ಕರ್ಣಾಟಕ ಕವಿಚೂತವನಚೈತ್ರನ ಕಾವ್ಯಾರಾಮದಲ್ಲಿ ಸಂಚರಿಸುವ ಸಹೃದಯನಾದ ವನವಿಹಾರಿಗೆ ಅನೇಕ ಸುಮನೋಹರ ದೃಶ್ಯಚಿತ್ರಗಳು ಮೈದೋರುತ್ತವೆ. ಕವಿ ಮಹಾಭಾರತದ ಅಶ್ವಮೇಧ ಪರ್ವವನ್ನು ತನ್ನ ಕಾವ್ಯ ವಸ್ತುವನ್ನಾಗಿ ಮಾಡಿಕೊಂಡಿದ್ದಾನೆ ಎಂಬುದನ್ನು ಸ್ವಲ್ಪ ಯೋಚಿಸಿದರೆ, ಆತನ ಕಾವ್ಯದ ಮಹತ್ತಿನಲ್ಲಿ ನಮಗಿನಿತು ಸಂದೇಹ ತಲೆದೋರಬಹುದು. ಏಕೆಂದರೆ, ಅಶ್ವಮೇಧಗಳೆಂದರೆ ಕಾಳಗಗಳ ಪರಂಪರೆ. ಬರಿಯ ಸಮರಗಳಿಂದಿಡಿದ ವಸ್ತುವನ್ನು ಕವಿ ತನ್ನ ಕಾವ್ಯ ಸಾಮಗ್ರಿಯನ್ನಾಗಿ ಸ್ವೀಕರಿಸಿದರೆ ಆತನ ಸಮಸ್ತ ಪ್ರತಿಭಾಶಕ್ತಿಯ ವಿವಿಧಮುಖವಾದ ಆವಿಷ್ಕಾರಕ್ಕೆ ಅವಕಾಶವೆಲ್ಲಿ? ಆತನ ಕಲ್ಪನೆಯೆಲ್ಲವೂ ಅಸ್ತ್ರಪ್ರತ್ಯಸ್ತ್ರ ಪ್ರಯೋಗಗಳಲ್ಲಿ, ಭೀಕರ ರಣರಂಗಗಳ ವರ್ಣನೆಗಳಲ್ಲಿ, ವೀರರ ಬಿಂಕದ ನುಡಿಗಳಲ್ಲಿ, ಸತ್ತವರಿಗಾಗಿ ಗೋಳಾಡುವುದರಲ್ಲಿ, ನೆತ್ತರು ನೆಣ ಮಜ್ಜೆ ಮಾಂಸ ಮೊದಲಾದವುಗಳ ಬಣ್ಣನೆಗಳಲ್ಲಿ ಪರಿಸಮಾಪ್ತಿ ಹೊಂದುವುದಿಲ್ಲವೆ? ಮಹಾಕವಿಯಾದವನು ಈ ಚರ್ವಿತಚರ್ವಣದ ಪರಿಮಿತಿಗೆ ಒಳಗಾದರೆ ಆತನ ಪ್ರತಿಭೆ ವಿಕಾಸಹೊಂದಿ ಹೊರಹೊಮ್ಮದೆ, ಹಾಸುಗಲ್ಲಿನ ಅಡಿಯಲ್ಲಿ ಬೆಳೆಯುವ ಹುಲ್ಲಿನಂತೆ ಗಾಳಿ, ಬಿಸಿಲು, ಸ್ವಾತಂತ್ರ್ಯ ಒಂದೂ ಇಲ್ಲದೆ ಕಾಂತಿವಿಹೀನವಾಗಿ ನೋಡಲಸಹ್ಯವಾಗಬಹುದಲ್ಲವೆ?

ಅದನ್ನರಿತೆ ಕವಿಚೂತವನಚೇತ್ರನು ಸರಸವಾಗಿಯೂ ಭಾವಹುಕ್ತವಾಗಿಯೂ ಇರುವ ಕೆಲವು ಉಪಕಥೆಗಳನ್ನು ತನ್ನ ಕಾವ್ಯವಾಹಿನಿಗೆ ಉಪನದಿಗಳನ್ನಾಗಿ ಮಾಡಿಕೊಂಡಿದ್ದಾನೆ. ಮುಖ್ಯನದಿ ಸಂಪ್ರದಾಯದ ಬೇಗೆಗೆ ಸಿಕ್ಕಿ ಬತ್ತಿಹೋಗುವುದಕ್ಕೆ ಮುಂಚೆಯೆ ಈ ಪೆರ್ದೊರೆಗಳು ತಮ್ಮ ಮಂಗಳ ಸಲಿಲವನ್ನು ದಾನಮಾಡಿ ಮುಖ್ಯನದಿಯ ಗಂಭೀರ ಗಮನಕ್ಕೆ ಕುಂದುಬಾರದಂತೆ ಮಾಡುತ್ತವೆ.

ಕಾವ್ಯದ ಮುಖ್ಯ ವಿಷಯ ಲಕ್ಷ್ಮೀಶನ ಕಾರ್ಯಸೌಧ. ಈ ಉಪಕಥೆಗಳು ಆತನ ವಿಹಾರಮಂದಿರಗಳು. ಅಲ್ಲಿ ಕವಿವರನು ತನ್ನ ಆಫೀಸಿನ ಪೋಷಾಕಿನಲ್ಲಿ ನಮ್ಮ ಮುಂದೆ ನಿಲ್ಲುತ್ತಾನೆ. ಇಲ್ಲಿ ಯಾವ ನಿರ್ಬಂದವೂ ಇಲ್ಲದೆ ತನ್ನ ಮನೆಯುಡುಪನ್ನು ಉಟ್ಟು ಆಯಾಸಪರಿಹಾರಕ್ಕಾಗಿ ತಿರುಗಾಡುತ್ತಾನೆ. ಅಲ್ಲಿ, ಕಾವ್ಯವಾಹಿನಿಯಲ್ಲಿ ಕವಿಯ ನಾವೆ ಅತ್ತ ಇತ್ತ ನೋಡದೆ, ಕಾಲಹರಣ ಮಾಡದೆ, ನಿರ್ದಿಷ್ಟವಾದ ಬಂದರಿಗೆ ನಿರಂತರ ಪ್ರಯಾಣಮಾಡುತ್ತಿದೆ. ಇಲ್ಲಿ ಕವಿ ತನ್ನದೆ ಒಂದು ಕಿರುದೋಣಿಯಲ್ಲಿ ಕುಳಿತು ಪಕ್ಕದ ಸರಸ್ಸುಗಳಲ್ಲಿ ಸೃಷ್ಟಿ ಸೌಂದರ್ಯವನ್ನು ಅನುಭವಿಸುತ್ತಾ ಕಟ್ಟುನಿಟ್ಟಿಲ್ಲದೆಯೆ ಬೈಗಿನ ತಣ್ಣೆಲರಿನಲ್ಲಿ ತೇಲುತ್ತಾ ವಿಹರಿಸುತ್ತಿದ್ದಾನೆ. ಅಲ್ಲಿ ಅವನನ್ನು ಕಂಡು ವಿರಗಾಗಬಹುದು; ಇಲ್ಲಿ ಅವನೊಡನೆ ಸರಸವಾಡಬಹುದು. ಅಶ್ವಮೇಧಯಾಗದ ಕಾವ್ಯವಸ್ತುವನ್ನು ಸಾಧಾರಣ ಕವಿ ಬರೆದಿದ್ದ ಪಕ್ಷದಲ್ಲಿ ಬರಿಯ ಯದ್ಧ ವರ್ಣನೆಗಳನ್ನು ತುಂಬಿ ಕಾವ್ಯವನ್ನು ಅಂದಗೆಡಿಸಿ, ಓದುವವರಿಗೆ ಬೇಸರ, ಚುಗುಪ್ಸೆ, ಆಯಾಸ ಇವುಗಳನ್ನು ಉಂಟುಮಾಡದೆ ಇರುತ್ತಿರಲಿಲ್ಲ.

ಲಕ್ಷ್ಮೀಶ ಕವಿ ಸಂಪ್ರದಾಯದ ಕಟ್ಟಿಗೆ ಒಳಗಾಗಲಿಲ್ಲವೆಂದೂ, ಆತನ ಕೃತಿಸಮಸ್ತವೂ ನಿರಂತರಾವೇಶ ಪ್ರೇರಿತವಾದುದೆಂದೂ ನಾವು ಹೇಳಲಾರೆವು. ಆದರೆ ಅವನು ತನ್ನನ್ನು ಬಂಧಿಸಿದ ಸಂಕೋಲೆಗಳನ್ನೆ ತನ್ನ ಪ್ರತಿಭೆಯಿಂದ ಆಭರಣಗಳನ್ನಾಗಿ ಮಾರ್ಪಡಿಸಿಕೊಂಡಿದ್ದಾನೆ. ಆತನ ಕಾವ್ಯವನ್ನು ಓದುವಾಗ ಕೆಲವು ಸಾರಿ, “ಇವನೇನು ಕವಿಯೊ ಕಸರತ್ತುಗಾರನೊ? ಇವನೇನು ಕಲಾಮಂದಿರದ ಪುಣ್ಯನಿವಾಸಿಯೊ, ಅಥವಾ ದ್ರವ್ಯಕ್ಕಾಗಿ ಅದ್ಭುತಾಕಾರವಾದ ಕಟ್ಟಡಗಳನ್ನು ಕಟ್ಟುತ್ತಿರುವ ಕ್ಷುದ್ರಶ್ರಮಜೀವಿಯೊ” ಎಂದುಕೊಳ್ಳುವ ಹಾಗಾಗುತ್ತದೆ. ಕೆಲವು ಸಾರಿ ಆತನ ಶಬ್ದಾಲಂಕಾರ, ಯಮಕ, ಶ್ಲೇಷೆ ಮೊದಲಾದುವನ್ನು ನೋಡಿ, ಅನುಭವಶಾಲಿಯಾದ ವೀರನ ಶರಸಂಧಾನವನ್ನಾಗಲಿ ಕತ್ತಿವರಸೆಯನ್ನಾಗಲಿ ಕಂಡು ಬೆಕ್ಕಸಪಡುವಂತೆ ಬೆರಗಾಗುತ್ತೇವೆ. ಆದರೆ ಆಶ್ಚರ್ಯ ಬೇರೆ; ಆನಂದ ಬೇರೆ!

ಹೀಗಿದ್ದರೂ ಕವಿಚೂತನವನಚೈತ್ರನು ನಮ್ಮ ಪ್ರೀತಿಗೌರವಗಳಿಗೆ ಅಪಾತ್ರನಲ್ಲ. ಅಷ್ಟೇ ಅಲ್ಲದೆ ಆತನು ರಸಜ್ಞರ ಆರಾಧನೆಯ ಮೂರ್ತಿಯೂ ಆಗುವುದರಲ್ಲಿ ಸಂದೇಹವಿಲ್ಲ. ಒಳ್ಳೆಯದಾಗಲಿ ಕೆಟ್ಟದಾಗಲಿ ಆತನಲ್ಲಿ ಯಾವುದೂ ಅತಿಯಿಲ್ಲ. ಎಲ್ಲವೂ ಮಿತವಾಗಿವೆ. ಈ ಮಿತತ್ವವೆ ಆತನ ಮಹತ್ತಿಗೆ ಮುಖ್ಯ ಕಾರಣ. ಅಲ್ಲದೆ ಅಲಂಕಾರಗಳನ್ನು ಬದಲಾಯಿಸಿ, ಓದುವವರಿಗೆ ವಿವಿಧತ್ವವನ್ನು ಪ್ರದರ್ಶಿಸಿ, ಚಮತ್ಕಾರದಿಂದ ಬೇಸರ ಕಳೆಯುವುದರಲ್ಲಿ ಲಕ್ಷ್ಮೀಶ ಬಹು ನಿಪುಣ. ಆತನು ಸಮಸ್ತ ಕರ್ಣಾಟಕರ ಗೃಹ ಕವಿ. ಹಳ್ಳಿಯ ಬಡ ಗುಡಿಸಲುಗಳಲ್ಲಿಯೂ ನಗರಗಳ ಮಹಾಹರ್ಮ್ಯಗಳಲ್ಲಿಯೂ ಶತಮಾನಗಳಿಂದ ಪಂಡಿತ ಪಾಮರ ರಂಜಕನಾಗಿರುವ ಪೂಜ್ಯ ಕವಿವರ್ಯನಿಗೆ ನಮ್ಮ ಹೃದಯಪೂರ್ವಕವಾದ ಅಭಿನಂದನ!*

ಆತನ ಕಾವ್ಯಮಹಾರ್ಣವಕ್ಕೆ ಪವಿತ್ರವಾದ ಗಂಗೆಯೆಂದರೆ ಸೀತಾ ವನವಾಸ. ಅಲ್ಲಿ ಮಾನವನ ಜೀವಮಾನದಲ್ಲಿ ಅನಿವಾರ್ಯವಾಗಿರುವ ಕೆಲವು ಸನ್ನಿವೇಶಗಳನ್ನು ಎದುರುಗೊಳ್ಳುತ್ತೇವೆ. ಅಲ್ಲಿ ನಮ್ಮ ಜೀವಮಾನಕ್ಕೆ ಅತಿ ನಿಕಟ ಸಂಬಧವುಳ್ಳ ಭಾವಪ್ರಪಂಚದಲ್ಲಿ ಸಂಚಿರಿಸುತ್ತೇವೆ. ಆ ಪುಣ್ಯರಂಗದಲ್ಲಿ ಸ್ವಾಭಿಮಾನದಿಂದ ಒಂದು ನಿರಾಕರಣೆಯ ಕ್ರೌರ್ಯ, ಕಿಂಕರನ ಕಷ್ಟ, ಪ್ರೇಮದ ಪ್ರಲಾಪ, ಧರ್ಮದ ಸಹಾಯ, ಮಾತೆಯ ಪುತ್ರವಾತ್ಸಲ್ಯ, ಪುತ್ರರ ಮಾತಾಭಕ್ತಿ, ಸ್ವಾಭಾವಿಕವಾದ ಕ್ಷತ್ರಿಯ ಬಾಲಕರ ಶಕ್ತಿ, ಅದೃಷ್ಟಲೀಲೆ, ಅನ್ಯಾಯಕ್ಕೆ ತಕ್ಕ ಪ್ರತಿಫಲ, ಪ್ರಾಯಶ್ಚಿತ್ತ, ಪಶ್ಚಾತ್ತಾಪ, ಸ್ವೀಕಾರ – ಇವುಗಳೆಲ್ಲವನ್ನೂ ಸಂದರ್ಶಿಸುತ್ತೇವೆ. ಕವಿವರ್ಯನಿಗೆ ಆಧುನಿಕವಾದ ಪ್ರತಿಭಾ ಪ್ರಚೋದನೆಯಿದ್ದಿದ್ದರೆ ಅದನ್ನೇ ಒಂದು ಸಣ್ಣ ಕಾವ್ಯವನ್ನಾಗಿ ಬರೆದು ಕನ್ನಡ ನುಡಿವೆಣ್ಣಿನ ಚೂಡಾಮಣಿಯನ್ನಾಗಿ ಮಾಡಬಹುದಾಗಿತ್ತು. ಆದರೂ ಚಿಂತೆಯಿಲ್ಲ. ಪ್ರಾಚೀನ ಸಂಸ್ಕಾರಗಳು ಆಧುನಿಕರಿಗೆ ಬಗೆಹರಿಯದಷ್ಟು ಅಮಾನುಷವಾಗಿಲ್ಲ. ಶತಮಾನಗಳು ಕಳೆದರೂ ಮಾನವನ ಸಹಜಗುಣ ಸಂಪೂರ್ಣವಾಗಿ ಬದಲಾವಣೆ ಹೊಂದುವುದಿಲ್ಲ.

ಸೀತಾವನವಾಸವೆಂಬ ದಿವಿಜನದಿಯಲ್ಲಿ, ವಿಹರಿಸುವ ಕಲ್ಪನಾನೌಕೆ ನಮ್ಮನ್ನು ಒಯ್ತಿಳಿಸುತ್ತದೆ, ಶತಮಾನಗಳ ಹಿಂದಿನ ಪುಣ್ಯ ಗಂಗಾತೀರದಲ್ಲಿ!

ಪವಿತ್ರ ಗಂಗಾಮಾತೆ! “ ಸನ್ನುತ ರಘೂದ್ವಹನ ಕೀರ್ತಿಯೆನೆ, ಮೂವಟ್ಟೆಯನ್ನಡೆದು, ಮುಕ್ಕಣ್ಣನಂ ಸೌರ್ದು, ಮೂಜಗದ ಪಾಪಮಂ ಮುರಿದು ಮುಕ್ಕಿ, ಮುನ್ನೀರು ಮುಂತಾಗಿ ಮೂದೇವರೊಳಗಾದ ಮುನ್ನುಳ್ಳ ಮೂವತ್ತು ಮೂರ್ಕೋಟೆ ವಿಬುಧರಂ ತನ್ನೊಳ್ಮುಳುಗಿದರಣಕಿಪ ಪೆಂಪೊದವಿ ಪರಿವ ಬೆಳ್ವೊನಲ್ದಿವಿಜನದಿಯ” ಯುಗಯುಗ ಪೂರ್ವದ ಗಂಗಾತೀರದ ನೀರವ ಗಾಂಭೀರ್ಯ! ಅಲ್ಲಿ ಬಾಂಬೊಳೆಯ ದಡದಲ್ಲಿ ಹೊಗೆಯನ್ನು ಕಾರುವ ನವನಾಗರಿಕತೆಯ ಯಂತ್ರಗಳಿಲ್ಲ. ಅಲ್ಲಲ್ಲಿ ಮಂಗಳ ಋಷ್ಯಾಶ್ರಮಗಳಿವೆ! ವ್ಯಾಪಾರದ ಗಡಿಬಿಡಿಯಲ್ಲಿ ಸಿಕ್ಕಿ ಪರಲೋಕ ವಿಚಾರಕ್ಕೆ ಸಮಯವಿಲ್ಲವೆಮದು ಹೇಳುತ್ತಾ ತೀರದಲ್ಲಿ ಗಾಳಿ ಸೇವನೆಗಾಗಿ ತಿರುಗಾಡುವವರ ಬದಲಾಗಿ, ಸ್ನಾನ ಜಪತಪಾದಿಗಳಲ್ಲಿ ನಿರತರಾಗಿದ್ದ ಸಾಧಕರು ಅಲ್ಲಲ್ಲಿ ಕಣ್ಣಿಗೆ ಬೀಳುತ್ತಾರೆ. ತಳಿತ ಮರಗಳಿಂದ ದಟ್ಟವಾದ ಬನಗಳ ಪ್ರಶಾಂತತೆ ಹೊಳೆಯ ಇಕ್ಕೆಲಗಳಲ್ಲಿಯೂ ತನ್ನದೇ ಒಂದು ವೈಭವದಿಂದ ಸಾಮ್ರಾಜ್ಯವಾಳುತ್ತಿದೆ. ಅಲ್ಲಲ್ಲಿ, ಪ್ರಪಂಚದ ಮಾಯಾವರಣವನ್ನು ತಮ್ಮ ಇಂಚರದಿಂದ ಭಂಗಿಸಿ, ಕ್ಷಣಮಾತ್ರ ಆ ಅತೀತ ಗಾನಲೋಕದ ಅಲೌಕಿಕ ಅನುಭವವನ್ನು ದಾನ ಮಾಡುವ ಶ್ರೀರಾಮಚಂದ್ರನ ಕಾಲದ ವಿಹಂಗಮ ಮುಗ್ಧಲೀಲೆ! ತೀರದ ಆ ಹಸುರು, ಗೊಂಚಲು ಗೊಂಚಲಾಗಿ ಮರಗಳನ್ನು ಅಲಂಕರಿಸಿರುವ ಹಣ್ಣು ಹೂವು, ಆ ಸುರಭಿ ಸಮೃದ್ಧವಾದ ಮಂದಮಾರುತ, ಆ ವಾಹಿನಿಯ ಶುಭ್ರಸೈಕತ ― ಇವುಗಳಲ್ಲಿ ಪ್ರತಿಯೊಂದೂ ಕಲ್ಪನಾ ರಾಜ್ಯದಲ್ಲಿ ತಿರುಗಾಡುವ ನಮಗೆ ಪೂಜ್ಯವಸ್ತುವಾಗಿ ಪರಿಣಮಿಸುವುದಿಲ್ಲವೆ? ಇಲ್ಲಿ ನಮ್ಮ ಕವಿವರ್ಯನಲ್ಲಿ ನಮಗೆ ಸ್ವಲ್ಪ ಅಸಮಾಧಾನವುಂಟಾಗಬಹುದು. ಏಕೆಂದರೆ, ತನ್ನ ಕವಿತಾ ಮಂದಿರಕ್ಕೆ ಬಿಜಯಂಗೈದ ಗಂಗಾಮಾತೆಗೆ ಆತನಿಂದ ತಕ್ಕ ಸನ್ಮಾನ ದೊರೆತಿಲ್ಲ. ಆತನು ತನ್ನ ಎದೆಯ ಹೂದೋಟದಿಂದ ಕೊಯ್ದ ಅರಳೆಮಾಲೆಗೆ ಬದಲಾಗಿ ಆಕೆಯ ಮಂಗಳಕಂಠದಲ್ಲಿ ಕೃತಕ ಪುಷ್ಪಮಾಲಿಕೆಯೊಂದನ್ನು ನಿರ್ಲಕ್ಷವಾಗಿ ಎಸೆದಿರುವನು. ಆ ಹೂಮಾಲೆ ನೋಡಲು ರಮ್ಯವಾಗಿರಬಹುದು; ನೆಯ್ದವನ ಕಲಾಕೌಶಲವನ್ನು ಅಲ್ಲಿ ನಾವು ಕಾಣಬಹುದು; ಆದರೆ ಅದರಲ್ಲಿ ಜೀವವಿಲ್ಲ; ಸುವಾಸನೆಯಿಲ್ಲ. ಕವಿಚೂತನಚೈತ್ರನು ತನ್ನ ಕವಿತಾ ಮಂದಿರಕ್ಕೆ ದಯಮಾಡಿಸಿದ ಮಹಾತಾಯಿಯಾದ ಗಂಗಾದೇವಿಗೆ ತನ್ನ ಕಲಾಕೌಶಲ್ಯ ಪ್ರದರ್ಶನಾರ್ಥವಾಗಿ ಅರ್ಪಿಸಿದ ಕೃತಕವಾದ ಪಾಂಡಿತ್ಯ ಮಾಲೆ ಇದು.

ತರತರದ ಕಲ್ಲೋಲ ಮಾಲೆಗಳ ಲೀಲೆಗಳ
ಬೆರೆಬೆರೆವ ರಾಜಹಂಸಾಳಿಗಳ ಕೇಳಿಗಳ
ಪರಿಪರಿಯ ನೀರ್ವನಿಗಳಾಕರದ ಶೀಕರದ ನೊರೆಯ ಬೊಬ್ಬುಳಿಯ ಸುಳಿಯ
ಮೊರೆಮೊರೆದು ಘೂರ್ಮಿಸುವ ಪರಿವುಗಳ ಮುರಿವುಗಳ
ತಿರುತಿರುಗಿ ಸೂಳಿವ ಜಲತಂತುಗಳ ಗೊಂತುಗಳ
ನೆರೆನರೆದು ಮುನಿಜನಂ ಸೇವಿಸುವ ಭಾವಿಸುವ ಗಂಗೆಗವನಿಜೆ ಬಂದಳು.
ತೆಂಗೆಳಗವುಂಗು ಪುನಸಂ ದ್ರಾಕ್ಷೆ ಜಂಬು ನಾ
ರಂಗ ಜಂಬೀರ ಖರ್ಜೂರ ಕಿತ್ತಿಳೆ ಮಾತು
ಳಂಗ ತಿಂತ್ರಿಣಿ ಚೂತ ನೆಲ್ಲಿ ಬಿಲ್ವ ಕಪಿತ್ಥಮೆಂಬ ನಾನಾ ತರುಗಳು
ತೊಂಗುವ ಫಲಾವಳಿಯ ಭಾರಂಗಳಾವಗಂ
ಪಿಂಗವಿವನಿಳೆಗಿಳಿಪಬೇಕೆಂದು ಬಾಗಿದೊಂ
ದಂಗಮನೆ ಕಣ್ಗೆಸೆದುವಿಕ್ಕೆಲದೊಳಾ ಜಾಹ್ನವಿಯ ತಡಿಯ ಬನದೆಡೆಯೊಳು.

ಇಲ್ಲಿ ಪಂಡಿತರು ಕವಿಯನ್ನು ಪದ್ಯದಲ್ಲಿ ಕಂಡುಬರು ಶಬ್ದಾಲಂಕಾರಕ್ಕಾಗಿ ಪ್ರಶಂಸಿಸಬಹುದು. ಆದರೆ ರಸಚೇತಸರು ಹಿಂದೆಗೆಯುವರೆಂದೇ ನಮ್ಮ ಭಾವನೆ. ತೆಂಗು, ಪನಸ, ದ್ರಾಕ್ಷೆ ಮೊದಲಾದವು ಗಂಗಾತೀರದಲ್ಲಿ ಹಿಂದೆ ನಿಜವಾಗಿಯೂ ಬೆಳೆಯುತ್ತಿದ್ದುವೆ? ಈಗ ಬೆಳೆಯುತ್ತವೆಯೆ? ಅಥವಾ ಬೆಳೆದರೂ ರಸಿಕನಾದ ಕಬ್ಬಿಗನ ಬಣ್ಣನೆ ಮರಗಳ ಹೆಸರಿನ ಪಟ್ಟಿಯಲ್ಲಿಯೆ ಪರಿಸಮಾಪ್ತಿ ಹೊಂದಬಹುದೆ? ಈ ವಿಧವಾದ ಕವಿಸಮಯದಿಂದ ಪ್ರಕೃತಿದೇವಿಯನ್ನು ಪೂಜಿಸಿದರೆ ಆಕೆ ತೃಪ್ತಿಹೊಂದುವಳೆ? ಇವುಗಳನ್ನು ಸಹೃದಯರೆ ವಿಚಾರಿಸಿ ನೋಡಲಿ. ಕವಿ ಕಲ್ಪನಾಸಾಮ್ರಾಜ್ಯದ ಚಕ್ರವರ್ತಿ. ಆತನು ಭಾವಪ್ರಪಂಚದ ನಿರಂಕುಶಪ್ರಭು. ಅಲ್ಲಿ ಆತನೆ ಸರ್ವಾಧಿಕಾರಿ. ಆತನ ನುಡಿಯೆ ವೇದ. ಆತನ ನಡತೆಯೆ ಮೇಲ್ಪಂಕ್ತಿ. ಆತನೆ ನಿಯತಿ. ಹೌದು, ಇವನ್ನೆಲ್ಲಾ ಲಪ್ಪಿಕೊಂಡರೂ ಕವಿತೆ ಆತ್ಮ ಸ್ವಾನಂದಕ್ಕಾಗಿ ತನಗೆ ತಾನೆ ಮಾಡಿಕೊಳ್ಳುವ ಒಂದು ಅಲೌಕಿಕವಿಚಿತ್ರವಾದ ಪೂಜೆ ಎಂದು ಯಾರು ತಿಳಿಯುವರೊ ಅವರು ಮೇಲಿನ ಪದ್ಯಗಳನ್ನು ಅಂತಹ ಪೂಜೆ ಎಂದು ಒಪ್ಪಲಾರರು.

ನಾವೀಗ ಜಲವಿಹೀನವಾದ ಮಂಗಳ ಗಂಗಾತೀರದ ಏಕಾಂತದಲ್ಲಿದ್ದೇವೆ. ಅಲ್ಲಿಯ ನೀರವತೆ ಶಕುನಪೂರ್ಣವಾದ ಮೌನದಂತಿದೆ? ಇದ್ದಕ್ಕಿದ್ದ ಹಾಗೆ ಆ ಮಹಾಮೌನವನ್ನು ಭೇದಿಸುವ ‘ಶಕುನಿಚೀತ್ತಾರ ಘೋಷಣ’ ಕೇಳಿಬರುತ್ತದೆ. ಆ ಸದ್ದು ಬರುವ ಕಡೆಯೆ ನಾವು ಕಣ್ಣಿಟ್ಟುಕೊಂಡಿರಲು ಅನಿಲವೇಗದಿಂದ ಹಾರಿ ಬರುವ ಪೊಂದೇರೊಂದು ಗೋಚರಿಸುತ್ತದೆ. ಅದರಲ್ಲಿ, ಒಳಗೊಳಗೆ ಮರುಗಿ ಬಿಸುಸುಯ್ದು ಬೆಂದು ಬೇಗುದಿಗೊಳ್ಳುವ ರಾಮಾನುಜನು ಕುದುರೆಗಳ ವಾಘೆಗಳನ್ನು ಕೈಲಾಂತು ಮೌನವಾಗಿ ಕುಳಿತಿದ್ದಾನೆ. ಮತ್ತೊಬ್ಬ ದಿವ್ಯ ಮಂಗಳ ಸುಂದರಮೂರ್ತಿ ಯಾರು? ಆಜನ್ಮದುಃಖಿನಿಯಾದ ಸೀತಾಮಾತೆ! ತಪೋವನದ ಋಷಿಯರಿಗೆ ಋಷಿಪತ್ನಿಯರಿಗೆ ಕಾಣಿಕೆ ಕೊಡಲೆಂದು ಬಗೆ ಬಗೆಯ ದಿವ್ಯಾಂಬರಗಳನ್ನೂ ವಿವಿಧ ಮಣಿಭೂಷಣ ಸಮಸ್ತಗಳನ್ನೂ ಜೊತೆಯಲ್ಲಿ ತೆಗೆದುಕೊಂಡು, ಮುಂದೆ ತನಗೊದಗುವ ಕಷ್ಟವನ್ನು ತಿಳಿಯದ ಸಂತಸದಿಂದಿರುವ ಭೂದೇವಿಯ ಮುದ್ದುಮಗಳು! ಲಕ್ಷ್ಮಣನ ಹೃತ್ತಾಪದಂಬುಧಿಯ ಆಳವನ್ನು ಅಳೆಯವವರಾರು? ಋಷ್ಯಾಶ್ರಮಗಳಿಗೆ ಹೋಗುವೆನೆಂಬ ಸೀತಾ ದೇವಿಯ ಸಂಭ್ರಮ ಆನಂದಗಳ ಮೇರೆಯನ್ನು ಕಂಡುಹಿಡಿಯುವವರಾರು?

ಕವಿಗೆ ಗಂಗಾನದಿಯಲ್ಲಿ ಸೀತಾಲಕ್ಷ್ಮಣರಿಗೆ ಮೀಯಿಸಿದ ಹೊರತು ತೃಪ್ತಿಯಿಲ್ಲ. ಅವರು ಬಹು ದೂರ ಬಂದುದರ ಆಯಾಸಪರಿಹಾರಕ್ಕಾಗಿಯೆ? ― ಆಥವಾ ಮೈ ಬೆವರನ್ನು ತೊಳೆದು ಶುಚಿಮಾಡಿಕೊಳ್ಳುವುದಕ್ಕಾಗಿಯೆ? ― ಅಲ್ಲ. “ನಿರ್ಮಲತೀರ್ಥದೊಳ್ಮಿಂದು” ಎಂದು ಕವಿ ಹೇಳುತ್ತಾನೆ. ಅಮಲ ಗಂಗಾ ಸಲಿಲ ನಿರ್ಮಲತೀರ್ಥ! ಅದು ಬರಿಯ ದೇಹವನ್ನು ಶುಚಿ ಮಾಡುವುದೊಂದೇ ಅಲ್ಲ, ಆತ್ಮವನ್ನೂ ಪರಿಶುದ್ಧವನ್ನಾಗಿ ಮಾಡುತ್ತದೆ. ಬಳಲಿದರ ಬೇಗೆಯನ್ನು ತನ್ನ ತಣ್ಣೀರಿನಿಂದ ಪರಿಹರಿಸುವುದೊಂದೇ ಅಲ್ಲ; ಪಾಪಿಗಳ, ದುಃಖಿಗಳ ಆತ್ಮಕ್ಕೆ ಶಾಂತಿಯನ್ನುಂಟುಮಾಡುತ್ತದೆ. ಸೀತಾಲಕ್ಷ್ಮಣರು ರಥದಿಂದಿಳಿದ ಕೂಡಲೆ ಮೊದಲು ಗಂಗಾಮಾತೆಗೆ ನಮಸ್ಕಾರ ಮಾಡುತ್ತಾರೆ:

ಇಳಿದು ರಥದಿಂದ, ಮುಂದಾಕಿನಿಗೆ ಮೊಡಮಟ್ಟು,
ಬಳಿಕ ನಾವಿಕರೊಡನೆ ನಾವದೊಳ್ಗಂಗೆಯಂ
ಕಳೆದು, ನಿರ್ಮಲತೀರ್ಥದೊಳ್ಮಿಂದು ಸೌಮಿತ್ರಿ ಮತ್ತೆ ಭೂಜಾತೆ ಸಹಿತ,
ಒಳಗೊಳಗೆ ಮರುಗಿ ಬಿಸುಸುಯ್ದು ಚಿಂತಿಸುತೆ, ಮುಂ
ದಳೆದುಗ್ರಮೃಗಪಕ್ಷಿ ಗಣದಿಂದೆ ಘೂರ್ಮಿಸುವ
ಹಳುವಮಂ ಪೊಕ್ಕನಡಿಯಿಡುವೊಡಸದಳಮೆಂಬ ಕರ್ಕಶದ ಮಾರ್ಗದಿಂದೆ.

ಕವಿ ಎಚ್ಚರಿಕೆಯಿಂದಿದ್ದಾನೆ. ಸೀತಾಲಕ್ಷ್ಮಣರ ಸಂಭಾಷಣೆ ನಮ್ಮ ಕಿವಿಗೆ ಕೇಳದಂತೆ ಮಾಡಿಬಿಟ್ಟಿದ್ದಾನೆ. ಅಣ್ಣನ ಕಟ್ಟಪ್ಪಣೆಯನ್ನರಿತ ಲಕ್ಷ್ಮಣನು ಸೀತೆಯೊಡನೆ ಹೇಗೆ ತಾನೆಯೆ ಮಾತನಾಡುವುದು? ಆತನು ಮೌನಿಯಾಗಿದ್ದಾನೆ. ಆತನ ಮನಸ್ಸು ಎಲ್ಲಿಯೋ ಇದೆ. ಕೆಲಸಗಳನ್ನೆಲ್ಲ ಯಂತ್ರದಂತೆ ಮಾಡುತ್ತಿದ್ದಾನೆ. ತಾನು ಯಾರನ್ನು ಜಗನ್ಮಾತೆಯೆಂದು ಪೂಜಿಸುವನೋ, ತಾನು ಯಾರನ್ನು ಕಾಡಿನಲ್ಲಿ ಹದಿನಾಲ್ಕು ಸಂವತ್ಸರಗಳು ಕಿಂಕರನಂತೆ ಸೇವಿಸಿದನೋ, ಅಂಥಾ ಪುಣ್ಯಮಾತೆಯನ್ನು ಕಾಡಿನಲ್ಲಿ ಬಿಟ್ಟು ಬರುವ ಕಾರ್ಯ ತನ್ನ ಮೇಲೆಯೇ ಬಂದಿತಲ್ಲಾ ಎಂದು ಒಳಗೊಳಗೆ ಕುದಿಯುತ್ತಿದ್ದಾನೆ. ಸೌಮಿತ್ರಿಯ ದುರವಸ್ಥೆಯನ್ನು ಕವಿ ಹತ್ತೊಂಬತ್ತನೆಯ ಸಂಧಿಯ ಎರಡನೆಯ ಪದ್ಯದಲ್ಲಿ ಚೆನ್ನಾಗಿ ವರ್ಣಿಸಿದ್ದಾನೆ.

ಧುರದೊಳಾಂತರನಿರಿದು ಮೆರೆಯಲೇರುವ ರಥಂ
ತರಳೆಯಂ ಕಾನನಕೆ ಕಳುಹಲಡರ್ವಂತಾಯ್ತು;
ಧರೆಯೊಳಾರ್ತರನ್ಮೆದೆ ರಕ್ಷಿಸುವ ಬುದ್ಧಿ ಕೋಮಲೆಯ ಕೊಲೆಗೆಲಸಕಾಯ್ತು:
ಕರುಣಮಿಲ್ಲದೆ ಹೊರೆವ ಹರಣಮಂ ಸುಡಲಿ! ನಿ
ಷ್ಠುರದೊಳೆಂತೀ ಕೃತ್ಯಮೆಸಗುವೆನೊ? ರಾಘವೇ
ಶ್ವರನಂತಿದಕೆ ಬೆಸಸಿದನೊ ತನಗೆನುತ್ತೆ ಸೌಮಿತ್ರಿ ಮರುಗುತೆ ನಡೆದನು.

ಮುಂದೆ, ದೇವಿಗೊದಗುವ ಕಷ್ಟದ ಸಂಕೇತವೆಂಬಂತೆ, ನಿಬಿಡತರುಗಳಿಂದಿಡಿದ ಗೊಂಡಾರಣ್ಯವೊಂದು ಅಡ್ಡ ಬಂತು. ಇಲ್ಲಿ ಕವಿ ಪುನಃ ತನ್ನ ಪಾಂಡಿತ್ಯ ಪ್ರದರ್ಶನಕ್ಕೆ ಕೈ ಹಾಕಿದ್ದಾನೆ. ಎಂಟು ಒಂಬತ್ತನೆಯ ಪದ್ಯಗಳು ಶ್ಲೇಷೆ ಶಬ್ದಾಲಂಕಾರಗಳಿಂದ ತುಂಬಿಹೋಗಿವೆ. ಈ ಅಲಂಕಾರಗಳನ್ನು ಗ್ರಹಿಸುವ ನಮಗೆ ಕಾಡಿನ ನೆನಪೇ ಆಗುವುದಿಲ್ಲ. “ಶಕುನಿ ಚೀತ್ಕಾರ ಘೋಷಣಮಯಂ ತೃಣಮಯಂ” ಎಂಬ ಎಂಟನೆಯ ಪದ್ಯವೇನೊ ನಮ್ಮ ಮನಸ್ಸಿಗೆ ತನ್ನ ನಾದ ಧ್ವನಿಯಿಂದ ಕಾಡಿನಲ್ಲಿ ಉಂಟಾಗುವ ಭಯವನ್ನು ತರುತ್ತದೆ. ಆದರೆ ಅದು ನಾದ ಮಹಿಮೆಯೆ ಹೊರತು ಭಾವದ ಪ್ರಭಾವವಲ್ಲ. ಎಂಟು ಒಂಭತ್ತನೆಯ ಪದ್ಯಗಳಿಗಿಂತಲೂ ಹತ್ತನೆಯ ಪದ್ಯದ “ಅಟವಿಯ ಮಹಾ ಘೋರಗಹ್ವರಂ ಮುಂದೆ ದುರ್ಘಟಮಾಗೆ ನಡು ನಡುಗಿ ಭೀತಿಯಂ ಸೀತೆ …..” ಎಂಬ ಎರಡೇ ಪಂಕ್ತಿಗಳು ನಮಗೆ ನಿಜವಾದ ಕಾಡಿನ ಅನುಭವವನ್ನು ತಂದು ಕೊಡುತ್ತವೆ.

ಯಾವಾಗ ಲಕ್ಷ್ಮಣನು, “ಅಡಿಯಿಡುವೊಡಸದಳಮೆಂಬ ಕರ್ಕಶದ ಮಾರ್ಗದಿಂದ” ಹೊರಟನೋ ಆಗ ಸೀತೆಗೆ ಭಯತಟ್ಟಿತು. ಮೊದಲು ಮಾತಾಡಿದ್ದು ಸೌಮಿತ್ರಿಯಲ್ಲ, ಸೀತೆ! ಏನೆಂದು ಕೇಳಿದಳು? ಯಾವನೋ ಒಬ್ಬ ಪ್ರಯಾಣಿಕನು ಇನ್ನಾವನೋ ಒಬ್ಬನನ್ನು ಕೇಳುವಂತೆ, “ಆವುದೀ ದಾರಿ! ಪೇಳೆತ್ತಲಿದು ಪೋದಪುದು?” ಎಂದು ಕೇಳಲಿಲ್ಲ. ಕಾಡಿನಲ್ಲಿ ದಾರಿಯಾದರೂ ಬರುವುದೆಲ್ಲಿಂದ! ಅವರು ಹೋದುದೇ ಹಾದಿ! “ಎಲೆ ಸೌಮಿತ್ರಿ, ಕಾನನಮಿದು ಅಟನಕಸದಲಮಪ್ಪುದು; ಇಲ್ಲಿ ಪುಣ್ಯಾಶ್ರಮದ ಜಟಿಗಳಂ ವಲ್ಕಲವನುಟ್ಟು ಮುನಿವಧುಗಳಂ ವಟುಗಳಂ ಶ್ರುತಿಘೋಷ ಹೋಮ ಧೂಮಂಗಳಂ ಕಾಣೆನ್ ಎಂದು ಅಳವಳಿದಳು.” ಹಿಂದೆ ರಾಮನೊಡನೆ ವನವಾಸಕ್ಕೆ ಹೋದಾಗ ಆಕೆ ಅನೇಕ ಋಷ್ಯಾಶ್ರಮಗಳನ್ನು ನೋಡಿದ್ದಳು. ಎಲೆವನೆಗಳಲ್ಲಿ ಕಿತ್ತಡಿಗಳೊಡನೆ ವಾಸಮಾಡಿದ್ದಳು. ಆಕೆಯ ಬಗೆಯಲ್ಲಿ ಪುಣ್ಯಾಶ್ರಮದ ವಾತಾವರಣ ಇನ್ನೂ ಅಚ್ಚಳಿಯದಿದೆ. ಆದ್ದರಿಂದಲೆ ಕವಿ ಯುಕ್ತಿಯುಕ್ತವಾಗಿ ಹೀಗೆಂದು ದೇವಿಯ ಬಾಯಲ್ಲಿ ಹಾಡಿಸಿದ್ದಾನೆ:

ಎಲ್ಲಿ ಮುನಿಪೋತ್ತಮರ ಪಾವನದ ವನದೆಡೆಗೆ
ಳೆಲ್ಲಿ ಸಿದ್ಧಾಶ್ರಮಂಗಳ ಮಂಗಳ ಸ್ಥಳಗ
ಳೆಲ್ಲಿ ಸುಹವಿಗಳ ಕಂಪೊಗೆದೆ ಪೊಗೆದಳೆದಗ್ನಿ ಹೋತ್ರದ ಕುಟೀರಂಗಳು
ಎಲ್ಲಿ ‘ಪರಿಚಿತವಾದ’ ವಾದವೇದಧ್ವನಿಗ
ಳಲ್ಲಿಗುಯ್ಯದೆ ದಾರುದಾರುಣದ ಕಟ್ಟಡವಿ
ಗಿಲ್ಲಿಗೇಕೈತಂದೆ ತಂದೆ ಸೌಮಿತ್ರಿ, ಹೇಳೆಂದು ಜಾನಕಿ ಸುಯ್ದಳು.

ಈ ಪದ್ಯ ಅತ್ಯಂತ ಸುಲಲಿತವಾಗಿದೆ. ಇಲ್ಲಿ ಶಬ್ದಾಲಂಕಾರಗಳಿದ್ದರೂ ಅವು ಭಾವ ಅರ್ಥ ಇವುಗಳಲ್ಲಿ ಮುಚ್ಚಹೋಗಿವೆ. “ಪಾವನದ ವನದೆಡೆಗಳು “, “ಆಶ್ರಮಂಗಳ ಮಂಗಳಸ್ಥಳಗಳು “, “ಕಂಪೊಗೆದೆ ಪೊಗೆದಳೆದ “, “ಪರಿಚಿತವಾದ ವಾದವೇದ “, “ದಾರುದಾರುಣದ “, “ಐತೆಂದೆ ತಂದೆ” ಮೊದಲಾದುವು ಭಾವವನ್ನು ಪುಷ್ಟಿಗೊಳಿಸುತ್ತವೆ. ಇಲ್ಲಿ ಕವಿ ಸೀತಾದೇವಿಯ ಪೂರ್ವಾನುಭವವನ್ನು ಸೂಚಿಸುವ “ಪರಿಚಿತವಾದ” ಎಂಬ ಶಬ್ದವನ್ನು ಉಪಯೋಗಿಸಿದ್ದಾನೆ. ಆಕೆಯೂ ಏನೂ ತಿಳಿಯದ ಅಣುಗಿಯಲ್ಲ. ಇನ್ನು ಸೌಮಿತ್ರಿ ಗುಟ್ಟನ್ನು ಹೇಳದೆ ಸುಮ್ಮನೆ ಮುಂದುವರಿಯಲಾರ! “ಶ್ರೀರಾಮಚಂದ್ರನ ಅಡಿದಾವರೆಗಳನ್ನು ಬಿಟ್ಟು ಬಂದ ನನಗೆ ಈ ವನದೊಳಿನ್ನು ಪುಣ್ಯಾಶ್ರಮ ಗೋಚರಿಸುವುದೆ? ವನಜದರಳನುಳಿದಾರಡಿಗೆ ಬೊಬ್ಬುಳಿಯ ಪೂವಿನೋಳ್ಮಧವುಂಟೆ, ಸೌಮಿತ್ರಿ? ಹೇಳು!” ಎಂದು ಭೂಜಾತೆ ದುಃಖಿತೆಯಾಗುತ್ತಾಳೆ. ರಾಮಾನುಜನು ನಿಜವನ್ನು ಹೇಳಲೋ ಬೇಡವೋ ಎಂದು ಚಿಂತಿಸಿ, ಕಡೆಗೆ

ಉಕ್ಕಿದುವು ಕಂಬನಿಗಳ್, ಅಧರೋಷ್ಠಮದಿರಿತು, ಅಲ
ಗಿಕ್ಕಿ ತಿರುಪಿದವೊಲಾಯ್ತೊಡಲೊಳ್, ಎಡೆವರಿಯದುಸಿ
ರೊಕ್ಕುದರೆ ಕಂಪಿಸಿದುದವಯವಂ, ಕರಗಿತೆರ್ದೆ, ಸೈರಣೆ ಸಮತೆಗಟ್ಟುದು,
ಸಿಕ್ಕಿದುವು ಕಂಠದೊಳ್ಮಾತುಗಳ್ ಸೆರೆಬಿಗಿದು
ಮಿಕ್ಕುಮೀರುವ ಶೋಕದಿಂದೆ ಬೆಂಡಾಗಿ ಕಡು
ಗಕ್ಕಸದ ಕೆಲಸಮನ್ ಉಸಿರಲರಿಯದವನೊಯ್ಯನವನಿಸುತೆಗಿಂತೆಂದನು
ದೇವಿ, ನಿನಗಿನ್ನೆಗಂ ಪೇಳ್ದುದಿಲ್ಲ; ಅಪವಾದ
ಮಾವರಿಸೆ ನಿನ್ನನೊಲ್ಲದೆ ರಘುಕುಲೋದ್ವಹಂ
ಸೀವರಿಸಿ ಬಿಟ್ಟು ಕಾಂತಾರಕ್ಕೆ ಕಳುಹಿ ಬಾಯೆಂದೆನಗೆ ನೇಮಿಸಿದೊಡೆ
ಆ ವಿಭುವಿನಾಜ್ಞೆಯಂ ಮೀರಲರಿಯದೆ ನಿಮ್ಮ
ನೀ ವಿಪಿನಕೊಡಗೊಂಡು ಬಂದನ್. ಇನ್ನೊಯ್ಯೆಯ್ಯ
ನಾವಲ್ಲಿಗಾದೂಡಂ ಪೋಗು. ಎಂದು ಲಕ್ಷ್ಮಣಂ ಬಾಷ್ಟಲೋಚನನಾದನು.

ಮುಂದೆ ಕವಿಚೂತನವನಚೇತ್ರನು ತನ್ನ ಬಿರುದಿಗೆ ತಕ್ಕ ಪದ್ಯಗಳನ್ನು ರಚಿಸಿರುತ್ತಾನೆ. ಇಲ್ಲಿ ಆತನ ನಿಜವಾದ ಹೃದಯ ಒಡೆದು ಮೂಡಿದೆ. ಇಲ್ಲಿ ತನ್ನ ಪಾಂಡಿತ್ಯವನ್ನು ಮರೆತುಬಿಟ್ಟಿದ್ದಾನೆ. ಎದೆ ನುಡಿಯುವಾಗ ಬುದ್ಧಿ ಸೇವಕನಾಗುವುದೊಂದು ಕೌತುಕವಲ್ಲ. ಸೀತೆ ಮೈದುನನ ಮಾತನ್ನು ಕೇಳಿದೊಡನೆಯೆ ಮೈಮರೆತು ನೆಲಕ್ಕುರುಳುತ್ತಾಳೆ: “ಬರೆಸಿಡಿಲ್ತಾಗೆ ಭೂಮಿಗೆ ಬಿದ್ದ ಪುರದ ಗೋಪುರದ ಚೆಲ್ವಾಂತ ಪೊಂಬತ್ತಳಿಯೊ” ಎಂದಲ್ಲ ನಮ್ಮ ಕವಿ ವರ್ಣಿಸುವುದು:

ಬಿರುಗಾಳಿ ಪೊಡೆಯಲ್ಕೆ ಕಂಪಿಸಿ “ಪಲಿತ ಕದಳಿ “
ಮರಿದಿಳಗೊರಗುವಂತೆ ಲಕ್ಷ್ಮಣನ ಮಾತು ಕಿವಿ
ದೆರೆಗೆ ಬೀಳದ ಮುನ್ನ ಹಮ್ಮೈಸಿ ಬಿದ್ದಳಂಗನೆ ಧರೆಗೆ ನಡುನಡುಗುತೆ.

ಎಂದು ಅರ್ಥಭಾವಗರ್ಭಿತವಾಗಿ ವರ್ಣಿಸಿದ್ದಾನೆ. ಗರ್ಭಿಣಿಯಾದ ಕೋಮಲೆಯನ್ನು ಗೋಪುರದ ಚೆಲ್ವಾಂತ ಪೊಂಬುತ್ತಳಿಗೆ ಹೋಲಿಸುವುದಕ್ಕಿಂತಲೂ “ಪಲಿತ ಕದಳಿ “ಗೆ ಹೋಲಿಸುವುದು ಎಷ್ಟೋ ರಸವತ್ತಾಗಿರುವುದಿಲ್ಲವೆ? ಈ ದುಃಖಮಯವೂ ಉದ್ವೇಗಕರವೂ ಆದ ಸನ್ನಿವೇಶವನ್ನು ಸ್ವಲ್ಪ ನಮ್ಮ ಕಣ್ಣ ಮುಂದೆ ಚಿತ್ರಿಸಿಕೊಳ್ಳೋಣ. ತನ್ನಿನಿಯನಿಂದ ಬಿಡಲ್ಪಟ್ಟ ರಮಣಿಯೊಬ್ಬಳು ಅಳಲಿನಿಂದ ಮೈಮೆರೆತು ನಿರ್ಜನಾರಣ್ಯದಲ್ಲಿ ನೆಲದ ಮೇಲೊರಗಿದ್ದಾಳೆ. ಆಕೆಯ ಬಳಿ ಸೋದರನ ಆಣತಿಗೆ ಒಳಗಾಗಿ ಈ ಘೋರ ಕೃತ್ಯವನ್ನು ಎಸಗಬಂದ ವೀರನೂ, ಸ್ವಾಭಾವಿಕವಾಗಿ ಕರುಣಾಶಾಲಿಯೂ, ಆ ರಮಣಿಯನ್ನು ತಾಯಿಯಂತೆ ಪೂಜಿಸುವ ಭಕ್ತನೂ ನಿಂತಿದ್ದಾನೆ. ಆತನಿಗೆ ಮುಂದೇನು ಮಾಡಬೇಕೋ ತೋರದು. “ಮರುಗಿ, ತಣ್ಣೀರ್ದಳಿದು, ಪತ್ರದೊಳ್ಕೊಡೆವಿಡಿದು, ಸೆರಗಿಂದ ಬೀಸಿ, ರಾಮನ ಸೇವೆ ಸಂದುದೇ ತನಗೆಂದು ರೋದಿಸಿದನು.” ಸೌಮಿತ್ರಿಯ ಮನದಲ್ಲಿ ಮಿಂಚಿದ ವಿಚಾರತರಂಗಗಳ ಸಾರಪರಿಣಾಮಗಳನ್ನು ಕವಿ ‘ರಾಮನ ಸೇವೆ ಸಂದುದೇ ತನಗೆ’ ಎಂಬ ಒಂದು ವಾಕ್ಯದಲ್ಲಿ ಸೂಚಿಸಿದ್ದಾನೆ. ಲಕ್ಷ್ಮಣನ ಆ ಮಾತುಗಳನ್ನು ಕೇಳಿದ ಕೂಡಲೆ ನಮಗೆ, ಮರಳಿ ಆತನು ತನ್ನಣ್ಣನ ಬಳಿಗೆ ಹೋಗುವುದಿಲ್ಲ ಎಂಬ ಭಾವನೆ ಉಂಟಾಗುತ್ತದೆ. ಆಗ ಆತನು ಹಾಗೆ ನಿಶ್ಚೈಸಿದ್ದರೊ ಇರಬಹುದು! ಮುಂದೆ

ಒಯ್ಯನರೆಗಳಿಗೆಯೊಳ್ ಕಣ್ದೆರೆದು, ದೈನ್ಯದಿಂ
ಸುಯ್ಯೆಲರನುರೆ ಸೂಸಿ, ಸೌಮಿತ್ರಿಯಂ ನೋಡಿ,
ಕೊಯ್ಯಲೊಲ್ಲದ ಕೊರಳನಿಂತು ತನ್ನಂ ಬಿಡಲ್ ಮಾಡಿದಪರಾಧಮುಂಟೆ?
ಕಯ್ಯಾರೆ ಖಡ್ಗಮಂ ಕೊಟ್ಟು ತನ್ನರಸಿಯಂ
ಹೊಯ್ಯೆಂದು ಪೇಳದಡವಿಗೆ ಕಳುಹಿ ಬಾಯೆಂದನ್
ಅಯ್ಯಯ್ಯೊ ರಾಘವಂ ಕಾರುಣ್ಯನಿಧಿ ಎಂದಳಲ್ದಳಂಭೋಜನೇತ್ರೆ.

ತಾನು ಕಣ್ದೆರೆದು ನೋಡಿದಾಗ ಸೀತೆ ಶ್ರೀರಾಮಚಂದ್ರನ ಸತಿಯಾಗಿರಲಿಲ್ಲ. ಯಾವಳೊ ಒಬ್ಬ ಅನಾಥೆಯಂತಿದ್ದಳು. ಆದ್ದರಿಂದಲೆ “ದೈನ್ಯದಿಂ ಸುಯ್ಯೆಲರನುರೆ ಸೂಸಿ, ಸೌಮಿತ್ರಿಯಂ ನೋಡಿ” ಎಂದು ಕವಿ ಹಾಡಿರುವನು. ಭಯಂಕರವಾದ ಏಕಾಂತ ವನವಾಸಕ್ಕಿಂತ ಮರಣವೆ ಲೇಸೆಂದು ದೇವಿಗೆ ತೋರಿತು. ಆದ್ದರಿಂದಲೆ “ಕೈಯ್ಯಾರೆ ಖಡ್ಗಮಂ ಕೊಟ್ಟು ತನ್ನರಸಿಯಂ ಹೊಯ್ಯೆಂದು ಪೇಳದೆ ಅಡವಿಗೆ ಕಳುಹಿ ಬಾಯೆಂದನೆ? ಅಯ್ಯಯ್ಯೊ ರಾಘವಂ ಕಾರುಣ್ಯನಿಧಿ” ಎಂದು ಸೀತೆ ಮರುಗಿದಳು. ಕಾರುಣ್ಯನಿಧಿ ಎಂಬ ರಾಮಚಂದ್ರನಿಗೂ ಆತನು ಈಗ ಮಾಡಿದ ಕಾರ್ಯಕ್ಕೂ ಎಷ್ಟೊಂದು ಅಂತರ! ಮುಂದಿನ ಹದಿನೆಂಟು, ಹತ್ತೊಂಬತ್ತು, ಇಪ್ಪತ್ತು ― ಈ ಮೂರು ಪದ್ಯಗಳಲ್ಲಿ ಭೂಜಾತೆಯ ವಿಲಾಪವನ್ನು ಕವಿ ಸರಸವಾಗಿ, ಆಲಿಸುವವರ ಎದೆ ಕರಗುವಂತೆ ವರ್ಣಿಸಿದ್ದಾನೆ. ಜನಕಸುತೆಗೆ ಹಿಂದಿನ ವನವಾಸದ ನೆನಪಾಗಿ, ತನ್ನೆರೆಯನು ತನ್ನನ್ನು ಕಡೆಗೆ ಕಾಡುಪಾಲು ಮಾಡುವುದಕ್ಕಾಗಿಯೆ ಕಪಿವೃಂದವನ್ನು ನೆರಪಿದನೆ? ಕಡಲನ್ನು ಕಟ್ಟಿದನೆ? ದೈತ್ಯರನ್ನು ಕೊಂದನೆ? ಎಂದು ಮೊದಲಾಗಿ ರೋದಿಸುವಳು. ಆಮೇಲೆ ತನ್ನೆದುರಿಗೆ ಕಂಬನಿ ಕರೆಯುತ್ತ ದುಃಖಾರ್ತನಾಗಿ ನಿಂತ ಸೌಮಿತ್ರಿಯನ್ನು ಕುರಿತು ಹಿಂದೆಂದೂ ತನ್ನ ಮಾತನ್ನು ಅಲ್ಲಗಳೆಯದೆ ತನಗಾಗಿ ಎಷ್ಟೋ ಕಷ್ಟ ಪರಂಪರೆಗಳನ್ನು ಮೌನವಾಗಿ ಸೈರಿಸಿದ ಆತನೂ ಕೂಡ ಇತರರಂತೆ ತನ್ನನ್ನು ಈ ದುರವಸ್ಥೆಗೀಡುಮಾಡುಬಹುದೇ ಎಂದು ಅಂಗಲಾಚಿ ಬೇಡುವಳು.

ಸೀತಾದೇವಿ ‘ಪಾವಗಿದ ಪಸುಳೆವೊಲಿರೆ’ ಲಕ್ಷ್ಮಣನು, “ತಾಯೆ, ನಿನ್ನಂ ಬಿಟ್ಟು ಪೋಗಲಾರೆಂ, ಪೋಗದೀಯವಸ್ಥೆಯೊಳಿರ್ದೊಡಣ್ಣನೇ ಗೈದಪನೊ!” ಎಂದು ಶೋಕ ಗದ್ಗದನಾಗುತ್ತಾನೆ. ಆಗ ಜನಕತನುಜೆ ಮೈದುನನ “ಅತ್ತ ಪುಲಿ, ಇತ್ತದರಿ” ದುರವಸ್ಥೆಯನ್ನು ಕಂಡು, ಸ್ವಲ್ಪ ಕ್ರೂರ ಪರಿಹಾಸ್ಯವಾಗಿ “ಏಕೆ ನಿಂದಿಹೆ ಪೋಗು, ಸೌಮಿತ್ರಿ.” “ಆರಿರ್ದೊಡೇಗೈವರಿದು ತನ್ನ ಮರುಳಾಟ” ಎಂದು ಮೊದಲಾಗಿ ಇಪ್ಪತ್ತೈದು ಇಪ್ಪತ್ತಾರನೆಯ ಪದ್ಯಗಳಲ್ಲಿ ಹೇಳಿಕೊಳ್ಳುತ್ತಾಳೆ. ಇದು ಸ್ತ್ರೀಸಾಮಾನ್ಯಕ್ಕೆ ಸಹಜ. ಆದರೆ ಸೀತಾಮಾತೆ ಸಾಮಾನ್ಯ ಸ್ತ್ರೀಯಲ್ಲ. ಭರತಖಂಡದ ರಮಣಿಯರಿಗೆ ಆದರ್ಶಳಾದವಳು. ಶ್ರೀ ಸ್ವಾಮಿ ವಿವೇಕಾನಂದರ ಮಾತಿನಲ್ಲಿ “ಶ್ರೀರಾಮರಂಥಾ ಮಹಾಪುರಷರು ಹಿಂದೆಯೂ ಅನೇಕರಿದ್ದರು. ಮುಂದೆಯೂ ಅನೇಕರು ಬರಬಹುದು. ಆದರೆ ಸೀತಾದೇವಿ ಸರ್ವಕಾಲಕ್ಕೂ ಒಬ್ಬಳೇ. ತನಗೆ ಬಂದೊದಗಿದ ಎಡರುಗಳನ್ನೆಲ್ಲವನ್ನೂ ಗೊಣಗುಟ್ಟದೆ ಸಹಿಸಿದ ಪುಣ್ಯಮಾತೆ ಆಕೆ! ಆಕೆ ಅಪ್ರತಿಮ ಸ್ತ್ರೀ, ಅದ್ವಿತೀಯಳಾದವಳು, ಎಣೆಯಿಲ್ಲದವಳು. ಅಂಥಾ ಮಾತೆಯನ್ನೂ ಹಿಂದೆ ನಾವು ಇನ್ನೆಲ್ಲಿಯೂ ಕಂಡಿಲ್ಲ; ಮುಂದೆಯೂ ಕಾಣಲಾರೆವು.” ಕಟ್ಟಕಡೆಗೆ ಸೀತೆಯ ಬಾಯಿಂದ ಬಂದ ನುಡಿಗಳಿವು!

ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ,
ಕಡುಪಾತಕಂ ಗೈದು ಪೆಣ್ನಾಗಿ ಸಂಭವಿಸಿ
ದೂಡಲಂ ಪೊರೆವುದೆನ್ನೊಳಪರಾಧಮುಂಟು, ಸಾಕು, ಇರಲ್ಬೇಡ ನೀನು,
ನಡೆ, ಪೋಗು, ನಿಲ್ಲದಿರ್, ನಿನಗೆ ಮಾರ್ಗದೊಳಾಗ!
ಲಡಿಗಡಿಗೆ ಸುಖಂ….. *

ತರುವಾಯ ತನ್ನ ಮಾತೆಯನ್ನು ಬಿಟ್ಟುಹೋಗುವುದಕ್ಕೆ ಮುಂಚೆ ಲಕ್ಷ್ಮಣನು ವಿಪಿನದಭಿಮಾನಿಗಳಿಗೆ ಕೈಮುಗಿದು ನುಡಿಯುತ್ತಾನೆ. ಇದು ನಮ್ಮ ಸಾಹಿತ್ಯದಲ್ಲಿರುವ ಅತ್ಯಂತ ಉತ್ತಮವಾದ ಪದ್ಯಗಳಲ್ಲಿ ಒಂದೆಂದು ನಮ್ಮ ಅಭಿಪ್ರಾಯ. ಊರ್ಮಿಳಾವಲ್ಲಭನೆಗೆ ಸೃಷ್ಟಿ ಚೈತನ್ಯಾತ್ಮಕವೆಂದು ಚೆನ್ನಾಗಿ ಗೊತ್ತು. ವನಸ್ಥಳಗಳು, ವೃಕ್ಷಗಳು, ಮೃಗಗಳು ಇವುಗಳೆಲ್ಲಕ್ಕೂ ಆತ್ಮವಿದೆಯೆಂದು ಆತನ ದೃಢವಾದ ನಂಬುಗೆ. ಆ ದೃಶ್ಯವನ್ನು ಸ್ವಲ್ಪ ಊಹಿಸಿ ನೋಡಿ. ಆ ಮಂಗಳ ಭಯಂಕರವಾದ ಚಿತ್ರವನ್ನು ಮನಸ್ಸಿನಲ್ಲಿ ಚಿತ್ರಿಸಿ ನೋಡಿದರೆ ಮೈ ರೋಮಾಂಚನವಾಗದಿರದು. ಸೌಮಿತ್ರಿ ಸೀತೆಯನ್ನು ಬಿಟ್ಟು ಹೋದುದು ಯಾವ ಸಮಯದಲ್ಲಿ? ಕವಿ ಅದನ್ನು ಸೂಚಿಸುವುದಿಲ್ಲ; ಸೂಚಿದಿದ್ದರೆ ಎಷ್ಟೋ ಚೆನ್ನಾಗಿತ್ತು. ಭಾವಪ್ರಪಂಚದಲ್ಲಿ ನಮಗೂ ಅಧಿಕಾರವಿರುವುದರಿಂದ ನಾವೇ ಅದನ್ನು ಕಲ್ಪಿಸೋಣ. ಆಗ ಪ್ರಭಾತ ಪ್ರಭಾಕರನ ಧರ್ಮಜ್ಯೋತಿ ಪವಿತ್ರ ಗಂಗಾತೀರದ ರಮ್ಯವನದ ಮೇಲೆ ನರ್ತಿಸುತ್ತಿತ್ತೆಂದು ಭಾವಿಸೋಣವೆ? ಅಥವಾ ಬೈಗಿನ ಹೊತ್ತೆಂದು ಭಾವಿಸೋಣವೆ? ವರ್ಣನೆಗಳಿಂದ ಮಧ್ಯಾಹ್ನವಲ್ಲವೆಂದು ತೊರುತ್ತದೆ. ಒಂದು ವೇಳೆ ಮಧ್ಯಾಹ್ನವೆಂದು ಭಾವಿಸದರೆ ಕವಿಯ ವರ್ಣನೆ ಸಪ್ಪೆಯಾಗಬಹುದು. “ಮೊರೆಯಲೊಲ್ಲವು ತುಂಬಿ,” “ವೀಸಿದುವು ಬಾಲದೊಳ್ಚಮರಿಗಳ್ಚಮರಮಂ” ಎಂಬ ಪದ್ಯಗಳಿಂದ ಪ್ರಕೃತಿಯ ಸಹಾನುಭೂತಿಯನ್ನು ಕವಿ ತೋರಿಸಿದ್ದಾನೆ. ಮಧ್ಯಾಹ್ನವೆಂದು ಭಾವಿಸಿದರೆ ಅದು ನೀರಸ ಸಹಜವಾಗುವುದಿಲ್ಲವೆ? ಸಂಜೆಯ ಹೊತ್ತೆಂದು ಭಾವಿಸೋಣ. ಏಕೆಂದರೆ ಋಷಿಗಳು ಪ್ರಾತಃಕಾಲದಲ್ಲಿ ತಮ್ಮ ಧ್ಯಾನ ಮೊದಲಾದ ನಿತ್ಯಕರ್ಮಾಚರಣೆಗಳಲ್ಲಿ ತೊಡಗಿರಬಹುದರಿಂದ ಆಶ್ರಮದಿಂದ ಬಹುದೂರ ಹೋಗುವುದಿಲ್ಲ. ಕವಿ “ಅನ್ನೆಗಂ ಮುಖಕೆ ಯೂಪವನರಸುತಾ ಬನಕೆ ಸನ್ನುತ ತಪೋಧನಂ ವಾಲ್ಮೀಕಿ ಮುನಿವರಂ ಬಂದನು” ಎಂದು ಹೇಳಿರುವನು. ಆದ್ದರಿಂದ ಸಂಜೆಯೆಂದು ಭಾವಿಸುವುದೆ ಉಚಿತವೆಂದು ತೋರುತ್ತದೆ.

ಬೈಗಿನ ನೇಸರು ತನ್ನ ಹೊಂಬೆಳಕನ್ನು ಓರೆಯಾದ ಕಿರಣಗಳಿಂದ ಗಂಗೆಯ ಮೇಲೆಯೂ ಇಕ್ಕೆಲದ ಬನಗಳ ಮೇಲೆಯೂ ದಟ್ಟವಾಗಿ ಚಿಮುಕಿಸುತ್ತಿದ್ದಾನೆ. ಆ ಸಂಧ್ಯಾಜ್ಯೋತಿಯನ್ನು ಗಂಗೆಯ ಬಿತ್ತರದ ಮರಳುದಿಣ್ಣೆಯ ಮೇಲೆ ಲಕ್ಷೋಪಲಕ್ಷ ಸೈಕತ ಕಣಗಳು ಪ್ರತಿಬಿಂಬಿಸಿ ಮಿರುಗುತ್ತಿವೆ. ಆ ಸಾಯಂಕಾಲದ ಪ್ರಶಾಂತತೆಯಲ್ಲಿ ಗಂಗೆಯ ಸಲಿಲದ ಮಂಜುಳ ನಾದದೊಡನೆ ಬಣ್ಣ ಗಣ್ಣದ ಗರಿಯ ಹಕ್ಕಿಗಳು ಹಾಡಿ ಹಾರಾಡುತ್ತಿವೆ. ಸಮಸ್ತ ವನವೂ ಧ್ಯಾನಾರೂಢನಾದ ಯೋಗೀಶ್ವರನಂತಿದೆ. ಸಂಧ್ಯಾಸಮೀರನು ಒಯ್ಯೊಯ್ಯನೈತಂದು ಬೀಸುತ್ತಿದ್ದಾನೆ. ಸೀತಾದೇವಿ ನೆಲದ ಹಸುರಿನಮೇಲೆ ಬಿದ್ದಿದ್ದಾಳೆ. ಸೌಮಿತ್ರಿ ಕಣ್ಣೀರು ಸುರಿಸುತ್ತಾ ಕೈಮುಗಿದುಕೊಂಡು ವಿಪಿನದಭಿಮಾನಿಗಳನ್ನು ದೈನ್ಯದಿಂದ ಬೇಡುತ್ತಿದ್ದಾನೆ:

ಎಲೆ ವನಸ್ಥಳಗಳಿರ, ವೃಕ್ಷಂಗಳಿರ, ಮೃಗಂ
ಗಳಿರ, ಕ್ರಿಮಿಕೀಟಂಗಳಿರ, ಪಕ್ಷಗಳಿರ, ಲತೆ
ಗಳಿರ, ತೃಣಗುಲ್ಮಂಗಳಿರ, ಪಂಚಭೂತಂಗಳಿರ, ದೆಸೆಗಳಿರ, ಕಾವುದು.
ಎಲೆ ಧರ್ಮದೇವತೆ, ಜಗಜ್ಜನನಿ, ಜಾಹ್ನವಿಯೆ,
ಸಲಹಿಕೊಳ್ವುದು ತನ್ನ ಮಾತೆಯಂ ಜಾನಕಿಯನ್
ಎಲೆ ತಾಯೆ, ಭೂದೇವಿ, ನಿನ್ನ ಮಗಳಿಹಳ್ ಎಂದು ಸೌಮಿತ್ರಿ ಕೈಮುಗಿದನು.

ತರುವಾಯ ಲಕ್ಷ್ಮಣನು ತನ್ನನ್ನು ತಾನೆ ಬೈದುಕೊಳ್ಳುತ್ತಾ “ದೇವಿಯಂ ಬಲವಂದು, ನಮಿಸಿ ಬಳಿಕ” ಮೆಲ್ಲನೆ ಹೊರಡುತ್ತಾನೆ. “ತಾಯನೆಳಗರು ಬಿಚ್ಚುವಂತೊಯ್ಯನೊಯ್ಯನೆ” ಎಂಬುದು ಕವಿಯ ಉಕ್ತಿ! ಪಾಪ, ಆತನ ಮನಸ್ಸು ಹಿಂದಕ್ಕೂ ಮುಂದಕ್ಕು ಅಲೆದಾಡಿ “ತೂಗುಯ್ಯಲೆವೊಲಾದನು.” ಸೌಮಿತ್ರಿ ಅಮರ ನದಿಯನ್ನು ದಾಟಿ ಸಾಗಿದನು. ಇತ್ತ ಸೀತಾದೇವಿ “ಹಾಯೆಂದೊರಲ್ದು ಭಯಶೋಕದಿಂದಸವಳಿದು ಕಾಯಮಂ ಮರೆದವನಿ ಗೊರಗಿದಳ್ಬೇರ್ಗೊಯ್ದ ಬಿಸುಟೆಳೆಯ ಬಳ್ಳಿಯಂತೆ!” ಸೌಮಿತ್ರಿಯ ಪ್ರಾರ್ಥನೆ ನಿಷ್ಫಲವಾಗಲಿಲ್ಲ. ಪ್ರಕೃತಿದೇವಿ ತನ್ನ ಸಹಾನುಭೂತಿಯನ್ನು ತೋರಿಸಿದಳು. “ಜಗದೊಳುತ್ತನುರ ಹಾನಿಯಂ ಕಂಡು ಸೈರಿಸುವರುಂಟೆ!” ಮುವತ್ತೆರಡನೆಯ ಪದ್ಯವನ್ನೊಳಕೊಂಡು ಮೂವತ್ತೇಳನೆಯ ಪದ್ಯದವರೆಗೂ ಕವಿ ಪ್ರಕೃತಿಯ ಸಹಾನುಭೂತಿಯನ್ನು ವರ್ಣಿಸಿದ್ದಾನೆ. “ಜಗದೊಳುಪಕಾರಿಯಾದವಂ ತನ್ನ ನೋವಂ ನೋಳ್ಪನೆ?” ಇದನ್ನೇ ಹೋಲುವ ಇನ್ನೊಂದು ಸನ್ನಿವೇಶವನ್ನು ಚಂದ್ರಹಾಸನನ್ನು ಕೊಲೆಪಾತಕರು ಕಾಡಿನಲ್ಲಿ ಬಿಟ್ಟಾಗ ನೊಡುತ್ತೇವೆ.

ಮುಂದೆ ಸೀತೆಗಿನ್ನು ಗತಿಯಾವುದು? ಎಂದು ನಾವು ಚಿಂತಾಕ್ರಾಂತರಾಗುವಾಗಲೆ ಧರ್ಮವೇ ಮೂರ್ತಿಮತ್ತಾಗಿ ಬಂದಂತೆ ಆದಿ ಕವಿಯೂ, ಪೂಜ್ಯನೂ, ಋಷಿತಿಲಕನೂ ಆದ ವಾಲ್ಮೀಕಿ ತನ್ನ ಶಿಷ್ಯರ್ವೆರಸಿ ಅಲ್ಲಿಗೆ ಬರುವನು. ಇದೊಂದು ಅದೃಷ್ಟಲೀಲೆ! ಯಾರು ತನ್ನ ಮಹಾಕಾವ್ಯದ ಕಥಾನಾಯಿಕೆಯಾಗುವಳೋ ಅಂತಹ ಮಹಾ ಪತಿವ್ರತೆಯೇ ತನ್ನ ಎದೆಯೆರೆಯನಿಂದ ತ್ಯಜಿಸಲ್ಪಟ್ಟು ಕಾಡಿನಲ್ಲಿ ಅನಾಥಳಂತೆ ಬಿದ್ದಿದ್ದಾಳೆ. ಆ ಶಾಂತ ಮೂರ್ತಿಯನ್ನು ನೋಡಿದಾಗ ದೇವಿಗೆ ಎಷ್ಟು ಆನಂದವಾಯಿತೊ ಯಾರು ಬಲ್ಲರು? “ಎಲೆ ತಾಯಿ ನೀನಾವಳೌ? ಕಂಡ ಕುರುಪಾಗಿರ್ಪುದು. ಹೆದರಬೇಡ, ವಾಲ್ಮೀಕಿ ನಾಂ. ಭೂರಿಶೋಕಾರ್ತರಾಗಿರ್ದರಂ ಕಂಡು ಸುಮ್ಮನೆ ಪೋಪನಲ್ಲ” ಎಂದು ಋಷಿ ನುಡಿದೊಡನೆ ಸೀತೆಗೆ, “ಹರುಷಮೊತ್ತರಿಸಿದುದು; ಶೋಕವಿಮ್ಮಡಿಸಿದುದು; ಬೆರಸಿದುದು ಲಜ್ಜೆ “. ನಡೆದ ಸಂಗತಿಯೆಲ್ಲವನ್ನೂ ಹೇಳುತ್ತಾಳೆ. ಆಗ ವಾಲ್ಮೀಕಿ, “ದೇವಿ, ಬಿಡು ಶೋಕಮಂ, ಜನಕಂಗೆ ನಾವನ್ಯರಲ್ಲ” ಎಂದು ತನ್ನಾಶ್ರಮಕ್ಕೆ ಕರೆತರುತ್ತಾನೆ. ಅಲ್ಲಿ ಮುನಿವಧುಗಳೊಡನೆ ಅಷ್ಟೈಶ್ವರ್ಯ ಸಂಪನ್ನನಾದ ಶ್ರೀರಾಮಚಂದ್ರನ ಸಹಧರ್ಮಿಣಿ ಸಂತೋಷದಿಂದ ಕಾಲ ಕಳೆದಳು. ಅಲ್ಲಿಯೆ ಲವಕುಶರು ಹುಟ್ಟುವುದು; ಅಲ್ಲಿಯೆ ಋಷಿ ರಾಮಾಯಣವನ್ನು ಬರೆಯುವುದು; ಅಲ್ಲಿಯೆ ಅದನ್ನು ಮೊದಲು, ಪ್ರಪಂಚದಲ್ಲಿ ಇನ್ನಾರೂ ಓದುವುದಕ್ಕೆ ಮೊದಲು, ಲವಕುಶರಿಂದ ಹಾಡಿಸುವುದು. ಎಂತಹ ಆನಂದಮಯವಾದ ಪವಿತ್ರ ಸನ್ನಿವೇಶ!

ಶ್ರೀರಾಮನ ತಪ್ಪಿಗೆ ಆತನು ತನ್ನ ಮಕ್ಕಳಿಂದ ಪರಾಜಯ ಹೊಂದುವುದೇ ಲೌಕಿಕಋತಾರ್ಹವಾದ ಪ್ರಾಯಶ್ಚಿತ್ತ. ಯಾರಾದರೇನು, ಧರ್ಮಕ್ಕೆ ಹೊರತಲ್ಲ. ಸೀತೆಯನ್ನು ಪುನಃ ರಾಮನು ಇನ್ನಾವ ರೀತಿಯಿಂದ ಸ್ವೀಕರಿಸಿದ್ದರೂ ಇಷ್ಟು ರಸಭರಿತವಾಗುತ್ತಿರಲಿಲ್ಲ. ಒಂದುವೇಳೆ ವಾಲ್ಮೀಕಿಯೇ ಸೀತೆಯನ್ನು ಆಕೆಯ ಮಕ್ಕಳೊಡನೆ ಪುನಃ ರಾಮನ ಬಳಿಗೆ ಕರೆದುಕೊಂಡು ಹೋಗಿದ್ದರೆ ಧರ್ಮಕ್ಕೆ ಸಂಪೂರ್ಣ ಜಯವಾಗುತ್ತಿರಲಿಲ್ಲ. ರಾಮಚಂದ್ರನೇ ಆಶ್ರಮಕ್ಕೆ ಬಂದು ತನ್ನ ಸುತರಿಂದ ಸೋತು, ತರುವಾಯ ವಾಲ್ಮೀಕಿಯ ಮಾತಿನಂತೆ ತಾಯಿಮಕ್ಕಳನ್ನು ಸ್ವೀಕರಿಸುವುದು ಧರ್ಮಸಾಮ್ರಾಜ್ಯದ ಅಸ್ತಿತ್ವವನ್ನು ಬಿಚ್ಚಿ ತೋರಿಸುತ್ತದೆ.

ಅದೊಂದು ಪುಣ್ಯದಿನ. ವಾಲ್ಮೀಕಿ ಮಹರ್ಷಿ ಕಾರ್ಯಾರ್ಥವಾಗಿ ವರುಣ ಲೋಕಕ್ಕೆ ದಯಮಾಡಿಸಿದ್ದಾನೆ. ಎಂದಿನಂತೆ ಲವನು ಮುನಿಸುತರೊಡನೆ ಹೂದೋಟದಲ್ಲಿ ಆಟವಾಡುತ್ತಿದ್ದಾನೆ. ಕುಶನು ಮಾತ್ರ ಅಲಿಲ್ಲ. ಇದ್ದಕ್ಕಿದ್ದ ಹಾಗೆ, ಧರ್ಮವೆ ಎಳೆದುಕೊಂಡುಬಂದಂತೆ ಶ್ರೀರಾಮನ ಜನ್ನಗುದರೆ ತೋಟಕ್ಕೆ ಬಂದುಬಿಟ್ಟಿತು. ಲವನು ಸುಮ್ಮನೆ ಬಿಡುವನೆ?

ಎತ್ತಣ ತುರಂಗಮಿದು? ಪೊಕ್ಕು ಪೂದೋಟಮಂ
ತೊತ್ತಳದುಳಿವುದು! ವಾಲ್ಮೀಕಿ ಮುನಿನಾಥನೇ
ಪೊತ್ತಮಾರೈವುದೆಂದೆನಗೆ ನೇಮಿಸಿ ಪೋದನಬ್ದಿಪಂ ಕರೆಸಲಾಗಿ
ಮತ್ತ ಮರುಣನ ಲೋಕದಿಂ ಬಂದು ಮುಳಿದಪನ್ ಎ
ನುತ್ತೆ ಹಯದೆಡೆಗೆ ನಡೆತಂದು ನೋಡಲ್ಕದರ
ನೆತ್ತಿಯೊಳ್ಮೆರವ ಪಟ್ಟವ ಲಿಖಿತಮಂ ಕಂಡು ಲವನೋದಿಕೊಳುತಿರ್ದನು

ಪಟ್ಟದ ಲಿಖಿತವನ್ನು ಓದಿಕೊಂಡು ಅದರಲ್ಲಿ, “ರಾಮನೋರ್ವನೇ ವೀರನಾತನ ಯಜ್ಞತುರಂಗಮಿದು; ನಿರ್ವಹಿಸಲಾರ್ಪರಾರಾದೊಡಂ ತಡೆಯಲಿ” ಎಂದಿದ್ದುದನ್ನು ನೋಡಿ ಸ್ವಾಭಿಮಾನೋದ್ರೇಕದಿಂದ ಲವನು

ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ
ಸರ್ವಜನಮುಂ ಬಂಜೆಯೆನದಿರ್ದಪುದೆ? ತನ್ನ
ಗುರ್ವ ತೋಳ್ಗಳಿವೇತಕೆಂದು ಸಲೆ ವಾಸಿಯಂ ತೊಟ್ಟು…..

ಉರಿದೆದ್ದನು. ಈ ಮುದ್ದು ಕುವರನ ಬಲ್ಮೆಯನ್ನು ನೋಡಿ ನಮಗೆ ಅವನಲ್ಲಿ ಒಂದು ವಿಧವಾದ ವಾತ್ಸಲ್ಯ ಹುಟ್ಟುತ್ತದೆ. ಅಲ್ಲದೆ ಅವನ ಅಗಡುತನದ ಪರಿಣಾಮ ಮನಸ್ಸಿಗೆ ತಿಳಿಯದಿದ್ದರೂ ಹೃದಯಕ್ಕೆ ವೇದ್ಯವಾಗುವುದರಿಂದ ನಾವೂ ಸಂತಸದಿಂದ ಉಬ್ಬುತ್ತೇವೆ. ಆಗ ಲವನು “ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ ಬಿಗಿದು ಕದಳೀ ದ್ರುಮಕ್ಕೆ” ಕಟ್ಟುತ್ತಾನೆ. ಸಾತ್ವಿಕದ ನೆಲವೀಡಾದ ಋಷ್ಯಾಶ್ರಮದಲ್ಲಿ ಬೆಳೆದ ಮುನಿಸುತರು ಮಿಗೆ ಬೆದರಿ “ಬೇಡ ಬೇಡ; ಅರಸುಗಳ ಪಾಜಿಯಂ ಬಿಡು; ಬಡಿವರೆಮ್ಮಂ” ಎನಲು ಲವನು ನಗುತ್ತ “ಪಾರ್ವರ ಮಕ್ಕಳಂಜಿದೊಡೆ ಜಾನಕಿಯ ಮಗನಿದಕೆ ಬೆದರುವನೆ? ಪೋಗಿ ನೀವ್” ಎಂದು ಅವರನ್ನು ಗದರಿಸಿ ಬಿಲ್ದಿರವನೇರಿಸಿ ತೀಡಿ ಜೀಗೈದು ನಿಲ್ಲುತ್ತಾನೆ. ಆ ಸಣ್ಣ ಹುಟುಗ ಮಹಾಪಟುಭಟನಂತೆ ಕುದುರೆಯನ್ನು ಕಟ್ಟಿ ಬಿಲ್ಲುಬಾಣಗಳನ್ನು ಹಿಡಿದುಕೊಂಡು ಆ ಬನದಲ್ಲಿ ನಿಂತಿರುವುದನ್ನು ಮನದಲ್ಲಿ ಚಿತ್ರಿಸಿಕೊಂಡರೆ ನಮಗೆ ಹೆಮ್ಮೆಯಿಂದ ಮುಗುಳು ನಗೆ ಮುಡುತ್ತದೆ. ಆಗ ಅಲ್ಲಿಗೆ ಬಂದ ಕುದುರೆಗಾವಲಿನವರಿಗೂ ಬ್ರಹ್ಮಚಾರಿಗಳಿಗೂ ಲವನಿಗೂ ಆದ ಸಂಭಾಷಣೆಯನ್ನು ಕವಿ ಚೆನ್ನಾಗಿ ವರ್ಣಿಸಿದ್ದಾನೆ.

ಭಟರು ― ಎಲೆ ಎಲೆ ಬ್ರಹ್ಮಚಾರಿಗಳಿರ, ವಾಜಿಯನೇಕೆ ಬಿಗಿದಿರ?
ಬ್ರಹ್ಮ(ಹದರಿ) ನಾವಲ್ಲ. (ಲವನನ್ನು ತೋರಿಸಿ) ಇವಂ ಬೇಡ ಬೇಡ ಎನೆ
ಬಂಧಿಸಿದಂ.
ಭಟರು ― ಈತಂ ತರುಳಂ. ಅರಿಯದೆಸಗಿದಂ, ಬಿಡಿ!
ಲವ ― ವಿಕ್ರಮವಿದೇಕೆ! ಬಿಡೆನಶ್ವಮಂ. ಮೇಣ್ಬಿಡಲು ಉಪಕ್ರಮಿಸಿದ
ವರ್ಗಳ ಕರವನರಿವೆಂ.

ಆ ಕುದುರೆಗಾವಲಿನವರು ಹುಡುಗಾಟವೆಂದು ತಿಳಿದರು. ಇದುವರೆಗೂ ಪರಾಕ್ರಮಶಾಲಿಗಳಾದ ರಾಜರು ಕುದರೆಯನ್ನು ಕಟ್ಟುವುದನ್ನು ನೋಡಿದ್ದರು. ಆದರೆ ಆಶ್ರಮನಿವಾಸಿಯಾದ ಒಬ್ಬ ಹುಡುಗ ಕಟ್ಟುವುದು ಅವರಿಗೆ ಅಣುಗತನವೆಂದು ತೋರಿತು. ಅತಿಕ್ರಮಿಸಿ ಕುದರೆ ಬಿಚ್ಚುವದಕ್ಕೆ ಹೋದರು! ತಕ್ಕ ಮರ್ಯಾದೆಯೂ ಆತಯಿತು. ಅಗ ಸೈನ್ಯವೆಲ್ಲ ಲವನ ಮೇಲೆ ಕವಿಯುವುದು. ನಮಗೆ ‘ಇದೇ ರಾಮನ ಸೈನ್ಯವೇ ರಾವಣನ ಮೇಲೆ ಯುದ್ದಕ್ಕೆ ಹೋದುದು?’ ಎನಿಸುವುದು. ಆಮೇಲೆ “ಮಕ್ಕಳಾಟವು ಮಾರಿಯಾದುದು” ಎಂಬ ಹಾಗಾಯ್ತು. ಶತ್ರುಘ್ನನೇ ಯದ್ಧಕ್ಕೆ ಬರುತ್ತಾನೆ. ಇಲ್ಲಿ ಒಂದೆರಡು ಸೊಗಸಾದ ಉಪಮಾನಗಳನ್ನು ಕವಿ ಉಪಯೋಗಿಸದ್ದಾನೆ:

ದುರಿಗಣಮಿರ್ದಪುದೆ ಗೌತಮಿಯೊಳಾಳ್ದಂಗೆ?
ಪರಮಯೋಗಿಗೆ ಭವದ ಬಂಧನಂ ಬಂದಪುದೆ?
ಪರಸೈನದುರಬೆ ರಘುಕುಲಜರ್ಗೆ ತೋರುವುದೆ?

ಶತ್ರುಘ್ನನು ಆಕಸ್ಮಿಕದ ಪಸುಳೆಯ ಪರಾಕ್ರಮವನ್ನು ನೋಡಿ ವಿಸ್ಮಯಾನ್ವಿತನಾಗುತ್ತಾನೆ. ಉದ್ಧದಲ್ಲಿ ಲವನು ಮೂರ್ಛೆಹೋದ ಕೂಡಲೆ ಶತ್ರುಘ್ನನು ಹತ್ತಿರ ಬಂದು “ಕರುಣದಿಂ ತರುಳನಂ ನೋಡಿ, ಕಾಮಕೃತಿವೊಲಿರೆ ಮೋಹದಿಂ ತನ್ನ ರಥದ ಮೇಲಿರಿಸಿಕೊಂಡು,” “ಕದಳಿಯೊಳ್ಕಟ್ಟಿರ್ದ ಕುದುರೆಯಂ ಬಿಡಿಸಿ ನಗರದ ಕಡೆಗೆ ಪಡೆವೆರಸಿ” ತಿರುಗುತ್ತಾನೆ ಈ ಸುದ್ದಿಯನ್ನು ಭಯಗೊಂಡ ವಟುಗಳು ಓಡಿಹೋಗಿ ಸೀತೆಗೆ ಹೇಳುತ್ತಾರೆ.

ಆಕೆಯಾದರೂ ಮಾಡುವುದೇನು? ವಾಲ್ಮೀಕಿಯೂ ಆಶ್ರಮದಲ್ಲಿಲ್ಲ. ಸುಮ್ಮನೆ ಗೋಳಾಡುವಳು. ಅಷ್ಟುಹೊತ್ತಿಗೆ ಸಮಿತ್ಪುಷ್ಟಗಳನ್ನು ನೆತ್ತಿಯಲ್ಲಿ ಹೊತ್ತುಕೊಂಡು ಕುಶನು ಬಂದು ತಾಯಿಯನ್ನು “ಇದೇನದ್ಭುತಪ್ರಳಾಪ” ಎಂದು ಕೇಳುತ್ತಾನೆ. ತಾಯಿ ಎಲ್ಲವನ್ನೂ ಹೇಳಿದ ಮೇಲೆ ಕುಶನು.

ಶೋಕಮೇಕಿದಕೆ? ಹರಣವನೊಯ್ದೊಡಂತಕನ
ಲೋಕಮಂ ಸಡುವೆನ್. ಅಲ್ಲಹುದೆಂದೊಡಜ ಹರಿ ಪಿ
ನಾಕಿಗಳನುರಿಪುವೆನ್. ಮಿಕ್ಕರಸುಗಿರಸುಗಳ ಪಾಡಾವುದೀಗ ನತಗೆ?
ಆ ಕವಚ ಶರ ಧನುಃಖಡ್ಗ ಮಕುಟಂಗಳಂ
ತಾ: ಕಳವಳಿಸದಿರ್.

ಎಂದು ತಾಯಿಗೆ ಧೈರ್ಯ ಹೇಳಿ ಹೊರಡುತ್ತಾನೆ.

ಇನ್ನು ಸಮರ! ಅದರ ವಿಚಾರವಾಗಿ ಹಚ್ಚೇನು ಹೇಳಬೇಕು? “ಎಲ್ಲಾ ನರಿಗಳ ಕೂಗೂ ಒಂದೇ” ಎಂಬಂತೆ ಎಲ್ಲಾ ಕಾಳಗಗಳ ವರ್ಣನೆಯೂ ಸ್ವಲ್ಪ ಹೆಚ್ಚು ಕಡಿಮೆ ಒಂದೇ! ಕುಶನು ಲವನನ್ನು ಬಿಡಿಸಿಕೊಳ್ಳವನು. ಶತ್ರುಘ್ನನು ಮೈಮರೆಯಲು ಭಟರು ಅಯೋಧ್ಯೆಗೆ ಓಡಿಹೋಗಿ ವಾರ್ತೆಯನ್ನು ತಿಳಿಸುವರು. ರಾಮನು ಮೊದಲು ಆ ಸುದ್ದಿಯನ್ನು ನಂಬಲಾರದೆಹೋದನು. ಕಡೆಗೆ ಲಕ್ಷ್ಮಣನನ್ನು ಸೈನ್ಯಸಮೇತವಾಗಿ ರಣರಂಗಕ್ಕೆ ಕಳುಹಿಸುವನು. ಅವನು ಸೋತು ಮೈಮರೆಯುವನು. ಆಮೇಲೆ ಭರತನೂ, ಜಾಂಬವ, ಸುಷೇಣ, ಅಂಗದ, ಹನುಮಂತ, ನಳ, ನೀಲ, ಕುಮುದ, ಶತಬಲಿ ಮೊದಲಾದ ಮಹಾವೀರರನ್ನು ಕರೆದುಕೊಂಡು ಲವಕುಶರ ಮೇಲೆ ಕೋಳಗುಳಕ್ಕೆ ತೊಡಗುವನು. ಭರತನು ಕುಶನನ್ನು ನೊಡಿ ಆತನ ರೂಪು ಲಾವಣ್ಯಗಳನ್ನೂ ರಾಮಾಕೃತಿಯನ್ನೂ ಕಂಡು ಮೋಹಗೊಂಡು ಘನ ಸ್ನೇಹದಿಂದ

ವತ್ಸ ನೀನಾರವಂ? ನಿನಗೀತನೇನಹಂ?
ಮತ್ಸಹೊದರರನುರೆ ಘಾತಿಸಿದಿರಮ್ಮಯ ಮ
ಹತ್ಸೈನ್ಯಮಂ ಕೊಂದಿರಿನ್ನಾದೊಡಂ ಕುದುರೆಯಂ ಬಿಟ್ಟು ಪೋಗಿ; ಬರಿದೆ
ಮತ್ಸರಿಸಬೇಡ; ನಿಮ್ಮಂ ಪಡೆದ ತಾಯ ಬಳಿ
ಗುತ್ಸವದೊಳೈದಿ ಸುಖಮಿಹುದು. . . . . .

ಎನಲು, ಕುಶನು ನಸುನಗುತ ಪ್ರಶ್ನೆಗಳಿಗೆ ತಕ್ಕ ಸಂಕ್ಷೇಪವಾದ ಉತ್ತರಗಳನ್ನು ಕೊಡುತ್ತಾನೆ:

ಕಟ್ಟಿದ ತುರಂಗಮಂ ಬಿಡುವನಲ್ಲ. ಈತನೊಡ
ಹುಟ್ಟಿದಂ ತನಗೆ, ವಾಲ್ಮೀಕಿ ಮುನಿವರನವರ್.
ನೆಟ್ಟನೆ ರಣಾಗ್ರದೊಳ್ನಿನ್ನನುಂ ನಿನ್ನನುಜರಂತೆ ಘಾತಿಸಿದ ಬಳಿಕ
ಮುಟ್ಟದುತ್ಸವದಿಂದೆ ತಾಯಂ ಬಳಿಗೈದಿ ಪೊಡ
ಮಟ್ಟಲ್ಲಿ ಸುಖದೊಳಿರ್ಪೆವು. . . . . . .

ಭರತನೂ ಇಳೆಗೊರಗಿದ ತರುವಾಯ ಸಾಕ್ಷಾತ್ ಶ್ರೀರಾಮಚಂದ್ರನೆ ಅಯೋದ್ಯೆಯಿಂದ ತನ್ನ ಮಕ್ಕಳ ಮೇಲೆ ಕೈಮಾಡಲು ಬರುತ್ತಾನೆ. ರಣರಂಗದಲ್ಲಿ ತಂದೆ ಮಕ್ಕಳಿಗಾಗುವ ಸಂವಾದವನ್ನು ಕವಿ ಸರಸವಾಗಿ ಬರಿದಿದ್ದಾನೆ:

ಶ್ರೀರಾಮ ― ಎಲೆ ಪಸುಳೆಗಳಿರ, ನಿಮಗೀ ಧನುರ್ವೇದಮಂ ಕಲಿಸದವನಾವಂ? ಆವುದು ನಿವಾಸ
ಸ್ಥಳಂ? ಸಲುಹಿದವನಾವಂ? ಆವಂ ತಂದೆ? ತಾಯಾವಳ್? ಅಶ್ವಮಂ ಕಟ್ಟುವಿನಿತು
ಛಲಮ್ ಇದೇತಕೆ? ನಮ್ಮ ಸೇನೆಯಂ ಜಯಿಸುವೀ ಬಲಂ ಏತರಿಂದಾದುದು?

ಕುಶ ― ರಾಜೇಂದ್ರ, ನೀನೆಮ್ಮೊಳಾಹವಕೆ ಬಿಲ್ಗೊಂಡು ವಾಜಿಯಂ ಬಿಸಿಕೊಳ್, ಅಲ್ಲದೊಡೆ,
ಮರಳ್! ಅಪ್ರಯೋಜಕದ ಮಾತಿದೇತಕೆ?

ಲವ ― ನಿರುಪಮ ಕ್ಷಾತ್ರ ಪೌರುಷವನುಳಿದು ಬರಿದೆ ಸೋಜಿಗದೊಳಮ್ಮ ಜನದ ಸ್ಥಿತಿಗಳಂ
ಕೇಳ್ದೊಡೆ ಈ ಜಗಂ ಮೆಚ್ಚದು? ಎಚ್ಚಾಡಿ ನೋಡು.

ಶ್ರೀರಾಮ ― ಶಿಶುಗಳಾಗಿಹ ನಿಮ್ಮೊಳ್ ಎನಗೆ ಕಾಳಗವೆ? ಪರವಶರಾಗಿ ಬಿದ್ದ ಅನುಜರಂ
ಕಂಡು ಖತಿಯೊಳಾಂ ವಿಶಿಖಮಂ ತುಡುವೆನೆಂದೊಡೆ ಮನಂ ಒಡಂಬಡದು! ನಿಮ್ಮ
ಜನನ ಸ್ಥಿತಿಗಳ ವಿಶದ ವಿಸ್ತರವಂ ಒರೆದೊಡೆ ನೋಡಿಕೊಳ್ವೆಂ!

ಕುಶ ― ಈ ತಪೋವನದೊಳ್ ಎಮ್ಮಿರ್ವರಂ ಅವಳಿಯಾಗಿ ಸೀತಯೋರ್ವಳೆ ಪಡದಳ್, ಅನು
ದಿನದೊಳಾರೈದು ಜಾತೋಪನಯಾನಾದಿ ಕರ್ಮಂಗಳಂ ಮಾಡಿ ನಿಗಮಾಗಮ ಸ್ಮೃತಿ
ಗಳ ವ್ರಾತಮಂ ಬರಿಸಿ, ಕಾರ್ಮುಕವೇದಮಂ ಕಲಿಸಿ, ನೀತಗಳನರುಹಿ ರಾಮಾಯಣ
ನೋದಿಸಿ, ಮಹಾತಿಬಲರೆನಿಸಿದಂ ವಾಲ್ಮೀಕಿ ಮುನಿಪಂ!

ಲವ ― ರಾಮಚಾರಿತ್ರ ಪಠನಾಭ್ಯಾಸಯೋಗದಿಂ ಕ್ಷೇಮ ಸುಪುಷ್ಟಿ ನಿಶ್ಚಲ ಮತಿ ನಿರಾಲಸ್ಯಂ ಈ
ಮಹಾಸೈನ್ಯಮಂ ಗೆಲ್ಪದಟು ತಮಗಾದುದು.

ಶ್ರೀರಾಮನಿಗೆ ಎಷ್ಟರಮಟ್ಟಿಗೆ ಸಂತೋಷವಾತಯಿತು ಎಂದರೆ ಅವನು ಪುನಃ ಆ ಲೋಕೋತ್ತರವಾದ ನುಡಿಗಳನ್ನು ಆಲಿಸುವ ಅಭಿಲಾಷೆಯಿಂದ ಸುಗ್ರೀವನ ಕಡೆ ತಿರುಗಿ

ಕಪಿರಾಜ, ಕೇಳ್ಕೆ ಕುಮಾರಕರ ನುಡಿಗಳಂ.
ನಿಪುಣರಿವರ್! ಆವ ಪುರಷಂಗೆ ಸಂಭವಿಸಿದರ್?
ವಿಪಿನಚಾರಿಗಳನಿನ್ನೊಮ್ಮೆ ನೀಂ ಬೆಸಗೊಳ್.

ಎಂದು ಹೇಳುತ್ತಾನೆ. ನಿಜಾಂಶ ಎಲ್ಲರಿಗೂ ತಿಳಿದಮೇಲೆ ಯದ್ದ ಮಾರಾಮಾರಿಯಾಗಿ ನಡೆಯುವುದು ಅಸಂಭವ. ಆದ್ದರಿಂದ ಮುಂದೆ ನಾವು ನಗಬಹುದಾದ ಕೆಲವು ಸನ್ನಿವೇಶಗಳನ್ನು ಕವಿ ನಿರ್ಮಿಸಿರುತ್ತಾನೆ.

ಈ ಮಧ್ಯೆ ನೀಲನು (ಪಾಪ ಬಹಳ ಪರಾಕ್ರಮಶಾಲಿ, ಆಶ್ರಮದ ವಾತಾವರಣದಿಂದ ಇದ್ದಕ್ಕಿದ್ದಂತೆ ಸಾತ್ವಿಕಭಾವ ಉಂಟಾಯಿತೋ ಏನೋ?) ಸುಮ್ಮನೆ ಯುದ್ಧಮಾಡಿ ನೆತ್ತರನ್ನು ಚೆಲ್ಲುವುದು ಏಕೆ ಎಂದು ಯೋಚಿಸಿ ಮೆಲ್ಲಗೆ ಕುದುರೆಯನ್ನು ಬಿಚ್ಚುವುದರಲ್ಲಿದ್ದನು, ಇನ್ನೇನು ಅವನಿಗೆ ಎಂದೂ ಇಲ್ಲದ ಧೈರ್ಯ! ಲವಕುಶರು ತನ್ನ ಸ್ವಾಮಿಯ ಮಕ್ಕಳಷ್ಟೆ! ಕುಶನು ಫಕ್ಕನೆ ನೀಲನ ಕಳ್ಳತನವನ್ನು ನೋಡಿ ಕೋಪದಿಂದ ಎಚ್ಚನು. ಒಟ್ಟು ಗ್ರಹಚಾರ! ಅವನ ನೆತ್ತರು ಕೆಳಗೆ ಬಿದ್ದಿತೋ ಇಲ್ಲವೋ, ಬಿಂದುವಿಗೊಂದರಂತೆ ಶತಕೋಟಿ ನೀಲರಾಗಿಬಿಟ್ಟರು! ಬಾಲಕರು ಬೆದರಲಿಲ್ಲ ನೀಲವಾನರಸೈನ್ಯವನ್ನು ಅಸ್ತ್ರಗಳಿಂದ ಉರುಳಿಸಿಬಿಟ್ಟರು. ತರುವಾಯ ಶ್ರೀರಾಮನೂ ತನ್ನವರ ಸಹಾಯಾರ್ಥವಾಗಿ ರಾವಣ ಕುಂಭಕರ್ಣರನ್ನು ಕೊಂದ ಮಹಾಬಾಣಗಳನ್ನು ಬಾಲಕರ ಮೇಲೆ ಪ್ರಯೋಗಿಸಿದನು. “ಈ ಕ್ಷತ್ರಿಯರ ವನವಾಸಿಗಳದೆಂತೊ” ಎಂದು ಕವಿ ಹೇಳಿದ್ದಾನೆ. ರಾಮನ ಬಾಣಾವಳಿಯ ಹಾವಳಿಯ ಲೆಕ್ಕಿಸದೆ ಕುಶ ಲವರು ಎಲ್ಲರನ್ನೂ ಮೂರ್ಛೆಗೊಳಿಸುವರು. ಅಂತೂ ಯದ್ಧ ಮುಗಿಯಿತು. ನಮಗೆಲ್ಲಾ ಸಂತೋಷ. ಇನ್ನು ಸ್ವಲ್ಪ ಹಾಸ್ಯವಿದ್ದರೇನಂತೆ. ಲವನು ಲಕ್ಷ್ಮಣನ ಪೊಂದೇರನ್ನು ಹತ್ತಿ ಅರಸು ಮಕ್ಕಳ ಆಭರಣಗಳನ್ನು ಸುಲಿಗೆ ಮಾಡುತ್ತಾ ಬರುತ್ತಾನೆ. ಹನುಮಂತ ಜಾಂಬವರು ನಟನೆಗಾಗಿ ಬರಿದೇ ನೆಲದ ಮೇಲೆ ಬಿದ್ದುಕೊಂಡು ಗೊಣಗುಟ್ಟುತ್ತಾ ಮಾತಾಡುತ್ತಿದ್ದರು. ಅವರು ಯುದ್ಧದ ಗೋಜಿಗೆ ಮನಃಪೂರ್ವಕವಾಗಿ ಹೋದವರಲ್ಲ. ಅವರಿಗೆ ಎಲ್ಲವೂ ಒಂದು ಪರಿಹಾಸ್ಯವಾಗಿ ಕಂಡಿತೋ? ಏನೋ? ತೇರನ್ನು ಅಡರಿ ಬರುವ ಲವನನ್ನು ನೋಡಿದ ಹನುಮನು ಜಾಂಬರೊಡನೆ ಇಂತೆಂದನು:

ಕಂಡಿರೇ ಜಾಂಬರೇ? ರಾಮಾದಿ ವೀರರಂ
ದಿಂಡುಗೆಡಹಿದ ಬಳಿಕ ರಣದೊಳುಸಿರಿರ್ದರಂ
ಮಂಡೆ ವಿಡಿದೆಳೆದುಯ್ದೆನೆಂದಾ ಸೀತಾಸುತಂ ಬಂದಪಂ. ನಾವಿವನೊಳು
ದಂಡಿಗಾರೆವು. ನಮ್ಮನೀ ಬಾಲಕಂ ಪಿಡಿದು
ಕೊಂಡು ಪೋಗಲಿ ಜಾನಕಿಯ ಪೋರೆಗೆ; ದೇವಿ, ಕೃಪೆ
ಯಿಂ, ಡಿಂಗರಿಗರೆಂದು ಪಾಲಿಸಲಿ ಮೇಣುಳಿಯಲಿ. . . . .

ರಣರಂಗದಲ್ಲಿ ಮಿಡುಕಿ ಮಾತಾಡುವ ಈ ದಾಂಡಿಗರಿಬ್ಬರನ್ನು ಕಂಡು ಲವನು ಅವರನ್ನು ಎಳೆದುಕೊಂಡು ಹೋಗಿ ಕೌತುಕದ ಕಪಿಗಳೆಂದು ತನ್ನಣ್ಣನಿಗೆ ತೋರಿಸುತ್ತಾನೆ. ಮುಂದಿನ ಕಥೆ ಎಲ್ಲರಿಗೂ ತಿಳಿದ ವಿಷಯವೆ ಆಗಿದೆ. ಕವಿ ಮಹರ್ಷಿಯ ದಯೆಯಿಂದ ಎಲ್ಲರೂ ಮೈತಿಳಿದು ಮೇಲೇಳುವರು. ತರುವಾಯ ಲವಕುಶರು ಶ್ರೀರಾಮನ ಮುಂದೆಯೆ ಶ್ರೀಮದ್ರಾಮಾಯಣವನ್ನು ಸರಸವಾಗಿ ಓದಿ, ರಣರಂಗವೆ ರಾಮಾಯಣ ಪಠನಕ್ಕೆ ವೇದಿಕೆಯಾಗುವಂತೆ ಮಾಡುತ್ತಾರೆ.

ಕಥಾವಸ್ತು ಸಂವಿಧಾನದಲ್ಲಿ ಒಂದೆರಡು ಕುಂದುಕೊರತೆಗಳಿವೆ. ರಾಮನಿಗೆ ಲವ ಕುಶರೇ ತನ್ನ ಮಕ್ಕಳೆಂದು ತಿಳಿಯುವ ಸನ್ನಿವೇಶವನ್ನು ಇನ್ನೂ ಆಶ್ವರ್ಯಕರವಾಗಿಯೂ ರಸಭರಿತವಾಗಿಯೂ ಮಾಡಬಹುದಾಗಿದ್ದಿತು. ಅಲ್ಲದೆ ತನ್ನ ಮಕ್ಕಳೆಂದು ತಿಳಿದಮೇಲೆಯೂ ರಾಮನು ಯದ್ದಮಾಡುವುದು ಅಷ್ಟೇನು ಸಹಜವಾದುದಲ್ಲ. ಮಕ್ಕಳೆಂದು ಅರಿತಕೂಡಲೆ ತಂದೆಗಾಗಬಹುದಾದ ಆಶ್ಚರ್ಯ ಸಂತೋಷಗಳು ಚೆನ್ನಾಗಿ ಹೊರಪಟ್ಟಿಲ್ಲ. ಮ್ಯಾಥ್ಯೂಆರ್ನಾಲ್ಡ್ ಕವಿಯ “ಸೋಹ್ರಾಬ್ ಮತ್ತು ರುಸ್ತುಮ್” ಎಂಬ ಕಾವ್ಯವನ್ನು ಓದಿದವರು ಅಲ್ಲಿ ಕವಿ ಹೇಗೆ ತಂದೆ ಮಕ್ಕಳ ಯುದ್ಧವನ್ನು ವರ್ಣಿಸಿದ್ದಾನೆ, ಕಥಾವಸ್ತುವನ್ನು ಹೇಗೆ ಯುಕ್ತಿಯಿಂದ ರಚಿಸಿದ್ದಾನೆ, ರಸ್ತುಮನಿಗೆ ಸೋಹ್ರಾಬನು ತನ್ನ ಮಗನೆಂಬ ಸತ್ಯವನ್ನು ಎಷ್ಟು ಆಕಸ್ಮಕವಾಗಿ, ಎಂಥಾ ಸನ್ನಿವೇಶದಲ್ಲಿ ಹೊರಪಡಿಸಿದ್ದಾನೆ ಎಂಬುದನ್ನು ತಿಳಿಯಬಹುದು. ಮಾದರಿಗಾಗಿ ಕೆಲವು ಪಂಕ್ತಿಗಳನ್ನು ತೆಗೆದುಕೊಳ್ಳೋಣ. ಮಗನಾದ ಸೋಹ್ರಾಬ್‌ನಿಂದ ರುಸ್ತುಮನು ಕದನದಲ್ಲಿ ಬಹಳ ಅವಮಾನ ಹೊಂದಿದ ಮೇಲೆ, ಮರಳಿ ‘ರುಸ್ತುಮ್!’ ಎಂದು ತನ್ನ ವೀರನಾಮವನ್ನೇ ಆವೇಶದ ಆವಾಹನೆಗಾಗಿ ಕೂಗಿಕೊಳ್ಳುತ್ತಾನೆ. ಆಗ ಸೋಹ್ರಾಬ್ ತನ್ನ ತಂದೆಯ ಹೆಸರನ್ನು ಕೇಳಿ ಗುರಾಣಿಯನ್ನು ಕೆಳಗೆ ಹಾಕುತ್ತಾನೆ. ಆಗ ರುಸ್ತುಮನ ಈಟಿ ಸೋಹ್ರಾಬ್‌ನನ್ನು ಇರಿದು ಕೆಡಹುತ್ತದೆ.

Then Rustum raised his head; his dreadful eye
Glar’d and he shook on his menacing spear,
And shouted “Rustum!” Sohrab heard that shout
And shrank amazed; back he recoiled one step
And scanned with blinking eyes the advancing form:
And then he stood bewilder’d: and he dropp’d
His covering shield, and the spear pierc’d his side.
He reeled, and staggering back, sank to the ground.
. . . . . . . . . . . . . . . . . . . . . . . . . . . . .
Then with a bitter smile Rustum began:
. . . . . . . . . . . . . . . . . . . . . . . . . . . . .
“Fool, thou art slain and by an unknown man!
Dearer to the red jackals shalt thou be
Than to thy friends and to thy father old!

And with a fearless mien Sohrab replied:
“Unknown thou art! yet thy fierce vaunt is vain.
Thou dost not slay me, proud and boastful man!
No! Rustum slays me and this filial heart.
For were I matched with ten such men as thou,
And I were he who till today I was,
They should be lying here, I standing there!
. . . . . . . . . . . . . . . . . . . . . . . . . . . . .
The mighty Rustum shall avenge my death:
MY father, whom I seek through all the world
He shall avenge my death, and punish thee! “
But with a cold, incredulous voice he (Rustum) said:
“What prate is this of fathers and revenge?
The mighty Rustum never had a son! “
And with a falling voice Sohrab replied:
“Ah! yes, he had! and that lost son am I….. “

ಕವಿ ಎಷ್ಟು ನಾಟಕೀಯವಾಗಿ ಎಂಥಾ ಭಯಂಕರ ಸನ್ನಿವೇಶವನ್ನು ಚಿತ್ರಿಸಿದ್ದಾನೆ. ನಮ್ಮ ಕವಿಗಳಿಗೂ ಸಂಪ್ರದಾಯದ ಭಾರ ತಲೆಯಮೇಲೆ ಅತಿಯಾಗಿ ಇರದೆ ಇದ್ದಿದ್ದರೆ ಹೀಗೆಯೇ, ಇದಕ್ಕಿಂತ ಚೆನ್ನಗಿಯೇ, ಚಿತ್ರಿಸುತ್ತಿದ್ದರೆಂದು ನಮ್ಮ ನಂಬಿಕೆ. ಕವಿಚೂತವನಚೈತ್ರನು ಸಂಪ್ರದಾಯದ ಕಥಾವಸ್ತುವನ್ನು ತನ್ನ ಪ್ರತಿಭೆಯಿಂದ ಯುಕ್ತಿಯುಕ್ತವಾಗಿ ಬದಲಾಯಿಸಿ ಬರೆದಿದ್ದರೆ ಅದರ ಸ್ವಾರಸ್ಯವೇ ಬೇರೆಯಾಗುತ್ತಿತ್ತು.*

ಸೀತಾವನವಾಸದಲ್ಲಿ ಮೊದಮೊದಲು ಕಂಡುಬಂದ ಕವಿಯ ಪ್ರತಿಭಾಜ್ಯೋತಿ ತುದಿಯಲ್ಲಿ ಕಂಡುಬರುವುದಿಲ್ಲ. ಸೀತಾಪರಿಗ್ರಹದಂತಹ ಮಹದ್ ವಿಷಯವೂ ಕವಿಯ ವಿಶೇಷ ಲಕ್ಷ್ಯಕ್ಕೆ ಬಾಹಿರವಾದಂತಿದೆ. ತ್ಯಜಿಸಿದ ಸಹಧರ್ಮಿಣಿಯನ್ನು ಮತ್ತೆ ಸ್ವೀಕರಿಸುವುದೇನು, ಕವಿತೆಯ ದೃಷ್ಟಿಯಿಂದಲೂ, ಸಾಮಾನ್ಯ ಘಟನೆಯಲ್ಲ! ಆದರಿದು ಉಪಖ್ಯಾನವಷ್ಟೆ?* ಆದರೆ ಇತ್ತೀಚೆಗೆ ಜೈಮಿನಿ ಭಾರತಕ್ಕೆ ಹಿಂದೆ ಇರುತ್ತಿದ್ದ ಆ ಮನ್ನಣೆ ಇಳಿಮುಖವಾಗಿರುವಂತೆ ತೋರುತ್ತದೆ. ಬಹುಶಃ ಅದು ಕಾವ್ಯ ಸಾಧಾರಣಕ್ಕೆ ಒದಗಿರುವ ಔದಾಸೀನ್ಯ ಸಾಮಾನ್ಯದ ಒಂದು ವಿಶೇಷವಾಗಿರಲು ಸಾಕು.

* ಈ ಮಾತುಗಳಲ್ಲಿ ನೊಂದ ಹೆಣ್ಣೆದೆಯ ಕಟುವ್ಯಂಗ್ಯವೂ ಧ್ವನಿತವಾಗುವುದನ್ನು ವಾಚಕರು ಗಮನಿಸಬೇಕು. “ಏಕೆ ನಿಂದಿಹೆ? ಪೋಗು, ಸೌಮಿತ್ರಿ “ ಎಂಬ ಪದ್ಯದಲ್ಲಿ ಅದು ಸುವ್ಯಕ್ತವಾಗಿದೆ.

* ಕಥೆಯನ್ನು ದುರಂತವಾಗಿ ಕೊನೆಗಾಣಿಸಬೇಕಿತ್ತು ಎಂಬುದಲ್ಲ ನಮ್ಮ ಆಶಯ.