ಇನತನೂಜನ ಕೂಡೆ ಮೈದುನತನದ ಸರಸವನೆಸಗಿ ರಥದೊಳು
ದನುಜರಿಪು ಬರಸೆಳೆದು ಕುಳ್ಳಿರಿಸಿದನು ಪೀಠದಲಿ

ಕರ್ಣನಿಗಾಗಲೆ ಸಂಶಯ. ಮುರಾರಿಯ ಪೂರ್ವಜರಿತ್ರೆ ಆತನಿಗೆ ತಿಳಿಯದಿರಲಿಲ್ಲ. ಅಲ್ಲದೆ ಆ ದಿನ ಕೌರವನ ಆಸ್ಥಾನದಲ್ಲಿ ನಡೆದ ಗಲಭೆ ಬಗೆಯಲ್ಲಿ ಇನ್ನೂ ಹಸುರಾಗಿಯೆ ಇತ್ತು. ಪಾಂಡವರ ಮಂಗಳಕ್ಕಾಗಿ ಮುರಾರಿ ಏನನ್ನು ಬೇಕಾದರೂ ಮಾಡಲು ಹೇಸುವುದಿಲ್ಲ ಎಂಬುದೂ ಪ್ರಸಿದ್ಧವಾಗಿತ್ತು. ‘ಮುರಾರಿಗೆ ಮೂರನೆಯ ದಾರಿ’ ಎಂಬುದೂ ಆತನಿಗೆ ಚೆನ್ನಾಗಿ ಗೊತ್ತಿತ್ತು. ಆ ದಿನ ಆಸ್ಥಾನದಲ್ಲಿ ದುರ್ಯೋಧನನು ಕೃಷ್ಣನಿಗೆ “ಕೈತವದ ಶಿಕ್ಷಾಗುರು” ಎಂಬ ತಕ್ಕ ಬಿರುದನ್ನು ಕೊಟ್ಟಿದ್ದನ್ನೂ ಕೇಳಿದ್ದನು. ಹಗೆಯ ಕಡೆಯ ರಾಯಭಾರಿಯೂ ಹಗೆ ಎಂಬ ರಾಜನಿತಿಯನ್ನು ಕರ್ಣ ತಿಳಿದಿದ್ದನು. ಅಲ್ಲದೆ ಶ್ರೀಕೃಷ್ಣನೆ ಆ ದಿನ ಆಸ್ಥಾನದಲ್ಲಿ,

ಹಗೆಯನೊಳಗಿಡಲಾಗದದು ವೈರಿಗಳ ನಿಳಯದಲನ್ನ ಪಾನಾ
ದಿಗಳನುಣಲಾಗದು ನಿಧಾನಿಸೆ ರಾಜನೀತಿಯಿದು;
ಬಗೆಯೆ ನೀ ಪಾಂಡವರಿಗಹಿತನು, ವಿಗಡ ಪಾಂಡವರನ್ನ ಜೀವನ,
ಹಗೆಯ ನಂಬುವೆನೆಂತು? ಹೇಳೈ! ಕೌರವರಾಯ.

ಎಂಬ ನಯಜ್ಞಾನವನ್ನು ಬೋಧಿಸಿದ್ದನು. ಆದ್ದರಿಂದ ಕರ್ಣನು ಮುರಾರಿಯ ಆಕಸ್ಮಿಕ ಉಪಚಾರದಲ್ಲಿ ಕುಟಿಲತೆಯ ಹೊಳಹನ್ನು ಕಂಡು ನಸು ಹಿಂಜರಿದು “ಎನಗೆ ನಿಮ್ಮಡಿಗಳಲಿ ಸಮಸೇವನೆಯೆ, ದೇವ? ಮುರಾರಿ, ಅಂಜುವೆ” ಎಂದನು. ‘ಕೈತವದ ಶಿಕ್ಷಾಗುರ’ವಿಗೆ ಅಂಜಬೇಕಾದುದೆ! ಕರ್ಣ ಇಂತೆನಲು ಅವನೆದೆಯ ಸಂದೆಯವನ್ನು ಪರಿಹರಿಸಿ, ನಂಬುಗೆಯನ್ನು ನೆಡಲು “ತೊಡೆ ಸೋಂಕಿನಲಿ ಸಾರಿದು ಶೌರಿಯಿಂತೆಂದ “: ಕೃಷ್ಣನು ಹೇಳಿದ ಮಾತುಗಳನ್ನು ವರ್ಣಿಸುತ್ತ ಕವಿ “ದಾನವಸೂದನನು ರವಿಸುತಗೆ ಕಿವಿಯಲಿ ಬಿತ್ತಿದನು ಭಯವ” ಎಂದು ಹಾಡಿದ್ದಾನೆ. ಬೆಸ್ತನು ಬೀಸುವ ಬಲೆ ಅತಿ ಮನೋಹರ; ಅತಿ ದಾರುಣ. ಸಾಧಾರಣವಾದ ಮೀನಾಗಿದ್ದರೆ ಗತಿ ಪೂರೈಸುತ್ತಿತ್ತು.

ಶ್ರೀಕೃಷ್ಣ ― ಭೇದವಿಲ್ಲೆಲೆ ಕರ್ಣ, ನಿಮ್ಮೊಳು ಯಾದವರು ಕೌರವರೊಳಗೆ. ಸಂವಾದಿಸುವೊಡನ್ವಯದ ಮೊದಲೆರಡಿಲ್ಲ. ನಿನ್ನಾಣೆ, ಮೇದಿನೀಪತಿ ನೀನು? ಚಿತ್ತದೊಳ್ ಆದುದರಿವಿಲ್ಲ.

ಕರ್ಣ ― ದಾನವಾಂತಕ, ಬಸಸು: ವಂಶವಿಹೀನನನು ನಿಮ್ಮಡಿಗಳೊಡನೆ ಸಮಾನಿಸುವರೆ? ಸಾಕು! (ಎನುತ ರವಿಸೂನು ಕೈಮುಗಿಯೆ)

ಶ್ರೀಕೃಷ್ಣ ― ಮಾನನಿಧಿ, ನಿನ್ನಾಣೆ! ಬಾರೈ; ನೀನು ನಮ್ಮೆಲರ ಹವಣೆ? ಭಾನವಂಶ ಲಲಾಮ. ನೀ ರಾಮಂಗೆ ಸರಿ! (ಕಳೆದುಕೊಂಡನು ವೀಳೆಯವನಂಜುಳಿಯಲಾತಂಗಿತ್ತು ಕರ್ಣನ ಕೆಲಕೆ ಬರಸಳೆದವನ ಕರದೊಳು ಕರವ ತಳಕಿಕ್ಕಿ) ಎಲೆ ದಿವಾಕರತನಯ! ನಿನ್ನಯ ಕುಲವನರಿಯೆಯಲಾ! ಸುಯೋಧನನಲಿ ವೃಥಾ ಸೇವಕತನದಲಿಹುದು ಉಚಿತವಲ್ಲ. ಲಲನೆ ಪಡೆದ ಈ ಐದು ಮಂತ್ರಂಗಳಲಿ ಮೊದಲಲಿ ನೀನು, ಅನಂತರದಲಿ ಯುಧಿಷ್ಠಿರದೇವ, ಮೂರನೆಯಾತ ಕಲಿಭೀಮ, ಫಲುಗುಣನು ನಾಲ್ಕನೆಯಲಿ, ಬಳಿಕ ಐದನೆಯಲಿ ನಕುಲ ಸಹದೇವರಾದರು ಮಾದ್ರಿಯಲಿ; ಒಂದು ಮಂತ್ರದೊಳಿಬ್ಬರುದಿಸಿದರು. ಆದರಿಂ ಆ ಪಾಂಡವರಲಿ ಐವರ ಮೊದಲಿಗನು ನೀನಿರಲು ಧರಣಿಯ ಕದನ ಇತ್ತಂಡಕ್ಕೆ ಕಾಮಿತವಲ್ಲ, ನೀನಿರಲು. ಇದು ನಿಧಾನವು, ಕರ್ಣ. ನಿನ್ನ ಅಭ್ಯುದಯವನೆ ಬಯಸುವೆನು, ನಿನ್ನಯ ಪದಕೆ ಕೆಡಹುವೆನೈವರನು ನಡೆ ನನ್ನ ಸಂಗಾತ! ನಿನಗೆ ಹಸ್ತಿನಪುರದ ರಾಜ್ಯದ ಘನತೆಯನು ಮಾಡುವೆನು. ಪಾಂಡವ ಜನಪ ಕೌರವ ಜನಪರು ಓಲೈಸುವರು ಗದ್ದುಗೆಯ. ನಿನಗೆ ಕಿಂಕರವೆರಡು ಸಂತತಿ ಎನಿಸಲೊಲ್ಲದೆ, ನೀನು, ದುರಿಯೋಧನನ ಬಾಯ್ದಂಬುಲಕೆ ಕೈಯಾನುವರೆ? ಹೇಳು! ― ಎಡದ ಮೈಯಲಿ ಕೌರವೇಂದ್ರರ ಗಡನ! ಬಲದಲಿ ಪಾಂಡುತನಯನ ಗಡಣ? ಇದಿರಲಿ ಮಾದ್ರ ಮಾಗಧ ಯಾದವಾದಿಗಳು! ನಡುವೆ ನೀನು ಓಲಗದೊಳೊಪ್ಪುವ ಕಡು ವಿಳಾಸವ ಬಿಸುಟು. ಕುರುಪತಿ ನುಡಿಸೆ, ‘ಜೀಯ’ ‘ಹಸಾದ’ ಎಂಬುದು ಕಷ್ಟ. ನಿನಗೆ ಶೌರಿಯದಲಿದಿರಿಲ್ಲ. ಕುಲದಲಿ ಸೂರ್ಯನ ಮಗನು. ಒಡನೆ ಹುಟ್ಟಿದ ವೀರರೈವರು ಪಾಂಡುತನಯರು! ನಿನ್ನ ವೈಭವಕ್ಕೆ ಆರು ಸರಿಯೈ, ಕರ್ಣ? ನಡೆ, ನಡೆ, ಧಾರುಣೀಪತಿಯಾಗು? ನೀನಿರೆ, ವೈರವಿತ್ತಂಡಕ್ಕೆ ಬಳಿಕಿಲ್ಲ.

ಮಾತನಾಡದೆ ಇದನ್ನೆಲ್ಲ ಆಲಿಸುತ್ತಿದ್ದ ಕರ್ಣನ ಹೃದಯದಲ್ಲಿ ಎಂತಹ ಭಾವಗಳು ಮೂಡಿದವು? ಮುರಾರಿಯ ವಿಷಮಯವಾದ ಕೈತವದ ಅಗಾಧತೆಯನ್ನು ಅರಿತು:

ಕೊರಳ ಸೆರೆ ಹಿಗ್ಗಿದುವು. ದೃಗುಜಲವುರವಣಿಸಿ ಕಡುನೊಂದನ್. “ಅಕಟಾ!
ಕುರುಪತಿಗೆ ಕೇಡಾದುದು” ಎಂದನು ತನ್ನ ಮನದೊಳಗೆ.
“ಹರಿಯ ಹಗೆ ಪೊಗೆದೋರದುರುಹುದೆ ಬರಿದೆ ಹೋಹುದೆ? ತನ್ನ ವಂಶವ
ನರುಹಿ ಕೊಂದನು! ಹಲವು ಮಾತೇನ್” ಎಂದು ಚಿಂತಿಸಿದ.
“ಕಾದಿ ಕೊಲುವಡೆ, ಪಾಂಡುಸುತರು ಸಹೋದರರು. ಕೊಲಲಿಲ್ಲ, ಕೊಲ್ಲದೆ
ಕಾದನಾದೊಡೆ, ಕೌರವಂಗವನಿಯಲಿ ಹುಗಲಿಲ್ಲ!
ಭೇದದಲಿ ಹೊಕ್ಕಿರಿದನೋ ಮಧುಸೂದನನಕಟಕಟೆ” ನುತ ಘನ ಚಿಂ
ತೋದಧಿಯಲ್ಲದ್ಧವೊಲು ಮೌನದೊಳಿದ್ದನ ಕರ್ಣ!

ಕರ್ಣನ ಮೌನದ ಅರ್ಥವನ್ನು ಅರಿತ ಕೃಷ್ಣ ಮರಳಿ ತೊಡಗಿದನು:

ಶ್ರೀಕೃಷ್ಣಏನು? ಪೇಳೈ, ಕರ್ಣ! ಚಿತ್ತಗ್ಲನಿಯಾವುದು ಮನಕೆ? ಕುಂತೀ ಸೂನುಗಳ ಬೆಸಕೈಸಿಕೊಂಬುದು ಸೇರದೇ ನಿನಗೆ? ಹಾನಿಯಿಲ್ಲ, ಎನ್ನಾಣೆ, ನುಡಿ, ನುಡಿ! ಮೌನವೇಕೆ? ಮರುಳತನ ಬೇಡ! ಅನು ನಿನ್ನಪದಶೆಯ ಬಸುವನಲ್ಲ! ಕೇಳು.
ಕರ್ಣಮರಳು, ಮಾಧವ, ಮಹಿಮ ರಾಜ್ಯದ ಸಿರಿಗೆ ಸೋಲುವನಲ್ಲ. ಕೌಂತೇಯರು ಸುಯೋಧನರು ಎನಗೆ ಬೆಸಕೈವಲ್ಲಿ ಮನವಿಲ್ಲ! ಹೊರೆದ ದಾತಾರಂಗೆ ಹಗೆವರ ಶಿರವನರಿದೊಪ್ಪಿಸುವ ಭರದೊಳಿರ್ದೆನು. ಕೌರವೇಂದ್ರನ ಕೊಂದೆ ನೀನು! ಒಡನೆ ಹುಟ್ಟಿದೆವು ಎಂಬ ಕಥನವನು ಎಡೆಗುಡದೆ ಬಣ್ಣಿಸಿದೆ. ‘ಪಾಂಡವರ ಅಡುಗು ಬಾಣಕೆ ಬಲಿಎನಿಪ್ಪ ಛಲವ ಮಾಣಿಸಿದೆ. ನುಡಿದು ಫಲವೇನ್? ಇನ್ನು ಕೇಳ್: ಎನ್ನೊಡೆಯನಾದಂತಹೆನು. ಬಾರೆನು. ಪೊಡವಿಯಲಿ ನೀ ಹರಹಿಕೊಳು! ನಿನ್ನವರ ನಿಲಿಸು! ವೀರಕೌರವರಾಯನೇ ದಾತಾರನ್! ಆತನ ಹಾಗೆಯೆ ಹಗೆ! ಕೈವಾರವೇ ಕೈವಾರ! ಆದಂತಹನು ಕುರುನೃಪತಿ! ಶೌರಿ, ಕೇಳೈ: ನಾಳೆ ಸಮರದ ಸಾರದಲಿ ತೊರುವೆನು ನಿಜಭುಜಶೌರಿಯದ ಸಂಪನ್ನತನವನು ಪಾಂಡುತನಯರಲಿ, ಹಲವು ಮಾತೇನ್? ಅಖಿಳಜಗಕೆ ಎನ್ನುಳಿವು ಸೊಗಸದು ಕೌರವೇಶ್ವರನೊಲುಮೆ ತಪ್ಪಿಸು! ಭುವನದೊಳಗೆನಗಾಪ್ತ ಜನವಿಲ್ಲ! ಸಲಹಿದನು, ಮುನ್ನಣೆಯಲಿ ಎನಗೆ ಅಗ್ಗಳಿಗೆಯಲ್ಲದೆ ಹೀನವೃತ್ತಿಯ ಬಳಸಿ ನಡೆಸನು. ಕೌರವೇಂದ್ರನನೆಂತು ಮರೆದಪೆನು? ನೋಡಿ ದಣಿಯನು, ಬಿರುದು ಹೊಗಳಿಸಿ ಹಾಡಿ ತಣಿಯನು, ನಿಚ್ಚಲು ಚಿತವ ಮಾಡಿ ತಣಿಯನು, ಮಾನನಿಧಿಯನದೆಂತು ಮರೆದಪೆನು? ಕಾಡಲಾಗದು, ಕೃಷ್ಣ, ಖಾತಿಯ ಮಾಡಲಾಗದು. ಬಂದೆನಾದರೆ ರೂಢಿ ಮೆಚ್ಚದು. ಕೌರವನ ಬಗೆ ಹರಿಬ ನನಗೆ! ಹಲವು ಮಾತೇನ್? ಕೇಳಯ್ ಶೌರಿ! ಅರುಣಜಲದಾಜ್ಯದಲಿ, ಬಂಬಲುಗರುಳ ಚರುವಿನಲಿ, ಎಲುವಿನೊಟ್ಟಿಲ ಬೆರಳ ಸಮಿಧೆಯಲಿ, ಅಡಗಿನಖಿಳಾಹುತಿಯ ರಚನೆಯಲಿ, ನರಕಪಾಲದ ಪಾತ್ರೆಗಳ ತಿಲದೊರತೆಗಳ ಕೇಶೌಘ ದರ್ಭಾಂಕುರದಲಿ ಅಹವಯಜ್ಞದೀಕ್ಷಿತನಹೆನು! ಮಾರಿಗೌತಣವಾಯ್ತು ನಾಳೆ ಭಾರತವು. ಚತುರಂಗಬಲದಲಿ ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು ತೀರಿಸಿಯೆ, ಪತಿಯವಸರಕೆ ಶರೀರವನು ನೂಕುವೆನು! (. . . . . .ಇಲ್ಲಿ ಕರ್ಣನು ಸ್ವಲ್ಪ ಹೊತ್ತು ಮೌನವಾಗಿ ಚಿಂತಿಸಿ ದೃಢಚಿತ್ತನಾಗಿ ಹೇಳಿದನು.) ನಿನ್ನಯ ವೀರರೈವರ ನೋಯಿಸೆನು (ಮುಳುಗುತ್ತಿದ್ದ ಸೂರ್ಯದೇವನನ್ನು ನೋಡಿ) ರಾಜೀವ ಸಖನಾಣೆ!
ಶ್ರೀಕೃಷ್ಣ ― (ಎನಲು ಕರ್ಣನು ದೃಢವ ಕಂಡನು ಮನದೊಳುತ್ಸಾಹಿಸಿದನು) ಆದೊಡೆ ತನಯರೈವರ ಹದನು ನಿನ್ನದು! ಬಲುಹು ಮಾಡುವಡೆ ಮನಕೆ ಖತಿಯಹುದು; ಆರುಹದಿರ್ದಡೆ ನನಗೆ ಗುಣವಿಲ್ಲ ಎಂಬ ಕಾರಣವಿನಿತ ನೊಡ್ದೈಸಿದೆನು. ನೀ ಸುಖಿಯಾಗು ಹೋಗು! ಬಂದರೊಳ್ಳಿತು. ಬಾರದಿದ್ದರೆ ಕಂದ ಕೇಳಯ್, ಮಧುರವಚನದಿ ಮಂದಮತಿಯನು ತಿಳುಹಿ ತಮ್ಮಂದಿರಿಗೆ ರಾಜ್ಯವನು ಇಂದು ಕೊಡಿಸುವುದುಚಿತ, ಸಂಪ್ರತಿಗೆ ಇಂದು ಸೇರಿಸು. ನಿನ್ನ ಮಾತನು ಹಿಂದುಗಳೆಯನು ಕೌರವೇಶ್ವರನು.
ಕರ್ಣಮಸೆದುದಿತ್ತಂಡಲಿ ಮತ್ಷರ, ಪಸರಿಸಿತು. ನಾನೀಗ ನೀತಿಯನುಸರಿದರೆ ಮನಗಾಣನೇ ಕೌರವ ಮಹೀಶ್ವರನು: ಮಿಷಮವದು! ಕಟ್ಟಾಳು ಮಂತ್ರದೊಳೆಸಗಲಾಗದು. ತನ್ನ ವೀರತೆ ಮುಸುಳಹುದು. ಮುರವೈರಿ, ಸಂಧಿಯನರಿಯೆ ನಾನು ….. ಕಳುಹಬೇಹುದು, ದೇವ, ದಿನಪತಿಯಿಳಿದನಪರಾಂಬು ಧಿಗೆ. ಸಂಪ್ರತಿಯಳಿದ ಹೊತ್ತಿಂದು. ಈಗ, ನೀವು ನೆಟ್ಟನೆ ಪಾಂಡವರು. ಹುಲುಸರವಿ ಹಾವಹುದು ಹುತ್ತಿನ ತಲೆಯಲಿರಲು. ಅಜ್ಞನಿಗೆ ಹಿಸುಣರ ಬಳಕೆ ಹೋಗುವುದು. ಕಳುಹಬೇಕು! (ಎಂದೆರಗಿದನು ಕರ್ಣ.)

ಕೃಷ್ಣ ಕರ್ಣರ ಮಹಾ ಸಂವಾದ ಇಂತು ಕೊನೆಗಂಡಿತು. ಕುರುಕ್ಷೇತ್ರ ಸಂಗ್ರಾಮವು ಅನಿವಾರ್ಯವಾಯಿತು!

ಮೇಲಿನ ದೃಶ್ಯ ವ್ಯಾಖ್ಯಾನ ನಿರಪೇಕ್ಷಣೀಯವಾದುದು. ಅಂಗಾಧಿಪತಿಯ ವೀರ ವಾಕ್ಯಗಳೆ ಆತನ ವ್ಯಕ್ತಿತ್ವಕ್ಕೆ ಒಂದು ದೊಡ್ಡ ವ್ಯಾಖ್ಯಾನ! ಮನೆಗೆ ಹಿಂದಿರುಗಿದ ಮೇಲೆಯೂ ಕರ್ಣನಿಗೆ ಶಾಂತಿಯಿಲ್ಲ. “ತನ್ನ ವಂಶವನರುಹಿ ಕೊಂದನು!” “ಕೌರವೇಂದ್ರನ ಕೊಂದೆ ನೀನು!” “ಕೌರವೇಂದ್ರನನೆಂತು ಮರೆದಪೆನು!” “ವೀರ ಕೌರವರಾಯನೇ ದಾತಾರನ್!” “ಅದಂತಹೆನು ಕುರುನೃಪತಿ!” “ಆಹವಯಜ್ಞದೀಕ್ಷಿತನಹೆನು!” “ಕೌರವನ ಋಣ ಹಿಂಗೆ ರಣದಲಿ ಶರೀರವನು ನೂಕುವೆನು!” “ನಿನ್ನಯ ವೀರರೈವರ ನೋಯಿಸೆನು!” ಸೂತ್ರಪ್ರಾಯವಾದ ಈ ಮಾತುಗಳು ಆತನ ಮನದಲ್ಲಿ ಮೊರೆದುವು; ಎದೆಯಲ್ಲಿ ಮೊಳಗಿದುವು; ಜೀವವನ್ನೆ ತಲ್ಲಣಗೊಳಿಸಿದುವು. ಅಂತೂ ತನಗೂ ತನ್ನ ಸ್ವಾಮಿಗೂ ಮುಂದೆ ಬಂದೊದಗುವ ‘ಅಮಂಗಳ’ವು ಕರ್ಣನ ಬಹೆಯಲ್ಲಿ ಮಿಂಚಿತು:

ಬೀಳುಕೊಂಡನು; ಮನೆಗೆ ಬಂದು ವಿಶಾಲಮತಿ ಚಿಂತಿಸಿದನಾ ಸಿರಿ
ಲೋಲ ಮಾಡಿದ ಮಂತ್ರ ಮನದಲಿ ನಟ್ಟು ಬೇರೂರಿ
ಕೇಳು ಮಾಡಿದನಕಟ! ಕೌರವ ಬಾಳಲರಿಯದೆ ಕೆಟ್ಟನೀ ಗೋ
ಪಾಲ ಬರಿದೇ ಬಿಡನು; ಜೀವನ ಕೊಳ್ಳದಿರನೆಂದ

ಕರ್ಣನ ಸುಲಿಗೆಯ ಕತೆ ಇಲ್ಲಿಗೆ ಮುಗಿಯಲಿಲ್ಲ. ವಿಧಿ ಸಾಯುವವರೆಗೂ ಅವನನ್ನು ಸುಲಿಗೆ ಮಾಡುತ್ತಲೆ ಇತ್ತು. ಕವಿ ಹತ್ತನೆಯ ಸಂಧಿಯ ಉತ್ತರಾರ್ಧದಲ್ಲಿ ಕೃಷ್ಣನ ಉಪದೇಶದಂತೆ ಕುಂತಿ ತನ್ನ ಮಗನಾದ ರಾಧೇಯನನ್ನು ಕಂಡು ಸರಳನ್ನು ಬೇಡಿದ ವಿಚಾರವನ್ನು ಬರೆದಿದ್ದಾನೆ. ಸನ್ನಿವೇಶವೇನೊ ರಸಪೂರ್ಣವಾದುದು. ಆದರೆ ವೀರಕವಿ ಕುಮಾರವ್ಯಾಸನ ಪ್ರತಿಭೆಗೆ ಅದರ ಕೋಮಲತೆಯನ್ನು, ಅದರ ಸೂಕ್ಷ್ಮತೆಯನ್ನು, ಅದರ ಶೋಕರಸವನ್ನು, ಅದರ ದುರಂತತೆಯನ್ನು ಕಲ್ಪಿಸುವ, ಭಾವಿಸುವ ಅಥವಾ ಬಣ್ಣಿಸುವ ಮಹಿಮೆಯಿಲ್ಲ; ಸಾಮರ್ಥ್ಯವಿಲ್ಲ; ಇಚ್ಛೆಯಿಲ್ಲ. ಭೀಮನು ಗದೆಯನ್ನು ಹಿಡಿದು ವಿಸ್ಮಯಕರವಾಗಿ ತಿರುಗಿಸಬಲ್ಲೆನೆ ಹೊರತು, ಹೂವುನ ಚೆಂಡಾಟದ ಲಾಲಿತ್ಯ ರಮಣೀಯತೆಗಳನ್ನು ಪ್ರದರ್ಶಿಸಲಾರನು. ಕುಮಾರವ್ಯಾಸನು ಅರಬ್ಬೀ ಟಾಕಣವನ್ನು ಚೆನ್ನಾಗಿ ಸಾಕಿ ಸವಾರಿ ಮಾಡಬಲ್ಲನೆ ಹೊರತು, ಮುದ್ದಾದ ಮೊಲದ ಮರಿಯನ್ನು ಪೊರೆದು ಸಲುಹಿ ಆಡಿಸಲರಿಯನು. ಆತನ ರುಚಿ ಉಜ್ವಲವಾದರೂ ಸ್ಥೂಲವಾದುದು; ಆತನ ಸಂಸ್ಕೃತಿ ಮಹತ್ತಾದುವಾದರೂ ಒರಟಾದುದು. ಆತನ ಕವಿತಾಶಕ್ತಿ ದ್ರೌಪದಿಯಂಥಾದ್ದು; ಸೀತೆಯಂಥಾದ್ದಲ್ಲ. ಆತನು ಶ್ರವಣಬೆಳ್ಗೊಳದ ಗೋಮಟೇಶ್ವರನನ್ನು ಕೆತ್ತಬಲ್ಲನು; ಆದರೆ ಬೇಲೂರಿನ ಶಿಲಾಬಾಲಿಕೆಯರನ್ನು ಕಡೆಯಲರಿಯನು. ಬಿರುಗಾಳಿಯಂತೆ ಹೆಮ್ಮರಗಳನ್ನು ಉರುಳಿಸಬಲ್ಲನು; ಮೆಲ್ಲೆಲರಿನಂತೆ ತಳಿರಿಡಿದ ಕೊನರೊಡೆದ ಎಳೆಯ ಬಳ್ಳಿಗಳನ್ನು ಮುದ್ದಿಸಿ ತಲೆದೂಗಿಸಲರಿಯನು. ಆದ್ದರಿಂದಲೇ ಶ್ರೀಕೃಷ್ಣ ಕರ್ಣರ ಸಂವಾದವನ್ನು ನಿರುಪಮವಾಗಿ ಚಿತ್ರಿಸಿದ ಆತನು ತೊರೆದ ಮಗನನ್ನು ತಾಯಿ ಮರಳಿ ನೋಡಿದ ದೃಶ್ಯವನ್ನು ಚೆನ್ನಾಗಿ ಬಣ್ಣಿಸಲರಿಯದೆ ಹೋಗಿದ್ದಾನೆ. ಕಥೆ ಸಾಗಲು ಎಷ್ಟು ಹೇಳಬೇಕೋ ಅಷ್ಟನ್ನೆ ಲೆಕ್ಕಾಚಾರದಂತೆ ಹೇಳಿಬಿಟ್ಟಿದ್ದಾನೆ.

ರವಿಸುತನು ಒಂದು ದಿನ ಭಾಗೀರಥಿಯ ತೀರದಲ್ಲಿ ತಾತನಿಗೆ ಅರ್ಘ್ಯವನ್ನು ಕೊಡುತ್ತಿರಲು ಕುಂತಿ ಅಲ್ಲಿಗೆ ಬಂದಳು. ಮಗನು ತಾಯಿಗೆ ನಮಸ್ಕಾರಮಾಡುತ್ತಾನೆ. ತಾಯಿ ಮಗನನ್ನು ಬಿಗಿದಪ್ಪುತ್ತಾಳೆ. ಗಂಗಾಮಾತೆ ಪ್ರತ್ಯಕ್ಷಳಾಗಿ ಕುಂತೀದೇವಿಗೆ “ಕೈಯೆಡೆಯ ಕಂದನನ್ನು ಒಪ್ಪುಗೊಳು ನೀನು” ಎಂದು ಹೇಳಿ ಮಾಯವಾಗುತ್ತಾಲೆ. ರವಿಯೂ ಅಲ್ಲಿಗೆ ಬಂದು ಪುತ್ರನನ್ನು ಎಕ್ಕಟಿ ಕರೆದು “ಎಲೆ ಮಗನೆ ಕುಂತೀದೇವಿ ನಿನಗೆ ತಾಯಹುದು. ಮುರಹರನ ಮತದಿಂದ ನಿನ್ನ ಯ ಸರಳಬೇಡಲು ಬಂದಳು; ಅಂದಿನ ಹರಿಗೆ ಕವಚವನಿತ್ತವೊಲ್ ಮರುಳಾಗಬೇಡ” ಎಂದು ಹೇಳಿ ಹೊರಟುಹೋಗುವನು. ತಂದೆಗೆ “ಹಸಾದ” ಹೇಳಿ ಕಳುಹಿಸಿ ತಾಯಿಯ ಕಡೆಗೆ ತಿರುಗಿ “ಒಸೆದು ಬಿಜಯಂಗೈದ ಹದನನು ಉಸುರಬೇಹುದು ತಾಯೆ” ಎನಲು “ಶೋಕಿಸುತ ನುಡಿದಳು ಕುಂತಿ ಕರ್ಣನು ತೆಗೆದು ಬಿಗಿದಪ್ಪಿ.” ಮೊತ್ತಮೊದಲು “ಮಗನೆ ತಮ್ಮಂದಿರನು ಪಾಲಿಸು” ಎಂಬ ಸ್ವಾರ್ಥವನ್ನೆ ಹೇಳಿ, ತರುವಾಯ ಇಂತೆಂದಳು:

…. ವಿಗಡತನವನು ಮಾಣು; ಪರರೋಲಗವ ನೀ ಮಾಡುವರೇ?
ನಿನಗಿತ್ತಂಡವನುಜರಲೆ!
ಸೊಗಸು ತಾನೆಂದುದನು; ಹಿಸುಣರ ಬಗೆಯ ನೀ ಕೇಳದಿರು.
ನೀ ಮನ ಬಿಗಿಸದಿರು; ಸಲಿಸೆನ್ನ ವಚನವನ್ ….

ಅದಕ್ಕೆ ಕರ್ಣನು:

ತಾಯಹುದು ಬಲ್ಲೆನ್. ಎನಗೆ ಆ ಕಾಯಜನ ಪಿತನರುಹೆ ತಿಳಿದೆನು,
ರಾಯರಿತ್ತಂಡಕ್ಕೆ ಪಟ್ಟದ ಹಿರಿಯ ತಾನಹುದು. ರಾಯನ್ ಎನ್ನನು ನೆಚ್ಚಿ
ಹೊರೆದನು. ಸಾಯಲಳುಕುವನೇ? ಸುಡು! ಏತರದೀಯಿಳೆಯ ಬಾಳಿಕೆ?
ಕೃತಘ್ನತೆಗಿಲ್ಲ ಗತಿ! … … ಇಂದು ನೀವ್ ಅರುಹಿದ ಬಳಿಕ ರವಿನಂದ
ನನು ಎಂದರಿದೆನ್. ಅಲ್ಲದೆ ಹಿಂದೆ ದುರಿಯೋಧನನ್ ಅದಾವುದ ನೋಡಿ
ಸಲುಹಿದನು? ಬಂದು ಪಾಂಡವರೊಡನೆ ಕೂಡುವ ಅದೊಂದು ಶೌರಿಯ
ಮಾತು ಅದಂತಿರಲಿ. ಇಂದು ನಿಮ್ಮಡಿ ಬಂದ ಕಾರ್ಯವ ಬೆಸಸಿ ನೀವ್.

ಕುಂತಿ ಹಿಂದೆಮುಂದೆ ನೋಡದೆ, ತಾನು ಬೇಡುವ ವರವೆ ಮಗನಿಗೆ ಮೃತ್ಯುವಾಗಬಹುದು ಎಂಬುದನ್ನು ಕೂಡ ಬಗೆಯದೆ, ಸಂದರ್ಭ ಸಿಕ್ಕಿದ್ದೆ ಸಾಕು ಎಂದು ಬಗೆದಳೊ ಎಂಬಂತೆ ಹೇಳುತ್ತಾಳೆ:

“ಆದಡೈವರು ಮಕ್ಕಳನು ತಲೆಗಾದು ತೋರೈ, ತಂದೆ! ನಿನಗಿ
ನ್ನೀ ದುರಾಗ್ರಹವೂಪ್ಪುವುದೆ ಕೌರವನ ಸೇವೆಯಲಿ?
ಹೋದ ಬಾನದ ಮರಳಿ ತೊಡದಿರು, ಮಾದು ಕಳೆ ವೈರವನೆ” ನಲ್ಕೆ “ಹ
ಸಾದ “ವೆಂದನು, ಬೀಳುಕೊಟ್ಟನು, ಬಂದನರಮನಗೆ.

ಮುಗಿದೇ ಹೋಯಿತು ತಾಯಿ ಮಕ್ಕಳ ಭೇಟಿಯ ಕಥೆ! ನಮ್ಮಲ್ಲಿ ಯಾರಾದರೂ ಒಬ್ಬನು ತನ್ನೊಬ್ಬ ಮಿತ್ರನ ಅಂಗಡಿಗೆ ಸಾಮಾನು ಕೊಳ್ಳಲು ಹೋದಾಗಲೂ ಇಷ್ಟು ಸಂಕ್ಷೇಪವಾಗಿ, ಇಷ್ಟು ಲೆಖ್ಖಾಚಾರವಾಗಿ ಮಾತಾಡಿ ಬರುವುದಿಲ್ಲ. ಕುಂತಿ ಮಾತ್ರ ಕರ್ಣನ ಅಂಗಡಿಗೆ ಹೋಗಿ ತನ್ನ ತಾಯ್ತನವೆಂಬ ನಗದು ಹಣವನ್ನು ಕೊಟ್ಟು “ಸರಳಿನ ಭಿಕ್ಷೆ “ಯನ್ನು ಕೊಂಡುಕೊಂಡೆ ಬಂದುಬಿಟ್ಟಳು!

ಇಲ್ಲಿಗೆ ಮಹಾಭಾರತದ ಪ್ರಥಮಾರ್ಧ ಕೊನೆಗಂಡಿತು. ಕೌರವ ಪಕ್ಷದ ‘ಅನ್ಯಾಯ, ಅಧರ್ಮ’ಗಳೂ ಪಾಂಡವ ಪಕ್ಷದ ‘ನ್ಯಾಯ ಧರ್ಮ’ಗಳೂ ಮುಕ್ತಾಯವಾದುವು. ಶಾಂತಿದೇವತೆಗೆ ಸಮರನೈವೇದ್ಯವನ್ನು ನಿವೇದಿಸಲು ರಕ್ತರಣಮಹೋತ್ಸವ ಪ್ರಾರಂಭವಾಯಿತು. ಶ್ರೀಕೃಷ್ಣ ಪಾಂಡವರ ಕಡೆಗೆ ಸೇರಿದನು; ಆತನ ಸೈನ್ಯ ಕೌರವರ ಕಡೆಗಾಯಿತು. ಆತ್ಮಶಕ್ತಿ ಪಾಂಡವರಿಗಾಯಿತು; ದೇಹಬಲ ಕೌರವರಿಗಾಯಿತು. ಭೀಷ್ಮನು ಸೇನಾಧಿಪತ್ಯವನ್ನು ವಹಿಸಿ ರಣನಾಟಕಕ್ಕೆ ನಾಂದಿ ಹಾಡಿದನು. ಯುದ್ಧಮಾಡಿ, ಯುದ್ಧಮಾಡಿ ಕಡೆಗೆ ತನ್ನ ಮರಣದ ರಹಸ್ಯವನ್ನು ಯುಧಿಷ್ಠಿರನಿಗೆ ಹೇಳಿಕೊಟ್ಟು ಸರಳ ಮಂಚದ ಮೇಲೆ ಮಲಗಿಬಿಟ್ಟನು. ತರುವಾಯ ದ್ರೋಣಾಚಾರ್ಯರು ಸೇನಾ ನಾಯಕರಾದರು. ಅವರೂ ಕೃಷ್ಣನ ಕೈತವಕ್ಕೆ ಬಲಿಯಾದರು.

ಭೀಷ್ಮನು ಮಡಿದುದೆ ಕೌರವ ಪಕ್ಷಕ್ಕೆ ಒಂದು ಆಘಾತವಾಗಿತ್ತು. ದ್ರೋಣರ ಮರಣ ಸಿಡಿಲೆರಗಿದಂತಾಯ್ತು. ಎಲ್ಲೆಲ್ಲೆಯೂ ರವುಕುಳ ಹಬ್ಬಿತು. “ಬೆದರಿತಾಯಾಸ್ಥಾನ. ಧಿಗಿಲೆಂದುದು ಧರಾಧೀಶನ ತಂದೆಯ ಹೃದಯದಲಿ. ಕುದಿದುದಂತಃಕರಣವರಸನ ಕದಪು ಕೈಯಲಿ ಕೀಲಿಸಿತು “; ಸಂಜಯನು “ಕಲಿಕರ್ಣನೇಳ್ಗೆಯ ಮಾಡ ಹೇಳೆಂದ.” ಧೃತರಾಷ್ಟ್ರನು ಸಂಜಯನನ್ನು ಕುರಿತು ಕರ್ಣಂಗಾಯಿತೇ ಕಡೆ? ಸಾಕದನು ವಿಸ್ತರಿಸಿ ಹೇಳ್ …. ..

ಸರಳ ಕೊರತೆಯೊ? ಸಾರಥಿಯ ಮತ್ಸರವೊ? ರಥದ ವಿಘಾತಿಯೋ?
ದುರ್ಧರ ಧನುರ್ಭಂಗವೊ? ಮಹಾಸ್ತ್ರವ್ಯಥೆಯೋ? ರವಿಸುತನ
ಹುರುಳುಗೆಡಿಸಿದರೆಂತು? ರಿಪುರಾಯರಿಗೆ ನಾವ್ ಗೋಚರವೆ? ದುರಿತೋ
ತ್ಕರುಷವೈಸಲೆ ನಮ್ಮ ಕೆಡಿಸಿತು? ಶಿವ ಶಿವಾ!.. ….

“ಸಾಕದಂತಿರಲಿ, ಕರ್ಣಾಹವದ ಕರ್ಣಾಮೃತವ ಸುರಿ ಇನ್ನು” ಎಂದನು. ಸುಯೋಧನನು “ಎಮ್ಮ ಭಾಗ್ಯದ ಬಿತ್ತು ಹರಿದರೆ ವೀರಭಟರಿದ್ದೇನು ಮಾಡುವರು?” ಎಂದು ಚಿಂತಿಸುತ್ತಿರಲು;

“ಜೀಯ ಸಂಶಯವಿಲ್ಲ; ಗುರು ಗಾಂಗೇಯರಳಿದೊಡದೇನು? ಕಲಿ ರಾ
ಧೇಯನೇ ವಜ್ರಾಂಗಿಯಲ್ಲಾ ನಮ್ಮ ಮೋಹರಕೆ!. . . . .
ರಾಯನೀತನ ಪತಿಕರಿಸು. ಚಕ್ರಾಯುಧದ ಚಾತುರ್ಯಕೊಳ್ಳದು,
ಜೀಯ, ಕರ್ಣನ ಕೊಡೆ” ಎಂದುದು ನಿಖಿಳ ಪರಿವಾರ.

ಅದನ್ನು ಕೇಳಿ ಕರ್ಣನು ವೀರನಿಗೆ ತಕ್ಕ ನಮ್ರತೆಯಿಂದ,

ಬೇರೆನಮಗಗ್ಗಳಿಗೆಯೊಲೆಯಕಾರತನವೇ? ರಾಯ, ಮನದಲಿ
ಯೇರಿಸಿದರೇರುವುದು ದೆಸೆ, ಮನಮುರಿಯೆ ಕುಂದುವುದು;
ತೋರಿ ನುಡಿದರೆ ಭೀಷ್ಮಗುರುವನು ಜಾರಿಸಿದ ರಣವೆಮಗೆ ಸದರವೆ?
ದೂರುವವರಾವಲ್ಲವೆಂದನು ಭಾನುನಂದನನು.

ತರುವಾಯ ಕೌರವನು ತನ್ನ ನೆಚ್ಚಿನ ಭಟನಾದ ಕರ್ಣನಿಗೆ ವೀರಪಟ್ಟವನ್ನು ಕಟ್ಟಿದನು.

ವಿರಚಿಸಿತು ಪಟ್ಟಾಭಿಷೇಕೋತ್ಕರುಷ, ಮಂತ್ರಾಕ್ಷತೆಯ ಮಳೆಗಳು
ಕರೆದವಮಳದ್ವಿಜರ ಜಯರವ ಮೇಘಘೋಷೆಯಲೆ!
ಗುರುಸುತಾದಿ ಮಹಾಪ್ರಧಾನರು ದರುಶನವ ನೀಡಿದರು; ಕರ್ಣನ
ಬಿರುದಿನುಬ್ಬಟೆಲಹರಿ ಮಸಗಿತು ವಂದಿಜಲಧಿಯಲಿ.
ಅರಳಿತರಸನ ವದನ; ಶಕುನಿಗೆ ಹರುಹ ಮಿಗೆ, ದುಶ್ಯಾಸನುಲಿದು
ಬ್ಬರಿಸೆ, ರೋಮಾವಳಿ ವಿಕರ್ಣಾದಿಗಳ ಮನವರಿಯೆ,
ಗುರುಜ ಕೃಪ ಕೃತವರ್ಮ ಶಲ್ಯಾದ್ಯರಿಗೆ ಸೂಸಕ ಸೊಗಸು ಮಿಗಲಾ
ಯ್ತಿರುಳು ಕರ್ಣನ ಪಟ್ಟವಾಯಿತು ನೃಪತಿ ಕೇಳೆಂದ |

ದುರ್ಯೋಧನನಿಗೆ ಕರ್ಣನಲ್ಲಿ ಇದ್ದಷ್ಟು ನೆಚ್ಚು ಭೀಷ್ಮದ್ರೋಣರಲ್ಲಿ ಇರಲಿಲ್ಲ. ಏಕೆಂದರೆ ಕುರುಕುಲ ಪಿತಾಮಹನು ಪಾಂಡವರ ಕಲ್ಯಾಣಾಕಾಂಕ್ಷಿ ಎಂಬುದಕ್ಕೆ ಬೇಕಾದಷ್ಟು ನಿದರ್ಶನ ದೊರೆತಿದ್ದುವು. ಆತನ ಮನಸ್ಸು, ಆತನ ಆತ್ಮಶಕ್ತಿ, ಆತನ ಆಶೀರ್ವಾದ ಬಲ ಇವೆಲ್ಲವೂ ಪಾಂಡವರಲ್ಲಿದ್ದವು. ಆತನ ಮೈ, ಆತನ ಮೈಬಲ್ಮೆ, ಆತನ ಜೋಳದ ಪಾಳಿಯ ಹಂಗು ಇವು ಮಾತ್ರ ಕೌರವನ ಕಡೆಗಿದ್ದುವು. ದ್ರೋಣರು ಕೂಡ ಪಾಂಡವರ ಪರವಾಗಿಯೆ ವಾದಿಸುತ್ತಿದ್ದರು. ಅದರಲ್ಲಿಯೂ ತಮ್ಮ ಪ್ರಿಯತಮ ಶಿಷ್ಯನಾಗಿದ್ದ ಅರ್ಜುನನ ಮೇಲೆ ಅವರಿಗೆ ತುಂಬಾ ಅಭಿಮಾನವಿತ್ತು. ಆದ್ದರಿಂದ ಅವರಿಬ್ಬರಿಂದ ತನ್ನ ಹರಿಬ ಪೂರಯಿಸುವುದಿಲ್ಲವೆಂದು ಕೌರವನಿಗೆ ಸಂಶಯವಿದ್ದೆ ಇತ್ತು. ಅದರಂತೆಯೆ ಆಗಿಯೂ ಆಯಿತು! ಮೊಂಡ ದುಶ್ಯಾಸನನು ತನ್ನ ಮೇಲ್ಮೆಗಾಗಿ ಮನಸ್ಸಿಟ್ಟು ಕಾದುವನೆಂದು ನಂಬುಗೆ ಇದ್ದರೂ ತಮ್ಮನ ಮೃಗೀಯ ಬಲದಲ್ಲಿ ಕುರುಕುಲ ಸಾರ್ವಭೌಮನಿಗೆ ಹೆಚ್ಚು ನೆಚ್ಚಿರಲಿಲ್ಲ. ಆತನ ನೆಚ್ಚೆಲ್ಲ ಕರ್ಣನ ಕೆಚ್ಚಿನಲ್ಲಿತ್ತು. ಕರ್ಣನೆ ತನ್ನ ಹಣೆಗಣ್ಣು ಎಂದು ತಿಳಿದಿದ್ದನು.

ಕುಮಾರವ್ಯಾಸನ ಕರ್ಣಪರ್ವವನ್ನು ಓದಿದರೆ ವಿಲಯಭೈರವನು ಸಿಡಿಲ್‌ಮಿಂಚುಗಳನ್ನು ಹಿಡಿದು ತಾಂಡವಗೈಯುತ್ತ ಕೋಲಾಟವಾಡುವ ಚಿತ್ರ ಮನಸ್ಸಿಗೆ ಬರುತ್ತದೆ. ಶಕ್ತಿಯೊಡನೆ ಶಕ್ತಿ ಸಂಘಟಿಸಿ ಮಿಂಚಿನ ಕಿಡಿಯೊಡನೆ ಸಿಡಿಲಿನ ಪುಡಿಯನ್ನು ಬೀರಿ ಚೆಲ್ಲಿ ತೂರಾಡುವ ಕರಾಳ ದೃಶ್ಯ ಕಣ್ಣಿಗೆ ಹೊಳೆಯುತ್ತದೆ:

ಆ ಕುರುಭೂಮಿಯು ತೋರುವುದು;
ಆ ರಣರಂಗದಲಿ,
ಆ ಸಂಗ್ರಾಮದಲಿ,
ಪಟು ಭಟರಾರ್ಭಟ ಕೇಳುವುದು!
ಮೈ ನವಿರೇಳುವುದು!
ಹೊಳೆಯುವ ಕೈದುಗಳಾಟದಲಿ,
ಕಲಿಗಳ ಕದನದ ಕೂಟದಲಿ,
ತಾಗುವ ಗದೆಗಳ ಸಂಘಟ್ಟಣೆಯಲಿ,
ರಥಚಕ್ರಧ್ವನಿ ಚೀತ್ಕಾರದಲಿ,
ಸಾಯ್ವರ ಶಾಪದಲಿ,
ಬೀಳ್ವರ ತಾಪದಲಿ,
ನಸು ಸೋತಿರುವರ ಕೋಪದಲಿ,
ನೆರೆ ಗೆದ್ದಿಹರಾಟೋಪದಲಿ,
ನುಗ್ಗುವ ಸೈನ್ಯದ ಹಾಹಾರವದಲಿ,
ಕೆನೆಯುವ ಹಯಗಳ ಹೇಷಾರವದಲಿ,
ಕಿವಿ ಬಿರಿಯುವುದು!
ಎದೆ ಮುರಿಯುವುದು!

ವೀರ ರವಿಸುತನ ಸೇನಾಪತ್ಯದಲ್ಲಿ ಪ್ರಥಮ ದಿನದ ಭೈರವ ಸಮರ ಮುಗಿಯಿತು. ಅ ದಿನ ಪಾಂಡವರ ಕೈ ಮೇಲಾಯಿತು. “ತಿಮಿರದ ತಾಯವನೆ ತಾನೆಂಬವೋಲ್ ನಿರ್ದಾಯದಲಿ ನುಂಗಿದುದು ಕತ್ತಲೆ ನಿಮಿಷದಲಿ ಜಗವ!” ಎರಡು ಪಕ್ಷದವರೂ “ಬಹು ವಿಧದ ವಾದ್ಯವಿಡಾಯಿ ಮಿಗೆ ನಲವಿಂದ ಹೊಕ್ಕರು ಪಾಳೆಯಂಗಳನು!” ತರುವಾಯ ಇರುಳೊಲಗ ನೆರೆಯಿತು. ಸಭೆಯಲ್ಲಿ “ಇಂದಿನಾಹವದೊಳಗೆ ಕುಂತೀನಂದನರ ಬೊಬ್ಬಾಟ ಬಲುಹಾಯ್ತೆಂದು ಮೆಲ್ಲನೆ ಮಾತು ತೆಗೆದನು ಕೌರವರ ರಾಯ! “

ಬಲುಹಲೇ! ಬಳಿಕೇನು? ಹಗೆಯಗ್ಗಳಿಕೆ ಮೆರೆಯದೆ? ಮುರವಿರೋಧಿಯ
ಬಲುಹ ನೋಡಾ ಪಾರ್ಥನೆಂಬವನಾವ ಮಾನಿಸನು?
ಬಲುಹ ಸಾರಥಿಯಂದ! ರಿಪುಗಳ ಗೆಲುವು ಸಾರಥಿಯಿಂದ! ಸಾರಥಿ
ಯೋಲಿದಡೆನಗಹುದೆಂದು ಕರ್ಣನು ಕೌರವನೊಳೆಂದ!

ತರುವಾಯ ಕೌರವೇಶ್ವರನು ಕರ್ಣನ ಅಭಿಲಾಷೆಯಂತೆ ಶಲ್ಯನನ್ನು ಸಾರಥಿಯಾಗಲು ಬೇಡುವನು, “ಮಾವ, ಸಾರಥಿಯಾಗಿ ಕರ್ಣನ ನೀವು ಕೊಂಡಾಡಿದಡೆ ಫಲಗುಣನಾವ ಪಾಡು?” ಎನಲು ಶಲ್ಯನು ಕೋಪದಿಂದಲೂ ಪರಿಹಾಸ್ಯದಿಂದಲೂ

“ಖೂಳನೆಂಬೆನೆ? ನೀನು ನಿಪುಣನು. ಬಾಲನೆಂಬೆನೆ? ಸಕಲ ಪ್ರೌಢಿಕೆ!
ಮೇಲೆ ಫಲಿತದ ಬಿಡು ಬಿಟ್ಟಿದೆ; ಹಾ ಮಹಾದೇವ!
ಹೇಳು, ಹೇಳಿನ್ನೊಮ್ಮೆ! ನುಡಿ, ನುಡಿ! ಕೇಳುವೆನು ಕಿವಿಯಾರ! ಕರ್ಣನ
ಕಾಳೆಗಕೆ ನಾವ್ ಸಾರಥಿಗಳೇ? ಶಿವಾ ಶಿವಾ!” ಎಂದ.

ಕ್ಷತ್ರಿಯವಂಶಜನೆಂಬ ಹೆಮ್ಮೆಯಿಂದ ಬೀತುಹೋದ ಶಲ್ಯನಿಗೆ ಸೂತಪುತ್ರನಾದ ಕರ್ಣನಲ್ಲಿ ತೇರೆಸಗುವುದು ಅವಮಾನಕರವಾಗಿ ತೋರಿದುದು ಆಶ್ಚರ್ಯವಲ್ಲ! ಆದರೆ, ಕೌರವನು ಹರನಿಗೆ ಬ್ರಹ್ಮನು ಸಾರಥಿಯಾದ ಕಥೆಯನ್ನೂ, ಅರ್ಜುನನಿಗೆ ಶ್ರೀಕೃಷ್ಣನೇ ಸಾರಥಿಯಾಗಿರುವ ಕಥೆಯನ್ನೂ ಹೇಳಿ ಮಾವನನ್ನು ಒಡಂಬಡಿಸುವನು. ಶಲ್ಯನು ಒಲ್ಲದ ಮನಸ್ಸಿನಿಂದ ಕರ್ಣನಿಗೆ ಸಾರಥಿಯಾಗಲು ಒಪ್ಪುವನು. ಆದರೆ ರಣರಂಗದಲ್ಲಿ ಮಾದ್ರೇಶನು ಕೀಳ್ಬಗೆಯಿಂದ ವರ್ತಿಸಿ, ವೀರರಿಗೆ ತಗದ ಮಚ್ಚರದಿಂದ ಅಂಗನೃಪಾಲನನ್ನು ಬೈದು ಕೌರವನು ಮೇಲ್ಮೆಯನ್ನೆ ಕೀಳು ಮಾಡುತ್ತಾನೆ!