ಅಮೃತಾಂಜನದ ಹೆಸರು ಎಲ್ಲರಿಗೂ ತಿಳಿದದ್ದೆ. ಈ ಬಹು ಒಳ್ಳೆಯ ಔಷಧಿಯನ್ನು ತಯಾರುಮಾಡಿದ ಮಹನೀಯರ ಹೆಸರು ಗೊತ್ತೆ? ಶ್ರೀ ಕಾಶೀನಾಥುನಿ ನಾಗೇಶ್ವರರಾವು ಪಂತುಲು.

ನಾಗೇಶ್ವರರಾವು ಜತೆ ಮಹಾತ್ಮಗಾಂಧಿಯವರು ತಮಾಷೆಯಾಗಿ ಒಮ್ಮೆ ಹೇಳಿದರು: “ಹೊಸ ಅಂಜನವನ್ನು ಕಂಡುಹಿಡಿದಿರಿ. ಅದಕ್ಕೆ ‘ಅಮೃತಾಂಜನ’ ಎಂದು ಆಕರ್ಷಕವಾದ ಹೆಸರಿಟ್ಟಿರಿ, ಜನರನ್ನು ಕೊಳ್ಳೆಹೊಡೆಯುತ್ತೀರಿ. ಇದು ನ್ಯಾಯವೇ?

ನಾಗೇಶ್ವರರಾವು ನೀಡಿದ ಉತ್ತರವೂ ಅಷ್ಟೇ ಸ್ವಾರಸ್ಯಕರ. “ಅದರ ಮಾರಾಟದಿಂದ ನನಗೆ ಬರುವ ಲಾಭದಲ್ಲಿ ಹೆಚ್ಚಿನಂಶ ಜನತೆಯ ಅಭಿವೃದ್ಧಿಗಾಗಿಯೇ ಬಳಸುತ್ತಿದ್ದೇನೆ. ನನ್ನ ವ್ಯಾಪಾರದ ಮುಖ್ಯ ಉದ್ದೇಶ ಇದೇ ಆಗಿದೆ.”

ನಾಗೇಶ್ವರರಾವು ನೀಡಿದ ಈ ಉತ್ತರದಿಂದ ಮಹಾತ್ಮಾಗಾಂಧಿ ಅವರಿಗೆ ಎಷ್ಟೋ ಸಂತೋಷವಾಯಿತು. ಗಾಂಧೀಜಿ ಪಂತುಲುರವರ ದಾನಗುಣವನ್ನು ಮುಕ್ತಕಂಠದಿಂದ ಪ್ರಶಂಸಿಸಿ ‘ವಿಶ್ವದಾತ’ನೆಂದು ಕರೆದರು.

ಕಾಶೀನಾಥುನಿ ನಾಗೇಶ್ವರರಾವು ಅವರಿಗೆ ಇರುವ ‘ದೇಶೋದ್ಧಾರಕ’ ಹಾಗೂ ‘ವಿಶ್ವದಾತ’ ಬಿರುದುಗಳು ಅವರ ತ್ಯಾಗ ಜೀವನಕ್ಕೆ ಸಂದ ಗೌರವ.

ಬಾಲ್ಯ, ವಿದ್ಯಾಭ್ಯಾಸ

ನಾಗೇಶ್ವರರಾವು ಹುಟ್ಟಿದ್ದು ೧೮೬೭ರ ಮೇ ಒಂದರಂದು, ಯಲಕುರ‍್ರು ಅವರು ಹುಟ್ಟೂರು. ಇದು ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಗುಡಿನಾಡ ತಾಲ್ಲೂಕಿನಲ್ಲಿದೆ. ತಂದೆ ಬುಚ್ಚಯ್ಯ. ತಾಯಿ ಶ್ಯಾಮಲಾಂಬ ತೆಲುಗು ದೇಶದಲ್ಲಿ ಕಾಶೀನಾಥುನಿ ವಂಶ ಸದಾಚಾರದಕ್ಕೆ ಸತ್ಸಂಪ್ರದಾಯಕ್ಕೆ ಪ್ರಸಿದ್ಧಿ. ಪಂಡಿತತ್ರಯರಲ್ಲಿ (ಶ್ರೀಪತಿ, ಮಂಚೆನ, ಮಲ್ಲಿಕಾರ್ಜುನ) ಒಬ್ಬನಾದ ಶ್ರೀಪತಿಯ ವಂಶದಲ್ಲಿಯೇ ನಾಗೇಶ್ವರರಾವು ಕೂಡ ಹುಟ್ಟಿದ್ದು. ಬುಚ್ಚಯ್ಯ ಶಿವಪೂಜಾ ಪರಾಯಣ. ಮದುವೆಯಾಗಿ ತುಂಬ ಕಾಲವಾದರೂ ಇವರಿಗೆ ಮಕ್ಕಳು ಹುಟ್ಟಲಿಲ್ಲ ಬುಚ್ಚಯ್ಯ ಹೆಂಡತಿಯ ಜತೆಗೂಡಿ ಶ್ರೀಶೈಲ ಮಲ್ಲಿಕಾರ್ಜುನನ ಸೇವೆ ಮಾಡಿದ ನಂತರವೇ ಪುತ್ರಪ್ರಾಪ್ತಿ ಆದುದು. ಆ ಮಗನಿಗೆ ನಾಗಲಿಂಗನೆಂದು ಹೆಸರಿಟ್ಟರು. ಮುಂದೆ ಆ ಮಗುವೇ ನಾಗೇಶ್ವರರಾವು ಎಂದು ಹೆಸರುವಾಸಿಯಾದುದು.

ನಾಗೇಶ್ವರರಾವು ಅವರ ಬಾಲ್ಯ ವಿದ್ಯಾಭ್ಯಾಸ ಯಲಕುರ‍್ರುಯಲ್ಲಿಯೇ ನಡೆಯಿತು. ಸಂಪ್ರದಾಯ ಶರಣರಾದ ಬುಚ್ಚಯ್ಯ ಮಗನಿಗೆ ಸಂಸ್ಕೃತ, ತೆಲುಗು ಕಲಿಸಿದರು. ಆದರೆ ಶ್ಯಾಮಲಾಂಬನವರಿಗೆ ತಮ್ಮ ಮಗ ಇಂಗ್ಲಿಷ್‌ ಕಲಿತು ದೊಡ್ಡ ನೌಕರಿ ಮಾಡಬೇಕೆಂಬ ಬಯಕೆ. ಆಕೆಯ ಒತ್ತಾಯದಿಂದಾಗಿ ಬುಚ್ಚಯ್ಯ ತಮಗೆ ಇಷ್ಟವಿಲ್ಲದಿದ್ದರೂ ಮಗನಿಗೆ ಇಂಗ್ಲಿಷ್‌ ಹೇಳಿಸಿದರು. ಹೆಚ್ಚಿನ ವಿದ್ಯಾಭ್ಯಾಸಕ್ಕಗಿ ಮಚಿಲೀಪಟ್ಟಣಕ್ಕೆ ಕಳುಹಿಸಿದರು.

ಬಾಲ್ಯದಲ್ಲಿ ಓದಿದ ಭಕ್ತಿ ಶತಕಗಳು, ಪ್ರೌಢಶಾಲೆಯ ಹಂತದಲ್ಲಿ ವೀರೇಶಲಿಂಗಂರವರ ‘ವಿವೇಕ ವರ್ಧಿನಿ’ ಲೋಕಮಾನ್ಯ ತಿಲಕರ ‘ಕೇಸರಿ’ ಪತ್ರಿಕೆಗಳು ಅವರ ಮೇಲೆ ಅಳಿಸಲಾಗದ ಮುದ್ರೆಯೊತ್ತಿದ್ದವು.

ನಾಟಕದ ಆಕರ್ಷಣೆ

ನಾಗೇಶ್ವರರಾವು ಮಚಿಲೀಪಟ್ಟಣದಲ್ಲಿ ಓದುತ್ತಿದ್ದಾಗ ಹಿಂದೂ ಥಿಯೇಟರ್ಸ್‌‌ನವರು ಪ್ರದರ್ಶಿಸುತ್ತಿದ್ದ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಚಂದ್ರಮತಿ, ರುಕ್ಮಿಣಿ ಮೊದಲಾದ ಸ್ತ್ರೀಪಾತ್ರಗಳನ್ನು ಧರಿಸಿ ಹೆಸರುವಸಿಯಾದರು. ತಮ್ಮ ಮಗ ನಾಟಕಗಳಲ್ಲಿ ಪಾತ್ರ ಮಾಡುವುದನ್ನು ತಿಳಿದು ಬುಚ್ಚಯ್ಯನವರಿಗೆ ತುಂಬ ದುಃಖವಾಯಿತು. ವಂಶಪ್ರತಿಷ್ಠೆಯನ್ನು ಮಣ್ಣುಪಾಲು ಮಾಡುವನೆಂಬ ಚಿಂತೆ ಅವರನ್ನು ಕಾಡತೊಡಗಿತು.

ಬುಚ್ಚಯ್ಯನವರ ಆರೋಗ್ಯ ಕೆಟ್ಟಿತು. ಸಾವು-ಬದುಕಿನ ತೂಗುಯ್ಯಾಲೆ ಆಡತೊಡಗಿದರು. ಯಾವುದೋ ನಾಟಕದಲ್ಲಿ ಪಾತ್ರವಹಿಸಲು ನಾಗೇಶ್ವರಾವು ಸ್ವಗ್ರಾಮದಿಂದ ದೂರಹೋಗಿದ್ದರು. ತಂದೆಗೆ ಅನಾರೋಗ್ಯವೆಂದು ಅವರಿಗೆ ತಿಳಿದಿತ್ತು. ಹಾಗಿದ್ದರೂ ನಾಟಕದಲ್ಲಿ ಪಾತ್ರ ವಹಿಸದಿದ್ದರೆ ಪ್ರದರ್ಶನಕ್ಕೆ ಧಕ್ಕೆ ಆಗುವುದೆಂಬ ಆತಂಕದಿಂದ ತಂದೆಯನ್ನು ನೋಡಲು ಹೋಗಲಿಲ್ಲ. ನಾಟಕ ಮುಗಿದ ನಂತರ ಬಂದರು. ಆದರೆ ಬುಚ್ಚಯ್ಯ ಮಗನನ್ನು ನೋಡಲು ನಿರಾಕರಿಸಿದರು. ಅನಾರೋಗ್ಯ ಹಾಗೂ ದುಃಖದಿಂದಾಗಿ ಮೃತರಾದರು.

ನಾಗೇಶ್ವರರಾವು ಮಚಲೀಪಟ್ಟಣದಲ್ಲಿ ಮೆಟ್ರಿಕ್ಯುಲೇಷನ್‌ ಮಾಡಿದರು. ಹೆಚ್ಚಿನ ಶಿಕ್ಷಣಕ್ಕಾಗಿ ಮದರಾಸಿಗೆ ತೆರಳಿದರು. ಕ್ರಿಶ್ಚಿಯನ್‌ ಕಾಲೇಜಿನಲ್ಲಿ ಎಫ್‌.ಎ.ಗೆ ಸೇರಿದರು. ಅಲ್ಲಿಯೇ ಕೊಂಡಾ ವೆಂಕಪ್ಪಯ್ಯನವರ ಗೆಳೆತನವಾಯಿತು. ಇವರಿಬ್ಬರ ಸ್ನೇಹ ಅಪೂರ್ವ ಅತಿಮಧುರ.

ರೆಂಟಾಲ ವೆಂಕಟಸುಬ್ಬರಾವು ಹೈಕೋರ್ಟಿನಲ್ಲಿ ಖ್ಯಾತಿವೆತ್ತ ವಕೀಲ. ಔಷಧಿ ವ್ಯಾಪಾರಿ. ಪುಸ್ತಕ ಪ್ರಕಾಶಕ. ಇವರಿಗೆ ನಾಗೇಶ್ವರರಾವು ಮೇಲೆ ಅಭಿಮಾನ ಹುಟ್ಟಿತ್ತು. ವೆಂಕಟಾಸುಬ್ಬಾರಾವು ಅವರ ಕೀರ್ತಿಯನ್ನು ಕೇಳಿ ನಾಗೇಶ್ವರರಾವು ಅವರ ಮನೆಗೆ ಬಂದುಹೋಗಿ ಮಾಡುತ್ತಿದ್ದರು. ಕೆಲಕಾಲದ ನಂತರ ರೆಂಟಆಲ ವೆಂಕಟಸುಬ್ಬರಾಯರ ವಿನಂತಿಯಂತೆ ಅವರ ಸೋದರಸೊಸೆ ರಾಮಾಯಮ್ಮನನ್ನು ನಾಗೇಶ್ವರರಾವು ಮದುವೆ ಮಾಡಿಕೊಂಡರು. ಈ ಮದುವೆ ನಾಗೇಶ್ವರರಾವು ಅವರ ತಾಯಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಇವರ ನೆಂಟರಾರೂ ಆ ಮದುವೆಗೆ ಹೋಗಲಿಲ್ಲ. ಕೊಂಡಾ ವೆಂಕಪ್ಪಯ್ಯನವರು ಈ ಮದುವೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಉದ್ಯೋಗ

ನಾಗೇಶ್ವರರಾವು ವಿದ್ಯಾಭ್ಯಾಸದಲ್ಲಿ ಮುಂದುವರೆಯಲಿಲ್ಲ. ಬಿ.ಎ. ಡಿಗ್ರಿ ತೆಗೆದುಕೊಳ್ಳಲಾಗಲಿಲ್ಲ. ಓದನ್ನು ಕೈಬಿಟ್ಟು ವ್ಯಾಪಾರ ಮಾಡಲು ನಿರ್ಧರಿಸಿದರು. ರೆಂಟಾಲ ವೆಂಕಟಸುಬ್ಬರಾವು ಅವರ ಔಷಧ ವ್ಯಾಪಾರದಲ್ಲಿ ಸ್ವಲ್ಪ ಕಾಲ ದುಡಿದರು. ಆದರೆ ಸ್ವತಂತ್ರವಾಗಿ ಜೀವನ ನಡೆಸಬೇಕೆಂಬ ಬಯಕೆಯಿಂದ ಅದನ್ನು ತ್ಯಜಿಸಿದರು. ೧೮೯೨ ರಲ್ಲಿ ಮುಂಬಯಿಯಲ್ಲಿನ ಒಂದು ಔಷಧ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಮುಂಬಯಿ, ಕಲ್ಕತ್ತ, ಮದರಾಸು ನಗರಗಳಲ್ಲಿ ನೌಕರಿ ಮಾಡಿದರು.

ನಾಗೇಶ್ವರರಾವು ಮಹತ್ವಾಕಾಂಕ್ಷಿ. ಹೊಸ ಔಷಧಗಳನ್ನು ಕಂಡುಹಿಡಿದು ಭಾರಿಯಾಗಿ ಹಣ ಸಂಪಾದನೆ ಮಾಡಬೇಕೆಂದು ಅವರ ಬಯಕೆ. ಆದರೆ ಎಷ್ಟು ಪ್ರಯತ್ನಿಸಿದರೂ ಅವರ ಬಯಕೆ ಈಡೇರುವ ಸಮಯ ಕೂಡಿ ಬರಲಿಲ್ಲ. ಔಷಧದ ಅಂಗಡಿಯ ನೌಕರಿಯಿಂದ ಬರುತ್ತಿದ್ದ ನೂರು ರೂಪಾಯಿ, ಜ್ಯೋತಿಷ ಗ್ರಂಥಗಳು, ಔಷಧಿಗಳ ಮಾರಾಟದಿಂದ ಬರುತ್ತಿದ್ದ ಐವತ್ತು ರೂಪಾಯಿ-ಇಷ್ಟೇ ಸಂಪಾದನೆಯಲ್ಲಿ ಮುಂಬಯಿಯಲ್ಲಿ ಜೀವನ ಸಾಗಿಸುತ್ತಿದ್ದರು.

ಆಸೆಆಕಾಂಕ್ಷೆ ಅಗಾಧವಾಗಿದೆ

ನಾಗೇಶ್ವರರಾವು ಅವರ ತಾಯಿಗೆ ಮಗ ದೂರ ದೇಶದಲ್ಲಿ ಕಷ್ಟಪಡುತ್ತಿದ್ದಾನೆಂಬ ಚಿಂತೆ ಕಾಡುತ್ತಿತ್ತು. ತಾಯಿಯ ತವರೂರಿಗೆ ಸಮೀಪದ ಜಮೀನುದಾರರೊಬ್ಬರ ಮನೆಯಲ್ಲಿ ಪಾಠ ಹೇಳಿಕೊಡುವ ಅವಕಾಶವಿದೆ ಎಂದೂ ಮುಂಬಯಿಯಿಂದ ಹೊರಟು ಬರಬೇಕೆಂದೂ ನಾಗೇಶ್ವರರಾವು ಅವರ ಭಾವನ ಮೂಲಕ ಪತ್ರ ಬರೆಸಿದರು. ಅದಕ್ಕೆ ನಾಗೇಶ್ವರರಾವು ಒಪ್ಪಿಕೊಳ್ಳಲಿಲ್ಲ. ಏನೇ ಆಗಲಿ, ಕಷ್ಟಪಟ್ಟು ದ್ರವ್ಯಾರ್ಜನೆ ಮಾಡದ ಹೊರತು ತೆಲುಗು ದೇಶಕ್ಕೆ ಹಿಂದಿರುಗಬಾರದೆಂಬ ಸಂಕಲ್ಪದಿಂದ ದೂರಾಗಲಿಲ್ಲ.

ನಾಗೇಶ್ವರರಾವು ವಿನಯಪೂರ್ವಕವಾಗಿ ಭಾವನಿಗೆ ಹೀಗೆ ಉತ್ತರ ಬರೆದರು:

ಪ್ರಿಯ ಭಾವನವರಿಗೆ

ಹತ್ತುಮಂದಿ ಬಾಂಧವರ ಮಧ್ಯೆ ಇರುವುದು ಒಳ್ಳೆಯದೇನೊ ಹೌದು. ಆದರೆ ಒಂಬತ್ತು ವರ್ಷಗಳಿಂದ ನನ್ನ ಸ್ವಭಾವ, ಬಯಕೆಗಳಿಗೆ ತಕ್ಕ ಕ್ಷೇತ್ರದಲ್ಲಿ ಕಷ್ಟ ಪಡುತ್ತಿದ್ದೇನೆ. ಇನ್ನೂ ಗುರಿ ಸೇರಲಿಲ್ಲ. ದೇವರು ಎಂದು ಆಗ ಗುರಿ ಸೇರಿಸುವನೋ ತಿಳಿಯದು. ಆದರೆ ಅಲ್ಲಿಯವರೆಗೆ ಎಷ್ಟಾದರೂ ಕಷ್ಟ ಅನುಭವಿಸಲು ನಿಶ್ಚಯಿಸಿದ್ದೇನೆ. ನನ್ನ ಪ್ರಯತ್ನದಲ್ಲಿ ಗೆಲುವು ದೊರೆತರೆ ಅದೃಷ್ಟವಂತನಾಗುತ್ತೇನೆ. ಸೋತರೆ ಭಾವೆನ ಬೆಂಬಲ ಇಲ್ಲದೆ ಬದುಕುತ್ತಿರುವ ಸಾವಿರಾರು ದುರದೃಷ್ಟವಂತರಲ್ಲಿ ನಾನೂ ಒಬ್ಬನಾಗುತ್ತೇನೆ. ನನಗೆ ಇಷ್ಟವಿಲ್ಲದಿದ್ದರೂ ವಿಧಿಯಿಲ್ಲದೆ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಒಳ್ಳೆಯ ಅವಕಾಶ ದೊರಕಿದ ತಕ್ಷಣವೇ ಈ ನೌಕರಿ ಬಿಟ್ಟು ಬಿಡುತ್ತೇನೆ.

ಹೆಸರಿಗೆ ನನಗೊಬ್ಬ ಯಜಮಾನನಿದ್ದರೂ ನಾನು ಸರ್ವತಂತ್ರ ಸ್ವತಂತ್ರ. ಹಾಗಿದ್ದರೂ ನನಗೆ ತೃಪ್ತಿಯಿಲ್ಲ. ಔಷಧ ವ್ಯಾಪಾರದ ಅಭಿವೃದ್ಧಿ ಮಾಡಬೇಕೆಂದು ನನಗೆ ತುಂಬಾ ಆಸೆ. ಆದರೆ ಹಣವಿಲ್ಲದ ಪ್ರಯುಕ್ತ ಅದು ಸಾಧ್ಯವಾಗುತ್ತಿಲ್ಲ.

ತಿಂಗಳಿಗೆ ಮೂವತ್ತು ರೂಪಾಯಿ ಸಂಬಳದ ಮೇಲೆ ನೀವು ಕೊಡಿಸುವುದಾಗಿ ಬರೆದಿರುವ ಪಾಠ ಹೇಳುವ ಕೆಲಸ ಮಾಡುವುದು ನನಗೆ ಒಪ್ಪಿಗೆ ಇಲ್ಲ. ನನಗೆ ಪ್ರಗತಿ ಸಾಧಿಸಬೇಕೆಂಬ ಆಸೆ, ಆಕಾಂಕ್ಷೆ ಅಗಾಧವಾಗಿದೆ. ಎಂದಾದರೊಂದು ದಿನ ನನ್ನ ಆಸೆ ಈಡೇರುವುದೆಂದು ನನಗೆ ನಂಬಿಕೆಯಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಮುಂಬಯಿ ಹೊರತು ಬೇರಾವ ಸ್ಥಳವೂ ನನಗೆ ಅನುಕೂಲವಾಗದು. ಅವರು ಕೊಡುವ ಮೂವತ್ತು ರೂಪಾಯಿಗಳಿಗೆ ನನ್ನ ಬಯಕೆಗಳಿಗೆಲ್ಲ ತರ್ಪಣ ಬಿಡಬೇಕಾದುದೇ. ನನ್ನ ಜೀವ ವಿಮೆಗೇ ಪ್ರತಿತಿಂಗಳೂ ಇಪ್ಪತ್ಮೂರು ರೂಪಾಯಿ ಕಟ್ಟಬೇಕಾಗುತ್ತದೆ. ಉಳಿಯುವ ಏಳು ರೂಪಾಯಿಗಳಲ್ಲಿ ಸಂಸಾರ ನಡೆಸುವುದು ಹೇಗೆ? ಆದುದರಿಂದ ಆ ಕೆಲಸ ನನಗಿಷ್ಟವಿಲ್ಲ. ಮಿಗಿಲಾಗಿ ವ್ಯಕ್ತಿಸೇವೆ ಯಾವಾಗಲೂ ತುಂಬ ಕಷ್ಟದ ಕೆಲಸ. ಜಮೀನುದಾರರು ಒಳ್ಳೆಯ ವ್ಯಕ್ತಿಯೇ ಇರಬಹುದು. ಆದರೆ ಅವರನ್ನು ನಾನು ತೃಪ್ತಿಗೊಳಿಸದಿರಬಹುದು. ಅಕ್ಷರಜ್ಞಾನ ಇಲ್ಲದ, ಸಂಕುಚಿತ ಬುದ್ಧಿಯ ಜನರ ಮಧ್ಯೆ ಪ್ರಗತಿ ಸಾಧನೆ ಮತ್ತಷ್ಟು ಕಷ್ಟ. ಆದುದರಿಂದ ನಿಮ್ಮ ನೆರವನ್ನು ನಾನು ಕೃತಜ್ಞತಾಪೂರ್ವಕವಾಗಿ ತಿರಸ್ಕರಿಸುತ್ತಿದ್ದೇನೆ.

ನಿಮ್ಮ ವಿಶ್ವಾಸಿ
ಕೆ. ನಾಗೇಶ್ವರರಾವು

ಈ ಪತ್ರದಿಂದ ನಾಗೇಶ್ವರರಾವು ಅವರ ಮಹತ್ವಾಕಾಂಕ್ಷೆ, ಅದನ್ನು ಸಾಧಿಸಲು ಅವರು ತೋರಿದ ಶ್ರದ್ಧೆ, ಆಸಕ್ತಿಗಳು ಎಂಥವೆಂಬುದು ಅರಿವಾಗುತ್ತದೆ.

 

“ನನಗೆ ಪ್ರಗತಿ ಸಾಧಿಸಬೇಕೆಂಬ ಆಕಾಂಕ್ಷೆ ಅಗಾಧವಾಗಿದೆ”

ಅಮೃತಾಂಜನ

೧೮೯೯ನೇ ಇಸವಿ. ನಾಗೇಶ್ವರರಾವು ಅವರ ಭಗೀರಥ ಪ್ರಯತ್ನ ಫಲಿಸಿತು. ‘ಅಮೃತಾಂಜನ’ ಹುಟ್ಟಿತು.

ನಾಗೇಶ್ವರರಾವು ಅವರ ಜೀವನದಲ್ಲಿ ಹೊಸ ತಿರುವು ಬಂದಿತು. ಅಮೃತಾಂಜನದ ಪ್ರಚಾರಕ್ಕಾಗಿ ಅವರು ಅಹೋರಾತ್ರಿ ಶ್ರಮಿಸಿದರು. ಬಸ್ಸುಗಳ ಮೇಲೆ, ಬಂಡಿಗಳ ಮೇಲೆ, ರೈಲುಗಳ  ಮೇಲೆ, ಗೋಡೆಗಳ ಮೇಲೆ, ಸಿನಿಮಾಗಳಲ್ಲಿ….. ಎಲ್ಲೆಲ್ಲಿ ನೋಡಿದರೂ ಅಮೃತಾಂ ಜನದ ಜಾಹೀರಾತು. ಸಂತೆಗಳಲ್ಲಿ, ಜಾತ್ರೆಗಳಲ್ಲಿ ಜರ್ಮನಿಯಿಂದ ತರಿಸಿದ ಬೆಲೂನ್‌ಗಳ ಮೂಲಕ ಅಮೃತಾಂಜನದ ಕರಪತ್ರಗಳನ್ನು ಸುರಿಸಲಾಗುತ್ತಿತ್ತು. ಸ್ವಲ್ಪ ಸಮಯದಲ್ಲಿಯೇ ‘ಅಮೃತಾಂಜನ’ ಪ್ರತಿ ಭಾರತೀಯನ ಮನೆಯಲ್ಲಿಯೂ ಕಾಣಸಿಗುವಂತಾಯಿತು.

‘ಅಮೃತಾಂಜನ’ದ ಪ್ರಚಾರದಲ್ಲಿ ನಾಗೇಶ್ವರರಾವು ಪ್ರದರ್ಶಿಸಿದ ನೈಪುಣ್ಯಕ್ಕೆ ಮುಂಬಯಿಯಲ್ಲಿನ ವಿದೇಶೀ ವ್ಯಾಪಾರಿಗಳೂ ಸಹ ಬೆರಗಾದರಂತೆ!

‘ಅಮೃತಾಂಜನ’ ಕನಕಧಾರೆಯನ್ನು ಸುರಿಸಿತು. ನಾಗೇಶ್ವರರಾವು ಅವರ ಕನಸು ನನಸಾಯಿತು.

ಹಣ ಸಾರ್ಥಕವಾಗಿ ವೆಚ್ಚವಾಗಬೇಕು

ಹಣ ಸಂಪಾದನೆ ನಾಗೇಶ್ವರರಾವು ಅವರ ಮುಖ್ಯ ಉದ್ದೇಶವಾದರೂ, ಜನಸೇವೆ ಅವರ ಜೀವಿತಾಶಯ. ವ್ಯಾಪಾರದಲ್ಲಿ ಬಂದ ಲಾಭವನ್ನು ರಾಷ್ಟ್ರಕ್ಕೇ ಖರ್ಚು ಮಾಡಲು ಅವರು ನಿರ್ಧರಿಸಿದರು.

ಅದಕ್ಕೆ ಸರಿಯಾದ ದಾರಿ ಯಾವುದು?

ಬ್ರಿಟಿಷರ ಆಡಳಿತದಲ್ಲಿ ಭಾರತ ಪರಿತಪಿಸುತ್ತಿತ್ತು. ಜನರೆಲ್ಲ ಬಡತನ, ಅಜ್ಞಾನಗಳಿಂದ ತುಂಬಿ ಗುಲಾಮರಂತೆ ದುಡಿಯುತ್ತಿದ್ದರು. ಈ ಜನರಲ್ಲಿ ಜಾಗೃತಿ ಮೂಡಿಸಬೇಕು. ಹೇಗೆ? ಪಾಠಶಾಲೆಗಳನ್ನು ಸ್ಥಾಪಿಸಿದರೆ ಹೇಗೆ? ಅವು ದೇಶದ ಯಾವುದೋ ಮೂಲೆಯಲ್ಲಿನ ಹಿಡಿಯಷ್ಟು ಜನರಿಗೆ ಜ್ಞಾನಭಿಕ್ಷೆ ನೀಡಬಲ್ಲವು. ವಾರ್ತಾ ಪತ್ರಿಕೆ ನಡೆಸಿದರೆ? ಒಳ್ಳೆಯ ಆಲೋಚನೆ!

ಆಂದ್ರಪತ್ರಿಕ

ನಾಗೇಶ್ವರರಾವುರವರ ಆಲೋಚನೆ ಕಾರ್ಯರೂಪಕ್ಕೆ ಬಂದೇ ಬಿಟ್ಟಿತು. ೧೯೦೮ರ ಸೆಪ್ಟೆಂಬರ್ ೯ ರಂದು ಮುಂಬಯಿಯಿಂದ ‘ಆಂಧ್ರಪತ್ರಿಕ’ ಬಿಡುಗಡೆಯಾಯಿತು. ವಾರ್ಷಿಕ ಚಂದಾ ಕೇವಲ ಎರಡು ರೂಪಾಯಿ.

ಆಂಧ್ರಪತ್ರಿಕ ಮೂಲಕ ನಾಗೇಶ್ವರರಾವು ಜನರಿಗೆ ವಿದ್ಯಾಭಿವೃದ್ಧಿ, ಪ್ರಪಂಚ ಜ್ಞಾನಾಭಿವೃದ್ಧಿ ಮಾಡಿ, ಸ್ವರಾಜ್ಯಾಕಾಂಕ್ಷೆ ಪ್ರೇರೇಪಿಸಲು ನಿರ್ಧರಿಸಿದರು.

ಆಗ ಆಂಧ್ರದಲ್ಲಿ ಹೆಚ್ಚಿನ ಪತ್ರಿಕೆಗಳಿರಲಿಲ್ಲ. ಪರಭಾಷಾ ಪ್ರಾಂತದಿಂದ ಹೊರಡುತ್ತಿದ್ದ ತೆಲುಗು ಪತ್ರಿಕೆ ಇದೊಂದೆ. ‘ಆಂಧ್ರಪತ್ರಿಕ’ ರಾಷ್ಟ್ರದ ನಾಲ್ಕು ದಿಕ್ಕುಗಳಿಗೂ ಸಾಗತೊಡಗಿತ್ತು. ಅಷ್ಟೇ ಅಲ್ಲ, ಬರ್ಮಾದಂಥ ದೂರದೇಶಗಳಿಂದಲೂ ಅದಕ್ಕೆ ಬೇಡಿಕೆ ಬರತೊಡಗಿತು. ಪಂತುಲು ಅವರು ಆಂಧ್ರದ ಎಲ್ಲ ಗ್ರಂಥಾಲಯ, ಪಾಠಶಾಲೆಗಳು, ಪ್ರಜಾಸಂಸ್ಥೆಗಳಿಗೆ ಉಚಿತವಾಗಿ ಸಹಸ್ರಾರು ಪ್ರತಿಗಳನ್ನು ಹಂಚುತ್ತಿದ್ದರು. ಆಬಾಲವೃದ್ಧರೂ ‘ಆಂಧ್ರಪತ್ರಿಕ’ಗಾಗಿ ಆತುರದಿಂದ ಎದುರು ನೋಡುತ್ತಿದ್ದರು.

ನಾಗೇಶ್ವರರಾವು ಪತ್ರಿಕಾಪ್ರಕಟಣೆಯ ಬಗೆಗೆ ಉನ್ನತ ಆದರ್ಶಗಳನ್ನು ಹೊಂದಿದ್ದರು. ಪತ್ರಿಕೆಯ ಮೂಲಕ ತನ್ನ ಅಭಿಪ್ರಾಯಗಳನ್ನು ಪ್ರಜೆಗಳ ಮೇಲೆ ಹೇರದೆ ಜನರಲ್ಲಿ ದೇಶ, ಪ್ರಪಂಚಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದರಲ್ಲಿ ಆಸಕ್ತಿ ಮೂಡಿಸಿ, ಆಲೋಚನೆ ಹುಟ್ಟಿಸಿ ಕ್ರಿಯಾಶೀಲರನ್ನಾಗಿ ಮಾಡುವುದು ಅವರ ಉದ್ದೇಶ. ಪ್ರಜೆಗಳನ್ನು ಕುರಿಗಳ ಮಂದೆಗಳನ್ನಾಗಿ ಮಾಡದೆ ಸರಿಯಾದ ಗುರಿಯತ್ತ ನಡೆಸುವುದಕ್ಕೆ ಪ್ರಯತ್ನ ಮಾಡಿದರು.

‘ಆಂಧ್ರಪತ್ರಿಕ’ ಅತ್ಯಾಕರ್ಷಕವಾಗಿ, ಒಳ್ಳೆಯ ಕಾಗದದಲ್ಲಿ ಬಣ್ಣ ಬಣ್ಣದ ಮುಖಚಿತ್ರ, ಒಳ್ಳೆಯ ಚಿತ್ರದಿಂದ ಕೂಡಿದ್ದು ಸಕಾಲದಲ್ಲಿ ಪ್ರಕಟವಾಗುತ್ತಿತ್ತು. ಹಿಂಬದಿಯ ಪುಟದಲ್ಲಿ ‘ಅಮೃತಾಂಜನ’ದ ವಿಜ್ಞಾಪನೆ ತಪ್ಪದೆ ಇರುತ್ತಿತ್ತು. ಜನತೆ ಮುಖಪುಟದಲ್ಲಿನ ‘ಆಂಧ್ರಪತ್ರಿಕ’ ಹೆಸರಿನಿಂದ ಹಿಡಿದು ಕೊನೆಯಪುಟದ ಮೇಲಣ ‘ಅಮೃತಾಂಜನ’ ದವರೆಗೆ ಆಸಕ್ತಿಯಿಂದ ಓದುತ್ತಿತ್ತು. ಅದರಿಂದಲೇ ಆ ಕಾಲದಲ್ಲಿ ಆಮೂಲಾಗ್ರವಾಗಿ ಎನ್ನುವ ಬದಲು ಆಂಧ್ರರು, ‘ಆಂಧ್ರ ಪತ್ರಿಕೆಯಿಂದ ಅಮೃತಾಂಜನದವರೆಗೆ’ ಎನ್ನುತ್ತಿದ್ದರು. ಅಷ್ಟೊಂದು ಗೌರವ, ಪ್ರತಿಷ್ಠೆಗಳನ್ನು ಪ್ರಜಾಹೃದಯದಲ್ಲಿ ಸಂಪಾದಿಸಿತ್ತು.

ನಾಗೇಶ್ವರರಾವು ಆಂಧ್ರಪತ್ರಿಕಾ ಕ್ಷೇತ್ರದಲ್ಲಿ ಮಹತ್ತಗರ ಬದಲಾವಣೆಗಳನ್ನು ತಂದರು. ‘ಸಂವತ್ಸರಾದಿ ಸಂಚಿಕೆ’ ಎನ್ನುವ ಹೆಸರಿನಲ್ಲಿ ಪ್ರತಿ ಯುಗಾದಿಗೂ ಒಂದು ಪ್ರತ್ಯೇಕ ಸಂಚಿಕೆ ಪ್ರಕಟಿಸುತ್ತಿದ್ದರು. ತೆಲುಗಿನಲ್ಲಿ ಈ ರೀತಿ ಪ್ರತ್ಯೇಕ ಸಂಚಿಕೆ ಹೊರಡಿಸಿದುದು ಇದೇ ಮೊದಲು.

‘ಸಂವತ್ಸರಾದಿಸಂಚಿಕೆ’ ಮೊದಲಬಾರಿ ೧೯೧೦ ರಲ್ಲಿ ಯುಗಾದಿಯಂದು ಪ್ರಕಟವಾಯಿತು. ಆಂಧ್ರ, ಭಾರತ ಹಾಗೂ ವಿಶ್ವಾದ್ಯಂತದ ಪ್ರಮುಖರ ಭಾವಚಿತ್ರಗಳಿಂದೊ ಡಗೂಡಿ ಸಮಕಾಲಿನ ರಾಜಕೀಯ, ಸಾಮಾಜಿಕ ಸ್ಥಿತಿಗತಿಗಳನ್ನು ವಿವರಿಸುವ ಲೇಖನಗಳಿಂದ ತುಂಬಿ ಅತ್ಯಾಕರ್ಷಕವಾಗಿ ಪ್ರಕಟವಾಯಿತು ಮೊದಲ ಸಂಚಿಕೆ. ಪ್ರತಿ ಸಂವತ್ಸರಾದಿ ಸಂಚಿಕೆಯೂ ವಿಜ್ಞಾನಕೋಶವೇ.

ಸಂವತ್ಸರಾದಿ ಸಂಚಿಕೆಯಲ್ಲಿ ವಾಙ್ಮಯ, ಧರ್ಮ, ಸಾಮಾಜಿಕ ವಿಷಯಗಳ ಮೇಲೆ ಪ್ರಚೋದಪೂರ್ಣ ಲೇಖನಗಳು ಬಂದವು. ಡೆಮ್ಮಿ ೧/೪ ಅಳತೆ ೨೪೮ ಪುಟಗಳು, ಆರ್ಟ್ಸ್ ಕಾಗದದ ಮೇಲೆ ಮುದ್ರಿತವಾದ ೧೨೫ ಸುಂದರ ಚಿತ್ರಗಳಿಂದ ಕೂಡಿದ ಪ್ರಥಮ ಸಂಚಿಕೆ ಚಂದಾದಾರರಿಗೆ ಉಚಿತವಾಗಿ ಲಭ್ಯವಾಯಿತು. ಬಿಡಿಯಾಗಿ ಕೊಳ್ಳುವವರಿಗೆ ಅರ್ಧ ರೂಪಾಯಿಗೆ ಮಾರಾಟವಾಯಿತು. ೧೯೧೨ರ ಸಂವತ್ಸರಾದಿ ಸಂಚಿಕ ಪಂಚಮ ಜಾರ್ಜ್‌‌ನ ದೆಹಲಿ ಪಟ್ಟಾಭಿಷೇಕ ಕುರಿತು ವಿವರಗಳನ್ನೆಲ್ಲ ಪ್ರಕಟಿಸಿತು. ೧೯೧೫ರ ಸಂವತ್ಸರಾದಿ ಸಂಚಿಕ ಮೊದಲನೆಯ ಪ್ರಪಂಚ ಯುದ್ಧದ ವಿವರಗಳನ್ನು ನೀಡಿತು. ಆಂಧ್ರ ಚಳವಳಿ ಕುರಿತ ವಿವರಗಳನ್ನು ನೀಡುವ ಲೇಖನಗಳೂ ಇದರಲ್ಲಿವೆ. ಈ ಸಂಚಿಕೆಯಲ್ಲಿನ ಚಿತ್ರಗಳ ಸಂಖ್ಯೆ ೩೬೦!

೧೯೧೬ರ ಸಂವತ್ಸರಾದಿ ಸಂಚಿಕೆಗೆ ಬರೆದ ಮುನ್ನುಡಿಯಲ್ಲಿ ನಾಗೇಶ್ವರರಾವು ಸಂತೃಪ್ತಿ ವ್ಯಕ್ತಪಡಿಸಿದರು. ಆಂಧ್ರದ ತುಂಬ ಉತ್ಸಾಹ, ಚೈತನ್ಯ ತುಂಬಿದೆಯೆಂದೂ, ಆಂಧ್ರದಲ್ಲಿಯೂ ಸಹ ಸ್ವಭಾಷೆ, ಸಂಸ್ಕೃತಿ ಮೇಲೆ ಗೌರವ ಹುಟ್ಟುತ್ತಿದೆಯೆಂದು ಅವರು ಸಂತೋಷ ಸೂಚಿಸಿದರು.

೧೯೧೦-೧೯೩೮ರ ನಡುವಣ ಸಂವತ್ಸರಾದಿ ಸಂಚಿಕೆಗಳಿಗೆ ನಾಗೇಶ್ವರರಾವು ಬರೆದ ಮುನ್ನುಡಿಗಳನ್ನು ಪರಿಶೀಲಿಸಿದರೆ ಅಂದಿನ ಆಂಧ್ರ, ಭಾರತ ಹಾಗೂ ಪ್ರಪಂಚಚರಿತ್ರೆ ಸ್ಪಷ್ಟವಾಗಿ ಗೋಚರಿಸುತ್ತದೆ.

‘ಆಂಧ್ರಪತ್ರಿಕ’ ಜನಪ್ರಿಯತೆ ಸಂಪಾದಿಸಿದುದರಿಂದ ನಾಗೇಶ್ವರರಾವು ದಿನಪತ್ರಿಕೆ ಸ್ಥಾಪಿಸುವ ತೀರ್ಮಾನ ಕೈಗೊಂಡರು. ೧೯೧೪ ರ ಏಪ್ರಿಲ್‌ ಮೊದಲನೇ ದಿನಾಂಕ ‘ಆಂಧ್ರಪತ್ರಿಕ’ ದಿನಪತ್ರಿಕೆ ಪ್ರಕಟವಾಯಿತು. ಆಂಧ್ರವಾರ ಪತ್ರಿಕ, ಆಂಧ್ರಪತ್ರಿಕ ಆಂಧ್ರದ ಪ್ರತಿ ಹಳ್ಳಿಗೂ ತಲುಪಲಾರಂಭಿಸಿದವು. ಇವುಗಳಿಂದ ಸ್ಪೂರ್ತಿಗೊಂಡು ಆಂಧ್ರದಲ್ಲಿ ಎಷ್ಟೋ ಪತ್ರಿಕೆಗಳು ಉದಯವಾದವು. ಆದರೆ ಇವುಗಳ ವೈಶಿಷ್ಟ್ಯ ಮತ್ತಾವ ಪತ್ರಿಕೆಗೂ ಲಭಿಸಲಿಲ್ಲ.

ಭಾರತಿ

ನಾಗೇಶ್ವರರಾವು ವಿಶಾಲಭಾವನೆ ಉಳ್ಳವರು. ಪ್ರಾಚೀನಕಾಲದಲ್ಲಿ ಉತ್ತಮವಾದುದನ್ನೆಲ್ಲ ಎತ್ತಿ ಹಿಡಿಯುತ್ತಿದ್ದರು. ಆಧುನಿಕಯುಗದಲ್ಲಿ ಒಳ್ಳೆಯದನ್ನು ಪ್ರೋತ್ಸಾಹಿಸುತ್ತಿದ್ದರು. ಸಾಮಾಜಿಕ, ಸಾಹಿತ್ಯ, ರಾಜಕೀಯ ರಂಗಗಳಲ್ಲಿ ಹೊಸ ಪ್ರಯೋಗಗಳು ನಡೆದರೆ ಅವುಗಳ ಉದ್ದೇಶವನ್ನು ಶ್ರದ್ಧೆಯಿಂದ ಕೇಳಿ ಆಸಕ್ತಿಯನ್ನು ತೋರುತ್ತಿದ್ದರು. ವಿಶ್ವಕಲ್ಯಾಣವೇ ಆ ಪ್ರಯೋಗಗಳ ಗುರಿಯಾದರೆ ತಪ್ಪದೆ ಪ್ರೋತ್ಸಾಹಿಸುತ್ತಿದ್ದರು. ತೆಲುಗು ಸಾಹಿತ್ಯದ ವಿವಿಧ ಪ್ರಕಾರಗಳ ವಿಕಾಸಕ್ಕಾಗಿ ೧೯೨೪ರಲ್ಲಿ ‘ಭಾರತಿ’ ಎಂಬ ಮಾಸಪತ್ರಿಕೆಯನ್ನು ಸ್ಥಾಪಿಸಿದರು. ಅಂದು ಮಾತ್ರವೇ ಅಲ್ಲ. ಇಂದಿಗೂ ‘ಭಾರತಿ’ಯಲ್ಲಿ ಲೇಖನ ಅಚ್ಚಾಗಿದೆಯೆಂದರೆ ಲೇಖಕರಿಗೆ ಹೆಮ್ಮೆ.

ತೆಲುಗು ಸಾಹಿತ್ಯ ಪತ್ರಿಕೆಗಳಲ್ಲಿ ‘ಭಾರತಿ’ಯ ಸ್ಥಾನ ಅತಿ ವಿಶಿಷ್ಟ. ಆಂಧ್ರದ ನಾಲ್ಕು ಮೂಲೆಗಳಲ್ಲಿಯೂ ಚದುರಿಬಿದ್ದಿರುವ ಸುಂದರ ಶಿಲ್ಪಗಳಿಂದ ಕೂಡಿದ ದೇವಾಲಯಗಳು, ದಿಕ್ಕಿಲ್ಲದ ಶಾಸನಗಳು, ಕತ್ತಲೆ ಕೋಣೆಗಳಲ್ಲಿ ತುಂಬಿರುವ ತಾಳಪತ್ರ ಗ್ರಂಥಗಳು, ಪ್ರಾಚೀನ ಕಾವ್ಯಗಳು, ಆಧುನಿಕ ಗ್ರಂಥಗಳು-ಇವನ್ನೆಲ್ಲ ಕುರಿತ ಪರಿಶೀಲನಾತ್ಮಕ ಲೇಖನಗಳು ಹಾಗೂ ಕವಿತೆಗಳು, ಕಥೆಗಳು, ನಾಟಕಗಳು, ಏಕಾಂಕಗಳು-ಸಾಹಿತ್ಯದಲ್ಲಿನ ಎಲ್ಲ ಪ್ರಕಾರಗಳಿಗೂ ಪ್ರೋತ್ಸಾಹ ನೀಡುವ ಗುರಿಹೊಂದಿದ ‘ಭಾರತಿ’ ಪ್ರಕಟವಾಯಿತು. ಸಾಹಿತ್ಯ ಮಾಸಪತ್ರಿಕೆಯಾದರೂ ಸಾಮಾಜಿಕ, ರಾಜಕೀಯ, ವೈಜ್ಞಾನಿಕ ಲೇಖನಗಳಿಗೂ ಸ್ಥಾನ ಇರುತ್ತಿತ್ತು. ಅಷ್ಟೇ ಅಲ್ಲದೆ ನಾಗೇಶ್ವರರಾವು ಪ್ರತಿ ತಿಂಗಳೂ ‘ಸಾಭಿಪ್ರಾಯ ವಿಶೇಷಗಳು’ ಎನ್ನುವ ‘ಕಾಲಮ್‌’ ನಲ್ಲಿ ಸಾಮಾಜಿಕ, ರಾಜಕೀಯ ಮತ್ತು ಸಾಹಿತ್ಯ ವಿಷಯಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದರು. ಆಂಧ್ರದಲ್ಲಿ, ಭಾರತದಲ್ಲಿ ಮತ್ತು ಪ್ರಪಂಚದಲ್ಲಿ ಆಯಾ ತಿಂಗಳು ನಡೆದ ಮುಖ್ಯ ಘಟನೆಗಳ ಬಗ್ಗೆ ಸಂಯಮವದಿಂದ, ವಿಮರ್ಶಾತ್ಮಕವಾಗಿ ಬರೆಯುತ್ತಿದ್ದರು. ಆಂಧ್ರದಲ್ಲಿ ಸಾಂಸ್ಕೃತಿಕ ಚೈತನ್ಯ ಮೂಡಲು, ಭಾರತೀಯ ಸಂಸ್ಕೃತಿ ಕುರಿತು ಗೌರವ ಹುಟ್ಟುವಂತಾಗಲು, ಭಾರತೀಯ ಭಾವೈಕ್ಯ ಉಂಟಾಗಲು ನಾಗೇಶ್ವರರಾವು ದೀಕ್ಷಾಬದ್ಧರಾಗಿ ಲೇಖನಿ ಉಪಯೋಗಿಸುತ್ತಿದ್ದರು. 

“ನನಗೆ ಪ್ರಗತಿ ಸಾಧಿಸಬೇಕೆಂಬ ಆಕಾಂಕ್ಷೆ ಅಗಾಧವಾಗಿದೆ”

 ಶಾರದೆಯ ಸೇವೆ

ನಾಗೇಶ್ವರರಾವು ಸಂಸ್ಕೃತ-ತೆಲುಗು ಎರಡು ಭಾಷೆಗಳಲ್ಲಿಯೂ ಶ್ರೇಷ್ಠ ಪಂಡಿತರು. ಆರುಸಾವಿರ ಮಂದಿ ಲೇಖಕರಿಂದ ರಚಿತವಾದ ೧೩.೯೨೮ ತೆಲುಗು ಗ್ರಂಥಗಳ ಸೂಚಿಯನ್ನು ‘ಆಂಧ್ರ ವಾಙ್ಮಯ ಸೂಚಿಕ’ ಎನ್ನುವ ಹೆಸರಿನಲ್ಲಿ ಪ್ರಕಟಿಸಿದರು. ಅದಕ್ಕೆ ಅಮೂಲ್ಯವಾದ ಮುನ್ನುಡಿಯನ್ನು ಬರೆದಿದಾರೆ. ಈ ಪೀಠಿಕೆ ‘ಆಂಧ್ರ ವಾಙ್ಮಯ ಚರಿತ್ರೆ’ ಎನ್ನುವ ಹೆಸರಿನಲ್ಲಿ ಪ್ರಕಟವಾಗಿದೆ. ಶತಕ ವಾಙ್ಮಯದ ಕುರಿತು ಇವರು ಬರೆದ ಚರಿತ್ರೆ ಅಮೂಲ್ಯವಾದುದು. ಇವರ ಭಗವದ್ಗೀತಾ ವ್ಯಾಖ್ಯೆ ಹೆಚ್ಚಿನ ಪ್ರಚಾರದಲ್ಲಿದೆ.

ಆಂಧ್ರವಿಜ್ಞಾನ ಸರ್ವಸ್ವ ಸಂಪುಟಗಳಲ್ಲಿ ಹೊಸ ವಿಷಯಗಳನ್ನು ಸೇರಿಸಿ ಸುಂದರವಾಗಿ ಪುನರ್ಮುದ್ರಿಸಿದುದು ತೆಲುಗು ಭಾಷಾಭಿವೃದ್ಧಿಗೆ ನಾಗೇಶ್ವರರಾವು ಮಾಡಿದ ಮಹತ್ತರ ಸೇವೆ. ಇವು ಪಂತುಲುರವರ ಗೆಳೆಯರಾದ ಕೊಮರ‍್ರಾಜು ಲಕ್ಷ್ಮಣರಾವು ಅವರ ಮುಖ್ಯ ಸಂಪಾದಕತ್ವದಲ್ಲಿ ಮೂರು ಸಂಪುಟಗಳಾಗಿ ಹೊರ ಬಂದವು. ನಾಲ್ಕನೆಯ ಸಂಪುಟವನ್ನು ಆಂಧ್ರಸಂಪುಟವಾಗಿ ಹೊರತರಲು ಸಾಮಗ್ರಿಯನ್ನು ಶೇಖರಿಸಿಸದ್ದರು. ಆದರೆ ಲಕ್ಷ್ಮಣರಾವುರವರ ಅಕಾಲಮರಣದಿಂದಾಗಿ ನಾಲ್ಕನೆಯ ಸಂಪುಟ ಹೊರಬರಲಿಲ್ಲ.

ಕೋಮರ್ರಾಜು ಪ್ರಕಟಿಸಿದ ಆಂಧ್ರವಿಜ್ಞಾನ ಸರ್ವಸ್ವ ಸಂಪುಟಗಳಿಗೆ ಹೊಸ ವಿಷಯಗಳನ್ನು ಸೇರಿಸಿ ಚಿತ್ರಗಳು, ನಕ್ಷೆಗಳು, ಭಾವಚಿತ್ರಗಳು ಮೊದಲಾದವುಗಳೊಂದಿಗೆ ಅತ್ಯಂತ ಆಕರ್ಷಣೀಯವಾಗಿ ಎರಡು ಸಂಪುಟಗಳಾಗಿ ಪುನಃ ಮುದ್ರಿಸಿದರು. ಪ್ರಪಂಚದ ವಿವಿಧ ರಂಗಗಳಲ್ಲಿ ಸಾಧಿಸಿದ ಪ್ರಗತಿಯನ್ನು ಆಂಧ್ರರಿಗೆ ಸುಲಭವಾಗಿ ಅರ್ಥವಾಗುವಂತೆ ಹೇಳುವುದೇ ಈ ಗ್ರಂಥಗಳ ಮುಖ್ಯೋದ್ದೇಶವೆಂದು ಪಂತುಲು ಸ್ಪಷ್ಟಪಡಿಸಿದರು.

ಆಂಧ್ರವಿಜ್ಞಾನ ಸರ್ವಸ್ವ ಸಂಪುಟದ ಮೊದಲ ಗ್ರಂಥದಲ್ಲಿ ೬೦೦, ಎರಡನೆಯ ಸಂಪುಟದಲ್ಲಿ ೬೦೨ ಪುಟಗಳಿವೆ. ಈ ಬೃಹತ್‌ ಗ್ರಂಥಗಳ ಬೆಲೆ ೨೦ ರೂಪಾಯಿಗಳು ಮಾತ್ರ. ಪಂತುಲುರವರ ಈ ಸೇವೆ ಅವರಿಗೆ ಶಾಶ್ವತ ಕೀರ್ತಿಯನ್ನು ತಂದಿತ್ತಿತು.

ನಾಗೇಶ್ವರರಾವು ೧೯೨೬ ರಲ್ಲಿ ‘ಆಂಧ್ರ ಗ್ರಂಥ ಮಾಲಾ’ ಸ್ಥಾಪಿಸಿ ಸಾಹಿತ್ಯ, ಧರ್ಮ, ಸಮಾಜ, ನೀತಿ, ಇತಿಹಾಸಗಳಿಗೆ ಸಂಬಂಧಿಸಿದ ಮೂವತ್ತು ಗ್ರಂಥಗಳನ್ನು ಪ್ರಕಟಿಸಿದರು. ಇವೆಲ್ಲವೂ ಅಮೂಲ್ಯವಾದವುಗಳು.

ದಯೆಯ ತವರು

ನಾಗೇಶ್ವರರಾವು ದಯಾಸಿಂಧು. ಕಷ್ಟದಲ್ಲಿ ಇರುವವರನ್ನು ಕಂಡರೆ ಅವರ ಮನಸ್ಸು ಬೆಣ್ಣೆಯಂತೆ ಕರಗುತ್ತಿತ್ತು. ಹರಿಜನರ ದೀನ ಹೀನಸ್ಥಿತಿಯ ಬಗೆಗೆ ಅವರು ಅಪಾರ ಕರುಣೆ ತೋರಿದರು. ಸ್ವಗ್ರಾಮವಾದ ಯಲಕುರ್ರುನಲ್ಲಿ ೧೯೧೧ ರಲ್ಲಿ ತಾಯಿಯ ಹೆಸರಿನಲ್ಲಿ ಶ್ಯಾಮ ಲಾಂಬ ಉಚಿತ ಪಾಠಶಾಲೆ ಸ್ಥಾಪಿಸಿದರು. ಹರಿಜನ ವಿದ್ಯಾರ್ಥಿಗಳು ಅದಕ್ಕೆ ಸೇರಲು ಅವಕಾಶ ಮಾಡಿಕೊಟ್ಟರು. ಎರಡು ಎಕರೆಗಳಷ್ಟು ಜಾಗದಲ್ಲಿ ನಲವತ್ತು ಮನೆಗಳನ್ನು ಕಟ್ಟಿಸಿ ಹರಿಜನರಿಗೆ ದಾನಮಾಡಿದರು. ಆಂಧ್ರದಲ್ಲಿ ೧೯೩೨ ರಲ್ಲಿ ಸ್ಥಾಪಿಸಿದ ಆಂಧ್ರಪ್ರಾಂತ ಹರಿಜನ ಸಂಘಕ್ಕೆ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಕುಲಮತ ಭೇದವಿಲ್ಲದೆ ಕೇಳಿದವರಿಗೆಲ್ಲ ದಾನ ನೀಡುತ್ತಿದ್ದರು. ಆಂಧ್ರದಲ್ಲಿ ನಾಗೇಶ್ವರರಾವು ಅವರಿಂದ ಆರ್ಥಿಕ ಸಹಾಯ ಪಡೆಯದ ಸಂಘ-ಸಂಸ್ಥೆ, ದೇವಾಲಯ ವಿದ್ಯಾಸಂಸ್ಥೆಗಳೇ ಇಲ್ಲ.

ನಾಗೇಶ್ವರರಾವು ಅವರ ದಾನಗುಣಗಳನ್ನು ಎಷ್ಟು ಪ್ರಶಂಸಿಸಿದರೂ ಸಾಲದು. ಅವರನ್ನು ಕುರಿತು ‘ಹರಿಜನ’ ಪತ್ರಿಕೆಯಲ್ಲಿ ಮಹದೇವ ದೇಸಾಯಿ ಬರೆದ ಮಾತುಗಳು ಸ್ಮರಣೀಯ: “ಅವರು ಬಲಗೈಯಲ್ಲಿ ದಾನಮಾಡಿದುದನ್ನು ಎಡಗೈಗೆ ತಿಳಿಯದಂತೆ ಎಷ್ಟೋ ಗುಪ್ತದಾನ ಮಾಡಿದ ವಿಶ್ವದಾತ.”

ನಾಗೇಶ್ವರರಾವು ಅವರ ಪ್ರಾಣಮಿತ್ರರಾದ ಕೊಂಡಾ ವೆಂಕಟಪ್ಪಯ್ಯನವರು ಹೀಗೆ ಕೇಳಿದ್ದರು: “ಚಿಕ್ಕಪುಟ್ಟದಾಗಿ ಎಷ್ಟೆಷ್ಟೋ ಗುಪ್ತದಾನ ಮಾಡುವುದಕ್ಕಿಂತ ಯಾವುದಾದರೂ ಸಂಸ್ಥೆಗೆ ಒಂದೇಸಲಕ್ಕೆ ದೊಡ್ಡ ಮೊತ್ತವನ್ನು ದಾನವಾಗಿ ನೀಡಿದರೆ ಶಾಶ್ವತವಾಗಿ ಉಳಿಯುತ್ತದೆ ಅಲ್ಲವೆ?” ಅದಕ್ಕೆ ನಾಗೇಶ್ವರರಾವು ಹೀಗೆ ಉತ್ತರ ನೀಡಿದರು: “ನೀವು ಹೇಳುವುದು ಸರಿಯೆ. ಆದರೆ ನನ್ನ ಬಳಿ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವವರಿಗೆ ಸಹಾಯಮಾಡದೆ ಯಾವುದೋ ಸಂಸ್ಥೆಗೆ ಲಕ್ಷಾಂತರ ರೂಪಾಯಿ ದಾನ ಕೊಟ್ಟರೆ ನನ್ನ ಮನಸ್ಸಿಗೆ ತೃಪ್ತಿಯಿರದು. ಪ್ರತ್ಯಕ್ಷವಾಗಿ ದರಿದ್ರನಾರಾಯಣ ಇರುವಾಗ, ಪರೋಕ್ಷವಾಗಿ ಸಹಾಯ ಮಾಡಿದರೆ ಯಾರಿಗೆ ಪ್ರಯೋಜನವಾಗುತ್ತದೆಯೋ ನಾನು ಹೇಗೆ ಊಹಿಸಲಿ?”

ನಾಗೇಶ್ವರರಾವುರವರ ದಾನಗುಣದ ಕುರಿತು ಆಂಧ್ರದಲ್ಲಿ ಲೆಕ್ಕಕ್ಕೆ ಸಿಗದಷ್ಟು ಕಥೆಗಳು ಪ್ರಚಾರದಲ್ಲಿವೆ. ಅವರ ದಯಾಗುಣಕ್ಕೆ ಒಂದು ಉದಾಹರಣೆ: ಒಂದು ಸಾಯಂಕಾಲ, ನಾಗೇಶ್ವರರಾವು ಪತ್ರಿಕಾ ಕಚೇರಿಯ ಕೆಲಸ ಮುಗಿಸಿಕೊಂಡು ವಾಪಸಾಗುತ್ತಿದ್ದರು. ದೊಡ್ಡ ಮನುಷ್ಯರೊಬ್ಬರು ಬಂದು ಅವರ ಸಹಾಯ ಯಾಚಿಸಿದರು, ನಾಗೇಶ್ವರರಾವು ತುಂಬಾ ದಣಿದಿದ್ದರು. ಆದುದರಿಂದ “ನಾಳೆ ಬನ್ನಿ, ಖಂಡಿತ ಸಹಾಯಮಾಡಿ ಕೊಡುತ್ತೇನೆ” ಎಂದರು. ಆ ದೊಡ್ಡ ಮನುಷ್ಯರು ನಾಗೇಶ್ವರರಾವು ಮಾತಿಗೆ ಕಿವಿಗೊಡಲೇ ಇಲ್ಲ. “ನಾಳೆ ಬಾ ಅಂದರೆ ಯಾರಯ್ಯಾ ಬರ್ತಾರೆ? ನನಗೇನು ಬೇರೆ ಕೆಲಸವೇ ಇಲ್ಲ ಅಂದು ಕೊಂಡಿದ್ದೀಯಾ? ಕೊಡೋದೇನೋ ಈಗಲೇ ಕೊಟ್ಟು ಬಿಡಬಾರದೆ? ಆ ಮಹದ್ಭಾಗ್ಯಕ್ಕೆ ನಿಮ್ಮಸುತ್ತ ಹದಿಮೂರು ಪ್ರದಕ್ಷಿಣೆ ಹಾಕಬೇಕೇನಯ್ಯ?” ಎಂದು ಚಾವಣಿ ಕಿತ್ತುಹೋಗುವಂತೆ ಅರಚಿದೆರಂತೆ. ಆ ದೊಡ್ಡ ಮನುಷ್ಯರ ಒರಟುತನದ ಹಿಂದಿನ ನೋವನ್ನು ಅರ್ಥಮಾಡಿಕೊಂಡ ನಾಗೇಶ್ವರರಾವು ಮನೆಯ ಖರ್ಚಿಗೆ ತೆಗೆದುಕೊಂಡು ಹೋಗುತ್ತಿದ್ದ ಹಣವನ್ನು ಆ ವ್ಯಕ್ತಿಗೆ ಕೊಟ್ಟು ಕಳುಹಿಸಿದರಂತೆ.

ಮತ್ತೊಮ್ಮೆ ಬಡವಿದ್ಯಾರ್ಥಿಯೊಬ್ಬ ಪರೀಕ್ಷಾ ಶುಲ್ಕಕ್ಕೆ ನೆರವು ನೀಡುವಂತೆ ನಾಗೇಶ್ವರರಾವು ಅವರನ್ನು ಕೇಳಿದ. ನಾಗೇಶ್ವರರಾವು ಷರ್ಟಿನ ಜೇಬಿಗೆ ಕೈಹಾಕಿ ನೋಟೊಂದನ್ನು ಸೆಳೆದರು. ಚಾಚಿದ ಕೈಯಲ್ಲಿದ್ದ ನೋಟು ಕಂಡು ವಿದ್ಯಾರ್ಥಿ ದಿಗ್ಬ್ರಾಂತನಾದ-ಅದು ನೂರು ರೂಪಾಯಿ ನೋಟು. “ಸ್ವಾಮಿ ನೀವು ನೂರು ರೂಪಾಯಿ ನೋಟು ಕೊಡುತ್ತಿದ್ದೀರಿ” ಎಂದ ಆತ. “ಮಗು ಆ ನೋಟು ನಿನಗೆ ಸೇರಬೇಕೆಂದು ಭಗವಂತ ಬರೆದಿಟ್ಟಿದ್ದಾನೆ. ಆದುದರಿಂದ ನೀನು ಅದನ್ನು ನಿಸ್ಸಂಕೋಚವಾಗಿ ತೆಗೆದುಕೋ” ಎಂದರಂತೆ.

ಆ ಕಾಲದಲ್ಲಿ ಆಂಧ್ರದಲ್ಲಿ ಪಂತುಲುರವರು ಪಾಲ್ಗೊಳ್ಳದ ಚಟುವಟಿಕೆ ಯಾವುದೂ ಇರಲಿಲ್ಲವೆಂದರೆ ಅತಿಶಯೋಕ್ತಿ ಏನೂ ಇಲ್ಲ. “ಗ್ರಂಥಾಲಯೋದ್ಯಮ ಪಿತಾಮಹ”ರಾದ ಅಯ್ಯಂತಿ ವೆಂಕಟರಮಣಯ್ಯ ಅವರಿಗೆ ನಾಗೇಶ್ವರರಾವು ಎಲ್ಲ ವಿಧವಾದ ನೆರವನ್ನು ನೀಡುತ್ತಿದ್ದರು.

ವಿಜಯವಾಡದಲ್ಲಿನ ರಾಮಮೋಹನ ಗ್ರಂಥಾಲಯ ಆಂಧ್ರದಲ್ಲಿನ ಪ್ರಾಚೀನ ಗ್ರಂಥಾಲಯಗಳಲ್ಲಿ ಒಂದು. ಇದಕ್ಕೆ ಪಂತುಲು ಅವರು ಆರ್ಥಿಕವಾಗಿ ತುಂಬ ಸಹಾಯ ಮಾಡಿದರು. ೧೯೧೯ರ ಮಾರ್ಚಿಯಲ್ಲಿ ಜರುಗಿದ ಅಖಿಲ ಭಾರತ ಗ್ರಂಥಾಲಯ ಮಹಾಸಭೆಗೆ ಸಹ ಪಂತುಲು ಉದಾರವಾಗಿ ಕಾಣಿಕೆ ನೀಡಿದರು. ಭಾರತದೇಶಕ್ಕೆ ಸ್ವಾತಂತ್ಯ್ರ ಲಭಿಸಬೇಕಾದರೆ, ಭಾರತೀಯರಿಗೆ ಸ್ವಾತಂತ್ಯ್ರ ಎಂದರೇನು, ಅದರಿಂದ ಲಭಿಸುವ ಲಾಭವೇನೆಂದು ಅರಿವು ಉಂಟಾಗಬೇಕಾದರೆ ಮಾನಸಿಕ ವಿಕಾಸ ಅಗತ್ಯವೆಂದು ನುಡಿದರು. ಪ್ರಪಂಚದ ಭಾಷೆಗಳಲ್ಲಿನ ಉತ್ತಮ ಸಾಹಿತ್ಯವನ್ನು ಅಧ್ಯಯನ ಮಾಡದ ಹೊರತು ನಮಗೆ ಸ್ವತಂತ್ರ ದೃಷ್ಟಿಕೋನ ಉಂಟಾಗದೆಂದು ಪದೇ ಪದೇ ಹೇಳಿದರು. ಭಾರತೀಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು, ವೈಜ್ಞಾನಿಕ ದೃಷ್ಟಿಯಿಂದ ಪರಿಶೀಲಿಸಿ ಮಾನವಜೀವಿತವನ್ನು ಉತ್ತಮಪಡಿಸಿಕೊಳ್ಳುವುದು ಅಗತ್ಯವೆಂದು ಅವರು ಪ್ರತಿಪಾದಿಸಿದರು. ಗ್ರಂಥಾಲಯಗಳೆಂದರೆ ಜ್ಞಾನದೀಪಗಳಿಂದ ಕೂಡಿದ ದೇವಾಲಯಗಳು ಎಂದು ಅವರ ಅಭಿಪ್ರಾಯ. ಆಂಧ್ರದಲ್ಲಿನ ಖಾಸಗಿ ಗ್ರಂಥಾಲಯಗಳಿಗೆ ಬಹಳ ಕಾಲ ತಾವು ಪ್ರಕಟಿಸುತ್ತಿದ್ದ ಆಂಧ್ರಪತ್ರಿಕೆ, ಆಂಧ್ರವಾರಪತ್ರಿಕ, ಭಾರತಿ ಪತ್ರಿಕೆಗಳನ್ನು ಉಚಿತವಾಗಿ ಕಳುಹಿಸುತ್ತಿದ್ದರು.

ಡಾಕ್ಟರ್ ಹ್ಯಾನಿಬೆಸೆಂಟ್‌ ಮದರಾಸಿನಲ್ಲಿ ಸ್ಥಾಪಿಸಿದ ಹೋಂರೂಲ್‌ ಲೀಗ್‌ ಘಟಕಕ್ಕೆ ಅಧ್ಯಕ್ಷರಾಗಿ ಎಲ್ಲಾ ವೆಚ್ಚವನ್ನು ತಾವೇ ಹೊತ್ತು ಸೇವೆ ಸಲ್ಲಿಸಿದರು.

ಆಂಧ್ರದಲ್ಲಿ ಖಾದಿ ಪ್ರಚಾರಕ್ಕೆ ನಾಗೇಶ್ವರರಾವು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದರು. ಪ್ರಾಯದಲ್ಲಿ ಸೂಟ್‌ ಧರಿಸುತ್ತಿದ್ದ ಅವರು ಗಾಂಧೀಜಿ ಪ್ರಭಾವಕ್ಕೆ ಒಳಗಾಗಿ ಖಾದಿವಸ್ತ್ರಗಳನ್ನು ಮಾತ್ರವೇ ಉಡುತ್ತಿದ್ದರು. ಅವರು ಬಹುಕಾಲ ಆಂಧ್ರ ಖಾದಿಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡಿದರು.

ಹಿಂದಿ ಭಾಷೆಗಾಗಿ

ನಾಗೇಶ್ವರರಾವು ಅವರಿಗೆ ತೆಲುಗು ಭಾಷೆಯ ಬಗೆಗೆ ಎಷ್ಟು ಗೌರವ ಇದ್ದಿತೋ ಇತರ ಭಾಷೆಗಳ ಬಗೆಗೂ ಅಷ್ಟೇ ಗೌರವ ಇದ್ದಿತು. ಅವರು ಯಾವ ಭಾಷೆಯನ್ನೂ ದ್ವೇಷಿಸುತ್ತಿರಲಿಲ್ಲ. ಭಾರತದೇಶ ಸರ್ವತೋಮುಖ ಅಭಿವೃದ್ಧಿ ಸಾಧಿಸಬೇಕಾದರೆ ರಾಷ್ಟ್ರಭಾಷೆ ಹಿಂದಿ ಆಗಬೇಕೆಂಬುದು ಅವರ ಅಭಿಪ್ರಾಯ. ಗಾಂಧೀಜಿಯ ಸಿದ್ಧಾಂತಗಳ ಬಗೆಗೆ ಪ್ರಬಲ ವಿಶ್ವಾಸವಿದ್ದುದರಿಂದ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಅಂಗೀಕರಿಸಿ ಹಿಂದೀ ಪ್ರಚಾರಕ್ಕೆ ಸಾಧ್ಯವಾದಷ್ಟು ನೆರವು ನೀಡಿದರು. ಮದರಾಸಿನಲ್ಲಿ ಸ್ಥಾಪಿಸಲಾದ ದಕ್ಷಿಣ ಭಾರತ ಹಿಂದೀ ಪ್ರಚಾರ ಸಭೆಗೆ ಆರ್ಥಿಕ ನೆರವು ನೀಡಿ ಸಹಾಯ ಮಾಡಿದವರಲ್ಲಿ ನಾಗೇಶ್ವರರಾವು ಪಂತುಲು ಪ್ರಮುಖರು. ಆ ಕಾಲದಲ್ಲಿ ಆಂಧ್ರದಲ್ಲಿ ಹಿಂದೀ ಪ್ರಚಾರಕ್ಕೆ ವಿಜಯವಾಡ ಮುಖ್ಯಕೇಂದ್ರ ಆಗಿದ್ದಿತು. ಈ ಕೇಂದ್ರಕ್ಕೆ ಸಹ ಪಂತುಲುರವರು ಎಷ್ಟೋಬಾರಿ ಉದಾರವಾಗಿ ವಂತಿಗೆ ನೀಡಿ ಸಹಾಯ ಮಾಡಿದರು.

೧೯೨೪ರಲ್ಲಿ ಕಾಕಿನಾಡದಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಮಹಾಸಭೆ ಜೊತೆಗೆ ಅಖಿಲ ಭಾರತ ಹಿಂದೀ ಸಾಹಿತ್ಯ ಸಮ್ಮೇಳನವೂ ನಡೆಯಿತು. ಈ ಹಿಂದೀ ಸಮ್ಮೇಳನದ ಸ್ವಾಗತ ಸಮಿತಿಗೆ ನಾಗೇಶ್ವರರಾವು ಅವರೇ ಅಧ್ಯಕ್ಷರು. ಭಾರತೀಯರೆಲ್ಲ ಒಂದಾಗಬೇಕಾದರೆ ಭಾರತೀಯ ಭಾಷೆಯಾದ ಹಿಂದಿಯೇ ರಾಷ್ಟ್ರಭಾಷೆ ಆಗಬೇಕು. ನಾಗರೀಲಿಪಿ ಎಲ್ಲ ಭಾರತೀಯ ಭಾಷೆಗಳಿಗೆ ಏಕಲಿಪಿ ಆಗಬೇಕೆಂದು ಅವರು ಘೋಷಿಸಿದರು.

ನಾಗೇಶ್ವರರಾವು ಅವರು ಸ್ವರ್ಗೀಯರಾದ ಅನಂತರ ಆಂಧ್ರ ಪ್ರಾಂತ ಹಿಂದೀ ಪ್ರಚಾರ ಸಂಘ ಅವರ ಹೆಸರಿನಲ್ಲಿ ನಿಧಿ ಸಂಗ್ರಹಿಸಿತು. ಈ ನಿಧಿಯನ್ನು ಬಳಸಿ ಅವರ ಹೆಸರಿನಲ್ಲಿ “ಶ್ರೀ ನಾಗೇಶ್ವರರಾವು ಹಿಂದೀ ಭವನ”ವನ್ನು ನಿರ್ಮಿಸಿತು. ದಕ್ಷಿಣ ಭಾರತದಲ್ಲಿ ಹಿಂದೀ ಪ್ರಚಾರದ ಚರಿತ್ರೆಯಲ್ಲಿ ನಾಗೇಶ್ವರರಾವು ಅವರ ಹೆಸರು ಚಿರಸ್ಮರಣೀಯ.

ಸ್ವಾತಂತ್ಯ್ರ ಹೋರಾಟದಲ್ಲಿ

ನಾಗೇಶ್ವರರಾವು ಗಾಂಧೀಜಿಗೆ ಪರಮಾಪ್ತರು. ಮಹಾತ್ಮರು ಮದರಾಸಿಗೆ ಅಥವಾ ವಿಜಯವಾಡಕ್ಕೆ ಬಂದಾಗ ತಪ್ಪದೆ ಪಂತುಲುರವರ ಆತಿಥ್ಯ ಸ್ವೀಕರಿಸುತ್ತಿದ್ದರು. ಸ್ವಾತಂತ್ಯ್ರ ಚಳವಳಿಯಲ್ಲಿ ಆರ್ಥಿಕವಾಗಿ ಉತ್ತರಭಾರತದಲ್ಲಿ ಜಮನಾಲಾಲ್‌ ಬಜಾಜ್‌ ನೆರವು ನೀಡಿದರೆ ದಕ್ಷಿಣದಲ್ಲಿ ನಾಗೇಶ್ವರರಾವು ಸಹಾಯ ಮಾಡಿದರು.

ಅವರು ಗಾಂಧೀಜಿ ಸಿದ್ಧಾಂತಗಳನ್ನು ತ್ರಿಕರಣ ಪೂರ್ವಕವಾಗಿ ಪಾಲಿಸಿದರು. ೧೯೨೪ರಲ್ಲಿ ನಡೆದ ಬೆಳಗಾಂ ಕಾಂಗ್ರೆಸ್‌ ಅಧಿವೇಶನದಲ್ಲಿ ನಾಗೇಶ್ವರರಾವು ತಮ್ಮ ಮಗಳ ಬಂಗಾರದ ಒಡವೆಗಳನ್ನೆಲ್ಲ ಕಾಂಗ್ರೆಸಿಗೆ ಕೊಟ್ಟುಬಿಟ್ಟರು. ಇವರ ದಾನಗುಣವನ್ನು ಕಂಡು ಸಭೆಯಲ್ಲಿ ಇದ್ದವರೆಲ್ಲ ಬೆರಗಾದರು.

ನಾಗೇಶ್ವರರಾವು ಆಸ್ತಿಕರು. ಭದ್ರಾಚಲದ ರಾಮದೇವಾಲಯಕ್ಕೆ ಹತ್ತು ಸಹಸ್ರ ರೂಪಾಯಿ ಖರ್ಚಿನಲ್ಲಿ ವಿದ್ಯುದೀಪಗಳನ್ನು ಹಾಕಿಸಿದರು. ಶ್ರೀಶೈಲ ಮಂದಿರಕ್ಕೆ ಸಹಸ್ರಾರು ರೂಪಾಯಿಗಳನ್ನು ಖರ್ಚು ಮಾಡಿ ಮೆಟ್ಟಿಲಗಳನ್ನು ಮಾಡಿಸಿದರು. ಬೆಳ್ಳಿಯ ನಂದಿಯನ್ನು ಕಾಣಿಕೆಯಾಗಿ ನೀಡಿದರು. ಆಂಧ್ರದಲ್ಲಿನ ಎಷ್ಟೆಷ್ಟೋ ಜೀರ್ಣವಾಗಿ ಹೋದ ದೇವಾಲಯಗಳಿಗೆ ಆರ್ಥಿಕ ನೆರವಿತ್ತರು. ಸ್ವಗ್ರಾಮದಲ್ಲಿ ಉಚಿತ ವೈದ್ಯಶಾಲೆಯನ್ನು ನಿರ್ಮಿಸಿ ಜನಸೇವೆ ಮಾಡಿದರು.

ನಾಗೇಶ್ವರರಾವು ವಿಜಯವಾಡದಲ್ಲಿ ಕಟ್ಟಿಸಿಕೊಂಡ ಮನೆಯ ಹೆಸರು ‘ದುರ್ಗಾವಿಲಾಸ್‌’. ಮದರಾಸಿನಲ್ಲಿ ನಿರ್ಮಿಸಿಕೊಂಡ ಮನೆಯ ಹೆಸರು ‘ಶ್ರೀಬಾಗ್‌’. ಈ ಎರಡೂ ಮನೆಗಳೂ ಸದಾ ಕಾಂಗ್ರೆಸ್‌ ನಾಯಕರು, ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳಿಂದ ತುಂಬಿರುತ್ತಿತ್ತು. ಭಾರತ ಕಾಂಗ್ರೆಸ್‌ ಇತಿಹಾಸದಲ್ಲಿ ಮೋತಿಲಾಲ್‌ ನೆಹರೂ ಅವರ ‘ಆನಂದಭವನ’ ದಂತೆಯೇ ‘ದುರ್ಗಾವಿಲಾಸ್‌’ ಮತ್ತು ‘ಶ್ರೀಬಾಗ್‌’ಗಳೂ ಚಾರಿತ್ರಿಕ ಪಾತ್ರ ನಿರ್ವಹಿಸಿದವು. ಆಂಧ್ರ ಚರಿತ್ರೆಯಲ್ಲಿ ಅತಿಮುಖ್ಯವಾದ ಒಪ್ಪಂದ ‘ಶ್ರೀಬಾಗ್‌ ಪ್ಯಾಕ್‌’ ನಾಗೇಶ್ವರರಾವು ಅವರ ನೇತೃತ್ವದಲ್ಲಿ ಮದರಾಸಿನ ಅವರ ಸ್ವಗೃಹ ‘ಶ್ರೀಬಾಗ್‌’ನಲ್ಲಿಯೇ ನಡೆಯಿತು.

ನಾಗೇಶ್ವರರಾವು ಅವರಿಗೆ ಗಂಡುಮಕ್ಕಳಿರಲಿಲ್ಲ. ಒಬ್ಬಳೇ ಮಗಳು ಕಾಮಾಕ್ಷಮ್ಮ. ಈಕೆಯನ್ನು ಶಿವಲೆಂಕ ಶಂಭುಪ್ರಸಾದ್‌ ಎಂಬಾತನಿಗೆ ಕೊಟ್ಟು ಮದುವೆ ಮಾಡಿದರು.

ಆಂಧ್ರರಿಗಾಗಿ

ಆಗ ಆಂಧ್ರ ಪ್ರತ್ಯೇಕವಾಗಿರಲಿಲ್ಲ. ಮದರಾಸೇ ರಾಜಧಾನಿಯಾಗಿದ್ದ ಪ್ರಾಂತದಲ್ಲಿ ತೆಲುಗರ ಘನತೆ, ತ್ಯಾಗ ಗುಣಗಳನ್ನು ಪ್ರತಿಪಾದಿಸಿದ ಧೀರ ನಾಗೇಶ್ವರರಾವು. ಭಾರತದ ಸ್ವಾತಂತ್ಯ್ರ ಆಂದೋಲನದಲ್ಲಿ ಆಂಧ್ರದ ನಾಯಕರನ್ನೆಲ್ಲ ಕೂಡಿಹಾಕಿ ಅವರಲ್ಲಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಒಂದೇ ಗುರಿಯತ್ತ ಸಾಗುವಂತೆ ಮಾಡಿದರು. ಉದ್ರಿಕ್ತ ಸ್ವಭಾವದ ಆಂಧ್ರರಲ್ಲಿ ಸಹನೆ, ಶಾಂತಿಗಳನ್ನು ತುಂಬಿದರು. ಇವೆಲ್ಲವನ್ನು ಕಂಡೇ ಗಾಂಧೀಜಿ ಹೀಗೆ ಹೇಳಿದರು: “ಆಂಧ್ರಪ್ರಾಂತದಲ್ಲಿ ಜನರ ಗೌರವಾಭಿಮಾನಗಳಿಗೆ ಪಾತ್ರರಾದ ಮಹನೀಯರು ಇಬ್ಬರು-ಒಬ್ಬರು ದೇಶಭಕ್ತ ಕೊಂಡಾವೆಂಕಟಪ್ಪಯ್ಯ, ಮತ್ತೊಬ್ಬರು ದೇಶೋದ್ಧಾರಕ ನಾಗೇಶ್ವರರಾವು.”

ನಾಗೇಶ್ವರರಾವು ಅವರಿಗೆ ತೆಲುಗು ಸಂಸ್ಕೃತಿ ಹಾಗೂ ತೆಲುಗು ಭಾಷೆ ಎಂದರೆ ಅಮಿತಭಕ್ತಿ, ಆದರ. ತೆಲುಗು ಸಂಸ್ಕೃತಿ ವಿಕಾಸಕ್ಕೆ ಅವರು ಸಲ್ಲಿಸಿದ ಸೇವೆ ಚರಿತ್ರಾರ್ಹ. ಆದರೆ ಆ ಅಭಿಮಾನದಿಂದಾಗಿ ಅವರು ಇತರ ಭಾಷೆಗಳನ್ನು ಸಂಸ್ಕೃತಿಯನ್ನು ದ್ವೇಷಿಸಲಿಲ್ಲ. ತಮಿಳರಿಂದಲೂ ಅಪಾರ ಗೌರವ ಗಳಿಸಿಕೊಂಡ ಮಹನೀಯರು ನಾಗೇಶ್ವರರಾವು.

ಬರ್ಮಾದೇಶ ಹಾಗೂ ಆಂಧ್ರಪ್ರದೇಶಗಳ ನಡುವೆ ಪ್ರಾಚೀನ ಕಾಲದಿಂದಲೂ ಸಂಬಂಧವಿತ್ತೆಂಬುದು ಚರಿತ್ರೆಯಿಂದ ತಿಳಿದು ಬರುತ್ತದೆ. ಆಂಧ್ರರು ವ್ಯಾಪಾರ ವಾಣಿಜ್ಯಗಳಿಗೆ, ಬೌದ್ಧಮತ ಪ್ರಚಾರಕ್ಕೆಂದು ಬರ್ಮಾಕ್ಕೆ ತೆರಳಿದರೆಂಬುದು ಐತಿಹಾಸಿಕ ಸಾಕ್ಷ್ಯಗಳಿಂದ ಸ್ಪಷ್ಟಪಡುತ್ತದೆ. ಆಧುನಿಕ ಕಾಲದಲ್ಲಿಯೂ ಸಹ ಎಷ್ಟೋ ಮಂದಿ ಆಂಧ್ರರು ಜೀವನೋಪಾಯಕ್ಕಾಗಿ ಬರ್ಮಾಕ್ಕೆ ತೆರಳಿ ಅಲ್ಲಿಯೇ ನೆಲೆಸಿದರು. ೧೯೨೧ ರ ಜನಗಣತಿಯ ಪ್ರಕಾರ ಬರ್ಮಾದಲ್ಲಿ ಒಂದೂವರೆ ಲಕ್ಷ ಮಂದಿ ಆಂಧ್ರರು ಇದ್ದರೆಂದು ತಿಳಿದುಬರುತ್ತದೆ. ರಂಗೂನ್‌ ನಗರದಲ್ಲಿಯೇ ಅರವತ್ತು ಸಾವಿರ ಮಂದಿ ಆಂಧ್ರರಿದ್ದರು. ಬರ್ಮಾದಲ್ಲಿನ ತೆಲುಗು ಕಾರ್ಮಿಕರಿಗೆ ಸರಿಯಾದ ಆಹಾರ, ವಸತಿ ಸೌಕರ್ಯಗಳು ಇರುತ್ತಿರಲಿಲ್ಲ. ಕೆಲವು ವಿದ್ಯಾವಂತ ಆಂಧ್ರರು ಸೇರಿ “ಆಂಧ್ರ ಮಹಾಸಭೆ”ಯನ್ನು ರಚಿಸಿ ತೆಲುಗರ ಪ್ರಗತಿಗೆ ಶ್ರಮಿಸಲು ನಿರ್ಧರಿಸಿದರು.

೧೯೨೯ನೆಯ ಇಸವಿಯಲ್ಲಿ ಆಂಧ್ರಮಹಾಸಭೆಯ ಮೊದಲ ಸಮಾವೇಶ ರಂಗೂನ್‌ನಲ್ಲಿ ನಡೆಯಿತು. ನಾಗೇಶ್ವರರಾವು ಪಂತುಲು ಈ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಬರ್ಮಾದ ಆಂಧ್ರಯುವಕರ ಉತ್ಸಾಹ, ಕಾರ್ಯದಕ್ಷತೆ, ಪಟ್ಟುಬಿಡದ ಛಲಕ್ಕೆ ತುಂಬ ಸಂತೋಷ ವ್ಯಕ್ತಪಡಿಸಿದರು. ಬರ್ಮಾ-ಆಂಧ್ರಗಳ ಸಾಂಸ್ಕೃತಿಕ ಬಾಂಧವ್ಯವನ್ನು ವಿವರಿಸಿ, ಬರ್ಮಾದಲ್ಲಿಯೇ ನೆಲಸಿ ಅಲ್ಲಿಯ ಆರ್ಥಿಕಾಭಿವೃದ್ಧಿಗೆ ಶ್ರಮಿಸಬೇಕೆಂದು ತೆಲುಗು ಜನತೆಗೆ ಮನವಿ ಮಾಡಿಕೊಂಡರು. ಬರ್ಮೀಯರು ಕೂಡಾ ಅಲ್ಲಿ ನೆಲೆಸಿರುವ ಇತರ ರಾಷ್ಟ್ರೀಯರ ಬಗೆಗೆ ಆದರ, ಸಾಮರಸ್ಯ ತೋರಬೇಕೆಂದು ಕೋರಿದರು. ವಿದೇಶಗಳಲ್ಲಿದ್ದು ಕಷ್ಟಪಡುತ್ತಿರುವ ತೆಲುಗರ ಕಷ್ಟಗಳನ್ನು ಹಂಚಿಕೊಳ್ಳಲು ಆಂಧ್ರದ ನಾಯಕರು, ಪ್ರಜೆಗಳು ತ್ರಿಕರಣ ಶುದ್ಧಿಯಾಗಿ ಸಹಾಯ ಮಾಡುವರೆಂದು ಭರವಸೆ ನೀಡಿದರು. ನಾಗೇಶ್ವರರಾವು ಅವರ ಈ ಮಾತುಗಳು ಬರ್ಮಾದಲ್ಲಿ ಕಷ್ಟಗಳನ್ನು ಅನುಭವಿಸುತ್ತಿದ್ದ ತೆಲುಗಿನವರಿಗೆ ಸಮಾಧಾನ ನೀಡಿದವು.

ಸೆರೆಮನೆ ವಾಸ

ನಾಗೇಶ್ವರರಾವು ಪಂತುಲುರವರು ಕಾಂಗ್ರೆಸಿಗೆ ಮಾಡಿದ ಸೇವೆ ಅಸಾಮಾನ್ಯವಾದುದು. ಆಂಧ್ರಪ್ರಾಂತ ಕಾಂಗ್ರೆಸ್‌ ಸಮಿತಿಗೆ ಬಹುಕಾಲ ಕೋಶಾಧಿಕಾರಿಯಾಗಿದ್ದು ಸ್ವಂತ ಹಣವನ್ನು ಖರ್ಚುಮಾಡಿದರು. ಅನಂತರ ಆಂಧ್ರ ಪ್ರಾಂತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ನಾಲ್ಕು ವರ್ಷ ಕಾರ್ಯನಿರ್ವಹಿಸಿದರು. ೧೯೩೦ ರಲ್ಲಿ ಗಾಂಧೀಜಿ ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಸರ್ಕಾರದ ಅನುಮತಿ ಇಲ್ಲದೆ ಯಾರೂ ಉಪ್ಪನ್ನು ತಯಾರು ಮಾಡುವಂತಿರಲಿಲ್ಲ. ಉಪ್ಪು ಎಲ್ಲರಿಗೂ ಬೇಕಾದ ವಸ್ತು. ಆದುದರಿಂದ ಸರ್ಕಾರದ ನಿರ್ಬಂಧವನ್ನು ಮುರಿದು ಉಪ್ಪು ಮಾಡಲು ಗಾಂಧೀಜಿಯವರೂ ಅವರ ಬೆಂಬಲಿಗರೂ ತೀರ್ಮಾನಿಸಿದರು. ಮದರಾಸಿನಲ್ಲಿ ನಾಗೇಶ್ವರರಾವು ಅವರ ಪ್ರಯತ್ನ ದಿಂದಾಗಿಯೇ ಸತ್ಯಾಗ್ರಹ ಯಶಸ್ವಿಯಾಯಿತು. ನಾಗೇಶ್ವರ ರಾವು ಅದರಲ್ಲಿ ಭಾಗವಹಿಸಿ ಸೆರೆಮನೆವಾಸವನ್ನು ಅನುಭವಿಸಿದರು. ೧೯೩೨ ರಲ್ಲಿ ಮತ್ತೆ ಕಾರಾಗೃಹವಾಸ. ಸ್ಥಿತ ಪ್ರಜ್ಞನಂತೆ ಜೈಲುವಾಸ ಅನುಭವಿಸಿದರು. ೧೯೩೬ರಲ್ಲಿ ಗೆಳೆಯರ ಒತ್ತಾಯದಿಂದಾಗಿ ಕಾಂಗ್ರೆಸ್‌ ಪಾರ್ಲಿಮೆಂಟರಿ ಸ್ಪರ್ಧಿಯಾಗಿ, ಜಯಗಳಿಸಿದರು.

 

‘ನೀವು ದೇಶೋದ್ಧಾರಕ ನಾಗೇಶ್ವರರಾವ್’

ರೈತರ ಬಂಧು

ನಾಗೇಶ್ವರರಾವು ಲಕ್ಷಾಂತರ ರೂಪಾಯಿ ಸಂಪಾದಿಸಿದರು. ಹಾಗೆಯೇ ಖರ್ಚು ಮಾಡಿದರು. ಪುನ್ನಂಪಾಡು ಎಸ್ಟೇಟ್‌, ಕೃತ್ತಿವೆನ್ನು ಎಸ್ಟೇಟ್‌ಗಳನ್ನು ಅಪರಿಮಿತ ಹಣ ತೆತ್ತು ಕೊಂಡರು. ಕೃತ್ತಿವೆನ್ನು ಎಸ್ಟೇಟಿನಲ್ಲಿ ನಲವತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ದೇವಾಲಯ, ಹತ್ತುಸಾವಿರ ರೂಪಾಯಿ ವೆಚ್ಚದಲ್ಲಿ ಪಾಠಶಾಲೆ ಕಟ್ಟಿಸಿದರು. ರೈತರನ್ನು ಸ್ವಂತ ಮಕ್ಕಳಂತೆ ನೋಡಿಕೊಂಡರು. ಉಳಿದೆಡೆ ರೈತರು ಜಮೀನುದಾರರನ್ನು ದ್ವೇಷಿಸಿದರೆ ನಾಗೇಶ್ವರರಾವು ಅವರ ಎಸ್ಟೇಟಿನಲ್ಲಿ ರೈತರು ಅವರನ್ನು ಪೂಜಿಸುತ್ತಿದ್ದರು. ಜಮೀನುದಾರಿ ಪದ್ಧತಿ ರದ್ದು ಗೊಳಿಸಲು ಜನನಾಯಕರು ಹಾಗೂ ರೈತರ ಸಭೆಗಳು ‘ಶ್ರೀಬಾಗ್‌’ನಲ್ಲಿಯೇ ನಡೆಯುತ್ತಿದ್ದವು. ಆ ಸಭೆಗಳಿಗೆ ನಾಗೇಶ್ವರರಾವು ಹಾಜರಾಗಿ ತಾವೇ ಜಮೀನುದಾರಿ ಪದ್ಧತಿಯನ್ನು ರದ್ಧುಗೊಳಿಸುವುದಕ್ಕೆ ಬೆಂಬಲ ನೀಡಿದರೆಂದರೆ ಆಶ್ಚರ್ಯದ ವಿಷಯವಲ್ಲವೆ?

ಸನ್ಮಾನ, ವಿನಯ

ಆಂಧ್ರದ ಮೂಲೆಮೂಲೆಗಳಲ್ಲಿ ನಾಗೇಶ್ವರರಾವು ದಾನಗುಣಗಳನ್ನು ಕಂಡು-ಕೇಳಿ ಗಾಂಧೀಜಿ ‘ಯಂಗ್‌ ಇಂಡಿಯ’ದಲ್ಲಿ ಅವರನ್ನು ‘ವಿಶ್ವದಾತ’ ಎಂದು ಪ್ರಶಂಸಿಸಿದರು. ಮದರಾಸಿನ ‘ಆಂಧ್ರಮಹಾಸಭೆ’ ಅವರನ್ನು ೧೯೨೪ ರ ಅಕ್ಟೋಬರಿನಲ್ಲಿ ಸನ್ಮಾನಿಸಿತು. ಆ ಸಭೆಯ ಅಧ್ಯಕ್ಷತೆ ವಹಿಸಿದ್ದವರು ಡಾಕ್ಟರ್ ಸಿ.ಆರ್. ರೆಡ್ಡಿ. ಸಹಸ್ರಾರು ಜನ ಸೇರಿದ್ದ ಸಭೆಯಲ್ಲಿ ರೆಡ್ಡಿ ಅವರು ನಾಗೇಶ್ವರರಾವು ಅವರಿಗೆ ‘ದೇಶೋದ್ಧಾರಕ’ ಬಿರುದು ನೀಡಿದರು. “ಇಂದಿನಿಂದ ತಾವು ನಾಗೇಶ್ವರರಾವು ಅಲ್ಲ, ದೇಶೋದ್ಧಾರಕ ನಾಗೇಶ್ವರರಾವು- ಎಂದರೆ ಆಂಧ್ರದೇಶವನ್ನು ಉದ್ಧರಿಸಿದ ನಾಗೇಶ್ವರರಾವುರವರು” ಎಂದು ರೆಡ್ಡಿಯವರು ಮೆಚ್ಚುಗೆಯಿಂದ ನುಡಿದರು.

ವಾಲ್ಟೇರಿನ ಆಂಧ್ರ ವಿಶ್ವವಿದ್ಯಾಲಯ ನಾಗೇಶ್ವರರಾವು ಅವರ ಸಾಹಿತ್ಯಸೇವೆಯನ್ನು ಪುರಸ್ಕರಿಸಿ ೧೯೩೫ರ ಡಿಸೆಂಬರ್ ೨ ರಂದು ಅವರಿಗೆ ‘ಕಳಾಪ್ರಪೂರ್ಣ’ ಬಿರುದು ನೀಡಿತು.

‘ಆಂಧ್ರಪತ್ರಿಕ’ ‘ಭಾರತಿ’ ಸಂಪಾದಕರು ನಾಗೇಶ್ವರರಾವು ಅವರ ಹೆಸರಿನ ಮುಂದೆ ದೇಶೋದ್ಧಾರಕ, ವಿಶ್ವದಾತ ಬಿರುದುಗಳನ್ನು ಬಳಸುತ್ತಿದ್ದರು. ೧೯೩೦ ರ ಜನವರಿಯಲ್ಲಿ ತಿರಿಚಿನಾಪಳ್ಳಿ ಜೈಲಿನಿಂದ ಒಂದು ಪತ್ರವನ್ನು ಬರೆದ ನಾಗೇಶ್ವರರಾವು ತಮ್ಮ ಹೆಸರಿನ ಮುಂದೆ ಆ ಬಿರುದುಗಳನ್ನು ಬಳಸಬಾರದೆಂದೂ, ಅಷ್ಟೊಂದು ಗೌರವಕ್ಕೆ ತಾವು ಅರ್ಹರಲ್ಲವೆಂದೂ ವಿನಯಪೂರ್ವಕವಾಗಿ ಮನವಿ ಮಾಡಿಕೊಂಡರು. ನಾಗೇಶ್ವರರಾವು ಸ್ವಲ್ಪವೂ ಪ್ರಚಾರವನ್ನು ಬಯಸದ ತ್ಯಾಗಜೀವಿ.

ಅಪೂರ್ವ ಪುರುಷ

ವಿಪರೀತವಾದ ಕೆಲಸಗಳಿಂದಾಗಿ ನಾಗೇಶ್ವರರಾವು ಅವರ ಆರೋಗ್ಯ ಕೆಟ್ಟಿತು. ಕ್ಷಯರೋಗ ಅವರನ್ನು ಆಕ್ರಮಿಸಿತು. ‘ಶ್ರೀಬಾಗ್‌’ ಹೊರಗಡೆ ಪರ್ಣಶಾಲೆ ಒಂದನ್ನು ನಿರ್ಮಿಸಿಕೊಂಡು, ಅದರಲ್ಲಿ ವಾಸಿಸತೊಡಗಿದರು. ಆಧ್ಯಾತ್ಮಿಕ ಚಿಂತನೆ ಮಾಡುತ್ತ ಅಂತಿಮಕಾಲವನ್ನು ಕಳೆದರು. ೧೯೩೮ರ ಏಪ್ರಿಲ್‌ ೧೧ ರಂದು ಮದರಾಸಿನಲ್ಲಿ ದೇಶೋದ್ಧಾರಕ ಕಾಶೀನಾಥುನಿ ನಾಗೇಶ್ವರರಾವು ಪಂತುಲುರವರು ಸ್ವರ್ಗಸ್ಥರಾದರು.

ಅಳಿಯ ಶಿವಲೆಂಕ ಶಂಭುಪ್ರಸಾದರು ನಾಗೇಶ್ವರರಾವು ಅವರ ಮರಣಾನಂತರ ಅವರು ಸ್ಥಾಪಿಸಿದ ಪತ್ರಿಕೆಗಳಿಗೆ ಸಂಪಾದಕರಾದರು. ಲಕ್ಷಾಂತರ ರೂಪಾಯಿಗಳ ವ್ಯವಹಾರವನ್ನು ನಡೆಸಿದ ನಾಗೇಶ್ವರರಾವು ಅವರ ಆರ್ಥಿಕ ವಹಿವಾಟನ್ನು ಲೆಕ್ಕಹಾಕಿದಾಗ ಅವರು ಸುಮಾರು ನಾಲ್ಕು ಲಕ್ಷ ರೂಪಾಯಿಗಳ ಸಾಲಗಾರನಾಗಿದ್ದುದು ಬೆಳಕಿಗೆ ಬಂದಿತು. ನಾಗೇಶ್ವರರಾವು ಅವರ ಎಸ್ಟೇಟುಗಳನ್ನು ಶಿವಲಿಂಕ ಶಂಭುಪ್ರಸಾದ್‌ ಅವರು ಮಾರಿ ಈ ಸಾಲಗಳನ್ನು ತೀರಿಸಬೇಕಾಯಿತು.

ನಷ್ಟವಾಗುತ್ತಿದ್ದರೂ ಸಹ ಶಂಭುಪ್ರಸಾದ್‌ ರವರು ತಮ್ಮ ಮಾವನ ಕೋರಿಕೆಗೆ ಅನುಗುಣವಾಗಿ ಅವರ ಆದರ್ಶಗಳಿಗೆ ಅನುಗುಣವಾಗಿ ಪತ್ರಿಕೆಗಳನ್ನು ನಡೆಸಿಕೊಂಡುಬಂದರು.

ಶಂಭುಪ್ರಸಾದ್‌ರವರು ಸ್ವರ್ಗಸ್ಥರಾದ ನಂತರ ಅವರ ಪುತ್ರ ಶಿವಲೆಂಕ ರಾಧಾಕೃಷ್ಣ ಅವರು ದೇಶೋದ್ಧಾರಕ ನಾಗೇಶ್ವರರಾವು ಅವರು ರೂಪಿಸಿದ ಆದರ್ಶದ ಜಾಡಿನಲ್ಲಿಯೇ ಪತ್ರಿಕೆಗಳನ್ನು ನಡೆಸುತ್ತಿದ್ದಾರೆ.

ದೇಶೋದ್ಧಾರಕ ನಾಗೇಶ್ವರರಾವು ಪಂತುಲುರವರು ಸ್ಥಾಪಿಸಿದ ಪತ್ರಿಕೆಗಳು – ಆಂಧ್ರಪತ್ರಿಕ, ಆಂಧ್ರಸಚಿತ್ರ ವಾರಪತ್ರಿಕ, ಸಂವತ್ಸರಾದಿಸಂಚಿಕ ಹಾಗೂ ಭಾರತಿ- ಇಂದಿಗೂ ತೆಲುಗರಿಗೆ ಜ್ಞಾನಕಿರಣಗಳನ್ನು ಪ್ರಸಾದಿಸುತ್ತಿವೆ.

ಕಾಶೀನಾಥುನಿ ನಾಗೇಶ್ವರರಾವು ಅವರು ಆಂಧ್ರರಿಗೆ ಜ್ಞಾನಭಾಸ್ಕರರೆಂದರೆ ಅತಿಶಯೋಕ್ತಿ ಅಲ್ಲ.

ಕಾಶೀನಾಥುನಿ ನಾಗೇಶ್ವರರಾವು ಅಪೂರ್ವ ಪುರುಷ. ಬಡ ಕುಟುಂಬದಲ್ಲಿ ಹುಟ್ಟಿ, ಸತತ ಶ್ರಮದಿಂದ, ಉತ್ತಮಾಶಯಗಳೊಂದಿಗೆ ಆತ್ಮವಿಕಾಸಕ್ಕೆ ಪ್ರಯತ್ನಿಸಿ ಆ ಮೂಲಕ ಸಮಾಜಾಭಿವೃದ್ಧಿಗಾಗಿ ನಿಸ್ವಾರ್ಥಸೇವೆ ಸಲ್ಲಿಸಿದ ಕರ್ಮಯೋಗಿ. ಅವರು ಎಂದೂ ಐಹಿಕ ಸುಖಭೋಗಗಳಿಗೆ ಮನ ಸೋತವರಲ್ಲ. ಹಾಗೆಂದು ಹಣದ ಆವಶ್ಯಕತೆಯನ್ನು ಅರಿಯದವರೂ ಅಲ್ಲ. ಮಾನವ ಜೀವಿತದಲ್ಲಿ ಹಣದ ಅಗತ್ಯವನ್ನು ಗುರ್ತಿಸಿ, ಅದನ್ನು ಸಂಪಾದಿಸಿ ತನ್ಮೂಲಕ ಸಮಾಜಭಿವೃದ್ಧಿಗೆ ಶ್ರಮಿಸಿದರು.

ಪಂತುಲುರವರು ತೆಲುಗು ಭಾಷೆ, ಸಾಹಿತ್ಯಗಳಿಗೆ ಸಲ್ಲಿಸಿದ ಸೇವೆ ಅಪಾರವಾದುದು. ಅವರು ಕೇವಲ ವ್ಯಕ್ತಿಯಲ್ಲ; ಒಂದು ಸಂಸ್ಥೆ. ಅಷ್ಟೇ ಅಲ್ಲ, ಎಷ್ಟೋ ಸಾರ್ವಜನಿಕ ಸಂಸ್ಥೆಗಳಿಗೆ ಪೋಷಕರು. ಬಡವರು ಹಾಗೂ ವಿದ್ಯಾರ್ಥಿಗಳ ಪಾಲಿಗೆ ಕಲ್ಪವೃಕ್ಷ. ಒಳ್ಳೆಯ ಕೆಲಸಗಳಿಗೆ ಹೃತ್ಪೂರ್ವಕವಾಗಿ ನೆರವು ನೀಡಿದ ಮಹಾಮಾನವ.

ಪಂತುಲುರವರು ಭಗವದ್ಗೀತೆಯನ್ನು ಕರ್ಮ, ಜ್ಞಾನ ಮಾರ್ಗಗಳ ಸಂಗಮವಾಗಿ ಭಾವಿಸಿ, ಆ ವಿಧದಲ್ಲಿಯೇ ಋಜುಮಾರ್ಗದಲ್ಲಿ ಬಾಳಿ ಮಾನವರಿಗೆ ಮಾರ್ಗದರ್ಶಿಯಾದರು.