ಬಿಟ್ಟ ಬಟ್ಟೆಯ ದಾರಿಹೋಕನೆ, ನೀನೆನ್ನ ಬಳಿಯೊಳಿರುವನ್ನೆವರಂ ನನಗೆ ಬೇಸರವಿಲ್ಲ; ನೀನೆನ್ನ ಕೂಡೆ ಬರುವನ್ನೆವರಂ ನನಗಿನಿತು ಅಳುಕಿಲ್ಲ; ನೆಚ್ಚನೀಯುತ ನೀನು ನುಡಿಯುತಿರುವನ್ನೆವರಂ ನನಗೆ ಬಳಲಿಕೆಯಿಲ್ಲ. ನಡೆಯುವೆನು; ಮುಂಬರಿವೆನು; ನಿನ್ನನು ನೆಚ್ಚಿ ದಾರಿಸಾಗಿಸುವೆನು.

ದಾರಿಯ ಪರಿಚಯವಿಲ್ಲ; ಸೇರುವ ಗುರಿಯ ಪರಿಚಯವಿಲ್ಲ. ನಿನ್ನ ಪರಿಚಯವೊಂದೆ ನನಗೆಲ್ಲದರ ಪರಿಚಯ.

ಕಡಿದಾದ ಬೆಟ್ಟಗಳಿರೆ ಕೈಹಿಡಿದು ಮೇಲೇರಿಸು. ಆಳವಾದ ಕಂದರಗಳಿರೆ ಮೆಲ್ಲಗೆ ಕೆಳಗಿಳಿಸು. ಮುಳ್ಳು ಕೆಸರುಗಳಿರೆ ಮೇಲೆತ್ತಿ ದಾಟಿಸು. ಮರುಭೂಮಿಗಳಿರೆ ಹಾಡಿ ಹುರಿದುಂಬಿಸು.

ಯಾರೂ ತುಳಿಯದ ಹಾದಿಯಲಿ ತವರೂರಿಗೆ ಹೊರಟಿರುವೆನು. ನನ್ನದು ಸಿಡಿಲು ಮಿಂಚುಗಳ ಹಾದಿ. ಬೇಡವೆಂಬರೆ ಹಲರು; ನುಗ್ಗು ಎಂಬರು ಎಲ್ಲಿಯೊ ಕೆಲರು.

ಒಂಟಿಗರ ಸಂಗಡಿಗನೆ, ಸಾಹಸಿಗಳೊಡನಾಡಿಯೆ, ಕೈಹಿಡಿದು ಕಡೆಹಾಯಿಸೆನ್ನ.