ಎಸೆವ ಮುನ್ನುಡಿಯೆಂಬ ತಿಲಕದ
ಮಸಿಯನಿಡುವೆನು ಕೃತಿಯ ಕರಿ
ಮುಸುಡಿಗಿದು ಒಪ್ಪುವುದೊ ಇಲ್ಲವೊ ಹೇಳಲಾರಳವು?
ಕಸಿವಿಸಿಯ ನೂರೆಂಟು ನವ್ಯರು
ಹೊಸೆಯಲಾರರು ಇಂಥ ಕಗ್ಗವ
ಅಸಂಬದ್ಧ ಪ್ರಜ್ಞೆಯ ತಂತ್ರಪರಿಣತ ಕೆಂಪಕವಿಯಂತೆ.

ಕೂತ ಕುರ್ಚಿಯ ಮೇಲೆಯೇ
ಈತ ಕಂಡನು ಪುರಾಣ ಪ್ರ
ಖ್ಯಾತ ಪುರುಷರ ಕನಸ ಸಿನಿಮೀಯ ಶೈಲಿಯಲಿ
ಯಾತ ಹೊಡೆದಿದ್ದಾನೆ ಸುಮ್ಮನೆ
ಹೂತು ಒಣಗಿದ ಬಾವಿಯಲಿ
ಗೋತ ಹೊಡೆವುದೆ ಸತ್ಯ ಓದಿದ ಈ ಮಹಾಜನತೆ.

ಕೆಂಪ ಕವಿ ಕೃತವೀ ಮಹಾಕೃತಿ
ಪಂಪುಹೊಡೆದಿದೆ ತೂತು ಬುರುಡೆಗೆ
ಜೊಂಪು ಹತ್ತಲಿ ಓದಲೆಂದಿದನೆತ್ತಿ ಕೊಂಡವಗೆ
ಪಂಪ ಗಿಂಪರ ನಾಚಿಸುವ ಈ
ಗಾಂಪತನ ವರ್ಧಿಸಲಿ ಬುವಿಯಲಿ
ತಂಪು ಹೊತ್ತೊಳು ನೆನೆಯದಿರಲೀ ಕೃತಿಯ ಸಜ್ಜನರು

ಅವಲಕ್ಷಣ ಕವಿತಿಲಕ ಮಹಾಕವಿ ಕೆಂಪನ ಕೆಂಪಭಾರತಂ,
ರುದ್ರಮೂರ್ತಿಶಾಸ್ತ್ರಿ
, ೧೯೭೨