ಮಹಾಭಾರತ ಅನೇಕ ಮಹಾಪುರುಷರ ಜೀವನವಾಹಿನಿಗಳು ದಾನ ಮಾಡುವ ಮಹಿಮಾಮಯ ಸಲಿಲದಿಂದ ಪರಿಪೋಷಿತವಾಗಿ, ರಸಪೂರ್ಣ ಸನ್ನಿವೇಶಗಳೆಮ್ಬ ಮಹಾ ಕಲ್ಲೋಲಗಳ ರುದ್ರರಮಣೀಯ ವಿನ್ಯಾಸದಿಂದ ಶೋಭಿಸುತ್ತಿರುವ ಒಂದು ಮಹಾ ವಿಶಾಲ ವಾರಿಧಿ. ಅದು ವೀರರ, ರಮಣಿಯರ, ರಾಜರ, ರಾಜತಂತ್ರ ವಿಶಾರದರ, ದುರ್ಜುನರ, ಸಜ್ಜನರ, ಋಷಿಗಳ, ಕಾಗಿಗಳ, ಮಾನವರ, ದಾನವರ, ಅಮರರ, ಅಸುರರ ಜೀವಮಾನಗಳೆಂಬ ಬಣ್ಣಬಣ್ಣದ ಸೂತ್ರಗಳನ್ನು ಕುಶಲತೆಯಿಂದ ನೆಯ್ದು ಮಾಡಿದ ಕಲೆಯ ಬಲೆ. ಅದು ಮನುಷ್ಯನ ಎದೆಯ ಬಾಳ್ವೆಯಲ್ಲಿ ಹೊಳೆದು, ಸುಳಿದು, ಹೊಮ್ಮಿ, ಚಿಮ್ಮಿ, ನಲಿದಾಡುವ, ಮೂಡುವ, ಬಾಡುವ ಕರುಣೆ, ಶೋಕ, ಭಕ್ತಿ, ಪ್ರೇಮ, ರಾಗ ದ್ವೇಷ, ಛಲ, ಬಲ ಮೊದಲಾದ ಭಾವರತ್ನಗಳನ್ನು ಒಳಕೊಂಡು ಕಂಗೊಳಿಸುತ್ತಿರುವ ಮಣಿಯ ಗಣಿ. ಅದು ಮಹಾ ಶಕ್ತಿಗಳ ಸಂಗಮಸ್ಥಾನ; ಸಹೃದಯದ ಉದ್ಯಾನ. ಅದು ಸನಾತನ ಬಾರತ ಸಂಸ್ಕ್ರತಿಗಳ ಪುಣ್ಯನಿಧಿ; ಪುರಾಣಪಾವನ ಪ್ರತಿಬಿಧಿ.

ಭಿನ್ನ ಭಿನ್ನ ಪರ್ವತ ಪ್ರಾಂತಗಳಲ್ಲಿ ಜನಿಸಿ, ಭಿನ್ನ ಭಿನ್ನ ಋಜುಕುಟಿಲ ಮಾರ್ಗಗಳಲ್ಲಿ ಪ್ರವಹಿಸಿ ಬರುವ ಆ ಜೀವನವಾಹಿನಿಗಳೆಲ್ಲವೂ ಸರ್ವತ್ರ ನಮ್ಮ ಕಣ್ಣಿಗೆ ಬೀಳುವುದಿಲ್ಲ. ಜನ್ಮಸ್ಥಾನದಿಂದ ಹಿಡಿದು ಸಂಗಮ ಸ್ಥಾನದವರೆಗೂ ಎಲ್ಲೆಲ್ಲಿಯೂ ಯಾವಾಗಲೂ ನಮಗೆ ಗೋಚರಿಸುತ್ತಲೇ ಇರುವ ತರಂಗಿಣಿಗಳೆಂದರೆ ಎಲ್ಲೋ ಒಂದೆರಡು ಮಾತ್ರ. ಉಳಿದ ಹೊಳೆಗಳಲ್ಲಿ ಕೆಲವು ಹುಟ್ಟುವಾಗ ತೋರಿ, ನಡುವೆ ದಟ್ಟ ಬನಗಳ ಮರೆಯಲ್ಲಿಯೋ ಅಥವಾ ತಮಗಿಂತ ಹಿರಿಯ ತೊರೆಗಳ ಹೆಮ್ಮೆಯಾಟೋಪದ ಮೆರವಣಿಗೆಯಲ್ಲಿಯೋ ಮರೆಯಾಗಿ, ಅಜ್ಞಾತವಾಗಿ, ಸಮಯ ಸಿಕ್ಕಿದಾಗ ಮಾತ್ರ ಅಲ್ಲಲ್ಲಿ ಪುನರಪಿ ಪ್ರಕಾಶಗೊಂಡು, ಅವಶ್ಯಬಿದ್ದಾಗ ಮಾತ್ರ ಪ್ರಖ್ಯಾತವಾಗಿ, ಕಡಲಿಗೆ ಬೀಳುತ್ತವೆ. ಮತ್ತೆ ಕೆಲವು ನದಿಗಳು ಎಲ್ಲಿ ಹುಟ್ಟುವುವೋ, ಎಂತು ಬೇಳೆಯುವುವೋ, ನಮಗೆ ತೋರುವುದಿಲ್ಲ; ಆದರೆ ಮಧ್ಯಮಾರ್ಗದಲ್ಲಿ ಯಾವುದೋ ಒಂದು ಅರಣ್ಯದಿಂದ ಇದ್ದಕ್ಕಿದ್ದಹಾಗೆ ಚಿಮ್ಮಿ ನಮ್ಮ ಗಮನವನ್ನು ತಮ್ಮ ಕಡೆಗೆ ಸೆಳೆಯುತ್ತವೆ. ಅಂತೂ ಆ ನದಿಗಳ ಪ್ರವಾಹಪಥಜಾಲ ಕೌತುಕಕಾರಿಯಾಗಿದೆ.

ಈ ಕಲೆಯ ಬಲೆಯಲ್ಲಿ ಯಾವುದಾರರೋಂದು ವ್ಯಕ್ತಿಯ ಜೀವಮಾನವನ್ನು ಬುಡದಿಂದ ತುದಿಯವರೆಗೂ ನೋಡಬೇಕಾದರೆ ಇಲ್ಲಿ ತೋರಿ, ಮರೆಯಾಗಿ, ಇಲ್ಲಿ ಸುತ್ತಿ, ಅಲ್ಲಿ ಮುತ್ತಿ, ಕಾಲಜಾಲದಲ್ಲಿ ಹೆಣೆದುಕೊಂಡು ಸಂಚರಿಸುವ ಜೀವನ ಸೂತ್ರವನ್ನು ಬಹು ಎಚ್ಚರಿಕೆಯಿಂದ, ಜಾಣ್ಮೆಯಿಂದ ಸಿಕ್ಕುಬಿಡಿಸಿ ಅನುಸರಿಸಬೇಕು. ಅಷ್ಟೇ ಅಲ್ಲ; ದಾರಿ ಗೋಚರಿಸದ ತಾಣದಲ್ಲಿ ಹುದುಗಿಕೊಂಡಿರುವ ಅದರ ಅಂದ ಚೆಂದಗಳನ್ನು ಪ್ರತಿಭೆಯಿಂದ ಕಲ್ಪಿಸಿ ಅದರ ಪೂತಸುಂದರ ಯಾತ್ರೆಗೆ ಪೂರ್ಣತೆಯನ್ನು ನಿವೇದಿಸಬೇಕು. ಹಾಗೆ ಮಾಡದೆ ಇದ್ದರೆ ನಮ್ಮ ಕಾರ್ಯವೂ ಸಫಲವಾಗುವುದಿಲ್ಲ; ಕೃತಿಕಾರನಿಗೂ ಅನ್ಯಾಯಮಾಡಿದಂತಾಗುತ್ತದೆ. ಏಕೆಂದರೆ ನಮ್ಮದು ವ್ಯಷ್ಟಿದೃಷ್ಟಿ; ಬರೆದವನದು ಸಮಷ್ಟಿದೃಷ್ಟಿ. ಕಲೆಯ ಬಲೆಯನ್ನು ನೆಯ್ದವನಿಗೆ ಬಣ್ಣದ ದಾರಗಳು ಸಾಧನ ಸಾಮಗ್ರಿಗಳೆ ಹೊರತು ಅವು ಸಿದ್ಧಿಯ ಪರಿಪೂರ್ಣತೆಯಲ್ಲ ಎಂಬುದನ್ನು ನಾವು ಮರೆಯಬಾರದು. ಆದರೆ ಇನ್ನೊಂದು ವಿಷಯವನ್ನು ನೆನಪಿನಲ್ಲಿ ಇಟ್ಟಿರಬೇಕು. ಅದೇನೆಂದರೆ, ಸೂತ್ರವನ್ನು ಅದರ ಕಲಾಮಯವಾದ ಆವರಣ ಸನ್ನಿವೇಶದಿಂದ ನಾವೆಂದಿಗೂ ಸಂಪೂರ್ಣವಾಗಿ ಪ್ರತ್ಯೇಕಿಸಿ ಬಿಡಬಾರದು. ಏಕೆಂದರೆ ಸಾಮಾನ್ಯ ದೃಷ್ಟಿಯಿಂದ ಸೂತ್ರದಿಂದ ಸೂತ್ರಕ್ಕೆ ಇರುವ ಮೈತ್ರಿ ಸಮುಚ್ಚಯ ಸಂಬಂಧವಾದರೂ ಕಲಾದೃಷ್ಟಿಯಿಂದ ನೋಡಿದರೆ ರತ್ನಕಂಬಳಿಗೂ ಅದರ ನರಗಳಿಗೂ ಇರುವ ಸ್ನೇಹ ಸಮವಾದ ಸಂಬಂಧವಾಗಿದೆ. ಅನೇಕ ಜನಗಳು ಸಮರಕಾರ್ಯಕ್ಕಾಗಿ ಒಟ್ಟುಗೂಡಿದರೆ ಅದು ಸೈನ್ಯವಾಗುತ್ತದೆ. ಆದರೆ ಬೃಂದಾವನದಲ್ಲಿರುವ ಶ್ರೀಕೃಷ್ಣ ಮತ್ತು ಗೋಪಿಯರ ಪ್ರೇಮಮಯ ಸಮ್ಮೇಳನ ಸೈನ್ಯವಾಗುವುದಿಲ್ಲ. ಆನೆಯನ್ನು ಕಟ್ಟಲು ತಯಾರುಮಾಡಿದ ಕಣ್ಣಿಯೂ ಸೂತ್ರ ಸಮ್ಮೇಳನ; ರತ್ನಕಂಬಳಿಯ ಸೂತ್ರ ಸಮ್ಮೇಳನ. ಅದರೆ ಮೊದನೆಯದು ಹಗ್ಗಗಾಳ ಬಲ್ಮೆಯ ಕಟ್ಟು, ಎರಡನೆಯದು ಅವುಗಳ ಒಲ್ಮೆಯ ಗುಟ್ಟು!

ಕನ್ನಡ ಮಹಾಭಾರತವೆಂಬ ಕಲಾಜಾಲವನ್ನು ನೆಯ್ದ ಕುಮಾರವ್ಯಾಸ ವೀರಕವಿ. ಆತನ ಲಾಲಿತ್ಯಕ್ಕೆ ಸ್ವಲ್ಪ ಒರಟುತನವೂ ಸೇರಿಕೊಂಡಿದೆ. ಆತನ ದಾರಗಳು ದಡಿಗವಾದವು; ಆತನು ಉಪಯೋಗಿಸುವ ಬಣ್ಣಗಳು ಭೀಮನಂಥವು. ಆತನ ಪಾತ್ರಗಳಲ್ಲಿ ಜೀವ ತುಂಬಿತುಳುಕುತ್ತಿದೆ, ಆದರೆ ಅವುಗಳಲ್ಲಿ ಸುಸಂಸ್ಕ್ರತ ಕೋಮಲ ರುಚಿಗಳಿಗೆ ಹೆಚ್ಚು ಎಡೆಯಿಲ್ಲ. ಕೋಪಬಂದರೆ ಹೊಡೆದೇಬಿಡುತ್ತಾರೆ. ದುಃಖವಾದರೆ ಅತ್ತೇಬಿಡುತ್ತಾರೆ. ಕರುಣೆ ಮೂಡಿದರೆ ಎದೆಗರಗಿಬಿಡುತ್ತಾರೆ. ಆತನ ಪಾತ್ರಗಳಿಗೆ ಹೆಚ್ಚು ಸಂಯಮಶಕ್ತಿಯಿಲ್ಲ. ಆದರೆ ಶಕ್ತಿ ಬೇಕಾದಷ್ಟಿದೆ. ಒಂದೇ ಮಾತಿನಲ್ಲಿ ಹೇಳಿಬಿಡುವುದಾದರೆ, ಆತನ ಪಾತ್ರಗಳೆಲ್ಲ ಭಾಗವತರಾಟದ ಧಿಮಿಧಿಮಿ ಕುಣಿತದ ವೀರ್ಯವತ್ತಾದ ವ್ಯಕ್ತಿಗಳು. ಭಾಗವತರಾಟದಲ್ಲಿಯೂ ನಯ, ಸೂಕ್ಷ್ಮತೆ, ಲಲಿತರುಚಿಗಳು ಅಲ್ಲಲ್ಲಿ ಮಿಂಚಬಹುದು. ಹಾಗೆಯೇ ಲಗಾಮಿಲ್ಲದ ನಾರಣಪ್ಪನ ಕುದುರೆಯ ನಾಗಾಲೋಟದಲ್ಲಿಯೂ ಅಲ್ಲಲ್ಲಿ ಸರಸನರ್ತನ ಗತಿಗಳು ಮೂಡಬಹುದು.

ಕುಮಾರವ್ಯಾಸ ಭಕ್ತಕವಿ. ಮಹಾಭಾರತ ಪುರಾಣ. ಶ್ರೀಕೃಷ್ಣ ಅವತಾರಪುರುಷ, ಭಗವಂತ, ಶ್ರೀಮನ್ನಾರಾಯಣ. ಅಷ್ಟೇ ಅಲ್ಲ; ಆತನು ಗದುಗಿನ ವೀರನಾರಾಯಣ. ನಾರಣಪ್ಪನಿಗೆ ಭಕ್ತಿಯೆ ಪ್ರಧಾನ ರಸ; ಧರ್ಮವೆ ಮುಖ್ಯ. ಕಲೆ, ಲಲಿತಕಲೆ, ಗೌಣ: ಧರ್ಮಬೋಧೆಗೆ ಸಹಾಯಕ ಮಾತ್ರ. ಆದ್ದರಿಂದ, ಆತನ ಇಷ್ಟದೈವ ಶ್ರೀಕೃಷ್ಣ. ಆತನ ಕಥಾನಾಯಕನೂ ಶ್ರೀಕೃಷ್ಣ. ಭಗವಂತ ಬಂದನೆಂದರೆ ಕೃತಿವಿಸ್ತಾರನಿಯಮನನ್ನು ಕೂಡ ಲೆಕ್ಕಿಸದೆ ಆತನ ಆಗಮನವನ್ನು ಬಣ್ಣಿಸುತ್ತಾನೆ. ಆತನ ಮಹಿಮೆಯನ್ನು ಬಾಯಿ ತುಂಬ ಮನದಣಿಯೆ ಹಾಡಿಬಿಡುತ್ತಾನೆ. ಭಕ್ತಿಯಿಂದ ಕಂಬನಿಗರೆಯುತ್ತಾನೆ. ಒಂದು ಸಂಧಿಯೆಲ್ಲ ಪೂರೈಸಿದರೂ ಸರಿಯೆ, ಸದಸ್ಯರಿಗೆ ಬೇಸರವಾದರೂ ಸರಿಯೆ, ಭಕ್ತಾಗ್ರಣಿಗಳು ಕೂಡ ಬೇಸರದಿಂದ ರೇಗಿಬಿದ್ದರೂ ಸರಿಯೆ, ದೇವರಿಗೆ ಕೂಡ ಮುಖಸ್ತುತಿಯನ್ನು ಕೇಳಿ ಕೇಳಿ ರೇಜಿಗೆ ಹಿಡಿದರೂ ಸರಿಯೆ, ಕುಮಾರವ್ಯಾಸ ಮಾತ್ರ ಕೈ ಮುಗಿದುಕೊಂಡು, ಆನಂದಬಾಷ್ಟಗಳನ್ನು ಸುರಿಸುತ್ತ, ಭಾವಾವಿಷ್ಟನಾಗಿ ಹಾಡಿಯೇ ಹಾಡುವನು; ಸ್ತೋತ್ರಮಾಡಿಯೇ ಮಾಡುವನು; ಭಕ್ತ, ಭಾಗವತ, ಭಗವಾನ್ ಈ ಮೂವರೂ ಆ ಕಂಬನಿಯ ತೊರೆಯಲ್ಲಿ ಕೊಚ್ಚಿಕೊಂಡು ಹೋಹನ್ನೆವರಂ! ಕುಮಾರವ್ಯಾಸ ವೀರಕವಿ, ಭಕ್ತಕವಿ!

ಹೀಗಿರುವಾಗ, ಯಾರಿಗಾಗಿ ಭಗವಂತ ಅವತಾರಮಾಡಿದನೊ, ಯಾರ ಪಕ್ಷವನ್ನು ವಹಿಸಿ ಯುದ್ಧಮಾಡಿದನೊ, ಯಾರ ಶ್ರೇಯಸ್ಸಿಗಾಗಿ ತನ್ನ ಪ್ರತಿಜ್ಞೆಗೆ ಭಂಗವನ್ನು ತಂದುಕೊಂಡಾದರೂ ಸುದರ್ಶನವನ್ನು ಕೈಯಲ್ಲಾಂತ ತೇರಿನಿಂದ ಧುಮುಕಿ ಪ್ರಳಯೋಲ್ಕೋಪಮ ಕೋಪದಿಂದ ರಣದಲ್ಲಿ ಮುಂದೆ ನುಗ್ಗಿದನೊ ಅಂಥ ಪಾಂಡವರೆ ನಾರಣಪ್ಪನಿಗೆ ಗೌಣವಾಗಿರುವಾಗ ಭಗವಂತನ ಪ್ರತಿಪಕ್ಷದವನಾದ ಕರ್ಣನಿಗೆ ಕವಿಯಿಂದ ಎಷ್ಟು ತಾನೆ ಪ್ರಾಧ್ಯಾನ್ಯ ದೊರಕೀತು? ನಾಯಕನನ್ನು ಮೇಲೇರಿಸಬೇಕಾದರೆ ನಾಯಕನಿಂದ ಹತನಾಗುವ ಪ್ರತಿನಾಯಕನನ್ನು ಎಷ್ಟರಮಟ್ಟಿಗೆ ಎತ್ತಬೇಕೊ ಅಷ್ಟರಮಟ್ಟಿಗೆ ಮಾತ್ರ ಕರ್ಣನನ್ನು ಮೇಲೇರಿಸಿದ್ದಾನೆ. ಕುರಿಯನ್ನು ಕೊಬ್ಬಿಸುವುದು ಕುರಿಯ ಆರೋಗ್ಯಕ್ಕಲ್ಲ, ಕುರುಬನ ಉದರ ಸೌಭಾಗ್ಯಕ್ಕೆ!

ಆದರೂ ಕರ್ಣನು ಕವಿಯಿಂದ ಇನ್ನೂ ಶ್ರೇಷ್ಠತರವಾದ ಆದರಣೆಗೆ ಪಾತ್ರನಾಗಲು ಅರ್ಹನಾಗಿರುವ ಮಹಾಪುರಷನಾದರೂ, ಆತನಿಗೆ ತಕ್ಕಷ್ಟು ತೇಜಸ್ಸು ದೊರಕದೆಹೋಗಿಲ್ಲ. ಅಷ್ಟೆ ಅಲ್ಲ; ಕೆಲವೆಡೆಗಳಲ್ಲಿ ಕರ್ಣನನ್ನು ಅಪ್ರತಿಮವೀರನನ್ನಾಗಿ ಕವಿ ಚಿತ್ರಿಸಿದ್ದಾನೆ. ಕುಮಾರವ್ಯಾಸ ಧರ್ಮಗುರುತ್ವವನ್ನು ಆರೋಪಿಸಿಕೊಂಡಿದ್ದರೂ, ಕೆಲವು ಸನ್ನಿವೇಶಗಳಲ್ಲಿ ಆತನ ಕಬ್ಬಿಗತನ ಆತನ ಧರ್ಮಗುರುತ್ವವನ್ನು ಮೆಟ್ಟಿ ತುಳಿದು ಸುರಂಜಿತವಾಗಿ ಹೆಡೆಯೆತ್ತಿ ನಿಂತಿದೆ.

ಕರ್ಣ ದುರಂತವ್ಯಕ್ತಿ. ಕುಮಾರವ್ಯಾಸ ಕರ್ಣನೂ ದುರಂತವ್ಯಕ್ತಿ. ಎಂದರೆ ತುದಿಯಲ್ಲಿ ಅನ್ಯಾಯದಿಂದ ಅಕಾಲಮೃತ್ಯುವಿಗೆ ತುತ್ತಾದ ಜೀವವಾತನದೊ; ಅಷ್ಟೆ ಹೊರತು ಅ ಕಲ್ಯಾಣದಿಂದ ಕೊನೆಗಂಡ ಜೀವನವಲ್ಲ. ತನ್ನ ಸ್ವಾಮಿಯ ಶ್ರೇಯಸ್ಸಿಗಾಗಿ, ಮಿತ್ರನ ಮೇಲ್ಮೆಗಾಗಿ, ಮೂರು ಲೋಕಗಳೂ ಮೆಚ್ಚುವಂತೆ ಮೀರ್ಯದಿಂದ ಸಮರರಂಗದಲ್ಲಿ, ಶ್ರೀಕೃಷ್ಣ ಅರ್ಜುನರಂಥ ಪ್ರತಿವೀರರ ಭೀಷಣ ಸಮ್ಮುಖದಲ್ಲಿ ಖಾಡಾಖಾಡಿಯಾಗಿ ಹೋರಾಡಿ, ಮಾರಾಂತವರ ಕ್ಲೈಬ್ಯವೂ ಹೃದಯ ದೌರ್ಬಲ್ಯವೂ ತಂದೊಡ್ಡಿದ ಅನಾರ್ಯವೂ ಅನ್ಯಾಯವೂ ಅಧರ್ಮವೂ ಆದ ಕೈತವಕ್ಕೆ ತುತ್ತಾದ ಮೀರಮೂರ್ತಿ ಸ್ನೇಹಮೂರ್ತಿ ದಾನಮೂರ್ತಿ ಉದಾರ ಕರ್ಣನ ಅಂತ್ಯ ಹೇಗೆತಾನೆ ಅಮಂಗಳವಾದೀತು?

ಪ್ರಾಚ್ಯರಲ್ಲಿ ರುದ್ರಕಾವ್ಯ, ಲಲಿತಕಾವ್ಯ, ದುರಂತನಾಯಕ ಎಂಬ ಕಾವ್ಯತತ್ವಗಳು ಪಾಚೀನವಾದುವಲ್ಲ. ಪಾಶ್ಚಾತ್ಯ ಸಾಹಿತ್ಯ ಸಂಸ್ಕೃತಿಗಳ ಸಂಸರ್ಗದಿಂದ ಆ ಅಭಿಪ್ರಾಯಗಳು ನಮ್ಮಲ್ಲಿಗೆ ಇತ್ತೀಚೆಗೆ ಬಂದುವು. ಅವರಲ್ಲಿ ದುರಂತವ್ಯಕ್ತಿ ಎಂದರೆ, ಮೊದಲು ಉನ್ನತ ಸ್ಥಿತಿಯಲ್ಲಿದ್ದು, ಅನೇಕ ಸುಗುಣ ಪೂರ್ಣವಾಗಿದ್ದು, ಯಾವುದಾದರೊಂದು ಅಲ್ಪ ದೋಷದಿಂದ ಅಥವಾ ಮಾನಸಿಕ ದುರ್ಬಲತೆಯಿಂದ ಅಥವಾ ಯಾವುದಾದರೊಂದು ಗುಣದ ಅತ್ಯಾಧಿಕ್ಯದಿಂದ ಕ್ರಮೇಣ ದೋಷಿಯಾಗಿ ಅಥವಾ ಶಕ್ತಿಹೀನನಾಗಿ ಕಷ್ಟ ಪರಂಪರೆಗಳಲ್ಲಿ ಸಿಕ್ಕಿ ಅಧೋಗತಿಗಿಳಿದು ಮರಣಹೊಂದುವ ಅಥವಾ ಮರಣ ಸದೃಶವಾದ ದುರವಸ್ಥೆಗುರುಳುವ ವ್ಯಕ್ತಿ. ಅವರ ದುರಂತನಾಯಕರಲ್ಲಿ ಕಂಡುಬರುವ ದೋಷಗಳೆಂದರೆ ಸಾಮಾನ್ಯವಾಗಿ ದರಾಶೆ, ಅನಿಶ್ಚಯತೆ, ಸಂಶಯ, ಮರಣಕ್ಕೆ ಕಾರಣಗಳೆಂದರೆ ಆತ್ಮಹತ್ಯ ಅಥವಾ ಪಿತೂರಿ. ಅವರು ಜನ್ಮಾಂತರ, ಕರ್ಮಫಲ ಮೊದಲಾದವುಗಳನ್ನು ನಂಬದಿರುವುದರಿಂದ ಅವರಿಗೆ ಪ್ರತಿಯೊಂದಕ್ಕೂ ಪಾರ್ಥಿವ ಕಾರಣಗಳೆ ಬೇಕು; ಮಾನುಷವಾದ ಉಪಪತ್ತಿಗಳೆ ಬೇಕು. ಈ ಕಾವ್ಯತತ್ವಗಳ ದೃಷ್ಟಿಯಿಂದ ಕರ್ಣ ಎಷ್ಟರಮಟ್ಟಿಗೆ ದುರಂತ ವ್ಯಕ್ತಿಯಾಗುವನೆಂದು ಪರಿಶೀಲಿಸಿ ನೋಡೋಣ.

ಕರ್ಣ ಮೊದಲು ಉನ್ನತಸ್ಥಿತಿಯಲ್ಲಿದ್ದು ತರುವಾಯ ಅಧೋಗತಿಗಿಳಿದವನಲ್ಲ. ಅದಕ್ಕೆ ವಿರೋಧವಾಗಿ ಧೀವರಪುತ್ರತ್ವದಿಂದ ಕ್ಷತ್ರಿಯತ್ವಕ್ಕೆ ಏರಿ, ಅಂಗಾಧಿಪತಿಯಾಗಿ, ತನ್ನ ಕೀರ್ತಿಯ ಪ್ರಚಂಡಜ್ಯೋತಿ ಪ್ರಜ್ವಲಿಸುತ್ತಿರುವಾಗಲೆ, ಆ ಜ್ವಾಲೆಯ ನಟ್ಟನಡುವೆ ಭಸ್ಮೀಭೂತನಾದ ವ್ಯಕ್ತಿ. ಆತನ ದೋಷವೆಂದರೆ ಗುಣದ ಅತ್ಯಾಧಿಕ್ಯ. ಏಕೆಂದರೆ ದಾನದ ಹೆಸರಿನಲ್ಲಿ ತನ್ನ ಜೀವವನ್ನೆ ತ್ಯಜಿಸಿದನು. ಆತನಲ್ಲಿ ದುರಾಶೆಯೂ ಇಲ್ಲ; ಅನಿಶ್ಚಯವೂ ಇಲ್ಲ; ಸಂಶಯ ಪ್ರಕೃತಿಯೂ ಇಲ್ಲ. ಆತನು ಆತ್ಮಹತ್ಯೆ ಮಾಡಿಕೊಂಡವನಲ್ಲ. ಆತನ ಮರಣಕ್ಕೆ ಹೇಡಿಗಳ ಅಥವಾ ಮಚ್ಚರವುಳ್ಳವರ ಕ್ಷುದ್ರವ್ಯೂಹವೂ ಕಾರಣವಲ್ಲ. ಆದ್ದರಿಂದ ಈ ಮೇಲೆ ವಿಮರ್ಶಿಸಿದ ಕಾವ್ಯತತ್ವಗಳ ದೃಷ್ಟಿಯಿಂದ ಕರ್ಣ ದುರಂತ ವ್ಯಕ್ತಿಯಲ್ಲ.

ಇನ್ನು ಅದೃಷ್ಟ, ಕರ್ಮಫಲ, ವಿಧಿಲೀಲೆ. ಮಹಾಭಾರತದಲ್ಲಿ ಬರುವ ವ್ಯಕ್ತಿಗಳ ಗುಣಕಥನವನ್ನು ಮಾಡಬೇಕಾದರೆ, ಅವರ ಕಾರ್ಯಾಕಾರ್ಯಗಳನ್ನು ವಿಮರ್ಶಿಸಬೇಕಾದರೆ ಸಮಷ್ಟಿದೃಷ್ಟಿಯಿಂದ ಚ್ಯುತರಾಗಿಬಿಡಬಾರದು ಎಂದು ನಾವು ಹಿಂದಯೆ ಸೂಚಿಸಿದ್ದೇವೆ. ಏಕೆಂದರೆ ಸಮಸ್ತ ಮಹಾಭಾರತದ ಅಂತರಾಳದಲ್ಲಿ ಗುಪ್ತಗಾಮಿನಿಯಾದ ಅದೃಷ್ಟಶಕ್ತಿಪ್ರವಾಹವೊಂದು ಹರಿಯುತ್ತಿದೆ. ಆ ನಿರ್ದಾಕ್ಷಿಣ್ಯವಾದ ಶಕ್ತಿಪ್ರವಾಹದಲ್ಲಿ ಮಹಾಭಾರತದ ಮಹಾ ಮಹಾ ವ್ಯಕ್ತಿಗಳೆಲ್ಲರೂ, ಶ್ರೀಕೃಷ್ಣನೊಬ್ಬನನ್ನು ಬಿಟ್ಟು ಉಳಿದೆಲ್ಲರೂ, ಭೀಷ್ಮ, ದ್ರೋಣ, ಕರ್ಣ, ಕೌರವ, ಯುಧಿಷ್ಟಿರ, ಭೀಮ, ಅರ್ಜುನ, ದ್ರೌಪದಿ ಮೊದಲಾದವರೆಲ್ಲರೂ ಕೊಚ್ಚಿಕೊಂಡು ಹೋಗಿರುವರು. ಶ್ರೀಕೃಷ್ಣನೊಬ್ಬನನ್ನು ನಾವು ಹೊರಗಿರಿಸಬೇಕು; ಏಕೆಂದರೆ ಆತನಿಗೂ ಆ ಅದೃಷ್ಟಶಕ್ತಿ ಪ್ರವಾಹಕ್ಕೂ ಸಾಯುಜ್ಯ ಸಂಬಂಧವಿದೆ. ಶ್ರೀಕೃಷ್ಣ ಆ ಅವ್ಯಕ್ತಶಕ್ತಿಯ ಅಭಿವ್ಯಕ್ತ ವಿಗ್ರಹ ಮಾತ್ರ. ಆದ್ದರಿಂದ ಶ್ರೀಕೃಷ್ಣನನ್ನು ಉಳಿದು ಇನ್ನಾವ ವ್ಯಕ್ತಿಯ ಗುಣರಚನೆ ಮಾಡಬೇಕಾದರೂ ಈ ಅದೃಷ್ಟಶಕ್ತಿ ಪ್ರವಾಹವನ್ನು ಗಮನದಲ್ಲಿ ಇಟ್ಟುಕೊಂಡೇ ಇರಬೇಕು. ಭೀಷ್ಮ, ಕರ್ಣ, ಕೌರವ, ಅರ್ಜುನ, ಮೊದಲಾದ ವ್ಯಕ್ತಿಗಳಿಗೇನೊ ಇಚ್ಛಾಸ್ವಾತಂತ್ರ್ಯವಿದೆ; ಆದರೆ ಅದು ತೊರೆಯ ಹೊಯ್ಲಿನಲ್ಲಿ ಸಿಕ್ಕಿಬಿದ್ದು ಕೊಚ್ಚಿಕೊಂಡು ಹೋಗುತ್ತಿರುವ ಜಹಜಿನ ಇಚ್ಛಾಸ್ವಾತಂತ್ರ್ಯ. ಪ್ರವಾಹದ ವೇಗ ನಮ್ಮ ಕಣ್ಣಿಗೆ ಬೀಳದಿರಬಹುದು. ಆದರೆ ಪ್ರಬಲ ಶಕ್ತಿಯುಕ್ತವಾದ ದೊಡ್ಡ ಜಹಜುಗಳ ಹೋರಾಟ ವಿನಾಶಗಳನ್ನು ನೋಡಿಯಾದರೂ ಅಂತಹ ಶಕ್ತಿಯೊಂದಿದೆ ಎಂದು ಅನುಮಾನಿಸಬಹುದು. ಉಳಿದೆಲ್ಲರಂತೆ ಕರ್ಣನ ನೌಕೆಯೂ ಅಂತಹ ಸೆಳವಿಗೆ ಸಿಕ್ಕಿದೆ. ನೌಕೆಯ ಶಕ್ತಿಯಲ್ಲಿ ತುದಿಯಲ್ಲಿ ಅದಕ್ಕೊದಗುವ ಅಂತ್ಯದಿಂದ ನಿರ್ಣಯಿಸುವ ಬದಲು, ಅದರ ಧೈರ್ಯ ಸಾಮರ್ಥ್ಯ ಹೋರಾಟಗಳನ್ನು ನೋಡಿ ನಿರ್ಧರಿಸುವುದು ಮೇಲು. ಸಾವು ಬಾಳುಗಳೆಂದರೆ ಆಕಸ್ಮಿಕ ಪ್ರಸಂಗಗಳು. ಅವುಗಳಿಂದಲೆ ಆತ್ಮದ ಯೋಗ್ಯತೆಯನ್ನು ಪರೀಕ್ಷಿಸಬಾರದು.

ಕರ್ಣನ ದುರಂತತೆಯಿರುವುದು ಆತನ ಜೀವನದಲ್ಲಿಯೂ ಅಲ್ಲ; ಆತನ ಮರಣದಲ್ಲಿಯೂ ಅಲ್ಲ. ಆತನ ಜನನ ಜೀವನ ಮರಣಗಳನ್ನು ಕಣ್ಣಾರೆ ಕಾಣತಕ್ಕ ನಮಗೆ ಉಂಟಾಗುವು ಮರ್ಮಭೇದಿಯಾದ ಮನೋವ್ಯಥೆಯಲ್ಲಿ. ಆತನ ಜೀವಮಾನದಲ್ಲಿ ಬರುವ ಸನ್ನಿವೇಶಗಳನ್ನು ಒಂದೊಂದನ್ನಾಗಿ ತೆಗೆದುಕೊಂಡು ಪರಿಶೀಲಿಸಿದರೆ, ನಾವು ಹೆಮ್ಮೆಪಡುವೆವೆ ಹೊರತು ನೊಂದುಕೊಳ್ಳುವುದಿಲ್ಲ. ಆದರೆ ಆತನ ಜೀವನಯಾತ್ರೆಯನ್ನು ಹಿಂಬಾಲಿಸಿಕೊಂಡು ಹೋಗಿ ಆ ಸ್ನೇಹಮೂರ್ತಿಯ ರುದ್ರಭೂಮಿಯಲ್ಲಿ ನಿಂತಾಗ ಮಾತ್ರ ನಮಗೇನೂ ಒಂದು ಅನಿರ್ವಚನೀಯವಾದ ಹೃದಯವೇಧೆಯುಂಟಾಗುತ್ತದೆ. ಸೂರ್ಯನಿಗೆ ಮಗನಾಗಿ, ಕುಂತಿಯ ಪುತ್ರನಾಗಿ, ಪಾಂಡವನಾಗಿ, ಧರ್ಮಜನ ಅಗ್ರಜನಾಗಿ, ಕ್ಷತ್ರಿಯನೆ ಆಗಿ, ವೀರನಾಗಿ, ಕಡೆಯಲ್ಲಿ ಹೀಗಾಯಿತೆ ಎಂದು ಮಮ್ಮಲ ಮರುಗತ್ತೇವೆ.

ಕರ್ಣನ ದುರಂತತೆಗೆ ಯಾವ ದೋಷ ಕಾರಣ? ಯಾರ ಕರ್ಮ ಕಾರಣ? ಯಾರ ಶಾಪ ಕಾರಣ? ದಾನಿಯಾಗಿದ್ದುದು ಆತನ ದೋಷವೆ? ಇರಬಹುದು. ಪರುಶುರಾಮನ ಶಾಪದಿಂದ ಆತನಿಗೆ ಹಾಗಾಯಿತೆ? ಇರಬಹುದು. ಇಂದ್ರನಿಗೆ ವಜ್ರಕವಚವನ್ನು ಭಿಕ್ಷೆಯಿತ್ತುದು ತಪ್ಪೆ? ಮುರಾರಿಗೆ ಕರ್ಣಕುಂಡಲ ಅಮೃತಕಲಶಗಳನ್ನು ಈಡಾಡಿದುದು ಶಾಪವೆ? ಇರಬಹುದು. ತಾಯಿಗೆ ಮಾತು ಕೊಟ್ಟುದು ದೋಷವೆ? ಅದೂ ಇರಬಹುದು. ಆದರೆ ಈ ಕಾರಣಗಳೆಲ್ಲ ಮುಖ್ಯವಾದುವುಗಳಲ್ಲ. ಆತನ ಬಾಳಿನ ಹಾದಿಯನ್ನೇ ಬೇರೆಯೆಡೆಗೆ ತಿರುಗಿಸಿದ ಕಾರಣ ಬೇರೊಂದಿದೆ. ಅದಾವುದೆಂದರೆ ಕನ್ಯೆಯಾದ ಕುಂತಿ ಮಾಡಿದ ಮೊದಲ ತಪ್ಪು. ತಾಯಿಯ ತಪ್ಪಿಗೆ ಮಗನು ತನ್ನ ಬಾಳನ್ನು ಬೇಳಿದನು. ಕರ್ಣನ ದುರಂತತೆಗೆ ಪ್ರಬಲವಾದ ಪ್ರಥಮ ಕಾರಣವನ್ನು ಹುಡುಕಬೇಕಾದರೆ ನಾವು ಕುಂತೀದೇವಿಯ ಮೊದಲನೆಯ ತಪ್ಪಿನ ಕಡೆಗೆ ಹೋಗಬೇಕು.