ಕಾವ್ಯ ನಿರ್ಮಿತಿ ತುಂಬಾ ಗಂಭೀರವಾದ ಹಾಗೂ ತೀವ್ರವಾದ ಕಳಕಳಿಯಿಂದ ಕೂಡಿದ ಕೆಲಸ ಎನ್ನುವ ಭಾವನೆ, ಈ ಹೊತ್ತು ಕವಿತೆ ಬರೆಯುತ್ತಿರುವ ಬಹುಪಾಲು ಲೇಖಕರಲ್ಲಿ ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆಯೇನೋ ಎಂದು ನನಗೆ ಅನ್ನಿಸತೊಡಗಿದೆ. ಬರೆದದ್ದು ಓದುಗನನ್ನು ತಡೆದು, ಮುಖಾಮುಖಿಯಾಗಿ ನಿಲ್ಲಿಸಿಕೊಂಡು, ಕವಿತೆಯ ಬಗ್ಗೆ ಗಾಢವಾಗಿ ಆಲೋಚಿಸುವಂತೆ ಮಾಡುವ ಅಥವಾ ಹೊಸತೊಂದು ಅನುಭವದಲ್ಲಿ ತನ್ಮಯಗೊಳಿಸುವ ಬದಲಾಗಿ, ತೀರಾ ಸಲೀಸಾಗಿ ಅರ್ಥವಾಗುತ್ತ, ಯಾವುದೋ ಲೋಕಾಭಿರಾಮದ ಸ್ಥಿತಿಯಲ್ಲಿ, ಇಲ್ಲವೆ ಚಮತ್ಕಾರದಲ್ಲಿ ಥಟ್ಟನೆ ಸಿಡಿಯುವ ಪಟಾಕಿಯಾಗುವ ಕಡೆಗೆ ವಾಲುತ್ತಿರುವಂತೆ ತೋರುತ್ತದೆ.  ಹೀಗೆಂದರೆ, ಕವಿತೆ ಓದುಗನ ಪಾಲಿಗೆ ಕೇವಲ ಬುದ್ಧಿಯ ಕಸರತ್ತಾಗಿ, ಅದನ್ನು ಅರ್ಥ ಮಾಡಿಕೊಳ್ಳುವ ಯೋಗ್ಯತೆ ತನಗೆ ಅಥವಾ ತನ್ನಂಥ ಕೆಲವರಿಗೆ ಮಾತ್ರ ಸಿದ್ಧಿಸಿದೆ ಎಂಬ ಅಹಮಿಕೆಯನ್ನು ಹುಟ್ಟಿಸುವಂತಿರಬೇಕು ಎಂದಲ್ಲ.  ಅಂಥ ಕವಿತೆಯ ಕಾಲವೂ ಮುಗಿದುಹೋಗಿ ಹಲವು ವರ್ಷಗಳೇ ಉರುಳಿವೆ.  ಆದರೆ ಕಾವ್ಯ ಕಾಯಕದ ಬಗ್ಗೆ ಗಂಭೀರವಾಗಿ ಪ್ರವರ್ತಿಸುವ ಹಾಗೂ ಸುಸಂಗತವಾದ ಬಂಧವೊಂದರಲ್ಲಿ ಭಾವನೆಗಳನ್ನು ವ್ಯವಸ್ಥೆಗೊಳಿಸುವ ಶಿಲ್ಪದ ಬಗ್ಗೆ ತಕ್ಕಷ್ಟು ಕಾಳಜಿ ವಹಿಸುವ ಕವಿಗಳಿಗಾಗಿ ಮತ್ತೆ ನಾವು ಕಾಯುವ ಹಂತಕ್ಕೆ ಬಂದಿದ್ದೇವೆ.  ಯಾಕೆಂದರೆ ನವೋದಯ ಹಾಗೂ ನವ್ಯಮಾರ್ಗದ ಕೆಲವು ನಿಜವಾದ ಕವಿಗಳಿಗೆ ಕಾವ್ಯಶಿಲ್ಪದ ಬಗ್ಗೆ ಇದ್ದ ಆ ಎಚ್ಚರ, ಈಚಿನ ನವ್ಯಾನುಕರಣದ ಸಂದರ್ಭದಲ್ಲಿ ಕಾಣದಾಗಿ, ಕವಿತೆ ಯಾವುದೇ ಒಂದು ರಚನೆ ಅಥವಾ ಕಟ್ಟಡದ ಕಟ್ಟುಪಾಡಿಗೂ ಒಳಗಾಗದೆ, ಜಾಳು ಜಾಳಾಗುತ್ತ, ಅತ್ಯಂತ ವಾಚಾಳಿಯಾಗುವ ಅಪಾಯದ ಕಂದರಕ್ಕೆ ಜಾರಿದಂತೆ ತೋರುತ್ತದೆ.  ಹೀಗಾಗಿ ಕವಿತೆ ಎನ್ನುವುದು ಎಷ್ಟೋ ವೇಳೆ ಕೇವಲ ‘ಪದ್ಯ’ವಾಗುತ್ತ, ವೈಯಕ್ತಿಕ ಅನಿಸಿಕೆಗಳ ಒಂದು ಸುದೀರ್ಘವಾದ ಭಾಷಣವಾಗುತ್ತ, ಬೇಸರದ ಏಕತಾನತೆಗೆ ದಾರಿಯಾಗಿದೆ ಎಂಬುದನ್ನು, ಕಳೆದ ಹತ್ತು-ಹನ್ನೆರಡು ವರ್ಷಗಳಲ್ಲಿ ಪ್ರಕಟವಾಗಿರುವ ಬಹುಪಾಲು ಕವನ ಸಂಗ್ರಹಗಳು ಸಮರ್ಥಿಸುತ್ತವೆ ಎನ್ನುವುದು ನನ್ನ ಇತ್ತೀಚಿಗಿನ ಅನುಭವವಾಗಿದೆ.  ಆದರೆ ಈ ಮಾತನ್ನು ಹೇಳುವುದರ ಮೂಲಕ ಈ ನಡುವೆ ಕಾವ್ಯಕ್ಷೇತ್ರದಲ್ಲಿ  ನಿಜವಾಗಿಯೂ ಗಂಭೀರವಾದ ಕಾಳಜಿಯಿಂದ ಕೆಲಸ ಮಾಡುತ್ತ ಇರುವ ಕೆಲವರ ಕಾವ್ಯ ಸಾಧನೆಯನ್ನು ನಾನು ನಿರ್ಲಕ್ಷಿಸುತ್ತಿದ್ದೇನೆ ಎಂದು ಯಾರೂ ತಿಳಿಯಬಾರದು.

ಕುಮಾರಿ ಪ್ರತಿಭಾ ಅವರ ‘ನಾವು ಹುಡುಗಿಯರೇ ಹೀಗೆ’ ಎಂಬ ಈ ಕವನ ಸಂಗ್ರಹದ ಕವಿತೆಗಳನ್ನು ಓದುವಾಗ, ಈ ಪರಿಸರದಲ್ಲಿ ಅವರು ಹೇಗೆ ಬೇರೆಯಾಗಿ ನಿಲ್ಲುವ ಪ್ರಯತ್ನ ಮಾಡಿದ್ದಾರೆಂಬುದನ್ನು ಪರಿಶೀಲಿಸಲು, ಈ ಹಿನ್ನೆಲೆಯ ಕೆಲವು ಮಾತುಗಳನ್ನು ನಾನು ಪ್ರಸ್ತಾಪಿಸಬೇಕಾಯಿತು.  ನಾನು ಇದುವರೆಗೂ ಪ್ರಸ್ತಾಪಿಸಿದ ದೌರ್ಬಲ್ಯಗಳನ್ನು ಪ್ರತಿಭಾ ಅವರ ಕವಿತೆ ಸಂಪೂರ್ಣವಾಗಿ ದಾಟಿದೆ ಎಂದು ಹೇಳಲಾಗದಿದ್ದರೂ, ಕೆಲವೆಡೆ ಅದನ್ನು ದಾಟಿ ಅವರ ಕವಿತೆ ಬೇರೊಂದು ಸ್ವಂತ ನೆಲೆಯಲ್ಲಿ ನಿಲ್ಲುವ ಪ್ರಯತ್ನದಲ್ಲಿ ಸಫಲವಾಗಿದೆ ಎಂಬುದು ತುಂಬ ಸಂತೋಷದ ಸಂಗತಿಯಾಗಿದೆ.  ‘ದಿನಕರನು ಬರಲಿಲ್ಲ’ ಎಂಬ ಪದ್ಯ ಏನನ್ನು ಹೇಳಬೇಕೆಂದು ಉದ್ದೇಶಿಸಿತೋ, ಅದನ್ನು ಹೇಳಲು ಸಾಧ್ಯವಾಗದೆ, ಕಾವಿಲ್ಲದೆ, ತಕ್ಕ ಶಿಲ್ಪವಿಲ್ಲದೆ ಬರೀ ಮಾತುಗಾರಿಕೆಯಾಗಿದೆ; ‘ಮಳೆಯ ಮುಸ್ಸಂಜೆ’ ಬರೀ ಒಂದು ರಚನೆಯಾಗಿದೆ; ‘ನೋಡಿದಿರಾ’ ಎಂಬ ಪದ್ಯ, ಬೇಂದ್ರೆಯವರ ‘ಹಕ್ಕಿ ಹಾರುತಿದೆ ನೋಡಿದಿರಾ’ ಕವಿತೆಯ ಅನುಕರಣೆಯಾಗಿರುವುದರ ಜತೆಗೆ, ಆ ಪದ್ಯ ಎಲ್ಲಿಗೆ ಬೇಕಾದರಲ್ಲಿಗೆ ನಿಲ್ಲಬಹುದಾಗಿತ್ತು ಅನ್ನಿಸುತ್ತದೆ; ‘ಗುಟ್ಟು’ ನಿಲ್ಲಬೇಕಾದ ನಿಲುಗಡೆಯನ್ನು ದಾಟಿ ಮುಂದೆ ಹೋಗಿ ವಾಚ್ಯವಾಗಿದೆ; ‘ನರಮೇಧ’ದಲ್ಲಿ ಈ ಕವಿತೆಯ ಭಾವವಾದ ದುರಂತ ಹೆಪ್ಪುಗಟ್ಟಿದ ಅನುಭವವಾಗಿ ಮೂಡಿಲ್ಲ; – ಹೀಗೆ ಅಂಶ ಅಂಶಗಳಲ್ಲಿ ಕಾವ್ಯವಾಗುತ್ತ, ಬಹುಮಟ್ಟಿಗೆ ‘ಪದ್ಯ’ಗಳೇ ಆದ ನಿದರ್ಶನಗಳು ಇಲ್ಲಿ ತಕ್ಕಷ್ಟಿವೆ.

ಆದರೆ, ಇನ್ನುಳಿದ ಬಹುಪಾಲು ಕವಿತೆಗಳನ್ನು ಓದಿದ ಕೂಡಲೇ ಸ್ತಬ್ದವಾದ ವಾತಾವರಣದಲ್ಲಿ ಹೊಸಗಾಳಿ ತೀಡಿದಂತಾಗುತ್ತದೆ; ನಿಂತ ನೀರಿಗೆ ನೆರೆ ನುಗ್ಗಿ ಮುಂದಕ್ಕೆ ಚಲಿಸಿದ ಅನುಭವವಾಗುತ್ತದೆ; ಯಾವುದೇ ತೋರಿಕೆಗಳಿಲ್ಲದ, ಭ್ರಮೆಗಳಿಲ್ಲದ ನಿಲುವಿನಲ್ಲಿ ನಿಂತ ಹೆಣ್ಣೊಬ್ಬಳು ತನ್ನ ಕಥೆಯನ್ನು ತಾನು ಅತ್ಯಂತ ಲವಲವಿಕೆಯಿಂದ, ತಕ್ಕ ಪ್ರಾಮಾಣಿಕತೆಯಿಂದ ಹಾಗೂ ಆತ್ಮೀಯತೆಯಿಂದ ಹೇಳಿಕೊಳ್ಳುವ ಪರಿಯನ್ನು ಇಲ್ಲಿನ ಕವಿತೆಗಳು ಸಚಿತ್ರವಾಗಿ ಅಭಿನಯಿಸಿ ತೋರುತ್ತವೆ.

ಈ ಸಂಗ್ರಹದ ಕವನಗಳ ಕೇಂದ್ರ ಒಬ್ಬ ಹುಡುಗಿ.  ಅವಳು ಸಾಮಾನ್ಯಳಾದ ಹುಡುಗಿ ಅಲ್ಲ, ತುಂಬ ಧೈರ್ಯದ ಹುಡುಗಿ; ಹೆಜ್ಜೆಯಿಂದ ಹೆಜ್ಜೆಗೆ ಬೆಳೆಯುತ್ತಿರುವ ಹುಡುಗಿ.  ಹುಡುಗಿಯಾದ ತಾನು ಪದ್ಯ ಬರೆದು ಏನನ್ನೋ ಸಾಧಿಸುತ್ತಿದ್ದೇನೆಂಬ ಭ್ರಮೆಯಾಗಲೀ, ಹೆಣ್ಣಾದುದರಿಂದ ತಾನು ಗಂಡಿಗಿಂತ ಹೇಗೋ ಯಾಕೋ ಕಡಿಮೆ ಎಂಬ ಸಾಮಾನ್ಯವಾದ ಕೀಳರಿಮೆಯ ಪರಿಣಾಮದಿಂದ ತಾಳುವ ಅಹಂ ನಿಷ್ಠತೆಯಾಗಲೀ, ಗಂಡಿನ ಜತೆಗೆ ಸ್ಪರ್ಧಿಸುವುದರಿಂದಲೇ ತಾನು ತನ್ನ ವ್ಯಕ್ತಿತ್ವವನ್ನು ಉಳಿಸಿಕೊಳ್ಳಬಲ್ಲೆನೆಂಬ ಧೋರಣೆಯಾಗಲೀ, ಯಾವುದೂ ಇಲ್ಲಿಲ್ಲ.  ತಾನು ಹೆಣ್ಣಾಗಿರುವುದರ ಸಹಜತೆಯನ್ನು ಒಪ್ಪಿಕೊಳ್ಳುತ್ತಾ, ತನ್ನೊಳಗಿನ ಅನಿಸಿಕೆಗಳನ್ನು, ತೀವ್ರತೆಯಿಂದ ತೋಡಿಕೊಳ್ಳುವ ಪ್ರತಿಭಾ ಅವರ ಈ ಪದ್ಯಗಳು ತಮ್ಮ ಜೀವಂತಿಕೆಯಿಂದ, ಹೊಸತನದಿಂದ ಮನಸ್ಸನ್ನು ಹಿಡಿದು ನಿಲ್ಲಿಸಿಕೊಳ್ಳುತ್ತವೆ.

ಈ ಸಂಗ್ರಹದ ಕವಿತೆಗಳೆಲ್ಲ  ಒಂದು ವಸ್ತು ಕೇಂದ್ರಕ್ಕೆ ಬದ್ಧವಾಗಿರುವುದು, ಈ ಕೃತಿಯ ಒಂದು ವಿಶೇಷವಾಗಿದೆ.  ಹುಡುಗಿಯೊಬ್ಬಳು ತಾನೊಲಿದ ಹುಡುಗನ ಜತೆಗೆ ಬೆಳೆಸಿದ ಸಖ್ಯಗಳು, ತನ್ನ ಖಾಸಗೀ ಬದುಕಿನ ಸುಂದರ ಸಂಗತಿಗಳು ಮತ್ತು ಈ ಸಂಬಂಧದ ಸುತ್ತ ನಡೆಯುವ ಇತರ ಘಟನೆಗಳು ಈ ಕಾವ್ಯ ಸಂಗ್ರಹದ ವಸ್ತುಗಳಾಗಿವೆ.  ಈ ಎಲ್ಲದರ ಕೇಂದ್ರದಲ್ಲಿರುವ ಈ ಹುಡುಗಿ ತನ್ನ ಕತೆಯನ್ನು ಹೇಳಿಕೊಳ್ಳುತ್ತಾ, ಇವಳಂಥ ಎಲ್ಲ ಹುಡುಗಿಯರ ದ್ವಂದ್ವವನ್ನು ಪ್ರತಿನಿಧಿಸುತ್ತಾಳೆ. ‘ನಾವು ಹುಡುಗಿಯರೇ ಹೀಗೆ’ ಎಂಬ ಕವಿತೆ, ಅತ್ಯಂತ ಆಪ್ತವಾದ ಧಾಟಿಯಲ್ಲಿ, ತನ್ನ ಒಳಗಿನ ಪದರ ಪದರಗಳನ್ನೂ ನಿಸ್ಸಂಕೋಚವಾಗಿ ಬಿಚ್ಚಿ ಹೇಳುವ, ಸ್ವಪ್ರಜ್ಞೆಯ ನೆಲೆಯಲ್ಲಿ ನಿಂತ ಮಧ್ಯಮವರ್ಗದ ಹುಡುಗಿಯರ ಅಸಹಾಯಕ ವಿಷಾದದ ಕತೆಯನ್ನು ಸೊಗಸಾಗಿ ನಾಟ್ಯೀಕರಿಸುತ್ತದೆ.

ತನ್ನ ಪ್ರೀತಿ, ಸಂಬಂಧಗಳು, ತನ್ನ ಹುಡುಗನ ಸ್ವಭಾವ, ತನ್ನ ಪ್ರಣಯದೊಳಗಿನ ರಮ್ಯತೆಗಳು, ಆತಂಕಗಳು, ಭಯಗಳು ಇತ್ಯಾದಿಗಳನ್ನು ಹೇಳಿಕೊಳ್ಳುತ್ತಲೇ, ಸುತ್ತಣ ಪರಿಸರದ ಹೆಣ್ಣಿನ ಪಾಡುಗಳನ್ನೂ ಈ ಕವಿತೆಗಳು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತವೆ.  ವರದಕ್ಷಿಣೆಯ ಹೆಸರಿನಲ್ಲಿ ಹೆಣ್ಣಿನ ಬದುಕಿಗೆ ಒದಗುವ ದುರಂತ (ಸುಟ್ಟು ಸತ್ತ ಹೆಣ್ಣು); ಪೊಲೀಸರಿಂದ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳು (ಖಾಕಿ ದಿರುಸಿನ ಕಂಸ); ಅಪ್ಪ-ಅಮ್ಮನ ಮಾತಿನ ಗೆರೆಯನ್ನು ದಾಟದ ಗಂಡನ ಜೊತೆ ಬಾಳ್ವೆ ಮಾಡುತ್ತಾ, ಯಾವುದೇ ಸ್ವಾತಂತ್ರ ವಿಲ್ಲದ ಈ ಪರಿಸರದಿಂದ ಪಾರಾಗುವ ಆಸೆಯಿದ್ದರೂ ಮನೆತನದ ಮರ್ಯಾದೆಯ ಕೆಸರಿನಲ್ಲಿ ಸಿಕ್ಕಿಕೊಂಡ ಗೃಹಿಣಿಯ ತಾಕಲಾಟಗಳು (ನಾನು); ಇರಾನಿನ ಹುಡುಗರೊಂದಿಗೆ ಚಕ್ಕಂದವಾಡುವ ಹುಡುಗಿಯರು (ಪ್ರಶ್ನೆ-ಉತ್ತರ); ದಾರಿಬದಿಯಲ್ಲಿ ನಿಂತು ಕಂಡ ಚೆಲುವಾದ ಹೆಣ್ಣಿಗೆ ಕೈ ಚಾಚುವ ಷೋಕೀ ಹುಡುಗರಿಂದ ಹುಡುಗಿಯರಿಗೆ ಒದಗುವ ಗಾಬರಿ (ಒಂದು ಸಂಜೆಯ ಒಂದು ಸಣ್ಣ ಘಟನೆ); ತಾನು ಗಾಡ್ರೆಜ್ ಬೀರು ಒಂದನ್ನು ಮನೆಗೆ ಕೊಳ್ಳಲು ಆಶಿಸಿದಾಗ, ಅದಕ್ಕೆ ಗಂಡನು ತೋರಿದ ಪ್ರತಿಕ್ರಿಯೆಗೆ, ತನ್ನ ಪ್ರತಿಭಟನೆಯನ್ನು ವಿಲಕ್ಷಣವಾಗಿ ದಾಖಲು ಮಾಡುವ ಮಧ್ಯಮವರ್ಗದ ಸಂಸಾರದ ಗೃಹಿಣಿಯ ಪ್ರಸಂಗ (ಬೀರು); – ಇತ್ಯಾದಿಗಳನ್ನು ಕುರಿತು ಬರೆಯುತ್ತಲೇ ಸುತ್ತಣ ಹೆಣ್ಣಿನ ಬದುಕಿನೊಂದಿಗೆ ತಮ್ಮನ್ನು ಸಂಬಂಧಿಸಿಕೊಳ್ಳುವ ಪ್ರತಿಭಾ, ಎಲ್ಲಿಯೂ ತನ್ನ ಅನುಭವಕ್ಕೆ ಎಟುಕದ ಏನನ್ನೂ ಹೇಳಲು ಹೋಗಿಲ್ಲ.  ಅಥವಾ ಹೆಣ್ತನದ ಹಿರಿಮೆಯನ್ನು ಅನಗತ್ಯವಾಗಿ ವೈಭವಿಸುವ, ಇಲ್ಲವೆ ವೈಚಾರಿಕತೆಯ ಸೋಗಿನಲ್ಲಿ ಕೀಳ್ಗಳೆದು ನೋಡುವ, ರಭಸಕ್ಕೆ ಒಳಗಾಗದೆ, ಆತ್ಮ ಪ್ರತ್ಯಯ ಮೂಲವಾದ ಒಂದು ಆರೋಗ್ಯಕರವಾದ ನಿಲುವಿನಿಂದ ಬದುಕನ್ನು ಗ್ರಹಿಸಿರುವ ಕ್ರಮ ಅತ್ಯಂತ ಅಭಿನಂದನೀಯವಾಗಿದೆ.

‘ನಾವು ಹುಡುಗಿಯರೇ ಹೀಗೆ’, ‘ನಾನು ಹುಡುಗ ಮತ್ತು ಕಾಲ’, ‘ಮದುವೆಗೆ ಹೋದದ್ದು’, ‘ಒಂದು ಸಂಜೆಯ ಒಂದು ಸಣ್ಣ ಘಟನೆ’, ‘ಬೀರು’ – ಇಂಥ ಕೆಲವು ಸಾರ್ಥಕ ಕವಿತೆಗಳಲ್ಲಿ ಕಂಡುಬರುವ ಪ್ರತಿಭಾ ಅವರ ಕಲೆಗಾರಿಕೆ, ಅವು ತಮ್ಮ ಅನುಭವಗಳಿಂದ ಓದಿದಾಗ ಉಂಟುಮಾಡುವ ಖುಷಿ, ಅವು ಹುಟ್ಟಿಸುವ ಹೊಸತನ ಹಾಗೂ ಲವಲವಿಕೆ, ಈ ಲಕ್ಷಣಗಳು ಇಂದಿನ ಕವಿತೆಯ ಪರಿಸರದಲ್ಲಿ ಅವರನ್ನು ಬೇರೊಂದು ನೆಲೆಗೆ ನಿಲ್ಲಿಸುತ್ತವೆ.  ಈ ಮನಸ್ಸು ಬದುಕಿನ ಬೇರೆ ಬೇರೆಯ ಆಯಾಮಗಳನ್ನು ಒಳಗೊಳ್ಳುತ್ತಾ, ತನ್ನ ಬರಹದಲ್ಲಿ ಇನ್ನಷ್ಟು ವೈವಿಧ್ಯತೆಗಳನ್ನೂ, ಶಿಲ್ಪಸಿದ್ಧಿಯನ್ನೂ, ಪರಿಣತಿಯನ್ನೂ ಪಡೆಯಬಹುದೆನ್ನುವ ಭರವಸೆಯನ್ನು ಈ ಸಂಗ್ರಹ ಹುಟ್ಟಿಸುತ್ತದೆ.  ಪ್ರತಿಭಾ ಅವರ ಪ್ರತಿಭೆ ಈ ಸಾಧನೆಯ ಹಾದಿಯಲ್ಲಿ ಇನ್ನಷ್ಟು ಯಶಸ್ಸನ್ನು ಗಳಿಸಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ.

ನಾವು ಹುಡುಗಿಯರೇ ಹೀಗೆ : ಪ್ರತಿಭಾ ನಂದಕುಮಾರ, ೧೯೮೩