ಒಂದಾನೊಂದು ಕಾಲದಲ್ಲಿ ಇಬ್ಬರು ಅಣ್ಣ-ತಮ್ಮ ಇದ್ದರು. ಅಣ್ಣ ಶ್ರೀಮಂತ. ಆಳು ಕಾಳು ಧನ ದಾನ್ಯದಿಂದ ಅವನ ದೊಡ್ಡ ಮನೆ ತುಂಬಿ ತುಳುಕುತ್ತಿತ್ತು. ಅವನ ಕೊಟ್ಟಿಗೆಯ ತುಂಬ ದಷ್ಟಪುಷ್ಟವಾದ ಹಿಂಡುವ ದನಗಳಿದ್ದವು. ಅವನ ತೋಟ ಯಾವಾಗಲೂ ಹಸಿರಾಗಿರುತ್ತಿತ್ತು. ಅವನ ಮನೆಯಲ್ಲಿ ಅವನಾಯಿತು, ಅವನ ಹೆಂಡತಿಯಾಯಿತು. ಸಣ್ಣವಾಗಲಿ, ದೊಡ್ಡವಾಗಲಿ ಮಕ್ಕಳಿರಲಿಲ್ಲ. ಅವರು ಸುಖವಾಗಿದ್ದರು. ಅವನ ಇಂಥ ಶ್ರೀಮಂತಿಕೆಯಿಂದ ಊರವರೆಲ್ಲ ಅವನನ್ನು “ಸಾವ್ಕಾರಣ್ಣಾ’’ ಎಂದೇ ಕರೆಯುತ್ತಿದ್ದರು.

ತಮ್ಮ ಬಡವ, ಮನೆ ತುಂಬ ಮಕ್ಕಳನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಅವನ ಕಣಜ ಸದಾ ಬರದಿದಾಗಿರುತ್ತಿತ್ತು. ಕೊಟ್ಟಿಗೆಯಲ್ಲಿ ಹಿಂಡಲಾರದ ಬಡಕಲು ದನಗಳೇ ಇದ್ದವು. ಹೀಗಾಗಿ ಅವರೆಲ್ಲ ಒಂದುಪವಾಸ, ಎರಡುಪವಾಸ ಇರುತ್ತಿದ್ದರು. ಆದ್ದರಿಂದ ಅವನನ್ನು ಊರವರು “ಬಡತಮ್ಮಾ’’ ಎಂದೇ ಕರೆಯುತ್ತಿದ್ದರು. ಅವನ ಹೆಸರು ಬರೀ “ತಮ್ಮಾ’’ ಎಂದಿರಲಿ, “ಬಡತಮ್ಮಾ’’ ಎಂದಿರಲಿ, ಪಾಪ, ಮಕ್ಕಳಿಗೆ ಕೊಡುವುದಕ್ಕೆ ಅವನ ಬಳಿ ಏನೂ ಇರಲಿಲ್ಲ.

ಹೀಗಿರಲು ಒಂದು ದಿನ ಒಬ್ಬ ಸನ್ಯಾಸಿ ಆ ಊರಿಗೆ ಬಂದ. ಸಾವ್ಕಾರಣ್ಣನ ಮನೆಗೆ ಹೋಗಿ “ಸಾವ್ಕಾರಣ್ಣಾ, ಸಾವ್ಕಾರಣ್ಣಾ ಹಸಿವಾಗಿದೆ. ತುಸು ಅನ್ನ ನೀಡು’’ ಎಂದ.

ಸಾವ್ಕಾರಣ್ಣನಿಗೆ ಕೋಪ ಬಂತು.

“ದುಡಿದೆಯಾ? ದುಃಖಪಟ್ಟೆಯಾ? ನಿನಗೇಕೆ ಅನ್ನ ನೀಡಬೇಕು? ಸಾಧ್ಯವಿಲ್ಲ, ತೊಲಗಾಚೆ’’ ಎಂದ.

ಸನ್ಯಾಸಿ ಬಡತಮ್ಮನ ಮನೆಗೆ ಬಂದ. “ಹಸಿವಾಗಿದೆ ಅನ್ನ ಕೊಡುವೆಯಾ?’’ ಎಂದ.

“ಅನ್ನವಿಲ್ಲ, ಆದರೆ ನನ್ನ ಪಾಲಿನ ಗಂಜಿ ಇದೆ. ಅದನ್ನೇ ಕೊಡಬಲ್ಲೆ’’ ಎಂದ ಬಡತಮ್ಮ. ಸನ್ಯಾಸಿ ಗಂಜಿಯನ್ನು ಕುಡಿದ. ಅವನಿಗೆ ಬಹಳ ಸಂತೋಷವಾಯಿತು. “ಅಯ್ಯಾ ತೃಪ್ತಿಯಾಯಿತು. ನನ್ನ ಬಳಿ ಇದೊಂದು ಕೊಳಲಿದೆ. ನಿನ್ನ ಹೊಲದಲ್ಲಿ ಒಳ್ಳೆಯ ಬೀಜ ಬಿತ್ತು. ದಿನಾಲು ಕೆಲಸ ಮಾಡಿ ಈ ಕೊಳಲು ನುಡಿಸು. ಬೆಳೆ ಚೆನ್ನಾಗಿ ಬರುತ್ತದೆ.’’ ಎಂದು ಹೇಳಿ ಕೊಳಲು ಕೊಟ್ಟು ಹೋದ.

ಮುಂದೆ ಮಳೆಗಾಲ ಬಂತು. ರೈತರ ಹೊಲ ಉತ್ತು ಬಿತ್ತತೊಡಗಿದರು. ಆದರೆ ಬಡತಮ್ಮ ಉತ್ತು ಬಿತ್ತಬೇಕೆಂದರೆ ಆತನ ಬಳಿ ಬೀಜ ಇರಲಿಲ್ಲ. ಬಡತಮ್ಮ ಸಾವ್ಕಾರಣ್ಣನ ಬಳಿಗೆ ಹೋದ.

ಅಣ್ಣ ಕೇಳಿದ “ಯಾಕೋ ಬಡತಮ್ಮಾ, ಈ ಕಡೆ ಬಂದೆ?’’

“ಹಂಗಾಮು ಬಂದಿದೆ’’ ಬಡತಮ್ಮ ಹೇಳಿದ. “ನನ್ನ ಬಳಿ ಬೀಜಗಳಿಲ್ಲ. ಒಂದಿಷ್ಟು ಬೀಜ ಕೊಟ್ಟರೆ ಹೊಲದಲ್ಲಿ ಬಿತ್ತಬಹುದು.’’

“ಸರಿ, ಒಂದು ಚೀಲ ತುಂಬ ಬೀಜ ಕೊಡುತ್ತೇನೆ. ಮುಂದೆ ಬೆಳೆ ಬಂದಾಗ ಒಂದಕ್ಕೆ ಹತ್ತರಷ್ಟು ಧಾನ್ಯ ಕೊಡಬೇಕು.’’

“ಒಂದಕ್ಕೆ ಹತ್ತರಷ್ಟು! ಇದು ಹೆಚ್ಚಾಯಿತಲ್ಲವೇ?’’

“ಹೌದೋ? ಹಾಗಾದರೆ ಬೀಜ ಕೊಡುವುದಿಲ್ಲ ಹೋಗು’’ ಎಂದ ಸಾವ್ಕಾರಣ್ಣ.

ಬೇರೆ ದಾರಿಯಿರಲಿಲ್ಲ. ಬಡತಮ್ಮ ಒಂದು ಚೀಲ ತುಂಬ ಬೀಜ ತೆಗೆದುಕೊಂಡು ಬಂದ. ಮಕ್ಕಳೊಂದಿಗೆ ಹೊಲದಲ್ಲಿ ಬೀಜ ಬಿತ್ತಿದ. ದಿನಾಲು ಕೆಲಸ ಮುಗಿದ ಮೇಲೆ ಕೊಳಲು ನುಡಿಸುತ್ತಿದ್ದ. ಆ ಕೊಳಲಿನ ದನಿ ಎಷ್ಟು ಮಧುರವಾಗಿದ್ದಿತೆಂದರೆ – ಅದನ್ನು ಕೇಳಿ ಸುತ್ತಲ ಗಿಡಮರಗಳೂ ತಲೆದೂಗುತ್ತಿದ್ದವು. ತಂಗಾಳಿ ಸೂಸಿ ಬಡತಮ್ಮನ ಹೊಲದಲ್ಲೇ ಸುಳಿದಾಡುತ್ತಿತ್ತು. ಆಕಾಶದ ಮೋಡಗಳು ಇವನ ಹೊಲದ ಮೇಲೆ ಗುಂಪಾಗಿ ನಿಂತು ಮಳೆ ಸುರಿಸುತ್ತಿದ್ದವು. ಅಲ್ಲದೆ ಇವರ ದಣಿವು ಮಾಯವಾಗಿ ದುಡಿಯುವುದಕ್ಕೆ ಹೊಸ ಹುರುಪು ಬರುತ್ತಿತ್ತು. ಹೀಗಾಗಿ ಬಡತಮ್ಮನ ಹೊಲ ತಾಸಿಗೊಂದು ಚೆಂದವಾಗಿ ಹುಲುಸಾಗಿ ಬೆಳೆಯಿತು. ದಂಟಿಗೆಂಟು ತೆನೆಯಾಗಿ, ತೆನೆಗೊಂದು ಹಕ್ಕಿ ಕೂತು ಹಾಡತೊಡಗಿತು. ಉಳಿದವರ ಬೆಳೆಗಳಿನ್ನೂ ನೆಲ ಬಿಟ್ಟು ಎದ್ದಿರಲಿಲ್ಲ. ಬಡತಮ್ಮನ ಪೈರು ಮಾಗಿ ಬಿಟ್ಟಿತ್ತು.

ಒಂದು ದಿನ ಸಾವ್ಕಾರಣ್ಣ ಬಡತಮ್ಮನ ಹೊಲ ನೋಡಿದ. ಅವನಿಗೆ ಆಶ್ಚರ್ಯವಾಯಿತು. ಯಾರ ಹೊಲಗಳೂ ಹೀಗೆ ಬೆಳೆದಿರಲಿಲ್ಲ. ಇದರಲ್ಲೇನೋ ಗುಟ್ಟಿದೆಯೆಂದು ಬಡತಮ್ಮನ ಬಳಿಗೆ ಬಂದ. “ನಮ್ಮೆಲ್ಲರ ಬೆಳೆ ಹೀಗೆ ಮುರುಟಿದ್ದಾಗ ನಿನ್ನ ಬೆಳೆ ಮಾತ್ರ ಹುಲುಸಾಗಿ ಬೆಳೆಯಲು ಏನು ಕಾರಣ?’’ ಎಂದು ಕೇಳಿದ. ಬಡತಮ್ಮ ಕೊಳಲು ತೋರಿಸಿ, ಅದರ ಮಹಿಮೆಯಿಂದಲೇ ಹೀಗಾಯಿತೆಂದು ಹೇಳಿದ. ಸಾವ್ಕಾರಣ್ಣನಿಗೆ ಆಸೆ ಹುಟ್ಟಿತು.

“ತಮ್ಮಾ ತಮ್ಮಾ, ಕೆಲ ದಿನದ ಮಟ್ಟಿಗೆ ನನಗೂ ಈ ಕೊಳಲು ಕೊಡು. ನನ್ನ ಬೆಳೆ ಹುಲುಸಾದ ಮೇಲೆ ಈ ಕೊಳಲು ನಿನಗೆ ವಾಪಸು ಕೊಡುತ್ತೇನೆ’’ ಆಗಲೆಂದು ಬಡತಮ್ಮ ಕೊಳಲು ಕೊಟ್ಟ.

ದಿನಾಲು ಕೆಲಸ ಮುಗಿದ ಮೇಲೆ ಸಾವ್ಕಾರಣ್ಣನೂ ಕೊಳಲು ನುಡಿಸುತ್ತಿದ್ದ. ಅವನ ಹೊಲದ ಸುತ್ತಲ ಗಿಡಮರ ತಲೆದೂಗಿದವು, ತಂಗಾಳಿ ಸುಳಿದಾಡಿತು. ಆಕಾಶದ ಮೋಡಗಳು ಇವನ ಹೊಲದ ಮೇಲೆ ಗುಂಪಾಗಿ ನಿಂತು ಮಳೆ ಸುರಿಸಿದವು. ಸಾವ್ಕಾರಣ್ಣನ ಹೊಲವೂ ತಾಸಿಗೊಂದು ಚೆಂದವಾಗಿ ಹುಲುಸಾಗಿ ಬೆಳೆಯಿತು.

“ಕೆಲಸವಾಯಿತಲ್ಲ, ಇನ್ನು ಕೊಳಲು ವಾಪಸು ಕೊಡು’’ ಎಂದು ಬಡತಮ್ಮ ತನ್ನ ಕೊಳಲು ಕೇಳಿದ. ಸಾವ್ಕಾರಣ್ಣ ಆ ಕೊಳಲು ತಾನಿಟ್ಟುಕೊಂಡು, ಇನ್ನೊಂದು ಅಂಥದೇ ಕೊಳಲು ಕೊಟ್ಟ ಕಳುಹಿಸಿದ-

ಬಡತಮ್ಮ ತಂದು ಕೆಲಸ ಮಾಡಿದ ಮೇಲೆ ಈ ಕೊಳಲು ನುಡಿಸಿದ. ಇದರ ದನಿ ಗಗ್ಗರವಾಗಿತ್ತು. ಗಿಡಮರ ತಲೆದೂಗದೆ ಸುಮ್ಮನೆ ನಿಂತು, ತಂಗಾಳಿ ಸುಳಿಯಲಿಲ್ಲ. ಆಕಾಶದಲ್ಲಿ ಮೋಡಗಳು ಗುಂಪುಗೂಡಲಿಲ್ಲ. ದಣಿವು ಪರಿಹಾರವಾಗುವುದರ ಬದಲು ಹೆಚ್ಚಾಯಿತು. ಬಡತಮ್ಮ ಓಡೋಡಿ ಅಣ್ಣನ ಬಳಿ ಬಂದು, “ಹೀಗೇಕೆ, ನನ್ನ ಕೊಳಲಿಗೆ ಏನು ಮಾಡಿದೆ?’’ ಎಂದ.

“ನಿನ್ನ ಕೊಳಲು ನಿನಗೆ ಕೊಟ್ಟಾಗಿದೆ’’ ಎಂದು ಹೇಳಿ ಸಾವ್ಕಾರಣ್ಣ ಜಾರಿಕೊಂಡ. ಸಾಲದೆಂಬಂತೆ ಒಂದಕ್ಕೆ ಹತ್ತರಷ್ಟು ಧಾನ್ಯ ಕೊಡಬೇಕಾದ ಕರಾರಿತ್ತಲ್ಲವೇ? ಇದೇ ಸಕಾಲವೆಂದು ಬಂದು ಬಡತಮ್ಮ ಬೆಳೆದ ಧಾನ್ಯವನ್ನೆಲ್ಲಾ ತೆಗೆದುಕೊಂಡು ಹೋದ. ಬಡತಮ್ಮ ಕೈ ಖಾಲಿಯಾಗಿ ಕೂತ. ಇದ್ದಬಿದ್ದ ದವಸ ಧಾನ್ಯವನ್ನು ಸಾವ್ಕಾರಣ್ಣ ತೆಗೆದುಕೊಂಡು ಹೋದುದರಿಂದ ಪಾಪ, ಮಕ್ಕಳಿಗೆ ಕೊಡೋದಕ್ಕೆ ಅವನ ಬಳಿ ಏನೂ ಇರಲಿಲ್ಲ.

ಒಂದು ದಿನವಂತೂ ಊಟವಿಲ್ಲದೆ ಮಕ್ಕಳು ಸುಮ್ಮನೆ ಗುಂಪಾಗಿ ಮಲಗಿದ್ದವು. ಅವರನ್ನು ನೋಡಲಾರದೆ ಬಡತಮ್ಮ ಸಾವ್ಕಾರಣ್ಣನ ಬಳಿಗೆ ಬಂದ.

ಅಣ್ಣ ಕೇಳಿದ “ಯಾಕೋ ಬಡತಮ್ಮಾ, ಈ ಕಡೆ ಬಂದೆ?’’

“ಮಕ್ಕಳಿಗೆ ಕೂಳಿಲ್ಲ’’ ಬಡತಮ್ಮ ಹೇಳಿದ, “ಗಂಜಿಗೆ ಒಂದಿಷ್ಟು ಹಿಟ್ಟನ್ನಾದರೂ ಕೊಟ್ಟರೆ ಮಕ್ಕಳ ಪ್ರಾಣ ಉಳಿಸಬಹುದು.’’

“ಸರಿ, ಒಂದು ಬೊಗಸೆ ತುಂಬ ಸಿಟ್ಟು ಕೊಡುತ್ತೇನೆ. ನಾಳೆ ಒಂದು ಚೀಲ ಹಿಟ್ಟು ವಾಪಸು ಕೊಡು.’’

“ಒಂದು ಬೊಗಸೆ ಹಿಟ್ಟಿಗೆ ಒಂದು ಚೀಲ ಹಿಟ್ಟು! ಇದು ಹೆಚ್ಚಾಯಿತಲ್ಲವೇ?’’

“ಹೌದೇ? ಹಾಗಾದರೆ ಬೊಗಸೆ ಹಿಟ್ಟು ಕೊಡುವುದಿಲ್ಲ, ಹೋಗು’’ ಎಂದು ಸಾವ್ಕಾರಣ್ಣ.

ಬೇರೆ ದಾರಿಯಿರಲಿಲ್ಲ. ಬಡತಮ್ಮ ಬೊಗಸೆ ಹಿಟ್ಟನ್ನೇ ತೆಗೆದುಕೊಂಡು ಮನೆಗೆ ಬರುತ್ತಿದ್ದ.

ಆದರೆ ದಾರಿಯಲ್ಲಿ ಭರ್ರನೆ ಬಿರುಗಾಳಿ ಬೀಸಿತು. ಬೊಗಸೆಯಲ್ಲಿಯ ಎಲ್ಲ ಹಿಟ್ಟು ಹಾರಿಹೋಯಿತು. ಹಸಿದ ಮಕ್ಕಳನ್ನು ನೆನೆದು ತಮ್ಮನಿಗೆ ಸಂಕಟವಾಯಿತು. ಈ ಬಿರುಗಾಳಿಯನ್ನು ಹಿಡಿದು ಶಿಕ್ಷಿಸಲೇಬೇಕೆಂದು ಬಡತಮ್ಮ ಅದರ ಬೆನ್ನು ಹತ್ತಿದ. ಬಿರುಗಾಳಿ ಬಯಲಿನೊಳಗೆ ಓಡಿತು. ತಮ್ಮ ಅಲ್ಲಿಗೂ ಬಂದ. ಬಿರುಗಾಳಿ ಕಾಡಿನೊಳಗೆ ಓಡಿತು. ಬಡತಮ್ಮ ಏದುಸಿರು ಬಿಡುತ್ತ ಅಲ್ಲಿಗೂ ಬಂದ.

ಅವನ ಕಷ್ಟ ನೋಡಲಾರದೆ ಬಿರುಗಾಳಿ ನಿಂತು – “ಬಡತಮ್ಮ, ಯಾಕೆ ನನ್ನ ಬೆನ್ನುಹತ್ತಿ ಓಡಿ ಬರುತ್ತಿರುವೆ?’’ ಎಂದಿತು.

“ನನ್ನ ಮಕ್ಕಳು ಹಸಿದಿದ್ದವು. ಕೊಡುವುದಕ್ಕೆ ಏನೂ ಇರಲಿಲ್ಲ. ಹಿಟ್ಟು ಕಡ ತಂದು ಬೇಯಿಸಿ ಹಾಕೋಣ ಎಂದುಕೊಂಡು ನನ್ನ ಅಣ್ಣನಿಂದ ಒಂದು ಬೊಗಸೆ ಹಿಟ್ಟು ತರುತ್ತಿದ್ದೆ. ನೀನಿದಿಯಲ್ಲ ಮೀಸಿ ಅದನ್ನು ಹಾರಿಸಿಬಿಟ್ಟೆ. ಬರಿಗೈಯಿಂದ ಮನೆಗೆ ಹೇಗೆ ಹೋಗಲಿ ಹೇಳು?’’

“ಇಷ್ಟೇನೋ? ಹಾಗಿದ್ದರೆ ಚಿಂತೆ ಮಾಡಬೇಕು. ನಿನ್ನ ಚಿಂತೆಗೆ ಕಾರಣನಾದ ನಾನೇ ನಿನ್ನ ಆನಂದಕ್ಕೂ ಕಾರಣನಾಗುತೆನೆ. ಇದು ನೋಡು ಮಾಂತ್ರಿಕ ಬುಟ್ಟಿ. ಇದರ ಮುಂದೆ ಕೂತು ಏನು ಬೇಡಿದರೂ ಕೊಡುತ್ತದೆ’’ ಎಂದು ಹೇಳಿದ ಬರುಗಾಳಿ ಒಂದು ಮಾಂತ್ರಿಕ ಬುಟ್ಟಿಯನ್ನು ಕೊಟ್ಟಿತು.

ಬಡತಮ್ಮನಿಗೆ ಬಹಳ ಆನಂದವಾಯಿತು. ಬಿರುಗಾಳಿಗೆ ನಮಸ್ಕರಿಸಿ ಮನೆಗೆ ಬಂದ. ಎಲ್ಲ ಮಕ್ಕಳನ್ನು ಕರೆದು ವಿಷಯ ಹೇಳಿದ. ಅವರು ಬಗೆಬಗೆಯ ಮೃಷ್ಟಾನ್ನ ಭೋಜನ ಕೇಳಿದರು. ಅವರು ಹೇಳು ಹೇಳುತ್ತಿದ್ದಂತೆಯೇ ಅವರು ಕೇಳಿದ್ದೆಲ್ಲ ಬುಟ್ಟಿಯಿಂದ ಹೊರಬಂತು. ಎಲ್ಲರೂ ಉಂಡು ಸುಖವಾಗಿದ್ದರು.

ಮಾರನೇ ದಿನ ಅವರು ಆಗಷ್ಟೇ ಊಟಕ್ಕೆ ಕುಳಿತಿದ್ದರು. ಅಷ್ಟರಲ್ಲಿ ಸಾವ್ಕಾರಣ್ಣ ಬಂದ. ನೋಡಿದರೆ ಎಲ್ಲರ ಮುಂದೆ ಮೃಷ್ಟಾನ್ನ ಭೋಜನವಿದೆ! ಅಸೂಯೆಯಿಂದ ಅಣ್ಣನ ಕಣ್ಣು ಕೆಂಪಗಾದವು.

“ಇದೇನೋ ತಮ್ಮ. ಆಗಲೇ ಶ್ರೀಮಂತನಾಗಿ ಬಿಟ್ಟೆಯೋ ಹೇಗೆ?’’

ತಮ್ಮ ವಿನಯದಿಂದಲೇ ಹೇಳಿದ “ಶ್ರೀಮಂತಿಕೆಯಲ್ಲ. ಏನಿಲ್ಲ. ಆದರೆ ನಾವು ಉಂಡು ಸುಖವಾಗಿದ್ದು ಬೇಕಾದರೆ ನಿನಗೂ ಒಂದೂಟ ಹಾಕವಷ್ಟು ಅನ್ನವಿದೆ. ನೀನು ಬಾ ಅಣ್ಣ.’’

“ಅದೆಲ್ಲ ಬೇಡ. ನನಗೆ ಮೊದಲು ನೀನು ಕೊಡಬೇಕಾದ ಒಂದು ಚೀಲ ಹಿಟ್ಟುಕೊಡು’’ ಎಂದು ಅಣ್ಣ.

“ಅದಕ್ಕೇನು, ಈಗಲೇ ಕೊಡುತ್ತೇನೆ’’ ಎನ್ನುತ್ತ ತಮ್ಮ ಮಾಂತ್ರಿಕ ಬುಟ್ಟಿಯ ಬಳಿಗೆ ಬಂದು “ಒಂದು ಚೀಲ ತುಂಬ ಹಿಟ್ಟು ಕೊಡು’’ ಅಂದ. ಅವನ ಮಾತಿನ್ನೂ ಅವನ ಬಾಯೊಳಗೇ ಇದೆ – ಒಂದು ಚೀಲ ತುಂಬ ಹಿಟ್ಟು ಬಂತು. ಸಾವ್ಕಾರಣ್ಣನಿಗೆ ಕೊಟ್ಟ. ಮಾಂತ್ರಿಕ ಬುಟ್ಟಿಯ ಮಹಿಮೆಯನ್ನು ಹೇಳಿದ. ಮರುಮಾತಿಲ್ಲದೆ ಅಣ್ಣ ತನ್ನ ಮನೆಗೆ ಹೋದ.

ಆದರೆ ಮತ್ತೆ ಸಂಜೆ ಸಮಯಕ್ಕೆ ತಮ್ಮನ ಮನೆಗೆ ಓಡಿಬಂದ.

“ತಮ್ಮಾ ತಮ್ಮಾ, ಮನೆಗೆ ತುಂಬ ಜನ ನೆಂಟರು ಬಂದಿದ್ದಾರೆ. ಅವರಿಗೆಲ್ಲ ಅಡಿಗೆ ಮಾಡಿ ಹಾಕುವುದೆಂದರೆ ತುಂಬ ತೊಂದರೆ. ಒಂದೆರಡು ಗಂಟೆ ನಿನ್ನ ಮಾಂತ್ರಿಕ ಬುಟ್ಟಿಯನ್ನು ಕೊಟ್ಟರೆ ಅವರಿಗೆ ಊಟ ಬಡಿಸಿ ಹಿಂದಿರುಗಿಸುತ್ತೇನೆ’’ ಅಂದ.

ಬಡತಮ್ಮ ಅವನ ಮಾತನ್ನು ನಂಬಿ ಮಾಂತ್ರಿಕ ಬುಟ್ಟಿಯನ್ನು ಕೊಟ್ಟ.

ಅಣ್ಣ ತನ್ನ ಮನೆಗೆ ಮಾಂತ್ರಿಕ ಬುಟ್ಟಿ ತಂದ. ನೆಂಟರಿಗೆ ಮೃಷ್ಟಾನ್ನ ಭೋಜನ ಉಣಬಡಿಸಿದ. ಅವರು ಹೋದ ಮೇಲೆ ಮಾಂತ್ರಿಕ ಬುಟ್ಟಿಯನ್ನು ಅಡಗಿಸಿಟ್ಟು ಅಂಥದೇ ಇನ್ನೊಂದು ಬುಟ್ಟಿಯನ್ನು ತಮ್ಮನ ಮನೆಗೆ ಕಳಿಸಿದ.

ರಾತ್ರಿ ಬಡತಮ್ಮ ಮಕ್ಕಳ ಸಮೇತ ಬುಟ್ಟಿಯ ಮುಂದೆ ಕೂತು “ಊಟ ಬೇಕು’’ ಎಂದು ಹೇಳಿದ. ಬುಟ್ಟಿ ಬರಿದಾಗೇ ಇತ್ತು. ತಮ್ಮ ಓಡೋಡಿ ಅಣ್ಣನ ಮನೆಗೆ ಬಂದ. “ನನ್ನ ಬುಟ್ಟಿಗೆ ಏನಾಗಿದೆ?’’ ಎಂದ. “ನಿನ್ನ ಬುಟ್ಟಿ ನಿನಗೆ ಕೊಟ್ಟಾಗಿದೆ’’ ಎಂದು ಅಣ್ಣ ಜಾರಿಕೊಂಡ. ಬಡತಮ್ಮನಿಗೆ ಬಹಳ ದುಃಖವಾಯಿತು. ಮನೆಗೆ ಬಂದು ಅಳುತ್ತ ಕೂತ.

ಅಷ್ಟರಲ್ಲಿ ಕಥೆಯ ಪ್ರಾರಂಭದಲ್ಲಿ ಬಂದ ಸನ್ಯಾಸಿ ಬಂದ. ಈ ಸಲ ಆತನ ಬಳಿ ಒಂದು ಡೋಲು ಇತ್ತು. “ತಮ್ಮಾ, ಬಡತಮ್ಮ, ಯಾಕಳುವೆ?’’ ಎಂದು ಕೇಳಿದ. ಬಡತಮ್ಮ ಕೊಳಲು, ಮಾಂತ್ರಿಕ ಬುಟ್ಟಿಗಳು ಕಳೆದು ಹೋದುದನ್ನು ವಿವರಿಸಿ, “ಏನು ಮಾಡಲಿ, ಮಕ್ಕಳೆಲ್ಲ ಉಪವಾಸ ಒದ್ದಾಡುತ್ತಿದ್ದಾರೆ’’ ಎಂದ.

ಸನ್ಯಾಸಿ ಕತ್ತು ಹಾಕಿ “ಹೀಗೋ? ಇದಕ್ಕೆ ನಾನೇನೂ ಮಾಡಲಾರೆ ಎಂದು ಅನಿಸುತ್ತದೆ. ಬೇಕಾದರೆ ನನ್ನ ಬಳಿ ಇದೊಂದು ಡೋಲು ಇದೆ. ತೆಗೆದುಕೊ. ಇದನ್ನು ಬಾರಿಸಿದರೆ ಸುತ್ತಲಿದ್ದವರೆಲ್ಲ ಕುಣಿದಾಡುತ್ತಾರೆ. ಆದರೆ ಸಮಯ ನೋಡಿ ಬಾರಿಸಬೇಕಷ್ಟೆ. ನೀನು ಊರಿನ ಪಂಚರಿಗೆ ಇದನ್ನು ಹೇಳು ಅವರೇ ಅವನಿಗೆ ಬುದ್ದಿ ಹೇಳಿ ಕೊಡಿಸಬಹುದು.’’ ಎಂದು ಹೇಳಿ ಸನ್ಯಾಸಿ ಹೊರಟುಹೋದ.

ಬಡತಮ್ಮ ಊರಿನ ಪಂಚರ ಹತ್ತಿರ ಹೋಗಿ ತನಗಾದ ಅನ್ಯಾಯವನ್ನು ತೋಡಿಕೊಂಡ. ತನಗೆ ನ್ಯಾಯ ದೊರಕಿಸಿ ಕೊಡಬೇಕೆಂದು ವಿನಂತಿಸಿಕೊಂಡ.

ಚಾವಡಿಯಲ್ಲಿ ಪಂಚರು ಸೇರಿದರು. ಸಾವ್ಕಾರಣ್ಣನನ್ನು ಕರೆಸಿ, ಕೇಳಲಾಗಿ ಸಾವ್ಕಾರಣ್ಣ ತನ್ನ ಮೇಲಿನ ಆಪಾದನೆಯೆಲ್ಲ ಸುಳ್ಳೆಂದು ಹೇಳಿದ. ಅಲ್ಲದೆ ಅವನ ಶ್ರೀಮಂತನಾದುದರಿಂದ ಅವನ ವಿರುದ್ಧ ತೀರ್ಪು ಕೊಡುವ ಧೈರ್ಯ ಪಂಚರಿಗೂ ಆಗಲಿಲ್ಲ. ಸಾಲದ್ದಕ್ಕೆ ಸಾವ್ಕಾರಣ್ಣನನ್ನು ಪಂಚಾಯ್ತಿಗೆ ಎಳೆದು ಅವಮಾನ ಮಾಡಿದ್ದರಿಂದ ಬಡತಮ್ಮನನ್ನು ಊರು ಬಿಟ್ಟು ಹೊರಗೆ ಹಾಕಬೇಕೆಂದು ತೀರ್ಪಿತ್ತರು. ಇದರಿಂದ ಬಡತಮ್ಮ ಕೋಪಗೊಂಡು ಕೂಡಲೇ ರಭಸದಿಂದ ತನ್ನ ಬಳಿಯ ಡೋಲು ಬಾರಿಸತೊಡಗಿದ. ಸುತ್ತಲಿನವರೆಲ್ಲ “ಎಂಥ ಸಂದರ್ಭದಲ್ಲಿ ಇದೇನು ಚೇಷ್ಟೆ’’ ಎಂದುಕೊಂಡು ಕುಣಿಯತೊಡಗಿದರು. ಬಡತಮ್ಮ ರಭಸದಿಂದ ಬಾರಿಸತೊಡಗಿದ. ಪಂಚರು, ಸಾವ್ಕಾರಣ್ಣ, ನೋಡಬಂದ ಜನ ಎಲ್ಲರೂ ಇನ್ನೂ ರಭಸದಿಂದ ಕುಣಿಯತೊಡಗಿದರು. ಯಾರಿಗೂ ಕುಣಿಯುವುದನ್ನು ನಿಲ್ಲಿಸಲಾಗಲೊಲ್ಲದು. ಕೆಲವರಂತೂ ಆಗಲೇ ಕೈಕಾಲು ಕುಸಿದು, ಕುಸಿದಲ್ಲೇ ಕಿರುಚುತ್ತ ಕುಣಿಯುತ್ತಿದ್ದರು. “ಬಡತಮ್ಮ, ನಿಲ್ಲಿಸೋ ಆ ಡೋಲು’’ ಎನ್ನುತ್ತ ಕೂಗಿದರು ವಿನಂತಿಸಿಕೊಳ್ಳುತ್ತ ಕುಣಿದರು. ಬಡತಮ್ಮನಿಗೆ, “ಪ್ರಾಣ ಉಳಿಸೋ’’ ಎನ್ನುತ್ತ ಕುಣಿದರು. ಸಾವ್ಕಾರಣ್ಣ ಕಾಲು ಮುರಿದು ಬಿದ್ದು ಬಿದ್ದಲ್ಲೇ “ಸಾಯುತ್ತೇನೆ, ಬದುಕಿಸೋ’’ ಎಂದು ಕುಣಿಯುತ್ತಿದ್ದ. ಕೊನೆಗೆ ಬಡತಮ್ಮ “ನನ್ನ ಕೊಳಲು, ಮಾಂತ್ರಿಕ ಬುಟ್ಟಿ ಕೊಡು. ಇಲ್ಲದಿದ್ದರೆ ಇದನ್ನು ನಿಲ್ಲಿಸೋದೆ ಇಲ್ಲ’’ ಎಂದು ಹೇಳಿದ. ಸಾವ್ಕಾರಣ್ಣ ಗಡಿಬಿಡಿಯಿಂದ ತಾನು ಬಚ್ಚಿಟ್ಟುಕೊಂಡಿದ್ದ ಮಾಯದ ಕೊಳಲು ಹಾಗೂ ಮಾಂತ್ರಿಕ ಬುಟ್ಟಿಗಳನ್ನು ತಂದು ಕಟ್ಟ. ಬಡತಮ್ಮ ಅವೆರಡನ್ನು ಪರೀಕ್ಷೆ ಮಾಡಿ ನೋಡಿದ. ಅವೆರಡೂ ನಿಜವಾದ ಕೊಳಲು ಮತ್ತು ಮಾಂತ್ರಿಕ ಬುಟ್ಟಿಯಾಗಿದ್ದವು. “ಈ ತನಕ ಕುಣಿದು ದಣಿದಿದ್ದೀರಿ, ಈಗ ಸಂತೋಷದಿಂದಿರಿ’’ ಎಂದು ಬಡತಮ್ಮ ಕೊಳಲು ನುಡಿಸಿದ. ಎಲ್ಲರಿಗೂ ಸಂತೋಷವಾಯಿತು. ಕುಣಿದ ದಣಿವೂ ಪರಿಹಾರವಾಯಿತು.

ಬಡತಮ್ಮ ತನ್ನ ಮನೆಯಲ್ಲಿ ಮಕ್ಕಳೊಂದಿಗೆ ಸುಖವಾಗಿದ್ದ. ನಾವಿಲ್ಲಿ ಹೀಗಿದ್ದೀವಿ.

* * *