ಪುನಃ ಸ್ವರ್ಗದಿಂದ ಮರ್ತ್ಯಲೋಕಕ್ಕೆ, ಹರಿಶ್ಚಂದ್ರನ ರಾಜ್ಯಕ್ಕೆ.

ಅಂತೂ ವಿಶ್ಚಾಮಿತ್ರ ವಸಿಷ್ಠರ ಕಲಹವು ಹರಿಶ್ಚಂದ್ರನ ಸಂಕಟ ಪರಂಪರೆಗೆ ಮುನ್ನುಡಿಯಾಯಿತು. ಕವಿ ಕಣ್ಣು ಮಿಟುಕಿಸಿ ಮುಗುಳುನಗೆಯಿಂದ “ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು” ಎಂದು ಕಥಾಲಾಪನೆಗೆ ತೊಡಗುತ್ತಾನೆ. ಹರಿಶ್ಚಂದ್ರನಲ್ಲಿ ಹುಸಿ ಹುಟ್ಟುವಂತೆ ಮಾಡುವ ಉಪಾಯವಾವುದೆಂದು “ಅಖಿಳ ಸಾಮರ್ಥ್ಯದ ಕಲಾಪ್ರವೀಣನ್ ಅಂತಥದೇಕಾಂತದೊಳ್ ಚಿಂತೆಯಿಂ ಭ್ರಾಂತಿಯೋಗದೊಳಿರ್ದನು.” ಕಡೆಗೆ ‘ನಿಜವೈರದಂತಥವರಿಯದ’ ಮುನಿಗಳನ್ನು ಕರೆದು ಹರಿಶ್ಚಂದ್ರನನ್ನು ಸುವರ್ಣಯಾಗಕ್ಕೆ ಪ್ರೇರಿಸುವಂತೆ ಹೇಳುತ್ತಾನೆ. ರಾಜನು ಒಪ್ಪಿ, ಯಾಗಮಾಡಿ, ಮೇಲೆ ದಕ್ಷಿಣೆ ಕೊಡುವಾಗ, ವಸಿಷ್ಠ ಮುನಿ ಹೋದ ಹೊತ್ತನರಿದು ‘ಸುಜನ ಮೃಗ ಧೀವರಂ ಕಪಟ ವಟು ಕೌಶಿಕಂ’ ಅವನೆಡೆಗೆ ಹೋಗಲು ಅವನು ಚರಣ ಸರಸಿರುಹಮಂ ತೊಳೆದು ‘ನೆನೆದರ್ಥಮಂ ಬೆಸಸಿಂ’ ಎನೆ ವಿಶ್ವಾಮಿತ್ರನು ‘ಪಿರಿಯ ಕರಿಯಂ ಮೆಟ್ಟಿ ಕವಡೆಯಂ ಮಿಡಿದಡೆ ಎನಿತುದ್ದಕ್ಕೆ ಹೋಹುದು ಅದರ ಸರಿಯೆನಿಸಿ ಸುರಿದ ಹೊಸ ಹೊನ್ನರಾಶಿಯನ್ ಈವುದು, ಅರಸ’, ‘ಹಸಾದಂ, ಕೊಟ್ಟೆನ್ ಅದನೀಗಲೆ ಇರದೊಯ್ವುದು’ ಎನೆ ‘ನಿನ್ನ ಮೇಲಿರಲಿ ಬೇಹಾಗ ತರಿಕೊಂಡಪೆನ್’ ಎಂದನು.

ಸ್ವರ್ಣಯಾಗದ ಬಲೆಗೂ ಬಿದ್ದು ಪಾರಾದ ದೊರೆಯನ್ನು ತನ್ನಾಶ್ರಮಕ್ಕೆ ಕರೆ ದೊಯ್ದು ‘ಅವನ ಸತ್ಯದ ಬಲುಹ’ ನೋಡುವೆನೆಂದು ಕೌಶಿಕನು ಮತ್ತೊಂದು ಹೂಟ ಹೂಡುತ್ತಾನೆ. ಕವಿ ಒಂದೇ ಪದ್ಯದಲ್ಲಿ ಎಂತಹ ಚಿತ್ರವನ್ನು ಮಿಂಚಿಸಿದ್ದಾನೆ; ಅದರಲ್ಲಿ ಕ್ರಿಯೆಯ ಮತ್ತು ಅಭಿನಯಕ್ರಿಯೆಯ ವರ್ಣನೆ ಎಷ್ಟಿದೆ ನೋಡಿ:

ಅನುವುಳ್ಳ ಬುದ್ಧಿಯನ್ ಕಂಡೆನ್, ಎಂದತಿ ಮೆಚ್ಚಿ
ತನಗೆ ತಾ ತೂಪಿರಿದುಕೊಂಡು ಕಣ್ಮುಚ್ಚುತಂ
ಮನದೊಳ್ ಉತ್ಪತ್ತಿಮಂತ್ರವ ಮಂತ್ರಿಸಿದ ಜಲವನ್ ಒಸೆದು ದೆಸೆದೆಸೆಗೆ ತಳಿದು
ವಿನಯದಿಂ ನೋಡನೋಡಲು ದಿಕ್ಕು ಧರಣಿ ತೆ
ಕ್ಕನೆ ತೀವಿ ನಿಂದ ನಾನಾ ಪಕ್ಷಿ ಮೃಗಸಂಕುಲಕೆ
ಕೊನೆವೆರಳನ್ ಅಲುಗಿ ತಲೆದೂಗಿ ಕೈವೀಸಿದಂ ದೇಶಮಂ ಗೋಳಿಡಿಸಲು.

ಸರಿ; ಮಾಯದ ಮೃಗಪಕ್ಷಿಗಳು ನಾಡಿನ ಪೈರನ್ನು ಸೂರೆಗೊಳ್ಳುತ್ತವೆ. ಜನರು ಬಂದು ಮೊರೆಯಿಡುತ್ತಾರೆ.(III, ೧೦, ೧೧. ೧೨, ೧೩) ದೊರೆ ಬೇಟೆಯ ಸಲುವಾಗಿ ಶಬರಜಾಲವನ್ನು ಕರೆಸುತ್ತಾನೆ. ಅವರೆಲ್ಲರೂ ‘ನಿಟ್ಟಿಸುವ ಕಣ್ಣಾಲಿ ಕತ್ತಲಿಸೆ ಕತ್ತಲೆಯ ತತ್ತಿಗಳಂತೆ ಹೋಲಿಕೆಗೆ ಹೊರಗಾಗೆ’ ಬಂದು ನೆರೆದರು. ಕವಿ ಬೇಟೆಯ ವರ್ಣನೆಯನ್ನು ನಿರುಪಮವಾಗಿ ಮಾಡಿದ್ದಾನೆ. ಅದು ಎಷ್ಟು ಸ್ವಾಭಾವಿಕವಾಗಿದೆ ಎಂದರೆ ನಾವೂ ಬೇಡರ ಉದ್ವೇಗ ಉತ್ಸಾಹಗಳಲ್ಲಿ ಭಾಗಿಗಳಾಗಿ ಹಾರಾಡುತ್ತೇವೆ.

ಎರಳೆ ಸರಳಿಸಿ ಹೋದುದಿಲ್ಲಿ: ಹಿಂಗಾಲೊದೆದು
ರುಳ್ದ ಮಣ್ಣಿದೆ. ಸೊಕ್ಕಿದ ಎಕ್ಕಲಂಗಳು ಹೋದವು:
ಎರಡು ಕಟವಾಯಿಕಡೆ ಸುರಿದ ನೊರೆಯಿದೆ. ಕರಡಿ ತಣಿದಾಡಿ ಹೋದುದಿಲ್ಲಿ:
ನೆರೆದ ಒರಲೆಗಳ ಹೊರೆಯೊಳ್ ಒಡೆದ ಹುತ್ತಿದೆ: ಹುಲಿಯು
ಮರೆಯನ್ ಎಳೆಯಿತ್ತಿಲ್ಲಿ: ಬಿಸುನೆತ್ತರಿದ್ದುದು. ಎಂದು
ಇರದೆರಗಿ ಹಜ್ಜೆಯಂ ನೋಡಿ ಬೆಂಬಳಿವಿಡಿದು ಹರಿವ ಲುಬ್ಧಕರೆಸೆದರು

ಹುಲಿಗಳನ್ನು ನಾಯಿಗಳಂತೆ ಬೇಟೆಯ ಸಲುವಾಗಿ ಸಾಕಿ ಉಪಯೋಗಿಸುತ್ತಾರೆ. ಅದು ಪ್ರಾಣಿಗಳನ್ನು ಹೊಂಚಿ ಹಿಡಿಯುದನ್ನಂತೂ ಕವಿ ಎದೆ ಬಾಯಿಗೆ ಬರುವಂತೆ ಬಣ್ಣಿಸಿದ್ದಾನೆ; ಸಾಕ್ಷಾತ್ತಾಗಿ ನೋಡಿದಂತಾಗುತ್ತದೆ:

….ಬಂಡಿಯಿಂದಿಳುಹಿ ಹುಲಿಯ
ಹಾರಯಿಸಿ ತಲೆದಡವಿ ತೋರಿ ಹಾಸವನುಗಿಯೆ
ದೂರದಿಂ ಕಂಡು ಹಸರಿಸಿ ಹತ್ತಿ ಹಣುಗಿ ನೆಲ
ಕೋರಂತೆಯಡಗಿ ತನ್ನನುವಿನಳವಿಗೆ ಜುಣುಗಿ ನಡೆದು ಬಳಿಕೇಗೈದುದು:

ಕುಸಿದ ತಲೆ, ಹಣುಗಿದೊಡಲ್, ಅರಳ್ವ, ಬಾಯ್, ಸುಗಿದ ಕಿವಿ,
ಉಸಿರಿಡಿದ ಮೂಗು, ಮರೆದು ಎವೆ ಇಕ್ಕದ ಉರಿಗಣ್ಣು,
ಬಸುರೊಳಡಗಿದ ಬೆನ್ನು, ನಿಮಿರ್ದ ಕೊರಳ್, ಅಡಿಗಡಿಗೆ ಗಜಬಜಿಸು ತಿಹ
ಮುಂದಡಿ ಎಸೆಯೆ ಲಂಘಿಸಿ ನೆಲನನೊದೆದು ಪುಟನೆಗೆದು ಗ
ರ್ಜಿಸುತ ಬರೆ ಹೆದರಿ ಕಂಗೆಟ್ಟು ಡೆಂಢಣಿಸಿ ಸರ
ಳಿಸುವ ಹರಿಣಂಗಳಂ ಮೋದಿ ಮುರಿದಟ್ಟಿ ಕೆಡಹಿದವು ದೀಹದ ಹುಲಿಗಳು.

ಹಾಗೆಯೆ ಬೇಟೆಗಾರರು ವಸಿಷ್ಠಋಷಿಯ ಆಶ್ರಮಕ್ಕೆ ಬರುತ್ತಾರೆ. ಅಲ್ಲಿ ‘ಅವನಿಪವರೇಣ್ಯನು’ ‘ಮುನಿವರೇಣ್ಯನನು’ ಕಾಣುತ್ತಾನೆ. ಆ ದರ್ಶನ ಅತ್ಯಂತ ಚೇತೋಹಾರಿಯಾಗಿದೆ. ತಿಳಿಗೊಳ, ತಣ್ಣೆಳಲು, ತೆಳುಗಾಳಿ, ಪುಳಿನ ಸ್ಥಳ, ಅಶೋಕೆಯ ತರುವಿನ ತಳಿರತೊಂಗಲ ಗದ್ದುಗೆ, ಅದರ ಮೇಲೆ ‘ಸ್ವಾತಂತ್ರ್ಯವೃತ್ತಿ ಗೋಚರಿಸಲೆಳಸಿತೊ’ ‘ಶಾಂತಿ ರೂಪಾಯ್ತೊ’ ಎಂಬಂತಿರುವ ವಸಿಷ್ಠ ಮಹರ್ಷಿ. ಆ ಪದ್ಯದಲ್ಲಿ ಕಿರುದೆರೆಗಳ ಶಿಶುನರ್ತನ, ನವಪಲ್ಲವ ರಾಶಿಯಲ್ಲಿ ಮಂದಪವನನ ಅಲಸಕ್ರೀಡೆ, ಶ್ವೇತ ಸೈಕತರಂಗದಲ್ಲಿ ಮನೋಹರವಾಗಿ ಮಲಗಿರುವ ಕೃಷ್ಣವರ್ಣದ ತರುಚ್ಛಾಯೆ ಎಲ್ಲವೂ ಒಂದರೊಡನೊಂದು ಮಿಳಿತವಾಗಿ ಮೋಹಿಸುವಂತಿದೆ. ಅದರಲ್ಲಿ ಬರುವ ಲಲಿತಾಕ್ಷರಗಳು, ಲಘುಗಳು, ಳಕಾರ ತಕಾರಗಳು ಎದೆಯ ತಂತಿಯನ್ನು ಮಿಡಿಯುತ್ತವೆ; ವೀಣಾನಾದವನ್ನು ಹೊರಸೂಸುತ್ತವೆ. ಭಾವ, ಚಿತ್ರ ,ಶೈಲಿ ಎಲ್ಲದರಲ್ಲಿಯೂ ಪದ್ಯ ಶ್ರೇಷ್ಠವಾಗಿದೆ.

ತಿಳಿಗೊಳನ ಬಳಸಿ ನಳನಳಿಸಿ ಬೆಳೆದೆಳಮಾವು
ಗಳ ತಳದ ಮಲ್ಲಿಕಾಮಂಟಪದ ತಣ್ಣೆಳಲ
ತೆಳುಗಾಳಿಯೊಳು ಪುಣ್ಯವಪ್ಪ ಪುಳಿನಸ್ಥಳದ ಮೇಲಶೋಕೆಯ ತರುವಿನ
ತಳಿರ ತೊಂಗಲ ಗದ್ದುಗೆಯೊಳೋಲಗಂಗೊಟ್ಟು
ಬಳಸಿ ಹಿಂದೆಡಬಲದೊಳಿಪ್ಪ ಮುನಿಗಳ ಕೂಡೆ
ನಲವಿನಿಂ ನುಡಿವ ಪಶುಪತಿಯಂತಿರಿರ್ದ ಮುನಿನಾಥ ಕಣ್ಗೆಸೆದಿರ್ದನು.

ಋಷಿವರ್ಯನು ರಾಜಶಿಷ್ಯನನ್ನು ಉಚಿತರೀತಿಯಿಂದ ಉಪಚರಿಸಿ ಪಂಪೆಯ ವಿರೂಪಾಕ್ಷನನ್ನು ತೋರಿ (ಏಕೆಂದರೆ ವಸಿಷ್ಠಾಶ್ರಮವಿದ್ದುದು ಹಂಪೆಯಲ್ಲಂತೆ) ‘ಅರಸನ ಮೇಲೆ ಕೌಶಿಕನ ಕಾಟವಡಿಯಿಟ್ಟ ಅನುವನು’ ತಿಳಿದು ‘ಪೇಳದಂತೆ ಪೇಳ್ದಪೆನೆಂದು’ ‘ಮಗನೆ ಹೋಗದಿರು ಮರೆದು ವಿಶ್ವಾಮಿತ್ರನಾಶ್ರಮಕ್ಕೆ’ ಎಂದು ಬೋಧಿಸಿ ಆಶೀರ್ವದಿಸಿ ಕಳುಹಿಸುತ್ತಾನೆ.

ಮೃಗಯಾವಿನೋದ ಪ್ರಾರಂಭವಾಗುತ್ತದೆ. ರಾಘವಾಂಕನು ಹಂದಿಯ ಬೇಟೆ ಯನ್ನು ವರ್ಣಿಸಿರುವ ಸಹಜತೆಯನ್ನು ನೋಡಿದರೆ ಅವನು ಅದನ್ನು ತಾನೇ ನೋಡಿದ್ದನೆಂದು ತೋರುತ್ತದೆ. ಕೌಶಿಕನ ಮಾಯವರಾಹ ಗೋಚರಿಸಿದ ಕೂಡಲೆ ಏನು ಗಲಿಬಿಲಿ! ನಾರಕನಿನಾದ! ‘ಎಲೆಲೆಲೆಲೆಲೇ ಹಂದಿಯನುವಾದುದು!’ ಎಂಬ ಕೂಗು ಕೇಳಿಸಿದ ತಕ್ಷಣವೆ ನಮಗೂ ಜೀವ ಬೆಬ್ಬಳಿಸಿ ಮರವನಡರಲು ನಾಲ್ದೆಸೆಯನಾರೈಯುವಂತಾಗುತ್ತದೆ. ಇಲ್ಲ; ಮರವನೇರಲೂ ಪುರಸತ್ತಿಲ್ಲ. ವರಾಹನು ‘ನಾಳಲ ಹೊರೆಗಳಂ ಕೊಚ್ಚಿದಂತೆ ಎಲ್ಲರೊಡಲ ಕವಳಿಗೆಯಿದು ಬೀದಿವರಿದೊಕ್ಕಲಿಕ್ಕಿತ್ತು!’ ಆದ್ದರಿಂದ ಕಾಲಿಗೆ ಬುದ್ಧಿಹೇಳುವುದೇ ಸರಿ! ಕಾಡಿನಲ್ಲಿ ಕಾಲಿಗೆ ಬುದ್ಧಿಹೇಳುವ ನಮ್ಮಂತಹ ಜೀವಗಳ್ಳನಾದ ಬೇಡನೊಬ್ಬನನ್ನು ಕವಿ ವರ್ಣಿಸುತ್ತಾನೆ. ಆ ಚಿತ್ರವನ್ನು ನೋಡಿ ಅಳುತ್ತೀರೋ ನಗುತ್ತೀರೋ ನೀವೇ ನೋಡಿ. ಅದರ ಸೂಕ್ಷ್ಮ ವಿವರಣೆಯನ್ನು ಗಮನಿಸಿ:

ಬಿಟ್ಟ ತಲೆ, ಗಿಡು ಹಿಡಿದು ಕಳೆದುಡುಗೆ, ಕಾಡ ಮುಳು
ನಟ್ಟು ಕುಂಟುವ ಪದಂ, ಬೆನ್ನ ಬಿಗುಹಳಿದು ಎಳಲ್ವ
ಮೊಟ್ಟೆಗೊಳ್, ಎಡಹಿ ಕೆಡೆದೊಡೆದ ಮೊಳಕಾಲ್, ತೇಕುವ
ಆಳ್ಳೆಗಳು ಬೆರಸಿ, ಒರಲುತ,
ಕೆಟ್ಟೋಡುತಿರಲೊರ್ವನ್, ಅವನ ಕಂಡು ಇದಿರಡ್ದ
ಗಟ್ಟಿ ಕೇಳಲು-‘ಹುಹುಹು’-‘ಹುಲಿ?’ ಅಲ್ಲ, ಹಂದಿಯರೆ
ಯಟ್ಟಿ ಬರುತಿರ್ದುದು’ ಎನೆ-‘ಎಲ್ಲಿ ತೋರ್’ ಎನಲು-
‘ನೀವೇ ಆರಸಿಕೊಂಬುದು’ ಎಂದ.

ಬೇಡನು ಬೆನ್ನಿಗೆ ಬಿಗಿದು ಕಟ್ಟಿದ್ದ ಬುತ್ತಿಯ ಗಂಟು ಓಟದ ಭರದಲ್ಲಿ ಸಡಿಲವಾಗಿ ಅತ್ತ ಇತ್ತ ಜೋಲಾಡುತ್ತಿರುವ ಚಿತ್ರ ನಗುವವನಿಗೆ ಚಕ್ಕುಳು ಗುಳಿ ಇಟ್ಟಂತಾಗುತ್ತದೆ. ಹೆದರಿದವನು ಬಾಯಿಬಿಡಲಾರದೆ ಸ್ವರ ಹೊರಡಲಾರದೆ ‘ಹು! ಹು!’ ಹು! ಎನ್ನುವುದೂ, ಪ್ರಶ್ನೆಮಾಡಿದನು ‘ಹುಲಿ?’ ಎಂದು ಕೇಳುವುದೂ ಎಷ್ಟು ಸಹಜವಾಗಿವೆ! ರೇಗಿದ ಹಂದಿಯನ್ನು ನೋಡಿ:

ಮಸೆದ ದಾಡೆಯ ಕುಡಿಗಳಿಂದ ಕಿಡಿ ಸುರಿಯೆ, ಘೂ
ರ್ಮಿಸುವ ಮೂಗಿಂದ ಕರ್ಬೋಗೆ ನೆಗೆಯೆ, ಮುನಿದು ನಿ
ಟ್ಟಿಸುವ ಕೆಂಗಣ್ಣ ಕಡೆಯಿಂದ ದಳ್ಳುರಿ ಸೂಸೆ; ಬಲಿದ ಕೊರಳ್ ಒಲೆದ
ಮುಸುಡು
ಕುಸಿದ ತಲೆ, ನೆಗೆದ ಬೆನ್, ನಟ್ಟ ರೋಮಾಳಿ, ಮಿ
ಳ್ಳಿಸುವ ಬಾಲಂ, ರೌದ್ರಕೋಪಮಂ ಬೀರಿ ಗೆ
ರ್ಜಿಸಿ ಬೀದಿವರಿದು ತೊತ್ತಳದುಳಿದು ಕೊಂದು ಕೂಗಿಡಿತ್ತು ಲುಬ್ಧಕರನು.

ಹರಿಶ್ಚಂದ್ರನು ವರಾಹನನ್ನು ಬಾಣದಿಂದ ಹೊಡೆಯುತ್ತಾನೆ. ಗಾಯವಾದ ಹಂದಿಯ ರಂಪವನ್ನು ನೋಡಿ:

ಗರಳಗೊರಳವನರಳ ಸರಳಂಗೆ ಮುನಿವಂತೆ
ಯಿರುಳ ತಿರುಳಿನ ಹೊರಳಿಗಾ ತರಣಿ ಕೆರಳ್ವಂತೆ
ಸರಳ ತೆರಳಿಕೆಗೆ ಮರಳಿತು ಕರುಳ ಸುರುಳಿಯೊಳು ಹೊರಳುತ್ತ ಬೀಳುತ್ತಲು.
ಹುರುಳಳಿದುದು; ಉರವೊಡೆದು ಸರಳುರ್ಚೆ ನರಳುತ್ತ
ತೊರಳೆಯಡಸಲು ಮೂಗನ್ ಅರಳಿಸಿ ಎಚ್ಚಂಬ ಹೊತ್ತು
ಉರುಳ್ವ ಕಂಬನಿಯಿಂದ ತರಳಚಿತ್ತದ ಹಂದಿ ಮರಳಿ ಕಾನನಕೈದಿತು.

‘ಇರುಳ ತಿರುಳಿನ ಹೊರಳಿಗಾ ತರುಣಿ ಕೆರಳ್ವಂತೆ’ ಎಂಬ ಉಪಮಾನ ಅದ್ಭುತವಾದುದು. ಇರುಳು ಹಗಲುಗಳು ಸಂಧಿಸುವ ಪ್ರಾತಃ ಸಂಧ್ಯಾ ಸಮಯಗಳ ಬಾನ ಕರೆಯಲ್ಲಿ ಆವಿರ್ಭವಿಸುವ ರಕ್ತಾಕ್ತಲೋಹಿತ ಜ್ವಾಲಾಗ್ರಸ್ತ ಮೇಘರಣರಂಗದ ರುದ್ರಮನೋಹರತೆಯನ್ನು ಯಾರು ತಾನೆ ನೋಡಿಲ್ಲ? ಇರುಳಂತೆ ಕರ್ರಗಿದ್ದ ಮಹಾವರಾಹನನ್ನು ಸೂರ್ಯ ಕಿರಣಗಳಂತೆ ತೀಕ್ಷ್ಣವಾಗಿ ಬೆಳ್ಳಗಿದ್ದ ಹರಿಶ್ಚಂದ್ರನ ಬಾಣಗಳು ತಾಗಲು ನೆತ್ತರು ಬುಗ್ಗೆ- ಬುಗ್ಗೆ- ಯಾಗಿ ಚಿಮ್ಮಿ ಪ್ರಾಣಿಯ ಮೈಯೆಲ್ಲಾ ರಂಪಾದ ಚಿತ್ರವನ್ನು ಕವಿ ಒಂದು ಉಪಮಾನದಿಂದ ಹೇಗೆ ಸಾಧಿಸಿದ್ದಾನೆ! ಅದಲ್ಲವೇ ‘ಭೀಮಕಲೆ!’

ಹಂದಿ ವಿಶ್ವಾಮಿತ್ರನಾಶ್ರಮಕ್ಕೆ ಹೋಯಿತು. ರಕ್ತದ ಜಾಡು ನೋಡುತ್ತ ಬೇಟೆ ಗಾರರೂ ಅಲ್ಲಿಗೆ ಹೋದರು. ಗ್ರಹಚಾರ!

ಫಳಭಾರದಿಂದೊಲೆದು ತೂಗಿ ಬಾಗುವ ಮರಂ
ಗಳ ಕೆಳಗೆ ತುರುಗಿ ನಳನಳಿಸಿ ಬೆಳೆದೆಳಲತೆಯ
ತಳಿರ ತಿಳಿಗೊಳನ ಪುಳಿನಸ್ಥಲದ ಕಮಲ ಕೈರವದ ತನಿಗಂಪುವೆರಸಿ
ಸುಳಿವ ತಣ್ಣೆಲರ ತಂಪಂ ಕಂಡು….

ಮಂತ್ರಿ ‘ಭೂನಾಥ ಬಿಡುವಡೆ ಇದು ಠಾವು’ ಎನಲು ದೊರೆ ಸಮ್ಮತಿಸಿ ಬೀಡು ಬಿಡಿಸಿದನು ಅಲ್ಲಿ ಆನಂದದಿಂದ ‘ಶಿಶಿರೋಪಚಾರಂಗಳಂ’ ಸ್ವೀಕರಿಸಿ ಹರಿಶ್ಚಂದ್ರನು ಚಂದ್ರಮತಿಯ ತೊಡೆಗಳ ಮೇಲೆ ತಲೆಯಿಟ್ಟು ‘ನಿದ್ರೆಕವಿದು ವಿತತಸುಖದಿಂದಿರುತಿರಲ್ಕೆ ನಾನಾ ದುಃಖಯುತವಪ್ಪುದೊಂದು ಕನಸಂ ಕಂಡು ನೊಂದು ಬೆದರಿದಂತೆ ಭೋಂಕೆನಲೆದ್ದು ಬೆಬ್ಬಳಿಸಿ ನಾಲ್ದೆಸೆಯನಾರೈದನು. ಅದನ್ನು ಕಂಡು ಚಂದ್ರಮತಿ ‘ಧುರದೊಳರಿಭೂಭು ಜರನಂಜಿಸುವ …. ಬಿರುದಂ ಕಮಲ್ಲ ನೀ ನಡುಗಲೇತಕ್ಕೆ’ ಎಂದು ಮೆಲ್ಲನೆ ನುಡಿಸಲು ರಾಜನು ತಾನು ಕಂಡ ಕನಸನ್ನು ಹೇಳುತ್ತಾನೆ. ಆ ಸ್ವಪ್ನ ಹರಿಶ್ಚಂದ್ರನಿಗೆ ಮುಂದೊದಗಲಿರುವ ಜೀವಿತವನ್ನು ಸೂಚಿಸುವ ರೂಪಕದಂತಿದೆ. ಚಿತ್ರವೂ ಭಯಂಕರ ವಾಗಿದೆ:

ಘುಡುಘುಡಿಸುತೊಬ್ಬ ಮುನಿ ಬಂದು ನಾನೋಲಗಂ
ಗೊಡುವ ಮಣಿಮಂಟಪದ ಕಂಭವೆಲ್ಲವನು ತಡೆ
ಗಡಿದು ಹೊಂಗಳಸಂಗಳಂ ಮಾಣದೊಡೆಬಡಿದು ನೆರೆದ ಸಭೆಯೊಳಗೆನ್ನನು
ಕೆಡಹಿ ಸಿಂಹಾಸನವನೊಯ್ವಾಗಳೆನ್ನೆದೆಯ
ನಡರ್ದೊಂದು ಕಾಗೆ ಕರೆದುದು ಬಳಿಕ್ಕಾಂ ಗಿರಿಯ
ನಡರ್ದು ಶಿಖರದೊಳೆಸೆವ ಮಣಿಗೃಹಂ ಬೊಕ್ಕೆನ್…

ಚಂದ್ರಮತಿ ಪತಿಗೆ ಧೈರ್ಯ ಹೇಳಿ, ಏನು ಬಂದರೂ ಬರಲಿ ‘ಸತ್ಯವಂ ಬಿಟ್ಟು ಕೆಡದಿರವನೀಶ ಕೈಮುಗಿದು ಬೇಡಿದೆನು’ ಎನ್ನುತ್ತಾಳೆ.

ಇಷ್ಟರಲ್ಲಿ ದೊರೆಯ ಇಸುಗೆಯಿಂದ ಗಾಯಗೊಂಡ ಮಾಯಾವರಾಹನು ವಿಶ್ವಾಮಿತ್ರನ ಆಶ್ರಮದತ್ತ ಹೋಗುತ್ತದೆ. ಅದು ‘ತೂಗಿ ತೊನೆದು ಮೈಮರೆದ’ ರೀತಿಯನ್ನು ಕವಿಯು ಕೆತ್ತಿ ಕೊರೆದು ಬಣ್ಣಿಸಿದ್ದಾನೆ (IV, ೨೪). ಮುಂದಿನ ಪದ್ಯ ಕ್ರಿಯಾಮಯವಾಗಿಯೂ ಚಿತ್ರಮಯವಾಗಿಯೂ ನಾಟಕೀಯವಾಗಿಯೂ ಇದೆ. ಕ್ರುದ್ಧನಾದ ಕೌಶಿಕನ ಮಹಾವಾಣಿಯೂ ಭಯಂಕರ ಹೂಂಕಾರವೂ ನಮ್ಮ ಕಿವಿಯಲ್ಲಿ ಅನುರಣಿತವಾಗುತ್ತವೆ. ಹೂಂಕಾರದಿಂದ ಗಳ್ಕನೆ ಮೂಡುವ ‘ಸತಿ’ ಯರನ್ನು ನೋಡಿ ವಿಸ್ಮಯಮೂಕರಾಗುತ್ತೇವೆ:

ಹಂದಿಯಂ ಕಾಣುಹ ತಡಂ ಕೋಪಗಿಚ್ಚು ಭುಗಿ
ಲೆಂದು ಜಪ ಜಾರಿ ತಪ ತಗ್ಗಿ ಮತಿ ಗತವಾಗಿ
ಸಂದ ಯೋಗಂ ಹಿಂಗಿ ದಯೆ ದಾಂಟಿ ನೀತಿ ಬೀತಾನಂದವರತುಹೋಗಿ
ಹಿಂದ ನೆನೆದುರಿದೆದ್ದು ಸಿಕ್ಕಿದನಲಾ ಭೂಪ
ನಿಂದು ನಾನಾಯ್ತು ತಾನಾಯ್ತು ಕೆಡಿಸದೆ ಮಾಣೆ
ನೆಂದು ಗರ್ಜಿಸುವ ಕೌಶಿಕನ ಹುಂಕಾರದಿಂದೊಗೆದರಿಬ್ಬರು ಸತಿಯರು.

‘ಮುನಿಗೆ ಹೊಲೆಯಾವುದು? ಅತಿ ಕೋಪ, ಬದ್ಧದ್ವೇಷ, ಅನಿಮಿತ್ತ ವೈರ’. ಅದರಿಂದ ಹುಟ್ಟಿದರಾಗಿ ಆ ಸತಿಯರು ಹೊಲತಿಯರಾಗಿ ‘ಬೆಸನಾವುದು’ ಎನಲು ‘ದುರ್ಮಂತ್ರ ಬಲವಂತನಾದ ಕೌಶಿಕನು’ ಹರಿಶ್ಚಂದ್ರನನು ಮರಳು ಮಾಡುತಿರಿ ಹೋಗಿ ಎಂದಟ್ಟಿದನು. ‘ಸಂದ ಕಾರಿರುಳ ಕನ್ನೆಯರು ಹಗಲಂ ನೋಡಲೆಂದು ಬಂದರೋ’ ಎಂಬಂದದಲಿ ಅವರು ಅವನಿಪನಿದ್ದೆಡೆಗೆ ಬರುತ್ತಾರೆ. ಅಭಿನಯ ಕ್ರಿಯೆಯ ದೃಷ್ಟಿಯಿಂದಲೂ, ವಿಶೇಷತಃ ಸಂವಾದ ದೃಷ್ಟಿಯಿಂದಲೂ ಆ ದೃಶ್ಯ ಅತ್ಯಂತ. ನಾಟಕೀಯವಾಗಿದೆ. ವಾಕ್ಯ ಪ್ರತಿವಾಕ್ಯಗಳು, ವಾದ ಪ್ರತಿವಾದಗಳು, ಉಪಮಾನ ಪ್ರತ್ಯುಪಮಾನಗಳು ಹಿಂದಕ್ಕೂ ಮುಂದಕ್ಕೂ ಬಾಣಗಳಂತೆ ವೇಗದಿಂದ ಮಿಂಚುತ್ತವೆ. ಮಾಯದಬಲೆಯರ ವಾದದ ಯುಕ್ತಿಗೆ ಬೆರಗಾಗಿ ಕೈಚಪ್ಪಾಳೆ ತಟ್ಟುವ ನಾವು ಒಡೆನೆಯೆ ಹರಿಶ್ಚಂದ್ರನ ಪ್ರತಿಯುಕ್ತಿಗೆ ಬೆಕ್ಕಸಗೊಂಡು ಹಿಗ್ಗಿ ಕರತಾಡನ ಮಾಡುತ್ತೇವೆ. ಸಮಬಲರಾದ ಪಟುಭಟರ ದ್ವಂದ್ವಯುದ್ಧದಲ್ಲಿ ಜಯ ಯಾರಿಗೆ, ಸೋಲು ಯಾರಿಗೆ ಎಂಬುದು ಎಂತು ಸಂದೇಹಾಸ್ಪದವಾಗಿರುತ್ತದೆಯೊ ಅಂತೆಯೆ ನಾವು ಸಂಶಯಗ್ರಸ್ತರಾಗುತ್ತೇವೆ. ಅಯ್ಯೋ ಮಾಯದಬಲೆಯರ ಈ ಮಾತಿಗೆ ದೊರೆ ಏನು ಉತ್ತರವನ್ನು ತಾನೆ ಕೊಡಬಲ್ಲನು? ಎಂದುಕೊಳ್ಳವಷ್ಟರಲ್ಲಿಯೆ ಆತನ ಸಮಂಜಸವಾದ ಅದ್ಭುತ ಪ್ರತಿಭಾಪೂರ್ಣವಾದ ಉತ್ತರದ ವೈಖರಿಯನ್ನು ನೋಡಿ ಆನಂದದಿಂದ ಕುಣಿದಾಡುತ್ತೇವೆ. ಅಂತಹ ವಾಗ್ಯುದ್ಧಗಳು ಸಾಹಿತ್ಯ ಪ್ರಪಂಚದಲ್ಲಿ ಬಹಳ ನಡೆದಿಲ್ಲ.