ಕಾವ್ಯ ಎಂದರೇನು ಎಂಬ ಪ್ರಶ್ನೆಗೆ ಅತ್ಯಂತ ಸಮರ್ಪಕವಾದ ಉತ್ತರವನ್ನು ಕೊಡಲು ಇಂದಿಗೂ ಸಾಧ್ಯವಾಗಿಲ್ಲ.  ಬಹುಶಃ ಎಂದಿಗೂ ಸಾಧ್ಯವಾಗುವುದಿಲ್ಲ.  ಆದರೆ ಯಾವ ಬರಹ ಕಾವ್ಯವಲ್ಲ ಎಂಬುದಕ್ಕೆ ನಾವು ಕಂಡುಕೊಳ್ಳುವ ಉತ್ತರಗಳು ಕಾವ್ಯಸ್ವರೂಪದ ನಿರ್ವಚನಕ್ಕೆ ಅನೇಕ ವೇಳೆ ನೆರವಾಗಬಹುದು ಎಂದು ನನಗೆ ಅನ್ನಿಸುತ್ತದೆ.  ಕುಲಶೇಖರಿಯವರ ಈ ಸಂಗ್ರಹದಿಂದ ಒಂದು ಪದ್ಯವನ್ನೆತ್ತಿಕೊಂಡು ಈ ಕುರಿತು ವಿಚಾರ ಮಾಡಬಹುದು.

ದಿನದಿನವೂ ಹೊಸ ಹೂವರಳುತ್ತವೆ
ಮಗಮಗಿಸಿ ಮನಸೂರೆಗೊಳ್ಳುತ್ತವೆ
ಅನಾಮಿಕವಾಗಿ ಮರೆಯಾಗುತ್ತವೆ
ಅರಳಿದ ಹೂಗಳೆಲ್ಲವೂ
ಮಿಡಿ
, ಕಾಯಿ, ಹಣ್ಣುಗಳಾಗುವುದಿಲ್ಲ
ಅದೇ ರೀತಿ
ಒಲಿದ ಒಲವುಗಳೆಲ್ಲ ಸಫಲವಾಗುವುದಿಲ್ಲ
ಈ ಅನಿವಾರ್ಯತೆ ಅರ್ಥವಾಗುವುದಿಲ್ಲ

(
ಅರ್ಥವಾಗುವುದಿಲ್ಲ)

ಇದು ಮೇಲೆ ನೋಡಲು ಪದ್ಯದಂತೆ ತೋರುತ್ತದೆ ಅಷ್ಟೆ.  ಆದರೆ ಭಾವದಲ್ಲಾಗಲಿ, ಭಾಷೆಯಲ್ಲಾಗಲಿ, ರಚನೆಯಲ್ಲಾಗಲಿ ಯಾವುದೇ ತೀವ್ರತೆ ಹಾಗೂ ಹೊಸತನ ಇಲ್ಲಿ ಕಾಣದು.  ಅರಳುವ ಹೂಗಳು ಹೆಸರಿಲ್ಲದೆ ವ್ಯರ್ಥವಾಗಿ ಹೋಗುವ ಸಂಗತಿಗೂ, ಮಾನವ ಲೋಕದ ಒಲವುಗಳ ವಿಫಲತೆಗೂ, ಸಂಬಂಧ ಅಥವಾ ಸಮೀಕರಣವನ್ನು ತುಂಬಾ ತಾರ್ಕಿಕವಾಗಿ ಹೇಳುವ, ಒಂದು ವಿಷಾದದ ಅನ್ನಿಸಿಕೆಯೇನೋ ಇದರ ವಸ್ತುವಾಗಿದೆ.  ಆದರೆ ಸಾಕಷ್ಟು ಸಾಹಿತ್ಯ ಅಥವಾ ಕಾವ್ಯದ ಪರಿಚಯವಿರುವವರ ಪಾಲಿಗೆ, ಇಲ್ಲಿ ಉಕ್ತವಾಗಿರುವ ಸಂಗತಿ  ಅಪರಿಚಿತವೆಂದಾಗಲಿ ಅದ್ಭುತವೆಂದಾಗಲಿ ಅನ್ನಿಸುವುದಿಲ್ಲ.  ನಾನು ಬಹು ಹಿಂದೆ ಓದಿದ ಇಂಗ್ಲಿಷ್ ಕವಿ ಥಾಮಸ್ ಗ್ರೇ ಬರೆದ, ಸುಪ್ರಸಿದ್ಧವಾದ ಪದ್ಯ (An elegy written on a Country Church yard) ವೊಂದರಲ್ಲಿ ಹಳ್ಳಿಗಾಡಿನ ಸ್ಮಶಾನವೊಂದರ ಬದಿಗೆ ನಿಂತು, ಅಳಿದ ಸಹಸ್ರಾರು ಸಾಮಾನ್ಯ ಜನರನ್ನು ಕುರಿತು –

Full many a flowers are born to bluch unseen
And waste its sweetness on the desert air

ಎಂದು ಹೇಳುವ ಈ ಪಂಕ್ತಿಗಳನ್ನು ಓದಿದಾಗ ಆದ ಮತ್ತು ಈಗಲೂ ಆಗುವ ರೋಮಾಂಚಕ ಅನುಭವ ಅಪೂರ್ವವಾದದ್ದು.  ಥಾಮಸ್ ಗ್ರೇ ಕವಿ ಹೇಳುತ್ತಿರುವುದೂ ದಿನದಿನವೂ ಅರಳಿ ಮಗಮಗಿಸಿ ತಮ್ಮ ನರುಗಂಪನ್ನು ವ್ಯರ್ಥವಾಗಿ ಸೂಸಿ, ಅನಾಮಧೇಯವಾಗಿ ಉದುರಿಹೋದ ಅಸಂಖ್ಯಾತ ಹೂಗಳ ಸಂಗತಿಯನ್ನೇ. ಈ ಅಭಿವ್ಯಕ್ತಿಯೊಳಗಿನ ಭಾವತೀವ್ರತೆ, ಅದು ಮೈ ಪಡೆದುಕೊಂಡಿರುವ ಭಾಷೆಯ ವಿನ್ಯಾಸ ಮತ್ತು ಅದರ ಮೂಲಕ ಪ್ರತೀತವಾಗುವ ಅರ್ಥ ವಿಸ್ತಾರ ಹಾಗೂ ಬದುಕನ್ನು ಕುರಿತು ಅದು ಹುಟ್ಟಿಸುವ ಗಾಢವಾದ ವಿಷಾದಮೂಲವಾದ ಅರಿವು ನಿಜವಾದ ಕವಿತೆಯಲ್ಲಿ ಮಾತ್ರ ಅನುಭವಕ್ಕೆ ಬರುವಂಥವುಗಳಾಗಿವೆ.  ಆದರೆ  ಇದೇ ಸಂಗತಿಯನ್ನು ಅವಲಂಬಿಸಿ ಕಟ್ಟಿದ ಇವರ ಪದ್ಯ ಅಷ್ಟೇನೂ ಬಿಗಿಯಿಲ್ಲದ ಮಾತುಗಳ ಮೂಲಕ ವಿಷಯವನ್ನು ಮಂಡಿಸುತ್ತ

ಅದೇ ರೀತಿ
ಒಲಿದ ಒಲವುಗಳೆಲ್ಲ ಸಫಲವಾಗುವುದಿಲ್ಲ
ಈ ಅನಿವಾರ್ಯತೆ ಅರ್ಥವಾಗುವುದಿಲ್ಲ.

ಎಂದು ಲೆಕ್ಕ ಮಾಡಿದಂತೆ ಹೇಳುವ ವಿಧಾನದಲ್ಲಿರುವ ತರ್ಕವಂತೂ ಕವಿತೆಯ ಸ್ವರೂಪಕ್ಕೆ ಮಾರಕವಾಗುತ್ತದೆ.

ಸಾರಾಂಶ ಇಷ್ಟೇ : ಕೇವಲ ಅನಿಸಿಕೆಗಳು ಕಾವ್ಯವಲ್ಲ, ತರ್ಕಬದ್ಧವಾದ ನಿರೂಪಣೆ ಕಾವ್ಯವಲ್ಲ ; ಸಾಕಷ್ಟು ಬಿಗಿಯನ್ನು ಪಡೆದುಕೊಳ್ಳದ ಭಾಷಾಭಿವ್ಯಕ್ತಿ ಕಾವ್ಯವಲ್ಲ; ಈಗಾಗಲೇ ಅವರಿವರ ಕಾವ್ಯಗಳಲ್ಲಿ ಸಮರ್ಥವಾಗಿ ಅಭಿವ್ಯಕ್ತವಾಗಿರುವ ಭಾವ-ಭಾವನೆಗಳ ಅನುಕರಣೆ ಕಾವ್ಯವಲ್ಲ.  ಯಾವುದೇ ಹೊಸತನವನ್ನು ಸಾಧಿಸಿಕೊಳ್ಳಲಾಗದ ಬರಹ ಕಾವ್ಯವಲ್ಲ.

ಕೆಲವು ವೇಳೆ ಕವಿಯ ಆಶಯ ಒಂದಾಗಿದ್ದರೆ, ಅದನ್ನು ಹೇಳುವ ಕ್ರಮದ ‘ಅನವಧಾನ’ದಿಂದ ಅಭಿವ್ಯಕ್ತಿ ಅದಕ್ಕೆ ವಿರುದ್ಧವಾದ ರೀತಿಯಲ್ಲಿದ್ದು ಹೇಗೆ ಮೂಲ ಉದ್ದೇಶವೇ ವಿಫಲವಾಗಬಹುದೆನ್ನುವುದಕ್ಕೆ “ಸ್ತ್ರೀ” ಎಂಬ  ಪದ್ಯ ನಿದರ್ಶನವಾಗಿದೆ.  ಈ ಪದ್ಯದಲ್ಲಿ ‘ಸ್ತ್ರೀ’  ತನ್ನ ಸ್ವಂತ ವ್ಯಕ್ತಿತ್ವವನ್ನು ಕುರಿತು ಹೇಳಿಕೊಳ್ಳುವ ರೀತಿ ಹೀಗಿದೆ-

ಇಂದೇ ಅರಳಿ ಇಂದೇ ಬಾಡುವ ಹೂ
ಅಥವಾ
ಓದಿ ಮುಗಿಸಿ ಮೂಲೆಗೆಸೆವ ವರ್ತಮಾನ ಪತ್ರ
ಇಲ್ಲವೆ
ಹಸಿದಾಗ ಹಾಸಿ ಉಂಡು ಹೊರಗೆಸೆವ ಊಟದೆಲೆ
ನಾನಲ್ಲ.  (ಸ್ತ್ರೀ)

ತುಂಬ ಸೊಗಸಾದ  ಅಭಿವ್ಯಕ್ತಿ ಇದು.  ಹೆಣ್ಣು ತಾನು ‘ಏನಲ್ಲ’ ಎಂದು ಹೇಳಲು ಬಳಸಿರುವ “ಮೂರು ಚಿತ್ರ”ಗಳ ಮೂಲಕ ತಾನು ಏನು ಎಂಬುದನ್ನು ಪರಿಣಾಮಕಾರಿಯಾಗಿ ಹೇಳಿರುವ ಕ್ರಮ ಖಂಡಿತ ಮೆಚ್ಚುವಂತಿದೆ.  ಆದರೆ

ಪರಂಪರೆಯ ಪಡಿನೆಳಲಾಗಿ
ಎದ್ದು ನಿಲ್ಲುತ್ತೇನೆ

ಎಂಬ ಸಾಲುಗಳನ್ನೋದಿದ ಕೂಡಲೇ, ತಾನು ಏನಲ್ಲ ಎಂದು ಘೋಷಿಸಿಕೊಂಡು,  ಒಂದು ಸ್ವತಂತ್ರ ವ್ಯಕ್ತಿತ್ವವಾಗಿ ತಲೆ ಎತ್ತಿ ನಿಲ್ಲುವ ಹಂಬಲ ವ್ಯಕ್ತವಾಗಿತ್ತೋ, ಅದಕ್ಕೆ ಅಥವಾ ಆ ಆಶಯಕ್ಕೆ ತಾನು “ಪರಂಪರೆಯ ಪಡಿನೆಳಲಾಗಿ ಎದ್ದು ನಿಲ್ಲುತ್ತೇನೆ” ಎಂಬ ಮಾತು ತೀರಾ ಮಾರಕವಾಗುತ್ತದೆ, ಎಂಬುದು ಬರೆದವರ ಅರಿವಿಗೇ ಬಂದಿಲ್ಲ.  ಪರಂಪರೆಯ ಪಡಿನೆಳಲಾಗುವುದು ಎಂದರೆ ಇರುವ ವ್ಯಕ್ತಿತ್ವ ಅಥವಾ ಸ್ವಂತಿಕೆಯನ್ನು ಕಳೆದುಕೊಳ್ಳುವುದು ಎಂದೇ ಅರ್ಥ.

ಕವಿತೆ ಎನ್ನುವುದು ತುಂಬ ಗಂಭೀರವಾದ ಹಾಗೂ ಜವಾಬ್ದಾರಿಯಿಂದ ನಿರ್ಮಿತಿಯಾದ ಒಂದು ಕಲೆ ಎಂಬುದನ್ನು ನಮ್ಮ ಬಹುಮಂದಿ ಬರಹಗಾರರು ಇನ್ನೂ ತಿಳಿದುಕೊಳ್ಳಬೇಕಾಗಿದೆ.  ದೊಡ್ಡ ಕವಿಗಳಲ್ಲಿ ಈ ಕುರಿತು ನಡೆದಿರುವ ಪ್ರಯೋಗಗಳನ್ನು ಗಮನಿಸುತ್ತಿರಬೇಕು.  ಅನಿಸಿಕೆಗಳು ‘ಅನುಭವ’ಗಳಾಗಿ ಹರಳುಗೊಳ್ಳುವಂಥ ಕಾವಿಗೆ ಒಳಪಡಬೇಕು, ಮತ್ತು ಒಮ್ಮೆ ಬರೆದದ್ದನ್ನು ಹತ್ತು ಸಲ ಪರಿಶೀಲಿಸಿ ಅರೆಕೊರೆಗಳನ್ನು ಸರಿಪಡಿಸುವ ತಾಳ್ಮೆಬೇಕು.

ಕುಲಶೇಖರಿಯವರ ಈ ಸಂಗ್ರಹದ ಎಲ್ಲ ಪದ್ಯಗಳು ಹೀಗೇ ಇವೆ ಎಂದರೆ ಅವರಿಗೆ ಅನ್ಯಾಯ ಮಾಡಿದಂತೆ.  ಯಾವ ಬರಹ ಕಾವ್ಯವಲ್ಲ ಮತ್ತು ಯಾಕೆ ಕಾವ್ಯವಲ್ಲ ಎಂಬುದನ್ನು ಪರಿಶೀಲಿಸಿದ್ದಾಯಿತು.  ಇನ್ನು ‘ಪಾರಿಜಾತ’ ಎಂಬ ಚಿಕ್ಕಪದ್ಯವನ್ನು ನೋಡೋಣ.

ನೆಲಬಗಿದು ಕಷ್ಟಪಟ್ಟು
ಬಿತ್ತಬಿತ್ತಿ ಇಷ್ಟಪಟ್ಟು
ನೀರುಣಿಸಿ ದಿನನಿತ್ಯ
ಬೆವರಿಳಿಸಿ ಬೆಳೆಸಿದ
ಪಾರಿಜಾತ ಸೊಕ್ಕಿ
ಹೂಮಳೆಗರೆದು ನಕ್ಕಿತು
ನೆರೆಮನೆಯಂಗಳದಲ್ಲಿ
(ಪಾರಿಜಾತ)

ಈ ಪದ್ಯ ಕಾವ್ಯವಾಗುವ ಹಾದಿಯಲ್ಲಿ ಹಿಂದೆ ಗಮನಿಸಿದ ಪದ್ಯಗಳಿಗಿಂತ ಒಂದಷ್ಟು ದೂರ ನಡೆದಿದೆ.  ಪಾರಿಜಾತದ ಗಿಡವನ್ನು ಬೆಳೆಯಿಸುವ ಶ್ರಮ, ಬದುಕಿನ ಸಾಧನೆಯೊಂದಕ್ಕೆ ಸಂಕೇತವಾಗಿದೆ. ಈ ಏಳು ಸಾಲಿನ ಕವಿತೆ ಅದರ ಆರನೆಯ ಸಾಲಿನ ತುದಿಗೆ ಮುಕ್ತಾಯವಾಗಿದ್ದರೆ ಬದುಕಿನ ಸಾಧನೆಗೆ ಹಾಗೂ ಅದರಿಂದ ಉಂಟಾಗುವ ಸಂತೃಪ್ತಿಗೆ ಒಂದು ಪ್ರತಿಮೆಯಾಗುತ್ತಿತ್ತೇನೋ ನಿಜ.  ಆದರೆ ಕವಿಯ ಆಶಯ ಅದಲ್ಲ ಎಂಬುದು ಏಳನೆಯ ಪಂಕ್ತಿಯನ್ನು ಸೇರಿಸಿಕೊಂಡು ಓದಿದಾಗ ಸ್ಪಷ್ಟವಾಗುತ್ತದೆ.  ಇಷ್ಟು ಕಷ್ಟಪಟ್ಟು ಬೆಳೆಸಿದ ಪಾರಿಜಾತ

ಹೂಮಳೆಗರೆದು ನಕ್ಕಿತು
ನೆರೆಮನೆಯಂಗಳದಲ್ಲಿ

– ಎಂಬೆರಡು ಪಂಕ್ತಿಗಳನ್ನು ಓದಿದಾಗ ಚಾಲನೆಗೊಂಡ ಕ್ಷಿಪಣಿಯಂತೆ ಇದೇ ಪದ್ಯದ ಭಾವ ಬೇರೊಂದು ಅರ್ಥದ ಪರಿಧಿಯೊಳಕ್ಕೆ ನೆಗೆಯುವುದರ ಮೂಲಕ, ನಿಜವಾದ ಕವಿತೆಯೊಂದು ಕೊಡುವ ಅನುಭವದೊಂದಿಗೆ ನಾವು ಮುಖಾಮುಖಿಯಾಗುತ್ತೇವೆ.  ಬದುಕಿನಲ್ಲಿ ನಾವು ಕಷ್ಟಪಟ್ಟು ಸಾಧಿಸಿದ್ದು ಕೊನೆಗೂ ಯಾರದೋ ಪಾಲಾಗುವ ಸಂದರ್ಭಗಳು ಬರುತ್ತವಲ್ಲ, ಇದರ ರಹಸ್ಯ ಅಥವಾ ಅರ್ಥವೇನಿರಬಹುದು ಎಂಬ ವಿಷಾದ ಮೂಲವಾದ ಅನಿವಾರ್ಯತೆಯನ್ನು ಕುರಿತು ನಮ್ಮನ್ನು ಚಿಂತನೆಗೆ ತೊಡಗಿಸುತ್ತದೆ.

ಈ ಹಿನ್ನೆಲೆಯಿಂದ ಹೇಳುವುದಾದರೆ ತನಗೆ ಅನಿಸಿದ್ದನ್ನು ಹೇಗೋ ಸುಮ್ಮನೆ ಹೇಳುವುದಕ್ಕೂ, ಈ ಅನಿಸಿಕೆ ಒಂದು ಅನುಭವವಾಗಿ ಕುದಿಗೊಂಡು ಅಭಿವ್ಯಕ್ತವಾಗಿ ಬೇರೊಂದು ಅರ್ಥವಂತಿಕೆಯ ಪರಿಭಾವನೆಯಲ್ಲಿ ನಮ್ಮನ್ನು ನಿಲ್ಲಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ.

ಕುಲಶೇಖರಿಯವರ ಈ ಸಂಕಲನದಲ್ಲಿ ಕವಿತೆಯ ನೆಲೆಯಲ್ಲಿ ಸ್ಫೋಟಗೊಳ್ಳುವ ಅನೇಕ ಚಿಂತನೆಗಳಿವೆ.  ಸುತ್ತಣ ಜಗತ್ತಿನ ಅನುಭವಗಳಿಗೆ ಪಡಿಮಿಡಿಯುವ ಮನಸ್ಸೊಂದು ತನಗೆ ತಾನೇ ಮಾತಾಡಿಕೊಂಡಂತಹ ಸ್ವಗತ ಲಹರಿಗಳಿವೆ.  ಈ ಮನಸ್ಸು ಬರುವ ದಿನಗಳಲ್ಲಿ, ತನ್ನ ಅನುಭವದ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ, ಕವಿತೆಯ ‘ಆಕೃತಿ’ಯ ಬಗೆಗೆ ಹೆಚ್ಚು ಕಾಳಜಿಗಳನ್ನು ವಹಿಸುತ್ತಾ ಪರಿಣತವಾಗಲಿ ಎಂದು ನಾನು ಆಶಿಸುತ್ತೇನೆ.

ಬಿಕ್ಕುಗಳು, ಕುಲಶೇಖರಿ, ೧೯೯೭