ವಿಮರ್ಶೆ ಎಂದರೆ ಕವಿಪ್ರತಿಭೆಯಿಂದ ಹೊರಹೊಮ್ಮುವ ಸುಂದರ ಭಾವಮಯ ಕಾವ್ಯಕ್ಷೇತ್ರಗಳಲ್ಲಿ ಸೂಕ್ಷ್ಮಮತಿಯಾದ ಸಹೃದಯನು ಕೈಕೊಳ್ಳುವ ವಿಹಾರಯಾತ್ರೆ ಅಥವಾ ಸಾಹಸಯಾತ್ರೆಯ ಕಥನಕಾರ್ಯ. ಅಂತಹ ಯಾತ್ರೆ ಹರ್ಷಕರವಾದುದಾದರೂ ಸಾಹಸ ಪೂರ್ಣ. ಯಾತ್ರೆ ಸಂಪೂರ್ಣವಾಗಿ ಸಫಲವಾಗಬೇಕಾದರೆ ಅನುಭವಿಸುವ ಸರಸಹೃದಯದೊಂದಿಗೆ ಆಲೋಚಿಸುವ ಸೂಕ್ಷ್ಮಮತಿಯೂ ಅವಶ್ಯಕ. ಮನಸ್ಸೂ, ಹೃದಯವೂ, ಬುದ್ಧಿಯೂ ಭಾವವೂ, ಅಂತಃಕರಣವೂ ಇಂದ್ರಿಯಗಳೂ ಅನ್ಯೋನ್ಯ ಸಂಘರ್ಷಣೆಯಿಂದ ಅಭಿನ್ನವಾಗಿ ಪ್ರತಿಭಾಜ್ಯೋತಿಯನ್ನು ಹೊತ್ತಿಸಿದರೇ ಆತ್ಮಾನಂದ ಸಾಧ್ಯ. ಹಾಗಾದರೇ ಕವಿಯ ರಸಕೃತಿ ನಮ್ಮ ಭಾಗಕ್ಕೆ ಸಾರ್ಥಕ. ಅಂತಹ ಸಾರ್ಥಕತೆಯೇ ಉತ್ತಮ ಮಿವರ್ಶೆಯ ಗುರಿ. ನಿಜವಾದ ವಿಮರ್ಶಕನು ಮಾರ್ಗದರ್ಶಿಯೂ ಅಲ್ಲದೆ ಹೃದಯಸ್ಪರ್ಶಿಯೂ ಆಗುತ್ತಾನೆ. ಒಂದು ದೃಷ್ಟಿಯಿಂದ ನೋಡಿದರೆ ಆತನೂ ರಸದ್ರಷ್ಟನೇ ಹೌದು. ಆತನ ಕಣ್ಣಿನ ಕಾಂತಿ ಇತರರ ಕಣ್ಣು ತೆರೆಯುವಂತೆ ಮಾಡುತ್ತದೆ; ಆತನ ಎದೆಯ ಕಿಡಿ ಇತರರ ಎದೆಗೆ ಕಿಡಿ ಸೂಸುತ್ತದೆ; ಆತನ ಆತ್ಮದ ಶಾಂತಿ ಇತರ ಆತ್ಮಗಳಿಗೆ ಶಾಂತಿದಾನಮಾಡುತ್ತದೆ. ಓದುಗರಿಗೆ ಹಿಂದೆ ಕಾಣದುದು ಕಾಣುತ್ತದೆ; ಹಿಂದೆ ಅನುಭವವಾಗದುದು ಅನುಭವವಾಗುತ್ತದೆ; ಪರಿಚಿತವಾದುದು ಅಪರಿಚಿತವಾದಂತಾಗಿ ಚಿರನೂತನವಾಗುತ್ತದೆ.

ಆದರೆ ಉತ್ತಮವಾದುದು ಶ್ರಮವಿಲ್ಲದೆ ಲಭಿಸದು; ಇಚ್ಛೆಯಿಲ್ಲದಿದ್ದರಂತೂ ಅದು ಸಾಧ್ಯವೇ ಅಲ್ಲ. ವಿಮರ್ಶಕನು ಕವಿಗೆ ಶರಣಾಗುವಂತೆ, ಕವಿಯ ಪ್ರತಿಭಾವಾಹಿನಿಯಲ್ಲಿ ತನ್ನ ಆತ್ಮವನ್ನು ಪ್ರತಿಭಟನೆಯಿಲ್ಲದೆ ತೇಲಿಬಿಡುವಂತೆ, ವಾಚಕನೂ ವಿಮರ್ಶಕನಿಗೆ ಅನುಗಾಮಿಯಾಗಿ ಸಹಾನುಭೂತಿಯಿಂದ ಆತನೊಡನೆ ತನ್ನ ಕಲ್ಪನೆಯ ರೆಕ್ಕೆಗಳನ್ನು ಬಿಚ್ಚಿ ಹಾರಬೇಕು. ಏಕೆಂದರೆ ಸಹಾನುಭೂತಿಯಿಲ್ಲದಿದ್ದರೆ ರಸಕೃತಿಗಳ ಆಸ್ವಾದನೆ ಅಗಮ್ಯ. ಎಂದರೆ ವಿಮರ್ಶಕನಂತೆ ವಾಚಕನೂ ಕವಿಗೆ ಸಮಾನಹೃದಯನಾಗಲು ಪ್ರಯತ್ನಿಸಬೇಕು.

ಉತ್ತಮವಾದುದನ್ನು ಬೆರಳಿಟ್ಟು ತೋರುವುದು ಹೇಗೆ ವಿಮರ್ಶೆಯೋ ಹಾಗೆಯೇ ಅನುತ್ತಮವಾದುದನ್ನು ಮುಚ್ಚುವುದೂ ಒಂದು ತೆರನಾದ ವಿಮರ್ಶೆಯೆ. ರಸವೂ ಅರಸವೂ ಮಿಶ್ರವಾಗಿದ್ದರೆ ಸಾಮಾನ್ಯನಿಗೆ ಅದನ್ನು ಬೇರೆಗೈಯುವುದು ಕಷ್ಟವಾಗುತ್ತದೆ. ಇರುವುದೆಲ್ಲವೂ ರಸವೆಂದೂ ಅಥವಾ ಅರಸವೆಂದೂ ಸ್ವೀಕರಿಸುವ ಅಥವಾ ತಿರಸ್ಕರಿಸುವ ಸಂಭವವುಂಟು. ಆದ್ದರಿಂದ ಯುಕ್ತವಾದ ಸಂಗ್ರಹಕಾರ್ಯವೂ ವಿಮರ್ಶೆಯೇ. ಈ ದೃಷ್ಟಿಯಿಂದ ನೋಡಿದರೆ ‘ಹರಿಶ್ಚಂದ್ರ ಕಾವ್ಯಸಂಗ್ರಹ’ವು ರಾಘವಾಂಕನ ಮಹಾಕಾವ್ಯವಾದ ‘ಹರಿಶ್ಚಂದ್ರ ಕಾವ್ಯ’ದ ಮೇಲಣ ಪ್ರಥಮ ವಿಮರ್ಶೆ ಎಂದು ಹೇಳಬೇಕಾಗುತ್ತದೆ. ಈ ಗ್ರಂಥದ ಮುನ್ನುಡಿಯಲ್ಲಿ ಗ್ರಂಥಮಾಲೆಯ ಪ್ರಧಾನ ಸಂಪಾದಕರಾದ ಶ್ರೀಮಾನ್ ಬಿ.ಎಂ. ಶ್ರೀಕಂಠಯ್ಯನವರು ಸಂಗ್ರಹಕಾರ್ಯದ ಲಕ್ಷಣ ಲಕ್ಷ್ಯಗಳನ್ನು ಕುರಿತು ಹೀಗೆಂದು ಬರೆದಿದ್ದಾರೆ:―

“ನಮ್ಮ ಪ್ರೌಢಕಾವ್ಯಗಳು ಸಾಧಾರಣವಾಗಿ ಬಹಳ ವಿಸ್ತಾರವಾಗಿರುವುದರಿಂದ ಅವುಗಳಲ್ಲಿ ಬಹು ಸ್ವಲ್ಪ ಭಾಗವನ್ನು ಮಾತ್ರ ಪರೀಕ್ಷೆಗಳಿಗೆ ಪಠ್ಯಭಾಗವಾಗಿ ಇಡುವ ಪದ್ಧತಿ ರೂಢಿಗೆ ಬಂದಿದೆ. ಸಾಮಾನ್ಯ ಜನರಂತೂ ಈ ಕಾವ್ಯಗಳನ್ನು ಓದುವುದೇ ಅಪೂರ್ವ. ಇದು ವ್ಯಸನಕರವಾದ ಸಂಗತಿ. ಒಂದು ಕಾವ್ಯದ ಸೊಗಸನ್ನು, ಒಬ್ಬ ಕವಿಯ ಕವಿತಾಶಕ್ತಿಯನ್ನು ತಿಳಿಯಬೇಕಾದರೆ ಕಾವ್ಯವನ್ನು ಸಂಪೂರ್ಣವಾಗಿ ಓದಬೇಕು; ಇಲ್ಲ, ಉತ್ತಮ ಭಾಗಗಳನ್ನೆಲ್ಲವನ್ನಾದರೂ ನೋಡಬೇಕು. ಈ ಸಮಷ್ಟಿದೃಷ್ಟಿ ಸಾಧ್ಯವಾಗುವಂತೆ, ಪಾಠಕ್ಕೆ ಪ್ರಮಾಣ ಮೀರದಂತೆ, ಕಾವ್ಯಗಳನ್ನು ಅದರದರ ಸ್ವಭಾವಕ್ಕೆ ಉಚಿತವಾಗಿ ಸಂಗ್ರಹಿಸಿದರೆ ವಿದ್ಯಾರ್ಥಿಗಳಿಗೂ ಸಾಮಾನ್ಯ ಜನಕ್ಕೂ ಹಿತಕರವೂ ಪ್ರಯೋಜನಕರವೂ ಆಗಬಹುದೆಂಬ ನಂಬಿಕೆಯಿಂದ ಈ ಸಂಗ್ರಹಗಳನ್ನು ಮಾಡುತ್ತದೆ. ಇದರಲ್ಲಿ ಮುಖ್ಯ ಗಮನ ― ಕಥಾಸರಣಿ ಕೆಡಬಾರದು; ಒಟ್ಟು ಕಥೆಯ ಸ್ವಾರಸಕ್ಕೆ, ಪಾತ್ರ ನಿರೂಪಣಕ್ಕೆ ಭಂಗಬರಬಾರದು; ಅವಶ್ಯವಾದ ವರ್ಣನೆಯ ಮತ್ತು ವಿವರಣೆಯ ಸಾರ ಬಿಟ್ಟು ಹೋಗಬಾರದು; ಎಲ್ಲಕ್ಕಿಂತ ಪ್ರಧಾನವಾದದ್ದು, ಕವಿಯ ವ್ಯಕ್ತಿತ್ವಕ್ಕೆ ಆತನ ವಿಶೇಷ ಪ್ರತಿಭೆಗೆ ಲೋಪ ಬರಕೂಡದು. ಇಷ್ಟನ್ನೂ ಸಾಧಿಸುವುದು ಸಂಗ್ರಹಕಾರನ ಕರ್ತವ್ಯ, ಆದರೆ ಕಷ್ಟ:― ನಿಸ್ಸಾರವಾದ ಚರ್ವಿತ ಚರ್ವಣವಾದ ಭಾಗಗಳನ್ನು ಮನಃಕ್ಲೇಶವಿಲ್ಲದೆ ಬಿಟ್ಟರೂ, ಆತನು ಆಗಾಗ್ಗೆ ಧರ್ಮಸಂಕಟಕ್ಕೆ ಸಿಕ್ಕದೆ ಇರಲಾರನು. ಯಾವ ಸುಂದರವಾದ ಪ್ರಕರಣವನ್ನು ಉಳಿಸಿಕೊಳ್ಳಲಿ, ಈ ಭಾವವನ್ನೂ ಚಮತ್ಕಾರವನ್ನೂ ಹೇಗೆ ಬಿಡಲಿ, ಎಂದು ಆತನು ತನ್ನೊಡನೆಯೇ ಹೋರಾಡದೆ ಇರನು. ತನ್ನ ಸಂಸ್ಕಾರವನ್ನೂ ಅಭಿರುಚಿಯನ್ನೂ ಪ್ರಮಾಣವಾಗಿಟ್ಟುಕೊಂಡರೂ, ತನ್ನ ಸಂಗ್ರಹ ಬಹುಜನ ಸಮ್ಮತವಾಗ ಬೇಕೆಂಬುದನ್ನು ಮರೆಯನು. ಕೊನೆಗೆ ಸಹೃದಯರ ಕರುಣಗೆ ಸಂಗ್ರಹಕಾರನು ಶರಣನು. “

ಕವಿಯೂ ಕ್ಷಮಿಸಬೇಕು! ಏಳೆಂಟು ಶತಮಾನಗಳ ಹಿಂದಿದ್ದ ರಾಘವಾಂಕನು ಅಂದಿನ ಸಾಹಿತಿಗಳ ಅಭಿರುಚಿಗೆ ತಕ್ಕಮತೆ ಕಾವ್ಯರಚನೆ ಮಾಡಿದ್ದಾನೆ: ಉತ್ತಮವಾಗಿಯೆ ರಚಿಸಿದ್ದಾನೆ. ಆದರೆ ಇಪ್ಪತ್ತನೆಯ ಶತಮಾನದ್ದು ಭಿನ್ನರುಚಿ. ಅಂದಿನ ಮಂದಿಯ ಮತ್ತು ಮನೀಷಿಗಳ ಅಭಿರುಚಿಗೆ ಯೋಗ್ಯವೆಂದು ತೋರಿರಬಹುದಾದ ಶಬ್ದಾಲಂಕಾರಗಳು, ಅರ್ಥಾಲಂಕಾರಗಳು, ಶ್ಲೇಷಗಳು, ಕವಿ ಸಮಯಗಳು, ದೀರ್ಘವರ್ಣನೆಗಳು, ಇಂದಿನ ನಮಗೆ ಅಷ್ಟೇನೂ ಕಾವ್ಯವಾಗಿ ಕಾಣುವುದಿಲ್ಲ. ಆದ್ದರಿಂದ ಶತಮಾನಗಳ ಆಚೆ ನಿಂತು ತನ್ನ ಸುದೀರ್ಘ ಬಾಹುಗಳಲ್ಲಿ ಫಲಕುಸುಮಗಳಿಂದ ತುಂಬಿದ ಸ್ವರ್ಣಸ್ಥಾಲಿಯನ್ನು ಹಿಡಿದೆತ್ತಿ ಆಶೀರ್ವಾದ ಪೂರ್ವಕವಾಗಿ ನಮ್ಮೆಡೆಗೆ ಚಾಚಿರುವ ರಾಘವಾಂಕನಿಂದ ನಾವು ಬೇಕಾದ ಹಣ್ಣು ಹೂಗಳನ್ನು ತೆಗೆದುಕೊಂಡು ಆತನಡಿಗೆ ಮೈ ಚಾಚಿ ಕೃತಜ್ಞರಾಗುವುದು ನಮ್ಮ ಕರ್ತವ್ಯ. ಹಾಗೆ ಮಾಡಿದರೆ ಆತನನ್ನು ಅಗೌರವಿಸದಂತಾಗುವುದಿಲ್ಲ. ಅದಕ್ಕೆ ಬದಲಾಗಿ ಆತನ ಕೀರ್ತಿಕಲಶಕ್ಕೆ ಚಿನ್ನದ ಮುಲಾಮು ಕೊಟ್ಟಂತಾಗುತ್ತದೆ. ‘ಹರಿಶ್ಚಂದ್ರ ಕಾವ್ಯಸಂಗ್ರಹ’ದಿಂದ ಅಂತಹ ಕೆಲಸವಾಗಿದೆ ಎಂದು ಧೈರ್ಯವಾಗಿ ಹೇಳಬಹುದು ― ‘ಗಧಾಯುದ್ಧ ನಾಟಕ’ ದಿಂದ ರನ್ನನ ಕೃತಿರತ್ನಕ್ಕಾದಂತೆ.

‘ಹರಿಶ್ಚಂದ್ರ ಕಾವ್ಯಸಂಗ್ರಹ’ವನ್ನು ತೆಗೆದುಕೊಂಡರೆ ಓದಿ ಪೂರೈಸುವವರೆಗೂ ಮನಸ್ಸು ಸಮಾಧಾನವಾಗುವುದಿಲ್ಲ. ಅಲ್ಲದೆ ಓದಿದಂತೆಲ್ಲ ಇನ್ನೂ ಓದಬೇಕೆನಿಸುತ್ತದೆ. ಮತ್ತೆ ಮತ್ತೆ ಓದಿದಷ್ಟೂ ಅದರ ಮಹತ್ವ ಹೆಚ್ಚಾದಂತೆ ತೋರುತ್ತದೆ. ಹೊಸ ಹೊಸ ವಿಷಯಗಳು ಮನಸ್ಸಿಗೆ ಹೊಳೆಯುತ್ತವೆ. ಕಡೆಗೆ ಕಂಡಕಂಡವರಿಗೆಲ್ಲ ಅದನ್ನು ಓದಿ ಹೇಳಬೇಕು ಎನ್ನಿಸುತ್ತದೆ. ಇಂತಹ ಸೊಗಸಾದ ಕಾವ್ಯ ಅನೇಕರಿಗೆ ಅಪರಿಚಿತವಾಗಿದೆಯಲ್ಲಾ ಎಂದು ದುಖವಾಗುತ್ತದೆ. ರಾಘವಾಂಕನ ಕಥನಕೌಶಲ, ದೃಶ್ಯವಿಭಾಗ ರೀತಿ, ಪಾತ್ರಗಳ ಕ್ರಿಯೆ ಮತ್ತು ಅಭಿನಯಕ್ರಿಯೆಗಳ ವರ್ಣನೆ, ಅವರ ಸಂಭಾಷಣೆ, ಶೋಕ, ಕ್ರೋಧ, ಸತ್ಯಸಂಧತೆ, ಕ್ರೌರ್ಯ, ಕರ್ತವ್ಯಪರಾಯಣತೆ, ಶ್ರದ್ಧೆ, ಭಕ್ತಿ ― ಒಟ್ಟಿನಲ್ಲಿ ಕಾವ್ಯದಲ್ಲಿ ಚೆಲ್ಲಿ ಸೂಸಿರುವ ನಾಟಕೀಯತೆ, ಎಲ್ಲವೂ ಒಂದೊಂದಾಗಿ, ಒಂದರ ಮೇಲೊಂದಾಗಿ ನುಗ್ಗಿ ಬಂದು, ನಮ್ಮನ್ನು ಭಾವನಾಪ್ರಪಂಚಕ್ಕೆ ಕೊಂಡೊಯ್ದು ನಗಿಸಿ, ಅಳಿಸಿ, ಸಿಟ್ಟುಗೊಳಿಸಿ, ಸಂತೋಷಪಡಿಸಿ ತಣಿಸುತ್ತವೆ. ರಾಘವಾಂಕನು ಸಂಪೂರ್ಣವಾಗಿ ನಮ್ಮವನಾಗುತ್ತಾನೆ; ನಾವು ಸಂಪೂರ್ಣವಾಗಿ ಆತನವರಾಗುತ್ತೇವೆ. ವಸಿಷ್ಠ, ವಿಶ್ವಾಮಿತ್ರ, ಹರಿಶ್ಚಂದ್ರ, ಚಂದ್ರಮತಿ, ಲೋಹಿತಾಶ್ವ, ನಕ್ಷತ್ರಕ, ವೀರಬಾಹು, ಹಂಪೆ, ಕಾಶಿ, ಇಂದ್ರನ ಆಸ್ಥಾನ, ಮಣಿಕರ್ಣಿಕೆಯ ಶ್ಮಶಾನ, ಎಲ್ಲರೂ ಎಲ್ಲವೂ ಸಜೀವವಾಗಿ ಆವಿರ್ಭೂತವಾಗಿ ಸತ್ಯವಾಗಿ ನಮ್ಮ ಕಣ್ಣಮುಂದೆ ನಲಿಯುತ್ತವೆ. ‘ಹರಿಶ್ಚಂದ್ರ ಕಾವ್ಯಯಸಂಗ್ರಹ’ದ ವಾಚನ ರಸಿಕರಿಗೊಂದು ರಸಯಾತ್ರೆ.

ಪ್ರಾರಂಭದಲ್ಲಿ ದೇವತಾಸ್ತುತಿಯಾಗುವಾಗಲೆ ಹೊಸಗಾಳಿ ಬೀಸಿದಂತಾಗುತ್ತದೆ ― ತೆಂಕಣ ಗಾಳಿ ಮುಂದೆ ಬರುವ ಸುಗ್ಗಿಯನ್ನು ಸೂಚಿಸುವಂತೆ ಅದರ ಭಾವ ಮಹೋನ್ನತವಾಗಿದೆ. ಆದರೆ ಉಪಮೆ, ಕವಿಸಮಯ, ವಾಚ್ಯಾರ್ಥಗಳ ಕರಟವನ್ನು ಒಡೆದು ತಿರುಲನ್ನು ಮುಟ್ಟಬೇಕು:

ಶ್ರೀಪತಿಗೆ ಸೊಬನುಡುಪತಿತೆ ಶಾಂತಿಯನು ವಾ
ಣೀಪತಿಗೆ ಚಾತುರ್ಯಮಂ ದಿವಸ್ಪತಿಗೆ ಪ್ರ
ತಾಪಮಂ ಸುರಪತಿಗೆ ಭೋಗಮಂ ರತಿಪತಿಗೆ ಮೂಲೋಕವಾವರಿಸುವ
ರೂಪಂ ಸರಿತ್ಪತಿಗೆ ಗಂಭೀರತೆಯನು ಸ್ವಾ
ಹಾಪತಿಗೆ ತೇಜಮಂ ಕೊಟ್ಟ ಗುರುಮೂರ್ತಿ ಪಂ
ಪಾವತಿ ವಿರೂಪಾಕ್ಷನೆಮಗಿಷ್ಟಸಿದ್ಧಿಯಂ ಮಾಳ್ಕೆ ಸಂತೋಷದಿಂದ

ಈ, ಪದ್ಯಕ್ಕೆ, ಶ್ರೀಪತಿಗೆ=ವಿಷ್ಣುವಿಗೆ, ಸೊಬಗನ್=ಸೌಂದರ್ಯವನ್ನೂ ― ಎಂದು ಮೊದಲಾಗಿ ಸುಲಭವಾಗಿ ಅರ್ಥ ಹೇಳಬಹುದು. ಹಾಗೆ ಅರ್ಥಮಾಡಿ ಎಲ್ಲವನ್ನೂ ತಿಳಿದೆನೆಂಬ ಮೊಂಡಕೆಚ್ಚಿನಿಂದ ಮುಂದುವರಿಯಲೂ ಬಹುದು. ಆದರೆ ನಿಜವಾದ ಭಾವ ಕೈಬಿಟ್ಟು ಹೋಗುತ್ತದೆ.

ಈ ಪದ್ಯದ ಅಂತರಾರ್ಥವಿದು:

ಸೃಷ್ಟಿಯಲ್ಲಿ ಯಾರು ಸೌಂದರ್ಯವಾಗಿದ್ದಾನೆಯೋ,
ಚಂದ್ರನಲ್ಲಿ ಯಾರು ಶಾಂತಿಯಾಗಿದ್ದಾನೆಯೋ,
ಯಾರು ಸೃಷ್ಟಿರಚನೆಯಲ್ಲಿ ಕಲಾಕೌಶಲವಾಗಿದ್ದಾನೆಯೋ,
ಯಾರು ಸೂರ್ಯನಲ್ಲಿ ದೀಪ್ತಿಯಾಗಿದ್ದಾನೆಯೋ,
ಯಾರು ಭುವನದ ಭೋಗಿಯಾಗಿದ್ದಾನೆಯೋ,
ಯಾರು ಸರ್ವಸೃಷ್ಟಿಯನ್ನೂ ಮುಂದಕ್ಕೆ ಪ್ರೇರಿಸುವ
ಪ್ರೇಮ ಸೌಂದರ್ಯವಾಗಿದ್ದಾನೆಯೋ,
ಯಾರು ಸಮುದ್ರದ ಗಾಂಭೀರ್ಯವೋ,
ಯಾರು ಅಗ್ನಿಯ ತೇಜವೋ,
ಅಂತಹ ವಿರೂಪಾಕ್ಷನಾದ ಗುರುಮೂರ್ತಿ
ತನ್ನ ಇಚ್ಚೆಗೆ ವಿರುದ್ದವಲ್ಲದ ಬಯಕೆಗಳನ್ನು ನೆರವೇರಿಸಲಿ!

ಮೊದಲು ಸಜೀವವಾಗಿದ್ದು ಬರಬರುತ್ತ ಮರವಟ್ಟು ಹೆಪ್ಪುಗಟ್ಟಿ ನಿರ್ಜೀವವಾಗಿರುವ ಪದಗುಂಫನಗಳಿಗೆ ನಾವು ಬಿಸಿಯಾದ ಪ್ರಾಣವಾಯುವನ್ನು ಬೀಸಿ ಜೀವದಾನಮಾಡದಿದ್ದರೆ ಪೂರ್ವಕವಿಗಳ ಮಹಾಕೃತಿಗಳು ನಮಗೆ ನೀರಸವಾಗಿ ತೋರದಿರುವುದಿಲ್ಲ. ಸಹಾನುಭೂತಿಯಿದ್ದರೆ ಕವಿಸಮಯ ತಳತಳಿಸುವ ಕಿಡಿ; ಅದಿಲ್ಲದಿದ್ದರೆ ಬರಿಯ ಬೂದಿಯ ಪುಡಿ.

ಕವಿ ಮೂರನೆಯ ಪದ್ಯದಲ್ಲಿ ಕೃತಿಗೆ ನಾಮವು ‘ಹರಿಶ್ಚಂದ್ರ ಚಾರಿತ್ರ’ವೆಂದೂ, ಕೃತಿಗೊಡೆಯನು ಪಂಪಾವಿರೂಪಾಕ್ಷನೆಂದೂ, ಕೃತಿಗೆ ಪಾಲಕರು ಲೋಕದ ಭಕ್ತಜನವೆಂದೂ ಹೇಳಿ ತರುವಾಯ ಸಹಜವಾದ ಆತ್ಮಶ್ರದ್ಧೆಯಿಂದ “ಪೇಳ್ದಾತನಾರೆಂದಡೆ ‘ಚತುರ ಕವಿರಾಯ ಹಂಪೆಯ ಹರೀಶ್ವರನ ವರಸುತನ್ ಉಭಯ ಕವಿಕಮಲ ರವಿ ರಾಘವಾಂಕ ಪಂಡಿತನ್’ ಎಂದೊಡೆ ಈ ಕಥಾರಸದ ಲಹರಿಯನು ಬಣ್ಣಿಸದರಾರ್ ಈ ಧರೆಯೊಳು?” ಎಂದು ಹಾಡಿದ್ದಾನೆ. ನಾಲ್ಕನೆಯ ಪದ್ಯದಲ್ಲಿ ಕಥೆಯನ್ನು ಬೀಜರೂಪವಾಗಿ ತಿಳಿಸಿ, ಐದನೆಯದರಲ್ಲಿ “ನಡೆವರೆಡಹದೆ ಕುಳಿತರೆಡಹುವರೆ?…. ಒಂದೆರಡೆಡೆಯೊಳು ಎಡೆವಾಯ್ದು ಬಂದ ತಪ್ಪಂ ಹಿಡಿದು ಸಾಧಿಸದೆ ಕಡೆತನಕ ಬಂದ ಲೇಸಿಂಗೆ ತಲೆದೂಗೆ ತಲೆಯೊಡೆವುದೇ? ಬೇನೆಯರಿಯದ ನೀರಸರನೇಕೆ ಪುಟ್ಟಿಸಿದನಬುಜಭವನು?” ಎಂದು ಓದುಗರಿಗೆ ಎಚ್ಚರಿಕೆ ಹೇಳಿ ಭರ್ತ್ಸನೆ ಮಾಡಿದ್ದಾನೆ. ಆಮೇಲೆ ೯, ೧೦, ೧೧ನೆಯ ಪದ್ಯಗಳಲ್ಲಿ ಲಾಳದೇಶ, ಅಯೋಧ್ಯಾಪುರ, ಅಯೋಧ್ಯೆಯ ದುರ್ಗ ಇವುಗಳನ್ನು ಜಾಣ್ಮೆಯಿಂದ ವರ್ಣಿಸಿ, ೧೩, ೧೪, ೧೫ನೆಯ ಪದ್ಯಗಳಲ್ಲಿ ಹರಿಶ್ಚಂದ್ರ, ಚಂದ್ರಮತಿ, ಲೋಹಿತಾಶ್ವರನ್ನು ಆಲಂಕಾರಿಕವಾಗಿ ವರ್ಣಿಸಿ ಪೀಠಿಕೆಯನ್ನು ಪೂರೈಸುತ್ತಾನೆ. ಉದಾಹರಣೆಗಾಗಿ ಹರಿಶ್ಚಂದ್ರನನ್ನು ಕುರಿತು ಹೀಗೆ ಬರೆದಿದ್ದಾನೆ:

ತನುರುಚಿಯ ಮುಂದೆ ದಿನಪನ ಕಾಂತಿ ಕಪ್ಪ ಕ
ಪ್ಪನೆ, ಕೋಪದಿದಿರೊಳೌರ್ವಾನಳಂ ತಣ್ಣ ತ
ಣ್ಣನೆ, ಕೊಡುವ ಕೈಯಿದಿರೊಳಮರತರು ಮೆಲ್ಲಮೆಲ್ಲನೆ, ಮೋಹನವನಪ್ಪಿದ
ಘನರೂಪಿನಿದಿರೊಳಂಗಜ ರೂಪು ನೊಪ್ಪ ನೊ
ಪ್ಪನೆ, ಗಭೀರತೆಯಿದಿರಲಂಬುನಿಧಿ ತೆಳ್ಳ ತೆ
ಳ್ಳನೆ, ಶಾಂತಿಯಿದಿರ ಶಶಿ ಬೆಚ್ಚಬೆಚ್ಚನೆಯೆನೆ ಹರಿಶ್ಚಂದ್ರನೆಸೆದಿರ್ದನು.

ಕಥಾರಂಭವಾಗುತ್ತಲೆ ಕಥನ ಸರಣಿ ಕ್ರಿಯಾಮಯವಾಗುಯೂ ನಾಟಕೀಯವಾಗಿಯೂ ದೃಶ್ಯದಿಂದ ದೃಶ್ಯಕ್ಕೆ ಚಿಮ್ಮಿ ವೇಗವಾಗಿ ಪ್ರವಹಿಸುತ್ತದೆ. ಪ್ರಥಮ ದೃಶ್ಯವಿರುವುದು ಸ್ವರ್ಗದಲ್ಲಿ, ಇಂದ್ರನ ಆಸ್ಥಾನದಲ್ಲಿ. ಕವಿ ದೇವೇಂದ್ರನಿಗೆ ಸೊಗಸಾದ ವಿಶೇಷಣಗಳ ಮಾಲೆಯನ್ನು ಹಾಕಿ, ಆತನೋಲಗದ ಐಸಿರಿಯನ್ನೂ ಸೂಚಿಸಿ, ನೆರೆದಿದ್ದ ಸಭೆಯ ನಡುವೆ ಮಂಡಿಸಿದ್ದ ವಸಿಷ್ಠ ವಿಶ್ವಾಮಿತ್ರರ ಮೇಲೆ ನಮ್ಮ ದೃಷ್ಟಿ ಬೀಳುವಂತೆ ಮಾಡುತ್ತಾನೆ. ಏಕೆಂದರೆ ಆ ಎರಡು ವ್ಯಕ್ತಿಗಳೇ ಹರಿಶ್ಚಂದ್ರನ ಚರಿತ್ರೆಗೆ ಪ್ರೇರಕ ಶಕ್ತಿಗಳಾಗುತ್ತಾರೆ. “ಒಡಲನಾವರಿಸಿದಗೋಪಾಂಗ ಸಂಕುಳದ ನಡುವೆ ನಯನ ದ್ವಯಂಗಳು,…. ಉರ್ವಿ ಯಂ ಪರ್ವಿ ಪಸರಿಸಿದ ನಾನಾ ನದಿಗಳ ನಡುವೆ ಸುರುಚಿರ ಗಂಗೆ ತುಂಗಭದ್ರೆಗಳ್ ಒಪ್ಪವಡೆದು ಮಹಿಮೆಯೊಳೆಸೆವ ತೆರದಿ ಸುರಪನ ಸಭೆಯನ್ ಎಡೆಗೊಂಡ ಮುನಿಕುಲದ ನಡುವೆ ಇರ್ದರ್ ಅಧಿಕ ವಿಶ್ವಾಮಿತ್ರವಾಸಿಷ್ಠರು.” ಮುಂದಿನ ನೋಟ ಉತ್ತಮ ರೂಪಕದಂತಿದೆ; ಆದರ ಸಂವಾದ ಸ್ವಾಭಾವಿಕವಾಗಿದೆ; ಸತ್ಯವಾಗಿದೆ. ಮುನಿಗಳಿಬ್ಬರ ವಾಕ್ಯಪ್ರತಿವಾಕ್ಯಗಳ ಧ್ವನಿ ನಮಗೆ ಕೇಳಿಸುತ್ತದೆ, ಅವರ ಅಭಿನಯವನ್ನು ನೋಡುತ್ತೇವೆ.

ಇಂದ್ರನು ವಸಿಷ್ಠಮುನಿಯನ್ನು ಕುರಿತು ಇಕ್ಷ್ವಾಕು ವಂಶದ ಆರಸುಗಳಲ್ಲಿ ‘ಮನ ವಚನಕಾಯದೊಳಗೆ ಒಮ್ಮೆಯುಂ ಹುಸಿ ಹೊದ್ದದಂತೆ ನಡೆವ ಕಲಿಗಳಾರಯ್ಯ ಹೇಳ್’ ಎನಲು, ವಸಿಷ್ಠನು ಹಿಂದಣ ರಾಜರುಗಳಲಿ ಹುಸಿ ಹೊದ್ದದವರಿಲ್ಲ; ಆದರೆ ಅವರನುದ್ಧರಿಸಲು ಹರಿಶ್ಚಂದ್ರನು ಅವತರಿಸಿದ್ದಾನೆ; ‘ಆತನ ಸತ್ಯದೆಸಕಮಂ ಪೊಗಳಲ್ ಎನ್ನಳವೆ? ಫಣಿಪತಿಗರಿದು; ಶಶಿಮೌಳಿಯಾಣೆ!’ ಎನ್ನುತ್ತಾನೆ. ಆ ಮಾತನ್ನು ಕೇಳಿ ವಿಶ್ವಾಮಿತ್ರ ಕ್ರುದ್ಧನಾಗುತ್ತಾನೆ:

ತೀವಿದೊಡ್ಡೋಲಗದ ನಡುವೆ ತನ್ನಂ ಮೊದಲೊ
ಳೋವಿ ನುಡಿಸದ ಕೋಪವೊಂದಾ ವಸಿಷ್ಠ ಮುನಿ
ಯಾವುದಂ ಪೇಳ್ದಡದನಲ್ಲೆಂಬ ಭಾಷೆಯೆರಡಖಿಳ ಜೀವಾವಳಿಯಲಿ
ಭಾವಿಪಡೆ ಕುಂದನಲ್ಲದೆ ಲೇಸ ಕಾಣದಿಹ
ಭಾವ ಮುಪ್ಪುರಿಗೊಂಡು ಕುಡಿವರಿದು ಕಡುಗೋಪ
ವಾವರಿಸಿ ಕೌಶಿಕಂ ನಿಂದು ನಿಲ್ ನುಡಿಯಬೇಡೆಂದು ಜರೆದಿಂತೆಂದನು.

ವಿಶ್ವಾ: ― ಬೇಸರದೆ ಕೇಳ್ವ ದೇವೇಂದ್ರನುಂಟೆಂದು ಇಂತು ಹೇಸದೆ ಅಕಟಕಟ ಸೊರಹುವರೆ, ವಾಸಿಷ್ಠ?
ವಸಿಷ್ಠ: ― ನಾ ಸೊರಹಿದಾತನೆ? ಅವನಧಿಕನಲ್ಲದನೆ ಹೇಳ್?
ವಿಶ್ವಾ: ― ರಾಶಿ ಹೊನ್ನುಂಟು: ಅಧಿಕನಹನ್!
ವಸಿಷ್ಠ: ― ಹೊನ್ನ ಮಾತೀ ಸಭೆಯೊಳೇಕೆ? ಸತ್ಯನೆ? ಹೇಳ್!
ವಿಶ್ವಾ: ― ಸತ್ಯವಂತನವನಾಳ್ವ ದೇಶದೊಳು ಕೇಳ್ದರಿಯೆನ್.

ಇಂತೆಂದ ವಿಶ್ವಾಮಿತ್ರನು ಹರಿಶ್ಚಂದ್ರನ ಪೂರ್ವಚರಿತ್ರೆಯನ್ನು ಹೇಳತೊಡಗುತ್ತಾನೆ: ಮಗನನ್ನು ಕೊಟ್ಟರೆ ಆತನನ್ನು ಮರಳಿ ಯಾಗಪಶುವ ಮಾಡಿಕೊಡುತ್ತೇನೆಂದು ವರುಣನಿಗೆ ಮಾತುಕೊಟ್ಟು, ಮಗನು ಹುಟ್ಟಿದ ಮೇಲೆ ಮೋಹದಿಂದ ಅವನನ್ನು ಬಲಿ ಕೊಡಲಾರದೆ ಕಾಡಿನಲ್ಲಿ ಬೈಚಿಟ್ಟು, ಕಡೆಗೆ ವರುಣನ ಕೋಪದಿಂದ ತನುಗುಂಟಾದ ಜಳೋದರರೋಗಕ್ಕೆ ಅಜೀಗರ್ತ ಮುನಿಯ ಮಗನಾದ ಶುನಶ್ಯೇಫನನ್ನು ಕೊಂಡುಕೊಂಡು ಬಂದು ‘ಬೇಳಲ್ಕೆ ಮನದಂದ ಪಾತಕನು ಭೂವರನನೇತಕ್ಕೆ ಹೇಸದೆ ಹೊಗಳ್ವೆ?’

ವಿಶ್ವಾಮಿತ್ರನು ಹೊರಿಸಿದ ಅಪರಾಧಕ್ಕೆ ಸರಿಯಾದ ಪ್ರತ್ಯುತ್ತರ ವಸಿಷ್ಠನ ಮಾತಿನಲ್ಲಿ ಕಾಣುವುದಿಲ್ಲ. ಸುಮ್ಮನೆ “ಹಲವು ಮಾತೇಕೆ? ಹರಿಶ್ವಂದ್ರನಲಿ ಅಸತ್ಯವನ್ನು ಕಾಣಿಸಲು ಬಲ್ಲರು ಮುನ್ನ ಹುಟ್ಟಿದವರಿಲ್ಲ: ಇನ್ನು ಹುಟ್ಟವರ ಕಾಣೆ; ನಾನಿದ ಬಲ್ಲೆನು. ಉಳಿದವರ ಹವಣಾವುದು?” ಎಂದು ಹೇಳಿ ಬಿಡುತ್ತಾನೆ.* ವಿಶ್ವಾಮಿತ್ರನು ಮನದೊಳತಿ ಮುಳಿದು, “ನಿಲ್, ಆಡದಿರು! ಬಾಯಿ ಹಿರಿದುಂಟು! ― ಧರೆಗರಸಾತನ್ ಧನವುಳ್ಳ ಶಿಷ್ಯನ್. ನಿನಗೆ ಅತಿವಿಪುಳ ಧನವನಾರಾಧಿಸುವನ್: ಅಂತಲ್ಲದೆ ಆತನಾರೈಕೆಯೊಳಗಿರ್ಪೆ ನೀನಿ. ಎನಿತನಗ್ಗಳಿಸಿ ಬಣ್ಣಿಸಲೊಪ್ಪದಯ್ಯ, ಹೇಳ್? ― ಮುನಿಯಬೇಡ. ಆತ ಹುಸಿದನಾದಡೆ ನಿನ್ನನೇಗೈಯಬಹುದು?” ಎಂದು ಸವಾಲು ಹಾಕುತ್ತಾನೆ. ಆಗ ವಸಿಷ್ಠನು “ಶ್ರುತಿ ಮತ ಕುಲಾಚಾರ…. ಬ್ರಹ್ಮಕರ್ಮಂ ಬೆಳೆದ ಪುಣ್ಯದೊಳಗಾದವಂ ತೊರೆದು ಕಳೆದು, ಸತಿಯನುಳಿದು, ಅತಿದಿಗಂಬರನಾಗಿ ಮುಕ್ತಕೇಶಿತನಾಗಿ ನರಕಪಾಲದೊಳು ಸುರೆಯೆರೆದು ಕುಡಿಯುತ ತೆಂಕಮುಖವಾಗಿ ಹೋಹೆಂ ಹರಿಶ್ಚಂದ್ರ ಮರೆದು ಹುಸಿಯಂ ನುಡಿದಡೆ” ಎಂದು ಘೋರ ಪ್ರತಿಜ್ಞೆ ಮಾಡುತ್ತಾನೆ. ಈ ಭಯಂಕರ ಮುನಿಗಳ ಕಲಹದಲ್ಲಿ ಇಂದ್ರನ ಓಲಗದ ಸ್ಥಿತಿ? ಗತಿ!

ಧರೆಗಗನವಡಸಿ ಕಾದುವಡೆಡೆಯಲಿಹ ಚರಾ
ಚರವೆಲ್ಲಿ ಹೊಗಲಿ? ಮುನಿದಖಿಳಮಂ ಸುಟ್ಟೊಸೆದು
ಮರಳಿ ಹುಟ್ಟಿಸಬಲ್ಲ ಮುನಿಗಳಿಬ್ಬರ ಶಾಂತಿ ತವಿದ ಕದನದ ಮುಖದಲಿ
ಇರಬಾರದೇಳಬಾರದು, ನುಡಿಯಬಾರದಂ
ತಿರಬಾರದಹುದೆನಲುಬಾರದಲ್ಲೆನಬಾರ
ದೆರಡುಂ ನಿರೋಧದಿಂದೊಡ್ಡೋಲಗಂ ಚಿಂತೆ ಮುಸುಗಿ ಸೈವೆರೆಗಾದುದು.
ಒಂದಕ್ಕೆ ಹಿತನುಡಿಯೆ ಪಕ್ಷವೆಂದೆರಡುವಂ
ಹಿಂದುಗಳೆದಿರಲುಪೇಕ್ಷಿತನೆಂದು ಜರೆದಡೆ
ಮ್ಮಿಂದಧಿಕನೇ ಎಂದು ಹೊಗಳ್ದಡುಪಚಾರವೆಂದೆತ್ತಿದಡೆ ಧೂರ್ತನೆಂದು
ನೊಂದು ಶಾಪವನೀಯದಿರರೆಂದು ಸುರಪನಾ
ನಂದರಸವರತು ಬೆರಗಿದ ಮೊಗದೊಳಿರಲು ನಾ
ರಂದ ಧಟ್ಟಿಸುತೆದ್ದು ‘ಕೊಡು ವಸಿಷ್ಠಂಗೆ ಭಾಷೆಯನು’ ಕೌಶಿಕ ಎಂದನು.

ವಿಶ್ವಾಮಿತ್ರನು ತಾನು ಸೋತರೆ ಹದಿನಾಲ್ಕು ಜನ್ಮಗಳೆತ್ತಿ ಬರುವವರೆಗೂ ದೇವಲೋಕಕ್ಕೆ ಬರುವುದುಲ್ಲವೆಂದೂ ತನ್ನ ತಪಸ್ಸು ಪುಣ್ಯಗಳಲ್ಲಿ ಅರ್ಧವನ್ನು ಹರಿಶ್ಚಂದ್ರನಿಗೆ ಧಾರೆಯೆರೆಯುವೆನೆಂದೂ ಪ್ರತಿಜ್ಞೆಮಾಡುತ್ತಾನೆ. ಕಲಹವಲ್ಲಿಗಾದರೂ ಕೊನೆಗಾಣುವುದಿಲ್ಲ. ವಸಿಷ್ಠನು ಹರಿಶ್ಚಂದ್ರನಲ್ಲಿಗೆ ಹೋಗಿ ಈ ವಿಷಯವನ್ನು ಚಾಡಿ ಹೇಳುತ್ತಾನೆಂದು ವಿಶ್ವಾಮಿತ್ರನು ಅವನನ್ನು ಹಂಗಿಸುತ್ತಾನೆ.

ವಸಿಷ್ಠ: ― ಆ ನಾಡುವನೆ ಹೇಳು!
ವಿಶ್ವಾ: ― ಎನ್ನ ಗಾಸಿಗಾರದೆ ನೃಪಂ ಹುಸಿನುಡಿಯೆ ಮುನಿತನವನೀಡಾಡಿ ಹೋಹಂತಿರಾದಪುದು.
ವಸಿಷ್ಠ: ― ತರುಣಿ ತೇಜಂಗಿಡದಿರು, ಅಗ್ನಿ ಬಿಸುಪಾರದಿರು ಎಂದು ಬೋಧಿಸಲೇಕೆ? ನಿಜವಳಿವುವೇ ಸುಮ್ಮನಿರಲು?
ವಿಶ್ವಾ: ― ಸಿಡಿಲು ಹೊಡೆವಡೆ ಹಿಡಿದ ಕೊಡೆ ಕಾವುದೆ? ಮುನಿಪ ನಿನ್ನ ಬಡಬೋಧೆಗೀದೆಗಳು ರಕ್ಷಿಸುವವಲ್ಲ, ನೀ ಹೇಳದಿರ್ದಡೆ ಮದನಹರನಾಣೆ, ಹೋಗು!
ವಸಿಷ್ಠ: ― ಕುಲವ ನಾಲಗೆಯರುಹಿತೆಂಬ ನಾಣ್ಣುಡಿಗಿಂದು ನೆಲೆಯಾಯ್ತಲಾ! ಬ್ರಹ್ಮಋಷಿಯಾದಡೊಳಗು ನಿರ್ಮಳವಪ್ಪುದಯ್ಯ! ನೀ ರಾಜರ್ಷಿ! ಕೋಪಿಸದೆ ಧಟ್ಟಿಸದೆ ಕೆಡೆನುಡಿಯದೆ ನಿಲಲೆಂತು ಬಲ್ಲೆ!

ವಿಶ್ವಾಮಿತ್ರರಿಗೆ ಕೋಪ ಮಿತಿಮಿರಿ ಹೋಗುತ್ತದೆ.

ನೋಡು ನೋಡು! ಇಂದೆನ್ನ ರಾಜಋಷಿಯೆಂದು ಕೆ
ಟ್ಟಾಡಿತಕ್ಕೆ ಆ ಹರಿಶ್ಚಂದ್ರನನ್ ಅಸತ್ಯನನ್
ಮಾಡಿಸುವೆನ್, ಅಧಿಕ ಪ್ರತಿಜ್ಞೆಗೆಳನಾಂತ ನಿನ್ನಂ ವ್ರತಭ್ರಷ್ಟನೆನಿಸಿ
ರೋಡಾಡಿ ಕಾಡುವೆನ್ ಎನುತೆದ್ದು ಸಾವನೀ
ಡಾಡಿದವರೊಡೆಯನೋಲಗದಿಂದ ಹೊರವಂಟ
ನಾಡಂಬರದ ಸಿಡಿಲು ಗಜರಿ ಗರ್ಜಿಸಿ ಮೇಘದಿಂ ಪೊರೆಮಡುವಂದದಿ.

ಇಲ್ಲಿಗೆ ಪ್ರಥಮ ದೃಶ್ಯ ಮುಗಿಯಿತು. ವಾಚಕರು ಕಥೆಯ, ಕ್ರಿಯೆಯ, ಅಭಿನಯದ, ಭಾವದ ಹೊನಲಲ್ಲಿ ಸಿಕ್ಕಿ, ಪ್ರತಿಭೆಯ ಸಮ್ಮೋಹಿನೀ ಶಕ್ತಿಗೆ ಒಳಗಾಗಿ ಕವಿಯ ಶೈಲಿಯನ್ನೂ ಇತರ ಕಾರುಕಾರ್ಯಗಳನ್ನೂ ಮರಯಬಾರದು. ‘ಶೈಲಿ ಚಿಂತನೆಗಳ ಚರ್ಮ’ ಎಂಬ ಮಾತಿಗೆ ರಾಘವಾಂಕನೂ ಹಿರಿಯ ಸಾಕ್ಷಿ. ಆತನ ಪದಗಳೂ ಪದಗುಂಫನಗಳೂ ಮೂರ್ತಭಾವಗಳು, ಭಾವಮೂರ್ತಿಗಳು.* ಅಂದು ಹಾಗಿದ್ದರೂ ಇಂದು ಹಾಗಿಲ್ಲ ಎಂಬುದು ಧ್ವನಿ.