ಒಂದೂರಿನಲ್ಲಿ ಒಬ್ಬ ಶೆಟ್ಟಿಯಿದ್ದ. ಅವನಿಗೆ ಇಬ್ಬರು ಹೆಂಡಂದಿರು. ಇಬ್ಬರ ಹೆಂಡಿಂದಿರಿದ್ದ ಮೇಲೆ ಜಗಳವಾಡದೆ ಹೇಗಿದ್ದಾರೆ? ಆಕೆ ಹೌದೆಂದದ್ದನ್ನು ಈಕೆ ಅಲ್ಲವೆನ್ನುತ್ತಿದ್ದಳು. ನಾನಂಥವಳು, ನೀನಿಂಥವಳು — ಮುಂತಾಗಿ ಸದಾ ಮನೆಯಲ್ಲಿ ಜಗಳ, ಗದ್ದಲ, ಗಲಾಟೆ. ಏನು ಮಾಡಬೇಕೆಂದು ತೋಚದೆ ಚಿಂತೆ ಮಾಡಿ ಮಾಡಿ ಶೆಟ್ಟಿಯ ಕೂದಲುದುರಿ ತಲೆ ಬೋಳಾಯಿತು. ಇಬ್ಬರೂ ಜೊತೆಯಲ್ಲಿದ್ದರೆ ಇದೇ ಗೋಳೆಂದು ಭಾವಿಸಿ ಮನೆಯಲ್ಲಿ ಎರಡು ಭಾಗ ಮಾಡಿದ. ಒಬ್ಬಳಿಗೊಂದು ಭಾಗ, ಇನ್ನೊಬ್ಬಳಿಗೊಂದು ಭಾಗ ಕೊಟ್ಟ. ಇಬ್ಬರೂ ಅವರವರ ಪಾಲಿನ ಮನೆಯಲ್ಲಿ ಪ್ರತ್ಯೇಕ ಒಲೆ ಹೂಡಿ ಅಡಿಗೆ ಮಾಡಿಕೊಳ್ಳುತ್ತಿದ್ದರು. ಆದರೆ ಇದರಿಂದ ಶೆಟ್ಟಿಗೆ ಅನಾನುಕೂಲವೇ ಆಯಿತು. ಅವಳು ಊಟಕ್ಕೆ ಹಾಕುತ್ತಾಳೆಂದು ಇವಳು ಕರೆಯುವುದನ್ನು ಬಿಟ್ಟಿಳು. ಇವಳು ಹಾಕುತ್ತಾಳೆಂದು ಅವಳು ಊಟಕ್ಕೆ ಕರೆಯುವುದನ್ನು ನಿಲ್ಲಿಸಿದಳು. ಸರಿಯಾಗಿ ಊಟವಿಲ್ಲದೆ, ಉಚಾರವಿಲ್ಲದೆ ಶೆಟ್ಟಿ ಬೇಕಾಬಿಟ್ಟಿಯಾದ.

 ಕೊನೆಗೆ ಅವನಿಗೊಂದು ಉಪಾಯ ಹೊಳೆಯಿತು. ತನ್ನ ದೇಹದ ಅರ್ಧಭಾಗದ ಸೇವೆಯನ್ನು ಒಬ್ಬಳು ಮಾಡಿದರೆ ಇನ್ನರ್ಧ ಭಾಗದ ಸೇವೆಯನ್ನು ಇನ್ನೊಬ್ಬಳು ಮಾಡಬೇಕೆಂದು ಹೇಳಿದ. ಎಡಗಾಲು, ಎಡಗೈ – ಹೀಗೆ ದೇಹದ ಎಡಭಾಗವನ್ನು ಒಬ್ಬಳ ಪಾಲಿಗೆ ಕೊಟ್ಟ. ಅವಳ ಹೆಸರು ಎಡಗೈ ಹೆಂಡತಿಯೆಂದಾಯಿತು. ಬಲಗಾಲು, ಬಲಗೈ – ಬಲ ಭಾಗ ಇನ್ನೊಬ್ಬಳದು. ಅವಳ ಹೆಸರು ಬಲಗೈ ಹೆಂಡತಿ ಎಂದಾಯಿತು. ಬೆಳಗಿನ ಊಟ ಎಡಗೈ ಮನೆಯಲ್ಲಿ, ಸಂಜೆ ಊಟ ಬಲಗೈ ಮನೆಯಲ್ಲಿ ಮಾಡುತ್ತಿದ್ದ. ಹೀಗೆ ತಂತಮ್ಮ ಪಾಲಿನ ಶೆಟ್ಟಿಯ ಸೇವೆ ಮಾಡುತ್ತ ಎಡಗೈ ಬಲಗೈ ಹೆಂಡಂದಿರಿದ್ದರು.

ಆದರೆ ಇದೂ ಕೊನೆ ಬಾಳಲಿಲ್ಲ. ಒಂದು ದಿನ ಶೆಟ್ಟಿ ಸಂಜೆ ಅಂಗಡಿಯಿಂದ ದಣಿದು ಬಂದು, ಹಾಗೆ ಅಡ್ಡಾದ. ಬಲಗೈ ಹೆಂಡತಿ ಹೊರಗೆ ಹೋಗಿದ್ದಳು. ಎಡಗೈ ಹೆಂಡತಿಯನ್ನು ಕರೆದು, “ಕಾಲು ತಿಕ್ಕು ಬಾ’’ ಎಂದ. ಅವಳು ಬಂದು ತನ್ನ ಪಾಲಿನ ಎಡಗಾಲನ್ನು ತಿಕ್ಕಿದಳು. ಶೆಟ್ಟಿಗೆ ಅಷ್ಟರಿಂದಲೇ ಹಾಯೆನಿಸಿ ಅಲ್ಲೇ ನಿದ್ರೆ ಹೋದ. ಎಡಗೈ ಹೆಂಡತಿ ತನ್ನ ಕೆಲಸಕ್ಕೆ ಹೋದಳು.

ಶೆಟ್ಟಿ ನಿದ್ರೆಯಲ್ಲಿ ಎಡಗಾಲನ್ನು ಬಲಗಾಲ ಮೇಲಿಟ್ಟು ಮಲಗಿದ್ದ. ಅದೇ ಸಮಯಕ್ಕೆ ಹೊರಗೆ ಹೋಗಿದ್ದ ಬಲಗೈ ಹೆಂಡತಿ ಒಳಗೆ ಬಂದಳು. ಬಂದು ನೋಡುತ್ತಾಳೆ. ತನ್ನ ಪಾಲಿನ ಕಾಲಿನ ಮೇಲೆ ಇನ್ನೊಬ್ಬಳ ಕಾಲು ಬಿದ್ದಿದೆ! ಅವಳಿಗೆ ವಿಪರೀತ ಸಿಟ್ಟು ಬಂತು. ಒಂದು ಗುಂಡುಕಲ್ಲು ತಕ್ಕೊಂಡು ತನ್ನ ಪಾಲಿನ ಕಾಲಿನ ಮೇಲೆ ಬಿದ್ದಿದ್ದ ಇನ್ನೊಂದು ಕಾಲನ್ನು ಜಜ್ಜಿದಳು. ಶೆಟ್ಟಿ ಅಯ್ಯೋ ಎಂದು ಚೀರುತ್ತ ಎದ್ದು ಕುಳಿತು. ಅವನ ಕೂಗು, ಚೀರಾಟ ಒಳಗಿದ್ದ ಎಡಗೈ ಹೆಂಡತಿಗೆ ಕೇಳಿಸಿತು. ಬಂದು ನೋಡಿದರೆ ತನ್ನ ಪಾಲಿನ ಕಾಲು ಮುರಿದು ಬಿದ್ದಿತ್ತು. ಅವಳಿಗೆ ಕಾರಣ ಗೊತ್ತಾಗುವುದು ತಡವಾಗಲಿಲ್ಲ. ತನ್ನ ಪಾಲಿನ ಕಾಲು ಮುರಿದ ಮೇಲೆ ಅವಳ ಪಾಲಿನ ಕಾಲಾದರೂ ಯಾಕಿರಬೇಕು? ತಕ್ಷಣವೇ ಅದೇ ಗುಂಡುಕಲ್ಲಿನಿಂದ ಶೆಟ್ಟಿಯ ಬಲಗಾಲನ್ನು ಕುಟ್ಟಿದಳು. ಹೀಗೆ ಶೆಟ್ಟಿ ಎರಡೂ ಕಾಲು ಕಳೆದುಕೊಂಡು ಕೂತ.

ಅದಕ್ಕೆ ಹಿರಿಯರು ಹೇಳುತ್ತಾರೆ: ಇಬ್ಬರು ಹೆಂಡಂದಿರನ್ನು ಮದುವೆಯಾದವನ ಸ್ಥಿತಿ ಅಡಕೊತ್ತಿನಲ್ಲಿ ಸಿಕ್ಕ ಅಡಕೆಯ ಹಾಗೆ — ಎಂದು.

* * *