ಒಂದೂರಿನಲ್ಲಿ ಒಬ್ಬ ರಾಜ ಮತ್ತು ಅವನ ಪ್ರಧಾನಿ ಇದ್ದರು. ಇಬ್ಬರಿಗೂ ಬಹಳ ದಿವಸ ಮಕ್ಕಳೇ ಆಗಲಿಲ್ಲ. ಸಾಧು, ಸನ್ಯಾಸಿಗಳನ್ನು ಕೇಳಿದರು. “ಶಿವಪೂಜೆ ಮಾಡಿದರೆ ಮಕ್ಕಳಾಗುತ್ತವೆ’’ ಎಂದು ಹೇಳಿದರು. ಅದರಂತೆ ಇಬ್ಬರೂ ಬಹಳ ಭಕ್ತಿಯಿಂದ ಶಿವಪೂಜೆ ಮಾಡಲಾಗಿ ರಾಜನ ಹೆಂಡತಿ ಮತ್ತು ಮಂತ್ರಿಯ ಹೆಂಡತಿ ಇಬ್ಬರೂ ಗರ್ಭಿಣಿಯರಾದರು. ಆಗಲೇ ರಾಜ ಮತ್ತು ಪ್ರಧಾನಿ ಮಾತಾಡಿಕೊಂಡರು. ಇಬ್ಬರಿಗೂ ಗಂಡು ಮಕ್ಕಳಾದರೆ ಅವರು ದೊಡ್ಡವರಾಗಿ ರಾಜ, ಪ್ರಧಾನಿ ಆಗಲಿ. ಇಬ್ಬರಲ್ಲಿ ಒಬ್ಬನಿಗೆ ಹೆಣ್ಣು ಮಗು ಹುಟ್ಟಿದರೆ, ಇನ್ನೊಬ್ಬನ ಮಗನಿಗೆ ಅವಳನ್ನು ಕೊಡಬೇಕು. ಹಾಗೆಂದು ಇಬ್ಬರೂ ಕೈಯಲ್ಲಿ ಕೈ ಹಾಕಿ ಭಾಷೆ ಕೊಟ್ಟಕೊಂಡರು.

ಒಂಬತ್ತು ತಿಂಗಳಾದ ಮೇಲೆ ರಾಜನ ಹೆಂಡತಿ ಒಂದು ಆಮೆಯನ್ನು ಹಡೆದಳು. ಪ್ರಧಾನಿಯ ಹೆಂಡತಿ ಒಂದು ಸುಂದರವಾದ ಹೆಣ್ಣು ಮಗವನ್ನು ಹಡೆದಳು. ರಾಜನಿಗೆ ಮೊದಲು ಬೇಸರವಾಯಿತು ಆದರೇನು? ಹೆತ್ತವರಿಗೆ ಹೆಗ್ಗಣ ಮುದ್ದು ತಾನೆ? ಆಮೆಯನ್ನು ಗಂಡು ಮಗನಂತೆಯೇ ಪ್ರೀತಿಯಿಂದ ಸಾಕುತ್ತಿದ್ದರು. ಪ್ರಧಾನಿಯೂ ಮಗಳನ್ನು ಬಹಳ ಪ್ರೀತಿಯಿಂದ ಬೆಳೆಸುತ್ತಿದ್ದ.

ಇತ್ತ ಆಮೆಯೂ ಅತ್ತ ಪ್ರಧಾನಿಯ ಮಗಳೂ ಬೆಳೆದು ದೊಡ್ಡವರಾಗಿ ವಯಸ್ಸಿಗೆ ಬಂದರು. ರಾಜನಿಗೆ ಚಿಂತೆಯಾಯಿತು. ಹಿಂದೆ ತಾನು ಪ್ರಧಾನಿಗೆ ಭಾಷೆ ಕೊಟ್ಟು ಕರಾರು ಮಾಡಿದ್ದನ್ನು ರಾಣಿಗೆ ಹೇಳಿದ. ರಾಣಿ, “ಅದೇನೋ ನಿಜ. ನಮ್ಮ ಮಗ ರಾಜುಕುಮಾರನಾಗಿದ್ದಿದ್ದರೆ ನಿಮ್ಮ ಕರಾರು ನಡೆಯುತ್ತಿತ್ತು. ನಮ್ಮ ಮಗು ಮೊದಲೇ ಆಮೆ. ಆಮೆಗೆ ಮಗಳನ್ನು ಕೊಡಿ ಎಂದು ಹೇಗೆ ಕೇಳುವುದು?’’ ಎಂದಳು. ಆದರೆ ಈ ಮಾತುಗಳನ್ನು ಪಕ್ಕದಲ್ಲೇ ಮಲಗಿಕೊಂಡಿದ್ದ ಆಮೆ ಕೇಳಿಸಿಕೊಂಡಿತು.

“ನೀವು ಯಾಕಿಷ್ಟು ಚಿಂತೆ ಮಾಡುತ್ತೀರಿ? ಆಮೆಯಾಗಿರಬಹುದು. ಆದರೂ ನಿಮ್ಮ ಮಗ ತಾನೆ? ಹೋಗಿ ಕೇಳಿ, ಪ್ರಧಾನಿ ಏನಂತಾರೋ ಅದನ್ನು ಬಂದು ಹೇಳಿ’’ ಎಂದಿತು.

ಈ ತನಕ ಮಾತಾಡದ ಆಮೆ ಈಗ ಮನುಷ್ಯರಂತೆ ಮಾತಾಡಿದ್ದನ್ನು ಕೇಳಿ ರಾಜ, ರಾಣಿಗೆ ಬಹಳ ಸಂತೋಷವಾಯಿತು. ಇದೆಲ್ಲಿಯೋ ಶಾಪ ಹೊಂದಿದ ರಾಜಪುತ್ರನೇ ಇರಬೇಕು. ಇಲ್ಲದಿದ್ದರೆ ಆಮೆಯಾಗಿ ಮನುಷ್ಯರಂತೆ ಮಾತಾಡುವುದೆಂದರೇನು?-ಎಂದುಕೊಂಡು ರಾಜ ಪ್ರಧಾನಿಯ ಮನೆಗೆ ಹೋದ. “ಪ್ರಧಾನಿ ಕರಾರಿನಂತೆ ನನ್ನ ಮಗ ಆಮೆ ರಾಜ ಕುಮಾರನಿಗೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡಬೇಕು’’ ಎಂದು ಕೇಳಿದ. ಪ್ರಧಾನಿ ಉತ್ತರ ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾಗ ಅವನ ಮಗಳೇ ಹೇಳಿದಳು: “ನೀವು ಹಿಂದೆ ಏನೇನೋ ಕರಾರು ಮಾಡಿಕೊಂಡಿರಬಹುದು. ಆದರೆ ಅದಕ್ಕೆ ನಾನು ಜವಾಬ್ದಾರಿಯಲ್ಲ. ನಾನು ಮದುವೆಯಾಗೋದು-ದೇವಲೋಕದ ಪಾರಿಜಾತ ಪುಷ್ಪ ತಂದುಕೊಟ್ಟವನನ್ನು ಮಾತ್ರ’’ ಎಂದು ನಿಷ್ಠೂರವಾಗಿ ಹೇಳಿದಳು.

ರಾಜ ಬಂದು ಅಮೆ ರಾಜಕುಮಾರನಿಗೆ ಪ್ರಧಾನಿಯ ಮಗಳು ಹೇಳಿದ್ದನ್ನು ಹೇಳಿದ. ಅದಕ್ಕೆ ಆಮೆ “ಹಾಗಿದ್ದರೆ ಇಂದೇ ನನ್ನನ್ನು ಸಮುದ್ರದಲ್ಲಿ ಬಿಡಿ. ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ’’ ಎಂದಿತು. ಅದರಂತೆ ರಾಜ ಅಮೆಯನ್ನು ಪಲ್ಲಕ್ಕಿಯಲ್ಲಿ ಕೂಡ್ರಿಸಿಕೊಂಡು ಹೋಗಿ ಸಮುದ್ರದಲ್ಲಿ ಬಿಟ್ಟುಬಂದ.

 ಆಮೆ ಚೆನ್ನಾಗಿ ಈಜಿ ಉದಯಪರ್ವತಕ್ಕೆ ಹೋಯಿತು. ಅಲ್ಲಿ ಸೂರ್ಯನನ್ನು ಕುರಿತು ತಪಸ್ಸು ಮಾಡಿತು. ಅದರ ತಪಸ್ಸಿಗೆ ಮೆಚ್ಚಿ ಸೂರ್ಯ ಪತ್ರಕ್ಷನಾದ. “ನೋಡು ಮಗು, ಹಿಂದಿನ ಜನ್ಮದಲ್ಲಿ ನೀನೊಬ್ಬ ರಾಜಕುಮಾರನಾಗಿದ್ದ. ಅಹಂಕಾರದಿಂದ ಒಬ್ಬ ಋಷಿಯ ಮೇಲೆ ಆಮೆ ಎಸೆದುದರಿಂದ ಆ ಋಷಿಯ ಶಾಪದಿಂದಾಗಿ ನಿನಗೆ ಆಮೆಯ ಜನ್ಮ ಪ್ರಾಪ್ತವಾಯಿತು. ಈ ನಿನ್ನ ತಪಸ್ಸಿನಿಂದಾಗಿ ಆ ಶಾಪದಿಂದ ನೀನು ಮುಕ್ತನಾದೆ. ಇಕೋ ನೀನು ಮತ್ತೆ ರಾಜಕುಮಾರನಾಗುವ ಹಾಗೆ ಕರುಣಿಸಿದ್ದೇನೆ. ನೀನು ಬಯಸಿದಾಗ ಆಮೆಯಾಗಲೂಬಹುದು’’ ಎಂದು ಆಶೀರ್ವದಿಸಿ ಆಕಾಶಕ್ಕೆ ಹೋದ. ಆಮೆ ಮಾಯವಾಗಿ ಅದರ ಸ್ಥಳದಲ್ಲಿ ರಾಜಕುಮಾರ ನಿಂತಿದ್ದ. ಸೂರ್ಯನಿಗೆ ನಮಸ್ಕರಿಸಿ ಪಾರಿಜಾತದ ಹೂವು ತರಲು ಆಮೆ ರಾಜಕುಮಾರ ಹೊರಟ.

ಹೀಗೆ ಮುಂದುವರಿದಾಗ ದಿನಕ್ಕೆ ಒಂದು ಗಳಿಗೆ ತಪಸ್ಸು ಮಾಡುವ ಸನ್ಯಾಸಿ ಸಿಕ್ಕ. ರಾಜಕುಮಾರ ನಮಸ್ಕರಿಸಿ ಕೇಳಿದ “ಸ್ವಾಮಿ, ದೇವಲೋಕದ ಪಾರಿಜಾತ ಎಲ್ಲಿದೆ?’’

“ನನಗೆ ಗೊತ್ತಿಲ್ಲವಲ್ಲ. ಇನ್ನೊಂದು ಕೂಗಳತೆ ಹೋಗು, ಅಲ್ಲಿ ನನ್ನ ಗುರುಗಳಿದ್ದಾರೆ. ಅವರಿಗೆ ಗೊತ್ತಿರಬಹುದು’’ ಅಂದ.

ರಾಜಕುಮಾರ ಇನ್ನೊಂದು ಕೂಗಳತೆ ಮುಂದೆ ಹೋದ. ಅಲ್ಲಿ ದಿನಕ್ಕೆ ಎರಡು ಗಳಿಗೆ ತಪಸ್ಸು ಮಾಡುವ ಸನ್ಯಾಸಿಯಿದ್ದ. ನಮಸ್ಕರಿಸಿ “ಸ್ವಾಮಿ, ದೇವಲೋಕದ ಪಾರಿಜಾತ ಎಲ್ಲಿ ಸಿಕ್ಕೀತು?’’ ಎಂದ.

ಅವನು “ನನಗೆ ಗೊತ್ತಿಲ್ಲವಲ್ಲಾ. ಇನ್ನೊಂದು ಕೂಗಳತೆ ಹೋಗು. ಅಲ್ಲಿ ನನ್ನ ಗುರುಗಳಿದ್ದಾರೆ. ಅವರನ್ನು ಕೇಳು’’ ಅಂದ.

ರಾಜಕುಮಾರ ಮತ್ತೊಂದು ಕೂಗಳತೆ ಮುಂದೆ ಹೋದ. ಅಲ್ಲಿ ದಿನಕ್ಕೆ ಮೂರು ಗಳಿಗೆ ತಪಸ್ಸು ಮಾಡುವ ಸನ್ಯಾಸಿ ಇದ್ದ. ಹೋಗಿ ನಮಸ್ಕರಿಸಿ “ಮಹಾಸ್ವಾಮಿ ದೇವಲೋಕದ ಪಾರಿಜಾತ ಎಲ್ಲಿ ಸಿಕ್ಕೀತು?’’ ಎಂದು ಕೇಳಿದ.

ಆ ಸನ್ಯಾಸಿ ಇವನನ್ನು ನೋಡಿ ‘ಹಾ, ತಂದರೆ ಇವನೇ ತರಬಹುದು’ ಎಂದುಕೊಂಡು ಹೇಳಿದ “ನೋಡು ಮಗು, ಉತ್ತರ ದಿಕ್ಕಿನಲ್ಲೊಂದು ಶಿವನ ದೇವಾಲಯವಿದೆ. ಅದರಾಚೆ ಒಂದು ಸರೋವರ ಇದೆ. ಅದರೊಳಗೆ ಸ್ನಾನ ಮಾಡಲಿಕ್ಕೆ ದಿನಾಲು ದೇವಲೋಕದ ಕನ್ಯೆಯರು ಬರುತ್ತಾರೆ. ಸೀರೆ ಕಳೆದಿಟ್ಟು ಅವರು ಸರೋವರಗಳಿಗೆ ಇಳಿದ ಕೂಡಲೇ ನೀನು ಹೋಗಿ ಯಾವುದಾದರೊಂದು ಸೀರೆ ಎತ್ತಿಕೊಂಡು ಓಡಿ ಬಂದುಬಿಡು. ಆದರೆ ಹಿಂದಿರುಗಿ ಮಾತ್ರ ನೋಡಬೇಡ. ನೋಡಿದರೆ ಅಪಾಯ ಖಾತರಿ. ಬಂದವನೇ ಶಿವನ ದೇವಾಲಯದಲ್ಲಿ ಹೊಕ್ಕುಬಿಡು. ಪಾರಿಜಾತ ಸಿಗುತ್ತದೆ.’’

ಆ ಮಾತಿನಂತೆ ರಾಜಕುಮಾರ ಅಲ್ಲಿಗೆ ಹೋಗಿ ದೇವಕನ್ಯೆಯರು ಸ್ನಾನಕ್ಕೆ ಬರುವುದನ್ನೇ ಕಾಯುತ್ತಾ ಕುಳಿತ. ಅವರು ದಂಡೆಯಲ್ಲಿ ಸೀರೆ ಕಳಚಿಟ್ಟು ಸ್ನಾನಕ್ಕಿಳಿದಕೂಡಲೇ ಒಂದು ಸೀರೆ ತೆಗೆದುಕೊಂಡು ಓಡಿದ. ಹಿಂದುರುಗಿ ನೊಡದೆ ಶಿವ ದೇವಾಲಯ ಹೊಕ್ಕು ಬಾಗಿಲಿಕ್ಕಿಕೊಂಡ. ಒಬ್ಬ ದೇವತಾ ಕನ್ಯೆ ಇವನ ಬೆನ್ನು ಹತ್ತಿದ್ದಳು. ಅವಳು ದೇವಾಲಯದ ಮುಂದೆ ನಿಂತು, “ರಾಜಪುತ್ರಾ ನನ್ನ ಸೀರೆ ಕೊಡು’’ ಎಂದು ಅಂಗಲಾಚಿದಳು. ಪಾರಿಜಾತದ ಹೂವು ಕೊಟ್ಟರೆ ಸೀರೆ ಕೊಡುವುದಾಗಿ ಹೇಳಿದ. ಅವಳು ಒಪ್ಪಿ ಮಾತು ಕೊಟ್ಟಳು. ಕಿಟಕಿಯಿಂದ ಸೀರೆ ತೂರಿದ. ಅವಳುಟ್ಟ ಮೇಲೆ ಬಾಗಿಲು ತೆಗೆದು ಹೊರಬಂದ. ಆ ದೇವಕನ್ಯೆಗೆ ಇವನ ಮೇಲೆ ಪ್ರೀತಿಯಾಯಿತು. ಪಾರಿಜಾತದ ಹೂಗಳನ್ನು ಈಗಲೇ ತರುವೆನಂದು ಹೇಳಿ ದೇವಲೋಕಕ್ಕೆ ಹೋಗಿ ಒಂದೆರಡು ಕ್ಷಣಗಳಲ್ಲೇ ಹೂ ತಂದುಕೊಟ್ಟಳು. ಹಾಗೇ ಅವನ ಕೈಗೊಂದು ಕೊಳಲನ್ನು ಕೊಟ್ಟು ಇದನ್ನು ಊದಿದಾಗ ತಾನೇ ಬಂದು ರಾಜಕುಮಾರನ ಆಸೆ ಈಡೇರಿಸುವುದಾಗಿ ಹೇಳಿ, ತನ್ನ ಲೋಕಕ್ಕೆ ಹೋದಳು.

ರಾಜಕುಮಾರ ಹೂ ತೆಗೆದುಕೊಂಡು ತಿರುಗಿ ಬರುವಾಗ ಮೂರು ಗಳಿಗೆಯ ಸನ್ಯಾಸಿ ಸಿಕ್ಕ. “ಅಯ್ಯಾ ರಾಜಕುಮಾರ, ಪಾರಿಜಾತದ ಹೂ ಸಿಕ್ಕಿತೋ?’’ ಎಂದ.

“ಹೌದು, ಪಾರಿಜಾತದ ಹೂವೂ ಸಿಕ್ಕಿತು, ಹೂವಿನ ಹುಡುಗಿಯೂ ಸಿಕ್ಕಳು – ಎಂದ ರಾಜಕುಮಾರ. “ಎಲ್ಲಿ, ತೋರಿಸು’’ ಎಂದಾಗ ಕೊಳಲೂದಿದ. ದೇವಲೋಕದ ಕನ್ಯೆ ಬಂದು ರಾಜಕುಮಾರನನ್ನು ಮಾತಾಡಿಸಿಹೋದಳು. ಅವಳನ್ನು ನೋಡಿದೊಡನೆ ಸನ್ಯಾಸಿಯ ಚಿತ್ತ ಚಂಚಲವಾಯಿತು. “ಅಯ್ಯಾ ರಾಜಕುಮಾರ, ನನ್ನ ಬಳಿ ಒಂದು ಯೋಗದಂಡವಿದೆ. ಇಂಥವರನ್ನು ಹೊಡೆ ಎಂದು ಹೇಳಿದರೆ ಸಾಕು, ಹೊಡೆಯುತ್ತದೆ. ನೀನು ಕ್ಷತ್ರಿಯ. ಅದು ನಿನ್ನಲ್ಲಿದ್ದರೇ ಒಳಿತು. ಅದನ್ನು ನಿನಗೆ ಕೊಡುತ್ತೇನೆ. ಪ್ರತಿಯಾಗಿ ನನಗೆ ಈ ಕೊಳಲು ಕೊಡು’’ ಅಂದ. ರಾಜಕುಮಾರ ಆಗಲೆಂದು ಕೊಳಲು ಕೊಟ್ಟು ಯೋಗದಂಡ ಇಸಿಕೊಂಡ. ತುಸು ಮುಂದೆ ಹೋಗಿ ಯೋಗದಂಡಕ್ಕೆ, “ಆ ಸನ್ಯಾಸಿಯನ್ನು ಹೊಡೆದು ಕೊಳಲು ತೆಗೆದುಕೊಂಡ ಬಾ’’ ಎಂದ. ಅದು ಹೋಗಿ ಆ ಸನ್ಯಾಸಿಯನ್ನು ಹೊಡೆದು ಹಣ್ಣು ಮಾಡಿತು. ಏಟು ತಡೆಯಲಾರದೆ ಆ ಸನ್ಯಾಸಿ ಕೊಳಲನ್ನು ಕೊಟ್ಟುಬಿಟ್ಟ.

ಕೊಳಲು, ಯೋಗದಂಡ ಮತ್ತು ಪಾರಿಜಾತದ ಹೂ ತಕ್ಕೊಂಡು ರಾಜಕುಮಾರ ಒಂದು ಕೂಗಳತೆ ಮುಂದೆ ಬಂದ. ಇಲ್ಲಿ ಎರಡು ಗಳಿಗೆಯ ಸನ್ಯಾಸಿಯಿದ್ದ. ಅವನಿಗೂ ಹೀಗೆಯೇ ದೇವಲೋಕದ ಕನ್ಯೆಯ ಮೇಲೆ ಮನಸ್ಸಾಯಿತು. ಕೊಳಲಿಗೆ ಬದಲು ತನ್ನ ಹತ್ತಿರವಿದ್ದ ಒಂದು ಕೈಚೀಲ ಕೊಡುವುದಾಗಿ ಹೇಳಿದ. ಅದು ಸಾಮಾನ್ಯ ಕೈಚೀಲವಾಗಿರಲಿಲ್ಲ. ಬೇಡಿದ್ದನ್ನು ಕೊಡುವಂಥದಾಗಿತ್ತು. ಆಗಲೆಂದು ಕೈಚೀಲ ಇಸಿದುಕೊಂಡು ಮತ್ತೆ ಯೋಗದಂಡಕ್ಕೆ ಅಪ್ಪಣೆ ಕೊಟ್ಟ. ಅದು ಮತ್ತೆ ಆ ಸನ್ಯಾಸಿಯನ್ನು ಹೊಡೆದು ಹಣ್ಣು ಹಣ್ಣು ಮಾಡಿ ಕೊಳಲನ್ನು ತಂದಿತು. ಸನ್ಯಾಸಿ ಇಂದು ತಿಂದ ಮಂಗನಂತಾದ.

ರಾಜಕುಮಾರ ಕೊಳಲು, ಯೋಗದಂಡ, ಕೈಚೀಲ ಮತ್ತು ಪಾರಿಜಾತದ ಹೂ ತೊಕ್ಕೊಂಡು ಮುಂದೆ ಬಂದ. ಅಲ್ಲಿ ಒಂದು ಗಳಿಗೆಯ ಸನ್ಯಾಸಿ ಸಿಕ್ಕ. ಇವನೂ ದೇವಕನ್ಯೆಯನ್ನು ಮೋಹಿಸಿ, ತನ್ನ ಹತ್ತಿರವಿದ್ದ ಪಾದುಕೆಗಳನ್ನು ಕೊಟ್ಟು ಕೊಳಲು ತೆಗೆದುಕೊಂಡ. ಈ ಪಾದುಕೆಗಳೂ ಸಾಮಾನ್ಯವಾಗಿರಲಿಲ್ಲ. ಅವುಗಳ ಮೇಲೆ ನಿಂತು ಹೋಗೆಂದಲ್ಲಿಗೆ ಹೋಗುತ್ತಿದ್ದೆವು. ರಾಜಕುಮಾರ ತುಸು ಮುಂದೆ ಬಂದು ಮತ್ತೆ ಯೋಗದಂಡಕ್ಕೆ ಅಪ್ಪಣೆ ಕೊಟ್ಟ ಈ ಸನ್ಯಾಸಿಯೂ ಹುಚ್ಚನಾಗಿ ಕೂತ.

ಬಳಿಕ ರಾಜಕುಮಾರ ತನ್ನ ಗಳಿಕೆಯನ್ನೆಲ್ಲ ತಕ್ಕೊಂದು ಗೌಪ್ಯವಾಗಿ ಬಂದು ಅರಮನೆ ಸೇರಿದ. ಯಾರೂ ಇಲ್ಲದಲ್ಲಿ ಅವನ್ನೆಲ್ಲ ಇಟ್ಟ. ಮತ್ತೆ ಆಮೆಯಾಗಿ ಪಾರಿಜಾತದ ಹೂ ಮಾತ್ರ ತಕ್ಕೊಂಡು ತಂದೆ ತಾಯಿಗಳ ಬಳಿ ಬಂದು ನಮಸ್ಕರಿಸಿ “ಪಾರಿಜಾತದ ಹೂ ತಂದಿದ್ದೇನೆ. ಮದುವೆ ಮಾಡಬೇಕು’’ ಎಂದು ಹೇಳಿದ. ರಾಜ, ರಾಣಿಯರಿಗಾದ ಸಂತೋಷ, ಆಶ್ಚರ್ಯ ಅಷ್ಟಿಷ್ಟಲ್ಲ. ಪ್ರಧಾನಿಗೂ ಆಮೆ ಪಾರಿಜಾತದ ಹೂ ತಂದದ್ದು ತಿಳಿಯಿತು ಆಮೆ ಅವನ ಮಗಳಿಗೆ ಪಾರಿಜಾತದ ಹೂ ಕೊಟ್ಟಿತು. ಪ್ರಧಾನಿ ಇನ್ನೇನು ಮಾಡುತ್ತಾನೆ? ಬಾಯಿ ಮುಚ್ಚಿಕೊಂಡು ಆಮೆಗೆ ತನ್ನ ಹಿರಿಯ ಮಗಳನ್ನು ಕೊಟ್ಟು ಮದುವೆ ಮಾಡಿದ. ಅದೇ ಕಾಲಕ್ಕೆ ಪ್ರಧಾನಿಯ ಇನ್ನಿಬ್ಬರು ಕುಮಾರಿಯರನ್ನು ಇಬ್ಬರು ರಾಜಕುಮಾರರಿಗೆ ವೈಭವದಿಂದ ಮದುವೆ ಮಾಡಿಕೊಟ್ಟ. ಪ್ರಧಾನಿಯ ಮಗಳ ತಂಗಿಯರು ತಮ್ಮ ಗಂಡಂದಿರೊಡನೆ ಸುಖವಾಗಿದ್ದರು. ಆದರೆ ಹಿರಿಯ ಮಗಳು ಮಾತ್ರ ತನ್ನ ದೈವದಲ್ಲಿದ್ದಂತಾಗಲೆಂದು ಆಮೆಯ ಜೊತೆಗೆ ಇದ್ದಳು. ತಂಗಿಯರೂ ಅವರ ಗಂಡಂದಿರೂ ಇವಳನ್ನು ನೋಡಿದಾಗೊಮ್ಮೆ ‘ಆಮೆಯ ಹೆಂಡತಿ’ ಎಂದು ಹೇಳಿ ನಗುತ್ತಿದ್ದರು.

 ಒಂದು ದಿನ ಇವರನ್ನು ಅವಮಾನ ಮಾಡುವುದಕ್ಕಾಗಿ ಪ್ರಧಾನಿಯ ಇನ್ನಿಬ್ಬರು ಅಳಿಯಂದಿರು ಬೇಟೆಗೆ ಹೋಗಲು ಸಿದ್ಧರಾದರು. ಆಮೆ ತಾನು ಹೋಗುತ್ತೇನೆಂದು ಹೇಳಿತು. ಪ್ರಧಾನಿಯ ಮಗಳು ಬೇಡವೆಂದು ಎಷ್ಟು ಹೇಳಿದರೂ ಕೇಳಲಿಲ್ಲ. ಕೊನೆಗೆ ತಂದೆಯ ಹತ್ತಿರ ಬಂದು, “ಅಪ್ಪಾ, ಆನೆ ರಾಜಕುಮಾರರೂ ಬೇಟೆಗೆ ಹೋಗುತ್ತಾರಂತೆ. ಅವರಿಗೂ ಒಂದು ರಥ ಕೊಡು’’ ಎಂದಳು. ಇದನ್ನು ಕೇಳಿ ಅರಮನೆಯಲ್ಲಿದ್ದವರೆಲ್ಲಾ ಚಪ್ಪಾಳೆ ತಟ್ಟಿ ನಕ್ಕರು. ಆಮೆ ರಾಜಕುಮಾರನಿಗೆ ಒಂದು ಕುಂಟು ಕುದುರೆ ಹಾಗೂ ಒಂದು ಹರಿಯದ ಕತ್ತಿ ಕೊಟ್ಟರು. ಪ್ರಧಾನಿಯ ಮಗಳಿಗೆ ಅವಮಾನವಾಯಿತು. ಆಮೆ ಹೆಂಡತಿಯನ್ನು ಸಮಾಧಾನ ಮಾಡಿ ಬೇಟೆಗೆ ಹೊರಟಿತು.

ಎಲ್ಲರೂ ಕಣ್ಣರೆಯಾಗುವುದಷ್ಟೇ ತಡ ಆಮೆಯು ರಾಜಕುಮಾರನಾಗಿ ಅವರಿಗಿಂತ ಮೊದಲೆ ಅಡವಿಗೆ ಹೋದ. ಪ್ರಧಾನಿಯ ಅಳಿಯರಿಬ್ಬರೂ ಬೇಟೆಗೆ ಹೋದಾಗ ದೂರದಲ್ಲಿ ಎರಡು ಹುಲಿ ಅಬ್ಬರಿಸಿದವು. ಇಬ್ಬರೂ ಜೀವಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಿ ಬಂದರು. ಸೈನಿಕರೊಂದು ಕಡೆ, ರಥ ಒಂದು ಕಡೆ, ಇವರೊಂದು ಕಡೆ – ಹೀಗೆ ಫಜೀತಿಪಟ್ಟರು. ಬದುಕಿ ಬಂದದ್ದೇ ಸಾಕೆಂದುಕೊಂಡು ವಾಪಸು ಓಡಿದರು.

ಓಡೋಡುತ್ತ ಬರುವಾಗ ದಾರಿಯಲ್ಲಿ ಆಮೆ ಎರಡೂ ಹುಲಿಗಳನ್ನು ಕೊಂದು ಅಲ್ಲಿಯೇ ಚೆಲ್ಲಿ ಕೊಂಡು ಎಲೆ ಅಡಿಕೆ ಮೆಲ್ಲುತ್ತ ಕೂತಿತ್ತು. ‘ಅರೆ! ಆಮೆಯಂಥಾ ಆಮೆ ಬೇಟೆಯಾಡಿಕೊಂಡು ಹಿಂದಿರುವಾಗ ನಾವು ಹಾಗೇ ಹೋಗುವುದೆಂದರೇನು!’ ಎಂದುಕೊಂಡರು. ಉಪಾಯದಿಂದ ಈ ಹುಲಿಗಳನ್ನು ತಾವು ಒಯ್ಯಬೇಕೆಂದರು.

ಆಮೆಯ ಹತ್ತಿರ ಬಂದು “ಅಯ್ಯಾ, ಈ ಹುಲಿ ನಮಗೆ ಕೊಡು, ನೀನು ಕೇಳಿದ್ದನ್ನು ಕೊಡುತ್ತೇವೆ’’ ಎಂದರು.

“ಹಾಗಾದರೆ ನಿಮ್ಮ ಅರ್ಧರ್ಧ ಮೀಸೆ ಬೋಳಿಸಿಕೊಡಿ’’ ಎಂದು ಆಮೆ ಹೇಳಿತು. ಇಬ್ಬರೂ ಯೋಚಿಸಿದರು. “ಇವಷ್ಟು ಮೀಸೆ ಕೊಟ್ಟರೆ ಏನು ಮಹಾ! ನಾವು ಹುಟ್ಟಿನಿಂದಲೇ ಚೆಲುವರಾದ್ದರಿಂದ ಮೂಗಿನ ಎರಡೂ ಕಡೆ ಮೀಸೆ ಇದ್ದರೂ ಚಂದ, ಒಂದೇ ಕಡೆ ಇದ್ದರೂ ಚಂದ. ಅಷ್ಟಾಗಿ ಈ ಮೀಸೆ ಇನ್ನೆಂಟು ದಿನಗಳಲ್ಲಿ ಬೆಳೆಯುತ್ತದೆ. ಹುಲ್ಲಿನಂಥಾ ಹುಲ್ಲು ಬೆಳೆಯುತ್ತದೆ, ಮೀಸೆ ಬೆಳೆಯಲಾರದೆ?’’ ಹೀಗೆಂದು ವಿಚಾರ ಮಾಡಿಕೊಂಡು ಇಬ್ಬರೂ ತಮ್ಮ ಅರ್ಧರ್ಧ ಮೀಸೆ ಬೋಳಿಸಿಕೊಟ್ಟರು. ಒಬ್ಬೊಬ್ಬರೂ ಒಂದೊಂದು ಹುಲಿ ತೆಗೆದುಕೊಂಡು ಬಂದರು.

ಜನ ಇವರನ್ನು ಮೆರವಣಿಗೆಯಲ್ಲಿ ಕರೆತಂದರು. ಇಬ್ಬರಿಗೂ ಅರ್ಧರ್ಧ ಮೀಸೆ ಇಲ್ಲದ್ದರಿಂದ ಏನೇನೋ ಕಥೆ ಕಟ್ಟಿದರು. ಆದರೂ ದೊಡ್ಡವರು ಮಾಡಿದ್ದೆಲ್ಲಾ ಚಂದವೇ ಅಲ್ಲವೇ? ಆಮೆ ರಾಜಕಮಾರ ಮಾತ್ರ ತನ್ನ ಕುಂಟು ಕುದುರೆ ಹತ್ತಿ ಮೆರವಣಿಗೆಯ ಹಿಂದೆ ಹೋದ. ಅವನನ್ನು ಯಾರೂ ಮಾತಾಡಿಸಲಿಲ್ಲ. ಹುಡುಗರು ಇವನ ಕುಂಟು ಕುದುರೆ ಬೆನ್ನು ಹತ್ತಿ ಚೇಷ್ಟೆ ಮಾಡಿದರು.

ಆ ದಿನ ರಾತ್ರಿ “ಜನ ನನ್ನನ್ನು ನೋಡಿ ನಗುವಂತಾಯಿತಲ್ಲಾ!’’ ಎಂದು ಚಿಂತಿಸುತ್ತಾ ಪ್ರದಾನಿಯ ಮಗಳು ಮಲಗಿದ್ದಳು. ಅವಳಿಗೆ ನಿದ್ರೆ ಹತ್ತಿದೆಯೆಂದು ತಿಳಿದು ಆಮೆ ರಾಜಕುಮಾರನ ರೂಪ ಹೊಂದಿ ಇವಳ ಸಮೀಪ ಬಂದ. ತಕ್ಷಣವೇ ಎದ್ದು ಕುಳಿತಳು. ತನ್ನ ಗಂಡ ಆಮೆಯಲ್ಲ, ಹೊಳಪುಳ್ಳ ರಾಜಕುಮಾರನೆಂದು ತಿಳಿದು ಕಾಲಿಗೆ ಬಿದ್ದು “ಸ್ವಾಮಿ, ಇನ್ನು ಮೇಲೆ ಆ ಆಮೆ ವೇಷ ಬಿಸಾಡಬೇಕು’’ ಎಂದಳು.

“ನಾಳೆ ಸಭೆ ಕೂಡಿಸು. ಅಲ್ಲಿ ತೋರಿಸೋಣ’’ ಎಂದು ರಾಜಕುಮಾರ ಹೇಳಿದ.

ಮರುದಿನ ಸಭೆ ಕೂಡಿತು. ರಾಜ, ಪ್ರಧಾನಿ, ಅವನ ಅಳಿಯಂದಿರು, ಮಕ್ಕಳು, ಜನರು-ಎಲ್ಲಾ ಸೇರಿದರು. ಅವರೆಲ್ಲರ ಎದುರು ಆಮೆ ಆಕಾರ ಬಿಟ್ಟು ರಾಜಕುಮಾರನಾದ. ಎಲ್ಲರೂ ನೋಡಿ ಬೆರಗಾದರು. ರಾಜಕುಮಾರ ತಾನು ಆಮೆಯಾದದ್ದರ ಕಾರಣ ವಿವರಿಸಿದ. ಹೇಳ ಹೇಳುತ್ತಾ ಪ್ರದಾನಿಯ ಅಳಿಯಂದಿರ ಮೀಸೆಗಳನ್ನೂ ತೋರಿಸಿದ. ಅವರಿಬ್ಬರೂ ಅಲ್ಲಿ ನಿಲ್ಲದೆ ಓಡಿ ಹೋದರು. ರಾಜ ತನ್ನ ಮಗನಿಗೆ ಪಟ್ಟ ಕಟ್ಟಿದ. ರಾಜಕುಮಾರ ತನ್ನ ಹೆಂಡತಿಯೊಂದಿಗೆ ಸುಖವಾಗಿದ್ದ.

ನಾವಿಲ್ಲಿ ಹೀಗಿದ್ದೀವಿ.

* * *