ಮುಂದೆ ಕಾವ್ಯದಲ್ಲಿ ಅತ್ಯಂತ ಹೃದಯವಿದ್ರಾವಕವಾದ ಸನ್ನಿವೇಶ ಪ್ರಾಪ್ತವಾಗುತ್ತದೆ. ರಾಘವಾಂಕನ ಪ್ರತಿಭೆಯಲ್ಲಿ ವಿಶೇಷ ಗುಣವೆಂದು ತೋರುವ ನಾಟಕೀಯತೆ ಪರಾಕಾಷ್ಠತೆಗೆ ಏರುತ್ತದೆ. ಕಥನಕ್ರಿಯೆಯ ಪ್ರವಾಹವೂ ಅನತಿದೂರದಲ್ಲಿಯೆ ಸಮುದ್ರಲಗ್ನೆಯಾಗಲಿರುವ ತರಂಗಿಣಿಯಂತೆ ವೇಗದಿಂದಲೂ ಸಂಭ್ರಮದಿಂದಲೂ ಮುಂಬರಿಯುತ್ತದೆ.

‘ಇಂತು ನೃಪರಿತ್ತ ದಿವಸಂ ಕಳಿವುತಿರಲ್ ‘ ಅತ್ತ ಚಂದ್ರಮತಿ ಲೋಹಿತಾಶ್ವರು ವಿಪ್ರನ ಮನೆಯಲ್ಲಿ ಸತ್ತು ಹುಟ್ಟುತ್ತಿದ್ದರು. ಆ ಮನೆಯ ಆವರಣ ಸನ್ನಿವೇಶವಿದು:

ಒಡೆಯನತಿಕೋಪಿ, ಹೆಂಡತಿ ಮಹಾಮೂರ್ಖೆ, ಮಗ
ಕಡು ಧೂರ್ತ, ಸೊಸೆಯಾದಡಧಿಕನಿಷ್ಠರ, ಮನೆಯ
ನಡೆವವರು ದುರ್ಜನರು, ನೆರೆಮನೆಯವರು ಮಿಥ್ಯಾವಾದಿಗಳೂ, ಪಶುಗಳಗಡು!

ತಾಯಿ ಮಕ್ಕಳಿಬ್ಬರನ್ನೂ ಮನೆಯವರೆಲ್ಲ ಹೊಡೆದು ಬೈದು ಮೈಮುರಿಯೆ ದುಡಿಸುತ್ತಿದ್ದರು. ಚಂದ್ರಮತಿ ಹಲವು ಸೂಳ್ ಒಡೆಯನರಮನೆಗೆ ನೀರಡಕಬೇಕು; ಕೊಟ್ಟಷ್ಟು ಬತ್ತವ ಮಿದಿಯಬೇಕು; ಎಡಯಿಕ್ಕಿದನಿತುಮನೆ ಉಣಬೇಕು. ಲೋಹಿತಾಶ್ವನು ಉದಯದಿಂದ ಹಿಡಿದು ಬೈಗಿನವರೆಗೆ ಹೇರಡವಿಯಲ್ಲಿ ಹುಲು ಹುಳ್ಳಿಯನೊಟ್ಟಿ ಮನೆಗೆ ತರಬೇಕು. ಹೀಗಿರಲು ಒಂದು ದಿನ ಚಕ್ರವರ್ತಿಯ ಕುಮಾರನು ಎಂದಿನಂತೆ ಬೆಳಗ್ಗೆ ಅರಣ್ಯಕ್ಕೆ ನಡೆದು ‘ಅಡ್ಡಗಬ್ಬ ನಾಯ್ದೊಟ್ಟಿ ಹೊರೆಗಟ್ಟಿ ಹೊತ್ತುಕೊಂಡು ಮಧ್ಯಾಹ್ನದ ಉರಿಬಿಸಿಲೊಳು ಎದೆಬಿರಿಯೆ ಜವಗುಂದಿ ತಲೆ ಕುಸಿದು ನಡೆಗಟ್ಟು ಬಾಯಾರಿ ಹಣೆಯಿಂದ ಬೆಮರುಗೆ ನೆತ್ತಿ ಹೊತ್ತಿ ತೇಂಕುತ ಹರಿತಪ್ಪಾಗಳ್ ಬಟ್ಟಯೆಡೆ ಹುತ್ತಿನ ಮೇಲೆ ‘ನಳನಳಿಸಿ ಕೋಮಲತೆಯಿಂ ಕೊಬ್ಬಿ ಕೊನೆವಾಯ್ದು ಕಂಗಳವಟ್ಟು ಬೆಳೆದೆಳೆಯ ದರ್ಭೆಯಂ’ ಕಂಡು, ಅದನ್ನು ಕೊಯ್ದು ಒಡೆಯನಿಗಿತ್ತರೆ ಇಂದಾದರೂ ಮುಳಿಯದಿರುತ್ತಾನೆ ಎಂದು ಹಾರೈಸಿ ‘ಕಡುಗೋಲ್ವಿಡಿದು ಸಾರ್ದನು!’ ದರ್ಭೆಯನ್ನು ಕೊಯ್ಯವಾಗ ಕೈಕಡಿದು ಮೈಮೇಲೆ ಬಂದ ರುದ್ರ ಸರ್ಪವನ್ನು ಕಂಡು ಹೆದರಿ ಹವ್ವನೆ ಹಾರಿ ಹಾ ಎಂದು ಕೈಕಾಲು ಕೆದರಿ ತಲೆಕೆಳಕಾಗಿ ಕೆಡೆದನ್! ಜೊತೆಯಿದ್ದ ಬಾಲಕರು ಹೆದರಿ ಊರಿಗೆ ಓಡಿದರು. ಹಸುಳೆ ತಾಯ್ಗೆ ಹಲುಬಿ, ತಂದೆಯ ಕರೆದು, ದೆಸೆದೆಸೆಗೆ ಬಾಯಿಬಿಟ್ಟು’ ವಿಷವೇರಿ ಮಡಿದನು. ಕತ್ತಲಾಯಿತು.

ಇತ್ತ ಚಮದ್ರಮತಿ ‘ತನಯನೆಂದುಂ ಬಪ್ಪಹೊತ್ತಿಂಗೆ ಬಾರದಿರೆ’ ಉದ್ವಿಗ್ನೆಯಾದಳು. ‘ಸುಯ್ಯುತ್ತ ಮರುಗುತ್ತ ಬಸುರಂ ಹೊಸೆದು ಕೊನೆವೆರಳ ಮುರಿದುಕೊಳತ ತನುವ ಮರೆದಡೆಗಡೆಗೆ ಹೊರಗನಾಲಿಸಿ ಮತ್ತೆ ಮನೆಯೊಡತಿಗಂಜಿ’ ಕೆಲಸವನ್ನು ಮಾಡುತ್ತಿದ್ದಳು. ‘ಸತಿಯಳಲು ಸೀಗೆಯೊಳಗಣ ಬಾಳೆಗೆಣೆಯಾದುದು’ (viii. ೯, ೧೦). ಆಕೆಯ ಭಾವ ಅನುಭಾವಗಳನ್ನು ಕವಿ ಎಷ್ಟು ನಾಟಕೀಯ ಸಹಜತೆಯಿಂದ ವರ್ಣಿಸಿದ್ದಾನೆ:

ಬಂದರಂ ಲೋಹಿತಾಶ್ವಾ ಎಂದು, ಬಟ್ಟೆಯೊಳು
ನಿಂದರಂ ಲೋಹಿತಾಶ್ವಾ ಎಂದು, ಗಾಳಿ ಗಿರಿ
ಕೆಂದಡಂ ಲೋಹಿತಾಶ್ವಾ ಎಂದು ಕರೆಕರೆದು …..

ಬೆಂದೆದೆಯ ಚಂದ್ರಮತಿಗೆ ಜತೆಹೋಗಿದ್ದ ಬಾಲಕನೊಬ್ಬನು ಐತಂದು ನಡೆದುದನ್ನು ಹೇಳುತ್ತಾನೆ. ತಾಯಿಯ ಎದೆಗೋಳು ಊಹೆಗೂ ನಿಲುಕದಿದೆ. ‘ಏಕೆ ಕಚ್ಚಿತು?’ ಎಂದು ಪ್ರಾರಂಭಿಸುತ್ತಾಳೆ. ಆ ಪ್ರಶ್ನೆ ತಾಯಿಯಾದವಳಿಗೆ ಮಾತ್ರವೇ ಸಾಧ್ಯ (vii. ೧೩). ಚಂದ್ರಮತಿ ಮಾತಿಗೆ ಮೀರಿದ ಶೋಕಾಗ್ನಿಯಲ್ಲಿ ಸಿಕ್ಕಿ ಓಡಿಬಂದು ಒಡೆಯನಡಿಗಳ ಮೇಲೆ ಬಿದ್ದು ―

ಚಂದ್ರ: ― ಅಯ್ಯೋ ಅರಣ್ಯದೊಳ್, ಎನ್ನ ಮಗನ್ ಉಗ್ರಕಾಳೋರಗಂ ಕಚ್ಚಿ ಮಡಿದನ್.
ವಿಪ್ರ: ― (ಮುಖಗಂಟಿಕ್ಕಿ) ಲೇಸಾಯ್ತು! ಮಡಿದರೆ ಮಡಿದನ್!
ಚಂದ್ರ: ― ಬಂಟರನು ಕೊಟ್ಟುರಸಿಸೈ ತಂದೆ!
ವಿಪ್ರ: ― ನಡುವಿರುಳು ಬಂಟರುಂಟೆ? ನಿದ್ದೆಗೈಯಬೇಕು, ಏಳು, ಕಾಡದಿರ್.
ಚಂದ್ರ: ― ನರಿಗಳೆಳೆಯದ ಮುನ್ನ ದಹಿಸಬೇಡವೆ? ತಂದೆ, ಕರುಣಿಸು.
ವಿಪ್ರ: ― ದುರ್ಮರಣವಟ್ಟು ಶೂದ್ರನನು ಸಂಸ್ಕರಿಸುವವರಾವಲ್ಲ.
ಚಂದ್ರ: ― ಆನಾದಡಂ ಹೋಗಿ ಕಂಡು ಮಗನ ಉರಿಗಿತ್ತು ಬಪ್ಪೆನೇ?
ವಿಪ್ರ: ― ಕೆಲಸಮಂ ಬಿಟ್ಟು ಹರಿಯದೆ ಇರ್ದುದನೈದೆ ಗೈದು ಹೋಗು.

ಎಂದು ನಿಷ್ಟುರವಾಡುತ್ತಾನೆ. ರಾಣಿ ಮಾಡುವ ಕಜ್ಜವೆಲ್ಲನ್ನೂ ಚಚ್ಚರದಿ ಮಾಡಿ ‘ದಟ್ಟೈಸಿ ಮಡಿಲಿರಿವ ಕಾಳದೊಳು’ ಕಾಡಿಗೆ ಹೊರಟು ಹುಡುಕಿ ಹುಡುಕಿ ಕಡೆಗೆ ‘ಹುಲುವಟ್ಟೆಯೊಳು ಬೆಳದ ಹೆಮ್ಮರನ ಮಲಗಿಸಿ ನಿಂದ ಹುಳ್ಳಿ ಹೊರೆಯಂ ಕಂಡಳು.’ ಆ ಭಯಂಕರವಾದ ಕತ್ತಲ ಕಾಡಿನಲ್ಲಿ, ಆ ಶ್ಮಶಾನ ಮೌನದಲ್ಲಿ ತಾಯಿ “ಮಗನೇ, ಮಗನೇ, ಹರಿಶ್ಚಂದ್ರರಾಯನ ಕುಮಾರ!” (viii. ೧೭) ಎಂದು ಕರೆಯುತ್ತಾಳೆ. ಪೈಶಾಚಿಕ ಪ್ರತಿಧ್ವನಿ ಪ್ರಶ್ನೆಯನ್ನೆ ಉತ್ತರವಾಗಿ ಒರಲುತ್ತದೆ! ಅಂತೂ ಕಡೆಗೆ ಹುತ್ತಿನ ಬುಡದಲ್ಲಿ ಮಗನನ್ನು ಕಾಣುತ್ತಾಳೆ. ರಾಘವಾಂಕನು ವರ್ಣನೆಯಲ್ಲಿ ಚಿತ್ರಕಲಾಕೋವಿದನು ಎನ್ನುವುದಕ್ಕೆ ಇನ್ನೊಂದು ಉದಾಹರಣೆ:

ವಿಷದ ಹೊಗೆ ಹೊಯ್ದು ಹಸರಾದ ಮೈ, ಮೀರಿ ನೊರೆ
ಯೊಸರ್ವ ಗಲ್ಲಂ ಕಂದಿದುಗುರ್ಗಳರೆದೆರೆದುಗು
ರ್ವಿಸುವ ಕಣ್ ಹರಿದು ಹುಲುಹಿಡಿದು ಹರಹಿದ ಕೈಗಳುಂಬ ಹೊತ್ತುಣ ಹಡೆಯದೆ
ಹಸಿದು ಬೆಂಗಡರ್ದ ಬಸುರಕಟಕಟ ಮುರಿದು ಹೋಣ್
ದೆಸೆಗುರುಳಿ ಹುಡಿ ಹೊಕ್ಕು ಬರತ ಬಾಯ್ವೆರಸಂದು
ಬಸವಳಿದ ನಿಜಸುತನ ಕಂಡಳು ಹರಿಶ್ಚಂದ್ರನರಸಿ ಹುತ್ತಿನ ಮೊದಲೊಳು ||*

ಚಂದ್ರಮತಿಯ ಪ್ರಲಾಪ ಕಣ್ಣೀರಿನ ಕಾಲುವೆಯಾಗಿದೆ. ಗದಾಯುದ್ದದಲ್ಲಿ ಬರುವ ಕೌರವ ಪ್ರಲಾಪಕ್ಕೆ ಹೊಯಿಕೈಯಾಗಿದೆ. ಆದರೆ ಅದು ವೀರ ಮಿತ್ರನ ಕಣ್ಣೀರು; ಇದು ಹಡೆದ ತಾಯಿಯ ಕಂಬನಿ! ಕವಿಗೆ ವಾಧಿಕಷಟ್ಪದಿಯ ಧೀರಗಮನ ಸಾಲದೇಹೋಯಿತೋ ಎನೋ ಮಂದಾನಿಲ ರಗಳೆಯ ಚಂಚಲ ಚಲನವನ್ನು ಉಪಯೋಗಿಸಿದ್ದಾನೆ (viii. ೧೯, ೨೦, ೨೧, ೨೨, ೨೩. ಮಂದಾನಿಲರಗಳೆ.)

ಮುಂದೆ ಭಯಾನಕ ಶ್ಮಶಾನ! ಹರಿಶ್ಚಂದ್ರನು ಕಾವಲಿರುವ ರುದ್ರ ಭೂಮಿ! ರಮಣಿಯೊಬ್ಬಳು ಮಡಿದ ಕಂದನನ್ನು ಹೊತ್ತು ತರುತ್ತಾಳೆ! ತರುವಾಯ ಬರುವ ಆ ದೃಶ್ಯವನ್ನು ಕಾವ್ಯದಲ್ಲಿ ಓದಿದಲ್ಲದೆ ಬಣ್ಣಿಸಲಸಾಧ್ಯ (viii. ೨೫ರ ವರೆಗೆ). ಚಂದ್ರಮತಿ ಅರ್ಧಂಬರ್ಧ ಸುಟ್ಟುಳಿದಿದ್ದ ಕರಿಗೊಳ್ಳಿಗಳನ್ನೆಲ್ಲ ಒಟ್ಟಿ ಸೂಡುಮಾಡಿ ಅದರ ಮೇಲೆ “ಮಂಗಳಮಯ ಕುಮಾರನಂ ಪಟ್ಟಿರಿಸಿ ಕೆಲದೊಳುರಿವಗ್ನಿಯಂ ಪಿಡಿದು ನಿಂದು, ಬೆಳೆದಲ್ಲಿ ಬೆಳೆ, ಹುಟ್ಟಿದಲ್ಲಿ ಹುಟ್ಟು ಎಂದು ನುಡಿದು” ಸೂಡಿಗೆ ಕಿಚ್ಚಿಡಲಾರದೆ ಎದೆಬಡಿದುಕೊಂಡು ಹುಯ್ಯಲಿಟ್ಟಳು. ಆ ದನಿಗೇಳ್ದು ನಿದ್ದೆ ತಿಳಿದು ಬಂದನು ಭೂಮಿಪತಿ. ಬರುಬರುತ್ತ ತನ್ನಲ್ಲಿಯೆ “ನಟ್ಟಿರುಳು! ಸುಡುಗಾಡಳೊಬ್ಬಳೋರಂತೆ ಬಾಯ್ವಿಟ್ಟು ಹಲುಬುವ ವೀರನಾರಿ ಯಾವಳೊ?” ಎಂದುಕೊಂಡು ಒಡನೆಯೆ ದೂರದಲ್ಲಿ ಸ್ತ್ರೀಯನ್ನೂ ಆಕೆಯ ಸಾಹಸವನ್ನೂ ನೋಡಿ ಮನಸ್ಸನ್ನು ಕಲ್ಲು ಮಾಡಿಕೊಂಡು ಬೇಗಬೇಗನೆ ನಡೆದು “ಮೀರಿ ಸುಟ್ಟೆಯಾದಡೆ ನಿನಗೆ ವೀರಬಾಹುಕನಾಣೆ! ಕದ್ದು ಸುಡಬಂದೆ? ನಿನ್ನ ನಿಟ್ಟೆಲುವ ಮುರಿವೆನ್” ಎಂದು ಗರ್ಜಿಸುತ್ತ ಬಂದು ಚಂದ್ರಮತಿ ‘ಹಿಡಿದಿರ್ದ ಕಿಚ್ಚಂ ಕೆದರಿ, ಮುಟ್ಟಿಗೆಯ ಮೇಲಿರ್ದ ಸುತನ ಹಿಂಗಾಲ್ವಿಡಿದು ಸೆಳೆದು ಬಿಸುಟಂ ಭೂಪನು.’ ಆ ಭಯಂಕರ ದೃಶ್ಯವನು ನೆನೆದರೆ ಮೈ ನಡುಗುತ್ತದೆ! ಮೃತಕ್ಕೂ ಸಜೀವಕ್ಕೂ ಭೇದವರಿಯದ ಅಳ್ಕಕರೆಯಿಂದ ರಾಣಿ “ಬಿಸುಡದಿರು! ಬೇಡ, ಬೇಡ! ಅಕಟಕಟ ಹಸುಳೆ ನೊಂದಹನ್” ಎಂದು ಮಗನನ್ನು ಎತ್ತಿ ಎದೆಗಪ್ಪಿಕೊಂಡು ಮಸಣಗಾಹಿಯ ಕಡೆಗೆ ತಿರುಗಿ “ಕುಲವನೋಡದೆ ಬೇಡಿಕೊಂಬೆನ್. ಇವನೆನ್ನ ಮಗನಲ್ಲ, ನಿನ್ನ ಸಿಸುವಿನೋಪಾದಿ! ಸುಡಲು ಅನುಮತ ವನಿತ್ತು ರಕ್ಷಿಸು, ಕರುಣಿ” ಎನ್ನಲು ಚಾಂಡಾಲವೇಷದ ದೊರೆ “ಎಲೆ ಮರುಳೆ, ಹೆಣನುಟ್ಟುದಂ ಮಸಣವಾಡಗೆಯ ಹಾಗವನು ಕೊಟ್ಟಿಲ್ಲದೆ ಏನೆಂದಡಂ ಬಿಡೆನ್” ಎಂದನು. ತಲೆಯಕ್ಕಿಯ ಭಾಗ ತನ್ನದಾದುದರಿಂದ ಅದನ್ನು ತ್ಯಾಗಮಾಡಿದ್ದಾನೆ!

ಹರಿಶ್ಚಂದ್ರನು ತಾಳಿಯನ್ನು ಅಡವಾಗಿ ಕೇಳಿದ್ದು ಹೊದಲ್ಗೊಂಡು ಚಂದ್ರಮತಿ ಮಸಣವಾಡಗೆಗಾಗಿ ಒಡೆಯನಿಂದ ಋಣಂಬಡಲು ಹೊದುದರವರೆಗಿರುವ ಶೋಕಮಯ ಕಥೆಯನ್ನು ವಾಚಕರು ಕಾವ್ಯದಲ್ಲಿಯೆ ಕಂಡುಂಡು ಕರಗಿ ಕುದಿಯಬೇಕು. ರಾಘವಾಂಕನು ಅನನುಕರಣೀಯ ಶೈಲಿಯನ್ನು ಮುಟ್ಟಿದರೆ ಹಸುರೆಲೆಯ ಮೇಲಿರುವ ಶಿಶಿರ ಬಿಂದುವನ್ನು ಮುಟ್ಟಿದಂತಾಗುತ್ತದೆ.

ಚಂದ್ರಮತಿ ಮಗನನ್ನು ಸುಡಲಾರದೆ ಮಸಣವಾಡಗೆಯನ್ನು ತರುವ ಸಲುವಾಗಿ ಸುಡುಗಾಡಿನಿಂದ ಹಿಂತಿರುಗಿ ಬರುತ್ತಿರಲು ಕೌಶಿಕ ಮುನೀಂದ್ರನು ಮತ್ತೊಂದುಪದ್ರವವನ್ನು ತಂದೊಡ್ಡುತ್ತಾನೆ. ಕೆಲವು ಚೋರರನ್ನು ನಿರ್ಮಿಸಿ ಪುರದರಸನ ಕುವರನನ್ನು ಕೊಂದು ‘ಆಕೆ ಬಪ್ಪ ಬಟ್ಟೆಯೊಳಿರಿಸಿ’ ಎಂದು ಬೆಸಸಲು ಆ ಮಾಯಾ ಚೋರರು ಅಂತೆಯೇ ನಡೆಯುತ್ತಾರೆ. ಕಳ್ಳರು ಕೊರಳನ್ನರಿಯುವಾಗ ಶಿಶು ಒರಲಲು ಆ ದನಿಯನ್ನು ದೂರದಿಂದ ಕೇಳಿ ಚಂದ್ರಮತಿ ತನ್ನ ಮಗನು ಗತಪ್ರಾಣನಾಗಿ ಶ್ಮಶಾನದಲ್ಲಿ ಬಿದ್ದಿದ್ದಾನೆ ಎಂಬುದನ್ನೂ ಮರೆತು ‘ಎನ್ನ ಮಗನಾಗದಿರನ್ ಎನುತ್ತ ಆರೋ ನಿರೋಧಿಸುವರೆಮದು ಓಜೆ ಹುಟ್ಟದೆ ಅವಿಚಾರದಿಂ ಹರಿದಳು ಎಂಬಾಗಳ್ ಅತಿದುಃಖಿಗುಂಟೇ ಬುದ್ಧಿ ಜಗವರಿಯಲು!’ ಆಕೆ ‘ಸಾರೆ ಬರೆ’ ಓಡಿಹೋದ ಚೋರರ ಖಡ್ಗಧಾರೆಯಿಂದ ಬಸವಳಿದ ಹಸುಳೆಯನ್ನು ತನ್ನಯ ಕುಮಾರನೆಂದೇ ಬೆಗೆದು ತಲೆದಡವಿ ಮೈಗುರಹನ್ನು ನೋಡುತ್ತಿರಲು ‘ಬಾರಿಸುವ ಬೊಂಬುಳಿಯ ಕೊಂಬುಗಳ ಭೇರಿಗಳ ಬೊಬ್ಬೆಗಳ ಕಳಕಳದೊರಳಸಿ ಬಂದಾರುತ್ತ ಹರಿತಂದ ಹಿರಯ ಹುಯ್ಯಲ ಭಟರು ಕಂಡು ಪಿಡಿದರು ಸತಿಯನು.’ ಆವರಣ ಚಿಹ್ನೆಯೊಳಗಣ ವಾಕ್ಯಭಾಗದ ಶೈಲಿಯ ವೇಗ ಉದ್ವೇಗಗಳು ಬಟರ ವೇಗ ಉದ್ವೇಗಗಳನ್ನು ಹೇಗೆ ಸೂಚಿಸುತ್ತವೆ ಎಂಬುದನ್ನು ವಾಚಕರು ಗಮನಿಸಲಿ. ಭಟರು ಚಂದ್ರಮತಿಯನ್ನೇ ಕೊಲೆಪಾತಕಿ ಎಂದು ಭಾವಿಸಿ ಕತ್ತು ಕತ್ತರಿಸಿದ ಹಸುಳೆಯನ್ನು ಆಕೆಯ ಮೇಲೆಯೇ ಹೊರಿಸಿ ‘ಒಸರ್ವ ರಕುತ ತಲೆಯಿಂದ ಸುರಿದು ಉಟ್ಟ ಸೀರೆ ತೊಪ್ಪನೆ ತೋಯೆ, ಲಲನೆಯಂ ಕಿತ್ತಲಗುಗಳ ನಡುವೆ ಹೆಡಗೈಯ ಬಲಿದ ನೇಣಂ ಪಿಡಿದು ಜಡಿಜಡಿದು ನಡಸಿ ತಂದರು ರಾಜಬೀದಿಯೊಳಗೆ!’ ಮುಂದೆ ಕವಿ ಅರಮನೆಯಲ್ಲಿನ ಕೋಲಾಹಲವನ್ನೂ (viii, ೫೧) ನೆರೆದ ಮಂದಿಯ ನಿಷ್ಠುರ ವಾಕ್ಯ ಪ್ರಯೋಗಗಳ ಗಜಿಬಿಜಿಯನ್ನೂ (viii. ೫೪) ರಾಜನ ವಿಚಾರಪರತೆಯನ್ನೂ (viii, ೫೨, ೫೩) ಚಿನ್ನಾಗಿ ವರ್ಣಿಸಿದ್ದಾನೆ. ದೊರೆ ಚಂದ್ರಮತಿಯನ್ನು ನೋಡಿ, ಆಕೆಯೆ ಕೊಲೆಗಾರ್ತಿ ಎಂದು ನಂಬಲಾರದೆ “ಲೋಗರಿಟ್ಟುದೋ? ನಿನ್ನ ಕೃತಕವೋ? ಹೇಳು!” ಎಂದು ಕೇಳಲು ಆಕೆ ತಾನು ಹಿಂದೆ ಮಾಡಿಕೊಂಡ ನಿರ್ಣಯದಂತೆ (viii, ೫೦) “ಕೊಂದುದು ದಿಟಂ ಸತ್ತ ಶಿಶು ಕೈಯಲಿದೆ. ಇದಕ್ಕೆ ತಕ್ಕುದನೀಗ ಕಾಂಬುದು” ಎಂದು ಜೀವದಾಸೆಯನ್ನು ತೊರೆದು ಹೇಳುತ್ತಾಳೆ. ‘ಕೊಂದರಂ ಕೊಂದು ಕಳೆವುದೆ ಧರ್ಮ’ (viii, ೫೪). ದೊರೆ ವೀರಬಾಹುವನ್ನು ಕರೆಸಿ ನರಕಿವನಿತೆಯನ್ನು ಕೊಲಿಸುವಂತೆ ಬೆಸಸಲು ಅವನು ಮಸಣಗಾಹಿಯಾಗಿದ್ದ ಹರಿಶ್ಚಂದ್ರನಿಗೆ ಆ ಕೆಲಸವನ್ನು ನೇಮಿಸಲು ‘ಅಡಸಿ ಮುಂದಲೆಯ ಪಿಡಿದು, ಕುಸುಕಿ ಕೆಡೆ ಮೆಟ್ಟಿ, ಕೈಗಳ ಸೇದಿ, ಬೆಂಗೆ ಬಾಗಿಸಿ ಬಿಗಿದು, ಹೆಡಗೈಯ ನೇಣಿಂದ ಹೊಡೆದು ದಟ್ಟಿಸಿ, ಪಾಪಿ ಹೊಲತಿ ನಡೆ ನಡೆ ಎಂದು ನಡಸಿ ತಂದಂ ತನ್ನ ತವಗದೆಡೆಗೆ!’

ಪುನಃ ಕರುಣೆ ದುಃಖಗಳ ಚಿಲುಮೆ ಸಾಸಿರ್ಮುಡಿಯಾಗಿ ಚಿಮ್ಮುತ್ತದೆ. ಆಗತಾನೆ ರವಿ ಉದಯಗಿರಿಯ ನೆತ್ತಿಯಲ್ಲಿ ಮೂಡುತ್ತಿದ್ದಾನೆ (ix. ೧). ಚಂದ್ರಮತಿ ಮೂಡಣ್ಗೆ ಮೊಗವಾಗಿ ಕುಳುತಿದ್ದಾಳೆ. ‘ಹಿಂದೆ ಎಡದಲ್ಲಿ ನೀಡಡಿಯಿಟ್ಟು ನಿಂದು ಖಡ್ಗವ ಸೆಳೆದು ಜಡಿದು ನೋಡಿ’ ಹರಿಶ್ಚಂದ್ರನು “ಅನುವಾದೆನ್, ಅನುವಾದೆನ್! ಅನುವಾಗು, ಆಗು, ಮಡದಿ! ನೆನೆ ನಿನ್ನ ದೈವವನು! ಬಿಡದೆ ಎನ್ನೊಡೆಯನಂ ಹರಸು ಹರಸು!” ಎಂದನು.* ಚಂದ್ರಮತಿಯೂ ಶಾಂತಹೃದಯದಿಂದ ಆಶೀರ್ವದಿಸುತ್ತಾಳೆ. ಆ ಚಿತ್ರ ಪವಿತ್ರ; ಏಕೆಂದರೆ ಚಂದ್ರಮತಿ ಧೀರತಪಸ್ವಿನಿ:

ಬಲಿದ ಪದ್ಮಾಸನಂ ಮುಗಿದಕ್ಷಿ ಮುಚ್ಚಿದಂ
ಜುಳಿವೆರಸಿ ಗುರುವಸಿಷ್ಟಂಗೆರಗಿ ಶಿವನ ನಿ
ರ್ಮಲ ರೂಪ ನೆನೆದು ಮೇಲಂ ತಿರುಗಿ ನೋಡಿ “ಭೂಚಂದ್ರಾರ್ಕ ತಾರಂಬರಂ
ಕಲಿ ಹರಿಶ್ಚಂದ್ರರಾಯಂ ಸತ್ಯವರಸಿ ಬಾ
ಳಲಿ. ಮಗಂ ಮುಕ್ತನಾಗಲಿ, ಮಂತ್ರಿ ನೆನದುದಾ
ಗಲಿ, ರಾಜ್ಯದೊಡೆಯ ವಿಶ್ವಾಮಿತ್ರ ನಿತ್ಯನಾಗಲಿ, ಹರಕೆ! ಹೊಡೆ!!” ಎಂದಳು

ಅದುವರೆಗೆ ಹರಿಶ್ಚಂದ್ರನಿಗೆ ಹೆಂಗಸು ತನ್ನ ಸತಿ ಎಂಬ ಭಾವವಿರಲಿಲ್ಲ. ‘ಹರಕೆಯಂ ಕೇಳಿ ಹವ್ವನೆ ಹಾರಿದನು!’ ಆದರೂ ‘ಪತಿಯಾಜ್ಞೆಯುಳಿದಡೆ ಸಾಕೆನುತ್ತ ಕೊಲಲನುವಾದನು.’ ಆ ವಿಷಮ ಮಾನಸಿಕ ಸನ್ನಿವೇಷವನ್ನೇ ಕಾದುಕೊಂಡಿದ್ದ ವಿಶ್ವಾಮಿತ್ರನು ಅಂಬರದಿಂದ “ಹೊಡೆಯಬೇಡ. ಎನ್ನ ನಂದನೆಯರಂ ಮದುವೆಯಾದಡೆ ಸತ್ತ ಮಗನಂ ಎತ್ತುವೆನು. ಇವಳ ತಲೆಗಾವೆನು… ರಾಜ್ಯಮಂ ಪೊಗಿಸಿ ಮುನ್ನಿನ ಪರಿಯಲಿರಿಸುವೆಂ” ಎಂದು ನುಡಿಯುತ್ತಾನೆ. ದೊರೆ ತಲೆಯೆತ್ತಿ ನೋಡಿ “ಎನ್ನ ಸಿರಿ ಪೋದೊಡೇನು? ರಾಜ್ಯಂ ಪೋದೊಡೇನು?. … ನಾನೆನ್ನ ತರುಣಿಯಂ ಕೊಂದಡೇಂ ಕುಂದೆ? ಸತ್ಯವಂ ಬಿಟ್ಟಿರನ್ ಎನಿಸಿದಡೆ ಸಾಕು!. … ಹೊಲೆಯನಾದವನಿನ್ನು ಸತಿಗಿತಿಯ ಕೊಲೆಗೆ ಹೇಸಿ ಬೆನ್ನೀವನೇ?” ‘ಎನುತಾರ್ದು ನನ್ನಿಕಾರಂ ವಧುವಂ ಎಲೆಲೆ ಶಿವ ಶಿವಾ ಮಹಾದೇವ! ಹೊಡೆದಂ ಹೊಡೆದನು!’ ಮುಂದಿನ ಸಂಭ್ರಮದ ಶಿಖರವನ್ನು ನೋಡಿ: ಆಲಿಸಿ: ಜಯ ಡಿಂಡಿಮ ಹೊಡೆದಂತಿದೆ ಪದನಾದ ವಿನ್ಯಾಸ ―

ಹೊಡೆದ ಕಡುಗದ ಬಾಯ ಕಡೆಯ ಹೊಡೆಗಳನಾಂತು
ಮಡದಿಯೆಡೆಗೊರಳ ನಡುವಡಸಿ ಮೂಡಿದನು ಕೆಂ
ಜಡೆಯ ಶಶಿಕಳೆಯ ಸುರನದಿಯ ಬಿಸಿಗಣ್ಣ ಫಣಿಕುಂಡಲದ ಪಂಚಮುಖದ
ಎಡದ ಗಿರಿಜೆಯ ತಳಿತ ದಶಭುಜದ ಪುಲಿದೊಗಲಿ
ನುಡುಗೆಯ ಮಹಾವಿಷ್ಣು ನಯನವೇರಿಸಿದ ಮೆ
ಲ್ಲಡಿಯ ಕಾಶೀರಮಣ ವಿಶ್ವನಾಥಂ ಸುರರ ನೆರವಿ ಜಯಜಯವೆನುತಿರೆ.*

ಅವಶ್ಯಾಂಗವಾಗಿ ಇತರ ದೇವತೆಗಳೂ ಬಂದರು! ವಸಿಷ್ಠ ಸಹಿತ ವಿಶ್ವಾಮಿತ್ರನೂ ಬಂದನು. ಕವಿ ಕೌಶಿಕನ ಮೇಲೆ ನಮಗಿರುವ ಸಿಟ್ಟನ್ನೆಲ್ಲ ತೊಡೆದು ಬಿಡುತ್ತಾನೆ. ಋಷಿಯ ಕಾಟ ದೊರೆಯ ಭಾಗಕ್ಕೆ ‘ಕುಡಿದೌಷಧಂ ಬಾಯ್ಗೆ ನಿಗ್ರಹಂ ಮಾಡಿ, ತಾಳ್ದೊಡಲಿಂಗೆ ಸುಖವನೀವಂತೆ!’ ಆಮೇಲೆ ಲೋಹಿತಾಶ್ವನೂ ಬದುಕುತ್ತಾನೆ. (ix. ೧೪) ವಿಶ್ವಾಮಿತ್ರನು ಪ್ರತಿಜ್ಞೆಯಂತೆ ನಡೆಯುತ್ತಾನೆ. ಹರಿಶ್ಚಂದ್ರ ಹರಿಶ್ಚಂದ್ರನೆ ಆಗುತ್ತಾನೆ. ಆದರೆ ಈಗ ಮರ್ತ್ಯನಲ್ಲ, ದಿವ್ಯ. ವಿಶ್ವಾಮಿತ್ರನು ಕ್ರೂರಕೃಪೆಯಿಂದಲೂ ವಸಿಷ್ಠನ ಕರುಣಕೃಪೆಯಿಂದಲೂ ಈಶ್ವರ ಸಾಕ್ಷಾತ್ಕಾರವಾಗಿರುವ ಸರ್ವಪೂಜ್ಯ, ಸಕಲಲೋಕ ಭವ್ಯ.

ಕವಿ ತನ್ನ ವಿಶಾಲ ಧರ್ಮದೃಷ್ಟಿಯನ್ನು ಪಾರ್ವತೀ ಪತಿಯಿಂದ ಇಂತು ಹೇಳಿಸಿದ್ದಾನೆ. ‘ಅತಿ ಹುಸಿವ ಯತಿ ಹೊಲೆಯ, ಹುಸಿಯದಿಹ ಹೊಲೆಯನುನ್ನತ ಯತಿವರನು.’ ಕಾವ್ಯದ ತುದಿಯಲ್ಲಿ ತಾನೆ ಹೀಗೆ ಹಾಡಿದ್ದಾನೆ:

ಹರನೆಂಬುದೇ ಸತ್ಯ, ಸತ್ಯವೆಂಬುದು ಹರನು,
ಎರಡಿಲ್ಲವೆಂದು ಶ್ರುತಿ ಸಾರುತಿರಲಾ ವಾಕ್ಯ
ವರರೆ ನಿರುತವ ಮಾಡಿ ಮೂಜಗಕೆ ತೋರಿದ ಹರಶ್ಚಂದ್ರ ಕಥೆಗೇಳ್ವಡೆ

‘ತರಣಿಯದಯದ ಮುಂದೆ ನಿಂದ ತಿಮಿರದ ತೆರದಿ’ ಪಾತಕವೆಲ್ಲ ಪರಿಹಾರವಾಗುತ್ತದೆ! ಏಕೆಂದರೆ ಕಾವ್ಯಗಂಗೆಯ ರಸತೀರ್ಥದಲ್ಲಿ ಮಿಂದ ಹೃದಯ ಸಹಾನುಭೂತಿಯ ತಪಸ್ಸಿನಿಂದ ತೇಜಸ್ವಿಯಾಗಿ, ಪುನೀತವಾಗುವುದರಲ್ಲಿ ಸಂದೇಹವಿಲ್ಲ.* ರಾತ್ರಿ, ದೀವಿಗೆಯ ಬೆಳಕಿನಲ್ಲಿ, ಇಂತಹ ವಿವರದೃಷ್ಟಿ ಸಾಧ್ಯವೇ ಎಂಬ ಪ್ರಶ್ನೆಯೊಂದುಳಿದರೂ ಚಿಂತೆಯಿಲ್ಲ

* ಒತೆಲೊ ದೆಸ್‌ಡಿಮೊನಳನ್ನು ಕೊಲೆಮಾಡುವುದಕ್ಕೆ ಮುನ್ನ ಹೇಳಿದ ಮಾತುಗಳೂ ಆ ದೃಶ್ಯವೂ ನೆನಪಿಗೆ ಬರುತ್ತವೆ. ಆದರೆ ಮನೋಧರ್ಮದಲ್ಲಿ ಎಷ್ಟು ವ್ಯತ್ಯಾಸವಿದೆ!

* ಇದರ ಅಂತಸ್ಸತ್ಯವನ್ನು “ಸಾಹಿತ್ಯದಲ್ಲಿ ಪ್ರತಿಮಾ” ಎಂಬ ಪ್ರಬಂಧದಲ್ಲಿ ವಿವರಿಸಿದ್ದೇವೆ, ‘ರಸೋ ವೈ ಸಃ’ ಎಂಬ ಗ್ರಂಥದಲ್ಲಿ.