ಇತ್ತೀಚಿನ ಹಲವು ವರ್ಷಗಳಲ್ಲಿ ಪ್ರಕಟವಾಗಿರುವ ಬಹುಸಂಖ್ಯೆಯ ಕವಯಿತ್ರಿಯರ ಯಾವುದೇ ಕವನ ಸಂಗ್ರಹವನ್ನು ಕೈಗೆತ್ತಿಕೊಂಡರೂ, ಅವುಗಳಲ್ಲಿ ಅಕ್ಕಮಹಾದೇವಿಯನ್ನು ವಸ್ತುವನ್ನಾಗಿ ಮಾಡಿಕೊಂಡು ಬರೆದ ಒಂದಾದರೂ ಕವಿತೆಯಿರುತ್ತದೆ ಎಂಬುದನ್ನು ಯಾರಾದರೂ ಗುರುತಿಸಬಹುದು.  ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಈ ನಮ್ಮ ಮಹಿಳೆಯರು ಅಕ್ಕನನ್ನು ಕುರಿತು ಬರೆದಿರುವ ಕವಿತೆಗಳಷ್ಟನ್ನೆ ಪ್ರತ್ಯೇಕಿಸಿ ನೋಡಿದರೆ, ಅವುಗಳು ಬೇರೆಯಾದ ಪರಿಶೀಲನೆಗೆ ಒಳಗಾಗುವಷ್ಟು ಸಂಖ್ಯೆಯಲ್ಲಿ ದೊರೆಯುತ್ತವೆ ಎನ್ನುವುದು ಸ್ವಾರಸ್ಯದ ಸಂಗತಿಯಾಗಿದೆ.  ಅಕ್ಕನ ಬದುಕು ಯಾಕೆ ಹೀಗೆ ಬಹುಸಂಖ್ಯೆಯ ಕವಯಿತ್ರಿಯರಿಗೆ ಆಕರ್ಷಕವಾಗಿದೆ ಎಂದರೆ, ಈ ನಮ್ಮ ಮಹಿಳೆಯರು ತಮ್ಮನ್ನು ಆಕೆಯ ಮೂಲಕ ಗುರುತಿಸಿಕೊಳ್ಳುವಂಥ ಭಾವನಾತ್ಮಕ ಹಾಗೂ ವೈಚಾರಿಕ ಸಾಮ್ಯವನ್ನು ಕಂಡುಕೊಂಡಿದ್ದಾರೆ ಎಂದು ಅರ್ಥ.  ಆದರೆ ಹಾಗೆ ಕನ್ನಡದ ಇನ್ನೊಬ್ಬ ಕವಯಿತ್ರಿಯಾದ ಸಂಚಿ ಹೊನ್ನಮ್ಮನ ಮೂಲಕ ಗುರುತಿಸಿಕೊಳ್ಳುವುದರಲ್ಲಿ ಇವರಿಗೆ ಯಾಕೆ ಆಸಕ್ತಿಯಿಲ್ಲ ಎಂಬುದನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳುವುದು ಒಳ್ಳೆಯದು.  ನಿಜವಾಗಿ ನೋಡಿದರೆ ಹೊಸಗನ್ನಡ ಸಾಹಿತ್ಯ ಸಂದರ್ಭದಲ್ಲಿ, ಅಕ್ಕಮಹಾದೇವಿ ಮತ್ತು ಸಂಚಿ ಹೊನ್ನಮ್ಮ ಇವರಿಬ್ಬರೂ ಮಹಿಳೆಯರಿಗೆ ಸಂಬಂಧಿಸಿದ ಎರಡು ಮಾದರಿಗಳನ್ನು ಪ್ರತಿನಿಧಿಸುತ್ತಾರೆ.  ಬಹುಶಃ ಕನ್ನಡದ, ಹೊಸಗನ್ನಡದ ಮಹಿಳಾ ಸಾಹಿತ್ಯದ ಹಿಂದೆ ಈ ಎರಡು ಮಾದರಿಗಳೂ ಇರುವಂತೆ ತೋರುತ್ತದೆ.  ‘ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು’ ಎಂಬ ಒಂದೇ ಒಂದು, ದಿಟ್ಟತನದ ಆಕ್ಷೇಪಣೆಯ ದನಿಯಿಂದ ಸಾಹಿತ್ಯದ ನೆನಪಿನಲ್ಲಿ ಉಳಿದಿರುವ ಹೊನ್ನಮ್ಮನ ‘ಹದಿಬದೆಯ ಧರ್ಮ’, ಮೂಲಭೂತವಾಗಿ ಭಾರತೀಯ ಸಾಂಪ್ರದಾಯಿಕ ಸಾಂಸಾರಿಕ ಚೌಕಟ್ಟಿನಲ್ಲಿ ಯಾವುದೇ ಬದಲಾವಣೆಯನ್ನು ಆಶಿಸದ, ಗೃಹಸ್ಥ ಧರ್ಮವನ್ನು ಪ್ರತಿಪಾದಿಸುವ ಕೃತಿಯಾಗಿದೆ.  ನಮ್ಮ ನವೋದಯ ಕಾಲದ ಬಹುಸಂಖ್ಯಾತ ಮಹಿಳಾ ಕಾದಂಬರಿಕಾರ್ತಿಯರ ನಿಲುವು (ತ್ರಿವೇಣಿ, ಇಂದಿರಾ ಇವರಂಥ ಒಬ್ಬಿಬ್ಬರನ್ನು ಬಿಟ್ಟು) ಬಹುಮಟ್ಟಿಗೆ ಸಂಚಿ ಹೊನ್ನಮ್ಮನ ‘ಮಾದರಿ’ಯನ್ನೇ ಮುಂದುವರಿಸುವ ಸ್ವರೂಪದ್ದಾಗಿದೆ ಎಂದರೆ ತಪ್ಪಲ್ಲ.  ಇದಕ್ಕೆ ‘ಪ್ರತಿ’ಯಾಗಿ ಎಂಬಂತೆ, ಇತ್ತೀಚಿನ ಮಹಿಳೆಯರ ಬರೆಹಗಳು, ಅಂದರೆ ಕತೆ, ಕಾದಂಬರಿ, ಕವಿತೆಗಳು ತಮ್ಮ ಮನೋಧರ್ಮದಲ್ಲಿ ‘ಅಕ್ಕ’ನ ಮಾದರಿಯನ್ನು ಮುಂದುವರಿಸುವಂತಿದೆ ಎನ್ನಬಹುದು.  ಅದರಲ್ಲಿಯೂ ಕವಿತೆಗಳಲ್ಲಿ ಅಕ್ಕನನ್ನು ಕುರಿತ ವಸ್ತು ತೀರ ಗಮನಾರ್ಹವಾಗಿ ಕಾಣಿಸಿಕೊಳ್ಳುತ್ತ, ಬಹುಶಃ ಈ ಕವಯಿತ್ರಿಯರ ಧೋರಣೆಯ ಕೇಂದ್ರ ಪ್ರತೀಕವೂ ಆಗಿ ಪರಿಣಮಿಸಿದೆ.  ಅದಮ್ಯವಾದ ಪ್ರೀತಿಯನ್ನು ತುಂಬಿಕೊಂಡ ಹೆಣ್ಣಿನ ವ್ಯಕ್ತಿತ್ವಕ್ಕೆ ಘನತೆಯನ್ನೂ, ಗೌರವವನ್ನೂ, ಅಪೂರ್ವವಾದ ಆತ್ಮಪ್ರತ್ಯಯವನ್ನೂ ತಂದುಕೊಟ್ಟ ಅಕ್ಕನ ಬದುಕು ನಮ್ಮ ಕವಯಿತ್ರಿಯರನೇಕರಿಗೆ ತಕ್ಕ ‘ವಸ್ತು ಪ್ರತಿರೂಪ’ (Objective Correlative) ವಾಗಿರುವುದು ಆಶ್ಚರ್ಯವೇನಲ್ಲ.

ಶ್ರೀಮತಿ ಸ. ಉಷಾ ಅವರ ಪ್ರಸ್ತುತ ಕವನ ಸಂಗ್ರಹದಲ್ಲಿ ಅಕ್ಕನನ್ನು ಕುರಿತ ಒಂದು ಕವನವಿರುವುದು ಮಾತ್ರವಲ್ಲ, ಈ ಸಂಗ್ರಹದ ಅನೇಕ ಕವನಗಳು ಹೆಣ್ಣಿನ ಬದುಕಿನ ನಿರಂತರತೆಯನ್ನು ಚಾರಿತ್ರಿಕವಾಗಿಯೂ ಗುರುತಿಸುವ ವಿಶಿಷ್ಟ ಪ್ರಯತ್ನವಾಗಿದ್ದು, ನಾನು ಈಗಾಗಲೇ ಪ್ರಸ್ತಾಪಿಸಿದ ‘ಅಕ್ಕನ ಮಾದರಿ’ಯನ್ನು ಎತ್ತಿ ಹಿಡಿಯುವ ಮನೋಧರ್ಮವನ್ನು ಪ್ರಕಟಿಸುತ್ತದೆ.

‘ಕಾಯುವಿಕೆ’ ಮತ್ತು ‘ಆತಂಕ’ಗಳು, ಹೆಣ್ಣಿನ ಬದುಕಿನಲ್ಲಿ ಪಡೆದುಕೊಳ್ಳುವ ನೆಲೆಗಳನ್ನು, ಬಹುಶಃ ಗಂಡಿನ ಬದುಕಿನಲ್ಲಿ ಅಷ್ಟರಮಟ್ಟಿಗೆ ಪಡೆದುಕೊಳ್ಳಲಾರವು.  ‘ಹೆಣ್ಣಾಗಿ ಹುಟ್ಟುವುದು’ ಎಂದರೇ ಅನೇಕ ಬಗೆಯ ಪರಿಮಿತಿಗಳಿಗೆ ಅನಿವಾರ್ಯವಾಗಿ ಒಳಗಾಗುವುದು ಎಂದು ಅರ್ಥ –

ಯಾವ ಊರಿಗೆ ಹೋದರೂ
ಅಲ್ಲೂ ಇವೆ ಕಂಬಗಳು ಗೋಡೆಗಳು
ಅಗಳುಗಳು
, ಕೋಟೆಗಳು
ನನ್ನ ಕಥೆ ಇಂದು ನಿನ್ನೆಯದಲ್ಲ
ಹರಿದಿದೆ ನಿರಂತರ

ಈ ಒಂದು ಸ್ಥಿತಿಯಲ್ಲಿ ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಹೆಣ್ಣು ತನ್ನನ್ನು ತಾನು ಕಂಡುಕೊಳ್ಳಬೇಕಾಗಿದೆ.  ಪ್ರೀತಿಗಾಗಿ ಕಾಯುತ್ತಾ, ಆತಂಕಗಳ ನಡುವೆ ಬೇಯುತ್ತಾ, ಚರಿತ್ರೆಯುದ್ದಕ್ಕೂ ಅನಾರ್ಕಲಿಯಾಗಿ, ಪೆರೋನ ಗೋರಿಯೊಳಗಿನ ಸುಂದರಿಯಾಗಿ, ವಿನತೆಯಾಗಿ, ಕದ್ರುವಾಗಿ, ಪುಂಡರೀಕನಿಗಾಗಿ ಕಾಯುವ ಮಹಾಶ್ವೇತೆಯಾಗಿ, ವಾಸಕ ಸಜ್ಜಿಕೆಯಾಗಿ, ಚೆನ್ನಮಲ್ಲಿಕಾರ್ಜುನನಿಗಾಗಿ ಲೋಕದ ಹಂಗನ್ನು ಹರಿದುಕೊಂಡು ಹೊರಟ ಅಕ್ಕಮಹಾದೇವಿಯಾಗಿ, ‘ಬಿಸಿಲ ಮಚ್ಚಿನ ಮೇಲೆ ರತ್ನಗಂಬಳಿ ಹಾಸಿ ರೇಸಿಮೆ ಕೂದಲ ಬಾಚಿ’ ರಾಜಕುಮಾರನಿಗಾಗಿ ಹಂಬಲಿಸುವ ರಾಜಕುಮಾರಿಯಾಗಿ, ನಂದ-ಬೋದರ ನಡುವೆ ನಲುಗುವ ಮೋದಾಳಿಯಾಗಿ –

ಹೇಳು ಗೆಳೆಯ
ನಿನಗನಿಸುವುದಿಲ್ಲವೆ
ನಿನ್ನ ಕನಸಿಗೆ ನಾನೂ
ಬಣ್ಣ ತರಬಹುದೆಂದು
?

ಎಂಬ ಪ್ರಶ್ನೆಯ ಮೂಲಕ ಹೃದಯ ಬಾಂಧವ್ಯದ ನಿಜವಾದ ಅರ್ಥವನ್ನು ವ್ಯಾಖ್ಯಾನಿಸುವ ಹೆಣ್ಣಿನ ಮನಸ್ಸೊಂದು ಈ ಕವನ ಸಂಗ್ರಹದ ಉದ್ದಕ್ಕೂ ಸ್ಪಂದಿಸುತ್ತದೆ.

ಶ್ರೀಮತಿ ಉಷಾ ಅವರ ಈ ಕವನ ಸಂಗ್ರಹ, ಅವರ ಮೊದಲ ಸಂಗ್ರಹವಾದ ‘ತೊಗಲ ಗೊಂಬೆಯ ಆತ್ಮಕಥೆ’ಯಿಂದ ಮುಂದಕ್ಕೆ ಅವರು ಬೆಳೆದಿರುವ ಕ್ರಮವನ್ನು ಪರಿಚಯಮಾಡಿಕೊಡುತ್ತದೆ.  ಅವರ ಈ ಬರೆಹದಲ್ಲಿ ವ್ಯಕ್ತಿ ವಿಶಿಷ್ಟವಾದ ಹೊಸತನ ಹಾಗೂ ಲವಲವಿಕೆಯಿದೆ; ಭಾವುಕತೆಗೆ ವಶವಾಗದ ವೈಚಾರಿಕ ದೃಷ್ಟಿಕೋನವಿದೆ; ಚಾರಿತ್ರಿಕವಾಗಿ ಹೆಣ್ಣನ್ನು ಗುರುತಿಸುವ ಪ್ರಯತ್ನವಿದೆ; ಯಾವ ಸ್ಪರ್ಧೆಯೂ ಇಲ್ಲದೆ ಪ್ರೀತಿ ಹಾಗೂ ಶ್ರದ್ಧೆಯ ನೆಲೆಯಲ್ಲಿ ಬದುಕಿನ ಅನುಭವಗಳನ್ನು ಸ್ವೀಕರಿಸುವ ಮತ್ತು ಎದುರಿಸುವ ಆತ್ಮಪ್ರತ್ಯಯವಿದೆ, ಸಾಹಿತ್ಯವನ್ನು ಒಂದು ಗಂಭೀರವಾದ ಕಲೆಗಾರಿಕೆ ಎಂದು ಪರಿಗಣಿಸುವ ಕಾಳಜಿಗಳಿಂದ, ಸೀಮಿತಗಳನ್ನು ದಾಟುವ ಮಹತ್ವಾಕಾಂಕ್ಷೆಯ ತುಡಿತಗಳಿವೆ.  ಇಂಥ ಒಂದು ಮನೋಧರ್ಮವನ್ನು ನಾನು ತುಂಬ ಸಂತೋಷದಿಂದ ಸ್ವಾಗತಿಸುತ್ತೇನೆ.

ಈ ನೆಲದ ಹಾಡು : ಸ. ಉಷಾ, ೧೯೯೦