ಫ್ಲಾರಿಡಾದ ಕಡಲ ತೀರದಿಂದ ಉತ್ತರಕ್ಕೆ ಹಾರಿ ಹಲವು ಗಂಟೆಗಳ ಕಾಲ ಪಯಣಮಾಡಿ ತಲುಪಿದ್ದು, ನ್ಯೂಜರ್ಸಿ ರಾಜ್ಯದ, ಡೆಲೆವೆರ್ ನದೀ ಪರಿಸರದ ಪುಟ್ಟ ಊರು ನ್ಯೂಟೌನ್ ಅನ್ನು. ಇದು ದಟ್ಟಹಸುರಿನ ತಂಪು ಹವೆಯ ನಡುವೆ ಇರುವ ಒಂದು ಅಚ್ಚುಕಟ್ಟಾದ ಹಾಗೂ ಪ್ರಶಾಂತವಾದ ಊರು. ಇಲ್ಲಿ ನನ್ನನ್ನು ಬರಮಾಡಿಕೊಂಡವರು, ನಮ್ಮ ಕನ್ನಡದ ಹಿರಿಯ ಕವಿ ಪು.ತಿ. ನರಸಿಂಹಾಚಾರ್ಯರ ಅಳಿಯಂದಿರಾದ ರಂಗಾಚಾರ್ಯರು, ಮೂಲತಃ ವಿಜ್ಞಾನಿಗಳಾದ ರಂಗಾಚಾರ್ಯರು, ಕವಿಗಳೂ ಹೌದು. ತುಂಬ ಸೌಮ್ಯವಾದ  ಮುಖದ, ಮೆಲುಮಾತಿನ ರಂಗಾಚಾರ್ಯರು, ಅವರು ಈಗಾಗಲೇ ಪ್ರಕಟಿಸಿದ ‘ನೆಲದ ಕರೆ’ ಎಂಬ ಕವನ ಸಂಗ್ರಹದ ಮೂಲಕ ನನಗೆ ಪೂರ್ವ ಪರಿಚಿತರು.

ನಾನು ಅವರ ಮನೆ ತಲುಪಿದ ಮರುದಿನ (೧೩.೧೦.೮೭) ಬೆಳಿಗ್ಗೆ ಅವರು ನನ್ನನ್ನು ನ್ಯೂಟೌನ್‌ನಿಂದ ಕೆಲವು ಮೈಲಿಗಳ ದೂರದಲ್ಲಿರುವ ಡೆಲೆವೆರ್ ನದೀ ತೀರಕ್ಕೆ ಕರೆದುಕೊಂಡು ಹೋದರು. ದಾರಿ ಉದ್ದಕ್ಕೂ ಎರಡು ಕಡೆ ಕೋಟೆ ಕಟ್ಟಿದಂತೆ ದಟ್ಟವಾದ ಹಸಿರು. ಆ ಹಸಿರು ಆಗಲೇ ಬೇರೆ ಬೇರೆಯ ಬಣ್ಣಕ್ಕೆ ತಿರುಗಲು ಪ್ರಾರಂಭವಾಗಿತ್ತು. ಕೆಲವು ಮರಗಳಂತೂ ಆಗಲೇ ಹೊನ್ನ ಬಣ್ಣದ ಎಲೆಗಳಿಂದ ಇಡಿಕಿರಿದು ಚಿನ್ನದ ಚಾಮರಗಳಾಗಿದ್ದವು. ಬೆಳಗಿನ ಹಿತವಾದ ಹೊಂಬಿಸಿಲಲ್ಲಂತೂ ಆ ಮರಗಳ ಕಾಂತಿ ವರ್ಣಿಸಲು ಬಾರದಂತಿತ್ತು. ಈ ವರ್ಣಮಯ ಪರ್ಣ ವಿಸ್ತಾರಗಳ ನಡುವೆ ಹಾದು ಡೆಲೆವೆರ್ ನದೀ ತೀರದಲ್ಲಿ ಕಾರು ನಿಲ್ಲಿಸಿ ಕೆಳಗಿಳಿದರೆ, ಗದಗುಟ್ಟಿಸುವ ಛಳಿ. ಆ ಛಳಿಯೊಳಗೆ, ಹಚ್ಚಗೆ ಹಾಸಿದ ಹಸಿರ ನಡುವೆ ನಾವು ನಿಂತ ಸ್ಥಳವೇ ‘ವಾಷಿಂಗ್‌ಟನ್ ಕ್ರಾಸ್’ ಎಂಬ ಐತಿಹಾಸಿಕ ಮಹತ್ವದ ಪರಿಸರ. ೧೭೭೬ ರಂದು ಜಾರ್ಜ್ ವಾಷಿಂಗ್‌ಟನ್, ಕ್ರಿಸ್‌ಮಸ್ ಹಬ್ಬದ ದಿನವೆ ಡೆಲೆವೆರ್ ನದಿಯನ್ನು ದಾಟಿ ಬ್ರಿಟಿಷರ ಸೈನ್ಯದ ಮೇಲೆ ದಾಳಿ ಮಾಡಿ ಅವರನ್ನು ಸೋಲಿಸಿದನು. ಈ ಗೆಲುವನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಲು ಈ ನದೀತೀರದಲ್ಲಿ, ವಾಷಿಂಗ್‌ಟನ್ನನು ನದಿಯನ್ನು ದಾಟಿದ ಸ್ಥಳದಲ್ಲಿ ಒಂದು ‘ಮ್ಯೂಸಿಯಂ’ ಅನ್ನು ನಿರ್ಮಿಸಲಾಗಿದೆ, ಈ ಮ್ಯೂಸಿಯಂ ಒಳಗೆ ವಾಷಿಂಗ್‌ಟನ್ನನ ಪ್ರತಿಮೆ ಇದೆ. ಜತೆಗೆ ಮುಂದೆ ಅಮೆರಿಕಾದ ಮೊದಲ ಅಧ್ಯಕ್ಷನಾದ ವಾಷಿಂಗ್‌ಟನ್ನನಿಗೆ ಸಂಬಂಧಿಸಿದ ಎಲ್ಲ ಚಾರಿತ್ರಿಕ ಮಾಹಿತಿಯ ಸಚಿತ್ರವಾದ ಪ್ರದರ್ಶನವೂ ಇದೆ.

ವಸ್ತು ಪ್ರದರ್ಶನಾಲಯದ ಬದಿಗೆ ಡೆಲೆವೆರ್ ನದಿ ಅಗಲವಾಗಿ ಹಾಗೂ ನಿಶ್ಯಬ್ದವಾಗಿ, ತನ್ನ ಅಂಕುಡೊಂಕಾದ ಪಾತ್ರದಲ್ಲಿ ಮುನ್ನಡೆದಿದೆ – ನೋಡಿದರೆ ಚಲಿಸುತ್ತಿದೆಯೋ ಇಲ್ಲವೋ ಎಂಬಷ್ಟು ಪ್ರಶಾಂತವಾಗಿ. ನದೀ ದಡದ ಎರಡೂ ಬದಿಗೆ ಏರಿಳಿಯುವ ಹಸಿರು, ನದೀ ಜಲದರ್ಪಣದಲ್ಲಿ ತನ್ನ ಮುಖ ನೋಡಿ ಕೊಳ್ಳುತ್ತಿದೆ.

ಬೆಳಗಿನ ಹೊಂಬಿಸಿಲಿನ ಹಚ್ಚಹಸುರಿನ ದಾರಿಯಲ್ಲಿ ಮುಂದುವರಿದು, ಬಿಲ್ಗಾರನ ಬೆಟ್ಟ -Bowman’s Hill ಎಂಬ ಏರುವೆಯನ್ನು ಪ್ರವೇಶಿಸಿದರೆ ಅಲ್ಲೊಂದು ಪ್ರಾಚೀನ ಕಾಲದ, ಕಲ್ಲಿನ ಕಾವಲು ಗೋಪುರ, ಹಿಂದೆ ಬಹುಶಃ ಬಿಲ್ಲು – ಬಾಣಗಳನ್ನು ಹಿಡಿದ ಬೇಟೆಗಾರರು ಈ ಪರಿಸರದಲ್ಲಿದ್ದರೆಂದು ತೋರುತ್ತದೆ. ಸುಮಾರು ಇನ್ನೂರು ಮುನ್ನೂರು ಅಡಿ ಎತ್ತರವಿರುವ ಈ ಕಾವಲು ಗೋಪುರವನ್ನೇರಲು ಲಿಫ್ಟ್‌ಗಳನ್ನು ಅಳವಡಿಸಲಾಗಿದೆ. ಅದರ ಮೂಲಕ ಮೇಲೇರಿ ನಿಂತರೆ, ಸುತ್ತ ಅಲೆಅಲೆಯಾಗಿ ಏರಿಳಿಯುವ ದಟ್ಟವಾದ ಕಾಡು, ಅದರ ಮಧ್ಯೆ ದೂರ ಬಹುದೂರದವರೆಗೂ ಹರಿದು ಹೋಗುವ ಡೆಲೆವೆರ್ ನದಿ ಕಾಣಿಸುತ್ತದೆ.

ಈ ಗೋಪುರವನ್ನಿಳಿದು, ಮತ್ತೆ ಕಾಡಿನ ದಾರಿಯಲ್ಲಿ ಮುಂದುವರಿದೆವು. ಕಾರನ್ನು ಸಂರಕ್ಷಿತ ಅರಣ್ಯೋದ್ಯಾನದ ದಾರಿ ಬದಿಗೆ ನಿಲ್ಲಿಸಿ ಒಳಗೆ ಹೋದರೆ, ಸಂಚಾರಯೋಗ್ಯವಾದ ಹಲವು ಕಾಲುದಾರಿಗಳು. ಈ ದಾರಿಗಳಲ್ಲಿ ಒಂದನ್ನು ಹಿಡಿದು ಮುಂದೆ ನಡೆದೆವು. ರಂಗಾಚಾರ್ಯರು ತಮ್ಮ ಎದುರು ಹರಹಿಕೊಂಡ ಅರಣ್ಯವನ್ನು ತೋರಿಸುತ್ತ ‘ಇದು ನೋಡಿ, ಕಳೆದ ವರ್ಷ ಕವಿ ಪು.ತಿ.ನ. ಬಂದಿದ್ದರಲ್ಲ? ಆಗ ಇಲ್ಲಿಗೆ ಕರೆದುಕೊಂಡು ಬಂದಿದ್ದೆ. ಅವರು ಈ ಪ್ರಶಾಂತಿಯನ್ನು ತುಂಬ ಮೆಚ್ಚಿಕೊಂಡಿದ್ದರು’ ಎಂದರು. ಮೌನವನ್ನೇ ಕುರಿತು ‘ಯದುಗಿರಿಯ ಮೌನವಿಕಾಸ’ ಎಂಬ ಸೊಗಸಾದ ಪದ್ಯ ಬರೆದ ಪು.ತಿ.ನ. ಅವರಿಗೆ ಈ ವಿವಿಕ್ತ, ಪ್ರಶಾಂತ ಪರಿಸರ ತುಂಬ ಇಷ್ಟವಾದದ್ದು ಆಶ್ಚರ್ಯವೇನಲ್ಲ ಅಂದುಕೊಂಡೆ. ನಮ್ಮ ದಾರಿಯ ಉದ್ದಕ್ಕೂ ಹಬ್ಬಿಕೊಂಡ ಮರಗಳ ನೆರಳು – ಬೆಳಕಿನ ಬಲೆಯನ್ನು ತುಳಿದುಕೊಂಡು ಸಣ್ಣಗೆ ಹರಿಯುವ ಹಳ್ಳದ ದಂಡೆಗುಂಟ ನಡೆದೆವು. ಎರಡೂ ದಂಡೆಗಳ ಬದಿಗೆ ಎತ್ತರವಾಗಿ ನಿಂತ ಮರಗಳ ನೀಳವಾದ ನೆರಳು, ಹಳ್ಳದ ಇಳಿಜಾರಿನ ಮೇಲೆ ವಕ್ರ  ವಿಚಿತ್ರವಾಗಿ ಚಾಚಿಕೊಂಡಿತ್ತು. ಮುಂಜಾನೆಯ ಆ ಪರಿಸರದಲ್ಲಿ ಆಗಾಗ ಕೇಳಿಬರುತ್ತಿದ್ದ ಕೆಲವೇ ಹಕ್ಕಿಗಳ ಚಿಲಿಪಿಲಿ, ಹಳ್ಳದ ನೀರಿನಂಚಿನಲ್ಲಿ ಬಿಸಿಲು ಕಾಸುತ್ತ ವಟಗುಟ್ಟುತ್ತ ಕೂತ ಕಪ್ಪೆಗಳು ನೀರೊಳಕ್ಕೆ ನೆಗೆಯುವ ಸಪ್ಪುಳ ಮತ್ತು ಕಾಡೊಳಗೆಲ್ಲೋ ಸಂಚಾರ ಹೊರಟ ಜನದ ಮೆಲುದನಿ – ಇಷ್ಟು ಹೊರತು ಉಳಿದಂತೆ ಬರೀ ಮೌನ. ಹಳ್ಳದಂಚಿನಲ್ಲಿ ಎತ್ತರವಾಗಿ ಕೊಂಬೆಗಳನ್ನು ಹರಹಿಕೊಂಡ ಮರದಿಂದ ಒಂದೊಂದೆ ಎಲೆಗಳು ಮೆತ್ತಗೆ ಕಳಚಿಕೊಂಡು ತಣ್ಣನೆಯ ಗಾಳಿಯೊಳಗೆ ಗಿರಗಿರ ಸುತ್ತುತ್ತ ಹಳ್ಳದ ನೀರಮೇಲೆ ಬಿದ್ದಾಗ ಏಳುವ ತರಂಗ ವರ್ತುಲಗಳು, ನಿಸ್ತರಂಗವಾದೆಡೆಗಳಲ್ಲಿ ಪ್ರತಿಫಲಿಸುವ ಮೇಲಿನ ಆಕಾಶದ ನೀಲಿ ಮತ್ತು ಮರದ ಕೊಂಬೆಗಳ ವಿವಿಧ ವಿನ್ಯಾಸಗಳು ಇವುಗಳನ್ನು ನೋಡುತ್ತ ನಾವು ಮುಂದೆ ಹೋದಂತೆ, ಹಚ್ಚ ಹಸುರಿನ ಮೇಲೆ ಬಿದ್ದ ಬೆಚ್ಚನೆಯ ಬಿಸಿಲು ಯಾವುದೋ ಗುಟ್ಟೊಂದನ್ನು ತುಟಿಯೊಳಗಿರಿಸಿಕೊಂಡು ನಮ್ಮ ಕಡೆ ನೋಡುತ್ತಾ ತನಗೆ ತಾನೇ ಖುಷಿಪಡುವಂತೆ ತೋರಿತು. ನಾವೂ ಮಾತಿಲ್ಲದ ಮೌನದಲ್ಲಿ ಈ ಅವ್ಯಕ್ತ ಕಾವ್ಯಮಾಧುರ್ಯವನ್ನು ಆಸ್ವಾದಿಸುತ್ತಾ, ಸಾಮಾನ್ಯತೆಯಲ್ಲೂ ಒಮ್ಮೊಮ್ಮೆ ಮೈದೋರುವ ಅಸಾಮಾನ್ಯತೆಗೆ ಬೆರಗಾಗುತ್ತ ಹಿಂದಿರುಗಿದೆವು.

ಮನೆಗೆ ಬರುವ ವೇಳೆಗೆ ಮಧ್ಯಾಹ್ನವಾಗಿತ್ತು. ರಂಗಾಚಾರ್ಯರ ಪತ್ನಿ ಶ್ರೀಮತಿ ಪದ್ಮಾ ಅವರು ಅಡಿಗೆ ಮಾಡಿ ಇರಿಸಿ, ತಮ್ಮ ಉದ್ಯೋಗಕ್ಕೆ ಹೋಗಿದ್ದರು. ನನಗಾಗಿ ಒಂದು ದಿನ ರಜಾ ಹಾಕಿ, ತಿರುಗಾಟಕ್ಕೆ ಕರೆದೊಯ್ದ ರಂಗಾಚಾರ್ಯರು, ತುಂಬ ಪ್ರೀತಿಯಿಂದ ಅವರ ಹೆಂಡತಿ ಮಾಡಿರಿಸಿದ ಊಟವನ್ನು ಬಡಿಸಿದರು. ಊಟವಾದ ನಂತರ ಸಂಜೆಯತನಕ ಪರಸ್ಪರ ಕಾವ್ಯಾಲಾಪದಲ್ಲಿ ತೊಡಗಿದೆವು. ಕಾವ್ಯದ ರಹಸ್ಯ, ಕಾವ್ಯದ ಸ್ವಾರಸ್ಯ ಇತ್ಯಾದಿಗಳ ಚರ್ಚೆಯ ನಂತರ, ಇವತ್ತಿನ ಕನ್ನಡ ಕಾವ್ಯಪರಿಸರವನ್ನು ಕುರಿತು ಮಾತನಾಡಿದೆವು. ರಂಗಾಚಾರ್ಯರು, ಇಂಡಿಯಾದ ಬಗೆಗಿನ ತಮ್ಮ ಸೆಳೆತಗಳನ್ನೂ, ಈ ವಿದೇಶೀಯ ಪರಿಸರದ ತಮ್ಮ ಅಂತರಂಗದ ಏಕಾಕಿತನದ ಅಳಲುಗಳನ್ನೂ ತೋಡಿಕೊಂಡರು. ಅನಂತರ ತಾವು ಬರೆದ ಒಂದಷ್ಟು ಪದ್ಯಗಳನ್ನೂ, ಲಲಿತ ಪ್ರಬಂಧಗಳನ್ನೂ ಓದಿ ತೋರಿಸಿದರು. ನಾನೂ ನನ್ನ ಕವಿತೆಗಳನ್ನು ಓದಿದೆ. ರಂಗಾಚಾರ್ಯರು ತುಂಬ ಸಂತೋಷಪಟ್ಟರು. ಅಮೆರಿಕಾದ ಇಷ್ಟು ದಿನಗಳ ನನ್ನ ಪ್ರವಾಸದಲ್ಲಿ, ಸಹೃದಯರಾದ ರಂಗಾಚಾರ್ಯರ ಜತೆ ನಡೆದ ಈ ಹೃದಯ ಸಂವಾದ ಒಂದು ಮರೆಯಲಾಗದ ನೆನಪಾಗಿ ನನ್ನ ಮನಸ್ಸಿನಲ್ಲಿ ಗೂಡು ಕಟ್ಟಿಕೊಂಡಿದೆ.