ನಿಜವಾದ ಕವಿತೆಯ ಮೊದಲ ಲಕ್ಷಣವೇನು ಎಂದು ಯಾರಾದರೂ ನನ್ನನ್ನು ಕೇಳಿದರೆ, ಓದಿದ ಕೂಡಲೇ ಅದು ನಮ್ಮ ಮನಸ್ಸನ್ನು ಸ್ವಲ್ಪ ಹೊತ್ತಿನವರೆಗಾದರೂ ಹಿಡಿದು ನಿಲ್ಲಿಸಿಕೊಳ್ಳುವಂತಿರಬೇಕು ಎನ್ನುತ್ತೇನೆ ನಾನು.  ಹೀಗೆ ಕವಿತೆಯೊಂದು ನಮ್ಮನ್ನು ಹಿಡಿದು ನಿಲ್ಲಿಸಿಕೊಳ್ಳಲು ಇರುವ ಕಾರಣಗಳಲ್ಲಿ ಕೆಲವನ್ನು ಹೀಗೆ ಪಟ್ಟಿ ಮಾಡಬಹುದು: ಅದರ ಅಭಿವ್ಯಕ್ತಿಯೊಳಗಿರುವ ಲವಲವಿಕೆ ಅಥವಾ ಚಲನಶೀಲತೆ; ಕಾವ್ಯಾಸಕ್ತರಿಗೆ ಈಗಾಗಲೇ ಪರಿಚಿತವಾಗಿರುವ ಕವಿತೆಯ ನಡುವೆ, ಇದು ಅವುಗಳಿಂದ ಬೇರೆ ಎನ್ನಿಸುವ ಚಹರೆ; ಒಮ್ಮೆ ಓದಿದರೆ ಸಾಲದು ಅದನ್ನು ಮತ್ತೆ ಮತ್ತೆ ಪರಿಭಾವನೆಗೆ ಒಳಗುಪಡಿಸಬೇಕು ಎನ್ನುವ ಪ್ರಚೋದನೆ; ಆ ಕವಿಗೇ ವಿಶಿಷ್ಟವಾದ ಭಾಷಾವಿನ್ಯಾಸದಲ್ಲಿ ಅದು ಪಡೆದುಕೊಂಡ ಬಂಧ; ಓದಿ ಮುಗಿಸಿದ ನಂತರ ಒಂದು ಹೊಸ ಭಾವವನ್ನೋ, ಚಿಂತನೆಯನ್ನೋ, ಅನುಭವವನ್ನೋ ಪಡೆದ ಸುಖ, ಅಥವಾ ಒಂದು ಒಳ್ಳೆಯ ಕವಿತೆಯನ್ನೋದಿದ್ದರಿಂದ ಉಂಟಾಗುವ ಒಂದು ಬಗೆಯ ಸಂತೋಷ.  ಈ ಸಂತೋಷ ಎಂಥದೆಂಬುದನ್ನು ನಿಜವಾದ ಸಹೃದಯರಿಗೆ ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಶ್ರೀಮತಿ ಲಲಿತಾ ಸಿದ್ಧಬಸವಯ್ಯನವರು ಕಳೆದ ವರ್ಷ (೨೦೦೧) ಪ್ರಕಟಿಸಿದ ‘ಮೊದಲ ಸಿರಿ’ ಎಂಬ ಅವರ ಕವನ ಸಂಗ್ರಹದೊಳಗಿನ ಕೆಲವು ಕವಿತೆಗಳಲ್ಲಿ, ನಾನು ಮೇಲೆ ಪ್ರಸ್ತಾಪಿಸಿದ ನಿಜವಾದ ಕವಿತೆಯ ಲಕ್ಷಣಗಳನ್ನು ಗುರುತಿಸಿದ ಕಾರಣದಿಂದ ನಾನು ಅವರಿಗೆ ಬರೆದೆ: ‘ನಿಮ್ಮ ಮೊದಲ ಕವನ ಸಂಗ್ರಹದ ಸಂದರ್ಭದಲ್ಲಿಯೇ ನೀವು ಎಂಥ ‘ಸಿರಿ’ಯನ್ನು ಸೂರೆಗೈದಿದ್ದೀರಿ! ನಿಮ್ಮ ಕವನ ಸಂಗ್ರಹದ ಶೀರ್ಷಿಕೆ ಈ ಅರ್ಥದಲ್ಲಿ ಸಾಂಕೇತಿಕವಾಗಿಯೂ ಇದೆ’.  ಅದರ ಹಿಂದೆಯೇ ‘ಬಿಡಿ ಹರಳು’ ಎಂಬ ಹನಿಗವನಗಳ ಸಂಗ್ರಹ (೨೦೦೨)ದಲ್ಲಿ ವಿಸ್ತರಿಸಿಕೊಂಡ ಅವರ ಕಾವ್ಯಪ್ರತಿಭೆ ಮತ್ತೆ ‘ಇಹದ ಸ್ವರ’ ಎಂಬ ಪ್ರಸ್ತುತ ಸಂಗ್ರಹದ ಕವಿತೆಗಳಲ್ಲಿ ಬೇರೊಂದು ಹದವನ್ನು ಪಡೆದುಕೊಂಡಿದೆ.  ಕೇವಲ ಒಂದೂವರೆ ವರ್ಷದ ಕಾಲಮಾನದಲ್ಲಿ ಮುಂಗಾರಿನ ಮಳೆಗೆ ತುಂಬಿ ತುಳುಕಿ ಕೋಡಿಬಿದ್ದ ಕೆರೆಯಂತೆ, ಲಲಿತಾ ಸಿದ್ಧಬಸವಯ್ಯನವರ ಕಾವ್ಯ ಸಾಮರ್ಥ್ಯ ಈ ಬಗೆಯ ಸಮೃದ್ಧಿಯನ್ನು ಪಡೆದುಕೊಂಡಿದ್ದು ಆಶ್ಚರ್ಯದ ಮತ್ತು ಸಂತೋಷದ ಘಟನೆಯಾಗಿದೆ.  ಹೀಗೆ ಸದ್ದಿಲ್ಲದೆ ಸಾಹಿತ್ಯ ವಲಯಕ್ಕೆ ಪ್ರವೇಶಿಸಿದ ಈ ಪ್ರತಿಭಾ ವಿಶೇಷವನ್ನು ಕುರಿತು ‘ಮೊದಲ ಸಿರಿ’ ಎಂಬ ಕವನ ಸಂಗ್ರಹದ ಸಂದರ್ಭದಲ್ಲಿ, ನನ್ನಂತೆಯೇ ಅನೇಕ ಸಾಹಿತಿ ಮಿತ್ರರು ತಮ್ಮ ಪ್ರತಿಕ್ರಿಯೆಗಳನ್ನು ಹಾಗೂ ಮೆಚ್ಚಿಗೆಯನ್ನು ಅಭಿವ್ಯಕ್ತಪಡಿಸಿದ್ದಾರೆ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ.

ಲಲಿತಾ ಸಿದ್ಧಬಸವಯ್ಯನವರು ಕವಿತೆಗೆ ಒಲಿದದ್ದು ಅಥವಾ ಕವಿತೆ ಅವರಿಗೆ ಒಲಿದದ್ದು ಬಹುಶಃ ಅವರು ಒಬ್ಬ ಪ್ರೌಢವಯಸ್ಕ ಗೃಹಿಣಿಯಾದ ಸಂದರ್ಭದಲ್ಲಿ ಎಂದು ತೋರುತ್ತದೆ.  ಕವಿತೆ ಯಾರನ್ನು ಯಾವಾಗ ಹಿಡಿದುಕೊಳ್ಳುತ್ತದೆಯೋ ಅದನ್ನು ಹೇಳಲು ಬರುವುದಿಲ್ಲ.  ಪ್ರತಿಯೊಬ್ಬ ನಿಜವಾದ ಬರಹಗಾರನಿಗೂ ತನ್ನಲ್ಲಿ ಒಬ್ಬ ಕವಿ ಅಥವಾ ಕಲೆಗಾರ ಇದ್ದಾನೆ ಎನ್ನುವುದನ್ನು ಅವನು ಅಥವಾ ಅವಳು ಕಂಡುಕೊಳ್ಳುವ ಘಳಿಗೆ-ಆಶ್ಚರ್ಯದ ಘಳಿಗೆ-ಬರುವುದುಂಟು.  ಅದರಲ್ಲಿಯೂ ಪುರುಷ ಪ್ರಪಂಚದ ಅಂಚಿನಲ್ಲೆ ಬಹುಕಾಲದಿಂದಲೂ ಬದುಕುತ್ತ ಬಂದ ನಮ್ಮ ದೇಶದ ಮಹಿಳೆ, ತಾನೂ ಒಬ್ಬ ಕವಿಯೋ ಲೇಖಕಿಯೋ ಎನ್ನುವುದನ್ನು ಕಂಡುಕೊಂಡರೂ, ಸಾಂಸಾರಿಕವಾದ ಅನೇಕ ಇಕ್ಕಟ್ಟುಗಳ ನಡುವೆ ತನ್ನ ಅಭಿವ್ಯಕ್ತಿಯನ್ನು ತಾನು ಕಂಡುಕೊಳ್ಳುವುದು ಸುಲಭವಾದ ಕೆಲಸವೇನಲ್ಲ.  ಲಲಿತಾ ಅವರ ‘ಮೊದಲ ಸಿರಿ’ ಕವನ ಸಂಗ್ರಹದ ‘ಪುಷ್ಪರಗಳೆ’ ಎಂಬ ಕವಿತೆ ಈ ಸಂಘರ್ಷವನ್ನು ತುಂಬ ಸೊಗಸಾಗಿ ಚಿತ್ರಿಸುತ್ತದೆ.  ಮತ್ತು ಪ್ರಸ್ತುತ ಸಂಗ್ರಹದೊಳಗಿನ ‘ಅಚ್ಚರಿ’ ಎಂಬ ಕವಿತೆ, ಕಾವ್ಯ ರೂಪುಗೊಂಡ ಹಾಗೂ ತಾನು ಕವಿ ಎಂಬುದನ್ನು ಕಂಡುಕೊಂಡ ಆಶ್ಚರ್ಯವನ್ನು ನಿರೂಪಿಸುತ್ತದೆ.  ಮುಖ್ಯವಾಗಿ ಹೇಳಬೇಕಾದ ಮಾತೇನೆಂದರೆ, ‘ಮೊದಲ ಸಿರಿ’ಯೊಳಗಿನ ಅನೇಕ ಪದ್ಯಗಳು, ಮಧ್ಯವಯಸ್ಕಳಾದ ಮಹಿಳೆಯ ಪ್ರಬುದ್ಧವಾದ ಮನಸ್ಸೊಂದು ನಮ್ಮ ಪ್ರಸ್ತುತ ಸಾಮಾಜಿಕ ಸಂದರ್ಭದಲ್ಲಿ ಎದುರುಗೊಳ್ಳುವ ವಿಲಕ್ಷಣ ಪರಿಸ್ಥಿತಿಗಳನ್ನು, ವಿವಿಧ ಸನ್ನಿವೇಶಗಳ ಹಿನ್ನೆಲೆಯಲ್ಲಿ ಗ್ರಹಿಸುವ ಕ್ರಮವನ್ನು ತುಂಬ ಚೇತೋಹಾರಿಯಾಗಿ ಅಭಿವ್ಯಕ್ತಿಸಿರುವ ರೀತಿ, ನಿಜವಾಗಿಯೂ ಹೊಸತಾಗಿದೆ, ವಿಭಿನ್ನವಾಗಿದೆ, ವಿಶಿಷ್ಟವಾಗಿದೆ.  ಪ್ರಸ್ತುತ ಕವನ ಸಂಗ್ರಹವಾದ ‘ಇಹದ ಸ್ವರ’ ಅವರ ಮೊದಲ ಕವನ ಸಂಗ್ರಹವಾದ ‘ಮೊದಲ ಸಿರಿ’ಯೊಳಗಿನ ಮನೋಧರ್ಮದ ಮುಂದುವರಿಕೆಯೆಂಬಂತೆ ತೋರಿದರೂ ಒಂದು ಮುಖ್ಯವಾದ ವ್ಯತ್ಯಾಸವಿದೆ ಎಂಬುದನ್ನು ಹೇಳಬೇಕಾಗಿದೆ.  ಅದೆಂದರೆ ‘ಮೊದಲ ಸಿರಿ’ಯಲ್ಲಿ ಮುಖ್ಯವಾಗಿ ‘ಗೃಹಿಣಿ’ಯಾಗಿ ಕಾಣಿಸಿಕೊಂಡ ಹೆಣ್ಣು, ಈ ಸಂಗ್ರಹದ ಕವಿತೆಗಳಲ್ಲಿ ಒಬ್ಬ ‘ತಾಯಿ’ಯಾಗಿ ತನ್ನ ಕನಸುಗಳನ್ನು, ಹಂಬಲಗಳನ್ನು, ನೋವುಗಳನ್ನು ತೋಡಿಕೊಳ್ಳುವ ಹೆಣ್ಣಾಗಿ ಕಾಣಿಸಿಕೊಳ್ಳುತ್ತಾಳೆ.  ‘ಮೊದಲ ಸಿರಿ’ಯ ಹಲವು ಕವಿತೆಗಳಲ್ಲಿ ತುಸು ಹೆಚ್ಚಾಯಿತೇನೋ ಎಂಬಂತಿದ್ದ ವಾಚಾಳಿತನ, ಈ ಸಂಗ್ರಹದೊಳಗೆ ಬೇರೊಂದು ವಿವೇಚನೆಯ ಹದಕ್ಕೆ ಬಂದಂತೆ ತೋರುತ್ತದೆ.

ನನಗಿಷ್ಟವಾದ ಕನಸುಗಳು ಮಾತ್ರ ನನ್ನ ಕನಸಿಗೆ ಬನ್ನಿ
ಉಳಿದವು ಹೊರಟುಬಿಡಿ ದೊಂಬಿ ಮಾಡದೆ ಮುಂಬಾಗಿಲಲ್ಲಿ

ಎಂದು ಮನಸ್ವಿಯಾಗಿ ಕನಸು ಕಾಣುವ ಪ್ರವೃತ್ತಿಗೆ ತಡೆ ಹಾಕಿ ತನ್ನ ಆಯ್ಕೆ ಏನೆಂಬುದನ್ನು ಸ್ಪಷ್ಟ ಮಾಡಿಕೊಳ್ಳುವ ನಿಲುವು ಇಲ್ಲಿ ಕಾಣುತ್ತದೆ.  ಹೀಗಾಗಿ ಇಹದ ಬದುಕನ್ನು ಅದರ ಸಮೃದ್ಧಿ ಮತ್ತು ವೈವಿಧ್ಯಗಳಲ್ಲಿ ಕಾಣುವ ಮತ್ತು ಅರಿವಿಗೆ ತಂದುಕೊಳ್ಳುವ ಪ್ರಯತ್ನವಿದೆ.  ಜತೆಗೆ ಹಳೆಯ ನಂಬಿಕೆಗಳ ಬಗ್ಗೆ ಗುಮಾನಿ ಬೆಳೆಯಿಸಿಕೊಳ್ಳುವ ಸಂದೇಹವಾದವೂ ಇಹದ ವಾಸ್ತವದ ಅರಿವಿನ ಪರಿಣಾಮವೂ ಹೌದು.  ರಾಮ ಬಂದೇ ಬರುತ್ತಾನೆಂದು ಕಾಯುತ್ತ ಕೂತ ತ್ರೇತಾಯುಗದ ಶಬರಿಯ ಶ್ರದ್ಧೆ, ಈ ದಿನ ‘ಯಾವ ರಾಮ ಬಂದರೂ ನಾವುದ್ಧಾರವಾಗುವುದು ಅಷ್ಟರಲ್ಲೇ ಇದೆ’ (ಹೋಗು ಗುಡ್ಡವಿಳಿದು) – ಎಂಬ ಉದ್ಗಾರಕ್ಕೆ ತಿರುಗುವುದು ಸಹಜವಾಗಿಯೇ ಇದೆ.  ಯಾಕೆಂದರೆ ನಾವು ಬದುಕುತ್ತಿರುವುದು ನಂಬಿಕೆಗಳನ್ನು ಕಳೆದುಕೊಂಡು ಕಾಲದಲ್ಲಿ.  ‘ಪರಶು ಪ್ರಸಂಗ-೧’ ಎಂಬ ಕವಿತೆ, ಪುರುಷ ಪ್ರಧಾನ ಪ್ರಪಂಚ ಪೋಷಿಸಿಕೊಂಡು ಬಂದ ‘ಪಾತಿವ್ರತ್ಯ’ದ ಕಲ್ಪನೆಯನ್ನು ಈ ಹೊತ್ತಿನ ಮಹಿಳೆ ಪ್ರಶ್ನಿಸುವ ಹಾಗೂ ಧಿಕ್ಕರಿಸುವ ಪ್ರವೃತ್ತಿಯ ಪ್ರತೀಕವಾಗಿದೆ.  ‘ಹತ್ತರಿಂದ ಐದೂವರೆ’, ಕಛೇರಿಗಳಲ್ಲಿ ದುಡಿಯುವ ಮಹಿಳೆಯರ ಅನುಭವಗಳನ್ನು ಹಿಡಿದಿರಿಸುತ್ತದೆ.  ‘ಸಂಭವಾಮಿ ಪದೇ ಪದೇ, ಅಕ್ವಾರ್ಡಮ್ಮ’ ತಲೆಮಾರುಗಳ ಅಂತರದ ಮನಃಸ್ಥಿತಿಗಳನ್ನು ಬಿಂಬಿಸುತ್ತದೆ.  ‘ಅಪ್ಪಾಳೆ ತಿಪ್ಪಾಳೆ’ ಮನುಷ್ಯನ ಮನಸ್ಸಿನ ದ್ವಂದ್ವಗಳ ವೈಪರೀತ್ಯವನ್ನು ಗ್ರಹಿಸುವ ಪ್ರಯತ್ನವಾಗಿದೆ.  ಒಟ್ಟಾರೆಯಾಗಿ ಈ ಕವಿತೆಗಳು ಇಹದ ಅಥವಾ ವಾಸ್ತವದ ಸ್ವರಗಳಾಗಿವೆ.  ಮತ್ತು ವಾಸ್ತವದ ನೆಲೆಗಳನ್ನೂ ಮೀರುವ ರಹದಾರಿಗಳನ್ನು ಕಂಡುಕೊಳ್ಳುವ ಪ್ರಯತ್ನವೂ, ಗುರುತಿಸಿದರೆ ಗೋಚರವಾಗುವಷ್ಟಿದೆ.

ಈಗಾಗಲೇ ಸೂಚಿಸಿದಂತೆ, ಈ ಸಂಗ್ರಹದ ಹೆಣ್ಣು ಮುಖ್ಯವಾಗಿ ತಾಯಿ.  ಈ ಲೇಖಕಿಯ ಹಿಂದಿನ ಸಂಕಲನವಾದ ‘ಮೊದಲ ಸಿರಿ’ಯೊಳಗಿನ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಎಂಬ ಕವಿತೆಯೊಳಗಿನ ‘ಗೃಹಿಣಿ’ಯ ನಿಲುವನ್ನು, ‘ಲೇಪಾಕ್ಷಿ’ ಎಂಬ ಪ್ರಸ್ತುತ ಸಂಗ್ರಹದೊಳಗಿನ ಕವಿತೆಯೊಳಗಣ ತಾಯಿಯಾದ ಹೆಣ್ಣಿನ ವಾತ್ಸಲ್ಯದ ನಿಲುವಿನೊಂದಿಗೆ ಹೋಲಿಸಿ ನೋಡಿದರೆ ಈ ಅಂಶ ಹೆಚ್ಚು ಸ್ಫುಟವಾಗುತ್ತದೆ.  ಕುಟುಂಬ ಜೀವನದ ಸಂದಿಗ್ಧ ಪರಿಸ್ಥಿತಿಯೊಂದರಲ್ಲಿ, ತಾಯಿಯಾದವಳ ತಲ್ಲಣಗಳನ್ನು ಹಾಗೂ ವಾಸ್ತವಗಳನ್ನು ಅವಳು ಎದುರಿಸುವ ಕ್ರಮವನ್ನೂ ಚಿತ್ರಿಸುವ ‘ಅವನನ್ನು ಕರೆದು ತಾ’ ಎಂಬ ಕಥನ ಕವನ ಈ ಸಂಕಲನದಲ್ಲಿ ತುಂಬ ಒಳ್ಳೆಯ ಪದ್ಯವಾಗಿದೆ.  ಮಾಸ್ತಿ ಮತ್ತು ಕೆ.ಎಸ್.ನ. ಇವರಿಬ್ಬರ ಕಥನದ ಮಾದರಿಗಳನ್ನು ಮೇಳವಿಸಿಕೊಂಡ ಈ ಕವಿತೆ ತನ್ನ ಸಹಜ ಮಾತುಗಾರಿಕೆಯಿಂದ ಹೃದಯಸ್ಪರ್ಶಿಯಾಗಿದೆ.  ಈ ಕವಿತೆಯ ಕೇಂದ್ರ ತಾಯಿ, ಬೆಳೆದ ಮಗ ತಾನೊಲಿದ ಚೆಲುವೆಯ ಹಿಂದೆ ಹೋಗಿ ಸುಮಾರು ಒಂದು ವರ್ಷವಾಗಿದೆ.  ತಾಯಿ ತನ್ನ ಹಿರಿಯ ಮಗನೆದುರು ತನ್ನ ಅಳಲನ್ನು ತೋಡಿಕೊಳ್ಳುತ್ತ, ಮನೆಬಿಟ್ಟು ಹೋದ ಮಗನನ್ನು ಹೇಗಾದರೂ ಮಾಡಿ ಕರೆದುಕೊಂಡು ಬಾ ಎಂದು ಕೇಳಿಕೊಳ್ಳುತ್ತಾಳೆ.  ಇಡೀ ಕವಿತೆ ತನ್ನ ಹಾಗೂ ತನ್ನನ್ನು ತೊರೆದುಹೋದ ಮಗನ ಸಂಬಂಧದ ನೆನಪುಗಳಿಂದ, ತನ್ನ ಸ್ವಭಾವವನ್ನು ನಿಕಷಕ್ಕೆ ಒಡ್ಡಿಕೊಳ್ಳುವ ಮೂಲಕ ಪಡೆದುಕೊಂಡ ನಿಲುವಿನಿಂದ ಬದುಕು ಹೇಗಿದೆಯೋ ಹಾಗೆಯೇ ಅದನ್ನು ಒಪ್ಪಿಕೊಳ್ಳುವುದೇ ನೆಮ್ಮದಿಗೆ ನಾಂದಿ ಎಂಬ ತಿಳಿವಿನಿಂದ, ಎಲ್ಲಕ್ಕೂ ಮಿಗಿಲಾಗಿ ತಾಯ್ತನದ ವಾತ್ಸಲ್ಯದ ಎಳೆಗಳಿಂದ ತುಂಬ ನವುರಾದ ನೇಯ್ಗೆಯಂತಿದೆ.

ಕವಿತೆ ಮೂಲತಃ ‘ಇಹದ ಸ್ವರ’ವೇ.  ಅಷ್ಟೇ ಅಲ್ಲ, ನಮ್ಮ ನೆನಪುಗಳನ್ನು ಕನಸುಗಳನ್ನು, ಆಶಯಗಳನ್ನು, ಆದರ್ಶಗಳನ್ನು, ವಾಸ್ತವದೊಂದಿಗಿನ ಮುಖಾಮುಖಿಯನ್ನು, ಪ್ರತಿಕ್ರಿಯೆಗಳನ್ನು ಜತನವಾಗಿ ಮಾತುಗಳಲ್ಲಿ ಹಿಡಿದಿಟ್ಟು, ಓದುಗರ ಮನಸ್ಸಿನಲ್ಲಿ, ‘ರಸ’ ಹುಟ್ಟಿಸುವಂತೆ ಮಾಡುವ ಕಲೆಗಾರಿಕೆ.  ಯಾವುದೋ ಒಂದು ನಿರ್ದಿಷ್ಟ ನೆಲೆಗೆ ಬಿಗಿದುಕೊಳ್ಳದೆ, ಬೇರೆ ಬೇರೆಯ ಸ್ತರಗಳಿಗೆ ಜಿಗಿಯುವ ಸಾಮರ್ಥ್ಯವಿರುವ ಕವಿತೆ ಪಡೆದುಕೊಳ್ಳುವ ಗೆಲುವೇ ಬೇರೆ; ಹರಹೇ ಬೇರೆ, ಇಂಥ ಕವಿತೆಯ ದಾರಿಯನ್ನು ತುಳಿಯುತ್ತಿರುವ ಶ್ರೀಮತಿ ಲಲಿತಾ ಸಿದ್ಧಬಸವಯ್ಯನವರು, ಇನ್ನಷ್ಟು ಯಶಸ್ಸನ್ನು ಸಾಧಿಸಲಿ ಎಂದು ಹಾರೈಸುತ್ತೇನೆ.

ಇಹದ ಸ್ವರ : ಲಲಿತಾ ಸಿದ್ಧಬಸವಯ್ಯ, ೨೦೦೨