ಒಂದು ವಯಸ್ಸಿನಲ್ಲಿ ಎಲ್ಲರೂ ಪದ್ಯ ಬರೆಯುತ್ತಾರೆ;
ಹೀಗಾಗಿ ಪದ್ಯ ಗೀಚುವುದು ಎಲ್ಲರಿಗು ಇಷ್ಟ.
ಆದರೂ ನಿಜವಾದ ಪದ್ಯ ಬರೆಯುವುದು ತುಂಬ ಕಷ್ಟ.
ಈ ಮುನಿಕೃಷ್ಣಪ್ಪ ಅವರಿವರ ಹಾಗೆ ಪದ್ಯ ಬರೆಯುತ್ತಾರೆ
ಅಂದುಕೊಂಡಿದ್ದ ನನಗೆ,
ಈ ಇವರು ಇಷ್ಟು ಚೆನ್ನಾಗಿ, ಮತ್ತೆ ಅವರಿಗಿಂತಲೂ
ಭಿನ್ನವಾಗಿ ಬರೆಯಬಹುದೆಂದು,
ಇಷ್ಟೆಲ್ಲವನ್ನೂ ಒಟ್ಟಿಗೆ ಹಿಡಿದು ನೋಡುವ ಮೊದಲು
ನನಗೆ ಗೊತ್ತಿರಲಿಲ್ಲ.
ಯಾವುದೇ ಭ್ರಮೆಯಿರದ, ತಮ್ಮ ವರ್ತುಲದಲ್ಲಿ
ಸಿಕ್ಕಿದಷ್ಟನೆ ಹಿಡಿದು, ಒಳಬೆಂಕಿಯಲ್ಲಿ ಕಾಯಿಸಿ
ಕರಗಿಸಿ, ಬಡಿದು, ಮಾತಿಗೆ ಬೆಸೆದು ಮೂರ್ತಿಸುವ
ಇವರ ಕಲೆಗಾರಿಕೆಗೆ ಈ ಬಗೆಯ ಹೊಳಪಿದೆಯೆಂದು
ಮೊದಲು ಗೊತ್ತಿರಲಿಲ್ಲ.
ನಾನು ನಡೆಯುತ್ತಿರುವ ಅವರಿವರ ಪದ್ಯದ ಮಧ್ಯೆ
ಧಿಗ್ಗನೆ ಪುಟಿವ, ನಿಶ್ಶಬ್ದವಾಗಿ ದಳ ಬಿರಿದು ಕಂಪೆಸೆವ,
ಕೊಂಬೆ ರೆಂಬೆಯ ನಡುವೆ ಶಿಳ್ಳು ಹೊಡೆಯುತ ನಗುವ,
ದಾರಿಯುದ್ದಕ್ಕು ಕೆಂಪು-ಹಸುರಿನ ಕಣ್ಣ ಸನ್ನೆಗಳಲ್ಲಿ
ಚಕ್ರಗತಿಗಳ ತಡೆವ ಮತ್ತೆ ಮುಂದಕೆ ಬಿಡುವ
ಹೊಸ ತಿರುವುಗಳನ್ನು ಥಟ್ಟನೆ ತೆರೆವ
ಈ ಪದ್ಯಗಳ ಸೊಗಸು ಹೀಗಿದೆಯೆಂದು
ಮೊದಲು ಗೊತ್ತಿರಲಿಲ್ಲ.

ಮೊದಲು ಗೊತ್ತಿರಲಿಲ್ಲ : ಕೆ.ಎಂ. ಮುನಿಕೃಷ್ಣಪ್ಪ, ೧೯೮೮

ಕತ್ತಲೆಯ ಭಯವಿಲ್ಲ

ಇವರು ಇಲ್ಲಿಗೆ ಬಂದದ್ದು ಜ್ವಲಿಸುವ ವಸಂ-
ತದಲ್ಲಿ ; ಈ ವಸಂತ ವೈಭವವನ್ನು
ಇವರಂತೆ ನಿರಂತರವಾಗಿ ಹಿಡಿದಿಟ್ಟು –
ಕೊಂಡವರು ಬೇರೆ ಯಾರುಂಟು?

ಹಣ್ಣಾದ ಈ ಮರದ ಕೊಂಬೆ-ರೆಂಬೆಯ ತುಂಬ
ಎಷ್ಟೊಂದು ಹಕ್ಕಿಗಳು, ಎಷ್ಟು ಹೂವು!
ಅದೇ ಬೆರಗು, ಮತ್ತದೇ ಬೆಡಗು, ಜೋ-
ಕಾಲಿಯಾಡುತಿವೆ ಚೆಲುವು-ಒಲವು!

ಅದೇ ಖುರಪುಟಗಳನುರಣನ, ಹಸುರಿನ
ಮೇಲೆ ಗಾಲಿಗಳ ಗುರುತು, ತುಕ್ಕು
ಹಿಡಿಯುವುದು ಕಬ್ಬಿಣಕ್ಕೆ ; ಚಿನ್ನಕ್ಕಲ್ಲ.
ಆಭರಣವಾಗುವುದು ಕಾಲ ಕಾಲಕ್ಕು.

ಕಣ್ಣು ಕಾಣಿಸದ ಏಕಾಂಗಿತನದೊಳ-
ಮನೆಯೊಳಗೆ ನೆನಪುಗಳ ಮಗ್ಗದಲಿ
ಮಿಂಚಿನ ಲಾಳಿ.  ತೊಂಬತ್ತರ ಹತ್ತಿರದಲ್ಲು
ಎಂಥ ವಜ್ರದ ಬೆಳಕು ದೀಪದಲ್ಲಿ!

ನಡೆದ ದಾರಿಯ ಮೇಲೆ ಹೋದ ಹೆಜ್ಜೆಯ ಸಾಲು
ದೂರ ಬೆಟ್ಟದ ಮೇಲೆ ಬೆಳಕುಗಳ ಬೀಡು.
ತುಂಬು ಹೊಳೆಯಂತೆ ಗಂಭೀರವಾಗಿ ಹರಿ
ಯುತ್ತಲೇ ಇದೆ ಎಂದಿಗೂ ಮುಗಿಯದ ಹಾಡು.

ಎದೆ ತುಂಬ ನಕ್ಷತ್ರಗಳ ಬಚ್ಚಿಟ್ಟುಕೊಂಡ
ಚೈತನ್ಯಕ್ಕೆ ಕತ್ತಲೆಯ ಭಯವಿಲ್ಲ.
ಕಾರ್ತೀಕದಾಕಾಶದಂಥ ಉಜ್ವಲ ಕವಿಗೆ
ಮುನ್ನುಡಿಯ ಹಣತೆಗಳ ಯಾವ ಹಂಗೂ ಇಲ್ಲ.

ಎದೆತುಂಬ ನಕ್ಷತ್ರ : ಕೆ.ಎಸ್.ನ, ೨೦೦೨