ಆಕಾರವೇ ಇರದ ಬಂಡೆಯಾಗಿ ಬಿದ್ದಿದ್ದಾಗ
ಇಲ್ಲದ ನಾಚಿಕೆ,
ಕೆತ್ತನೆಗೆ ಮೈಕೊಟ್ಟು ಬೆತ್ತಲೆಯ ವಿಗ್ರಹವಾಗಿ
ನಿಂತಾಗ ಬಂತಲ್ಲ, ಯಾತಕೆ?

ಗೊಬ್ಬರದ ಗಬ್ಬುನಾತದ ಮಧ್ಯೆ ಮಣ್ಣಲ್ಲಿ
ಮಲಗಿ ಮೈಪಡೆವ ಮೊದಲು
ಇಲ್ಲದ ಸುಗಂಧ.
ಮೆತ್ತಗೆ ತಲೆಯೆತ್ತಿ ಗಿಡವಾಗಿ ಹೂ ಪುಟಿದು
ಅರಳಿದ ಹೊತ್ತು
ಬಂದುದೆಲ್ಲಿಂದ ?

ಕೊತ ಕೊತ ಕುದಿವ ಹುಡುಕಾಟಗಳ ನಡುವೆ
ಮಾತಿರದ ಮೌನದೊಳ-
ಗಸ್ತವ್ಯಸ್ತವಾಗಿ ತೊಳಲಿದ್ದ ಅಶರೀರ ಭಾವ.
ನಿಧಾನಕ್ಕೆ ಪಾಕವಾಗುತ್ತ
ಶಬ್ದಾರ್ಥ ಸಂಪುಟದೊಳಗೆ ಹೊಳೆವ ಮುತ್ತಾಗಿ
ಮಿನುಗುತಿದೆಯಲ್ಲ, ಯಾರ ಪ್ರಭಾವ ?