ಕಾವ್ಯವನ್ನು ಕುರಿತ ಚರ್ಚೆಗಳ ಅಬ್ಬರದ ಗಾಳಿ ತಗ್ಗಿ, ಸದ್ದಡಗಿದ ಮೌನದಲ್ಲಿ ಅಲ್ಲೊಂದು ಇಲ್ಲೊಂದು ಕವನ ಸಂಗ್ರಹಗಳು ಗರಿದೆದರಿ ಬಂದು ಬೋಳು ಕೊಂಬೆಗಳ ಮೇಲೆ ಕೂತು ಕಣ್ಣನ್ನು ಸೆಳೆಯುತ್ತವೆ.  ಇಂಥವುಗಳಲ್ಲಿ ಶ್ರೀಮತಿ ನಾಗಲಕ್ಷ್ಮಿ ಹರಿಹರೇಶ್ವರ ಅವರ ಕವನ ಸಂಗ್ರಹ ‘ಕಿಶೋರಿ’ಯೂ ಒಂದು.

ಇದು ಹೆಣ್ಣುಮಗಳೊಬ್ಬಳ ಕವನ ಸಂಗ್ರಹ.  ಹೀಗೆಂದ ಕೂಡಲೇ ಸಹೃದಯರಿಗೆ ಸಹಜವಾದ ಕುತೂಹಲ ಬಂದುಬಿಡುತ್ತದೆ.  ಬರೆದವರು ಮಹಿಳೆ ಎಂಬ ಕಾರಣ ಒಂದಾದರೆ, ಅವರು ಬರೆದಿರುವುದು ಕವಿತೆಗಳು ಎನ್ನುವುದು ಇನ್ನೊಂದು.

ಸಾಹಿತ್ಯಕ್ಷೇತ್ರದಲ್ಲಿ ಸ್ತ್ರೀಯರು ಕೆಲಸ ಮಾಡಿರುವುದು ವಿರಳ, ಅದರಲ್ಲೂ ಕಾವ್ಯ ಪ್ರಕಾರಗಳಲ್ಲಿ ಇನ್ನೂ ವಿರಳ – ಎಂಬುದನ್ನು ಒಪ್ಪಿಕೊಂಡು ಒಂದೆರಡು ಸಂಗತಿಗಳನ್ನು ಪುನರಾಲೋಚಿಸಬೇಕಾಗಿದೆ : ಸಾಹಿತ್ಯ ನಿರ್ಮಿತಿ ಒಂದು ಮಾನಸಿಕ ಕ್ರಿಯೆ.  ತತ್ಪರಿಣಾಮವಾದ ಸಾಹಿತ್ಯಾಭಿವ್ಯಕ್ತಿಯನ್ನು ಪರಿಶೀಲಿಸುವಲ್ಲಿ ‘ಮಹಿಳಾ ಸಾಹಿತ್ಯ’ ಎಂದು ಪ್ರತ್ಯೇಕವಾಗಿ ಗಮನಿಸುವುದೇ ಸರಿಯಲ್ಲ ಎಂದು ನನ್ನ ಅಭಿಪ್ರಾಯ.  ಹಾಗೆ ಮಾಡುವುದರಿಂದ ಅದರ ಪರವಾದ ಅಗತ್ಯವಾದ ಅನುಕಂಪೆಗಳೋ, ರಿಯಾಯಿತಿಗಳೋ ಸಾಹಿತ್ಯ ವಿಮರ್ಶೆಯ ಜತೆಯಲ್ಲಿ ಸೇರಿಕೊಳ್ಳುವ ಅಪಾಯವಿದೆ.  ಇದು ಒಂದು ಅಂಶ.  ಎರಡನೆಯದಾಗಿ ಮೊದಲಿನಿಂದಲೂ ಯಾಕೋ ಏನೋ ಸಾಹಿತ್ಯಕ್ಷೇತ್ರದ ಉಳಿದ ಪ್ರಕಾರಗಳಲ್ಲಿ ಕೆಲಸ ಮಾಡುವವರಿಗಿಂತ ಕವಿಯನ್ನು ಅಥವಾ ಪದ್ಯ ಬರೆಯುವವರನ್ನು ಅನಗತ್ಯವಾದ ನಿಲುವಿಗೇರಿಸಿ ನೋಡುವ, ಗೌರವದಿಂದ ಕಾಣುವ ಒಂದು ಪರಿಪಾಠ (ಈಚೆಗೆ ಇದು ಬದಲಾಗುತ್ತಿದೆ ಎಂದು ಬಲ್ಲೆ) ಬೆಳೆದಿದೆ.  ಇದು ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ.  ಈ ಎರಡೂ ‘ಅಪಾಯ’ಗಳಿಂದ ಪಾರಾಗಿ, ಒಟ್ಟಾರೆಯಾಗಿ ಸಾಹಿತ್ಯಾಭಿವ್ಯಕ್ತಿಯನ್ನು – ಅದು ಯಾವ ಪ್ರಕಾರ (form)ದ್ದೇ ಆಗಲಿ, ಯಾರೇ ಬರೆದದ್ದಾಗಲಿ (ಗಂಡು ಹೆಣ್ಣುಗಳನ್ನು ಗಮನಿಸದೆ) – ಪರಿಶೀಲಿಸುವ ಪ್ರವೃತ್ತಿ ಬೆಳೆಯಬೇಕಾಗಿದೆ.

ಈ ಹಿನ್ನೆಲೆಯಿಂದ ನೋಡಿದಾಗ ಶ್ರೀಮತಿ ನಾಗಲಕ್ಷ್ಮಿಯವರ ‘ಕಿಶೋರಿ’ ಅದರ ಹೆಸರೇ ಸೂಚಿಸುವಂತೆ, ಅಥವಾ ಲೇಖಕಿಯರೇ ತಮ್ಮ ಕಾವ್ಯದ ಮಿತಿಯನ್ನು ಆಶ್ಚರ್ಯಕರವಾಗಿ ಗುರುತಿಸಿಕೊಂಡಿದ್ದಾರೊ ಏನೋ ಎನ್ನುವಂತೆ, ಇನ್ನೂ ಕಿಶೋರಾವಸ್ಥೆಯಲ್ಲಿರುವ, ಕುತೂಹಲಕರವಾದ ಕವನಗಳ ಸಂಗ್ರಹವಾಗಿದೆ.  ಅವರ ಮೊದಲ ಕವನದ ಮಾತಿನಲ್ಲೇ ಹೇಳುವುದಾದರೆ  –

ಏನೋ ಹುರುಪು, ಪೊರೆ ಕಳಚಿ ಬಿಸುಡಿದ ಮೇಲೆ
ತಾ ಬೆಳೆದೆನೆನ್ನುವುದರತ್ತ ನೆನಪು
, ಇನಿಪು.
ತನ್ನತನ ಬೆಳೆಸಿಕೊಳ್ಳುವ ಹೆಣಗು….

ಈ ಕವಿತೆಗಳ ಉದ್ದಕ್ಕೂ ತುಡಿಯುತ್ತಿದೆ.

ಈ ಕಿಶೋರ ಕಾವ್ಯದಲ್ಲಿ ಹಲವೆಡೆ ಕವಿತೆಯ ಆರಂಭದಲ್ಲಿ ಒದಗಿಬಂದ ಕಾವು ಬರಬರುತ್ತಾ ಕವನದ ಕಡೆಯ ಭಾಗದಲ್ಲಿ ತಣ್ಣಗಾಗಿ, ಕವನಕ್ಕೆ ಸರಿಯಾದ ಒಂದು ಮುಕ್ತಾಯವನ್ನು ತರದೆ ಹೋಗುತ್ತದೆ.  ನಿದರ್ಶನಕ್ಕೆ ಮೊದಲ ಪದ್ಯ ‘ಕಿಶೋರಿ’ಯನ್ನೇ ನೋಡಬಹುದು.  ಹೇಳಬೇಕಾದ ಇನ್ನೊಂದು ಮಾತೆಂದರೆ, ಈ ಕವಿತೆ ಒಂದು ನೆಲೆಯಲ್ಲಿ ಅತಿಯಾದ ಪ್ರಾಸಪ್ರಿಯತೆಗೆ ತೆಕ್ಕೆ ಬಿದ್ದರೆ, ಇನ್ನೊಂದು ನೆಲೆಯಲ್ಲಿ ಕೇವಲ ಗದ್ಯತನಕ್ಕೆ ಇಳಿಯುತ್ತದೆ.  ಈ ಎರಡು ಸ್ತರಗಳ ನಡುವೆ ತಕ್ಕಷ್ಟು ಹದಗೊಂಡ ಕವಿತೆಗಳೂ, ಹರಳುಗೊಂಡ ಅಭಿವ್ಯಕ್ತಿಯ ತುಣುಕುಗಳೂ ಇಲ್ಲಿವೆ ಎನ್ನುವುದು ಇವರ ಕಾವ್ಯ ಜೀವನದ ಬಗ್ಗೆ ಭರವಸೆಯನ್ನು ಹುಟ್ಟಿಸುವ ಸಂಗತಿ.  ‘ಮೊದಲು, ಈಗ, ಕೊನೆಗೆ’ (ಪು. ೪), ‘ಇದ್ದಂತೆ ನೀನು ಬಾ’ (ಪು. ೭), ‘ಹೊಸ ಆಯಾಮ’ (ಪು. ೯), ‘ಕಪ್ಪೆ’ (ಪು. ೮), ‘ಬಾವಲಿ’ (ಪು. ೨೦) ಇಂಥ ಕವಿತೆಗಳನ್ನೂ,

ತನ್ನ ಸಂವೇದನೆಯ ತುಡಿತ ಮಿಡತವನ್ನೆಲ್ಲ
ಚಿಪ್ಪಿನಡಿಯಲ್ಲಿ ಹುದುಗಿಸಿಡುತಿದೆ ಆಮೆ
;
ಪರಿಸರದ ತೆಳು ನೀರ ಸೀಳಿ ಮುಳುಗುವ ಚಪಲ
(ಕಿಶೋರಿ)
ಬಿಳಿ ಸುಳ್ಳು ಪೌಡರು ಬಳಿದಷ್ಟು ಸಲೀಸು (ಕಿಶೋರಿ)
ಮದುವೆಗೆ ಮುನ್ನ ಎಲ್ಲರೂ ಅಷ್ಟೆ.
ತುಂಟ
, ಪೋರ, ಚೋರ.
ಜಾರ ಕೂಡ

(
ಮೊದಲು, ಈಗ, ಕೊನೆಗೆ)

ಇಂಥ ಕೆಲವು ಪಂಕ್ತಿಗಳು ಮೂಡಿಸುವ ಚಿತ್ರವನ್ನು ಗಮನಿಸಬಹುದು.

ನಾಗಲಕ್ಷ್ಮಿಯವರ ಕವಿತೆಗಳ ಸೊಗಸು ಇರುವುದು ಅವರು ಗೃಹಿಣಿಯಾಗಿ ಪಡೆದ ಸಹಜಾನುಭವಗಳನ್ನು ನಿರೂಪಿಸುವಲ್ಲಿ.  ‘ಮೊದಲು, ಈಗ, ಕೊನೆಗೆ’ ಕವಿತೆ, ಹೆಣ್ಣಾದವಳು ಗಂಡಸಿನ ಸ್ವಭಾವವನ್ನು, ಅತ್ಯಂತ ಸೊಗಸಾಗಿ ವಿಶ್ಲೇಷಿಸಿದ ಪದ್ಯವಾಗಿದೆ.  ಮದುವೆಗೆ ಮೊದಲಿನ ‘ತುಂಟ, ಪೋರ, ಚೋರ, ಜಾರ ಕೂಡ’ ಆದ ಗಂಡಿನ ಮನಸ್ಸು ಮದುವೆಯ ನಂತರ ಹೇಗೆ ಪಳಗುತ್ತಾ ತನ್ನನ್ನು ತಾನೆ ಒಂದು ಚೌಕಟ್ಟಿಗೆ ಒಳಗುಪಡಿಸಿಕೊಂಡು, ‘ಕೊಳೆ ತಾಗೀತೆನ್ನುತ ಅನುದಿನ, ಗಾಜು ಶುಭ್ರವಾಗಿಸುವ’ ಪಟ್ಟನ್ನು ತಾಳುತ್ತದೆಂಬ ಸಂಗತಿ ಗಂಭೀರ-ವಿನೋದದಲ್ಲಿ ನಿರೂಪಿತವಾಗಿದೆ.  ಹಾಗೆಯೇ ಮದುವೆಯಾದ ನಂತರ ಹೆಣ್ಣಿನ ವ್ಯಕ್ತಿತ್ವಕ್ಕೆ ಒದಗುವ ಆಯಾಮವನ್ನು ‘ಹೊಸ ಆಯಾಮ’ (ಪು. ೯) ಕವಿತೆಯಲ್ಲಿ ಚಿತ್ರಿಸಿ ‘ಇನ್ನು ನಡೆವುದು ಮೂರು-ಕಾಲು-ಓಟದ ಪಂದ್ಯ’ (Three legged-race) ಎಂಬ ಶಬ್ದ ಚಿತ್ರದಲ್ಲಿ ಸಂಸಾರ ಜೀವನದ ರೀತಿಯನ್ನು ಹಿಡಿದಿರಿಸಿರುವುದು ಸೊಗಸಾಗಿದೆ.  ‘ತೌರಿನಿಂದ’ (ಪು.೧೩) ಎಂಬ ಕವಿತೆಯೊಳಗಿನ ಅನುಭವ, ‘ಬಾವಲಿ’ (ಪು. ೨೦)ಯಲ್ಲಿ ಅತ್ತಿಗೆಯ ನಡವಳಿಕೆಯನ್ನು ವಿಡಂಬಿಸುವಲ್ಲಿ ತಾಳುವ ಧೋರಣೆ, ಇವು ನಾಗಲಕ್ಷ್ಮಿಯವರ ಸ್ವಾನುಭವಕ್ಕೆ ತೀರಾ ಹತ್ತಿರವಾದದ್ದು. ಇವನ್ನೆಲ್ಲ ಗಮನಿಸಿದರೆ ನಾಗಲಕ್ಷ್ಮಿಯವರು ಎಷ್ಟು ಒಳ್ಳೆಯ ರೀತಿಯಲ್ಲಿ ಕವಿತೆಗಳನ್ನು ಬರೆಯಬಲ್ಲರು ಎನ್ನುವುದು ಮನದಟ್ಟಾಗುತ್ತದೆ.

ನಾಗಲಕ್ಷ್ಮಿ ಯವರ ವ್ಯಕ್ತಿತ್ವಕ್ಕೆ, ಗರತಿತನವಲ್ಲದೆ, ಇನ್ನೊಂದು ಆಯಾಮವೂ ಉಂಟು.  ಅವರೀಗ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಪದವಿ ತರಗತಿಯ ವಿದ್ಯಾರ್ಥಿನಿ.  ಇದರಿಂದಾಗಿ ಸಹಜವಾಗಿಯೆ ಅವರ ಕವಿತೆಗೆ ಕನ್ನಡ ಹಾಗೂ ಇನ್ನಿತರ ಸಾಹಿತ್ಯದ ಅಧ್ಯಯನದ ಹಿನ್ನೆಲೆ ಒದಗಿಬಂದಿದೆ.  ಇಲ್ಲದಿದ್ದರೆ ‘ದೇಕಬ್ಬೆ’ಯಂಥ ಪದ್ಯ (ಅದರಲ್ಲಿ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯ ಅಧ್ಯಯನದ ಪ್ರದರ್ಶನವೆ ಮಿಗಿಲಾಗಿದ್ದರೂ)ವಾಗಲಿ, ಇಂಗ್ಲಿಷ್‌ನಿಂದ ಅನುವಾದ ಮಾಡುವ (‘ಇದ್ದಂತೆ ನೀನು ಬಾ’ – ರವೀಂದ್ರರ ಕವಿತೆಯ ಸೊಗಸಾದ ರೂಪಾಂತರ) ಪ್ರವೃತ್ತಿಗಳಾಗಲಿ, ಈ ಸಂಗ್ರಹದ ಭಾಷೆಯಲ್ಲಿ ಬೆರೆತಿರುವ ಹಳಗನ್ನಡ ಪಳೆಯುಳಿಕೆಗಳಾಗಲಿ (‘ಇನಿಪು’ ; ‘ಸುಮಚಯದಿ’ ‘ವಿಷಯಗಳ ಹೊಡೆ’ ; ‘ಮಳೆಗಳು ಮುಗಿಯೆ’ ‘ಸನ್ಯಸನದಿಂ ಮಡಿದ’ ಇತ್ಯಾದಿ) ಕಾಣಿಸಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ.

ಶ್ರೀಮತಿ ನಾಗಲಕ್ಷ್ಮಿಯವರ ಕವಿತೆಯಲ್ಲಿ ಲವಲವಿಕೆಯಿದೆ, ಅಧ್ಯಯನದ ಹಿನ್ನೆಲೆಯಿದೆ, ಸೂಕ್ಷ್ಮಾವಲೋಕನ ಸಾಮರ್ಥ್ಯವಿದೆ, ಪಡೆದಷ್ಟು ಅನುಭವಗಳನ್ನು ತಮ್ಮದೇ ಆದ ರೀತಿಯಲ್ಲಿ ರೂಪಿಸುವ ಪ್ರಯತ್ನವಿದೆ; ಎಲ್ಲದಕ್ಕೂ ಮಿಗಿಲಾಗಿ ಒಂದು ಬಗೆಯ ಸಮತೂಕದ ದೃಷ್ಟಿಯಿದೆ.  ಈ ಎಲ್ಲ ಒಳ್ಳೆಯ ಲಕ್ಷಣಗಳಿಂದ ಇವರ ನಾಳಿನ ಕಾವ್ಯಜೀವನ ಕುತೂಹಲವನ್ನೂ ಭರವಸೆಯನ್ನೂ ಹುಟ್ಟಿಸುತ್ತದೆ.

‘ಕಿಶೋರಿ’ ಕವನ ಸಂಗ್ರಹದ ಮೂಲಕ ಕನ್ನಡ ಸಾಹಿತ್ಯಕ್ಕೆ ಕಾಲಿಡುತ್ತಿರುವ ನಾಗಲಕ್ಷ್ಮಿಯವರನ್ನು ಅಭಿನಂದಿಸಿ, ಯಶಸ್ಸನ್ನು ಕೋರುತ್ತೇನೆ.

ಕಿಶೋರಿ : ನಾಗಲಕ್ಷಿ  ಹರಿಹರೇಶ್ವರ, ೧೯೭೪.