ಆನಂದಕಂದರು ಕಿತ್ತೂರಿನಲ್ಲಿದ್ದುದು ಕೇವಲ ಮೂರು-ನಾಲ್ಕು ತಿಂಗಳುಗಳಷ್ಟೆ. ಈ ಅವಧಿಯಲ್ಲಿ ಸಂಸ್ಕೃತ ಭಾಷಾ ಅಭ್ಯಾಸಕ್ಕಿಂತ, ಕಾವ್ಯಾನಂದರ ಆತ್ಮೀಯ ಸಹಚರ್ಯದಿಂದ ಇವರಿಗೆ ಹೊರಜಗತ್ತಿನ ಪರಿಚಯ ಮಾತ್ರ ಸಾಕಷ್ಟಾಯಿತು. ಕಾವ್ಯಾನಂದರದು ದೊಡ್ಡಮನೆತನ. ಅವರನ್ನು ಕಾಣಲು ಅನೇಕ ಬಗೆಯ ಜನರು ಬರುತ್ತಿದ್ದರು. ಹೀಗೆ ಬಂದವರಿಗೆ ಕಾವ್ಯಾನಂದರು ಆನಂದಕಂದರ ಪರಿಚಯ ಮಾಡಿ ಕೊಡುತ್ತಲಿದ್ದರು. ಕಾವ್ಯಾನಂದರ ಪೂರ್ಣ ಹೆಸರು ನರಸಿಂಹಾಚಾರ್ಯ ಕಿತ್ತೂರ. ಸಂಸ್ಕೃತ ವಿದ್ವಾಂಸರಾದ ಇವರು ಸಮಸ್ಯಾಪೂರ್ತಿ ಕಾವ್ಯರಚನೆಗೆ ಹೆಸರಾಗಿದ್ದರು. ಅನೇಕ ಪುಸ್ತಕಗಳನ್ನು ಬರೆದಿದ್ದರು. ಕಿತ್ತೂರು ಇವರ ಜನ್ಮ ಸ್ಥಳ. ಇವರ ಮನೆತನ ಪಾಂಡಿತ್ಯಕ್ಕೆ ಪ್ರಸಿದ್ಧಿ ಪಡೆದಿತ್ತು. ಇವರ ಅಜ್ಜ ತರ್ಕ ವಿದ್ವಾನ್‌ ನರಹರಿ ಆಚಾರ್ಯರಿಗೆ ಪುಣೆಯ ಪೇಶ್ವೆಯವರಿಂದ ಕರವಸ್ತ್ರ ಹಾಗೂ ಇತರ ಗೌರವ ದೊರೆತಿದ್ದು, ಇದಕ್ಕಾಗಿ ಇವರ ಮನೆತನಕ್ಕೆ ಪುಣೇಕರ ಎಂಬ ಹೆಸರು ಬಂದಿತ್ತು.

ಕಾವ್ಯಾನಂದರ ಮಾತಿನಂತೆ ಆನಂದಕಂದರು ಒಮ್ಮೆ ವಿದ್ಯಾಧೀಶರ ಪುಣ್ಯತಿಥಿಯ ಮಹೋತ್ವವಕ್ಕಾಗಿ ರಾಣೆಬೆನ್ನೂರಿಗೆ ಹೋಗಿದ್ದರು. ಅಲ್ಲಿಯ ಪೂಜೆ ಪುನಸ್ಕಾರಗಳೇನೊ ವಿಧಿಪೂರ್ವಕವಾಗಿ ನಡೆಯುತ್ತಿದ್ದವು. ಆದರೆ ಅಲ್ಲಿ ಒಂದು ರೀತಿಯಿಂದ ಆನಂದಕಂದರ ಮನಸ್ಸಿಗೆ ಬೇಸರವಾಗಿತ೬ತು. ಮೊದಲ ಸಲ ಕಂಡಿದ್ದ ಬ್ರಾಹ್ಮಣರ ಊಟದ ಜಾತ್ರೆ, ಊಟಕ್ಕಾಗಿ ಸ್ಥಳ ಹಿಡಿದುಕೊಳ್ಳಲು ನಡೆಯುತ್ತಿರುವ ಸ್ಪರ್ಧೆ ಇವುಗಳೆಲ್ಲ ಆನಂದಕಂದರಿಗೆ ವಿಚಿತ್ರವಾಗಿ ತೋರಿದ್ದವು. ಅಲ್ಲಿಯ ಜನ ತಿಥಿ ಆಚರಣೆಗಿಂತ ಭೋಜನಕ್ಕಾಗಿಯೇ ಬಂದಂತೆ ಕಂಡಿತ್ತು. ಕಿತ್ತೂರಿಗೆ ಮರಳಿ ಬಂದ ಬಳಿಕ ಅಲ್ಲಿಯ ಸನ್ನಿವೇಶಗಳನ್ನು, ಅಲ್ಲಿ ಕಂಡ ದೋಷಗಳನ್ನು ಕಾವ್ಯಾನಂದರಿಗೆ ವರದಿ ಮಾಡಿದ್ದರು. ಆನಂದಕಂದರ ಮಾತು ಸರಿಕಂಡು, ಕಾವ್ಯಾನಂದರು. ಅನೇಕ ಜನರ ಮುಂದೆ ಈ ದೋಷಗಳನ್ನು ಎತ್ತಿ ಹೇಳಿದ್ದರಂತೆ. ಈ ರೀತಿಯ ಧಾರ್ಮಿಕ ಸಾಮಾಜಿಕ ಆಚರಣೆಯ ದೋಷಗಳನ್ನು ತರುಣ ಆನಂದಕಂದರು ಎತ್ತಿತೋರಿದ್ದು ಅವರ ಬಂಢಾಯ ಮನೋಧರ್ಮಕ್ಕೆ ಸಾಕ್ಷಿಯಾಗಿದೆ. ಸಮಾಜದಲ್ಲಿಯ ಕುಂದುಕೊರತೆಗಳನ್ನು ಎತ್ತಿ ಹೇಳುವ ಎದೆಗಾರಿಕೆ ಅವರಲ್ಲಿ ಅದಾಗಲೇ ಕುಂದುಕೊರತೆಗಳನ್ನು ಎತ್ತಿ ಹೇಳುವ ಎದೆಗಾರಿಕೆ ಅವರಲ್ಲಿ ಅದಾಗಲೇ ಮೊಳಕೆಯೊಡೆದಿತ್ತು. ಮುಂದೆ ಕೂಡ ತಮ್ಮ ಆದರ್ಶ ಹಾಗೂ ಸ್ವಾಭಿಮಾನಕ್ಕಾಗಿ ಅನೇಕ ಬಗೆಯ ಪ್ರಸಂಗಗಳನ್ನು ಆನಂದಕಂದರು ಎದುರಿಸಿದ್ದುಂಟು.

ಆನಂದಕಂದರ ಕಾವ್ಯಸೃಷ್ಟಿ ಕಾವ್ಯಾನಂದರ ಮೇಲೆ ತುಂಬ ಪರಿಣಾಮ ಬೀರಿತ್ತು. ಸ್ವತಃ ಕವಿಗಳಾಗಿದ್ದ ಕಾವ್ಯಾನಂದರು ಆನಂದಕಂದರ ಕಾವ್ಯದಲ್ಲಿಯ ದೇಸಿ ಸೊಗಡು, ಜಾನಪದ ಸತ್ತ್ವ, ನವಿರಾದ ಭಾವಗಳನ್ನು ತುಂಬಾ ಮೆಚ್ಚಿಕೊಂಡಿದ್ದರು. ಮುಂದೆ ಕನ್ನಡದ ಉತ್ತಮ ಕವಿಗಳಲ್ಲಿ ಒಬ್ಬರಾಗಿ ಬೆಳೆಯಲಿರುವ ಆನಂದಕಂದರ ಕಾವ್ಯಾಂಕುರವನ್ನು ಕಂಡು ಇವರಿಗೆ ‘ಕವಿಭೂಷಣ’ ಎಂದು ಆಗಲೇ ಬಿರುದು ಕೊಟ್ಟಿದ್ದು ಇವರ ಭವಿಷ್ಯತ್ತನ್ನು ಊಹಿಸಿಯೇ ಇರಬೇಕು. ಈ ಬಿರುದನ್ನು ಸಾರ್ಥಕವನ್ನಾಗಿ ಮಾಡಿದ್ದು ಆನಂದಕಂದರ ಪ್ರತಿಭೆಗೆ ಸಾಕ್ಷಿಯಾಗಿದೆ.