಾರಿ ಬೆರಗಾಗಿ

ಅರರೆ! ಧಣು ಧಣು! ಭಾಪು ಮಝರೇ! ಸರಿಯ ಕಾಣೆನು ಬಾರೆನುತ ವಿ
ಸ್ತರಿಸಿ ದಾನವವೈರಿ ಕರ್ಣನ ಹೊಗಳಿದನು!

ಸಾರಥಿ ಶತ್ರುವನ್ನು ಹೊಗಳಿದುದನ್ನು ಕಂಡು ಅರ್ಜುನನು ಖತಿಗೊಂಡು “ಹೂಳಿದ ಹಿಳುಕನೀಡಾಡಿದನು” “ ಒಲವರವು ಹಿರಿದೆಂದುವಾ ಮುನ್ನಲೆ ಮುರಾಂತಕ ಬಲ್ಲೆನಾದಡೆ ಕಲಹವನು ಕೈಕೊಳ್ಗೆ ನೀವೆನುತಿಳುಹಿದನು ಧನುವ !” ಆರ್ಜುನನ ಸರಳೇಟಿಗೆ ಕರ್ಣನ ರಥ ಒಂದು ಯೋಜನದವರೆಗೆ ತೆರಳಿತ್ತು. ಕರ್ಣನ ಹೊಡೆತಕ್ಕೆ ತನ್ನ ತೇರು ಒಂದೇ ಒಂದು ಬಿಲ್ಲಂತರಕೆ ಹಿಮ್ಮೆಟ್ಟಿತು. ಹೀಗಿರಲು ಕೃಷ್ಣನು ತನ್ನನ್ನು ಹೊಗಳದೆ ಕರ್ಣನನ್ನೇಕೆ ಹೊಗಳಬೇಕು? ಎಂದು ಪಾರ್ಥನು ಬೆಸಗೊಳ್ಳಲು ‘ನುಡಿದನಸುರಾರಾತಿ ಉಚಿತದಲಿ’:

ಆಳುತನದಲಿ ವೀರಕರ್ಣನ ಹೋಲುವರ ನಾ ಕಾಣೆನೈ! ಸುರ
ಪಾಲಕರು ತಾವಾನಬಹುದೇ ಕರ್ಣನುರವಣೆಯ?….
ಬಸುರೊಳಗೆ ಬ್ರಹ್ಮಾಂಡಕೋಟಿಯ ಮುಸುಕಿಕೊಂಡಿಹೆ! ತಾ ಸಹಿತ ಮೇ
ಲೆಸೆವ ಸಿಂಧದ ಹನುಮಸಹಿತೀ ದಿವ್ಯಧನು ಸಹಿತ
ಎಸುಗೆಯಲಿ ತೊಲಗಿಸಿದವನ ಸಾಹಸವು ಹಿರಿದೋ? ಹುಲುರಥವನೆ
ಬ್ಬಿಸಿದವನ ಸಾಹಸ ಹಿರಿದೊ ಹೇಳೆಂದನಸುರಾರಿ!

ಆ ದಿನ ಕರ್ಣನಾಟೋಪವನ್ನು ಕಂಡು ಭೀಮ ಮೊದಲಾದ ಪಡಿಬಲದವರೂ “ಬಲುಹು ಭೀಷ್ಮದ್ರೋಣರಿಂದಗ್ಗಳವಲಾ ಕರ್ಣಂಗೆ!” ಎಂದು ಬಾಯಿಬಿಟ್ಟು ಹೊಗಳಿದರು. ರವಿಸುತನ ಮಾರ್ಗಣಗಳ ಪೆಟ್ಟಿಗೆ ಪಾರ್ಥನು ಮೈಮರೆಯಲು “ವಿಷಮ ರಣ ನರಸಿಂಹ ಜಾಗೆಂದುದು ಭಟಸ್ತೋಮ!” “ಸೇನಾಜಾಲವನು ಬೇಳಿದನು ಕೂರಂಬುಗಳ ತಂಡದಲಿ! “

ನರನ ಬಿಗಿದುದು ಮೂರ್ಛೆ! ಭೀಮನ ಹರಣ ಕೊರಳಲಿ ಮಿಡುಕುತಿದೆ; ಮುರ
ಹರನುಸುರವೈಹಾಳಿಯದೆ ಮೂಗಿನಲಿ ಮೋಹರಿಸಿ!
ಬಿರುದ ಸಾತ್ಯಕಿ ನಕುಲ ಸಹದೇವರಿಗದಾವುದು ಹದನು? ಬಲು ಧರ
ಧುರವ ನೋಡಿದರೆ ನೀವು ಯೆಂದನು ನಗುತ ಕರುರಾಯ!
ಕೂಡೆ ಮಕ್ಕಳನಿಕ್ಕಿ ತಂದೆಗಳೋಡುತಿದೆ! ಸರಳಿಂಗೆ ತಮ್ಮನ
ನೀಡಿ ತೋರಿಸಿ ಜಾರುತಿದೆಯಣ್ಣಂದಿರಾದವರು!
ಓಡುತಿದೆ ಯಾಳೊಡೆಯನನು ಬಿಸುಟೋಡಿ ತಾಯಿಗೆ ಮಕ್ಕಳಾಗದೆ
ಕೂಡಿ ಮುಮ್ಮುಳಿ ಮುಸುಕುತಿದೆ ಗುರುಸೂನು ನೋಡೆಂದ!…
ಸುರನದೀಜ ದ್ರೋಣರೀಪರಿ ಪರಮ ಶೌರ್ಯದಲೊದಗಿದರೆ? ನಿ
ಷ್ಠುರದ ನುಡಿಯೆನ್ನದಿರು! ಕಂಡುದನಾಡಬೇಕೆಂದ!…
ಒಂದು ಕಡೆಗಣ್ಣಿನಲಿ ಕೌರವವೃಂದವನು ನೋಡುವಳು; ಕೈಯೊಡ
ನೊಂದು ಕಡೆಗಣ್ಣಿನಲಿ ಮಾತಾಡಿಸುವಳರಿಬಲವ!
ಸೊಗಸು ಬೇರೊಬ್ಬನಲಿ, ನೇಹದ ತಗಹು ಮತ್ತೊಬ್ಬನಲಿ! ಸತಿಯರ
ವಿಗಡತನಕಿದು ಸಹಜ! ಜಯವಧು ಜಾರ ನೋಡೆಂದ!

ಮಿತ್ರನ ಸಮರ ಸಾಹಸವನ್ನು ನೋಡಿ ಕೌರವೇಶ್ವರನು ಹಿರಿಹಿರಿ ಹಿಗ್ಗಿದನು. ಮನಸ್ಸಿನಲ್ಲಿಯೆ ಕುರುಕ್ಷೇತ್ರ್ ಸಂಗ್ರಾಮ ಸಾರ್ಥಕವಾಯಿತು ಎಂದುಕೊಂಡಿರಬಹುದು.

ಇದ್ದಕಿದ್ದ ಹಾಗೆ ಕುಮಾರವ್ಯಾಸನ ಲೇಖನಿ ಬೆಚ್ಚಿಬಿದ್ದಿತು! ಭಯಂಕರ ರಣರಂಗದ ಮಧ್ಯೆ ಒಂದು ರುದ್ರತರ ಅದ್ಭುತ ಸನ್ನಿವೇಶ! ವೀರ ಕರ್ಣನ ಫನಿಬಾಣ ಪ್ರಯೋಗದ ಸಮಾರಂಭ ಸಂಭ್ರಮ!

ಮೀರಿತುರಿ ಸುಯ್ಲಿನಲಿ, ಕಂಗಳು ಹೇರಿದುವು ಕಡುಗೆಂಪನೊಗಡಿಸಿ
ಕಾರಿದುವು ರೋಮಾಳಿ ರೋಷಸ್ವೇದಬಿಂದುಗಳ!
ಕೌರಿಡಲು ಕುಡಿಮೀಸೆ ಕಾದುದು ಮೋರೆ, ಬದ್ಧಭ್ರುಕುಟಿಯಲಿ ಹುರಿ
ಯೇರಿತಧಿಕ ಕ್ರೋಧ ತಾಮಸ ನಿನ್ನ ದಳಪತಿಯ !

“ಉಗಿದನುರಗಾಸ್ತ್ರವನು!” “ಹೊಗೆಯ ಹೊದರಿನ ಹೊರಳಿ ಹಬ್ಬಿತು ಕೂಡೆ ಕಿಡಿಯಿಡುತ! “

ಉಗಿಯೆ ಜಗ ಕಂಪಿಸಿತು; ತಾರೆಯನೊಗಡಿಸಿತು ನಭ; ಜಲಧಿ ರತುನಾ
ಳಿಗಳನೋಕರಿಸಿತು; ಕುಲಾದ್ರಿಗಳೊಲೆದುವೆಡಬಲಕೆ!
ದಿಗಿಭತತಿ ನಡನಡುಗೆ, ಕಮಠನು ಬೆಗಡುಗೊಂಡೋಡಿದನು. ನಭದಲಿ
ಭುಗಿಲಿಡುತ ಫಣಿಬಾಣ ಹೆದರಿಸಿತಖಿಲ ಲೋಕಗಳ!

ಉರಿಯ ಜೀರ್ಕೊಳವೆಗಳವೊಲು ಫೂತ್ಕರಿಸಿದುವು ಫಣಿವದನದಲಿ ದ
ಳ್ಳುರಿಯ ಸಿಮಿಸಿಮಿಸಿಮಿ, ತುಷಾರದ ಕಿಡಿಯ ತುಂತುರಿನ
ಹೊರಳಿಗಿಡಿಗಳ ಕರ್ಬೊಗೆಯ ಕಾಹುರದ ಸುಯ್ಲಿನ ಝುಳದ ಗರಳಾ
ಕ್ಷರದ ಜಿಗಿಯಲಿ ಮಾತುದೋರಿತು ಬೆಸೆಸು ಬೆಸಸೆನುತ !

ಸಾರಥಿಯಾಗಿದ್ದ ಶಲ್ಯನು ಹೆಮ್ಮೆಯಿಂದ ಕರ್ಣನನ್ನು ಹೊಗಳಿದನು. ಕೌರವನು ತನ್ನ ಗೆಲ್ಲವೆ ದಿಟವೆಂದು ಹಿಗ್ಗಿದನು. ಕರ್ಣನು ಅರ್ಜುನನ ಕೊರಳಿಗೆ ಸರಿಯಾಗಿ ಗುರಿಯಿಟ್ಟಿದ್ದನು. ಅದನ್ನು ಕಂಡು ಶಲ್ಯನು

ಕೊರಳಿಗೊಡ್ಡಿದೆ. ಹೊಳ್ಳುವಾರಿದು ಸರಳು ಮಕುಟವ ತಾಗುವುದು; ತೆಗೆ
ದುರಕೆ ತೊಟ್ಟೊಡೆ ಕೊಯ್ವುದೀಗಳ ಕೊರಳನರ್ಜುನನ.
ಮರಳಿ ತೊಡು, ತೊಡು, ಬೇಗ ! ಕೌರವನರಸುತನವುಳಿವುದು ಕಣಾ! ಹೇ
ವರಿಸದಿರು! ಹೇಳುವೊಡೆ ಪಂಥವಿದೆಂದನಾ ಶಲ್ಯ!

ಕರ್ಣನು ಸಾರಥಿಯ ಮಾತನ್ನು ಕೇಳಲಿಲ್ಲ, ಅರ್ಜುನನು ತನ್ನ ಸಾರಥಿಯ ಮಾತನ್ನು ಗೌರವಿಸಿದಂತೆ. ಕರ್ಣನಿಗೆ ತಾನು ಹಿಡಿದಿದ್ದೇ ಹಟ. ಈ ನ್ಯೂನತೆ ಆತನ ದುರಂತತೆಗೆ ಕಾರಾಣವಾಯಿತು.

ಒಂದು ಶರಸಂಧಾನ! ನಾಲಗೆಯೊಂದು! ನಮ್ಮಲಿ ಕುಟಿಲ ವಿದ್ಯೆಯ
ನೆಂದು ಕಂಡೈ ಶಲ್ಯ ನಾವಡಿಯಿಡುವ ಧರ್ಮದಲಿ?

ಎಂದು ಹೇಳಿ ಶಲ್ಯನ ರಾಜನೀತಿ ಸಮರನೀತಿಗಳನ್ನು ಸಡ್ಡೆಮಾಡದೆ ಬಿಟ್ಟನು. ಅರ್ಜುನನ ಕುತ್ತಿಗೆಗೆ ಗುರಿಯಿಟ್ಟು ಹೊಡೆದೂ ಬಿಟ್ಟನು! “ಜೇನುಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ. “ಆ ಬಾಣವನ್ನು ತಡೆಯಲು ಭೀಮ, ಅರ್ಜುನ, ನಕುಲ, ಸಹದೇವ, ಸಾತ್ಯಕಿ ಮೊದಲಾದವರು ಎಷ್ಟು ಬಾಣ ಪ್ರಯೋಗ ಮಾಡಿದರೂ ಪ್ರಯೊಜನವಾಗಲಿಲ್ಲ.

ಅನಿತು ಶರವನು ನುಂಗಿ ಮಗುಳೆಚ್ಚನಿತನೊಳಕೊಳುತಾಜ್ಯ ಧಾರೆಗೆ
ನೆನೆದ ಹುತವಹನಂತೆ ಹೆಚ್ಚಿತು ಮತ್ತೆ ಫಣಿಬಾಣ!
ತುರಗತತಿ ಕಳವಳಿಸಿದವು; ಮದಕರಿಯೊದರಿದವು; ಬಸವಳಿದು ರಥ
ತುರಗವೆಳೆದವು; ತೇರ್ಗಳುರಿದವು ವಿಷದ ಜಳಹೊಯ್ದು!
ಸುರಿವ ಗರಳದ ಗಾಳಿ ಸೋಂಕಿದ ನರರು ನಂಜೇರಿತು; ಮಹಾದ್ಭುತ
ಶರದ ಬಾರಿಯ ವಿಷಕೆ ಕೂಳ್ಗುದಿಗೊಂಡುದರಿಸೇನೆ!

‘ಹಾವಿನಗ್ನಿಗೆ ಹವಿಗಳಾದರೆ ಪಾಂಡವರು ಎಂದೊದರಿ ಮರುಗಿತು ಪಾಂಡುಸುತ ಸೇನೆ.’ ‘ನಿಂದರು ಭೀಮಸೇನಾದಿಗಳು ದುದುಡದಲಿ.’ ‘ಅಪಮೃತ್ಯುವಿದನು ಮುಕುಂದ ತಾನೇ ಬಲ್ಲನೆನುತಿರ್ದುದು ಭಟಸ್ತೋಮ!’ ‘ಆರು ನಿಲಿಸುವರಕಟ ನಿಷ್ಟ್ರತಿಕಾರ ಶರವಿದು?’ ಮಹಾಸರ್ಪಾಸ್ತ್ರವು ಪಾಂಡವ ಸೇನಾಸಾಗರವನ್ನು ಹೀರಿ ಬತ್ತಿಸಿಬಿಡುವ ಅಗ್ನಿಮುಖಿ ಅಗಸ್ತ್ಯನಂತೆ ಬರುತ್ತಿದ್ದುದನ್ನು ಕಂಡು ಸರ್ವರೂ ಭಯಗೊಂಡರು. ಸರಳು ಮೇಲುವಾಯ್ದುದು ಕೊರಳ ಸರಿಸಕೆ ಕಲಿ ಧನಂಜಯನ! ಕವಿ ಪಾರ್ಥನ ಯೋಗಕ್ಷೇಮದ ವಿಚಾರವಾಗಿ ನಿರ್ಭರತೆಯಿಂದ ಇದ್ದಾನೆ:

ಹರಿಯ ಹರಹಿನ ವಜ್ರಪಂಜರದರಗಿಳಿಯಲೇ ಪಾರ್ಥನಹಿ ಮಂ
ಜರನ ಮರುಕನ ಕೊಂಬುದೇ ಜನಮೇಜಯ ಕ್ಷಿತಿಪ?
ನಡುಗುತಿರ್ದುದು ಸುರನಿಕರ? ಬೊಬ್ಬಿಡುತಲಿರ್ದುದು ನಮ್ಮವರು; ಬಾ
ಯ್ಬಿಡುತಲಿರ್ದುದು ಪಾರ್ಥನಳಿಗೆ ಪಾಂಡುಸುತಸೇನ!
ತಡೆಯದೈದಂಗುಲಕೆ ರಥವನು ನಡಿಸಿ ತುಳಿದನು ನೆಲಕೆ; ಪಾರ್ಥನ
ಮುಡಿಯ ಸರಿಸಕೆ ಬಾಣ ಬಂದುದು ಕೊಲುವ ತವಕದಲಿ!

ಮಾಧವನ ಯುಕ್ತಿಯಿಂದ ಬಾಣ ‘ಅಣೆದಾದ ಮಕುಟವನು.’ ಕೀರೀಟವು ಹಾರಿದರೂ ಕರೀಟಿಗೆ ಬಂದ ಅಮಂಗಳ ಹೊಳ್ಳವಾರಿದುದು. ಆದರೆ ಆ ಸರ್ಪಬಾಣ

ವಿನುತ ಮಕುಟವನುಗಿದು, ಕಂಗನೆ ಕನಲಿ, ಅರಿತಲೆ ಬದುಕಿತೇ ಹಾ
ಎನುತ, ಹಲುವೊರೆವುತ್ತ ಮರಳಿತು ಕರ್ಣನಿದ್ದೆಡೆಗೆ.

ತುಡಕಿ ತೊಡು, ಇನ್ನೊಮ್ಮೆ! ಅಕಟಾ ಕೆಡಿಸಿದೆಯಲಾ ಸ್ವಾಮಿಕಾರ್ಯವ;
ನುಡಿದು ಹೇಳನೆ ನಿನ್ನ ಸಾರಥಿ ಲಕ್ಷ್ಯಭೇದನವ?
ಅಡಗಲಿನ್ನೀರೇಳು ಭುವನದಲಡಗ ತಿಂಬೆನು ನರನನೆನುತನ
ಗಡಿಸಿ ಕರ್ಣನ ಬೆಸನ ಬೇಡಿತು ಮತ್ತೆ ಫಣಿಬಾಣ!

ಶಿವನ ವಕ್ಷದೊಳಿರಲಿ, ಮೇಣ್ ವಾಸವನ ಸೀಮೆಯೊಳಿರಲಿ, ಪಾತಾ
ಳವನು ಕೊಗಲಂಬುಧಿಯ ಮುಳುಗಲಿ, ಜವನ ಕೆಳೆಗೊಳಲಿ,
ತಿವಿದು ಕೆಡಹುವೆನಹಿತನನು. ಪಂತವನು ಹಾರಿದೆರೆನಲು, ಕೇಳಿದು
ರವಿಯ ಮಗ ಬೆರಗಾಗಿ ನೋಡಿದನಂದು ಫಣಿಶರವ!

ಸರಳು ಈ ಪರಿ ಬೇಡಿದರೂ ಸತ್ಯದ ಪರಮ ಸೀಮೆಗೆ ತಪ್ಪಲರಿಯದೆ ಕರ್ಣನು ಬಾಣರೂಪಿಯಾದ ಅಶ್ವಸೇನನನ್ನು ತಿರಸ್ಕರಿಸುತ್ತಾನೆ. ಅದನ್ನು ನೋಡಿದ ಶಲ್ಯನಿಗೆ ಸಿಟ್ಟು ಇಮ್ಮಡಿಯಾಗುತ್ತದೆ. ಹಿಂದೆ ಕರ್ಣನು ತನ್ನನ್ನು ಬೈದಂತೆ ಈಗ ಆತನನ್ನು ನಿಂದಿಸುತ್ತಾನೆ. ಶಲ್ಯನ ನಿಂದೆಯಲ್ಲಿ ಒಂದಿನಿತು ತಥ್ಯಾಂಶವಿದೆ:

ಮರುಗಿದನು ಶಲ್ಯನು. ನೃಪಾಲನನಿರಿದೆಯೋ ರಾಧೇಯ ನೀನಂ
ದುರುಬು ಮಿಗ ಗರ್ಜಿಸುತ ಕರ್ಣನ ಬೈದು ಕೋಪಿಸಿದ.

ತಿರುಹಿ ತೊಡು ಸಂಧಾನವನು, ನಿಮ್ಮರಸನಭ್ಯುದಯಾರ್ಥವನೆ ಧಿ
ಕ್ಕರಿಸಿ ನಮ್ಮನು ನೂಕಿ ಕಳೆದೆ ಮಹಾಹಿಮಾರ್ಗಳವ!
ನರನ ತಲೆ ಬದುಕಿದುದು, ಸಾಕಂತಿರಲಿ; ಸರಳೇ ತನ್ನ ಕಳುಹೆಂ
ದೊರಲುತಿದೆ, ತೊಡು ಮರಳಿ ಎಂದನು ಶಲ್ಯನಿನಸುತನ!

ತೊಡು ತೊಡೆಲವೋ ಸರಳ! ರಪುವನು ತಡೆಗಡಿವೆನೆಂದೊರಲುತಿದೆ; ನೃಪ
ನೊಡೆತನವ ನೀ ಬಯಸುವಾಯತವುಂಟೆ ರಿಪುಗಳಲಿ?
ನುಡಿದ ಮಾತೇ ಹೊರತು, ಹೇಳಿದಕೊಡಬಡುವ ನೀನಲ್ಲ! ಕುರುಪತಿ
ಬಿಡದೆ ನಿನ್ನನು ಸಲಹಿದಕ್ಕುಪಕಾರವಾಯ್ತೆಂದ!

ಎಲವೋ ನಿನ್ನನು ಜಗವರಿಯೆ ಕಬ್ಬಿಲನ ಮಗನನು ತಂದು ವಂಚಿಸಿ
ಕುಲಜನನು ಮಾಡಿದನಲಾ ಒಡನುಂಡು ಪತಿಕರಿಸಿ!
ನೆಲನು ಹೇಸದೆ? ನಿನ್ನ ಕೀರ್ತಿಯ ಬೆಳಗು ಮಾಸದೆ? ಬಿಡದೆ ಸಾಕಿದ
ಹೊಲೆಯನವಸರಕೊದಗುವನು! ನೀ ಕಷ್ಟ! ಹೋಗೆಂದ!

ಕೌರವನ ಮನ್ನಣೆಯಲಾವುದು ದೂರವಾದುದು ನಿನಗೆ? ನಿಜ ದಾ
ತಾರನಲಿ ವಂಚಿಸಿದೆ. ನಿನಗಿನ್ನಾವ ಗತಿಯಹುದೊ?
ಭಾರವಿದು ವಿಶ್ವಾಸಘಾತಕ ರೌರವಾಕರ್ಷಣವು! ಸ್ವರ್ಗಕೆ
ದೂರವಹರೇ ಕರ್ಣ? ಕೆಡಿಸದಿರಿಹಪರವನೆಂದ.

ನಂಬಿ ಹಿಡಿದರೆ ನದಿಯ ಮಗ ಹಗೆಯಂಬಿಗಿತ್ತನು ಕಾಯವನು; ಮಗ
ನೆಂಬ ನೆವದಲಿ ತನುವ ಬಿಸುಟನು ಗರುಡಿಯಾಚಾರ್ಯ!
ಅಂಬು ಬೆಸನನು ಬೇಡಿದರೆ ನೀನೆಂಬನೀ ವಿಧಿಯಾದೆ! ಮೂವರ
ನಂಬಿ ಕೆಟ್ಟನು ಕೌರವೇಶ್ವರನೆಂದನಾ ಶಲ್ಯ!

ಕರ್ಣನು ಮಾತೆಗಿತ್ತ ಭಾಷೆಯನ್ನು ತಪ್ಪಲಿಲ್ಲ! “ಮಾತುಗಳು ಕವಲಾದ ಬಳಿಕ ಇನ್ನೇತಕೆ ಈ ತನುವು? ಇದನು ಪಾರ್ಥನ ಘಾತಿಗೊಪ್ಪಿಸಿ ಕಳೆವೆನೆಂದನು ತನ್ನ ಮನದೊಳಗೆ!” ಕರ್ಣನು ವಿಷಮತಮ ಧರ್ಮಸಂಕಟದಲ್ಲಿ ಸಿಕ್ಕಿಬಿದ್ದು, ಶತ್ರುಗಳು ಉಪೇಕ್ಷಿಸಿದ ಧರ್ಮವನ್ನು ತಾನು ಆರಾಧಿಸಲು ಹೊರಟು ತನಗೂ ತನ್ನ ಸ್ವಾಮಿಗೂ ಕೇಡು ತಂದುಕೊಂಡನು. “ಆಪತ್ತೆಸಗಿದಾಗಲೆ ಹಗೆಯ ಗೆಲವುದು ವಸುಮತೀಶರ ನೀತಿ” ಎಂಬ ಶ್ರೀಕೃಷ್ಣನ ಮತವನ್ನು ಅನುಸರಿಸಿದ್ದರೆ ಅದರ ಕಥೆಯೇ ಬೇರೆಯಾಗುತಿತ್ತು. ರಾಧೇಯನು ತನ್ನ ಹಿಡಿದ ಹಟವನ್ನು ಬಿಡದೆ ಇದ್ದುದನ್ನು ಕಂಡು ಶಲ್ಯನು ಕೋಪದಿಂದಲೂ ಅಸಹ್ಯದಿಂದಲೂ “ಅರಸನೊಲಿದಂತಾಗಲಿ! ಎನ್ನದು ಮರುಳತನ! ಕುಲಹೀನನಲಿ ಗುಣವರಸಲೇನಹುದು? ಎನುತ ಧುಮ್ಮಿಕ್ಕಿದನು ಧಾರುಣಿಗೆ!” “ಖತಿ ಗೊಂಡು ಮರಳಿತು ಸರ್ಪಶರ! “

೧೨

ಮುಂದಿನ ಕಥೆಯನ್ನು ಸಂಜಯನು ಹೀಗೆಂದು ಆರಂಭಿಸಿದ್ದಾನೆ. “ಹೇಳಿ ಫಲವೇನಿನ್ನು? ಮುಂದಣ ಕಾಳೆಗದ ಕರ್ಣಾಮೃತದ ಮಳೆಗಾಲ ಮಾದು ವಿಲೋಚನದ ಮಳೆಗಾಲವಾಯ್ತೆಂದ!” ಸಾರಥಿ ತೇರಿಳಿದು ಹೋದರೆ ಇನತನೂಜನು ಬೆದರುವನೆ? ರಥಿಯೆ ಸಾರಥಿಯಾಗಿ ಭೈರವ ಸಂಗ್ರಾಮದಲ್ಲಿ ಯುಗಶ್ರೇಷ್ಠ ಯೋಧರ ಎದುರು ನಿಂತು ಯುದ್ದಮಾಡಲು ನಿಶ್ಚಯಿಸಿದನು.

ಆದೊಡೇನದು ಮತ್ತೆ ಕರ್ಣನ ಕೈದುಕಾರತನಕ್ಕೆ ಸುಭಟರು
ಮೇದಿನಿಯಲಾರುಂಟು? ಫಡ ದೈವಾಭಿಮುಖವಳಿಯೆ
ಹೋದೆ! ಹೋಗಿನ್ನೆನುತ ಕಣೆಗಳನಾದರಿಸಿ ತನಿವೀರರಸದಲಿ
ತೇದು ಚಿತ್ತನ ಬರೆದನರ್ಜುನನಂಗಭಿತ್ತಿಯಲಿ!

ಇಳಿದು ಹೋದೊಡೆ ಶಲ್ಯನೊಡನಗ್ಗಳಿಕೆ ಹೋಯಿತೆ? ಇನ್ನು ಭುಜಬಲ
ತೊಲಗಿತೇನಸಹಾಯಶೂರಗೆ ಪರರ ಹಂಗೇಕೆ?
ಗೆಲುವೆ ಹಗೆಯನು ಎನುತ ಮಿಗೆ ಕೈಚಳಕದಲಿ ತೆಗೆದೆಸುವ ತಾವರೆ
ಗೆಳೆಯನಣುಗನ ಧೃತಿಗೆ ಬೆರಗಾಗಿತ್ತು ಸುರಕಟಕ!

ಚಳಕದಲಿ ತೆಗೆದೆಸೆವ ಚಾಪವನಿಳುಹುವನು ರಥದೊಳಗೆ; ವಾಘೆಯ
ಸೆಳೆದು ತುರಗವ ತಿರುಹಿ ಸುಳಿಸುವನೆಡಬಲಕೆ ರಥವ!
ಬಲುಹು ತನ್ನದು, ಸಾರಥಿತ್ವದ ಬಲುಹು ತನ್ನದು, ರಣದ ಕೌತೂ
ಹಳದ ಕರ್ಣನೊಳಾರು ಸರಿಯೆನುತಿರ್ದುದಮರಗಣ!

ಪುನಃ ಕರ್ಣಾರ್ಜುನರಿಗೆ ವಿಷಮ ಸಮರ ನಡೆಯಿತು. ಅದನ್ನು ಹೇಳುತ್ತ ಹೇಳುತ್ತ ಸಂಜಯನು ರಾಧೇಯನೆಗೆ ವಿಧಿ ವಿಮುಖವಾದುದನು ಇಂತೆಂದು ಬಣ್ಣಿಸಿರುವನು:

ಅರಸ ಹೇಳುವುದೇನು? ರಾಯನ ಸಿರಿಯ ಪೈಸರವನು, ಸುಯೋಧನ
ನರಸುತನದಾಧಾರಮೂಲಸ್ತಂಭ ಭಂಜನವ?
ನರನ ಗೆಲವೆಲ್ಲಿಯದು? ದೈವವ ಮರಳುಮಾಡಿದರವರು! ನಿಮ್ಮಯ
ಧರಣಿ ನಿಮಗನುಚಿತವ ನೆನೆದಳು! ಹೇಳಲೇನೆಂದ.

ಧರೆ ನೆನೆದ ದುಷ್ಕರ್ಮವೇನೆಂದರಸ ಬೆಸಗೊಂಬೈ? ನಿರಂತರ
ಸುರಿವ ರುಧಿರದ ಸಾರದಲಿ ಕೆಸರೆದ್ದ ಕಳನೊಳಗೆ
ಹರಿವ ಬಿಂಕದ ರಥದ ಗಾಲಿಯ ಗರುವತನ ಗಾಳಾಯ್ತು; ನೆಲ ಖೊ
ಪ್ಪರಿಸು ತಗ್ಗಿತು ತೇರು; ತಡೆದುದು ರಥವನಿಳೆಯಿಂದ.

ಗಾಲಿಯದ್ದವು; ಕೊಡೆ ಯಂತ್ರದ ಕೀಲುಗಳು ಸಡಿಲಿದುವು; ಹಯತತಿ
ತೂಳಿ ಸತ್ವದಲೌಕಿ ಸೆಳೆದುವು ಕುಸಿದು ನಿಜಮುಖವ;
ಮೇಲು ಮಿಡುಕದು ತೇರು; ಕುರುಬಲಜಾಲ ಜರುಗಿತು; ವೈರಿಬಲದಲಿ
ಸೂಳವಿಸಿದರು ಭುಜವನೊದರಿತು ಬೆರಳ ಬಾಯ್ಗಳಲಿ!

ದುರುಳ ದೊರ್ಯೋಧನನ ನಿಖಿಳೈಶ್ವರಿಯವಿಳೆಗದ್ದಂತೆ ಕರ್ಣನ
ತುರಗ ಸಹಿತವನಿಯೊಳಗದ್ದುದು ತೇರು ಕುಕ್ಕರಿಸೆ;
ಕೆರಳಿ ಕಂಬಿಯ ಸೆಳೆದು, ವಾಘೆಯ ತಿರುಹಿ ಚಪ್ಪರಿಸಿದರೆ ಸತ್ವದ
ಲುರವಣಿಸಿ ತಲೆವಾಗಿ ಜವಗುಂದಿದುವು ತೇಜಿಗಳು!

ಕವಿವರ್ಯ ಕುಮಾರವ್ಯಾಸನ ಅತ್ಯುತ್ತಮವಾದ ಚಿತ್ರಗಳಲ್ಲಿ ಇದೂ ಒಂದು. ತೇರು ಭೂಮಿಯೊಳಗೆ ಸಿಕ್ಕಿದ ಚಿತ್ರವೂ, ಕುದುರೆಗಳ ಸಾಹಸದ ಚಿತ್ರವೂ, ಕರ್ಣನ ಪ್ರಯತ್ನಭಂಗದ ಚಿತ್ರವೂ, ಮುಂದೆ ಮೂಡುವ ಆತನ ಸಾಹಸದ ಚಿತ್ರವೂ, ಕಣ್ಣಿನ ಮುಂದೆ ಕುಣಿಯುವುವು. ಬಣ್ಣಗಾರ ನಾರಣಪ್ಪನು ಮುಂದೆ ಬರೆಯುವ ಚಿತ್ರವನ್ನು ಸ್ಪಲ್ಪ ನೋಡಿ! ರವಿತನಯನು ಮಕುಟವ ತೂಗಿ ತೊನೆದನು. “ಭಾಪು ವಿಧಿ! ನಿರ್ಭಾಗಧೇಯನು ರಾಯನಕಟಾ!” ಎನುತ ನಿಟ್ಟುಸಿರು ಬಿಟ್ಟು ಮರುಗಿ ಬೇಗಬೇಗನೆ ಸಾಹಸಕ್ಕೆ ತೊಡಗಿದನು:

ಇಳುಹಿದನು ರಥದೊಳಗೆ ಚಾಪವನಳವಡಿಸಿದನು ಸೆರಗನಲ್ಲಿಂ
ದಿಳಿದು, ಗಾಲಿಯನಲುಗಿ, ಪಾರ್ಥನ ನೋಡಿ ನಸುನಗುತ,
“ಎಲೆ ಧನಂಜಯ, ಸೈರಿಸಿನ್ನರೆಗಳಿಗೆಯಲಿ ರಥವೆತ್ತಿ ನಿನಗಾ
ನಳವಿಗೊಡುವೆನು. ತನ್ನ ಪರಿಯನು ಬಳಿಕ ನೋಡೆಂ “ದ!

“ಶಿವನ ಬಲಹುಂಟೆಂಬನೇ? ಶಿವನವರ ಕಡೆ! ಹರಿಯೆಂಗನೇ? ಪಾಂ
ಡವರ ಬಂಡಿಯ ಬೋವನ್! ಇಂದ್ರಾದ್ಯರು ಸಹಾಯಿಗಳೆ?
ಅವರು ಸಾಕ್ಷಾತ್ ಅರ್ಜುನರು! ನಮ್ಮವನಿ ನಮಗುಂಟೆಂಬನೇ? ಕೌ
ರವನ ಪುಣ್ಯವಿದೇ?” ಎನುತ ಮರುಗಿದನು ಕಲಿಕರ್ಣ!

“ರೂಢಿಸಿದ ಭಟ ನೀನು; ಪಂತದ ಪಾಡುಗಳ ನೀ ಬಲ್ಲೆ; ಶಾಸ್ತ್ರವ
ಖೋಡಿಗಳೆವವನಲ್ಲ ವೈದಿಕ ಲೌಕಿಕ ಸ್ಥಿತಿಯ;
ನಾಡೆ ಬಲ್ಲಿರಿ ಶಸ್ತ್ರಹೀನರ ಕೊಡೆ ವಾಹನರಹಿತರಲಿ ಕೈ
ಮಾಡಲುನುಚಿತವೆಂಬ ಮಾರ್ಗವನ್” ಎಂದನಾ ಕರ್ಣ!

ಎನುತ ಗಾಲಿಯನಲುಗಿ, ಕೀಲಚ್ಚಿನಲಿ ಮುಂಗೈಗೊಟ್ಟು, ಮೊಳಕಾ
ಲಿನಲಿ ಧರಣಿಯನೌಕಿ ಮುಗ್ಗಿದ ರಥವ ನೆಗಹುತಿರೆ;
ದನುಜರಿಪು ಚಮ್ಮಟಿಕೆಯಲಿ ಫಲುಗುಣನ ತಿವಿದನು: ನೋಡು ರಾಧಾ
ತನಯನಿರವನು, ಬೇಗ ಮಾಡೆಂದರ್ಜುನನ ಜರೆದ!

ಎಸೆ, ಮರುಳೆ ಗಾಂಡೀವಿ! ಆಪತ್ತೆಸಗಿದಾಗಲೆ ಹಗೆಯ ಗೆಲುವುದು
ವಸುಮತೀಶರ ನೀತಿ! ತೊಡು, ತೊಡು ದಿವ್ಯ ಮಾರ್ಗಣವ!
ವಿಷಮವೀರನು ರಥವ ಮೇಳಾಪಿಸದ ಮುನ್ನವೆ ಹರುವ ನೆನೆ ನೀನ್,
ಒಸೆದುಯೇರಿದ ಬಳಿಕ ಕೈಕೊಂಬನೆ ತ್ರಿಯಂಬಕನ?