ಅದೋ ಅಲ್ಲಿ! ದ್ವಾಪರಯುಗದ ಗಂಗಾತೀರದಲ್ಲಿ! ಹುಡುಗಿಯೊಬ್ಬಳು ಹುಡುಗಾಟದಲ್ಲಿ ತೊಡಗಿದ್ದಾಳೆ! ಎಂತಹ ಹುಡುಗಾಟ?

ಕರ್ಣನೆ ಜೀವಮಾನದ ದೃಶ್ಯಚಿತ್ರಗಳು ಮಹಾಭಾರತದಲ್ಲಿ ಅಲ್ಲಲ್ಲಿ ಚೆದರಿ ಹರಡಿಕೊಂಡಿವೆ. ಆತನ ಜನ್ಮಾಂಕುರದ ಚಿತ್ರ ಆದಿಪರ್ವದ ಮೂರನೆಯ ಸಂಧಿಯಲ್ಲಿ ವರ್ಣಿತವಾಗಿದೆ. ಮೂರನೆಯ ಸಂಧಿಯ ಸೂಚನಾಪದ್ಯ ಹೀಗೆಂದಿದೆ:

ಚಂಡಮುನಿಮಂತ್ರಾಹ್ವಯದಿ ಬರೆ ಚಂಡಕರ ತತ್ತೇಜನಾ ಹವ
ಚಂಡವಿಕ್ರಮನವನಿಯಲಿ ಜನಿಸಿದನು ಕಲಿಕರ್ಣ.

ಕವಿ ಹೆಚ್ಚು ವಿಳಂಬಮಾಡದೆ ಬೇಗಬೇಗನೆ ಕತೆಗೆ ಹಾರಿಬಿಟ್ಟಿದ್ದಾನೆ.

ನಾರಣಪ್ಪನು ಕಥೆಗಾರ ಕಬ್ಬಿಗ. ಕಥೆಗಾರನಿಗೆ ವರ್ಣನೆ ಮೊದಲಾದ ದೀರ್ಘ ಕ್ರಿಯೆಗಳು ಸರಿಹೋಗುವುದಿಲ್ಲ. ಕಥೆಗಾಗಿ ವರ್ಣನೆಯ ಹೊರತು ವರ್ಣನೆಗಾಗಿ ಕಥೆಯಲ್ಲ. ಕಥೆಯ ಕಡಲಾದ ಮಹಾಭಾರತವನ್ನು ಈಜಿ ದಾಟಲು ಹೊರಟ ಕವಿಹಂಸವು ಕಿರಿಯ ಅಥವಾ ಹಿರಿಯ ತೆರೆಗಳ ಮಧ್ಯೆ ಲೀಲೆಯಲ್ಲಿ ಕಾಲಕಳೆದರೆ ದಾರಿಸಾಗುವುದೆಂತು? ಕೈಕೊಂಡ ಕಜ್ಜ ಕೈಗೂಡುವುದೆಂದು? ಸಣ್ಣ ಕೊಳದಲ್ಲಿ ತೇಲುವ ನೀರ್ವಕ್ಕಿ ಕಿರುದೆರೆಗಳ ನಡುವೆ ತೇಲಾಡುತ್ತಾ ದಿನದ ಬಹುಭಾಗವನ್ನು ಕಳೆದರೂ ಅದರ ಭಾಗಕ್ಕೆ ದಡ ದೂರವಿರುವುದಿಲ್ಲ. ಅದು ಯಾವಾಗಬೇಕಾದರೂ ಬೇಗನೆ ದಡ ಸೇರಿಕೊಳ್ಳಬಹುದು. ಆದರೆ ಪಾರಾವಾರವನ್ನು ಹಾರ ಹೊರಟ ಅರಸಂಚೆ ಹಾಗೆ ತಳುವಿದರೆ ಕಜ್ಜಗೇಡು, ಪ್ರಾಣಾಪಾಯ. ಕುಮಾರವ್ಯಾಸನು ಅಂತಹ ಅರಸಂಚೆಯಂತೆ. ಅವನಿಗೆ ಕಥೆಯೆ ಕಡಲಿರುವಾಗ ಬಣ್ಣನೆಗೆಲ್ಲಿ ತಾವು? ಪ್ರಕೃತಿ ಪ್ರಿಯ ಕವಿಗಳಿಗೆ “ರಾತ್ರಿ ಕಳೆದು ಪ್ರಾತಃಕಾಲವಾಗಿ ಸೂರ್ಯನು ಮೂಡಿದನು” ಎಂಬುದನ್ನು ಹೇಳಬೇಕಾದರೆ ಕಡೆಯಪಕ್ಷ ಮೂರು ಪದ್ಯಗಳಾದರೂ ಬೇಕಾಗುತ್ತವೆ. ನಾರಣಪ್ಪ “ಜಾಳಿಸಿತು ತಮ ಮೂಡಣದ್ರಿಯ ಮೇಲೆ ಮೈದೋರಿದನು ರವಿ” ಎಂದು ಹೇಳಿ ಮುಂದೆ ಕಥೆಗೆ ಹಾರಿಬಿಡುತ್ತಾನೆ. ಆತನ ಕಥಾವಾಹಿನಿ ಮುಗ್ಗರಿಸದೆ ಹರಿಯುತ್ತದೆ. ಹದಿನೈದೆ ಪದ್ಯಗಳಲ್ಲಿ ಕುಂತಿಯ ಬಾಲ್ಯ, ದೂರ್ವಾಸರ ಆಗಮನ, ಅವರು ಕೋಪಗೊಂಡುದು, ಶಾಂತರಾದುದು, ಐದು ಮಂತ್ರಗಳನ್ನು ಮೆಚ್ಚಿಕೊಟ್ಟುದು, ಹುಡುಗಿ ಆಟದ ಗೊಂಬೆಗಾಗಿ ಮೊದಲನೆಯ ಮಂತ್ರದ ಪ್ರಯೋಗದಿಂದ ರವಿಯನ್ನು ಆಹ್ವಾನಿಸಿ ಕರ್ಣನನ್ನು ಪಡೆದು ಅಪವಾದ ಭೀತಿಯಿಂದ ಗಂಗೆಯಲ್ಲಿ ಹಾಕಿದುದು, ಸೂತನು ಕೊಂಡೊಯ್ದು ಸಾಕಿದುದು, ಮೊದಲಾದ ಘಟನೆಗಳೆಲ್ಲವನ್ನೂ ಹೇಳಿ ಮುಗಿಸಿಬಿಟ್ಟಿದ್ದಾನೆ. ಸಣ್ಣ ಸಣ್ಣ ಮಾತುಗಳಿಂದಲೆ ನಮ್ಮ ಕಣ್ಣಿನ ಮುಂದೆ ಚಿತ್ರಗಳು ನರ್ತಿಸಿ ನಲಿಯುವಂತೆ ಮಾಡಿದ್ದಾನೆ.

“ಮಗಳೆ ಬಾ, ಕಳ್ಳೈದು ಮಂತ್ರಾಳಿಗಳನು; ಇವು ಸಿದ್ಧಪ್ರಯೋಗವು. ಸೊಗಸು ದಿವಿಜರೊಳ್ ಆರ ಮೇಲುಂಟು ಅವರ ನೆನೆ, ಸಾಕು; ಮಗನು ಜನಿಸುವನು” ಎಂದು ಮುನಿವರ್ಯ ದುರ್ವಾಸನು ನಿಜಾಶ್ರಮಕ್ಕೆ ತೆರಳಿದನು. ತರುವಾಯ ಲಲನೆ ಕುಂತಿ

ಮಗುವುತನದಲಿ ಬೊಂಬಿಯಾಟಕೆ ಮಗುವನೇ ತಹೆನೆಂದು ಬಂದಳು;
ಗಗನ ನದಿಯಲಿ ಮಿಂದಳುಟ್ಟಳು ಲೋಹಿತಾಂಬರವ.
ವಿಗಡ ಮುನಿಪನ ಮಂತ್ರವನು ನಾಲಗೆಗೆ ತಂದಳು; ರಾಗರಸದಲಿ
ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ!

ಎಷ್ಟು ಸಂಕ್ಷೇಪವಾಗಿ, ಕಣ್ಣು ಮುಚ್ಚಿದ ಬಾಲೆಯ ಚಿತ್ರ ಕಣ್ಣಿಗೆ ಕಟ್ಟುತ್ತದೆ! ಭಗವಾನ್ ಸೂರ್ಯದೇವನು ಬಂದು “ಎನ್ನ ತೂಕದ ಮಗನಹನು ನೀನಂಜಬೇಡ” ಎನುತ ಕನ್ನಿಕೆಯ ಮುಟ್ಟಿದನು. “ಮುನ್ನಿನ ಕನ್ನೆತನ ಕೆಡದಿರಲಿ” ಎನುತ, ತನ್ನ ತೇರಿದ್ದೆಡೆಗೆ ತಿರುಗಿದನು ವಹಿಲದಲಿ. ಆಮೇಲೆ “ತಾವರೆಯ ಮಿತ್ರನ ಕರಗಿ ಕರುವಿನೊಳೆರೆದರೆಂದೆನೆ ಥಳಥಳಿಸಿ ತೊಳಗುವ ತನುಚ್ಛವಿಯ” ಮುದ್ದುಮಗನನ್ನು ಕಂಡು “ಬೆರಗಿನೊಳಿರ್ದಳಾ ಕುಂತಿ!” ಅರಿಯದ ಅಣುಗಿ ಮಗುವನ್ನು ಹಡೆದರೆ ಬೆರೆಗಾಗದೆ ಮತ್ತೇನು? ಒಂದೆಡೆ ಸಂತೋಷ; ಮಗುವನ್ನು ಹೆತ್ತ ಸಂತೋಷವಲ್ಲ, ಚೆಲುವಿನ ಗೊಂಬೆಯನ್ನು ಕಂಡು ಸಂತೋಷ. ಒಂದು ಕಡೆ ಲಜ್ಜೆ; ಮತ್ತೊಂದು ಕಡೆ ಕುಲದ ನಿರಿ ತಪ್ಪುವುದೆಂಬ ಭಯ. ತರಳೆ ಸರ್ವಲೋಕದ ತಾಯಿಯಾದ ಜಾಹ್ನವಿಯನ್ನು ಸಂಬೋಧಿಸಿ ಮಗುವನ್ನು “ಗಂಗಾಜಲದೊಳಗೆ ಹಾಕಿದಳು ಜನದಪವಾದ ಭೀತಿಯಲಿ!” ಎಂತಹ ಘೋರಕರ್ಮ! ಕರ್ಣಜನನದ ಭಯಂಕರವಾದ ಸತ್ಯ ಕರುಣಾಮಯವಾದ ಪುರಾಣದ ಹದುಳ ತಕ್ಕೆಯಲ್ಲಿ ಸಿಕ್ಕಿ ಮಂಗಳ ಮನೋಹರವಾಗಿದೆ. ಆದರೂ ಆ ಮಳೆಬಿಲ್ವಣ್ಣದ ಜವನಿಕೆಯ ಹಿಂದಿರುವ ನನ್ನಿ ಅಸಹ್ಯ ಕಠೋರ!

ತಾಕೆ ಬಲ್ಲಂದದಲಿ ಕಂದನ ಕಾಯಿ ಮೇಣ್ ಕೊಲ್ಲೆನುತ ಕಮಲ ದ―
ಳಾಯತಾಕ್ಷಿ ಕುಮಾರಕನ ಹಾಕಿದಳು ಮಡುವಿನಲಿ!
ರಾಯ ಕೇಳೈ ಸಕಲ ಲೋಕದ ತಾಯಲಾ ಜಾಹ್ನವಿ? ತರಂಗದಿ
ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ!

ಮಹಾಭಾರತದ ಅಂತರಂಗದಲ್ಲಿ ಗುಪ್ತಗಾಮಿನಿಯಾಗಿ ಪ್ರವಹಿಸುವ ಅದೃಷ್ಟ ಶಕ್ತಿಯ ಪ್ರವಾಹವು ಸೂತನೊಬ್ಬನನ್ನು ಅಲ್ಲಿಗೆ ಎಳೆದು ತಂದಿತು. ಆತನು ಮಂಗಳ ಗಂಗೆಯ ತಡಿಯಲ್ಲಿ ಬಿದ್ದು “ಒದರುತ್ತಿದ್ದ ಶಿಶುಗಳರಸನ” ಕಂಡನು. ಆತನಿಗೆ ಲೋಕಾಪವಾದದ ಭೀತಿಯಲ್ಲಿ? ಸುಂದರ ಅರ್ಭಕನನ್ನು ಅಪ್ಪಿ ತೆಗೆದೊಯ್ದು ತನ್ನ ಪತ್ನಿಯಾದ ರಾಧೆಯ ಕೈಲಿ ಕೊಟ್ಟನು. ಅಲ್ಲಿ, ಬಡ ಗುಡಿಸಲಲ್ಲಿ, ಹಳ್ಳಿಯ ಹುಡುಗರ ಸಂಗದಲ್ಲಿ, ದುರ್ವಾಸಮುನಿಯ ಮಂತ್ರಬಲದಿಂದ ಕುಂತಿದೇವಿಯಲ್ಲಿ ಸೂರ್ಯದೇವನಿಗೆ ಸಂಭವಿಸಿದ ಗುರುಪರಾಕ್ರಮಿ ರವಿನಂದನನು ರಾಧೇಯ ನಾಮದಲಿ “ಬೆಳೆವುತಿರ್ದನು ಸೂತಭವನದಲಿ! “

ಈ ಮಧ್ಯೆ ವಿಧಿ, ಸೂತ್ರಧಾರನಾದ ವಿಧಿ, ಮುಂದೆ ನಡೆಯಲೆಬೇಕಾಗಿದ್ದ ಮಹಾ ಕುರುಕ್ಷೇತ್ರ ಸಂಗ್ರಾಮವೆಂಬ ತನ್ನ ನಾಟಕಕ್ಕೆ ಬೇಕಾದ ಪಾತ್ರಗಳ ಜೋಡಣೆಯ ಸನ್ನಾಹ ಕಾರ್ಯದಲ್ಲಿ ತೊಡಗಿತ್ತು. ಪಿತ್ತೂರಿ ನಡೆಸುತ್ತಿತ್ತು. ಕಾಲಗರ್ಭದಲ್ಲಿ ಕುಳಿತುಕೊಂಡು ಒಳಸಂಚು ಹೂಡಿ ನಿದ್ರಿಸುತ್ತಿದ್ದ ಭವಿಶ್ಯತ್ತನ್ನು ಮೆಲ್ಲನೆ ಕೆಣಕುತ್ತಿತ್ತು. ಮಹಾಭಾರತ ಯುದ್ಧಕ್ಕೆ ಮುನ್ನುಡಿ ಬರೆಯುತ್ತಿತ್ತು!

ಪುನಃ ರಾಧೇಯನನ್ನು ನಾವು ನೋಡುವುದು ಆದಿಪರ್ವದ ಆರನೆಯ ಸಂಧಿಯ ಕೊನೆಯ ಭಾಗದಲ್ಲಿ. ಶಿಶು ಸೂತಭವನದಲ್ಲಿ ಬೆಳೆದು ಬಾಲಕನಾಗಿ, ಉಪಾಯದಿಂದ ಕೊಡಲಿಗೊರವನಾದ ಪರುಶುರಾಮನಲ್ಲಿ ಶಸ್ತ್ರಾಭ್ಯಾಸಮಾಡಿ, ತರುಣನಾಗಿ, ಹಸ್ತಿನಾಪುರದಲ್ಲಿ ಶಸ್ತ್ರಪಂಡಿತ ದ್ರೋಣಾಚಾರ್ಯನ ಗರುಡಿಯಲ್ಲಿ ನಮ್ಮ ಕಣ್ಣಿಗೆ ಬೀಳುತ್ತಾನೆ. ಕರ್ಣನು ಪರುಶುರಾಮನಲ್ಲಿ ಹೇಗೆ ವಿದ್ಯೆ ಕಲಿತನೆಂಬ ವಿಚಾರವನ್ನು ಕವಿ ಆತನ ಬಾಯಿಂದಲೆ ಕರ್ಣಪರ್ವದ ಒಂಬತ್ತನೆಯ ಸಂಧಿಯ ಅಂತ್ಯಭಾಗದಲ್ಲಿ ಹೇಳಿಸಿದ್ದಾನೆ. ರವಿತನಯನು ತನಗೆ ಸಾರಥಿಯಾದ ಶಲ್ಯನೊಡನೆ ರಣರಂಗದಲ್ಲಿ ಹೇಳಿದ ಪೂರ್ವಕತೆಯಿದು:

ಝಳದ ಜೋಡಿಗೆ ಹೆದರಿ ಸೂರ್ಯನನುಳುಹುವನೆ ಕಲಿರಾಹು? ದಾವಾ
ನಳನ ದಳ್ಳುರಿಗಂಜುವುದೆ ಜೀಮೂತ ಸಂದೋಹ?
ಫಲುಗುಣನ ಕಣೆಗಿಣೆಯ ಪವನಜನಳಿಬಲವ ಕೈಕೊಂಬ ಕರ್ಣನೆ?
ತಿಳಿಯಲಾ ಮಾದ್ರೇಶ, ತನ್ನಯ ಬೆತೆಯ ಕೇಳೆಂದ:
ಪರುಶುರಾಮನ ಕಂಡು ಹೊಕ್ಕೆನು ಗರುಡಿಯನು ದ್ವಿಜನೆಂದು. ಕಲಿತೆನು
ವರಧನುರ್ವಿದ್ಯೆಯನು. ಪಡೆದನು ದಿವ್ಯಮಾರ್ಗಣವ.
ಸುರಪತಿಯ ಬೇಳಂಬವನು ವಿಸ್ತರಿಸಲೇತಕೆ? ವಜ್ರಕೀಟೋ
ತ್ಕರವ ಕಳುಹಿದರೆನ್ನ ತೊಡೆಗಳನುಗಿದುವವು; ಬಳಿಕ
ಅರುಣಜಲವುಬ್ಬೆದ್ದು ಮಗ್ಗುಲನುರವಣಿಸಲಾ ರಾಮಾ ನಿದ್ರಾ
ಭರದಲಿದ್ದವನೆದ್ದು ನೋಡಿದನೆನಗೆ ಕಡುಮುಳಿದು
‘ಧರಣಿಸುರ ನೀನೆಂದು ಠಕ್ಕಿಸಿ ಶರವ ಬೇಡಿದೆ. ಕಾಳಗದೊಳೀ
ಶರ ನಿರರ್ಥಕವಾಗಲೆಂ’ದನು ಶಾಪಹಸ್ತದಲಿ.

ನೀತಿಜಡರಾದವರು ಕರ್ಣನು ಸುಳ್ಳು ಹೇಳಿ ಅಸ್ತ್ರವಿದ್ಯೆ ಕಲಿತುದು ಅಧರ್ಮವೆಂದು ವಾದಿಸಬಹುದು. ತುದಿಯಲ್ಲಿ ಕರ್ಣನಿಗಾದ ಅಪಜಯ ಮರಣಗಳು ಅದಕ್ಕೆ ತಕ್ಕ ಪ್ರಾಯಶ್ಚಿತ್ತವೆಂದೂ ಹೇಳಬಹುದು. ಶಾಪದ ಮಹಿಮೆಗೆ ಎರಡರಲ್ಲ ಮೂರು ಕೋಡುಗಳನ್ನು ಬೇಕಾದರೂ ಬೆಳೆಯಿಸಬಹುದು. ಆದರೆ ತರುಣ ಕರ್ಣನ ಎದೆಯನ್ನು ಹೊಕ್ಕು, ಅಲ್ಲಿ ತಾಂಡವವಾಡುತ್ತಿದ್ದ ಕ್ಷಾತ್ರ ಗುಣಗಳನ್ನು ನೋಡಿದರೆ ನನ್ನಿ ಹೊರಬೀಳುತ್ತದೆ. ಮಹಿಮೆ ಎಷ್ಟು ದಿನ ತಾನೆ ಮೂಲೆಯಲ್ಲಿರಬಲ್ಲದು? ಧರ್ಮದಿಂದಲೊ ಅಧರ್ಮದಿಂದಲೊ ಹೇಗೊ ಅದು ಮೈದೋರಲೇಬೇಕು. ಸಿದ್ಧಿಯ ಮಂಗಳವೆ ಸಾಧನೆಯನ್ನು ಪಾವನಗೈಯುತ್ತದೆ. ಧ್ಯೇಯದ ಪುಣ್ಯವೆ ಮಾರ್ಗದ ಪಾಪವನ್ನು ತೊಳೆದುಬಿಡುತ್ತದೆ. ಪರುಶುರಾಮನು ಶಸ್ತ್ರವಿದ್ಯೆಗೆ ಅಧಿಕಾರಿಯಾದ ಕರ್ಣನನ್ನು ಬ್ರಾಹ್ಮಣನಲ್ಲವೆಂದು ತಿರಸ್ಕರಿಸಿಬಿಡುತ್ತಿದ್ದನು. ಗುರುವಿನ ಅಧರ್ಮವನ್ನು ಶಿಷ್ಯನು ಅಧರ್ಮದಿಂದಲೆ ಪರಿಹರಿಸಬೇಕಾಯಿತು.

ಕವಿ ಬಿಟ್ಟುಬಿಟ್ಟಿರುವ ರಾಧೇಯನ ಬಾಲ್ಯಜೀವನವನ್ನು ಓದುಗರು ತಮ್ಮ ಪ್ರತಿಭೆಗೆ ಅನುಗುಣವಾಗಿ ಕಲ್ಪಸಿಕೊಂಡು ಹಸ್ತಿನಾಪುರದ ಗರುಡಿಗೆ ನಮ್ಮೊಡನೆ ಬರಲಿ. ಕುಮಾರವ್ಯಾಸನು

ರಾಯ ಬಲ್ಲೈ ಮುನ್ನ ಶಿಶುವನು ತಾಯಿ ಬಿಸುಟಳು ಗಂಗೆಯಲಿ; ರಾ
ಧೇಯನಾದನು ರಾಧೆಯೆಂಬವಳೊಲಿದು ಸಾಕಿದೊಡೆ.
ಆಯತಾಕ್ಷನು ಪರಶುರಾಮನೊಳಾಯುಧದ ಶ್ರಮಗಲಿತು ಬಳಿಕದು
ವಾಯವಾದೊಡೆ ಬಂದನಾ ಗಜಪುರಿಗೆ ಕಲಿಕರ್ಣ.

ಎಂಬ ಒಂದೆ ಪದ್ಯದಲ್ಲಿ ಕರ್ಣನ ಪೂರ್ವಕಥೆಯನ್ನು ಪೂರೈಸಿಬಿಟ್ಟಿದ್ದಾನೆ. ಗಜಪುರಿಗೆ ಬಂದ ಕಲಿಕರ್ಣನು ದುರ್ಯೋಧನನನ್ನು ಹೋಗಿ ಕಂಡನು. ಮಿಂಚು ಗುಡುಗಿಗೆ ಕೆಳೆಯಾಗಿ ಸಿಡಿಲು ಮೂಡಿದ ಕತೆಯನ್ನು ಕವಿ ಸಂಕ್ಷೇಪವಾಗಿ ಬಣ್ಣಿಸಿದ್ದಾನೆ.

ಬಂದ ಹಸ್ತಿನಪುರಿಗೆ ರಾಧಾನಂದನನು. ದುರ್ಯೋಧನನ್ನೆ
ತಂದು ಕಂಡನು, ಕೌರವೇಶ್ವರ ಹಿರಿದು ಮನ್ನಿಸಿದ.
ಅಂದು ಮೊದಲಾಗವರ ಸಖ್ಯಕೆ ಸಂದ ಕಾಣೆನು; ಕರ್ಣ ಕುರುಪತಿ
ಗೊದೆ ಜೀವನವೊಂದೆ ಮನ ಮತವೊಂದೆ ಕೇಳೆಂದ.
ಬೇಟೆ ಕರ್ಣನ ಕೂಡೆ, ಹಗಲಿರಳಾಟ ಕರ್ಣನ ಕೂಡೆ, ಷಡುರಸ
ದೂಟ ಕರ್ಣನ ಕೂಡೆ, ಶಸ್ತ್ರಾಭ್ಯಾಸವವಗೊಡೆ.
ತೊಟಿ ಮನದಲಿ, ನಗೆಯ ಮಧುರದ ನೋಟ ಕಣ್ಣಿನೊಳುಳಿದವರ ಕೂ
ಡಾಟಗಳು; ತಾವಿಬ್ಬರೊಂದೆನಿಸಿದರು ಜಗವರಿಯೆ!

ಸಾಕು. ಈ ಮುದ್ದಾದ ಎರಡೇ ಭಾಮಿನಿ ಷಟ್ಪದಿಗಳು ಸಾಕು. ನಮ್ಮ ಹೃದಯಕ್ಕೆ, ನಮ್ಮ ಕಣ್ಣಿಗೆ ಕರ್ಣ ಕೌರವರ ಲೋಕವಿಖ್ಯಾತವಾದ ಸ್ನೇಹದ ಚಿತ್ರವನ್ನು ತರುವುದಕ್ಕೆ.

ಹಸ್ತಿನಾಪುರದ ಗರುಡಿಗೆ ಮಹಾಭಾರತದಲ್ಲಿ ಬಹು ಮುಖ್ಯವಾದ ಸ್ಥಾನವಿದೆ. ಮುಂದೆ ನಡೆಯುವ ಕುರುಕ್ಷೇತ್ರ ಸಂಗ್ರಾಮ ನಾಟಕಕ್ಕೆ ಆ ವ್ಯಾಯಾಮರಂಗವೆ ಅಭ್ಯಾಸರಂಗವಾಯ್ತು. ಮುಂದೆ ರಾಜ್ಯ ರಾಜರುಗಳನ್ನು ಸುಟ್ಟು ಬೂದಿಮಾಡಿದ ವೈರವಹ್ನಿಗೆ ಅಂಕುರಸ್ಥಾಪನೆಯಾದುದೂ ಆ ಗರುಡಿಲ್ಲಿಯೆ! ಕುಮಾರವ್ಯಾಸನು ನಮ್ಮನ್ನು ಅಲ್ಲಿಗೆ ಕರೆದುಕೊಂಡೇನೊ ಹೋಗುತ್ತಾನೆ. ಆದರೆ ನಮ್ಮೊಡನೆ ಹೆಚ್ಚು ಮಾತಾಡುವುದಿಲ್ಲ. ಆತನು ಸುಮ್ಮನೆ ನಿಂತು ನೋಡುತ್ತಾನೆ. ನಾವೂ ಹಾಗೆಯೆ ಮಾಡಬೇಕು. ಅಲ್ಲಿ ದಿನದಿನವೂ ಭೀಮ ದುರ್ಯೋಧನರಿಗೆ ಕಚ್ಚಾಟ! ಕುಲಗೋತ್ರವರಿಯದ ಕರ್ಣನನ್ನು ಕಂಡು ಅರ್ಜುನನಿಗೆ ತಿರಸ್ಕಾರ. ಅದಕ್ಕಿಂತಲೂ ಹೆಚ್ಚಾಗಿ ಬಿಲ್ವಿದ್ಯೆಲ್ಲಿ ತನ್ನನ್ನು ಮೀರಿಸುವ ಕರ್ಣನನ್ನು ಕಂಡು ಹೊಟ್ಟೆಯುರಿ. ಪಾಪ, ಆಚಾರ್ಯ ದ್ರೋಣನಿಗೆ ಬಹುಕಷ್ಟವಾಗಿರಬೇಕು ಆ ಪ್ರಚಂಡಶಕ್ತಿಗಳ ಢಕ್ಕಾಢಿಕ್ಕಿಯಲ್ಲಿ! ಅಂತೂ ಸಮರಕ್ಕೆ ಬೇಕಾದ ಸಿಡಿಗುಂಡುಗಳನ್ನು, ಮಾಡುವಾಗಲೆ ಸಿಡಿಯದಂತೆ, ಎಚ್ಚರಿಕೆಯಿಂದ ತಯಾರುಮಾಡಿದನು.

ಮತ್ತೊಂದು ದೃಶ್ಯ. ಆಚಾರ್ಯನ ನೇತೃತ್ವದಲ್ಲಿ ಸಿಂಹದ ಮರಿಗಳು ಬೆಳೆದುವು; ನಖಗಳು ಬಲಿತವು. ಇನ್ನು ಕಲಿತ ವಿದ್ಯೆಯ ಪ್ರದರ್ಶನವಾಗಬೇಕು. ಪರೀಕ್ಷೆಯಾಗಬೇಕು. ಒಂದು ದಿನ ಗುರು ಒಡ್ಡೋಲಗಕ್ಕೆ ಬಂದು ಧೃತರಾಷ್ಟ್ರ ಗಂಗಾಸೂನು ವಿದುರರಿಗೆ “ಇಂದು ಪರಿಯಂತರವು ನಿಮ್ಮಯ ನಂದನರನೋದಿಸಿದೆನವರಭಿನಂದನೀಯರೊ ನಿಂದ್ಯರೋ ನೀವ್ ನೋಡಬೇಕೆಂದ.” ಆಚಾರ್ಯನ ಇಷ್ಟದಂತೆ ಹೊಳಲಿನ ಹೊರವಳಯದ ಬಯಲಿನಲ್ಲಿ ಗರುಡಿಬಿಜ್ಜೆಯ ಪ್ರದರ್ಶನಕ್ಕಾಗಿ ವಿಶಾಲವಾದ ವ್ಯಾಯಾಮರಂಗ ಸಮೆದುದು. ಅದರ ಸುತ್ತಲೂ ಪ್ರೇಕ್ಷಕರಿಗಾಗಿ “ಉಪ್ಪರಿಗೆಗಳ ಹಂತಿಗಳನಂತಃಪುರವ ತತ್ಪಾರ್ಶ್ವದಲಿ ಭಾರಿಯ ಭದ್ರಭವನಿಕೆಯ” ವಿರಚಿಸಿದರು. ಆ ದಿನ ಗಜಪುರದಲ್ಲಿ ಎಲ್ಲಿ ನೋಡಿದರೂ ಗಜಿಬಿಜಿ. ಸಹಸ್ರ ಸಹಸ್ರ ಪುರಜನರು ತಂಡೋಪತಂಡವಾಗಿ ತಮ್ಮ ರಾಜಪುತ್ರರ ಜಾಣ್ಮೆ ಬಲ್ಮೆಗಳನು ನೋಡಲೋಸುಗ ವ್ಯಾಯಾಮರಂಗದ ಬಳಿ ನೆರೆದರು.

“ಸಂದಣಿಸಿ ನೃಪರಾಣಿವಾಸದ ಗೊಂದಣದ ದಂಡಿಗೆಗಳಿಳಿದುವು.” “ಬಂದರಾ ಗಾಂಧಾರಿ ಕುಂತಿಗಳಿಂದು ಮುಖಿಯರ ಮೇಳದಲಿ.” “ನಡೆತಂದುದಗಣಿತಪುರವಧೂ ನಿಕುರುಂಬವೊಗ್ಗಿ ನಲಿ!” ಆ ದೃಶ್ಯದ ವೈಭವ ಗಲಭೆ ಅಟ್ಟಹಾಸಗಳನ್ನು ಕವಿ ಸ್ವಾರಸ್ಯವಾಗಿ ಬರೆದಿದ್ದಾನೆ. ಪ್ರೇಕ್ಷಕವೃಂದ ನೆರೆದಮೇಲೆ ಕೌರವ ಪಾಂಡವ ರಾಜಪುತ್ರರು ವಂದಿಮಾಗಧ ಕೈವಾರಿಗಳ ಹೊಗಳಿಕೆಯ ನೀಳ್ದನಿಯ ಘೋಷಣದೊಡನೆ ಬಹು ವಿಜೃಂಭಣೆಯಿಂದ ವ್ಯಾಯಾಮರಂಗ ಪ್ರವೇಶ ಮಾಡಿದರು. ಕತ್ತೆತ್ತಿ ಕಣ್ಣರಳಿ ಕಾದುಕೊಂಡಿದ್ದರು ನೋಟಕರು. ಪ್ರದರ್ಶನ ಪ್ರಾರಂಭವಾಯಿತು. ಹೋರಾಟದ ನಡುವೆ ಭೀಮ ದುರ್ಯೋಧನರಿಗೆ ಹೋರಾಟ ಹುಟ್ಟಿತು. “ಎಲೆಲೆ ಹಿಡಿ ಹಿಡಿ ಭೀಮನನು ತೆಗೆ ಕೆಲಕೆ ದುರ್ಯೋಧನನ” ಎಂಬ ಬಲ್ಲುಲಿ ನೋಟಕರ ಬಾಯಿಂದ ಹೊರಟಿತು. ಕೃಪ ಗುರುಸುತರು ವಹಿಲದಿಂದ ನಡುವೆ ನುಗ್ಗಿ ಅವರಿಬ್ಬರನ್ನು ಬೇರೆ ಬೇರೆ ಕಡೆಗೆ ಕರೆದೊಯ್ದರು. ತರುವಾಯ “ಮೊಳಗಿದುವು ಕಲ್ಪಾಂತವನೆ ವಾದ್ಯತತಿ. ಕಳಕಳದೊಳರ್ಜುನ ದೇವನೆದ್ದನು ಮುನಿಯ ಸನ್ನೆಯಲಿ. ಈತನೇನರ್ಜುನನೆ? ಹೋ! ಹೋ! ಮಾತು ಮಾಣಲಿ, ಮಾಣಲಿ ಎಂಬೀ ಮಾತು ಹಿಂಚಿತು ಮುನ್ನ, ಮೌನದೊಳಿರ್ದುದಾಸ್ಥಾನ.” ಮುಂದೆ ಕವಿ ಅರ್ಜುನನ ಅಸ್ತ್ರಶಸ್ತ್ರಪ್ರಯೋಗ ಕೌಶಲವನ್ನು ಬಹಳ ವೀರ್ಯವತ್ತಾಗಿ ಆಗ್ರಹಪೂರ್ವಕವಾಗಿ ಹೊಗಳಿ ಹಾಡಿ ತುದಿಯಲ್ಲಿ ―

ಇವರ ಮುಖವರಳಿದುವು ಗಂಗಾಭವ ಕೃಪದ್ರೋಣಾದಿಗಳ. ಬಳಿ
ಕವರ ತಲೆವಾಗಿದುವು ಧೃತರಾಷ್ಟ್ರಾದಿ ಕೌರವರ.
ಇವರ ಜನನಿಯ ಮುಖದ ಸುಮ್ಮಾನವನು ದುರ್ಯೋಧನನ ಜನನಿಯ
ಜವಳಿದುಮ್ಮಾನವನು ಬಣ್ಣಿಸಲರಿಯೆ ನಾನೆಂದ.

ಎಂದು ಬರೆದಿದ್ದಾನೆ. ತನ್ನ ಮಕ್ಕಳ ಪರಾಕ್ರಮವನ್ನು ನೋಡಿ ಕುಂತಿಗೆ ಹೆಮ್ಮೆ ನೂರ್ಮಡಿಯಾಗಿರಬೇಕು. ಆದರೆ ಆ ಹಮ್ಮೆ, ಆ ಸಮ್ಮಾನ, ಸ್ವಲ್ಪ ಹೊತ್ತಿನಲ್ಲಿಯೆ ದುಮ್ಮಾನವಾಗುವುದನ್ನು ನಾವೆ ಕಣ್ಣಾರೆ ನೋಡುತ್ತೇವೆ.

ಯಾವಾಗ ಅರ್ಜುನನ ಪರಾಕ್ರಮವನ್ನು ನೋಡಿ ಬೆರಗುವಟ್ಟು ಜನವೃಂದ ತನ್ನ ಅಭಿನಂದನವಾಣಿಯನ್ನು ಬೀರತೊಡಗಿತೊ ಆಗ ದುರ್ಯೋಧನನಿಗೆ ಎದೆಯುರಿ ಹೆಚ್ಚಿತು. ಭೀಮನಿಗೆ ಸರಿಸಾಟಿಯಾಗಿ ತಾನೆ ನಿಂತು ತಮ್ಮವರ ಮಾನವನ್ನು ಕಾಪಾಡಿದ್ದನು. ಈಗ ಅರ್ಜುನನಿಗೆ ಎಣೆಯಾದ ಕರ್ಣನು ತನ್ನೊಡನೆ ಇರುವನೆಂಬುದನ್ನು ಬಲ್ಲ ಆತನು ತನ್ನ ಪ್ರೀತಿಯ ಸ್ನೇಹಿತನ ಕಡೆ ನೋಡಿದನೆಂದು ತೋರುತ್ತದೆ. ಗೆಳೆಯನ ಕಣ್ಣರಿತ ಕರ್ಣನು

ಬಾಯ ಹೊಯ್ ಫಲಗುಣನ ಹೊಗಳುವ ನಾಯಿಗಳನೇನಾಯ್ತು ಕೌತುಕ
ವಾಯಕಿವದಿರ ಪಕ್ಷಪಾತವ ನೊಡು ನೋಡೆನುತ.
ಸಾಯಕವ ತೂಗುತ್ತಲಾಕರ್ಣಾಯತಾಂಬಕನೆಡಬಲದ ಕುರು
ರಾಯನನುಜರ ಮೇಳದಲಿ ಹೊರವಂಟನಾ ಕರ್ಣ.

ನೆರೆದ ಜನಗಳಿಗೆ ಈತನ ಗುರುತಿಲ್ಲ. ಆದ್ದರಿಂದಲೆ ಅವರು “ಇವನಾರ್ ? ಈತನಾರ್?” ಎಂದು ಆಶ್ಚರ್ಯಪಟ್ಟರು. ಆದರೆ ಆ ಅಗಣಿತ ಜನಸಮೂಹದಲ್ಲಿ ಒಬ್ಬಳೆ ಒಬ್ಬ ಸ್ತ್ರೀಮೂರ್ತಿ ಬೆಚ್ಚಿಬಿದ್ದರಬೇಕು. ಕುಂತಿ ಕರ್ಣನನ್ನು ಗುರುತಿಸಿರಬೇಕು. “ಕಣ್ಣರಿಯದೊಡಂ ಕರುಳರಿಯದೆ?” ತನ್ನ ಹಿಂದಿನ ತಪ್ಪನ್ನು ನೆನೆದು ಮನನೊಂದುಕೊಂಡಿರಬೇಕು. ಹೋದ ಮಗನ್ನನ್ನು ಮರಳಿ ಕಂಡು ಸಂತೋಷಪಟ್ಟಿರಬೇಕು. ಹರ್ಷದುಃಖಗಳ ಗೊಂದಣದಲ್ಲಿ ಸಿಕ್ಕಿ ಗುಟ್ಟಾಗಿ ಕಂಬನಿಗರೆದಿರಬೇಕು.

ಆವ ವಿಧದಲಿ ಪಾರ್ಥ ತೋರಿದನಾವ ದಿವ್ಯಾಸ್ತ್ರ ಪ್ರಪಂಚವ
ಪಾವಕಾನಿಲ ವಾರುಣಾದಿಯನೈದೆ ವಿರಚಿಸಿದ
ಆ ವಿಧಾನದಲಾ ವಿಹಾರದಲಾ ವಿಬಂಧದಲರ್ಜುನನ ಬಾ
ಣಾವಳಿಯ ಬಿನ್ನಾಣವನು ತೋರಿದನು ಕಲಿ ಕರ್ಣ

ತರುವಾಯ ಪುನಃ ಕರ್ಣಾರ್ಜುನರಿಗೂ ಹೋರಾಟವಾಗುತ್ತದೆ. ಈ ಸಂದರ್ಭದಲ್ಲಿ ಕರ್ಣ ಕೌರವರ ಮೈತ್ರಿಯ ಬಂಧನ ಮತ್ತಿನಿತು ಬಿಗಿಯಾಗುವಂತಹ ಪ್ರಸಂಗ ಜರುಗಿತು. ಕೃಪಾಚಾರ್ಯನು ಕರ್ಣನನ್ನು ಕುಲಗೋತ್ರವಿಲ್ಲದವನೆಂದು ನಾಯಕತನವಿಲ್ಲದವನೆಂದು ಕ್ಷತ್ರಿಯನಲ್ಲವೆಂದು ಮೂದಲಿಸಿ, ಅವನು ಅರ್ಜುನನೊಡನೆ ಕಾಳಗವಾಡಲು ಯೋಗ್ಯನಲ್ಲವೆಂದು ಹೇಳಿ ಹೋರಾಟವನ್ನು ಬಿಡಿಸುತ್ತಾನೆ. ಅದನ್ನು ಕೇಳಿ ಕುಂತಿ ಮೂರ್ಛಾಪನ್ನೆಯಾದಳು. ಎಷ್ಟೆಂದರೂ ಹಡೆದ ಹೊಟ್ಟೆಯಲ್ಲವೆ?” ಖಿನ್ನನಾದನು ಕೃಪನ ನುಡಿಯಲಿ ದುಗುಡ ಮಿಗೆ ಕರ್ಣ. “

ಈ ಸಮಯದಲ್ಲಿಯಾದರೂ ಕುಂತಿ ನಿಜವನ್ನು ಸಾರಿ ಹಡೆದ ಮಗನ್ನನ್ನು ಮರಳಿ ಪಡೆಯಬಹುದಾಗಿತ್ತು. ರಾಧೇಯನನ್ನು ಕೌಂತೇಯನನ್ನಾಗಿ ಮಾಡಬಹುದಾಗಿತ್ತು. ಆದರೆ ಲೋಕಾಪವಾದ ಭೀತಿಯೆಂಬ ಭೂತ ತಾಯ್ತನವನ್ನು ಕರುಣೆಯಿಲ್ಲದೆ ಮುರಿದು ನುಂಗಿತು. ಆಕೆ ಸುಮ್ಮನಿದ್ದಳು. ಆದರೇನು? ಕರ್ಣನಿಗಾದ ಮುಖಭಂಗವನ್ನು ಕೌರವನು ತನ್ನದೆಂದೆ ಭಾವಿಸಿ

ಈತನರಸಲ್ಲೇಂದು ಕೃಪ ಪಳಿವಾತನೇ! ತಪ್ಪೇನು? ರಾಜ್ಯದೊ
ಳೀತನರಸೆನಿಸುವೆನು ಕರೆ, ನಮ್ಮಯ ಪುರೋಹಿತರ:
ಶಾತಕುಂಭಾಸನವ ಮಂಗಳಜಾತವಸ್ತುವ ತರಿಸು ತರಿಸೆಂ
ದಾ ತತುಕ್ಷಣದಲಿ ಸುಯೋಧನನೆದ್ದು ರಭಸದಲಿ.
ತರಿಸಿ ಭದ್ರಸದೋಳೀತಂಗಸುಪದವಿಯೊಳಂಗದೇಶದ
ಸಿರಿಯನಿತ್ತನು; ರಚಿಸಿದನು ಮೂರ್ಧಾಭಿಷೇಚನವ!

ಸೂತಪುತ್ರನು ಕ್ಷತ್ರಿಯನಾದನು; ಕ್ಷತಿಯನು ರಾಜನಾದನು! ಆಮೇಲೆ ಭೀಮ ದುರ್ಯೋಧನರಿಗೆ ಎರಡೆರಡು ಮಾತುಗಳಾದುವು. ಎಲ್ಲೆಲ್ಲಿಯೂ ಗಡಿಬಿಡಿಯೆದ್ದಿತು. “ಗುರು ಕೃಪರುಲುಹ ಕೇಳುವರಿಲ್ಲ; ಕೈದೊಳಸಾಯ್ತು ಕಳನೊಳಗೆ. “

ಕೆಲರು ಭೀಮನನರ್ಜುನನ ಕೆಲಕೆಲರು ಕರ್ಣನ ಕೌರವೇಂದ್ರನ
ಕೆಲರು ಹೊಗಳುತ ಬಂದು ಹೊಕ್ಕರು ಹಸ್ತಿನಾಪುರವ!

ಕರ್ಣ ಕೌರವರಿಬ್ಬರೂ ಕೆಳೆತನದ ತಕ್ಕೆಯಲ್ಲಿ ಒಂದಾದರು. ಅವರಿಬ್ಬರ ಸ್ನೇಹದ ಪಾವನತೆ ಅನನ್ಯ ಸಾಧಾರಣವಾದುದು. ನರಕವೂ ಕೂಡ ಆ ಮೈತ್ರಿಯ ಮಂಗಳತೆಯಿಂದ ಪುನೀತವಾಗದಿರದು. ಕೌರವನ ಶ್ರೇಯಸ್ಸೆ ಕರ್ಣನ ಶ್ರೇಯಸ್ಸಾರ್ಯಿತು. ಕರ್ಣನ ಸುಖವೆ ಕೌರವನ ಸುಖವಾಯಿತು. ಆ ಕೆಳೆತನದ ಕಕ್ಕೆ ಎಷ್ಟು ಬಿಗಿಯಾಗಿತ್ತೆಂದರೆ, ಮುಳುಗಿದರೆ ಇಬ್ಬರೂ ಮುಳುಗಬೇಕು; ಬದುಕಿದರೆ ಇಬ್ಬರೂ ಬದುಕಬೇಕು; ನರಕಕ್ಕೆ ಹೋಗುವುದಾದರೆ ಇಬ್ಬರೂ ಹೋಗಬೇಕು; ಸ್ವರ್ಗಕ್ಕಾದರೂ ಜೊತೆಗೂಡಿ ಹೋಗಬೇಕು.

ಮುಂದೆ ಕರ್ಣನ ಜೀವನವಾಹಿನಿ ಮಹಾಭಾರತದ ಮಹಾಘಟನೆಗಳ ಗೊಂಡಾರಣ್ಯದಲ್ಲಿ ಕಣ್ಮರೆಯಾಗುತ್ತದೆ. ಎಲ್ಲಿಯೋ ಕೆಲವೆಡೆಗಳಲ್ಲಿ ಮಾತ್ರ ಮಿಂಚಿ ಮುಂದುವರಿಯುತ್ತದೆ. ಪುನಃ ಆ ವಾಹಿನಿ ಹಿರಿದಾಗಿ ವೈಭವಯುಕ್ತವಾಗಿ ನಮ್ಮ ಕಣ್ಣಿಗೆ ಬೀಳುವುದು ಉದ್ಯೋಗಪರ್ವದ ಅಂತ್ಯಭಾಗದಲ್ಲಿ. ಈ ಮಧ್ಯೆ ಎನಿತೆನಿತೊ ಸಂಗತಿಗಳು ಜರುಗಿದುವು. ಕಥಾಮಯವಾದ ಸಭಾಪರ್ವ ಅರಣ್ಯಪರ್ವ ವಿರಾಟಪರ್ವಗಳು ಮಿಂಚಿಹೋದುವು. ಕೌರವಪಾಂಡವರ ವೈರದ್ರುಮ ಬೆಳೆಯಿತು. ಕೌರವನ “ಅನ್ಯಾಯ” “ಅಧರ್ಮ” ಗಳಲ್ಲಿ ಕರ್ಣನೂ ಮನಮುಟ್ಟಿ ಮುಳುಗಿದನು. ದುರ್ಯೋಧನನ ಇಷ್ಟವೆ ರವಿತನಯನ ಇಷ್ಟವಾಯಿತು. ಆತನ ಅನಿಷ್ಟವೆ ಈತನ ಅನಿಷ್ಟವಾಯಿತು. ಸುಯೋಧನನ ಶತ್ರುಗಳೆ ರಾಧೇಯನ ಶತ್ರುಗಳಾದರು; ಅವನ ಮಿತ್ರರೆ ಇವನ ಮಿತ್ರರಾದರು ಕೌರವನು ಕರ್ಣನನ್ನು ನೆಮ್ಮಿ ತೇಲಿದನು. ಕರ್ಣನೂ ಕೌರವನನ್ನು ನೆಮ್ಮಿ ತೇಲಿದನು. ತೇಲುತ್ತ ಹೋದಹಾಗೆಲ್ಲ ಅವರಿಬ್ಬರ ತಕ್ಕೆ ಬಿಗಿಯಾಯಿತು. ಅವನು ಇವನಿಗೆ ಧೈರ್ಯ ಹೇಳಿದನು; ಇವನು ಅವನಿಗೆ ಧೈರ್ಯವಾದನು. ಅವನ ಕೆಚ್ಚು ನೆಚ್ಚುಗಳು ಇವನ ನೆಚ್ಚು ಕಚ್ಚುಗಳಾದುವು. ತೇಲಿದರು, ತೇಲಿದರು, ಇಬ್ಬರೂ ಸ್ನೇಹವೆಂಬ ವಜ್ರನೌಕೆಯಲ್ಲಿ ಕುಳಿತು. ವಿಧಿ ದಡದಲ್ಲಿ ನಿಂತು ತನ್ನ ಕ್ರೂರ ಪರಿಹಾಸ್ಯದ ಜಯಗಾಥವನ್ನು ಉದ್ಘೋಷಿಸಿ “ಹೆದರಬೇಡಿ; ನುಗ್ಗಿ ಮುಂದಕ್ಕೆ!” ಎಂದು ವಿಕಟಾಟ್ಟಹಾಸಮಾಡಿತು.

ಆ ದಿನ ಸಂಧಿ ವಿಸಂಧಿಯಾದ ದಿನ. ಹಸ್ತಿನಾಪುರದಲ್ಲಿ ಗಜಿಬಿಜಿ. ಶ್ರೀಕೃಷ್ಣನ ರಾಯಭಾರವಂತೆ. ಮುರಿದುದಂತೆ. ಕೌರವನು ಹಿರಿಯರ ಧರ್ಮವಚನಗಳನ್ನು ಕೇಳಿಲಿಲ್ಲವಂತೆ. ಕರ್ಣ ದುಶ್ಯಾಸನರು ಒಪ್ಪಲಿಲ್ಲವಂತೆ. ಭಗವಂತನು ಡೊಂಬವಿದ್ಯೆಯನ್ನು ಪ್ರದರ್ಶಿಸಿದರೂ ಫಣಿಕೇತನನು ಮಣಿಯಲಿಲ್ಲವಂತೆ ಆ ದಿನ ಆಸ್ಥಾನದಲ್ಲಿ ಗಲಭೆಯಂತೆ! ಗಡಿಬಿಡಿಯಂತೆ! ಕುಮಾರವ್ಯಾಸನ ಕೌರವನು.

ಎನ್ನ ಹೃದಯದೊಳಿರ್ದು ಮುರಿವನು ಗನ್ನದಲ್ಲಿ ಸಂಧಿಯನು, ರಿಪುಗಳೊ
ಳಿನ್ನು ತನ್ನವರವರೊಳಿರ್ದಾ ನುಡಿವನೀ ಹದನ:
ಭಿನ್ನನಂತಿರೆ ತೋರಿ ಭಿನ್ನಾಭಿನ್ನಾನಂತಿರೆ ಮೆರೆವ, ತಿಳಿಯಲ
ಭಿನ್ನನೈ ಮುರವೈರಿ. ನಾವಿನ್ನಂಜಲೇಕೆಂದ?
ಹಳಚುವುವು ಹಾಹೆಗಳು ಸೂತ್ರವನಲುಗಿದೊಡೆ, ತತ್ಪುಣ್ಯ ಪಾಪಾ
ವಳಿಗಳಾ ಹಾಹೆಗಳಿಗುಂಟೇ ಸೂತ್ರಧರನಿರಲು?
ಕೊಲುವನನ್ಯರನನ್ಯರಿಂದವೆ; ಕೊಲಿಸುವನು ಕಮಲಾಕ್ಷನಲ್ಲದೆ
ಉಳಿದ ಜೀವವ್ರಾತಕೀ ಸ್ವಾತಂತ್ರ್ಯವಿಲೆಂದ.
ಇಳಿದನವನಿಗೆ ಧಾರುಣೆಯ ಹೊರೆಗಳೆಯಲೋಸುಗವಿಲ್ಲಿ ನಮ್ಮೊಳ
ಗೊಳಗೆ ವೈರವ ಬಿತ್ತಿ ಬರಿಕೈವನು ಮಹಾಬಲವ.
ಛಲಕೆ ಮಣಿಯದೆ ರಾವಣಾದಿಗಳಳಿದರಿದಲಾ ಕೀರ್ತಿ! ಕಾಯವಿ
ದಳಿವುದಗ್ಗದ ಕೀರ್ತಿಯುಳಿದಿರಲಂಜಲೇಕೆಂದ?
ನಾವು ಸಂಧಿಯನೊಲುವೆವೆಮ್ಮಯ ಭಾವದಲಿ ಹುಳುಕಿಲ್ಲ; ಸಂಪ್ರತಿ
ದೇವನಭಿಮತವಲ್ಲ, ಬಲ್ಲೆನು ಮುರಹರನ ಬರವ!
ನೀವು ಮೇಗರಯರಿತದವರೀ ರಾವಣಾರಿಯ ಬಗೆಯ ಬಲ್ಲೆನು;
ಸಾವೆನೀತನ ಕೈಯ ಬಾಯಲಿ; ಭೀತಿ ಬೇಡೆಂದ.
ಮಣಿದು ಬದುಕುವನಲ್ಲ; ಹಗೆಯಲಿ ಸೆಣಸಿ ಬಿಡುವವನಲ್ಲ. ದಿಟ! ಧಾ
ರುಣಿಯ ಸಿರಿಗೆಳಸುವವನಲ್ಲಳುಕಿಲ್ಲ ಕಾಯದಲಿ;
‘ರಣಮಹೋತ್ಸವವೆಮ್ಮ ಮತ!’ ಕೈದಣಿಯೆ ಹೊಯ್ದಾಡುವೆನು. ಕೃಷ್ಣನ
ಕೆಣಕಿದಲ್ಲದೆ ‘ವಹಿಲದಲಿ’ ಕೈವಲ್ಯವಿಲ್ಲೆಂದ.

ಗದುಗಿನ ಭಾರತದ ಅನೇಕ ಪಾತ್ರಗಳು ನೇಪಥ್ಯಮಂದಿರದಿಂದ ರಂಗಭೂಮಿಗೆ ಇಳಿದು ಬಂದ ಆಭಿನಯ ಚತುರರಂತೆ ತೋರುತ್ತಾರೆ. ರಂಗಭೂಮಿಯಲ್ಲಿದ್ದರೂ ನೇಪಥ್ಯಗೃಹವನ್ನು ಮರೆಯುವುದಿಲ್ಲ. ನೋಡುವವರಿಗೆ ಮಾತ್ರ ಭ್ರಾಂತಿದಾಯಕ! ಸರಿ, ಸೂತ್ರಧಾರನು ಸಂಧಿ ಮುರಿದುದೆಂದು ಬಹಳ ವ್ಯಸನವನ್ನು ನಟಿಸಿ ಹಿಂದಿರುಗುತ್ತಾನೆ. ಆತನ ಜೊತೆಯಲ್ಲಿ ರಾಜಮರ್ಯಾದೆಯಂತೆ ರಾಯಭಾರಿಯನ್ನು ಕಳುಹಿಸುತ್ತ ಭೀಷ್ಮ ಕರ್ಣ ಮೊದಲಾದವರು ಹೊರಡುತ್ತಾರೆ. ಕೃಷ್ಣನು ಕುಂತಿಯನ್ನು ಕಂಡು

ಇಂದು ಮುರಿದುದು ಸಂಧಿ; ನಿನ್ನಯ ಕಂದ ಕರ್ಣನ ಬೇಡಿಕೊಳು. ನೀ
ನೆಂದು ನೇಮಿಸಿ, ಮರಳಿದನು ಮುರವೈರಿ ‘ಹರುಷದಲಿ!’

ಮುರವೈರಿ “ಹರುಷದಲಿ” ಮರಳಿದನು. ಸ್ವಲ್ಪದೂರ ಹೋದ ಮೇಲೆ ತನ್ನನ್ನು ಓಲೈಸುತ್ತ ಬರುತ್ತಿದ್ದವರನ್ನು “ಉಚಿತೋಕ್ತಿಯಲಿ ಬೀಳ್ಕೊಟ್ಟ,” ಆದರೆ ಕರ್ಣನನ್ನು ಮಾತ್ರ ಇನ್ನೂ ಸ್ವಲ್ಪ ದೂರ ಬರುವಂತೆ ಕರೆಯುತ್ತಾನೆ.

ಎಂದು ಗಾಂಗೇಯಾದಿಗಳನರವಿಂದಭನು ಬೀಳುಕೊಟ್ಟನು;
ನಿಂದನಾ ರವಿಸುತನ ಕರೆದನು ರಥದ ಹೊರೆಗಾಗಿ.
ಬಂದು ಕಿರಿದೆಡೆಗಾಗಿ ಕಳುವುದೆಂದು ನೇಮಿಸಿ, ಬಳಿಕ ತಾಪಸ
ವೃಂದವನು ಕಾರುಣ್ಯನಿಧಿ ಕಳುಹಿದ ತಪೋವನಕೆ.

ಉದ್ಯೋಗಪರ್ವದ ಹತ್ತನೆಯ ಸಂಧಿ ಕಾವ್ಯಕಲಾಖನಿಯಾದ ಮಹಾಭಾರತದಲ್ಲಿ ಒಂದು ನಾಯಕರತ್ನ. ರಾಜತಂತ್ರಜ್ಞ ಶ್ರೀಕೃಷ್ಣನ ಬೇದೋಪಾಯಕ್ಕೆ ಅದೊಂದು ಒರೆಗಲ್ಲು; ಅಂಗಾಧಿಪತಿಯ ಸ್ನೇಹವನ್ನೂ ಸ್ವಾಮಿಭಕ್ತಿಯನ್ನೂ ಪುಡಿಮಾಡಲೆಳಸಿದ ಒಂದು ಅರೆಗಲ್ಲ್. ರಾಧೇಯನ ಸ್ನೇಹಶಕ್ತಿಯ ಹೊಡೆತಕ್ಕೆ ಮುರವೈರಿಯ ಕುಯುಕ್ತಿ ನುಚ್ಚುನೂರಾಗಲು ನೆರವಾದ ಅಡಿಗಲ್ಲು. ಕರ್ಣನ ಸ್ನೇಹಪರೀಕ್ಷೆಯಾಗುವುದೂ ಆತನು ಉತ್ತೀರ್ಣನಾಗುವುದೂ ಹತ್ತನೆಯ ಸಂಧಿಯಲ್ಲಿಯೆ! ಹತ್ತನೆಯ ಸಂಧಿಯೆ ಮಹಾಭಾರತವೆಂಬ ರುದ್ರಕಾವ್ಯದ ವಸ್ತು ಸಂವಿಧಾನದ ಉತ್ತುಂಗ ಶಿಖರ, ಹತ್ತನೆಯ ಸಂಧಿಯೆ ಪುತ್ರನಾದ ಕರ್ಣನ ಮಾತೃಭಕ್ತಿಗೂ ಪರಾರ್ಥತೆಗೂ, ಮಾತೆಯಾದ ಕುಂತಿಯ ಪಕ್ಷಪಾತಕ್ಕೂ ಸ್ವಾರ್ಥತೆಗೂ ಸಾಕ್ಷಿಯಾಗಿ ತೆಲೆಯೆತ್ತಿ ನಿಂತಿರುವ ಸ್ಮಾರಕ ಸ್ತಂಭ. ಹತ್ತನೆಯ ಸಂಧಿಯೆ ಕುಮಾರವ್ಯಾಸನು ಸ್ಥಾಪಿಸಿರುವ ಕೌರವಮಿತ್ರ ದುರಂತ ಕರ್ಣನ ಕೀರ್ತಿಸ್ತೂಪದ ಮೇಲೆ ಹಾರಾಡುತ್ತಿರು ಗಗನಚುಂಬಿತ ವೈಜಯಂತಿ!

ಕುಮಾರವ್ಯಾಸನು ಶ್ರೀಕೃಷ್ಣನ ಪ್ರಲೋಭನಕಾರ್ಯದ ಕಥೆಯನ್ನು, ಮುರಮಥನ ರಾಧೇಯರೆ ಸಂವಾದವನ್ನು, ಸುರಮ್ಯ ನಾಟಕೀಯವಾಗಿ ಬಣ್ಣಿಸಿದ್ದಾನೆ. ಕವಿಪ್ರತಿಭೆಯೆಂಬ ವೈದ್ಯುತ ಮಣಿದೀಪಜ್ಯೋತಿಯಿಂದ ಪ್ರದೀಪ್ತವಾದ ಶತಮಾನಗಳ ಪೂರ್ವದ, ದ್ವಾಪರಯುಗದ, ಆರ್ಷೇಯಕಾಲದ ತಿಮಿರ ಗರ್ಭದಲಿ ಆ ದೃಶ್ಯಚಿತ್ರ ಆವಿರ್ಭವಿಸಿ ನಮ್ಮ ಕಣ್ಣಿನ ಮುಂದೆ ನಲಿಯುತ್ತದೆ. ಅವರ ಅಭಿನಯವನ್ನು ನೋಡುತ್ತೇವೆ. ಅವರಾಡುವ ಮಾತುಗಳನ್ನು ಕೇಳುತ್ತೇವೆ. ಅವರೆದೆಗಳ ಭಾವತರಂಗಗಳೊಡನೆ ತಾಂಡವವಾಡುತ್ತೇವೆ. ಅವರ ನೋವಿನಲ್ಲಿ ನೋಯುತ್ತೇವೆ. ಅವರ ಸಂತಸದಲ್ಲಿ ನಲಿಯುತ್ತೇವೆ.