ನನ್ನ ಮಟ್ಟಿಗೆ ಹೇಳುವುದಾದರೆ, ಯಾವುದೇ ಒಂದು ಕವಿತೆ ಓದಿದವರಿಗೆ ಒಂದು ಬಗೆಯ ಸಂತೋಷವನ್ನು ಅಥವಾ ಖುಷಿಯನ್ನು ಕೊಡುವಂತಿರಬೇಕು.  ಇದು ಅದರ  ಮೊದಲ ಲಕ್ಷಣ.  ಇಷ್ಟನ್ನೂ ಮಾಡದ ಕವಿತೆ, ಅದೆಂಥ ಕವಿತೆ? ಹೀಗೆ ಕವಿತೆ ಕೊಡುವ ಸಂತೋಷ ಎಂಥದೆಂಬುದನ್ನು ನಿಜವಾದ ಓದುಗರೆಲ್ಲರೂ ಬಲ್ಲರು.  ಆದರೂ ಇದನ್ನು ವಿವರಿಸಿ ಹೇಳಬೇಕೆಂದರೆ, ಒಂದು ಕವಿತೆ ನಮಗೆ ಕೊಡುವ ಸಂತೋಷದಲ್ಲಿ ಹಲವು ಹಂತಗಳುಂಟು.  ಒಂದು, ಕವಿ ತನ್ನ ಅನುಭವವನ್ನು ಕಟ್ಟಿಕೊಡಲು ಬಳಸುವ ಭಾಷೆಯ ವಿನ್ಯಾಸದಿಂದ ಒದಗುವ ಸಂತೋಷ; ಎರಡು, ಈ ಭಾಷೆ ನಿರ್ಮಿಸುವ ಶಬ್ದಚಿತ್ರಗಳ ವಿಶಿಷ್ಟತೆಯಿಂದ ಒದಗುವ ಸಂತೋಷ; ಮೂರು, ಈ ಚಿತ್ರಗಳ ಮೂಲಕ ಪ್ರತೀತವಾಗುವ ಅರ್ಥಪರಂಪರೆಯ ಸೊಗಸಿನಿಂದ ಉಂಟಾಗುವ ಸಂತೋಷ; ನಾಲ್ಕು, ಈ ಶಬ್ದಾರ್ಥ ಸಹಿತತ್ವದ ಮೂಲಕ ನಮ್ಮ ಅನುಭವಕ್ಕೆ ಬರುವ ಹೊಸ ಭಾವ, ಭಾವನೆ, ಆಲೋಚನೆ, ವಿಚಾರ, ಒಟ್ಟಾರೆಯಾಗಿ ಬದುಕಿನ  ಬಗೆಗೆ ನಮ್ಮ ಗ್ರಹಿಕೆ ಹಾಗೂ ಸಂಬಂಧಗಳ ಸ್ವರೂಪವನ್ನು ಅದು ಮಾರ್ಪಡಿಸುವ ಮತ್ತು ವಿಸ್ತರಿಸುವ ವಿಧಾನದಿಂದಾಗುವ ಸಂತೋಷ.  ಹೀಗೆಯೇ ಇನ್ನೂ ಹಲವು ಹಂತಗಳಲ್ಲಿ ಈ ಸಂತೋಷ ತರಂಗಿತವಾಗುತ್ತ ಹೋಗಬಹುದು.

ಶ್ರೀಮತಿ ಕಮಲಾ ಅವರ ‘ಶಾಕುಂತಲೋಪಾಖ್ಯಾನ’ದೊಳಗಿನ ಕವಿತೆಗಳನ್ನು ನಾನು ಓದುತ್ತ ಹೋದಹಾಗೆ, ನಾನು ಈಗ ಪ್ರಸ್ತಾಪಿಸಿದ ಸಂತೋಷಗಳಲ್ಲಿ ಕೆಲವಾದರೂ ನನ್ನ ಅನುಭವಕ್ಕೆ ಬಂದಿವೆ.  ಅದಕ್ಕೆ ಕಾರಣ ಈ ಕವಿತೆಗಳು, ಕೇವಲ ಹವ್ಯಾಸದ ‘ರಚನೆ’ಗಳಾಗದೆ, ನಿಜವಾದ ಸಂವೇದನಾಶೀಲವಾದ ಕವಿ ಹೃದಯವೊಂದರ ‘ಸೃಜನೆ’ಗಳಾಗಿವೆ ಎನ್ನುವುದೇ ಆಗಿದೆ.

ಕಳೆದ ಹತ್ತು ಹದಿನೈದು ವರ್ಷಗಳ ಕನ್ನಡ ಕಾವ್ಯದ ಒಂದು ವೈಶಿಷ್ಟ ವೆಂದರೆ, ಇದ್ದಕ್ಕಿದ್ದ ಹಾಗೆ ಬಹುಸಂಖ್ಯೆಯ ಮಹಿಳೆಯರು ಕವಿತೆ ಬರೆಯಲು ಶುರು ಮಾಡಿದ್ದು.  ಕೇವಲ ಕತೆ-ಕಾದಂಬರಿ ಪ್ರಕಾರಗಳಲ್ಲಿ, ಬಹುಮಟ್ಟಿಗೆ ತಮ್ಮ ಸೀಮಿತ ಅನುಭವಗಳನ್ನೂ ಹಾಗೂ ಮಧ್ಯಮವರ್ಗದ ಸಾಮಾಜಿಕ ಸಂವೇದನೆಗಳನ್ನೂ ಅಭಿವ್ಯಕ್ತಪಡಿಸುತ್ತಿದ್ದ ಮಹಿಳೆಯರ ಮನಸ್ಸು, ಪರಂಪರಾಗತವಾದ ನಂಬಿಕೆಗಳನ್ನೂ, ವಿಚಾರಗಳನ್ನೂ ಕುರಿತು, ಇತ್ತೀಚಿನವರಂತೆ, ಪ್ರಖರವಾದ ಪ್ರತಿಕ್ರಿಯೆ ಹಾಗೂ ಚಿಕಿತ್ಸಕ ಬುದ್ಧಿಯನ್ನು ಪ್ರಕಟಿಸಿತ್ತೆಂದು ನನಗೆ ತೋರುವುದಿಲ್ಲ.  ಆದರೆ ಅದು ಈಚೆಗೆ ಕವಿತೆಯ ಮಾಧ್ಯಮದಲ್ಲಿ ತನ್ನನ್ನು ವಿಶೇಷವಾಗಿ ಪ್ರಕಟಿಸಿಕೊಳ್ಳಲು ತೊಡಗಿದ ಒಡನೆಯೇ, ಸ್ಪಷ್ಟವಾಗಿ ಗುರುತಿಸಬಹುದಾದ ಬದಲಾವಣೆಯೊಂದು ಎದ್ದು ಕಾಣಿಸಿಕೊಂಡದ್ದು ಆಶ್ಚರ್ಯದ ಹಾಗೂ ಸಂತೋಷದ ಸಂಗತಿಯಾಗಿದೆ.  ಇದ್ದಕ್ಕಿದ್ದ ಹಾಗೆ ಈ ‘ಮಹಿಳಾ ಮನಸ್ಸು’ ಕಾವ್ಯ ಮಾಧ್ಯಮದ ಸಂದರ್ಭದಲ್ಲಿ ಪರಂಪರಾಗತವಾದ ನಂಬಿಕೆ ಹಾಗೂ ವಿಚಾರಗಳನ್ನು ಪ್ರಶ್ನಿಸುತ್ತಾ, ಸಾಮಾಜಿಕವಾಗಿ ಮಹಿಳೆಯರನ್ನು ನಿಯಂತ್ರಿಸುತ್ತಿದ್ದ ಆಚಾರ ವಿಚಾರಗಳನ್ನು ಒರೆಗೆ ಹಚ್ಚುತ್ತಾ, ತನ್ನ ವೈಯಕ್ತಿಕವಾದ ಕಾಮ-ಪ್ರೇಮ ಸಂಬಂಧಿಯಾದ ಭಾವನೆ ಆಲೋಚನೆಗಳನ್ನೂ ಸಹ ಅಭಿವ್ಯಕ್ತಪಡಿಸುವಲ್ಲಿನ ಸಂಕೋಚದ ಚಿಪ್ಪನ್ನು ಒಡೆಯುತ್ತಾ, ಒಟ್ಟಾರೆಯಾಗಿ ಮುಕ್ತವಾದ ಮತ್ತು ತಕ್ಕ ಧೈರ್ಯದ ಒಂದು ಮನಃಸ್ಥಿತಿಯಲ್ಲಿ ಬದುಕಿನ ಅನುಭವಗಳಿಗೆ ಸ್ಪಂದಿಸುತ್ತಾ, ಹೊರಬಂದದ್ದು ಒಂದು ವಿಶೇಷವಾಗಿದೆ.  ಯಾವುದು ಹಲವು ವರ್ಷಗಳ ಹಿಂದಿನ ಮಹಿಳಾ ಬರಹಗಾರರಿಗೆ, ಕಥಾ ಮಾಧ್ಯಮದ ಸಂದರ್ಭದಲ್ಲಿ ಸಾಧ್ಯವಾಗಿರಲಿಲ್ಲವೋ ಅದು, ಇಂದಿನ ಕವಯಿತ್ರಿಯರಿಗೆ ಸಾಧ್ಯವಾದದ್ದರ ಹಿಂದಿನ ಕಾರಣಗಳು ಎನಿರಬಹುದು?

ಕಾರಣಗಳು ಕಾಲಗತಿಯಲ್ಲೇ ಇವೆ.  ಭಾರತೀಯ ಪುನರುಜ್ಜೀವನದ ಪರಿಣಾಮವಾಗಿ ನಮ್ಮ ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಸಾಹಿತ್ಯಕ ಜೀವನದಲ್ಲಾದ ಪರಿಣಾಮಗಳು ನಮ್ಮ ಬದುಕಿನ ಗ್ರಹಿಕೆಯ ಕ್ರಮವನ್ನು ಬದಲಾಯಿಸಿದವೆಂಬುದೂ, ನಮ್ಮ ಆಲೋಚನಾ ವಿಧಾನವನ್ನು ಮಾರ್ಪಡಿಸಿತೆಂಬುದೂ ತಿಳಿದ ವಿಚಾರವೇ.  ಅದರಲ್ಲಿಯೂ ಬಹುಸಂಖ್ಯಾತ ಮಹಿಳೆಯರಿಗೆ ದೊರೆತ ಶಿಕ್ಷಣದ ಸವಲತ್ತುಗಳು, ಉದ್ಯೋಗದ ಅವಕಾಶಗಳು, ತತ್ಪರಿಣಾಮವಾಗಿ ಅವರ ವ್ಯಕ್ತಿತ್ವದಲ್ಲಿ ಮೂಡಿದ ಆತ್ಮವಿಶ್ವಾಸ ಇತ್ಯಾದಿಗಳನ್ನು ಮುಖ್ಯವಾದುವೆಂದು ಪರಿಗಣಿಸಬಹುದು.  ಬಹುಕಾಲ ಕೃಷಿ ಮಾಡದ ಫಲವತ್ತಾದ ನೆಲದಲ್ಲಿ ಬೇಸಾಯ ಮಾಡಿದಾಗ ಬರುವ ಸಮೃದ್ಧವಾದ ಬೆಳೆಯಂತೆ, ಬಹುಸಂಖ್ಯಾತ ಮಹಿಳೆಯರು ಶಿಕ್ಷಣದ ಸವಲತ್ತನ್ನು ಪಡೆದದ್ದರಿಂದ ಹುಟ್ಟಿದ ಎಚ್ಚರ ಇದು.  ಈ ಎಚ್ಚರಕ್ಕೆ ಒಂದು ಹೊಸ ಆಯಾಮ ಪ್ರಾಪ್ತವಾದದ್ದು, ಹೊಸಗನ್ನಡದ ಮೊದಲ ಎರಡು ಸಾಹಿತ್ಯ ಚಳವಳಿಗಳ ನಂತರ ಕಾಣಿಸಿಕೊಂಡ ದಲಿತ-ಬಂಡಾಯ ಚಳವಳಿಯ ಕಾರಣದಿಂದಲೇ ಎಂದು ನನ್ನ ತಿಳಿವಳಿಕೆ.  (ಈ ಮಾತನ್ನು ಬಹುಮಂದಿ ಸಾಹಿತಿಗಳು ಒಪ್ಪುವುದಿಲ್ಲವೆಂದು ನನಗೆ ಗೊತ್ತು) ದಲಿತ- ಬಂಡಾಯ ಚಳವಳಿ ಎಂಬುದೊಂದು ಚಾರಿತ್ರಿಕ ಅನಿವಾರ್ಯತೆಯಾಗಿದ್ದು, ಇದುವರೆಗಿನ ನಿರ್ಲಕ್ಷಿತ ಹಾಗೂ ಶೋಷಿತ ಸಾಮಾಜಿಕ ಸ್ತರವೊಂದು ತನ್ನ ಮೂಕವೇದನೆಗಳಿಗೆ ಬಾಯಿ ಕೊಡಲು ತೊಡಗಿದ್ದು ಇದರ ಲಕ್ಷಣವಾಗಿದೆ.  ನನ್ನ ಪ್ರಕಾರ ಈ ಶೋಷಿತ-ನಿರ್ಲಕ್ಷಿತ ಸಾಮಾಜಿಕ ಸ್ತರದ ಇತರರೊಂದಿಗೆ ಮಹಿಳೆಯರೂ ಸೇರುತ್ತಾರೆ.  ಈ ಅರ್ಥದಲ್ಲಿ ಮಹಿಳೆಯರೂ ದಲಿತರೇ.  ಅವರೂ ಶೋಷಣೆಗೆ ಒಳಗಾದವರೇ -ಒಂದು ಕಡೆ ಪುರುಷರಿಂದ, ಮತ್ತೊಂದು ಕಡೆ ಈ ಪುರುಷಪುಂಗವರು ಬರೆದ ಶಾಸ್ತ್ರ -ಪುರಾಣಾದಿಗಳು ತಲೆಗೆ ತುರುಕಿದ ಹಾಗೂ ಸಂರಕ್ಷಿಸಿಕೊಂಡು ಬಂದ ವಿಚಾರ ಮತ್ತು ಮೌಲ್ಯಗಳಿಂದ.  ಹೀಗೆ ಈ ಪುರುಷಪ್ರಧಾನ ಮೌಲ್ಯಗಳ ತಾಳಕ್ಕೆ ತಕ್ಕ ಹಾಗೆ ಶತಮಾನಗಳಿಂದಲೂ ಕುಣಿಯುತ್ತಾ ಬಂದ ಮಹಿಳೆ, ‘ಸಿಂಗರದ ನೆವದ ಎಲ್ಲ ಸಂಕೋಲೆ’ಗಳನ್ನೂ ಒಂದೊಂದಾಗಿ ಕಳಚುತ್ತ, ಹೊಸ ಎಚ್ಚರದ ಬೆಳಕಿನಲ್ಲಿ ತನ್ನನ್ನು ತಾನು ಕಂಡುಕೊಳ್ಳತೊಡಗಿದ್ದಾಳೆ.  ಶ್ರೀಮತಿ ಕಮಲಾ ಅವರ, ಈ ಸಂಗ್ರಹದ ಹಲವು ಕವಿತೆಗಳಲ್ಲಿ ಈ ಎಚ್ಚರದ ಅಭಿವ್ಯಕ್ತಿಯನ್ನು ನಾವು ಗುರುತಿಸಬಹುದು.  ರೂಪಕನ್ವರ್‌ಳನ್ನು ಕುರಿತ ಕವಿತೆಯಲ್ಲಿ –

ಇಲ್ಲಿ ನನ್ನಂಥ ನಿನ್ನಂಥ ಹೆಣ್ಣುಗಳು
ಕಲಿತದ್ದಾದರೂ ಏನನ್ನು
?
ಕನಸು ಕೊಲ್ಲುವುದನ್ನು
ಮಾಸ್ತಿಕಲ್ಲಾಗುವುದನ್ನು
ತಲೆಯೆತ್ತಿ ನಿಲ್ಲದೆ
, ನಡೆಯದೆ
ಸಹಗಮನೆಯರಾಗುವುದನ್ನು

(ಪುಟ ೨೨)

ಎಂಬ ಪ್ರಶ್ನೆ ಹಾಗೂ ಸ್ವಗತದಲ್ಲಿ, ಮಹಿಳೆಯರು ಶತಮಾನಗಳಿಂದಲೂ ನಡೆದು ಬಂದ ದಾರಿಯನ್ನು ಅಥವಾ ಚರಿತ್ರೆಯನ್ನು ಸರಿಯಾಗಿ ಗುರುತಿಸಲಾಗಿದೆ.  ಈ ಹಿನ್ನೆಲೆಯಲ್ಲಿ, ಇವತ್ತಿನ ಹೆಣ್ಣು,

ನಾನು
ಗಂಡನೇ ದೇವರೆಂದು
ವನವಾಸ ಮಾಡಿ
ಅಗ್ನಿಗೆ ಧುಮುಕುವ

ಸೀತೆಯಲ್ಲ.
………..

ನಾನು

ದಡ್ಡ ಧರ್ಮರಾಯನ
ಗೊಡ್ಡು ಸತ್ಯಕ್ಕೆ ಬೆದರಿ
ಸೀರೆ ಸೆಳೆದುಕೊಳ್ಳುವ

ದ್ರೌಪದಿ ಅಲ್ಲ

ಎಂದು, ತನ್ನ ಪ್ರತ್ಯೇಕತೆಯನ್ನು ಸ್ಥಾಪಿಸಿಕೊಳ್ಳುವ ಧೈರ್ಯವನ್ನು ಪ್ರಕಟಿಸಿದರೂ, ವಾಸ್ತವದಲ್ಲಿ ತಾನು –

ನನ್ನೆಲ್ಲ ಸಣ್ಣತನದ
ಸ್ವಾರ್ಥದ
ಮಾನವೀಯ ಭಾವನೆಗಳ
ಒಂದು ಮೊತ್ತ

(ಪುಟ ೨೦)

ಎಂಬ ‘ಸತ್ಯ’ವನ್ನು ಒಪ್ಪಿಕೊಳ್ಳುವ ಒಂದು ವಿನಯದ ನೆಲೆಗೆ ನಿಲ್ಲುತ್ತಾಳೆ.

ಶ್ರೀಮತಿ ಕಮಲಾ ಅವರ ಕವಿತೆಗಳ ಮೂಲಕ ಪ್ರಕಟವಾಗುವ ಈ ನಿಲುವಿನಲ್ಲಿ ಆತ್ಮಪ್ರತ್ಯಯವಿದೆ; ಆದರ್ಶದ ಭ್ರಮೆಗಳಿಂದಾಚೆಯ, ವಾಸ್ತವದ ಪ್ರಜ್ಞೆ ಇದೆ; ತನ್ನ ವ್ಯಕ್ತಿತ್ವದ ಇತಿಮಿತಿಗಳ ಅರಿವಿದೆ; ಯಾವುದೇ ಸ್ಪರ್ಧಾತ್ಮಕ ಅಬ್ಬರಗಳಿಲ್ಲದ ಒಂದು ಸ್ವಸ್ಥ ಮನಃಸ್ಥಿತಿಯಲ್ಲಿ ಸುತ್ತಣ ಬದುಕಿನ ಚೆಲುವಿಗೆ, ನಲವಿಗೆ, ಒಲವಿಗೆ ತೆರೆದುಕೊಳ್ಳುವ ಹೃದಯವಿದೆ; ಗಂಡನನ್ನು ಗೆಳೆಯನೆಂದು ಕಾಣುವ ಸಹಬಾಳ್ವೆಯ ವಿವೇಕವಿದೆ.  ಈ ಸಂಗ್ರಹದ ಮೊದಲ ಕವಿತೆಯಾದ ‘ಶಾಕುಂತಲೋಪಾಖ್ಯಾನ’ ಎಂಬುದು, ಒಟ್ಟಾರೆಯಾಗಿ ಈ ಸಂಕಲನದ ಮನೋಧರ್ಮದ ಕೇಂದ್ರ ಪ್ರತೀಕವಾಗಿದೆ.

ನಮ್ಮ ಇತ್ತೀಚಿನ ಕಾವ್ಯ ಕಳೆದುಕೊಂಡದ್ದು ಮುಖ್ಯವಾಗಿ ಎರಡು ಅಂಶಗಳನ್ನು: ಒಂದು, ನಿಸರ್ಗ ಪರವಾದ ಗಾಢವಾದ ಪ್ರೀತಿಯನ್ನು : ಎರಡು, ಭಾಷೆಗಿದ್ದ ಭಾವಗೀತಾತ್ಮಕತೆಯನ್ನು.  ತನ್ನ ಬದುಕಿನ ಒಂದು ಭಾಗವಾದ ನಿಸರ್ಗದ ಚೆಲುವಿನ ಬಗ್ಗೆ ಬರೆದರೆ ತನ್ನನ್ನು ಎಲ್ಲಿ ‘ರೊಮ್ಯಾಂಟಿಕ್ ಕವಿ’ ಎಂದು ಕರೆದಾರೋ ಎಂಬ ಭಯದಿಂದ, ‘ನವೋದಯ’ದ ನಂತರದ ಎಷ್ಟೋ ಕವಿಗಳು ತಮ್ಮ ಸುತ್ತಣ ನಿಸರ್ಗ ರಮ್ಯತೆಯ ಬಗ್ಗೆ ರುಚಿಯನ್ನೇ ಕಳೆದುಕೊಂಡರೇನೊ ಎಂದು ಹಲವು ಸಲ ನನಗೆ ಅನ್ನಿಸಿದೆ.  ಹಾಗೆಯೆ ಕಾವ್ಯದ ಭಾಷೆಯನ್ನು ‘ಸಂಗೀತದ ಸಾಹಚರ್ಯದಿಂದ’ ಪಾರು ಮಾಡುವ ಹಠದಲ್ಲಿ ಅದರ ಗೇಯಾತ್ಮಕತೆಯನ್ನೆ ನಿರಾಕರಿಸಲಾಗಿತ್ತು.  ಕವಿತೆಯ ಹಾಗೂ ಓದುಗರ ಸುದೈವ, ಮತ್ತೆ ಆ ಎರಡೂ ಅಂಶಗಳೂ ಇತ್ತೀಚಿನವರ ಬರಹದ ಮೂಲಕ ಹಿಂದಕ್ಕೆ ಬಂದಿವೆ.  ಕಮಲಾ ಅವರ ‘ಯಾಕೆ ಕಾಡುತ್ತೀಯ ಕೇಶವ’, ‘ಚೈತ್ರ’, ‘ಕನಸುಗಣ್ಣಿನ ಹುಡುಗ’, ‘ಹಾಳು ಹೆಣ್ಣಿನ ಹೃದಯ’ ಇಂಥ ಕವಿತೆಗಳು ನನಗೆ ಪ್ರಿಯವಾಗುವುದು ಈ ಕಾರಣದಿಂದಲೇ.  ಮನುಷ್ಯ ಹಾಗೂ ನಿಸರ್ಗಗಳ ನಡುವಣ ಆಂತರಿಕ ಸಂಬಂಧಗಳನ್ನು ‘ಇಡಿ’ಯಾಗಿ ಗ್ರಹಿಸುವ ಕವಿತೆ ಜಗತ್ತಿನ ಬಗೆಗೆ ನಮ್ಮ ಪ್ರೀತಿಯನ್ನೂ, ಅರಿವನ್ನೂ ವಿಸ್ತರಿಸುತ್ತದೆ.

ಎಳೆಯಂದಿನ ನೆನಪುಗಳು, ಯೌವನದ ಕನಸುಗಳು ಹಾಗೂ ವಾಸ್ತವಗಳು, ನಾಳಿನ ಭರವಸೆಗಳು ಸೇರಿಕೊಂಡ ಶ್ರೀಮತಿ ಕಮಲಾ ಅವರ ಈ ಕವನಗಳು, ಜೀವನೋತ್ಸಾಹ ಪುಟಿಯುವ, ಎಚ್ಚರದ ವ್ಯಕ್ತಿತ್ವವೊಂದರ ಪರಿಚಯವನ್ನು ಮಾಡಿಕೊಡುತ್ತವೆ, ಮತ್ತು ನಾಳಿನ ಇವರ ಕವಿತೆಯ ಬಗ್ಗೆ ಹೆಚ್ಚಿನ ಭರವಸೆಯನ್ನು ನನ್ನಲ್ಲಿ ಮೂಡಿಸಿವೆ.

ಶಕುಂತಳೋಪಾಖ್ಯಾನ : ಎಂ.ಆರ್. ಕಮಲ, ೧೯೮೮.